ಅದೊಂದು ಚಿಕ್ಕ ಕಾಡು. ಗಂಡಹೆಂಡರಿಬ್ಬರೇ ನಡೆದು ಬರುತ್ತಿದ್ದರು. ಗಂಡನ ಹೆಸರು ಭಗವಾನ್. ಹೆಂಡತಿ ಆದಿ ಇನ್ನೂ ಬೆಳಗಾಗಿರಲಿಲ್ಲ. ಸಣ್ಣಗೆ ಮಳೆ ಹುಯ್ಯುತ್ತಿತ್ತು. ಹೆಂಡತಿಯ ಕೈಯಲ್ಲಿ ಒಂದು ಗೂಡೆ, ಅದರಲ್ಲಿ ಎಳೆಯ ಮಗು, ಹೆತ್ತ ಮಗುವನ್ನು ಕಾಡಿನಲ್ಲೇ ಬಿಟ್ಟು ತನ್ನನ್ನು ಹಿಂಬಾಲಿಸೆಂದು ಆಜ್ಞೆ ಮಾಡಿದ ಗಂಡ. ತಾಯಿ ಹೃದಯ ಅದನ್ನು ಹೇಗೆ ಸಹಿಸೀತು? ” ಎಲೈ ತಾಯಿ ಹೃದಯವೇ, ಹೆದರದಿರು. ಯಾವ ಕಾರಣಕ್ಕೋ ಏನೋ? ನಿನ್ನ ಪತಿ ಹೀಗೆ ಹೇಳಿದ್ದಾನೆ. ಅವನ ಆದೇಶದಂತೆ ನಡೆದುಕೋ ಎಂದು ಆಕೆಯ ಮನಸ್ಸು ಹೇಳಿತು. ಆದಿ ದುಃಖಪ್ತಳಾಗಿ ಮಗುವನ್ನು ಒಂದು ಮರದಡಿ ಇಟ್ಟು ಗಂಡನನ್ನು ಹಿಂಬಾಲಿಸಿದಳು. ಮಗು ಗಟ್ಟಿಯಾಗಿ ಅಳಹತ್ತಿತು ತಾಯಿ-ತಂದೆಯರಿಂದ ದೂರವಾಗಿತ್ತು. ಮಗು ದೈವನಿಯಮ ಹಾಗಿತ್ತು !

ಕಾಡಿಗೆ ಸಮೀಪದಲ್ಲೊಂದು ಸಣ್ಣ ಕೊಳ ಸ್ನಾನ ಮಾಡಲು ಅಲ್ಲಿಗೆ ಪಾಣರ್ ಎಂಬುವರು ಬಂದಿದ್ದರು. ಮಾಡಿತು. ಮಕ್ಕಳಿಲ್ಲದೆ ಕೊರಗುತ್ತಿದ್ದ ಪಾಣರ್ ಮಗುವನ್ನು ತಮ್ಮ ಗುಡಿಸಿಲಿಗೆ ತಂದರು. ಆ ಮಗುವೇ ಮುಂದೆ ತಮಿಳುನಾಡಿನ ಪ್ರಸಿದ್ಧ ಕವಯಿತ್ರಿಯಾದಳು. ಆಕೆಯೇ ಅವ್ವೈಯಾರ್. ಪುರಾತನ ಭಾರತದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದವಳು.

ಅವ್ವೈಯಾರ್ ಇದ್ದ ಕಾಲ ಯಾವುದು? ಕ್ರಿ.ಶ. ಎರಡನೆಯ ಶತಮಾನ ಎನ್ನುತ್ತಾರೆ. ಎಂಟನೆಯ ಶತಮಾನ ಎನ್ನುತ್ತಾರೆ. ಖಚಿತವಾಗಿ ಹೇಳುವುದು ಕಷ್ಟ. ಸುಲಭವಾದ ಭಾಷೆಯಲ್ಲಿ ಮನಸ್ಸನ್ನು ಮುಟ್ಟುವಂತೆ ಈಕೆ ಕವನಗಳನ್ನು ರಚಿಸಿದಳು. ತುಂಬ ಜನಪ್ರಿಯಳಾದಳು. ಇದರಿಂದ ಇವಳ ವಿಷಯವಾಗಿ ಅನೇಕ ಕಥೆಗಳೂ ಇನ್ನು ನಾವು ನಂಬಲಿ-ಬಿಡಲಿ ಇಂತಹ ಕಥೆಗಳಲ್ಲಿ ಇವಳ ವಿಷಯ ಹೇಳುತ್ತಾರೆ. ಎನ್ನುವುದೇ ಜನರಿಗೆ ಇವಳಲ್ಲಿ ಇದ್ದ ಪ್ರೀತಿ ಗೌರವಗಳನ್ನು ತೋರಿಸುತ್ತದೆ.

ವಿನಾಯಕನ ಭಕ್ತಳು

ಪಾಣರ್ ಇದ್ದುದು ಚೋಳನಾಡಿನ ನನ್ನಿ ದುಚೇರಿ ಎಂಬ ಗ್ರಾಮದಲ್ಲಿ. ಅವರ ಧರ್ಮಪತ್ನಿ ಆಳಗಮ್ಮೈ ಇಬ್ಬರೂ ಮಗುವನ್ನು ಪ್ರೀತಿಯಿಂದ ಸಾಕಿದರು. ನೋಡಲು ಹೆಸರಿನಿಂದ ಕರೆದರು. ಪಾಣರ್ ಸ್ವತಃ ಕವಿಗಳು ಸಾಕುತಂದೆಯ ಪ್ರಭಾವ ಮಗಳ ಮೇಲೆ ಆಗದಿರಲಿಲ್ಲ. ಚಿಕ್ಕ ವಯಸ್ಸಿಗೆ ಅವ್ವೈ ಶುದ್ದ ತಮಿಳಿನಲ್ಲಿ ಮಾತನಾಡುತ್ತಿದ್ದಳು. ಪುಟ್ಟ ಪುಟ್ಟ ಕವಿತೆ ಕಟ್ಟುತ್ತಿದ್ದಳು. ಗೆಳತಿಯರೊಡನೆ ನದಿ ತೀರದ ವಿನಾಯಕನ ಗುಡಿಗೆ ಹೋಗುತ್ತಿದ್ದಳು. ಗಣೇಶನನ್ನು ಪೂಜಿಸುವುದೆಂದರೆ ಅವಳಿಗೆ ಎಲ್ಲಿಲ್ಲದ ಆನಂದ. ಎಷ್ಟೋ ವೇಳೆ ವಿಗ್ರಹದ ಮುಂದೆ ಗಂಟೆಗಟ್ಟಲೆ ಕುಳಿತುಬಿಡುತ್ತಿದ್ದಳು.

ಅವ್ವೈಯಾರ್ ಮದುವೆಯೇ ಆಗಲಿಲ್ಲ. ಈ ವಿಷಯದ ಬಗ್ಗೆ ಒಂದು ಜನಪ್ರಿಯ ಕಥೆ ಉಂಟು.

ಅವ್ವೈಗೆ ಎಂಟು ವರ್ಷ ವಯಸ್ಸಾಯಿತು. ಆ ವಯಸ್ಸಿಗೆ ಬುದ್ದಿವಂತಳಾಗಿದ್ದ ಅವಳು ಚೆಲುವೆಯೂ ಆಗಿದ್ದಳು. ಹೆಣ್ಣು ಮಕ್ಕಳಿಗೆ ಬಹು ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದ ಕಾಲ ಅದು. ಅವಳ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ಅವಳನ್ನು ಮದುವೆಯಾಗಲು ಪ್ರಯತ್ನಿಸಿದವರಲ್ಲಿ ಅರಸರೇ ಹೆಚ್ಚು ಮಂದಿ. ಅವ್ವೈಗೆ ಮಾತ್ರ ಇದಾವುದೂ ಬೇಡ. ಜನಸೇವೆ ಮಾಡುವುದೇ ತನ್ನ ಗುರಿ ಎಂದು ತೀರ್ಮಾನಿಸಿದಳು. ತಮಿಳೇ ದೈವ ಎಂದು ತಿಳಿದಿದ್ದಳು. ಸುಖಭೋಗಗಳು ಸ್ವಲ್ಫ ಕಾಲ ಇರುತ್ತವೆ. ಅವಕ್ಕೆ ಮನಸ್ಸು ಕೊಡಬಾರದು ಎಂದು ಚಿಕ್ಕ ವಯಸ್ಸಿಗೆ ಮನದಟ್ಟು ಮಾಡಿಕೊಂಡಿದ್ದಳು. ಪಾಣರ್ ಮಾತ್ರ ಮದುವೆಯ ಸಿದ್ಧತೆಯಲ್ಲಿದ್ದರು.

ಅದೊಂದು ದಿನ, ಅವ್ವೈಗೆ ಮದುವೆ ನಿಶ್ಚಯವಾಗಿತ್ತು. ಮಲೈನಾಡಿನ ದೊರೆಯೇ ವರ. ಮದುವೆ ಮನೆಯಲ್ಲಿ ಎಲ್ಲರಿಗೂ ಅಂದು ಸಂಭ್ರಮ .ಅವ್ವೈಗೆ ಅಲಂಕಾರ ಮಾಡಿದರು ಅವಳ ಗೆಳತಿಯರು, ಅಲಗಮೈ ಹೂಮುಡಿಸಿ ಸಿಂಗರಿಸಿದಳು. ಎಲ್ಲವೂ ಸಿದ್ಧವಾಗಿತ್ತು. ಆದರೆ ಅವ್ವೈಗಿದ್ದ ಚಿಂತೆಯೇ ಬೇರೆ ಅವಳು ಮನಸ್ಸಿನಲ್ಲಿ ಲೆಕ್ಕ ಹಾಕಿದಳು ಯೌವನ, ಸೌಂದರ್ಯ- ಇವು ತಾನೇ ನನ್ನ ಮದುವೆಗೆ ಕಾರಣ? ನನಗೆ ಕುರೂಪವಿದ್ದಿದ್ದರೆ ಯಾರು ತಾನೆ ಇಲ್ಲಿ ಸುಳಿಯುತ್ತಿದ್ದರು? ಅವ್ವೈ ಗೆಳೆತಿಯರಿಗೆ, “ಗುಡಿಗೆ ಹೋಗಿ ಬಂದು ಬಿಡುತ್ತೇನೆ” ಎಂದು ತಿಳಿಸಿ ಸ್ವಾಮಿ ವಿನಾಯಕನ ಗುಡಿಗೆ ಓಡಿದಳು. ದೇವರ ಮುಂದೆ ಭಕ್ತಿಯಿಂದ ಕೈಜೋಡಿಸಿ ನಿಂತು ಪ್ರಾರ್ಥಿಸಿದಳು. “ಅಪ್ಪಾ ವಿನಾಯಕ, ನನಗೆ ಈ ಮದುವೆ ಬೇಡ. ನಾನು ಈ ಲೋಕದ ಸೇವೆಯಲ್ಲಿ, ಜ್ಞಾನ ಪ್ರಸಾರದಲ್ಲಿ ನಾನು ಕಾಲ ಕಳೆಯುತ್ತೇನೆ. ದಯಮಾಡಿ ನನ್ನನ್ನು ಈ ಯೌವನದಿಂದ ಪಾರುಮಾಡಿ ವೃದ್ಧಳನ್ನಾಗಿ ಮಾಡು.”

ಅವ್ವೈ ವಿನಾಯಕನ ಪರಮ ಭಕ್ತಳಲ್ಲವೇ? ಅವನ ಕೃಪೆ ಲಭಿಸಿತು. ಹುಡುಗಿ ಅವ್ವೈ ಸ್ಥಾನದಲ್ಲಿ ಮುದುಕಿ ಅವ್ವೈ ನಿಂತಿದ್ದಳು. ತಲೆ ತುಂಬ ಬಿಳಿ ಕೂದಲು. ಸ್ವಲ್ಫ ಬಾಗಿದ ಶರೀರ. ಅಷ್ಟಿಷ್ಟು ಸುಕ್ಕುಗಟ್ಟಿದ ಮುಖ. ತೇಜಸ್ಸು ಮಾತ್ರ ಎಂದಿನಂತೆ. ಯೌವನ ಮಾಯವಾಗಿತ್ತು. ಅವ್ವೈ ಗಣೇಶನನ್ನು ಕೊಂಡಾಡುತ್ತ ನಿಂತಳು. ಮದುವೆ ಮನೆಯಲ್ಲಿ ಅವ್ವೈಯನ್ನು ಕಾಣದೆ ಎಲ್ಲರೂ ವಿನಾಯಕನ ಗುಡಿ ಬಳಿಗೆ ಓಡಿಬಂದರು. ಅಲ್ಲಿ ಕಂಡದ್ದೇನು? ಎಲ್ಲರಿಗೂ ನಿರಾಶೆ. ಪಾಣರ್, ಅಯ್ಯೋ, ನನ್ನ ಅವ್ವೈಗೆ ಈ ಗತಿ ಬಂತಲ್ಲ!” ಎಂದು ನೊಂದುಕೊಂಡರು. ಆದರೆ ಅವ್ವೈ ತನ್ನ ಗುರಿ ಸಾಧನೆಯ ಯಶಸ್ಸಿನ ಮೊದಲ ಹಂತದಲ್ಲಿದ್ದಳು.

ಎಲ್ಲರಿಗೂ ವಂದನೆಗಳನ್ನು ತಿಳಿಸಿ ಅವ್ವೈ ಅಲ್ಲಿಂದ ಹೊರಟಳು. ನಾಡಸಂಚಾರ ಅವಳ ಉದ್ದೇಶವಾಗಿತ್ತು. ಈಗ ಅವಳು ಅವ್ವೈಯಲ್ಲ. ಅವ್ವೈಯಾರ್ ಆದಳು, ಮಕ್ಕಳಿಗೆ ಅಜ್ಜಿಯ ಸಮಾನ ಆಗಿದ್ದಳು.

ಸಂಸಾರದಲ್ಲಿ ಸಂತೋಷ ಮುಖ್ಯ

ಅವ್ವೈಯಾರ್ ನಾಡಸಂಚಾರ ಕೈಗೊಂಡಳು. ತಾನು ಕಂಡ ಜನರಿಗೆಲ್ಲ ತಿಳುವಳಿಕೆ ನೀಡುವುದೇ ಅವಳ ದಿನಚರಿ. ತಾನು ಸಂದಿಸಿದವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಅವರ ಪ್ರಶ್ನೆಗಳಿಗೆ ಸಮಾಧಾನ ಹೇಳುತ್ತಿದ್ದಳು. ಒಬ್ಬರಿಗೊಬ್ಬರು ಅನ್ಯೋನ್ಯವಾಗಿರಬೇಕು. ಪ್ರತಿಯೊಬ್ಬರಲ್ಲೂ ಭೇದವಿಲ್ಲದ ಸಮದೃಷ್ಟಿ ಇರಬೇಕು ಎಂದು ಹೇಳುತ್ತಿದ್ದ ಅವಳನ್ನು ಜನರು ಗೌರವಿಸುತ್ತಿದ್ದರು.

 

ಈ ನಾಡ ಸೇವೆಯಲ್ಲಿ ಜ್ಞಾನ ಪ್ರಸಾರದಲ್ಲಿ ನಾನು ಕಾಲ ಕಳೆಯುತ್ತೇನೆ

ತನ್ನ ಸಂಚಾರದಲ್ಲಿ ತಾನು ಕಂಡ ಜನಜೀವನವನ್ನು ಅವ್ವೈಯಾರ್ ಚಿತ್ರಿಸಿದ್ದಾಳೆ. ಅವಳ ಸೊಗಸಾದ ಸುಲಭವಾದ ತಮಿಳು ಮಾತುಗಳಿಗೆ ಒಂದು ದಿನ ಒಬ್ಬ ಮಾರು ಹೋದ. ಅವನೊಬ್ಬ ಗುಡಿಸಲು ವಾಸಿ. ಅವನಿಗೆ ಅವ್ವೈಯಾರಳನ್ನು ಉಪಚರಿಸಬೇಕೆಂಬ ಆಸೆ ಹುಟ್ಟಿತು. ಸರಿ, ಅವಳನ್ನು ಮಾತನಾಡಿಸಿ ತನ್ನ ಗುಡಿಸಲಿಗೆ ಕರೆದೊಯ್ದು. ಹೊರಗಡೆ ಇದ್ದ ಜಗುಲಿಯ ಮೇಲೆ ಅವಳನ್ನು ಕೂರಿಸಿ ಒಳಗೆ ಹೋದ ಅವನ ಹೆಂಡತಿ ಗಯ್ಯಾಳಿ. ಕೋಪಿಷ್ಠೆ. ಜಿಪುಣ ಹೆಂಗಸು ಬೇರೆ. ಗಂಡನನ್ನು ಹೊಡೆಯಲ್ಲಿಕ್ಕೂ ಹೇಸಳು. ಗುಡಿಸಿಲುವಾಸಿ ಅವಳನ್ನು ಒಳ್ಳೊಳ್ಳೆ ಮಾತುಗಳಿಂದ ಮರುಳು ಮಾಡಿದ. ಮಾತಿನ ಕೊನೆಯಲ್ಲಿ ತಾನೊಬ್ಬ ಮುದುಕಿಯನ್ನು ಕರೆತಂದಿರುವೆ, ಅವಳಿಗೆ ಊಟ ಹಾಕಬೇಕು ಎಂದು ಕೇಳಿಕೊಂಡ ಅಷ್ಟು ಹೇಳಿದ್ದಕ್ಕೆ ಅವಳಿಗೆ ಕೋಪ ಉಕ್ಕಿ ಬಂತು. ಗಂಡನನ್ನು ತಿಂದು ಹಾಕುವ ಹಾಗೆ ನೋಡುತ್ತ ಏನೆಂದಿರಿ? ಮುದುಕಿಗೆ ಊಟ ಹಾಕಬೇಕೆ? ಇದೇನು ಅನ್ನ ಛತ್ರ ಕೆಟ್ಟು ಹೋಯಿತೆ? ಕೆಲಸವಿಲ್ಲದೆ ತಿರುಗಾಡೋ ಜನರಿಗೆ ಅನ್ನ ಬಡಿಸುವುದೇ ? ಸಾಧ್ಯವಿಲ್ಲ” ಎಂದು ಬಿಟ್ಟಳು ಪಾಪ! ಗುಡಿಸಿಲುವಾಸಿ ಇಂತಹ ಹೆಂಡತಿಯನ್ನು ಕಟ್ಟಿಕೊಂಡು ಮಾಡುವುದಾದರೂ ಏನು? ಹೊರಗೆ ಬಂದು ಅವ್ವೈಯಾರನ್ನು ” ಕ್ಷಮಿಸಿರಿ” ಎಂದು ಕೇಳಿಕೊಂಡ. ಅದಕ್ಕೆ ಅವ್ವೈಯಾರಳು ಬೇಜಾರು ಮಾಡಿಕೊಳ್ಳಲಿಲ್ಲ. “ಅಪ್ಪಾ ನಡೆದದ್ದನ್ನು ಗಮನಿಸಿದೆ. ಸಂಸಾರವೆಂದರೆ ಹೀಗಿರುವುದಿಲ್ಲ. ಗಂಡ ಹೆಂಡತಿ ಒಬ್ಬರಿಗೊಬ್ಬರು ಹೊಂದಿಕೊಂಡಿರಬೇಕು” ಎಂದು ನಕ್ಕಳು ಗುಡಿಸಿಲುವಾಸಿಗೆ ಅಳುವೇ ಬಂತು. ಅವ್ವೈಯಾರ್, “ಅಪ್ಪಾ ಚಿಂತಿಸಬೇಡ. ನಗುನಗುತ್ತಾ ಉಪಚಾರ ಮಾಡುತ್ತಾ ಉಪ್ಪಿಲ್ಲದ ಸಪ್ಪೆ ಊಟ ಹಾಕಿದರೂ ಅದು ಅಮೃತವಾಗುತ್ತದೆ. ಮುಖಭಂಗ ಮಾಡಿ ಮೃಷ್ಟಾನ್ನ ಹಾಕಿದರೂ ಇದ್ದ ಹಸಿವು ಇನ್ನಷ್ಟು ಹೆಚ್ಚಿದಂತೆ ಆಗುತ್ತದೆ. ನಿನ್ನ ಮಾತುಗಳಿಂದ ನನ್ನ ಹೊಟ್ಟೆ ತುಂಬಿದೆ. ನಾನಿನ್ನು ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಮುಂದೆ ನಡೆದಳು.

ಬಡವರ ಗುಡಿಸಿಲೇ ಅವಳ ಮನೆ. ಅವರ ಗಂಜಿ, ಅನ್ನಗಳೇ ಅವಳ ಆಹಾರ.

ಅದಿಕಮಾನನ ಔದಾರ್ಯ

ಅದಿಕಮಾನ್ ನೆಡುಮಾನಂಜಿ ಎಂಬುವನು ಒಬ್ಬ ಪ್ರಸಿದ್ಧ ಪಾಳೆಯಗಾರ. ಇವನು ತಗಡೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳುತ್ತಿದ್ದ. ಅದಿಕಮಾನ್ ಔದರ್ಯಕ್ಕೆ ಹೆಸರಾದವ. ಮಹಾದಾನಿ. ಅಳತೆ ಮೀರಿದ ಔದರ್ಯ ಅವನದು ಅವನಿಗೆ ಅವ್ವೈಯಾರಳ ವಿಷಯ ತಿಳಿದಿತ್ತು. ಎಂದು ತನ್ನ ಅರಮನೆಗೆ ಆಕೆ ಬರುವಳೋ ಎಂದು ಕಾದಿದ್ದ.

ಅವ್ವೈಯಾರ – ಅದಿಕಮಾನದ ಭೇಟಿಯ ವಿಷಯ ಒಂದು ಸ್ವಾರಸ್ಯವಾದ ಕಥೆ ಇದೆ.

ಒಂದು ದಿನ ಅದಿಕಮಾನನ ಅರಮನೆಯಲ್ಲಿ ಅವ್ವೈಯಾರ್ ಕಾಣಿಸಿಕೊಂಡಳು. ಅದಿಕಮಾನನಿಗೆ ಆನಂದವೋ ಆನಂದ. ಅವ್ವೈಯಾರಳಿಗೆ ನಮಸ್ಕಾರ ಮಾಡಿ ಆದರಿಸಿದ. ಅವ್ವೈಯಾರ್ ಹಸಿದಿದ್ದಳು. ತಿಂದವರಿಗೆ ದೀರ್ಘ ಆಯುಸ್ಸನ್ನು ಕೊಡಬಲ್ಲ ಒಂದು ನಲ್ಲಿ ಕಾಯಿ ಅದಿಕಮಾನನ ಬಳಿ ಇತ್ತು. ಅವನು ತಾನೇ ಅದನ್ನು ತಿನ್ನದೆ ಕವಯಿತ್ರಿ ಅವ್ವೈ ಬಹುಕಾಲ ಬಾಳಬೇಕೆಂದು ಆಸೆಯಿಂದ ಅವಳಿಗೆ ಅದನ್ನು ಕೊಟ್ಟ. ಅವ್ವೈಯಾರ್ ಸಂತೋಷದಿಂದ ಅದನ್ನು ತಿಂದು ಮುಗಿಸಿದಳು. ನೆಲ್ಲಿ ಇಷ್ಟು ರುಚಿ ಇರಲು ಕಾರಣವೇನು?” ಅವ್ವೈ ಕೇಳಿದಳು. “ಅಮ್ಮ, ಇಲ್ಲೇ ಪಕ್ಕದಲ್ಲಿರುವ ಕುದಿರೆಮಲೈ ಎಂಬಲ್ಲಿ ನೆಲ್ಲಿ ಮರವೊಂದಿದೆ. ಬಹು ವರ್ಷಗಳಿಗೊಮ್ಮೆ ಅದು ಫಲ ನೀಡುವುದು. ಆ ಫಲವೇ ಇದು. ಇದನ್ನು ಉಂಡವರು ಬಹುಕಾಲ ಆರೋಗ್ಯಶಾಲಿಗಳಾಗಿ ಬಾಳುವರು. ಅದಕ್ಕೆ ನಿಮಗಿದ್ದನ್ನು ಕೊಟ್ಟೆ” ಎಂದ ಅದಿಕಮಾನ್. ಅವ್ವೈಯಾರಳಿಗೆ ಆಶ್ಚರ್ಯಯಾಯಿತು. ಮತ್ತೆ ಕೇಳಿದಳು, “ದೊರೆಯೇ, ಮಹಾದಾನಿಯಾದ ನೀನು ಇದನ್ನು ತಿನ್ನದೇ ಈ ಮುದುಕಿಗೆ ಕೊಟ್ಟೆಯಲ್ಲ? ನನ್ನಂತಹವಳಿಂದ ಯಾರಿಗೇನು ಲಾಭ?” ಅದಿಕಮಾನ್ ಉತ್ತರಿಸಿದ: ಅಮ್ಮಾ. ಈ ನೆಲ್ಲಿಯನ್ನು ನಾನೇ ತಿನ್ನಬೇಕೆಂದುಕೊಂಡಿದ್ದೆ. ಆದರೆ ನಿಮ್ಮ ವಿಷಯ ತಿಳಿದ ಬಳಿಕ ನನ್ನ ಉದ್ದೇಶವನ್ನು ಬದಲಾಯಿಸಿದೆ. ಅಮ್ಮಾ, ದಾನ ಎಲ್ಲಿಯವರೆಗೆ ಕೊಡಬಲ್ಲೆ? ಹಣ ಬರುತ್ತದೆ. ಹೋಗುತ್ತದೆ ಎಂಬುದು ಲೋಕದ ಮಾತಲ್ಲವೆ? ನಾಳೆ ಈ ಹಣ ಹೋದ ಮೇಲೆ ನಾನೂ ಎಲ್ಲರಂತೆಯೇ. ಅದೇ ನೀವಾದರೋ ವಿದ್ಯಾಸಂಪನ್ನರು, ವಿದ್ಯಾಮಾನ ಅತಿ ಶ್ರೇಷ್ಠವಾದದ್ದು. ಏಳೇಳು ಜನ್ಮಗಳಿಗೂ ಪ್ರಜೆಗಳಿಗೆ ನಲ್ಮೆಯನ್ನುಂಟು ಮಾಡುತ್ತದೆ. ಅದನ್ನು ತಿಳಿದೇ ನಾನಿದನ್ನು ನಿಮಗೆ ಕೊಟ್ಟಿದ್ದು.”

ದೂತಳಾಗಿ ಅವ್ವೈ

ತೊಂಡೈ ನಾಡನ್ನು ತೊಂಡೈ ಮಾನನೆಂಬುವನು ಆಳುತ್ತಿದ್ದ. ಅವನಿಗೆ ಅದಿಕಮಾನನನ್ನು ಕಂಡರಾಗದು. ಒಮ್ಮೆ ಯುದ್ಧ ಘೋಷಿಸಿದ. ಯುದ್ಧ ಮಾಡಿದರೆ ರಕ್ತ ಪಾತ ತಪ್ಪದು. ಎರಡೂ ಕಡೆ ಸಾವಿರಾರು ಜನ ಸಾಯುತ್ತಾರೆ. ಪ್ರಜೆಗಳಿಗೆ ಸಂಕಟ. ಇದನ್ನರಿತಿದ್ದ ಅದಿಕಮಾನ್ ಯದ್ಧವನ್ನು ನಿಲ್ಲಿಸಲು ನಿಶ್ಚಯಿಸಿದ. ಅದು ಹೇಗೆ? ತೊಂಡೈಮಾನನಿಗೆ ತಿಳಿ ಹೇಳಲು ಅವ್ವೈಯಾರಳನ್ನು ದೂತಳನ್ನಾಗಿ ಕಳುಹಿಸಿಕೊಟ್ಟ. ಅವ್ವೈಯಾರ್ ತೊಂಡೈಮಾನನ ಅರಮನೆಗೆ ಬಂದಳು. ತೊಂಡೈಮಾನ್ ಅವಳನ್ನು ನೇರ ಆಯುಧ ಶಾಲೆಗೆ ಕರೆದೊಯ್ದು. ಅದೊಂದು ಸಂಗ್ರಹಾಲಯವೇ ಆಗಿತ್ತು. ಕತ್ತಿ, ಈಟಿ, ಭರ್ಜಿ ಮೊದಲಾದ ಯುದ್ಧ ಸಾಧನಗಳು ಅಲ್ಲಿ ತುಂಬಿದ್ದವು. ಆಯುಧಗಳು ಫಳಫಳನೆ ಹೊಳೆಯುತ್ತಿದ್ದವು. ತೊಂಡೈಮಾನ್ ತನ್ನ ರಾಜ್ಯದ ಪ್ರಜೆಗಳ ಶೌರ್ಯ ಸಾಹಸಗಳನ್ನು ವರ್ಣಿಸುತ್ತಾ ಅವ್ವೈಯಾರಳಿಗೆ, “ತಾಯೆ, ಈಗ ಹೇಳಿ, ನಮ್ಮೊಡನೆ ಯುದ್ಧ ಮಾಡಿ ಗೆಲ್ಲುವಷ್ಟು ಶೌರ್ಯ ಸಾಹಸಗಳು ನಿಮ್ಮ ರಾಜನಲ್ಲಿವೆಯೇ?” ಎಂದು ಪ್ರಶ್ನಿಸಿದ. ಉತ್ತರ ಹೇಳುವುದನ್ನು ಹೇಳಿಕೊಡಬೇಕೇ ಅವ್ವೈಯಾರಳಿಗೆ? ಅವಳು ಬುದ್ದಿ ಉಪಯೋಗಿಸಿ ನುಡಿದಳು. “ಸಾಧ್ಯವಿಲ್ಲ ದೊರೆಯೇ, ನೀನೆಲ್ಲಿ, ನಮ್ಮ ಅಧಿಕಮಾನನೆಲ್ಲಿ? ನಿನ್ನ ರಾಜ್ಯದ ಸೈನಿಕರೋ ಸದಾ ಯುದ್ಧಸನ್ನದ್ದರು. ಆಯುಧಗಳೋ ಮಿಂಚಿನಂತೆ ಹೊಳೆಯುತ್ತಿವೆ. ಕೋಟಿ ಸುತ್ತ ಕಾವಲಿರುವುದರಿಂದ ಇವು ಭದ್ರವಾಗಿವೆ. ಆದರೆ ನಮ್ಮ ಅದಿಕಮಾನನ ಬಳಿಯ ಆಯುಧಗಳೋ ಹಲವು ಯುದ್ಧಗಳಿಗೆ ಉಪಯೋಗಿಸಲ್ವಟ್ಟು ಮೊಂಡಾಗಿವೆ. ಸೈನಿಕರಂತೂ ಅವುಗಳತ್ತ ತಿರುಗಿ ಸಹ ನೋಡಿಲ್ಲ. ಅನೇಕ ಯುದ್ಧಗಳನ್ನು ಮಾಡಿ ಸುಸ್ತಾಗಿದ್ದಾರೆ.

ತೊಂಡೈಮಾನನಿಗೆ ಅವ್ವೈಯಾರಳ ಚಮತ್ಕಾರದ ಮಾತುಗಳು ಅರ್ಥವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವ್ವೈಯಾರ್ ತನ್ನನ್ನು ಹೊಗಳುವಂತೆ ಕಾಣುತ್ತಿದೆ. ಆದರೆ ಅದಿಕಮಾನನು ಅನೇಕ ಯುದ್ಧಗಳನ್ನು ಮಾಡಿದ್ದಾನೆ. ಎಂದು ಹೇಳಿದಂತಾಯಿತು. ಅವಳ ಬುದ್ದಿಗೆ ತಲೆದೂಗಿದ. ಆದರೂ ವೀರನಲ್ಲವೇ? ” ಅಂದರೆ ನನ್ನ ಬಳಿ ಇರುವ ಆಯುಧಗಳು ಉಪಯೋಗಕ್ಕಿಲ್ಲದೆ ಹೊಳೆಯುತ್ತಿವೆ ಎಂದು ತಿಳಿದಿರಾ? ಅದಿಕಮಾನನಿಗೆ ಹೆದರಿ ಯುದ್ಧ ನಿಲ್ಲಿಸುವವನಲ್ಲ ಈ ತೊಂಡೈಮಾನ್. ಯುದ್ಧ ಹೂಡಿ ವೀರತ್ವವನ್ನು ಪ್ರದರ್ಶಿಸುವುದೇ ಅವನ ಪ್ರಕೃತಿ” ಎಂದ ಅವ್ವೈಯಾರ್ ನಕ್ಕು ನುಡಿದಳು: “ದೊರೆಯೇ, ಜಗಳ ಹೂಡಿಯೇ ನಿನ್ನ ನಾಡಿನ ಹಿರಿಮೆಯನ್ನು ಪ್ರದರ್ಶಿಸಬೇಕೆ? ನೀನು ತಿಳಿದಿರುವಂತಹ ಶೌರ್ಯ ಸಾಹಸಗಳಲ್ಲ ಬೇಕಾಗಿರುವುದು. ಶೌರ್ಯಕ್ಕೆ ಪ್ರೀತಿ, ವಿಶ್ವಾಸ ಬೆರೆಯುವುದು ಅಗತ್ಯ. ಯುದ್ದದಲ್ಲಿ ನೀನು ಇನ್ನೊಬ್ಬನನ್ನು ಸಾಯಿಸಬಹುದು. ಆದರೆ ಅವನ ಹೃದಯವನ್ನು ಗೆಲ್ಲಬಲ್ಲೆಯಾ? ಯುದ್ಧ ಮಾಡಿ ಸಾವಿರಾರು ಜನರ ಕೊಲೆ. ಕಣ್ಣೀರುಗಳಿಗೆ ಕಾರಣನಾಗಬೇಕೆ? ಪ್ರಜೆಗಳನ್ನು ಚೆನ್ನಾಗಿ ನೋಡಿಕೋ”.

ತೊಂಡೈಮಾನನಿಗೆ ಬುದ್ದಿ ಬಂದಿತು. ನಾನೂ ಅದಿಕಮಾನನೂ ಸೋದರರಂತೆ ಬಾಳುವೆವು ಎಂದು ಹೇಳಿ ಅವ್ವೈಯಾರಳನ್ನು ಕಳುಹಿಸಿಕೊಟ್ಟ.

ಅದಿಕಮಾನನಿಗೆ ಅವ್ವೈಯಾರಳಲ್ಲಿದ್ದ ಗೌರವ ಇನ್ನಷ್ಟು ಹೆಚ್ಚಿತು.

ಕೆಲ ಕಾಲದನಂತರ ಬೇರೊಂದು ಯುದ್ಧದಲ್ಲಿ ಅದಿಕಮಾನ್ ಸತ್ತ. ಅವ್ವೈಯಾರ್ ತುಂಬಾ ದುಃಖಿಸಿದಳು.

ಬೇಸಾಯ ಮಾಡುವುದೇ ಮೇಲು

ಅದಿಕಮಾನನಿಲ್ಲದ ಊರು ಅವ್ವೈಯಾರಳಿಗೆ ಬೇಡವಾಯಿತು. ಮತ್ತೆ ಸಂಚಾರ ಕೈಗೊಂಡಳು. ಅವಳ ಉದ್ದೇಶ ವೇಳ್ ಪಾರಿ ಎಂಬ ಮತ್ತೋರ್ವ ಪಾಳೆಯಗಾರನ ಅರಮನೆಗೆ ಹೋಗಬೇಕೆಂದು, ದಾರಿಯಲ್ಲಿ ಒಬ್ಬ ರೈತನನ್ನು ಕಂಡಳು. ಉಳುವುದು ಅವನ ಕೆಲಸ. ಗದ್ದೆಗೆ ಸ್ವಲ್ಫ ದೂರದಲ್ಲೇ ಅವನ ಗುಡಿಸಲು. ಹೆಂಡತಿಯೊಡನೆ ಅಲ್ಲಿ ಅವನ ವಾಸ. ಅವರದು ಅನ್ಯೋನ್ಯ ದಾಂಪತ್ಯ. ಆದರೆ ಹೆಂಡತಿಗೊಂದೇ ಚಿಂತೆ-ಗಂಡ ಸುಮ್ಮನೆ ನೆಲ ಉಳುತ್ತ ಕೂರುವುದು ಸರಿಯಲ್ಲ ಎಂದು. ಅವನು ಪಕ್ಕದೂರಿನ ಪಾಳೆಯಗಾರನ ಬಳಿ ಚಾಕರಿ ಮಾಡಬೇಕು ಎಂದು ಅವಳ ಇಷ್ಟ ಈದು ಕಾಸೇ ಸಂಪಾದಿಸಲಿ, ಅರಮನೆ ಉದ್ಯೋಗವೇ ಲೇಸೆಂದು ಅವಳ ವಾದ.

ರೈತ ಅವ್ವೈಯಾರಳಿಗೆ ತನ್ನ ಹೆಂಡತಿಯ ಬಗ್ಗೆ ಹೇಳಿಕೊಂಡ. ಅವ್ವೈಯಾರ್ ಅವಳಿಗೆ ಸಮಾಧಾನ ಹೇಳಿದಳು. ಏನಮ್ಮಾ, ಒಬ್ಬರ ಹಂಗಿನಲ್ಲಿ ಬಾಳಬೇಕೆ? ನದಿಯ ದಡದ ಮರ, ಅರಸನನ್ನು ಅವಲಂಬಿಸಿದ ಜೀವನ ಎರಡೂ ಸ್ಥಿರವಿಲ್ಲ. ಎಂದಾದರೊಂದು ದಿನ ಮರ ಕೊಚ್ಚಿಹೋಗುವಂತೆ ಅರಮನೆಯಿಂದ ಹೊರಬರಬೇಕಾಗುವುದು ಖಂಡಿತ. ನಿನ್ನ ಗಂಡನಿಗೇನು ಕೊರತೆ? ಭೂಮಿಯನ್ನು ಉತ್ತು ಅನ್ನ ಸಂಪಾದಿಸುವುದಕ್ಕಿಂತ ಯೋಗ್ಯವಾದ ಜೀವನ ಇನ್ನೆಲ್ಲಿದೆ? ಎಷ್ಟಾದರೂ ಸ್ವತಂತ್ರವಾಗಿರುವುದು ಮೇಲಲ್ಲವೇ?”.

ರೈತನ ಹೆಂಡತಿಗೆ ತಿಳುವಳಿಕೆ ಬಂತು. ಬೇಸಾಯವೇ ಮೇಲೆಂದು ಸಮಾಧಾನಪಟ್ಟುಕೊಂಡಳು.

ಮುದುಕಿಗೇಕೆ ಒಡವೆಗಳ ಗೊಡವೆ?

ವೇಳ್ ಪಾರಿ ಏಳು ಪಾಳೆಯಗಾರರಲ್ಲಿ ಒಬ್ಬ ಅವನ ರಾಜ್ಯದಲ್ಲಿ ಸುಖಶಾಂತಿಗಳು ನೆಲಸಿದ್ದವು. ಕವಿಗಳಿಗೆ ಅಲ್ಲಿ ಕೊರತೆ ಇರಲಿಲ್ಲ. ಪಾರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರ ಹೆಸರು ಅಂಗವೈ, ಸಂಗವೈ ಅಪರೂಪ ಲಾವಣ್ಯವತಿಯರು. ಅವರನ್ನು ಮದುವೆಯಾಗಲು ಚೇರ, ಚೋಳ ಮತ್ತು ಪಾಂಡ್ಯ ನಾಡಿನ ಮೂವರು ರಾಜರು ಆಸೆಪಟ್ಟರು. ಯಾರಿಗೆ ಮದುವೆ ಮಾಡುವುದು ಎಂಬ ಚಿಂತೆಯಲ್ಲಿದ್ದ ಪಾರಿ. ಅವ್ವೈಯಾರ್ ಅವನ ಆಸ್ಥಾನಕ್ಕೆ ಬಂದಳು. ಪಾರಿಯ ಸತ್ಕಾರ ಅವಳಿಗೆ ಸಂತೋಷವನ್ನುಂಟು ಮಾಡಿತು. ಅಂಗವೈ, ಸಂಗವೈಯರು ಹಾಡಿದ ಹಾಡುಗಳು ಅವಳಿಗೆ ಮೆಚ್ಚುಗೆಯಾದವು.

ತನ್ನ ಆಸ್ಥಾನದಲ್ಲೇ ಕೆಲಕಾಲವಾದರೂ ಇರಬೇಕೆಂದು ಅವ್ವೈಯಾರಳನ್ನು ಕೇಳಿದ ಪಾರಿ. ಅವ್ವೈಯಾರಳು ಅದಕ್ಕೊಪ್ಪಲಿಲ್ಲ. ಮತ್ತೊಮ್ಮೆ ಬರುತ್ತೇನೆ” ಎಂದು ಹೊರಟುನಿಂತಳು. ಪಾರಿ ಅವಳಿಗೆ ಕಾಣಿಕೆಯಾಗಿ ಒಡವೆಗಳನ್ನು ಹಣವನ್ನೂ ಅರ್ಪಿಸಿದ. ಅವ್ವೈಯಾರಳು ಎಲ್ಲವನ್ನೂ ತ್ಯಜಿಸಿ ಬಂದಳು. ಒಡವೆ, ಹಣ ಎಲ್ಲವನ್ನೂ ಒತ್ತಟ್ಟಿಗಿಟ್ಟು, “ದೊರೆಯೇ, ಊರೂರು ಸುತ್ತಿಕೊಂಡಿರುವ ಈ ಮುದುಕಿಗೇಕೆ ಒಡವೆಗಳ ಗೊಡವೆ? ಇವನ್ನೆಲ್ಲ ನಿನ್ನ ನಾಡಿನ ಜನರ ಒಳತಿಗಾಗಿಯೇ ವೆಚ್ಚ ಮಾಡು. ನನಗೆ ಬೇಕಾದ್ದು ಒಂದು ಹೊತ್ತಿನ ಅನ್ನ. ಅದು ಎಲ್ಲಾದರೂ ದೊರಕುತ್ತದೆ” ಎಂದು ಹೇಳಿ ಪಾರಿಯನ್ನು ಹರಸಿ ಹೊರಟಳು.

ವರಪ್ಪುಯರ

ಅವ್ವೈಯಾರಳ ಹೆಸರು ಎಲ್ಲೆಲ್ಲೂ ಹರಡಿತು. ಅವಳ ಆಶೀರ್ವಾದ ಪಡೆಯಲು ಜನ ಹಾತೊರೆಯುತ್ತಿದ್ದರು. ಒಂದು ದಿನ ಸಾಮಂತ ರಾಜನೊಬ್ಬ ಅವ್ವೈಯಾರಳನ್ನು ಬರಮಾಡಿಕೊಂಡ. ಅವ್ವೈಯಾರಳು ಅರಮನೆಗೆ ಹೋದಳು. ಅಂದು ಅರಮನೆಯಲ್ಲಿ ಸಡಗರದ ದಿನ. ರಾಜನ ಮಗುವಿಗೆ ನಾಮಕರಣ ಮಹೋತ್ಸವ.

 

ಯುದ್ಧಮಾಡಿ ಸಾವಿರಾರು ಜನರ ಕೊಲೆ, ಕಣ್ಣೀರುಗಳಿಗೆ ಕಾರಣನಾಗಬೇಕೆ? ಪ್ರಜೆಗಳನ್ನು ಚೆನ್ನಾಗಿ ನೋಡಿಕೋ.

ಯಾರಿಗೂ ಸಿಕ್ಕದ ಮರ್ಯಾದೆ ಅಲ್ಲಿ ಅವ್ವೈಯಾರಳಿಗೆ ದೊರೆಯಿತು. ರಾಜನಿಗೋ ಆನಂದ.

ರಾಣಿ ಮಗುವನ್ನು ತಂದು ಅವ್ವೈಯಾರಳ ಮುಂದೆ ಹಿಡಿದಳು. ಆ ಪುಟಾಣಿ ಕೂಸನ್ನು ನೋಡಿ ಅವ್ವೈಯಾರಳು ಥಟ್ಟನೆ. ವರಪ್ಪುಯರ, ವರಪ್ಪುಯರ, ವರಪ್ಪುಯರ ಎಂದು ಮೂರು ಬಾರಿ ಹೇಳಿ ಆರತಿ ತಟ್ಟೆಯಲಿ ಬೆರಳು ಅದ್ದಿದಳು. ಮಗುವಿಗೆ ತಿಲಕವಿಟ್ಟಳು. ಕುಂಕುಮದ ನೀರಿನಲ್ಲಿ ಅರಮನೆ ಗೋಡೆಯ ಮೇಲೆ ವರಪ್ಪುಯರ ಎಂದು ಬರೆದು ಹಿಂದಿರುಗಿದಳು.

ವರಪ್ಪುಯರ ಎಂದರೆ ಬತ್ತದ ಗದ್ದೆಗಳ ನಡುವೆ ಇರುವ ದಿಂಡು ಎಂದರ್ಥ: ಬದು ಎಂದೂ ಕರೆಯುತ್ತಾರೆ.

‘ವರಪ್ಪುಯರ’ ಎಂಥ ಆಶೀರ್ವಾದ ! ಯಾರಿಗೂ ಅರ್ಥವಾಗಲಿಲ್ಲ. ಪಂಡಿತರು ಸಹ ವರಪ್ಪುಯಾರ ಎಂದರೆ ಬದು ಬೆಳೆಯಲಿ ಎಂದರ್ಥ ಮಾಡಿದರು. ಮಗುವಿಗೂ ಬದು ಬೆಳೆಯುದಕ್ಕೂ ಏನು ಸಂಭಂಧ? ಎಲ್ಲರಿಗೂ ಸಮಸ್ಯೆಯಾಯಿತು.

ರಾಜ ಮೊದಲೇ ಮುಂಗೋಪಿ ಅವ್ವೈಯಾರಳ ತಲೆಯನ್ನೇ ತಗೆಸಿಬಿಡುವನೇನೋ ಎಂದು ಭಯಬಿದ್ದರು ಜನ, ರಾಜನಿಗೆ ರಾತ್ರಿಯೆಲ್ಲ ನಿದ್ದೆಯಲ್ಲ. ಕನಸಿನಲ್ಲೂ ಅವನಿಗೆ ವರಪ್ಪುಯರ ಆಶೀರ್ವಾದದ್ದೇ ಜ್ನಾನ ಮರುದಿನ ಅವ್ವೈಯಾರಳಿಗೆ ಕರೆ ಹೋಯಿತು.

ಸಭೆಯಲ್ಲಿ ಬಹುಜನ ನೆರೆದಿದ್ದರು. ಎಲ್ಲೆಲ್ಲೂ ಮೌನ. ಏನಾಗವುದೋ ಎಂಬ ಕಾತುರ ಅವ್ವೈಯಾರ್ ಅವರೇ, ಏನದು ನಿಮ್ಮ ಹರಕೆ? ರಾಜ ಕೇಳಿದ. ವರಪ್ಪುಯರ ಅವ್ವೈಯಾರ್ ಮತ್ತೆ ನುಡಿದಳು. ಹಾಗಂದರೇನು? ಮಂತ್ರಿ ಗುಡುಗಿದನು. ಅದರರ್ಥವನ್ನು ತಿಳಿಸಿ. ಇಲ್ಲದಿದ್ದರೆ ……. ಸೇನಾಪತಿ ಕತ್ತಿಯನ್ನು ಝಳಪಿಸಿದನು.

ಅವ್ವೈಯಾರ್ ನಗುನಗುತ್ತ ಹೇಳಿದಳು. ಸೇನಾಪತಿ, ಕತ್ತಿಯನ್ನು ಒರೆಯಲ್ಲಿಡು, ವರಪ್ಪುಯರ ಎಂದರೆ ಅರ್ಥ ಹೇಳುವೆ ಕೇಳಿ. ಬದುವೇರೆ ನೀರೇರುಂ, ನೀರೇರೆ ನೆಲ್ಲೇರುಂ,ನೆಲ್ಲೇರೆ ಕಾಳವೇರುರಂ, ಕುಳವೇರೆ ಕೋಲೇರಂ, ಕೋಲೇರೆ ಅರಸೇರುಂ ಎಂದರೆ  ಬತ್ತದ ಗದ್ದೆಗಳ ನಡುವೆ ಇರುವ ದಿಂಡಿಗೆ ಬದು ಅಥವಾ ವರಪ್ಪು ಎಂದು ಹೆಸರು. ಬದುವೇರಲು ನೀರು ಏರಿ ಬತ್ತಹೆಚ್ಚಾಗಿ ಬೆಳೆಯುತ್ತದೆ. ಬತ್ತ ಬೆಳೆದಷ್ಟು ರೈತನು ಹಣವಂತನಾಗುತ್ತಾನೆ. ಹಣವಂತರಿಂದ ರಾಜನ ಶಕ್ತಿ ಹೆಚ್ಚುತ್ತದೆ.

ಹೊಲದಿಂದ ಪ್ರಜೆ. ಪ್ರಜೆಯಿಂದ ರಾಜ! ಇದಕ್ಕಿಂತ ಹರಕೆಯೇ? ರಾಜ ಎದ್ದು ನಿಂತು ಅವ್ವೈಯಾರಳಿಗೆ ಅಡ್ಡ ಬಿದ್ದ. ಒಂದೇ ಪದದಲ್ಲಿ ಇಷ್ಟು ಅರ್ಥ ತುಂಬಿ ಹೇಳುವ ಅವಳ ಕವಿತಾ ಚಮತ್ಕಾರಕ್ಕೆ ತಲೆದೂಗಿದ.

ಅಂಗವೈ, ಸಂಗವೈ ಮದುವೆ

ಅವ್ವೈಯಾರ್ ಮತ್ತೆ ಕೆಲವು ಊರ, ಹಳ್ಳಿಗಳನ್ನು ಸುತ್ತಿ ಒಂದು ವನವನ್ನು ಸೇರಿದಳು. ಅಲ್ಲೊಂದು ಕುಟೀರ. ಅಲ್ಲಿ ಪರಿರಾಜನ ಹೆಣ್ಣುಮಕ್ಕಳಿಬ್ಬರೂ ವಾಸವಾಗಿದ್ದರು. ವೇಳ್ ಪಾರಿಯ ಮಕ್ಕಳಿಗೆ ಈ ದುರವಸ್ಥೆಯೇ? ಅವ್ವೈಯಾರಳಿಗೆ ಮರುಕವಾಯಿತು.

ಪ್ರಸಿದ್ದರೆನಿಸಿದ್ದ ಪಾಂಡ್ಯ, ಚೇರ ಮತ್ತು ಚೋಳ ನಾಡಿನ ಅರಸರು ಪಾರಿ ತಮಗೆ ಅಂಗವೈ, ಸಂಗವೈಯರನ್ನು ಮದುವೆ ಮಾಡಿ ಕೊಡದಿದ್ದುದ್ದಕ್ಕೆ ಅವನ ಮೇಲೆ ಯುದ್ಧ ಮಾಡಿದ್ದರು. ಪಾರಿ ಯುದ್ಧದಲ್ಲಿ ಸತ್ತ. ಅವನ ಕಡೆಯವರು ಅಂಗವೈ, ಸಂಗವೈಯರಿಗೆ ಮದುವೆ ಮಾಡಲು ಬೇರೆ ಅರಸರ ಬಳಿ ಪ್ರಯತ್ನಿಸಿ ವಿಫಲರಾದರು. ದಾರಿ ಕಾಣದ ಅವರು ಇಬ್ಬರು ಹೆಣ್ಣು ಮಕ್ಕಳನ್ನೂ ಕುಟೀರದ ಯಜಮಾನನ ವಶದಲ್ಲಿಟ್ಟು ತಾವೇ ಸರಿಯಾದ ವರನನ್ನು ಹುಡುಕಲು ಹೋಗಿದ್ದವರು ಇನ್ನೂ ಹಿಂದಿರುಗಿರಲಿಲ್ಲ. ಅವ್ವೈಯಾರಳಿಗೆ ಅಂಗವೈ, ಸಂಗವೈ ವಿಷಯ ತಿಳಿಸಿ ಅತ್ತರು.

ನಿಷ್ಕಲ್ಮಶ ಹೃದಯದ ಪಾರಿಯ ವಂಶ ಬೆಳಗಬೇಕು, ಇದಕ್ಕೆ ತಾನೇ ಯತ್ನಿಸಬೇಕು. ಎಂದು ನಿಶ್ಚಯಸಿದಳು ಅವ್ವೈ. ಇಬ್ಬರಿಗೂ ಸಮಾಧಾನ ಮಾಡಿ ಹೊರಟಳು.

ತಿರುಕ್ಕೋವಲೂರಿನ ದೊರೆ ದೈವೀಕನ್. ಸಣ್ಣ ಪ್ರಾಂತ್ಯದ ಅರಸ. ಗುಣವಂತ, ರೂಪವಂತ ಅವನಿಗೆ ಅಂಗವೈ, ಸಂಗವೈಯರನ್ನು ಮದುವೆ ಮಾಡಲು ತೀರ್ಮಾನಿಸಿ ಅವ್ವೈಯಾರ್ ಅವನಲ್ಲಿಗೆ ಬಂದಳು. ದೈವಿಕನ್ ನ ಆನಂದಕ್ಕೆ ಪಾರವಿಲ್ಲದಂತಾಯಿತು.

ಅವ್ವೈಯಾರ್ ವಿಷಯ ತಿಳಿಸಿದಳು. ದೈವೀಕನ್ ಗೆ ಮದುವೆಯಾಗಲೇನೋಸಮ್ಮತವೇ ಆದರೆ ಪಾಂಡ್ಯ, ಚೇರ ಮತ್ತು ಚೋಳನಾಡಿನ ಅರಸರು ಎಂದರೆ ಅವನಿಗೆ ದಿಗಿಲು. ಪಾರಿಯಂತಹ ವೀರನೇ ಅವರಿಗೆ ಸೋತು ಸಾಯಬೇಕಾಯಿತು. ಇನ್ನು ತಾನೆಷ್ಟರವನು? “ವಿವಾಹ ಸಾಧ್ಯವಿಲ್ಲ” ಎಂದು ಬಿಟ್ಟ.

ಅವ್ವೈಯಾರಳಿಗೆ ಅರ್ಥವಾಯಿತು. “ನೀನು ಹೆದರಬೇಡ ಪಾಂಡ್ಯ, ಚೇರ ಮತ್ತು ಚೋಳ ಅರಸರಿಗೆ ನಾನು ಹೇಳುತ್ತೇನೆ. ವಿವಾಹಕ್ಕೆ ಸಿದ್ಧತೆಗಳನ್ನು ಮಾಡು” ಎಂದು ಭರವಸೆ ಇತ್ತಳು.

ವಿವಾಹ ನಿಶ್ಚಯವಾಯಿತು. ಈ ವಿಷಯ ಆ ಮೂವರು ಅರಸರಿಗೆ ತಿಳಿಯದೇ ಹೋಗಲಿಲ್ಲ. ದೈವೀಕನ್ ನ ಮೇಲೆ ಯುದ್ಧಕ್ಕೆ ಹೊರಟರು. ಅವ್ವೈಯಾರಳಿಗೆ ಇದು ಮೊದಲೇ ತಿಳಿದಿತ್ತು. ಪಾಂಡ್ಯ. ಚೇರ ಮತ್ತು ಚೋಳ ಅರಸರು ಬರುವ ದಾರಿಗೆ ಎದುರಾಗಿ ತಾನೊಬ್ಬಳೇ ಹೊರಟಳು.

ಅವಳು ವಿನಾಯಕನಿಗೆ ಪ್ರಾರ್ಥನೆ ಮಾಡಿದಳು. ಭೂಮಿ ಇಬ್ಭಾಗವಾಯಿತು. ಇದನ್ನು ಕಂಡು ಬೆಚ್ಚಿ ದಂಡೆತ್ತಿ ಬಂದವರು ಅವ್ವೈಯಾರಳ ಕ್ಷಮೆ ಬೇಡಿದರು ಎಂದು ಹೇಳುತ್ತಾರೆ. ಅವಳ ಬುದ್ದಿಯ ಮಾತನ್ನು ಅವರು ಕೇಳಿದ್ದಿರಬಹುದು. ಅಂತೂ ಯುದ್ಧ ನಿಂತಿತು.

ನಾಣ್ಯಗಳ ಗಂಟು ಯಾರಿಗೆ?

ಮೂವರು ಅರಸರಲ್ಲೊಬ್ಬನಾದ ಪಾಂಡ್ಯನ ಅರಮನೆಯಲ್ಲಿ ಅಂದು ಒಂದು ವಿಶೇಷ. ಹಲವಾರು ದಿನಗಳ ಹಿಂದೆ ಪಾಂಡ್ಯನೇ ಏರ್ಪಡಿಸಿದ್ದ ಸ್ವರ್ಧೆಯ ಕೊನೆಯ ದಿನ ಅದು. ಒಂದು ಹಲಗೆಯ ಮೇಲೆ ನಾಲ್ಕು ಚಿನ್ನದ ಸರಪಳಿಗಳಿಂದ ಬಿಗಿದು ಕಟ್ಟಲ್ಪಟ್ಟ. ಒಂದು ಗಂಟು. ಗಂಟಿನ ತುಂಬ ಚಿನ್ನದ ನಾಣ್ಯಗಳು. ಕವಿಗಳು ಕವಿತೆ ಕಟ್ಟಿ ಹಾಡಬೇಕು. ಕವಿತೆ ತಮಿಳುನಾಡಿನ ಹಿರಿಮೆಯನ್ನು ಹೆಚ್ಚಿಸುವಂತಿರಬೇಕು. ಜೀವತುಂಬಿದ ಕವಿತೆಯಾಗಿರಬೇಕು. ಸರಪಳಿಗಳು ತಾವೇ ಕಳಚಿಬೀಳುವಂತಹ ಕವಿತೆಯಾಗಿರಬೇಕು! ಯಾರು ಹಾಗೆ ಗಂಟನ್ನು ಸರಪಳಿಗಳ ಬಂಧನದಿಂದ ಬಿಡಿಸುವರೋ ಅವರಿಗೆ ಆಗಂಟು. ಇದೇ ಆ ಸ್ವರ್ಧೆ ಎಷ್ಟು ಕಠಿಣವಲ್ಲವೇ? ಕವಿಗಳು ಯಾರೂ ಗೆದ್ದಿರಲಿಲ್ಲ.

ಅಂದು ಪಾಂಡ್ಯನ ಸೌಭಾಗ್ಯ. ಅವ್ವೈಯಾರ ಅಲ್ಲಿ ಬಂದಿದ್ದಳು. ಎಲ್ಲರ ಕಣ್ಣು ಅವಳತ್ತಲೇ. ಜ್ಞಾನದ ತೌರಾದ ಆಕೆಯೇ ಇದನ್ನು ಆಗ ಮಾಡಬೆಕೆಂದು ಕವಿಗಳು ಏಕಕಂಠದಲ್ಲಿ ಹೇಳಿದರು. ಪಾಂಡ್ಯನೂ ಹಾಗೆಯೇ ಆಗಲಿ ಎಂದನು. ಅವ್ವೈ ಹಾಡಿದಳು. ಆ ಹಾಡುಗಳಾದರೋ ಎಷ್ಟು ಅರ್ಥಪೂರ್ಣ!

ಸಭೆಯ ಗೌರವಕ್ಕೆ ಪಾತ್ರನಾಗುವವನು ನೂರಕ್ಕೆ ಒಬ್ಬನೇ ನಿಜವಾದ ಕವಿ ಸಾವಿರಕ್ಕೊಬ್ಬನು. ಕೇವಲ ತನ್ನ ಮಾತಿನಿಂದಲೇ ಸರ್ವರನ್ನು ತನ್ನೆಡೆಗೆ ಆಕರ್ಷಿಸಿ ಕೊಳ್ಳಬಲ್ಲವನು  ಹತ್ತು ಸಾವಿರಕೊಬ್ಬ ಮಹಾದಾನಿ ಕೋಟಿಗೊಬ್ಬ ಎಂಬುದು ನಿಜವಾದರೆ ಅದು ಸತ್ಯವೆಂದು ತೋರಿಸಲು ಸರಪಳಿಯೇ ನೀನು ಕಳಚಿಕೋ.

ಒಬ್ಬನು ಬೇಡುವ ಮುನ್ನವೇ ಅವನ ಬಯಕೆನ್ನರಿತು ದಾನಮಾಡುವವ ಉತ್ತಮನು. ಕೇಳಿದ ಬಳಿಕ ಬಯಸಿದ್ದನ್ನು ಕೊಡುವವ ಮಧ್ಯಮ. ಪದೇಪದೇ ಕೇಳುತ್ತಲಿದ್ದರೂ ಕೊಡದೆ ಸತಾಯಿಸುವವನ ಸಂತತಿ ಹೇಗೆ ಅಳಿದು ಹೋಗುವುದೋ ಹಾಗೆ ಸರಪಳಿಯೇ ನೀನು ಕಳಚಿಕೋ.

ಊರಿನ ಜನಕ್ಕೆ ಯಾವುದು ನ್ಯಾಯ ಎಂದು ತಿಳಿದಿದ್ದರೂ ಸರಿಯಾದ ನ್ಯಾಯ ಹೇಳದೆ ಕೈಕೂಲಿ ಪಡೆದು ಮೊಕದ್ದಮೆಯನ್ನು ತಳ್ಳಿ ಹಾಕುವ ನ್ಯಾಯಧೀಶನ ಸಂತತಿ ಹೇಗೆ ಅಳಿಯುವುದೋ ಹಾಗೆ ಸರಪಳಿಯೇ ಕಳಚಿ ಬೀಳು.”

“ಬಲಶಾಲಿಯಾದವನೊಡನೆ ಸೇರಿಕೊಂಡು ಸುಳ್ಳು ಹೇಳುತ್ತಾ ಸತ್ಯವನ್ನು ಮರೆಮಾಚುವ ಮಹಾಪಾತಕನ ವಂಶವೇ ನಾಶವಾಗುವಂತೆ ಸರಪಳಿಯೇ ಕಳಚಿಕೋ” ಅವ್ವೈಯಾರ್ ಹಾಡುತ್ತಿದ್ದಂತೆ ಸರಪಳಿಗಳು ಕಳಚಿ ಬಿದ್ದವು ಎಂದು ಹೇಳುತ್ತಾರೆ. ನಿಜವಿರಲಿ, ಇಲ್ಲದಿರಲಿ ಈ ಕವನಗಳಲ್ಲಿರುವ ನೀತಿ ಎಷ್ಟು ದೊಡ್ಡದು!

ಅವಳ ವಿವೇಕಕ್ಕೆ ಪಾಂಡ್ಯರಾಜ ತಲೆದೂಗಿದ. ಚಿನ್ನದ ನಾಣ್ಯಗಳನ್ನು ಅರ್ಪಿಸಿದ.

ಅವ್ವೈಯಾರಳು ಹೊನ್ನನ್ನು ಮುಟ್ಟುವಳೇ? ಗಂಟನ್ನು ಕೊಡ ಬಂದ ಪಾಂಡ್ಯನಿಗೆ ಹೇಳಿದಳು: ಪಾಂಡ್ಯರಾಜ, ನಿನ್ನ ಕವಿ ಪ್ರೀತಿಗೆ ಮೆಚ್ಚಿದನು. ಆದರೆ ಈ ಹೊನ್ನು ನನಗೆ ಬೇಡ. ಇಲ್ಲಿ ನೆರೆದ ಎಲ್ಲ ಕವಿಗಳಿಗೆ ಅದನ್ನು ಹಂಚಿ ಬಿಡು. ನೀನು ಮಾತ್ರ ಯಾವಾಗಲೂ ಪ್ರಜೆಗಳಿಗೆ ಒಳ್ಳೆಯದನ್ನು ಮಾಡುತ್ತಿರು. ಒಳ್ಳೆಯವನಾಗಿರು. ಅದೇ ನೀನು ನನಗೆ ನೀಡುವ ಕಾಣಿಕೆ.” ಚೋಳನಾಡಿನ ರಾಜನ ಆಸ್ಥಾನದಲ್ಲಿಯೂ ಅವ್ವೈಯಾರ್ ತನ್ನ ಪ್ರತಿಭೆಯನ್ನು ತೋರಿಸಿ ಅರಸನನ್ನು ಬೆರಗುಗೊಳಿಸಿದಳು. ರಾಜನನು ಅವಳು ಬೇಡಿದ್ದು ಇಷ್ಟೇ ಕಾವ್ಯ ಸಂಗೀತ, ಚಿತ್ರಕಲೆ, ಶಿಲ್ಪಕಲೆ, ನೃತ್ಯ ಇಂತಹ ಕಲೆಗಳಿಗೆ ಪ್ರೋತ್ಸಾಹ ಕೊಡು.”

ಯಾರು ಈ ಹುಡುಗ ?

ಅವ್ವೈಯಾರ್ ಗೆ ಸಂಬಂಧಿಸಿದಂತೆ ಇನ್ನೊಂದು ಕಥೆ ತುಂಬಾ ಜನಪ್ರಿಯವಾದದ್ದು.

ಅವ್ವೈಯಾರ್ ದೊಡ್ಡ ಕವಯಿತ್ರಿ ಎಂದು ಹೆಸರು ಪಡೆದಳು. ಆದರೂ ಅವಳಲ್ಲಿ ಸ್ವಲ್ಪ ಅಹಂ ಇತ್ತು. ತನ್ನನ್ನು ಸೋಲಿಸಿದ ಕವಿಯೇ ಇಲ್ಲ ಎಂಬ ಹೆಮ್ಮೆ. ಇಂತಹವಳಿಗೆ ಒಮ್ಮೆ ಪರೀಕ್ಷೆಯೊದಗಿ ಬಂತು. ಅದೊಂದು ದಿನ ಆಕೆ ಎಲ್ಲೋ ಒಬ್ಬಳೇ ಹೊರಟಿದ್ದಳು. ದಾರಿಯಲ್ಲೊಂದು ಕಾಡು. ಇಕ್ಕೆಲಗಳಲ್ಲೂ ನೇರಳೆ ಮರಗಳು ದಟ್ಟವಾಗಿ ಬೆಳೆದು ಮುಗಿಲನ್ನು ಮುಟ್ಟುವಂತಿದ್ದವು. ಕರ್ರಗೆ ಪಳಪಳನೆ ಹೊಳೆಯುತ್ತಾ ಬಾಯಲ್ಲಿ ನೀರೂರಿಸುತ್ತಿದ್ದವು ನೇರಳೆ ಹಣ್ಣುಗಳು. ಅವ್ವೈಯಾರ್ ಒಂದು ಮರದ ಕೆಳಗೆ ನಿಂತು ಆಸೆಯಿಂದ ಹಣ್ಣುಗಳನ್ನು ನೋಡಿದಳು.

ಮರದ ಮೇಲೆ ದನಕಾಯುವ ಹುಡುಗನೊಬ್ಬ ಕುಳಿತಿದ್ದನು. ಆಗ ಅವ್ವೈ ಯಾರ್, “ಮಗೂ, ತುಂಬ ಹಸಿವು ನನಗೊಂದು ನಾಲ್ಕು ಹಣ್ಣು ಕಿತ್ತು ಹಾಕುವೆಯಾ?” ಎಂದಳು.” ಅಜ್ಜಿ ಅದಕ್ಕೇನಂತೆ ಕೊಡುತ್ತೇನೆ. ಆದರೆ ನಿನಗೆ ಹಸಿ ಹಣ್ಣು ಬೇಕೋ? ಬಿಸಿ ಹಣ್ಣು ಬೇಕೋ?” ಎಂದು ಚೇಷ್ಠೆ ಮಾಡಿ ಕೇಳಿದ ಬಾಲಕ. ಅವ್ವೈ ಯಾರಳಿಗೆ ಹಣ್ಣುಗಳು ಬಿಸಿಯಾಗಿರಲು ಹೇಗೆ ಸಾಧ್ಯವೆಂಬುದು ಹೊಳೆಯಲಿಲ್ಲ. ಆಲೋಚನೆ ಮಾಡುವಂತಿಲ್ಲ. ಕೊನೆಗೆ ಅದೇನು ತಿಳಿದುಕೊಳ್ಳೋಣವೆಂದು, “ಹಸಿ ಹಣ್ಣು ಬೇಡ, ಬಿಸಿ ಹಣ್ಣನ್ನೇ ಹಾಕು” ಎಂದಳು. ಬಾಲಕ ನಾಲ್ಕು ಹಣ್ಣುಗಳನ್ನು ರಭಸದಿಂದ ಕೆಳಕ್ಕೆ ಎಸೆದ. ಅವ್ವೈ ಹಣ್ಣುಗಳಿಗೆ ಅಂಟಿಕೊಂಡಿದ್ದ ಮಣ್ಣಿನ ಸಣ್ಣ ಕಣಗಳನ್ನು ತೆಗೆಯಲು ಅವನ್ನು ಊದಿ ಊದಿ ತಿನ್ನಲಾರಂಭಿಸಿದಳು. ಅದನ್ನು ಕಂಡ ಬಾಲಕ, ” ಅಜ್ಜಿ, ಹಣ್ಣು ತುಂಬ ಬಿಸಿಯಾಗಿದೆಯಾ?” ಎಂದು ಹಾಸ್ಯ ಮಾಡಿಯೇ ಬಿಟ್ಟ.” ಇಲ್ಲ ಮಗು, ಹಣ್ಣು ಹಸಿಯಾಗೇ ಇದೆ. ಬಿಸಿ ಎಲ್ಲಿ ಬಂತು?” ಎಂದಳು ಅವ್ವೈಯಾರ್, ಆ ಬಾಲಕ ಅಷ್ಟಕ್ಕೆ ಬಿಡುವನೇ? “ಹಣ್ಣು ಬಿಸಿಯಾಗಿಲ್ಲದಿದ್ದರೆ ಊದಿ ಊದಿ ಏಕೆ ಬಾಯಿಗೆ ಹಾಕಿಕೊಳ್ಳುತ್ತಿದ್ದೀ?” ಎಂದು ಕೇಳಿ ನಕ್ಕ.

ಅವ್ವೈ ಅವಾಕ್ಕಾದಳು. ಉಗುರಿನಿಂದ ಆಗುವುದಕ್ಕೆ ಕೊಡಲಿಯನ್ನು ಉಪಯೋಗಿಸುವರೇ! ದೊಡ್ಡ ದೊಡ್ಡ ಕವಿತ್ವ ಮಾಡಿ ಪಂಡಿತರನ್ನೂ ಸೋಲಿಸುವಂತಹ ಅವ್ವೈ ಈ ದಿನ ಒಬ್ಬ ದನಕಾಯುವ ಸಾಮಾನ್ಯ ಬಾಲಕನಿಗೆ ಸೋಲಬೇಕಾಗಿ ಬಂದಿತು ಎಂದುಕೊಂಡಳು ಅವ್ವೈ. ಆದರೆ ದೈವಾನುಗ್ರಹ ಕಾದಿತ್ತು. ಬಾಲಕ ಬೇರಾದರೂ ಆಗಿರದೆ ಭಗವಾನ್ ಕುಮಾರಸ್ವಾಮಿಯೇ ಆಗಿದ್ದ ಎಂದು ಹೇಳುತ್ತಾರೆ. ಎದುರಿಗೆ ಬಾಲಕನಿರದೆ ಮುರುಗ ಪೆರುಮಾಳ್, ಸುಬ್ರಹ್ಮಣ ನವಿಲು ಸಮೇತ ಪ್ರತ್ಯಕ್ಷನಾಗಿದ್ದ ನಂತೆ. ಅವ್ವೈ ಯಾರಳ ಆನಂದಕ್ಕೆ ಪಾರವೇ ಇಲ್ಲ. ತನ್ನ ತಪ್ಪನ್ನು ಮನ್ನಿಸೆಂದಳು.

ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇನ್ನೂ ಸ್ವಾರಸ್ಯವಾಗಿ ಮುಂದುವರಿಯುತ್ತದೆ. ಮುರುಗ ಅವಳನ್ನು ಪ್ರಶ್ನಿಸ ಹೊರಟನು: ಅವ್ವೈ, ಚಿಂತಿಸಬೇಡ. ನಿನ್ನಿಂದ ಬಹಳ ತಿಳಿಯಬೇಕೆಂದು ನಾನು ಬಂದಿರುವೆ. ಎಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸು ನೋಡೋಣ. ಹ್ಹಾ! ಕಷ್ಟವಾದುದು ಯಾವುದು?”

ಅವ್ವೈ ಹೇಳಿದಳು: “ಭಗವಾನ್! ಬಡತನವೇ ಕಷ್ಟವಾದುದು. ಯೌವನದಲ್ಲಿ ಬಡತನ ಉಂಟಾದರೆ ಇನ್ನೂ ಕಷ್ಟ. ವಾಸಿಯಾಗದ ಕಾಯಿಲೆ ಒದಗಿ ಬಂದರೆ ಕಡುಕಷ್ಟ. ನಂಬಿಕೆ ಇಲ್ಲದವಳೊಡನೆ ಬಾಳ್ವೆ ನಡೆಸಿ ಅವಳಿಂದ ಆಹಾರ ಸ್ವೀಕರಿಸುವುದು ಅತ್ಯಂತ ಕಷ್ಟ.”

” ಹಿರಿದಾದುದು ಯಾವುದು?” ಮುರುಗ ಮತ್ತೊಂದು ಪ್ರಶ್ನೆ ಹಾಕಿದ.

“ಭಗವಾನ್! ಭುವನವೇ ಹಿರಿದಾದುದು. ಮತ್ತೆ ಈ ಭುವನದ ಸೃಷ್ಠಿಕರ್ತ ಬ್ರಹ್ಮ ಹಿರಿಯನಾದವನು. ಆದರೆ ಬ್ರಹ್ಮನೋ ವಿಷ್ಣುವಿನ ನಾಭಿಕಮಲದಲ್ಲಿ ಹುಟ್ಟಿದವನು. ವಿಷ್ಣು ಕ್ಷೀರಸಾಗರಶಾಯಿ, ಸಾಗರಗಳನ್ನು ಒಂದೇ ಗುಟುಕಿನಲ್ಲಿ ಕುಡಿದ ಮಹಾಮುನಿ ಅಗಸ್ತೈ, ಕುಂಭೋದ್ಭವ, ಕುಂಭವಾದುದು ಭೂಮಿಯ ಮೇಲೆ ದೊರಕುವ ಮಣ್ಣಿನಿಂದ. ಭೂಮಿಯನ್ನು ಹೊತ್ತವನು ಮಹಾ ಸರ್ಪ ಆದಿಶೇಷ. ಇಂಥ ಸರ್ಪ ಪಾರ್ವತಿ ದೇವಿಯ ಕೈಯ ಕಿರುಬೆರಳಿನ ಉಂಗುರವಾಯಿತು. ಪಾರ್ವತಿ ಪರಮೇಶ್ವರನ ಅರ್ಧಾಂಗಿ. ಇನ್ನು ಆ ಪರಮೇಶ್ವರನೋ ಭಕ್ತರ ಹೃದಯದಲ್ಲಿ ಮನೆ ಮಾಡಿ ಕೊಂಡಿರುವನು. ಇಂತಹ ಭಕ್ತರ ಹಿರಿಮೆಯನ್ನಂತೂ ವರ್ಣಿಸಲಾಗುದು. ಭಕ್ತರೇ ಹಿರಿಯರು.”

ಅವ್ವೈಯಾರಳ ಉತ್ತರದಿಂದ ಮುರುಗ ಸಂತೋಷಿಸಿದ. ಅವ್ವೈ ಯಾರಳು ಷಣ್ಮುಖಸ್ವಾಮಿಯನ್ನು ನಾನಾ ವಿಧವಾಗಿ ಸ್ತುತಿಸಿದಳು. ಅವನ ಕರುಣೆಗೆ ಪಾತ್ರಳಾದಳು.ಕುಮಾರಸ್ವಾಮಿ ಅವಳನ್ನು ಹರಸಿ ಅಂತರ್ಧಾನನಾದನು.

ಕಥೆ ಸ್ವಾರಸ್ಯವಾಗಿದೆ. ಅಲ್ಲವೆ?

ಅವ್ವೈಯಾರ್ ಜೀವಮಾನಪೂರ್ತಿ ಬಡವರೊಡನೆ ಬೆರೆತಳು, ಅವರಿಗೆ ಕಷ್ಟದಲ್ಲಿ ಸಮಾಧಾನ ಮಾಡಿದಳು. ದೇವರಸೇವೆ ಅದು ಎಂದುಕೊಂಡಲು. ಕಷ್ಟದಲ್ಲಿದ್ದ ಅಂಗವೈ, ಸಂಗವೈ ತನ್ನನ್ನು ಆದರಿಸಿ ಉಪಚರಿಸಿದುದನ್ನು ಬಹು ಸಂತೋಷದಿಂದ ವರ್ಣಿಸಿದ್ದಾಳೆ. ಮಳೆಯಲ್ಲಿ ತೊಯ್ದಿದ್ದ ಅವಳಿಗೆ ಅವರು ತಮ್ಮ ಪುಟ್ಟ ಸೀರೆಯನ್ನು ಉಡಲು ಕೊಟ್ಟರಂತೆ. ಬೆಂಕಿಯ ಹತ್ತಿರ ಕುಳಿತು ಕಾಯಿಸಿಕೊಳ್ಳುವಂತೆ ಉಪಚರಿಸಿದರಂತೆ. ಇದ್ದುದರಲ್ಲಿ ಬಿಸಿಬಿಸಿ ಅಡಿಗೆ ಮಾಡಿ ಊಟಕ್ಕೆ ಕೂಡಿಸಿದರಂತೆ. “ನಾವು ಅಡಿಗೆ ಮಾಡಿರುವುದು ಒಂದಿಷ್ಟು ತರಕಾರಿ ಬೇಯಿಸಿದ್ದು ಅಷ್ಟೆ ಎಂದು ಅವರೆಂದರು: ಆದರೆ ನಿಜವಾಗಿ ಅವರು ನನಗೆ ಬಡಿಸಿದ್ದು ಅಮೃತ” ಎಂದು ಹಾಡಿದ್ದಾಳೆ ಅವ್ವೈಯಾರ್. ಮತೊಬ್ಬ ಬಡವರ ಮನೆಯಲ್ಲಿ ಅವಳಿಗೆ ಪ್ರೀತಿಯಿಂದ ಉಣಬಡಿಸಿದ ದಪ್ಪಕ್ಕಿ ಅನ್ನ, ಹುಳಿಮಜ್ಜಿಗೆಗಳನ್ನೇ ನೆನೆಸಿಕೊಂಡು, ” ಇಡೀ ಪ್ರಪಂಚಕ್ಕೆ ಸಮಾನ ಆ ಊಟ” ಎನ್ನುತ್ತಾಳೆ. ನೂರು ವರ್ಷಕ್ಕೂ ಹೆಚ್ಚು ಕಾಲ ಅವ್ವೈಯಾರ್ ಬದುಕಿದ್ದಳಂತೆ. ಕಡೆಗೊಂದು ದಿನ ತನ್ನ ಇಹಲೋಕ ಯಾತ್ರೆ ಮುಗಿಸಿದಳು.

ಅವ್ವೈಯಾರ್ ಸಾಹಿತ್ಯ

ಅವ್ವೈಯಾರ್ ಳಿಗೆ ತಮಿಳಿನ ಹಿರಿಯ ಕವಿಗಳ ಪಂಕ್ತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಅವಳ ಕವಿತೆಗಳಲ್ಲಿ ಉಪಮೆ, ಜಾಣ್ನುಡಿ, ಅಲಂಕಾರಗಳು ತುಂಬಿವೆ. ಭೇದವಿಲ್ಲದ ಸಮದೃಷ್ಟಿಯಿಂದಿರಬೇಕೆಂದು ಹಂತಹಂತದಲ್ಲೂ ಹೇಳುವ ಅವಳ ಪದ್ಯಗಳು ಸದ್ಗುಣ ಪ್ರಚೋದಕ. ಅವು ಸಜೀವ ನೀತಿ ಸೂತ್ರಗಳು. ಅವು ಗೃಹಸ್ಥ ಜೀವನದ ಹಿರಿಮೆ. ವಿದ್ಯೆಯ ಮಹಿಮೆ, ವ್ಯವಸಾಯದ ಮೇಲ್ಮೈ, ಉತ್ತಮ ಜೀವನದ ಸಂಪನ್ನತೆ ಇವೆಲ್ಲವನ್ನೂ ಸಾರುತ್ತವೆ.

‘ಪುರಂ ನಾನೂರು’, ‘ಅಗಂ ನಾನೂರು’, ‘ನಟ್ರಣೈ’, ‘ಕುರುಂದೊಗೈ’ ಎಂಬ ಗ್ರಂಥಗಳಲ್ಲಿ ಅವ್ವೈ ಹಾಡಿದ ಪದ್ಯಗಳಿಗೆ. ‘ಮೂದುರೈ’, ‘ಅತ್ತಿ ಶೂಡಿ’, ‘ಕೊನ್ರವೇಂದನ್’, ‘ನಲ್ವಳಿ’ ಇವು ಆಕೆಯ ಇತರ ಕೃತಿಗಳು, ‘ಅತ್ತಿಶೂಡಿ’ಯಲ್ಲಿ ಮಕ್ಕಳು ನೆನಪಿಡಬಹುದಾದಂಥ ಪುಟ್ಟ ಪುಟ್ಟ ಸಾಲುಗಳ ನೂರೊಂಬತ್ತು ಕವಿತೆಗಳಿವೆ. ಸನ್ಮಾರ್ಗದಲ್ಲಿ ನಡೆದು ಉತ್ತಮ ಜೀವನವನ್ನು ನಡೆಸುವಂತೆ ಎಳೆಯರ ಹೃದಯವನ್ನು ಪ್ರೇರೇಪಿಸುವಂತಹ ಕೃತಿ ಇದು. ಇದೇ ರೀತಿಯಲ್ಲಿರುವ ಮತ್ತೊಂದು ಕೃತಿ ‘ನಲ್ವಳಿ’, ‘ನಲ್ವಳಿ’ ಎಂದರೆ ಒಳ್ಳೆಯ ದಾರಿ ಎಂದರ್ಥ. ‘ಮೂದುರೈ’ಯಲ್ಲಿ ಮೂವತ್ತು ಕವಿತೆಗಳಲ್ಲಿ ಆಕೆ ಭಗವಂತನನ್ನು ಸ್ಮರಿಸಿದ್ದಾಳೆ. ಅವಳೇ ರಚಿಸಿದಳೆನ್ನಲಾದ ‘ಪದನಂದಾದಿ’, ‘ಅರುಂದಮಿಳ್ ಮಾಲೈ’, ‘ನನ್ನೂರ್ ಕೋವೈ’ ಗ್ರಂಥಗಳು ದೊರೆತಿಲ್ಲ. ಅವ್ವೈಯಾರಳು ತಿಳಿಸಿದುದನ್ನು ತಮಿಳುನಾಡಿನ ಪ್ರಜೆಗಳು ದೈವವಾಕ್ಯವೆಂದು ತಿಳಿಸಿದರು. ಬಹು ಸರಳವಾದ ಭಾಷೆಯಲ್ಲಿದ್ದು, ಮನಸ್ಸನ್ನು ಚೆನ್ನಾಗಿ ತಿದ್ದುವ ಅವಳ ಕವನಗಳನ್ನು ತಮಿಳು ನಾಡಿನಲ್ಲಿ ಚಿಕ್ಕ ಮಕ್ಕಳಿಗೆ ಕಲಿಸುತ್ತಾರೆ. ಅವ್ವೈಯಾರಳ ಅನಂತರ ಅವಳ ಹೆಸರಿನಲ್ಲಿ ಕೆಲವರು ಕೃತಿಗಳನ್ನು ರಚಿಸಿ ಹೆಸರಾದರು. ಆದರೆ ಅವ್ವೈ ಯಾರಳನ್ನು ಪ್ರಸಿದ್ಧಳು, ಭಾಷಾಸೇವಕರು ಬೇರಾದರೂ ಬರಲಿಲ್ಲ. ಅವಳಿಗೆ ಸಮ ಅವಳೇ

ಅವ್ವೈ ಹೇಳಿದಳು.

“ಮಾತನಾಡಲು, ಆ ಮಾತು ಪರರನ್ನು ಉದ್ದೇಕಿಸಬಾರದು.”

“ದಾನಶೀಲನಾಗು”

“ಬಿರುಸು ನುಡಿಗಳಿಂದ ಮೃದು ಹೃದಯದವರನ್ನು ಗೆಲ್ಲಲಾಗುವುದಿಲ್ಲ ಆನೆಗಳನ್ನು ಕೊಲ್ಲಬಹುದಾದ ಬಾಣ ಹತ್ತಿಯ ಚೂರನ್ನೇನು ಮಾಡೀತು? ಬಂಡೆಯನ್ನು ಸೀಳಲಾಗದ ಉದ್ದನೆಯ ಕಬ್ಬಿಣದ ಹಾರೆ ಎಳೆದು ಗಿಡದ ಬೇರುಗಳನ್ನು ಭೇದಿಸಬಲ್ಲದು”.

“ಯೌವನ ನೀರಿಮೇಲಿನ ಗುಳ್ಳೆಯಂತೆ ಆತುಳೃಶ್ಚರ್ಯವೆಲ್ಲ ಸಾಗರದ ಅಲೆಗಳ ಘರ್ಜನೆಯಂತೆ ಮಾನವ ದೇಹ ನೀರಿನ ಮೇಲೆ ಬರೆದ ಅಕ್ಷರಗಳಂತೆ ಉಳಿದ ಕಾಲ ಅತ್ಯಲ್ಪ. ಭಗವಂತನ ಸನ್ನಿಧಿಯಲ್ಲಿ ಆ ದೇವರನ್ನು ಆರಾಧಿಸಬಾರದೇಕೆ?”

“ರಾಜ್ಯ ನಾಡಾಗಿಯೋ ಕಾಡಾಗಿಯೋ ಇರಬಹುದು. ಪ್ರಜೆಗಳಿಂದಲೇ ಆ ರಾಜ್ಯ ಶೋಭಿಸುವುದು:.

ಮನುಷ್ಯರಿಗೆ ನಾಲ್ಕು ಪುರುಷಾರ್ಥಗಳು ಮುಖ್ಯ ಧರ್ಮ,ಅರ್ಥ,ಕಾಮ, ಮೋಕ್ಷ ಎನ್ನುತ್ತಾರೆ ಭಾರತದಲ್ಲಿ ಮನುಷ್ಯ ಈ ಪುರುಷಾರ್ಥಗಳನ್ನು ಬಯಸಬೇಕು, ಪಡೆಯಬೇಕು.

ಅವ್ವೈಯಾರ್ ಹೇಳುತ್ತಾಳೆ.

‘ಕಷ್ಟದಲ್ಲಿರುವವರ ಸಂಕಟವನ್ನು ಹೋಗಲಾಡಿಸವುದೇ ಧರ್ಮ’.

ಪಾಪ ಮಾಡದೆ ಗಳಿಸುವುದೇ ಅರ್ಥ.

ಗಂಡ ಹೆಂಡತಿ ಒಂದೇ ಮನಸ್ಸಿನವರಾಗಿ ಒಬ್ಬರಿಗೊಬ್ಬರು ನೆರವಾಗುವುದೇ ಕಾಮ.

ಬಾಳಿನಾಚೆಯನ್ನು ಯೋಚಿಸಿ.

ಈ ಮೂವರನ್ನು ಬಿಟ್ಟು ಬಿಟ್ಟಾಗ

ತಾನೇ ಬರುತ್ತದೆ ಮೋಕ್ಷ.

ಮನುಷ್ಯರಲ್ಲಿ ಜಾತಿಗಳುಂಟೆ?” ಉಂಟು ಎನ್ನುತ್ತಾಳೆ ಅವ್ವೈಯಾರ್.

‘ನಾನು ಹೇಳಬೇಕೆಂದರೆ, ಮನುಷ್ಯರಲ್ಲಿವುದು ಎರಡೇ ಜಾತಿ’.

 

ಹಣ್ಣು ಬಿಸಿಯಾಗಿಲ್ಲದಿದ್ದರೆ ಊದಿ ಊದಿ ಏಕೆ ಬಾಯಿಗೆ ಹಾಕಿಕೊಳ್ಳುತ್ತಿದ್ದೀ?"

ಒಂದು ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡುವ ಒಳ್ಳೆಯವರದು.

ಇನ್ನೊಂದು ಹಾಗೆ ಸಹಾಯ ಮಾಡದೆ ಹೋಗುವವರದು.

ಇವರೇ ಕೆಳಗಿನ ಜಾತಿಯವರು.

ಅವರು ನೆರವಾಗುವವರು, ಮೇಲಿನ ಜಾತಿಯವರು, ಇದೇ ನಿಜವಾದ ಶಾಸ್ತ್ರ.

ಕೆಲಸ ಮಾಡದ ಸೋಮಾರಿಗೆ ಅನ್ನ ತಿನ್ನುವ ಹಕ್ಕಿಲ್ಲ. ಅವ್ವೈಯಾರ್ ಹೇಳುತ್ತಾಳೆ.

‘ಸಮೃದ್ಧವಾಗಿ ಮಳೆ ಸುರಿಸಲು

ಮೇಲೆ ಆಗಸದಲ್ಲಿ ಮೋಡಗಳಿವೆ.

ಫಲ ಕೊಡುವುದಕ್ಕೆ ಇಲ್ಲಿ ಕೆಳಗಿವೆ ಭೂಮಿ,

ಕೆರೆ ನದಿಗಳು.

ದುರದೃಷ್ಟ ಎನ್ನುತ್ತೆ

ಯಾವ ಮೂರ್ಖನಾದರೂ ಸೋಮಾರಿಯಾಗಿ ಕುಳಿತು ಗೊಣಗಿದರೆ ಥಳಿಸು ಅವನನ್ನು, ಕೆಲಸಕ್ಕೆ ಬಾರದವನವನು.

ಈ ಉಪದೇಶವನ್ನು ಸುಂದರವಾದ, ಸರಳವಾದ ತಮಿಳಿನಲ್ಲಿ ಮಾಡಿದ್ದಾಳೆ ಅವ್ವೈಯಾರ್.

ಎಂತಹ ವಿಚಿತ್ರ, ವಿಶಿಷ್ಟ ಜೀವನ ಈಕೆಯದು!

ಇವಳ ವಿಷಯ ಹೇಳುವ ಕಥೆಗಳಲ್ಲಿ ಅನೇಕರು ಅನೇಕ ಕಥೆಗಳನ್ನು ನಂಬದೆ ಹೋಗಬಹುದು. ಆದರೆ ಒಂದು ವಿಷಯ ಸೃಷ್ಟ. ಅಲ್ಲವೆ? ರಾಜರ ಅರಮನೆಗಳಲ್ಲಿ ಬಡವರ ಗುಡಿಸಿಲುಗಳಲ್ಲಿ ಎಲ್ಲ ಕಡೆ ಸ್ವಾಗತ ಇವಳಿಗೆ ಇವಳು ಚಕ್ರವರ್ತಿಯ ಮಗಳಲ್ಲ. ಚಕ್ರವರ್ತಿಯ ಹೆಂಡತಿಯಲ್ಲ. ಶ್ರೀಮಂತಳಲ್ಲ. ಕೈಕೆಳಗೆ ಹೇಳಿದಂತೆ ಕೇಳುವ ಸೈನ್ಯಗಳಿಲ್ಲ. ಆಳುಕಾಳುಗಳಿಲ್ಲ. ಹಳ್ಳಿ – ಹಳ್ಳಿ, ಊರು – ಊರು ಅಲೆಯುವ ಹೆಂಗಸು. ಅರಮನೆಯೋ, ಗುಡಿಸಿಲೋ, ದೆವ್ವಭೂತಗಳಿರುವ ಹಾಳು ಮನೆಯೋ ರಾತ್ರಿ ಕಳೆಯುವುದಕ್ಕೆ. ಆದರೆ ರಾಜರುಗಳ ಅರಮನೆಗಳಲ್ಲಿ ಇವಳಿಗೆ ಸತ್ಕಾರ ಅಷ್ಟೇ ಅಲ್ಲ. ಅವರ ಮದುವೆಗಳಿಗೆ ಜಗಳಗಳಿಗೆ ಇವಳ ರಾಯಭಾರ, ಸಂಧಾನ, ರಾಜ್ಯ ರಾಜ್ಯಗಳ ಯುದ್ಧಗಳನ್ನು , ರಕ್ತಸ್ನಾನವನ್ನು ತಪ್ಪಿಸಲು ಪ್ರಯತ್ನಿಸುವ ರಾಯಭಾರಿ ಈ ಮುದುಕಿ. ಹಿಟ್ಟು ಅಂಬಲಿಗಳಲ್ಲಿ ದಿನ ತಳ್ಳುವ ಬಡವರ ಗೆಳತಿ. ಅವರ ಕಷ್ಟಗಳಲ್ಲಿ ಸಂತೈಸುವವಳು ಈಕೆ. ಈಗಲೂ ತಮಿಳುನಾಡಿನಲ್ಲಿ ಮಾತಿನ ಮಧ್ಯೆ. ಆ ಮುದುಕಿ ಹೇಳಿದ್ದಾಳಲ್ಲ” ಎಂದು ಹೇಳಿದರೆ ಮುದುಕಿ ಎಂದರೆ ಅವ್ವೈಯಾರ್ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ಅವಳ ಹೆಸರನ್ನು ಹೇಳಬೇಕಾಗಿಲ್ಲ.

ಅವಳು ಸತ್ತು ಸಾವಿರ ವರ್ಷಗಳಾದರೂ ಕಳೆದಿದ್ದರೂ ಅವಳಲ್ಲಿ ಜನರಿಗೆ ಇಂತಹ ಪ್ರೀತಿ ಗೌರವಗಳಿರುವದಕ್ಕೆ ಕಾರಣ ಅವಳು ಬದುಕಿದ್ದಾಗ, ಸುಖ ಶ್ರೀಮಂತಿಕೆಗಳನ್ನು ತಾನಾಗಿ ಬಿಟ್ಟು ಅವಳ ಸರಳತೆ, ರಾಜರು-ದೀನರು ಎಂದು ಯಾವ ಭೇದಭಾವವಿಲ್ಲದೆ ಎಲ್ಲರೂ ಒಂದೇ ಎಂಬುವದನ್ನು ಆಚರಿಸಿದ ರೀತಿ. ವಿವೇಕದ ಬುದ್ಧಿವಾದವನ್ನು ಬಹು ಸುಲಭವಾದ ಮಾತುಗಳಲ್ಲಿ ಎರಕ ಹೊಯ್ದು ಅವಳ ಶಕ್ತಿ. ಅವ್ವೈಯಾರಳ ದೇಶಭಕ್ತಿ, ದೈವಭಕ್ತಿ, ಭಾಷಾಪ್ರೇಮ, ಮಾನವತಾವಾದ ಎಲ್ಲವನ್ನೂ ಆಕೆಯ ಕೃತಿಗಳಲ್ಲಿ ಕಾಣಬಹುದು. ಅವಳ ಪದ್ಯಗಳು ತಮಿಳು ಭಾಷೆಯವರ ಬಾಯಲ್ಲಿ ತಾಂಡವಾಡುವುದನ್ನು ವಿನಾಯಕ ಚೌತಿಹಬ್ಬದ ದಿನ ತಮಿಳುನಾಡಿನಲ್ಲಿ ಮಕ್ಕಳು ಅವ್ವೈಯಾರ್ ಳೂ ಹಾಡಿದ ವಿನಾಯಕನ ಗೀತೆಯನ್ನು ಹಾಡಿ ನಲಿಯುವರು. ನಿಜಕ್ಕೂ ಆಕೆ ಭಾಗ್ಯಶಾಲಿ. ಅಲ್ಲವೆ?