ಕನ್ನಡ ಜಾನಪದವು ತನ್ನ ಗರ್ಭದಲ್ಲಿ ಹೇರಳವಾದ ಸಾಮಗ್ರಿಗಳನ್ನು ಇಟ್ಟುಕೊಂಡಿದೆ. ಅದೂ ಸಹ ಸಂಗ್ರಹ, ಪ್ರಕಟಣೆಗಳೇ ಹೆಚ್ಚಿನದಾಗಿ ಕಂಡುಬಂದಿದ್ದು ಆಧ್ಯಯನಗಳು ಅಲ್ಲಲ್ಲಿ ಮಾತ್ರ ನಡೆದಿವೆ. ಕರ್ನಾಟಕ ಜಾನಪದದಲ್ಲಿ ಇರುವ ಸಾಮಗ್ರಿಗಳಲ್ಲಿ ಬಹು ಮುಖ್ಯವಾದ ಮತ್ತು ಸಾಹಿತ್ಯಕವಾಗಿ ಸಮೃದ್ಧವಾಗಿರುವ ಕಾವ್ಯಗಳು ಹೇರಳವಾಗಿ ಸಿಗುತ್ತವೆ. ಅವುಗಳಲ್ಲಿ ಈ ಅವ್ವಣೆವ್ವನ ಕಾವ್ಯವೂ ಒಂದು. ಅವ್ವಣೆವ್ವನ ಕಾವ್ಯ ತುಂಬ ಕುತೂಹಲಕರವಾದದ್ದು. ಕಾವ್ಯವು ಅವ್ವಣೆವ್ವನ ಹುಟ್ಟು, ಮದುವೆ ಗಂಡನ ಸಾವು, ಮತ್ತೆ ಮರು ಮದುವೆ ಹೀಗೆ ಹಲವಾರು ಅಂಶಗಳನ್ನೊಳಗೊಂಡಿರುವ ಸುದೀರ್ಘವಾದ ಈ ಕಾವ್ಯ ಕನ್ನಡದ ಜನಪದ ಕಾವ್ಯಗಳಲ್ಲಿ ಒಂದು.

ಕಥಾ ವೃತ್ತಾಂತ : ಮಲಮ್ಮನಿಗೆ ಏಳುಜನ ಗಂಡು ಮಕ್ಕಳು. ಈಕೆಗೆ ಹೆಣ್ಣು ಮಕ್ಕಳಿಲ್ಲ ಆದರೂ ಏಳುಜನ ಗಂಡು ಮಕ್ಕಳ ಮದುವೆಯೂ ಆಗಿದೆ. ಮಲಮ್ಮನಿಗೆ ಹೆಣ್ಣು ಹಡೆಯಬೇಕೆಂದು ಹಂಬಲ. ಅತಿಯಾದ ಗೌರಿಹುಣ್ಣಿಮೆಯ ದಿನ ಅಕ್ಕಪಕ್ಕದ ಮನೆಯ ಹುಡುಗಿಯರನ್ನು ಕರೆತಂದು ಗೌರಿಮಕ್ಕಳನ್ನು ಮಾಡುವ ಆಸೆ ಈಕೆಯದು. ಆದರೆ ಆ ಹುಡುಗಿಯರ ತಾಯಂದಿರು ಹುಡುಗಿಯರನ್ನು  ಈಕೆಯ ಮನೆಗೆ ಕಳಿಸುವುದಿಲ್ಲ. ಹೆಣ್ಣನ್ನು ಹಡೆಯದ ಬಂಜೆ ಎಂದು ದೂರುತ್ತಾರೆ. ಮಕ್ಕಳ ಚೆಂದವನ್ನು ನೋಡಬೇಕೆಂಬ ಮಹಾದಾಸೆಯಿಂದ ತನ್ನಲ್ಲಿರುವ ಸೀರೆ, ಕುಪ್ಪಸಗಳನ್ನು ಮಕ್ಕಳಿಗೆ ತೋಡಿಸಲು ಹೋಗುತ್ತಾಳೆ. ಆದರೆ ಆ ಮಕ್ಕಳ ತಾಯಂದಿರು ಮಲ್ಲಮ್ಮನಿಗೆ ಚೆನ್ನಾಗಿ ಬಯ್ದು ಕಳಿಸುತ್ತಾರೆ. ಮಲಮ್ಮನ ಸೀರೆ, ಕುಪ್ಪಸಗಳನ್ನು ತಿರಸ್ಕರಿಸುತ್ತಾರೆ. ಮಲ್ಲಮ್ಮ ಈ ಸಂಗತಿಗಳನ್ನು ಗಂಡ ಭರಮರೆಡ್ಡಿಗೆ ಮುಂದೆ ಹೇಳಿ ತನಗೆ ಹೆಣ್ಣು ಮಗುಬೇಕೆಂದು ಹಠ ಹಿಡಿಯುತ್ತಾಳೆ. “ಅಂಗಾಲಿಗೆ ನೆರೆ ಬಂದು ಮುಂದಲೆಗೆ ನೆರೆ ಬಂದು ಇರುವಾಗ ನಿನಗೆ ಯಾಕೆ ಬೇಕು ಮಕ್ಕಳು ಈ ವಯಸ್ಸಿನಲ್ಲಿ” ಎಂದು ಭರಮರೆಡ್ಡಿ ಮಲಮ್ಮನನ್ನು ಬಯ್ಯುತ್ತಾನೆ. ನಿನ್ನ ಸರಿ ಸಮಾನ  ವಯಸ್ಸಿನ ಗೆಳತಿಯರು ನಗುವುದಿಲ್ಲವೇನು? ನಿನ್ನ ಸೊಸೆಯರು ನಿನ್ನ ಮಕ್ಕಳು ನಗುವುದಿಲ್ಲವೇನು?  ಎಂದು ಭರಮರೆಡ್ಡಿ  ಆಕೆಯನ್ನು ಬಯ್ಯುತ್ತಾನೆ. ಆಗ ಗಂಡನ ಮಾತನ್ನು ಮೀರಿ, ಮಲ್ಲಮ್ಮ ಹೆಣ್ಣು ಫಲ ಬೇಕೆಬೇಕೆಂದು ಹಠ ಹಿಡಿದು ಅಡವಿಗೆ ಹೊರಡುತ್ತಾಳೆ ಮಲ್ಲಮ್ಮ ಅಡವಿಗೆ ಹೊರಡುವಾಗ ಮನೆಯನ್ನು ಸಂಪೂರ್ಣವಾಗಿ ಶುದ್ಧಮಾಡಿ ಕರಿಕಂಬಳಿ, ಒಂದು ತೆಂಗಿನಕಾಯಿ, ಗೊನೆಮುರಿಯದ ಬಾಳೆಹಣ್ಣು, ಉದಿನಕಡ್ಡಿ, ಕುಂಕುಮ, ಬುಕ್ಕಿಟ್ಟು, ವಿಭೂತಿಹುಂಡಿ ಒಂದು ಚರಗಿ ನೀರು, ೩೦೦ ಸೂಜಿ, ೩೦೦ ದಬ್ಬಣ ತೆಗೆದುಕೊಂಡು ಅಡವಿಗೆ ಹೊರಡುತ್ತಾಳೆ. ಮಲ್ಲಮ್ಮ ಅಡವಿಯಲ್ಲಿ ತನಗೆ ತಿಳಿದ ಜಾಗದಲ್ಲಿ ನಿಂತುಕೊಂಡು ಕರಿ ಕಂಬಳಿಯನ್ನು ಹಾಸಿ ಕುಂಕುಮ ಬುಕ್ಕಿಟ್ಟು, ವಿಭೂತಿಯನ್ನು ಕಂಬಳಿಗೆ ಹಚ್ಚಿ, ಬಾಳ್ವೆಹಣ್ಣು, ಹೂ, ಇಟ್ಟು ಕಾಯಿ ಒಡೆದು ದೇವರಿಗೆ ನಮಸ್ಕರಿಸಿ, ೩೦೦ ಸೂಜಿ, ೩೦೦ ದಬ್ಬಣಗಳನ್ನು ನೆಲಕ್ಕೆ ಚುಚ್ಚಿ ಅದರ ಮೇಲೆ ತಪಸ್ಸಿಗೆ ನಿಂತಿದ್ದಾಳೆ ಮಲ್ಲಮ್ಮ. ಆಕೆ ನಿಂತಿರುವುದನ್ನು ಕಂಡ ಕಾಗೆ, ಗುಬ್ಬಿ, ಮುಂತಾದ ಜೀವರಾಶಿಗಳೆಲ್ಲ ಅಕ್ಕಿಬಾಯಿ ಬಿಡಲಾರಂಭಿಸುತ್ತವೆ, ಯಾರು ನಿಂತಿರುವಳೆಂದು, ಆಕೆಯ ಹತ್ತಿರ ಹೋಗದೇ ಅವುಗಳು ಚಿವ್ ಗುಡುತ್ತವೆ. ಕೂದಲನ್ನು ಚೆಲ್ ಹೊಡೆದುಕೊಂಡು ವಿಭೂತಿ, ಕುಂಕುಮ, ಬುಕ್ಕಿಟ್ಟುನ್ನು ಹಚ್ಚಿಕೊಂಡು ಸೂಜಿಯ ಮೇಲೆ ನಿಂತಿದ್ದಾಳೆ ಮಲ್ಲಮ್ಮ.

ಮಲ್ಲಮ್ಮ  ಸೂಜಿಯ ಮೇಲೆ ನಿಂತಿರುವುದನ್ನು ನೋಡಲಾರದೇ ಪರಮೇಶ್ವರ, ಪಾರ್ವತಿ ನಂದಿಯನ್ನು ಏರಿಕೊಂಡು ಬರುವರು. ‘ಕಾರ ಸವಿಯಲ್ಲಿ ಸೂಜಿಯ ಮೇಲೆ ಎಷ್ಟೊತ್ತಿನಿಂದ ನಿಂತಿರುವಳೋ ಏನೋ ಆಕೆಯ ತೊಂದರೆ ಏನೆಂಬುದನ್ನು ತಿಳಿದು ಕೊಂಡು ಬನ್ನಿರಿ’ ಎಂದು ಪಾರ್ವತಿ ಪರಮೇಶ್ವರನಿಗೆ ಹೇಳುತ್ತಾಳೆ. ಆಗ ಪರಮೇಶ್ವರ “ಯಾ ದೆವ್ವವ್ವೋ ಯಾ ಪೀಡೆಯೋ” ನಾನ್ಯಾಕೆ ಹೋಗಿ ನೋಡಲಿ ಎಂದು ಹೇಳುತ್ತಾನೆ. ಭಕ್ತರು ಯಾರೋ ನಿಂತುಕೊಂಡಿದ್ದರೆ, ನೋಡಿಕೊಂಡು ಬರೋಣವೆಂದು ಪಾರ್ವತಿ ಹೇಳುತ್ತಾಳೆ. ಆಗ ನಂದಿಯನ್ನು ಪರಮೇಶ್ವರ ಕೆಳಕ್ಕೆ ಇಳಿಸುತ್ತಾನೆ. ಏನಮ್ಮ ನಿನ್ನ ಕಷ್ಟ? ಏನು ತೊಂದರೆಯಾಗಿದೆ. ಅಡವಿ, ಅರಣ್ಯದಾಗ ನೀನು ಒಬ್ಬಾಕೆ ನಿಂತಿಯಲ್ಲ, ಅದು ಸೂಜಿಯ ಮೇಲೆ ನಿನ್ನ ಕಷ್ಟವೇನೆಂದು ಪರಮೇಶ್ವರ ಮಲ್ಲಮ್ಮನನ್ನು ಕೇಳುತ್ತಾನೆ. ಆಗ ಮಲ್ಲಮ್ಮ ಕಣ್ಣು ತೆರೆದು ‘ಸ್ವಾಮಿ ನನಗೆ ಏಳು ಮಂದಿ ಗಂಡುಮಕ್ಕಳು, ನನಗೆ ಹೆಣ್ಣಿನ ಫಲವಿಲ್ಲ ನನಗೆ ಹೆಣ್ಣಿನ ಸಂತಾನ ಕೊಡು. ನನಗೆ ಓಣಿಯಲ್ಲಿ ಮಂದಿ ಗೊಡ್ದಿ, ಬಂಜಿ ಎಂದೆಲ್ಲ ಬಯ್ಯುತ್ತಾರೆ’,  ‘ಬೆಂಕಿಕಡ್ದಿ ಬೇಕೆಂದು  ಮಂದಿ ಮನೆಗೆ ಹೋದರೆ, ಇವಳೇನು ಬಂದಿದ್ದಾಳೆ ಗೊಡ್ಡಿ, ಬಂಜಿ, ಎಂದು ತಮ್ಮ ಮನೆಗಳ ಕದ ಮುಚ್ಚುವರೆಂದು ಮಲ್ಲಮ್ಮ ಪರಮೇಶ್ವರನ’ ಮುಂದೆ ಹೇಳಿ ಹೆಣ್ಣಿನ ಫಲ ಕೊಡು ಎಂದು ಬೇಡುತ್ತಾಳೆ. ಆಗ ಪರಮೇಶ್ವರ ನೋಡು ಮಲ್ಲಮ್ಮ, ನಿನಗೆ ಹೆಣ್ಣಿನ ಋಣವಿಲ್ಲ. ‘ನಿನಗೆ ಹೆಣ್ಣಿನ ಫಲ ಬೇಡವೆಂದು ಹೇಳುತ್ತಾನೆ. ಆಗ ಪಾರ್ವತಿ ಮಧ್ಯೆ ಪ್ರವೇಶಿಸಿ ‘ಒಂದು ಹೆಣ್ಣು ಫಲ ಬೇಡಿದರೆ, ಇಲ್ಲ ಅಂತ ಹೇಳ್ತಿರಲ್ಲ ಎಂದು ಕೋಪಗೊಳ್ಳುತ್ತಾಳೆ.’ ಆಗ ಪರಮೇಶ್ವರ ‘ಹೆಣ್ಣು ಕೋಡೋದು ದೊಡ್ಡದಲ್ಲ, ಮಲ್ಲಮ್ಮನಿಗೆ ಹೆಣ್ಣಿನ ಫಲ ಕೋಟ್ಟೇನು ಆದರೆ ಆಕೆಯ ಮಗಳು “ಹಸೆಕಟ್ಟಿ ಮಲಮಿಂಡಿ” ಆಗುತ್ತಾಳೆ ಎಂದು ಹೇಳುವನು (ಇದರ ಅರ್ಥ ಮದುವೆಯಾದ ಮುದುಮಗಳು ಸೇರು ಒದ್ದು ತನ್ನ ಗಂಡನ ಮನೆ ಪ್ರವೇಶಿಸುವಾಗ ಆಕೆಯ ಗಂಡ ಸಾಯುತ್ತಾನೆ). ಮದುವೆಯಾದ ತಕ್ಷಣ ನಿನ್ನ ಮಗಳು ವಿಧವೆ ಆಗುತ್ತಾಳೆ, ಅದಕ್ಕಾಗಿ ಹೆಣ್ಣಿನ ಫಲ ಬೇಡ’ ಎಂದು ಪರಮೇಶ್ವರ ಹೇಳುವನು. “ಸಂಜೆ ಹುಟ್ಟಲಿ ಮುಂಜಾನೆ ಸಾಯಲಿ” ನನಗೆ ಹೆಣ್ಣು ಕೊಡು, ಬಂಜೆ ಎನ್ನುವ ಸೊಲ್ಲು ಅಡಗಿಸು, ಎಂದು ಪರಮೇಶ್ವರನಿಗೆ ಮಲ್ಲಮ್ಮ ಬೇಡುತ್ತಾಳೆ. ಆಗ ಪರಮೇಶ್ವರ ಉತ್ತುತ್ತಿ ಹಣ್ಣುಗಳನ್ನು ಮಲ್ಲಮ್ಮನ ಉಡಿ ತುಂಬುವನು. ನಂತರ ಆಕೆಗೆ ಹಿಂದಕ್ಕೆ ತಿರುಗಲು ಹೇಳಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ  ಪರಮೇಶ್ವರ ಪಾರ್ವತಿ ಮಾಯವಾಗುವರು. ಮಲ್ಲಮ್ಮ ಪೂಜೆಗೆಂದು ತಾನು ತೆಗೆದುಕೊಂಡು ಹೊಯ್ದಿರುವ ಕಾಯಿ, ಬಾಳೆಹಣ್ಣು, ಕಂಬಳಿ,  ಕುಂಕುಮ, ಬುಕ್ಕಿಟ್ಟನ್ನು ಮನಗೆ ತರುವಳು. ಅಷ್ಟೋತ್ತಿಗೆ ಮನೆಯಲ್ಲಿ ಸೊಸೆಯಂದಿರು ಅಡುಗೆಯನ್ನು ಮಾಡಿರುವುದರಿಂದ ಮಲ್ಲಮ್ಮ ಊಟವನ್ನು ಮಾಡಿ ರಾತ್ರಿ ಮಲಗುವಾಗ  ಪರಮೇಶ್ವರ ಕೊಟ್ಟಿರುವ ಉತ್ತುತ್ತಿ ಹಣ್ಣುಗಳನ್ನು ತಿಂದು ಮಲಗುವಳು. ಮಾರನೇ ದಿನ ಆಕೆಯ ಗಂಡ ಭರಮರೆಡ್ದಿ ಹೊಲಕ್ಕೆ ಹೋಗಿ ಮನೆಗೆ ಬಂದಾಗ ಆತನಿಗೆ ಮಲ್ಲಮ್ಮ ಊಟವನ್ನು ನೀಡುತ್ತಾ, ‘ದೇವರು ಪ್ರತ್ಯಕ್ಷನಾಗಿ ಹೆಣ್ಣು ಫಲ ನೀಡಿದ’ ಎಂದು ಹೇಳುವಳು. ಒಂದು ದಿನವೆಂಬುವುದು ಒಂದು ತಿಂಗಳಾಗಿ, ಎರಡು ದಿನವೆಂಬುದು ಎರಡು ತಿಂಗಳುಗಳಾದವು. ಮೂರು ದಿನವೆಂಬುವುದು ಮೂರು ತಿಂಗಳಾಗಿ, ಅದರಂತೆ ಒಂಬತ್ತು ದಿನವೆಂಬುವುದು ಒಂಬತ್ತು ತಿಂಗಳಾದವು ಒಂಬತ್ತು ದಿನ, ಒಂಬತ್ತು ನಿಮಿಷ, ಒಂಬತ್ತು ಘಳಿಗೆಯಲ್ಲಿ ‘ಹೆಣ್ಣು ಕೂಸು’ ಮಲ್ಲಮ್ಮನಿಗೆ ಜನನವಾಯಿತು.

ಹೆಣ್ಣು ಕೂಸು ಹುಟ್ಟಿ ಮೂರು ದಿವಸದಲ್ಲಿ ಜ್ಯೋತಿಷ್ಯ ಕೇಳಲು ಆ ಕೂಸಿನ ತಂದೆಯಾದ ಭರಮರೆಡ್ಡಿ ಧರ್ಮರಾಯನ ಹತ್ತಿರ ಹೋಗುವನು. ಹೆಣ್ಣು ಕೂಸು ಜನನವಾಗಿ ಮೂರು ದಿನವಾಗಿದೆ ಎಂದು ಧರ್ಮರಾಯನ ಮುಂದೆ ಹೇಳಿ ಆ ಕೂಸಿಗೆ ಒಳ್ಳೆಯ ಹೆಸರು ಮತ್ತು ಜಾತಕ ನೋಡುವಂತೆ ಕುತೂಹಲದಿಂದ ಕೇಳುವನು. ಆಗ ಧರ್ಮರಾಯ ಹೊತ್ತಿಗೆಯನ್ನು ತೆಗೆದು ನೋಡಿ, ಮುಚ್ಚಿಟ್ಟು ‘ಮುಸಿ ನಗು’ ನಗುವನು.’ಧರ್ಮಣ್ಣ ಯಾಕ ನಕ್ಕಿ ಬಂದದ್ದು ಹೇಳು’ ಎಂದು ಭರಮರೆಡ್ಡಿ ಕೇಳಲು, ‘ಹುಟ್ಟಿದ ಘಳಿಗೆ ಚೆನ್ನಾಗಿ ಇದೆ, ಎಲ್ಲವೂ ಚೆನ್ನಾಗಿ ಇದೆ. “ಅವ್ವಣೆವ್ವ” ಎಂದು ಹೆಸರು ಕರೆಯಲು ಧರ್ಮರಾಯ ಭರಮರೆಡ್ಡಿಗೆ ತಿಳಿಸುವನು. (ಧರ್ಮರಾಯ ಯಾಕೆ ಮುಸುನಗು ನಕ್ಕನೆಂದರೆ, ಮುಂದೆ ಭೀಮನಿಗೆ ಅವ್ವಣೆವ್ವನ ಯೋಗ ಕೂಡುತ್ತೈತಿ ಎಂದು ತಿಳಿದು).

ಹೆಣ್ಣು ಕೂಸು ಹುಟ್ಟಿ ಒಂಭತ್ತನೇ ದಿನದಲ್ಲಿ ಗಂಗಮ್ಮನ ಪೂಜೆ ಮಾಡಲು ಮಲ್ಲಮ್ಮ ಹೊರಡುವಳು. ಹೋಗುವುದಕ್ಕಿಂತ ಮೊದಲು ಕೂಸಿಗೆ ಸ್ನಾನ ಮಾಡಿಸಿ, ಹೊಸಬಟ್ಟೆ ತೊಡಿಸಿ, ಹಸಿರು ಬಳೆಯನ್ನು ಕೂಸಿನಕೈಗೆ ಹಾಕಿ, ಆ ಕೂಸನ್ನು ತೊಟ್ಟಿಲಲ್ಲಿ ಮಲಗಿಸಿ, ಮಲ್ಲಮ್ಮ ಹೊಸ ಸೀರೆ, ಕುಪ್ಪಸ ತೊಟ್ಟು, ಹಸಿರುಬಳೆ ಹಾಕಿಕೊಂಡು ಕಣ, ಪೂಜೆ ಸಾಮಾನು ತೆಗೆದುಕೊಂಡು, ಕೊಡ ಹೊತ್ತುಕೊಂಡು ‘ಓಣಿಯ ಅಕ್ಕಂದಿರೆ’, ‘ಓಣಿಯ ತಂಗಿಯರೆ’, ಸೊಸೆಯಂದಿರೆ, ಕೂಸನ್ನು ಮೈತೊಳೆದು ತೊಟ್ಟಿಲಲ್ಲಿ ಹಾಕಿದ್ದೀನಿ. ನಾನು ಗಂಗೆಗೆ ಹೋಗಿ ಬರುತನಕ ಆಕೂಸನ್ನು ನೋಡಿರಿ, ಎಂದು ಹೇಳಿ ಮಲ್ಲಮ್ಮ ಹೊರಡುವಳು. ಗರಡಿ ಮನೆ ಮುಂದೆ ಗಜಭೀಮ ಮಲ್ಲಮ ಗಂಗೆ ಪೂಜೆಗೆ ಹೋಗುವುದನ್ನು ಕಂಡ. ಇನ್ನೂ ಅವನು ಹುಡುಗ, ಮಲ್ಲಮ್ಮ ಗಂಗೆಗೆ ಹೋಗುವುದನ್ನು ಕಂಡ ಭೀಮ ಮಲ್ಲಮ್ಮನ ಮನೆಗೆ ಓಡಿಬಂದು ತೊಟ್ಟಿಲ ಹಗ್ಗ ಹಿಡಿದುಕೊಂಡು ಬಗ್ಗಿ ಕೂಸನ್ನು ನೋಡಿ, ದೊಡ್ಡವಳಾದ ಮೇಲೆ ನನ್ನನ್ನು ನೀನು ಮದುವೆ ಮಾಡಿಕೊಳ್ಳಬೇಕು ಎಂದು ಹೇಳಿ, ಕೂಸಿನ ಗಲ್ಲವನ್ನು ಚಿವುಟುವನು. ಅದು ಚಿಟ್ಟನೆ ಚೀರಿದಾಗ ಅವನು ಆ ಕೂಸನ್ನು ಬಿಟ್ಟು ಓಡಿ ಹೋಗುತ್ತಾನೆ. ಮಲ್ಲಮ್ಮ ಗಂಗೆ ಪೂಜೆ ಮಾಡಿಕೊಂಡು ಬರುವಳು. ಆ ಕೂಸು ಕಿಟ್ಟನೆ ಚೀರುತ್ತದೆ. ಆಗ ಮಲ್ಲಮ್ಮ ನನ್ನ ಮಗಳು ಯಾಕೆ ಅಳುತ್ತಾಳೆ ಎಂದು ಆ ಕೂಸನ್ನು ಎತ್ತಿಕೊಂಡು ನೋಡುವಳು. ಗಲ್ಲ ಚಿವುಟಿರುವಲ್ಲಿ ರಕ್ತ ಇಳಿಯುತ್ತಿರುತ್ತದೆ. ನಿನ್ನ ಮಗಳೇ ಚಿವುಟಿ ಕೊಂಡಿರಬೇಕೆಂದು ಓಣಿಯ ಮಂದಿ ಮಲ್ಲಮ್ಮನಿಗೆ ಹೇಳುವರು, ಒಂದು ದಿನವೆಂಬುವುದು ಒಂದು ವರ್ಷವಾಗಿ, ಎರಡು ದಿನವೆಂಬುದು ಎರಡು ವರ್ಷಗಳಾಗಿ ಮೂರುದಿನವೆಂಬುದವುದು ಮೂರು ವರ್ಷಗಳಾಗಿ ಹೀಗೆ  ೧೦ ದಿನವೆಂಬುವುದು ೧೦ ವರ್ಷಗಳಾಗುತ್ತವೆ ಅವ್ವಣೆವ್ವಗೆ. ಆಕೆಯ ವಾರಗೀ ಹುಡುಗಿಯರ ಜೊತೆಗೂಡಿ ಬಾವಿಗೆ ನೀರು ತರಲು ಹೋಗುವಳು. ಕೊಡಗಳಿಗೆ ನೀರು ತುಂಬಿ, ನೀರಿನ ಕೊಡ ಎತ್ತಲು ಯಾರು ಇಲ್ಲವೆಂದು ಸುತ್ತಮುತ್ತ ನೋಡಿದಾಗ ಮುತ್ತಿನ ವ್ಯಾಪರಕ್ಕೆ ಹೋಗಿದ್ದ ಮಲ್ಲಮ್ಮನ ತಮ್ಮ ರಾಕಿರೆಡ್ಡಿ ಬಾವಿಯ ಹತ್ತಿರ ನೀರು ಕುಡಿಯಲು ಬರುವನು. ‘ನೀರಡಿಕೆ ಆಗಿದೆ ನೀರು ಕೊಡಿರವ್ವ’ ಎಂದು ಕೇಳುತ್ತಾನೆ. ಕೊಡ ಎತ್ತುತ್ತೀಯಾ ಕೊಡುತ್ತೇವೆ ಎಂದು ಆ ಹುಡುಗಿಯರು ಹೇಳುವರು. ನೀರು ಕುಡಿದ ಮೇಲೆ ನಿಮ್ಮ ನಿಮ್ಮ ಗಂಡಂದಿರ ಹೆಸರೇಳೀರಿ ಕೊಡ ಎತ್ತುತ್ತೇನೆ ಎಂದು ರಾಕಿರೆಡ್ಡಿ ಅವರಿಗೆ ಹೇಳುವನು. ನಾವೇನು ಮದುವೆ ಮಾಡಿಕೊಂಡಿದ್ದೇವೆಯೇ ಗಂಡನ ಹೆಸರು ಹೇಳಲು ಎಂದು ಆ ಹುಡುಗಿಯರು ಹೇಳುವರು. ನಿಮ್ಮ ನಿಮ್ಮ ಮಾವನವರ ಹೆಸರೇಳಿರಿ ಎಂದು ಹುಡುಗಿಯರು ಅವರಲ್ಲಿಯೇ ಮಾತನಾಡಿಕೊಳ್ಳುವರು. ಅವ್ವಣೆವ್ವಳಿಗೆ ರಾಕಿರೆಡ್ಡಿ ತನ್ನ ತಾಯಿಯ ತಮ್ಮ ಎಂಬುದು ಗೊತ್ತಿರುವುದಿಲ್ಲ. ಆದರೆ ಹೆಸರು ಮಾತ್ರ ನೆನಪಿರುತ್ತದೆ. ರಾಕಿರೆಡ್ಡಿ ಮುತ್ತು ಮಾರಲು ಹೋಗಿರುವುದರಿಂದ ಆತನನ್ನು ಅವ್ವಣೆವ್ವ ಚಿಕ್ಕಂದಿನಿಂದಲೇ ನೋಡಿರುವುದಿಲ್ಲ. ಕೊಡ ಎತ್ತಿದ ತಕ್ಷಣ ಅವ್ವಣೆವ್ವ ತನ್ನ ಗಂಡನ ಹೆಸರು ರಾಕಿರೆಡ್ಡಿ ಎಂದು ಹೇಳುತ್ತಾಳೆ. ರಾಕಿರೆಡ್ಡಿಗೆ ತನ್ನ ಅಕ್ಕನ ಮಗಳಾದ ಅವ್ವಣೆವ್ವನ ಬಗ್ಗೆ ವ್ಯಾಮೋಹ ಉಂಟಾಗುತ್ತದೆ. ಎಲ್ಲ ಹುಡುಗಿಯರ ಕೊಡ ಎತ್ತಿದ ತಕ್ಷಣ  ರಾಕಿರೆಡ್ದಿ ನೇರ ಮನೆಗೆ ಹೋಗಿ ಮಲಗಿಕೊಂಡು ಬಿಡುವನು. ಮನೆಯಲ್ಲಿ  ರಾಕಿರೆಡ್ಡಿ ಅಣ್ಣಂದಿರು ಆತನನ್ನು ಊಟಕ್ಕೆ ಕರೆಯುತ್ತಾರೆ. ಆದರೆ ರಾಕಿರೆಡ್ಡಿ ಎದ್ದೇಳುವುದಿಲ್ಲ. ನನ್ನ ಅಕ್ಕ ಮಲ್ಲಮ್ಮನ ಹೊಟ್ಟೆಯಲ್ಲಿ ಹೆಣ್ಣು ಹುಟ್ಟಿದೆ. ಆಕೆಯನ್ನು ತಂದು ಮದುವೆ ಮಾಡಬೇಕೆಂದು ರಾಕಿರೆಡ್ಡಿ ಹೇಳುವನು. ಮಲ್ಲಮ್ಮನನ್ನು ಹೇಗೆ ಕೇಳುವುದು ಎಂದು ರಾಕಿರೆಡ್ಡಿ ಅಣ್ಣಂದಿರು ಚಿಂತಿಸುತ್ತಾರೆ. ಆಗ ರಾಕಿರೆಡ್ದಿ ನೀವು ಹೋಗಿ ಅಕ್ಕನನ್ನು ಕೇಳಲೇಬೇಕೆಂದು  ಹಠ ಹಿಡಿಯುತ್ತಾನೆ. ಆಗ ಅವನ ಅಣ್ಣಂದಿರು ಮಲ್ಲಮ್ಮನ ಮನೆಗೆ ಹೋಗುವರು. ಮಲ್ಲಮ್ಮನ ಗಂಡ ಭರಮರೆಡ್ದಿ ಏನು? ಎಲ್ಲ ಅಳಿಯಂದಿರು ಬಂದ್ದಿದ್ದೀರಲ್ಲ ಯಾಕೆ ಎಂದು ವಿಚಾಸುತ್ತಾನೆ. ಆಗ ಅವರು ನಿಮ್ಮ ಮನೆಯಲ್ಲಿ ತುಪ್ಪದ ಊಟ ಮಾಡಲಿಕ್ಕೆ ಬಂದಿದ್ದೇವೆ. ಎಂದು ಹೇಳುವರು. (ತುಪ್ಪದ ಊಟವೆಂದರೆ, ಕನ್ಯೆ ಕೇಳಲು ಬಂದಿದ್ದೇವೆ. ಎಂದು ಅರ್ಥ. ಹಿಂದಿನ ಕಾಲದಲ್ಲಿ ಈ ರೀತಿ ಹೇಳುತ್ತಿದ್ದರು). ಆಗ ಮಲ್ಲಮ್ಮನಿಗೆ ಒಂದೇ ಒಂದು ಹೆಣ್ಣು ಹಡೆದ್ದಿದ್ದೇನೆ, ನನ್ನ ಮಗಳನ್ನು ಕೊಡುವುದಿಲ್ಲವೆಂದು ಹಠ ಹಿಡಿಯುತ್ತಾಳೆ. ಆಗ ಮಧ್ಯೆ ಪ್ರವೇಶಿಸಿ ಭರಮರೆಡ್ಡಿ ನನ್ನ ಅಳಿಯಂದಿರು ಮನೆ ಬಾಗಿಲಿಗೆ ಹೆಣ್ಣು ಬೇಕೆಂದು ಬಂದಿದ್ದಾರೆ, ಕೊಟ್ಟು ಬಿಡೋಣ, ಇಲ್ಲದಿದ್ದರೆ ಸಂಬಂಧ ಹರಿಸು ಹೋಗುತ್ತದೆ ಎಂದು ಹಠ ಮಾಡಿ ಅವ್ವಣೆವ್ವಳನ್ನು ಕೊಡಲು ಒಫ್ಪಿಗೆ ನೀಡುತ್ತಾನೆ. ಸಿಹಿ, ತುಪ್ಪದ ಊಟ ಮನೆಯಲ್ಲಿ ನಡೆಯುತ್ತದೆ. ಅವ್ವಣೆವ್ವನ ವಯಸ್ಸು ೧೦ ವರ್ಷ ಇನ್ನೂ ಅವಳು ಋತುಮತಿ ಕೂಡ ಆಗಿರುವುದಿಲ್ಲ. ಆದರೂ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತದೆ. ರಾಕಿರೆಡ್ಡಿ ಕೊನೆಯ ಮಗ ಮತ್ತು ಅವ್ವಣೆವ್ವ ಕೂಡ ಕೊನೆಯ ಮಗಳು. ಇಬ್ಬರೂ ಕಡೇ ಹುಟ್ಟಿನವರು. ಈಳೇವುಶಾಸ್ತ್ರ ನಡೆಯುತ್ತದೆ. ಗಾಂಧಾರಿ ಅಗ್ನದಂತೆ, ಅವ್ವಣೆವ್ವ ಹಾಗೂ ರಾಕಿರೆಡ್ದಿ ಮದುವೆಗೆ  ಸಿದ್ಧತೆ ನಡೆಯುತ್ತದೆ.ಅವ್ವಣೆವ್ವಳ ಮದುವೆ ನಿಶ್ಚಿತಾರ್ಥ ಆಗಿರುವುದನ್ನು ಕೇಳಿದ ಭೀಮ ಗಜವನ್ನು ತೆಗೆದುಕೊಂಡು ಮರಗಳನ್ನು ಉರುಳಿಸುತ್ತಾ ಸಿಟ್ಟಿನಿಂದ ಕೈಲಾಸಕ್ಕೆ ಹೋಗುವನು. ಕೈಲಾಸದಲ್ಲಿ ಪರಮೇಶ್ವರ ಭೀಮನ ಸಿಟ್ಟನ್ನು ನೋಡಿ ಗಡಗಡ ನಡುಗುವನು. ಯಾಕೆ ಬಂದೆ ಭೀಮ ಎಂದು ಪರಮೇಶ್ವರ ಕೇಳಲು, ಆಗ ಭೀಮ ನಿನ್ನ ಕೊರಳಲ್ಲಿ ಇರುವ ಸರ್ಪಬೇಕು ಕೊಡು, ಯಾಕೆ ನಡುಗುತ್ತೀಯಾ ಎಂದು ಪರಮೇಶ್ವರನಿಗೆ ಹೇಳುವನು. ಆ ಸರ್ಪಯಾಕೆ ಬೇಕು ಎಂದು ಪರಮೇಶ್ವರ ಭೀಮನನ್ನು ಕೇಳಲು ಆಗ ಭೀಮ ನಾನು ಮದುವೆಯಾಗುವ ಕನ್ಯೆಯನ್ನು ರಾಕಿರೆಡ್ಡಿ ಮದುವೆಯಾಗುತ್ತಿದ್ದಾನೆ. ಅವನನ್ನು ಸರ್ಪದಿಂದ ಕಚ್ಚಿಸಬೇಕು. ಅದಕ್ಕಾಗಿ ಸರ್ಪವನ್ನು ಕೊಡು ಎಂದು ಭೀಮ ಪರಮೇಶ್ವರನನ್ನು ಕೇಳುವನು. ಆಗ ಪರಮೇಶ್ವರ  ‘ಮದುವೆ’ ಎಂಬುದು ಶುಭಕಾರ್ಯ, ಮದುವೆ ಯಾಗುವುದನ್ನು ನಿಲ್ಲಿಸಬಾರದು. ಪಾಪದ ಕೆಲಸ ಮಾಡಬಾರದು, ಎಂದು ಭೀಮನಿಗೆ ಹೇಳುವನು. ಆದರೆ  ಭೀಮ ಪರಮೇಶ್ವರನ ಮಾತನ್ನು ಕೇಳದೆ ಅವ್ವಣೆವ್ವ ನಾನು ಮದುವೆ ಯಾಗುವ ಕನ್ಯೆ, ಎಂದು ಬಂಡಿಗಾಲಿಯಂತ ಕಣ್ಣು ತಿರುಗಿಸಿ ಸಿಟ್ಟಾಗುವನು ಪರಮೇಶ್ವರ ಹೆದರಿ ತನ್ನ ಕೊರಳಲ್ಲಿರುವ ಸರ್ಪವನ್ನು ಕೊಡಲು ಒಪ್ಪುವನು. ಆಗ ಪರಮೇಶ್ವರನ ಸರ್ಪಕ್ಕೆ ಭೀಮನ ಮಾತನ್ನು ಕೇಳು. ಆತನ ಮಾತನ್ನು ಮೀರಬೇಡ, ಮೀರಿದರೆ ಆತ ನಿನ್ನನ್ನು ಕೊಲ್ಲುವನು. ನಿನ್ನನ್ನು ಕೈಲಾಸಕ್ಕೆ ಕಳಿಸುವುದಿಲ್ಲ. ಭೀಮನ ಮಾತನ್ನು ಮರೆಯದೇ ಕೇಳು ಎಂದು ಪರಮೇಶ್ವರನ ಸರ್ಪಕ್ಕೆ ಹೇಳಿಕಳಿಸುವನು. ಅವ್ವಣೆವ್ವ ಹಾಗೂ ರಾಕಿರೆಡ್ದಿಯರ ಮದುವೆಗಿಂತ ಮುಂಚೆಯೇ ಭೀಮ ಸರ್ಪವನ್ನು ತೆಗೆದುಕೊಂಡು ಭೂಲೋಕಕ್ಕೆ ಬರುವನು. ಭೀಮ ಸರ್ಪಕ್ಕೆ ಬಟ್ಟಲು ತುಂಬ ಹಾಲು ಕುಡಿಸಿ, ಅವ್ವಣೆವ್ವ ತಾಳಿ ಕಟ್ಟಿಸಿಕೊಂಡು ಬರುವಾಗ ಆಕೆಯನ್ನು ಕಚ್ಚಬೇಡ, ಮದುವೆ ಮನೆಯಲ್ಲಿ ಓಡಾಡುವವರನ್ನು ಕಚ್ಚಬೇಡ, ಮದುವೆ ಕಾರ್ಯ ಮಾಡುವವರನ್ನು ಕಚ್ಚಬೇಡ, ಯಾರಿಗೂ ಕಾಣಬೇಡ, ಬಾಗಿಲಿನ ಕದದ ಮೂಲೆಯಲ್ಲಿ ಕುಳಿತಿರು, ಮದುವೆಯಾದ ಮೇಲೆ ಅವ್ವಣೆವ್ಬಳ ಗಂಡ ಕಾಲು ತೊಳೆದುಕೊಂಡು ಬಲಗಾಲು ಇಟ್ಟು ಒಳಕ್ಕೆ ಬರುವಾಗ ಆತನ ಬಲಗಾಲಿನ ಹೆಬ್ಬೆಟ್ಟನ್ನು ಕಚ್ಚಬೇಕು ಎಂದು ಸರ್ಪಕ್ಕೆ ಹೇಳಿದನು.

ಅವ್ವಣೆವ್ವನ ಮದುವೆ ಭರಮರೆಡ್ಡಿ ಮನೆ ಮುಂದೆ ವಿಜೃಂಭಣೆಯಿಂದ ನಡೆಯುತ್ತದೆ. ಬೀಗರು ಬರುತ್ತಾರೆ. ಅವರನ್ನು ಎದುರುಗೊಳ್ಳುತ್ತಾರೆ. ಅಂಗಳ ಸೆಳೇವುಗೊಟ್ಟು ಅಂದ್ರಹಾಕಿ ಸುರಗಿ ಸುತ್ತಿ ಎತ್ತಿನ ಮೇಲೆ ಧಾರೆ ಕಾರ್ಯ ನಡೆಯುತ್ತದೆ. ಬೀಸುವ ಕಲ್ಲಿನ ಮೇಲೆ ಅವ್ವಣೆವ್ವ ನಿಂತಿದ್ದಾಳೆ. ಜೋಳ ಮೆಟ್ಟಕ್ಕಿ ಪುಟ್ಟಿಯ ಮೇಲೆ ರಾಕಿರೆಡ್ಡಿ ನಿಂತಿದ್ದಾನೆ. ಬೀಸುವ ಕಲ್ಲಿಗೆ ಕುಂಕುಮ, ವಿಭೂತಿ, ಹಚ್ಚುವರು. ಅಷ್ಟರಲ್ಲಿ ತಾಳಿ ಮಹೂರ್ತ ಸಮೀಪಿಸಿತು ತಾಳಿ ಕಟ್ಟಿದ ನಂತರ ಅವ್ವಣೆವ್ವ ಸೇರು ಒದ್ದು ಒಳಕ್ಕೆ ಹೋಗುವಳು. ಆಕೆಯ ಹಿಂದೆ ರಾಕಿರೆಡ್ಡಿ ಬಲಗಾಲ ಇಟ್ಟು ಮನೆಯೊಳಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಬಲಗಾಲಿನ ಹೆಬ್ಬೆರಳನ್ನು ಸರ್ಪ ಕಚ್ಚುವುದು. ರಾಮ ರಾಮ ಎಂದು ರಾಕಿರೆಡ್ಡಿ ಸಾಯುವನು. ತಕ್ಷಣ ಸರ್ಪ ಸಿಟ್ಟಿನಿಂದ ಪರಮೇಶ್ವರನ ಹತ್ತಿರಕ್ಕೆ ಹೋಗುತ್ತದೆ. ಅವ್ವಣೆವ್ವ, ಮಲ್ಲಮ್ಮ, ಭರಮರೆಡ್ಡಿ ಬೋರ್ಯಾಡಿ ಅಳುವರು. ಮನೆ ತುಂಬ ದುಃಖ ಆವರಿಸಿದೆ. ಹೋದ ಕೆಲಸವನ್ನು ಮುಗಿಸಿ ಬಂದೆ ಎಂದು ಸರ್ಪ ಪರಮೇಶ್ವರನಿಗೆ ಹೇಳುತ್ತದೆ. ವಿಧವೆಯಾದ ಅವ್ವಣೆವ್ವ ತನ್ನ ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿಯೇ ಉಳಿಯುತ್ತಾಳೆ. ಆಕೆಯ ಏಳುಜನ ಅಣ್ಣಂದಿರು ತಿಂಗಳಿಗೊಬ್ಬರಂತೆ ಆಕೆಯನ್ನು ನೋಡಿಕೊಳ್ಳುವರು. ಏಕೆಂದರೆ ಮುತ್ತಿನ ವ್ಯಾಪಾರಕ್ಕೆ ಹೋಗುವುದರಿಂದ ಒಂದು ತಿಂಗಳು ಒಬ್ಬೊಬ್ಬರಿಗೆ ಮಾತ್ರ ಬಿಡುವು. ತೂಗು ಮಂಚದಲ್ಲಿ ಅವ್ವಣೆವ್ವ ಕುಳಿತರೆ ಏಳುಜನ ಸೊಸೆಯರು ತೂಗು ಮಂಚವನ್ನು ತೂಗಬೇಕು. ಬಹಳ ಚೆಲುವೆಯಾದ ಅವ್ವಣೆವ್ವ, ಹೊರಗಿನ ಬಿಸಿಲು ಕೂಡ ನೋಡಿದವಳಲ್ಲ, ಇತ್ತ ಭರಮರೆಡ್ಡಿ ಹಾಗೂ ಮಲ್ಲಮ್ಮ ಇಬ್ಬರಿಗೂ ಅವ್ವಣೆವ್ವಳ ಮದುವೆಯ ವಿಷಯವಾಗಿ ಜಗಳವಾಗುವುದು, ಅವ್ವಣೆವ್ವನನ್ನು ಒಂದು ತಿಂಗಳು ತೂಗಿದರು, ಎರಡು ತಿಂಗಳು ತೂಗಿದರು ಮೂರನೇ ತಿಂಗಳಲ್ಲಿ ಅಣ್ಣನ ಹೆಂಡತಿಯರು ಆಡಿಕೊಳ್ಳಲು ಸುರುಮಾಡುತ್ತಾರೆ. ‘ಬಟ್ಟನ ಮಾರಿಗೆ ನೆಟ್ಟನೆ ಮೂಗಿಗೆ ಈಕೆಗೆ ಯಾಕೆಬೇಕು ಮಂಚ’ ಎಂದು ಆಡಿಕೊಳ್ಳುವರು. ಅವ್ವಣೆವ್ವ ಗಂಡನನ್ನು ಕಳೆದುಕೊಂಡ ಸಂಕಟದಲ್ಲಿ ಒಂದು ಮಾತನ್ನು ಆಡುವುದಿಲ್ಲ. ವಿಧವೆಯಾದ ಅವ್ವಣೆವ್ವನಿಗೆ ಹದಿಮೂರು ವರ್ಷ ತುಂಬುವವು. ಮದುವೆಯಾದ ಮೇಲೆ ಅವ್ವಣೆವ್ವ ಋತುವತಿಯಾಗುವಳು. ಅವ್ವಣೆವ್ವ ತನ್ನ ತಂದೆ, ತಾಯಿ, ಅಣ್ಣಂದಿರಿಗೆ ಅಡಿಗೆಮಾಡಿ ಇಳಿಸುವಳು. ತಂದೆ, ತಾಯಿ, ಅಣ್ಣಂದಿರು ಎಲ್ಲರೂ ಕುಳಿತು ಊಟ ಮಾಡುವರು. ಊಟ ಮಾಡಿದ ನಂತರ, ಮಂಚ ಇಳಿದು ಯಾಕೆ ಬಂದೆ, ಯಾರಾದರೂ ಏನಾದರೂ ಅಂದರೇನು ಎಂದು ಅವ್ವಣೆವ್ವನನ್ನು ತಂದೆ, ತಾಯಿ ಕೇಳುವರು. ಆಗ ಅವ್ವಣೆವ್ವ ಯಾರು ಏನು ಅಂದಿಲ್ಲ, ಆಡಿಲ್ಲ. ನಾನೇ ತಿಳಿದು ಇಳಿದಿದ್ದೇನೆ ಎಂದು ಹೇಳುವಳು. ಮನೆಯಲ್ಲಿ ಸುಣ್ಣ ಬಣ್ಣವನ್ನು ಬಳಿಯುವ ಸಲುವಾಗಿ ಅವ್ವಣೆವ್ವನ ಅಣ್ಣನ ಹೆಂಡತಿಯರು ಆಕಳನ್ನು ಮೇಯಲು ಬಿಡುವರು. ಅದರ ಹಿಂದೆ ಕರು ಹೋಗುವುದು ಅದನ್ನು ಹಿಡಿಯಲು ಅವ್ವಣೆವ್ವ ಹೊರಕ್ಕೆ ಹೋಗುವಳು. ಕರು ತಾಯಿಯ ಹಿಂದೆ ಚಿಣ್‌ ಚಿಣ್‌ ಎಗರಿಕೊಂಡು ಹೋಗುತ್ತಿರುತ್ತದೆ. ಅದು ಮುಂದುಮುಂದೆ ಹೋಗಲು, ಅವ್ವಣೆವ್ವ ಅದರ ಹಿಂದೆ ಹೋಗುವಳು. ಅದೇ ಸಂದರ್ಭದಲ್ಲಿ ಭೀಮ ಮತ್ತು ಧರ್ಮರಾಯ ಇಬ್ಬರು ಗರಡಿ ಮನೆಮುಂದೆ ‘ಪಗಡೆಯಾಟ’ವಾಡುತ್ತಾ ಕುಳಿತಿರುತ್ತಾರೆ. ಕರು ಅರಚಿಕೊಳ್ಳುತ್ತಾ ಹೋಗುವುದನ್ನು ಕಂಡ ಭೀಮ ಅವ್ವಣೆವ್ವನನ್ನು ನೋಡಿ ಪಗಡೆಯಾಟವಾಡುವುದನ್ನು ಬಿಟ್ಟು ಎದ್ದು ಬಿಡುವನು. ಹೇ ಭೀಮ ಎಲ್ಲಿಗೆ ಹೋಗುತ್ತಿಯಾ, ಎಂದು ಧರ್ಮರಾಯ ಕೇಳಲು, ಈಗ ಬರುತ್ತೇನೆ ಎಂದು ಹೇಳಿ ಭೀಮ ಹೋಗುವನು. ಕರು ಆಕಳ ಹಿಂದೆ ಅಡವಿಗೆ ಹೋದಂತೆ ಅದರ ಹಿಂದೆ ಅವ್ವಣೆವ್ವ ಹೋಗುವಳು. ಆಕೆಯ ಹಿಂದೆ ಭೀಮ ಹೋಗುವನು. ಕರುವನ್ನು ಕಟ್ಟಿ ಹಾಕಿ ಅವ್ವಣೆವ್ವ ಅಡವಿಯ ಒಂದು ಪೊದರಿನಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತಿರುವಳು. ಭೀಮ ಕರಡಿಯನ್ನು ಕರೆದು ಆ ಪೊದರಿನಲ್ಲಿ ನಿಮ್ಮ ತಾಯಿ ಅವ್ವಣೆವ್ವ ಕುಳಿತ್ತಿದ್ದಾಳೆ ಆಕೆಯ ದುಃಖವೇನು  ಕೇಳಿ ಬಾ ಎಂದು ಕರಡಿಯನ್ನು ಕಳಿಸುವನು. ಆಗ ಕರಡಿ ಹೋಗಿ ಅವ್ವಣೆವ್ವನ ಮೂಖದ ಮೇಲೆ ಕೈಯಾಡುತ್ತದೆ. ಆದರೂ ಅವ್ವಣೆವ್ವ  ಮಾತ್ರ ಕಣ್ಣು ತೆಗೆಯುವುದಿಲ್ಲ. ಆಗ ಕರಡಿ ಭೀಮನ ಹತ್ತಿರ ಹೋಗಿ ನಮ್ಮ ತಾಯಿ ಕಣ್ಣು ತೆಗೆಯುತ್ತಿಲ್ಲವೆಂದು ಹೇಳುತ್ತದೆ. ಹಾವು, ಹುಲಿ ಮುಂತಾದ ಪ್ರಾಣಿಗಳನ್ನು ಕಳಿಸುವನು. ಆದರೂ ಅವ್ವಣೆವ್ವ  ಕಣ್ಣು ತೆಗೆಯುವುದಿಲ್ಲ. ‘ಸತ್ಯಧರ್ಮರು ಸತ್ಯುಳ್ಳರಾದರೆ ಜಂಬುನೇರಳೆ ಮರ ಹುಟ್ಟಿಬಾರದೆ’ ಎಂದು ಭೀಮ ಹೇಳುತ್ತಾನೆ. ಬಾಯಾಳ ಮಾತು ಬಾಯಲ್ಲಿ ಇರಲಿಕ್ಕೆ ಜಂಬು ನೇರಳೆ ಮರ ಹುಟ್ಟಿತು. ಆ ಮರವನ್ನು ಹತ್ತಿದ ಭೀಮ ಅದನ್ನು ಅಲುಗಾಡಿಸುವನು. ಮರದ ಹಣ್ಣುಗಳೆಲ್ಲ ಅವ್ವಣೆವ್ವನ ಮೇಲೆ ಸುರಿಯುತ್ತವೆ. ಆಗ ಅವ್ವಣೆವ್ವ  ಕಣ್ಣು ತೆರೆದು ಹಣ್ಣು ಬೀಳುವುದನ್ನು ನೋಡಿ, ಮನೆಯಲ್ಲಿರುವ ಅಣ್ಣನ ಮಕ್ಕಳಿಗೆ ತಿನ್ನಲು ಬರುತ್ತವೆ, ಎಂದು ಆರಿಸಿಕೊಂಡು ಉಡಿಯಲ್ಲಿ ಹಾಕಿಕೊಂಡು ಎದ್ದು ಮೆಲ್ಲನೆ ಹೊರಡಲು ಅಣಿಯಾಗುವಳು. ಅಷ್ಟರಲ್ಲಿ ‘ಮೆಲ್ಲ ಮೆಲ್ಲಕ್ಕೆ ಹೆಜ್ಜೆ ಇಡಬೇಡ  ಎಲೇ ಹೆಣ್ಣೆ ಹಣ್ಣಿನ ಸುಂಕವನ್ನು ಕೊಟ್ಟು ಹೋಗು ‘ ಎಂದು ಭೀಮ ಅವ್ವಣೆವ್ವನಿಗೆ ಹೇಳುವನು. ಅವ್ವಣೆವ್ವ ಸಿಟ್ಟಿನಿಂದ ಕಿವಿಯಲ್ಲಿರುವ ಓಲೆಗಳನ್ನು, ವಾಲಿಯನ್ನು ಮತ್ತು ನಡುಪಟ್ಟಿಯನ್ನು ಬಿಚ್ಚಿ ಕೊಡುವಳು, ವಾಲಿ ಬಿಚ್ಚಿ ಕೋಡುತ್ತೀ ನಿನ್ನಂತ ಹೆಣ್ಣು ಮನೆಯಲ್ಲಿ ಇದ್ದಿದ್ದರೆ ಆ ವಾಲಿಯನ್ನು ಹೊಯ್ದು ಇಡುತ್ತಿದ್ದೆ ಎಂದು ಭೀಮ ಅವ್ವಣೆವ್ವನಿಗೆ ಹೇಳುವನು. ಮೂಲೆ ಹೇರುವುದಕ್ಕೆ ಸುಂಕ, ಮುಕುಡಿ  ಹೇರುವುದಕ್ಕೆ ಸುಂಕ, ಅಡವಿಯ ಹಣ್ಣಿಗೆ ಯಾತರ ಸುಂಕ ಎಂದು ಅವ್ವಣೆವ್ವ ಭೀಮನಿಗೆ ಹೇಳುವವಳು. ಆ ಮಾತನ್ನು ಕೇಳಿದ ಭೀಮ ಕೆಳಗೆ ಇಳಿದು ಬರುವನು. ಆಗ  ಅವ್ವಣೆವ್ವನನ್ನು ಭೀಮ ಒಲಿಸಿಕೊಂಡು ಪೊದೆಗೆ ಕರೆದುಕೊಂಡು ಹೋಗುವನು. ಇತ್ತ ಅವ್ವಣೆವ್ವನ ಅಣ್ಣಂದಿರು ಅವ್ವಣೆವ್ವನನ್ನು ಮತ್ತು ಭೀಮನ ಅಣ್ಣಂದಿರು ಭೀಮನನ್ನು ಹುಡುಕಿ ಸುಮ್ಮನಾಗುವರು. ಕುಂತಿದೇವಿ ಭೀಮನಿಲ್ಲದೇ ಅಳುತ್ತಾ ಮನೆ ಮುಂದೆ ಕೂಡುವಳು. ಬಂಡಿ ಅನ್ನ ತಿನ್ನುತ್ತಿದ್ದ , ಬಂಡಿಗಾಲಿಯಂತ ಕಣ್ಣು ಇದ್ದವನು ನನ್ನ ಮಗ ಭೀಮ ಎಲ್ಲಿಗೆ ಹೋದನೋ ಎಂದು ಕುಂತಿದೇವಿ ಮನೆ ಮುಂದೆ ಅಳುತ್ತಾ ಕುಳಿತಿರುವಳು. ಅಡವಿಯಲ್ಲಿ ಅವ್ವಣೆವ್ವ  ಗಂಡು ಮಗುವನ್ನು ಹಡೆಯುವಳು, ನಂತರ ಭೀಮನಿಗೆ ನಿನ್ನ ‘ಉರಿಗೋಳು ನೀನೇ ಕೊಯ್ದಿಕೋ’ ಎಂದು ಹೇಳುವಳು. ಆ ಕೂಸನ್ನು ಭೀಮ ಹೆಗಲಿಗೆ ಹಾಕಿಕೊಂಡು ರಾತ್ರಿ ಮನೆಗೆ ಬರುವನು. ಹಾಲು ತುಪ್ಪ ಇಲ್ಲವಲ್ಲ ಹಡದಮ್ಮ ಎಂದು ಬೀಮ ಕುಂತಿಯನ್ನು ಕೇಳುವನು. ಆಗ ಕುಂತಿದೇವಿ ‘ಸತ್ಯುಳ್ಳ ಧರ್ಮರ ಸತ್ಯವ ಇದ್ದರೆ, ಹಾಲಿನ ಕಾಲುವೆ ತುಪ್ಪದ ಕಾಲುವೆ ಹರಿಯಲಿ’ ಎಂದು ಹೇಳುವಳು. ಅದರಂತೆ ಹಾಲಿನ ಕಾಲುವೆ, ತುಪ್ಪದ ಕಾಲುವೆ ಹರಿಯುತ್ತದೆ, ಹಾಲು ತುಪ್ಪವನ್ನು ಭೀಮ ಕೊಪ್ಪರಿಕೆ ಅನ್ನದಲ್ಲಿ ಹಾಕಿ ಮೂರೇ ತುತ್ತಿನಲ್ಲಿ ಊಟ ಮಾಡುವನು. ಕುಂತಿದೇವಿ ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುತ್ತಿರುತ್ತಾಳೆ. ಭೀಮ ಅವ್ವಣೆವ್ವ  ಹಡೆದ ಕೂಸನ್ನು , ಕುಂತಿದೇವಿಯ ಹಿಂದೆ ಬಿಡುವನು, ಕುಂತಿ ಬೆಣ್ಣೆ ತೆಗೆದು ಹಾಕಿದಂತೆ, ಆ ಕೂಸು ಬೆಣ್ಣೆಯನ್ನು ತಿನ್ನುತ್ತಿರುತ್ತದೆ. ಇದು ಯಾರ ಕೂಸು ಎಂದು ಕುಂತಿದೇವಿ ಆ ಕೂಸನ್ನು ನೋಡುವಳು. ಆಗ ದ್ರೌಪದಿಗೆ ತಲೆಕಟ್ಟುಕಟ್ಟಿ ಸೂಲಗಿತ್ತಿಗೆ ಹೇಳಿ ಕಳಿಸುತ್ತಾರೆ. ವೈಭವದಿಂದ ಕನ್ನಡಿಯಲ್ಲಿ ಸೂಗಿತ್ತಿ ಮುಖವನ್ನು ನೋಡಿಕೊಂಡು ಮುತ್ತಿನ ಸೀರೆ, ಕುಪ್ಪಸ ತೊಟ್ಟುಕೊಂಡು ಪಲ್ಲಕ್ಕಿಯಲ್ಲಿ ಏಳುಬಾಗಿಲು ದಾಟಿ ಧರ್ಮರಾಯರ ಮನೆಗೆ ಬರುವಳು. ಧರ್ಮರಾಯ ಒಳಗೆ ಸೂಲಗಿತ್ತಿಗೆ ಆಸೆ ಹುಟ್ಟಿಸುವನು. ನಿನಗೆ ಮುತ್ತಿನ ಉಡಿಅಕ್ಕಿ ಹಾಕುತ್ತೇನೆ, ಬಿಂದಿಗೆ ಹೊನ್ನು ಕೊಡುತ್ತೇನೆ, ದ್ರೌಪದ ಹಡೆದಿದ್ದಾಳೆ ಎಂದು ಜನರಿಗೆ ತಿಳಿಸುವಂತೆ ಹೇಳುವನು. ದ್ರೌಪದಿಗೆ ತಲೆಕಟ್ಟು ಕಟ್ಟಿ ಸ್ನಾನ ಮಾಡಿಸಿ, ಬೇವಿನ ತಪ್ಪಲು ಹಚ್ಚಿ ಇತ್ಯಾದಿ ಕಾರ್ಯವನ್ನು ಸೂಲಗಿತ್ತಿ ಮಾಡುವಳು. ಧರ್ಮರಾಯರ ಮನೆಯಲ್ಲಿ ಗಂಡು ಮಗು ಹುಟ್ಯಾನ ದ್ರೌಪದಿ ಹೊಟ್ಯಾಗ ಎಂದು ಸೂಲಗಿತ್ತಿ ಓಣಿಯ ಜನರಿಗೆ ಹೇಳುತ್ತಾ ಬರುವಳು. ಇತ್ತ ಬಡಿಗೇರನಿಗೆ ಹಾಲು ಅನ್ನವನ್ನು ಊಟಕ್ಕೆ ನೀಡಿ ತೊಟ್ಟಿಲ ಮಾಡಲು ತಿಳಿಸುವರು. ಯಾವ ಮರ ಇಳಿಸಲೆಂದು ಬಡೆಗೇರ ಕೇಳಿದರೆ, ಉತ್ತುತ್ತಿಮರ ಇಳಿಸು ಎಂದು ಧರ್ಮರಾಯ ಅವನಿಗೆ ಹೇಳುವನು. ನಾಲ್ಕು ಮೂಲೆಗೆ ನಾಕು ಗಂಟೆ ಸಾಕ್ಷಾತ್  ಶಿವನ ನಿಲ್ಲಿಸ್ಯಾರೆ ಎನ್ನುವಂತೆ, ಬಡಿಗೇರ ತೊಟ್ಟಿಲು ಮಾಡಿಕೊಂಡು ಸಡಗರದಿಂದ ಬರುವನು. ಬಂಗಾರದ ಸರಪಳಿ, ಬೆಳ್ಳಿಯ ಕೊಂಡಿ, ತೊಟ್ಟಿಲಕ್ಕೆ ಸಿದ್ಧವಾಯಿತು.  ದ್ರೌಪದಿ ಹಡೆದ್ದಿದ್ದಾಳೆ ಆಕೆಯ ಕೂಸಿನ ತೊಟ್ಟಿಲ ಕಾರ್ಯು ಇದೆ ಎಂದು ಓಣಿಯ ಮಂದಿ, ಊರಮಂದಿಗೆ ಡಂಉರ ಸಾರಲಾಯಿತು.

ಇತ್ತ ರೆಡ್ಡಿಯವರ ಮನೆಯಲ್ಲಿ ದನಗಳಿಗೆ ಮೇವು ಇಲ್ಲವೆಂದು ಏಳುಜನ ಸೊಸೆಯರು ಸಪ್ಪೆತರಲು ಸಪ್ಪೆ ಬಣವಿಗೆ ಬರುವರು. ಸಪ್ಪೆಯನ್ನು ಒಬ್ಬೊಬ್ಬರಾಗಿ ಕಿತ್ತುಕೊಳ್ಳುವಾಗ, ಸಪ್ಪೆ ಗುಂಟ  ಕೂದಲು ಬರುವವು. ಅವ್ವಣೆವ್ವನ ಕೂದಲನ್ನು ಬಣವಿಯಲ್ಲಿ ನೋಡಿ ದೆವ್ವ ಇದೆ ಎಂದು ಕೂಗಲು ಸುರು ಮಾಡುವರು. ಆಗ ದೆವ್ವವಲ್ಲ, ಬೂತವಲ್ಲ ನಿಮ್ಮ ತಾಯಿ ನಾನು ಅವ್ವಣೆವ್ವ ಬಣವಿಯಲ್ಲಿ ಕುಳಿತೀನಿ ಎಂದು ಅವ್ವಣೆವ್ವ ಹೇಳುವಳು, ಅವ್ವಣೆವ್ವನನ್ನು ರಾತ್ರಿ ಮನೆಗೆ ಕರೆದುಕೊಂಡು ಬಂದು ಏಳುಜನ ಸೊಸೆಯರು ಏಳು ಅಂಡೇವು ನೀರು ಕಾಯಿಸಿ ಅವ್ವಣೆವ್ವ ಮೈಯನ್ನು ತೊಳೆಯುವರು. ಅವ್ವಣೆವ್ವನಿಗೆ ಸ್ನಾನ ಮಾಡಿಸುವಾಗ ತಲೆಗೆ ಒಂದು ಬಟ್ಟಲು ಎಣ್ಣೆಯನ್ನು ಹಚ್ಚಲು ಅದು ಒಂದೇ ಮಗ್ಗಲು ಎಳೆದುಕೊಂಡು ಬಿಡುತ್ತದೆ. ಕಳ್ಳತನದಲ್ಲಿ ಬಸುರಾಗಿದ್ದಾಳೆ ಅವ್ವಣೆವ್ವ ಎಂದು ಆಕೆಯ ಅಣ್ಣನ ಹೆಂಡತಿಯರು ಆಡಿಕೊಳ್ಳುವರು. ಅದೇ ಸಮಯದಲ್ಲಿ ಭರಮರೆಡ್ಡಿಯ ಮನೆ ಮುಂದೆ ಡಂಗುರ ಬಾರಿಸುತ್ತಾ ದ್ರೌಪದಿ ಮಗನ ತೊಟ್ಟಿಲ ಇದೆ ಬರಬೇಕೆಂದು ಡಂಗುರ ಬಾರಿಸುವವನು ಹೇಳುವನು. ಆಗ ಅವ್ವಣೆವ್ವನ ಅಣ್ಣಂದಿರು ತೊಟ್ಟಿಲ ಕಾರ್ಯಕ್ಕೆ ಹೋಗಲು ತಮ್ಮ ಹೆಂಡತಿಯರಿಗೆ ತಿಳಿಸುವರು.

ತೊಟ್ಟಿಲ ಕಾರ್ಯವಾದ್ದರಿಂದ ಅವ್ವಣೆವ್ವನ ಅಣ್ಣಂದಿರು ಆ ಮಗುವಿಗೆ ಅಂಗಿ, ಕುಲಾಯಿ ತೆಗೆದುಕೊಂಡು ಹೋಗಲು ತಮ್ಮ ಹೆಂಡತಿಯರಿಗೆ ತಿಳಿಸುವರು. ಜೊತೆಗೆ ಅವ್ವಣೆವ್ವ ಆ ಕೂಸಿಗೆ ಜೋಳದ ದಂಟಿನಿಂದ ಕಡಗ, ಸರ, ನಡುಪಟ್ಟಿ ಇತ್ಯಾದಿ ಸಾಮಾನುಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಟ್ಟು ಕಳಿಸುವಳು.

‘ಸತ್ಯಧರ್ಮರು ಸತ್ಯುಳ್ಳರಾದರೆ, ದಂಡಿನ ಸಾಮಾನು ಹೋಗಿ ಬಂಗಾರವಾಗಲಿ’ ಎಂದು ಅವೆಲ್ಲವನ್ನು ಆ ಕೂಸಿನ ಮೈಮೇಲೆ ಹಾಕಲು ಅವೆಲ್ಲ ಬಂಗಾರವಾಗುತ್ತವೆ. ಧರ್ಮರ ಮನೆಯಲ್ಲಿ ತೊಟ್ಟಿಲ ಕಾರ್ಯ ಸಡಗರ ಸಂತೋಷದಿಂದ ನಡೆಯುತ್ತದೆ. ಅವ್ವಣೆವ್ವನ ಅಣ್ಣಂದಿರ ಹೆಂಡತಿಯರಾದ ಏಳು ಜನರಲ್ಲಿ ಐದು ಜನ ಮುತ್ತೈದೆಯರಿಗೆ ತೊಟ್ಟಿಲ ಕಾರ್ಯ ನಡೆಸಿಕೊಡಲು ಉಡಿಯಕ್ಕಿ ಹಾಕಿ ಹೊಸಸೀರೆ, ಕುಪ್ಪಸವನ್ನು ಕೊಟ್ಟು ತೊಟ್ಟಿಲ ಮುಂದೆ ನಿಲ್ಲಿಸುವರು. ಅವರು ತೊಟ್ಟಿಲ ತೂಗುತ್ತಾ.

ಜೋ, ಜೋ, ಅಂದಾಳ ಗೋಪಿ ಜೋ ಜೋ
ನಾಡ ಬಿಳಿ ಜೋಳ, ನಾಡ ಬಿಳಿಜೋಳ
ಸತ್ಯಧರ್ಮರ ಬಿಳಿಜೋಳ ಜೋ ಜೋ ಅಂದಾಳೆ ಗೋಪಿ ಜೋ, ಜೋ,
ಜೋ, ಜೋ, ಅಂದಾಳೆ ಗೋಪಿ ಜೋ ಜೋ“.

ಎಂದು ತೊಟ್ಟಿಲ ಹಾಡನ್ನು ಹಾಡಿ ಕಂದನ ಹೆಸರೇನೆಂದು ಇಡಬೇಕೆಂದು ದ್ರೌಪದಿಯನ್ನು ಮುತ್ತೈದೆಯರು ಕೇಳುವರು. ದ್ರೌಪದಿ ಕುಂತಿದೇವಿಯನ್ನು ಕೇಳಿ ಹೆಸರು ಇಡಬೇಕೆಂದು ಸಲಹೆ ಮಾಡುವಳು. “ಬೊಬ್ಬಲಿ” ಎಂದು ಹೆಸರಿಡಬೇಕೆಂದು ಕೊಂತೆಮ್ಮ ಹೇಳುವಳು. ಬೊಬ್ಬಲಿ ಎಂದು ಆ ಕೂಸಿಗೆ ಹೆಸರಿಡಲಾಗುತ್ತದೆ. ಅವ್ವಣೆವ್ವ ಮಾಡಿರುವಂತೆ ಜೋಳದ ದಂಟಿನ ಸಾಮಾನುಗಳನ್ನು ಆ ಕೂಸಿನ ಮೈಮೇಲೆ ಹಾಕಲು ಅವೆಲ್ಲ ಬಂಗಾರವಾಗುತ್ತವೆ.

            “ಕಣ್ಣು ಕೊಂತೆವ್ವನಂಗೆ ಬೆನ್ನು ಭೀಮನಂಗೆ
ಮುಖ ನೋಡಿದರೆ ಅವ್ವಣೆವ್ವನಂಗೆ

ಆ ಕೂಸು ಇರುವೆದೆಂದು ಅವ್ವಣೆವ್ವನ ಅಣ್ಣಂದಿರ ಹೆಂಡತಿಯರು ಆ ಕೂಸನ್ನು ನೋಡಿ ತಮ್ಮೊಳಗೆ ಮಾತನಾಡಿಕೊಳ್ಳುವರು. ಈ ಮಾತನ್ನು ಧರ್ಮರಾಯ ಕೇಳಿಸಿಕೊಂಡು ನಿಮ್ಮ ಸಾಮಾನುಗಳನು ತೆಗೆದುಕೊಂಡು ಹೋಗಿ ಎಂದು ಅವರಿಗೆ ಬಯ್ಯುವನು. ಉಡಿಯಕ್ಕಿ, ಸೀರೆ, ಕಣ ಇತ್ಯಾದಿಗಳನ್ನು ಧರ್ಮರಾಯ ವಾಪಸು ಪಡೆಯುವನು. ಅವ್ವಣೆವ್ವನ ಮುಂದೆ ಅಲ್ಲಿ ನಡೆದ ವಿಷಯವನ್ನು ತಿಳಿಸುವರು. ಕಣ್ಣು ಕೊಂತೆವ್ವನಂಗೆ, ಬೆನ್ನು ಭೀಮನಂಗೆ ಮುಖನೋಡಿದರೆ  ಅವ್ವಣೆವ್ವನಂಗೆ ಆ ಮಗು ಇದೆ ಎಂದು ಅಂದಿದಕ್ಕಾಗಿ ಧರ್ಮರಾಯ ಸಿಟ್ಟಿನಿಂದ ನಿಮ್ಮ ಸಾಮಾನುಗಳನು ತೆಗೆದುಕೊಂಡು ಹೋಗಿ ಎಂದು ಬಯ್ದ, ಅದಕ್ಕಾಗಿ ಅವರ ಸೀರೆ, ಕುಪ್ಪಸ, ಉಡಿಯಕ್ಕಿ ವಾಪಸ್ಸು ಕೊಟ್ಟು ಬಂದೆವು ಎನ್ನಲಿಕ್ಕೆ ಅವ್ವಣೆವ್ವ ದುಃಖಿಸಿ ಅಳುವಳು.

ಒಂದು ದಿನವೆಂಬುದು ಒಂದು ವರ್ಷವಾಗಿ, ಹನ್ನೆರಡು ದಿನವೆಂಬುದು ಹನ್ನೆರಡು ವರ್ಷವಾಗಿ ಬೊಬ್ಬಲಿಗೆ ಹನೆರಡು ವರ್ಷ ವಯಸ್ಸು ತುಂಬುವವು. ಬೊಬ್ಬಲಿ ದೊಡ್ಡವನಾಗುತ್ತಾ ಯುದ್ಧ ವಿದ್ಯೆಯನ್ನು ಕಲಿಯುವನು. ತನ್ನ ತಾಯಿಯಿಂದ ಸರ್ಪಬಾಣವನ್ನು ತೆಗೆದುಕೊಂಡು ಬೊಬ್ಬಲಿ ತನ್ನ ಸೋದರ ಮಾವ ಶಕುನಿ ಜೊತೆ ಹೋಗುವನು. ಸೋದರಮಾವ ಶಕುನಿ ಒಂದು ಅಲದ ಮರದ ಹತ್ತಿರ ಕರೆದುಕೊಂಡು ಹೋಗಿ ಆಲದಮರಕ್ಕೆ ಗುರಿ ಇಟ್ಟು ಬಾಣ ಬಿಡು ಎಂದ ಆ ಹುಡುಗನಿಗೆ. ಆ ಹುಡುಗ ಬಿಟ್ಟ ಬಾಣಕ್ಕೆ ಆಲದ ಮರದಲ್ಲಿರುವ ಎಲೆಗಳೆಲ್ಲ ಉದುರುತ್ತವೆ. ಆದರೆ ಐದು ಎಲೆಗಳು ಮಾತ್ರ ಮರದಲ್ಲಿ ಉಳಿಯುವವು. ಐದು ಎಲೆಗಳು ಮಾತ್ರ ಉಳಿದವಲ್ಲ ಎಂದು ಸೋದರಮಾವ ಕೇಳುವನು. ಆಗ ಬೊಬ್ಬಲಿ, ಅವರು ನಮ್ಮ ಅಪ್ಪನವರು ಎಂದು   ಸೋದರಮಾವನಿಗೆ ಹೇಳುವನು. ಬೊಬ್ಬಲಿಗೆ ಸೋದರಮಾವ  ಶಕುನಿ ಕಣ್ಣುಕಟ್ಟಿ ಕೆರೆಯಂಗಳದ ಹತ್ತಿರ ಇರುವ ಗರುಡಗಂಬದ ಮೇಲಕ್ಕೆ ಹತ್ತಿಸುವನು.  ಬೊಬ್ಬಲಿ ಗರುಡಗಂಬದ ಮೇಲೆ ಇರುವಾಗ ಶಕುನಿ ಮೋಸದಿಂದ ಭೀಮನ ಕಣ್ಣಿಗೆ ಬಟ್ಟೆಕಟ್ಟಿ ನಿನ್ನ ವೈರಿಗಳು ಬಂದರೆಂದು ಹೇಳಿ, ನೇರವಾಗಿ ಆ ಹುಡಗನಿಗೆ ಹೇಳುವನು. ಬಾಣಬಿಟ್ಟು ಹೊಡೆಸುವನು. ಅಯ್ಯೋ ನೀನು ನನ್ನ ತಂದೆಯಾಗಿ ಹೊಡೆದೆಯಲ್ಲ ಎಂದು ಬೊಬ್ಬಲಿಯ ದಿಂಬ ಕೆಳಕ್ಕೆ ಬೀಳುತ್ತದೆ. ಆದರೆ ರುಂಡ ಮಾತ್ರ ಗರುಡಗಂಬದ ಮೇಲೆ ಇರುತ್ತದೆ. ಆಗ ಅರ್ಜುನ, ದ್ರೌಪದಿ ಅಲ್ಲಿಗೆ ಬರುವರು. ದ್ರೌಪದಿ ಅಳುತ್ತಾ, ನಾನು ಹಡೆದ ಮಗ ನನ್ನ ಉಡಿಯಾಕ ಬೀಳು ಮಗನೆ ಎಂದು ಕಣ್ಣೀರಿಡುವಳು. ನಿನ್ನ ಉಡಿಯಾಕ ಬೀಳುವುದಿಲ್ಲವೆಂದು ಬೊಬ್ಬಲಿಯ ರುಂಡ ಅನ್ನುತ್ತದೆ. ಭೀಮ ಬಂದು ನನ್ನ ಉಡಿಯಕ ಬೀಳು ಮಗನೆ ಎಂದು ಕಣ್ಣೀರಿಡುತ್ತಾ ಕರೆಯುವನು. ಆಗ ನಿನ್ನ ಉಡಿಯಕ  ಬೀಳುವುದಿಲ್ಲವೆಂದು ಬೊಬ್ಬಲಿಯ ರುಂಡ ಅನ್ನುತ್ತದೆ. ಧರ್ಮರಾಯ ಮತ್ತು ಕುಂತಿದೇವಿ ಯಾರ ಉಡಿಯಕ  ಬೀಳುತ್ತೀಯಾ ಎಂದು ದುಃಖಿಸುತ್ತಾ ಕೇಳಲು, ಅಪ್ಪ ಭೀಮನಿಗೂ ನನ್ನ ತಾಯಿಗೂ ಮದುವೆಯಾದರೆ, ಮಾತ್ರ ಬೀಳುತ್ತೇನೆ ಎಂದು ಬೊಬ್ಬಲಿಯ ರುಂಡ ಅನ್ನುತ್ತದೆ. ಆಗ ಅವ್ವಣೆವ್ವನನ್ನು ಧರ್ಮರಾಯ ಕರೆದುಕೊಂಡು ಬರುತ್ತಾನೆ. ಭೀಮನಿಗೂ ಅವ್ವಣೆವ್ವನಿಗೂ ಮದುವೆ ಮಾಡಿದ ನಂತರ ಆ ರುಂಡ ಅವ್ವಣೆವ್ವ ಒಡ್ಡಿದಂತ ಉಡಿಯಲ್ಲಿ  (ಸೆರಗಿನಲ್ಲಿ) ಬೀಳುತ್ತದೆ. ಎಲ್ಲ ಎಲೆಗಳು ಬಿದ್ದವೆಂದ ಮೇಲೆ ಈ ಹುಡುಗ ಬೊಬ್ಬಲಿ ಪಾಂಡವರನ್ನು ಉಳಿಸುವುದಿಲವೆಂದು ಸೋದರಮಾವ ಶಕುನಿ ಮೋಸದಿಂದ ಬೊಬ್ಬಲಿಯನ್ನು ಕೊಲ್ಲಿಸಿದ. ಮಗನ ದಿಂಬ ಹಾಗೂ ರುಂಡವನ್ನು ಭೀಮ ಮತ್ತು ಅವ್ವಣೆವ್ವ ಹೊಂದಿಸಿ, ಕೆಂಡ ಮಾಡಿದ ಕಿಚ್ಚಿನಲ್ಲಿ ಹಾಕಿ ಸುಡುವರು. ಅವ್ವಣೆವ್ವ ಭೀಮ ಬೋರ್ಯಾಡಿ ಅಳುವರು. ಆ ಹುಡುಗ ಸತ್ತ ಮೇಲೆ ನಾವ್ಯಾಕೆ ಬದುಕಬೇಕೆಂದು ರೆಡ್ಡಿ ಜನಾಂಗದವರೆಲ್ಲ ಕೆಂಡದಲ್ಲಿ ಬಿದ್ದು ಸಾಯುತ್ತಾರೆ. ರೆಡ್ಡೇರ ವಂಶ ಅಳಿಯುತ್ತದೆ. ಪಾಂದವರ ವಂಶ ಉಳಿಯುತ್ತದೆ. ಕೊನೆಗೆ ಅವ್ವಣೆವ್ವ ಭೀಮನನ್ನು ಮದುವೆ ಆಗಿ ಧರ್ಮರಾಯರ ಮನೆ ಸೇರುವಳು.

ಜನಪದ ಕಾವ್ಯಗಳ ಅಧ್ಯಯನ ಆರಂಭವಾದುದು ರೊಮ್ಯಾಂಟಿಕ್ ಯುಗದಲ್ಲಿ, ತಮ್ಮ ದೇಶಾಭಿಮಾನವನ್ನು ಎತ್ತಿ ಹಿಡಿಯಲು ತಮ್ಮವರನ್ನು ಒಗ್ಗೂಡಿಸಲು, ತಮ್ಮ ಪರಂಪರೆಯ ಭವ್ಯತೆಯನ್ನು ನಿಚ್ಚಳವಾಗಿ ಎತ್ತಿ ತೋರಿಸಲು ಜನಪದ ಕಾವ್ಯಗಳನ್ನು ಬಳಸಿಕೊಳ್ಳಲಾಯಿತು. ಈ ಕಾವ್ಯವನ್ನು ನವರಾತ್ರಿಯ ಹಬ್ಬದ ಸಂದರ್ಭದಲ್ಲಿ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ಇನ್ನೂ ಮುಂತಾದ ಸಂದರ್ಭದಲ್ಲಿ, ಈ ಕಾವ್ಯಗಳನ್ನು ಹಾಡಲಾಗುತ್ತದೆ. ಕಾವ್ಯದ ಮಧ್ಯಭಾಗದಲ್ಲಿ ರಾಕಿರೆಡ್ದಿಗೆ ಹಾವು ಕಡಿಯುವ  ಸಂದರ್ಭದಲ್ಲಿ,ಪೂಜೆ ಮಾಡಿ ಕಾಯಿ ಒಡೆದು ಪ್ರಸಾದವನ್ನು ಕಾವ್ಯ ಕೇಳುವವರಿಗೆ ಹಂಚಲಾಗುತ್ತದೆ. ಅವ್ವಣೆವ್ವ ಕಾವ್ಯವು ಕೇವಲ ಸಿದ್ಧವಸ್ತುವಾಗಿ ನಮಗೆ ಕಾಣುತ್ತಿಲ್ಲ. ಬದಲಿಗೆ  ಪ್ರಕ್ರಿಯೆ ಆಗಿ ಕಾಣುತ್ತದೆ. ಅಂದರೆ ಕಲಾವಿದರು ಯಾವುದೋ ಕಾಲದಲ್ಲಿ , ಯಾರೋ ಸಿದ್ಧ ಪಡಿಸಿಟ್ಟಿರುವ ಕಾವ್ಯವನ್ನು ಯಥಾವತ್ತಾಗಿ ಯಾಂತ್ರಿಕವಾಗಿ ಪುನರಾವರ್ತನೆ ಮಾಡಿಲ್ಲ. ಬದಲಿಗೆ ಕಾವ್ಯದಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ.

ಕಾವ್ಯದಲ್ಲಿ ವ್ಯಕ್ತವಾಗುವ ಹಲವಾರು ಅಂಶಗಳು ತುಂಬ ಸಾಂಕೇತಿಕವೂ ಕುತೂಹಲಕಾರಕವೂ ಆಗಿದೆ. ಕಾವ್ಯದಲ್ಲಿ ಬುಮುಖ್ಯವಾದ ಅಶಯವಾಗಿ ಜನಪದಲ್ಲಿ ಇರುವ ಹೆಣ್ಣು, ಎಷ್ಟೇ ಗಂಡುಮಕ್ಕಳ ತಾಯಿ ಆಗಿದ್ದರೂ ಅಥವಾ ಎಷ್ಟೇ ಗಂಡು ಮಕ್ಕಳನ್ನು ಹೆತ್ತಿದ್ದರೂ ಸಹ ಹೆಣ್ಣನ್ನು ಹಡೆಯದಿದ್ದರೆ ಬಂಜೆ ಎಂಬ ನಂಬಿಕೆ ಜನಪದರಲ್ಲಿ ಇರುವ ಹೆಣ್ಣಿಗೆ ಗಂಡ ಸತ್ತ ನಂತರ ಮರು ಮದುವೆ, ಹೀಗೆ ಹಲವಾರು ಕುತೂಹಲಕರ ಘಟನೆಗಳನ್ನು ಕಾಣಬಹುದು. ಕಾವ್ಯದಲ್ಲಿ ಶಿಷ್ಟರ ಪುತ್ರ ಸಂತಾನದಿಂದ ಮಾತ್ರ ಮೋಕ್ಷ ಸಿಗುತ್ತದೆ ಎಂಬ ಕಲ್ಪನೆಗೆ ವಿರುದ್ಧವಾಗಿ ಜನಪದ ಮನೋಭಾವನೆಯನ್ನು ಕಲಾವಿದರು ಹಿಡಿದಿಟ್ಟಿರುವ ಅಂಶಗಳು ತುಂಬಾ ಅನನ್ಯವಾಗಿವೆ.

            “ನನ್ನೇನೆ ಹೊಟ್ಟೇಲಿ ಹೆಣ್ಣು ಮಗಳು ಇದ್ದರೆ,
ಗೌರಿ ಮಗಳಾನ ಮಾಡುತ್ತಿದ್ದೆ ಕೋಲು ಕೋಲನ್ನ ಕೋಲೆ

ಮೇಲಿನ ಕಾವ್ಯದ ಸಾಲುಗಳನ್ನು ಗಮನಿಸಿದಾಗ ಜನಪದರು ಹೆಣ್ಣಿನ ಬಗೆಗೆ ಇಟ್ಟಿರುವ ಗೌರವ ಮತ್ತು ಅವಳು ಮುಂದಿನ ಜನಾಂಗವನ್ನು ಸೃಷ್ಟಿಸುವವಳು ಎಂಬ ಕಾರಣಕ್ಕಾಗಿ ಕೊಟ್ಟಿರುವ ಪ್ರಾಶಸ್ತ್ಯವನ್ನು ಕಾಣಬಹುದು. ಮಲ್ಲಮ್ಮ ತನಗೆ ಹೆಣ್ಣು ಮಗು ಇಲ್ಲ ಎಂಬ ಕಾರಣಕ್ಕಾಗಿ ಕಾಡಿಗೆ ಹೋಗಿ ತಪಸ್ಸು ಮಾಡಿ ಹೆಣ್ಣನ್ನು ಶಿವನಲ್ಲಿ ಬೇಡುವ ರೀತಿ ಮತ್ತು ತಪಸ್ಸು ಮಾಡುವ ರೀತಿ ತುಂಬಾ ಸ್ವಾರಸ್ಯಕರವಾಗಿದೆ.

            “ಮೂನ್ನೂರು ಸೂಜಿ ಜಡದಾಳೆ ಕೋಲು ಕೋಲನ್ನ | ಕೋಲೆ
ಮೂನ್ನೂರು ಡಬ್ಬಣ ಬಡದಾಳವ್ವ ಕೋಲು ಕೋಲನ್ನ | ಕೋಲೆ
ಒಂಟಿಗಾಲಲಿ ತಪಸಾ ನಿಂತಾಳವ್ವ ಕೋಲು ಕೋಲನ್ನ | ಕೋಲೆ

ಕಾವ್ಯದಲ್ಲಿ ಅವ್ವಣೆವ್ವನ ಹುಟ್ಟು ಮತ್ತು ಮಗುವಾಗಿದ್ದಾಗ ಭೀಮ ತೊಟ್ಟಿಲಲ್ಲಿ ಇರುವ ಅವಳಿಗೆ ಚಿವಿಟುವ ಮುಖಾಂತರ ತೋರುವ ಪ್ರೀತಿ, ಮುಂತಾದವು ಕಾವ್ಯದ ಪ್ರಮುಖ ಅಂಶಗಳಾಗಿ ಕಾಣುತ್ತವೆ.

            “ಗಜಭೀಮ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ
ದೊಡ್ಡೋಳು ಆದರೆ ಗುರ್ತುಸಿಗಾದಿಲ್ಲ ಕೋಲು ಕೋಲನ್ನ ಕೋಲೆ
ಗಲ್ಲಕ ಸೆಳ್ಳುಗರ ಇಡಬೇಕೇ ಕೋಲು ಕೋಲನ್ನ ಕೋಲೆ
ಗಲ್ಲಕ ಸೆಳ್ಳುಗರ ಇಟ್ಟಾನವ್ವಾ ಕೋಲು ಕೋಲನ್ನ ಕೋಲೆ:”

ಭೀಮ ಶಿವನ ಹತ್ತಿರ ಅವ್ವಣೆವ್ವನ ಗಂಡ ರಾಕಿರೆಡ್ಡಿಯನ್ನು ಸಾಯಿಸಲು ಶಿವನ ಕೊರಳಲಿರುವ ಸರ್ಪವನ್ನು ಬೇಡುತ್ತಾನೆ. ಶಿವನಿಂದ ಸರ್ಪವನ್ನು ಬೇಡಿ ಭೂಲೋಕಕ್ಕೆ ತರುತ್ತಾನೆ.

            “ನಾನು ಕಣ್ಣು ಇಟ್ಟ ಹೆಣ್ಣು ಇನ್ನೊಬ್ಬರ ಮನಿ ಸೇರುತೈತೆ ಕೋಲು ಕೋಲನ್ನ ಕೋಲೆ
ಕೊಳ್ಳಳ್ಳಾ ಸರ್ಪ ಕೊಡಬೇಕೇ ಕೋಲು ಕೋಲನ್ನ ಕೋಲೆ

ಜಂಬು ನೆರಳೆ ಹಣ್ಣನ್ನು ಅವ್ವಣೆವ್ವನ ಮೇಲೆ ಕೆಡುವುದರ ಮೂಲಕ ಆಕೆಯನ್ನು ಭೀಮ ಒಲಿಸಿಕೊಳ್ಳುತ್ತಾನೆ. ಅವ್ವಣೆವ್ವ ಮತ್ತು ಭೀಮ ಪರಸ್ಪರ ಕಾಡಿನಲ್ಲಿ ಕೂಡುವ ಸನ್ನಿವೇಶಗಳು ಕಾವ್ಯದ ಬಹುಮುಖ್ಯ ಅಂಶಗಳಾಗಿವೆ.

            “ಹೊಕ್ಕು ಮುಂಗೈ ಹಿಡಿದಾನವ್ವ ಜಾಣ ಹಿಡಿದಾನವ್ವ
ಹೊಕ್ಕು ಒಳದೆಡೆ ಕಚ್ಯಾನವ್ವ ಜಾಣ ಕಚ್ಯಾನವ್ವ

ಕಾಡಿನಲ್ಲಿ ಗಜಭೀಮ ಅವ್ವಣೆವ್ವನನ್ನು ಕೂಡುವುದರ ಮೂಲಕ ಒಂದು ಮಗು ಜನಿಸುತ್ತದೆ.

            “ಗ್ಯಾನುಳ್ಳ ಧರ್ಮರು ಗ್ಯಾನಾರಾದರೆ,
ಕೂಸು ಮಾಸುಗಳ ಬಿದ್ದಾವಲ್ಲೇ ಜಾಣೆ ಬಿದ್ದಾವಲ್ಲೇ

ಗಜಭೀಮ ಆ ಕೂಸನ್ನು ಎತ್ತಿಕೊಂಡು ಬರುತ್ತಾನೆ, ಕೊಂತೆಮ್ಮ ಬೆಣ್ಣೆ ತೆಗೆಯುತ್ತಿರುತ್ತಾಳೆ. ಕೊಂತೆಮ್ಮನ ಬೆನ್ನ ಹಿಂದೆ ಆ ಕೂಸನ್ನು ಬಿಡುತ್ತಾನೆ.

            “ಕೊಂತೆಮ್ಮ ಬೆಣ್ಣೆ ತಗುದಾಳೆ ಜಾಣೆ ತಗುದಾಳೆ
ಕೂಸಿನ ಬಾಯಕ ಹಾಕುತಾಳೇ ಜಾಣೆ ಹಾಕುತಾಳೇ

ಆ ಕೂಸನ್ನು ಕೊಂತೆಮ್ಮ ನೋಡಿ ಯಾರ ಮಗು ಎಂದು ಅನುಮಾನ ಪಡುತ್ತಾಳೆ. ಆ ಅನುಮಾನಕ್ಕೆ ಉತ್ತರವೆಂಬಂತೆ ಧರ್ಮರಾಯ ಮುಸಿನಗು ನಕ್ಕು ಹೇಳುವ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.

            “ಹೋಲಿಕೆ ಭೀಮನಂಗೆ, ಕಣ್ಣು ಭೀಮನಂಗಾ
ಮುಖ ನೋಡಿದರೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ

ಧರ್ಮರಾಯ ಜನರನ್ನು ಒಪ್ಪಿಸಲು ದ್ರೌಪದಿಗೆ ಮಗು ಹುಟ್ಟಿದೆ ಎಂದು ಡಂಗುರ ಸಾರಿಸುತ್ತಾನೆ. ಮಕ್ಕಳಿಲ್ಲದಿದ್ದರೂ ದ್ರೌಪದಿ ಹಡೆದಿದ್ದಾಳೆ ಎಂದು ಆಕೆಗೆ ಬಾಣಂತಿತನ ಇತ್ಯಾದಿ ಮಾಡಲಾಗುತ್ತದೆ. ಆದರೂ ಆ ಕೂಸನ್ನು ದ್ರೌಪದಿ ಹಡೆದಿದ್ದಾಳೆ ಎಂದು ಜನರನ್ನು ನಂಬಿಸಲಾಗುತ್ತದೆ.

            “ಮಕ್ಕಳಿಲ್ಲದಾಕಿ ದ್ರೌಪದಿ ಕೋಲು ಕೋಲನ್ನ ಕೋಲೆ
ದ್ರೌಪದಿ ಮಗನಾ ಮಾಡಬೇಕೇ ಕೋಲು ಕೋಲನ್ನ ಕೋಲೆ

ಕೊನೆಗೆ ಗಜಭೀಮ ತನ್ನ ಮಗನೆಂದು ಒಪ್ಪುತ್ತಾನೆ. ಬೊಬ್ಬಲಿ ರುಂಡ ಗರುಡಗಂಬದ ಮೇಲಿದ್ದು ಅದರ ದಿಂಬ ಕೆಳಕ್ಕೆ ಬಿದ್ದಾಗ ಬೋರ್ಯಾಡಿ ಅಳುತ್ತಾನೆ. ಆ ಮಗುವಿನ ಸಾವಿಗೆ ಕಾರಣನಾದೆನೆಂದು ದುಃಖಿಸುವ ಪ್ರಸಂಗ ಎಂತವರ ಕರುಳನ್ನು ಚುರುಗುಡಿಸುತ್ತದೆ. ನನ್ನ ಉಡಿಯಾಕ ಬೀಳು ಮಗನೆ ಎಂದು ಭೀಮ ಉಡಿಯನ್ನು ಒಡ್ಡುವನು,

            “ನಿನ್ನ ಉರಿಗಳಾ ನಾನೇನೇ ಕೊಯ್ದಿದ್ದೆ ಕೋಲು ಕೋಲನ್ನ ಕೋಲೆ
ನನ್ನೇನೇ ಉಡಿಯಾಕ ಬೀಳಮಗನೆ ಕೋಲು ಕೋಲನ್ನ ಕೋಲೆ

ಗರುಡಗಂಬದ ಮೇಲೆ ಇರುವ ಬೊಬ್ಬಲಿಯ ರುಂಡ ಕೆಳಕ್ಕೆ ಬೀಳದಿರುವಾಗ ಕೊಂತೆಮ್ಮ ಯಾರ ಉಡಿಯಾಕ ಬೀಳುತ್ತೀಯಾ ಎಂದು ಆ ರುಂಡವನ್ನು ಕೇಳಿದಾಗ ತನ್ನ ತಾಯಿಯನ್ನು ಕರೆಸಬೇಕೆಂದು ಹೇಳುವ ಪ್ರಸಂಗ ತುಂಬಾ ದುಃಖಕರವಾಗಿದೆ.

            “ಯಾರ ಉಡಿಯಾಕ ಬೀಳಾತೀಯಾ ಕೋಲು ಕೋಲನ್ನ ಕೋಲೆ
ರೆಡ್ಡೇರಾ ಮನಿಯಾಗೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ

ಗರುಡ ಗಂಬದ ಮೇಲೆ ಇರುವ ಬೊಬ್ಬಲಿಯ ರುಂಡ  ತನ್ನ ತಾಯಿಗೂ, ಭೀಮನಿಗೂ ಲಗ್ನ ಮಾಡಿದರೆ ಮಾತ್ರ ಬೀಳುತ್ತೇನೆ ಎಂದು ಹೇಳುತ್ತದೆ. ಅದರಂತೆ ಅವ್ವಣೆವ್ವನಿಗೂ ಭೀಮನಿಗೂ ಲಗ್ನ ಮಾಡಲು,

            “ನಮ್ಮ ತಾಯಿನಾ ಕರೆಸಬೇಕೇ ಕೋಲು ಕೋಲನ್ನ ಕೋಲೆ
ನಮ್ಮ ತಾಯಿಗೆ ಲಗ್ನ ಮಾಡಬೇಕೇ ಕೋಲು ಕೋಲನ್ನ ಕೋಲೆ

ಹೀಗೆ ಇಡೀ ಕಾವ್ಯದ ತುಂಬ ಸ್ವಾರಸ್ದ್ಯಕರವಾದ ಘಟನೆಗಳು ತುಂಬಾ ಸ್ಪಷ್ಟವಾಗಿ ಮತ್ತು ಕುತೂಹಲಕರವಾಗಿ ಮೂಡಿ ಬಂದಿವೆ.

ಈ ಕಾವ್ಯವನ್ನು ಹಾಡಲು ಒಟ್ಟು ಎಂಟು ಜನ ಜನಪದ ಕಲಾವಿದರು ಕೂಡುವರು. ಇವರೆಲ್ಲರೂ ಸೋಬಾನ ಪದಗಳನ್ನು ಹಾಡುವವರಾಗಿದ್ದಾರೆ. ನಾಲ್ಕು ಜನ ನುರಿತ ಕಲಾವಿದರು ಮುಮ್ಮೇಳವಾಗಿ, ಇನ್ನೂ ನಾಲ್ಕು ಜನ ಕಲಾವಿದರು ಹಿಮ್ಮೇಳವಾಗಿ ಕಾವ್ಯವನ್ನು ಹಾಡುವುದುಂಟು. ಕಾವ್ಯವನ್ನು ಹಾಡುವಾಗ ಯಾವುದೇ ವಾದ್ಯಗಳನ್ನು ಬಳಸುವುದಿಲ್ಲ. ಸೋಬಾನ ಪದಗಳನ್ನು ಹಾಡುವ ರೀತಿಯಲ್ಲಿಯೇ ಹಾಡುತ್ತಾರೆ. ಜನಪದರಲ್ಲಿರುವ ರಾಗ ಮತ್ತು ಧಾಟಿಗಳನ್ನು ಸಾಮಾನ್ಯವಾಗಿ ಇವರು ಬಳಸುವುದುಂಟು. ಈ ಕಾವ್ಯವು ಉತ್ತರ ಕರ್ನಾಟಕ ಪ್ರದೇಶದಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ ಹೊಸಪೇಟೆಯಲ್ಲಿರುವ ನಾಯಕರ ಏಳುಕೇರಿಗಳಲ್ಲಿ ಒಂದಾದ ಮ್ಯಾಸಕೇರಿಯಲ್ಲಿ ಮಾತ್ರ ಕಂಡು ಬರುತ್ತದೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಾವ್ಯವನ್ನು ಕುರಿತು ಹಿರಿಯ ಸೋಬಾನಗಿತ್ತಿಯರನ್ನು ಕೇಳಲಾಗಿ ತೊಂಡೆಕಾಯವ್ವ ಎಂಬ ಜನಪದ ಮಹಿಳೆಯಿಂದ ಮಾತ್ರ ಈ ಕಾವ್ಯವನ್ನು ಕಲಿತಿರುವುದಾಗಿ ಹೇಳುತ್ತಾರೆ. ತೊಂಡೆಕಾಯವ್ವ  ಎನ್ನುವ ಹಿರಿಯ ಜನಪದ ಮಹಿಳೆ ತೀರಿಕೊಂಡು ಸುಮಾರು ೨೫ ವರ್ಷಗಳಾಗಿವೆ. ಅವರಲ್ಲಿ ಹಲವಾರು ಜನಪದ ಹಾಡುಗಳು, ಸೋಬಾನ ಪದಗಳು, ಜನಪದ ಕಥೆಗಳು, ಜನಪದ ಕಾವ್ಯಗಳು ಅವರೊಂದಿಗೆ ಮರೆಯಾಗಿವೆ. ಅವ್ವಣೆವ್ವ ಕಾವ್ಯ, ಜಟಿಂಗರಾಮನ ಕಾವ್ಯ, ಬಡವಿನೀಲಮ್ಮನ ಕಾವ್ಯವನ್ನು ಮಾತ್ರ ತೊಂಡೆ ಕಾಯವ್ವ ಹೊಸಪೇಟೆಯ ಮ್ಯಾಸಕೇರಿ ಜನಪದ ಕಲಾವಿದರಿಗೆ ಕಲಿಸಿದ್ದಾಳೆ.

ಅವ್ವಣೆವ್ವ ಕಾವ್ಯದಲ್ಲಿ ಬರುವ ಅವ್ವಣೆವ್ವನನ್ನು ಹೊಸಪೇಟೆ ನಾಯಕ ಜನಾಂಗದವರು ತಮ್ಮ ಜನಾಂಗದ ಮಹಿಳೆಯೆಂದು ಭಾವಿಸುತ್ತಿಲ್ಲ ಮತ್ತು ಚಾರಿತ್ರಿಕವಾಗಿ ಈ ಕಾವ್ಯಕ್ಕೆ ಯಾವುದೇ ಹಿನ್ನೆಲೆ ಕಂಡುಬರುತ್ತಿಲ್ಲ. ಹೊಸಪೇಟೆಯ ಮ್ಯಾಸಕೇರಿ ನಾಯಕ ಜನಾಂಗದ. ತೊಂಡೆ ಕಾಯವ್ವ  ಎನ್ನುವ ಮಹಿಳೆ ಯಾರಿಂದ ಕಲಿತಳು ಎನ್ನುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟದ ಕೆಲಸವೇ ಆಗಿದೆ. ಹಿಂದಿನವರಿಂದ ಬಳುವಳಿಯಾಗಿ ಬಂದುದನ್ನೇ ಇಂದಿಗೂ ಹೊಸಪೇಟೆಯ ಮ್ಯಾಸಕೇರಿ ನಾಯಕ ಜನಾಂಗದ ಸೋಬಾನಗಿತ್ತಿಯರು ಈ ಕಾವ್ಯವನ್ನು ಹಾಡುತ್ತಿದ್ದಾರೆ. ಮುಂದೆ ಒಂದು ದಿನ ಇಂಥ ಕಾವ್ಯಗಳು ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂದು ಟಿ. ವಿ. ಸಂಸ್ಕೃತಿಯ ಹಾವಳಿಯಿಂದ ಜನಪದ ಕಾವ್ಯಗಳನ್ನು ಕಲಿಯುವವರ ಸಂಖ್ಯೆಯೇ ಕಡಿಮೆಯಾಗಿದೆ. ಅವ್ವಣೆವ್ವ  ಕಾವ್ಯವನ್ನು  ಹಾಡುವ ಜನಪದ ಹಾಡುಗಾರರು ಕೂಲಿನಾಲಿ ಮಾಡಿಕೊಂಡು ಬಹುಕುವವರಾಗಿದ್ದಾರೆ. ದೈವತ್ವದಲ್ಲಿ ನಂಬಿಕೆಯನ್ನು ಹೊಂದಿರುವ ಇವರು ಅವ್ವಣೆವ್ವ ಕಾವ್ಯವನ್ನು ಹಾಡುವ ಮೊದಲು, ಇವರು ಅನುಸರಿಸುವ ಪೂಜಾ ವಿಧಾನವೇ ಮಹತ್ವದ್ದಾಗಿದೆ. ಅವ್ವಣೆವ್ವ ಕಾವ್ಯವನ್ನು ಪ್ರಾರಂಭಿಸುವ ಮೊದಲು ಈ ಕಾವ್ಯವನ್ನು ಹಾಡುವ ಜನಪದ  ಕಲಾವಿದರು  ಹೊಸಪೇಟೆಯ ಮ್ಯಾಸಕೇರಿ ಹೆಣ್ಣು ದೇವತೆಯ ಗುಡಿಯಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ನಂತರ  ಕಾವ್ಯವನ್ನು ಹಾಡುವ ಮಹಿಳೆಯರು ಮಾತ್ರ ಹಾಡಿನ ಪ್ರಾರಂಬದಲ್ಲಿ ತಾವು ಹಾಡಲು ಕುಳಿತ ಜಾಗದಲ್ಲೇ ಅಂಗೈ ಅಗಲ ಜಾಗವನ್ನು ತುಂಬಿದ ಕೊಡದ ನೀರಿನಿಂದ ತೊಳೆದು ಕುಂಕುಮ. ಭಂಡಾರವನ್ನು ಹಚ್ಚಿ ಪೂಜೆ ಮಾಡಿ ಈ ಕಾವ್ಯವನ್ನು ಹಾಡಲು ಪ್ರಾರಂಭಿಸಿತ್ತಾರೆ. ಒಂದು ವೇಳೆ ಹೊಲಗದ್ದೆಗಳಲ್ಲಿ ಕಳೇವು  ಕೀಳುವ ಸಂದರ್ಭದಲ್ಲಿ ಈ ಕಾವ್ಯವನ್ನು ಹಾಡುವಂತಿದ್ದರೆ, ಹೊಲ ಗದ್ದೆಯ ಸಾಹುಕಾರನಿಂದ ಕಾಯಿ, ಬಾಳೆಹಣ್ಣು, ಹೂವು, ಊದಿನಕಡ್ಡಿ ಮತ್ತು ಕರ್ಪೂರ ತರಿಸಿ ಅಂಗೈ ಅಗಲ ಹೊಲ ಅಥವಾ ಗದ್ದೆಯ ಮಣ್ಣನ್ನು ನೀರಿನಿಂದ ಸಾರಿಸಿ, ಕುಂಕುಮ, ಭಂಡಾರವನ್ನು ಹಚ್ಚಿ ಕಾಯಿ ಕರ್ಪೂರದಿಂದ ಪೂಜೆ ಸಲ್ಲಿಸಿದ ನಂತರ ಕಾವ್ಯವನ್ನು ಹಾಡಲು  ಪ್ರಾರಂಭಿಸುತ್ತಾರೆ. ಮೂರು ದಿನಗಳವರೆಗೆ ಹಾಡುವ ಈ ಕಾವ್ಯದ ಮಧ್ಯಭಾಗವೆಂದು ಅವ್ವಣೆವ್ವನ ಗಂಡನಾದ ರಾಕಿರೆಡ್ಡಿಗೆ ಸರ್ಪಕಚ್ಚಿ ಅವನು ಸಾಯುವ ಸಂದರ್ಭದಲ್ಲಿ ಕಾವ್ಯ ಹಾಡುವುದನ್ನು ನಿಲ್ಲಿಸುತ್ತಾರೆ. ಆಗ ಕಾಯಿ ಒಡೆದು ಮಂಗಳಾರತಿಯನ್ನು ಮಾಡಲಾಗುತ್ತದೆ. ನಂತರ ಕಾವ್ಯವನ್ನು ಯಥಾಪ್ರಕಾರ ಹಾಡುತ್ತಾರೆ. ಕಾವ್ಯದ ಕೊನೆ ಮುಗಿದಾಗ “ತಲೆಕಟ್ಟು” ಒಡೆಯಲೆಂದು ಕಾಯಿ ಒಡೆದು ಮಂಗಳಾರತಿಯನ್ನು ಮಾಡಲಾಗುತ್ತದೆ. ಮಂಗಳಾರತಿಯಾದ ಮೇಲೆ ಕಾಯಿ ಕರ್ಪೂರ ಇತ್ಯಾದಿ ಪೂಜಾ ಸಾಮಾನುಗಳನ್ನು ಕೊಡಿಸಿದಂತ ಮತ್ತು ಕಾವ್ಯವನ್ನು ಹಾಡಲು ಅನುವು ಮಾಡಿಕೊಟ್ಟ ಹೊಲ ಅಥವಾ ಗದ್ದೆಯ ಸಾಹುಕಾರನಿಗೆ ಒಳ್ಳೆಯದಾಗಲೆಂದು “ಹರಕೆಯ ಹಾಡನ್ನು “ಹಾಡುತ್ತಾರೆ. ಕಾವ್ಯವನ್ನು ಹಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಈ ಜನಪದರಲ್ಲಿದೆ. ಹರಕೆಯ ಹಾಡು ಹಾಡಿದಂತ ಸೋಬಾನಗಿತ್ತಿಯರಿಗೆ ಸಾಹುಕಾರ ಕುಪ್ಪಸದ ಕಣವನ್ನು ಅಡಿಕೆ ಎಲೆಯಲ್ಲಿ ಇಟ್ಟು ತಮ್ಮ ಯೋಗ್ಯಾನುಸಾರ ಹಣವನ್ನು ಇಟ್ಟು ಪ್ರತಿಯೊಬ್ಬ ಸೋಬಾನಗಿತ್ತಿಯರಿಗೆ ಕೊಡುತ್ತಾನೆ. ಹೊಲ ಅಥವಾ ಗದ್ದೆಗಳಲ್ಲಿ ಕಳೇವು ತೆಗೆಯುವಾಗ ಬೇಸರ ಬಾರದಿರಲೆಂದು ಮತ್ತು ಸಮಯ ಕಳೆಯಲು ಈ ಕಾವ್ಯವನ್ನು ಸೋಬಾನಗಿತ್ತಿಯರು ಹಾಡುವುದುಂಟು. ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಕಾವ್ಯವನ್ನು  ಸೋಬಾನಗಿತ್ತಿಯರು ಅಂದರೆ ಜನಪದ ಹಾಡುಗಾರರು ಹಾಡುವುದುಂಟು. ಉದಾಹರಣೆಗೆ, ದಸರಾ ಹಬ್ಬದ ನಿಮಿತ್ತ ನವರಾತ್ರಿ ಪುಜೆಗೆ ಒಂಭತ್ತು ದಿನಗಳವರೆಗೆ ಕೇರಿಯ ದೇವತೆಗಳನ್ನು ಪೂಜೆಗೆ ಕೂಡಿಸಿದ ಸಂದರ್ಭದಲ್ಲಿ ಅವ್ವಣೆವ್ವ ಕಾವ್ಯವನ್ನು ಜನಪದ ಕಲಾವಿದರು ಹಾಡುವರು. ಏಕೆಂದರೆ ಒಂಭತ್ತು ದಿನಗಳವರೆಗೆ ಕೇರಿಯ ಮಹಿಳೆಯರು ಈ ಕಾವ್ಯವನ್ನು ಕೇಳಲು ನವತಾತ್ರಿ ಹಬ್ಬದಲ್ಲಿ ಗುಡಿ ಮುಂದೆ ಸೇರುವುದುಂಟು . ಅಲ್ಲದೇ ಭಾರತ ಹುಣ್ಣಿಮೆ ಹಬ್ಬದಲ್ಲೂ ಕೂಡ ಈ ಕಾವ್ಯವನ್ನು ಕೇರಿಯ ಹೆಣ್ಣು ದೇವರ ಗುಡಿ ಮುಂದೆ ಹಾಡುವ ಸಂಪ್ರದಾಯವಿದೆ. ಇನ್ನೂ ಕೇರಿಗಳಲ್ಲಿ ಯಾರಿಗಾದರೂ ವಿಷಭರಿತ ಹಾವು ಕಡಿದರೆ ಅವರಿಗೆ ನಿದ್ದೆಬಾರದಿರಲೆಂದು ಅವ್ವಣೆವ್ವ ಕಾವ್ಯವನ್ನು ಜನಪದ ಕಲಾವಿದರು ಹಾಡುತ್ತಾರೆ. ಮೂರು ದಿನಗಳವರೆಗೆ ಈ ಕಾವ್ಯವನ್ನು ಹಾಡುವುದರ ಮೂಲಕ ಹಾವು ಕಡಿದ ವ್ಯಕ್ತಿಯ ನಿದ್ದೆ ಭಂಗವನ್ನುಂಟುಮಾಡುತ್ತಾರೆ. ಹಾವು ಕಡಿಸಿಕೊಂಡ ವ್ಯಕ್ತಿ ನಿರಂತರವಾಗಿ ನಿದ್ದೆ ಮಾಡಿದರೆ, ಅವನಿಗೆ ಹೆಚ್ಚು ಅಪಾಯ ಮತ್ತು ಸಾವು ಸಂಭವಿಸುವುದು ಖಚಿತವೆಂಬ ನಂಬಿಕೆ ಇವರಲ್ಲಿದೆ. ಒಟ್ಟಾರೆಯಾಗಿ ಅವ್ವಣೆವ್ವ ಕಾವ್ಯವನ್ನು ಹಾಡುವ ಜನಪದ ಕಲಾವಿದರು  ತಮ್ಮ ದಿನನಿತ್ಯದ ಕೆಲಸದ ಮಧ್ಯೆ ಆಗೊಮ್ಮೆ ಈಗೊಮ್ಮೆ ಈ ಕಾವ್ಯವನ್ನು ಹಾಡುಡುವುದುಂಟು.