ಮಥುರಾದಿಂದ ಕಲ್ಕತ್ತಾಗೆ ಹೊರಟಿದೆ ಒಂದು ರೈಲು  ಬಂಡಿ. ಅದರ ಬೋಗಿಯೊಂದರ ಕಿಟಕಿಯ ಬಲಿ ಹನ್ನೆರಡು ವರ್ಷದ ಒಬ್ಬ ಬಾಲಕ ಕುಳಿತು. ದೂರ ದಿಗಂತದತ್ತ ಗಮನಿಸುತ್ತಿದ್ದಾನೆ. ರೈಲು ಮುಂದೆ ಓಡಿದಂತೆಲ್ಲಾ ನಗುನಗುತ್ತಾ ಗಿಡಮರಗಳು ಹಿಂದೆ ಸುರಿಯುತ್ತಿವೆ.

ಪ್ರಕೃತಿ ಸೌಂದರ್ಯದತ್ತ ಬೆರಗಾಗಿ ನೋಡುತ್ತಿದ್ದ ಬಾಲಕ ಥಟ್ಟನೆ ಬೆಚ್ಚಿ, ಕಣ್ಣಗಲಿಸಿ ನೋಡುವಂತಾಗಿದ್ದು ಮೊಘಲ್‌ಸಾರಾ ರೈಲು ನಿಲ್ದಾಣದಲ್ಲಿ, ಆ ನಿಲ್ದಾಣದಲ್ಲಿ ಗಾಡಿ ಬಂದು ನಿಂತಾಗ ಅತ್ತಕಡೆ ಮತ್ತೊಂದು ಗಾಡಿ ಬಂದು ನಿಂತಿದೆ. ಅದರ ಬೋಗಿಯೊಂದರಲ್ಲಿ ಗುರುಗಳು ಕುಳಿತ್ತಾರೆ !

ಬಂಗಾಳದ ಶಾಲಾ ಬಾಲಕರ ಮನಸ್ಸಿನ ಮೇಲೆ ತಮ್ಮ ಪ್ರೀತಿಯ ಮುದ್ರೆ ಒತ್ತಿದ್ದ ಈಶ್ವರಚಂದ್ರ ವಿದ್ಯಾಸಾಗರರೇ ಆ ಗುರುಗುಳು. ತನಗೆ ಪಾಠ ಹೇಳಿಕೊಟ್ಟ ಗುರುಗಳಲ್ಲವಾದರೂ ಅವರ ಹಿರಿಮೆಯನ್ನು ಕೇಳಿ ಅರಿತಿದ್ದ ಆ ಬಾಲಕ ತನ್ನ

ರೈಲುಗಾಡಿಯಿಂದ ಇಳಿದು ಆ ಕಡೆಗೆ ಓಡಿದ. ಈಶ್ವರ ಚಂದ್ರ ವಿದ್ಯಾಸಾಗರದ ಪಾದಗಳೆರಡನ್ನೂ ಮುಟ್ಟಿ ಭಕ್ತಿಯಿಂದ ನಮಸ್ಕರಿಸಿದ.

ವಿದ್ಯಾಸಾಗರರು ಹುಡುಗನನ್ನು ಮೇಲೆತ್ತಿ ಆಲಂಗಿಸಿಕೊಂಡರು. “ಯಾರು ಮರಿ ನೀನು?” ಎಂದರು.

“ಗಂಗಾಪ್ರಸಾದ್ ಮುಖರ್ಜಿಯವರ ಹಿರಿಯ ಮಗ, ಗುರುಗಳೆ” ಎಂದ ಬಾಲಕ.

“ಓಹೋ ! ಕಲ್ಕತ್ತಾ ಡಾಕ್ಟರರ ಮಗನಾ ! ನಿನ್ನ ಹೆಸರು?”

“ಅಶುತೋಷ್ ಮುಖರ್ಜಿ, ಗುರುಗಳೆ”

ಎಲ್ಲಿಗೆ ಹೊರಟಿದ್ದಿ?”

“ಭವಾನಿಪುರದ ಚಕ್ರಭೇರಿಯಾ ಶಾಲೇಲಿ ವಿದ್ಯಾಭ್ಯಾಸ ಮಾಡ್ತಾ ಇದ್ದೆ ಗುರುಗಳೆ. ತುಂಬಾ ಕಾಯಿಲೆ ಬಿದ್ದೆ. ಹವಾ ಬದಲಾವಣೆ ಆಗಬೇಕು ಅಂದರು ವೈದ್ಯರು. ಎರಡು ವರ್ಷದ ಹಿಂದೆ ಮುಥುರಾಗೆ ಒಂದು ಕಾಯಿಲೆ ವಾಸಿ ಮಾಡಿಕೊಂಡ. ಈಗ ಮತ್ತೆ ಭವಾನಿಪುರಕ್ಕೆ ಓದೋಕೆ ಹೋಗ್ತಾ ಇದ್ದೀನಿ. ಆಶೀರ್ವಾದ ಮಾಡಿ ಗುರುಗಳೆ” ಎಂದು ಮತ್ತೊಮ್ಮೆ ಅವರ ಪಾದಮುಟ್ಟಿ ನಮಸ್ಕರಿಸಿ ತನ್ನ ರೈಲುಬಂಡಿಯತ್ತ ಓಡಿದ.

“ಚೂಟಿ ಹುಡುಗ, ಹಿರಿಯರನ್ನು ಕಂಡರೆ ಬಹಳ ಭಕ್ತಿ” ಎಂದುಕೊಂಡರು ವಿದ್ಯಾಸಾಗರರು.

ಈ ಚೂಟಿ ಹುಡುಗನ ಭೇಟಿ ಮತ್ತೆ ಕೆಲವು ದಿನಗಳ ಅನಂತರ ಆಗಿದ್ದು ಒಂದು ಪುಸ್ತಕದ ಅಂಗಡಿಯಲ್ಲಿ, ಆಗ ವಿದ್ಯಾಸಾಗರರು ಅಶುತೋಷನನ್ನು ಕ್ರೂಸೋ ಪುಸ್ತಕದ ಪ್ರತಿಯೊಂದನ್ನು ಉಡುಗೂರೆಯಾಗಿ ಕೊಂಡುಕೊಟ್ಟರು.

ಅಶುತೋಷ್ಗೆ ಪರಮಾನಂದ, ಪುಸ್ತಕ ಹಿಡಿದು ಮನೆ ಗೋಡಿದ. ತಂದೆಗೆ ತೋರಿಸಿದ. ರಾಬಿನ್ ಸನ್  ಕ್ರೂಸೋನ ಸಾಹಸಗಳನ್ನೆಲ್ಲಾ ಓದಿ ತಾಯಿಗೆ ಕತೆ ಹೇಳಿದ.

ಪುಸ್ತಕ ಪ್ರೇಮಿ

ಚಿಕ್ಕ ವಯಸ್ಸಿನಿಂದಲೇ ಅಶುತೋಷಗೆ ಪುಸ್ತಕಗಳೆಂದರೆ ತುಂಬಾ ಆಸೆ. ಮಗ ವಿದ್ಯಾವಂತನಾಗಬೇಕೆಂಬ ಹಂಬಲ ತಂದೆಗೆ. ಆಗಾಗ ಹೊಸ ಪುಸ್ತಕಗಳನ್ನು ತಂದೆ ಕೊಂಡು ತಂದು ಮಗನಿಗೆ ಹೊಸ ಪುಸ್ತಕಗಳನ್ನು ತಂದೆ ಕೊಂಡುತಂದು ಮಗನಿಗೆ ಕೊಡುತ್ತಿದ್ದರು. ಅವುಗಳನ್ನು ಓದಿದ ಮೇಲೆ ಅಶುತೋಷ್ ಜೋಪಾನವಾಗಿ ಶೇಖರಿಸಿಡುತ್ತಿದ್ದ.

ಇಂಗ್ಲೀಷ್ ಕತೆ, ಕವಿತೆಗಳು ಎಂದರೆ ಅಶುತೋಷ್ ಗೆ ಆಸಕ್ತಿ. ಸಂಜೆ ಶಾಲೆಯಿಂದ ಬಂದ ಮೇಲೆ ತಂದೆಯೊಡನೆ ವಾಯುವಿಹಾರ. ಆಗ ತಂದೆ ಕವಿತೆಗಳನ್ನು ರಾಗವಾಗಿ ಹಾಡುತ್ತಿದ್ದರು. ಅವನ್ನು ಅಶುತೋಷ್ ಕಲಿಯುತ್ತಿದ್ದ. ವಾಯುವಿಹಾರ ಶರೀರಕ್ಕೆ ಬಹಳ ಒಳ್ಳೆಯದು ಎಂದು ಅರಿತಿದ್ದ ಅಶುತೋಷ್, ಪ್ರತಿಸಂಜೆ ತಂದೆಯ ಜೊತೆ ಹೊರಡುತ್ತಿದ್ದ. ವಾಯುವಿಹಾರ ಮಾಡುತ್ತಾ ಎಷ್ಟೋ ಹೊಸ ಹೊಸ ವಿಚಾರಗಳನ್ನು ತಂದೆಯಿಂದ ಕೇಳಿ ತಿಳಿಯುತ್ತಿದ್ದ.

ತಂದೆಗೆ ಸರ್ಕಾರಿ ನೌಕರಿ ಬೇಕಾಗಲಿಲ್ಲ

ಒಂದು ದಿನ “ಮನೆಗೆ ಬಂದವರಿಗೆಲ್ಲ ಇಂಜಕ್ಷನ್ ಕೊಡ್ತಾ ಮನೇಲೇ ಇರೀಯಲ್ಲಪ್ಪ ನೀನು, ಯಾಕೆ ಕೆಲಸಕ್ಕೆ ಹೋಗೋಲ್ವ?” ಎಂದು ಅಶುತೋಷ್ ಪ್ರಶ್ನಿಸಿದ.

ಮಗನ ಈ ಪ್ರಶ್ನೆ ತಂದೆಗೆ ನಗೆ ತರಿಸಿತು.

ಗಂಗಾಪ್ರಸಾದ್ ಜನಿಸಿದ್ದು ಅನೇಕ ಸಂಸ್ಕೃತ ವಿದ್ವಾಂಸರಿಗ ಜನ್ಮವಿತ್ತ ಮನೆತನದಲ್ಲೆ. ಆದರೆ ಚಿಕ್ಕಂದಿನಲ್ಲಿ ಕಡುಬಡತನದ ಬೇಗೆಯಲ್ಲಿ ಬೆಳೆದರು. ವಿದ್ಯಾರ್ಥಿ ವೇತನಗಳಲ್ಲೇ ಓದು ಮುಗಿಸಿದರು. ಬ್ರಿಟಿಷ್ ಸರ್ಕಾರದ ಅಡಿಯಾಳಾಗಿ ದುಡಿಯಲು ಇಷ್ಟಪಡದೆ, ಮನೆಯಲ್ಲೆ  ವೈದ್ಯಕೀಯ ವೃತ್ತಿ ಆರಂಭಿಸಿ ಜನಪ್ರಿಯ ವೈದ್ಯರಾದರು.

“ಮನೇಲೇ ಔಷಧಾಲಯ ಇಟ್ಟಿದ್ದೇನಲ್ಲ ಮಗು, ಸ್ವಂತ ಉದ್ಯೋಗ ಅಲ್ವೆ ಅದು?”

“ಸರ್ಕಾರದ ಕೆಲಸಕ್ಕೆ ಯಾಕಪ್ಪ ಹೋಗಲಿಲ್ಲ?”

“ಹೋಗಿದ್ದೆ ಮಗು, ಅವರು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ”

“ಯಾಕಪ್ಪ?”

ಕೆಲಸಕ್ಕೆ ಬರಬೇಕಾದ್ರೆ ನಮ್ಮ ದೇಶದ ಪಂಚಿ, ಕೋಟು ಬದಲು ಅವರ ದೇಶದ ಷರಾಯಿ ಟೈ ಧರಿಸಬೇಕು ಅಂದ್ರು, ಅದು ಅಗೋಲ್ಲ ಎಂದೆ. ಅದಕ್ಕೆ ಕೆಲಸ ಕೊಡೊಲ್ಲ ಹೋಗು ಅಂದ್ರು, ನೆಟ್ಟಿಗೆ ಮನೆಗೆ ಬಂದೆ.”

“ಯಾವ ಬಟ್ಟೆ ಆದ್ರೆ ಏನಪ್ಪ? ನಮ್ಮ ಬಟ್ಟೆಗಳು ನಾವು ಯಾಕೆ ಬದಲಿಸಬೇಕಪ್ಪ?”

“ಬ್ರಿಟಿಷ್ ಸರ್ಕಾರದಲ್ಲಿ ಹಾಗೇ ನಡ್ಕೋಬೇಕು ಮಗು.”

“ಬ್ರಿಟಿಷರು ಭಾರತಕ್ಕೆ ಬಂದಿದ್ದಾರೆ ಅಂದ್ಯಲ್ಲಪ್ಪ, ಅವರು ತಾನೇ ನಮ್ಮ ಹಾಗೆ ಬಟ್ಟೆ ಹಾಕ್ಕೋಬೇಕು, ನಾವು ಅವರ ಹಾಗೆ ಷರಾಯಿ, ಟೈ ಧರಿಸಬೇಕು ಅನ್ನೋಕೆ ಅವರ್ಯಾರಪ್ಪ?” ಎಂದ ಅಶುತೋಷ್ ಸಿಟ್ಟಿನಿಂದ.

ಏನು ಉತ್ತರ ಕಡಬೇಕೋ ತಂದೆಗೆ ತೋಚಲಿಲ್ಲ.

ಬ್ರಿಟಿಷರ ಕುಟಿಲತೆಗೆಳ ವಿರುದ್ದ ಸಿಡಿದು, ರೂಸಾ ರಸ್ತೆಯಲ್ಲಿ ಒಂದು ಮನೆಕೊಂಡು ಸ್ವತಂತ್ರ ವೈದ್ಯವೃತ್ತಿ ಆರಂಭ ಮಾಡಿದ್ದರು ಗಂಗಾಪ್ರಸಾದ್. ಆ ರಸ್ತೆಯೇ ಈಗಿನ “ಅಶುತೋಷ್ ರಸ್ತೆ.” ಬ್ರಿಟಿಷ್ ಸರಕಾರದ ಅಡಿಯಾಳಾಗಿ ದುಡಿಯಲು ಧಿಕ್ಕಿರಿಸಿ ಆರಂಭಿಸಿದ ವೃತ್ತಿ ಅವರ ಜೀವನದಲ್ಲಿ ಮುಖ ತಿರುವಾಗಿ, ಹೆಸರಿನ ಜೊತೆಗೆ ಹಣವೂ ತಂದಿತು.

ಬಾಲ್ಯ ಪ್ರಾರಂಭದ ಶಿಕ್ಷಣ

ಭಾರತದ ಚರಿತ್ರೆಯಲ್ಲಿ ಹತ್ತೊಂಬತ್ತನೆಯ ಶತಮಾನ ಲೋಕಪ್ರಸಿದ್ಧರು ಜನಿಸಿದ ಕಾಲವೆನ್ನಬಹುದು. ೧೮೬೦ ರ ದಶಕದಲ್ಲಿಯೇ ರವೀಂದ್ರನಾಥ ಠಾಕೂರರು, ಮೋತೀ ಲಾಲ್‌ನೆಹರು, ಸ್ವಾಮಿವಿವೇಕಾನಂದ, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ಎಲ್ಲರೂ ಹುಟ್ಟಿದ್ದು, ಅಶುತೋಷ್‌ಮುಖರ್ಜಿಯವರು ಈ ದಶಕದಲ್ಲಿ ೧೮೬೪ರಲ್ಲಿ ಹುಟ್ಟಿದರು.

೧೮೬೨ ರಲ್ಲಿ ಇನ್ನೂ ವಿದ್ಯಾರ್ಥಿಯಾಗಿದ್ದ ಗಂಗಾ ಪ್ರಸಾದ್ ಜಗತ್‌ಕಾರಿಣೀಯ ದೇವಿಯನ್ನು ಮದುವೆಯದರು.

೧೮೬೪ ಜೂನ್‌೨೪ ರಂದು ಕಲ್ಕತ್ತದಲ್ಲಿ ಅಶುತೋಷ್‌ಮುಖರ್ಜಿ ಜನಿಸಿದರು. ಗಂಗಾಪ್ರಸಾದ ದಂಪತಿಗಳ ಆನಂದ ಹೇಳತೀರದು.

ಸಣ್ಣ ಹುಡುಗನಾಗಿದ್ದಾಗಿನಿಂದ ಅಶುತೋವ್‌ ತಾಯಿಯ ಪ್ರೀತಿಯ ಮಗ. ತಾಯಿಯನ್ನು ಕಂಡರೆ ಅಪಾರ ಭಕ್ತಿ ಗೌರವ. ಏನೇ ಕೆಲಸ ಮಾಡಬೇಕಾದರೂ ತಾಯಿಯ ಅನುಮತಿಯಿಲ್ಲದೆ ಮುನ್ನಡೆಯುತ್ತಿರಲಿಲ್ಲ.

ಕಲಕತ್ತೆಯ  ಕವಿ ಹಾಗೂ ಸಮಾಜ ಸುಧಾರಕ ಪಂಡಿತ ಶಿವನಾಥಶಾಸ್ತ್ರ, ಒರಸ್ಸಾದ ನಾಯಕರಗಿ ಅನಂತರದ ದಿನಗಳಲ್ಲಿ ಕಾಣಿಸಿಕೊಂಡ ಮಧುಸೂದನ್‌ದಾಸ್‌ಮೊದಲಾದ ಗುರುಗಳ ಕೈಯಲ್ಲಿ ಪಾಠ ಹೇಳಿಸಿಕೊಂಡ ಅಶುತೋಷರ ಜೀವನ ಸುಂದರವಾಗಿ ರೂಪುಗೊಂಡಿತು. ತಂದೆಯ ಧೈರ್ಯ ಸಾಹಸಗಳು, ಉದಾರ ಮನೋಭಾವ, ಕಷ್ಟ ಸಹಿಷ್ಣುತೆ ಹಾಗೂ ತಾಯಿಯ ಶಾಂತ ಸ್ವಭಾವ ಅಶುತೋಷ್‌ಗೆ ರಕ್ತದಲ್ಲಿ ಸೇರಿದ್ದವು.

ವಿದ್ಯಾರ್ಥಿ ಜೀವನದಲ್ಲಿ ಆಶುತೋಷ್‌ಪಡೆದ ಬಹು ಮಾನಗಳಿಗೆ ಲೆಕ್ಕವೇ ಇಲ್ಲ. ತನ್ನ ತಂದೆಯಂತೆಯೇ ಚೆನ್ನಾಗಿ ಓದಿ ವಿದ್ಯಾರ್ಥಿ ವೇತನದಲ್ಲೇ ಕಾಲ ಕಳೆದ.

ವಿಶ್ವವಿದ್ಯಾನಿಲಯಹದ ಆಕರ್ಷಣೆ       

೧೮೭೬ರಲ್ಲಿ ಕಲ್ಕತ್ತ ವಿಶ್ವವಿದ್ಯನಿಲಯದ ಒಂದು ವಿಶೇಷ ಘಟಿಕೋತ್ಸವ ಸಮಾರಂಭವೇರ್ಪಡಿಸಿತ್ತು. ವೇಲ್ಸ್ನ ರಾಜಕುಮಾರ ಎಡ್ವರ್ಡಗೆ ಗೌರವ ಪದವಿ ಪ್ರಧಾನ ಸಮಾರಂಭವದು. ಆಗಿನ್ನೂ ಅಶು ೧೨ ವರ್ಷದ ಬಾಲಕ. ಬ್ರಿಟಿಷ್‌ಸಿಂಹಾಸನದ ಮುಂಬರುವ ದೊರೆ ಎಡ್ವರ್ಡನನ್ನು  ತೋರಿಸಲು ಗಂಗಾಪ್ರಸಾದ್ ಮಗನನ್ನು ಅಲ್ಲಿಗೆ ಕರೆದೊಯ್ದಿದ್ದರು.

ದೇಶದ ಬಹುಮುಖ್ಯ ವ್ಯಕ್ತಿಗಳೆಲ್ಲ ಹಾಜರಿದ್ದ ಆ ವೈಬ್ವದ ಸಮಾರಂಭ ಬಾಲಕ ಅಶುತೋಷ್‌ಮೇಲೆ ಪರಿಣಾಮ ಬೀರಿತು. ಇಂಥ ವಿಶ್ವವಿದ್ಯಾನಿಲಯ ಸಮಾರಂಭಗಳಲ್ಲಿ ಭಾಗವಹಿಸುವ  ‘ದೊಡ್ಡ ಮನುಷ್ಯ’ ತಾನಾಗಬೇಕೆಂದು ಅಸೆಪಟ್ಟ ಆ ಪುಟ್ಟ ಬಾಲಕ !

ತಾನು ಬಾಲ್ಯದಲ್ಲಿ ಕಂಡ ಕನಸನ್ನು ನನಸಾಗಿಸಿಕೊಳ್ಳಲು ಆಶುತೋಷ್‌ಶ್ರಮಿಸಿದ್ದರ ಫಲ-ಅನಂತರದ ದಿನಗಳಲ್ಲಿ ಅವನಿಗೂ ವಿಶ್ವವಿದ್ಯಾನಿಲಯಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದಿದ್ದು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿಶ್ವವಿದ್ಯಾನಿಲಯ ಹಳೆ ಕ್ಯಾಲೆಂಡರುಗಳು, ಸಬೆಯ ಕಾರ್ಯಕಲಾಪಗಳು, ನಿಯಮಾವಳಿಗಳು ಇವುಗಳನ್ನು  ‘ಲದ್ದಿ ಕಾಗದ’ವೆಂದು ಹರಜು ಮಾಡಿತು. ಆ ‘ಕಸ’ವನ್ನು ಬೇರೆ ಯಾರಿಗೂ  ಬಿಡದೆ ಅಶುತೋಷ್‌ತಾನೇ ಕೊಂಡ. ಅವುಗಳನ್ನು ಓದಿ ವಿಶ್ವವಿದ್ಯಾನಿಲಯದ ಎಲ್ಲ ವಿಷಯಗಳನ್ನು ತಿಳಿದು ಕಸದಿಂದ ರಸ ಮಾಡಿಕೊಂಡನು.

ಎಳೆಯ ವಾಗ್ಮಿ

೧೮೭೯ರಲ್ಲಿ ಹುಡುಗ ಕಲ್ಕತ್ತ ವಿಶ್ವವಿದ್ಯಾನಿಲಯದ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಆಗ ಅವನ ವಯಸ್ಸು ಕೇವಲ ೧೫ ವರ್ಷ. ಬಂಗಾಳದ ಪ್ರಸಿದ್ಧ ವ್ಯಕ್ತಿಗಳನ್ನು ರೂಪಿಸಿದ್ದ ಪ್ರೆಸಿಡೆನ್ಸಿ ಕಾಲೇಜಿಗೆ ಅಶುತೋಷ್‌ಸೇರಿದ. ಪ್ರಖ್ಯಾತ ಗುರುಗಳ ಮಾರ್ಗದರ್ಶನದ ಜೊತೆಗೆ ಉತ್ತಮ ಗೆಳೆಯರ  ಸಹವಾಸ. ಸ್ವಾಮಿ ವಿವೇಕಾನಂದರ ಸಹಪಾಠಿಯಾಗಿ ಐದು ವರ್ಷಗಳು ವಿದ್ಯಾಭ್ಯಾಸ ಮಾಡುವ ಸುಯೋಗ ಅಶುತೋಷ್ಗೆ ದೊರೆತಿದ್ದು ಇಲ್ಲೇ. ಸುಪ್ತವಾಗಿದ್ದ ಪ್ರತಿಭೆ ವಿಕಾಸಗೊಂಡು, ಅಶುತೋಷ್‌ಎಲ್ಲರ ಗೌರವ ಮತ್ತು ಪ್ರೀತಿಗೆ ಪಾತ್ರರಾದರು.

೧೮೮೩ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರನ್ನು ಸರ್ಕಾರ ಬಂಧಿಸಿ ಸೆರೆಮನೆಗೆ  ದೂಡಿದಾಗ ಅಶುತೋಷ್‌ಮೊದಲ ಬಾರಿಗೆ ಬಹಿರಂಗ ಭಾಷಣ ಮಾಡಿದರು. ಸರ್ಕಾರ ಎಸಗಿದ್ದ ಕೃತ್ಯವನ್ನು ಉಗ್ರವಾಗಿ ಖಂಡಿಸಿದರು.

೧೮೮೪ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ಗಣಿತ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದ್ದ ಡಾಕ್ಟರ್‌ಮೆಕಾನ್‌ಆಕಾಲ ಮರಣಕ್ಕೆ ತುತ್ತಾದರ. ಆ ಸಮಯದಲ್ಲಿ ಆಶುತೋಷ್‌ಮುಖರ್ಜಿ ಅವರಲ್ಲಿ ಅಡಗಿದ್ದ ಸಂಘಟನಾ ಶಕ್ತಿ ಪ್ರಕಟವಾಯಿತು. ತನ್ನ ಜತೆಗಾರರ ಸಹಾಯದಿಂದ ಧನಸಂಗ್ರಹಿಸಲು ಒಂದು ಸ್ಮಾರಕ ಸಮಿತಿಯನ್ನು ರಚಿಸಿದರು. ಆ ಹಣದಿಂದ ಮೆಕಾನ್‌ಅವರ ನೆನಪಿಗಾಗಿ ಗ್ರಂಥಾಲಯದಲ್ಲಿ ಒಂದು ವಿಭಾಗವನ್ನು ಸ್ಥಪಿಸಿದರು. ಉಳಿದ ಹಣವನ್ನು ಬಿ.ಎ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ  ಅಂಕ ಗಳಿಸುವ ಪ್ರಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗೆ ಒಂದು ಚಿನ್ನದ ಪದಕ ನೀಡಬೇಕೆಂದು ವಿಶ್ವವಿದ್ಯಾನಿಲಯಕ್ಕೆ ಕೊಟ್ಟರು. ಆ ಸಮಯದಲ್ಲಿ ಆಶುತೋಷ್ ಮಾಡಿದ ಭಾಷಣ ಜನಮನ್ನಣೆ ಗಳಿಸಿ, ಅವರು ಉತ್ತಮ ವಾಗ್ಮಿ ಎಂಬುದನ್ನು ತೋರಿಸಿಕೊಟ್ಟಿತು.

ಗಣಿತಶಾಸ್ತ್ರದಲ್ಲಿ ಪ್ರತಿಭೆ

ಆಶುತೋಷರು ವಿದ್ಯಾರ್ಥಿ ಜೀವನದುದ್ದಕ್ಕೂ ಪ್ರಥಮ ದರ್ಜೆ ಮತ್ತು ಪ್ರಥಮ ಸ್ಥಾನಗಳಲ್ಲೆ ಉತ್ತೀರ್ಣರಾಗುತ್ತಿದ್ದರು. ೧೮೮೪ರಲ್ಲಿ ಬಿ.ಎ. ಪದವೀಧರರಾದರು. ೧೮೮೫ರಲ್ಲಿ ಗಣಿತಶಾಸ್ತ್ರದಲ್ಲಿ ಎಂ. ಎ. ಹಾಗೂ ೧೮೮೬ರಲ್ಲಿ ಭೌತ ಶಾಸ್ತ್ರದಲ್ಲಿ ಎಂ. ಎ.  ಮುಗಿಸಿಕೊಂಡರು. ಎರಡು ವಿಷಯಗಳಲ್ಲಿ ಎಂ. ಎ. ಪದವಿ ಪಡೆದವರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಇವರು ಮೊದಲಿಗರು.

೧೮೮೬ರಲ್ಲಿ ಆಶುತೋಷರು ಕೃಷ್ಣ ನಗರದ ಪಮಡಿತ ರಾಮನಾರಾಯಣ ಭಟ್ಟಾಚಾರ್ಯ ಅವರ ಮಗಳಾದ ಶ್ರೀಮತಿ ಯೋಗಮಾಯಾ ದೇವಿಯನ್ನು ಮದುವೆಯಾದರು.

ಬಿ.ಎ., ಎಂ.ಎ., ಪರೀಕ್ಷದೆಗಳಿಗೆ ಓದುತ್ತಿದ್ದಾಗಲೇ ಗಣಿತಶಾಸ್ತ್ರದಲ್ಲಿ ಸಂಶೋಧನಾತ್ಮಕವಾದ ಇಪ್ಪತ್ತು ಪ್ರಬಂಧಗಳನ್ನು ಆಶುತೋಷ್‌ಮಂಡಿಸಿದರು. ಇದರಿಂದಾಗಿ ಇವರ ಪ್ರತಿಭೆ ಅಂತರ ರಾಷ್ಟ್ರೀಯವಾಗಿಯೂ ಹಬ್ಬಿ ಲಂಡನ್, ಪ್ಯಾರಿಸ್, ಎಡಿನ್‌ಬರೋ ಮೊದಲಾದ ಕಡೆಗಳಲ್ಲಿದ್ದ ಗಣಿತಶಾಸ್ತ್ರ ಸಂಘ ಸಂಸ್ಥೆಗಳಿಗೆ ವಿದ್ಯಾರ್ಥಿಯಾಗಿದ್ದಾಗಲೇ ಸದಸ್ಯರಾಗಿ ಚುನಾಯಿತರಾದರು.

ಕಾಲೇಜಿಗೆ ಸೇರಿದ ಮೊದಲ ವರ್ಷದಲ್ಲೇ ಮೊದಲ ಪ್ರಬಂಧ ರಚಿಸಿದ ಅಶುತೋಷ್‌ಅವರ ಕೊಡುಗೆ ಗಣಿತಶಾಸ್ತ್ರಕ್ಕೆ ಅಪಾರ.

’ನಿಮ್ಮ ಅಡಿಯಾಳಾಗಿರಲಾರೆ’

ಶಿಕ್ಷಣಾಧಿಕರಿಯಾಗಿದ್ದ ಚಾರ್ಲ್ಸ ಕ್ರಾಫ್ಟ್‌ಗಣಿತ ಶಾಸ್ತ್ರದಲ್ಲಿ ಅಸಾಧಾರಣ ಖ್ಯಾತಿ ಪಡೆದಿದ್ದ ಅಶುತೋಷ್‌ಮುಖರ್ಜಿಯವರನ್ನು ಕಾಣಲು ಇಷ್ಟಪಟ್ಟರು. ಸಂದರ್ಶನದಲ್ಲಿ ಮುಖರ್ಜಿಯವರ ಪಾಂಡಿತ್ಯವನ್ನು ಅಪಾರವಾಗಿ ಮೆಚ್ಚಿದ ಕ್ರಾಫ್ಟ, ಪ್ರೆಸಿಡೆನ್ಸಿ ಕಾಲೇಜಿನ ಪ್ರಾಧ್ಯಾಪಕರಾಗಿ ಕೆಲಸ ಮಡಿರೆಂದು ವಿನಂತಿಸಿಕೊಂಡರು. ಆಗ ಆಶುತೋಷ್‌ಎರಡು ಮುಖ್ಯ ಷರತ್ತುಗಳನ್ನು ಅವರ ಮುಮದಿಟ್ಟರು. ಮೊದಲನೆಯದಾಗಿ ತನ್ನನ್ನು ಕಲ್ಕತ್ತೆಯಿಂದ ಹೊರಗೆಲ್ಲೂ ವರ್ಗ ಮಾಡಬಾರದು. ಏಕೆಂದರೆ ತನ್ನ ಸಂಶೋಧನಾ ಕೇಲಸಕ್ಕೆ ಅದು ಅಡ್ಡಿಯಗುತ್ತದೆ. ಎರಡನೆಯದಾಗಿ ಬ್ರಿಟಿಷ್‌ಪ್ರಾಧ್ಯಾಪಕನಿಗೆ ಕೊಡುತ್ತಿರುವಷ್ಟೇ ಸಂಬಳ ಭಾರತೀಯ ಪ್ರಾಧ್ಯಾಪಕನಾದ ತನಗೂ ಕೊಡಬೇಕು.

ನ್ಯಾಯಸಮ್ಮತವಾದ ಬೇಡಿಕೆಗಳೇನೋ ನಿಜ. ಮೊದಲನೆಯದನ್ನು ಒಪ್ಪಬಹುದು. ಆದರೆ ಆಂಗ್ಲ ಪ್ರಾಧ್ಯಾಪಕನಿಗೂ ಭಾರತೀಯ ಪ್ರಾಧ್ಯಾಪಕನಿಗೂ ಒಂದೇ ಸಂಬಳ ಕೊಡಲು ಸಾಧ್ಯವೇ ? ಹೋಗಲಿ, ಅದು ಸಾಧುವೆ? ಮಾಡುವ ಕೆಲಸ ಒಂದೇ ಇರಬಹುದು. ಆದರೆ ಆಂಗ್ಲರೇ ಭಾರತೀಯರಿಗಿಂತ ಹೆಚ್ಚು ! ಭಾರತೀಯರಿಗೆ ಅರ್ಧ ಸಂಬಳ ಮಾತ್ರ ಕೊಡುವ ಸಂಪ್ರದಾಯ ಅಶುತೋಷ್‌ಗಾಗಿ ಮುರಿಯಲಾಗುವುದಿಲ್ಲ ಎಂದರು ಆಂಗ್ಲ ಶಿಕ್ಷಣಾಧಿಕಾರಿ.

ಇದನ್ನು ಕೇಳಿದ ಅಶುತೋಷ್‌, ಸಿಟ್ಟಾದರು. “ಈ ವರ್ಣ ದ್ವೇಷ, ಅಸಮಾನತೆಗಳ ಕೂಪದಲ್ಲಿ ನಿಮ್ಮ ಸರ್ಕಾರದ ಅಡಿಯಳಾಗಿರಲಾರೆ. ಸ್ವತಂತ್ರ ವೃತ್ತಿ ನಡೆಸಿ ಜೀವಿಸುವ ಬುದ್ದಿಶಕ್ತಿ ಭಾರತಾಂಬೆ ನನಗೆ ನೀಡಿದ್ದಾಳೆ. ನಮಸ್ಕಾರ ಬರುತ್ತೇನೆ.’ ಎಂದು ಅಲ್ಲಿಂದ ಹೊರಬಿದ್ದರು. ಸ್ವಭಾವದಲ್ಲಿ ತಂದೆಯ ಪಡಿಯಚ್ಚು. ಮಗನ ನಿರ್ಧಾರ ತಂದೆಗೆ ಸಂತೋಷ ತಂದಿತು.

ವಕೀಲರು

ಅಶುತೋಷ್‌, ೧೮೮೫ರಲ್ಲಿ ಕಾನೂನುಶಾಸ್ತ್ರ ಓದಲಾರಂಭಿಸಿದರು. ಠಾಕೂರ ಕಾನೂನು ಚಿನ್ನದ ಪದಕವನ್ನು ಪಡೆದು ೧೮೮೮ರಲ್ಲಿ ಪದವಿ ಪೊರೈಸಿಕೊಂಡು ವಕೀಲರಾದರು.

೧೮೮೭ರಲ್ಲಿ  ಅವರ ತಮ್ಮ ಹೇಮಂತಕುಮಾರ ಅಕಾಲ ಮರಣಕ್ಕೆ ತುತ್ತಾದ. ಪುತ್ರವಿಯೋಗದ ಆಘಾತದಿಂದ ಗಂಗಾಪ್ರಸಾದ್ ಹಾಸಿಗೆ ಹಿಡಿದು ೧೮೮೯ರಲ್ಲಿ ನಿಧನರಾದರು. ಈಗ ಮನೆಯ ಪೂರ್ಣ ಜವಾಬ್ದಾರಿ ಅಶುತೋಷರ ಮೇಲೆ ಬಿತ್ತು. ಧೈರ್ಯಗೆಡೆದೆ ಯಶಸ್ವಿಯಾಗಿ ಅದನ್ನು ಅವರು ನಿರ್ವಹಿಸಿದರು. ಗಣಿತಶಾಸ್ತ್ರಕ್ಕಿಂತ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಯಿತು. ವಕೀಲಿ ವೃತ್ತಿಯನ್ನು ಮುಂದುವರಿಸಿದರು.

ಅಶುತೋಷ್‌ಮುಖರ್ಜಿ ಅವರಿಗೆ ಬೋಧಿಸುವುದರಲ್ಲಿ ಅಸಕ್ತಿಯಿತ್ತು. ಅವರು ಕೆಲವು ವರ್ಷಗಳು ಉಚಿತವಾಗಿ ಪ್ರೌಢಗಣಿತಶಾಸ್ತ್ರದ ಬಗ್ಗೆ ಎಂ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು ಕೊಟ್ಟಿದ್ದರು. ಅವರು ಉತ್ತಮ ಪ್ರಾಧ್ಯಾಪಕರಾಗಬಹುದಿತ್ತು. ಪ್ರಸಿದ್ಧ ಸಂಶೋಧಕರಾಗಬಹುದಿತ್ತು. ಗಣಿತಶಾಸ್ತ್ರದಲ್ಲಿ ಅಶುತೋಷ್‌ಅವರಿಗೆ ಇದ್ದ ಪ್ರತಿಭೆ ಅಸಾಧಾರಣ. ಇವರು ಬರೆದಿರುವ ಗಣಿತ ಪುಸ್ತಕಗಳು ಮತ್ತು ಲೇಖನಗಳು ಗಣಿತಲೋಕಕ್ಕೆ ಒಂದು ಅಸಾಧಾರಣ ಕೊಡುಗೆ. ಹೀಗಿದ್ದೂ ಕಾನೂನುಶಾಸ್ತ್ರದ ಕಡೆ ಇವರು ಒಲವು ಬೆಳೆಸಿಕೊಂಡಿದ್ದು ಗಣಿತಶಾಸ್ತ್ರ ಲೋಕಕ್ಕೆ ನಷ್ಟವಾದಂತಾಯಿತು.

೧೮೯೮ರಲ್ಲಿ ’ಡಾಕ್ಟರ ಆಫ್‌ ಲಾ” ಮುಗಿಸಿ ೧೮೯೮ರಲ್ಲಿ ಕಾನೂನು ಪ್ರಾಧ್ಯಾಪಕರಾದರು. ಆಗ ಅವರು ನೀಡಿದ ಉಪನ್ಯಸಗಳು ಒಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.

೧೮೯೯ರಲ್ಲಿ ಬಂಗಾಳ ವಿಧನ ಪರಿಷತ್ತಿಗೆ ಇವರು ಆಯ್ಕೆಯಾದಾಗ ’ಮೆಕೆಂಜೆ ಮಸೂದೆ’ಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಕಲ್ಕತ್ತ ಪೌರಾಡಳಿತದ ಮೇಲೆ ಬ್ರಿಟಿಷ್‌ಸರ್ಕಾರ ತನ್ನ ಅಧಿಕಾರಶಾಹಿ ದಬ್ಬಾಳಿಕೆ ನಡೆಸಿರುವುದನ್ನು ಬೆಳಕಿಗೆ ತಂದರು. ಇದನ್ನು  ಪ್ರತಿಭಟಿಸಿ ಹನ್ನೊಂದು  ವರ್ಷಗಳಕಾಲ ಸತತವಾಗಿ ಹೋರಾಟ ನಡೆಸಿದರು. ಬ್ರಿಟಿಷ್ ಸರ್ಕಾರ ವಿಧಿಸುತ್ತಿದ್ದ ಬಗೆಬಗೆಯ ಸುಂಕಗಳಿಂದ  ಭಾರತೀಯರಿಗೆ ಹೊರೆಯಾಗಿತ್ತು. ಈ ಅನ್ಯಯವನ್ನು ಬ್ರಿಟಿಷ್‌ಸರ್ಕರದ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

’ನನ್ನ ತಾಯಿಗಿಂತ ಮಿಗಿಲಾದ ವ್ಯಕ್ತಿ ಇಲ್ಲ’

ಅಶುತೊಷ್‌ಕಲ್ಕತ್ತದಲ್ಲಿ ಲಾಯರ‍್ ಆಗಿ ಬಿಡುವಿಲ್ಲದೆ ದುಡಿಯುತ್ತಿದ್ದರು. ಆಗಿನ ವೈಸರಾಯ್‌ಆಗಿದ್ದ ಲಾರ್ಡ್‌ಕರ್ಜನ್ಗೆ ಇವರ ಬಗ್ಗೆ ತುಂತಾ ಗೌರವವಿತ್ತು. ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಎಂಥ ಒಬ್ಬ ಮೇಧಾವಿಯನ್ನು ತಮ್ಮ ಸರ್ಕಾರ ‘ಸೃಷ್ಟಿಸಿದ’ ಎಂಬುದನ್ನು ಇಂಗ್ಲೆಂಡಿನ ಜನತೆಗೆ ತೋರಿಸಬೇಕೆಂಬ ಆಸೆ ಅವನದು. ತನ್ನ ಆಸೆಯನ್ನುಪತ್ರದ ಮೂಲಕ ತೋಡಿಕೊಂಡಾಗ ಅಶುತೋಷ್‌ಹೀಗೆ ಬರೆದರು:

“ನಾನು ಇಂಗ್ಲೆಂಡಿಗೆ ಹೋಗುವುದು ನನ್ನ ತಾಯಿಗೆ ಇಷ್ಟವಿಲ್ಲ. ಆದ್ದರಿಂದ ನಾನು ಹೋಗಲಾಗುವುದಿಲ್ಲ.”

ಕರ್ಜನ್‌ಗೆ ಆಶ್ಚರ್ಯವಾಯಿತು. ಮತ್ತೆ ಬರೆದ;

“ವೈಸರಾಯ್‌ಆಗಿ, ಭಾರತದ ಪ್ರಥಮ ಪ್ರಜೆಯಾಗಿ ಲಾಡ್‌ಕರ್ಜನನ ನೀಡುತ್ತಿರುವ ಆದೇಶದ ಪ್ರಕಾರ ನೀವು ಇಂಗ್ಲೆಂಡಿಗೆ ಹೋಗಲೇಬೆಕು.”

ಆದರೆ ಆಶುತೋಷ್‌ಈ ಮಾತಿಗೆ ಬಗ್ಗಲಿಲ್ಲ.

“ಇಂಗ್ಲೆಂಡಿಗೆ ಹೋಗಲು ನನ್ನತಾಯಿಸಮ್ಮತಿ ಕೊಟ್ಟಿಲ್ಲ. ನನ್ನ ತಾಯಿಗಿಂತ ಮಿಗಿಲಾದ ಯಾವ ಶಕ್ತಿಯಾಗಲಿ ಈ ಲೋದಲ್ಲೇ ಇಲ್ಲ.”

ಲಾರ್ಡ್‌ಕರ್ಜನ್ ಆ ಉತ್ರ ನೊಡಿ ಅವಕ್ಕಾದ. ಭಾರತೀಯರು ತಮ್ಮ ತಾಯಂದಿರ ಬಗ್ಗೆ ಎಷ್ಟು ಪ್ರೀತಿ, ಗೌರವ ಹೊಂದಿದ್ದಾರೆಂದು ಆಶ್ಚರ್ಯವೂ ಪಟ್ಟ. 

ಸ್ವತಂತ್ರವಾಗಿ ಜೀವಿಸುವ ಶಕ್ತಿ ನನಗಿದೆ

ಸ್ವಾತಂತ್ರದ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ

ಹೈಕೋರ್ಟಿನ ನ್ಯಾಯಾಧೀಶರು

೧೯೦೪ರಲ್ಲಿ ವೈಸ್‌ರಾಯ್‌ಅಶುತೋಷ್‌ಅವರಿಗೆ ಒಂದು ಪತ್ರ ಕಳಿಸಿ, ಅವರನ್ನು ಕಲ್ಕತ್ತ ಉಚ್ಚ ನ್ಯಾಯಾಲಯದ ನ್ಯಾಯಧೀಶನನ್ನಾಗಿ ಮಾಡಬಯಸಿರುವುದಾಗಿ ತಿಳಿಸಿದಾಗಲೂ ಅಷ್ಟೆ “ನನ್ನ ತಾಯಿಯ ಅನುಮತಿ ಇಲ್ಲದೆ, ಸಿಂಹಾಸನ ದೊರೆತರೂ ನಾನು ಸ್ವೀಕರಿಸಲಾರೆ. ಆಕೆಯನ್ನು ಕೇಳಿ ತಿಳಿಸುವೆ” ಎಂದು ಉತ್ತರ ಬರರೆದು ಕಳಿಸಿದರು. ತಾಯಿಯ ಸಮ್ಮತಿ ಸಿಕ್ಕಮೇಲೆಯೇ ಒಪ್ಪಿದರು.

ಅಶುತೋಷ್‌ಮುಖರ್ಜಿಯವರು ೧೯೦೪ರಿಂದ ೧೯೨೩ರ ವರೆಗೆ ಕಲ್ಕತ್ತ ಹೈಕೊರ್ಟಿನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಕೊಟ್ಟ ಎರಡು ಸಾವಿರಕ್ಕೂ ಹೆಚ್ಚಿನ ತೀರ್ಪುಗಳು ನ್ಯಾಯಶಾಸ್ತ್ರದ ಎಲ್ಲ ವಿಚಾರಗಳನ್ನೊಳಗೊಂಡಿವೆ. ನ್ಯಾಯಧೀಶರಾಗಿ ಕಾರ್ಯ ನಿರ್ವಹಿಸುವ ಶಕ್ತಿ ಕುಂದುವ ಮೊದಲೇ ನಿವೃತ್ತರಾಗಬೇಕೆಂಬ ಆಸೆ ಹೊಂದಿದ್ದರು. ಆದ್ದರಿಂದಲೇ  ಅಶುತೋಷ್‌ಮುಖರ್ಜಿಯವರು ತಮ್ಮ ಸೇವೆಯ ಅವಧಿಗಿಂತ ಆರು ತಿಂಗಳು ಮೊದಲೇ ನಿವೃತ್ತಿ ಹೊಂದಿದರು. ಆಗ ಅವರ ವಯಸ್ಸು ೫೯.

ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿ

ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಸರ್‌ಅಲೆಗ್ಸಾಂಡ್‌ಷೆಡ್ಲರ‍್ ಅವರು ನಿವೃತ್ತರಾಗ ಬೇಕಾದ ಸಮಯ ಹತ್ತಿರ ಬಂದಾಗ ಅವರ ಅನಂತರ ಆ ಜವಾಬ್ದಾರಿಯುತ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಕಾಣಿಸಿಕೊಂಡಿತು. ನ್ಯಾಯಮೂರ್ತಿ ಅಶುತೋಷ್‌ಮುಖರ್ಜಿಯವರನ್ನು ಉಪಕುಲಪತಿ ಗಳನ್ನಾಗಿ ಮಾಡಬೇಕೆಂದು ಸರ್ಕಾರ ಅಬಿಪ್ರಾಯ ಪಟ್ಟಿತು.  ಏಕೆಂದರೆ ಹದಿನಾರು ವರ್ಷಗಳ ಕಾಲ ಕಲ್ಕತ್ತ ವಿಶ್ವವಿದ್ಯಾನಿಲಯ ಕಾರ್ಯಂಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅಶುತೋಷ್ ವಿಶ್ವವಿದ್ಯನಿಲಯಕ್ಕೆ ತುಮಬಾ ನಿಕಟವರ್ತಿಗಳಾಗಿದ್ದರು. ಕಾರ್ಯದಕ್ಷರಾದ ಅವರನ್ನು ಆ ಸ್ಥಾನಕ್ಕೆ ನೇಮಿಸಿದರೆ ವಿಶ್ವವಿದ್ಯಾನಿಲಯದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬ ವಿಶ್ವಾಸ ಸರ್ಕಾರಕ್ಕಿದ್ದಿತು.

೧೯೦೬ರಲ್ಲಿ ಅಶುತೋಷ್‌ಮುಖರ್ಜಿಯವರು ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಅವರು ಕಾಲೇಜು ದಿನಗಳಿಂದ ಕಂಡಿದ್ದ ಕನಸೆಂದರೆ ಆ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸುವುದು.ಕಾಲೇಜು ವಿದ್ಯಾಭ್ಯಾಸ ಪೊರೈಸಿದ ಹೊಸರಲ್ಲಿ ಅಂದಿನ ಉಪಕುಲಪತಿಯಾಗಿದ್ದ ಸರ್‌ಕೋರ್ಟ್ನೆ ಇಲ್ಬರ್ಟ್‌ಅಶುತೋಷ್‌ಅವರನ್ನು ಕೇಳಿದ್ದರು: “ನಿಮ್ಮ ಬುದ್ಧಿಶಕ್ತಿ ನನ್ನನ್ನು ಆಶ್ಚರ್ಯಚಕಿತಗೊಳಿಸಿದೆ. ನನ್ನಿಂದೇನಾದರೂ ನಿಮಗೆ ಸಹಯವಾಗುವದಾದರೆ ನನಗೆ  ಸಂತೋಷ. ಹೇಳಿ, ನಿಮಗಾಗಿ ಏನು ಮಾಡಲಿ, ಯಾವ ಕೆಲಸ ಕೊಡಿಸಲಿ?”

ಬ್ರಿಟಿಷ್‌ಸರ್ಕಾರದಲ್ಲಿ ಯಾವುದೇ ಬಗೆಯ ಕೆಲಸ ಕೇಳಿ ಪಡೆಯಬಹುದಿತ್ತಾದರೂ ಅಶುತೊಷ್‌ಕೇವಲ ಒಂದು ಗೌರವ ಹುದ್ದೆಯನ್ಹು ಬಯಸಿದರಷ್ಟೆ; ಈ ವಿಶ್ವವಿದ್ಯಾನಿಲಯ ಕಾರ್ಯಾಂಗದ ಸಾಮಾನ್ಯ ಸದಸ್ಯನನ್ನಾಗಿ ಮಾಡಿದರೆ ಸಾಕು” ಎಂದರು.

ತಮ್ಮ ಇಪ್ಪತೈದನೆಯ ವಯಸ್ಸಿಗೆಲ್ಲ ವಿಶ್ವವಿದ್ಯಾನಿಲಯದ ’ಫೆಲೋ’ ಆಗಿ ಆಯ್‌ಎಯಾಗಿದ್ದರಲ್ಲದೆ, ಕಾರ್ಯಂಗ ಸಭೆಯ ಸದಸ್ಯರಾದರು ಅಶುತೋಷ್‌. ಮುಂದೊಮ್ಮೆ ತಾವೇ ಉಪಕುಲಪತಿಗಳಾಗಬೇಕಾಗುತ್ತದೆ ಎಂದು ಯೋಚಿಸಿಯೇ ಇರಲಿಲ್ಲ.

ಇಂದಿನ ಕಲ್ಕತ್ತ ವಿಶ್ವವಿದ್ಯಾನಿಲಯ ಬೃಹತ್ತಾಗಿ ಬೆಳೆದು ನಿಂತಿರಲು ಅಶುತೋಷ್‌ಮುಖರ್ಜಿ ಅವರ ನಿಸ್ವಾರ್ಥ ಸೇವೆಯೇ ಕಾರಣ. ಅವರ ಮೂವತ್ತೈದು ವರ್ಷಗಳ ಪರಿಶ್ರಮದ ಫಲವೇ ಇಂದು ಭಾರತದಲ್ಲೆ ಮುಖ್ಯವಾಗಿರುವ ಆ ವಿದ್ಯಾ ದೇಗುಲ.

ಭಾರತೀಯರ ವಿದ್ಯಾಪ್ರೇಮ

ಅಶುತೋಷರು ಉಪಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಎರು ವರ್ಷಗಳಲ್ಲೇ  ಕಲ್ಕತ್ತ ವಿಶ್ವವಿದ್ಯಾನಿಲಯದ ರೂಪರೇಷೆಯೇ ಬದಲಾಯಿತು.

ಭಾರತೀಯರಿಗೆ ಉಚ್ಚಶಿಕ್ಷಣ ನೀಡಿ ಬುದ್ಧಿವಂತರನ್ನಾಗಿಸಿದಲ್ಲಿ ಅದರಿಂದ ತಮ್ಮ ಸರ್ಕಾರಕ್ಕೆ ತೊಂದರೆ ಎಂದು ಬ್ರಿಟಿಷರು ಭಾವಿಸಿದ್ದರು. ಉಚ್ಚ ಶಿಕ್ಷಣಕ್ಕಾಗಿ  ನೀಡಬೇಕಾಗಿದ್ದ ಸೌಲಭ್ಯಗಳನ್ನು ಬಿಗಿಗೊಸಿದ್ದರು.  ಆದರೆ ಭಾರತೀಯ ದೇಶ ಪ್ರೇಮಿ  ವಿದ್ವಾಂಸರು ಲಕ್ಷಾಂತರ ರೂಪಾಯಿಗಳ ಕಾಣಿಕೆಗಳನ್ನು ವಿಶ್ವವಿದ್ಯಾನಿಲಯಕ್ಕೆ ಅರ್ಪಿಸಿದ್ದರು. ಈ ಹಣವನ್ನು ಠೇವಣಿ ಇಟ್ಟು,ಆ ಬಡ್ಡಿಯಲ್ಲಿ ವಿದ್ಯಾರ್ಥಿ ವೇತನಗಳನ್ನು ನೀಡಿ ಭಾರತೀಯರು ಉಚ್ಚ ಶಿಕ್ಷಣ  ಪಡೆಯಲು ಸಾಧ್ಯವಾಗುವಂತೆ ಮಾಡಿದರು. ಈ ದಿಶೆಯಲ್ಲಿ ಪ್ರಥಮ ಹೆಜ್ಜೆಯೆಂದರೆ ೧೮೬೨ರಲ್ಲಿ ಪ್ರಸನ್ನಕುಮಾರ ಠಾಕೂರ್‌ನೀಡಿದ ಐದು ಲಕ್ಷ ರೂಪಯಿಗಳು. ಕಾನೂನುಶಾಸ್ತ್ರದಲ್ಲಿ ಪ್ರಾಧ್ಯಾಪಕ ವೇತನಕ್ಕೆ ಇದರ ಬಡ್ಡಿ ಮೀಸಲು.

ಸ್ನಾತಕೋತ್ತರ ಶಿಕ್ಷಣ ಕಾಲೇಜು ಪ್ರಾರಂಭವಾಗಿ, ಬುದ್ಧಿಶೀಲ ಅಧ್ಯಾಪಕರಿಗೆ ಬಡ್ತಿ ದೊರೆಯಿತು. ರಾಜಕೀಯವನ್ನು ವಿಶ್ವವಿದ್ಯಾನಿಲಯದ ಆವರಣದಿಂದ ಹೊರದೂಡಿ. ಉಚ್ಚ ಶಿಕ್ಷಣ ನೀಡುವುದನ್ನು  ವಿಶ್ವವಿದ್ಯಾ ನಿಲಯವೇ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಅಶುತೊಷ್‌ರ ಬಹುದಿನಗಳ ಬಯಕೆ ೧೯೧೭ರಲ್ಲಿ ನೆರವೇರಿತು. ಈ ಲೋಕದಲ್ಲಿ ಅಸಾಧ್ಯವಾದ ಕೆಲಸಲವೆಂಬುದೇ ಇಲ್ಲ ಎಂಬುದನ್ನು ಇದರಿಂದ ಅಶುತೋಷ್‌ಮನದಟ್ಟು ಮಾಡಿಕೊಂಡರು.

೧೯೦೯ರಿಂದ ಭಾರತೀಯರು ಡಾಕ್ಟರೇಟ್‌ಪದವಿ ಪಡೆಯಲು ಪ್ರಾಋಂಭಿಸಿದರು. ಅಶುತೋಷ್ ಅವರ ಶ್ರಮ ಸಾರ್ಥಕವಾಗಿತ್ತು. ಆಶುತೋಷ್‌ಮುಖರ್ಜಿಯವರ ಸಾಧನೆಯಿಂದ ಕಲ್ಕತ್ತ ವಿಶ್ವವಿದ್ಯಾನಿಲಯದ  ವ್ಯಾಪ್ತಿಯಲ್ಲಿದ್ದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಅತಿ ಉತ್ತಮ ಶಿಕ್ಷಣ ದೊರೆಯಲು ಆರಂಭವಾಯಿತು. ವಿಯರ್ಥಿಗಳ ಸಂಖ್ಯೆ ದ್ವಿಗುಣವಾಯಿತು. ಪ್ರತಿವರ್ಷ ನೂರಾರು ಪದವೀಧರರು ತಯಾರಾಗಿ ಭಾರತದ ಮೂಲೆಗೆ  ಜ್ಞಾನದ ಬೆಳಕನ್ನು,ಸ್ವಾತಂರ್ತ್ಯದ ಕಿಡಿಯನ್ನು  ಒಯ್ದರು. ಅಶುತೋಷ್‌ಅವರ ನೇತೃತ್ವದಲ್ಲಿ ಭಾರತ ಸಾಮಾಜಿಕ ಕ್ರಾಂತಿಗೆ ಸಿದ್ಧತೆ ನಡೆಸುತ್ತಿದೆ ಎಂಬುದರ ಅರಿವು ಸರ್ಕಾರವನ್ನು  ಎಚ್ಚರಿಸಿತು.

ಬಂಗಾಳಿ ಭಾಷೆಯಲ್ಲಿ ಎಂ. ಎ. ಪರೀಕ್ಷೆಗೆ ಕುಳಿತುಕೊಳ್ಳಬೇಕಾದರೆ ಬೇರೆ ಯಾವುದೇ ಒಂದು ಭಾರತೀಯ ಭಾಷೆಯಲ್ಲಿ ಪ್ರಾವೀಣ್ಯ ಪಡೆಯಲೇಬೇಕೆಂಬ ಕಡ್ಡಾಯವನ್ನು ಅಶುತೋಷ್ ತಂದರು. ಇದರಿಂದ ಬಂಗಾಳಿಯಲ್ಲಿ ಕಲಿತ ವಿಚಾರಗಳು ದೇಶದ ಬೇರೆ ಕಡೆಗೂ ಹಬ್ಬುವಂತಾಯಿತು.

ವೈಸರಾಯ ಶಾಸಕ ಮಂಡಳಿಗೆ ಒಬ್ಬ ಭಾರತೀಯರನ್ನು ಆಯ್ಕೆ ಮಾಡಬೇಕು ಎಂಬ ವಿಷಯ ಬಂದಾಗ ಆಗಿನ ವೈಸ್‌ರಾಯ್‌ಆಗಿದ್ದ ಲಾರ್ಡ್‌ಮಿಂಟೋ ಬರೆದರು: “ನನ್ನ ಶಾಸಕ ಮಂಡಲಿಗೆ ಭಾರತೀಯರನ್ನು ತೆಗೆದುಕೊಳ್ಳುವುದನ್ನು ಈವರೆಗೂ ನಾನು ಇಷ್ಟಪಟ್ಟಿಲ್ಲ. ಯಾರನ್ನಾದರೂ ತೆಗೆದುಕೊಳ್ಳೋಣ ಎಂದು ಹೇಳುವುದೇ ಆದರೆ, ನನ್ನ ದೃಷ್ಟಿಯಲ್ಲಿ ಈ ಸ್ಥಾನಕ್ಕೆ ಇಡೀ ಭಾರತದಲ್ಲಿ ಅರ್ಹನಾಗಿರುವ ವ್ಯಕ್ತಿ ಒಬ್ಬರು ಮಾತ್ರ. ಅವರೇ ಅಶುತೋಷ್ ಮುಖಜಿ! ಅವರ ಆಯ್ಕೆಯನ್ನು ಭಾರತೀಯರು ಅವಿರೋಧವಾಗಿ ಅನುಮೋದಿಸುತ್ತಾರ ಎಂಬ ಭರವಸೆ ನನಗಿದೆ. ಅವರ ಬರುವಿಕೆಯಿಂದ ನಮ್ಮ ಶಾಸಕ ಮಂಡಲಿಯ ಕಾರ್ಯದಕ್ಷತೆ ಮತ್ತು ಗೌರವ ಹೆಚ್ಚುವುದರಲ್ಲಿ ನನಗ ಸಂಶಯವಿಲ್ಲ.”

ಭಾರತೀಯ ಸಂಸ್ಕೃತಿಯ ಬಗ್ಗೆ ನಾಚಿಕೆ ಇಲ್ಲ

ಪಾಶ್ಚಾತ್ಯ ಸಂಸ್ಕೃತಿ ಅಶುತೋಷ್‌ಅವರಿಗೆ ಸರಿ ಬೀಳುತ್ತಿರಲಿಲ್ಲ. ಇವರು ಎಂದು ಬ್ರಿಟಿಷರ ಉಡುಗೆ ಧರಿಸಿದವರಲ್ಲ. ಸದಾ ದೋತರ, ಒಂದು ಕೋಟು, ಕಾಲಲ್ಲಿ ಪಾದರಕ್ಷೆ. ಬಹು ಸರಳ ಭಾರತೀಯ ಉಡುಪು. ನ್ಯಾಯಾಲಯಕ್ಕೆ ಹೋಗುವಾಗ ಮಾತ್ರ ಸರಾಯಿ ಧರಿಸುತ್ತಿದ್ದರು. ಮನೆಯಲ್ಲಿದ್ದಾಗಲಂತೂ ಕೇವಲ ಒಂದು ದೋತರವಷ್ಟೆ. ವಿದೇಶಿಯರು ಯಾರೇ ಮನೆಗೆ ಬಂದರೂ ಇದೇ ರೀತಿ ಸ್ವಾಗತಿಸುತ್ತಿದ್ದರು.

“ವಿದೇಶಿಯರೆದುರು ಪಂಚೆಯುಟ್ಟು ನಡೆಯಲು ಉನಾಚುವ ದೇಶಭಕ್ತರು ನಮ್ಮಲ್ಲ ಇರುವುದು ಶೋಚನೀಯ….. ಅವರಿಗಾಗಿನಾನು ಸೂಟು, ಬೂಟು ತೊಟ್ಟು ನಮ್ಮ ಪವಿತ್ರ ಸಂಸ್ಕೃತಿಯನ್ನು ಅವರಿಂದ ಮರೆಮಾಚುವುದಿಲ್ಲ. ನಮ್ಮ ದೇಶಭಕ್ತರು ಅನೇಕರು ಮನದೊಳಗೇ ಹೇಡಿತನ ತುಂಬಿಕೊಂಡು ಹೊರತೆ ಡಾಂಭಿಕ ಪ್ರದರ್ಶನ ನಡೆಸುತ್ತಾರಲ್ಲ. ಇವರು ನಿಜವಾಗಿಯೂ ಭಾರತಾಂಭೆಯನ್ನು ಆಂಗ್ಲರಿಂದ ವಿಮೋಚನೆ ಮಾಡುತ್ತಾರೆಯೇ? ಈಗಿರುವ ವರ್ಣದ್ವೇಷವನ್ನು ಕಡಿಮೆ ಮಾತುತಾರೆಯೇ?” ಎಂದು ಅಶುತೋಷ್‌ಮನನೊಂದು ನುಡಿಯುತ್ತಿದ್ದರು.

ದುರಹಂಕಾರಕ್ಕೆ ಮದ್ದು

ಅಶುತೋಷ್‌ರು ಅಲಿಗಢದಿಂದ ಕಲ್ಕತ್ತಗೆ ಪ್ರಥಮ ದರ್ಜೆ ಬೋಗಿಯಲ್ಲಿ ಒಮ್ಮೆ ಪ್ರಯಾಣ ಮಾಡುತ್ತಿದ್ದರು. ಮಧ್ಯರಾತ್ರಿಯ ವೇಳೆ, ಯಾವುದೋ ನಿಲ್ದಾಣದಲ್ಲಿ ರೈಲು ನಿಂತಿತು. ಒಬ್ಬ ಆಂಗ್ಲ ಸೈನ್ಯಾಧಿಕಾರಿ ಅಲ್ಲಿ ಹತ್ತಿಕೊಂಡ. ಪ್ರಥಮ ದರ್ಜೆಯ ಬೋಗಿಯಲ್ಲಿ ಭಾರತೀಯನಿದ್ದಾನೆ! ಅದೂ ದೋತರ ಉಟ್ಟು, ಕೊರಳ ವರೆಗೆ ಗುಂಡಿಗಳಿರುವ ಕೋಟು ಧರಿಸಿ ಭರತೀಯ ಉಡುಗೆಯಲ್ಲಿದ್ದಾನೆ. ಸೈನ್ಯಾಧಿಕಾರಿ ಸಿಟ್ಟಾದ. ಆದರೇನು ಮಾಡುವುದು? ಪ್ರಥಮ ದರ್ಜೆ ಪ್ರಯಾಣದ ಹಣ ಕೊಟ್ಟು ಬಂದಿರುತ್ತಾನೆ.

ತನಗಾದ ಬೇಸರವನ್ನು ಗೊಣಗುವುದರಲ್ಲಿ, ಎಗರಾಡುವುದರಲ್ಲಿ ತೀರಿಸಿಕೊಂಡ ಆ ಸೈನ್ಯಾಧಿಕಾರಿ, ಅಶುತೋಷ್‌ಅವರಿಗೆ ಅರೆ೩ನಿದ್ರ, ಸುಮ್ಮನೇ ಮಲಗಿಯೇ ಇದ್ದರು. ಸಿಟ್ಟಿನಿಂದ ಆ ಆಂಗ್ಲ ಸೈನ್ಯಾಧಿಕಾರಿ ಅಶುತೋಷ್ ಅವರ ಪಾದರಕ್ಷೆಗಳನ್ನು ಎತ್ತಿ ಕಿಟಕಿಯಾಚೆ ಎಸೆದ, ತನ್ನ ನಿಲುವಂತಿಯನ್ನು ತೆಗೆದು ಗೂಟಕ್ಕೆ ಸಿಕ್ಕಸಿ ನಿದ್ದೆಯೋದ.

ಅಶುತೋಷ್‌ಅವರಿಗೆ ಎಚ್ಚರಿಕೆಯಾದಾಗ ಆ ಆಂಗ್ಲಾಧಿಕಾಋಇ ನಿದ್‌ಎ ಮಾಡುತ್ತಿದ್ದ. ತನ್ನ ಪಾದರಕ್ಷೆಗಳು ನಾಪತ್ತೆಯಾಗಿವೆ. ಈತನೇ ಈ ಕೆಲಸ ಮಾಡಿರುವುದು ಎಂದು  ಅಶುತೋಷ್ ಅವರಿಗೆ ಖಾತ್ರಿಯಾದಾಗ, ಅವನು ಗೂಟಕ್ಕೆ ಸಿಕ್ಕಿಸಿದ್ದ ನಿಲುವಂತಿಯನ್ನೆತ್ತಿ ಕಿಟಕಿಯಾಚೆ ಎಸೆದರು.

ಆಂಗ್ಲಾಧಿಕಾರಿ ನಿದ್ದೆಯಿಂದೆದ್ದಾಗ ಅವನ ನಿಲುವಂತಿ ಇರಲಿಲ್ಲ. ಸಿಟ್ಟಿನಿಂದ ಗರ್ಜಿಸಿದರು’ “ಎಲ್ಲಿ ನನ್ನನಿಲುವಂಗಿ ?”

“ನನ್ನ ಪಾದರಕ್ಷೆ ಹುಡುಕಿಕೊಂಡು ಬರಲು ಹೋಗಿದೆ” ಅಶುತೋಷ್‌ಅಷ್ಟೇ ಶಾಂತವಾಗಿ  ಉತ್ತರಿಸಿದರು. ಈ ಬಗೆಯ ಉತ್ತ ಅವನು ನಿರೀಕ್ಷಿಸಿರಲಿಲ್ಲ. ಕೂಗಾಡುತ್ತಾ ಅಶುತೋಷ್‌ಅವರ ಮೇಲೆ ಕೈ ಮಾಡಲು ಹವಣಿಸಿದ, ಆದರೆ ಅಜಾನುಬಾಹು ವ್ಯಕ್ತಿಯಾದ ಅಶುತೋಷ್‌, ಅವರ ಮೈಕಟಟು ನೋಡಿ ತೆಪ್ಪಗಾದ.

ಎಂತಹ ಭವ್ಯ ಸಮಾರಂಭಕ್ಕೆ ಹೋಗಬೇಕಾದರೂ ಅಶುತೋಷ್‌ಮುಖರ್ಜಿಯವರು ತಮ್ಮ ಸರಳ ಉಡುಪನ್ನು ಬದಲಿಸುತ್ತಿರಲಿಲ್ಲ.

ಮೈಸೂರು ಅರಸರ ದರ್ಬಾರಿನಲ್ಲಿ

ಭಾರತದಲ್ಲಿ ವಿದ್ಯಾಭ್ಯಾಸ ಪದ್ಧತಿಯನ್ನು ಬದಲಾವಣೆ ಮಾಡಲು ಸರ್ಕಾರ ಸರ‍್ ಮೈಕೇಲ ಸ್ಯಾಡ್ಲರ‍್ ಅವರ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತ್ತು. ಆಶುತೋಷ್‌ ಆ ಆಯೋಗದ ಸದಸ್ಯರು, ಆಯೋಗದ ಪರವಾಗಿ ಆಗಿಂದಾಗ್ಗೆ ಅವರು ಮೈಸೂರಿಗೆ ಬರಬೇಕಿತ್ತು. ಮೈಸೂರಿನ ದೊರೆಗಳು ಆಯೋಗದ ಎಲ್ಲ ಸದಸ್ಯರನ್ನು ಔತಣಕ್ಕಾಗಿ ಒಮ್ಮೆ ಅರಮನೆಗೆ ಆಹ್ವಾನಿಸಿದ್ದರು. ಮಹಾರಾಜರ ಅಪ್ತ ಕಾರ್ಯದರ್ಶಿ ಆಶುತೋಷ್ ಅವರನ್ನು ಔತಣಕ್ಕೆ ಕರೆತರಲು ಹೋದಾಗ ಕಂಡಿದ್ದು, ಏನಾಶ್ಚರ್ಯ, ಆಶುತೋಷ್ ನಿತ್ಯದ ಪಂಚೆ ಮತ್ತು ಮೇಲು ಹೊದಿಕೆಯಲ್ಲಿದ್ದಾರೆ ! ಎಷ್ಟು ದೊಡ್ಡ ವಿದ್ಯಾವಂತರಾದರೇನು, ರಾಜರ ದರ್ಬಾರಿಗೆ ಯಾವ ಉಡುಪಿನಲ್ಲಿ ಬರಬೇಕೆಂಬುದೂ ಇವರಿಗೆ  ತಿಳಿಯದಲ್ಲ ಎಂದು ಆ ಕಾರ್ಯದರ್ಶಿ ಆಶ್ಚರ್ಯಪಟ್ಟ. ದರ್ಬಾರಿಗೆ ಬರುವ ಉಡುಪು ತೊಡಲು ಆ ಕಾರ್ಯದರ್ಶಿ ವಿನಂತಿಸಿ ಕೊಂಡ ತನ್ನ ರಾಷ್ಟ್ರೀಯ ಉಡುಪು ಬದಲಿಸಲು ಸಾಧ್ಯವೇ ಇಲ್ಲ ಎಂದರು ಆಶುತೋಷ್‌. ದರ್ಬಾರಿಗೆ  ಬೇರೆ ಉಡುಪಿನಲ್ಲಿ ಬರಲು ಆಗುವುದಿಲ್ಲ ಎಂದು ದೊರೆಗೆ ತಿಳಿಸಲು ಹೇಳಿದರು.

ಔತಣಕ್ಕೆ ಎಲ್ಲರೂ ಸೇರಿದ್ದಾರೆ. ಆದರೆ ಮುಖ್ಯರಾದ ಆಶುತೋಷ್‌ಕಾಣುತ್ತಿಲ್ಲ. ರಾಜರು ಕಾರಣ ಕೇಳಲು ಕಾರ್ಯದರ್ಶಿ ಎಲ್ಲವನ್ನೂ ನಿವೇದಿಸಿಕೊಂಡ.

“ಈಗಲೇ ಹೋಗಿ ಅವರನ್ನು ಅವರ ನಿತ್ಯ ಉಡುಪಿನಲ್ಲೇ ಕರೆದು ತಾ ” ಎಂದರು ರಾಜರು.

ಅಶುತೋಷ್‌ಬಂದಾಗ ರಾಜರೇ ಎದ್ದು ಬಂದು ಅತಿ ಗೌರವದಿಂದ ಸ್ವಾಗತಿಸಿ, ತಿಳಿಯದೇ ಆದ ಅಚಾತುರ್ಯಕ್ಕಾಗಿ ಕ್ಷಮೆ ಯಚಿಸಿದರು.

ಭಾರತೀಯ ಪರಂಪರೆ, ಸಂಸ್ಕೃತಿ ಇವುಗಳನ್ನು ಭದ್ರವಾಗಿ ಕಾಪಡಬೇಕೆಂಬ ನಿಲುವಿದ್ದ ಅಶುತೋಷ್‌ಮಾತ್ರ ಭಾಷೆಯಲ್ಲಿ ವಿದ್ಯಾಭ್ಯಾಸ ನಡೆಯಬೇಕೆಂದು ಅಭಿಪ್ರಾಯ ಪಡುತ್ತಿದ್ದರು. ೧೯೦೭ರ ಘಟಿಕೋತ್ಸವ ಭಾಷಣದಲ್ಲಿ  ಅಶುತೊಷ್‌ಹೇಳಿದರು. “ಮಾತೃಭಾಷೆಯಲ್ಲಿ ಅಭ್ಯಾಸ ಮಡುವುದರಿಂದ ವಿದ್ಯಾರ್ಥಿ ತನ್ನ ಮನದ ಅಭಿಪ್ರಾಯ, ಅನಿಸಿಕೆಗಳನ್ನು ಸ್ಪಷ್ಟವಾಗಿ ಮೂಡಿಸಬಲ್ಲ. ಯೋಚಿಸಬಲ್ಲ, ಹೊಸದನ್ನು ಸೃಷ್ಟಿಸಬಲ್ಲ, ಆದ್ದರಿಂದ ಕಾಲೇಜಿಗೆ ಬರುವ ವೇಳೆಗೆ ವಿದ್ಯಾರ್ಥಿ ಮಾತೃ ಭಾಷೆಯಲ್ಲಿ ಕಲಿಯುವ ವ್ಯವಸ್ಥೆಯಾಗಬೇಕು”.

೧೯೧೪ ಮಾರ್ಚ ೩೧ ರಂದು ಅಶುತೋಷ್‌ಅವರ ಉಪಕುಲಪತಿಸ್ಥಾನದ ಅಧಿಕಾರವಧಿ ಮುಗಿಯಿತು. ೭ ವರ್ಷಗಳ ಅನಂತರ ೧೯೨೧ ಏಪ್ರೀಲ್ ೪ ರಂದು ಅವರು ಮತ್ತೆ ಉಪಕುಲಪತಿಗಳಾದರು.

ಭಾರತೀಯರ ಆತ್ಮಗೌರವ ಮಾರಾಟಕ್ಕಿಲ್ಲ

ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ವಿಶ್ವವಿದ್ಯನಿಲಯಕ್ಕೆ ಸರ್ಕರದಿಂದ ಧನ ಸಹಾಯವಾಗಬೇಕಾಗಿತ್ತು. ೧೯೨೨ ರಲ್ಲಿ ಬಂಗಾಳ ಸರ್ಕಾರ ಎಂಟು ವಿಶಿಷ್ಟ ಕರಾರುಗಳು ಮೇಲೆ ಎರಡೂವರೆ ಲಕ್ಷ ರುಪಾಯಿಗಳನ್ನು ಮಂಜೂರು ಮಾಡುವುದಾಗಿ ಹೇಳಿತು. ಈ ಕರಾರುಗಳನ್ನು ವಿಶ್ವವಿದ್ಯಾನಿಲಯವನ್ನು ಸರ್ಕಾರದ ಆಧೀನ ಮಾಡುತ್ತಿದ್ದವು. ವಿಶ್ವವಿದ್ಯಾನಿಲಯವನ್ನು ನಿರ್ವಹಿಸುವವರ ವಿಷಯದಲ್ಲಿ ತೀರ ಅಗೌರವ, ಅಪನಂಬಿಕೆ ತೋರುವುಂತಿದ್ದವು. ವಿಶ್ವವಿದ್ಯಾನಿಲಯದ  ಗೌರವಕ್ಕೆ ಚ್ಯುತಿ ತರುವ, ಭಾರತೀಯರಿಗೆ ತೇಜೋವಧೆ ಮಾಡುವ ಆ ಎಂಟು ಕರಾಳ ಕರಾರುಗಳನ್ನು ಒಪ್ಪಿಕೊಳ್ಳಲು ತಾವು ಸರ್ವಥಾ ಸಿದ್ಧರಿಲ್ಲ ಎಂಬುದನ್ನು ಅಶುತೋಷರು ಆಡಳಿತ ಮಂಡಳಿಯ ಅಧ್ಯಕ್ಷ ಭಾಷಣವೊಂದರಲ್ಲಿ ಸ್ಪಷ್ಟಪಡಿಸಿದರು.

“ನನ್ನ ಮೈಯಲ್ಲಿ ಕೊನೆಯ ಒಂದು ತೊಟ್ಟು ರಕ್ತವಿರುವವರಗೂ ವಿಶ್ವವಿದ್ಯಾಲಯದ ಗೌರವಕ್ಕೆ ಕಳಂಕ ತರಲಾರೆ. ವಿಶ್ವವಿದ್ಯಾನಿಲಯವೆಂದರೆ ಸರ್ಕಾರದಿಂದ ಹಣ ಪಡೆದು ಗುಲಾಮರನ್ನು ತಯಾರಿಸುವ ಕಾರ್ಖಾನೆಯಲ್ಲ. ನಾವಿಲ್ಲಿ ಸ್ವಾತಂರ್ತ್ಯ ಬೋಧಿಸಿಯೇ ಬೋಧಿಸುತ್ತೇವೆ. ಸ್ವತಂತ್ರವಾಗಿ ಉಸಿರಾಡುವುದನ್ನು, ಸ್ವತಂತ್ರವಾಗಿ ಯೋಚಿಸುವುದನ್ನು, ಸ್ವತಂತ್ರವಾಗಿ ಜೀವಿಸುವುದನ್ನು ಕಲಿಸುತ್ತೇವೆ.  ಭರತೀಯತೆ ಬಗ್ಗೆ ಇಂದಿನ,ಮುಂದಿನ ಜನಾಂಗಗಳಿಗೆ ತಿಳಿಸುತ್ತೇವೆ. ನಮಗೆ ಕೊಡುವ ಕೇವಲ ಎರಡೂವರೆ ಲಕ್ಷ ರೂಪಾಯಿಗಳ ಧನ ಸಹಾಯಕ್ಕಾಗಿ ನಾವು ನಮ್ಮತನವನ್ನು ಕಳೆದುಕೊಂಡು ಆತ್ಮದ್ರೋಹ ಮಾಡಿಕೊಳ್ಳಬೇಕೆ ? ಈ ಕರಾರುಗಳ ಮೇಲಾದರೆ ಈ ಹಣ ಬೇಡವೇ ಬೇಡ. ಬಂಗಾಳದ ಮನೆ ಮನೆಗೆ ಹೋಗಿ ಭಿಕ್ಷೆಯೆತ್ತಿ ವಿಶ್ವವಿದ್ಯಾನಿಲಯವನ್ನು  ನಾವು ನಡೆಸಬಲ್ಲೆವು. ಈ ಕಾರ್ಯಾಂಗದ ಸದಸ್ಯರಾದ ನೀವು ನೆನಪಿಡಿ. ನಮಗೆ ಬೇಕಿರುವುದು ಸ್ವಾತಂತ್ರ‍್ಯ ಮಾತ್ರ, ಮತ್ತೇನೂ ಅಲ್ಲ.”

ಸರ್ಕಾರ ಸುಸ್ತಾಯಿತು. ತನ್ನೆಲ್ಲ ಎಂಟು ಸೂತ್ರಗಳನ್ನು ತಾನೇ ಇಟ್ಟುಕೊಂಡು ಮರುಮಾತಾಡದೆ ಎರಡೂವರೆ ಲಕ್ಷ ರೂಪಾಯಿಗಳನ್ನು ಮಂಜೂರ ಮಾಡಿತು.

ಮಾನವಂತ ಭಾತೀಯನ ಉತ್ತರ

ಇದೇ ಪ್ರಕರಣದಲ್ಲಿ ಅಶುತೋಷ್‌ಅವರಿಗೆ ಕೆಲವು ಆಮಿಷಗಳನ್ನು ತಂದೊಡ್ಡಿತ್ತು. ಉಪಕುಲಪತಿ ಸ್ಥಾನವನ್ನು ಮತ್ತೆ ಕೆಲವು ವರ್ಷ ಮುಂದುವರೆಸ ಬೇಕಾದರೆ ಸರ್ಕಾರದ ಪರವಾಗಿ ಮಾತಾಡಬೇಕು, ಸರ್ಕಾರ ಮಾಡಿದ ಕಾನೂನನ್ನು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿತು.

ಅಶುತೋಷರ ರಕ್ತ ಕುದಿಯಿತು.

ಕುಲಪತಿ ಲಾರ್ಡ್ ‌ಲಿಟ್ಟನ್‌ಗೆ ಅವರು ಬರೆದ ದೀಘಪತ್ರ ಅವರ ಸಿಂಹವಾಣಿಗೆ ಒಂದು ದಾಖಲೆಯಾಗಿದೆ.

“ನಾನು, ನೀವು ಮಾಡುವ ಕರಾಳ ಮಸೂದೆಗಳಿಗೆ ಅಸ್ತು ಎನ್ನುವುದಿಲ್ಲ ಎಂಬುದನ್ನು ಸರಳ ಪದಗಳಲ್ಲಿ ತಿಳಿಸಿರುವೆ. ನಿಮ್ಮ ಸರ್ಕಾರದ ದುತನಾಗಿ ನಾನು ನ್ನನ  ವೈಯಕ್ತಿಕ ನಿಲುವನ್ನು ಬದಲಿಸಿ ದ್ರೋಹ ಮಾಡಿಕೊಳ್ಳಲಾರೆ. ಭಾರತೀಯರಿಗೆ ಮೋಸ ಮಾಡಲಾರೆ. ವಿಶ್ವವಿದ್ಯಾನಿಲಯದ ಹಾಘೂ ದೇಶದ ಹಿತದೃಷ್ಟಿಯಿಂದ ನಾನು ಮಸೂದೆಗೆ ಪ್ರತಿಭಟನೆ ವ್ಯಕ್ತಪಡಿಸಿರುವೆ. ನೀವು ಇನ್ನೂ ಕೆಲವು ವರ್ಷ ಉಪಕುಲಪತಿಸ್ಥನ ನನಗೆ ಕೊಟ್ಟರೆ  ನನ್ನ ಅಭಿಪ್ರಾಯ ಬದಲಿಸುವೆ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿ. ಈನನ್ನ ಹಲವಾರು ವರ್ಷಗಳ ಸೇವೆಯ ಅವಧಿಯಲ್ಲಿ ಸರ್ಕಾರದ ದೃಷ್ಟಿಗೆ ಅನುಗುಣವಾಗಿ  ನಾನು ಎಂದೂ ಕೆಲಸ ಮಾಡಿಲ್ಲವೆಂಬುದನ್ನು ಸ್ಪಷ್ಟಪಡಿಸಿರುವೆ. ಸರ್ಕಾರದ ಕೈಯಲ್ಲಿ ಶಹಭಾಶ್‌ಗಿರಿ ಪಡೆಯಬೇಕೆಂಬ ಉತ್ಸಾಹದಲ್ಲಿ ಬಂಗಾಳದ ಜನತೆಗೆ ವಂಚನೆ ಮಾಡಬಲ್ಲ ಉಪಕುಲಪತಿ ನಾನಾಗಲಾರೆ. ನೀವು ತೋರಿರುವ  ಉಪಕುಲಪತಿ ಸ್ಥಾನದ ಆಸೆಗೆ ಒಬ್ಬ ಮಾನವಂತ, ದೇಶಪ್ರೇಮಿ, ಭಾರತೀಯನ ಉತ್ತರವಾಗಿ ನಾನು ಆ ಸ್ಥಾನಕ್ಕೆ ಮತ್ತೆ ಬರಲು ನಿರಾಕರಿಸುತ್ತೇನೆ.”

’ಸ್ವಾತಂತ್ರ್ಯದ ಬೆಲೆ ಕಟ್ಟಲು ಸಾಧ್ಯವಿಲ್ಲ’

೧೯೨೩ ಏಪ್ರಿಲ್‌೩ ರಂದು ಅಶುತೋಷ್‌ಅವರ ಉಪಕುಲಪತಿ ಸ್ಥಾನದ ಅವಧಿ ಮುಗಿಯುವುದಿತ್ತು. ಅದೇ ಮಾರ್ಚ್ ೨೪ ರಂದು ಅವರು ಕೊನೆಯ ಬಾಋಇಗೆ ಘಟಿಕೋತ್ಸವ ಭಾಷಣ ಮಾಡಿದರು. ಅನೇಕ ತೊಂದರೆಗಳು, ಆರ್ಥಿಕ ಮುಗ್ಗಟ್ಟುಗಳೂ, ರಾಜಕೀಯ ದುಷ್ಟಶಕ್ತಿಯ ಕೈವಾಡಗಳು ಇವುಗಳ ನಡುವೆಯೂ ವಿಶ್ವವಿದ್ಯಾನಿಲಯ ಯಾವ ರೀತಿಯಾಗಿ ಪ್ರಗತಿ ಹೊಂದಿದೆ ಎಂಬುದನ್ನು ವಿಶ್ಲೇಷಿಸಿದರು.

“ವಿದ್ಯೆಗಾಗಿ ಸರ್ಕಾರ ಮಾಡುವ ಧನಸಹಯಕ್ಕಾಗಿ ನಾಲ್ಕಾರು ಸವಾಲುಗಳಿಗೆ ನಾವು ಒಪ್ಪಲೇಬೇಕಾಗಿ ಬಂದಿರುವ ಕಾಲವಿದು. ಸರ್ಕಾರಿ ಧನಸಹಾಯ ಕಂಡರೆ ಬೆಚ್ಚಿ ಬೀಳುವಂತಾಗಿದೆ. ಈ ಬಗೆಯ  ಷರತ್ತುಗಳು ಯಾವುದೇ ವಿಧದಲ್ಲಿ ಹೇರಿದರೂ ವಿಶ್ವವಿದ್ಯಾನಿಲಯ ಅದನ್ನು ಉಗ್ರವಾಗಿ ಪ್ರತಿಭಟಿಸಬೇಕು. ಏಕೆಂದರೆ ಸ್ವಾತಂರ್ತ್ಯದ ಬೆಲೆ ಕಟ್ಟಲಾಗದ್ದು.”

ಅವರು ಕೊನೇ ಘಟಿಕೋತ್ಸವ ಭಾಷಣ ಮುಗಿಸುವ ಮೊದಲು ಪದವೀಧರರಿಗೆ ನೀಡಿದ ಎಚ್ಚರಿಕೆಯ ಮಾತುಗಳು ಎಷ್ಟು ಪೀಳಿಗೆಗಳಾದರೂ ನೆನಪಿಟ್ಟು ಕೊಳ್ಳಬೇಕಾದದ್ದು.

“ನಿಮ್ಮ ಆಚಾರ-ವಿಚಾರಗಳೇನೇ ಇರಲಿ, ನಿಮ್ಮ ವಿದ್ಯೆ ಓದು ಯಾವುದೇ ಆಗಿರಲಿ, ನಿಮ್ಮ ವಿಶ್ವವಿದ್ಯಾನಿಲಯವನ್ನು ಮಾತ್ರ ಮರೆಯಬೇಡಿ, ರಾಜ್ಯಗಳು ಉಳಿಯಲಿ, ರಾಜ್ಯಗಳು ಅಳಿಯಲಿ. ಆದರೆ ನಿಮ್ಮ ನಮ್ಮ ವಿದ್ಯಾಮಾತೆಯಾದ ವಿಶ್ವ ವಿದ್ಯಾನಿಲಯ ತಾನು ಜನ್ಮಕೊಟ್ಟ ಸಹಸ್ರಾರು ವಿದ್ಯಾರ್ಥಿಗಳ ಭಕ್ತಿ, ಪ್ರೇಮಗಳಿಂದ ಎಂದೆಂದೂ ಬೆಳೆಯುತ್ತಲೇ ಇರುತ್ತದೆ. ”

ದುಃಖದ ಅಧ್ಯಾಯ

ಆಶುತೋಷ್‌ಮುಖರ್ಜಿಯವರು ಉಪಕುಲಪತಿಗಳ ಸ್ಥಾನದಿಂದ  ನಿವೃತ್ತರಾಗಿದ್ದರೂ ವಿಶ್ವದ್ಯಾನಿಲಯದ ವಷಯದಲ್ಲಿ ಆತ್ಮೀಯತೆಗಳನ್ನು ಇಟ್ಟುಕೊಂಡಿದ್ದರು. ಕಾಯಾಂರ್ಗದ ಸದಸ್ಯರಾಗಿ ಮುಂದುವರಿದ್ದರು. ವಿಶ್ವಿದ್ಯಾನಿಲಯದ ಕೆಲಸಗಳ ಒತ್ತಡದಿಂದ ಅವರ ಆರೋಗ್ಯ ಆ ವೇಳೆಗೆ ಕೆಟ್ಟಿತ್ತು. ೧೯೨೩ರಲ್ಲಿ ಮುದ್ದಿನ ಮಗಳಾದ ಕಮಲಾ ತೀರಿಕೊಂಡಳು. ಇದೊಂದು ಭರಿಸಲಾಘದ ನಷ್ಟ.   ಇದರಿಂದ ಅವರ ಆರೋಗ್ಯ ಮತ್ತಷ್ಟು ಕುಗ್ಗಿತು.

ಕಮಲಾ ಹಿರಯ ಮಗಳು, ಪುಟ್ಟ ಹುಡುಗಿಯಾಗಿದ್ದಾಗಲೇ ಗಂಡನನ್ನು ಕಳೆದುಕೊಂಡ ನತದೃಷ್ಟೆ. ಈ ಬಾಲ ವಿಧವೆಗೆ ಮರು ವಿವಾಹ ಮಾಡುವ ಧೈರ್ಯ ಆ ಕಾಲದಲ್ಲೇ ಆಶುತೋಷ್ ವಹಿಸಿದ್ದರು. ಅದೊಂದು ಕ್ರಾಂತಿ. ಸಮಾಜ ಬಂಧುಗಳು ಎಲ್ಲರೂ ಬಹಿಷ್ಕಾರ ಹಾಕುವಂತೆ ಬೆದರಿಸಿದರೂ ೧೯೦೮ರಲ್ಲಿ ವಿಧವಾ ವಿವಾಹವನ್ನು ಮಾಡಿ ಪೂರೈಸಿ ಮುಂದಿನ ಪೀಳಿಗೆಯವರಿಗೆ ಒಂದು ಬುನಾದಿ ಹಾಕಿದರು.

ಕೆಲವು ವರ್ಷಗಳು ಮಾತ್ರ ದಾಂಪತ್ಯ ಜೀವನ ನಡೆಸಿದ ಕಮಲಾ ಮತ್ತೆ ವಿಧವೆಯಾಧಳು.  ಅಶುತೋಷ್‌ಮಗಳನ್ನು ಕಣ್ಣಲ್ಲಿಟ್ಟುಕೊಂಡು ಕಾಪಾಡಿದರು. ಕೊನೆಗೆ ಕಮಲಾ ಅವರ ಕಣ್ಣೆದುರಿಗೇ ಕಾಲವಾದಳು.

ಮಗಳ ನೆನಪನ್ನು ಅಮರವಾಗಿಸಲು ಅವಳ ಹೆಸರಿನಲ್ಲಿ ೪೦ ಸಾವಿರ ರೂಪಾಯಿಗಳನ್ನು ತೆಗೆದಿರಿಸಿ ” ಕಮಲಾ ಅಧ್ಯಾಪಕತ್ವ ನಿಧಿ” ಮಾಡಿದರು. ಭಾರತೀಯ ಜೀವನ ಮತ್ತು ಆದರ್ಶಗಳನ್ನು ಕುರಿತು ಬಂಗಾಳಿ ಅಥವಾ ಇಂಗ್ಲೀಷಿನಲ್ಲಿ ಉಪನ್ಯಾಸಗಳನ್ನು ನೀಡುವವರಿಗೆ ಸಲ್ಲುವ ಈ ಅಧ್ಯಾಪಕತ್ವ ವೇತನವನ್ನು ಮೊದಲ ಬಾರಿಗೆ ಪಡೆದವರು ಅನಿಬೆಸೆಂಟ್‌. ಅನಂತರ ಸರೋಜಿನಿಯಾಯುಡು, ರವೀಂದ್ರನಾಥ ಠಾಕೂರ್, ಸರ್ವಪಲ್ಲಿ ರಾಧಾಕೃಷ್ಣನ್ ಮೊದಲಾದವರು ಪಡೆದರು. ತಾಯಿಯ ಹೆಸರನ್ನು ಚಿರವಾಗಿಸಲು’ ಜಗತ್ತಾರಿಣಿ ಚಿನ್ನದ ಪದಕ’ವನ್ನು ಪತ್ರ ಸಾಹಿತ್ಯಕ್ಕೆ ಅಥವಾ ವಿಜ್ಞನ ಸಾಹಿತ್ಯಕ್ಕೆ ಮೀಸಲಾಗಿಟ್ಟರು. ಈ ಪದಕ ಪಡೆದ ಮೊದಲಿಗರು ರವೀಂದ್ರನಾಥ ಠಾಕೂರ್‌, ಭೌತಶಾಸ್ತ್ರ ಅತವಾ ರಸಾಯನ ಶಾಸ್ತ್ರಗಳಲ್ಲಿ ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳಿಗೆ ತಂದೆಯ ಹೆಸರಿನಲ್ಲಿ ದತ್ತಿಯನ್ನು ಇಟ್ಟಿದ್ದಾರೆ.

೧೯೨೪ರ ಮೇ ೨೫ ರಂದು ಆಶುತೋಷ್‌ಅವರು ಯಾವುದೋ ಮುಖ್ಯ ಮೊಕದ್ದಮೆಯ ಪರವಾಗಿ ವಾದ ಮಾಡಲು ಪಾಟ್ನಾಗೆ ಹೋಗಿದ್‌ಆಗ ಹಠಾತ್ತನೆ ನಿಧನರಾದರು. ಕಡೆಯ ಗಳಿಗೆಯವರೆಗೂ ದುಡಿದ  ಜೀವ ಇವರದು. ಈ ಹಠಾತ ನಿಧನದಿಂದ ಒಬ್ಬ ಮಹಾ ಮೇಧಾವಿಯನ್ನು ಕಳೆದುಕೊಂಡಂತಾಯಿತು.

ಇಂತಹ ವ್ಯಕ್ತಿ ವಿರಳ

ಭಾರತವನ್ನು ಸಂಶೋಶಧನಾ ಕ್ಷೇತ್ರದಲ್ಲಿ ಮುಂದಕ್ಕೆ ತರಬೇಕೆಂಬ ಹಂಬಲದಿಂದ ಅಶುತೋಷ್‌ಪ್ರಪಮಚದ ಅನೇಕ ವಿದ್ಯಾಸಂಸ್ಥೆಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದರು. ಸ್ವತಃ ಸಂಸ್ಕೃತ  ವಿದ್ವಾಂಸರಾಗಿದ್ದ  ಇವರು ಸಂಸ್ಕೃತ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು. ಸಂಸ್ಕೃತ ವಿದ್ವಾಂಸರಿಂದ “ಸರಸ್ವತಿ” ಮತ್ತು “ಶಾಸ್ತ್ರ ವಾಚಸ್ಪತಿ” ಎಂಬ ಬಿರುದುಗಳನ್ನು ಪಡೆದಿದ್ದರು. ಬಂಗಾಳ ಸಂಸ್ಕೃತ ಸಂಘದ ಅಧ್ಯಕ್ಷರಾಗಿ ೧೫ ವರ್ಷಗಳು ದುಡಿದ್ದರು.

ಅಶುತೋಷ್ ಅವರದು ಸಾಧಾರಣ ಎತ್ತರ, ದಪ್ಪಗೆ ಸ್ವಲ್ಪ ಕಪ್ಪಗೆ ಇದ್ದರು. ಎಂಥ ಬೃಹತ್‌ಸಭೆಯಲ್ಲೂ ರಂಜಿಸಬಲ್ಲ ವ್ಯಕ್ತಿ, ದಪ್ಪ ಹುಬ್ಬುಗಳ ನಡುವೆ ಹೊಳಪಾದ ಕಣ್ಣುಗಳು.  ಈ ಕಣ್ಣುಗಳಲ್ಲಿ ಹೂ ನಗೆ, ದುಂಡು ಮುಖದಲ್ಲಿ ಮಾಟವಾದ ಮೂಗು, ಕೆಳಕ್ಕಿಳಿದಿರುವ ಮೀಸೆ. ತುಮಬಾ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಇವರ ನಡತೆ ಬಹು ಸರಳ, ಮೆತ್ತಗಿನ ಹಾಸಿಗೆಯ ಮೇಲೆ ಮಲಗದೆ ಗಟ್ಟಿ ಚಾಪೆಯ ಮೇಲೆ ಮಲಗಿದವರು. ಶ್ರೀಮಂತರ ಮನೆಯೊಂದಕ್ಕೆ ಅತಿಥಿಯಾಗಿ ಹೋಗಿದ್ದಾಗ ಪಲ್ಲಂಗದ ಮೇಲೆ ಮಲಗಿದರೂ ನಿದ್ದೆ ಬಾರದೆ ನೆಲದ ಮೇಲೆ ಮಲಗಿದ್ದರು ! ಅವರು ಎಂದೂ ಚಾ ಕುಡಿದವರಲ್ಲ; ಎಲೆ-ಅಡಿಕೆ ಹಾಕಿದವರಲ್ಲ.

ಪ್ರತಿನಿತ್ಯ, ಶಿಸ್ತಿನ ದಿನಚರಿ, ಬೆಳಗ್ಗೆ ೪ ಗಂಟೆಗೆಲ್ಲಾ ಎದ್ದು ಓದುತ್ತಿದ್ದರು. ಸ್ವಲ್ಪ ಕಾಲದ ನಂತರ ಮೈದಾನದಲ್ಲಿ ವಾಯುವಿಹಾರ, ಅಲ್ಲಿಂದ ಬಂದಮೇಲೆ ತಮಗಾಗಿ ಕಾಯುತ್ತಿದ್ದ ಸಂದರ್ಶಕರ ಭೇಟಿ. ನ್ಯಾಯಾಲಯದ ಕೆಲಸ ಮುಗಿಸಿ ವಿಶ್ವವಿದ್ಯಾಲಯಕ್ಕೆ ಹೋಗಿ ರಾತ್ರಿ ಮನೆಗೆ ಮರಳುವ ವೇಳೆಗೆ ಹತ್ತು ಗಂಟೆಯಾಗುತ್ತಿತ್ತು.

ಇವರ ಜೀವನದಂತೆಯೇ ಇವರ ಮನೆಯ ಪುಸ್ತಕ ಭಂಡಾರವೂ ಅದ್ಭುತ. ಎಪ್ಪತ್ತೆರಡು ಸಹಸ್ರ ಗ್ರಂಥಗಳ ಸಮೂಹವದು ! ಸಾಹಿತ್ಯ, ಚರಿತ್ರೆ, ಕಾನೂನು ಶಾಸ್ತ್ರರ, ಗಣಿತ ಶಾಸ್ತ್ರ, ತತ್ವಶಾಸ್ತ್ರ ಮೊದಲಾಧ ಎಲ್ಲ ವಿಷಯಗಳನ್ನೊಳಗೊಂಡ ವಿವಿಧ ಭಾಷೆಗಳ ಪುಸ್ತಕಗಳ ಸಂಗ್ರಹವದು.

೧೯೪೯ರಲ್ಲಿ ಇವರ ಮಕ್ಕಳಾದ ಜಸ್ಟಿಸ್ ರಾಮ ಪ್ರಸಾದ್ ಮುಖರ್ಜಿ, ಡಾಕ್ಟರ್‌ಶಾಮ್‌ಪ್ರಸಾದ್ ಮುಖರ್ಜಿ, ಉಮಾ ಪ್ರಸಾದ ಮುಖರ್ಜಿ ಇವರುಗಳು ಕಲ್ಕತ್ತೆಯ ರಾಷ್ಟ್ರೀಯ ಗ್ರಂಥಾಲಯಕ್ಕೆ ಈ ಎಪ್ಪತ್ತೆರಡು ಸಹಸ್ರ ಗ್ರಂಥಗಳನ್ನೂ ದಾನ ಮಾಡಿದರು.

ದೇಶಬಂಧು ಚಿತ್ತರಂಜನದಾಸರು ಆಶುತೋಷ್‌ಅವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ಅವರು ಬಹು ದೊಡ್ಡ ನ್ಯಾಯಾಧೀಶರು. ನವಭಾರತದ ನಿರ್ಮಾಣಕ್ಕಾಗಿ ಶ್ರಮಿಸಿದ ಅಂಥ ಶಿಕ್ಷಣತಜ್ಞ ಹಾಗೂ ದೇಶ ಭಕ್ತನನ್ನು ನಾವು ಕಾಣುವುದೇ ಅಪರೂಪ”.

 

ತಮ್ಮ ಸ್ವಂತ ಗ್ರಂಥಾಲಯದಲ್ಲಿ.