. ಗೌರಿ ಮಕ್ಕಳ ಹಬ್ಬ

ಉತ್ತರ ಕರ್ನಾಟಕದಲ್ಲಿ ಜನಪದರು ಸೂರ್ಯ, ಚಂದ್ರ, ಆಕಾಶ, ಭೂಮಿಯನ್ನು ದೈವತ್ವಕ್ಕೆ ಹೋಲಿಸಿ ಪೂಜೆ ಸಲ್ಲಿಸಿ ಅನನ್ಯಭಾವವನ್ನು ತಳೆಯುತ್ತಾರೆ. ಅದೇ ರೀತಿ ಜೋಕುಮಾರ ಸ್ವಾಮಿ, ನಾಗರಪಂಚಮಿ, ಮಣ್ಣೆತ್ತಿನ ಪೂಜೆ-ಮುಂತಾದ ಹಬ್ಬಗಳನ್ನು ಮಾಡುವುದುಂಟು. ಅಮವಾಸ್ಯೆ, ಹುಣ್ಣಿಮೆ ದಿನಗಳು ಕೂಡ ಈ ಜನಪದರಿಗೆ ವಿಶೇಷವಾಗಿ ಕಾಣುವುದುಂಟು. ಏಕೆಂದರೆ ಹೆಣ್ಣು ದೇವತೆಗಳ ಪೂಜೆಗೆ ಈ ದಿನಗಳು ತುಂಬಾ ಮಹತ್ವವಾದವುಗಳು. ಅಂತೆಯೇ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಗೌರಿ ಹುಣ್ಣಿಮೆಯ ದಿನ ಗೌರಿ ಮಕ್ಕಳ ಹಬ್ಬವನ್ನು ಜಾತಿ ಭೇದ ಮರೆತು ಎಲ್ಲ ವರ್ಗದ ಜನಪದ ಮಹಿಳೆಯರು ಸಡಗರ ಸಂಭ್ರಮದಿಂದ ವಿಶೇಷವಾಗಿ ಆಚರಿಸುವುದುಂಟು. ಇದಕ್ಕೆ ‘ಹಟ್ಟಿ’ ಹಬ್ಬವೆಂತಲೂ ಕರೆಯುತ್ತಾರೆ. ಹಿಂದೂಗಳಲ್ಲಿ ಈ ಹಬ್ಬದ ಆಚರಣೆ ಕಂಡು ಬರುತ್ತದಾದರೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬದ ಆಚರಣೆ ಹೆಚ್ಚಾಗಿ ಕಂಡು ಬರುತ್ತದೆ. ಹೊಸಪೇಟೆ ತಾಲೂಕಿನಲ್ಲಿ ಕೆಲವರು ಮನೆಯ ಮೇಲೆ ಅಥವಾ ಮನೆಯ ಮುಂದಿರುವ ಅಂಗಳದಲ್ಲಿ, ಇನ್ನು ಕೆಲವರು ಊರ ಹೊರಗೆ ಇರುವ ಹೊಲಗಳಲ್ಲಿ ಗೌರಮ್ಮನ ಹಬ್ಬವನ್ನು ಆಚರಿಸುತ್ತಾರೆ. ಗೌರಿ ಹುಣ್ಣಿಮೆಯ ದಿನ ತಮ್ಮ ತಮ್ಮ ಮನೆಯಲ್ಲಿ ಎಲ್ಲಾ ಬಾಲಹೆಣ್ಣು ಮಕ್ಕಳು ತಲೆಸ್ನಾನ ಮಾಡಿಕೊಂಡು ಮಡಿವಂತಿಕೆಯಿಂದಲೇ ಗೌರಿ ಮಕ್ಕಳಾಗುತ್ತಾರೆ. ಅಂದು ಬಾಲ ಹೆಣ್ಣುಮಕ್ಕಳಿಗೆ ಸೀರೆ ಕುಬುಸಗಳನ್ನು ತೊಡಿಸಿ ಅಂದಚೆಂದವಾಗಿ ಗೌರಿಮಕ್ಕಳನ್ನು ಸಿಂಗರಿಸುತ್ತಾರೆ. ಮನೆಯ ಅಂಗಳದ ನೆಲವನ್ನು ಆಕಳ ಸೆಗಣಿಯಿಂದ ಸಾರಿಸಿ, ಮಣ್ಣಿನಿಂದ ಅಥವಾ ಆಕಳ ಸೆಗಣಿಯಿಂದ ಐದು ಗೊಂಬೆಗಳನ್ನು ಮಾಡಿ ಅಂಗಳದ ಮಧ್ಯಭಾಗದಲ್ಲಿ ಇಡುವರು. ಅದಕ್ಕೆ “ಪಂಚ ಪಾಂಡವರು” ― ಎಂದು ಕರೆಯುವ ವಾಡಿಕೆ ಉತ್ತರ ಕರ್ನಾಟಕ ಭಾಗದಲ್ಲಿ ಇದೆ. ಪಂಚ ಪಾಂಡವರ ನಡುವೆ ಒಂದು ಗೊಂಬೆಯನ್ನಿಟ್ಟು ಅದಕ್ಕೆ “ಕುಂತಿ” ಎಂದು ಹೆಸರಿಟ್ಟು ಪೂಜಿಸುವ ಈ ಪದ್ಧತಿಗೆ “ಗೌರಮ್ಮ” ಎಂದು ಕರೆಯುವ ಸಂಪ್ರದಾಯ ಈ ಭಾಗದಲ್ಲಿ ಇದೆ.

ಗೌರಮ್ಮನಿಗೆ ಅರಿಶಿಣ-ಕುಂಕುಮವನ್ನು ಹಚ್ಚಿ ಮನೆಯ ಮೇಲುಗಡೆ ಗೋಡೆ ಸುತ್ತಲೂ ನೀರು ಹಾಕಿ, ಐದು ದಿನಸಿನ ಗುಗ್ಗರಿ, ಗೆಣಸು, ಸಕ್ಕರೆ ಆರತಿ, ಹೋಳಿಗೆ, ಕಡುಬು, ಸಿಹಿಬೇಳೆ ಹುಗ್ಗಿ, ಕಡ್ಲೆಬೇಳೆ ಹುಗ್ಗಿ, ಸಜ್ಜೆರೊಟ್ಟಿ ಇತ್ಯಾದಿಗಳನಿಟ್ಟು ಗೌರಮ್ಮನಿಗೆ ಎಡೆ ಹಾಕುವ ಪದ್ಧತಿ ಜಾರಿಯಲ್ಲಿದೆ. ಹೊಸಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುರಿ, ಕೋಳಿಯ ಮಾಂಸವನ್ನು ತಂದು ಅಡಿಗೆ ಮಾಂಸಾಹಾರಿ ಆಹಾರವನ್ನು ಗೌರಮ್ಮನಿಗೆ ಎಡೆ ಹಾಕುವುದುಂಟು. ಗೌರಮ್ಮನಿಗೆ  ಕಣಗಲಿ ಹೂವು, ಹೊನ್ನರಕೆ ಹೂವು, ಸೇವಂತಿಗೆ ಹೂವು ಮುಡಿಸಿ, ಅಂಗನೂಲು ದಾರವನ್ನು ಐದು ಎಳೆ ಹಾಕಿ ಪತ್ರಿ ಮುಡಿಸಿ ಗೌರಮ್ಮನನ್ನು ಸಿಂಗರಿಸುತ್ತಾರೆ. ನಂತರ ಬಾಲ ಹೆಣ್ಣು ಮಕ್ಕಳಿಂದ ದೀಪದಾರತಿ ಮಾಡಿಸುವ ಸಂಪ್ರದಾಯವಿದೆ. ಈ ರೀತಿಯ ಪೂಜೆಯ ಕಾರ್ಯಕ್ರಮವು ಹೆಂಗಸರಿಂದಲೇ ನಡೆಯುವುದೊಂದು ವಿಶೇಷ. “ಹಬ್ಬಗಳಿರುವುದು ಮಹಿಳೆಯರಿಗಾಗಿ”. ಎಂಬ ಗಾದೆ ಮಾತು ಕೂಡ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಈ ರೀತಿಯ ಗೌರಮ್ಮ, ಗೌರಿಮಕ್ಕಳು ಎಂಬ ಸಡಗರ ಸಂಭ್ರಮದ ಆಚರಣೆಯು ಮಹಿಳೆಯರ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಕೇಂದ್ರಬಿಂದುವಾಗಿದೆ.

ಗೌರಮ್ಮನ ಹಬ್ಬಕ್ಕೆ ಹಿನ್ನೆಲೆಯಾದ ಸ್ವಾರಸ್ಯಕರವಾದ ಕಥೆಯೊಂದು ಉತ್ತರ ಕರ್ನಾಟಕ ಭಾಗದ ಜನಪದರದಲ್ಲಿದೆ. ಕಥೆಯ ಪ್ರಾರಂಭವೆಂದರೆ, ಗೌರಿ ಹುಣ್ಣಿಮೆಯ ದಿನದಂದು ಒಮ್ಮೆ ತಾಯಿ ಗಾಂಧಾರಿಯಾಗಿ ದುರ್ಯೋಧನ ಮಣ್ಣಿನಿಂದ ಐರಾವತವನ್ನು ಮಾಡಿಸಿ ಕೂಡಿಸಿರುತ್ತಾನೆ. ಮುತ್ತೈದೆಯರೆನ್ನೆಲ್ಲ ಆಹ್ವಾನಿಸಿ ಅವರಿಗೆ ಸೀರೆ, ಕುಪ್ಪಸ ಬಳೆ, ಕುಂಕುಮ ― ಇತ್ಯಾದಿ  ಮುತ್ತೈದೆಯರ ಮಂಗಳ ದ್ರವ್ಯಗಳ ಬಾಗೀನ ಕೊಟ್ಟು ಕಳಿಸುತ್ತಾರೆ. ದುರ್ಯೋಧನ  ವ್ಯವಸ್ಥೆ ಮಾಡಿರುವ ಐರಾವತ ಕಾರ್ಯಕ್ರಮಕ್ಕೆ ಪಾಂಡವರ ಮೇಲಿನ ದ್ವೇಷಕ್ಕಾಗಿ ಕುಂತಿಗೆ ಮಾತ್ರ ಆಹ್ವಾನವಿಲ್ಲ. ಎಲ್ಲಾ ಸುಮಂಗಲೆಯರು ಈ ಕಾರ್ಯಕ್ರಮಕ್ಕೆ ಬಂದು ಹೋಗುವರು. ಈ ರೀತಿ ಬಂದು ಹೋಗುವವರೆಲ್ಲ ಕುಂತಿಯನ್ನು ವಿಚಾರಿಸುವವರೆ, ನಿನ್ಯಾಕೆ ಬರಲಿಲ್ಲ? ತಂಡೋಪತಂಡವಾಗಿ ಬರುವ ಮಹಿಳೆಯರು ಕುಂತಿಯನ್ನು ವಿಚಾರಿಸುವುದರಿಂದ ಕುಂತಿ ಅಳಲು ಸುರು ಮಾಡುತ್ತಾಳೆ. ಕುಂತಿ ಅಳುವುದನ್ನು  ಕಂಡ ಭೀಮ, ನೀನ್ಯಾಕೆ ಅಳುತ್ತೀಯಾ ಅಮ್ಮ ಎಂದು ವಿಚಾರಿಸಲು ಕುಂತಿ ಎಲ್ಲ ವಿವವರಗಳನ್ನು ಭೀಮನಿಗೆ ತಿಳಿಸುವಳು. ಕೋಪಗೊಂಡ ಭೀಮನು, ನಾವು ನಿಜವಾದ ಐರಾವತವನ್ನು ದೇವಲೋಕದಿಂದ ತರುವುದಾಗಿ ತಾಯಿಯ ಮುಂದೆ ಪ್ರತಿಜ್ಞೆಗೈಯುತ್ತಾನೆ. ಅರ್ಜುನ ತನ್ನ ಅಮೋಗವಾದ ಬಿಲ್ವಿದ್ಯೆಯ ಕೌಶಲ್ಯವನ್ನು ಮೆರೆದು ಆಕಾಶ ಭೂಮಿಗೆ ಏಕವಾಗಿ ಬಾಣವನ್ನು ಬಿಡುವನು. ಅದರಿಂದ ಆಕಾಶ ಭೂಮಿಗೆ ಏಣಿ ಸಿದ್ಧವಾಗುತ್ತದೆ. ಭೀಮ ಏಣಿ ಹತ್ತಿ ದೇವಲೋಕಕ್ಕೆ ಹೊರಡುವನು. ಮಗ ಜಾರಿ ಬಿದ್ದಾನು ಎಂದು ಆಸರೆಯಾಗಿ ಕುಂತಿ ಸೆರಗನ್ನು ಒಡ್ಡುತ್ತಾಳೆ. ದೇವಲೋಕದಲ್ಲಿ ಐರಾವತದಿಂದ ಭೀಮನಿಗೆ ತೊಂದರೆಯಾಗುತ್ತದೆ. ಐರಾವತದೊಡನೆ ಭೀಮ ಹೋರಾಡಿ ಐರಾವತವನ್ನು ದೇವಲೋಕದಿಂದ ಹೊತ್ತುಕೊಂಡು ಬರುವನು. ನಂತರ ತಾಯಿ ಕುಂತಿಯನ್ನು ಐರಾವತ ಮೇಲೆ ಕೂಡಿಸಿ, ಮೆರವಣಿಗೆ ಮಾಡಲಾಗುತ್ತದೆ. ಅದನ್ನೇ ಇಂದು ಮನೆಯ ಮೇಲುಗಡೆ ಅಥವಾ ಮನೆಯ ಮುಂದೆ ಮಣ್ಣು ಮತ್ತು ಅಕಳ ಸೆಗಣಿಯಿಂದ ಐದು ಗೊಂಬೆಗಳನ್ನು ಮಾಡಿ ಅದಕ್ಕೆ ಪಂಚ ಪಾಂಡವರೆಂದು ಕರೆದು ನಡುವೆ ಒಂದು ಗೊಂಬೆಯನಿಟ್ಟು ಅದಕ್ಕೆ ಕುಂತಿ ಎಂದು ಕರೆದು ಗೌರಿ ಹುಣ್ಣಿಮೆಯ ದಿನ ಗೌರಿ ಮಕ್ಕಳ ಹಬ್ಬದ ಆಚರಣೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮಾಡಲಾಗುತ್ತದೆ. ಹಬ್ಬಗಳು ಮತ್ತು ಆಚರಣೆಗಳು ನಮ್ಮ ಜನಪದರಿಗೆ ಹೆಚ್ಚು ಹೆಚ್ಚು ವಿಶಾಲವಾದ ಮತ್ತು ಜೀವನಕ್ಕೆ ಪೂರಕವಾದ ಮನೋಭೂಮಿಕೆಯನ್ನು ಬೆಳೆಸುವುದರ ಜೊತೆಗೆ ಸಂತೋಷ ಮತ್ತು ನೆಮ್ಮದಿಯನ್ನುಂಟು ಮಾಡುತ್ತವೆ.

ದೇವಸ್ಥಾನಗಳಲ್ಲಿ ಗೌರಿಪೂಜೆ

ಗೌರಿಹುಣ್ಣಿಮೆಯ ದಿನದಂದು ಬಾಲ ಹೆಣ್ಣು ಮಕ್ಕಳು ಚೆಂದ ಚೆಂದವಾದ ಸೀರೆ ಕುಬುಸಗಳನ್ನುಟ್ಟು ಜಡೆಯ ತುಂಬಾ ಹೂ ಮುಡಿದು, ಇನ್ನೂ ಕೆಲವರು ಮಲ್ಲಿಗೆ ಜಡೆ, ಚೆಂಡುಹೂವಿನ ಜಡೆ, ಸೇವಂತಿಗೆ ಜಡೆ ಕಟ್ಟಿಕೊಂಡು ತಲೆಗೆ ಬಂಗಾರ ಮತ್ತು ಬೆಳ್ಳಿಯಿಂದ ಮಾಡಿಸಿದ ನಾಗರವನ್ನು ಜಡೆಯಲ್ಲಿ ಇಟ್ಟುಕೊಂಡು ಕೈತುಂಬಾ ಬಳೆತೊಟ್ಟು, ಕಾಲಲ್ಲಿ ಗೆಜ್ಜೆಯ ಧರಿಸಿ, ಮುಖವನ್ನೆಲ್ಲ ಶೃಂಗರಿಸಿಕೊಂಡು ಸುಂದರವಾಗಿ ಕಾಣುತ್ತಾರೆ. ಅವರಿಗೆ ಅಂದು ಎಲ್ಲಿಲ್ಲದ ಸಡಗರ ಸಂಭ್ರಮ. ಹೆಣ್ಣು ಹಡೆದವರು ಗೌರಮ್ಮನ ಹಬ್ಬವನ್ನು ಮಾಡಲೇಬೇಕೆಂಬ ಪರಂಪರೆ ರೂಢಿಯಲ್ಲಿದೆ. ಹಾಗಾಗಿ ಗೌರಿ ಮಕ್ಕಳು ಸಕ್ಕರೆ ಆರತಿಗಳನ್ನು ತಟ್ಟೆಯಲ್ಲಿಟ್ಟುಕೊಂಡು ಹೊನ್ನಾರಿಕೆ ಹೂವು, ಪಂಚಾರತಿ ದೀಪ ಹಚ್ಚಿಕೊಂಡು ಗುಂಪು ಗುಂಪಾಗಿ ಹತ್ತಿರವಿರುವ ದೇವಸ್ಥಾನಗಳಿಗೆ ತೆರಳಿ ಗೌರಮ್ಮ ಮತ್ತು ನಂದಿಯ ಮೇಲೆ ಕುಳಿತಿರುವ ಶಿವಾ ಪಾರ್ವತಿಯರಿಗೆ ದೀಪಾದಾರತಿಯನ್ನು ಬೆಳಗುತ್ತಾರೆ. ಈ ಸಂದರ್ಭದಲ್ಲಿ ಮುತ್ತೈದೆಯರು ಕೂಡ ಗೌರಮ್ಮನಿಗೆ  ದೀಪಾದಾರತಿಯನ್ನು  ಬೇಳಗುವುದುಂಟು. ಗೌರಿ ಮಕ್ಕಳು ಶಿವ ಪಾರ್ವತಿಯರಿಗೆ ಕಳಸ ಬೆಳಗಿದ ನಂತರ ಗುಂಪು ಗುಂಪಾಗಿ ದೀಪದ ಬೆಳಕಿನಲ್ಲಿ ಮಿಂಚುತ್ತಾ ತಮ್ಮ ತಮ್ಮ ಮನೆಗೆ ತೆರಳುವುದನ್ನು ನೋಡುವುದೇ ಒಂದು ಚೆಂದ. ಹಾಗೆಯೇ ಗೌರಿ ಮಕ್ಕಳು ತಮ್ಮ ತಮ್ಮ ಮನೆಯ ತಲಬಾಗಿಲು, ಹೊಸ್ತಿಲಿನ ಎರಡು ಬದಿಗೆ ಹೊನ್ನಾರಿಕೆ ಹೂ ಮುಡಿಸಿ, ಅಂಗಳದಲ್ಲಿ ನಿಂತು ಸೂರ್ಯ, ಚಂದ್ರ, ಆಕಾಶಕ್ಕೆ ಕಳಸ ಬೆಳಗಿದ ನಂತರ ಗಂಗೆ ಪೂಜೆಗೆ ತೆರಳುವರು.

ಗಂಗೆ ಪೂಜೆ

ಜನಪದರ ನಂಬಿಕೆ ಪ್ರಕಾರ ಗೌರಮ್ಮನ ತಂಗಿ ಗಂಗೆ. ಹಾಗಾಗಿ ಗೌರಿ ಮಕ್ಕಳು ಗೌರಮ್ಮನ ಪೂಜೆಯಾದ ನಂತರ ಗೌರಮ್ಮನ ತಂಗಿಯಾದ ಗಂಗೆಯನ್ನು ಪೂಜಿಸುವುದುಂಟು. ತಮ್ಮ ತಮ್ಮ ಮನೆಗಳಿಗೆ ಹತ್ತಿರವಿರುವ ಬಾವಿಕಟ್ಟೆಗಳಿಗೆ ಹಿರಿಯ ಮಹಿಳೆಯರೊಡನೆ ತೆರಳಿ ತುಂಬಿದ ಕೊಡದ ನೀರಿನಿಂದ ಬಾವಿಯನ್ನು ತೊಳೆದು ಕೆಸರು ಮಣ್ಣಿನಿಂದ ಐದು ಗುಂಪೆ ಮಾಡಿ ಅದಕ್ಕೆ “ಗಂಗಮ್ಮ” ಎಂದು ಕರೆಯುವರು. ಈ ಮರಳು ಗಂಗಮ್ಮನಿಗೆ ಅರಿಶಿಣ-ಕುಂಕುಮ, ವಿಭೂತಿ, ಹಚ್ಚಿ ಐದೆಳೆದಾರ ಹಾಕಿ ಹೊನ್ನಾರಿಕೆ ಹೂವು ಮುಡಿಸಿ ಊದಿನಕಡ್ಡಿ ಬೆಳಗಿ ತೆಂಗಿನಕಾಯಿ ಹೊಡೆದು ಎಡೆ ಹಾಕುವುದುಂಟು. ನಂತರ ಮನೆ ದೇವರ ಗುಡಿಗಳಿಗೆ ತೆರಳಿ ತಮ್ಮ ತಮ್ಮ ಮನೆಗಳನ್ನು ಸೇರುವರು.

ಬೀಸುವ ಕಲ್ಲು ಪೂಜೆ

ಉತ್ತರ ಕರ್ನಾಟಕದ ಜನಪದರು ಬೀಸುವ ಕಲ್ಲು, ಒಳಕಲ್ಲು, ಕಸಪೊರಕೆ ಮತ್ತು ಬಿದಿರಿನ ಮರವನ್ನು ಕೂಡ ಗೌರಮ್ಮ ಎಂದು ಕರೆಯುವುದು ರೂಢಿಯಲ್ಲಿದೆ. ಗೌರಿ ಹುಣ್ಣಿಮೆಯ ದಿನ ಇವುಗಳಿಗೆ ವಿಶೇಷ ಪೂಜೆಯನ್ನು ಕೂಡ ಸಲ್ಲಿಸುವುದುಂಟು. ಅವುಗಳಿಗೆ ಹೊನ್ನಾರಿಕೆ ಹೂ ಮುಡಿಸಿ, ಎಡೆ ಹಾಕಿ ಪೂಜೆ ಮಾಡಲಾಗುತ್ತದೆ. ಈ ಎಡೆಯನ್ನು ಗೌರಿ ಮಕ್ಕಳೇ ಊಟ ಮಾಡಬೇಕೆಂಬ ಸಂಪ್ರದಾಯವಿದೆ, ಗೌರಮ್ಮನ ಬಗ್ಗೆ ಇರುವ ಭಕ್ತಿ, ಗೌರವ, ನಂಬಿಕೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಜೀವಂತವಾಗಿರುವುದು ಗಮನಾರ್ಹ.

ಗೌರಿಮಕ್ಕಳು ಗೌರಿ ಹುಣ್ಣಿಮೆ ಹಬ್ಬದ ನಿಮಿತ್ತ ಸಂಜೆ ತಮ್ಮ ತಂದೆ, ತಾಯಿ, ಅಣ್ಣ, ತಮ್ಮ ಮನೆಯ ಹಿರಿಯರಿಗೆ ಸಂಬಂಧಿಕರಿಗೆ ದೀಪಾದಾರತಿಯನ್ನು ಬೆಳಗಿ ನಮಸ್ಕರಿಸಿ ಆರ್ಶೀವಾದ ಪಡೆಯುವರು. ಅವರು ಅದಕ್ಕೆ ಪ್ರತಿಯಾಗಿ ಹಣವನ್ನು ಕೊಡುವರು. ಗೌರಿಮಕ್ಕಳು ಸಾರ್ವಜನಿಕರಲ್ಲಿ ಮತ್ತು ತಮ್ಮ ಬಂಧುಗಳಲ್ಲಿ ಕೋಲಾಟವಾಡಿ ಹಣವನ್ನು ಸಂಗ್ರಹಿಸುತ್ತಾರೆ. ಇನ್ನೂ ಬಡವರು, ಗೌರಿ ಮಕ್ಕಳನ್ನು ಸಿಂಗರಿಸಿಕೊಂಡು ಮೂರು ದಿನಗಳವರೆಗೆ ಕೋಲಾಟವಾಡುವ ಮೂಲಕ ಮನೆಮನೆಗಳಿಗೆ ತೆರಳಿ ಹಣ ಹಾಗೂ ಧಾನ್ಯವನ್ನು ಸಂಗ್ರಹಿಸುತ್ತಾರೆ. ಹಿರಿಯ ಸಂಪ್ರದಾಯ ಮಹಿಳೆಯರು ಕೋಲಾಟ ಪದಗಳನ್ನು ಹಾಡಿದಂತೆ ಗೌರಿಮಕ್ಕಳು ಕೋಲಾಟವಾಡುವವು. ಕೋಲಾಟ ಪದಗಳು ತುಂಬಾ ಸೊಗಸಾಗಿರುತ್ತವೆ.

ಉದಾ : ಹೆಸಳ ಕ್ಯಾದಿಯಾಂಗ, ಸಸಿಯನಾಂಗ
ಹಸುಮಗಳೆ ನನ್ನ ಪೂಜಾವ್ವ ಹೂವಿನ
ಕೋಲು ಕೋಲೇ, ಕೋಲೆನ್ನಾ ಕೋಲೆ

ಎಂದು ಕೋಲಾಟ ಪದಗಳನ್ನು ಹಾಡುವರು. ಈ ಕೋಲಾಟ ಪದಗಳು ಪ್ರಾದೇಶಿಕ ಭಿನ್ನತೆಯಿಂದ ಕೂಡಿರುತ್ತವೆ. ಹೆಣ್ಣು ಹಡೆಯದ ಕೆಲವರು ಹೆಣ್ಣು ಮಕ್ಕಳನ್ನು ಕರೆತಂದು ಗೌರಿಮಕ್ಕಳನ್ನು ಮಾಡುತ್ತಾರೆ. ಗೌರಿ ಮಕ್ಕಳನ್ನು ಗೌರಿ ಹಬ್ಬದಂದು ಗಂಗೆ ಗೌರಿಯರಿಗೆ ಸಮಾನರಂತೆ ಕಾಣುವರು. ಗೌರಿ ಮಕ್ಕಳು ಗೌರಿಹುಣ್ಣಿಮೆ ಹಬ್ಬದ ದಿನದಂದು ಕಸಬರಿಗೆ, ಊಟ ಮಾಡಿದ ಎಂಜಲು ತಟ್ಟೆ, ಮೈಲಿಗೆ ಬಟ್ಟೆ ,ಕಾಳು ಕಡ್ಡಿ ಹಸನ ಮಾಡುವ ಮರ, ಪುಟ್ಟಿಗಳು, ಕೊಡ, ಇತ್ಯಾದಿ ಯಾವುದನ್ನು ಮುಟ್ಟಬಾರದೆಂಬ ನಂಬಿಕೆ ಉತ್ತರ ಕರ್ನಾಟಕದ ಜನಪದರಲ್ಲಿದೆ. ಗೌರಿ ಹುಣ್ಣಿಮೆಯ ದಿನದಂದು ಬಾಲ ಹೆಣ್ಣು ಮಕ್ಕಳು ಸಂತೋಷ ಸಡಗರ ಸಂಭ್ರಮದಿಂದ ಅಂದ ಚೆಂದವಾದ ವಸ್ತ್ರಗಳಿಂದ ಶೃಂಗಾರಗೊಂಡಿರುತ್ತಾರೆ. ವರ್ಷದಲ್ಲಿ ಕನಿಷ್ಠ ಪಕ್ಷ ಒಂದು ದಿನವಾದರೂ ಗೌರಿಮಕ್ಕಳು ವಾಸ್ತವದಲ್ಲಿ ದೈವತ್ವವಾಗಿ ಕಾಣುತ್ತಾರೆ. ಗೌರಿ ಮಕ್ಕಳಿಗೆ ಸಂಬಂಧಿಸಿದಂತೆ ಗಾದೆ ಮಾತುಗಳು  ಉತ್ತರ ಕರ್ನಾಟಕದಲ್ಲಿ ಇಂದಿಗೂ ಬಳಕೆಯಲ್ಲಿವೆ. ಉದಾ: “ಉಂಡು ಆಡಿ ಗಂಡನ ಮನೆಗೆ ಹೋಗಲಿ” ― ಎಂದು “ರಾಜ್ಯಕ್ಕೆ ರಾಮನಾಗಿದ್ದರೂ ಕೂಡ ರಾಗಿ ಬಿಸೋದು ತಪ್ಪಲಿಲ್ಲ” ― ಎಂಬಗಾದೆ ಮಾತು,  “ಗೌರಿ ಹುಣ್ಣಿಮೆಯ ದಿನ ಕನ್ಯೆ ನೋಡಲು ಹೋಗಬಾರದು ಕಾರು ಹುಣ್ಣಿಮೆಯ ದಿನ ಎತ್ತುಗಳನ್ನು ಖರೀದಿಸಬಾರದೆಂಬ” ― ಗಾದೆ ಮಾತುಗಳು ಇಂದಿಗೂ ಕೂಡ ಪ್ರಚಲಿತದಲ್ಲಿವೆ.

ಒಟ್ಟಾರೆಯಾಗಿ ಗೌರಿ ಮಕ್ಕಳು ನಮ್ಮ  ಸಂಸ್ಕೃತಿ ಆಚಾರ ವಿಚಾರ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಎಲ್ಲಾ ರೀತಿಯಿಂದಲೂ ಮಹಿಳೆಯು ಮೌಲ್ಯದ ಖನಿಯಾಗಿದ್ದಾಳೆ ಎಂಬುವುದನ್ನು ಮರೆಯುವಂತಿಲ್ಲ.

 

. ಅವ್ವಣೆವ್ವಕಾವ್ಯವನ್ನುಹಾಡಿದಕಲಾವಿದರಮಾಹಿತಿ

.        ದೊಡ್ಡ ನಿಂಗವ್ವ
ತಾಯಿ ಹನುಮಂತವ್ವ ತಂದೆ ನಾರಂದಪ್ಪ,
ವಯಸ್ಸು ೭೦ ವರ್ಷ, ಜಾತಿ, ನಾಯಕ ಜನಾಂಗ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಪರುಸವ್ವ
ತಾಯಿ ಮರು ಹುಲುಗಮ್ಮ ತಂದೆ ತಳವಾರ ತಾಯಪ್ಪ
ವಯಸ್ಸು ೭೦ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಕಮಲವ್ವ
ತಾಯಿ ದೊಡ್ಡ ಹನುಮಂತವ್ವ, ತಂದೆ ಕಿಷ್ಟಪ್ಪ
ವಯಸ್ಸು ೫೫ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಸಣ್ಣ ಹುಲುಗವ್ವ
ತಾಯಿ ಅಂಬವ್ವ, ತಂದೆ ಮಳಿಗೇರು ನಿಂಗಪ್ಪ,
ವಯಸ್ಸು ೬೦ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ದೊಡ್ಡ ಹುಲುಗಮ್ಮ
ತಾಯಿ ಸಣ್ಣ ಹನುಮವ್ವ, ತಂದೆ ನಾಗಪ್ಪ
ವಯಸ್ಸು ೫೫ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಲಕ್ಷ್ಮೀ
ತಾಯಿ ದೊಡ್ಡ ಹುಲುಗವ್ವ, ತಂದೆ ತಾರಾನಾಥ
ವಯಸ್ಸು ೩೫ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಹನುಮಂತವ್ವ
ತಾಯಿ ದೊಡ್ಡ ಹುನುಮವ್ವ, ತಂದೆ ನಾಗಪ್ಪ
ವಯಸ್ಸು ೫೫ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

.        ಹನುಮಂತವ್ವ
ತಾಯಿ ಕರಿ ಹುನುಮವ್ವ, ತಂದೆ ಉತ್ತಂಗಿ ಅಜ್ಜಪ್ಪ
ವಯಸ್ಸು ೫೦ ವರ್ಷ, ಜಾತಿ, ನಾಯಕ, ಕೃಷಿ ಕೆಲಸ,
ಮ್ಯಾಸಕೇರಿ, ೩೩ನೇ ವಾರ್ಡ್‌, ಹೊಸಪೇಟೆ.

 

. ಪದಕೋಶ

ಅರಿವ್ಯಾನ – ತಟ್ಟೆ
ಅಂಬುತ್ತಾರೆ – ಅನ್ನುತ್ತಾರೆ
ಅನ್ನಬ್ಯಾಡ್ರೆ – ಹೇಳಬೇಡಿರಿ
ಅತ್ತಗಂತ – ಅಳುತ್ತಾ
ಆಕಿ – ಆಕೆ
ಆಸೆಕಟ್ಟಿಗೆ ಮಳಮುಂಡೆ – ವಿಧವೆ
ಆಡೆಂಬ – ಹಾಡು
ಆಗ್ಯಾನೆ – ಆಗಿದ್ದಾನೆ
ಇಡೋ – ಇಡು
ಇಳಿವ್ಯಾನೆ – ಇಳಿದಿದ್ದಾನೆ
ಇಡದಾಳ – ಹಿಡಿದುಕೊಂಡು
ಈಬುತ್ತಿ – ವಿಭೂತಿ
ಉದ್ದಿನಕಡ್ಡಿ – ಊದಿನಕಡ್ಡಿ
ಉಡಲಾಗೆ – ಉಡೆಯಲ್ಲಿ
ಉರಿ – ಕರುಳ ಉರಿ
ಊರಾ – ಊರು
ಉಳಿಸಾದಿಲ್ಲ – ಉಳುಸುವುದಿಲ್ಲ
ಉಟಾನೆ – ಉಟ್ಟುಕೊಂಡು
ಎತ್ತಿಗಂಡೆ – ಎತ್ತಿಕೊಂಡು
ಎತ್ಲುತ್ತ – ಮೊದಲಿಗೆ
ಎಲ್ಡು – ಎರಡು
ಎರಡೆ – ಎರಡು
ಐತೆ – ಇದೆ
ಕಲಿತು – ಜೊತೆಗೂಡಿ
ಕೇರ್ಯಾ – ಕೇರಿ
ಕಾಸಿ – ಬಿಸಿಮಾಡಿ
ಕೊಳ್ಳಳಾ – ಕೊರಳು
ಕುಂತಾರೆ – ಕುಳಿತರು
ಕಿವ್ಯಾಕೆ – ಕಿವಿಯಾಕೆ
ಕುಂಬವಳಕಾಯಿ – ಕುಂಬಳ ಕಾಯಿ
ಕರಿಸ್ಯಾನೆ – ಕರಿಸಿದ್ದಾನೆ
ಕೊಡೆ – ಕೊಡು
ಕಣ್ಣ – ಕಣ್ಣು
ಕಟ್ಯಾಳ – ಕಟ್ಟಿದಳು
ಕೊಂಡಾಳ – ಖರೀದಿಸು
ಕಟ್ಯಾ – ಕಟ್ಟು
ಕರಿ – ಕರೆ
ಕರೀತಾನೆ – ಕರೆಯುತ್ತಾನೆ
ಕೂದ್ಲು – ಕೂದಲು
ಕೊಟ್ಯಾನೆ – ಕೊಡುತ್ತಾನೆ
ಕಿತ್ಯಾ – ಕಿತ್ತು
ಕರಕಂಡೆ – ಕರೆದುಕೊಂಡು
ಕಂದ – ಕೂಸು
ಕಳವೀಳೆ – ಕಳ್ಳತನದಿಂದ
ಕೊಣ್ಣು – ಕಣ್ಣು
ಕೊಣ್ಣಿ – ಕಣ್ಣು
ಕರಕಂತ – ಕರೆಯುತ್ತಾ
ಕಸಕೊಂಡೆ – ಕಸಿದುಕೊಂಡು
ಗ್ಯಾನಿದ್ದ – ಬುದ್ಧಿವಂತ
ಗಣಮಗ – ಗಂಡುಮಗು
ಗೆಣಿಯಾ – ಗೆಳೆಯ
ಗೋಡ್ಯಾ – ಗೋಡೆ
ಗೊಡ್ಡಿ – ಬಂಜಿ
ಗಣಮಕ್ಕಳು – ಗಂಡುಮಕ್ಕಳು
ಗದಗಟ್ಟಿ – ಹೆದರು
ಗದ್ಲಾ – ಗಲಾಟೆ
ಗೆಣೆತೇರಾ – ಗೆಳತಿಯರು
ಚಂದಿಲ್ಲ – ಚೆಂದವಿಲ್ಲ
ಚಂಬ – ಚರಿಗಿ
ಜಡದಾಳ – ಜಡಿದು
ಜಲ್ಮ – ಜೀವ
ತಾಕ – ಹತ್ತಿರ
ತಗಂದಾರೆ – ತೆಗೆದುಕೊಂಡಿದ್ದಾರೆ
ತಿವಿಕೊಂಡು – ತಿವಿದುಕೊಂಡು
ತಂಗಿನೋರೆ – ತಂಗಿಯರೆ
ತಂದಿ – ತಂದೆ
ತುಂಬ್ಯಾಳ – ತುಂಬಿದ್ದಾಳೆ
ತಗಂಡು – ತೆಗೆದುಕೊಂಡು
ತಿದ್ದ – ತಿದ್ದು
ತಿಂಬ – ತಿನ್ನು
ತಪಸಾ – ತಪಸ್ಸು
ತೊಟ್ಲಾ – ತೊಟ್ಟಿಲು
ತಗಿವಲ್ಲ – ತೆಗೆಯುತ್ತಿಲ್ಲ
ತಲಿ – ತಲೆ
ತೀಡ್ಯಾ – ತಿಕ್ಕು
ತಪ್ಲ – ತಪ್ಪಲು
ತಿಂಬೋದೆ – ತಿನ್ನುವುದು
ದಟ್ಟಿ – ಲಂಗ
ದಂಡಿ – ದಂಡೆ
ದಾರ್ಯಾಗ – ದಾರಿ
ನಮ್ಮಿಗೆ – ನಮಗೆ
ನೀಡೆ – ಕೊಡು
ನಾಕೆ – ನಾಲ್ಕು
ನೋಡ್ಯಾ – ನೋಡು
ನಾಲಾರು – ನಾಲ್ಕು
ನೀರೆ – ನೀರು
ನಕ್ಕಾ – ನಗು
ನೈಸ್ಯಾಳೆ – ನೇಯುವುದು
ನೋಗಿ – ಹೋಗಿ
ನೊಂದೆ – ನೊಂದು
ನೆರೆಬಂದು – ಮುಪ್ಪು
ನಗರೇನೆ – ನಗುವರು
ನೆನಸ – ನೆನಪು
ನೊಸಲಿಗೆ – ಉಡಿಯಲ್ಲಿ
ಪಂಚೇನಾ – ಐದುಜನರ
ಬ್ಯಾಟಿ – ಬೇಟೆ
ಬ್ಯಾಳಿ – ಬೇಳೆ
ಬರಬ್ಯಾಡ – ಬರಬೇಡ
ಬಣಿಮ್ಯಾಕ – ಬಣವಿಮೇಲೆ
ಬೀದ್ಯಾಗ – ಬೀದಿ
ಬರ್ರೆ – ಬನ್ನೀರಿ
ಬಂದಾರೆ – ಬಂದರು
ಬರುತೈತೆ – ಬರುತ್ತದೆ
ಬಗ್ಗಿ – ಬಾಗಿ
ಬಗಿಸ್ಯಾ – ಅಪೇಕ್ಷೆ
ಬಿಗಿಸ್ಯಾ – ಬಿಗಿಸು
ಬಗಲಾಗೆ – ಬಗಲಲ್ಲಿ
ಬಂದಾಳ – ಬಂದಳು
ಬೇಡತೀನಿ – ಬೇಡುತ್ತೇನೆ
ಬಲ್ಲೋರು – ಬುದ್ಧಿವಂತರು
ಬಾದಾಳ – ಗವಾಕ್ಷಿ
ಮ್ಯಾಲೆ – ಮೇಲೆ
ಮ್ಯಾಕ – ಮೇಲೆ
ಮಾರಿ – ಮುಖ
ಮುಸಿನಗು – ಮುಗುಳನಗು
ಮಲಿಗ್ಯಾನೆ – ಮಲಗಿದ್ದಾನೆ
ಮಂತ್ಯಾಕ – ಮನೆಯತನಕ
ಮನಿಸ್ಯಾಳ – ಮಲಗು
ಮದಲಗಿತ್ತಿ – ಮದುಮಗಳು
ಮನಿ – ಮನೆ
ಮಡ್ಯಾಳ – ಮಾಡಿದಳು
ಮರಕೇನಾ – ಮರಕ್ಕೆ
ಮುಚ್ಚಿವೀದಾ – ಮುಚ್ಚಿರುವ
ಮುಟ್ಟ – ಮುಟ್ಟುಗಳು
ಮನ್ಯಾಕ – ಮನೆ
ಮನ್ಯಾಗ – ಮನೆಯಲ್ಲಿ
ಮಾಡಂತಾ – ಮಾಡುವಂತ
ಯಾರ – ಯಾರು
ಯಾಕ – ಯಾಕೆ
ರಂಡೆ – ವಿಧವೆ
ರಾಮರಕುತಾ – ರಕ್ತ
ವಸ್ತಿಲಾ – ಬಾಗಿಲು
ವಾರೀಗಿ – ಸಮವಯಸ್ಕರ
ವೈದು – ತೆಗೆದುಕೊಂಡು
ಶಾಲಿ – ಶಾಲೆ
ಸಲ್ಯಾ – ಚೆಲ್ಲು
ಸಾವರಳ್ಯಾಗ – ಸಾವಿರ ಹಳ್ಳಿಯಾಗೆ
ಸಾರಿ – ಹೇಳಿ
ಸಾಸಿಅಕ್ಕಿ – ಮದುವೆ ಶಾಸ್ತ್ರ
ಸಂಜೇಲಿ – ಸಂಜೆ
ಸಜ್ಜೇನೆ – ಸಜ್ಜೆ
ಸಾಕಂಬಾ – ಸಾಕೆಂಬುದು
ಸುತ್ಯಾರೆ – ಸುತ್ತು
ಸಿದಿಗಿಯಾ – ಚಟ್ಟ
ಸಲ್ಯಾಳ – ಚೆಲ್ಲು
ಸಿಟ್ಟೀಲಿ – ಸಿಟ್ಟು
ಸವರೇನೆ – ಎಲ್ಲವನ್ನು
ಸೆಳ್ಳುಗರ – ಚುಕ್ಕಿ
ಸುಳಿಮಳ್ಳೆ – ಕಾದನೀರು, ಬಿಸಿನೀರು
ಸೊಲ್ಲ – ಸೊಲ್ಲು
ಸ್ವಾದರ – ಸೋದರ
ಹೇಳೆ – ಹೇಳು
ಹಾರ್ಯಾರಿ – ಹಾರಿ
ಹೊಡದಾನೆ – ಹೊಡೆದಾನೆ
ಹಾಕ್ಯ – ಹಾಕು
ಹಾದ್ಯಾಗ – ದಾರಿಯಾಗ
ಹಾವ – ಹಾವು
ಹೋಗದ್ಲು – ಹೊಗೆದಳು
ಹಟ್ಯಾಗ – ಹಟ್ಟಿ
ಹಾಕ್ಯಾಳ – ಹಾಕುತ್ತಾಳೆ
ಹಚ್ಯಾಳ – ಹಚ್ಚಿದ್ದಾಳೆ
ಹಾಕ್ಯಾರೆ – ಹಾಕಿದ್ದಾರೆ
ಹಚ್ಯಾನ – ಇಟ್ಟಾನ
ಹಸಿದಾ – ಹಸಿವೆ
ಹೇಳಿಕೆಂತಾ – ಹೇಳುತ್ತಾ
ಹೋಗ್ಯಾರೆ – ಹೋದರು
ಹೋಗ್ಯಾ – ಹೋಗು