ಮೌಖಿಕ ಇತಿಹಾಸದ ಪ್ರಜ್ಞೆ ವಿಶೇಷವಾಗಿ ಜಾನಪದ ಅಧ್ಯಯನಕಾರರ ಆಲೋಚನೆ. ನವೋದಯ ಕಾಲದ ಕವಿಗಳು ಮಾರ್ಗ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಸಂದರ್ಭದಲ್ಲಿ ಅವರಿಗೆ ದೇಶಿ ಪರಂಪರೆಯೆಂಬುದು ಅನಿವಾರ್ಯವಾಗಿ ಬೇಕಿತ್ತು. ಮಾರ್ಗ ಮತ್ತು ದೇಶಿ ಈ ಎರಡು ಆಲೋಚನೆಗಳ ಮೂಲಕ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅನುಭವ ಗಳ ಮೂಲಕ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಬೇಕಿತ್ತು. ಇದರ ಭಾಗವಾಗಿಯೆ ಚರಿತ್ರೆಯನ್ನು ಸಂರಚಿಸುವ ಜವಾಬ್ದಾರಿಯೂ ಆ ಕಾಲಕ್ಕೆ ಸಾಹಿತ್ಯದವರ ಪಾಲಿಗೆ ಬಂದಿತ್ತು. ಏಕಕಾಲಕ್ಕೆ ಅನೇಕ ಸಾಮಾಜಿಕ ವಿಷಯಗಳನ್ನೆಲ್ಲ ಮೈಮೇಲೆ ಹಾಕಿಕೊಂಡದ್ದರಿಂದ ಕೆಲವು ಒಳಿತಾಗಿರು ವಂತೆಯ ಅನೇಕ ಸಮಸ್ಯೆಗಳು ಸಮಾಜ ವಿಜ್ಞಾನದ ನಿರ್ವಚನ ಪ್ರಕ್ರಿಯೆಯಲ್ಲಿ ಉಂಟಾಗಿವೆ. ಆದಾಗ್ಯೂ ಕನ್ನಡ ಸಂಸ್ಕೃತಿಯ ನೆಲೆಯಿಂದಲೆ ಕನ್ನಡ ಚರಿತ್ರೆಯನ್ನು ವಿದ್ವಾಂಸರು ಕಟ್ಟಿದ್ದಾರೆ. ಅದರ ಹಿನ್ನೆಲೆಯಲ್ಲೆ ಜಾನಪದ ಅಧ್ಯಯನಕಾರರು ಮೌಖಿಕ ಪರಂಪರೆಯನ್ನು ಭಾವಿಸಿದ್ದಾರೆ. ಅಖಂಡವಾಗಿ ಮಾನವಿಕ ವಿಜ್ಞಾನಗಳನ್ನು ಬೆಸೆದುಕೊಂಡಂತೆ ಆರಂಭದ ಸಂಶೋಧಕರು ಜ್ಞಾನಶಾಖೆಯನ್ನು ಬೆಳೆಸಿದ್ದಾರೆ. ಹೀಗಾಗಿಯೆ ಕನ್ನಡ ಅಧ್ಯಯನ ವಿಶೇಷವಾಗಿ ಬೆಳೆದಿದ್ದು ಅದರೊಳಗೆ ಅನೇಕ ಮಾನವಿಕ ವಿಜ್ಞಾನಗಳೆಲ್ಲ ಲೀನವಾಗಿವೆ. ಇದರಿಂದ ಪ್ರತ್ಯೇಕವಾಗಿ ಸಮಾಜ ವಿಜ್ಞಾನಗಳು ತಮ್ಮ ನೆಲೆಯ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಅಂತೆಯೆ ಹೊಸ ಪೀಳಿಗೆಯ ಸಮಾಜ ವಿಜ್ಞಾನಿಗಳು ಕನ್ನಡ ಅಧ್ಯಯನದ ಜೊತೆ ಬೆರೆಯಲು ಬೇಕಾದ ಪರಿಕಲ್ಪನೆಗಳೆ ಅವರಿಗೆ ಕಾಣಲಿಲ್ಲ. ಈಗಲೂ ಈ ಅಂತರ ಇರುವ ಕಾರಣದಿಂದಲೆ ಸಮಾಜ ವಿಜ್ಞಾನಗಳ ಅಧ್ಯಯನದ ವಿಧಾನಗಳಿಗೂ ಆಲೋಚನೆಯ ಕ್ರಮಗಳಿಗೂ ಅನುಸಂಧಾನದ ನೆಲೆಗಳಿಗೂ ಅನ್ಯತೆಯ ಸ್ವಭಾವ ಕಾಣುವುದು.

ಇಂತಹ ಸ್ಥಿತಿಯಲ್ಲೆ ಮೌಖಿಕ ಇತಿಹಾಸದ ಆಲೋಚನೆಯೂ ಬೆಳೆದು ಬಂದಿರುವುದು. ವಿಶೇಷವಾಗಿ ಮೌಖಿಕ ಚರಿತ್ರೆಯು ಚರಿತ್ರೆಕಾರರಿಗೆ ತುಂಬ ಫಲವತ್ತಾದ ವಿಸ್ತಾರ ಮುಖಜ ಭೂಮಿಯಾಗಬೇಕಿತ್ತು. ಆದರೆ ಶುದ್ಧ ಚರಿತ್ರೆಕಾರರೆಂದು ಗುರುತಿಸಿಕೊಂಡ ಅವರು ಮೌಖಿಕ ಪರಂಪರೆಯಿಂದ ಆಕರ ಪಡೆದು ತಮ್ಮ ಧೋರಣೆಯ ಅಥವಾ ವಿಧಾನದ ಚರಿತ್ರೆಯನ್ನು ನಿರ್ವಚಿಸತೊಡಗಿದರು. ಇದು ಅಂತಹ ಲೋಪವೇನೂ ಅಲ್ಲ. ಸಾಕ್ಷ್ಯವಿಲ್ಲದೆ ಚರಿತ್ರೆ ಇಲ್ಲ ಎಂಬ ಮಾತೇನೊ ಸರಿಯೆ. ಆಕರವಷ್ಟೇ ಚರಿತ್ರೆ ಆಗಲಾರದು. ಮುಖ್ಯ ಏನೆಂದರೆ, ಮೌಖಿಕ ಪರಂಪರೆ ಇಡಿಯಾಗಿ ಒಂದು ಜೀವನ ವಿಧಾನ. ಅದೊಂದು ಸಾಂಸ್ಕೃತಿಕ ಪ್ರಜ್ಞೆ. ಚಹರೆಯ ಬೃಹತ್ ಒಕ್ಕೂಟ ವ್ಯವಸ್ಥೆ. ಅದರಿಂದ ಎಕ್ಕಿ ತೆಗೆದ ಒಂದೇ ಒಂದು ವಿವರ ತಂತಾನೆ ಅಖಂಡವಲ್ಲ. ಸಮಷ್ಟಿ ಸಾಕ್ಷ್ಯ ಅಲ್ಲ. ವ್ಯಕ್ತಿಗತ ಸಾಕ್ಷ್ಯವನ್ನು ಒಪ್ಪಲಾರದ ಮೌಖಿಕ ಪರಂಪರೆಯು ತನ್ನನ್ನು ತಾನು ಅಖಂಡವಾಗಿ ಅಭಿವ್ಯಕ್ತಿಸಲು ಮುಂದಾಗುತ್ತದೆ. ಆದ್ದರಿಂದಲೆ ಒಂದು ಐತಿಹ್ಯದ ಸುತ್ತಲಿನ ಜಾತ್ರೆ, ಪರಿಸೆ, ಹಬ್ಬ, ಆಚರಣೆ, ಸಾಹಿತ್ಯ, ವರ್ತಮಾನದ ಚಹರೆಯ ರಾಜಕಾರಣ ಇವೆಲ್ಲ ಒಂದರೊಳಗೊಂದು ಬೆರೆತಿರುತ್ತವೆ. ಅಂದರೆ ಸಾಕ್ಷ್ಯದ ಸರಪಳಿಯೆ ಇಲ್ಲಿ ಒಂದರೊಳಗೊಂದು ಬೆರೆತು ಸಮಾಜದ ಬದುಕಿನ ಜೊತೆ ಬೆಸುಗೆ ಆಗಿರುತ್ತದೆ. ಈ ಬಂಧನವನ್ನು ಬಿಡಿಸಿದರೆ ಅರ್ಥವನ್ನು ಒಂಟಿಮಾಡಿದಂತಾಗುತ್ತದೆ.

ಈ ಮೇಲಿನ ವಿವರವನ್ನು ಹೇಳಿದ್ದೇಕೆಂದರೆ ಮೌಖಿಕ ಪರಂಪರೆಯಲ್ಲಿ ವಿವರಗಳನ್ನು ತಮಗೆ ಬೇಕಾದಂತೆ ಎಕ್ಕಿ ಜೋಡಿಸಿಕೊಂಡರೆ ನಮ್ಮ ತೀರ್ಮಾನಗಳಿಗೆ ಒಂದು ಅರ್ಥ ಸಿಕ್ಕುವುದೇ ವಿನಃ ಮೌಖಿಕ ಪರಂಪರೆಯ ಅಖಂಡ ಅರ್ಥ ಸಿಗಲಾರದು ಎಂಬುದನ್ನು ನೆನಪಿಸಲು. ಆದ್ದರಿಂದಲೆ ಮೌಖಿಕ ಪರಂಪರೆಯ ಆಕರವನ್ನು ಅನುಸರಿಸುವುದಕ್ಕಿಂತ ಇಡಿಯಾಗಿ ಮೌಖಿಕ ಪರಂಪರೆಯನ್ನೆ ಮೌಖಿಕ ಇತಿಹಾಸ ಎಂದು ವಿಸ್ತರಿಸಿಕೊಳ್ಳಬಹುದು. ಚರಿತ್ರೆಕಾರರು ಯಾವತ್ತೂ ಆಕರವನ್ನೆ ನಂಬಬೇಕಾದ ಅನಿವಾರ್ಯತೆ ಏನಿದೆ? ಆಕರವೇ ಪ್ರಧಾನ ಎನ್ನುವುದು ವಶಾಹತುಶಾಹಿಯ ಮನೋಧರ್ಮ. ನಮ್ಮ ಜನಪದ ಸಮಾಜಗಳು ಸಾಕ್ಷ್ಯಾಧಾರಗಳನ್ನು ಹೇಗೆ ಭಾವಿಸಿವೆ ಎಂದು ಚರಿತ್ರೆಕಾರರಿಗೆ ತಿಳಿದಿಲ್ಲವೆ? ಸಾಕ್ಷ್ಯವು ಎಷ್ಟೋ ಬಾರಿ ಒಂದು ನೆಪವಾಗಿ ಕೆಲಸಮಾಡಿರುತ್ತದೆ. ಅನೇಕ ವೇಳೆ ಸಾಕ್ಷ್ಯವು ಒಂದು ಅಧಿಕಾರವಾಗಿ ನಿರ್ದೇಶನ ನೀಡಿರುತ್ತದೆ. ಅಲ್ಲದೆ ಸಾಕ್ಷ್ಯವು ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಸಮನಾಗಿ ಬಳಕೆ ಆಗುವ ಮಾನವರ ಒಂದು ಉಪಕರಣ. ನಿಮ್ಮ ಮಾತಿಗೆ ಏನು ಸಾಕ್ಷಿ? ಇದಕ್ಕೆ ನಿಮ್ಮಲ್ಲಿ ಯಾವ ಆಧಾರವಿದೆ? ಇದು ನಿಮ್ಮದು ಎಂದು ಸಾಧಿಸಲು ನಿಮ್ಮ ಬಳಿ ಯಾವ ದಾಖಲೆ ಗಳಿವೆ? ಎಂಬ ಅನೇಕ ಬಗೆಯ ಪ್ರಶ್ನೆಗಳು ಯಾವ ಮೂಲದಿಂದ ಹುಟ್ಟುತ್ತವೆ? ಅಧಿಕಾರ ದಿಂದಲೇ ತಾನೆ ಅಂತಹ ಪ್ರಶ್ನೆಗಳು ಬರುವುದು? ಸರಳವಾದ ಮಾತುಗಳಿಂದ ಚರಿತ್ರೆಗೆ ಬೇಕಾದ ಆಧಾರಗಳನ್ನು ನಿರಾಕರಿಸುತ್ತಿಲ್ಲ. ಈ ಸರಳ ಪ್ರಶ್ನೆಗಳೆ ವ್ಯಕ್ತಿಯ ಅಸ್ತಿತ್ವವನ್ನು ತೀರ್ಮಾನಿಸಿ ಬಿಡುತ್ತವೆ. ಈ ಪುಟ್ಟ ಮಾದರಿಯೆ ರಾಷ್ಟ್ರೀಯ ವಿದ್ಯಮಾನಗಳಿಗೂ ಅನ್ವಯಿಸುತ್ತದೆ. ಇನ್ನು ಜನಪದರ ಮೌಖಿಕ ಪರಂಪರೆಗೂ ಈ ಮಾತುಗಳ ಹೊಂದಿಸಿ ಅರ್ಥ ಹುಡುಕಿದರೆ ಸಾಕ್ಷ್ಯಾಧಾರಗಳ ರಾಜಕಾರಣ ಅರ್ಥವಾಗುತ್ತದೆ.

ದೇಸಿ ಧೋರಣೆಯ ಮೌಖಿಕ ಚರಿತ್ರೆ

ಶುದ್ಧ ಚರಿತ್ರೆಕಾರರು ತಮ್ಮ ಅಧ್ಯಯನದ ವಸ್ತು, ವಿಷಯ, ವ್ಯಾಪ್ತಿ ಇದಿಷ್ಟು ಎಂದು ನಕ್ಷೆ ಹಾಕಿಕೊಂಡಿದ್ದರಿಂದ ಅವರು ಚರಿತ್ರೆಯ ಅತ್ಯಂತ ವಿಶಾಲವಾದ ನೆಲೆಗಳನ್ನೆಲ್ಲ ಸೀಮಿತಮಾಡಿಕೊಂಡಿದ್ದಾರೆ. ಈಗಂತು ಒಂದೊಂದು ಕಾಲಕ್ಕೆ, ರಾಜ ಮನೆತನಕ್ಕೆ ತಕ್ಕಂತೆ ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಇತಿಹಾಸಕಾರರು ಎಂಬ ಪ್ರಣ ಶಾಖೆಗಳ ಅಧ್ಯಯನಗಳು ಬೆಳೆಯುತ್ತಿವೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಚರಿತ್ರೆಕಾರರು ಅಲಕ್ಷಿತ ನೆಲೆಯ ಚರಿತ್ರೆಯಲ್ಲಿ ಜಾತಿ, ಲಿಂಗ, ವರ್ಗ ಸಂಬಂಧಗಳ ಹೊಸ ಕಥನವನ್ನು ನಿರೂಪಿಸಲು ತೊಡಗುತ್ತಲೆ ಚರಿತ್ರೆಯ ಹೊಸ ಸಿದ್ದಾಂತ ಹಾಗು ನಿರೂಪಣೆಗಳನ್ನು ಕಟ್ಟುತ್ತಿದ್ದಾರೆ. ಇಂತವರ ನಡುವೆ ಸ್ಥಳೀಯ ಇತಿಹಾಸ ಈಗಾಗಲೇ ಹೆಚ್ಚು ಗಮನಕ್ಕೆ ಬಂದ ಅಧ್ಯಯನ ವಾಗಿದೆ. ಅದರ ಜೊತೆಯಲ್ಲೆ ಮೌಖಿಕ ಇತಿಹಾಸ ಎಂಬ ಹೊಸ ಶಾಖೆಯು ವ್ಯಾಪಕವಾಗಿ ಬೆಳೆಯುತ್ತಿದೆ. ಚರಿತ್ರೆಕಾರರು ಹೆಚ್ಚಿನ ಅವಕಾಶವನ್ನು ಮೌಖಿಕ ಪರಂಪರೆಗೆ ಕೊಡಲಾರಂಭಿಸಿ ದ್ದಾರೆ. ಕರ್ನಾಟಕದ ನವಚಾರಿತ್ರಿಕ ಕಥನ ಬೌದ್ದಿಕವಾಗಿಯೂ ತುಂಬ ಸಮರ್ಥವಾಗಿ ತೆರೆದುಕೊಳ್ಳುತ್ತಿದೆ.

ವಿಶೇಷ ಎಂದರೆ ಅಲಕ್ಷಿತ ಚರಿತ್ರೆಯು ಮೌಖಿಕ ಚರಿತ್ರೆ ಎಂಬಂತೆ ಧೋರಣೆಯಲ್ಲಿ ಪಲ್ಲಟವಾಗುತ್ತಿದೆ. ಈ ಮೌಖಿಕ ಚರಿತ್ರೆಯಲ್ಲಿ ಏಕಕಾಲಕ್ಕೆ ದಲಿತರ ಚರಿತ್ರೆ, ಮಹಿಳೆಯರ ಚರಿತ್ರೆ, ಆದಿವಾಸಿ ಅಲೆಮಾರಿಗಳ ಚರಿತ್ರೆ, ಸ್ಥಳೀಯ ಚರಿತ್ರೆ, ಸಮುದಾಯಗಳ ಸಾಂಸ್ಕೃತಿಕ ಚರಿತ್ರೆಗಳೆಲ್ಲವೂ ಅಡಕವಾಗಿವೆ. ಇಡಿಯಾಗಿ ಗಮನಿಸಿದರೆ ಮೌಖಿಕ ಚರಿತ್ರೆಯ ಮೂಲಕ ಅಖಂಡವಾಗಿ ಪ್ರಾಚೀನ ಕಾಲದಿಂದ ಆರಂಭಿಸಿ ಹತ್ತೊಂಬತ್ತನೆ ಶತಮಾನದವರೆಗಿನ ಕರ್ನಾಟಕದ ಸಂಸ್ಕೃತಿ ಇತಿಹಾಸವನ್ನು ನಿರೂಪಿಸಲು ಸಾಧ್ಯ. ಚರಿತ್ರೆಯ  ನಿರೂಪಣೆಯಲ್ಲಿ ನಾವು ವಸಾಹತುಶಾಹಿ ಮಾದರಿಯನ್ನು ಅನುಸರಿಸಿದ್ದರಿಂದಲೆ ನಮ್ಮ ಚರಿತ್ರೆಯನ್ನು ನಾವೇ ಈಗ ಬರೆದುಕೊಳ್ಳಲು ಆಗದಂತಹ ಗೊಂದಲ ಉಂಟಾಗಿರುವುದು. ಚರಿತ್ರೆಯ ಕಥನ ಆರಂಭದಲ್ಲಿ ಬೆಳೆದದ್ದು ಯಾವುದೇ ಪ್ರಭುನಿಷ್ಠ ಆಧಾರಗಳಿಂದಲ್ಲ. ಜನತೆಯೆ ಕಟ್ಟಿದ ಪದಗಳಿಂದ ಕಥನಗಳಿಂದ ಚರಿತ್ರೆಯ ಶಾಖೆ ಉದ್ಘಾಟನೆ ಆಗಿದ್ದು. ಅಂದರೆ ಚರಿತ್ರೆಯ ತಳಪಾಯವೇ ಸಮಾಜದ ಸಮಷ್ಠಿ ಪ್ರಜ್ಞೆಯ ಮೌಖಿಕ ಕಥನವಾಗಿದೆ. ಇಂತಹ ಜನ ಕಥನಗಳು ತಂತಾನೆಯೇ ಚರಿತ್ರೆ ಹಾಗೆಯೆ ತಮ್ಮಷ್ಟಕ್ಕೆ ತಾವೇ ಆಕರ. ಅಂತೆಯೇ ತಮ್ಮಿಂದ ತಾವೇ ಸಾಕ್ಷ್ಯ. ಇವೆಲ್ಲ ಸಾವಯವ ರಚನೆಯಲ್ಲಿ ಬೆಸೆದು ಹೋಗಿರುವುದರಿಂದಲೆ ಮೌಖಿಕ ಪರಂಪರೆಗೆ ಕಾಲದ ಸೀಮಿತ ಗಡಿಗಳನ್ನು, ಮಾನದಂಡಗಳನ್ನು ಮೀರಲು ಸಾಧ್ಯವಾಗಿರುವುದು.

ಈ ಬಗೆಯ ಆಶಯಗಳಿಂದಲೆ ಕರ್ನಾಟಕದಲ್ಲಿ ಮೌಖಿಕ ಚರಿತ್ರೆಯ ದೇಸೀಯ ನಿರೂಪಣೆಗಳು ಆರಂಭವಾಗಿರುವುದು. ಕರ್ನಾಟಕದಲ್ಲಿ ಎಪ್ಪತ್ತರ ದಶಕದಿಂದಲೇ ಮೌಖಿಕ ಚರಿತ್ರೆಯ ಸಾಧ್ಯತೆಯ ಆಶಯಗಳು ವ್ಯಕ್ತವಾಗಿವೆ. ಕನ್ನಡ ಪ್ರಾಚೀನ ಸಾಹಿತ್ಯ ಚರಿತ್ರೆಯ ರಚನೆಯ ಕಾರ್ಯವನ್ನು ಮೈಸೂರು ವಿಶ್ವವಿದ್ಯಾಲಯವು ಕೈಗೆತ್ತಿಕೊಂಡದ್ದರ ಹಿನ್ನೆಲೆಯಲ್ಲೆ ಜನಪದ ಸಾಹಿತ್ಯದ ಚರಿತ್ರೆಯನ್ನೂ ಕಂಡುಕೊಳ್ಳುವ ಯತ್ನವನ್ನು ಪ್ರೊ. ಜಿ.ಶಂ. ಪರಮಶಿವಯ್ಯ ಮಾಡಿದರು. ಅನೇಕ ವಿದ್ವಾಂಸರು ಜಾನಪದಕ್ಕೆ ಕಾಲದ ಹಂಗಿಲ್ಲ ಎಂಬುದನ್ನು ಮನಗಂಡು ಸಾರಾಸಗಟಾಗಿ ಜಾನಪದವು ಪ್ರಾಚೀನ ಪೂರ್ವಕಾಲದ ಅಭಿವ್ಯಕ್ತಿ ಎಂದು ತೀರ್ಮಾನಿಸಿದರು. ಆದರೆ ಆ ಮೂಲದಿಂದ ಹೇಗೆ ಮಾರ್ಗ ಸಾಹಿತ್ಯಕ್ಕೆ ಬೇರಿನ ಸಂಬಂಧ ಇದೆ ಎಂದು ಸಾಧಿಸುವ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯ ಜೊತೆಗೆ ದೇಸೀ ಸಾಹಿತ್ಯದ ಸಂಬಂಧ ಮಾಡಿಕೊಂಡರು. ಇದು ಚರಿತ್ರೆಯ ಶಿಸ್ತಿನ ಅನುಸಂಧಾನವಾಗಿರಲಿಲ್ಲ. ಮೌಖಿಕ ಚರಿತ್ರೆಯ ನಿರ್ವಚನವೂ ಅವರ ಉದ್ದೇಶವಾಗಿರಲಿಲ್ಲ. ಪರಂಪರೆಯ ಮರುಜೋಡಣೆ ಅವರಿಗೆ ತತ್ಕಾಲೀನ ಅಗತ್ಯವಾಗಿ ಕಂಡಿತ್ತು. ಆದರೆ ಜೀ.ಶಂ.ಪರಮಶಿವಯ್ಯ ಅವರು ದೇಶೀ ಕಾವ್ಯ ಪರಂಪರೆಯು ಜನಪದ ಸಂಸ್ಕೃತಿಯ ಬೇರಿನದು ಎಂಬುದನ್ನು ಪ್ರತಿಪಾದಿಸುವ ಮೂಲಕ ಎಲ್ಲ ಜನಸಮುದಾಯಗಳು ಸಾಂಸ್ಕೃತಿಕ ಕಾವ್ಯಗಳ ಮೂಲಕ ಕುಲಮೂಲ ಚರಿತ್ರೆಯನ್ನು ಹೊಂದಿದ್ದಾರೆ ಎಂಬ ಸ್ಥೂಲವಾದ ಒಂದು ಅಭಿಪ್ರಾಯವನ್ನು ಸ್ಥಾಪಿಸಿದರು. ಇದು ಮುಂದಿನ ತಲೆಮಾರಿನ ಎಲ್ಲ ವಿದ್ವಾಂಸರಿಗೂ ಅಗತ್ಯವಾದ ಒಂದು ಅನುಸಂಧಾನದ ತತ್ವವಾಗಿ ಬೌದ್ದಿಕ ಪರಿಕಲ್ಪನೆಯಾಗಿ ಒದಗಿ ಬಂತು. ಆ ಮಟ್ಟಿಗೆ ಜೀ.ಶಂ.ಪರಮಶಿವಯ್ಯ ಅವರನ್ನು ನಾವು ಕನ್ನಡ ಜನಪದ ಸಾಹಿತ್ಯ ಪ್ರಕಾರಗಳ ಮೌಖಿಕ ಚರಿತ್ರೆಯ ಮೊದಲ ನಿರ್ವಚನಕಾರ ಎಂದು ಒಪ್ಪಬಹುದು.

ಆದರೆ ಮಧ್ಯಕಾಲೀನ ಸಮಾಜದ ಸಂಬಂಧಗಳ ಜೊತೆಗೆ ಆಯಾ ಕಾಲಘಟ್ಟಗಳ ಸಮುದಾಯಗಳು ಹೇಗೆ ತಮ್ಮ ಮೌಖಿಕ ಪರಂಪರೆಯನ್ನು ವಿಸ್ತರಿಸಿಕೊಂಡವು? ಗ್ರಾಮ ನಾಗರೀಕತೆ ಯಾವ ಸ್ವರೂಪದ ಜಾನಪದವನ್ನೂ ರೂಪಿಸಿಕೊಂಡಿತು? ಎಂಬ ಚಾರಿತ್ರಿಕ ಹುಡುಕಾಟಕ್ಕೆ ಜೀ.ಶಂ. ಪರಮಶಿವಯ್ಯನವರಾಗಲಿ ಆ ಕಾಲದ ಇತರೆ ಸಂಶೋಧಕರಾಗಲಿ ಮುಂದಾಗಲಿಲ್ಲ. ಮುಖ್ಯವಾಗಿ ಒಂದೊಂದು ಜಾತಿಗೂ ತನಗೇ ವಿಶಿಷ್ಟವಾಗುವ ಜಾನಪದ ಇದೆ ಎಂಬುದನ್ನು ಆ ಕಾಲದ ಎಲ್ಲ ಅಧ್ಯಯನಗಳು ಬಲವಾಗಿ ಸಮರ್ಥಿಸಿವೆ. ಇದು ಸ್ಥಳೀಯ ಐತಿಹ್ಯ ಪುರಾಣಗಳ ವಿಶೇಷ ಅಧ್ಯಯನ ಉಂಟಾಯಿತು. ಪರೋಕ್ಷವಾಗಿ ಇವೆಲ್ಲ ಮೌಖಿಕ ಚರಿತ್ರೆಯ ಸ್ವರೂಪವನ್ನು ರೂಪಿಸುತ್ತಿದ್ದವು. ಆ ವೇಳೆಗಾಗಲೆ ಅಂದರೆ ಎಂಬತ್ತರ ದಶಕದ ಹೊತ್ತಿಗೆ ಅಮೇರಿಕನ್ ಜಾನಪದ ವಿದ್ವಾಂಸರು ಭಾರತದ ಅದರಲ್ಲೂ ಕರ್ನಾಟಕದ ಜಾನಪದ ಸಂಶೋದನೆಗಳನ್ನು ಗಮನಿಸಿ ಮೌಖಿಕ ಚರಿತ್ರೆಯ ಪ್ರಸ್ತಾಪ ಮಾಡಿದ ಕೂಡಲೆ ಅಂತಹ ಸಾಧ್ಯತೆಯನ್ನು ಮತ್ತೆ ಜೀ.ಶಂ. ಪರಮಶಿವಯ್ಯನವರೇ ಎತ್ತಬೇಕಾಯಿತು. ಇದು ಎರಡನೆ ತಲೆಮಾರಿನ ನವ ವಿದ್ವಾಂಸರಲ್ಲಿ ವಿಶೇಷವಾಗಿ ಪ್ರತಿಧ್ವನಿಸಿತು.

ದೇಸೀಯ ಚರಿತ್ರೆಗೆ ಪಶ್ಚಿಮದ ಮಾದರಿ

ಅಮೇರಿಕಾದ ರಿಚರ್ಡ್ ಎಂ. ಡಾರ್ಸನ್ ಅವರ ಮೌಖಿಕ ಪರಂಪರೆಯ ನಿರೂಪಣೆಗಳು ಮೌಖಿಕ ಪರಂಪರೆಯನ್ನು ಚರಿತ್ರೆಯ ನಿಟ್ಟಿನಿಂದ ಆಲೋಚಿಸುವಂತೆ ಮಾಡಿತು. ಎ.ಕೆ. ರಾಮಾನುಜನ್ ಜನಪದ ಕತೆಗಳ ಮೂಲಕ ಭಾರತದ ಗ್ರಾಮ ಸಮಾಜದ ಸಂಬಂಧಗಳನ್ನು ದಾಖಲಿಸುತ್ತಿದ್ದಂತೆ ಅದು ಭಾರತೀಯ ಮನಸ್ಸಿನ ಒಳಗಿರುವ ಚರಿತ್ರೆ ಎಂಬ ತೀರ್ಮಾನ ತಂತಾನೆ ತೇಲಿ ಬಂತು. ಸಾವಿರ ರಾಮಾಯಣಗಳ ಭಾರತದ ಕಥನ ಮೌಖಿಕ ಪರಂಪರೆಯಲ್ಲಿ ಹೇಗೆ ಸಾಗಿಬಂತು ಎಂಬ ಸೃಜನಶೀಲತೆಯ ಪ್ರಶ್ನೆಯನ್ನು ಎತ್ತುತ್ತಲೇ ಜನಪದರ ರಾಮಾಯಣ ಮಹಾಭಾರತಗಳು ಕಾವ್ಯದ ಮೂಲಕವೇ ಪ್ರತಿಷ್ಟಿತವಾದ ಚರಿತ್ರೆಗಿಂತ ಬಿನ್ನವಾದ ಚರಿತ್ರೆಯನ್ನು ಧ್ವನಿಸುತ್ತಿವೆ ಎಂಬ ಸ್ಥೂಲ ನಿಲುವನ್ನು ರಾಮಾನುಜನ್ ಪಶ್ಚಿಮದಲ್ಲಿ ಸ್ಥಾಪಿಸಿದರು. ಹೀಗೆ ಒಂದು ಕಡೆ ಅಪ್ಪಟವಾಗಿ ದೇಶೀ ಕಾವ್ಯ ಮೀಮಾಂಶೆಯ ಧಾಟಿಯಲ್ಲಿ ಜೀ.ಶಂ.ಪರಮಶಿವಯ್ಯ ಅವರು ಮೌಖಿಕ ಸಾಹಿತ್ಯ ಚರಿತ್ರೆಯ ಸಾಧ್ಯತೆಯನ್ನು ಮಂಡಿಸುತ್ತಿದ್ದರೆ, ಎ.ಕೆ.ರಾಮಾನುಜನ್ ದಕ್ಷಿಣ ಭಾರತದ ಮೌಖಿಕ ಪರಂಪರೆಗಳ ಸಂಸ್ಕೃತಿ ಚರಿತ್ರೆಯನ್ನು ದ್ರಾವಿಡ ನೆಲೆಯಿಂದ ತಾತ್ವೀಕರಿಸಲು ಯತ್ನಿಸುತ್ತಿದ್ದರು. ಇದರ ಆಧಾರದಲ್ಲೇ ಅಲೆನ್‌ಡಂಡೆಸ್ ಮತ್ತು ಸ್ಟುವರ್ಟ್‌ಬ್ಲಾಕ್ ಬರ್ನ್ ಎಂಬ ವಿದ್ವಾಂಸರು ‘ಅನದರ್ ಹಾರ‍್ಮನಿ’ ಎಂಬ ಗ್ರಂಥವನ್ನು ಸಂಪಾದಿಸಿದರು. ಆ ಮೂಲಕ ಮತ್ತೊಂದು ಭಾರತದ ದನಿಯನ್ನು ನಿರೂಪಿಸಿದರು. ಇವೆಲ್ಲವೂ ಎರಡನೆ ತಲೆಮಾರಿನ ಕನ್ನಡದ ಜಾನಪದ ವಿದ್ವಾಂಸರಿಗೆ ವಿಶೇಷ ಒತ್ತಾಸೆ ಒದಗಿಸಿದವು. ಇದೇ ವೇಳೆಗೆ ಪೀಟರ್ ಜೆ.ಕ್ಲಾಸ್ ಅವರು ತುಳುನಾಡಿನ ಸಾಂಸ್ಕೃತಿಕ ಚರಿತ್ರೆಗೆ ಬೇಕಾದ ಲಿಂಗಸಂಬಂಧ, ಬಂಧುತ್ವ, ಆಚರಣೆ, ಕಾವ್ಯ ಪರಂಪರೆ ಇತ್ಯಾದಿಗಳನ್ನು ಅನುಲಕ್ಷಿಸಿ ಮೌಖಿಕ ಚರಿತ್ರೆಯ ಇನ್ನೊಂದು ಆಯಾಮವನ್ನು ವ್ಯಕ್ತಪಡಿಸಿದರು. ಬ್ರೆಂಡಬೆಕ್ ಎಂಬ ವಿದ್ವಾಂಸೆ ಇದೇ ಹೊತ್ತಿಗೆ ಜನಪದ ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಪಶುಪಾಲಕ ಸಮುದಾಯಗಳ ಚರಿತ್ರೆಯ ಜಾಡನ್ನು ಹುಡುಕಿದರು. ಇವರ ಜೊತೆಯಾಗಿಯೆ ಬಂದ ಲೋರಿಹಾಂಕೊ ಅವರು ತುಳು ನಾಡನ್ನೆ ತಮ್ಮ ಪ್ರಧಾನ ಅಧ್ಯಯನ ನೆಲೆಯಾಗಿಸಿಕೊಂಡು ಸಿರಿ ಮಹಾಕಾವ್ಯದ ಮೂಲಕ ತುಳುನಾಡಿನ ಚರಿತ್ರೆಯನ್ನು ಸಾಂಸ್ಕೃತಿಕ ಅನನ್ಯತೆಯಿಂದ ನಿರ್ವಚಿಸಿದರು. ಜರ್ಮನಿಯಿಂದ ಬಂದ ನವ ಓರಿಯಂಟಲ್ ಸಂಶೋಧಕಿಯಾದ ಶ್ರೀಮತಿ ಬ್ರೂಕ್ನರ್ ಅವರು ಕೂಡ ತುಳುನಾಡನ್ನೆ ಮುಖ್ಯವಾಗಿರಿಸಿಕೊಂಡು ಸಂಸ್ಕೃತಿ ಚರಿತ್ರೆಯ ಸಾಧ್ಯತೆಯನ್ನು ಹುಡುಕಿದರು.

ಅಂದರೆ; ಎಂಬತ್ತರ ದಶಕದಲ್ಲಿ ಕರ್ನಾಟಕದ ಬೇರೆಬೇರೆ ಭಾಗಗಳ ಸಮುದಾಯಗಳ ಮೌಖಿಕ ಪರಂಪರೆಯನ್ನು ಶೋಧಿಸುವ ಲೆಕ್ಕದಲ್ಲೇ ಮೌಖಿಕ ಚರಿತ್ರೆಯನ್ನು ಸಂರಚಿಸುವ ಮಹತ್ವದ ಯತ್ನವೊಂದು ಘಟಿಸಿಬಿಟ್ಟಿತ್ತು. ಉದ್ದೇಶಪೂರ್ವಕವಲ್ಲದ ಈ ಅಧ್ಯಯನವು ಅನೇಕ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿತ್ತು. ಇದರ ಫಲವಾಗಿ ವಿಶೇಷವಾಗಿ ತುಳುನಾಡ  ಮೌಖಿಕ ಚರಿತ್ರೆಯ ಕಥನಕ್ಕೆ ಪ್ರೊ.ಬಿ.ಎ.ವಿವೇಕ ರೈ, ಪ್ರೊ.ಪುರುಷೋತ್ತಮ ಬಿಳಿಮಲೆ, ಪ್ರೊ.ವಾಮನ ನಂದಾವರ, ಪ್ರೊ.ಚಿನ್ನಪ್ಪಗೌಡ, ಪ್ರೊ.ಎ.ವಿ.ನಾವಡ, ಡಾ.ಶಿವರಾಂ ಶೆಟ್ಟಿ ಮುಂತಾದವರು ಮುಂದಾದರು. ಉಡುಪಿಯಲ್ಲಿ ಪ್ರಾದೇಶಿಕ ರಂಗಕಲೆಗಳ ಅಧ್ಯಯನದ ಹೆಸರಲ್ಲೇ ಮೌಖಿಕ ಆಕರಗಳನ್ನು ದಾಖಲಿಸುವ ಮಹತ್ವದ ಯೋಜನೆಗಳು ಪ್ರೊ. ಕು.ಸಿ. ಹರಿದಾಸಭಟ್ಟರ ಮುಖೇನ ಅರ್ಥಪೂರ್ಣವಾಗಿ ನಡೆದವು. ಇದರಿಂದಾಗಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಪುಟಗಳಲ್ಲಿ ಎಲ್ಲೊ ಒಂದಿಷ್ಟು ಪುಟಗಳ ಕೃಪಾವಕಾಶ ಪಡುವ ಸೌಲಭ್ಯದಿಂದ ಹೊರತಾಗಿ ತನ್ನದೇ ಸ್ವ ಅನನ್ಯತೆಯ ಚರಿತ್ರೆಯನ್ನು ಸಾಮ್ರಾಜ್ಯಶಾಹಿ ಇತಿಹಾಸಗಳ ಹಂಗಿನ ಆಚೆಗೆ ಹೋಗಿ ತುಳುನಾಡು ರಚಿಸಿಕೊಳ್ಳುವಂತಾಯಿತು. ಇದು ಸಾಧಾರಣಾವಾದ ಪಲ್ಲಟವಲ್ಲ. ಕರ್ನಾಟಕದ ಎಲ್ಲ ಅಂಚಿನ ಸಮುದಾಯಗಳು ಕೂಡ ಹೀಗೆ ಮೌಖಿಕ ಪರಂಪರೆಯ ಮೂಲಕವೇ ಮೌಖಿಕ ಚರಿತ್ರೆಯನ್ನು ನಿರ್ವಚಿಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಮಹತ್ವದ ಸೂಚನೆ. ಹೀಗೆಯೆ ಕೊಂಕಣಿ, ಕೊಡವ ಸಮಾಜಗಳು ಕೂಡ ಮೌಖಿಕ ಚರಿತ್ರೆಯನ್ನು ಸಂರಚಿಸಿಕೊಳ್ಳಲು ಸಾಧ್ಯವಾಗಿರುವುದು. ಮೌಖಿಕ ಚರಿತ್ರೆಯ ಇಂತಹ ಅವಕಾಶವನ್ನು ಭಿನ್ನವಾಗಿ ಭಾವಿಸಬಹುದು.

ಸಾಮ್ರಾಜ್ಯಗಳ ಕಿಕ್ಕಿರಿದ ಚರಿತ್ರೆಯಲ್ಲಿ ಅಂಚಿನವರ ಚಹರೆಗೆ ಮಾನ್ಯತೆ ಇರುವುದಿಲ್ಲ. ಪ್ರಭುನಿಷ್ಠ ಸಾಕ್ಷ್ಯಗಳು ಸಾಮಾನ್ಯರ ದನಿಯನ್ನೆಲ್ಲ ನುಂಗಿಬಿಟ್ಟಿರುತ್ತವೆ. ಆಂಟೊನಿಯೊ ಗ್ರಾಂಸಿ ಎಂಬ ಮಾರ್ಕ್ಸ್‌ವಾದಿ ಚಿಂತಕ ತನ್ನ ‘ಯಜಮಾನ್ಯ’ ಪರಿಕಲ್ಪನೆಯಿಂದ ಇದನ್ನು ತುಂಬಾ ಮಾರ್ಮಿಕವಾಗಿ ವ್ಯಾಖ್ಯಾನಿಸಿದ್ದಾರೆ. ಅಮೇರಿಕದ ವಿದ್ವಾಂಸರಿಗೆ ಇಪ್ಪತ್ತನೆ ಶತಮಾನದ ಆದಿ ಭಾಗದಲ್ಲಿಯೆ ಜನಇತಿಹಾಸದ ಒಲವಿತ್ತು. ಅಲ್ಲಿ ಬೃಹತ್ ಸಾಮ್ರಾಜ್ಯ ಗಳು ಬೆಳೆದುಬಂದಿರಲಿಲ್ಲವಾದ್ದರಿಂದ ಹೆಚ್ಚು ಹೆಚ್ಚು ತನ್ನ ಆಚೀಚೆಯ ಕಾಲದ ಜನರ ನೆನಪಿನ ಕಥನಗಳ ಮೂಲಕವೆ ತಮ್ಮ ಚರಿತ್ರೆಯನ್ನು ಸಂರಕ್ಷಿಸಿಕೊಳ್ಳಬೇಕಾಗಿದ್ದ ಇಕ್ಕಟ್ಟಿನಿಂದ ಅವರು ಮೌಖಿಕ ಚರಿತ್ರೆ ಎಂಬ ಹೊಸ ಬಗೆಯೊಂದನ್ನೇ ರೂಢಿಸಿಕೊಂಡು ಬಿಟ್ಟಿರು. ನಮ್ಮ ದೇಶದ ಸಮಾಜಗಳ ಮೌಖಿಕ ಪರಂಪರೆಗೂ ಅವರಲ್ಲಿನ ಮೌಖಿಕತೆಗೂ ತುಂಬ ವ್ಯತ್ಯಾಸ ವಿದೆ. ಆಗಿದ್ದರೂ ಕೂಡ ‘ಅಮೇರಿಕನ್ ಸ್ಕೂಲ್ ಆಫ್ ಒರಲ್ ಇಸ್ಟ್ರಿ’ಯ ಪ್ರಭಾವ ಗಾಢವಾಗಿ ನಮ್ಮವರ ಮೇಲೂ ಆದದ್ದನ್ನು ನಿರಾಕರಿಸುವಂತಿಲ್ಲ. ನವೋದಯ ಕಾಲಮಾನದ ಅಧ್ಯಯನಗಳಿಂದ ಬಿಡಿಸಿಕೊಂಡಿದ್ದ ಎರಡನೆ ತಲೆಮಾರಿನ ವಿದ್ವಾಂಸರು ಪಶ್ಚಿಮ ಪ್ರಣೀತ ಆಲೋಚನೆಗಳಿಂದ ಪ್ರೇರಿತರಾಗಿದ್ದರಿಂದ ಅವರು ಸಹಜವಾಗಿಯೆ ಯುರೊ ಮಾದರಿಯ ಅಧ್ಯಯನ ವಿಧಾನದಿಂದಲೇ ತಮ್ಮ ನೆಲೆಯ ಚರಿತ್ರೆಯನ್ನು ಗ್ರಹಿಸಲು ತೊಡಗಿದರು. ಮೌಖಿಕ ಚರಿತ್ರೆಯ ಸಂರಚನೆಯಲ್ಲಿ ಎಡಪಂಥೀಯ ಆಲೋಚನೆಯೂ ಪ್ರಧಾನವಾಗಿ ಕಾಣಿಸಿಕೊಂಡಿತು. ಲಿಖಿತ ಚರಿತ್ರೆಗೆ ಪರ್ಯಾಯ ಎಂಬ ಪ್ರತಿ ಚಿಂತನೆ ಇದರಿಂದ ಸಾಧ್ಯ ವಾಯಿತು. ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಜನತೆಯ ಮಾರ್ಕ್ಸ್‌ವಾದಿ ದೃಷ್ಠಿಯು ಅಲಿಖಿತ ಪರಂಪರೆಗಳನ್ನು ತುಂಬ ವಿಶ್ವಾಸದಿಂದ ಸ್ವೀಕರಿಸಿತು. ಇದು ದ್ವಂದ್ವ ಮಾನ ಕಥನಕ್ಕೆ ಅವಕಾಶ ಮಾಡಿತು. ಎಡ ಬಲ ಧೋರಣೆ ಇಲ್ಲಿ ವರ್ಗಕಲ್ಪನೆಯಲ್ಲಿ ಸಾಧಿಸಲಾಯಿತು. ಅಂದರೆ ಮೌಖಿಕ ಇತಿಹಾಸದ ನಿರೂಪಣೆಗೆ ತೊಡಗಿದ ಯಾರೇ ಆದರೂ ಅಘೋಷಿತವಾಗಿ ಬಡವರ ಪರವಾದ ತೀರ್ಮಾನಕ್ಕೆ ಬದ್ಧವಾಗಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಸ್ವ ಚಹರೆಗಳ ತಡಕಾಟವೂ ಇದರಿಂದ ಬೆಳೆಯಿತು. ಸಮಾಜಮುಖಿ ಚರಿತ್ರೆಗೆ ಮೌಖಿಕ ಪರಂಪರೆ ಫಲವತ್ತಾದ ಆಕರ ಎಂಬ ನಂಬಿಕೆ ಈ ದಾರಿಯಲ್ಲೇ ಬಂದದ್ದು. ಮೌಖಿಕ ಚರಿತ್ರೆಯ ಬಗೆಗಿನ ಈ ನಿಲುವು ಎಂಬತ್ತರ ದಶಕದಲ್ಲಿ ತೀವ್ರವಾಗಿ ಉಂಟಾಯಿತು.

ಸ್ವ ಚರಿತ್ರೆಯ ಸಾಂಸ್ಕೃತಿಕ ಒತ್ತಡ

ತುಳುನಾಡಿನ ಮೌಖಿಕ ಚರಿತ್ರೆಯಲ್ಲಿ ಅಲ್ಲಿನ ವಿದ್ವಾಂಸರು ಸಕ್ರಿಯವಾಗಿ ಭಾಗವಹಿಸಿದ್ದುದು ಕೇವಲ ವಿದ್ವಾಂಸತನದಿಂದಲ್ಲ. ಅದೊಂದು ಸ್ವಚರಿತ್ರೆಯನ್ನು ತನ್ನ ತುಳುನಾಡಿನ ಸಾಂಸ್ಕೃತಿಕ ಬೇರುಗಳಿಂದ ಕಟ್ಟಿಕೊಳ್ಳುವ ಸ್ವ ಚಹರೆಯೂ ಆಗಿತ್ತು. ಈ ಪರಿಯ ಒತ್ತಡ ಹಳೆಯ ಮೈಸೂರಿನ ಭಾಗದ ವಿದ್ವಾಂಸರಿಗೆ ವಿಭಿನ್ನವಾಗಿತ್ತು. ಅಖಂಡ ಕರ್ನಾಟಕವನ್ನು ಮೌಖಿಕ ಸಾಹಿತ್ಯದ ಅನುಸಂಧಾನದಿಂದ ನಿರ್ವಚಿಸುವ ನವೋದಯ ಪ್ರಜ್ಞೆಯ ಒತ್ತಡ ಇತ್ತು. ಇದರಲ್ಲೇ ಸ್ವ ಚರಿತ್ರೆಯ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟವೂ ಸೇರಿತ್ತು. ಜೀ.ಶಂ.ಪರಮಶಿವಯ್ಯನವರ ಉದಾರ ಮಾನವತಾನೆಲೆಯ ನವೋದಯ ತತ್ವದ ನಂಬಿಕೆಯನ್ನು ವಿಸ್ತರಿಸುವ ವಿದ್ವಾಂಸರ ಪಡೆಯೂ ಅಲ್ಲಿ ರೂಪುಗೊಂಡಿರಲಿಲ್ಲ. ಎ.ಕೆ. ರಾಮಾನುಜನ್ ಅವರ ವಿದ್ವಾಂಸರ ಪಡೆಯೆ ಅಲ್ಲಿ ರೂಪುಗೊಂಡಿರಲಿಲ್ಲ. ಎ.ಕೆ. ರಾಮಾನುಜನ್ ಅವರ ಮಾದರಿಯೂ ಜನಪ್ರಿಯವಾಗಲಿಲ್ಲ. ಇಂಡೋ ಅಮೆರಿಕನ್ ಮಾದರಿಯಾಗಿ ಎ.ಕೆ.ರಾಮಾನುಜನ್ ಅವರ ಮೌಖಿಕ ಪರಂಪರೆಯ ಅಧ್ಯಯನ ಮಧ್ಯದಲ್ಲೆ ತುಂಡಾಯಿತು. ಡಿ.ಆರ್. ನಾಗರಾಜ್ ಚಿಕಾಗೊ ವಿಶ್ವವಿದ್ಯಾಲಯದ ಏಷ್ಯನ್ ಅಧ್ಯಯನ ಕೂಟಗಳಲ್ಲಿ ರಾಮಾನುಜನ್ ವಿಧಾನವನ್ನು ಮುಂದುವರಿಸುವ ರೀತಿಯಲ್ಲಿ ತೊಡಗಲು ಯತ್ನಿಸಿದ ಆರಂಭದಲ್ಲೇ ಅವರ ಮಾದರಿಯೂ ಮುಂದುವರಿಯಲಿಲ್ಲ. ಅಂದರೆ ಮೌಖಿಕ ಚರಿತ್ರೆಯ ಸಾಂಸ್ಕೃತಿಕ ಅನುಸಂಧಾನದ ಯತ್ನವೊಂದು ಹೇಗೆ ಹಳೆಯ ಮೈಸೂರಿನ ನೆಲೆಯಲ್ಲಿ ಕುಸಿಯಿತು ಎಂಬುದನ್ನು ನೆನಪಿಸಲು ಈ ವಿವರಗಳನ್ನಿಲ್ಲಿ ಪ್ರಸ್ತಾಪಿಸಬೇಕಾಯಿತು. ದಟ್ಟವಾದ ಎಡಪಂಥೀಯ ಆಲೋಚನೆ ಇದ್ದ ಮೈಸೂರು ಹಾಗೂ ಬೆಂಗಳೂರು ವಿವಿಗಳ ಅಧ್ಯಯನ ವ್ಯಾಪ್ತಿಯಲ್ಲಿ ಇದು ಗಂಭೀರವಾಗಿ ಆಗಬೇಕಾಗಿತ್ತು. ದಲಿತರ, ಕಾರ್ಮಿಕರ, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳ ಬಗೆಗಿನ ಎಡಪಂಥೀಯ ಚಳುವಳಿಗಳು ನೆಲೆಗೊಂಡಿದ್ದ ಹಳೆ ಮೈಸೂರಿನ ಭಾಗದಲ್ಲಿ ಪರ್ಯಾಯ ಚರಿತ್ರೆಯ ಮಾತು ಮಾತ್ರ ವಿಶೇಷವಾಗಿ ಕೇಳಿಸಿತೇ ಹೊರತು ಮೌಖಿಕ ಚರಿತ್ರೆಯ ನಿರ್ವಚನ ವಿಶೇಷವಾಗಿ ಆಗಲಿಲ್ಲ.

ಹೀಗಿದ್ದರೂ ಕೆಲವರಾದರೂ ಮೌಖಿಕ ಚರಿತ್ರೆಯ ಯತ್ನದಲ್ಲಿ ತೊಡಗಿದ್ದನ್ನು ಗಮನಿಸ ಬಹುದು. ಪ್ರೊ.ಹಿ.ಶಿ.ರಾಮಚಂದ್ರೀಗೌಡ ಅವರ ಜಾನಪದ ಬರವಣಿಗೆಗಳಲ್ಲಿ ಮೌಖಿಕ ಚರಿತ್ರೆಯ ಅಭಿಪ್ರಾಯಗಳು ಅಲ್ಲಲ್ಲಿ ಸಾಗಿ ಹೋಗುತ್ತವೆ. ತಾತ್ವಿಕವಾಗಿ ಹೇಗೆ ಮೌಖಿಕ ಚರಿತ್ರೆಯ ಸಂರಚನೆ ಸಾಧ್ಯ ಎಂಬ ಬೀಸುಹೇಳಿಕೆಗಳು ಸಾಮಾಜಿಕ ನ್ಯಾಯದ ಭಾಗವಾಗಿ ಪ್ರೊ.ಹಿ.ಶಿ.ರಾ. ಅವರಲ್ಲಿ ಕಂಡು ಬರುತ್ತವೆ. ಕನ್ನಡದ ಆಚೆಗಿದ್ದು ವಿವೇಚಿಸುತ್ತಿದ್ದ ಪ್ರಖ್ಯಾತ ಜಾನಪದ ತಜ್ಞರಾದ ಪ್ರೊ.ಜವಹರಲಾಲ್ ಹಂಡೂ ಅವರು ಕೂಡ ಮೌಖಿಕ ಚರಿತ್ರೆಯ ಬಗ್ಗೆ ತಾತ್ವಿಕವಾಗಿ ಮಾತ್ರವೇ ಪ್ರಸ್ತಾಪ ಮಾಡುತ್ತಾ ಬಂದದ್ದನ್ನು ಗಮನಿಸಬಹುದು. ಪ್ರೊ.ಅಂಬಳಿಕೆ ಹಿರಿಯಣ್ಣ ಅವರು ಪಶ್ಚಿಮದ ಮೌಖಿಕ ಚರಿತ್ರೆಯ ನಿಲುವುಗಳನ್ನು ಕನ್ನಡೀಕರಿಸಿ ಅನ್ವಯಿಸುವ ಯತ್ನ ಮಾಡಿದರು. ಪಿ.ಕೆ. ರಾಜಶೇಖರ ಅವರಂತು ‘ಪಿರಿಯಾ ಪಟ್ಟಣದ ಕಾಳಗ’ದಂತಹ ಚಾರಿತ್ರಿಕ ಕಥನ ಕಾವ್ಯವನ್ನು ಪ್ರಕಟಿಸಿ ಸ್ಥಳೀಯ ಚರಿತ್ರೆಯ ಶೈಲಿಯಲ್ಲಿ ಮೌಖಿಕ ಚರಿತ್ರೆಯ ಕಾವ್ಯಾನುಸಂಧಾನ ಮಾಡಿದರು. ಹನೂರು ಕೃಷ್ಣಮೂರ್ತಿ ಯವರು ಸಾಂಸ್ಕೃತಿಕ ವೀರರ ಬಹುಪಠ್ಯಗಳ ಕಥನ ಗೀತೆಗಳನ್ನು ಮುಂದಿಟ್ಟುಕೊಂಡು ಪಶುಪಾಲಕ ಸಮಾಜದ ಮೌಖಿಕ ಚರಿತ್ರೆಯನ್ನು ಮಂಡಿಸಿದರು.

ತೀ.ನಂ.ಶಂಕರನಾರಾಯಣ ಅವರು ಕಾಡುಗೊಲ್ಲರ ಸಂಸ್ಕೃತಿ ಚರಿತ್ರೆಯನ್ನು ಇದೇ ನೆಲೆಯಲ್ಲಿ ಬಿಂಬಿಸಿದರು. ಹ.ಕ.ರಾಜೇಗೌಡ ಅವರು ಮಾಗಡಿ.ಕೆಂಪೇಗೌಡರ ಚರಿತ್ರೆಯನ್ನು ನಿರೂಪಿಸುವ ಯತ್ನವನ್ನು ಮಾಡಿದರು. ಎಳವರ ಕಾವ್ಯಗಳು ಕೂಡ ಹೇಗೆ ಮೌಖಿಕ ಚರಿತ್ರೆಯನ್ನು ನಿರೂಪಿಸುತ್ತವೆ ಎಂಬ ಮಾದರಿಯನ್ನು ಎಚ್.ಎಲ್.ನಾಗೇಗೌಡರು ಎಳವರ ಕಾವ್ಯ ಸಂಗ್ರಹಿಸುವ ಮೂಲಕ ಭಿನ್ನವಾದ ಪಠ್ಯಗಳನ್ನು ಶೋಧಿಸಿದರು. ಮುಕರಿ ಮತ್ತು ಹೊಲೆಯರ ಪದಗಳ ಮೂಲಕವೂ ಹೇಗೆ ಒಂದು ಮೌಖಿಕ ಚರಿತ್ರೆ ವ್ಯಕ್ತವಾಗಿದೆ ಎಂಬ ಆಶಯದಲ್ಲಿ ಎಲ್.ಆರ್.ಹೆಗಡೆಯವರು ಬೇರೊಂದು ವಿವರಗಳನ್ನು ಒದಗಿಸಿದರು. ಅಂದರೆ ಮೌಖಿಕ ಚರಿತ್ರೆಯ ನೇರ ಪ್ರಸ್ತಾಪವಿಲ್ಲದೆಯೆ ಎಪ್ಪತ್ತರ ದಶಕದಿಂದಲೂ ಸರಿಸುಮಾರು ಒಂದು ದಶಕದವರೆಗೆ ಕೃಷಿಸಮಾಜದ ಅಲಕ್ಷಿತರ ಗ್ರಾಮ ಚರಿತ್ರೆಯನ್ನೆ ದಾಖಲಿಸುವಂತೆ ಬಹುಪಾಲು ಎಲ್ಲ ವಿದ್ವಾಂಸರು ರಾಜನಿಷ್ಠೆಯ ಚರಿತ್ರೆಯ ಆಚೆಗಿನ ಹಾದಿ ಬೀದಿಯ ಚರಿತ್ರೆಯನ್ನು ಕಟ್ಟಲು ತೊಡಗಿದ್ದುದು ಕರ್ನಾಟಕದ ಸಂಸ್ಕೃತಿ ಚರಿತ್ರೆಯ ಸಂದರ್ಭದಲ್ಲಿ ಬಹಳ ಮಹತ್ವದ್ದಾಗಿದೆ. ಇಲ್ಲಿ ಗಮನಿಸಬಹುದಾದ ಅಂಶವೇನೆಂದರೆ ಶೂದ್ರ ಪ್ರಜ್ಞೆಯೊಂದು ವೈದಿಕಶಾಹಿಯ ಹೊರತಾದ ಜ್ಞಾನ ಪರಂಪರೆಗಳನ್ನು ಪುನರ್ರಚಿಸಿಕೊಳ್ಳುವ ಪ್ರತಿರೋಧ ಚಿಂತನೆಯನ್ನು ಬೆಳೆಸಿದ್ದುದು.

ಮೌಖಿಕ ಪರಂಪರೆಯನ್ನು ಈ ನಿಟ್ಟಿನಲ್ಲಿ ಸಂಗ್ರಹಿಸುವುದೇ ತಂತಾನೆ ಚರಿತ್ರೆಯ ದಾಖಲೆ ಎಂಬ ವಿಶಾಲ ಭಾವನೆ ಕೆಲಸ ಮಾಡಿರುವುದನ್ನು ಮೇಲಿನವರ ಅಧ್ಯಯನಗಳಲ್ಲಿ ಕಾಣಬಹುದು. ಮೌಖಿಕ ಪರಂಪರೆಯಲ್ಲಿ ಚಾರಿತ್ರಿಕ ಅಂಶಗಳೇನಿವೆ ಎಂದು ಪ್ರತ್ಯೇಕಿಸಿ ಚರಿತ್ರೆಯ ನಿರ್ವಚನವನ್ನು ಮಾಡಲು ಅವರು ಹೋಗಲಿಲ್ಲ. ಅಂದರೆ ಮೌಖಿಕ ನಿರೂಪಣೆ ಗಳನ್ನು ಕೇವಲ ಆಕರ, ವಿವರ, ಸಾಕ್ಷ್ಯ ಇತ್ಯಾದಿಯಾಗಿ ಭಾವಿಸಲು ಹೋಗದೇ ಹೋದದ್ದ ರಿಂದ ಆ ಪಠ್ಯಗಳನ್ನು ಅಖಂಡವಾಗಿಯೆ ಭಾವಿಸುವ ವಿಧಾನವೊಂದು ಸಾಧ್ಯವಾಗಿರುವಂತೆ ಕಾಣುತ್ತದೆ. ಈ ವಿಧಾನವು ಸ್ಥೂಲವಾಗಿ ದೇಶೀಯ ಆಲೋಚನೆಯ ಭಾಗವಾಗಿತ್ತೇ ವಿನಃ ಖಚಿತವಾಗಿ ಮೌಖಿಕ ಚರಿತ್ರೆಯ ಕ್ರಮವಾಗಿರಲಿಲ್ಲ. ಆದರೆ ಇದೇ ಕಾಲ ಘಟ್ಟದಲ್ಲಿ ಸ್ವತಃ ಚರಿತ್ರೆಯನ್ನೇ ಭೋದಿಸುತ್ತಿದ್ದ ಪ್ರಾಧ್ಯಾಪಕವರ್ಗವು ಶೈಕ್ಷಣಿಕ ಪಠ್ಯರಚನೆ ಮತ್ತು ಪಾಠ ಭೋದನೆಯ ವಿದ್ವತ್ತಿನಲ್ಲಿ ತಲ್ಲೀನವಾಗಿತ್ತು. ವಶಾಹತುಶಾಹಿ ಚರಿತ್ರೆಯ ರೀತಿ ನೀತಿಗಳಿಗೆ ಅನೇಕ ತಜ್ಞರು ಸಮರ್ಪಿಸಿಕೊಂಡಿದ್ದರು. ಮೌಖಿಕ ಚರಿತ್ರೆಯ ಸಾಧ್ಯತೆ ಅಂತವರ ಆದ್ಯತೆಯಾಗಿರಲಿಲ್ಲ. ಒಮ್ಮೆಯೂ ಯೂರೋಪಿನ ದೇಶಗಳನ್ನು ಕಂಡರಿಯದಿದ್ದ ಚರಿತ್ರೆಯ ತಜ್ಞರು ಯುರೋಪಿನ ಇತಿಹಾಸದ ಪಾಠ ಬರೆಯುತ್ತಿದ್ದುದು ಚೋದ್ಯವಾಗಿದೆ. ಇಂತವರು ಕನಿಷ್ಠ ಸ್ಥಳೀಯ ಚರಿತ್ರೆಯ ನಿರೂಪಣೆ ಮತ್ತು ಧೋರಣೆಯಲ್ಲಿ ಭಿನ್ನತೆಯನ್ನು ತೋರಲಿಲ್ಲ. ಈ ಸ್ಥಿತಿಯಲ್ಲಿ ಜಾನಪದ ವಿದ್ವಾಂಸರು ಕರ್ನಾಟಕದ ಸಂಸ್ಕೃತಿ ಇತಿಹಾಸದ ರಚನೆಗೆ ಬೇಕಾದ ಮೌಖಿಕ ಪರಂಪರೆಯ ಆಕರಗಳನ್ನು ಅಪಾರವಾಗಿ ಸಂಗ್ರಹಿಸಿದ್ದು ಹೆಮ್ಮೆಯ ಸಂಗತಿ.

ರಾಷ್ಟ್ರೀಯ ಇತಿಹಾಸದ ಧೋರಣೆ

ಇಲ್ಲಿ ಪೂರಕವಾದ ಅಂಶವೊಂದನ್ನು ಪ್ರಾಸಂಗಿಕವಾಗಿ ನೆನೆಯಬಹುದು. ನವೋದಯದ ವಿದ್ವಾಂಸರಾದ ಶಂಬಾಜೋಷಿಯವರಿಂದ ಹಿಡಿದು ಇವತ್ತಿನ ಕಲ್ಬುರ್ಗಿಯವರ ತನಕ ಕರ್ನಾಟಕದ ಪ್ರಾಚೀನ ಮಾರ್ಗದ ಅಧ್ಯಯನವನ್ನು ಗಮನಿಸಿದರೆ ಸಂಸ್ಕೃತಿ ಚರಿತ್ರೆಯ ವಿರಾಟ್ ಕಥನಗಳು ತೆರೆದುಕೊಳ್ಳುತ್ತವೆ. ಆ ಬಗೆಯ ಅಧ್ಯಯನವನ್ನು ಈಗಲೂ ಹಿರಿಯ ರಾದ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿಯವರು ಮುಂದುವರಿಸುತ್ತಲೇ ಇದ್ದಾರೆ. ಇದು ಒಂದು ಬಗೆಯ ಚರಿತ್ರೆಯ ಶೋಧವಾದರೆ ಜಾನಪದ ವಿದ್ವಾಂಸರು ಕೂಡ ಆರಂಭದಿಂದಲೂ ದೇಶೀಯ ಚರಿತ್ರೆಯ ಕಥನಗಳ ಶೋಧವನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ದೇವುಡು ಅವರು ಕರ್ನಾಟಕ ಚರಿತ್ರೆಯನ್ನು ಸಂಸ್ಕೃತಿಯ ದೇಶೀಯ ಬೇರುಗಳಿಂದ ಹುಡುಕಿದರು. ಅಂದರೆ ಮಾರ್ಗ ಮತ್ತು ದೇಶಿ ಪರಂಪರೆಗಳ ಎರಡೂ ವಿದ್ವಾಂಸರು ಸಂಸ್ಕೃತಿ ಚರಿತ್ರೆಯ ಬೇರೆ ಬೇರೆ ಆಕರಗಳನ್ನೆಲ್ಲ ಅಖಂಡ ಕನ್ನಡತ್ವಕ್ಕೆ ಹೊಂದಿಸುವ ಹೊಣೆಗಾರಿಕೆಯನ್ನು ನಿರ್ವಹಿಸಿದರು. ಇದು ಮೌಖಿಕ ಚರಿತ್ರೆಯ ಕಥನಕ್ಕೆ ತಳಪಾಯವನ್ನು ಹಾಕಿದಂತಾಗಿದೆ. ಈ ಪರಿಯ ದಾರಿ ಕನ್ನಡದಲ್ಲಿ ಬೆಳೆದಿದ್ದರಿಂದಲೇ ಬರಗೂರು ರಾಮಚಂದ್ರಪ್ಪ ಅವರು ಮುಂದೆ ಉಪಸಂಸ್ಕೃತಿಗಳ ಅಧ್ಯಯನ ಮಾಲೆಯನ್ನು ರೂಪಿಸಲು ಸಾಧ್ಯವಾದದ್ದು. ಸಾಂಸ್ಕೃತಿಕವಾಗಿ ಪ್ರತಿಯೊಂದು ಸಮುದಾಯವು ಕನ್ನಡದ ಒಳಗೆಯೇ ಎಷ್ಟೆಲ್ಲ ಸ್ವ ಅನನ್ಯತೆಯ ಚರಿತ್ರೆಯನ್ನು ತಮ್ಮ ಮೌಖಿಕ ಪರಂಪರೆಗಳಲ್ಲಿ ಧಾರಣಮಾಡಿಕೊಂಡಿವೆ ಎಂಬುದನ್ನು ಊಹಿಸಲು ಇದರಿಂದ ಸಾಧ್ಯವಾಯಿತು. ವಶಾಹತುಶಾಹಿ ಅಧ್ಯಯನದಿಂದ ಬಿಡಿಸಿಕೊಳ್ಳುವ ಯತ್ನವನ್ನು ಹೀಗೆ ಮಾಡುತ್ತಲೇ ದೇಶೀಯವಾಗಿ ಆಲೋಚಿಸುವ ಸಾಮಾಜಿಕ ನ್ಯಾಯದ ಅಧ್ಯಯನ ಮಾದರಿಗಳು ಇಲ್ಲಿ ಚರಿತ್ರೆಯ ಭಾಗವಾಗಿಯೆ ಬೆಳಕಿಗೆ ಬಂದದ್ದು ಮುಖ್ಯ ಸಂಗತಿ.

ಇಷ್ಟಿದ್ದರೂ ಶುದ್ಧ ಚರಿತ್ರೆಯ ವಿದ್ವಾಂಸರು ಮೌಖಿಕ ಚರಿತ್ರೆಯ ಬಗ್ಗೆ ಈಗಲೂ ಗಂಭೀರವಾಗಿ ತೊಡಗಿಲ್ಲ. ಆರಂಭದಿಂದಲು ಪ್ರೊ.ಲಕ್ಷ್ಮಣ ತೆಲಗಾವಿಯವರು ಸ್ಥಳೀಯ ಚರಿತ್ರೆಯ ಭಾಗವಾಗಿ ಮೌಖಿಕ ಆಕರಗಳನ್ನು ಹೊಂದಿಸುತ್ತ ಬಂದದ್ದನ್ನು ಗಮನಿಸಬಹುದು. ‘ಹರತಿಸಿರಿ’ ಸಂಪುಟದ ‘ಜನಪದ ರ ಸಾಹಿತ್ಯ: ಚಾರಿತ್ರಿಕ ವಿವೇಚನೆ’ ಎಂಬ ಅವರ ಈ ಲೇಖನವು ಅನೇಕ ಒಳನೋಟಗಳಿಂದ ಮೌಖಿಕ ಚರಿತ್ರೆಯ ಸಂರಚನೆಯತ್ತ ಬೆರಳು ಮಾಡಿ ತೋರುತ್ತದೆ. ಜಾನಪದ ವಿದ್ವಾಂಸರಿಗಿಂತ ಪ್ರೊ.ತೆಲಗಾವಿ ಭಿನ್ನವಾಗಿ ನಿಲ್ಲುವುದು ಆಕರಗಳನ್ನು ಪರಂಪರೆಯ ಬೇರೆ ಬೇರೆ ರೆಂಬೆಕೊಂಬೆಗಳಿಂದ ಬೇರ್ಪಡಿಸಿ ಶುದ್ಧ ಚರಿತ್ರೆಯ ಶಿಸ್ತಿಗೆ ಅಂತರ‍್ಗತಿಸಿಕೊಳ್ಳುವುದರಲ್ಲಿ. ಪ್ರತ್ಯೇಕಿಸಿಕೊಂಡ ಸಾಕ್ಷ್ಯವನ್ನು ಚರಿತ್ರೆಯ ನಿರೂಪಣೆ ಯಲ್ಲಿ ಬೆಸೆಯುವ ವಿಧಾನವು ಅಂತಿಮವಾಗಿ ರಾಷ್ಟ್ರೀಯ ಇತಿಹಾಸದ ಮನೋಧರ್ಮಕ್ಕೆ ಬಂದು ಸೇರುವ ಒಂದು ಉದಾರವಾದಿ ಬಲಪಂಥೀಯ ಕ್ರಮ ತೆಲಗಾವಿ ಅವರಲ್ಲಿ ವಿಶೇಷವಾಗಿ ಕಾಣುತ್ತದೆ. ಅಂದರೆ ಏಕಕಾಲಕ್ಕೆ ಸ್ಥಳೀಯ, ರಾಷ್ಟ್ರೀಯ, ಮೌಖಿಕ ಚರಿತ್ರೆಗಳ ಸಂಯೋಗ ಅವರ ಒಂದು ಬಗೆ. ಹೀಗಾಗಿಯೆ ಜಾನಪದ ವಿದ್ವಾಂಸರ ಹಾಗೆ ಇಡಿಯಾಗಿ ಮೌಖಿಕ ಪರಂಪರೆಯನ್ನೆ ಎತ್ತಿ ನಿಲ್ಲಿಸುವ ಸಾಹಸಕ್ಕೆ ಅವರು ಮುಂದಾಗವುದಿಲ್ಲ. ಈ ಪರಿಯು ಬಹುಪಾಲು ಶುದ್ಧ ಚರಿತ್ರೆಯ ಎಲ್ಲರಲ್ಲೂ ಕಂಡುಬರುತ್ತದೆ. ಅಂದರೆ; ಮೌಖಿಕ ಪರಂಪರೆಯೆ ಮೌಖಿಕ ಚರಿತ್ರೆಯಲ್ಲ ಎಂಬ ಏಕಾಭಿಪ್ರಾಯ ಇಲ್ಲಿದೆ. ಆದ್ದರಿಂದಲೇ ಜಾನಪದ ವಿದ್ವಾಂಸರಿಗೂ ಚರಿತ್ರೆಯ ವಿದ್ವಾಂಸರಿಗೂ ಮೌಖಿಕ ಚರಿತ್ರೆಯ ಸಂರಚನೆಯಲ್ಲಿ ಹೊಂದಾಣಿಕೆ ಇಲ್ಲ. ಪ್ರೊ.ತೆಲಗಾವಿ ಅವರು ಸ್ಥಳೀಯ ಚರಿತ್ರೆಗೆ ಬೇಕಾದ ಅನೇಕ ಆಕರಗಳನ್ನು ಅನುಸರಿಸುವಾಗ ಅಲಕ್ಷಿತ ಸಮುದಾಯಗಳ ಮೌಖಿಕ ಸಾಹಿತ್ಯವನ್ನು ಚರಿತ್ರೆಯ ಜೊತೆ ಸ್ವೀಕರಿಸುವಾಗ ತಣ್ಣನೆಯ ಸಾಮಾಜಿಕತೆಯನ್ನು ಮುಟ್ಟಿ ಹಿಂದೂ ರಾಷ್ಟ್ರೀಯತೆಯ ವಿಧಾನದ ಒಳಗೆ ಕರಗಿ ಹೋಗುತ್ತಾರೆ. ಅಂಚಿನವರ ಅಪಾರ ಮಾಹಿತಿ ತುಂಬಿರುವ ಅವರ ಚಾರಿತ್ರಿಕ ಬರಹಗಳು ಸಹಜವಾಗಿ ತಮ್ಮ ಪ್ರಶ್ನೆಗಳನ್ನು ಮುಂದಿಡುವುದಿಲ್ಲ. ಅಥವಾ ಸ್ವತಃ ಚರಿತ್ರೆಕಾರ ತೆಲಗಾವಿ ಅವರೇ ಆ ಎಲ್ಲ ಅಂಚಿನವರ ಪ್ರಶ್ನೆಗಳನ್ನು ಈಗ ಬೇಡ ನಾಳೆ ಬನ್ನಿ ಎಂಬಂತೆ ಗತದ ಮರೆಗೇ ಕಳಿಸಿ ಬಿಡುತ್ತಾರೆ.