ಭಾಷೆ ಮಾನವನ ಸಂವಹನ ಮಾಧ್ಯಮ. ಸಂವಹನ ಮಾತಿನ ಅಥವಾ ಬರೆಹದ ರೂಪದಲ್ಲಿರಬಹುದು ಇದು ಶಾಬ್ದಿಕ ಸಂವಹನ. ಭಾಷೆಯಲ್ಲದೆ  ಇತರ ಮಾಧ್ಯಮಗಳ ಮೂಲಕವೂ ಮನುಷ್ಯ ತನ್ನ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಿದ್ದರೂ ಇವುಗಳ ಬಗ್ಗೆ ಅಷ್ಟಾಗಿ ಗಮನ ಹರಿದಿಲ್ಲ. ದಿನನಿತ್ಯದ ಸಂವಹನದ ಬಹುಭಾಗ ಭಾಷೆಯ ಜೊತೆ ಜೊತೆಗೇ ಸನ್ನೆ, ಸಂಕೇತ, ಭಾವಾಭಿನಯವೂ ಒಳಗೊಂಡಿರುತ್ತದೆ. ಇವೇ ಅಶಾಬ್ದಿಕ ಸಂವಹನ.

ಭಾಷೆ ಹುಟ್ಟುವುದಕ್ಕೆ ಮೊದಲು ಸಂವಹನ ಕೇವಲ ಸನ್ನೆ, ಸಂಕೇತಗಳಿಂದಲೇ ನಡೆಯುತ್ತಿತ್ತು. ಭಾಷೆಯ ಹುಟ್ಟಿನ ನಂತರವೂ ಅದೇ ಸನ್ನೆ ಅಥವಾ ಭಾವಾಭಿನಯ ಮುಂದುವರೆದಿರುವುದು ಸಂವಹನದಲ್ಲಿ ಅದರ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಭಾಷೆ ಪ್ರಭಾವಶಾಲಿ ನಿಜ, ಆದರೆ ಸನ್ನೆ ಅಥವಾ ಭಾವಾಭಿನಯದ ಮೂಲಕ ಹೇಳುವ ವಿಷಯ/ಮಾಹಿತಿ ಹೆಚ್ಚು ಪ್ರಭಾವಶಾಲಿಯಾಗುವಂತೆ ಮಾಡಬಹುದು. ಶಾಬ್ದಿಕ ಸಂವಹನಕ್ಕೆ ಅಂದರೆ, ಭಾಷೆಗೆ, ಅಶಾಬ್ದಿಕ ಅಂಶಗಳೂ ಸೇರಿದಾಗ ಅಥವಾ ಪೂರಕವಾದಾಗ ಮಾತಿಗೆ ಹೆಚ್ಚು ಅರ್ಥ ಮತ್ತು ತೂಕ ಬರುತ್ತದೆ. ವ್ಯಕ್ತಿ-ವ್ಯಕ್ತಿಗಳ ನಡುವಣ ಸಂವಹನದಲ್ಲಿ ಅರ್ಥಪೂರ್ಣ ಶಬ್ದಗಳ ವಿನಿಮಯದ ಜೊತೆ ಜೊತೆಗೇ ಅಶಾಬ್ದಿಕ ಸಂಕೇತಗಳೂ ಸಹಾ ಸೇರಿರುತ್ತವೆ. ಮಾತಿನ ನಡುವೆ ಶರೀರದ ನಾನಾ ಭಾಗಗಳು ಮಾತಾಡುತ್ತವೆ. ಉದಾಹರಣೆಗೆ, ಕಿರುನಗು, ತಲೆಯಾಡಿಸು ವುದು, ಮುಖ ಕಿವುಚುವುದು, ಇತ್ಯಾದಿ ಆಡುವ ಮಾತಿನ ಮೇಲೆ ಪ್ರಭಾವ ಬೀರಬಲ್ಲವು. ಕಿರುನಗು, ತಲೆದೂಗುವುದು ಮಾತನ್ನು ಮುಂದುವರೆಸಲು ಸೂಚಿಸುವ ಅಥವಾ ಧಾಟಿಯ ಬಗ್ಗೆ ಮಾಹಿತಿ ನೀಡಿದರೆ, ಮುಖ ತಿರುಗಿಸುವುದು, ಆಕಳಿಸುವುದು, ಅತ್ತ-ಇತ್ತ ದೃಷ್ಟಿ ಹರಿಸುವುದು, ಮಾತಿನಲ್ಲಿ ಆಸಕ್ತಿ ಇಲ್ಲದಿರುವುದನ್ನು ಸೂಚಿಸುತ್ತದೆ. ಕೆಲವು ಕ್ರಿಯೆಗಳು ಅತ್ಯಾವಶ್ಯಕವೂ ಹೌದು. ಮನೆಗೆ ಬಂದವರನ್ನು ಆದರದಿಂದ ಬರಮಾಡಿಕೊಳ್ಳುವಲ್ಲಿ ಮಾತಿಗಿಂತ ಈ ಅಶಾಬ್ದಿಕ ಕ್ರಿಯೆಗಳು ಹೆಚ್ಚು ಮಹತ್ವದ್ದಾಗಿರುತ್ತವೆ. ಬಂದವರಿಗೆ ನಮಸ್ಕರಿಸುವುದು, ಹಸ್ತಲಾಘವ ನೀಡುವುದು ಇಲ್ಲದಿದ್ದರೆ, ಅದರ ಅರ್ಥವೇ ಬೇರೆಯಾಗಿ ಅಭಾಸಕ್ಕೆ ಕಾರಣವಾಗಬಹುದು.

ಸಂವಹನದ ಅಧ್ಯಯನ ಎಂದರೆ, ಪ್ರಧಾನವಾಗಿ ಭಾಷೆಯನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತಿತ್ತು. ಭಾಷೆಯ ರಚನೆ, ಬಳಕೆ ಇತ್ಯಾದಿಗಳ ಬಗ್ಗೆಯೇ ಅಧ್ಯಯನ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಈ ಅಶಾಬ್ದಿಕ ಸಂವಹನ ಸಂಶೋಧಕರಿಗೆ ಕೇಂದ್ರ ವಸ್ತುವಾಗಿ ಪರಿಣಮಿಸಿದೆ. ಅನೇಕ ಮನೋವೈಜ್ಞಾನಿಕರು, ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಭಾಷಾ ಶಾಸ್ತ್ರಜ್ಞರು ಇದರಿಂದ ಆಕರ್ಷಿತರಾಗಿ ಇದರ ಅಧ್ಯಯನದಲ್ಲಿ ತೊಡಗಿದ್ದಾರೆ.

ಅಶಾಬ್ದಿಕ ಸಂವಹನ ಎಂದರೇನು? ಯಾವುದೋ ಹಾಡನ್ನು ಗುನುಗುನಿ ಸುತ್ತಿರುವ ಅಥವಾ ಶಿಳ್ಳೆ ಹಾಕುತ್ತಿರುವ ವ್ಯಕ್ತಿಯನ್ನು ನೋಡಿದಾಗ, ಅವರು ಸಂತೋಷವಾಗಿದ್ದಾರೆಂದು ಸೂಚಿಸುತ್ತದೆ. ಅಂತೆಯೇ ಅವರು ತಟ್ಟುವ ಚಪ್ಪಾಳೆ ಯಾರನ್ನಾದರೂ ಕರೆಯಲು ಇರಬಹುದು ಅಥವಾ ಮೆಚ್ಚಿಕೆಯಾಗಿರ ಬಹುದು. ಹೀಗೆ ಅವರು ಮಾಡುವ ಪ್ರತಿಯೊಂದು ಕ್ರಿಯೆಯಲ್ಲೂ ಯಾವುದೋ ಒಂದು ಸಂದೇಶವನ್ನು ನೀಡುತ್ತಲೇ ಇರುತ್ತಾರೆ. ಅಂದರೆ ಇಲ್ಲೆಲ್ಲೂ ಭಾಷೆಯ ಬಳಕೆಯಾಗಿಲ್ಲ. ಆದರೂ ಭಾಷೆಯ ಕಾರ್ಯ ನಡೆದಿದೆ.

ಅಶಾಬ್ದಿಕ ಸಂವಹನ ಎಂದರೆ, ಇಬ್ಬರು ವ್ಯಕ್ತಿಗಳ ಸಮಕ್ಷಮದಲ್ಲಿ ಶಾಬ್ದಿಕವಲ್ಲದ ಅಥವಾ ಪದಗಳ ಬಳಕೆಯಿಲ್ಲದೆ ಆಗುವ ಸಂವಹನ. ಅನೇಕ ವಿದ್ವಾಂಸರು ಅಶಾಬ್ದಿಕ ಸಂವಹನವನ್ನು ತಮ್ಮದೇ ಆದ ರೀತಿಯಲ್ಲಿ ಹೇಳಿದ್ದಾರೆ. “ಪದರಹಿತವಾದ, ಶಬ್ದರಹಿತವಾದ ಸಂವಹನ” (ಮೈಯರ್ಸ್‌ ಮತ್ತು ಮೈಯರ್ಸ್‌, 1973). “ಪದವಲ್ಲದ ಪ್ರತಿಯೊಂದು ಸನ್ನೆ / ಸೂಚನೆ” (ವೆನ್‌ಬರ್ಗ್ ಮತ್ತು ವೆಲ್‌ಮೆಟ್, 1973). “ಭಾಷೆಯಲ್ಲಿ ಶಬ್ದಗಳಲ್ಲಿ ವ್ಯಕ್ತಪಡದ ಮಾನವನ ಪ್ರತಿಯೊಂದು ಪ್ರತಿಕ್ರಿಯೆ” (ನ್ಯಾಪ್, 1972). “ಮಾತಿಗಿಂತ ಭಿನ್ನವಾದ ಸಂವಹನ” (ತಿರುಮಲೈ, 1987).

ಅಶಾಬ್ದಿಕ ಸಂವಹನದ ಅಧ್ಯಯನ ಇತ್ತೀಚೆಗಷ್ಟೇ ಆರಂಭವಾಗಿದ್ದರೂ, ಇದರ ಎಳೆಯನ್ನು ಡಾರ್ವಿನ್ನನ “ದಿ ಎಕ್ಸ್‌ಪ್ರೆಶನ್ ಆಫ್ ದಿ ಎಮೋಶನ್ಸ್ ಇನ್ ಮ್ಯಾನ್ ಅಂಡ್ ಅನಿಮಲ್ಸ್” (1872) ಕೃತಿಯಲ್ಲಿ ಕಾಣಬಹುದು. ಅತ್ಯಂತ ಪ್ರಭಾವಶಾಲಿ ಕೃತಿಯೂ ಆದ ಇದರಲ್ಲಿ ಅಶಾಬ್ದಿಕ ಸಂವಹನದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗುತ್ತವೆ. ಅಂದಿನಿಂದ ಪ್ರಾರಂಭವಾದ ಈ ಅಧ್ಯಯನ ಇಂದು ಅನೇಕರ ಪರಿಶ್ರಮದಿಂದ ಮುಂದುವರೆಯುತ್ತಿದೆ.

ಮ್ಯಾಲೆರಿ (1880) ತನ್ನ ಕೃತಿಯಲ್ಲಿ ಉತ್ತರ ಅಮೆರಿಕಾದ ಬಯಲಿನ ಸಂಕೇತ ಭಾಷೆ ಮತ್ತು ಇನ್ನಿತರ ಸಂಕೇತ ಭಾಷೆಗಳ ತೌಲನಿಕ ಅಧ್ಯಯನ ನಡೆಸಿದರು. ಈ ಕೃತಿ ಅನಂತರದ ಎಲ್ಲಾ ಅಧ್ಯಯನಗಳಿಗೂ ಮಾದರಿ ಯಾಯಿತು. ಅನಂತರ ಬಂದ ಇ.ಟಿ. ಹಾಲ್, ಆರ್.ಎಲ್. ಬರ್ಡ್‌ವಿಸೆಲ್, ಮೆಹ್ರಾಬಿಯನ್, ಫರ್ಡಿನಾಂಡ್ ಪೊಯಟೋಸ್, ಎಕ್‌ಮನ್ ಮತ್ತು ಫ್ರೀಸನ್ ಮೊದಲಾದ ಹಲವಾರು ವಿದ್ವಾಂಸರು ಅಧ್ಯಯನ ನಡೆಸಿ, ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಹ್ಯಾರಿಸನ್, ನ್ಯಾಪ್, ಆರ‌್ಜೈಲ್ ಮೊದಲಾದವರು ಪರಿಚಯಾತ್ಮಕ ಪುಸ್ತಕಗಳನ್ನು ಬರೆದಿದ್ದಾರೆ.

ಅಶಾಬ್ದಿಕ ಸಂವಹನದ ವ್ಯಾಪ್ತಿಯ ಬಗ್ಗೆ ಹೇಳುವುದಾದರೆ, ಆರ‌್ಜೈಲ್ (1969) ಎಂಬುವವರು ದೈಹಿಕ ಸಂಪರ್ಕ ನಿಲುವು, ದೃಷ್ಟಿ/ನೋಟ, ಮುಖ ಹಾಗೂ ಅಂಗಗಳ ಚಲನೆ, ಧ್ವನಿ ಒಳಗೊಳ್ಳುತ್ತದೆಂದು ಹೇಳಿದರೆ, ನ್ಯಾಪ್ (1972)ರವರು ದೈಹಿಕ ಚಲನೆ ಮುಖಭಾವ, ದೃಷ್ಟಿ, ಮುಟ್ಟುವಿಕೆ, ಸಮಭಾಷೆಯ ಅಂತರ-ಸಾಮಿಪ್ಯ ಮನುಷ್ಯ ನಿರ್ಮಿತ ವಸ್ತುಗಳು ಮತ್ತು ಪರಿಸರ ಸೇರುತ್ತದೆಂದು ಹೇಳಿದ್ದಾರೆ. ಹ್ಯಾರಿಸನ್ (1973)ರು ಸ್ವಲ್ಪ ಭಿನ್ನವಾಗಿ, ಅಂದರೆ, ಅಶಾಬ್ದಿಕವಾಗಿ ಬರುವ ಎಲ್ಲಾ ಕ್ರಿಯೆಗಳನ್ನು ನಾಲ್ಕು ಸೂತ್ರಗಳಲ್ಲಿ ಹೇಳುತ್ತಾರೆ. ಒಂದು, ಪ್ರದರ್ಶಕ (ದೈಹಿಕ ಕ್ರಿಯೆಗಳು), ಎರಡು, ಮಾನವ ನಿರ್ಮಿತ ವಸ್ತುಗಳು, ಮೂರು, ಮಾಧ್ಯಮ ಮತ್ತು ನಾಲ್ಕು, ಸಾಂದರ್ಭಿಕ.

ಮಾತನಾಡುವಾಗ ಕೈಗಳು ಮಾತಿನೊಂದಿಗೆ ಚಲಿಸುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ಅರ್ಥಪೂರ್ಣವಾಗಿಲ್ಲದಿದ್ದರೂ, ಇವು ಸಂವಹನ ಕ್ರಿಯೆಗೆ ಪೂರಕವಾಗಿರುತ್ತವೆ. ಕೇವಲ ಭಾಷೆಯನ್ನು ಬಳಸಿಯೇ ಮಾಹಿತಿ ನೀಡುವುದು ನಿರ್ಜೀವವಾಗಿ ಕಾಣಬಹುದು. (ಶಾಲೆಯಲ್ಲಿ ಮಕ್ಕಳು ಕೈಕಟ್ಟಿ ಪದ್ಯ ಹೇಳುವಂತೆ) ಭಾವರಹಿತವಾದ ಸಂವಹನ ನೀರಸವಾಗಿರುತ್ತದೆ.

ಈ ಅಶಾಬ್ದಿಕ ಕ್ರಿಯೆ ಹುಟ್ಟಿನಿಂದ ಬರುವುದೇ, ವಾಂಶಿಕವೇ ಅಥವಾ ಕಲಿತು ಬರುವುದೇ? ಇದರ ಬಗ್ಗೆ ಅನೇಕ ಅಧ್ಯಯನಗಳು ನಡೆದು ಈ ಕ್ರಿಯೆಗಳು ಮೂರು ವರ್ಗಕ್ಕೆ ಸೇರಬಹುದೆಂದು ಅಭಿಪ್ರಾಯಪಡುತ್ತಾರೆ. ಹಾಲು ಕುಡಿಯುವ ಮಗು ತನಗೆ ಸಾಕೆನಿಸಿದಾಗ ತಲೆಯನ್ನು ಅಡ್ಡ ಹೊರಳಿಸುವುದು. ಇದು ತನ್ನಿಂತಾನೇ ಬಂದಿರುವ ಕ್ರಿಯೆ. ಹಾಗೆಯೇ ಎಷ್ಟೋ ಕ್ರಿಯೆಗಳು ಆಯಾ ಸಂಸ್ಕೃತಿಯ ಫಲವಾಗಿ ಬಂದಿರುವಂತಹುದು, ಅದನ್ನು ಕಲಿತು ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಮೂಲ ಅಶಾಬ್ದಿಕ ಕ್ರಿಯೆಗಳೆಲ್ಲವೂ ಕಲಿತು ಉಪಯೋಗಿಸುವುದೇ ಆಗಿದೆ.

ಶಾಬ್ದಿಕ ಮತ್ತು ಅಶಾಬ್ದಿಕ ಕ್ರಿಯೆಗಳಿಗೆ ಇರುವ ಸಂಬಂಧ ಎಂತಹದು? ಕೆಲವೊಂದು ಅಶಾಬ್ದಿಕ ಕ್ರಿಯೆಗಳು ಕ್ರಿಯೆಗೆ ಪೂರಕವಾಗಿ ಬರುತ್ತದೆ. ಅತಿಥಿಗಳನ್ನು ಆಹ್ವಾನಿಸುವಾಗ ‘ಬನ್ನಿ, ಬನ್ನಿ’ ಎಂದು ಹೇಳುತ್ತಲೇ ಮುಖಭಾವವೂ ಪ್ರಸನ್ನವಾಗಿರುವುದನ್ನು ಕಾಣಬಹುದು. ಇನ್ನೂ ಕೆಲವು ಕ್ರಿಯೆಗಳಲ್ಲಿ ಒಂದನ್ನೊಂದು ಅವಲಂಬಿಸಿರುತ್ತದೆ. ನಾವು ಮಾತನಾಡುವಾಗ ‘ಅಷ್ಟು, ಇಷ್ಟು, ಅಲ್ಲಿ ಇಲ್ಲಿ’ ಎಂದು ಮಾತಿನಲ್ಲಿ ಹೇಳಿದಾಗ ಸ್ಪಷ್ಟತೆಗಾಗಿ ಶಾಬ್ದಿಕ ಸಂವಹನವು ಅಶಾಬ್ದಿಕ ಕ್ರಿಯೆಯನ್ನು, ಅಂದರೆ ಕೈಯಲ್ಲಿ ಗಾತ್ರ ಪರಿಮಾಣಗಳನ್ನು, ತೋರಿಸುವುದು, ಸ್ಥಾನವನ್ನು ನಿರ್ದೇಶನ ಮಾಡುವುದು ಇತ್ಯಾದಿ ಅವಲಂಬಿಸುತ್ತದೆ. ನಾವು ಮಾತನಾಡುವಾಗ ನಮ್ಮ ಕೈಗಳು ಪ್ರಮಾಣವನ್ನು ಅಥವಾ ನಿರ್ದೇಶನವನ್ನು ನೀಡುತ್ತಿರುತ್ತವೆ. ಹೀಗೆ ಸಂವಹನ ದಲ್ಲಿ ಶಾಬ್ದಿಕ ಮತ್ತು ಅಶಾಬ್ದಿಕ ಕ್ರಿಯೆಗಳ ಪರಸ್ಪರ ಅವಲಂಬನೆಯೂ ಇರುತ್ತದೆ. ಶಾಬ್ದಿಕ ಅಶಾಬ್ದಿಕ ಕ್ರಿಯೆಗಳು ಸ್ವತಂತ್ರ ವಾಗಿಯೂ ಬರಬಹುದು. ಕೆಲವು ಸಂದರ್ಭಗಳಲ್ಲಿ ಒಂದಾದ ನಂತರ ಒಂದು ಬರಬಹುದು. ಅಂದರೆ, ಮಾಹಿತಿಯ ಒಂದು ಭಾಗ ಶಾಬ್ದಿಕ ಉಳಿದ ಭಾಗ ಅಶಾಬ್ದಿಕ. ನಾವು ಏನನ್ನಾದರೂ ಹೇಳಿದ ಬಳಿಕ ಕಣ್ಣು ಮಿಟುಕಿಸುವುದು. ಈ ಕ್ರಿಯೆಯಲ್ಲಿ ಶಾಬ್ದಿಕ ಅನಂತರದ ಅದರ ಮುಂದುವರಿಕೆಯಾಗಿ ಅಶಾಬ್ದಿಕ ಕ್ರಿಯೆಯನ್ನು ಕಾಣಬಹುದು. ಶಾಬ್ದಿಕ-ಅಶಾಬ್ದಿಕ ಕ್ರಿಯೆಗಳು ಒಟ್ಟಿಗೆ ಸಂಭವಿಸಿದಾಗ ಶಾಬ್ದಿಕ ಸಂವಹನಕ್ಕೆ ಒತ್ತು ನೀಡುವ ಕೆಲಸವನ್ನು ಅಶಾಬ್ದಿಕ ಕ್ರಿಯೆಗಳು ನಡೆಸುವುವು.

ಅಶಾಬ್ದಿಕ ಸಂವಹನ ಮಾನವನ ಕೆಲವು ಆಚರಣೆಗಳಲ್ಲಿ ಬಳಕೆಯಲ್ಲಿರುವು ದನ್ನು ಕಾಣುತ್ತೇವೆ. ಕೆಲವು ಧಾರ್ಮಿಕ ಸ್ಥಳಗಳಲ್ಲಿ ಕೇವಲ ಮೌನವನ್ನೇ ಆಶ್ರಯಿಸಬೇಕಾದ ಸಂದರ್ಭಗಳಲ್ಲಿ ಭಾವಾಭಿನಯದ ಮೂಲಕ ಸಂವಹನ ನಡೆಯುತ್ತದೆ.

ನಮ್ಮ ಸಂಸ್ಕೃತಿಯು ಒಳಗೊಂಡಂತೆ ಹೇಳುವುದಾದರೆ ನೃತ್ಯ, ನಾಟಕಗಳಲ್ಲಿ ಭಾವಾಭಿನಯ ಮುಖ್ಯವಾದುದು. ಇಲ್ಲಿ ಹೇಳಬೇಕಾದುದನ್ನು ಅಶಾಬ್ದಿಕ ಕ್ರಿಯೆಗಳಿಂದ, ಅಂದರೆ ಶರೀರದ ನಾನಾ ಭಾಗಗಳ ಚಲನೆ ಮುಖಭಾವಗಳ ಮೂಲಕ ಅಭಿವ್ಯಕ್ತಗೊಳಿಸುವುದನ್ನು ಕಾಣಬಹುದು. ಶರೀರದ ಭಾಗಗಳ ಮೂಲಕ ವ್ಯಕ್ತಪಡಿಸುವುದನ್ನು ‘ಆಂಗಿಕ’ ಎಂದೂ ಮಾತಿನ ಮೂಲಕ ಹೇಳುವುದನ್ನು ‘ವಾಚಿಕ’ ಎಂದೂ ವೇಷ-ಭೂಷಣಗಳ ಮೂಲಕ ವ್ಯಕ್ತ ಪಡಿಸುವುದನ್ನು ‘ಆಹಾರ್ಯ’ ಎಂದೂ ರಸಭಾವಗಳ ಮೂಲಕ ಅಭಿವ್ಯಕ್ತಿ ಗೊಳಿಸುವುದನ್ನು ‘ಸಾತ್ವಿಕ’ ಎಂದೂ ಕರೆಯಲಾಗಿದೆ. ವಾಚಿಕವನ್ನು ಹೊರತು ಮಾಡಿ ಉಳಿದವು ಹೇಳಬೇಕಾದುದನ್ನೆಲ್ಲಾ ಮೌನವಾಗಿಯೇ ಹೇಳುತ್ತದೆ.

ಅಶಾಬ್ದಿಕ ಕ್ರಿಯೆಗಳು ಪರಸ್ಪರ ಮಾತುಕತೆಯನ್ನು ನಿಯಂತ್ರಿಸುತ್ತವೆ. ಮಾತುಕತೆಯ ಮುಂದುವರಿಕೆಗೆ ಸಂಕೇತ ಸೂಚನೆ ನೀಡುತ್ತದೆ. ಅವಶ್ಯ ಮರುಮಾಹಿತಿ ನೀಡುತ್ತದೆ. ಮಾತನ್ನು ಕೇಳುತ್ತಿರುವ ವ್ಯಕ್ತಿ, ಮಾತಿನ ಮಧ್ಯೆ ಬಾಯಿ ಹಾಕುವುದು ಮುಖಭಾವದ ಬದಲಾವಣೆಯಾಗುವುದು ಅಥವಾ ಆಕಳಿಸುವುದು ಸಂವಹನದ ಮೇಲೆ ಪರಿಣಾಮ ಉಂಟುಮಾಡುತ್ತದೆ.

ಈಗಾಗಲೇ ಹೇಳಿದಂತೆ ಅಶಾಬ್ದಿಕ ಕ್ರಿಯೆಗಳು ಸಂಸ್ಕೃತಿಯ ಭಾಗವೂ ಆಗಿರುವುದರಿಂದ ಅವು ಎಲ್ಲಾ ಸಂಸ್ಕೃತಿಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಕೆಲವೊಂದು ಕ್ರಿಯೆಗಳು, ಆಶ್ಚರ್ಯ, ಗಾಬರಿ, ದುಃಖದ ಮುಖಭಾವ ಸಾಮಾನ್ಯವಾಗಿರಬಹುದು. ಆದರೂ ಇನ್ನಿತರ ಅಂಗಗಳನ್ನು ಬಳಸಿ ಮಾಡುವ ಕ್ರಿಯೆಗಳು ಭಿನ್ನವಾಗಿಯೇ ಇರುತ್ತದೆ. ‘ಬಾ/ಬನ್ನಿ’ ಎಂದು ಸೂಚಿಸಲು ನಾವು ಬಳಸುವ ಸಂಕೇತ ಒಂದು ದೇಶದಲ್ಲಿ ಕೇವಲ ಕೈ ಮೇಲೆತ್ತಿ ‘ವಿಶ್’ ಮಾಡುವುದಕ್ಕೆ ಸಂಕೇತವಾಗಿರಬಹುದು.

ಮನುಷ್ಯರ ಮುಖಭಾವವು ಮನಸ್ಥಿತಿಯನ್ನು ಅಭಿವ್ಯಕ್ತಗೊಳಿಸಬಲ್ಲವು. ಸಂತೋಷ, ದುಃಖ, ಆತಂಕ, ಕುತೂಹಲ, ಅಸಂತೋಷ, ಭಯ ಇತ್ಯಾದಿ ಅಷ್ಟೇ ಅಲ್ಲದೆ ಇತರರನ್ನು ಉದ್ರೇಕಿಸಬಹುದು. ಪ್ರತಿಯೊಬ್ಬ ವ್ಯಕ್ತಿಯ ಮುಖಭಾವವು ವ್ಯಕ್ತಿಯ ಒಳಗಿನ ಮನಃಸ್ಥಿತಿಯನ್ನು ತಿಳಿಸುವ ಸಂಕೇತಗಳನ್ನು ನೀಡುತ್ತಿರುತ್ತದೆ. ಕೆಲವು ಸಂಕೇತಗಳು ಕೇವಲ ಶಾರೀರಿಕ ಸ್ಥಿತಿಯನ್ನು (ಜುಗುಪ್ಸೆ ಇತ್ಯಾದಿ) ಹೇಳಿದರೆ ಇನ್ನು ಕೆಲವು ರಸಭಾವಗಳನ್ನು (ಭಯ, ಕೋಪ ಇತ್ಯಾದಿ) ಹೊರಗೆಡವುತ್ತವೆ.

ವ್ಯಕ್ತಿಯ ಮುಖವನ್ನು ನೋಡುತ್ತಿದ್ದಂತೆಯೇ ನಮ್ಮ ಮನಸ್ಸಿನಲ್ಲಿ ಭಾವನೆಗಳು ಹುಟ್ಟುತ್ತವೆ. ಸ್ವಲ್ಪ ದಪ್ಪಗಿನ ಮುಖ, ಮೀಸೆ, ದೊಡ್ಡದಾದ ಹುಬ್ಬುಗಳು, ಅಗಲವಾದ ಕಣ್ಣು, ಇತ್ಯಾದಿಗಳನ್ನು ನೋಡುತ್ತಿದ್ದಂತೆಯೇ ಭಯವಾಗುವಂತೆ, ಸೌಮ್ಯ ಲಕ್ಷಣಗಳನ್ನು ಹೊಂದಿರುವವರನ್ನು ಕಂಡರೆ ಇಷ್ಟವಾಗುವುದುಂಟು. ಸೌಮ್ಯಭಾವವನ್ನು ಹೊಂದಿರುವ ಜನರು ಏನೇ ಮಾಡಿದರೂ ಭಯಪಡಿಸಲು ಸಾಧ್ಯವಾಗದೇ ಹೋಗಬಹುದು. ಹೀಗೆ ಮನುಷ್ಯರ ಮುಖಲಕ್ಷಣ ಅವರ ವ್ಯಕ್ತಿತ್ವವನ್ನು ಸಾರುವುದರಲ್ಲಿ ಅಶಾಬ್ದಿಕವಾಗಿ ಮಹತ್ವದ ಪಾತ್ರ ವಹಿಸುತ್ತದೆ.

ಮುಖದ ಮೂಲಕ ಅಶಾಬ್ದಿಕ ಸಂವಹನಕ್ಕೆ ಸಹಕಾರಿಯಾಗಿರುವ ಅಂಗಗಳೆಂದರೆ, ತುಟಿ, ಮೂಗು, ಬಾಯಿ, ಹುಬ್ಬುಗಳು, ರೆಪ್ಪೆ, ಹಣೆ, ಒಟ್ಟು ಮುಖ. ಇವುಗಳಲ್ಲಿ ಕೆಲವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ, ಇನ್ನು ಕೆಲವು ಬೇರೆಯದರ ಜೊತೆ ಭಾಗವಹಿಸಿ ಪೂರ್ಣ ಮಾಹಿತಿಯನ್ನು ನೀಡುತ್ತವೆ.

ಒಟ್ಟಾರೆ ಮುಖವನ್ನು ತೆಗೆದುಕೊಂಡಾಗ, ಮುಖ ದಪ್ಪಗೆ ಮಾಡಿಕೊಳ್ಳು ವುದೂ ಗಂಟು ಹಾಕುವುದೂ ಮುನಿಸಿಕೊಳ್ಳುವುದನ್ನು ಸೂಚಿಸುತ್ತವೆ. ಮುಖ ತಿರುಗಿಸುವುದು ಅತೃಪ್ತಿ, ಅಸಮಾಧಾನ, ಇಷ್ಟವಿಲ್ಲದಿರುವುದನ್ನು ಹೇಳುತ್ತದೆ. ಅಸಡ್ಡೆ, ತಿರಸ್ಕಾರಕ್ಕೆ ಇದು ಒಳ್ಳೆಯ ಉದಾಹರಣೆ. ತುಟಿಗಳು ನಡುಗು ತ್ತಿರುವುದು ಭಯದ ಸೂಚನೆ. ಕೋಪಗೊಂಡಾಗ ಭಾವಾವೇಶದಿಂದ ಮೂಗಿನ ಹೊರಳೆಗಳು ಅಗಲವಾಗುವುದು, ಹಣೆಯ ಮೇಲೆ ಮೂಡುವ ಗೆರೆಗಳು ಚಿಂತಾತುರ ಮನಸ್ಸನ್ನೂ ಸಂಕೇತಿಸುವುದು. ಮುಖದ ಬಣ್ಣ (ಚರ್ಮ)ವೂ ಕೂಡ ಮಾಹಿತಿಯನ್ನು ನೀಡಬಲ್ಲದು. ಕೆಂಪಾಗುವುದು ನಾಚಿಕೆ, ಕೋಪದ ಸಂಕೇತವಾದರೆ, ಕಪ್ಪಾಗುವುದು ಅಹಿತರ ಘಟನೆ /  ವಿಷಯ ತಿಳಿದಾಗ ಆಗುವಂತಹದ್ದು. ಬಿಳುಪೇರುವುದು ಭಯದ ಸೂಚನೆ. ಹೀಗೆ ಒಟ್ಟಾರೆ ಮುಖ, ಅನೇಕ ವಿಷಯಗಳನ್ನು ಅಶಾಬ್ದಿಕವಾಗಿ ಅಭಿವ್ಯಕ್ತ ಗೊಳಿಸುವುದು.

ಮುಖದ ಇತರ ಭಾಗಗಳು ಸ್ವತಂತ್ರವಾಗಿ ಕೆಲಸ ಮಾಡಬಲ್ಲವು. ಹುಬ್ಬೇರಿಸುವ ಕ್ರಿಯೆ ಪ್ರಯತ್ನ ಪೂರ್ವಕವಾದರೆ ಪ್ರಶ್ನಾರ್ಥಕ, ಸ್ವಾಭಾವಿಕವಾದರೆ ವಿಸ್ಮಯ, ಆಶ್ಚರ್ಯಸೂಚಕ. ಅಂತೆಯೇ ಹುಬ್ಬು ಗಂಟಿಕ್ಕುವುದು ಅಸಮ್ಮತಿ, ಕೋಪದ ಸಂಕೇತ.

ಬಾಯಿ ತೆರೆಯುವಿಕೆ ಸ್ವತಂತ್ರವಾಗಿ ಆಗದೆ ಇನ್ನಿತರ ಅಂಗಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತದೆ. ಆಶ್ಚರ್ಯದಿಂದ ಏನನ್ನಾದರೂ ನೋಡುವಾಗ ಬಾಯಿ ಅಗಲವಾಗಿ ತೆರೆಯಬಹುದು. ಮುಖದ ಅನೇಕ ಅಂಗಗಳು ಸೇರಿ ಒಂದು ಭಾವವನ್ನು ಸೂಚಿಸಬಹುದು. ಆಶ್ಚರ್ಯವನ್ನು ಸೂಚಿಸಲು, ಹುಬ್ಬುಗಳು ಮೇಲೇರಿ, ಬಾಯಿ ಅರೆತೆರೆದಿರಬಹುದು. ಕಣ್ಣುಗಳು ಅಗಲವಾಗಿರಬಹುದು. ಮುಖದ ಬಣ್ಣ ಕೆಂಪಾಗಿ ಕಣ್ಣುಗಳು ಅಗಲವಾಗಿ, ಮುಖದ ಸ್ನಾಯುಗಳು ಬಿಗಿಯಾಗಿ, ಹಲ್ಲು ಕಡಿಯುವ ರೀತಿಯಲ್ಲಿ ಕೋಪ ವ್ಯಕ್ತವಾಗಬಹುದು.

ಮುಖಭಾವವನ್ನು ವ್ಯಕ್ತಪಡಿಸಲು ಕಣ್ಣು ಸಹಕಾರಿಯಾಗಿದೆ. ಕಣ್ಣುಗಳು ಸ್ವತಂತ್ರವಾಗಿ ಕೆಲಸ ಮಾಡುತ್ತವೆ. ಕಣ್ಣು ನಮಗೆ ನಮ್ಮ ಸುತ್ತಲಿನ ಜಗತ್ತಿನ ಆಗುಹೋಗುಗಳ ಪರಿಚಯ / ಮಾಹಿತಿ ಒದಗಿಸುತ್ತವೆ. ಅಗಲವಾದ ಕಣ್ಣುಗಳು ಮುಖಕ್ಕೆ ಅಂದವನ್ನು ತಂದುಕೊಡುತ್ತದೆ. ಮೀನಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ, ವಿಶಾಲಾಕ್ಷಿ, ಚಂಚಲಾಕ್ಷಿ ಹೀಗೆ ಹೇಳುವಾಗ ಎಲ್ಲವೂ ಕಣ್ಣುಗಳ ಬಗ್ಗೆ ಹೇಳುತ್ತವೆ. ಅನೇಕ ಕಾದಂಬರಿಗಳಲ್ಲಿ ನೋಟಗಳ ಬಗ್ಗೆ ವರ್ಣನೆಗಳು ಸಿಗುತ್ತವೆ. ತೀಕ್ಷ್ಣ ನೋಟ, ಶುಷ್ಕ ನೋಟ, ಕುಡಿನೋಟ / ಓರೆನೋಟ, ಪ್ರಶ್ನಾರ್ಥಕ ನೋಟ, ದೈನ್ಯತೆ ಸೂಚಿಸುವ ನೋಟ, ಹೀಗೆ ಕಣ್ಣುಗಳು ಅನೇಕ ನೋಟಗಳ ಮೂಲಕ ಸಂದೇಶಗಳನ್ನು ಸಾರುತ್ತವೆ. ಪ್ರಿಯಕರ, ಪ್ರೇಯಸಿಯರ ಸಂಭಾಷಣೆ, ಕುಡಿನೋಟ ಓರೆನೋಟಗಳಲ್ಲೆ ಸಾಗುತ್ತವೆ. ದುರುಗುಟ್ಟಿ ನೋಡುವುದು ಕೋಪದ ಸಂಕೇತ. ವ್ಯಕ್ತಿಯ ನೋಟ, ವ್ಯಕ್ತಿಯ ಆಸಕ್ತಿಯನ್ನು ಸೂಚಿಸುತ್ತದೆ. ಪ್ರಿಯವಾದ ವಸ್ತು / ವ್ಯಕ್ತಿಯೆಡೆಗೆ ದೃಷ್ಟಿ ಹೆಚ್ಚು ಇರುತ್ತದೆ. ಹಾಗೂ ಇಷ್ಟವಾದಾಗ ಕಣ್ಣುಗಳು ಅಗಲವಾಗಿ ಆಸಕ್ತಿ ಯನ್ನು ಹೊರಸೂಸುತ್ತವೆ.

ಕೆಲವು ಸಮಾಜಗಳಲ್ಲಿ ಕೆಳಸ್ತರದ ಜನರು ಉನ್ನತ ವ್ಯಕ್ತಿಗಳನ್ನು ನೋಡುವುದಿಲ್ಲ (ಸಂಭಾಷಣೆಯ ಸಮಯದಲ್ಲಿ). ಇದು ಆ ವ್ಯಕ್ತಿಯ ಔನ್ನತ್ಯವನ್ನು ಸೂಚಿಸುವುದು. ಇನ್ನು ಕೆಲವು ಕಡೆ ಕೆಳಸ್ತರದ ವ್ಯಕ್ತಿಗಳು ಮಾತ್ರ ಹೆಚ್ಚು ನೋಡುತ್ತಾರೆ. ಅವರು ಅಂತಸ್ತುಳ್ಳ ವ್ಯಕ್ತಿಯ ಮಾತಿಗೆ ಹೆಚ್ಚು ಆಸಕ್ತಿ / ಮಹತ್ವ ತೋರಿಸಲು ಹೀಗೆ ಮಾಡುತ್ತಾರೆ. ಅಂದರೆ ನೋಟ, ಅಂತಸ್ತು, ಪ್ರಾಬಲ್ಯವನ್ನು ಸೂಚಿಸುತ್ತದೆ.

ಮುಖವನ್ನು ನೋಡದಿರುವುದೂ ನೋಟವನ್ನು ಬೇರೆಡೆಗೆ ತಿರುಗಿಸುವುದೂ ಅಪರಾಧಿ ಮನೋಭಾವ ಅಥವಾ ಆತ್ಮವಿಶ್ವಾಸವಿಲ್ಲದಿರುವುದನ್ನು ಸೂಚಿಸುತ್ತದೆ.

ಕೆಲವು ವೇಳೆ ಎದುರಿಗಿದ್ದರೂ ಕಾಣದಂತಿರುವುದೂ ದೂರವಿದ್ದರೂ ಗುರುತಿಸುವುದು ವ್ಯಕ್ತಿಗಳ ಸ್ಥಾನವನ್ನು ಸೂಚಿಸುತ್ತದೆ.

ಸಂವಹನ ಕ್ರಿಯೆಯಲ್ಲಿ ಕೈ, ಕಾಲು, ಬೆರಳುಗಳು, ತಲೆ, ಮೊಣಕೈ, ಇಡೀ ಶರೀರವನ್ನು ಬಳಸಿಕೊಳ್ಳಲಾಗುತ್ತದೆ. ಅವುಗಳಲ್ಲಿ ಕೈಯನ್ನು ಬಳಸಿ ಅತಿ ಹೆಚ್ಚಿನ ಸಂಕೇತಗಳನ್ನು ಮಾಡಲಾಗುತ್ತದೆ. ಇವು ಶಾಬ್ದಿಕ ಸಂವಹನದ ಜೊತೆಯಲ್ಲೇ ಸಾಗಿ ಮಾತಿಗೆ ಒತ್ತು ನೀಡುವುದರ ಜೊತೆಗೆ ನೈಜ ಮಾಹಿತಿ ಯನ್ನು ನೀಡುತ್ತದೆ. ಅದೂ ಅಲ್ಲದೆ ಭಾವಾಭಿನಯ ಯಾವುದೇ ಒಂದು ವಸ್ತುವನ್ನು ಮಾತಿನಲ್ಲಿ ವಿವರಿಸಲಾಗದಂತಹ ಸಂದರ್ಭದಲ್ಲಿ ಸಂಕೇತಿಸಲು ಸಹಕಾರಿಯಾಗಿದೆ.

ದಿನನಿತ್ಯ ಸಂಭಾಷಿಸುತ್ತಿರುವಾಗ ಅನೇಕ ರೀತಿಯ ಆಂಗಿಕ ಚಲನೆಗಳು ನಡೆಯುತ್ತಿರುತ್ತವೆ. ಕೆಲವು ಚಲನೆಗಳು ಮಾತಿಗೆ ವಿವರಣೆಯನ್ನು ನೀಡುವ ಕೆಲಸ ಮಾಡುತ್ತವೆ. ತೋರು ಬೆರಳನ್ನು ಉಪಯೋಗಿಸಿ ಯಾವುದೇ ಒಂದು ವಸ್ತುವನ್ನು ತೋರಿಸುವುದು. ಅದು, ಇದು, ಅವನು, ಇವನು, ಅಲ್ಲಿ, ಇಲ್ಲಿ, ಇತ್ಯಾದಿಗಳನ್ನು ಹೇಳುವ ಸಂದರ್ಭಗಳಲ್ಲಿ ನಮ್ಮ ತೋರುಬೆರಳು ದಿಕ್ಕು, ವಸ್ತುವನ್ನು ಸೂಚಿಸಿ ಮಾತಿನಲ್ಲಿರುವ ಅಸ್ಪಷ್ಟತೆಯನ್ನು ನಿವಾರಿಸುತ್ತವೆ. ಇಂತಹ ಚಲನೆಗಳನ್ನು ತೋರುವಿಕೆ ಎಂದು ಕರೆಯಲಾಗಿದೆ. ಒಂದು ವಸ್ತುವಿನ ಚಿತ್ರವನ್ನು (ಪೆಟ್ಟಿಗೆ, ಪಾತ್ರೆ ಇತ್ಯಾದಿ) ಗಾಳಿಯಲ್ಲಿ ಬರೆದು ತೋರಿಸುವುದು ಇದನ್ನು ಚಿತ್ರಕ ಎಂದು ಕರೆಯಬಹುದು. ಗಾತ್ರ ಅಥವಾ ಸ್ಥಳ ಸಂಬಂಧವನ್ನು ಸೂಚಿಸಲು ಬಳಸಲು ಸಂಕೇತಗಳನ್ನು ಅಂತರ ಅಥವಾ ಗಾತ್ರ ಸೂಚಕ ಎಂದೂ, ಮನಸ್ಸಿನಲ್ಲಿರುವ ಕಲ್ಪನೆಗೆ ಸಾಕಾರ ನೀಡುವಂತೆ ತೋರಿಸುವ ಚಲನೆಯನ್ನು ಐಡಿಯೋಗ್ರಾಫ್ ಎಂದು ಕರೆಯುತ್ತಾರೆ. ನಾವು ಮಾತನಾಡುವಾಗ ನಮ್ಮ ಕೈಗಳು ವಿರಾಮ ಚಿಹ್ನೆಗಳಂತೆ ಕೆಲಸ ಮಾಡುತ್ತವೆ. ಇನ್ನು ಕೆಲವು ವೇಳೆ ವಿಭಾಜಕಗಳಂತೆ ಕೆಲಸ ಮಾಡುತ್ತವೆ. ಉದಾಹರಣೆಗೆ, ಸೊಪ್ಪು, ಗೆಡ್ಡೆ ಗೆಣಸು, ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುವಾಗ ಪ್ರತಿ ವಸ್ತುವನ್ನು ಹೇಳಿದ ನಂತರ ಕೈ ಮೇಲಿಂದ ಕೆಳಕ್ಕೆ ಚಲಿಸುವುದು. ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಪರಿಗಣಿಸಿದಂತೆ ಸೊಪ್ಪು, ಗೆಡ್ಡೆ ಗೆಣಸು ಆದನಂತರ ಕೈ ಚಲಿಸಿ ಕಾಳುಗಳು ನಂತರ ಮತ್ತೊಮ್ಮೆ ಚಲಿಸಿದರೆ, ಸೊಪ್ಪು, ಗೆಡ್ಡೆ ಗೆಣಸು ಒಂದು ಭಾಗ, ಕಾಳುಗಳು ಇನ್ನೊಂದು ಭಾಗ ಎನ್ನುವ ಅರ್ಥ ಬರುತ್ತದೆ. ಹೀಗೆ ಕೈಗಳ ಲಯಬದ್ಧವಾದ ಚಲಿಸುವ ಕ್ರಿಯೆ ಮಾತಿಗೆ ಒತ್ತು ನೀಡುವುದು ಒಂದು ಕಡೆಯಾದರೆ, ವಿರಾಮದ ಚಿಹ್ನೆಗಳಂತೆ ಇನ್ನೊಂದೆಡೆ ಕೆಲಸ ಮಾಡುತ್ತದೆ. ಇವುಗಳನ್ನು ‘ಬೇಟನ್ನು’ ಎನ್ನುತ್ತಾರೆ.

ಮನೋಭಾವವನ್ನು (ದುಃಖ, ಸಂತೋಷ ಇತ್ಯಾದಿ) ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಅಂಗ ಮುಖ. ಇದನ್ನು ಬಿಟ್ಟರೆ ಕೈ ಪರಿಣಾಮಕಾರಿಯಾಗಿ ಸೂಚಿಸಬಲ್ಲದು. ಉದಾಹರಣೆಗೆ, ಕೋಪಗೊಂಡಾಗ ಮುಷ್ಟಿ ಬಿಗಿಯಾಗ ಬಹುದು. ಗಾಳಿಯಲ್ಲಿ ಚಲಿಸಬಹುದು. ಕೆಲವು ವೇಳೆ ಮುಖ ನಿಜವನ್ನು ಮರೆಮಾಚಬಹುದು. ಆದರೆ ಕೈಗಳು ನಿಜ ಹೇಳುವುದು. ಭಯವನ್ನು ಮುಖ ತೋರ್ಪಡಿಸಿಕೊಳ್ಳದೇ ಹೋದರೂ ಕೈಗಳು ನಡುಗುತ್ತಾ ನಿಜಾಂಶವನ್ನು ಹೇಳಬಹುದು.

ವೈಯುಕ್ತಿಕವಾಗಿಯೂ ಕೆಲವು ಚಲನೆಗಳು ಬಳಕೆಯಾಗಬಹುದು. ಇದು ವ್ಯಕ್ತಿಯು ಸಾಂದರ್ಭಿಕವಾಗಿ ಬಳಕೆ ಮಾಡಿಕೊಳ್ಳುವ ಕ್ರಿಯೆಗಳೇ ಹೊರತು ಇಡೀ ಸಮಾಜದಲ್ಲಿ ಬಳಕೆಯಲ್ಲಿರುವುದಿಲ್ಲ. ಉದಾಹರಣೆಗೆ, ಕೆರೆದುಕೊಳ್ಳು ವುದು, ಕಚ್ಚುವುದು, ದೇಹದ ಇತರ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು ಇತ್ಯಾದಿ. ಕೇಳಿದ ಮಾಹಿತಿಯನ್ನು ಹೇಳಲು ಸಾಧ್ಯವಾಗದೇ ಹೋದಾಗ ತಲೆಕೆರೆದುಕೊಳ್ಳುವುದು, ವ್ಯಕ್ತಿಯ ಅಸಾಮರ್ಥ್ಯವನ್ನು ಹೇಳಿದರೂ ಇದು ಆ ವ್ಯಕ್ತಿಯ, ಆ ಸಂದರ್ಭದ ಅರ್ಥವೇ ಹೊರತು, ಎಲ್ಲಾ ಸಂದರ್ಭಕ್ಕೂ, ಎಲ್ಲರಿಗೂ ಅನ್ವಯಿಸುವಂತಹದ್ದಲ್ಲ.

ಕೆಲವು ಚಲನೆಗಳನ್ನು ಒಂದು ಪದ / ಪದಪುಂಜಕ್ಕೆ ಬದಲಾಗಿ ಬಳಸ ಲಾಗುತ್ತವೆ. ಪ್ರಾಣಕ್ಕೆ ಸಂಚಕಾರ ಬಂದಿದೆ ಎನ್ನುವುದು ಸೂಚಿಸಲು ತೋರುಬೆರಳನ್ನು ಕತ್ತಿನ ಹತ್ತಿರ ಅಡ್ಡಡ್ಡ ಆಡಿಸುವುದು. ಇತ್ತೀಚೆಗೆ ನಮ್ಮ ದೇಶಕ್ಕೂ ಬಂದಿರುವ ಎರಡು ಬೆರಳು ಉಪಯೋಗಿಸಿ ತೋರಿಸುವ ‘V’ ಚಿಹ್ನೆ ವಿಜಯದ ಸಂಕೇತವಾಗಿದೆ. ಇಂತಹ ಸಂಕೇತಗಳು ಎಲ್ಲಿ ಮಾತು ಸಾಧ್ಯವಿಲ್ಲವೋ ಅಂತಹ ಕಡೆ – ಕ್ರೀಡೆ, ದೂರದರ್ಶನ ಸ್ಟೂಡಿಯೋಗಳಲ್ಲಿ – ಬಳಸಲಾಗುತ್ತದೆ.

ಅಶಾಬ್ದಿಕ ಸಂವಹನದ ಅಂಗವಾಗಿ ಸಮಭಾಷೆ ಎಂಬುದೂ ಇದೆ. ಈ ಸಮಭಾಷೆ ಎಂದರೇನು? ಇದನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ಯಾವುದೋ ಒಂದು ವಾಕ್ಯವನ್ನು ಕೇಳಿದಾಗ, ಇದು ಒಂದು ನಿರ್ದಿಷ್ಟ ಭಾಷೆಯಲ್ಲಿದೆ, ಅದಕ್ಕೊಂದು ಅರ್ಥವಿದೆ, ಹಾಗೆ ಒಂದು ಸಂದೇಶವನ್ನು ಒಳಗೊಂಡಿದೆ ಎಂದು ಯಾರಾದರೂ ಹೇಳಬಲ್ಲರು. ಆದರೆ ಅದರ ಜೊತೆಗೆ ಮಾತನಾಡಿದವರ ಬಗ್ಗೆಯೂ ಕೆಲವು ಅಂಶಗಳು ಗೊತ್ತಾಗುತ್ತವೆ. ಅಂದರೆ ಮಾತನಾಡಿದವರು ಹೆಂಗಸರು / ಗಂಡಸರು / ಮಕ್ಕಳು, ವಯಸ್ಸಾದ / ಯುವಕ, ಮನಸ್ಥಿತಿ ಹೇಗಿತ್ತು, ಶಾಂತ / ಕೋಪ / ಭಯ / ಸಂತೋಷ, ಎನ್ನುವುದು ಸಹ ತಿಳಿಯುತ್ತದೆ. ಯಾವ ಅಂಶಗಳು ಇಂತಹ ಊಹೆಗಳಿಗೆ ಅವಕಾಶ ನೀಡುತ್ತದೋ ಅದೇ ಸಮಭಾಷೆ (ಪ್ಯಾರಾ ಲಾಂಗ್ವೇಜ್).

ಧ್ವನಿ, ಭಾಷೆಯ ರಚನೆಯನ್ನು ಹೊಂದಿರದ ಇನ್ನಿತರ ಶಬ್ದಗಳು, ಧ್ವನಿಯ ಮಾರ್ಪಾಡುಗಳು ನಮ್ಮ ಮಾತಿನಲ್ಲಿ ಕಂಡು ಬರುವ ಅಂಶಗಳು. ಮಾತಿನಲ್ಲಿಯ ಇನ್ನಿತರ ಶಬ್ದಗಳು ಮತ್ತು ಧ್ವನಿಯ ಮಾರ್ಪಾಡುಗಳೇ ಸಮಭಾಷೆ ಎನ್ನುತ್ತಾರೆ ಟ್ರೇಜರ್ (1958). ಮಾತಿನ ಜೊತೆ ಬಂದು ಮಾತಿಗೆ ಮೆರುಗನ್ನು ನೀಡಿ ಸಂವಹನವನ್ನು ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡುವಲ್ಲಿ ಇದರ ಪಾತ್ರ ಗಮನಾರ್ಹವಾದದ್ದು.

ಮನಸ್ಸಿನ ಭಾವಸ್ಥಿತಿಯನ್ನು ವ್ಯಕ್ತಪಡಿಸುವಲ್ಲಿ ಮುಖಭಾವವನ್ನು ಬಿಟ್ಟರೆ ಧ್ವನಿಯೇ ಮುಖ್ಯವಾದದ್ದು. ಒಂದು ಅಂದಾಜಿನ ಪ್ರಕಾರ ಇದು ಶೇಕಡಾ 38 ರಷ್ಟನ್ನು ಸೂಚಿಸುತ್ತದೆ ಎಂಬುದಾಗಿ ಮೆಹ್ರಾಬಿಯನ್ (1972) ಹೇಳುತ್ತಾರೆ. ಮಾತಿನ ಧ್ವನಿ ಗದ್ಗದ, ಉಲ್ಲಾಸಭರಿತ, ಕರ್ಕಶ, ನೀರಸವಾಗಿರಬಹುದು. ಇವೆಲ್ಲವೂ ಪದಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ಸಂಕೇತದ ಮೂಲಕವಾಗಿ ತಿಳಿಸುತ್ತವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕೇವಲ ಕೆಲವು ಧ್ವನಿಗಳನ್ನು ಉಪಯೋಗಿಸಿ ಕೆಲವು ಸೂಚನೆಗಳನ್ನು ನೀಡಬಹುದು. ಕನಿಕರವನ್ನು ಸೂಚಿಸಲು ಮಾತಿನ ಮಧ್ಯೆ ತ್ಸು, ತ್ಸು, ಎನ್ನುವುದು. ಇಲ್ಲಿ ಇದು ಒಂದು ಪದ / ಪದಪುಂಜ ಮಾಡುವ ಕೆಲಸವನ್ನೇ ಮಾಡುತ್ತದೆ. ಆಹಾ! ಓಹ್! ಎನ್ನುವುದೂ ಸಹಾ ಈ ರೀತಿಯಲ್ಲಿ ಒಂದು.

ನಾವು ಮಾತಾಡುವಾಗ ಪದಗಳ ಮೇಲಿನ ಒತ್ತು ಸಂವಹನದ ದೃಷ್ಟಿಯಿಂದ ಮುಖ್ಯ. ಏಕೆಂದರೆ ಇವು ಅರ್ಥವನ್ನೇ ಬದಲಾಯಿಸಬಹುದು. ಉದಾಹರಣೆಗೆ ‘ನಾನು ನಾಳೆ ಬೆಂಗಳೂರಿಗೆ ಹೋಗುತ್ತೇನೆ’ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಇಲ್ಲಿ ಒತ್ತು ‘ನಾನು’ ಪದದ ಮೇಲೆ ಬಿದ್ದರೆ, ನಾನು ಹೋಗುವುದು ಬೇರೆಯವರಲ್ಲ, ಎಂತಲೂ ‘ನಾಳೆ’ ಪದದ ಮೇಲೆ ಒತ್ತು ಇದ್ದಾಗ ‘ಬೇರೆಯ ದಿನವಲ್ಲ’ ‘ನಾಳೆಯೇ’ ಎಂತಲೂ ಅರ್ಥಬರುತ್ತದೆ. ಹೀಗೆ ಒತ್ತು ಸಂವಹನದ ಮೇಲೆ ಪ್ರಭಾವ ಬೀರುತ್ತದೆ.

ಕೆಲವು ಧ್ವನಿ ಸಂಕೇತಗಳು ವ್ಯಕ್ತಿಗಳ ನಡುವಣ ಪರಸ್ಪರ ಮಾತುಕತೆಯ ಮೇಲೆ ಪರಿಣಾಮ ಬೀರುತ್ತವೆ. ಯಾರು, ಯಾವಾಗ ಮಾತನಾಡಬೇಕು, ಮಾತು ಯಾವಾಗ ಕೊನೆಗೊಳ್ಳುತ್ತದೆ ಎನ್ನುವ ಸೂಚನೆ ಮಾತಾಡುತ್ತಿರು ವಾಗಲೇ ದೊರೆಯುತ್ತದೆ. ಮಾತು ನಿಲ್ಲಿಸುವಾಗ ಸಾಮಾನ್ಯವಾಗಿ ಧ್ವನಿ ಇಳಿದಿರುತ್ತದೆ. ಇದು ಇನ್ನೊಬ್ಬರಿಗೆ ಮಾತು ಪ್ರಾರಂಭಿಸಲು ಸಂಕೇತ. ಅದಿಲ್ಲದೆ ಕೊನೆಯಲ್ಲಿ ಏರುಧ್ವನಿಯೇ ಇದ್ದರೆ ಮಾತು ಇನ್ನೂ ಉಳಿದಿದ್ದು ಅದು ಮುಂದುವರಿಯುವ ಸೂಚನೆ ನೀಡುತ್ತದೆ. ಅಥವಾ ಪ್ರಶ್ನೆಯಿಂದ ಕೊನೆಗೊಂಡಿರುತ್ತದೆ. ಇಲ್ಲೆಲ್ಲಾ ಧ್ವನಿಯ ಏರಿಳಿತ ಮಾತುಕತೆಯ ನಿಯಂತ್ರಣದ ಕೆಲಸ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಆಆ …… ಮ್‌ಮ್…….. ಇತ್ಯಾದಿಗಳನ್ನು ಬಳಸಿಕೊಂಡು ಮಾತನ್ನು ತಾನೇ ಮುಂದುವರೆಸುವ ಸಂಕೇತವನ್ನು ನೀಡುವುದು ತಿಳಿಯುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ಮಾತನ್ನು ಒಂದು ನಿರ್ದಿಷ್ಟ ವೇಗದಲ್ಲಿ ಆಡುತ್ತಿರುತ್ತಾನೆ. ವೇಗ ಹೆಚ್ಚಾಗುವುದು, ಕಡಿಮೆಯಾಗುವುದು. ಹೆಚ್ಚಿನದನ್ನು ಸೂಚಿಸುತ್ತದೆ. ವ್ಯಕ್ತಿ ಸುಳ್ಳು ಹೇಳುತ್ತಿರಬಹುದು ಅಥವಾ ಉದ್ವೇಗಕ್ಕೆ ಒಳಗಾಗಿರಬಹುದು. ಅದೂ ಅಲ್ಲದೆ ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾತಾಡುವುದು, ಮಾತಾಡದೇ ಇರುವುದು ಅಥವಾ ಮಾತಾಡುವಾಗ ಹೆಚ್ಚು ತಪ್ಪುಗಳನ್ನು ಮಾಡುವುದೂ ಸಹಾ ವ್ಯಕ್ತಿ ಬಗ್ಗೆ ಅನುಮಾನಕ್ಕೆಡೆಯುಂಟು ಮಾಡಬಹುದು. ಉದ್ವೇಗಕ್ಕೆ ಒಳಗಾದರೂ ಮಾತು ಬಿಟ್ಟು ಬಿಟ್ಟು ಬರಬಹುದು. ವೇಗ ಅತಿಯಾಗಬಹುದು. ಎರಡೂ ಸಂದರ್ಭಗಳಲ್ಲಿಯೂ ಇನ್ನಿತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸುಳ್ಳು ಹೇಳುತ್ತಿರುವವನು ಮಾತಾಡುತ್ತಿರುತ್ತಾನೆಯೇ ಹೊರತು ಭಾವಾಭಿನಯ ಮತ್ತು ದೃಷ್ಟಿ ಸಂಪರ್ಕ ಇರುವುದಿಲ್ಲ, ಅಥವಾ ಕಡಿಮೆ. ಮುಖವೂ ಸಹಾ ಅವನ ಮನಸ್ಸನ್ನು ತೋರ್ಪಡಿಸಬಹುದು.

ಮೌನ ಅಶಾಬ್ದಿಕ ಸಂವಹನದ ದೃಷ್ಟಿಯಿಂದ ಬಹುಮುಖ್ಯ. ಏಕೆಂದರೆ, ಮೌನ ಅನೇಕ ಸಂದೇಶಗಳನ್ನು ನೀಡಬಲ್ಲದು. ಸಾಮಾಜಿಕ ಹಂತದಲ್ಲಿ ಸಾಮಾನ್ಯವಾಗಿ ಸಮಾಜದ ಉನ್ನತ ಸ್ಥಾನದಲ್ಲಿರುವವರ ಸಂದೇಶಗಳು (ಗುರುಗಳು, ಆಚಾರ್ಯರು) ಹೆಚ್ಚಾಗಿ ಮೌನದಿಂದಲೇ ಬರುತ್ತವೆ. ಕೇವಲ ಕೈಗಳ ಬಳಕೆ, ತಲೆ ಕುಣಿಸುವುದು ಇತ್ಯಾದಿಗಳಿಂದ ಹೇಳಬೇಕಾದುದನ್ನು ಮುಗಿಸುತ್ತಾರೆ.

ಸಾಮಾನ್ಯವಾಗಿ ತೀವ್ರವಾದ ಮನೋಭಾವವನ್ನು ಮೌನದಿಂದಲೇ ವ್ಯಕ್ತಪಡಿಸಲಾಗುವುದು. ಭಾವನೆಯಿಂದ ಭಾರವಾದ ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಹಗುರ. ಅಲ್ಲೆಲ್ಲಾ ಮಾತು ಸಾಧ್ಯವಾಗುವುದಿಲ್ಲ. ಏಕೆಂದರೆ ಮನಸ್ಸಿನ ಉತ್ಕಟ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಮೌನದಲ್ಲಿದೆ. ಕಿರಿಕಿರಿ ಉಂಟಾದ/ಉಂಟು ಮಾಡಬಹುದಾದ ಸಂದರ್ಭ ಗಳಲ್ಲಿಯೂ ಮೌನ ಕಾರ್ಯ ನಿರ್ವಹಿಸುತ್ತದೆ. ಮೌನ ಕೆಲವು ಬಾರಿ ಸಮ್ಮತಿ ಸೂಚಿಸಿದರೆ, ಕೆಲವು ಬಾರಿ ಅಸಮ್ಮತಿಯನ್ನು ಸೂಚಿಸುವ ಸಂಕೇತ ವಾಗಬಹುದು. ಪ್ರಿಯ ಪ್ರೇಯಸಿಯರ ನಡುವೆ ಮೌನ ಮಾತು ಮಾಡದ ಕಾರ್ಯವನ್ನು ಮಾಡುತ್ತದೆ. ಮೌನ ವಿರೋಧಿಗಳನ್ನು ಬಗ್ಗು ಬಡಿಯುವ ತಂತ್ರವಾಗಿಯೂ ಬಳಸಲಾಗುತ್ತದೆ. ಎಷ್ಟೋ ಪ್ರಮಾಣದ ವಿವರಣೆಯಿಂದ ಒಪ್ಪಿಸಲು ಸಾಧ್ಯವಾಗದೇ ಇದ್ದಾಗ ಮೌನವನ್ನು ಆಶ್ರಯಿಸಲಾಗುತ್ತದೆ. ಏಕೆಂದರೆ ಮೌನಕ್ಕೆ ಶಮನ ಮಾಡುವ ಗುಣವಿದೆ.

ನಮ್ಮ ಬೀದಿಗೆ ಪಕ್ಕದ ಬೀದಿಯ ನಾಯಿಯೊಂದು ಬಂದರೆ ನಮ್ಮ ಬೀದಿಯ ನಾಯಿಗಳೆಲ್ಲಾ ಅದರ ಮೇಲೆ ಕಾದಾಡಿ, ಅದನ್ನು ಬೀದಿಯಿಂದ ಓಡಿಸುತ್ತವೆ. ಏಕೆಂದರೆ ಪ್ರತಿಯೊಂದು ಪ್ರಾಣಿ/ಪಕ್ಷಿಯಲ್ಲೂ ತಮ್ಮದೇ ಆದ ಪ್ರದೇಶವನ್ನು ತಮ್ಮದೆಂದು ಗುರುತಿಸಿಕೊಂಡು ಅದರ ಎಲ್ಲೆಯನ್ನು ರಕ್ಷಿಸಿಕೊಂಡು ಬರುವ ಗುಣ ಇದೆ. ಅದರ ಉಲ್ಲಂಘನೆಯಾದಾಗ ಕಾದಾಟ ಅನಿವಾರ್ಯವಾಗುತ್ತದೆ. ಮಾನವರೂ ಸಹಾ ಇದಕ್ಕೆ ಹೊರತಲ್ಲ. ತನಗೆ ಸೇರಿದ ಪ್ರದೇಶವನ್ನು ರಕ್ಷಿಸಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಂದರೆ ವ್ಯಕ್ತಿಗಳು ತನ್ನ ಸುತ್ತಲಿನ ಸ್ಥಳವನ್ನು ತಮ್ಮದ ಆದ ರೀತಿಯಲ್ಲಿ ಯೋಜಿಸಿ ಉಪಯೋಗಿಸಿ ಕೊಳ್ಳುತ್ತಾರೆ. ಒಂದು ವೇಳೆ ಇದಕ್ಕೆ ತೊಂದರೆ ಯಾದಾಗ ಘರ್ಷಣೆ, ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ.

ವ್ಯಕ್ತಿ ವ್ಯಕ್ತಿಗಳು ತಮ್ಮ ನಡುವೆ ತಮ್ಮದೇ ಆದ ರೀತಿಯಲ್ಲಿ ನಡುವಿನ ಅಂತರವನ್ನು ನಿರ್ಮಿಸಿಕೊಳ್ಳುತ್ತಾರೆ. ಇದು ಅಪ್ರಜ್ಞಾಪೂರ್ವಕವಾಗಿ ನಡೆಯುವ ಕೆಲಸ. ತನ್ನ ಸುತ್ತಲಿನ ಜಾಗದ ಬಳಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ, ಅವುಗಳು ನೀಡುವ ಸಂದೇಶವನ್ನು ಅಧ್ಯಯನ ಮಾಡುವುದನ್ನು ಸ್ಥಳಾಭಿವ್ಯಕ್ತಿ (ಪ್ರಾಕ್ಸಿಮಿಕ್ಸ್) ಎನ್ನುತ್ತಾರೆ.

‘ಪ್ರಾಕ್ಸಿಮಿಕ್ಸ್’ ಎಂಬ ಪದವನ್ನು ಪ್ರೊಫೆಸರ್ ಇ.ಟಿ. ಹಾಲ್ (1966)ರವರು ಮೊದಲು ಬಳಕೆಗೆ ತಂದರು. ಅವರ ಪ್ರಕಾರ ಪ್ರಾಕ್ಸಿಮಿಕ್ಸ್ ಮನುಷ್ಯನ ಸಂಸ್ಕೃತಿಯಲ್ಲಿ ಹುದುಗಿರುವಂಥದು ಮತ್ತು ವ್ಯಕ್ತಿಗಳು ತಮಗೆ ಅರಿವಿಲ್ಲದೆಯೇ ಇದರ ಬಳಕೆಯನ್ನು ಮಾಡುತ್ತಿರುತ್ತಾರೆ. ಇದರ ಅಧ್ಯಯನದ ಗುರಿ ಸಮಾಜದಲ್ಲಿ ಇದರ ಪಾತ್ರವನ್ನು ಗುರ್ತಿಸುವುದೇ ಆಗಿದೆ. ಇದು ಸಂವಹನ ಕ್ರಿಯೆಯಲ್ಲಿ ಸಹಕಾರಿಯಾಗಿದೆ. ಇಬ್ಬರು ವ್ಯಕ್ತಿಗಳ ನಡುವಿನ ಅಂತರ ದೂರದಿಂದ ಅವರು ಸಂಬಂಧವನ್ನು ಅಳೆಯಬಹುದು. ಹತ್ತಿರದಲ್ಲೇ ಇದ್ದರೂ ಏರುಧ್ವನಿಯಲ್ಲಿ ಮಾತಾಡುತ್ತಿರುವುದು; ಪಕ್ಕ ಪಕ್ಕದಲ್ಲೇ ಇದ್ದರೂ ಮುಖ ಬೇರೆಡೆಗೆ ತಿರುಗಿಸುವುದು; ಎಲ್ಲವೂ ಸಂವಹನಕ್ಕೆ ಪೂರಕ ಮಾಹಿತಿಯನ್ನು ಒದಗಿಸಬಲ್ಲದು.

ಹಾಲ್‌ರವರು ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರವನ್ನು ಸಲುಗೆಯ ನಿಕಟವಲಯ, ವೈಯುಕ್ತಿಕ, ಸಾಮಾಜಿಕ ಮತ್ತು ಸಾರ್ವಜನಿಕ ಎಂದು ನಾಲ್ಕು ರೀತಿಯದೆಂದು ಹೇಳುತ್ತಾರೆ. ಸಲುಗೆಯ ವಲಯದಲ್ಲಿ ಪಿಸುಮಾತು ಸಾಧ್ಯ. ವೈಯುಕ್ತಿಕ ವಲಯದಲ್ಲಿ ಇನ್ನೊಬ್ಬರನ್ನು ಮುಟ್ಟುವಷ್ಟು ದೂರ, ಸಾಮಾಜಿಕ ವಲಯದಲ್ಲಿ ಸುಮಾರು 9 ರಿಂದ 12 ಅಡಿ ದೂರ ಇಲ್ಲೆಲ್ಲೂ ಮುಟ್ಟುವುದು ಸಾಧ್ಯವಿಲ್ಲ. ಸಾರ್ವಜನಿಕ ವಲಯ 12 ಅಡಿ ನಂತರದ ದೂರ, ಸಾರ್ವಜನಿಕ ಸಭೆ, ಸಮಾರಂಭ ಇತ್ಯಾದಿ.

ಸ್ಥಳಾಭಿವ್ಯಕ್ತಿ ಸಂವಹನ ದೃಷ್ಟಿಯಿಂದ ವ್ಯಕ್ತಿಯ ಇಷ್ಟಾನಿಷ್ಟ. ಸಾಮಾಜಿಕ ಸ್ಥಾನಮಾನ, ಸಾಮಾಜಿಕ ನಿಬಂಧನೆಗಳನ್ನು ಸಂಕೇತಿಸುತ್ತದೆ.

ಜಾತಿ ಪ್ರಧಾನವಾದ ನಮ್ಮ ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರವನ್ನು ಜಾತಿ ನಿಯಂತ್ರಿಸುತ್ತದೆ. ಈಗಲೂ ನಮ್ಮ ಹಳ್ಳಿಗಳ ವಸತಿ ವ್ಯವಸ್ಥೆಯನ್ನು ಉದಾಹರಣೆಯನ್ನಾಗಿ ನೋಡಬಹುದು. ಪ್ರತಿಯೊಂದು ಜಾತಿಯವರೂ ಹಳ್ಳಿಯಲ್ಲಿ ಪ್ರತ್ಯೇಕವಾದ ವಲಯಗಳನ್ನು ರೂಪಿಸಿಕೊಂಡು ವಾಸಿಸುತ್ತಾರೆ. ನೀರಿಗೆ / ದೇವಸ್ಥಾನಕ್ಕೆ ಸಮೀಪವಾಗಿ ಉತ್ತಮ ಜಾತಿಗಳ ಬೀದಿಗಳು ಇರುತ್ತವೆ. ಬ್ರಾಹ್ಮಣರ ಬೀದಿಗಳಿಗೆ ಸಮೀಪವಾಗಿ ಇತರ ಬ್ರಾಹ್ಮಣೇತರರ ಬೀದಿಗಳೂ ಆ ನಂತರ ಅಸ್ಪೃಶ್ಯ ಜನಾಂಗದವರ ಬೀದಿಗಳೂ ಇರುವಂತೆ ರೂಪಿಸಿರುತ್ತಾರೆ. ಅಂದರೆ ಈ ಭೌಗೋಳಿಕ ಅಂತರವನ್ನು ಗಮನಿಸಿ ಜಾತಿಯ ಶ್ರೇಣಿ ವ್ಯವಸ್ಥೆಯನ್ನು ಗುರುತಿಸಬಹುದು. ಆದರೆ ಇತ್ತೀಚೆಗೆ ಈ ಪ್ರವೃತ್ತಿ, ಅಂದರೆ ಬೀದಿ ವ್ಯವಸ್ಥೆ ಆಧುನಿಕ ಪಟ್ಟಣಗಳಲ್ಲಿ ಕಂಡುಬರುವುದಿಲ್ಲ.

ಪರಸ್ಪರ ಚಟುವಟಿಕೆಯಲ್ಲಿ ಈ ಜಾತಿ ವ್ಯವಸ್ಥೆ ವ್ಯಕ್ತಿಗಳ ನಡುವಿನ ಅಂತರ ಮತ್ತು ಮುಟ್ಟುವಿಕೆಯಿಂದ ಗೋಚರವಾಗುತ್ತದೆ. ಬ್ರಾಹ್ಮಣರು ಎಲ್ಲಾ ಜಾತಿಗಳವರನ್ನೂ ಬ್ರಾಹ್ಮಣೇತರರು ಅಸ್ಪೃಶ್ಯರನ್ನು ಮುಟ್ಟುವುದರಿಂದ ದೂರವಿರುವುದು ಸಾಮಾಜಿಕವಾಗಿ ಕಂಡುಬರುತ್ತಿತ್ತು. ಒಂದೇ  ಜಾತಿಯಲ್ಲಿಯೂ ಇರುವ ಈ ಅಂತರ ಕೆಲವು ಸಂದರ್ಭಗಳಲ್ಲಿ ಮೇಲೇಳುತ್ತದೆ. ಒಂದೇ ಮನೆಯಲ್ಲಿಯೂ ಸಹಾ ಕೆಲವು ಕಾರಣಗಳಿಗಾಗಿ (ದೇವರ ಪೂಜೆ, ವ್ರತಾಚರಣೆ ಇತ್ಯಾದಿ) ಪರಸ್ಪರರ ನಡುವೆ ಅಂತರ ನಿರ್ಮಾಣಗೊಳ್ಳುತ್ತದೆ.

ಮಾತಿನ ಜೋರು ಸಹಾ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರವನ್ನು ಸೂಚಿಸುತ್ತದೆ. ಇಬ್ಬರು ವ್ಯಕ್ತಿಗಳ ನಡುವಿನ ದೂರ, ಸಂಬಂಧ ಮತ್ತು ವಿಷಯ ಇತ್ಯಾದಿಗಳ ಮೇಲೆ ಮಾತಿನ ಜೋರು ಅವಲಂಬಿಸಿರುತ್ತದೆ. ಉನ್ನತ ಸ್ಥಾನದಲ್ಲಿರುವವರ ಮಾತು ಅಧಿಕಾರಯುತವಾಗಿದ್ದು ಅದು ಎದುರಿನ ವ್ಯಕ್ತಿಯ ಸ್ಥಾನವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ದೂರದಲ್ಲಿದ್ದಾಗ ಮಾತ್ರ ಜೋರಾಗಿರಬೇಕಾದ ಧ್ವನಿಯು ಒಮ್ಮೊಮ್ಮೆ ಹತ್ತಿರದ ವ್ಯಕ್ತಿಯೊಡನೆ ಸಂಭಾಷಿಸಲು ಕೂಡಾ ಜೋರಾಗುವುದುಂಟು. ಇಲ್ಲೆಲ್ಲಾ ಬೇಕೆಂದೇ ಅಂತರವನ್ನು ಸೃಷ್ಟಿಸಿಕೊಳ್ಳಲು ಈ ಮಾರ್ಗವನ್ನು ಅನುಸರಿಸಲಾಗುತ್ತದೆ. ಇನ್ನು ಕೆಲವು ವೇಳೆ ಸುಮಾರು ದೂರದಲ್ಲಿದ್ದರೂ ಸಹಾ ಮಾತನ್ನು ಮೆದುವಾಗಿ ಆಡುವುದು ಹತ್ತಿರದ ಸಂಬಂಧವನ್ನು ಸೂಚಿಸುತ್ತದೆ. ವಿಷಯ ಗುಟ್ಟಿನದಾದಾಗ ಅಂತರವನ್ನು ಕಡಿಮೆ ಮಾಡಿಕೊಳ್ಳ ಲಾಗುವುದು. ಇಲ್ಲೆಲ್ಲಾ ಪಿಸುಮಾತು ಬರುತ್ತದೆ. ಅಂದರೆ, ಮಾತಾಡುವವರ, ಕೇಳಿಸಿಕೊಳ್ಳುವವರ ನಡುವಿನ ಸಂಬಂಧ, ಹತ್ತಿರದ್ದಾಗಿರುತ್ತದೆ. ಅಂದಮೇಲೆ ಮಾತಿನ ಜೋರು ಸಂವಹನ ಕ್ರಿಯೆಯಲ್ಲಿ ಇಲ್ಲದ ದೂರವನ್ನು ಸೃಷ್ಟಿಸಿಕೊಳ್ಳಬಹುದು ಅಥವಾ ದೂರವಿದ್ದರೂ ತೋರ್ಪಡಿಸಿಕೊಳ್ಳದೇ ಹೋಗಬಹುದು.

ವೈಯುಕ್ತಿಕವಾಗಿ ನಾವು ಕುಳಿತುಕೊಳ್ಳಲು ಆಯ್ಕೆ ಮಾಡಿಕೊಳ್ಳುವ ಸ್ಥಳವೂ ಸಹಾ ಅನೇಕ ಸಂಕೇತಗಳನ್ನು ನೀಡಬಲ್ಲದು. ಅಂತರ್ಮುಖಿಗಳು ಸಾಮಾನ್ಯವಾಗಿ ಯಾವುದಾದರೊಂದು ಮೂಲೆಯನ್ನು ಬಯಸುತ್ತಾರೆ. ಅಂದರೆ ಬೇರೆಯವರಿಂದ ದೂರವಿರಬಯಸುತ್ತಾರೆ. ಇಲ್ಲಿ ಆತ್ಮಸ್ಥೈರ್ಯವಿಲ್ಲ ದಿರುವುದು, ಅಪರಾಧಿ ಮನೋಭಾವ, ಕೀಳರಿಮೆಯನ್ನು ಸೂಚಿಸಬಹುದು. ಮೇಜಿನ ಎದುರು-ಬದುರು ಕುಳಿತುಕೊಳ್ಳುವುದು ಅಕ್ಕಪಕ್ಕ ಕುಳಿತುಕೊಳ್ಳುವುದು ಸಹಕಾರಿ ಮನೋಭಾವ ಎಂಬ ಅಭಿಪ್ರಾಯವಿದೆ.

ನಮ್ಮ ದೃಷ್ಟಿಯೂ ಸಹಾ ಅಂತರವನ್ನು ಸೃಷ್ಟಿಸಬಲ್ಲದು ಮತ್ತು ನಿವಾರಿಸ ಬಲ್ಲದು. ‘ನನ್ನನ್ನು ಕಂಡೂ ಕಾಣದೆ ಹಾಗೆ ಹೋದ’ ಎಂಬ ಮಾತನ್ನು ನೋಡಬಹುದು. ಇಲ್ಲಿ ದೃಷ್ಟಿ ಇಬ್ಬರ ನಡುವಿನ ಅಂತರವನ್ನು ಸೂಚಿಸುತ್ತದೆ. ವ್ಯಕ್ತಿಗಳು ತಮಗೆ ಇಷ್ಟವಿಲ್ಲದ ಕಡೆ ಬೇಕೆಂದೇ ಅಂತರವನ್ನು ಸೃಷ್ಟಿಸುತ್ತಾರೆ. ಇದು ಇಬ್ಬರ ನಡುವಿನ ಸಂಬಂಧವನ್ನು ಸೂಚಿಸುವುದು. ಇನ್ನೊಂದು ಕಡೆ ಎಲ್ಲೋ ದೂರ ಇರುವ, ಗುಂಪಿನ ನಡುವೆ ಇರುವವರನ್ನು ಗುರ್ತಿಸುವುದು. ಇಲ್ಲಿ ಇಬ್ಬರ ನಡುವೆ ಇರುವ ದೂರವನ್ನು ನಿವಾರಿಸಿಕೊಳ್ಳುವ ಕ್ರಿಯೆಯನ್ನು ಕಾಣಬಹುದು. ಇಲ್ಲಿ ಕೈ ಬೀಸುವುದು ಅಥವಾ ನಮಸ್ಕರಿಸುವುದರ ಮೂಲಕ ಗುರ್ತಿಸುವ ಕ್ರಿಯೆ ನಡೆಯುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ಸಹಾ ತನ್ನ ಸುತ್ತಲಿನ ಸ್ವಲ್ಪ ಜಾಗವನ್ನು ತನ್ನ ವೈಯಕ್ತಿಕ ಎಂದು ಭಾವಿಸುತ್ತಾನೆ. ಅದರ ಉಲ್ಲಂಘನೆಯಾಗುವುದನ್ನು ಸಹಿಸುವುದಿಲ್ಲ. ಬೇರೆಯವರು ಆ ಸ್ಥಳಕ್ಕೆ ಹೋಗಬೇಕಾದರೆ ಅನುಮತಿ ಬೇಕಾಗುತ್ತದೆ. ಹಾಗಿಲ್ಲದೆ ಹೋದರೆ ಅಹಿತಕರ ಘಟನೆಗಳು  ಸಂಭವಿಸ ಬಹುದು. ಕೆಲವು ಸಂದರ್ಭಗಳಲ್ಲಿ ಈ ನಿಯಮಗಳು ಪಾಲನೆ ಯಾಗದೆಯೂ ಹೋಗಬಹುದು. ಬಸ್ಸು ಅಥವಾ ಜನಸಂದಣಿ ಇರುವ ಕಡೆ ಇಂತಹ ಅಂತರವನ್ನು ಕಾಪಾಡುವುದು ಸಾಧ್ಯವಾಗುವುದಿಲ್ಲ. ಇಲ್ಲೆಲ್ಲಾ ಹತ್ತಿರವಿದ್ದರೂ ಸಹಾ ಪರಸ್ಪರರ ಶರೀರ ಸೋಂಕದಂತೆ ನೋಡಿಕೊಳ್ಳಲಾಗುವುದು.

ಗಂಡಸರು ತಮ್ಮ ತಮ್ಮಲ್ಲೇ ಹತ್ತಿರ ಹತ್ತಿರ ಇರಲು ಇಚ್ಛಿಸುವುದಿಲ್ಲ. ನಡುವೆ ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಅಂದರೆ ಶರೀರದ ಅಂಗಗಳು ಸೋಕುವುದು, ಉಸಿರು, ದೇಹದ ಶಾಖ ಇವುಗಳಿಂದ ದೂರ ಇರಲು ಇಚ್ಛಿಸುತ್ತಾರೆ. ಹೆಂಗಸರಲ್ಲಿ ಇದು ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಹೆಂಗಸರು ತಮ್ಮ ಮತ್ತು ಗಂಡಸರ ನಡುವೆ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆ. ಮಕ್ಕಳು ಮಕ್ಕಳ ನಡುವೆ ಅಂತರ ತೀರಾ ಕಡಿಮೆ.

ಹೀಗೆ ವ್ಯಕ್ತಿಯ ದಿನನಿತ್ಯದ ಚಟುಟಿಕೆಗಳಲ್ಲಿ ಅಶಾಬ್ದಿಕ ಸಂವಹನದ ಅಂಗವಾದ ಅಂತರ-ಸಾಮಿಪ್ಯ ಅನೇಕ ಸಂದೇಶಗಳನ್ನು ನೀಡುತ್ತಿರುತ್ತದೆ. ಕೆಲವು ಅಂತಸ್ತು, ಗೌರವಕ್ಕೆ ಸಂಬಂಧಿಸಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ವೈಯುಕ್ತಿಕ ಮಾಹಿತಿಯನ್ನು ನೀಡುತ್ತದೆ.

ಚಿಹ್ನೆ

ಮೇಲೆ ಹೇಳಿದ ಎಲ್ಲಾ ಅಂಶಗಳೂ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಅವನ ನಡುವಳಿಕೆಗಳ ಮೂಲಕ ಕಂಡುಬರುವುದಾದರೆ, ಇನ್ನು ಕೆಲವು ಚಿಹ್ನೆಗಳು ಮಾತಾಡುತ್ತವೆ / ಸಂದೇಶ ನೀಡುತ್ತವೆ. ಅಂದರೆ ಸಂವಹನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಉದಾಹರಣೆಗೆ ವಾಹನ ಚಾಲನೆಯ ಚಿಹ್ನೆ ಗಳಾದ ಕೆಂಪು, ಹಸಿರು, ಹಳದಿ ದೀಪಗಳು. ಇವು ಚಾಲಕರಿಗೆ, ಪಾದಚಾರಿಗಳಿಗೆ ಸೂಚನೆ ನೀಡುವ ಸಂಕೇತಗಳಾಗಿವೆ. ಹಾಗೆಯೇ ‘ಮುಂದೆ ಕಿರಿದಾದ ಸೇತುವೆ ಇದೆ’, ‘ಆಸ್ಪತ್ರೆ ವಲಯ, ಶಬ್ದ ಮಾಡಬೇಡಿ’, ‘ತಿರುವು ಇದೆ’. ಹೀಗೆ ಇಂತಿಂತಹ ಚಿಹ್ನೆಗಳಿಗೆ, ಚಿತ್ರಕ್ಕೆ ಒಂದು ಗೊತ್ತಾದ ಅರ್ಥವನ್ನು ಮೊದಲೇ ನಿಗದಿ ಮಾಡಿರುತ್ತಾರೆ. ಇವುಗಳೆಲ್ಲವೂ ಸಹಾ ಅಶಾಬ್ದಿಕ ಸಂವಹನದ ಅಂಶಗಳೇ ಆಗಿವೆ. ಅದೇ ರೀತಿಯಲ್ಲಿ ಕೆಲವು ವರ್ಗದಲ್ಲಿನ ಜನರಲ್ಲಿನ ಹಣೆ ಮೇಲಿನ ನಾಮ, ವಿಭೂತಿ, ಮುದ್ರೆ ಇತ್ಯಾದಿಗಳು ವೈಷ್ಣವರು, ಶೈವ / ವೀರ ಶೈವರು, ಮಾಧ್ವರು ಎಂಬುದನ್ನು ತಿಳಿಸಿದರೆ, ಕಟ್ಟಡ ಮಂದಿರಗಳು ಹಿಂದು, ಮುಸ್ಲಿಂ ಮತ್ತು ಕ್ರೈಸ್ತರ ದೇವತಾ ಸ್ಥಳ ಅಥವಾ ಪ್ರಾರ್ಥನಾ ಸ್ಥಳಗಳೆಂದು ಗುರ್ತಿಸುವ ಸಂಕೇತಗಳಾಗಿ ಕೆಲಸ ಮಾಡುತ್ತವೆ. ಇಲ್ಲೆಲ್ಲೂ ಮಾತಿನ ಬಳಕೆಯಾಗಿಲ್ಲ. ಈ ಚಿಹ್ನೆಗಳೇ ಮಾಹಿತಿ ನೀಡಿವೆ. ಹಾಗೆಯೇ ಬಣ್ಣಗಳು, ಬಾವುಟಗಳು ಸಹಾ ಅನೇಕ ಸಂಕೇತಗಳನ್ನು ನೀಡಬಲ್ಲವು. ನಮ್ಮ ತ್ರಿವರ್ಣ ಧ್ವಜದಲ್ಲಿನ ಬಿಳಿಯ ಬಣ್ಣ ಶಾಂತಿಯನ್ನು ಸಾರಿದರೆ, ಕೇಸರಿ ಬಣ್ಣ ತ್ಯಾಗಕ್ಕೂ ಹಸಿರು ಸಮೃದ್ದಿಗೂ ಸಂಕೇತಗಳಾಗಿವೆ. ಬಿಳಿ ಬಣ್ಣ ನೈರ್ಮಲ್ಯವನ್ನು ಸಂಕೇತಿಸುತ್ತದೆ. ಅಷ್ಟೇ ಅಲ್ಲದೆ ಬಿಳಿಯ ವಸ್ತ್ರ ಶೋಕ ಸೂಚಕ ಸಂದರ್ಭದಲ್ಲಿ ಬಳಕೆಯಾಗುತ್ತದೆ.

ಮೇಲೆ ಹೇಳಿದ ಅಂಶಗಳು ಕೇವಲ ಉದಾಹರಣೆಗಳು ಮಾತ್ರ. ಮಾನವನ ನಡುವಳಿಕೆಗಳ ಅಧ್ಯಯನದ ಮೂಲಕ ಇನ್ನೂ ಹೆಚ್ಚು ಅಂಶಗಳು ಹೊರಬರಬಹುದು. ಕನ್ನಡದಲ್ಲಿ ಈ ಬಗೆಯ ಅಧ್ಯಯನಗಳು ಬೆಳೆದು ಬಂದಿಲ್ಲ. ಇತ್ತೀಚೆಗಷ್ಟೇ ಈ ಕ್ಷೇತ್ರದಲ್ಲಿ ಅಧ್ಯಯನ ನಡೆದಿದೆ.