ಪ್ರತಿ ಚರಿತ್ರೆಯ ಪ್ರಜ್ಞೆ

ಅಲಕ್ಷಿತ ಚರಿತ್ರೆಯ ಮೂಲದಿಂದ ಬಂದ ಹೊಸಪೀಳಿಗೆಯ ಚರಿತ್ರೆಕಾರರಲ್ಲಿ ಡಾ. ತಂಬಂಡ ವಿಜಯ್ ಪೂಣಚ್ಚ ಕೂಡ ಒಬ್ಬರು. ತುಳುನಾಡಿನ ಮೌಖಿಕ ಪರಂಪರೆಯ ಚರಿತ್ರೆಯನ್ನು ನಿರ್ವಚಿಸಲು ಮೊರಿಹಾಂಕೊ ಹಾಗೂ ವಿವೇಕ ರೈ ಅಂತಹ ತಜ್ಞರು ಮುಂದಾಗಿ ಅವರ ಜೊತೆಗೆ ಒಂದು ವಿದ್ವತ್ ಪಡೆಯೆ ಕಾರ್ಯ ನಿರ್ವಹಿಸಿದ್ದನ್ನು ನೋಡಿದರೆ ಕೊಡವ ಸಮಾಜದ ಮೌಖಿಕ ಚರಿತ್ರೆಗೆ ವಿಶೇಷ ಪರಿಣಿತಿಯ ವಿದ್ವತ್ ಕೂಟವೊಂದು ಮುಂದಾಗದಿ ರುವುದು ಎದ್ದು ಕಾಣುತ್ತದೆ. ಅಂತದ್ದರಲ್ಲಿ ವಿಜಯ್ ಅವರು ಕೊಡಗಿನ ಮೌಖಿಕ ಚರಿತ್ರೆಯನ್ನು ನಿರೂಪಿಸಲು ಉತ್ತಮ ಯತ್ನವನ್ನೆ ಮಾಡಿದ್ದಾರೆ. ಅವರ ‘ಪಳಮೆ’ ಕೃತಿ ಕೊಡಗಿನ ಇತಿಹಾಸವನ್ನು ಮೌಖಿಕ ಪರಂಪರೆಯ ಅನುಸಂಧಾನದ ಜೊತೆ ನಿರ್ವಚಿಸುತ್ತದೆ. ಅಲ್ಲದೆ ಅಲಕ್ಷಿತ ಚರಿತ್ರೆಯ ವಿನ್ಯಾಸದಲ್ಲಿ ಸ್ಥಳೀಯ ಚರಿತ್ರೆಯ ಸಾಂಸ್ಕೃತಿಕ ಲೋಕ ವೊಂದನ್ನು ಅನಾವರಣಗೊಳಿಸುವ ಸಾಹಸ ಮಾಡುತ್ತದೆ. ಎಡಪಂಥೀಯ ಚಿಂತನೆಯ ಮೂಲಕ ಚರಿತ್ರೆಯ ನಿರೂಪಣೆಯನ್ನು ಎಟುಕಿಸಿಕೊಳ್ಳುವ ವಿಜಯ್ ತಂಬಂಡ ಪೂಣಚ್ಚ ಅವರು ಪ್ರೊ.ತೆಲಗಾವಿ ಅವರಿಗಿಂತ ಭಿನ್ನವಾಗುವುದು ಎಲ್ಲಿ ಎಂದರೆ ಧೋರಣೆ ಮತ್ತು ಆಕರವನ್ನು ಅಖಂಡವಾಗಿಯೆ ಭಾವಿಸುವುದರಲ್ಲಿ.

ಮೌಖಿಕ ಆಕರವನ್ನು ವಿಜಯ್ ಹೊಡೆದು ಬಳಸುವ ಬದಲು ಅದು ಇರುವ ಆವರಣದಲ್ಲೇ ಚರಿತ್ರೆಯ ಕಥನಕ್ಕೆ ಅಳವಡಿಸಿಕೊಳ್ಳುತ್ತಾರೆ. ಇದು ಹೆಚ್ಚು ಮೌಖಿಕ ಚರಿತ್ರೆಯ ನಿರೂಪದ್ದಾಗಿದೆ. ಆದರೆ ವಿಜಯ್ ಅವರ ಮೌಖಿಕ ಚರಿತ್ರೆಯ ಪರಿಭಾಷೆಗಳು ಗಾಢವಾದ ಜಾನಪದ ವಿದ್ವತ್ತಿನ ನೆಲೆಯವಲ್ಲ. ಮೌಖಿಕ ಚರಿತ್ರೆಕಾರ ಜಾನಪದ ಪರಂಪರೆಯ ಬಹುರೂಪಿ ಶಿಸ್ತುಗಳ ಅನುಸಂಧಾನದ ಮೂಲಕವೇ ಜನಪದ ಸಮಾಜದ ಚಾರಿತ್ರಿಕ ಪ್ರಜ್ಞೆಯನ್ನು ಗುರುತಿಸಬೇಕು. ಈ ನೆಲೆಯಿಂದ ನೋಡಿದರೆ ವಿಜಯ್ ಅವರು ಮೌಖಿಕ ಚರಿತ್ರೆಯ ನಿರ್ವಚನಕ್ಕೆ ಆಯ್ದುಕೊಳ್ಳುತ್ತಿರುವ ಜನಪದ ಕಥನಗಳ ವಿವರಗಳು ನೇರವಾದವಲ್ಲ. ಪರೋಕ್ಷ ಕ್ರಮದಿಂದ ವಿಜಯ್ ಮೌಖಿಕ ಪರಂಪರೆಯನ್ನು ಪ್ರವೇಶಿಸುವು ದರಿಂದ ಅವರ ನಿರ್ವಚನವು ಅಷ್ಟರ ಮಟ್ಟಿಗೆ ಕೊರತೆಯನ್ನು ಎದುರಿಸುತ್ತದೆ. ಇಷ್ಟಾದರೂ ಶುದ್ಧ ಚರಿತ್ರೆಯ ಚರಿತ್ರೆಕಾರರ ನಡುವೆ ವಿಜಯ್ ಅವರು ಚರಿತ್ರೆಯ ಬಹುರೂಪಿ ಕಥನಗಳ ನಿರ್ವಚನದ ಸಂದರ್ಭದಲ್ಲಿ ವಿಶೇಷವಾಗಿ ಕಾಣುತ್ತಾರೆ.

ಅಂಚಿನವರ ಚರಿತ್ರೆಕಾರರ ನಡುವೆ ಕಾಣುವ ಮತ್ತೊಬ್ಬರನ್ನು ಇಲ್ಲಿ ಉಲ್ಲೇಖಿಸಬೇಕು. ಡಾ.ಎಂ.ವಿ.ವಸು ಅವರು ನೇರವಾಗಿ ಮೌಖಿಕ ಚರಿತ್ರೆಯ ನಿರ್ವಚನಕ್ಕೆ ಪ್ರವೇಶಿಸಿದವರು. ಮೊದಲ ಬಾರಿಗೆ ‘ಮೌಖಿಕ ಇತಿಹಾಸ’ ಕೃತಿಯ ಚೌಕಟ್ಟೊಂದನ್ನು ನಿರೂಪಿಸಿ ಗಮನ ಸೆಳೆದವರು. ವಾಸ್ತವವಾಗಿ ಆಗಾಗಲೇ ಜಾನಪದ ವಿದ್ವಾಂಸರು ನಿರೂಪಿಸುತ್ತಿದ್ದ ಮೌಖಿಕ ಇತಿಹಾಸದ ಪರಿಕಲ್ಪನೆಯನ್ನು ಸ್ವೀಕರಿಸಿ ಶುದ್ಧ ಚರಿತ್ರೆಯ ಚೌಕಟ್ಟಿಗಿಟ್ಟು ಉಪಯುಕ್ತವಾದ ಅನುಸಂಧಾನವನ್ನು ಬೆಳೆಸಿದ ವಸು ಅವರನ್ನು ಪ್ರಶಂಸಿಸಲೇ ಬೇಕು. ವಸು ಮೌಖಿಕ ಪರಂಪರೆಯ ಪರವಾದ ಧೋರಣೆಯಿಂದ ಮೌಖಿಕ ಚರಿತ್ರೆಗೆ ಬೇಕಾದ ಆಕರಗಳನ್ನು ಉದಾರವಾಗಿ ಸ್ವೀಕರಿಸುವ ಉತ್ಸಾಹವನ್ನು ತೋರುತ್ತಾರೆ. ಡಾ.ವಿಜಯ್ ಅವರಂತೆ ವಸು ಅವರು ಎಡಪಂಥೀಯ ಆಲೋಚನೆಯಲ್ಲಿ ಭಾವಿಸದಿದ್ದರೂ ನವೋದಯ ಜಾನಪದ ವಿದ್ವಾಂಸರ ಆಲೋಚನೆಯ ರೀತಿಯಲ್ಲೆ ಪರ್ಯಾಯ ಚರಿತ್ರೆಯನ್ನು ಬೆಳೆಸುವ ಸಾಧ್ಯತೆಯಾಗಿ ಮೌಖಿಕ ಇತಿಹಾಸವನ್ನು ಕಾಣುತ್ತಾರೆ. ಮೌಖಿಕ ಪರಂಪರೆಯಲ್ಲಿರುವುದೆಲ್ಲ ಚರಿತ್ರೆಯ ವಸ್ತುನಿಷ್ಟ ನಿರ್ವಚನಕ್ಕೆ ಪೂರಕ ಎಂಬ ನಿಲುವು ವಸು ಅವರದಲ್ಲ. ಭೌತಿಕ ಅಥವಾ ಮಾನಸಿಕ ಸಾಕ್ಷ್ಯ ವೊಂದು ಜಾನಪದದಲ್ಲಿ ಹೇಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಕಥನಗಳನ್ನೆಲ್ಲ ಬೆರೆಸಿಕೊಂಡು ‘ಸತ್ಯ’ದ ಆಚೆಗಿನ ಆಯಾಮಗಳನ್ನೆಲ್ಲ ಧರಿಸಿಕೊಂಡಿರುತ್ತದೆ ಎಂಬ ಎಚ್ಚರ ಅವರ ಬರವಣಿಗೆಗಳಲ್ಲಿ ವಿಶೇಷವಾಗಿ ಕಾಣುತ್ತದೆ. ಇದರಿಂದಾಗಿ ಸಂದೇಹದಲ್ಲೇ ಸತ್ಯದ ಮುಖವನ್ನು ಮೌಖಿಕ ಪರಂಪರೆಯಲ್ಲಿ ಹುಡುಕಬೇಕು ಎಂಬ ನಿಲುವನ್ನು ತಾಳುತ್ತಾರೆ. ಮೌಖಿಕ ಪರಂಪರೆಯನ್ನು ಚರಿತ್ರೆ ಶಿಸ್ತಿನ ಅಂಕುಶದಿಂದ ಮಾತ್ರವೇ ಬಳಸುವ ವಸು ಅವರ ನಿರೂಪಣೆಯಲ್ಲಿ ಅನೇಕ ಗೊಂದಲಗಳಿವೆ. ಹಾಗಿದ್ದರೂ ಮೌಖಿಕ ಇತಿಹಾಸದ ಬಗೆಗಿನ ಅವರ ಕಾಳಜಿ ಮತ್ತು ಬದ್ಧತೆ ಗಮನಾರ್ಹವಾಗಿದೆ.

ಈ ಮೂವರು ವಿದ್ವಾಂಸರು ಮೌಖಿಕ ಚರಿತ್ರೆಯನ್ನು ನಿರೂಪಿಸುತ್ತಿರುವ ರೀತಿಯು ಜಾನಪದ ವಿದ್ವಾಂಸರು ನಿರ್ವಚಿಸುವ ಮೌಖಿಕ ಚರಿತ್ರೆಯ ಜೊತೆಗೆ ಸದೂರದ ಪ್ರತಿಸೃಷ್ಟಿ ಯಂತಿದೆ. ಚರಿತ್ರೆಕಾರರು ಜಾನಪದದ ಆಲೋಚನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಕರ್ನಾಟಕ ಸಂಸ್ಕೃತಿ ಚರಿತ್ರೆಯ ವೈವಿಧ್ಯ ನಿರೂಪಣೆಗಳು ಸಾಧ್ಯವಾಗುತ್ತಿವೆ. ಈ ದಿಸೆಯಲ್ಲಿ ಪ್ರೊ.ತೆಲಗಾವಿ ಅವರ ಮಾದರಿಯನ್ನು ಅನುಸರಿಸುತ್ತಲೆ ಸಮುದಾಯದ ಚರಿತ್ರೆಯ ಕ್ರಮವೊಂದನ್ನು ಸ್ಥಳೀಯ ಹಾಗು ಮೌಖಿಕ ಆಕರಗಳಿಂದ ನಿರ್ಮಿಸುವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಕೂಡ ಗಮನಾರ್ಹ ಕೆಲಸವನ್ನು ಕೈಗೊಂಡಿದ್ದಾರೆ. ಲಿಖಿತ, ಅಲಿಖಿತ ಆಕರಗಳೆರಡನ್ನು ಒಂದೇ ಎಂಬಂತೆ ಬೆರೆಸಿಕೊಂಡು ಚರಿತ್ರೆಯನ್ನು ನಿರೂಪಿಸುವ ಇವರು ಮೌಖಿಕ ಪರಂಪರೆಯ ಗಾಢ ಪರಿಚಯವಿದ್ದೂ ಅದನ್ನು ಮೌಖಿಕ ಚರಿತ್ರೆಯಾಗಿ ನಿರ್ವಚಿಸುವ ಬದಲು ಬುಡಕಟ್ಟು ಸಮುದಾಯದ ಚರಿತ್ರೆಯ ಕಥನವಾಗಿ ಮಂಡಿಸುತ್ತಾರೆ. ಪ್ರೊ.ಲಕ್ಷ್ಮಣ್ ತೆಲಗಾವಿ ಅವರ ಸ್ಥಳೀಯ ಇತಿಹಾಸದ ಮಾದರಿಯನ್ನೆ ಅಲಕ್ಷಿತ ಸಮುದಾಯಗಳ ಚರಿತ್ರೆಯ ಕಥನವಾಗುವಂತೆ ಮಾರ್ಪಡಿಸಿಕೊಳ್ಳುತ್ತಾರೆ. ಇದು ತಂತಾನೆ ಪರೋಕ್ಷವಾಗಿ ಸಬಾಲ್ಟ್ರನ್ ಅಧ್ಯಯನಕ್ಕೆ ಸಮೀಪವಾಗುವ ಲಕ್ಷಣವನ್ನು ತೋರುತ್ತದೆ. ಆದರೆ ಇದು ಲಿಖಿತವಾದ ಅಲಕ್ಷಿತ ಅಧ್ಯಯನ ವಿಧಾನದ ತಾತ್ವಿಕ ಧೋರಣೆಗೆ ಭಿನ್ನವಾಗುವ ಸ್ವರೂಪದ್ದೂ ಆಗಿದೆ. ಸ್ಥಳೀಯ ಪಾಳೇಯಗಾರರ ಕುರಿತಾದ ಅಧ್ಯಯನವನ್ನೂ ವ್ಯಾಪಿಸಿಕೊಳ್ಳುವಂತೆ ಪೂಜಾರಹಳ್ಳಿ ಅವರು ಮೌಖಿಕತೆಯನ್ನು ಬಳಸಿಕೊಳ್ಳುತ್ತಾರೆ.

ಚರಿತ್ರೆಯ ಶಾಖೆಯಿಂದಲೆ ಬಂದು ಮೌಖಿಕ ಚರಿತ್ರೆಗೆ ಪೂರಕವಾದ ನಿರೂಪಣೆಗಳನ್ನು ಮಾಡುತ್ತಿರುವ ವಿದ್ವಾಂಸರ ಒಟ್ಟು ತಾತ್ವಿಕತೆಯನ್ನು ಹೀಗೆ ಗುರುತಿಸಿಕೊಳ್ಳಬಹುದು.

  • ಮೌಖಿಕ ಪರಂಪರೆಯು ಮೌಖಿಕ ಚರಿತ್ರೆಗೆ ಬೇಕಾದ ಬಹುಮುಖ್ಯ ಆಕರ ಕೇಂದ್ರವಾಗಿದೆ.
  • ಸ್ಥಳೀಯ ಚರಿತ್ರೆಯು ಮೌಖಿಕ ಚರಿತ್ರೆಯ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದೆ.
  • ಅಲಕ್ಷಿತ ಸಮುದಾಯಗಳ ಚರಿತ್ರೆಯು ಅವರವರ ಸಂಸ್ಕೃತಿಗಳಲ್ಲಿ ಅಂತರ‍್ಗತವಾಗಿದೆ.
  • ಜನಪದರ ರಾಷ್ಟ್ರೀಯ ಪ್ರಜ್ಞೆಯ ಭಿನ್ನ ಭಾವನೆಗಳನ್ನು ಹೊರ ತೆಗೆಯಲು ಮೌಖಿಕ ಚರಿತ್ರೆಯಿಂದ ಸಾಧ್ಯವಿದೆ.
  • ಜಾತಿಗಳಿಗಿರುವ ಚಾರಿತ್ರಿಕ ಚಹರೆಗಳನ್ನು ವರ್ತಮಾನದ ಸ್ಥಿತಿಯಿಂದ ಪುನರ್ರ್‌ಚಿಸಲು ಮೌಖಿಕ ಚರಿತ್ರೆಯು ಒಂದು ಬೌದ್ದಿಕ ರಾಜಕಾರಣವಾಗಿದೆ.
  • ಮೌಖಿಕ ಚರಿತ್ರೆಯ ಅನುಸಂಧಾನದಿಂದಾಗಿ ಚರಿತ್ರೆ ರಚನಾ ವಿಧಾನದಲ್ಲಿ ನಮ್ಮದೇ ಆದ ಅನನ್ಯತೆಯನ್ನು ರೂಪಿಸಲು ಸಾಧ್ಯ.
  • ಅಲಕ್ಷಿತ ಸಂಗತಿಗಳನ್ನೆಲ್ಲ ಬೆಳಕಿಗೆ ತರಲು ಅವಕಾಶವಿದೆ.

ಹೀಗೆ ಚರಿತ್ರೆಯ ಶುದ್ಧ ಶಿಸ್ತಿನ ಮೂಲಕ ಬಂದ ಚರಿತ್ರೆಕಾರರು ಮೌಖಿಕ ಚರಿತ್ರೆಯ ನಿರ್ವಚನದ ತಾತ್ವಿಕತೆಯನ್ನು ತಮ್ಮ ಬರಹಗಳಲ್ಲಿ ಧ್ವನಿಸಿದ್ದಾರೆ. ಇಂತಹ ನಿಲುವಿನ ಕೇಂದ್ರವನ್ನು ಗಮನಿಸಿದರೆ ಒಂದು ಅಂಶ ವಿಶೇಷವಾಗಿ ಕಾಣುತ್ತದೆ. ಇತಿಹಾಸ ರಚನಾಶಾಸ್ತ್ರದ ಒಲವು ಈ ಬಗೆಯ ವಿದ್ವಾಂಸರಲ್ಲಿ ಹಿನ್ನೆಲೆಯಾಗಿ ಕೆಲಸ ಮಾಡುತ್ತಿದೆ. ಒಂದೇ ನಿಟ್ಟಿನಲ್ಲಿ ಅಲಕ್ಷಿತ ಚರಿತ್ರೆ, ಸಮುದಾಯ ಚರಿತ್ರೆ, ಜಾತಿ ಮತ್ತು ಬುಡಕಟ್ಟು ಚರಿತ್ರೆ, ಸ್ಥಳೀಯ ಚರಿತ್ರೆ, ಮೌಖಿಕ ಚರಿತ್ರೆ, ಲಿಂಗ ಸಂಬಂಧಿ ಚರಿತ್ರೆ ಇವೆಲ್ಲವೂ ಬೆರೆತು ಕರ್ನಾಟಕದ ಬಹುರೂಪಿ ಚರಿತ್ರೆಯನ್ನು ಏಕಕಾಲಕ್ಕೆ ನಿರೂಪಿಸುವ ಸಾಹಸ ಮಾಡುತ್ತಿವೆ. ಈ ಬಗೆಯು ಮೂಲತಃ ಇತಿಹಾಸ ರಚನಾ ಶಾಸ್ತ್ರದ ಅವಶ್ಯಕತೆಯೂ ಆಗಿರುವುದನ್ನು ಸೂಚಿಸುತ್ತದೆ. ಹೀಗೆ ಮೌಖಿಕ ಚರಿತ್ರೆಯ ನೆಪದಲ್ಲೆ ಅದರ ಜೊತೆಗಿನ ಬಹುರೂಪಿ ಚಾರಿತ್ರಿಕ ಸಂಬಂಧಗಳನ್ನೆಲ್ಲ ಒಟ್ಟಿಗೆ ನೇಯಬೇಕಾದ ಪ್ರಮೇಯವಿದೆ. ಇದರಿಂದ ವ್ಯಕ್ತವಾಗುವ ತಿಳುವಳಿಕೆ ಏನೆಂದರೆ ತಂತಾನೆ ಮೌಖಿಕ ಚರಿತ್ರೆಯು ಸ್ವತಂತ್ರವೂ ಅಲ್ಲ ಹಾಗೆ ಅದರ ಬಿಡಿಬಿಡಿ ಇತರೆ ಚಾರಿತ್ರಿಕ ನಿರೂಪಣೆಗಳು ಕೂಡ ಅನ್ಯವಲ್ಲ. ಮೌಖಿಕ ಪರಂಪರೆಯ ಅಖಂಡತೆಯೆ ಈ ಬಗೆಯ ನಿರೂಪಣೆಗಳು ಎದುರಾಗಲು ಕಾರಣವಾಗಿರುವುದು. ಅಲ್ಲದೆ ಜನಪದ ಸಮಾಜದ ಜೀವನ ಕ್ರಮಕೂಡ ಚರಿತ್ರೆಯನ್ನು ಹೀಗೆ ಸಮಷ್ಠಿಯಾಗಿ ಅಂತರ್‌ಸಂಬಂಧಗಳಿಂದ ವಿಕಾಸಕ್ಕೊಳಪಡಿಸಿದೆ. ಹೀಗಾಗಿಯೇ ಬೇರ್ಪಡಲಾಗದಂತೆ ಹಲವು ಚರಿತ್ರೆಗಳು ಒಂದೇ ಚರಿತ್ರೆಯ ರೆಂಬೆ ಕೊಂಬೆಗಳಾಗಿ ಬೆಳೆದಿರುವುದು. ಈ ಬಗೆಯ ಸಂಯುಕ್ತ ಚರಿತ್ರೆಗಳು ಇತಿಹಾಸದ ರಾಚನಿಕತೆಯನ್ನು ವಿರಚನೆಗೊಳಿಸುತ್ತಲೆ ಚರಿತ್ರೆಕಾರರಿಗೆ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯದ ದಾರಿಯನ್ನೂ ತೋರುತ್ತಿವೆ. ಇಂತಹ ಸ್ವಾತಂತ್ರ್ಯವನ್ನು ಚರಿತ್ರೆ ಶಿಸ್ತಿನ ಹೊರಗಿನವರೇ ವಿಶೇಷವಾಗಿ ಪಡೆದಿದ್ದಾರೆ. ಅಂತವರ ಕೆಲವು ಮಾದರಿಗಳನ್ನು ಇಲ್ಲಿ ಗಮನಿಸಬಹುದು.

ಬಹುರೂಪಿ ಚರಿತ್ರೆಯ ನಿರ್ವಚನ

ಪ್ರೊ.ಜಿ.ಶಂ.ಪ. ನಂತರದ ವಿದ್ವಾಂಸರು ಪಶ್ಚಿಮ ಮುಖಿಯಾಗಿದ್ದುಕೊಂಡೇ ನವ್ಯ ಮಾದರಿಯ ಆಲೋಚನೆಯಿಂದ ದೇಶಿಯತೆಯನ್ನು ಪರಿಭಾವಿಸುತ್ತಿದ್ದರು. ಅಂತವರ ನಡುವೆ, ಹಿ.ಶಿ.ರಾಮಚಂದ್ರೀಗೌಡ ಭಿನ್ನವಾಗಿ ಕಾಣುತ್ತಾರೆ. ಮೌಖಿಕ ಚರಿತ್ರೆಯಿಂದ ದೇಶದ ವಕ್ಕಲು ಪರಂಪರೆಗಳ ಚರಿತ್ರೆಯನ್ನು ನಿರ್ಮಿಸಲು ಸಾಧ್ಯ ಎಂಬ ಗಾಢ ವಿಶ್ವಾಸ ಅವರ ಬರಹಗಳಲ್ಲಿ ಕಾಣುತ್ತದೆ. ದೇಶೀಯತೆಯ ಇನ್ನೊಂದು ರೂಪವೇ ಮೌಖಿಕ ಚರಿತ್ರೆ ಎಂಬ ನಿಲುವು ಅವರಲ್ಲಿ ವ್ಯಕ್ತವಾಗುತ್ತದೆ. ಕಾವ್ಯ ಪರಂಪರೆಗಳ ಅನುಸಂಧಾನದ ಬದಲು ಹಿ.ಶಿ.ರಾ. ಅವರು ಜನಪದ ಆಚರಣೆ, ಕಲೆ, ನಂಬಿಕೆ, ಸಂಪ್ರದಾಯಗಳ ಮೂಲಕ ಪ್ರತಿ ಜಗತ್ತೊಂದನ್ನು ನಿರೂಪಿಸಲು ಯತ್ನಿಸುತ್ತಾರೆ. ಯಕ್ಷಗಾನ ಬಯಲಾಟಗಳಲ್ಲಿ ಬರುವ ಹನುಮನಾಯಕ ತರದ ಹಾಸ್ಯ ಪಾತ್ರದ ಮೂಲಕ, ರಾಕ್ಷಸ ಪಾತ್ರಗಳ ಮೂಲಕ ಅಂಚಿನ ಲೋಕದ ವ್ಯಕ್ತಿತ್ವವನ್ನು ಬಿಂಬಿಸುವ ಮೂಲಕವೇ ಬೇರೊಂದು ಚರಿತ್ರೆಯನ್ನು ಧ್ವನಿಸುತ್ತಾರೆ. ಸಮಾಜವಾದಿ ಆಲೋಚನೆಯನ್ನು ಅನುಸರಿಸಿದಂತೆ ಹಿ.ಶಿ.ರಾ. ಮೌಖಿಕ ಚರಿತ್ರೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇವರು ವಿಶೇಷವಾಗಿ ಮೌಖಿಕ ಚರಿತ್ರೆಯ ತಾತ್ವಿಕ ಆಯಾಮವನ್ನು ಮಂಡಿಸುವಲ್ಲಿ ಹೆಚ್ಚು ತೊಡಗಿದ್ದು ನಿರ್ದಿಷ್ಟ ಮೌಖಿಕ ಆಕರಗಳ ಮೂಲಕ ಹೇಗೆ ಒಂದು ಚರಿತ್ರೆಯನ್ನು ನಿರ್ವಚಿಸಲು ಸಾಧ್ಯ ಎಂಬ ಪ್ರಾಯೋಗಿಕ ನಿರೂಪಣೆಯನ್ನು ಮಾಡದಿರುವುದು ಇವರ ಕೊರತೆ.

ಪಿ.ಕೆ.ರಾಜಶೇಖರ ಅವರು ಥಿಯರಿಸ್ಟ್ ಸ್ವರೂಪದ ವಿದ್ವಾಂಸರಲ್ಲ. ಮೌಖಿಕ ಪರಂಪರೆಯ ಮಹತ್ವದ ಚಾರಿತ್ರಿಕ ಪಠ್ಯಗಳನ್ನು ದಾಖಲಿಸಿ ಸಂಗ್ರಹಿಸುವುದೇ ಒಂದು ಬಗೆಯ ಚರಿತ್ರೆಯ ಸಂರಕ್ಷಣೆ ಎಂಬ ನಿಲುವಿನವರಾಗಿದ್ದು, ಮಹತ್ವದ ಐತಿಹಾಸಿಕ ಕಥನಗಳನ್ನು ಸಂಗ್ರಹಿಸಿದ್ದಾರೆ. ‘ಪಿರಿಯಾಪಟ್ಟಣದ ಕಾಳಗ’ ಕೃತಿಯ ಸಂಗ್ರಹ ಅವರ ವಿಶಿಷ್ಟ ಪರಿಶ್ರಮವನ್ನು ತೋರುತ್ತದೆ. ಆ ವೇಳೆಗಾಗಲೆ ಕ.ರಾ.ಕೃ, ಡಿ.ಲಿಂಗಯ್ಯ, ಜೀ.ಶಂ.ಪ. ಮುಂತಾದ ವಿದ್ವಾಂಸರು ಇದೇ ಕಾವ್ಯದ ಬೇರೆ ಬೇರೆ ಪಠ್ಯಗಳನ್ನು ಸಂಗ್ರಹಿಸಿದ್ದರು. ಆ ಪಠ್ಯ ಸಂಗ್ರಹಗಳ ಹಿನ್ನೆಲೆಯನ್ನೆಲ್ಲ ಅಂತರ‍್ಗತಿಸಿಕೊಂಡಂತೆ ಚಾರಿತ್ರಿಕ ವಿಶ್ಲೇಷಣೆಯನ್ನು ಕೈಗೊಂಡು ರೂಪಿಸಿದ ಪಿ.ಕೆ.ರಾ ಅವರು ಐತಿಹಾಸಿಕ ಕಥನ ಕಾವ್ಯಗಳ ಸಂಯೋಜನೆಗೆ ಮಾದರಿಯೊಂದನ್ನು ರೂಪಿಸಿದರು. ಇದು ಮೌಖಿಕ ಚರಿತ್ರೆಯ ನಿರ್ವಚನದ ವೇಳೆ ಬಹಳ ಮಹತ್ವದ ಸಂಗ್ರಹವಾಗಿ ಈಗಲೂ ಉಳಿದಿದೆ. ಮೌಖಿಕ ಇತಿಹಾಸದ ತಾತ್ವಿಕತೆಯಷ್ಟೆ ಮುಖ್ಯವಾದದ್ದು ಮೌಖಿಕ ಚರಿತ್ರೆಗೆ ಬೇಕಾದ ಆಕರ. ಪಿ.ಕೆ.ರಾ. ಅವರು ಸಾಹಿತ್ಯ ಚರಿತ್ರೆಯ ಪರಿಭಾಷೆಯಲ್ಲಿ ಈ ಕಾವ್ಯವನ್ನು ನಿರೂಪಿಸುತ್ತಾರೆ ಎಂಬುದನ್ನು ಬಿಟ್ಟರೆ ಮೌಖಿಕ ಚರಿತ್ರೆಯನ್ನು ನಿರ್ವಚನಕ್ಕೆ ಅವರ ಪಠ್ಯಗಳು ಮಹತ್ವದ್ದಾಗಿವೆ.

ಪ್ರೊ.ಕೃಷ್ಣಮೂರ್ತಿ ಹನೂರು ಅವರು ಚಿತ್ರದುರ್ಗ ಪರಿಸರದ ಮ್ಯಾಸಬೇಡರ ಹಿನ್ನೆಲೆಯಲ್ಲಿ ಕೈಗೊಂಡ ಅಧ್ಯಯನಗಳು ಮೌಖಿಕ ಚರಿತ್ರೆಗೆ ನೇರವಾಗಿ ಸಂಬಂಧಪಡುತ್ತವೆ. ಅದರಲ್ಲೂ ವೀರಗೀತೆಗಳ ಸಾಂಸ್ಕೃತಿಕ ಅನುಸಂಧಾನದ ಮೂಲಕ ಮ್ಯಾಸ ಬೇಡರ ಬಗೆಗಿನ ಚರಿತ್ರೆಯನ್ನು ದಾಖಲಿಸುತ್ತಾರೆ. ಮಧ್ಯಕಾಲೀನ ಸಮಾಜದ ಸತಿ ಪದ್ಧತಿಯ ಆಚರಣೆಗಳು ಹೇಗೆ ಅಂಚಿನ ಸಮುದಾಯದಲ್ಲೂ ಸೇರಿದವು ಎಂಬ ಸೂಚನೆ ಅವರ ಬರಹಗಳಲ್ಲಿ ಕಾಣುತ್ತದೆ. ಸ್ಥಳೀಯ ಚರಿತ್ರೆ ಹಾಗೂ ಬುಡಕಟ್ಟು ಚರಿತ್ರೆ ಎರಡೂ ಬೆರೆತಂತೆ ತೋರುವ ಅವರ ನಿರೂಪಣೆಯಲ್ಲಿ ಮೌಖಿಕ ಪರಂಪರೆಯ ಆಕರಗಳೇ ದಟ್ಟವಾಗಿ ಬೆಸೆದುಕೊಂಡಿವೆ. ವಸ್ತು ನಿಷ್ಟವಾಗಿದ್ದೂ ಭಾವನಿಷ್ಟತೆಯನ್ನೂ ಹದವಾಗಿ ಸಂಯೋಜಿಸಿ ಮ್ಯಾಸಬೇಡರ ಆತ್ಮಕಥನವನ್ನೆ ಚರಿತ್ರೆಯಾಗಿಸಿ ಮಂಡಿಸುವ ಸೃಜನಶೀಲ ವಿಧಾನವು ಹನೂರು ಅವರ ವಿಶೇಷತೆಯಾಗಿದೆ. ಆಕರ ನಿಷ್ಟೆಯ ಸಂದರ್ಭದಲ್ಲೆ ಸಾಮಾಜಿಕ ನಿಷ್ಟೆಯನ್ನೂ ಅಳವಡಿಸಿ ಕೊಳ್ಳುವ ಗುಣವು ತಗ್ಗಿದ ದನಿಯಲ್ಲಿ ಇವರಲ್ಲಿ ಕಂಡುಬರುತ್ತದೆ. ಕರ್ನಾಟಕದ ಮೌಖಿಕ ಪರಂಪರೆಯ ವಿಶ್ವಕೋಶ ಎಂದೇ ಖ್ಯಾತರಾದ ಸಿರಿ ಅಜ್ಜಿಯನ್ನು ಬೆಳಕಿಗೆ ತಂದು ಆಕೆಯ ಕಥನಗಳ ಮೂಲಕ ಕರ್ನಾಟಕದ ಅಲಕ್ಷಿತ ಸಂಸ್ಕೃತಿ ಇತಿಹಾಸಕ್ಕೆ ಸ್ತ್ರೀ ಕೇಂದ್ರಿತ ಪಠ್ಯಗಳನ್ನು ಒದಗಿಸಿದ್ದಾರೆ. ಮೌಖಿಕ ಚರಿತ್ರೆಯನ್ನು ಇವರು ಕೂಡ ಸಾಹಿತ್ಯಾನುಸಂಧಾನದ ನವೋದಯ ವಿದ್ವಾಂಸರ ಮಾದರಿಯನ್ನೆ ನೆನಪಿಸುವಂತೆ ಮಾಡಿರುವುದನ್ನು ಗಮನಿಸಬಹುದು.

ಪ್ರೊ.ಪುರುಷೋತ್ತಮ ಬಿಳಿಮಲೆ ವಿಶೇಷವಾಗಿ ನೇರವಾಗಿ ಮೌಖಿಕ ಚರಿತ್ರೆಯ ಪ್ರಸ್ತಾನಗಳನ್ನು ವಿಭಿನ್ನವಾಗಿ ಮಂಡಿಸಿದವರು. ತುಳುನಾಡಿನ ಮೌಖಿಕ ಚರಿತ್ರೆಯಲ್ಲಿ ತೊಡಗುತ್ತಲೆ ಮೈಲಾರಲಿಂಗನ ಪರಂಪರೆಯ ಮೌಖಿಕ ಚರಿತ್ರೆಯನ್ನು ಸಂರಚಿಸಲು ತೊಡಗಿದವರು. ತಾತ್ವಿಕವಾಗಿ ಪಶ್ಚಿಮದ ಮೌಖಿಕ ನಿರ್ವಚನದ ಮಾದರಿಗಳನ್ನು ಅನುಸರಿಸಿದ ಬಿಳಿಮಲೆ ಅವರು ಬೌದ್ದಿಕವಾದ ಗ್ರಹಿಕೆಗಳನ್ನು ಹೆಚ್ಚು ಆಧರಿಸಿರುವರು. ಅವರ ‘ಕೂಡುಕಟ್ಟು’ ಕೃತಿಯ ಬರಹಗಳು ಹೆಚ್ಚಾಗಿ ರಾಚನಿಕ ಮಾದರಿಯನ್ನು ಅನುಸರಿಸುತ್ತಲೆ ಮೌಖಿಕ ಚರಿತ್ರೆಯ ಸ್ವಭಾವವನ್ನು ಹೋಲುತ್ತವೆ. ಲೋರಿ ಹಾಂಕೊ, ಪೀಟರ್ ಜೆ ಕ್ಲಾಸ್, ಬ್ರೆಂಡಾಬೆಕ್ ಅವರ ಅಧ್ಯಯನ ಕ್ರಮಗಳನ್ನು ಅನುಸರಿಸುವ ಬಿಳಿಮಲೆ ದೇಶೀಯತೆಯ ದಾರಿಯಲ್ಲೆ ಪಶ್ಚಿಮದ ವಿವೇಕವನ್ನು ಅರ್ಥಪೂರ್ಣವಾಗಿ ಮಿಳಿತಗೊಳಿಸಿ ಕೊಳ್ಳುತ್ತಾರೆ. ಮೌಖಿಕ ಚರಿತ್ರೆಯ ಪ್ರಾಯೋಗಿಕ ನಿರೂಪಣೆಯನ್ನು ಸಮರ್ಥವಾಗಿ ಮಂಡಿಸುವ ವಿದ್ವಾಂಸರಲ್ಲಿ ಇವರೂ ಒಬ್ಬರು. ಎಡಪಂಥೀಯ ಆಲೋಚನೆಯನ್ನು ಬೆಸೆದು ಕೊಂಡು ಸಿದ್ಧಮಾದರಿಯ ಚರಿತ್ರೆಯನ್ನು ಭಗ್ನಪಡಿಸುವ ಗುಣ ಇವರ ಬರಹಗಳಿಗಿದೆ. ಸಾಹಿತ್ಯದ ಪರಿಭಾಷೆಯನ್ನು ಬಿಟ್ಟು ಸಮಾಜ ವಿಜ್ಞಾನದ ಪರಿಭಾಷೆಗಳಲ್ಲಿ ಮೌಖಿಕ ಚರಿತ್ರೆಯನ್ನು ಬಹುಶಿಸ್ತೀಯವಾಗಿ ಕಟ್ಟುವ ಕಥನ ಬಿಳಿಮಲೆಯವರಲ್ಲಿ ವಿಶೇಷವಾಗಿದೆ.

ಪ್ರೊ.ವಾಮನ ನಂದಾವರ, ಪ್ರೊ.ಚಿನ್ನಪ್ಪಗೌಡ, ಹಿರಿಯರಾದ ಪ್ರೊ.ಬಿ.ಎ.ವಿವೇಕ ರೈ ಅವರೂ ಕೂಡ ಮೌಖಿಕ ಚರಿತ್ರೆಯ ನಿರೂಪಣೆಗಳನ್ನು ಸಾಂಘಿಕವೆಂಬಂತೆ ರೂಪಿಸಿರುವುದನ್ನು ಗಮನಿಸಬಹುದು. ಇವರ ಬರಹಗಳಲ್ಲಿ ಬಿಡಿತನವಿಲ್ಲ. ತುಳುನಾಡಿನ ಸಮಷ್ಠಿ ಕಥನವೇ ಇವರ ಬರಹಗಳನ್ನು ರೂಪಿಸಿರುವುದರಿಂದ ಇವರನ್ನು ಬಿಡಿಯಾಗಿ ನೋಡುವ ಬದಲು ಇಡಿಯಾಗಿಯೆ ಗುರುತಿಸಬಹುದು. ಡಾ.ಅಮೃತ ಸೋಮೇಶ್ವರ ಅವರು ಕೂಡ ತುಳುನಾಡಿನ ಚರಿತ್ರೆಯಲ್ಲಿ ತೊಡಗಿದವರು. ಡಾ.ಶಿವರಾಂ ಶೆಟ್ಟಿ ಅವರು ಮೌಖಿಕ ಚರಿತ್ರೆಯ ತಾತ್ವಿಕತೆಯನ್ನು ಸಮರ್ಥವಾಗಿಯೆ ಗ್ರಹಿಸಿದವರು. ಮೌಖಿಕ ಪರಂಪರೆಯ ಆಕರಗಳನ್ನು ಬಳಸುವ ವೈಧಾನಿಕತೆಯಲ್ಲಿ ವಿಮರ್ಶಾತ್ಮಕ ಎಚ್ಚರವನ್ನು ಪಾಲಿಸಬೇಕೆಂಬ ಆಶಯವನ್ನು ಹೊಂದಿರು ವವರು. ಸೂಕ್ಷ್ಮವಾಗಿ ಗಮನಿಸಿದರೆ ತುಳುನಾಡಿನ ವಿದ್ವಾಂಸರು ಕರ್ನಾಟಕದ ಚರಿತ್ರೆಯ ಯಜಮಾನ್ಯ ಮಾದರಿಗಳ ಒಳಗೆಯೇ ಹೇಗೆ ಸ್ಥಳೀಯ ಸಂಸ್ಕೃತಿ, ಭಾಷೆ, ಸಮಾಜ, ಜಾನಪದ, ಚರಿತ್ರೆಗಳು ಅಡಗಿವೆ ಹಾಗೂ ಅವುಗಳ ಅನನ್ಯತೆ ಎಂತದು ಎಂಬುದನ್ನು ಸ್ಥಾಪಿಸುವಂತೆ ಬರಹಗಳನ್ನು ಮಂಡಿಸಿದ್ದಾರೆ. ಇದು ಮೌಖಿಕ ಪರಂಪರೆಯ ಅನುಸಂಧಾನದ ಮೂಲಕ ಆಗಿರುವುದರಿಂದ ಮೌಖಿಕ ಚರಿತ್ರೆಗೆ ಪೂರಕವಾಗಿ ಬರುವ ಕಥನಗಳಾಗಿವೆ. ಈ ಬಗೆಯಲ್ಲಿ ಹಳೆಯ ಮೈಸೂರಿನ ಜಾನಪದ ವಿದ್ವಾಂಸರಿಗಿಂತ ತುಳುನಾಡಿನ ಜಾನಪದ ವಿದ್ವಾಂಸರು ಬೇರೆಯಾಗಿಯೆ ಕಾಣುತ್ತಾರೆ. ಇದು ಆಯಾ ಪ್ರದೇಶಗಳ ಜನ ಸಂಸ್ಕೃತಿಗಳ ಪರೋಕ್ಷ ಪ್ರೇರಣೆ ಮತ್ತು ಅಸ್ಥಿತ್ವದ ಒತ್ತಾಯವನ್ನು ಧ್ವನಿಸುವ ಸ್ಥಿತಿಯಾಗಿದೆ.

ಕರ್ನಾಟಕದ ಬೇರೆ ಬೇರೆ ವಿದ್ವಾಂಸರು ಸ್ಥಳೀಯ ಚರಿತ್ರೆಯ ಹಿನ್ನೆಲೆಯಲ್ಲೆ ಮೌಖಿಕ ಚರಿತ್ರೆಗೆ ಸಮೀಪವಾಗುವ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರು ರೂಪಿಸಿದ ಉಪ ಸಂಸ್ಕೃತಿ ಮಾಲೆಯಲ್ಲಿ ಅಂತಹ ಕೆಲವು ಮಾದರಿಗಳು ತೆರೆದು ಕೊಂಡವು. ಅವನ್ನಿಲ್ಲ ಪ್ರತ್ಯೇಕವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಇಡಿಯಾಗಿ ಈ ಮಾಲೆಯ ಪ್ರಕಟಣೆಗಳು ಮೌಖಿಕ ಪರಂಪರೆಯನ್ನು ಚರಿತ್ರೆಗೆ ಬೇಕಾದ ಮುಖ್ಯನೆಲೆ ಎಂಬುದನ್ನು ಅಪ್ರಯತ್ನವಾಗಿ ಕಂಡುಕೊಂಡವು. ಏಕರೂಪಿ ಇತಿಹಾಸದ ಯಜಮಾನ್ಯವನ್ನು ನಿರಾಕರಿಸಿ ಪುಟ್ಟಪುಟ್ಟ ಸಮುದಾಯಗಳಿಗೂ ಚರಿತ್ರೆ ಇದೆ ಎಂಬುದನ್ನು ಸ್ವಾಭಿಮಾನದಿಂದ ಮಂಡಿಸಿ ದವು. ಮಾನವಶಾಸ್ತ್ರೀಯ ಹಿನ್ನೆಲೆಯಲ್ಲೆ ಪರ್ಯಾಯ ಸಂಸ್ಕೃತಿಯ ಸ್ವರೂಪವೊಂದನ್ನು ಪರಿಚಯಿಸುವ ಇಂತಹ ಯತ್ನದಲ್ಲಿ ಮೌಖಿಕ ಚರಿತ್ರೆಯ ಅನೇಕ ಲಕ್ಷಣಗಳಿವೆ. ಇದರ ಭಾಗವೊ ಏನೊ ಎಂಬಂತೆ ಆನಂತರ ಕರ್ನಾಟಕದ ಉದ್ದಕ್ಕೂ ಅನೇಕ ಅಂಚಿನ ಜಾತಿ ಬುಡಕಟ್ಟು ಅಲೆಮಾರಿಗಳ ಸಂಶೋಧನೆಗಳು ಘಟಿಸಿವೆ. ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಡಾ.ಬಿ.ರಾಜಶೇಖರಪ್ಪ, ಡಾ.ತಿಪ್ಪೇಸ್ವಾಮಿ, ಡಾ.ರಣ್ಣ ದಂಡೆ, ಮುಂತಾದವರನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಇತ್ತೀಚೆಗೆ ಅಲೆಮಾರಿ ಸಮುದಾಯಗಳಿಗೂ ಅವರದೇ ಆದ ಚರಿತ್ರೆ ಇದೆ ಎಂಬುದನ್ನು ಗ್ರಹಿಸಿ ಕವಿ ಎಸ್.ಜಿ.ಸಿದ್ಧರಾಮಯ್ಯನವರು ಬರಗೂರು ರಾಮಚಂದ್ರಪ್ಪ ಅವರ ಉಪಸಂಸ್ಕೃತಿ ಮಾಲೆ ಮಾದರಿಯಲ್ಲೆ ಅಲೆಮಾರಿ ಸಮುದಾಯಗಳ ಕುರಿತಾದ ಪ್ರಕಟನೆಗಳನ್ನು ಪುಸ್ತಕ ಪ್ರಾಧಿಕಾರದಿಂದ ಡಾ.ಮೇತ್ರಿ ಕಾಮಣ್ಣ ಅವರ ಸಹಕಾರದಿಂದ ತಂದದ್ದು ಮಹತ್ವದ್ದಾಗಿದೆ.

ಜಾನಪದ ನೆಲೆಯ ಅನೇಕ ವಿದ್ವಾಂಸರು ಮೌಖಿಕ ಚರಿತ್ರೆಯ ಬಗ್ಗೆ ಅಭಿಪ್ರಾಯ ರೂಪದ ಮಾತುಗಳನ್ನು ಹೆಚ್ಚಾಗಿ ಪ್ರಾಸ್ತಾವಿಕವಾಗಿ ತಮ್ಮ ಬೇರೆ ಬೇರೆ ಬರಹಗಳಲ್ಲಿ ವ್ಯಕ್ತಪಡಿಸು ತ್ತಾರೆ. ಇಡಿಯಾಗಿ ಮೌಖಿಕ ಕಾವ್ಯಗಳನ್ನೆ ಇಟ್ಟುಕೊಂಡು ಹೇಗೆ ಆ ಕಾವ್ಯ ಸಾಂಸ್ಕೃತಿಕವಾದ ಚರಿತ್ರೆಯನ್ನು ಧ್ವನಿಸುತ್ತಿದೆ ಎಂಬ ಪ್ರತ್ಯೇಕ ಸ್ವತಂತ್ರ ಬರಹಗಳನ್ನು ನಿರೂಪಿಸಲು ಮುಂದಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರೊ.ಜಿ.ಶಂ.ಪ. ಅವರೇ ಹೆಚ್ಚು ಅಧಿಕೃತವಾಗಿ ಸಾಹಿತ್ಯಾನು ಸಂಧಾನದ ಮೌಖಿಕ ಚರಿತ್ರೆಯ ನಿರೂಪಕರಾಗಿರುತ್ತಾರೆ.

ಮುಕ್ತ ನಿರೂಪಣೆಗಳ ಸಂಯುಕ್ತ ನೋಟ

ಕನ್ನಡ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಮೌಖಿಕ ಚರಿತ್ರೆಯ ಅನೇಕ ನಿರೂಪಣೆಗಳು ಅತ್ತ ಶುದ್ಧ ಸಾಹಿತ್ಯದ ಮಾದರಿಯನ್ನೂ ಅನುಸರಿಸದೆ ಇತ್ತ ಅಪ್ಪಟ ದೇಶೀಯ ಸ್ವಭಾವವನ್ನೂ ಒಳಗೊಳ್ಳದೆ ಅಥವಾ ಚರಿತ್ರೆಯ ಶಿಸ್ತಿನ ಪರಿಭಾಷೆಗಳನ್ನೂ ಪರಿಗಣಿಸದೆ ಉದಾರವಾಗಿ ಸಂಯುಕ್ತವಾಗಿ ಬೀಸು ಹೇಳಿಕೆಗಳನ್ನು ಸಾಂದರ್ಭಿಕವಾಗಿ  ಬರಹಗಳಲ್ಲಿ ತೇಲಿಬಿಡುವುದರಿಂದ ಅಂತಹ ವಿಚಾರಗಳೆಲ್ಲ ಪ್ರಾಯೋಗಿಕ ನಿರೂಪಣೆಗಳಲ್ಲಿ ಒಳಗೊಳ್ಳದೆ ಹೋಗುವ ಸಾಧ್ಯತೆಯೆ ಹೆಚ್ಚಾಗಿದೆ. ಹೀಗಾಗಿಯೆ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ಅನೇಕ ವಿಮರ್ಶಕರು ಚರಿತ್ರೆಯ ಬಗ್ಗೆ ಸಲೀಸಾಗಿ ಆರೋಪಗಳನ್ನು ಮಾಡಿ ಚರಿತ್ರೆ ರಚನಾ ವಿಧಾನವನ್ನು ತಾವೇ ನಿಭಾಯಿಸುವಂತೆ ತೋರಿಕೊಳ್ಳುವರು. ಇದು ಲೋಪವೇನೂ ಅಲ್ಲವಾದರೂ ಉತ್ಸಾಹದ  ಸ್ವಾತಂತ್ರ್ಯವು ಅಭಿವ್ಯಕ್ತಿಯ ಅನೇಕ ಮಿತಿಗಳನ್ನು ಸೃಷ್ಟಿಸಬಲ್ಲದು. ಚರಿತ್ರೆಯಲ್ಲಿ ನಮ್ಮ ಚಹರೆ ದಾಖಲಾಗಿಲ್ಲ ಎಂಬ ಅಸಮದಾನದಿಂದಲು ಚರಿತ್ರೆಯ ನಿರಾಕರಣೆಯ ಟೀಕೆಗಳು ಎದುರಾಗುತ್ತವೆ. ನಮ್ಮ ಚರಿತ್ರೆ ಬೇರೆ ಅದರ ರೀತಿ ಹೀಗೆ ನಮ್ಮದು ಪರ್ಯಾಯ ಚರಿತ್ರೆ ಎಂದು ವಾದಿಸುವ ಪರಿಯಲ್ಲಿಯೆ ಮತ್ತೊಂದು ಚರಿತ್ರೆಯ ದನಿಯಿದೆ. ಆದರೆ ಈ ದನಿ ಪ್ರತ್ಯೇಕತೆಯ ಏಕಮಾತ್ರ ದಾಟಿಯಿಂದ ಇಡಿಯಾಗಿ ಸಮಾಜವನ್ನು ವ್ಯಾಪಿಸಲಾರದು. ಸ್ಥಳೀಯ ಚರಿತ್ರೆ, ದಲಿತ ಚರಿತ್ರೆ, ಮಹಿಳಾ ಚರಿತ್ರೆ, ಅಲೆಮಾರಿ ಚರಿತ್ರೆ ಹೀಗೆ ವಿಂಗಡಿಸುವುದರಿಂದ ಅಲಕ್ಷಿತವಾದದ್ದಕ್ಕೆ ಅವ್ಯಕ್ತವಾಗಿ ಅಡಗಿಕೊಂಡಿರುವುದಕ್ಕೆ ಅವಕಾಶವೇನೊ ದಕ್ಕುತ್ತದೆ. ಆದರೆ ಬಿಡಿ ಅನನ್ಯತೆಗಳೆಲ್ಲ ಒಂದು ಕೇಂದ್ರಕ್ಕೆ ಬಂದು ಸೇರಲೇ ಬೇಕಲ್ಲವೆ? ಎಂಬ ಪ್ರಶ್ನೆ ಬಂದಾಗ ಬಿಡಿ ಅನನ್ಯತೆಯ ಚರಿತ್ರೆಗಳು ಅನ್ಯವಾಗಿಯೆ ಉಳಿದುಹೋಗುವ ಅಪಾಯವೂ ಇದೆ. ಮೌಖಿಕ ಚರಿತ್ರೆಯ ನಿರ್ವಚನವೂ ಇಂತಹ ಪ್ರಶ್ನೆಗಳಿಗೆ ಸೂಕ್ತ ದಾರಿ ಕಂಡುಕೊಂಡಾಗಲೇ ಅದು ಬಲಗೊಳ್ಳುವುದು.

ಕನ್ನಡ ವಿಶ್ವವಿದ್ಯಾಲಯವು ಇಂತಹ ಸಮಸ್ಯೆಯನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ಚರಿತ್ರೆ ರಚನಾ ವಿಧಾನದ ಸಾಧ್ಯತೆಗಳನ್ನು ಹುಡುಕುತ್ತಿದೆ. ಚಂದ್ರಶೇಖರ ಕಂಬಾರರು ಕರ್ನಾಟಕ ಚರಿತ್ರೆ ಸಂಪುಟಗಳನ್ನು ರೂಪಿಸುವಲ್ಲಿಯೆ ಇಂತಹ ದಾರಿ ಒಂದು ನಮಗೆ ಇದೆಯೆ ಎಂಬ ಸೂಚನೆಯನ್ನು ಹೊರಡಿಸಿದ್ದರು. ಬುಡಕಟ್ಟು ಕಾವ್ಯಗಳ ಮಾಲೆಯ ಸಂಪುಟಗಳ ಸಂದರ್ಭ ದಲ್ಲಿ ದೇಶೀಯತೆಯ ದಾರಿಯಲ್ಲೆ ಅಲಕ್ಷಿತ ಸಂಸ್ಕೃತಿ ಚರಿತ್ರೆಯನ್ನು ನಿರ್ಮಿಸಲು ಬೇಕಾದ ಒತ್ತಾಯವನ್ನು ಪ್ರಾಸ್ತಾವಿಕ ನುಡಿಗಳಲ್ಲಿ ಬಿಂಬಿಸಿದ್ದರು. ತೊಂಬತ್ತರ ದಶಕದಲ್ಲಿ ಜ್ಞಾನ ಪರಂಪರೆಗಳ ಚರಿತ್ರೆಯನ್ನು ನೆನಪುಮಾಡಿಕೊಳ್ಳಬೇಕು ಎಂಬ ಆಶಯದಲ್ಲಿ ವಿಸ್ಮೃತಿ ಪರಿಕಲ್ಪನೆಯ ಡಿ.ಆರ್.ನಾಗರಾಜ್ ಅಕ್ಷರ ಚಿಂತನ ಮಾಲೆಯ ಕೃತಿಗಳನ್ನು ಬೇರೊಂದು ದಿಕ್ಕಿನಿಂದ ರೂಪಿಸಿದರು. ಒಂದು ಕಾಲದ ಬೃಹತ್ ಭಾರತದ ಜ್ಞಾನಪರಂಪರೆಗಳು ಮರೆವಿನಲ್ಲಿ ಅಳಿಯುತ್ತಿವೆ ಎಂಬ ಆತಂಕದಲ್ಲೆ ಪರಂಪರೆಯ ಜೊತೆ ಆಧುನಿಕವಾಗಿ ಹೇಗೆ ಪ್ರವೇಶಗೊಳ್ಳ ಬೇಕು ಎಂಬ ಚಿಂತನೆಗಳನ್ನು ನುಡಿಸಿದರು. ಈ ವಿಚಾರಕ್ಕೂ ಅದೇ ವೇಳೆ ದೇಶೀಯತೆಯ ಜ್ಞಾನ ಕ್ರಮಗಳನ್ನು ಪುನರುಜ್ಜೀವನಗೊಳಿಸಬೇಕು ಎಂಬ ಆಶಯದಲ್ಲಿ ವಿಚಾರ ಮಂಡಿಸಿದ ಕಂಬಾರರ ರೀತಿಗೂ ಒಂದು ವಿಶಿಷ್ಟ ಕೊಂಡಿ ಕಂಡುಬರುತ್ತದೆ. ಏಕಪ್ರಕಾರವಾಗಿ ದೇಶಿ ಮತ್ತು ಮಾರ್ಗ ಪರಂಪರೆಗಳ ಜ್ಞಾನ ಪ್ರಕಾರಗಳ ಪುನರುಜ್ಜೀವನದ ಆಶಯದಲ್ಲೇ ಅವುಗಳ ಚರಿತ್ರೆಯನ್ನು ನಿರೂಪಿಸಬೇಕು ಎಂಬ ಸಮಾನ ಧೋರಣೆ ಕಾಣುತ್ತದೆ. ಆದರೆ ಈ ಯತ್ನವು ಮೌಖಿಕ ಚರಿತ್ರೆಯ ದಾರಿಯದಾಗಿರಲಿಲ್ಲ. ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಕಂಡುಕೊಳ್ಳುವುದಾಗಿತ್ತು. ಈ ನಡುವೆ ದಲಿತರು ತಮ್ಮ ಸಂಸ್ಕೃತಿ ಚರಿತ್ರೆಗೆ ಮುಂದಾದದ್ದು ಸಹಜವಾಗಿತ್ತು. ಇದರ ಪ್ರಭಾವವೊ ಏನೋ ಎಂಬಂತೆ ವಿಶ್ವವಿದ್ಯಾಲಯಗಳ ಸಂಶೋಧನೆಯಲ್ಲಿ ದಲಿತ ವಿಷಯ, ಮಹಿಳಾ ವಿಷಯ, ಬುಡಕಟ್ಟು ಹಾಗೂ ಅಲೆಮಾರಿ ವಿಷಯ, ಹೀಗೆ ಅಲಕ್ಷಿತ ಸಂಗತಿಗಳೆ ಸಂಶೋಧನೆಯ ವಿಷಯವಾಗಿ ಪ್ರಧಾನವಾದವು. ಇಲ್ಲೆಲ್ಲ ಮೌಖಿಕ ಪರಂಪರೆ ಯನ್ನೆ ಪ್ರಮುಖ ಆಕರವಾಗಿ ನಿರ್ವಚನಕ್ಕೆ ಬಳಸಿಕೊಂಡದ್ದನ್ನು ಗುರುತಿಸಬಹುದು. ಈ ವಿಚಾರಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಅಲಕ್ಷಿತ ವಿಷಯಗಳ ಸಂಶೋಧನೆಯನ್ನು ಗಂಭೀರವಾಗಿ ಅಳವಡಿಸಿಕೊಳ್ಳುವ ದೃಷ್ಟಿಯಿಂದ ಉಳಿದೆಲ್ಲ ವಿಶ್ವವಿದ್ಯಾಲಯಗಳ ಸಂಶೋಧನೆಯ ವೈಧಾನಿಕತೆಯನ್ನು ಮುರಿಯುತ್ತಲೇ ತನ್ನ ಜನಪರತೆಯನ್ನು ಬೆಳೆಸಿದೆ.

ಕನ್ನಡ ವಿಶ್ವವಿದ್ಯಾಲಯದ ಬಹುಪಾಲು ಎಲ್ಲ ವಿಭಾಗಗಳ ವಿದ್ವಾಂಸರು ಹೊಸ ಬಗೆಯಲ್ಲಿ ಚರಿತ್ರೆಯ ಬಹು ರೂಪಗಳನ್ನು ನಿರೂಪಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮೌಖಿಕ ಚರಿತ್ರೆಯ ಶಿಸ್ತನ್ನು ರೂಡಿಸುವಂತೆ ತೊಡಗಿರುವುದನ್ನು ನೋಡಿದರೆ ಇಡೀ ಕನ್ನಡ ವಿಶ್ವವಿದ್ಯಾಲಯದ ಅಲಕ್ಷಿತ ಚರಿತ್ರೆಯ ಕಥನವು ಅಖಂಡವಾಗಿ ಕನ್ನಡ ಭಾಷೆ, ಸಾಹಿತ್ಯ, ಜಾನಪದ, ಸಮಾಜ, ಸಂಸ್ಕೃತಿ, ಜಾತಿ, ಲಿಂಗಸಂಬಂಧ, ಚರಿತ್ರೆ ಮುಂತಾದ ಬಹುರೂಪಿ ಅಧ್ಯಯನಗಳನ್ನು ಮುಕ್ತವಾಗಿ ನಿರ್ವಹಿಸುತ್ತಿದೆ. ಬಿಡಿಯಾಗಿ ನೋಡುವ ಪಶ್ಚಿಮದ ಕಣ್ಣೋಟಕ್ಕಿಂತ ಇಡಿಯಾಗಿ ಭಾವಿಸುವ ಸಮಷ್ಟಿ ಅಧ್ಯಯನ ಕ್ರಮವೊಂದು ಇದರಿಂದ ಸಾಧ್ಯವಾಗಿದೆ. ಧೋರಣೆಯಲ್ಲಿ ಅಧ್ಯಯನದ ವಿಷಯದಲ್ಲಿ ಏಕತೆಯಿದ್ದರೂ ಧ್ವನಿತಾರ್ಥ ದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪಂಥವು ವೈವಿಧ್ಯತೆಯನ್ನು ಸಾಧಿಸಿಕೊಂಡಿದೆ. ಭಾಗಶಃ ಇದು ಕರ್ನಾಟಕದ ಯಾವುದೇ ಹಿರಿಯ ಅಥವಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗದ ಅವಕಾಶವಾಗಿದೆ.

ಮೇಲಿನ ವಿವರಗಳಿಂದ ಒಂದು ಪ್ರಶ್ನೆ ಮೂಡದಿರದು. ಅದೇನೆಂದರೆ, ಹೀಗೆ ಬಹುಶಿಸ್ತೀಯ ಅಂತರ್‌ಸಂಬಂಧಗಳಿಂದ ನಿರ್ವಚನಕ್ಕೆ ತೊಡಗಿರುವ ಅಧ್ಯಯನಗಳು ನಿರ್ದಿಷ್ಟವಾಗಿ ಯಾವ ಜ್ಞಾನ ಶಾಖೆಗೆ ಸಂಬಂಧಪಡುತ್ತವೆ? ಈ ಬಗೆಯ ಅಧ್ಯಯನದ ಗದ್ಯನಿರೂಪಣೆ ವಸ್ತುನಿಷ್ಠವೊ ಭಾವನಿಷ್ಠವೊ? ಸಂಯುಕ್ತ ವಿಷಯಗಳ ಮೂಲಕ ಒಂದು ನಿರ್ಧಿಷ್ಠ ತೀರ್ಮಾನಕ್ಕೆ ಬರಲು ಸಾಧ್ಯವೆ? ವೈವಿಧ್ಯ ಅಧ್ಯಯನಗಳೆಲ್ಲ ಮಾನವಿಕ ವಿಜ್ಞಾನದ ಯಾವ ನೆಲೆಯಿಂದ ಅಂತರ್ ಸಂಬಂಧಗಳನ್ನು ಬೆಸೆದುಕೊಳ್ಳುತ್ತವೆ? ಇವೆಲ್ಲ ತಾತ್ವಿಕ ಜಿಜ್ಞಾಸೆಯ ಪ್ರಶ್ನೆಗಳಂತೆ ಕಂಡರೂ ಸಮಕಾಲೀನ ಸಮಾಜದ ಭವಿಷ್ಯದ ಕಾರಣದಿಂದ ಪ್ರಾಯೋಗಿಕ ಉತ್ತರಗಳನ್ನು ಕಂಡುಕೊಳ್ಳದಿದ್ದರೆ ಅಧ್ಯಯನಗಳೆಲ್ಲ ದಂತಗೋಪುರದ ದಂತದಗೊಂಬೆಗಳಂತೆಯೆ ಆಗಿಬಿಡುತ್ತವೆ. ಈ ಪ್ರಶ್ನೆಗಳಿಗೆ ದೀರ್ಘ ಉತ್ತರದ ಅವಶ್ಯಕತೆಯಿಲ್ಲ. ಸಾಂಪ್ರದಾಯಿಕವಾಗಿ ಚೌಕಟ್ಟಿನಲ್ಲಿ ನಿಂತ ಜ್ಞಾನ ಶಾಖೆಗಳು ಬದಲಾಗಬೇಕು. ಗ್ರಹಿಸುವ ಹಾಗು ನಿರೂಪಿಸುವ ಶೈಲಿಯಲ್ಲಿ ಶಿಸ್ತಿಗೆ ಮೊದಲಾಗಬೇಕು. ಯಾವುದೇ ಜ್ಞಾನ ಶಾಖೆಯು ತಂತಾನೆ ಚೌಕಟ್ಟಿನದಲ್ಲ. ವಿಸ್ತರಿಸಿದಂತೆಲ್ಲ ಜ್ಞಾನಶಾಖೆಗಳು ವಿಕಾಸಗೊಳ್ಳುತ್ತ ಬಹುರೂಪಿಯಾಗುತ್ತವೆ. ಹೀಗೆ ಬಹುರೂಪಿಯಾಗುವುದೇ ಜ್ಞಾನ ಪರಂಪರೆಗಳ ಜೀವಂತ ಲಕ್ಷಣ. ಕನ್ನಡ ವಿಶ್ವವಿದ್ಯಾಲಯದ ವಸ್ತುವಿಷಯ ಒಂದೇ ಕೇಂದ್ರದ್ದಾಗಿದ್ದರೂ ಅದನ್ನು ಗ್ರಹಿಸುವ ದಾರಿಗಳು ಹತ್ತಾರು. ಇದು ಸೃಜನಶೀಲ ಪ್ರತಿಭೆಯ ಮೂಲಕ ಶೋಧಿಸುವ ವಿಧಾನ. ಈ ಎಲ್ಲ ರೀತಿಗಳಿಂದ ಕರ್ನಾಟಕದ ಸಂಸ್ಕೃತಿ ಚರಿತ್ರೆಯನ್ನು ಶೋಧಿಸುವ ಕನ್ನಡ ವಿಶ್ವವಿದ್ಯಾಲಯದ ಆಲೋಚನೆಯಲ್ಲಿ ಸಾಮಾಜಿಕ ನ್ಯಾಯ ಪ್ರತಿಧ್ವನಿಯಂತೆ ವ್ಯಕ್ತವಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೌಖಿಕ ಚರಿತ್ರೆಯ ನಿರೂಪಣೆಗಳು ಕವಲೊಡೆದು ಬೆಳೆಯುತ್ತಿವೆ. ಇಲ್ಲಿ ಶುದ್ಧ ಚರಿತ್ರೆ ಶಿಸ್ತಿನವರ ಮೌಖಿಕ ಚರಿತ್ರೆಯ ನಿರ್ವಚನಕ್ಕೂ ಜಾನಪದ ಹಿನ್ನೆಲೆಯ ವಿದ್ವಾಂಸರ ಮೌಖಿಕ ಚರಿತ್ರೆಯ ಕಥನಕ್ಕೂ ಯಾವ ಬಗೆಯ ಭಿನ್ನತೆ ಹಾಗೂ ಸಾಮ್ಯತೆ ಇದೆ ಎಂಬುದನ್ನು ಗಮನಿಸುವ.

ತರ್ಕ ಮೀರಿದ ಚರಿತ್ರೆ

ಶುದ್ಧ ಚರಿತ್ರೆಯ ಇತಿಹಾಸಕಾರರು ವಸ್ತುನಿಷ್ಟತೆಯನ್ನು ಪ್ರಧಾನವಾಗಿ ಗ್ರಹಿಸಿದರೆ ಜಾನಪದ ವಿದ್ವಾಂಸರು ಭಾವನಾತ್ಮಕ ಅಂಶಗಳನ್ನು ಮುಖ್ಯವಾಗಿ ಭಾವಿಸುವರು. ನಿರ್ಧಿಷ್ಟ ವಸ್ತುಸ್ಥಿತಿಯ ಬೇರನ್ನು ಹಿಡಿದು ಗತಕಾಲವನ್ನು ಚರಿತ್ರೆಕಾರರು ಸಂರಚಿಸಿದರೆ ಜಾನಪದ ವಿದ್ವಾಂಸರು ವರ್ತಮಾನದ ಗತಿಯಿಂದಲೆ ಗತವನ್ನು ಧ್ವನಿಸುತ್ತಾರೆ. ನಿರ್ಧಿಷ್ಟತೆಗಿಂತಲೂ ಅಮೂರ್ತಭಾವಗಳನ್ನು ಜೋಡಿಸಿಕೊಳ್ಳುವಲ್ಲಿಯೆ ಜಾನಪದದವರು ಹೆಚ್ಚು ಕುಶಲಿಗಳು. ಆದರೆ ತರ್ಕಬದ್ಧ ಸಂರಚನೆಯಿಂದಲೆ ಕಾಲದ ಒಂದು ಗತಿಯನ್ನು ನಿರ್ಧರಿಸುವುದರಲ್ಲಿ ಶುದ್ಧ ಚರಿತ್ರೆಕಾರರು ಬದ್ಧರಾಗಿರುತ್ತಾರೆ. ಗತದ ಬಹುರೂಪಗಳು ರೂಪಾಂತರವಾಗುತ್ತ ಸಾಗುವುದನ್ನೇ ಹಿಂಬಾಲಿಸುವ ಜಾನಪದ ವಿದ್ವಾಂಸರು ಕಾಲನಿಷ್ಟತೆಗೆ ಗಮನಕೊಡುವುದಿಲ್ಲ. ಕಾಲದ ಹಂಗೂ ಅವರಿಗೆ ಬೇಕಾಗಿರುವುದಿಲ್ಲ. ಕಾಲಾತೀತ ಸ್ವಭಾವದಲ್ಲಿ ಮೌಲ್ಯಗಳನ್ನು ಮಾತ್ರವೆ ಆಯ್ಕೆಮಾಡಿಕೊಳ್ಳುವುದು ಜಾನಪದದವರ ಗುಣವಾಗಿದೆ. ಏಕಕಾಲಿಕತೆಗಿಂತ ಬಹುಕಾಲಿಕತೆಯ ಅಮೂರ್ತವೇ ಇವರಿಗೆ ಚರಿತ್ರೆಯ ಸಾಕ್ಷಿ ಪ್ರಜ್ಞೆಯಾಗಿದೆ. ಈ ಸಾಕ್ಷಿ ಪ್ರಜ್ಞೆಯು ಭಾವನಿಷ್ಠೆ ಹೇಗೊ ಅಂತೆಯೇ ಮನಸ್ಸಿನಲ್ಲಿ ನಿರ್ಧಾರವಾಗುವ ಒಂದು ತೀರ್ಮಾನ. ಆತ್ಮಸಾಕ್ಷಿಯನ್ನು ನಂಬುವುದೇ ಇಲ್ಲಿ ಹೆಚ್ಚು. ಹೀಗಾಗಿ ಭೌತಿಕ ಸಾಕ್ಷ್ಯಕ್ಕಿಂತ ಕಾಣದ ಸಾಕ್ಷ್ಯವೇ ಅಥವಾ ಭಾವನಾತ್ಮಕವಾದ ನಂಬಿಕೆಗಳೇ ಇಲ್ಲಿ ಮೇಲುಗೈ ಸಾಧಿಸಿ ಅವು ನೀಡಿದ ಒಳಹುಗಳಿಂದ ಅರ್ಥವನ್ನು ಕಂಡುಕೊಳ್ಳಲಾಗುತ್ತದೆ.

ಶುದ್ಧ ಚರಿತ್ರೆಕಾರರು ಈ ಪರಿಯ ಶೋಧಕ್ಕೆ ಮುಂದಾಗುವುದಿಲ್ಲ. ಕಾಣುವ ಲೋಕದಿಂದಲೇ ಕಾಣದಿರುವ ಗತಲೋಕವನ್ನು ಊಹಿಸಬಹುದೆಂಬ ಅವರ ತರ್ಕವು ಅರ್ಥಶಾಲಿ ಯಾದುದೇ ಹೌದು. ನೆನ್ನೆಯನ್ನು ನೆನ್ನೆಯ ಕಾರಣಗಳಿಂದಲೇ ಅರ್ಥೈಸಬೇಕು ಎಂಬ ನಿಲುವು ಅವರದ್ದಾದ್ದರಿಂದ ಆ ನೆನ್ನೆಯು ವರ್ತಮಾನದ ತನಕ ಹೇಗೆ ಸಾಗಿ ಬಂದಿದೆ ಎಂಬುದನ್ನು ಗ್ರಹಿಸವುದುರಲ್ಲಿಯೇ ಭಾವಲೋಕವನ್ನು ಕೂಡ ಗ್ರಹಿಸಬಹುದು ಎಂಬ ವಿಶ್ವಾಸ ಶುದ್ಧ ಚರಿತ್ರೆಕಾರರಲ್ಲಿ ಕಾಣುತ್ತದೆ. ಹಾಗೆಯೆ ಚರಿತ್ರೆಯ ನೆನ್ನೆಯ ಕಾರಣ ಮತ್ತು ಪರಿಣಾಮಗಳು ವರ್ತಮಾನದಲ್ಲಿ ಯಾವ ಸ್ಥಿತಿಗೆ ಬಂದು ತಲುಪಿರುತ್ತವೆ ಎಂಬುದನ್ನು ಗ್ರಹಿಸಬಹುದೆಂದು ತಿಳಿಯುತ್ತಾರೆ. ಈ ಅಂಶಗಳು ಹೇಗೆ ಮೌಖಿಕ ಚರಿತ್ರೆಯಲ್ಲಿ ಪ್ರತಿಫಲಿಸುತ್ತವೆ ಎಂಬುದನ್ನು ಇಲ್ಲಿ ನೆನೆಯಬೇಕು. ಬಹುಪಾಲು ಜಾನಪದವು ಭಾವನಿಷ್ಟತೆಯಲ್ಲಿ ವಸ್ತುನಿಷ್ಠತೆಯನ್ನು ಅಲಂಕಾರಗಳಿಂದ ರೂಪಾಂತರಗಳಿಂದ ಮುಚ್ಚಿಕೊಂಡಿರುತ್ತದೆ. ಭಾವನಿಷ್ಠತೆಯು ಯಾವಾಗಲೂ ಹೀಗೆ ಬಚ್ಚಿಟ್ಟಧಾರೆಯಲ್ಲಿ  ಅರ್ಥಗಳನ್ನು ಬಿಂಬಿಸುತ್ತದೆ. ಕೆರೆಗೆಹಾರ ಕಥನ ಗೀತೆಯಲ್ಲಿರುವ ಭಾವನಿಷ್ಠತೆಗೆ ಕಾಲದ ಹಂಗಿಲ್ಲವಾದರೂ ಶುದ್ಧ ಚರಿತ್ರೆಕಾರ ಕೆರೆಗೆ ಆಹಾರವಾದ ಸಾಮಾಜಿಕ ವ್ಯವಸ್ಥೆಯ ಲಿಂಗಸಂಬಂಧಗಳಲ್ಲಿ ಅಧಿಕಾರ ಮತ್ತು ವ್ಯವಸ್ಥೆಯ ಮೌಲ್ಯಗಳನ್ನು ವಸ್ತುನಿಷ್ಠವಾಗಿಯೆ ನೋಡಬೇಕಾಗುತ್ತದೆ. ಅಂದರೆ ಭಾವನಿಷ್ಠವಾದದ್ದು ತರ್ಕಕ್ಕೆ ಒಳಗಾಗಲು ಬಯಸುವುದಿಲ್ಲ. ಹೀಗಾಗಿಯೆ ಶುದ್ಧ ಚರಿತ್ರೆಕಾರರು ಭಾವದ ಹಂಗು ಬೇಡ ಎಂಬ ತೀರ್ಮಾನಕ್ಕೆ ಬದ್ಧವಾಗಿರುವುದು.

ಮೌಖಿಕ ಪರಂಪರೆ ಎಂದ ಕೂಡಲೆ ಜಾನಪದ ಸಾಹಿತ್ಯ ಎಂಬ ಭಾವನೆ ಅನೇಕ ಶುದ್ಧ ಚರಿತ್ರೆಕಾರರಲ್ಲಿದೆ. ವಾಸ್ತವದಲ್ಲಿ ಮೌಖಿಕ ಪರಂಪರೆ ಕೇವಲ ಸಾಹಿತ್ಯ ಪ್ರಕಾರಗಳಿಗೆ ಹೆಚ್ಚು ಸಂಬಂಧಿಸಿದ್ದಲ್ಲ. ಸಾಹಿತ್ಯ, ಸಂಸ್ಕೃತಿ, ಕಲೆ, ಆಚರಣೆ, ಸಂಪ್ರದಾಯ, ನಂಬಿಕೆ ಎಲ್ಲವೂ ಬೆರೆತು ಮೌಖಿಕ ಪರಂಪರೆ ಸಮಷ್ಟಿಯಾಗಿ ವ್ಯಕ್ತವಾಗುತ್ತಿರುತ್ತದೆ. ಹೀಗಾಗಿಯೇ ಜಾನಪದ ವಿದ್ವಾಂಸರು ಅಖಂಡವಾಗಿ ಭಾವಿಸುವ ತತ್ವಕ್ಕೆ ಬದ್ಧರಾಗಿರುತ್ತಾರೆ. ಬಿಡಿಯಾಗಿ ಬೇರ್ಪಡಿಸಿ ನೋಡುವ ಶುದ್ಧ ಚರಿತ್ರೆಕಾರರು ಜಾನಪದವನ್ನು ವ್ಯಕ್ತವಾದಿ ನೆಲೆಯಲ್ಲಿ ಅಳೆಯುವ ಮಾನದಂಡಗಳಿಗೇ ಹೆಚ್ಚು ವಾಲಿರುತ್ತಾರೆ. ಸಮಷ್ಟಿ ಆಕರಗಳನ್ನು ವ್ಯಕ್ತಿನಿಷ್ಟವಾಗಿ ವಿಭಜಿಸಿದಾಗಲೆಲ್ಲ ಮೌಖಿಕ ಚರಿತ್ರೆಗೆ ನ್ಯಾಯ ಒದಗಿಸಿದಂತಾಗುವುದಿಲ್ಲ. ತರ್ಕವನ್ನು ಮೀರಿದ ಮೌಖಿಕ ಪರಂಪರೆಗಳ ಚರಿತ್ರೆಯನ್ನು ತರ್ಕದ ಹಂಗಿಲ್ಲದೆ ರೂಪಿಸಬೇಕು. ಈ ನಿಟ್ಟಿನಿಂದ ನೋಡಿದರೆ ಶುದ್ಧ ಚರಿತ್ರೆಕಾರರ ಅಧ್ಯಯನದ ಪರಿಕಲ್ಪನೆಗಳು ಪಶ್ಚಿಮದ ವ್ಯಕ್ತಿ ವಿಶಿಷ್ಟ ಚಿಂತನೆಯಿಂದ ಹೊರಟರೆ ಜಾನಪದ ವಿದ್ವಾಂಸರ ಮೌಖಿಕ ಚರಿತ್ರೆಯ ನಂಬಿಕೆಗಳು ಅರ್ಥಾತ್ ನಿರ್ವಚನದ ಪರಿಕಲ್ಪನೆಗಳು ದೇಶೀಯವಾದ ಸಮಷಿ ಪ್ರಜ್ಞೆಯನ್ನು ಆಶ್ರಯಿಸಿ ಆಕರವನ್ನು ಪ್ರವೇಶಿಸುತ್ತವೆ. ಒಂದು ಮೂರ್ತ ಸ್ವರೂಪದಿಂದ ನೋಡಿದರೆ. ಇನ್ನೊಂದು ಅಮೂರ್ತ ನೆಲೆಯಿಂದ ಭಾವಿಸುತ್ತದೆ. ಜಾನಪದ ವಿದ್ವಾಂಸರು ಕಥನವಾಗಿ ನಿರೂಪಿಸಿದರೆ ಚರಿತ್ರೆಕಾರರು ಪ್ರಕರಣದ ಪರಿಶೀಲನೆಯನ್ನು ನಿರ್ವಚಿಸುತ್ತಾರೆ. ಒಂದು ಹೆಚ್ಚು ಕತೆಯ ಗುಣ ಪಡೆದಿದ್ದರೆ ಮತ್ತೊಂದು ಕತೆಯ ಕಾರ್ಯಕಾರಣ ಸಂಬಂಧಗಳನ್ನು ಜೋಡಿಸುತ್ತದೆ. ಮೂಲತಃ ಇತಿಹಾಸವು ಕಥನವೇ ಆದದ್ದರಿಂದ ಇಬ್ಬರಲ್ಲೂ ಕಥಾಂಶವಿದೆಯಾದರೂ ಇದನ್ನು ನಿರ್ವಹಿಸುವಲ್ಲಿ ವ್ಯತ್ಯಾಸವಿದೆ. ಮೌಖಿಕ ಪರಂಪರೆಯ ಕಲ್ಪನೆ, ರಮ್ಯತೆ, ಆಧ್ಯಾತ್ಮಿಕ ಭಾವನೆ, ಪುರಾಣ ಪ್ರಜ್ಞೆ, ಮಾಂತ್ರಿಕತೆಗಳನ್ನೆಲ್ಲ ಜಾನಪದ ವಿದ್ವಾಂಸರು ತಮ್ಮ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಪೂರಕವಾಗಿ ಬೆಳೆಸಿಕೊಂಡರೆ ಶುದ್ಧ ಚರಿತ್ರೆಕಾರರು ಈ ಅಂಶಗಳನ್ನು ತರ್ಕದ ವೇಷಗಳೆಂದು ಭಾವಿಸುವರು. ಇದೇ ಅಂಶಗಳೇ ಅನೇಕಬಾರಿ ಚರಿತ್ರೆಕಾರರ ತರ್ಕದ ಗೋಡೆಗಳನ್ನೆ ಕೆಡವಲೂ ಬಳಕೆಯಾಗುತ್ತವೆ. ಈ ಕಾರಣದಿಂದಲೇ ಇಂತಹ ಅಂಶಗಳನ್ನು ಉದಾಸೀನವಾಗಿ ನೋಡುವ ಭಾವನೆ ಇದೆ. ಇಂತಹ ಅಂಶಗಳು ಕಾಲಾನುಕ್ರಮಣಿಕೆಯ ವಿರುದ್ಧದ ಮಾಪಕಗಳಾಗಿವೆ. ಕಾಲ ನಿರ್ಣಯದ ವಿರುದ್ಧದ ಈ ಗುಣಗಳು ಮೌಖಿಕ ಚರಿತ್ರೆಯ ಯಾವುದೇ ವಿದ್ವಾಂಸರಿಗೂ ಸವಾಲೆನಿಸಿವೆ.

ಸಾಹಿತ್ಯ ವಿಮರ್ಶೆಯ ಅಥವಾ ಕಾವ್ಯಮೀಮಾಂಸೆಯ ಪರಿಕಲ್ಪನೆಗಳು ಜಾನಪದ ವಿದ್ವಾಂಸರ ಅಧ್ಯಯನದಲ್ಲಿ ಕಾಣಿಸುವುದು ಸರ್ವೇಸಾಮಾನ್ಯ. ಇದರಿಂದ ನಿರೂಪಣೆಯಲ್ಲಿ ಆಕರ್ಷಣೆಯಿರುವಂತೆಯ ಹೆಚ್ಚು ವ್ಯಾಪ್ತಿಯಲ್ಲಿ ವಿಷಯವನ್ನು ತುಂಬಿಕೊಳ್ಳುತ್ತದೆ.  ಶುದ್ಧ ಚರಿತ್ರೆಕಾರರಿಗೆ ನಿರೂಪಣೆಗಿಂತ ಆ ವಸ್ತುಸ್ಥಿತಿಯ ಸತ್ಯಾಸತ್ಯತೆಯ ತರ್ಕಬದ್ಧ ಮರು ಜೋಡಣೆಯೆ ಮುಖ್ಯವಾಗುವುದರಿಂದ ನಿರೂಪಣೆಯು ಪೆಡಸಾಗುತ್ತದೆ. ಹಾಗೆಯೆ ಅಭಿವ್ಯಕ್ತಿಗೆ ನಿರ್ಧಿಷ್ಠ ವ್ಯಾಪ್ತಿ ನಿರ್ಧಾರವಾಗಿ ಬಿಡುತ್ತದೆ. ವಿಶೇಷವೆಂದರೆ ಎರಡೂ ಬಗೆಯ ಚರಿತ್ರೆಯ ಕಥನಗಳಿಗೆ ಅಲಕ್ಷಿತ ಜಗತ್ತಿನ ಸಾಮಾಜಿಕ ನ್ಯಾಯದ ಪ್ರಜ್ಞೆಯು ಗಾಡವಾಗಿದೆ. ಮೌಖಿಕ ಚರಿತ್ರೆಯ ಕಥನವು ಎರಡೂ ನೆಲೆಯ ಅಧ್ಯಯನ ವಿಧಾನಗಳನ್ನು ಮತ್ತಷ್ಟು ಖಚಿತವಾಗಿ ಪುನರ್ರಚಿಸಿದರೆ ಅಂತರಗಳು ತಂತಾನೆ ಕರಗಿಹೋಗುತ್ತವೆ. ಈನಿಟ್ಟಿನಲ್ಲಿ ಮೌಖಿಕ ಚರಿತ್ರೆಯ ಬೇರೆಬೇರೆ ಅವ್ಯಕ್ತ ಸಂಬಂಧಗಳು ವೈಧಾನಿಕತೆಯಲ್ಲಿ ಬೆರೆತು ಇತಿಹಾಸ ರಚನಾಕ್ರಮವೇ ಹೆಚ್ಚು ಸೃಜನಶೀಲವಾಗಬೇಕಾಗಿದೆ