ಮೌಖಿಕ ಪರಂಪರೆ ಅಲಕ್ಷಿತ ಸಮಾಜಗಳ ಬಹುದೊಡ್ಡ ಅಭಿವ್ಯಕ್ತಿ. ಈ ಅಭಿವ್ಯಕ್ತಿಯು ಅವರ ಅಸ್ತಿತ್ವವನ್ನು ಕುರಿತು ನಿರೂಪಿಸುವಂತದ್ದು. ಲಿಖಿತವಾದ ಜ್ಞಾನಧಾರೆಗಳು ಜನಪದರಲ್ಲಿ ಜೀವನದ ಆಚರಣೆಯ ಭಾಗವಾಗಿರುತ್ತದೆ. ಈ ಆಚರಣೆಗಳು ಲಿಖಿತ ಸ್ವರೂಪದಲ್ಲಿ ಇರಲು ಭಾಷೆಯ ತೊಡಕೇನೂ ಇರಲಿಲ್ಲ. ಸಾಮ್ರಾಜ್ಯಗಳ ಮುಂದೆ ಮೌಖಿಕವಾದ ಎಲ್ಲ ಕಥನಗಳು ಚರಿತ್ರೆಯ ಬೇರೊಂದು ಧ್ವನಿಯಾಗಿ ವ್ಯಕ್ತವಾಗಿವೆ. ರಾಜಶಾಹಿಯು ಮುಂದೆ ತನ್ನ ಪ್ರತಿರೋಧವನ್ನು ತೋರಲಾಗದ ಸ್ಥಿತಿಯಲ್ಲಿ ಆಚರಣೆಯೆ ಅತಿಮುಖ್ಯವಾದ ಅಭಿವ್ಯಕ್ತಿಯಾಗಿ ಮಧ್ಯಕಾಲೀನ ಸಮಾಜದಲ್ಲಿ ಬಹುಪಾಲು ಎಲ್ಲ ಅಲಕ್ಷಿತ ಸಮುದಾಯಗಳಿಗೆ ಕಂಡಿದೆ. ಹೀಗಾಗಿ ಮೌಖಿಕ ಪರಂಪರೆ ಎಂಬುದು ಕೇವಲ ಕಟ್ಟುಕತೆಯ ಆಡಂಬರವಲ್ಲ. ಈ ಬಗೆಯ ನಿರೂಪಣೆಗಳು ಕಟ್ಟುಕತೆಯಂತಿದ್ದರೂ ಆಬಗೆಯ ಅಭಿವ್ಯಕ್ತಿಯೆಂದರೆ ಆ ಸಮಾಜವು ತನ್ನ ಅಸ್ತಿತ್ವದ ಬಲವನ್ನು ತೋರಿಸಿಕೊಳ್ಳಬೇಕಾಗಿತ್ತು. ಸಾಮ್ರಾಜದ್ಯಗಳ ಮುಂದೆ ಊಳಿಗಮಾನ್ಯ ಸಾಮಂತರ ಎದಿರು ಸ್ಥಳೀಯ ಪಾಳೇಗಾರರ ಹಾವಳಿಯ ಒಳಗಿದ್ದುಕೊಂಡೆ ತಮ್ಮ ಮೌಖಿಕ ಕಥನಗಳ ಸಾಂಸ್ಕೃತಿಕ ವೀರರನ್ನು ಭವ್ಯವಾಗಿ ಪವಾಡಗಳ ಮೂಲಕ ಪುರಾಣಗಳ ಕವಚದಿಂದ ಕಟ್ಟಿಕೊಳ್ಳಬೇಕಾಗಿತ್ತು. ಹಾಗೆ ನಿರೂಪಿಸಿ ಕೊಳ್ಳದೆ ಇದ್ದಿದ್ದರೆ ಸಮುದಾಯಗಳಿಗೆ ಒಂದು ಪಾವಿತ್ರ್ಯದ ಗುರುತು ಸಿಗಲಾರದು ಎಂಬ ಭಯ ಅಂಚಿನ ಸಮುದಾಯಗಳಿಗೆ ಇತ್ತು. ತಮ್ಮ ಪರಂಪರೆಯ ಸಂಕೇತಗಳನ್ನು ವೀರರನ್ನು ಹಾಗಲ್ಲದೆ ಅನ್ಯಕ್ರಮದಲ್ಲಿ ತೋರಿಸಿಕೊಳ್ಳಲು ಅವಕಾಶವೆ ಇರಲಿಲ್ಲ.

ಎಷ್ಟೋ ಬಾರಿ ಮೌಖಿಕ ಪರಂಪರೆಯ ಕಥನಗಳು ಆಯಾಯ ಬಿಡಿ ಬಿಡಿ ಸಮುದಾಯಗಳಿಗೆ ಚಾರಿತ್ರಿಕವಾದ ಚಹರೆಗಳನ್ನು ಒದಗಿಸಿರುವುದೇ ಅಲ್ಲದೆ ಅಂತಹ ಗುರುತುಗಳಿಂದ ಅವರ ಸಂಸ್ಕೃತಿಗಳು ನಿರ್ಧಾರವಾಗುತ್ತಿದ್ದವು. ಐತಿಹಾಸಿಕವಾಗಿ ತನ್ನ ಸಾಂಸ್ಕೃತಿಕ ನಾಯಕರನ್ನು ವೀರರಸದಲ್ಲಿ ಆರಾಧಿಸಿ ಪ್ರತಿಪಾದಿಸುವುದು ಚರಿತ್ರೆಯನ್ನು ಸದಾಕಾಲ ನಿರೂಪಿಸಿಕೊಳ್ಳುವ ಸ್ವಭಾವವೇ ಆಗಿದೆ. ಜನಪದರಿಗಿದ್ದ ಇಂತಹ ಚರಿತ್ರೆಯ ಪ್ರಜ್ಞೆಯು ವಿಶೇಷವಾದುದು. ಇದು ಚರಿತ್ರೆಯನ್ನು ವರ್ತಮಾನದ ಸಮರ್ಥನೆಗಳಿಗೆ ಬಳಸಿಕೊಳ್ಳುವ ವಿಧಾನ, ಹಾಗೆಯೆ ಪ್ರಭುತ್ವನಿಷ್ಟ ಚರಿತ್ರೆಯ ಕಥನಗಳಿಗೆ ಪರ‍್ಯಾಯವಾಗಿ ನಿರ್ಮಿಸಿಕೊಳ್ಳುವ ಅಸ್ತಿತ್ವಕಥನವಾಗಿ ಬೆಳೆದಿವೆ. ಇಂತಹ ಸ್ವಭಾವ ಯಾವತ್ತೂ ಜನಪದರಿಗೆ ನಡೆದುಬಂದ ಗುಣ. ಹಾಗೆಂದೇನೂ ಇವು ಅಪ್ಪಟವಾಗಿ ವ್ಯವಸ್ಥೆಯ ನಿರಾಕರಣೆಯ ಕಥನಗಳಲ್ಲ. ವ್ಯವಸ್ಥೆಯನ್ನು ಉಪೇಕ್ಷಿಸುವುದರಲ್ಲೆ ಅವು ತಮ್ಮ ನಿಲುವನ್ನು ಬಿಂಬಿಸುತ್ತ ತಮ್ಮ ಸಾಂಸ್ಕೃತಿಕವಾದ ನಿರೂಪಣೆಗಳನ್ನು ವೈಭಕರಿಸಿ ವೀರತ್ವದಲ್ಲಿ ಕೊಂಡಾಡಿಕೊಳ್ಳುತ್ತವೆ. ಘಟನೆ ಒಂದು ನೆಪವಾಗಿ ಆ ಘಟನೆಯ ಸುತ್ತ ತಮ್ಮ ಅಪಾರ ಸಾಧ್ಯತೆಯ ಮಾಂತ್ರಿಕ ಲೋಕವನ್ನು ಪವಾಡ ಸಾದೃಶ ಸಂಗತಿಗಳಿಂದ ವಿಸ್ತರಿಸಿಕೊಳ್ಳುತ್ತಾರೆ. ಮಧ್ಯಕಾಲೀನ ಸಾಮ್ರಾಜ್ಯಗಳು ಕೊಬ್ಬಿನಿಂದ ಆರ್ಭಟಿಸುವಾಗ ಅಂಚಿನ ಸಮುದಾಯಗಳು ಮಂಟೇಸ್ವಾಮಿ ಮತ್ತು ಮಾದೇಶ್ವರ ಹಾಗು ಮೈಲಾರಲಿಂಗರಂತಹ ವೀರರ ಸುತ್ತ ತಮ್ಮ ಸುಪ್ತ ಪ್ರಜ್ಞೆಯಲ್ಲಿರುವ ಎಲ್ಲ ಬಗೆಯ ಅಲೆಗಳ ಪವಾಡಗಳನ್ನು ಸಾಮಾಜಿಕ ವಾಗಿ ನಿರೂಪಿಸಿಬಿಡುತ್ತಾರೆ.

ಹೀಗಾಗಿ ಘಟನೆಯ ಇಲ್ಲವೆ ಸಂಗತಿಯ ಸತ್ಯ ಅಸತ್ಯಗಳನ್ನು ಜನಪದ ಸಮಾಜವು ಪ್ರಧಾನವಾಗಿ ಧ್ವನಿಸದೆ ಆ ವಸ್ತು ವಿಷಯದ ಒಳಗೆ ತಮ್ಮ ವರ್ತಮಾನದ ಅನುಭಾವ ಮತ್ತು ಒತ್ತಾಸೆಗಳನ್ನು ಮೌಖಿಕ ಪರಂಪರೆಗಳನ್ನು ಪುನರ್‌ಸೃಷ್ಟಿಸುತ್ತಾ ಹೋಗುತ್ತಾರೆ. ಇದು ಚರಿತ್ರೆಯನ್ನು ಬಹು ಪಠ್ಯಗಳಲ್ಲಿ ನಿರೂಪಿಸಲು ಅವಕಾಶಮಾಡಿದೆ. ಬಲಿಷ್ಠವಾದ ಸಾಮ್ರಾಜ್ಯದ ಚರಿತ್ರೆಯ ಕಥನದ ಮುಂದೆ ಅಸಂಖ್ಯವಾದ ಚಾರಿತ್ರಿಕ ಕಥನಗಳನ್ನು ನಿರ್ಮಿಸಿ ತಮ್ಮ ಬಹುರೂಪಿ ಬಲವನ್ನು ಪ್ರದರ್ಶಿಸುತ್ತವೆ. ಹೀಗೆ ಬಹುರೂಪಿ ಕಥನಗಳು ಮುಖ್ಯವಾಗಿ ತಮ್ಮ ನೆಲೆಯ ಸಾಂಸ್ಕೃತಿಕ ನೀತಿ ನಿಯಮಗಳ ಮೂಲಕ ಆಳುವ ವ್ಯವಸ್ಥೆಯನ್ನು ಮುಖಾಮುಖಿ ಮಾಡುತ್ತವೆ. ವಸ್ತುನಿಷ್ಠವಾದ ಧೋರಣೆಗಿಂತ ವಸ್ತುಸ್ಥಿತಿಯ ಆಚೆಗಿನ ವಾಸ್ತವವೇ ಜನಪದ ಕಥನಗಳಿಗೆ ಮುಖ್ಯ. ಹೀಗಾಗಿ ಘಟನೆಯ ಅಧಿಕೃತ ಸಾಕ್ಷೀತನಕ್ಕಿಂತ ವರ್ತಮಾನದ ಅನುಭವಗಳಿಂದಲೆ ಗತಕಾಲದ ಸಂಗತಿಗಳನ್ನು ಪುನರ್‌ನವೀಕರಿಸಿಕೊಳ್ಳುತ್ತವೆ. ಭವಿಷ್ಯದ ಅಸ್ತಿತ್ವಕ್ಕಾಗಿ ಮೌಖಿಕ ಪರಂಪರೆಯು ಅನೇಕ ಬಗೆಯಲ್ಲಿ ಸೃಜನಶೀಲವಾದ ಮನಸ್ಸಿಗೇ ನಡೆಯುತ್ತದೆ. ಸೃಜನಶೀಲವಾದ ಕಥನಗಳಿಗೆ ಹೀಗೆಯೆ ಸಾಕ್ಷಿ ಮುಖ್ಯವಲ್ಲ. ಅಂತಃಸಾಕ್ಷಿಯ ಮೂಲಕವೆ ವಸ್ತುನಿಷ್ಟ ಜಗತ್ತಿನ ಮರೆಯಲ್ಲಿರುವ ವಿರೂಪವನ್ನೂ ಮಾಂತ್ರಿಕ ವಾಸ್ತವತೆಯಲ್ಲಿ ಹಾಡುತ್ತಿರುತ್ತವೆ.

ಸಾಕ್ಷಿಯ ಪಾವಿತ್ರ್ಯ ನಿರಾಕರಣೆ

ಮೌಖಿಕ ಪರಂಪರೆಯು ಸಾಕ್ಷಿಯ ಪಾವಿತ್ರ್ಯವನ್ನು ನಂಬುವುದಿಲ್ಲ. ಸಾಕ್ಷಿಯಷ್ಟೇ ಚರಿತ್ರೆಯಲ್ಲ. ಸಾಕ್ಷಿಯಾಗಲಿ ಆಧಾರಗಳಾಗಲಿ ಯಾವುದೇ ಮಾಹಿತಿಗಳಾಗಲಿ ಯಾವತ್ತೂ ಕೂಡ ವ್ಯವಸ್ಥೆಯ ಅಸ್ತಿತ್ವವನ್ನು ಕಾಯುವ ರೀತಿಯಲ್ಲೇ ಲಿಖಿತಗೊಳ್ಳುತ್ತಿರುತ್ತವೆ. ಅಧಿಕೃತ ಆಧಾರಗಳು ಅಲಕ್ಷಿತ ಸಂಗತಿಗಳ ಮೇಲೆ ಆಕ್ರಮಣ ಮಾಡಿ ತಮ್ಮ ಶ್ರೇಷ್ಟತೆಯನ್ನು ಸಾಧಿಸಲು ಅಧಿಕಾರವನ್ನು ಬಳಸುತ್ತಿರುತ್ತವೆ. ಹೀಗಾಗಿ ಎಷ್ಟೋ ಬಾರಿ ಚರಿತ್ರೆಯ ಪ್ರಧಾನ ಆಧಾರಗಳು ಅಧಿಕಾರದ ವರ್ಚಸ್ಸಿನಿಂದ ಆಳುವ ಗುಣವನ್ನು ಧರಿಸಿಕೊಂಡಿರುತ್ತವೆ. ದೇಶಿ ಸಮುದಾಯಗಳಲ್ಲಿ ಸಾಕ್ಷಿ ಎಂದರೆ ಅದು ಸಮಷ್ಟಿಪ್ರಜ್ಞೆಯಾಗಿದ್ದೂ ಕಾಲದ ಬಹು ಆಕಾರಗಳನ್ನು ತುಂಬಿಕೊಳ್ಳುತ್ತಲೆ ವಿಕಾಸವಾಗುತ್ತದೆ. ಸಮುದಾಯಗಳ ಚಹರೆಯಾಗಿ ಇಲ್ಲಿ ಸಾಕ್ಷಿಯು ಚರಿತ್ರೆಯನ್ನು ನಿರೂಪಿಸುತ್ತದೆ. ಜಗತ್ತಿನ ಯಾವುದೇ ಲಿಖಿತ ಚರಿತ್ರೆಯಾದರೂ ತನ್ನ ಗತಕಾಲದ ಅನುಭವಗಳಿಂದ ಸಮಕಾಲೀನತೆಯನ್ನು ಹುಡುಕಿದರೆ ದೇಶೀ ಚರಿತ್ರೆಯು ವಿಭಿನ್ನವಾಗಿ ಇರುವ ಇಂದಿನ ವಾಸ್ತವವನ್ನು ಹಳೆಯ ಜಗತ್ತಿಗೆ ಕೊಂಡೊಯ್ದು ಗತಕಾಲವನ್ನು ಇವತ್ತಿನ ಪ್ರಜ್ಞೆಯಿಂದ ಪರಿಭಾವಿಸುತ್ತದೆ. ಈ ಬಗೆಯ ಎರಡೂ ಕ್ರಮಗಳು ಏಕಕಾಲಕ್ಕೆ ಒಂದನ್ನೊಂದು ಅನುಸರಿಸಿಯೆ ಹೊಸಕಾಲದ ಚರಿತ್ರೆಗೆ ಬೇರು ಬಿಡಬೇಕಾಗುತ್ತದೆ.

ಜನಪದರು ಇಂತಹ ದಾರಿಯಲ್ಲಿ ಏಕಕಾಲಕ್ಕೆ ಬಹು ಕಾಲಘಟ್ಟಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಚರಿತ್ರೆ ಹೀಗಾಗಿಯೆ ಜನಪದರಿಗೆ ಹಾಗು ಅವರು ಸೃಷ್ಟಿಸುವ ಮೌಖಿಕ ಪರಂಪರೆಗೆ ನಿಗಧಿಯಾದ ಸ್ಥಾಯೀ ಕಾಲಘಟ್ಟವಲ್ಲ. ಅದು ಒಂದೇ ಅವಧಿಯಲ್ಲಿ ಹಲವು ಕಾಲ ಸಂವೇದನೆಗಳನ್ನು ಸಮಾನವಾಗಿ ನಿರೂಪಿಸುತ್ತದೆ. ಆದಿಮ ಯುಗದ ಚರಿತ್ರೆಯ ಸಾಕ್ಷಿಯು ಸಮಷ್ಠಿಯಾಗಿ ರೂಪಾಂತರಗೊಂಡು ಮಧ್ಯಯುಗದ ಜನಜೀವನದಲ್ಲಿ ಕರಗಿ ಇವತ್ತಿನ ಯಾವುದೊ ಒಂದು ಐತಿಹ್ಯದಲ್ಲೊ ಆಚರಣೆಯಲ್ಲೊ ರೂಪಕ ಪ್ರತಿಮೆಯ ಕ್ರಮವಾಗಿ ಚರಿತ್ರೆಯನ್ನು ಬಹುಪಠ್ಯಗಳಿಗೆ ವಿಸ್ತರಿಸುತ್ತಿರುತ್ತದೆ. ಸಾಕ್ಷಿಯ ಪಾವಿತ್ರ್ಯವನ್ನು ಜನಪದ ಪರಂಪರೆಗಳು ಸಹಜ ನೈಸರ್ಗಿಕ ಗುಣದಿಂದ ಕಾಣುತ್ತವೆಯೆ ವಿನಃ ಪಾವಿತ್ರ್ಯದ ಮೇಲರಿಮೆಯಿಂದ ಅಲ್ಲ.

ಇಂತಹ ಸೂಕ್ಷ್ಮ ಅಂತರ್ ಸಂಬಂಧಿ ವಿವರಗಳನ್ನು ಸಮಕಾಲೀನ ಒತ್ತಡಗಳ ಕೂಡೆ ಅನುಸಂಧಾನ ಮಾಡುವಾಗ ಮೌಖಿಕ ಪರಂಪರೆ, ಮೌಖಿಕ ಚರಿತ್ರೆ, ಮೌಖಿಕ ಸಾಹಿತ್ಯ, ಅಲಕ್ಷಿತ ಇತಿಹಾಸ ಎಂಬ ಪರಿಕಲ್ಪನೆಗಳನ್ನು ಖಚಿತವಾದ ಸೈದ್ಧಾಂತಿಕ ನೆಲೆಯಿಂದ ಗುರುತಿಸಿ ಕೊಳ್ಳಬೇಕಾಗುತ್ತದೆ. ಹಾಗೆಯೆ ಇಂತಹ ಅಲಕ್ಷಿತ ಜ್ಞಾನ ಪರಂಪರೆಗಳನ್ನು ಸಮಕಾಲೀನ ಕೊನೆಗೊಳಿಸುವುದು ಹೇಗೆ? ಎಂಬ ಪರೀಕ್ಷೆಗಳಿಂದಲೇ ಸವಾಲುಗಳನ್ನು ಬಿಡಿಸಿಕೊಂಡು ಜಡವಾಗುತ್ತಿರುವ ಮಾನವಿಕ ಶಾಸ್ತ್ರಗಳನ್ನು ಬಲಗೊಳಿಸಿಕೊಳ್ಳಬೇಕಾಗುತ್ತದೆ.

ಈ ವ್ಯವಸ್ಥೆಯಲ್ಲಿ ಅಲಕ್ಷಿತರ ಸಮಷ್ಠಿ ಚರಿತ್ರೆಯನ್ನು ನಿರೂಪಿಸಬೇಕಾದರೆ ಆಧುನಿಕ ಗದ್ಯದ ಸಂಕಥನಕ್ಕೆ ಪೂರಕವಾದ ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಜಾನಪದ ಮತ್ತು ಪರಂಪರೆಯ ವಿವಿಧ ಜ್ಞಾನಶಾಖೆಗಳನ್ನು ಬಹಳ ಎಚ್ಚರದಲ್ಲಿ ಮಾನವೀಕರಣಗೊಳಿಸಬೇಕಾದದ್ದು ನಮ್ಮ ಅನಿವಾರ್ಯತೆ. ಈ ಎಲ್ಲ ಶಾಖೆಗಳ ಮೂಲ ನೆಲೆ ಅಲಕ್ಷಿರದ್ದೇ ಆಗಿದ್ದು ಈ ಅಪಾರ ಮಾಹಿತಿಯನ್ನು ನಮ್ಮ ಕಾಲದ ಬೌದ್ದಿಕ ಆಕೃತಿಗಳಿಗೆ ಸಂಯೋಗಿಸಿ ಆ ಮೂಲಕ ಇವುಗಳ ಅನನ್ಯತೆಯಲ್ಲೇ ಪ್ರತ್ಯೇಕ ಧ್ವನಿಗಳನ್ನು ಹೊರಡಿಸಬೇಕಾ ಗುತ್ತದೆ. ಅದಕ್ಕಾಗಿಯೇ ಮೌಖಿಕವಾದ ಮಾಹಿತಿಗಳು ಒಟ್ಟಾರೆಯಾಗಿರುವ ಚರಿತ್ರೆಯ ನಿಲುವಿಗಿಂತ ಹೊರತಾಗಿ ನಮಗೆ ಹೊಳೆಯದ ಕಾಣದ ತಿಳಿಯದ ಇನ್ನೊಂದು ಅರ್ಥವನ್ನು ಬಿತ್ತರಿಸುತ್ತವೆ.

ಶುದ್ಧ ಚರಿತ್ರೆಕಾರನ ದೃಷ್ಟಿಯಲ್ಲಿ ಮೂಢನಂಬಿಕೆಯ ಕಗ್ಗದಂತೆ, ಕಟ್ಟುಕತೆಯಂತೆ, ಹುಸಿ ಸಾಕ್ಷಿಯಂತೆ ಅಚಾರಿತ್ರಿಕ, ಅಪ್ರಬುದ್ಧ ಮಾಹಿತಿಯಂತೆ ಕಾಣುವ ಐತಿಹ್ಯ ಮತ್ತು ಪುರಾಣಗಳು ತಮ್ಮ ನಿಜವಾದ ಅರ್ಥವನ್ನು ಬಚ್ಚಿಟ್ಟು ತಾನು ಅಷ್ಟಾಗಿ ಮೆಚ್ಚದ ವಿವರವನ್ನೇ ಮುಂದೊಡ್ಡುತ್ತವೆ. ಇವನ್ನು ಸರಿಯಾಗಿ ಗ್ರಹಿಸದಿದ್ದರೆ ಚರಿತ್ರೆಯ ಯಾವುದೇ ಶೋಧಕನಿಗೂ ದೇಶೀ ಪರಂಪರೆಯ ವಾಚ್ಯಾರ್ಥ ಮಾತ್ರ ಗೋಚರವಾಗಿ ಸಮುದಾಯಗಳ ಸಾಂಸ್ಕೃತಿಕ ಸೂಚ್ಯಾರ್ಥ ಕಾಣದೆ ಹೋಗುತ್ತದೆ. ಮೌಖಿಕ ಸಾಹಿತ್ಯವು ಚರಿತ್ರೆಯನ್ನು ಅವ್ಯಕ್ತ ಸ್ವಭಾವ ದಲ್ಲಿ ರೂಪಕ ಬೆಳೆಸುವುದರಿಂದ ಗೊಂದಲ ಉಂಟಾಗುತ್ತದೆ. ಲಿಖಿತ ಪರಂಪರೆಯು ಮಾಹಿತಿಯ ಪ್ರಾಮಾಣಿಕತೆಯನ್ನು ಹಸ್ತಪ್ರತಿ, ಶಾಸನ, ಗ್ರಂಥಗಳ ಮೂಲಕ ದಾಖಲಿಸಿದೆ ಎಂದು ಅಧಿಕೃತವಾಗಿ ತೋರಿಕೊಂಡರೂ ಅದು ಭೌತಿಕವಾಗಿ ನಿಜವಾದರೂ ಅದರ ತಿರುಳಿನ ಅರ್ಥದಲ್ಲಿ ಅಪ್ರಮಾಣಿಕತೆಯೆ ಹೆಚ್ಚಿರುತ್ತದೆ. ಹೀಗಾಗಿ ಶಿಷ್ಟ ಚರಿತ್ರೆಯ ಆಧಾರವು ಜಾಣತನದಿಂದ ನಮ್ಮನ್ನು ವಂಚಿಸಿದರೆ ದೇಶಿ ಚರಿತ್ರೆಯ ಸಾಹಿತ್ಯ ಮಾದರಿಗಳು ತಮ್ಮ ಮುಗ್ಧತೆಯಿಂದಲೂ ಭಾವನಾತ್ಮಕ ಕಥನ ರೀತಿಯಿಂದಲೂ ಹಾಗೆಯೆ ಬಚ್ಚಿಟ್ಟುಕೊಳ್ಳುವ ಗುಣದಿಂದಲೂ ನಮ್ಮಿಂದ ಅನ್ಯವಾಗಿ ಉಳಿಯುತ್ತವೆ.

ಮೌಖಿಕ ಚರಿತ್ರೆಯ ಮೂಲಕ ಮಾನವಿಕ ವಿಜ್ಞಾನಗಳನ್ನು ಜೀವಂತಗೊಳಿಸಲು ಸಾಧ್ಯ. ಚರಿತ್ರೆಯ ದೋಷಗಳನ್ನು ಸರಿಪಡಿಸಲು ಮೌಖಿಕ ಸಾಹಿತ್ಯವನ್ನು ಔಷದಿಯಂತೆ ಬೆಳೆಸಿಕೊಳ್ಳಲಾಗುತ್ತಿದೆಯೆ? ಮಾರ್ಗ ಮತ್ತು ದೇಶಿಯಂತೆ ಕಾಣುವ ಇವೆರಡೂ ಜ್ಞಾನ ಪರಂಪರೆಗಳನ್ನು ಯಾವ ರೀತಿಯಲ್ಲಿ ಸಂಲಗ್ನಗೊಳಿಸುವುದು? ಹೀಗೆ ಮಾಡಿದರೆ ಅವು ಒಂದನ್ನೊಂದು ಎಷ್ಟರ ಮಟ್ಟಿಗೆ ಹೊಂದಿಸಿಕೊಳ್ಳುತ್ತವೆ? ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ. ಬದಲಾದ ಕಾಲದ ಸಾಮಾಜಿಕ ನ್ಯಾಯದಿಂದ ಚರಿತ್ರೆಯನ್ನು ವ್ಯಾಖ್ಯಾನಿಸುವುದು ಒಂದು ಅವಕಾಶವಾದರೆ, ನ್ಯಾಯ ಪಡೆದುಕೊಳ್ಳುವ ಸಮುದಾಯಗಳ ಎಲ್ಲ ಅನುಭವಗಳನ್ನೂ, ವ್ಯವಸ್ಥಿತ ಚರಿತ್ರೆಯು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದಲ್ಲವೆ? ಇಂತಹ ಅನುಮಾನಗಳ ಮೂಲಕವೇ ಚರಿತ್ರೆಗೆ ಬೌದ್ದಿಕವಾದ ಸಾಂಸ್ಕೃತಿಕ ಶಕ್ತಿಯನ್ನು ತಂದುಕೊಳ್ಳಬೇಕು. ತಾತ್ವಿಕವಾಗಿ ಇವೆರಡೂ ಮಾದರಿಯ ಅನುಭವಗಳು ಒಂದನ್ನೊಂದು ಹೊಂದಲಾರದಂತೆ ಚರಿತ್ರೆಯ ಅಸ್ಪಷ್ಟತೆಯನ್ನು ಅಳವಡಿಸಿಕೊಂಡು ಬಂದದ್ದನ್ನು ಆಧುನಿಕ ಯುಗದ ಪಲ್ಲಟಗಳಿಂದ ಸರಿಪಡಿಸಿಕೊಳ್ಳಬೇಕಾಗುತ್ತದೆ. ಆ ಮೂಲಕವೆ ಮೌಖಿಕ ಚರಿತ್ರೆ ಒಂದು ಭಾಷೆಯ, ಜನಾಂಗದ, ಸಮುದಾಯದ ಕಾಲದ, ದೇಶದ ನಿರ್ವಚನವಾಗಲು ಸಾಧ್ಯವಾಗುತ್ತದೆ.

ಮೌಖಿಕ ಚರಿತ್ರೆಯ ಅವ್ಯಕ್ತ ಆಕರ

ಈ ಬಗೆಯ ತಾತ್ವಿಕ ಬಿತ್ತಿಗೆ ಹೊಂದಿಕೊಳ್ಳುವ ಸಂಗತಿಗಳೆಂದರೆ

೧. ಆದಿವಾಸಿಗಳ ಪುರಾಣಗಳು.

೨. ಅಲೆಮಾರಿಗಳ ಆದಿವಾಸಿ ಅಸಂಘಟಿತವಾದ ಮುರಿದ ಕತೆಗಳು.

೩. ಕರಕುಶಲ ಸಮುದಾಯಗಳ ಮಾನಯ ದಾಹದ ಸಂವೇದನೆ.

೪. ದಲಿತ ಸಮುದಾಯಗಳ ಆಕರಗಳು.

೫. ಮಾತೃಮೂಲ ಪಿತೃಮೂಲ ನೆಲೆಯ ಕಥನಗಳು.

೬. ಧಾರ್ಮಿಕ ಅಲ್ಪಸಂಖ್ಯಾತ ಅನಾಥ ಗುಂಪುಗಳ ಭಗ್ನ ಮಾಹಿತಿಗಳು.

೭. ಅಲಕ್ಷಿತರ ಚರಿತ್ರೆಯ ನೆನಪುಗಳು.

೮. ಆಚರಣೆ, ನಂಬಿಕೆ ಮತ್ತು ದೈವಗಳು.

೯. ವಿಸ್ಮೃತಿಯ ಸಂಗತಿಗಳು ಮತ್ತು ಅವುಗಳ ಅನುರೂಪಗಳು.

೧೦. ಚರಿತ್ರೆಯ ಸುಳ್ಳುಗಳು.

ಇಂತಹ ವ್ಯಾಪ್ತಿಯನ್ನೂ ಮೀರಿ ನಮಗೆ ಬೇಕಾದ ಶೋಧದ ನೆಲೆಗಳನ್ನು ಪಟ್ಟಿ ಮಾಡಬಹುದು. ಸಮಷ್ಠಿಯಾಗಿ ಹೇಳುವುದಾದರೆ, ತಿರಸ್ಕೃತವಾದ ಮಾನಯ ಮೌಲ್ಯ ಗಳನ್ನು ಹುಡುಕುವ ದಾಹದ ಒಂದು ಪಯಣವಾಗಿ ಇವನ್ನು ಗ್ರಹಿಸಬಹುದು. ಆಧುನಿಕ ಜಗತ್ತಿನ ಲೆಕ್ಕಾಚಾರದಲ್ಲಿ ಅನುಪಯುಕ್ತವೂ ಜಡೆಗೊಂಡ ಏಕಮುಖೀ ಸಂಗತಿಯೂ ಆಗಿರುವ ಇಂತಹ ಅಧ್ಯಯನಗಳನ್ನು ಕೇವಲ ಜಡಗದ್ಯದ ಮೀಮಾಂಸೆಯಿಂದ ವಿಶ್ಲೇಷಿಸಿದರೆ ಮತ್ತಷ್ಟು ಅಸಾಂದರ್ಭಿಕವಾಗಬೇಕಾಗುತ್ತದೆ.

ಈ ಬಗೆಯ ಮಾನಯ ಸಂಗತಿಗಳನ್ನು ಸೃಜನಶೀಲ ಕಥನದ ಕ್ರಮದಲ್ಲಿ ಸಂಕಥಿಸಬೇಕಾದದ್ದು ಈ ಕಾಲದ ಒತ್ತಾಸೆಯಾಗಿದ್ದೂ ಒಟ್ಟು ಮಾನವಿಕ ಶಾಸ್ತ್ರಗಳು ಕ್ರಿಯಾಶೀಲ ನಿರೂಪಣೆಯಿಂದಲೂ ಸೂಕ್ಷ್ಮ ಸಂವೇದನೆಯ ಭಾವನಾತ್ಮಕ ತರ್ಕದಿಂದಲೂ ಒಟ್ಟು ತಮ್ಮ ಸ್ವರೂಪವನ್ನೆ ಬದಲಿಸಿಕೊಂಡು ತನ್ನ ಶಾಖೆಯ ಜ್ಞಾನವನ್ನು ಮಾನಯ ಸಂವೇದನೆಯ ಗದ್ಯದಿಂದ ಕಾವ್ಯ ಸೂಕ್ಷ್ಮದ ಧ್ವನಿಯಿಂದ ನಿರೂಪಿಸಬೇಕಾಗುತ್ತದೆ. ಗತಿಸಿಹೋದದ್ದು ಭೌತಿಕವಾಗಿ ಮಾತ್ರವಾಗಿದ್ದರೂ ಅದರ ಪರಿಣಾಮ ಜೀವಂತವಿರುತ್ತದೆ. ಹಾಗಾಗಿ ಚರಿತ್ರೆಯ ಯಾವುದೇ ಅನುಭವವನ್ನು ಪುನರ್ ಸೃಷ್ಠಿಸಿಕೊಡಬೇಕಾದಾಗ ನಾವು ಚರಿತ್ರೆಯ ಗದ್ಯವನ್ನು ಅಂದರೆ ಅದರ ಪರಿಣಾಮವನ್ನು ಜೀವಂತ ಶೈಲಿಯಲ್ಲೇ ಹೇಳಬೇಕಾಗುತ್ತದೆ. ಗತಿಸಿಹೋದದ್ದು ಜೀವಂತವಾಗುವುದು ಸಮಕಾಲಿನ ಚಹರೆಯ ಅಗತ್ಯದ ಅನುಸಂಧಾನದಿಂದಲೇ. ಯಾಕೆಂದರೆ ಎಲ್ಲ ಭಾಷೆಗಳ ಸಂಸ್ಕೃತಿಯು ರೂಪಕಗಳ ಮೂಲಕವೆ ತನಗೆ ಬೇಕಾದ ಅರ್ಥಜಗತ್ತನ್ನು ಪುನರ್ ಸೃಷ್ಟಿಸುತ್ತ ಸಾಗುವುದು.

ಆದಿಮ ಯುಗದ ಚಿತ್ರ ಲಿಪಿಯಾಗಲಿ ಆಚರಣೆಗಳಾಗಲಿ ಇಲ್ಲವೆ ಆದಿವಾಸಿಗಳ ಚಿತ್ರಕಲೆಯಾಗಲೀ ಇವತ್ತಿನ ಜನಪದರ ಸಾಹಿತ್ಯಿಕ ರೂಪಕಗಳಾಗಲಿ ಆಳದಲ್ಲಿ ಮನುಷ್ಯ ಸಂವೇದನೆಯ ವಿಕಾಸವನ್ನು ಒಳಗೊಂಡಿರುತ್ತವೆ. ಮೇಲು ಗ್ರಹಿಕೆಗೆ ಒಂದರ ಸಂಗತಿ ಇನ್ನೊಂದಕ್ಕೆ ಹೊರತಾದಂತೆ ಕಂಡರೂ ಮಾನವರ ದೈಹಿಕ ವಿಕಾಸದಲ್ಲಿ ಉಂಟಾಗಿರುವ ಸಂಬಂಧದಂತೆಯೆ ಸಂಸ್ಕೃತಿಯ ವಿಚಾರಗಳ ಸಂದರ್ಭದಲ್ಲೂ ಅಂತರ್‌ಸಂಬಂಧೀ ವಿಕಾಸವು ಘಟಿಸಿರುತ್ತದೆ. ಈ ಒಂದೊಂದು ಮಾಹಿತಿಯೂ ಚರಿತ್ರೆಯ ಜೊತೆ ರಕ್ತ ಸಂಬಂಧವನ್ನು ಸಾಧಿಸಿರುತ್ತದೆ. ಇವನ್ನು ಶೋಧಿಸುವಾಗ ಚರಿತ್ರೆಯ ಬಹುರೂಪಗಳನ್ನು ಸಂವೇದನೆಗೆ ಒಗ್ಗಿಸಿಕೊಳ್ಳಬೇಕಾಗುತ್ತದೆ.

ಮೌಖಿಕ ಚರಿತ್ರೆಯು ತನಗೆ ಬೇಕಾದ ಬಲವನ್ನು ಈ ಹಾದಿಯಲ್ಲೇ ಆಯ್ಕೆ ಮಾಡಿಕೊಂಡಿರುತ್ತದೆ. ಜನಪದ ಮಹಾಕಾವ್ಯಗಳ ಭಾಷೆಗೆ ಕಾಲದ ವಿವಿಧ ಘಟ್ಟಗಳನ್ನು ಸರಿದೂಗಿಸಿಕೊಳ್ಳುವ ಶಕ್ತಿಯಿರುತ್ತದೆ. ಲಿಖಿತ ಇತಿಹಾಸ ಕಾಲವನ್ನು ಏಕ ಘಟಕಗಳಾಗಿ ಪರಿಭಾವಿಸಿದರೆ ಮೌಖಿಕ ಸಾಹಿತ್ಯವು ಬಹು ಆಕಾರಗಳಲ್ಲಿ ಕಾಲವನ್ನು ಸಮಷ್ಠಿ ಬಿಂಬಗಳಲ್ಲಿ ಧ್ವನಿಸುತ್ತದೆ. ಪ್ರಾಚೀನ ಇತಿಹಾಸಕಾರರಿರಲಿ, ಆಧುನಿಕ ಚರಿತ್ರಕಾರರಿರಲಿ ಯಾವುದೇ ಮಾನವಿಕ ಶಾಸ್ತ್ರದ ಚಿಂತಕರಾಗಲಿ ಇಲ್ಲವೆ ವಿಜ್ಞಾನಿಯಾಗಿರಲಿ ಅವರು ನಂಬಿದ ಜಗತ್ತಿನ ಪರಿಕರಗಳನ್ನು ಹೊರಗಿಟ್ಟು ಇರುವ ಅಸ್ತಿತ್ವದ ಮೂಲಕ ಶೋಧಿಸುತ್ತಾ ಸಾಗಿದರೆ, ಬಹುಶಃ ಕಾಲದ ಚಲನೆಯಲ್ಲಿ ಉಂಟಾದ ಅರ್ಥರೂಪಾಂತರಗಳನ್ನು ಗ್ರಹಿಸಬಹುದು.

ಇಲ್ಲದಿದ್ದರೆ ಇಂತಹ ಮಾನಯ ವಿವರಗಳನ್ನು ಬಲಪಂಥೀಯ ಸಂಗತಿಗಳ ಸಂವರ್ಧನೆಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಪ್ರಾಚೀನ ಇತಿಹಾಸ ವೆಂದರೆ ಅದು ಯಾವುದೊ ಒಂದೊಂದು ಯುಗದ ವ್ಯಾಪ್ತಿಗೆ ಮಾತ್ರ ಸೇರಿದ್ದೆಂದು ಭಾವಿಸದೆ ಅದು ಇರುವ ಇವತ್ತಿನ ಯುಗಕ್ಕೂ ಅನ್ವಯವಾಗುವಂತದೆಂದು ವಿಸ್ತರಿಸಿಕೊಂಡಾಗ ಗತದ ಜೋಡಣೆಯಲ್ಲಿ ಸಮಕಾಲೀನತೆ ಉಂಟಾಗುತ್ತದೆ. ಶಿಲಾಯುಗದ ಆವಿಸ್ಕಾರಗಳಿಗೆ ಒಂದು ಮೌಖಿಕ ಚರಿತ್ರೆ ಹುಟ್ಟಿ ಅದು ಎಲ್ಲೊ ಕರಗಿದ್ದರೆ ಮಧ್ಯಯುಗದ ಇನ್ನಾವುದೊ ಶಾಸನದಲ್ಲಿ  ಅದರ ಪ್ರತಿಧ್ವನಿ ತಾತ್ವಿಕವಾಗಿ ಕವಲೊಡೆದಿರುತ್ತದೆ. ಅಂತೆಯೆ ಇವತ್ತಿನ ಶತಮಾನದ ಈ ಯುಗವು ಬೆಳೆದಿರುವುದು ಸಹ ಚರಿತ್ರೆಯಲ್ಲಾದ ಹಲವು ಬಗೆಯ ಆವಿಷ್ಕಾರ ಮತ್ತು ಅದನ್ನೆಲ್ಲ ನೆನಪಿನ ವಿವಿಧ ಧಾರೆಗಳಲ್ಲಿ ಹಿಡಿದಿಟ್ಟ ಸಮಷ್ಟಿಯಿಂದ. ಹೀಗಾಗಿ ಜನಪದ ಪರಂಪರೆಯ ಮೌಖಿಕ ಪರಂಪರೆಗಳು ಖಚಿತವಾದ ಸಾಕ್ಷಿಯನ್ನು ಹೇಳದಿದ್ದರೂ ಚರಿತ್ರೆಯ ತಿರುಳನ್ನು ಮಾತ್ರ ಧ್ವನಿಸುತ್ತಿರುತ್ತವೆ.

ಲಿಖಿತದ ಮಿತಿಯನ್ನು ಮೌಖಿಕವು ತುಂಬುವುದು

ಶಿಷ್ಟ ಚರಿತ್ರಯು ಯಾವುದನ್ನು ಹೇಳಲು ಸಾಕ್ಷೀಕರಿಸಲು ದಾಖಲಿಸಲು ಸಾಧ್ಯವಾಗುವುದಿಲ್ಲವೊ ಅಂತಲ್ಲಿ ಮೌಖಿಕ ಸಾಹಿತ್ಯವು ಆ ಲಿಖಿತ ಚರಿತ್ರೆಯ ಮೌನವನ್ನೂ ಮಿತಿಯನ್ನೂ ಶೂನ್ಯವನ್ನೂ ತುಂಬಿಕೊಡುತ್ತದೆ. ಅಂದರೆ ಅಲಿಖಿತ ಸಾಹಿತ್ಯ ರೂಪಗಳು ಯಾವುದೆ ಸೂತಕವಿಲ್ಲದೆ ತನ್ನ ಅನುಭವವನ್ನು ಮಾನವೀಕರಣದ ಕಥನಗಳಿಂದ ಆಯಾ ಕಾಲವನ್ನು ನಿರೂಪಿಸುತ್ತವೆ. ಆದ್ದರಿಂದಲೆ ಮೌಖಿಕ ಸಾಹಿತ್ಯದ ಮೂಲ ಗುಣವೆಂದರೆ ಅದು ಮಾತೃತ್ವ ವನ್ನು ಅಡಗಿಸಿಕೊಂಡಿರುವಂತದ್ದು. ಹೀಗಾಗಿಯೇ ಬಹುರೂಪಿ ಚರಿತ್ರೆಯ ಪಠ್ಯಗಳನ್ನು ಸಮುದಾಯದ ಮಧ್ಯೆ ಸೃಷ್ಟಿಸುವುದು.

ಮೌಖಿಕ ಚರಿತ್ರೆಗೆ ಮೌಖಿಕ ಸಾಹಿತ್ಯವನ್ನು ಬಳಸಿಕೊಂಡು ತಮ್ಮದೇ ಆದ ಒಂದು ಚರಿತ್ರೆಯನ್ನು ಬಲಪಡಿಸಿಕೊಳ್ಳಬೇಕೆಂಬ ಪ್ರಜ್ಞೆ ಮೂಲತಃ ಬಂದದ್ದಾದರೂ ಅದು ಯುರೋಪಿನ ಮೂಲಕವೇ. ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಸಂಯುಕ್ತ ಸಂಸ್ಥಾನದ ಬಹು ಮೂಲದ ಸಮುದಾಯಗಳಿಗೆ ಒಂದೊಂದು ಚರಿತ್ರೆ ಬೇಕಿತ್ತಾದರೂ ಅವರಿಗೆ ಖಚಿತವಾದ ದೀರ್ಘವಾದ ಸಮಷ್ಠಿಯಾದ ಚರಿತ್ರೆಯೆ ಇರಲಿಲ್ಲ. ವಿವಿಧ ನೆಲೆಗಳಿಂದ ವಲಸೆಹೋಗಿ ಅಮೆರಿಕಾ ಖಂಡದಲ್ಲಿ ನೆಲೆಸಿದ ಯುರೋಪಿಗರಿಗೆ ಸಿಕ್ಕಿದ ಚೂರು ಪಾರು ಮಾಹಿತಿ ಎಂದರೆ ಸಮೀಪದ ಗತದ ಒಂದಿಷ್ಟು ವಲಸೆಯ ನೆನಪುಗಳು ಮಾತ್ರ. ಆ ಮೂಲಕ ಚರಿತ್ರೆಯಲ್ಲಿ ಹೊಸ ಬಗೆಯ Oral History ಎಂಬ ಪರಿಕಲ್ಪನೆಯನ್ನು ೧೯೩೦ರ ವೇಳೆಯಲ್ಲಿ ಸೃಷ್ಟಿಸಿದರು. ಮೌಖಿಕ ಚರಿತ್ರೆಯನ್ನು ಈ ಬಗೆಯಲ್ಲಿ ಬಲವಾಗಿ ಮಂಡಿಸಿದಾತ ಅಲೆನ್ ಸಿವಿನ್ಸ್. ಇವನನ್ನು Father of oral history ಎಂತಲೂ ಕರೆಯುತ್ತಾರೆ. ಅಮೆರಿಕಾದ ಜಾನಪದ ವಿದ್ವಾಂಸರಂತೂ ಚೂರು ಪಾರು ಮೌಖಿಕ ಕಥನಗಳನ್ನೇ ಮುಂದಿಟ್ಟುಕೊಂಡು ಮೌಖಿಕ ಚರಿತ್ರೆಯ ಸಿದ್ದಾಂತಗಳನ್ನೆ ಮಂಡಿಸಿದ್ದಾರೆ. ವಿಚಿತ್ರ ಎಂದರೆ ಅಂತಹ ಖಚಿತ ಚರಿತ್ರೆಯ ಪರಂಪರೆ ಇಲ್ಲದಿದ್ದಾಗ್ಯೂ ಅವರ ಇಂತಹ ಮೌಖಿಕ ಚರಿತ್ರೆಯ ನಿರ್ಮಾಣದ ಯತ್ನವು ಆದರ್ಶವಾದದ್ದೇ. ವ್ಯಕ್ತಿ ಚರಿತ್ರೆ, ಸಮುದಾಯ ಚರಿತ್ರೆ, ಪ್ರಾದೇಶಿಕ ಚರಿತ್ರೆ, ಮೌಖಿಕ ಚರಿತ್ರೆಯ ಬಗೆಗಿನ ಅಮೆರಿಕನ್ ಚರಿತ್ರೆಕಾರರ ನಿಲುವಿಗೂ ನಮ್ಮ ತಾತ್ವಿಕ ನೆಲೆಗೂ ತುಂಬ ಅಂತರಗಳಿವೆ.

ಪಶ್ಚಿಮದ ಪ್ರಯತ್ನದ ಹೊರತಾಗಿ ಇಂತಹ ಮೌಖಿಕ ಮಾಹಿತಿಗಳನ್ನು ಅವುಗಳ ತಾತ್ವಿಕಾಂಶಗಳನ್ನು ನಮ್ಮ ಜ್ಞಾನ ಶಾಖೆಗಳಿಗೆ ರೂಪಿಸಿಕೊಳ್ಳುವ ಅವಕಾಶಗಳು ಯಥೇಚ್ಛ ವಾಗಿದ್ದರೂ ಅವನ್ನು ಬೆಳೆಸುವಲ್ಲಿ ಅನೇಕ ಇಕ್ಕಟ್ಟುಗಳಿವೆ. ಖಚಿತವಾದ ವಿವೇಕವಿಲ್ಲದೆ ಈ ಮಾಹಿತಿಗಳನ್ನು ಅಂತರ್‌ಶಿಸ್ತೀಯ ಸ್ವಭಾವದಿಂದ ರೂಢಿಸಿಕೊಂಡರೆ ಚರಿತ್ರೆಯನ್ನು ಸಂಸ್ಕೃತಿಯನ್ನು ವಿಕಾರಗಳಿಂದ ಅರ್ಥೈಸಿದಂತಾಗುತ್ತದೆ. ಮೌಖಿಕ ಪರಂಪರೆಗಳು ಯಾವ ಬಗೆಯ ಮಾನವ ಸಂಬಂಧಗಳನ್ನು ನಿರೂಪಿಸುತ್ತವೆ ಎಂಬ ಎಚ್ಚರ ಕೂಡ ಮುಖ್ಯ. ಇವನ್ನು ಸೂಕ್ತವಾಗಿ ಅರಿಯದಿದ್ದರೆ ಲಿಖಿತ ಚರಿತ್ರೆಯಲ್ಲಿ ಉಂಟಾದ ದೋಷಗಳಿಗಿಂತಲೂ ಅಧಿಕ ವಾಗಿ ಮೌಖಿಕ ಚರಿತ್ರೆಯನ್ನು ಪುನರ್ ರೂಪಿಸಿವುದರಲ್ಲೇ ಉಂಟಾಗುತ್ತವೆ. ಆದ್ದರಿಂದ ಮೌಖಿಕ ಸಾಹಿತ್ಯವನ್ನು ನೆನಪಿನ ಪ್ರಜ್ಞೆಯ ರೂಪಕಗಳಲ್ಲಿ ಹಿಡಿಯಬೇಕಾಗುತ್ತದೆ. ಸಮುದಾಯಗಳ ಸಾಂಸ್ಕೃತಿಕ ಮನಸ್ಸು ರೂಪಿಸುವ ಚರಿತ್ರೆಗೂ ಪ್ರಭುತ್ವ ದಾಖಲಿಸುವ ಚರಿತ್ರೆಯ ವಿವರಗಳಿಗೂ ಇದರಿಂದಲೇ ಅಂತರ್ ಬಿರುಕು ಉಂಟಾಗುವುದು. ಇವನ್ನು ಯಾವ ಅಳತೆಯಲ್ಲಿ ಯಾವ ಕ್ರಮದಲ್ಲಿ ಯಾರ ಧ್ವನಿಯಲ್ಲಿ ಎಲ್ಲಿ ಸಂಧಿಸಿ ಸಂಯೋಗಿಸಬೇಕೆಂಬುದು ಶೋಧಕನಿಗೆ ಬಿಟ್ಟ ಸವಾಲು. ಇಂತಹ ಸವಾಲು ಸಮುದಾಯದ ವಿವೇಕವನ್ನು ದಾಖಲಿಸುವಂತದಾಗಿದ್ದೂ ಪರಂಪರೆಯ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಅಂತರ್ ಶಿಸ್ತೀಯ ಅಧ್ಯಯನದ ಶೋಧನೆಯೂ ವ್ಯರ್ಥ ಕಸರತ್ತಾಗಿ ಬಿಡಬಲ್ಲದು.

ಮೌಖಿಕ ಚರಿತ್ರೆಯ ಸಂವೇದನೆಯು ಸಂಕೀರ್ಣವಾದದ್ದು. ಅದರ ರಚನೆ ಸರಳವಾಗಿ ಕಂಡರೂ ಒಳಗಿನ ತಿರುಳು ಸಲೀಸಾಗಿ ಹಿಡಿತಕ್ಕೆ ಸಿಗದು. ಮೌಖಿಕ ಚರಿತ್ರೆಯ ರಚನಾ ವಿನ್ಯಾಸದ ವೇಳೆ ಕೆಳಕಂಡ ಅಂಶಗಳನ್ನು ಮನವರಿಕೆ ಮಾಡಿಕೊಳ್ಳಬೇಕಾದದ್ದು ಬಹಳ ಮುಖ್ಯವಾಗಿದೆ.

  • ಬಹುರೂಪಿ ಪರ್ಯಾಯ ಚಿಂತನೆ.
  • ಚರಿತ್ರೆಯನ್ನು ವಿಕೇಂದ್ರೀಕರಿಸಿ ನಿರೂಪಿಸುವ ಪ್ರಜ್ಞೆ.
  • ನಿಸರ್ಗದ ಮೂಲಕ ಸಂಸ್ಕೃತಿಯ ವಿವರಗಳಿಂದ ಚರಿತ್ರೆಯನ್ನು ಮಾನವೀಕರಣಗೊಳಿಸುವ ರೀತಿ.
  • ಕಥನ ಸಾಕ್ಷಿಯಿಂದಲೆ ರೂಪಕಗಳಿಂದ ನಿರೂಪಿಸುವ ಕ್ರಮ.
  • ಅರ್ಥಗಳನ್ನು ಬಚ್ಚಿಟ್ಟು ವಾಚ್ಯಾರ್ಥವನ್ನು ನಿಜವೆಂಬಂತೆ ತೋರುವ ಬಗೆ.
  • ಚರಿತ್ರೆಯ ದುರಂತವನ್ನು ಪ್ಯಾಂಟಸಿಯ ಸುಖಾಂತದಲ್ಲಿ ದಾಖಲಿಸುವ ಕೌಶಲ್ಯ.
  • ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಚರಿತ್ರೆಯ ಪ್ರಜ್ಞೆಯನ್ನು ವಿಸ್ತರಿಸುವ ಆಶಯ.
  • ಪ್ರಾದೇಶಿಕ ವಿವರಗಳಿಂದಲೆ ರಾಷ್ಟ್ರೀಯ ರೂಪಕವನ್ನು ನಿರ್ಮಿಸುವ ಜಾಣ್ಮೆ.
  • ಕಾಲಾತೀತ ಕಲ್ಪನೆಯನ್ನು ಬಿತ್ತುವ ಗುರಿ.

ಈ ನೆಲೆಗಳಿಂದ ಮೌಖಿಕ ಪರಂಪರೆಯನ್ನು ನಿರೂಪಿಸಿಸಿಕೊಳ್ಳುತ್ತಲೇ ಚರಿತ್ರೆಯ ಕಥನದ ಆಳವನ್ನೂ ಪ್ರವೇಶಿಸಬಹುದು. ಜಾನಪದ, ಪುರಾತತ್ವ, ಬುಡಕಟ್ಟು ಅಧ್ಯಯನ ಹಾಗೆಯೆ ಸಂಬಂಧಿತಿ ಶಾಖೆಗಳಾದ ಹಸ್ತಪ್ರತಿ, ಶಾಸನಶಾಸ್ತ್ರ ಮುಂತಾದವುಗಳ ಅಂತರಂಗಕ್ಕೂ ಈ ತಾತ್ವಿಕಾರ್ಥಗಳನ್ನು ಸಂಯೋಗಿಸಿದರೆ ಹಳೆಯ ಅರ್ಥಗಳ ಸೂತಕಗಳು ಕಳಚಿ ಹೊಸ ಧ್ವನಿಗಳು ತಂತಾನೆ ಸಾಧ್ಯವಾಗುತ್ತವೆ.

ಆಚರಣೆಗಳು ಅತಿ ಪ್ರಾಚೀನ ಆಕರಗಳು

ಯಾವುದೆ ಜ್ಞಾನಶಿಸ್ತು ಸಮಕಾಲೀನ ಅಗತ್ಯದ ಜೊತೆಯೆ ತನ್ನ ಇರುವಿಕೆಯನ್ನೂ ಕಂಡುಕೊಳ್ಳಬೇಕಾಗುತ್ತದೆ. ಪುರಾತತ್ವ ಅಧ್ಯಯನವು ಆದಿಮ ಯುಗವನ್ನು ಅದರ ಅರಿವಿನ ತತ್ವಾಂಶಗಳನ್ನು ನಡೆದು ಬಂದ ಹಾದಿಯ ಮಾರ್ಪಾಟುಗಳನ್ನು ಆಧುನಿಕ ಗದ್ಯದಲ್ಲಿ ಚಹರೆಯಲ್ಲಿ ಹೇಳಬೇಕಾದರೆ ಅದಕ್ಕೆ ಚರಿತ್ರೆಯ ಸಮಷ್ಠಿ ಅನುಭಾವವೇ ಮುಖ್ಯ. ಮೌಖಿಕ ಸಾಹಿತ್ಯವು ಇಂತಹ ಅಭಿವ್ಯಕ್ತಿಯನ್ನು ಕಂಡುಕೊಂಡಿದ್ದರಿಂದಲೇ ಚರಿತ್ರೆಯ ಬಹುಪಠ್ಯಗಳು ಹುಟ್ಟಿಕೊಳ್ಳಲು ಸಾಧ್ಯವಾದದ್ದು. ನೆನ್ನೆಯನ್ನು ಇವತ್ತಿನ ಸ್ಥಿತಿಯಾಗಿಸುವ ಇವತ್ತಿನ ಅಸ್ತಿತ್ವವನ್ನು ಕಾಲದ ನಾಳೆಯನ್ನಾಗಿಸುವ ಮತ್ತು ಕಾಲದ ಪಲ್ಲಟಗಳನ್ನು ತನಗೆ ಬೇಕಾದಂತೆಲ್ಲ ವಿಸ್ತರಿಸುವ ಕೊಡುವ ಕಳೆಯುವ ಸಂಕೀರ್ಣವಾದ ಒಂದು ವ್ಯವಸ್ತೆಯನ್ನು ಜನಪದ ಲೋಕವು ಮಾಡಿಕೊಂಡು ಆ ಮೂಲಕ ತನ್ನ ಪರಂಪರೆಯನ್ನು ಪರಿಶೀಲಿಸುತ್ತದೆ.

ಆದ್ದರಿಂದಲೆ ಮೌಖಿಕ ಚರಿತ್ರೆಯನ್ನು ನಮ್ಮ ಬದುಕಿನ ಜೊತೆ ಸಮೀಕರಿಸುವುದು ಸುಲಭವಾಗುವುದು. ಲಿಖಿತ ಚರಿತ್ರೆಯ ಅನುಭಾವವನ್ನು ಅಲಿಖಿತ ಇತಿಹಾಸದ ಪ್ರಜ್ಞೆಯನ್ನು ಬೆಸೆಯುವುದು ಈ ಹಾದಿಯ ಮತ್ತೊಂದು ಸವಾಲು. ಹಾಗೆ ನೋಡಿದರೆ ಅನುಸಂಧಾನದ ಆನ್ವಯಿಕತೆ ಇರುವುದು ಚರಿತ್ರೆಯ ಅಥವಾ ಮೌಖಿಕ ಸಾಹಿತ್ಯದ ಹಳೆಯ ಸಂಗತಿಗಳಲ್ಲಲ್ಲ. ಅವನ್ನು ಇವತ್ತಿನ ಸಂದರ್ಭದಲ್ಲೇ ತಂದುಕೊಂಡು ಮಾಹಿತಿಯನ್ನು ಪರಿಶೀಲಿಸುತ್ತಲೆ ಇವತ್ತಿನ ಅಗತ್ಯದಿಂದಲೆ ಅಳೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನಾಯಕರ ಸುತ್ತಲಿನ ವಿವರಗಳನ್ನು ಗಮನಿಸಿದರೆ ಪುರಾತತ್ವೀಯ ಹೊರ ರಚನೆ ಇವುಗಳಲ್ಲಿ ಕಾಣದಿದ್ದರೂ ಪುರಾತನ ಮನಸ್ಸು ಮತ್ತು ಆ ಬಗೆಯ ಗುಣಗಳು ಸಾಕ್ಷಿಯ ಆಧಾರದ ಮಾಹಿತಿಯ ಆಚೆ ನಿಂತು ಕ್ರಿಯಾಶೀಲವಾಗಿರುವುದು ಕಾಣುತ್ತದೆ. ಆದ್ದರಿಂದಲೆ ಮಲೆಮಾದೇಶ್ವರ ಕಾವ್ಯವು ಅರ್ಥದಲ್ಲಿ ಪರಂಪರೆಯ ಪುರಾತತ್ವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವುದು. ಬಹುಪಾಲು ಪುರಾತತ್ವ ಅಧ್ಯಯನಕಾರರು ಇಂತಹ ಕಾವ್ಯ ಗಳಿಗೂ ತಮಗೂ ಯಾವ ಸಂಬಂಧವೂ ಇಲ್ಲ ಎಂದು ಭಾವಿಸಿರುತ್ತಾರೆ. ಇವೆಲ್ಲ ಜಾನಪದ ವ್ಯಾಪ್ತಿಯ ಸಂಗತಿಗಳೆಂದು ಉಪೇಕ್ಷಿಸುತ್ತಾರೆ. ಪುರಾತತ್ವ ಇಲಾಖೆಗೆ ಈ ಬಗೆಯ ಮೌಖಿಕ ಕಾವ್ಯಗಳು ಬೇಡದಿದ್ದರೂ ಪುರಾತತ್ವ ಶೋದಕನಿಗೆ ಇಂತಹ ಅಲಕ್ಷಿತ ಸಂಗತಿಗಳು ಬಹಳ ಮುಖ್ಯವಾದ ಸಾಕ್ಷಿಯನ್ನು ಒದಗಿಸುತ್ತಿರುತ್ತವೆ.

ಮಲೆಮಾದೇಶ್ವರ ಕಾವ್ಯ ಆಚರಣೆಗಳಲ್ಲಿ ಪುರಾತತ್ವೀಯ ಅಂಶಗಲನ್ನೂ ನಮಗೆ ಬೇಕಾದ ರೀತಿಯಲ್ಲಿ ಹುಡುಕಬೇಕು. ಅವುಗಳ ಐತಿಹ್ಯ ನಂಬಿಕೆ ಆಚರಣೆ ಮತ್ತು ಪುರಾಣಗಳಲ್ಲಿ ಪುರಾತತ್ವೀಯ ಗುಣಗಳಿರುತ್ತವೆ. ಒಬ್ಬ ಜನಪದ ಕಾವ್ಯಗಾಯಕನಿಗೆ ಪರಂಪರೆಯ ಪಠ್ಯ ಮತ್ತು ಅದರ ಮಾನಸಿಕ ವಿಕಾಸದ ಕ್ರಮಗೊತ್ತಿರುತ್ತದೆ. ಐತಿಹ್ಯದ ಹೊರ ರಚನೆಯಲ್ಲಿ ಕಾವ್ಯದ ಮೇಲ್ ಪದರಿನಲ್ಲಿ ಅತಿಮಾನುಷ ಸ್ವರೂಪವಿದ್ದರೆ ಅದನ್ನು ತನ್ನ ಕಾಲದ ರೂಪಕಗಳಿಗೆ ಅರ್ಥಾಂತರ ಮಾಡಿಕೊಳ್ಳಬೇಕಾದ ಸಂಯುಕ್ತ ಶೈಲಿಯನ್ನು ನಾವೇ ಕಂಡುಕೊಳ್ಳ ಬೇಕಾಗುತ್ತದೆ. ಐತಿಹ್ಯಗಳು ಜನಮಾನಸದ ಅನುಶಾಸನಗಳು. ಅವರ ಆಚರಣೆಗಳು ಜನಾಂಗದ ಸುಪ್ತ ಸಾಕ್ಷಿಯ ಸಂಕೀರ್ಣ ರೂಪಗಳು. ಹಾಗೆಯೆ ಅವರ ನಂಬಿಕೆಗಳು ಪ್ರಾಚೀನ ಪೂರ್ವ ಇತಿಹಾಸದ ಕುರುಹುಗಳು. ಆಚರಣೆ, ನಂಬಿಕೆ, ಸಂಪ್ರದಾಯ, ವಿಧಿ ನಿಷೇಧಗಳು ಆದಿಮ ಸಮಾಜದ ಚಾರಿತ್ರಿಕ ಸಂಕೇತ ಪ್ರತಿಮೆಗಳಾಗಿವೆ. ಇವನ್ನು ಪ್ರಾಚೀನ ಚರಿತ್ರಕರ ವರ್ತಮಾನದ ಜನಪದರ ಜೀವನ ಶೈಲಿಯಲ್ಲೆ ಸರಳವಾಗಿ ಕಂಡುಕೊಳ್ಳಬಹುದು. ಶಿಲಾಯುಗದ ಕುರುಹುಗಳನ್ನು ಭೌತಿಕವಾಗಿ ಕಂಡುಕೊಳ್ಳುವುದಕ್ಕಿಂತಲೂ ಹೇಗೆ ಒಂದು ನಂಬಿಕೆ ಆಚರಣೆ ಜೀವಂತವಾಗಿ ಆದಿಯುಗದ ಜೀವನವನ್ನು ಹೊತ್ತುತಂದಿದೆ ಎಂಬುದನ್ನು ಗುರುತಿಸುವುದು ಮುಖ್ಯ. ಇವನ್ನು ತಿಳಿಯಲು ಪ್ರಾಕ್ತನ ಶಾಸ್ತ್ರಜ್ಞ ಆಳವಾಗಿ ಏನನ್ನೂ ಅಗೆದು ಬಗೆದು ಹುಡುಕಬೇಕಿಲ್ಲ. ತಂತಾನೆ ಗ್ರಾಮ ಸಮಾಜದಲ್ಲಿ ಇವೆಲ್ಲ ಇಟ್ಟಾಡುತ್ತಿ ರುತ್ತವೆ. ಶಾಸನಗಳನ್ನು ಅಷ್ಟೊಂದು ಕಷ್ಟಪಟ್ಟು ಪತ್ತೆ ಮಾಡುವ ಶಾಸ್ತ್ರಜ್ಞರು ಅಂತಹ ಶಾಸನಗಳ ಅನುಶಾಸನದಂತೆ ಜಾಗೃತವಾಗಿ ಜೀವನಕ್ರಮವೇ ಆಗಿ ಹೋಗಿರುವ ಮೌಖಿಕ ಪರಂಪರೆಗಳನ್ನು ನೋಡಲು ಮುಂದಾಗಿರುವುದಿಲ್ಲ. ಐತಿಹ್ಯ ಸ್ಥಳ ಪುರಾಣ, ಆಚರಣೆ, ಜಾತ್ರೆ, ಉತ್ಸವ, ಹಬ್ಬ ಮುಂತಾದ ಸಂಪ್ರದಾಯಗಳೆಲ್ಲ ಪ್ರಾಚೀನ ಪೂರ್ವ ಇತಿಹಾಸದ ಜೀವಂತ ಸಾಕ್ಷ್ಯಗಳು. ಮೌಖಿಕ ಚರಿತ್ರೆಯ ನಿರೂಪಣೆಗೆ ಇಷ್ಟೊಂದು ಆಕರಗಳಿದ್ದರೂ ಸಾಕ್ಷ್ಯವೇ ಇಲ್ಲ ಎಂದು ಭಾವಿಸುವವರಿಗೆ ಭಿನ್ನ ಕಣ್ಣೋಟವಿರಬೇಕು.

ಜೀವಂತ ಸಾಕ್ಷ್ಯಾಚರಣೆಯ ನಿರ್ಲಕ್ಷ್ಯ

ಆಚರಣೆಗಳು ಪಶುಪಾಲಕ ಸಮಾಜದಿಂದಲೂ ನಿಸರ್ಗದ ಜೊತೆ ಸಾಗಿ ಬಂದಿರುತ್ತವೆ. ಪ್ರಾಚೀನ ಇತಿಹಾಸ ಇತ್ತ ಮುಖಮಾಡಿದರೆ ಅದಕ್ಕೆ ಜನಪದ ಪರಂಪರೆಗಳ ಚಾರಿತ್ರಿಕ ಪ್ರಜ್ಞೆ ಅರಿವಾಗುತ್ತದೆ. ಕೃಷಿಯ ಆಚರಣೆಗಳು ಸಾಮ್ರಾಜ್ಯಕಾಲ ಘಟ್ಟದವಲ್ಲ. ಹಾಗಾಗಿ ಕೃಷಿ ಪರಂಪರೆಗಳು ರೂಪಿಸಿಕೊಂಡ ನಂಬಿಕೆ, ಸಂಪ್ರದಾಯಗಳು ಆರ್ವಾಚೀನ ಕಾಲದ ಸಾಕ್ಷಿಗಳಾಗಿ ಉಳಿದುಬಂದಿರುತ್ತವೆ. ಇಂತಹ ಆಚರಣೆಗಳು ಚರಿತ್ರೆಯ ಕಾಲವನ್ನು ಅಖಂಡವಾಗಿ ಭಾವಿಸುವುದರಿಂದ ಕಾಲವನ್ನು ಭೂತ ವರ್ತ ಭವಿಷ್ಯ ಎಂದು ವಿಂಗಡಿಸಿರುವುದಿಲ್ಲ. ನಿರ್ಜೀವ ಶಾಸನಕ್ಕೆ ಜೀವಬರುವುದು ಚರಿತ್ರೆಕಾರನ ಪ್ರತಿಭೆಯಿಂದ. ಆದರೆ ಜೀವಂತ ಆಚರಣೆಗಳು ಚರಿತ್ರೆಕಾರನ ಅರಿವಿನ ಹಂಗಿಗೆ ಒಳಪಡದೆ ಜನಪದರ ಪ್ರಜ್ಞೆಯಲ್ಲೆ ಸೇರಿ ಕೊಂಡಿರುತ್ತವೆ. ಕಾಲದ ನಿರ್ದಿಷ್ಟತೆಯು ಜೀವನ ದರ್ಶನಕ್ಕೆ ಬೇಕಿಲ್ಲ. ಕಾಲ ನಿರಂತರವಾದ್ದರಿಂದ ಆಚರಣೆಗಳು ಕಾಲಾತೀತ ಮೌಲ್ಯಗಳ ಕಡೆಗೆ ಮಾನವ ಪ್ರಜ್ಞೆಯನ್ನು ಸಾಗಿಸುತ್ತಿ ರುತ್ತವೆ. ಇದನ್ನು ಕೇವಲ ಗೊಡ್ಡು ಸಂಪ್ರದಾಯಗಳೆಂದು ಅಚಾರಿತ್ರಿಕವೆಂದು ನಿರಾಕರಿಸ ಬಾರದು. ಚರಿತ್ರೆಯನ್ನು ನಿರಂತರಿಸುವ ಆಚರಣೆಗಳು ಯಾವುದೆ ಲಿಖಿತ ಆಧಾರಗಳಿಗಿಂತ ಬಲವಾದವು ಹಾಗೆಯೆ ಅಧಿಕೃತವಾದವು. ಸತಿ ಹೋದವರ ನೆನಪಿಗಾಗಿ ಆಚರಿಸುವ ಆಚರಣೆಗಳು ಚರಿತ್ರೆಯ ಆಚರಣೆಯಲ್ಲದೆ ಮತ್ತೇನು? ಬಂಡೆಗಳ ಮೇಲಿನ ಚಿತ್ರಗಳಿಗೂ ಇಂದಿನ ಗ್ರಾಮೀಣ ಚಿತ್ರಕಲೆಯ ರೂಪಗಳಿಗೂ ಬಹಳ ಹತ್ತಿರದ ಸಂಬಂಧವಿದೆ. ನವಶಿಲಾ ಯುಗದ ಜನರ ಆಚಾರವಿಚಾರಗಳನ್ನು ಎಷ್ಟೋ ಶವಸಂಸ್ಕಾರಗಳ ಆಚರಣೆಗಳು ಉಳಿಸಿಕೊಂಡು ಬಂದಿವೆ. ಹುಟ್ಟಿನಿಂದ ಸಾಯುವವರೆಗಿನ ಅನೇಕ ಆಚರಣೆಗಳು ಮನುಷ್ಯನ ಅವಸ್ತಾಂತರಗಳ ದಾಖಲೆಗಳಂತೆ ಜೀವಂತವಾಗಿ ಬೆಳೆದು ಬರುವುದು ಜನಪದ ಪರಂಪರೆ ಗಳಲ್ಲಿ ಮಾತ್ರ. ಎಷ್ಟೋ ಐತಿಹ್ಯ, ಸ್ಥಳ ಪುರಾಣಗಳು ಪ್ರಾಚೀನ ಇತಿಹಾಸದ ಕೊಂಡಿಗಳು. ಶಾಸನಗಳ ಬಗ್ಗೆಯೇ ಹುಟ್ಟಿದ ಎಷ್ಟೋ ಐತಿಹ್ಯಗಳು ಶಾಸನಗಳ ವಿರುದ್ಧವಾಗಿಯೂ ಬೇರೊಂದು ದೃಷ್ಟಿಯನ್ನು ಚರಿತ್ರೆಕಾರರಿಗೆ ತೋರಬಲ್ಲವು.

ಮೌಖಿಕ ಪರಂಪರೆಯ ಜಾಡು ಹಿಡಿದು ಪ್ರಾಚೀನ ಕರ್ನಾಟಕದ ಸಮುದಾಯಗಳ ಇತಿಹಾಸವನ್ನು ಗಾಢವಾಗಿ ರಚಿಸಬಹುದು. ಈಗಲೂ ದಕ್ಷಿಣ ಭಾರತದ ಮೂಲ ಜನ ಸಮೂಹಗಳು ಹರಿದು ಹಂಚಿಹೋಗಿ ಭಿನ್ನ ಚಹರೆಗಳಲ್ಲಿ ಅಲೆಮಾರಿಯಾಗಿ ಎಲ್ಲೆಡೆ ಕಾಣಸಿಗುತ್ತಾರೆ. ಕರ್ನಾಟಕದ ಮಟ್ಟಿಗೇ ನೋಡುವುದಾದರೂ ನವಶಿಲಾಯುಗದ ಎಷ್ಟೋ ಜೀವನ ಕ್ರಮಗಳು ವರ್ತಮಾನ ಸಮಾಜದಲ್ಲೆ ಉಳಿದುಕೊಂಡಿವೆ. ಪಶುಪಾಲಕ ಸಮಾಜದ ಸ್ಪಷ್ಟ ಕುರುಹುಗಳು ಅಲೆಮಾರಿ ಸ್ವರೂಪದಲ್ಲಿ ಸುತ್ತಾಡುವುದನ್ನು ಗಮನಿಸಬಹುದು. ಹೀಗಾಗಿ ಎಷ್ಟೋ ಅಲೆಮಾರಿ ಸಮುದಾಯಗಳು ಪ್ರಾಚೀನ ಕರ್ನಾಟಕದ ಸಮುದಾಯಗಳ ಕಳಚಿದ ಕೊಂಡಿಯಂತೆ ಈಗಲೂ ಅಂಚಿನಲ್ಲಿ ಉಳಿದಿವೆ. ಅಂದರೆ ಸ್ವತಃ ತಳಸಮುದಾಯಗಳೆ ಪ್ರಾಚೀನ ಇತಿಹಾಸದ ಭಗ್ನ ಪ್ರತಿಮೆಗಳಂತೆ ನಮ್ಮ ನಡುವೆಯೆ ಒಡಾಡಿಕೊಂಡಿವೆ. ಇವನ್ನೆಲ್ಲ ಪ್ರಾಚೀನ ಇತಿಹಾಸ ಸಂರಚನೆಯ ವಾಸ್ತವ ಸಾಕ್ಷ್ಯ ಎಂದೇ ಬಳಸಿಕೊಳ್ಳಬೇಕು.

ರಾಜ ಠಂಕಿಸಿದ ಒಂದು ನಾಣ್ಯವನ್ನು ಚಿಮ್ಮಿಸಿ ಚರಿತ್ರೆಯ ದಿಗ್ವಿಜಯ ಸಾಧಿಸುವಂತೆ ಬೀಗುವ ಚರಿತ್ರೆಕಾರರು ಜೀವಂತ ಸಾಕ್ಷ್ಯಗಳ ಈ ಪರಿಯನ್ನು ಕಾಣುವ ಮೂಲಕ ಪ್ರಾಕ್ತನಶಾಸ್ತ್ರದ ಜೀವಂತಿಕೆಗೆ ತೊಡಗಬೇಕು. ಮೌಖಿಕ ಚರಿತ್ರೆಯ ನಿರ್ವಚನಕ್ಕೆ ಅನೇಕಬಾರಿ ಸಾಹಿತ್ಯಪ್ರಕಾರಗಳನ್ನೇ ಅನುಲಕ್ಷಿಸಲಾಗುತ್ತದೆ. ಇದು ಕೂಡ ಒಂದು ಮಿತಿಯೆ. ಮೌಖಿಕ ಅಭಿವ್ಯಕ್ತಿಗಿಂತ ಆಚರಣೆಯ ಸ್ವರೂಪದಲ್ಲಿ ವ್ಯಕ್ತವಾಗುವ ನಂಬಿಕೆಗಳೇ ಹೆಚ್ಚು ಚರಿತ್ರೆಗೆ ಉಪಯುಕ್ತ ಒಳಹುಗಳನ್ನು ನೀಡುತ್ತವೆ. ಸಾಹಿತ್ಯ ಪ್ರಕಾರಗಳು ಹೆಚ್ಚು ಹೆಚ್ಚು ಪುನರ್‌ಸೃಷ್ಟಿಗೆ ಒಳಪಡುತ್ತಲೇ ಅವು ವಿಭಿನ್ನ ಚಹರೆಗಳನ್ನು ಧರಿಸುವ ಮೂಲಕ ಕಾಲದ ಬೇರೆ ಬೇರೆ ಸ್ವರೂಪಗಳನ್ನು ಹೊದ್ದುಕೊಳ್ಳುತ್ತವೆ. ಆದರೆ ಆಚರಣೆ ನಂಬಿಕೆ ಹಬ್ಬ ಇತ್ಯಾದಿ ಮೌಖಿಕೇತರ ಸಂಗತಿಗಳು ಪ್ರಾಚೀನ ಪ್ರಜ್ಞೆಯನ್ನು ಗಾಢವಾಗಿ ಉಳಿಸಿಕೊಂಡು ಬಂದಿರುತ್ತವೆ. ಅಲ್ಲದೆ ಶಾಬ್ದಿಕೇತರ ಅಭಿವ್ಯಕ್ತಿಗಳನ್ನು ದೈವದ ಆವರಣದಲ್ಲಿ ವ್ಯಕ್ತಪಡಿಸುವುದರಿಂದ ಅವು ಪಾವಿತ್ರ್ಯವನ್ನು ಕಾಯ್ದುಕೊಳ್ಳಬೇಕಿರುತ್ತದೆ. ಆದ್ದರಿಂದ ಅಧಿಕೃತ ರೂಪವನ್ನು ಜನಪದ ಸಮಾಜ ಮೂಲಕ್ಕೆ ಬದ್ಧವಾಗಿಯೇ ಬೆಳೆಸಬೇಕಿರುತ್ತದೆ.

ಪ್ರಾಕ್ತನ ಕುರುಹುಗಳಿಗೆ ಧರ್ಮದ ಹಂಗಿಲ್ಲ

ಲಿಂಗಸಂಬಂಧಿ ಚರಿತ್ರೆಯನ್ನು ಸಂರಚಿಸುವಾಗ ಆಚರಣೆಗಳೇ ಬಹುಮುಖ್ಯ ಆಕರಗಳಾ ಗುತ್ತವೆ. ಮಾತೃ ಮತ್ತು ಪಿತೃ ನೆಲೆಯ ಕೌಟುಂಬಿಕ ರಚನೆಗಳ ಎಲ್ಲ ನಿಯಮಗಳು ಚರಿತ್ರೆಯ ಪುನರ್‌ರಚನೆಗೆ ಹೇಳಿಮಾಡಿಸಿದ ಆಕರಗಳಂತಿವೆ. ಮಾನವರ ವಿಕಾಸದಲ್ಲಿ ಸಾಗಿಬಂದ ಆಚರಣೆಗಳ ಕಡೆ ವಿಶೇಷ ಒತ್ತು ಕೊಟ್ಟರೆ ಪ್ರಾಕ್ತನಶಾಸ್ತ್ರದ ಶೋಧಕ್ಕೆ ಹೆಚ್ಚಿನ ವೈಶಾಲ್ಯತೆ ಬರುತ್ತದೆ. ಸಾಂಸ್ಕೃತಿಕ ವೀರರ ಚರಿತ್ರೆಯಲ್ಲೂ ಪ್ರಾಚೀನ ಇತಿಹಾಸದ ಸ್ವರೂವನ್ನು ಅನ್ವಯಿಸಲು ಸಾಧ್ಯವಿದೆ. ಪಶುಪಾಲಕ ಸಮುದಾಯಗಳ ವಿಸ್ತರಣೆಯ ಭಾಗವಾಗಿಯೆ ಸಾಂಸ್ಕೃತಿಕ ನಾಯಕರು ವ್ಯಾಪಿಸಿಕೊಂಡದ್ದು. ಸಂಸ್ಕೃತಿ ವಿಕಾಸದ ಚರಿತ್ರೆಯನ್ನು ಬಿಂಬಿಸುವ ಆಚರಣೆ, ನಂಬಿಕೆ, ಸಂಪ್ರದಾಯಗಳು, ಸಮಾಜಗಳ ಮೌಲ್ಯಗಳು ಪಲ್ಲಟಗಳನ್ನು ಅವ್ಯಕ್ತ ವಾಗಿ ಸೂಚಿಸಬಲ್ಲವು. ಸಾಮ್ರಾಜ್ಯಗಳ ಇತಿಹಾಸದ ಗೊಡವೆಗೆ ತಲೆಗೊಡದೆ ಸಂಸ್ಕೃತಿ ಚರಿತ್ರೆಯ ವಿಕಾಸವನ್ನು ಹುಡುಕುವ ಉತ್ಸಾಹ ಇರುವ ಯಾರೂ ಕೂಡ ಪ್ರಾಕ್ತನ ಶಾಸ್ತ್ರಜ್ಞರ ಪಳೆಯುಳಿಕೆ ಸಂಗ್ರಹದ ಪಾಠಗಳಿಗೆ ತಲೆಕೊಡಬೇಕಾದ್ದಿಲ್ಲ. ದೇವಾಲಯಗಳ ವಾಸ್ತುಶಿಲ್ಪ ವನ್ನು ವರ್ಣಿಸುವುದು ಪ್ರಾಕ್ತನ ಶಾಸ್ತ್ರದ ಕರ್ತವ್ಯ ಅಲ್ಲ.

ಚರಿತ್ರೆ ಪೂರ್ವ ಕಾಲದ ಶೋಧಕ್ಕೆ ತೊಡಗಬೇಕಾದವರು ಸಾಮ್ರಾಜ್ಯಗಳ ಪಾಪವನ್ನು ಪವಿತ್ರತೆಯ ಹೆಸರಲ್ಲಿ ಮುಚ್ಚಿಕೊಂಡು ಮೇಲೆದ್ದ ಗುಡಿಗುಂಡಾರ ಗೋಪುರ ಕೋಟೆ ಇತ್ಯಾದಿಗಳ ಬಗ್ಗೆ ತಮ್ಮ ವಿದ್ವತ್ ಪ್ರಭೆಯನ್ನು ಪೋಲುಮಾಡಿಕೊಳ್ಳಬೇಕಾದ್ದಿಲ್ಲ. ಹೀಗೆ ಕಟುವಾಗಿ ಹೇಳಲು ವಿಷಾದವೆನಿಸುತ್ತದೆ. ಮುಜರಾಯಿ ಇಲಾಖೆಯೊಂದು ಮಾಡಬಹುದಾದ ದೇವಾಲಯಗಳ ಜೀರ್ಣೋದ್ಧಾರದ ಕೆಲಸವನ್ನು ವಿದ್ವಾಂಸರು ಚರಿತ್ರೆಯ ಪುಟಗಳಲ್ಲಿ ಮಾಡಬಾರದು. ಬಾಬ್ರಿ ಮಸೀದಿ, ರಾಮಜನ್ಮಭೂಮಿ ವಿಚಾರಗಳಲ್ಲಿ ಪ್ರಾಕ್ತನಶಾಸ್ತ್ರಜ್ಞರ ಬಲಪಂಥೀಯ ಶೋಧಗಳು ಮಾನವತ್ವಕ್ಕೆ ದಕೆ ತರುವಂತವು. ಮೌಖಿಕ ಪರಂಪರೆಯ ಯಾವೊಬ್ಬ ಸಂತರೂ ಭಾವಿಸಲಾಗದ ಒಡಕನ್ನು ಚರಿತ್ರೆಕಾರರೇ ಸೃಷ್ಟಿಸಿಬಿಡಬಲ್ಲರು. ಅನೇಕ ಬಾರಿ ಪ್ರಾಕ್ತನ ಶಾಸ್ತ್ರಗಳು ಬಲಪಂಥೀಯ ಚಿಂತನೆಗಳಿಗೆ ಪೂರಕವಾಗಿ ವರ್ತಿಸುವುದೂ ಇದೆ. ಸರ್ಕಾರಗಳು ಕೂಡ ಪ್ರಾಕ್ತನಶಾಸ್ತ್ರಜ್ಞರನ್ನು ಆ ಉದ್ದೇಶಕ್ಕೆ ತಕ್ಕಂತೆಯೆ ಕಾಯ್ದು ಕೊಂಡಿವೆ. ಪ್ರಾಕ್ತನ ಕುರುಹುಗಳು ಧರ್ಮದ ಹಂಗಿಗೆ ಒಳಪಡುವುದಿಲ್ಲ. ಆದರೂ ಆ ದೃಷ್ಟಿಯನ್ನು ಅನೇಕರು ಹೊಂದಿಸುವುದಿದೆ. ಜೀವವಿಕಾಸದ ವಿವೇಕದಿಂದ ಪರಿಸರ ವಿಜ್ಞಾನಗಳ ಆಲೋಚನೆಯಿಂದ ಹಾಗೂ ಬೌಗೋಳಿಕ ವಿಜ್ಞಾನ ಮತ್ತು ಭೂಗರ್ಭಶಾಸ್ತ್ರದ ಆಲೋಚನೆ ಯಿಂದ ಭಾವಿಸಿ ಮೌಖಿಕ ಪರಂಪರೆಗಳ ಜೀವನ ಕ್ರಮಗಳನ್ನು ಗ್ರಹಿಸಿದರೆ ಅನೇಕ ಸಂಗತಿಗಳು ನಿಜ ರೂಪದಲ್ಲಿ ಎದ್ದು ನಿಲ್ಲುತ್ತವೆ. ಜನಪದ ಪರಂಪರೆಗಳು ಜೀವವಿಜ್ಞಾನಗಳ ತಿಳುವಳಿಕೆಯನ್ನು ತಮ್ಮದೇ ಆದ ಜ್ಞಾನ ಪರಂಪರೆಗಳಲ್ಲಿ ಅಡಗಿಸಿಕೊಂಡಿವೆ. ಅನುಭವವನ್ನು ಅನುಭಾವಗೊಳಿಸುವ ಜನಪದರು ನಿಸರ್ಗಜ್ಞಾನವನ್ನು ಆದ್ಯಾತ್ಮದ ದರ್ಶನದಲ್ಲಿ ಬಿಂಬಿಸಿರುತ್ತಾರೆ. ಹಾಗೆಯೆ ಸಮಾಜ ವಿಜ್ಞಾನಗಳಿಗೆ ಬೇಕಾದ ಒಳಹುಗಳನ್ನು ಬಿಂಬಿಸುತ್ತಿರು ತ್ತಾರೆ. ಹೀಗಾಗಿ ಮೌಖಿಕ ಚರಿತ್ರೆಯ ನಿರ್ವಚನವು ಒಂದೇ ಮುಖದ ಒಂದೇ ದನಿಯದ್ದಲ್ಲ. ಈ ಬಗೆಯಿಂದ ಪ್ರಾಕ್ತನಶಾಸ್ತ್ರಜ್ಞರು ಮೌಖಿಕ ಚರಿತ್ರೆಯನ್ನು ವಿರಾಟ್‌ಸ್ವರೂಪದ ಸಂಸ್ಕೃತಿ ವಿಕಾಸದ ಕಥನವಾಗಿಯೂ ಮಂಡಿಸಲು ಸಾಧ್ಯವಿದೆ.

ಹೀಗೆ ಪಯಣಿಸಿದಾಗಲೆ ಯಾವುದೇ ಅನ್ಯಶಿಸ್ತಿನ ಅರಿವು ತನ್ನ ಶಾಖೆಗೆ ಪೂರಕವಾಗುವುದು. ದುರ್ಬಲವಾಗುತ್ತಿರುವ ಈ ಬಗೆಯ ಶಾಖೆಗಳು ತನ್ನದಲ್ಲವೆಂಬ ಮಾಹಿತಿಗಳಿಂದಲೇ ಪುನರುಜ್ಜೀವನಗೊಳ್ಳಬೇಕಾಗುತ್ತದೆ. ಆ ಅರ್ಥದಲ್ಲಿ ಮೌಖಿಕ ಸಾಹಿತ್ಯದ ತಿರುಳನ್ನು ಶೋಧಕ ತನ್ನ ಆಕಾರಕ್ಕೆ ಬೌದ್ದಿಕವಾದ ಸಾಂಸ್ಕೃತಿಕ ಅನುಸಂಧಾನಕ್ಕೆ ಆಧುನಿಕ ಕಾಲದ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಿರಬೇಕಾದರೆ ಜಡಗೊಂಡ ಅಧ್ಯಯನ ವಿಧಾನಗಳನ್ನೂ ಕೈಬಿಡಬೇಕಾಗುತ್ತದೆ. ಆತ್ಮಕಥನದ ಸಾಂಸ್ಕೃತಿಕ ನಿರೂಪಣೆಯನ್ನು ಮಾಡಿದಾಗಲೇ ನಮ್ಮ ನಮ್ಮ ಜ್ಞಾನ ಶಿಸ್ತುಗಳಿಗೆ ಮತ್ತೊಂದು ಆಯಾಮ ಸಾಧ್ಯವಾಗುವುದು. ಅಂದರೆ ಇಡೀ ನಮ್ಮ ಪರಂಪರೆಯ ಆತ್ಮ ಕಥನವನ್ನು ಸಮುದಾಯದ ಆತ್ಮಕಥನವನ್ನು ಕಟ್ಟುವ ವಿವೇಕ ಎಚ್ಚರ ತಾಳ್ಮೆ ಹಾಗೂ ಪ್ರತಿಭೆ ಬೇಕಾಗುತ್ತದೆ. ಹೀಗಾಗಿ ಒಟ್ಟು ಸಮಾಜ ವಿಜ್ಞಾನಗಳ ಶೈಲಿಯೆ ಸಮಗ್ರವಾಗಿ ಬದಲಾಗಬೇಕು. ಈಗ ಚಾಲ್ತಿಯಲ್ಲಿ ಇರುವ ಮಾಹಿತಿ ಪ್ರಧಾನವಾದ ಶುಷ್ಕಗದ್ಯವನ್ನು ಬಿಟ್ಟು ಅಲಕ್ಷಿತ ಮಾಹಿತಿಗಳು ಸಾಮಾಜೀಕರಣವಾಗಬೇಕಾದ ಹಾದಿಯ ಆತ್ಮಕತನದ ಗದ್ಯಬೇಕಾಗಿದೆ. ಆತ್ಮಕಥನದ ಗದ್ಯ ಜೀವಂತವಾದುದು. ಅದು ಸಂಸ್ಕೃತಿಗಳನ್ನು ಆತ್ಮೀಯ ವಾಗಿ ನಿರ್ವಚಿಸುವಂತದ್ದು. ಹೀಗೆ ಸಾಗಿದಾಗ ಪುರಾತತ್ವ ಸಂಕಥನವು ದೇಶೀ ಸಮುದಾಯಗಳ ಪರಂಪರೆಯಿಂದಲೆ ಮರುಹುಟ್ಟನ್ನು ಪಡೆಯಲು ಸಾಧ್ಯ. ದೇಶೀ ಸಂಸ್ಕೃತಿ ಎಂದ ಕೂಡಲೆ ಅದು ಒಂದು ಸೈದ್ಧಾಂತಿಕ ಅಭಿವ್ಯಕ್ತಿಯೂ ಆಗಿರುವುದರಿಂದ ನಿರ್ವಸಾಹತೀಕರಣದ ಆಚಿನ ಮಾನವ ಸಂಬಂಧಗಳಿಗೇ ನಾವು ಹಿಂತಿರುಗಿದಂತಾಗುತ್ತದೆ. ದೇಶೀ ಸಂಸ್ಕೃತಿಗಳು ತಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಸಮುದಾಯದ ಆತ್ಮಕಥನಗಳ ಗದ್ಯಕಾವ್ಯದಲ್ಲೇ ಧ್ವನಿಸಿವೆ. ಈ ಬಗೆಯ ಶೋಧದಲ್ಲಿ ದೇಶೀ ಕಾವ್ಯಗಳು ಪುರಾತತ್ವ ಅಧ್ಯಯನ ಮಾದರಿಗೆ ಹೊಸ ಬಗೆಯ ಒಳಹುಗಳನ್ನು ನೀಡುತ್ತವೆ. ದೇಶೀ ಸಂಸ್ಕೃತಿಯು ಅಲಕ್ಷಿತ ಜಗತ್ತಿನ ಅನುಸಂಧಾನ ದಿಂದ ಸಮಷ್ಠಿಯ ವಿವೇಕದಿಂದ ಬೆಳೆದರೆ ಅದರ ಮೇಲೆ ಯಜಮಾನ್ಯ ಸಾರಿದ ಏಕ ಮಾದರಿಯ ಸಂಸ್ಕೃತಿಗಳು ಚರಿತ್ರೆಯನ್ನು ವ್ಯಕ್ತಿವಿಶಿಷ್ಟವಾಗಿ ಗ್ರಹಿಸುತ್ತವೆ. ಹಾಗಾಗಿಯೆ ಶಿಷ್ಟ ಚರಿತ್ರೆಯ ಮಾತೃಸಂವೇದಿ ಅಂತರ್‌ಸಂಬಂಧಗಳಿಂದ ಹೊರಗುಳಿದು ಪುರುಷಾ ಕೃತಿಯಲ್ಲಿ ನಿರ್ವಚಿಸುತ್ತವೆ. ದೇಶೀ ಸಂಸ್ಕೃತಿಯ ಬೇರುಗಳಿರುವುದು ಬಹುಸಮುದಾಯಗಳ ಮಾನವೀಕರಣದ ಹಸಿವಿನಲ್ಲಿ. ಹೀಗಾಗಿ ದೇಶೀ ಸಂವೇದನೆಯ ಮರುವ್ಯಾಖ್ಯಾನ ಮಾಡಿಕೊಳ್ಳುವಾಗ ದೇಶೀ ಸಮಾಜಗಳನ್ನು ಬಲಪಡಿಸುವ ನಿಟ್ಟಿನಲ್ಲೂ ಕೆಲಸ ಮಾಡಬೇಕಾಗುತ್ತದೆ.

ವರ್ತಮಾನದ ಚಾರಿತ್ರಿಕ ನಿರ್ವಚನ ಎಂದರೆ ದೇಶೀ ಸಂಸ್ಕೃತಿಯನ್ನು ಮಾನವಿಕ ಶಾಸ್ತ್ರಗಳ ಅಧ್ಯಯನ ವಿಧಾನದಲ್ಲಿ ಹೊಸದಾಗಿ ಅನುಸಂಧಾನಗೊಳಿಸುವುದಾಗಿದೆ. ಜಗತ್ತು ಏಕಮಾದರಿಯ ಕಡೆ ತನ್ನ ಬೌದ್ದಿಕ ಗುಂಪುಗಾರಿಕೆಯನ್ನು ಹೇರುತ್ತಿರುವಾಗ ಇಂತಹ ಬಹುಬಗೆಯ ಸಾಂಸ್ಕೃತಿಕ ವಿವರಗಳನ್ನು ಅನನ್ಯತೆಯ ವಿಶಿಷ್ಠತೆಯಲ್ಲೇ ಉಳಿಸಿಕೊಂಡು ಚರಿತ್ರೆಗೆ ನಮ್ಮದೇ ಆದ ಅರ್ಥವನ್ನು ನಿರೂಪಿಸಬೇಕಾಗುತ್ತದೆ. ದೇಶೀ ಸಂಸ್ಕೃತಿ ಎಂದರೆ ಬೃಹತ್ ಆದ ಅರ್ಥದಲ್ಲಿ ಚರಿತ್ರೆಯ ಸಾಂಸ್ಕೃತಿಕ ಆತ್ಮಕಥನ. ನಮ್ಮ ಅನುಭವಗಳಿಗೆ ನಮ್ಮದೇ ವಿಧಾನಗಳ ಕ್ರಮವೊಂದಿರುತ್ತದೆ. ಅದನ್ನು ಶೋಧಿಸುವಲ್ಲಿ ನಮಗೆ ಬಹುರೂಪಗಳ ದೇಶೀ ಸಂಸ್ಕೃತಿಯು ತುಂಬ ಅಗತ್ಯವಾದ ಸಲಕರಣೆಗಳನ್ನು ಕೊಡುವಂತದ್ದು. ಹೀಗಾಗಿ ದೇಶೀ ಸಂಸ್ಕೃತಿಯ ಸ್ಥಾನೀಯ ಚರಿತ್ರೆಯ ಕಥನಗಳಿಂದಲೇ ಜಾಗತಿಕವಾಗುವ ವೈಚಾರಿಕ ಆಕೃತಿಗಳನ್ನು ನಾವು ರೂಪಿಸಲು ಸಾಧ್ಯವಾಗುತ್ತದೆ.