“ಎಲ್ಲ ,ಮಾನವರು ನನ್ನ  ಮಕ್ಕಳೇ
ನಾನವರಿಗೆ ತಂದೆಯ ಸಮಾನ, ತಂದೆ
ತನ್ನ ಮಕ್ಕಳಿಗೆ ಹಿತ, ಸುಖ ದೊರೆಯಲಿ
ಎಂದು ಬಯಸುವಂತೆ ಎಲ್ಲ ಮನುಷ್ಯರಿಗೂ
ಸದಾಕಾಲ ಸುಖ ದೊರೆಯಲಿ
ಎಂದೇ ನಾನು ಬಯಸುತ್ತೇನೆ”.

ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಚಕ್ರವರ್ತಿಯೊಬ್ಬ ಹೇಳಿದ ಮಾತುಗಳಿವು.

ಸಣ್ಣ ಪುಟ್ಟ ರಾಜರು ಮದಿಸಿ ತಮ್ಮ ಪದವಿ, ಅಧಿಕಾರಗಳನ್ನೆಲ್ಲ ಸ್ವಾರ್ಥಕ್ಕಾಗಿ, ಅನ್ಯಾಯದಿಂದ ಬಳಸಿರುವುದನ್ನು ಚರಿತ್ರೆಯಲ್ಲಿ ಕಾಣುತ್ತೇವೆ. ಆದರೆ ಈ ಮಾತುಗಳನ್ನು ಆಡಿದವನು ಭಾರತದ ಬಹು ಭಾಗವನ್ನು ಆಳುತ್ತಿದ್ದ ಪ್ರಭು: ಲಕ್ಷಾಂತರ ಜನರ ಸಾವು ಬದುಕುಗಳನ್ನು ಅಂಗೈಯಲ್ಲಿಟ್ಟುಕೊಂಡ ಸಾಮ್ರಾಟ.

ಇಂತಹ ಆದರ್ಶ ಚಕ್ರವರ್ತಿಯನ್ನು ಸ್ವತಂತ್ಯ್ರ ಭಾರತ ಮೆಚ್ಚಿಕೆಯಿಂದ ನೆನೆಸಿಕೊಳ್ಳುವುದರಲ್ಲಿ ಆಶ್ಚರ್ಯವೇನು?

ಈ ಚಕ್ರವರ್ತಿ ಅಶೋಖ (ಅಥವಾ ದೇವನಾಂಪ್ರಿಯದರ್ಶಿ) ಸಾರನಾಥದಲ್ಲಿ  ನಿರ್ಮಿಸಿರುವ ಸ್ಮಾರಕ ಸ್ಥಂಭದ ಸಿಂಹಶಿರ್ಷಿಕೆಯಲ್ಲಿರುವ ಚಕ್ರ ಸ್ವತಂತ್ಯ್ರ ಭಾರತದ ಧ್ವಜದಲ್ಲಿ ಬೆಳಗುತ್ತಿದೆ.

ಪ್ರಿಯದರ್ಶಿಯಾರು?

“ದೇವಾನಾಂಪ್ರಿಯ ಪ್ರಿಯದರ್ಶಿ” ಬರೆಯಿಸಿದ ಅನೇಕ ಶಿಲಾಶಾಸನಗಳು ನಮ್ಮ ನಾಡಿನ ತುಂಬ ಶತಶತಮಾನಗಳಿಂದಲೂ ಕಾಣಸಿಗುತ್ತಿದ್ದವು. ಆದರೆ ಅವುಗಳನ್ನು ಬರೆಯಿಸಿದ “ದೇವನಾಂಪ್ರಿಯ ಪ್ರಿಯದರ್ಶಿ ಯಾರು ಎಂಬುವುದು ಮಾತ್ರ ಒಡೆಯದ ಒಗಟಾಗಿಯೇ ಉಳಿಯಿತು.

೧೯೧೫ನೆಯ ಇಸವಿಯ ಒಂದು ದಿನ. ಇಂದಿನ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಗೆ ಸೇರಿದ ಮಸ್ಕಿ ಗ್ರಾಮದ ಗುಡ್ಡದಲ್ಲಿ ಒಂದು ಶಾಸನದಲ್ಲಿ “ದೇವನಾಂಪ್ರಿಯ ಪ್ರಿಯದರ್ಶಿ” ಎಂಬ ಬಿರುದುಗಳ ಜೊತೆಗೆ “ಅಶೋಕ” ಎಂದು ಹೆಸರು ಕಂಡಿತು. “ದೇವನಾಂಪ್ರಿಯ ಪ್ರೀಯದರ್ಶಿ: ಮತ್ತಾರೂ ಆಗಿರದೆ ಎರಡು ಸಾವಿರ ವರ್ಷಗಳು ಗತಿಸಿದ ಮೇಲೆಯೂ ಜಗತ್ತಿನ ಗೌರವಾದರ ಗಳಿಗೆ ಪಾತ್ರನಾದ, ಇತಿಹಾಸದ ಆಗಸದಲ್ಲಿ ಜಾಜ್ವಲ್ಯ ಮಾನವಾದ ಪ್ರಕಾಶಿಸುತ್ತಿರುವ  ಅಕ್ಷಯ ತಾರೆ, ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನೇ ಎಂಬುವುದು ಖಚಿತವಾಯಿತು.

ಮೌರ್ಯವಂಶ ಪ್ರದೀಪ

ಅಶೋಕನು ಚಂದ್ರಗುಪ್ತ ಮೌರ್ಯನ ಮೊಮ್ಮಗ, ಚಂದ್ರಗುಪ್ತ  ಮೌರ್ಯನ ಸಾಮ್ರಾಜ್ಯದ ಮೊದಲನೆಯ ಚಕ್ರವರ್ತಿ, ಸುಮಾರು ಇಪ್ಪತ್ತ ನಾಲ್ಕು ವರ್ಷಗಳವರೆಗೆ ರಾಜ್ಯಭಾರ ಮಾಡಿದ ಚಂದ್ರಗುಪ್ತ ಶಾಂತ ಜೀವನ ಬಯಸಿ, ತನ್ನ ಮಗನಾದ ಬಿಂದುಸಾರನಿಗೆ ರಾಜ್ಯಾಡಳಿತವನ್ನು ಒಪ್ಪಿಸಿದನು.  ಈ ಬಿಂದುಸಾರನೇ ಅಶೋಕನ ತಂದೆ.

ಅಶೋಕನ ತಾಯಿ ಸುಭಂದ್ರಾಗಿ. ಈಕೆ ಚಂಪಕ ನಗರದ ಒಬ್ಬ ಬಡವನ ಮಗಳು.

ಅಶೋಕನು ಬಾಲ್ಯದಲ್ಲಿ ಬಹು ಚಟುವಟಿಕೆಯುಳ್ಳವನು ತುಂಟನೂ ಆಗಿದ್ದನಲ್ಲದೆ ಒಳ್ಳೆಯ ಬೇಟೆಗಾರನಾಗಿದ್ದನು. ಚಂದ್ರಗುಪ್ತನ ಕಾಲದಿಂದಲೂ ಅರಸನೂ ರಾಮನೆತನದವರೂ ಬೇಟೆಗೆ ಹೊರಡುವುದೆಂದರೆ ವೈಭವದ ದೃಶ್ಯ.

ಅಶೋಕನು ನೋಡಲು ಅಷ್ಟೋಂದು ರೂಪವಂತನಾಗಿರಲಿಲ್ಲ. ಆದರೆ ಶೌರ್ಯ, ಧೈರ್ಯ, ಗಾಂಭಿರ್ಯ ಸಾಹಸ ಮತ್ತು ದಕ್ಷತೆಗಳನ್ನು ಆತನನ್ನು ಮೀರಿಸುವ ರಾಜಕುಮಾರರು ಯಾರು ಇರಲಿಲ್ಲವೆಂದೇ  ಹೇಳಬಹುದು. ಇದರಿಂದ ಅಶೋಕನು ಪ್ರಜೆಗಳಿಗೂ ಆಸ್ಥಾನದ ಅಮಾತ್ಯರಿಗೂ ಅಚ್ಚುಮೆಚ್ಚಿನ ರಾಜಕುಮಾರನಾಗಿದ್ದನು. ಅಂತೆಯೇ ಬೆಳೆಯ ಸಿರಿಯನ್ನು ಮೊಳಕೆಯಲ್ಲಿ ಕಂಡ ಬಿಂದುಸಾರನು, ಕುರೂಪಿಯ ವಯಸ್ಸಿನಲ್ಲಿ ಚಿಕ್ಕವನೂ ಅದರ ದಕ್ಷತೆಯಲ್ಲಿ ಮಿಗಿಲಾದ ಅಶೋಕನನ್ನು ಅವಂತಿ ರಾಜ್ಯಕ್ಕೆ ಮಂಡಲಾಧಿಪತಿಯಾಗಿ ನೇನಿಸಿದನು.

ತಕ್ಷಶಿಲೆಯಲ್ಲಿ

ವಿದ್ಯೆ, ಸಂಪತ್ತು, ಕಲೆ ಇತ್ಯಾದಿಗಳಿಂದ ವಿರಾಜಿಸುವ ಸುಂದರವಾದ ಉಜ್ಜಯನಿ ನಗರವು ಅವಂತಿ ರಾಜ್ಯದ ರಾಜಧಾನಿಯಾಗಿತ್ತು. ಆ ರಾಜ್ಯದ ಆಡಳಿತ ಸೂತ್ರವನ್ನು ವಹಿಸಿಕೊಂಡ ಅಶೋಖನು ಕೆಲವು ದಿನಗಳಲ್ಲಿಯೇ ರಾಜತಂತ್ರದಲ್ಲಿ ಒಳ್ಳೆಯ ನೈಪುಣ್ಯ ಪಡೆದನು.  ಅಲ್ಲಿರುವಾಗಲೇ ಆ ಪ್ರಾಂತ್ಯಕ್ಕೆ ಸೇರಿದ ವಿದಿಶಾನಗರದ ವರ್ತಕನ ರೂಪವತಿ ಮಗಳಾದ ಶಾಕ್ಯ ಕುಮಾರಿಯನ್ನು ಮದುವೆಯಾದನು. ಅವರಿಗೆ ಇಬ್ಬರು ಮಕ್ಕಳಾದರು- ಮಹೇಂದ್ರ ಮತ್ತು ಸಂಘಮಿತ್ರ.

ತರುಣ ಅಶೋಕನ ಶೌರ್ಯ, ಧೈರ್ಯ ಮತ್ತು ಜಾಣ್ಮೆಯ ಸತ್ವ ಪರೀಕ್ಷೆಯ ಪ್ರಸಂಗವೊಂದು ಬಂದಿತು. ಇದ್ದಕ್ಕಿದ್ದಂತೆಯೇ ತಕ್ಷ ಶಿಲೆಯ ನಾಗರಿಕರು ಮಗಧ ಆಳ್ವಿಕೆಗೆ ವಿರೊಧವಾಗಿ ದಂಗೆ ಎದ್ದರು. ಬಿಂದುಸಾರನ ಹಿರಿಯ ಮಗ ಸುಷೀಮ (ಇವನಿಗೆ ಸುಮನ ಎಂದೂ ಹೆಸರು) ಆಗ ತಕ್ಷಶಿಲೆಯನ್ನು ಆಳುತ್ತಿದ್ದ. ಅವನಿಂದ ಈ ದಂಗೆಯನ್ನು ಅಡಿಗಿಸಲು ಸಾಧ್ಯವಾಗಲಿಲ್ಲ. ಬಿಂದುಸಾರ ಅಶೋಖನನ್ನು ಅಲ್ಲಿಗೆ ಕಳೂಹಿಸಿದ. ಸಾಕಷ್ಟು ಸೇನಾಬಲವಿರದಿದರೂ ಆತನು ಎದೆಗುಂದದೇ ತಕ್ಷ ಶಿಲೆಯತ್ತ ಸಾಗಿದನು.

ಆಶ್ಚರ್ಯಕರವಾದ ಒಂದು ಸಂಗತಿ ನಡೆಯಿತು. ತಕ್ಷ ಶಿಲೆಯ ಜನ ಅಶೋಕನೊಡನೆ ಯುದ್ಧ ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಅತಿ ವೈಭವದಿಂದ ಅವನನ್ನು ಸ್ವಾಗತಿಸಿದರು.

“ನಮಗೆ ಮಹಾರಾಜ ಬಿಂದುಸಾರನ ಮೇಲೆಯೂ ದ್ವೇಷವಿಲ್ಲ, ರಾಜಪರಿವಾರದವರ ಮೇಲೆಯೂ ಸಹ ದ್ವೇಷವಿಲ್ಲ. ಇದಕ್ಕೆಲ್ಲ ದುಷ್ಟರಾದ ಮಂತ್ರಿಗಳೇ ಕಾರಣರು. ಅವರ ದುರ್ಬೋಧನೆಯಿಂದ ನಾವು ತಮ್ಮನ್ನು ತಪ್ಪು ತಿಳಿದು ಕೊಂಡೇವು. ನಾವು ಬಂಡಾಯಗಾರರಲ್ಲ. ನಮ್ಮನ್ನು ಕ್ಷಮಿಸಬೇಕು” ಎಂದು ಬೇಡಿದರು.

ನಿಜಸ್ಥಿತಿಯನ್ನು ಅರಿತುಕೊಂಡು ಅಶೋಕನು ದಂಗೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ವಿಧಿಸಿದನು. ಕೆಲವು ದಿನಗಳವರೆಗೆ ಅಲ್ಲಿಯೇ ಇದ್ದು,ತನ್ನ ಸರಳ ಮತ್ತು ಸುಂದರವಾದ ಮಾತಿನ ಸರಣಿಯಿಂದ ಜನತೆಗೆ ಉಪದೇಶ ಮಾಡಿದನು,. ಅಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಗೊಂಡ ಮೇಲೆ ಅಶೋಕನು ತನ್ನ ರಾಜ್ಯಕ್ಕೆ ಮರಳಿದನು.

ನಾವು ಬಂಡಾಯಗಾರರಲ್ಲ, ನಮ್ಮನ್ನು ಕ್ಷಮಿಸಬೇಕು.

ದಿನಗಳು , ವರ್ಷಗಳು ಉರುಳಿದವು.

ಬಿಂದೂಸಾರ ಮುದುಕನಾದ. ದೇಹ  ದುರ್ಬಲವಾಯಿತು. ಆರೋಗ್ಯ ಕೆಟ್ಟಿತು. ಅವನ ಹಲವಾರು ಮಂತ್ರಿಗಳಲ್ಲಿ ಮುಖ್ಯನಾಗಿದ್ದವನು ರಾಧಾಗುಪ್ತ. ಎಂಬುವವನು ಅವನೂ ಇತರರೂ ರಾಜ್ಯಕ್ಕೆ ಮುಂದೇನು ಆಧಾರ ಎಂದು ಯೋಚಿಸಲು ಪ್ರಾರಂಭಿಸಿದರು.

ಬಿಂದುಸಾರನ ಹಿರಿಯ ಮಗ ಸುಷೀಮ. ಸಂಪ್ರದಾಯದಂತೆ ಅವನಿಗೇ ಸಿಂಹಾಸನ ಸೇರಬೇಕು.

ಆದರೆ ತಕ್ಷಶಿಲೆಯ ಪ್ರಜೆಗಳು ದಂಗೆ ಎದದ್‌ಆಗ ಅವನ ಅಸಾಮರ್ಥ್ಯ ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಅವನು ಅಹಂಕಾರದಿಂದಲೂ ನಡೆಯಲು ಪ್ರಾರಂಭಿಸಿದ.

ಇಂತಹವರು ರಾಜನಾದರೆ ರಾಜ್ಯಕ್ಕೆ ಕ್ಷೇಮವಿಲ್ಲ, ರಾಜ್ಯದಲ್ಲಿ ಶಾಂತಿ ಇಲ್ಲ, ನ್ಯಾಯವಿಲ್ಲ ಎಂದು ಮಂತ್ರಿಗಳೂ ತೀರ್ಮಾನಿಸಿದರು.  ಬಿಂದುಸಾರನ ಆರೋಗ್ಯ ತೀರ ಕೆಟ್ಟಿದೆ, ಕೂಡಲೇ ಬರಬೇಕೆಂದು ಅಶೋಕನಿಗೆ ಹೇಳಿ ಕಳೂಹಿಸಿದರು.

ಅಶೋಕ ರಾಜನಾದ

ಸಾಮ್ರಾಟ ಬಿಂದುಸಾರನು ತನ್ನಭುಜಬಲದಿಂದ “ಅಮಿತ್ರಘಾತ”ನೆಂಬ ಬಿರುದನ್ನು ಗಳಿಸಿ, ದಕ್ಷಿಣ ಭಾರತದಲ್ಲಿ ಪೂರ್ವ – ಪಶ್ಚಿಮ ಸಮುದ್ರಗಳ ಮಧ್ಯದ ಪ್ರದೇಶವನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿ ಸುಮಾರು ೨೫ ವರ್ಷಗಳವರೆಗೆ ರಾಜ್ಯಭಾರ ಮಾಡಿದ. ಕಿ.ಪೂ.೨೭೨ರಲ್ಲಿ ಮರಣ ಹೊಂದಿದನು. ತಂದೆಯ ಮರಣ ಕಾಲಕ್ಕೆ ಮಹಾ ಮಂತ್ರಿ ರಾಧಾಗುಪ್ತನ ಸೂಚನೆಯಂತೆ ಉಜ್ಜಯಿನಿಯಿಂದ ಪಾಟಲಿಪುತ್ರಕ್ಕೆ ಬಂದಿದ್ದ ಅಶೋಕನಿಗೆ, ಮಗದ ಸಾಮ್ರಾಜ್ಯದ ಆಡಳಿತ ಸೂತ್ರವನ್ನು ವಹಿಸಿಕೊಡಲಾಯಿತು.

ಮುಂದೇನಾಯಿತು ಎಂಬುವುದು ಅಷ್ಟು ಸ್ಪಷ್ಟವಿಲ್ಲ. ಪ್ರಾಯಶಃ ತಂದೆಯ ಮರಣ ವಾರ್ತೆಯನ್ನು ತಿಳೀದು ಸುಷೀಮನು ಮಗಧ ಸಾಮ್ರಾಜ್ಯದ ಪಟ್ಟವು ಎಲ್ಲಿ ಆಶೋಕನಿಗೆ ದೊರಕುವುದೋ ಎಂಬ ಸಂದೇಹದಿಂದ, ಪ್ರಸಂಗ ಬಂದರೆ ಯುದ್ಧ ಮಾಡುವ ಉದ್ದೇಶದಿಂದ ದೊಡ್ಡ ಸೈನ್ಯದೊಡನೆ ತಕ್ಷಶಿಲೆಯಿಂದ ಪಾಟಲಿಪುತ್ರಕ್ಕೆ ಬಂದನು. ನಗರ ಪ್ರವೇಶ ಮಾಡಬೇಕೆಂದು ಪ್ರಯತ್ನಿಸುತ್ತಿರುವಾಗಲೇ ಸಾವಗೀಡಾದನು.

ಅಶೋಕ ಸಿಂಹಾಸನಕ್ಕಾಗಿ ತನ್ನ ಸಹೋದರರನ್ನೆಲ್ಲ ಕೊಲ್ಲಿಸಿದ ಎಂಬ ಕತೆಯುಂಟು. ಚಾರಿತ್ರಿಕವಾಗಿ ಇದಕ್ಕೆ ಆಧಾರವಿಲ್ಲ. ಅನೇಕ ಶಾಸನಗಳಲ್ಲಿ ಅಶೋಕ ತನ್ನ ಸಹೋದರರನ್ನು ಕುರಿತು ಪ್ರೀತಿಯಿಂದ ಮಾತನಾಡಿದ್ದಾನೆ.

ಕ್ರಿ.ಪೂ. ೨೬೮ನೇ ವರ್ಷದ ಜೇಷ್ಠ ಮಾಸದ ಶುಕ್ಲಪಂಚಮಿಯ ದಿನ ಅಶೋಕನ ಪಟ್ಟಾಭಿಷೇಕದ ಶುಭ ದಿನ. ಪಾಟಲಿಪುತ್ರ ನಗರವು ತಳಿರು- ತೋರಣಗಳಿಂದ ಅಲಂಕೃತವಾಗಿದೆ.

ಪಟ್ಟಾಭಿಷೇಕದ ಶುಭ ಮುರ್ಹೂತ ಸಮೀಪಿಸಿತು. ಮಂಗಳವಾದ್ಯಗಳು ಮೊಳಗತೊಡಗಿದವು. ರಾಜಪರಿವಾರದವರ ರಕ್ಷೆಯನ್ನು ತರುಣನೂ ತೇಜಸ್ವಿಯೂ ಆದ ಅಶೋಕನು ಓಲಗಕ್ಕೆ ಬಂದನು. ಯುವರಾಜನು ಸಿಂಹಾಸನಕ್ಕೆ ನಮಿಸಿ, ಹತ್ತಿ ಕುಳಿತ. ಪುರೋಹಿತರು ಮಂತ್ರ ಪಠಣ ಮಾಡುತ್ತಿದ್ದಂತೆಯೇ ಯುವರಾಜನಿಗೆ ರಾಜ ಚಿಹ್ನೆಗಳನ್ನು ತೊಡಿಸಿ  ಕಿರೀಟವನ್ನು ತಲೆಯ ಮೇಲಿಟ್ಟರು. ಸಮರ್ಥ ಸಾಮ್ರಾಟನನ್ನು ಪಡೆದ ಪಾಟಲಿಪುತ್ರದ ಜನತೆ ಹಿಗ್ಗಿ ಹಬ್ಬನ್ನಾಚರಿಸಿತು.

ಚಾಣಾಕ್ಷ ರಾಜಕಾರಣಿಯಾದ ಅಶೋಕನು ಜಾಣ್ಮೆಯಿಂದ, ಸಮರ್ಥ ರೀತಿಯಿಂದ ರಾಜ್ಯದಾಡಳಿತ ನಡೆಸತೊಡಗಿದನು. ಮಂತ್ರಿಮಂಡಲ, ಅಧಿಕಾರ ವರ್ಗ, ಸಾಮ್ರಾಟನಿಗೆ ವಿಧೇಯರಾಗಿ ಪರಸ್ಪರರು ತಮ್ಮ ಕರ್ತವ್ಯದ ಹೊಣೆಯನ್ನ ಅರಿತುಕೊಂಡು, ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಅದರಿಂದಾಗಿ ಶಾಂತಿ ಸಮೃದ್ಧಿಗಳ ಹೊಂಬೆಳಕು ಸಾಮ್ರಾಜ್ಯದಲ್ಲೆಲ್ಲ ಹಬ್ಬಿತು.

ಆನಂದದ ಅವಧಿಯಲ್ಲಿ ಕಾಲ ಗತಿಸಿದುದೇ ತಿಳಿಯುವುದಿಲ್ಲ. ನೋಡು ನೋಡುತ್ತಿದ್ದಂತೆಯೇ ಅಶೋಕನು ಮಗಧಾಧಿಪತಿಯಾಗಿ ಎಂಟು ವರ್ಷಗಳು ಉರುಳಿದವು.

ಕಳಿಂಗ ವಿಜಯ

ಅಶೋಕ ಈಗ ವಿಶಾಲವಾದ ಸಾಮ್ರಾಜ್ಯದ ಪ್ರಭುವಾಗಿದ್ದ. ಆದರೆ ಕಳಿಂಗ (ಈಗಿನ ಒರಿಸ್ಸಾ) ಎಂಬ ಸಣ್ಣ ರಾಜ್ಯವೊಂದು ಅವನ ಸಾಮ್ರಾಜ್ಯದ ಆಚೆಗೆ ಸ್ವತಂತ್ಯ್ರವಾಗಿತ್ತು.

ಕಳಿಂಗ ಗೋದಾವರಿ ಮತ್ತು ಮಹಾನದಿಗಳ ಮಧ್ಯಮ ಪ್ರದೇಶದಲ್ಲಿ ವ್ಯಾಪಿಸಿದ ಸಿರಿವಂತ ದೇಶವಾಗಿತ್ತು. ಅಲ್ಲಿಯ ಜನರು  ದೇಶಪ್ರೇಮಿಗಳೂ ಸ್ವಾತಂತ್ಯ್ರ ಪ್ರೀಯರೂ ಆಗಿದ್ದರು. ತಮ್ಮ ತಾಯ್ನಾಡಿನ ರಕ್ಷಣೆಯಲ್ಲಿ ತಮ್ಮ ತನುವು ತೃಣವೆಂದು ಭಾವಿಸಿ ಹೋರಾಡುವ ವೀರಯೋಧರಾಗಿದ್ದರು.

ಕಳಿಂಗ ಕಾಳಗಹೃದಯ ಪರಿವರ್ತನೆ

ಅಶೋಕ ತಾತನ ಕಾಲದಲ್ಲಿ ಕಳಿಂಗ ಸೈನ್ಯದಲ್ಲಿ ಅವರತ್ತು ಸಾವಿರ ಕಾಲಾಳುಗಳೂ, ಒಂದು ಸಾವಿರ ಕುದುರೆ ಸವಾರರು ಮತ್ತು ಏಳೂ ನೂರು ಆನೆಗಳೂ ಮಾತ್ರ ಇದ್ದವು. ಬಿಂದುಸಾರನ ಕಾಲದಲ್ಲಿ ಮತ್ತು ಅಶೋಕನ ಆಡಳಿತದ ಪ್ರಾರಂಭದ ವರ್ಷಗಳಲ್ಲಿ ಕಳಿಂಗ ರಾಜ ತನ್ನ ಸೈನ್ಯದ ಬಲವನ್ನು ಬಹಳ  ಮಟ್ಟಿಗೆ ಹೆಚ್ಚಿಸಿಕೊಂಡಿರಬೇಕು.

ಮಗಧದ ಪ್ರಚಂಡ ಸೈನ್ಯ ಕಳಿಂಗದತ್ತ ನಡೆಯಿತು. ಅಶೋಕನೇ ಸೈನ್ಯದೊಡನೆ ಹೊರಟ.

ಕಳಿಂಗರು ಮಗಧ ಸೈನ್ಯವನ್ನು ಎದುರಿಸಿದರು. ಧೈರ್ಯದಿಂದ ಹೋರಾಡಿದರು. ಪ್ರಾಣವನ್ನೇ ಪಣವಾಗಿಟ್ಟುಕೊಂಡು ಕಾದಿದರು. ಅವರ ಶೌರ್ಯ, ಬಲಿದಾನ ಯಾವುದೂ ಫಲವಾಗಲಿಲ್ಲ. ಕಳಿಂಗ ಸೈನ್ಯ ನಿಮಿಷ ನಿಮಿಷ್ಕೂ ಕರಗುತ್ತ ಬಂದಿತ್ತು. ಕಳಿಂಗ ಸೋಲನ್ನೊಪ್ಪಿತು.

ಅಶೋಕನಿಗೆ ಅದ್ಭುತ ವಿಜಯ ದೊರಕಿತು.

ಅಯ್ಯೋ, ಎಂತಹ ಹೇಯ ಕಾರ್ಯ!

ನಿಜ, ಅಶೋಕನಿಗೆ ಅದ್ಭುತ ವಿಜಯ ದೊರಕಿತು, ಕಳಿಂಗ ಕೈವಶವಾಯಿತು.

ಈ ವಿಜಯ ಬೆಲೆ?

ಅಶೋಕನ ಒಂದು ಶಾಸನವೇ ಹೇಳುತ್ತದೆ:

“ಒಂದೂವರೆ ಲಕ್ಷ ಜನ ಸೆರೆ ಸಿಕ್ಕಿದರು. ಒಂದು ಲಕ್ಷ ಜನ ಯುದ್ಧ ನಡೆಯುತ್ತಿದ್ದಾಗ ಸತ್ತರು,. ಇದಕ್ಕಿಂತ ಹೆಚ್ಚು ಸಂಖ್ಯೆ ಜನ (ಒಟ್ಟಿನಲ್ಲಿ) ಸತ್ತರು”.

ಸ್ವತಃ ಸೈನ್ಯದ ನಾಯಕನಾಗಿ ಹೋಗಿದ್ದ ಅಶೋಕ ಕಣ್ಣಾರೆ ರಣಭೂಮಿಯನ್ನು ಕಂಡ.

ಕಣ್ಣೀನ ದಿಟ್ಟಿಗೆ ಕಾಣುವವರೆಗೂ ಬಿದ್ದಿರುವ ಆನೆ, ಕುದುರೆಗಳು, ಸೈನಿಕರ ದೇಹದ ತುಂಡುಗಳು, ಹರಿಯುತ್ತಿರುವ ರಕ್ತದ ಕಾಲುವೆಗಳೂ,ಅರೆ ಜೀವದಲ್ಲಿ ಬಿದ್ದು ನರಳಾಡುತ್ತಿರುವ ಗಾಯಾಳುಗಳೂ, ತಂದೆ ತಾಯಂದಿರನ್ನು ಕಳೆದುಕೊಂಡ ಪರದೇಶಿ ಮಕ್ಕಳೂ, ಮಾಂಸಮಜ್ಜಾದಿಗಳನ್ನು ತಿನ್ನಲು ಹಾರಿ ಬರುತ್ತಿರುವ ರಣಹದ್ದುಗಳು.

ಒಂದೇ, ಎರಡೇ- ನೂರಾರು ದುರಂತ ದೃಶ್ಯಗಳನ್ನು ಕಂಡ ಅಶೋಕನ ಹೃದಯ ಮಮ್ಮಲನೆ ಮರುಗಿತು! ಕರುಳಿನಲ್ಲಿ ಕತ್ತಿಯಾಢಿಸಿದಂತೆಯೇಆಯಿತು. “ಅಯ್ಯೋ! ನಾನು ಎಂತಹ ಹೇಯ ಕಾರ್ಯ ಮಾಡಿದೆ! ವಿಶಾಲವಾದ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗಿದ್ದರೂ ತುಂಡು ಭೂಮಿಯ ಆಸೆಯಿಂದ ಎಷ್ಟೊಂದು ಜನರ ಸಾವಿಗೆ ನೋವುಗಳಿಗೆ ಕಾರಣವಾದೆನಲ್ಲ, ಸಹಸ್ರಾರು ಸಹೋದರಿಯರ ಮುತ್ತೈದಿ ತನವನ್ನು ಮಣ್ಣುಗೂಡಿಸಿದೆನಲ್ಲ, ಸಹಸ್ರಾರು ಮಕ್ಕಳನ್ನು ತಬ್ಬಲಿಮಾಡಿದೆನಲ್ಲ” ಎಂದು ಪರಿತಪಿಸುತ್ತ ನಿಮಿಷ ಮಾತ್ರ ಅಲ್ಲಿ ನಿಲ್ಲಲ್ಲು ಮನಸ್ಸಾಗದೇ ಪಾಟಲೀಪುತ್ರದತ್ತ ಭಾರವಾದ ಹೃದಯದಿಂದ ನಡೆದನು.

ಮಾವನ ಚರಿತ್ರೆಯಲ್ಲಿ ಬೇರೆ ಯಾರಿದ್ದಾರೆ?

ಅಶೋಕನ ಅಭಿಲಾಷೆಯಂತೆ ಕಳಿಂಗರಾಜ್ಯದೊಡನೆ ಅವನ ಅಧೀನವಾಯಿತು. ಆದರೆ, ರಾಜ್ಯವಿಸ್ತಾರದ ಆನಂದದಿಂದ ತುಂಬಿ ತುಳಕಬೇಕಾಗಿದ್ದ ಅವನ ಒಡಲು ದುಃಖದ ಕಡಲಾಗಿತ್ತು.ವಿಜಯದ ಹರ್ಷ, ಕಣ್ಣಾರೆ ಕಂಡ ಮಾರಣ ಹೋಮದಿಂದ ಕುಗ್ಗಿಹೋಗಿತ್ತು. ಆತನು ಕುಳಿತಿರಲಿ,ನಿಂತಿರಲಿ, ಮಲಗಿರಲಿ, ಎಚ್ಚರವಿರಲಿ, ಯಾವ ಅವಸ್ತೇಯಲ್ಲಿದ್ದರೂ ಕಳಿಂಗದ ಹತ್ಯಾಕಾಂಡ ದೃಶ್ಯವು ಅವನ ನಯನಗಳ  ಮುಂದೆ ಸುಳಿದಾಡಿದಂತಾಗಿ ಒಂದು ಕ್ಷಣ ಮಾತ್ರವೂ ನೆಮ್ಮದಿಯಿಂದ ಇರದಂತೆ ಮಾಡಿತ್ತು.

“ಯುದ್ಧದ ಬೇಗೆ  ಕೇವಲ ರಣಭೂಮಿಯಲ್ಲಷ್ಟೇ ಹೊತ್ತಿ ಉರಿಯದೇ ಅದು ಮುಂದುವರೆದು ಏನನ್ನೂ ಅರಿಯದ ಮುಗ್ಧ ಜನರನ್ನು ಆಹುತಿ ತೆಗೆದುಕೊಳ್ಳುತ್ತದೆ. ಅದರ ಕೋಲಾಹಲ ಅಂದಿಗಷ್ಟೇ ಮುಗಿಯದೇ ಬಹು ಕಾಲದವರೆಗೆ ಹಾಲಹಲವಾಗಿ ಹರಿದು ಅನೇಕ ತೊಂದರೆಗಳಿಗೆ ಈಡು ಮಾಡುತ್ತದೆ” ಎಂಬುವುದನ್ನು ಅಶೋಕನು ಮನಗಂಡನು. ಅಂತೆಯೇ, ಜನಬಲ, ಧನಬಲ, ಸೈನ್ಯಬಲ, ಸಮೃದ್ಧಿ ಯಾಗಿದ್ದರೂ ರಣರಂಗದಲ್ಲಿ ಅವನನ್ನು ಹಿಮ್ಮೆಟ್ಟಿಸಬಲ್ಲ ಸಂಗ್ರಾಮಶೂರ ಆಗ ಮತ್ತೊಬ್ಬನಿರದೆಯಿದ್ದರೂ ಕಳಿಂಗಯುದ್ಧವೇ ಆತನ ಪ್ರಥಮ ಹಾಗೂ ಕೊನೆಯ ಕಾಳಗವಾಯಿತು! ಶಸ್ತ್ರಶಕ್ತಿ, ಧರ್ಮಶಕ್ತಿಗೆ ಶರಣಾಗತವಾಯಿತು.

ಇನ್ನೆಂದಿಗೂ ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುವುದಿಲ್ಲವೆಂದು, ಮತ್ತೇ ಶಸ್ತ್ರ ಹಿಡಿಯುವುದಿಲ್ಲವೆಂದು ಅಶೋಕನ ಪ್ರತಿಜ್ಞೆ ಮಾಡಿದನು. ಅದು ಭೀಷ್ಮ ಪ್ರತಿಜ್ಞೆಯೇ ಆಯಿತು.

ಯುದ್ಧದಲ್ಲಿ ಸೋತು, ಅನಂತರ “ಮತ್ತೇ ಯುದ್ಧ ಮಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುವ ಶಸ್ತ್ರ ಕೆಳಗಿಟ್ಟ ರಾಜರು ಎಷ್ಟೋ ಮಂದಿ ಪ್ರಪಂಚದ ಚರಿತ್ರೆಯಲ್ಲಿ ಕಾಣಸಿಗುತ್ತಾರೆ.

ಆದರೆ ಯುದ್ಧದಲ್ಲಿ ವಿಜಯಿಯಾಗಿ, ಕರುಣೆಯಿಂದ ಶಸ್ತ್ರ ಕೆಳಗಿಟ್ಟ ರಾಜರು ಎಷ್ಟೋ ಮಂದಿ?

ಪ್ರಾಯಶಃ ಜಗತ್ತಿನ ಚರಿತ್ರೆಯಲ್ಲಿ ಒಬ್ಬನೇ ಒಬ್ಬ -ಅಶೋಖ.

ಧರ್ಮ ವಿಜಯವೇ ಶ್ರೇಷ್ಠ

“ಧರ್ಮ ವಿಜಯದಿಂದ ಸರ್ವತ್ರ ಪ್ರೀತಿರಸಯುಂಟಾಗುತ್ತದೆ. ಧರ್ಮ ವಿಜಯದಿಂದ ಪ್ರೀತಿ ಲಭಿಸುತ್ತದೆ. ಹಾಗೆ ಲಭಿಸಿದ ಪ್ರೀತಿ ಎಷ್ಟೇ ಸ್ವಲ್ಪವಾದರೂ ಪರದಲ್ಲಿ ಆದರಿಂದ ಮಹತ್ತಾದ ಫಲವುಂಟೆಂದು ದೇವಾಂಪ್ರೀಯನು ತಿಳಿದಿರುವನು.-ಹೀಗೆಂದು ಹೇಳಿದ್ದಾನೆ ಅಶೋಕ ಒಂದು ಶಾಸನದಲ್ಲಿ.

ಕಳಿಂಗದ ಘೋರ ಹತ್ಯೆಯನ್ನು ಕಂಡು ಬೇಯುತ್ತಿದ್ದ ಅವನ ಮನಸ್ಸಿಗೆ ಶಾಂತಿಯನ್ನು ಕೊಟ್ಟದ್ದು ಬೌದ್ಧ ಧರ್ಮ.

ಬುದ್ಧನ ಉಪದೇಶಗಳಾದ ಅಹಿಂಸೆ, ದಯೆ, ಮಾನವ ಪ್ರೇಮಗಳು ಮನನೊಂದಿದ್ದ ಅಶೋಕನಿಗೆ ಒಪ್ಪಿಗೆಯಾದವು. ಅವನು ಚಂದ್ರಗುಪ್ತನೆಂಬ ಬೌದ್ಧ ಗುರುವಿನಿಂದ ಬೌದ್ಧ ಧರ್ಮದ ಧೀಕ್ಷೆಯನ್ನು ಪಡೆದನು. ಅಂದಿನಿಂದ ಅಶೋಕನ ಹೃದಯ, ದಯೆ, ಸದಾಚಾರ, ಪ್ರೇಮ, ಅಹಿಂಸೆ, ಅನುಕಂಪಗಳ ನಿಲಯವಾಯಿತು.  ಅವನು ಬೇಟೆ ಯಾಡುವುದನ್ನು ನಿಲ್ಲಿಸಿದ. ಮಾಂಸಾಹಾರವನ್ನು ಬಿಟ್ಟನು. ಅರಮನೆಯ ಅಡಿಗೆಯ ಮನೆಯಲ್ಲಿ ನಡೆಯುತ್ತಿದ್ದ ಪ್ರಾಣಿಗಳ ವಧೆಯನ್ನು ತಡೆದನು. ತಾನು ಮಾತ್ರ ಧಾರ್ಮಿಕ ಜೀವನವನ್ನು ನಡೆಸಿದರೆ ಸಾಲದೆಂದು ತಿಳಿದು ತನ್ನ ಪ್ರಜೆಗಳೂ ಅಧಿಕಾರಿಗಳೂ ಅದೇ ರೀತಿಯಿಂದ ನಡೆದುಕೊಳ್ಳಬೇಕೆಂದು ರಾಜಾಜ್ಞೆಯನ್ನು ಹೊರಡಿಸಿದನು.

“ಎಲ್ಲ ವಿಜಯಗಳಲ್ಲಿ ಧರ್ಮ ವಿಜಯವೇ ಶ್ರೇಷ್ಠ. ಕಾಳಗದಿಂದ ಕೆಲವು ಅಂಗುಲ ಭೂಮಿಯನ್ನು  ಮಾತ್ರ ಜಯಿಸಬಹುದು. ಆದರೆ, ಪ್ರೇಮ, ಅನುಕಂಪಗಳ ಮೂಲಕ ಜನರ ಹೃದಯಗಳನ್ನೇ ಗೆಲ್ಲಬಹುದು. ಶಸ್ತ್ರದ ಮೊನೆಯಿಂದ ರಕ್ತದ ಕಾಲುವೆ ಹರಿದರೆ, ಧರ್ಮದ ಮೂಲಕ ಪ್ರೀತಿರಸ ಚಿಮ್ಮುತ್ತದೆ. ಶಸ್ತ್ರ ವಿಜಯದ ಪರಿಣಾಮ ತಾತ್ಕಾಲಿಕ ಆನಂದವನ್ನುಂಟು ಮಾಢಿದರೆ, ಧರ್ಮ ವಿಜಯದ ಪರಿಣಾಮ ಶಾಶ್ವತವನ್ನುಂಟು ಮಾಡಿದರೆ, ಧರ್ಮ ವಿಜಯದ ಪರಿಣಾಮ ಶಾಶ್ವತವನ್ನು ಮಾಡಿದರೆ, ಧರ್ಮವಿಜಯದ ಪರಿಣಾಮ ಶಾಶ್ವತವಾದುದು” ಎಂದು ಅಶೋಕ ತಿಳಿದುಕೊಂಡ. ತನ್ನು ಜನತೆಗೆ ಈ ರೀತಿ ಬೋಧಿಸಿದ:

“ಎಲ್ಲರೂ ಸತ್ಯ,ನ್ಯಾಯ, ಪ್ರೇಮ, ಪ್ರಾಮಾಣಿಕತನಗಳಿಂದ ನಡೆಯಿರಿ. ತಂದೆ-ತಾಯಿಗಳನ್ನು ಗೌರವಿಸಿರಿ: ಗುರುಗಳನ್ನು, ಬಂಧುಬಳಗದವರನ್ನು ಆಧರಿಸಿರಿ: ಅವರೊಂದಿಗೆ ನಮ್ರತೆಯಿಂದ ನಡೆಯಿರಿ. ದಾನ ಧರ್ಮ ಗಳನ್ನು ಮಾಡಿರಿ. ಪ್ರಾಣಿ ಹಿಂಸೆ ಮಾಡಬೇಡಿರಿ. ತಾನು, ತನ್ನ ಮತವೇ ಶ್ರೇಷ್ಠ ಎಂಬ ಭಾವನೆ  ಇರಕೂಡದು. ಎಷ್ಟೇ ಮತಗಳಿದ್ರೂ ಅವುಗಳು ಸಾರುವ ನೀತಿ ಒಂದೇ ಆಗಿರುತ್ತದೆ. ಆತ್ಮ ಪ್ರಶಂಸೆ ಮಾಡಿಕೊಳ್ಳುವುದು, ಇನ್ನೊಬ್ಬರ‍ನ್ನು  ಹಳಿಯುವುದು ಹೇಗೆ ಒಳ್ಳೆಯದಲ್ಲವೋ ತೆಗಳೀಕೆಯೂ ಸರ್ವಥ ಒಳ್ಳೆಯದಲ್ಲ. ಇತರ ಮತಗಳ ಬಗೆಗೆ ಗೌರವ ತಾಳಿದರೆ, ತನ್ನ ಮತಕ್ಕೆ ಕಳೆ ಬರುತ್ತದೆ”

ಕಳಿಂಗದ ನೆನಪೇ ಕಾಡಿದ ಅಶೋಕ ಮತ್ತೇ ಶಸ್ತ್ರ ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು.

ಅಶೋಕನು ಕೇವಲ ತನ್ನ ಜನರಿಗಾಗಿ ಚಿಂತಿಸಲಿಲ್ಲ, ಜಗದ ಜನರಿಗಾಗಿ ಚಿಂತಿಸಿದನು. ಧರ್ಮದ ಮೂಲಕ, ಸದ್ಭಾವ, ಸತ್ಕಾರ್ಯಗಳ ಮೂಲಕ ಜನರ  ಹೃದಯಗಳನ್ನು ಜಯಿಸಲು, ಲೋಕ ಕಲ್ಯಾಣಕಾರ್ಯ ಮಾಡಲು ಅವನು ತನ್ನ ತನು, ಮನ ಧನ ಮುಡಿಪಾಗಿಡಲು ನಿಶ್ಚಯಿಸಿದನು.

ಧರ್ಮ ಪ್ರಸಾರಕ್ಕಾಗಿ ಅಶೋಕನು ಕೈಗೊಂಡ ಪ್ರಥಮ ಪ್ರಯತ್ನವೆಂದರೆ, ಧರ್ಮಯಾತ್ರೆ, ಅದು ನಡೆದುದು ಕಳಿಂಗ ಯುದ್ಧವಾದ ಎರಡು ವರ್ಷಗಳ ಅನಂತರ, ಮಹಾತ್ಮ ಗೌತಮಬುದ್ಧನು ದೇಹವಿಟ್ಟು ಪವಿತ್ರ ಸ್ಥಳವಾದ ಸಂಭೋಧಿಯ ದರ್ಶನದಿಂದ ಆತನ ಧರ್ಮಯಾತ್ರೆ ಪ್ರಾರಂಭಗೊಂಡಿತು. ಈ ಯಾತ್ರೆಯಲ್ಲಿ ಇನ್ನಿತರ ಸ್ಥಳಗಳೀಗೆ ಸಂದರ್ಶನವಿತ್ತನು. ತಾನು ಕೈಗೊಂಡ ಧರ್ಮಯಾತ್ರೆಯ ಉದ್ದೇಶ ಅವನೇ ಹೇಳುವಂತೆ “ಬ್ರಾಹ್ಮಣರು, ಶ್ರಮಣರು ಇವರನ್ನು ಕಂಡು ಅವರಿಗೆ ದಾನಕೊಡುವುದು, ಹಿರಿಯರ ದರ್ಶನ ಪಡೆದು ಅವರಿಗೆ ಸುವರ್ಣಾಧಿಗಳನ್ನು ದಾನ ಮಾಡಿ ಸತ್ಕರಿಸುವುದು. ಜನರನ್ನು ಭೇಟಿಯಾಗಿ ಅವರಿಗೆ ಧರ್ಮಭೋಧನೆ ಮಾಡುವುದು ಮತ್ತು ಧರ್ಮದ ವಿಷಯ ಚರ್ಚಿಸುವುದು ಇವೇ ಮುಖ್ಯವಾದುವು,.

ಧರ್ಮದ ಪ್ರಸಾರ

ಅಶೋಕನು ತನ್ನ ಪ್ರಥಮ ಧರ್ಮಯಾತ್ರೆಯಷ್ಟರಿಂದಲೇ ತೃಪ್ತಿಪಟ್ಟುಕೊಳ್ಳಲಿಲ್ಲ. ಈ ಧರ್ಮ ಉಪದೇಶ ಒಂದೇ ನಾಡಿನಲ್ಲಿ ನಿಂತ ನೀರಾಗದೇ ಅದು ನಾಡು- ಹೊರನಾಡುಗಳಲ್ಲಿ ಹರಿಯುವ ಪವಿತ್ರ ಗಂಗಾ ಪ್ರವಾಹವಾಗಬೇಕು. ಅದರಲ್ಲಿ ಜನಪದವು ಮಿಂದು ಪುನೀತವಾಗಬೇಕು” ಎಂಬುವುದು ಅಶೋಕನ ಅಭಿಲಾಷೆಯಾಗಿತ್ತು. ಅದಕ್ಕಾಗಿ ಆತನು ಮುಂದಿನ ಜನಾಂಗದ ಮೇಲೆ ಪ್ರಕಾಶ ಬೀರುವ, ಶಾಶ್ವತವಾಗಿ ಉಳಿಯುವಂತಹ ಇನ್ನೊಂದು ಮಹತ್ವದ ಕಾರ್ಯವನ್ನು ಕೈಗೊಂಡನು,. ಧರ್ಮೊಪದೇಶ, ಸಮಾಜ ನೀತಿ, ನೈತಿಕ ಆಚರಣೆ ಮುಂತಾದುವನ್ನು ಕುರಿತು ನಾಡು- ಹೊರನಾಡುಗಳಲ್ಲಿ ಕಲ್ಲುಬಂಡೆಗಳ ಮೇಲೆ, ಕಂಬಗಳ ಮೇಲೆ ಧರ್ಮಶಾಸನಗಳನ್ನು ಬರೆಯಿಸಲು ಪ್ರಾರಂಭಿಸಿದನು. “ತನ್ನ ಸಂದೇಶ ದೇಶ ವಿದೇಶದ ಜನತೆಯವರೆಗೂ ತಲುಪಲಿ, ಲೋಕದ ಕಲ್ಯಾಣದ ಸಲುವಾಗಿ, ಜನರು ಇದನ್ನು ತಪ್ಪದೇ ಅನುಸರಿಸಿ ಧರ್ಮದ ವೃದ್ಧಿಯಾಗಲಿ”- ಎಂದು ಅಶೋಕನೇ ತಿಳಿಸಿದ್ದಾನೆ. ಇಂತಹ ಕೆಲವು  ಶಾಸನಗಳನ್ನು ಇಂದಿಗೂ ನಾವು, ಈಗಿನ ಪಾಕಿಸ್ತಾನದ ಪೇಷಾವರ ಜಿಲ್ಲೆಯಲ್ಲಿ, ಅಫಘಾನಿಸ್ತಾನದ ಕಾಂದಹಾರ ಬಳಿಯಲ್ಲಿ, ನೇಪಾಳ ದೇಶದ ಗಡಿಯಲ್ಲಿ ಅಲ್ಲದೇ ನಮ್ಮ ದೇಶಧ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಆಂದ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ಸಿದ್ಧಾಪೂರ (ಚಿತ್ರದುರ್ಗ ಜಿಲ್ಲೆಯ) ಕೊಪ್ಪಳ, ಮಸ್ಕಿ (ರಾಯಚೂರು ಜಿಲ್ಲೆ)ಮುಂತಾದ ಸ್ಥಳಗಳಲ್ಲಿ ಕಾಣಬಹುದು.

ಧರ್ಮ ಬೀಜಗಳು

ಅನೇಕ  ಅರಸರು, ತಮ್ಮ ದಂಡಯಾತ್ರೆಯ ಬಗ್ಗೆ, ದಾನ ದತ್ತಿಗಳನ್ನು ಕೊಟ್ಟ ಬಗ್ಗೆ, ರಾಜ್ಯ ವಿಸ್ತಾರದ ಬಗ್ಗೆ ಬರೆಯಿಸಿದ ಶಿಲಾಶಾಸನಗಳ ವಿಷಯ ಇತಿಹಾಸದಿಂದ ನಮಗೆ ತಿಳಿದು ಬರುತ್ತದೆ.  ಆದರೆ ಲೋಕ ಕಲ್ಯಾಣದ ಸಲುವಾಗಿ ಜನತೆಯನ್ನು “ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ಸಾವಿನಿಂದ ಅಮರತ್ವದ ಕಡೆಗೆ; ಕರೆದೊಯ್ಯುವ ರತ್ನದೀಪಗಳಂತಿರುವ ಶಾಸನಗಳನ್ನು ಬರೆಸಿದ ಕೀರ್ತಿ ಅಶೋಕನಿಗೊಬ್ಬನಿಗೆಗ ಸಲ್ಲುವುದು. ಈ ಧರ್ಮಶಾಸನಗಳು,  ಜನತೆ ಹೃದಯ ಹೊಲದಲ್ಲಿ ಬಿತ್ತುವ ಧರ್ಮ ಬೀಜಗಳಾಗಿವೆ, ಮುಕ್ತಿಯ ಕಡೆಗೆ ಕರೆದೊಯ್ಯುವ ಸೋಪಾನಗಳಾಗಿವೆ.

ಜನರಲ್ಲಿ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯುಂಟು ಮಾಡಲು ಅಶೋಕನು ಇನ್ನೊಂದು ದಿಟ್ವವಾದ ಹೆಜ್ಜೆಯನ್ನಿಟ್ಟನು. ಧರ್ಮದ ಬಗ್ಗೆ ಸರಿಯಾಧ ತಿಳುವಳೀಕೆ ಮಾಡಿಕೊಳ್ಳಲು ಎಲ್ಲಧರ್ಮಗಳು ಸಾರುವ ನೀತಿ ಒಂದೇ ಎಂದು ಜನರಿಗೆ ತಿಳಿಸಿಕೊಡಬೇಕು ಎಂದು ಅವನ ಉದ್ದೇಶ. ಒಂದು ಶಾಸನದಲ್ಲಿ ಅಶೋಕ ಹೀಗೆಂದಿದ್ದಾನೆ.” ಎಲ್ಲ ರೀತಿಗಳಲ್ಲಿಯೂ ಇತರ ಮತದವರನ್ನು ಗೌರವಿಸಲೇಬೇಕು. ಹೀಗೆ ಮಾಡಿದರೆ ತನ್ನ ಮತವು ಬೆಳೆಯುತ್ತದೆ.  ಇತರೆ ಮತಕ್ಕೂ ಉಪಕಾರವಾಗುತ್ತದೆ.  ಬೇರೆ ರೀತಿ ಮಾಡಿದರೆ ತನ್ನ ಮತಕ್ಕೆ ಕೆಡುಕು, ಇತರ ಮತಕ್ಕೂ ಹಾನಿ, ಏಕೆಂದರೆ, ತನ್ನ ಮತವನ್ನು ಹೇಗೆ ಬೆಳೆಗಿಸಲಿ ಎಂಬ ಆತುರದಿಂದ ಯಾರು ಅದನ್ನೇ ಪೂಝಿಸಿ ಇತರೆ ಮತವನ್ನು ಹಳಿಯುತ್ತಾನೋ ಅವನು ತನ್ನ ವರ್ತನೆಯಿಂದ ತನ್ನ ಮತಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತಾನೆ. ಎಲ್ಲ ಮತಗಳ ಸತ್ವ ಹೆಚ್ಚಬೇಕು. ದೇವನಾಂಪ್ರಿಯನು ದಾನವೂ ಪೂಜೆಯು ಇದಕ್ಕಿಂತ ಮುಖ್ಯವೆಂದು ಭಾವಿಸುವುದಿಲ್ಲ. ಈ ಭಾವನೆಗಳನ್ನು ಜನರಲ್ಲಿ ಹರಡಲು “ಧರ್ಮಮಹಾಮಾತ್ರ”ರೆಂಬ ಅಧಿಕಾರಿಗಳನ್ನು ನೇಮಿಸಿದನು. ಈ ಧರ್ಮ ಮಹಾಮಾತ್ರರು ಬೇರೆ ಬೇರೆ ಧರ್ಮದವರನ್ನು ಕಂಡು, ಅವರೊಡನೆ ಬೆರೆತು, ಬೇರೆ ಧರ್ಮಗಳ ವಿಷಯದಲ್ಲಿ ಅವರಲ್ಲಿ ಉಂಟಾದ ತಪ್ಪು ಕಲ್ಪನೆಯನ್ನು ಕಳೆದು, ಅವರು ಒಳ್ಳೆಯ ಅಭಿಪ್ರಾಯ ತಳೆಯುವಂತೆ ಪ್ರಯತ್ನಿಸಿದರು. ಧರ್ಮಕ್ಕಾಗಿ ಎಂದು ನಿಗದಿಯಾದ ಹಣ ಎಷ್ಟೋ ಬಾರಿ ಹೇಗೋ ಖರ್ಚಾಗಿ ಬಿಡುತ್ತದೆ, ಅಲ್ಲವೇ? ಹೊರ ತೋರಿಕೆಗೆ ಧರ್ಮಕ್ಕೆ ಎಂದು ಖರ್ಚಾದರೂ ಯಾರೋ ಸ್ವಾರ್ಥಿಗಳ ಪಾಲಾಗಿಬಿಡುತ್ತದೆ. ಹೀಗಾಗದೆ ಧರ್ಮಕ್ಕಾಗಿ ತೆಗೆದಿಟ್ಟ ಹಣ ಸರಿಯಾಗಿ ವೆಚ್ಚವಾಗುವಂತೆ ನೋಡಿಕೊಳ್ಳುವ ಕೆಲಸವು ಧರ್ಮ ಮಹಾತ್ರಯರದು.  ಇವರು ದೇಶದಲ್ಲೆಲ್ಲ ಸಂಚರಿಸುತ್ತ ನ್ಯಾಲಯಗಳಿಗೂ ಭೇಟಿ ಕೊಡುತ್ತಿದ್ದರು;  ವ್ಯವಹಾರದಲ್ಲಿ, ದಂಡನೆಯಲ್ಲಿ ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸುತ್ತಿದ್ದರು.  ಇಂತಹ ಅಧಿಕಾರಿಗಳನ್ನು ಪ್ರಪಂಚದ ಚರಿತ್ರೆಯಲ್ಲಿ ಬೇರೆ ಯಾವ ದೇಶದಲ್ಲಿಯೂ ನೇಮಿಸಿದ್ದರೆಂದು ಕಾಣುವುದಿಲ್ಲ. ಇವರಲ್ಲದೇ ರಾಜ್ಯಾಡಳಿತಕ್ಕೆ ಸಂಬಂಧಿಸಿದಂತೆ ಇನ್ನಿತರೆ ಅಧಿಕಾರಿಗಳೂ ರಾಜಾಜ್ಞೆಯಂತೆ ಪ್ರತಿ ಐದು ವರ್ಷಗಳಿಗೊಮ್ಮೆ ನಾಡಿನಲ್ಲಿ ಪ್ರವಾಸ ಮಾಡಿ ಧರ್ಮ ಪ್ರಸಾರ ಮಾಡುತ್ತಿದ್ದರು.

ಪ್ರತಿಯೊಬ್ಬ ಭಿಕ್ಷುವನ್ನು ಕರೆದು ಬುದ್ಧನ ಉಪದೇಶವನ್ನು ಚರ್ಚಿಸಿದ.

ಧರ್ಮ ಸಮ್ಮೇಳನ :

ಅಶೋಕನು ಅರಸನಾಗಿ ಹದಿನೇಳೂ ವರ್ಷಗಳಾಗಿರಬಹುದು. ದುರ್ದೈವದಿಂದ ಬೌದ್ಧ ಸಂಘದ ಸಂನ್ಯಾಸಿಗಳಲ್ಲಿ ಭಿನ್ನಾಭಿಪ್ರಾಯ ಬಂದು ಬೇರೆ ಬೇರೆ ಪಂಗಡಗಳಾದವು. ಸಂಘದಲ್ಲಿ ಮೋಸ ಮಾಡುವ ಸೋಮಾರಿಗಳಾದ ಮತ್ತು ಅನಾಚಾರದ ಸಂನ್ಯಾಸಿಗಳ ಸಂಖ್ಯೆಯು ಹೆಚ್ಚಾಗಿದ್ದಿತ್ತು. ತಮಗೆ ತಿಳಿದಂತೆ ನಡೆಯುವ ಈ ಸನ್ಯಾಸಿಗಳು ಬೌದ್ಧ ಧರ್ಮವೆಂಬ ಚಂದ್ರನಿಗೆ ಗ್ರಹಣಗಳಾಗಿ ಪರಿಣಮಿಸಿದ್ದರು. ಅದರಿಂದಾಗಿ ಕ್ರಮೇಣ ಧರ್ಮದ ಬೆಳಕು ಕ್ಷೀಣಿಸಹತ್ತಿತ್ತು. ಇದನ್ನರಿತ ಅಶೋಕನ ಮನ ನೊಂದಿತು. ಈ ವಿಪತ್ತಿನಿಂದ ಬೌದ್ಧಧರ್ಮವನ್ನು ರಕ್ಷಿಸಿ, ಅದನ್ನು ವೃದ್ಧಿಸುವ ದೃಷ್ಟಿಯಿಂದ ಸೋಮಾರಿ ಸನ್ಯಾಸಿಗಳನ್ನೆಲ್ಲ ಸಂಘದಿಂದ ಹೊರ ಹಾಕಿದನು.ಇನ್ನುಳಿದ ಶೀಲ ಸಂಪನ್ನರರಾದ, ವಿಚಾರವಂತರಾದ ಬೌದ್ಧ ಸಂನ್ಯಾಸಿಗಳ ಧರ್ಮಸಮ್ಮೆಳನವನ್ನು ಪಾಟಲಿಪುತ್ರದ ಅಶೋಕಾ ರಾಮದಲ್ಲಿ ಕರೆದನು. ದೇಶದ ನಾಲ್ಕು ನಿಟ್ಟುಗಳಿಂದಲೂ ಆಗಮಿಸಿದ್ದ ಬೌದ್ಧ ಸಂನ್ಯಾಸಿಗಳ ಈ ಮಹಾ ಸಮ್ಮೆಳನಕ್ಕೆ ಮೊಗ್ಗಲಿಪುತ್ತ ತಿಷ್ಯನು ಅಧ್ಯಕ್ಷನಾಗಿದ್ದರು. ಗುರುಗಳ ಸಂಗಡ ಅಶೋಕನೇ ಕುಳಿತು, ಪ್ರತಿಯೊಬ್ಬ ಭಿಕ್ಷುವನ್ನೂ (ಬೌದ್ಧ ಸಂನ್ಯಾಸಿ) ಕರೆದು, “ಭಗವಾನ್ ಬುದ್ಧ ಏನನ್ನು ಉಪದೇಶಿಸಿದ?” ಎಂದು ಪ್ರಶ್ನಿಸಿದ. ಚರ್ಚೆ ಮಾಡಿದ. ದೀರ್ಘಕಾಲದವರೆಗೆ ಚರ್ಚೆ ನಡೆದು ಬುದ್ಧದೇವನು ಏನು ಉಪದೇಶ ಮಾಡಿದ ಎಂಬುವುದನ್ನು ಸ್ಪಷ್ಟಮಾಡಿದ್ದಾಯಿತು.

ಈ ಮಹಾಸಮ್ಮೆಳನದಿಂದ ಬೌದ್ಧ ಧರ್ಮಕ್ಕೆ ಹೊಸ ಶಕ್ತಿ ಬಂದಿತು. ಅಶೋಕ ಚಕ್ರವರ್ತಿಯು ಇತರೆ ಸಾಮ್ರಾಟರಂತೆ ಬೇರೆ ನಾಡುಗಳನ್ನು ಗೆಲ್ಲಲು ಸೈನ್ಯಗಳನ್ನು ಕಳೂಹಿಸಲಿಲ್ಲ. “ಧರ್ಮ ವಿಜಯವೇ ವಿಜಯ” ಎಂದು ಸಾರಿದ ಆತ ಬೌದ್ಧ ಭಿಕ್ಷುಗಳನ್ನು ಕಳುಹಿಸಿದ: ತಾನು ಕಂಡ ಬೆಳಖನ್ನು ಎಲ್ಲ ನಾಡುಗಳೀಗೆ ಹರಿಸಲು ಶ್ರಮಿಸಿದ. ಸಿರಿಯ, ಈಜಿಪ್ಟ ಮ್ಯಾಸಿಡೋನಿಯಾ, ಬರ್ಮಾ, ಕಾಶ್ಮೀರ ಮುಂತಾದ ಕಡೆ ಬೌದ್ಧ ಮತ ಪ್ರಚಾರಕರನ್ನು ಕಳೂಹಿಸಿದೆ.  ಸಿಂಹಳ (ಈಗಿನ ಶ್ರೀಲಂಕಾ)ಕ್ಕೆ ಸ್ವತಃ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಕಳುಹಿಸಿಕೊಟ್ಟನು. ಇದರಿಂದಾಗಿ ಪೂರ್ವ ಎಷ್ಯಾದಲ್ಲಿಯೇ ಬೌದ್ಧ ಧರ್ಮ ಹರಡಿತು.

ಸಾರನಾಥದ ಸ್ಥಂಭ

ಅಶೋಕನು ತನ್ನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಮಗಳು ಹಗೂ ಉಪಗುಪ್ತರೊಂದಿಗೆ ಮತ್ತೊಮ್ಮೆ ಧರ್ಮಯಾತ್ರೆ ಕೈಗೊಂಡುದುದು ಆತನ ಶಾಸನಗಳಿಂದ ತಿಳಿದುಬರುತ್ತದೆ. ಈ ಯಾತ್ರೆಯಲ್ಲಿ ವೈಶಾಲಿನಗರಕ್ಕೆ ಹೋಗಿ, ಅಲ್ಲಿಯ ಗತವೈಭವವನ್ನು, ಬುದ್ಧದೇವನು ವಿಶ್ರಾಂತಿ ಪಡೆದ ಸ್ಥಳಗಳನ್ನು ನೋಡಿದ. ಅಲ್ಲಿಂದ ಪೂರ್ವ ದಿಕ್ಕಿನತ್ತ ಪ್ರಯಾಣ ಮಾಡಿ ರಾಮಗ್ರಾಮಕ್ಕೆ ಬಂದನು. ಬುದ್ಧದೇವನು ನಿರ್ವಾಣ ಹೊಂದಿದ ಮೇಲೆ ಆತನ ಆಸ್ಥಿಗಳನ್ನು ಸಂಗ್ರಹಿಸಿ, ಅರಸನೊಬ್ಬನು ರಾಮಗ್ರಾಮದ ಹತ್ತಿರ ಕಟ್ಟಿಸಿದ ಸ್ಥೂಪವನ್ನು ಕಂಡನು,. ಮುಂದೆ ಲುಂಬಿನಿ, ಕಪಿಲವಸ್ತು, ಶ್ರಾವಂತಿ, ಗಯಾ ಮುಂತಾದ ನಗರ ಹಾಗೂ ಕ್ಷೇತ್ರಗಳಿಗೆ ಭೇಟಿ ಕೊಟ್ಟನು. ತಾನು ಹೋದಕಡೆಗಳಲ್ಲೆಲ್ಲ ತನ್ನ ಯಾತ್ರೆಯ ಸವಿನೆನಪಿಗೆಂದು ಸ್ಥಂಭಗಳನ್ನು ಸ್ಥೂಪಗಳನ್ನು ಕಟ್ಟಿಸಿದನು. ಅವು ಇಂದಿಗೂ ಅಶೋಕ ಚಕವರ್ತಿಯ ಧರ್ಮಯಾತ್ರೆಯ ಸ್ಮರಣೆಯನ್ನು ಸಾರುತ್ತ ನಿಂತಿವೆ.

ಈ ಸ್ಮಾರಕ ಸ್ಥಂಭಗಳಲ್ಲಿ ಕಾಶಿಯ ಹತ್ತಿರದ ಸಾರನಾಥದಲ್ಲಿಯ ಸ್ಥಂಭವು ಒಂದು. ಸುಮಾರು ಐವತ್ತು ಅಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದ ಈ ಸ್ತಂಭದ ಮೇಲೆ ನಾಲ್ಕು ಸಿಂಹಗಳು ಕೂಡಿ ನಿಂತುಕೊಂಡಿರುವಂತೆ ಬಹು ಸುಂದರವಾಗಿ ಕೆತ್ತಲ್ಪಟ್ಟಿವೆ.  ಇಂದು ನಮ್ಮ ಭಾರತ ಸರಕಾರವು ತನ್ನ ಅಧಿಕೃತ ಮುದ್ರಯಲ್ಲಿ ಆ ಸಿಂಹಗಳ ಚಿಹ್ನೆಯನ್ನೂ ರಾಷ್ಟ್ರಧ್ವಜದಲ್ಲಿ “ಅಶೋಕ ಚಕ್ರ”ದ ಗುರುತನ್ನೂ ಉಪಯೋಗಿಸಿಕೊಂಡು ಆದರ್ಶ ಅರಸನಿಗೆ ಉಚಿತವಾದ ಗೌರವ ಸಲ್ಲಿಸಿದೆ. ಆದರೆ ದುರ್ದೈವದಿಂದ ಸಾರನಾಥ ನಾಶವಾದಾಗ ಈ ಸ್ಥಂಬು  ಮುರಿದು ಬಿದ್ದಿದ್ದು, ಅದರ ಅಳಿದುಳಿದ ಭಾಗಗಳು  ಇಂದೂನಮಗೆ  ಕಾಣಸಿಗುತ್ತವೆ. ಅಶೋಕನು ನಿರ್ಮಿಸಿದನೆನ್ನಲಾದ ಎಂಬತ್ತ ನಾಲ್ಕು ಸಾವಿರ ಸ್ಥೂಪಗಳಲ್ಲಿ ಕಾಂಚಿಸ್ತೂಪವು ಬಹು  ಪ್ರಸಿದ್ಧವಾಗಿದ್ದು ಮತ್ತು  ಭವ್ಯವಾದುದು.  ಎತ್ತರವಾದ ಕಟ್ಟೆಯ ಮೇಲೆ ಐವತ್ತು ನಾಲ್ಕು ಆಡಿ ಎತ್ತರವಾಗಿ ಅರ್ಧವರ್ತುಲಾಕಾರದಿಂದ ಇಂದಿಗೂ ನಿಂತಿದೆ. ಈ ಸ್ಥಂಭಗಳಲ್ಲದೆ, ಸ್ತೂಪಗಳಲ್ಲದೆ ಅಶೋಕನು ಗುಹಾಲಯಗಳನ್ನು, ಕುಕ್ಕಟಾರಾಮಗಳನ್ನು, ಬೌದ್ಧ ವಿಹಾರಗಳನ್ನು , ಅಗಣಿತ ಸಂಖ್ಯೆಯಲ್ಲಿ ಕಟ್ಟಿಸಿದನು.  ಇವೆಲ್ಲವುಗಳು ಆಗಿನ ಕಾಲದ ಅತ್ಯುಚ್ಛ ಶಿಲ್ಪ ಕಲೆಯನ್ನು ತೋರಿಸಿಕೊಡುವ ನಿದರ್ಶನಗಳಾಗಿವೆ.

ಪ್ರಜಾ ಹಿತಚಿಂತಕ

ಭಾರತ ದೇಶದ ಚರಿತ್ರೆಯಲ್ಲಿ ಅಶೋಕನಷ್ಟು ವಿಶಾಲವಾದ ಸಾಮ್ರಾಜ್ಯವನ್ನು ಆಳಿದ ಅರಸರು ಅಪರೂಪವೆಂದೇ ಹೇಳಬಹುದು. ಅವನ ಸಾಮ್ರಾಜ್ಯವು ಭಾರತದ ಬಹುಭಾಗವನ್ನೂ ವಾಯುವ್ಯ ಗಡಿಯಿಂದಾಚೆ ಇರುವ  ಅಫಘಾನಿಸ್ತಾನ, ಬಲೂಚಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಇಂದಿನ ಬಂಗಾಳ, ಬಿಹಾರ, ಆಂದ್ರ ಪ್ರದೇಶ, ಮತ್ತು ಕನ್ನಡ ನಾಡಿನ ಬಹುಬಾಗವನ್ನೊಳಗೊಂಡಿತ್ತೆಂಬುವುದಕ್ಕೆ ಆಯಾ ಪ್ರದೇಶಗಳಲ್ಲಿ ದೊರೆತಿರುವ ಆತನ ಶಿಲಾಶಾಸನಗಳೇ ಸಾಕ್ಷಿಯಾಗಿವೆ.

ಇಂತಹ ವಿಶಾಲವಾದ ಸಾಮ್ರಾಜ್ಯಕ್ಕೆ ಮುಖ್ಯರಾಜಧಾನಿ ಪಾಟಲಿಪುತ್ರವಾಗಿದ್ದರೂ ಸಾಮ್ರಾಜ್ಯದ ಸುವ್ಯವಸ್ಥೆಗಾಗಿ ತನ್ನ ಚಕ್ರಾಧಿಪತ್ಯವನ್ನು ಮಾಳವ, ಪಂಜಾಬ್, ದಕ್ಷಿಣಾಪಥ, ಕಳಿಂಗ ಎಂದು ನಾಲ್ಕು ಪ್ರಾಂತಗಳನ್ನಾಗಿ ವಿಂಗಡಿಸಿದ್ದನು. ತಕ್ಷಶಿಲೆಯು ಪಂಜಾಬ ಪ್ರಾಂತಕ್ಕೂ ,ಉಜ್ಜಯಿನಿಯು ಮಾಳವ ಪ್ರಾಂತಕ್ಕೂ ಸುವರ್ಣಗಿರಿಯು ದಕ್ಷಿಣಾಪಥಕ್ಕೂ ಮತ್ತು ಕೋಸಲವು ಕಳಿಂಗ ಪ್ರಾಂತಕ್ಕೂ ರಾಜಧಾನಿಯಾಗಿದ್ದವು. ಪ್ರತಿಯೊಂದು ಪ್ರಾಂತಕ್ಕೂ ಒಬ್ಬ ರಾಜಪ್ರತಿನಿಧಿಯನ್ನು ನೇಮಿಸಿದ್ದನು. ಇವರನ್ನು ಅವರ ದಕ್ಷತೆಯ ಮೇರೆಗೆ ನೇಮಿಸಲಾಗುತ್ತಿತೇ ಹೊರತು ಅವರ ವಂಶ- ಕುಲಗಳನ್ನು ಲೆಕ್ಕಿಸುತ್ತಿರಲಿಲ್ಲ. ಈ ಪ್ರತಿನಿಧಿಗಳಿಗೆ ಹೆಚ್ಚಿನ ಸ್ವಾತಂತ್ಯ್ ಕೊಡಲಾಗಿತ್ತು.

ಚಕ್ರವರ್ತಿಗೆ ಸಹಾಯಕ್ಕೆಂದು ರಾಜಧಾನಿಯಲ್ಲಿ ಒಂದು ಮಂತ್ರಿಮಂಡಳ ವಿತ್ತು.  ರಾಜನು ಯಾವುದೊಂದು ಬದಲಾವಣೆ ಮಾಡುವುದಿದ್ದರೂ ಮಂತ್ರಿಮಂಡಲದ ಅಭಿಪ್ರಾಯ ಕೇಳುತ್ತಿದ್ದನು. ಮಂತ್ರಿಮಂಡಳವು ಅದರಿಂದಾಗುವ ಒಳಿತು-ಕೆಡಕುಗಳನ್ನು  ಪರಿಶೀಲಿಸಿದ ಅನಂತರ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿತ್ತು.  ಮಂತ್ರಿ ಮಂಡಲದ ನಿರ್ಧಾರವನ್ನು ಸಾಮಾನ್ಯವಾಗಿ ಚಕ್ರವರ್ತಿಯೂ ಒಪ್ಪುತ್ತಿದ್ದನು.

ಚಂದ್ರಗುಪ್ತ ಮೌರ್ಯನು, ಮಹಾಮಂತ್ರಿಯಾಗಿದ್ದ ಚಾಣಕ್ಯ (ಕೌಟಿಲ್ಯ) ನು ಆಗಿನ ರಾಜರ ದಿನಚರಿಯ ಕುರಿತು ಈ ರೀತಿಯಾಗಿ ತಿಳಿಸಿದ್ದಾನೆ.

“ರಾಜನು ಬೆಳಿಗ್ಗೆ ಮೂರು ಗಂಟೆಗೆ ಎದ್ದು, ನಾಲ್ಕುವರೆ ಗಂಟೆಯವರೆಗೆ ರಾಜ್ಯದ ವಿವಿಧ ಸಮಸ್ಯೆಗಳ ವಿಷಯವಾಗಿ ಚಿಂತಿಸಿ, ಒಂದು ತೀರ್ಮಾನಕ್ಕೆ ಬರುವುದು, ಅದಾದ ಮೇಲೆ ಆಚಾರ್ಯರ, ಪುರೋಹಿತರ, ಅಶಿರ್ವಾದ ಪಡೆದುಕೊಂಡು, ವೈದ್ಯರನ್ನು ಪಾಕಶಾಲೆಯ ಅಧಿಕಾರಿಗಳನ್ನೂ  ಕಂಡು, ಆಸ್ಥಾನಮಂಟಪಕ್ಕೆ ಬಂದು,ಅಲ್ಲಿ ಆರು ಗಂಟೆಯಿಂದ ಎಳುವರೆ ಗಂಟೆಯ ತನಕ ಕಳೆದ ದಿನದ ಆದಾಯ-ಖರ್ಚನ್ನು ನೋಡುವುದು. ಏಳುವರೆ  ಗಂಟೆಯಿಂದ ಅತಿ ಅವಶ್ಯಕ ಕೆಲಸಗಳಿಗಾಗಿ ರಾಜನ ದರ್ಶನಕ್ಕಾಗಿ ಬಂದಿರುವ ಪ್ರಜೆಗಳನ್ನು ಕಂಡು, ಅವರ ಕೆಲಸ ಪರಿಶೀಲಿಸುವುದು.ಒಂಬತ್ತು ಗಂಟೆಗೆ ಸ್ನಾನ, ಧ್ಯಾನ ಉಪಹಾರ ತೀರಿಸಿಕೊಂಡು ಹತ್ತೂವರೆ ಗಂಟೆಗೆ ಸಾಮ್ರಾಜ್ಯದ ಮುಖ್ಯ ಅಧಿಕಾರಿಗಳನ್ನು ಕಂಡು ಸಲಹೆ ಸೂಚನೆ ಕೊಡುವುದು. ಹನ್ನೆರಡು ಗಂಟೆಗೆ ಮಂತ್ರಿಮಂಡಲದ ಸಭೇ ಕೂಡಿಸಿ,ರಾಜಕೀಯ ವಿಷಯ ಕುರಿತು ಚರ್ಚಿಸುವುದು, ಮಧ್ಯಾಹ್ನ ಒಂದೂವರೆ ಗಂಟೆಯಿಂದ ಮೂರು ಗಂಟೆಯವರೆಗೆ ವಿಶ್ರಾಂತಿ ತೆಗೆದುಕೊಂಡ ಮೇಲೆ ಸೈನ್ಯದ ವಿವಿಧ ಭಾಗಗಳನ್ನು ಪರೀಕ್ಷಿಸುವುದು. ರಾಜ್ಯ ಹಾಗೂ  ಹೊರ ರಾಜ್ಯಗಳಿಂದ ಬಂದ ದೂತರಿಂದ ಮತ್ತು ಗೂಢಚಾರರಿಂದ ಸುದ್ಧಿಯನ್ನು ತಿಳಿದುಕೊಳ್ಳುವುದು…..

ಅಜ್ಜನಾದ ಚಂದ್ರಗುಪ್ತನ ಆದರ್ಶ ಆಡಳಿತವನ್ನೇ ಮುಂದುವರೆಸಿಕೊಂಡು ಹೊರಟ ಅಶೋಕ ಚಕ್ರವರ್ತಿಯು, ಚಾಣಿಕ್ಯನು ತಿಳಿಸಿದ ದಿನಚರಿಯನ್ನು ಚಾಚೂ ತಪ್ಪದೇ ಪರಿಪಾಲಿಸುತ್ತಿದ್ದ. ಇಷ್ಟೇ ಅಲ್ಲದೇ ಪ್ರಜೆಗಳ ಕಲ್ಯಾಣವೇ ತನ್ನ ಕಲ್ಯಾಣವೆಂದು ತಿಳಿದಿದ್ದ ಆತನು ಅವರ ಸುಖ ದುಃಖಗಳ ವರದಿಯನ್ನು ತಂದೊಪ್ಪಿಸಲು ನಿಯಮಿಸಿದ ಪ್ರತಿವೇದಕರು ಯಾವುದೇ ವೇಳೆಯಲ್ಲಿ ವರದಿಯನುನ ತನಗೆ ತಲುಪಿಸಲು ಕೊಟ್ಟ ಆಜ್ಞೆಯನ್ನು ಆತನ ಮಾತಿನಲ್ಲಿಯೇ ತಿಳಿಯಬೇಕು.

“ನಾನು ಊಟ ಮಾಡುತ್ತಿರಲಿಲ್ಲ, ಅಂತಪುರದಲ್ಲಿರಲಿ, ಶಯನಂದಿರದಲ್ಲಿರಲಿ, ಯಾವುದೇ ಕೆಲಸದಲ್ಲಿ, ತೊಡಗಿರಲಿ, ಪ್ರಯಾಣಕ್ಕೆ ಹೊರಟಿರಲಿ, ವಿಶ್ರಾಂತಿ ಪಡೆಯುತ್ತಿರಲಿ, ಒಟ್ಟಿನಲ್ಲಿ ನಾವು ಎಲ್ಲಿದ್ದರೂ ವೇಳೆಯ ನಿರ್ಭಂಧವಿಲ್ಲದೆ ಪ್ರತಿವೇಧಕರು ಬಂದು ಜನರ ಸುಖ ದುಃಖಗಳ ವರದಿಯನ್ನು ತಿಳಿಸತಕ್ಕದ್ದು. ಎಲ್ಲಿದ್ದರೂ ನಾನು ಜನರಿಗಾಗಿ ಚಿಂತಿಸುತ್ತೇನೆ. ಜನರಿಗಾಗಿ ದುಡಿಯುತ್ತೇನೆ” . ಇದೊಂದೇ ಮಾತು ಸಾಕಲ್ಲವೆ ಪ್ರಜೆಗಳ ಹಿತಚಿಂತನೆಯ ಬಗ್ಗೆ ಆತನಲ್ಲಿದ್ದ ಕಳಕಳಿ ತಿಳಿದುಕೊಳ್ಳಲು?

ತಾನು ಸೋಲಿಸಿದ ಕಳಿಂಗಕ್ಕೆ

ಅಶೋಕ ಯುದ್ಧದಲ್ಲಿ ಕಳಿಂಗವನ್ನು ಸೋಲಿಸಿದ.  ಅಲ್ಲವೆ? ಅನಂತರ ಆ ರಾಜ್ಯದ ಆಡಳಿತಕ್ಕೆ ಅಧಿಕಾರಿಗಳನ್ನು ನೇಮಿಸಿದ. ಯುದ್ಧದಲ್ಲಿ ಗೆದ್ದ ರಾಜ್ಯದ ಅಧಿಕಾರಿಗಳು ಸೋತ ರಾಜ್ಯಕ್ಕೆ ಹೋದರೆ ಸಾಮಾನ್ಯವಾಗಿ ಹೇಗೆ ನಡೆದುಕೊಳ್ಳುತ್ತಾರೆ? ನ್ಯಾಯ- ಅನ್ಯಾಯಗಳನ್ನು ಮರೆತು ದರ್ಪದಿಂದ ನಡೆದುಕೊಳ್ಳುತ್ತಾರೆ. ಸೋತವರನ್ನು ಹೀನಾಯವಾಗಿ ಕಾಣುತ್ತಾರೆ. ಹೀಗಾಗಬಾರದು, ಕಳಿಂಗದವರೂ ಮರ್ಯಾದೆಯಿಂದ ಶಾಂತಿ-ನೆಮ್ಮದಿಗಳಿಂದ ಬದುಕಬೇಕು ಎಂದು ಅಶೋಕನ ಬಯಕೆ.ಕಳಿಂಗಕ್ಕೆ ಹೋದ ತನ್ನ ಅಧಿಕಾರಿಗಳಿಗೆ ಅವನು ಹೇಳಿದ ಮಾತುಗಳು ಇವು:

“ನಿಮ್ಮನ್ನು ಸಹಸ್ರಾರು ಜನರ ಮೇಲೆ ನಾನು ನೇಮಿಸಿರುವೆನು. ನೀವು ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸಿರಿ. ಆಡಳಿದಲ್ಲಿ ಎಂತಹ ಪ್ರಸಂಗ ಬಂದರೂ ಸರ್ವರನ್ನೂ ಸಮದೃಷ್ಟಿಯಿಂದ ಕಾಣಿರಿ. ನಿಮ್ಮ ಕಾರ್ಯವು ನಿಷ್ಪಕ್ಷಪಾತದಿಂದ ಕೂಡಿರಲಿ. ಒರಟುತನ, ಅವಸರ, ಸೋಮಾರಿತನ, ಬೇಸರ, ಶೀಘ್ರಕೋಪ ಮುಂತಾದ ಗುಣಗಳನ್ನು ಬಿಟ್ಟುಬಿಡಿ. ಬೇಸರದಿಂದ, ಅಲಸ್ಯದಿಂದ ಯಾವ ಕೆಲಸವೂ ಆಗದು.  ಆದುದರಿಂದ ಯಾವಾಗಲೂ ಚಟುವಟಿಕೆಯಿಂದಿರಿ. ನಿಮ್ಮ ಪವಿತ್ರ ಕಾರ್ಯದ ಹೊಣೆಯನ್ನ ಅರಿತು ನಡೆದರೆ ನಿಮಗೆ ಸ್ವರ್ಗ ಸಿಕ್ಕೀತು. ನಿಮ್ಮನ್ನು ನೇಮಿಸಿದ ಅರಸನ ಋಣವು ತೀರಿತು” . ಪ್ರಜೆಗಳನ್ನು ತನ್ನ ಮಕ್ಕಳೆಂದು ಭಾವಿಸಿದ್ದ ಅಶೋಕನು ಮುಂದುವರೆದು, :”ಹಡೆದ ತಾಯಿಯೊಬ್ಬಳು ತನ್ನಮಗುವನ್ನು ದಕ್ಷ ದಾದಿಯ ಕೈಗೊಪ್ಪಿಸಿ, ಆಕೆಯು ಒಳ್ಳೆಯ ರೀತಿಯಿಂದ ಪಾಲನೆ ಪೋಷಣೆ ಮಾಡುವಳೆಂದು ನಂಬಿ ನಿಶ್ಚಿಂತೆಯಿಂದ ಇರುವಂತೆ ಜನರನ್ನು ನಿಮ್ಮ ಕೈಗೊಪ್ಪಿಸಿದ್ದೇನೆ” ಎಂದೂ ಹೇಳಿದ್ದಾರೆ.

ಹತ್ತೂ ಕಡೆ ಗಮನ

ಅಶೋಕನು ತನ್ನ ರಾಜ್ಯದಲ್ಲಿ ಶಿಕ್ಷಣದ ಪ್ರಸಾರ ತ್ವರಿತಗತಿಯಿಂದಾಗಬೇಕೆಂದು ವಿಶೇಷವಾಗಿ ಶ್ರಮಿಸಿದನು. ಮಗಧ ಸಾಮ್ರಾಜ್ಯದ ಶಿಕ್ಷಣ ಕೇಂದ್ರವೂ ವಿಶ್ವವಿದ್ಯಾಲಯವೂ ಆಗಿದ್ದ ಇತಿಹಾಸ ಪ್ರಸಿದ್ಧವಾದ ನಲಂದ ವಿಹಾರವು ಅಶೋಕನಿಂದಲೇ ಪ್ರಾರಂಭವಾಯಿತು ಎಂದು ಕೆಲವರು ಹೇಳುತ್ತಾರೆ. ಈ ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ಆಗ ಬಹಳ ಗೌರವದಿಂದ ಕಾಣಲಾಗುತ್ತಿತು.  ಆತನ ಕಾಲದಲ್ಲಿ ಪಾಶ್ಚಾತ್ಯ ದೇಶಗಳೊಡನೆ ಸಮುದ್ರದ ಮೂಲಕ ವ್ಯಾಪಾರ ನಡೆಯುತ್ತಿತ್ತು. ವ್ಯವಸಾಯ, ವ್ಯಾಪಾರ, ಉದ್ಯಮಗಳಿಗೆ ಸಾಕಷ್ಟು ಪ್ರೋತ್ಸಾಹ ವಿತತು.  ವ್ಯವಸಾಯಕ್ಕಾಗಿ ನೀರಾವರಿ ಕಾಲುವೆಗಳ  ವ್ಯವಸ್ಥೆಯೂ ಇದ್ದಿತು. ರಾಜಭಂಡಾರಕ್ಕೆ ಸಂದಾಯವಾದ ಸಂಪೂರ್ಣ ಹಣವನ್ನು ಪ್ರಜಾಹಿತದ ಕೆಲಸಗಳಿಗಾಗಿಯೇ ಖರ್ಚು ಮಾಡಲಾಗುತ್ತಿತ್ತು.

ಅಶೋಕನು ಸಾಮ್ರಾಜ್ಯದ ವ್ಯಾಪಾರ ಉದ್ಯಮಗಳ ಬೆಳವಣಿಗೆಗಾಗಿ ರಾಜಮಾರ್ಗಗಳನ್ನು ಹೆಚ್ಚಿಸಿದನು. ಪ್ರವಾಸಿಗರ‍್ ಅನುಕೂಲತೆಗಾಗಿ ಮಾರ್ಗದ ಎರಡು ಬದಿಗಳಲ್ಲಿಯೂ ಮರಗಳನ್ನುನೆಡಿಸಿದನು. ಅಲ್ಲಲ್ಲಿ ಭಾವಿಗಳನ್ನು, ಅನ್ನ ಛತ್ರಗಳನ್ನು, ಅರವಟ್ಟಿಗೆಗಳನ್ನು, ಧರ್ಮಶಾಲೆಗಳನ್ನು, ನಿರ್ಮಿಸಿದನು. ಜನರಿಗೂ ಪಶುಗಳಿಗೂ ಉಚಿತವಾಗಿ ಔಷದೋಪಚಾರದ ವ್ಯವಸ್ಥೆ ಮಾಡಿಸಿದರನು. ಜಗತ್ತಿನ ಚರಿತ್ರೆಯಲ್ಲಿ ಪ್ರಾಣಿಗಳ ಚಕಿತ್ಸೆಗಾಗಿ ಆಸ್ಪತ್ರೆಗಳನ್ನು ಏರ್ಪಡಿಸಿದ  ರಾಜರಲ್ಲಿ  ಮೊದಲಿಗರಲ್ಲಿ ಒಬ್ಬ ಅಶೋಕ. ಔಷಧಿಗಳ ಗಿಡಮೂಲಿಕೆಗಳನ್ನು, ವಿವಿಧ ಹಣ್ಣೀನ ಗಿಡಗಳನ್ನು ಇದ್ದಲ್ಲಿಂದ ತರಿಸಿ, ಇಲ್ಲದಿದ್ದ ಸ್ಥಳದಲ್ಲಿ ನೆಡಿಸಿದನು. ತನ್ನ ಸಾಮ್ರಾಜ್ಯದ ಕಾಡು ಪ್ರದೇಶಗಳ ಜನರೂ ಸುಖವಾಗಿ ಬಾಳಬೇಕೆಂಬ  ಆಶಯವನ್ನು ಒಂದು ಶಾಸನದಲ್ಲಿ ವ್ಯಕ್ತಪಡಿಸಿದ್ದಾನೆ.

ಈ ರೀತಿಯಾಗಿ ಸಾಮ್ರಾಜ್ಯದ ಸಮಸ್ತ ಪ್ರಜೆಗಳ ಕಲ್ಯಾಣಕ್ಕಾಗಿ ಜೀವನದುದ್ದಕ್ಕೂ ಅಶೋಕನ ದೇಹ ಗಂಧದ ಕೊರಡಿನಂತೆ ಸವೆಯಿತು. ಕಬ್ಬಿನಂತೆ ಹಿಂಡಿ ಹಿಪ್ಪೆ ಯಾಯಿತು. ದೀಪದಂತೆ ತಾನುರಿದು ಇತರರಿಗೆ ಬೆಳಕು ನೀಡಿತು. ಚಕ್ರವರ್ತಿಯ ಈ ಅವಿರತ ಪ್ರಯತ್ನದಿಂದಾಗಿ ಪ್ರಜೆಗಳೆಲ್ಲರೂ  ಸತ್ಯ-ಧರ್ಮದ, ನ್ಯಾಯ- ನೀತಿಯ ಮಾರ್ಗದಲ್ಲಿ ನಡೆಯತೊಡಗಿದರು.  ಸುಖ-ಶಾಂತಿಗಳಿಂದ ಬಾಳತೊಡಗಿದರು.  ಸಂತೋಷ ಸಮಾರಂಭಗಳನ್ನು ಏರ್ಪಡಿಸಿ, ಜಾತಿ ಮತಗಳ ಬೇಧವಿಲ್ಲದೇ ಎಲ್ಲರೂ ಅವುಗಳಲ್ಲಿ ಭಾಗವಹಿಸುತ್ತ ಅನ್ನೋನ್ಯವಾಗಿ ಜೀವಿಸುತ್ತಿದ್ದರು.

ದುಃಖದ ಮುಪ್ಪು

ದಯೆ, ಪ್ರೇಮ, ಅನುಕಂಪಗಳ ಸಜಿವ ಸಾಕಾರ ಮೂರ್ತಿಯಂತಿದ್ದ ಅಶೋಕನ ಜೀವನದ ಕಡೆಯ ಭಾಗ ಮಾತ್ರ ವ್ಯಸನಪೂರಿತವಾಯಿತು. ಕಾರಣವಿಷ್ಟೇ- ಅತನ ಮಕ್ಕಳಾದ ಮಹೆಂದ್ರ, ಕುಣಾಲ, ತೀವಲ ಇವರುಗಳೂ ಧರ್ಮ ಪ್ರಸಾರದಲ್ಲಿಯೇ ತೊಡಗಿದುದರಿಂದ ಮೊಮ್ಮಕ್ಕಳಾದ ದಶರಥ ಮ್ತು ಸಂಪ್ರತಿ ಇವರೀರ್ವರ ಮಧ್ಯದಲ್ಲಿ ಪಟ್ಟದ ಹಕ್ಕಿಗಾಗಿ ಮೇಲಾಟ ನಡೆಯಿತು. ರಾಣಿಯರು ತಮ್ಮ ತಮ್ಮೊಳಗೆ ಬಡಿದಾಢಹತ್ತಿದರು. ಈರಾಣಿಯರಲ್ಲಿ ಒಬ್ಬಳಾದ ತಿಷ್ಯ ರಕ್ಷಿತೆಯಂಬುವಳು ದುರಾಚಾರಿಣಿ ಯಾಗಿದ್ದಳು. ರಾಜಯೋಗಿಯಾಗಿದ್ದ ಅಶೋಕನ ವೈರಾಗ್ಯ ಜೀವನವು, ಸ್ವಭಾವತ ವಿಲಾಸಿಯಾದ ಅವಳೀಗೆ ಸೇರುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಅಶೋಕನಿಗೆ ಬೇಸರವಾಯಿತು.  ವ್ಯಥೆಯಾಯಿತು. ಈ ಹೊತ್ತಿಗೆ ಅವನೂ ಮುದುಕನಾಗಿದ್ದ.  ಅವನು ಕೊನೆಯ ವರ್ಷಗಳು ಮತ್ತು ಸಾವಿನ ವಿಷಯ ಖಚಿತವಾಗಿ ತಿಳಿಯದು. ಕೆಲವು ಹೀಗೆನ್ನುತ್ತಾರೆ: “ಚಕ್ರವರ್ತಿಗೆ ಜೀವನದಲ್ಲಿ ಜಿಗುಪ್ಸೆಯುಂಟಾಗಿ ಮನಸ್ಸಿನ ಸಮಾಧಾನಕ್ಕೆ ತನ್ನ ಗುರುವಿನೊಡನೆ ಭಿಕ್ಷು ವೇಷದಿಂದ ಯಾತ್ರೆಗೆ ಹೊರಟನು. ಕೊನೆಗೆ ತಕ್ಷಶಿಲೆಯಲ್ಲಿ ಬಂದು ತಂಗಿದನು. ದೇವರಿಗೂ ಜನರಿಗೂ ಪ್ರೀಯವಾದ ಅಶೋಕನು ಅಲ್ಲಿಯೆ ಎಪ್ಪತ್ತೆರಡನೇ ವಯಸ್ಸಿನಲ್ಲಿ ದೇವಸನ್ನಧಿಗೆ ಸೇರಿದನು.

ಅಂತೂ ಮುಪ್ಪಿನಲ್ಲಿ ಅಶೋಕ ಸಂತೋಷವಾಗಿರಲಿಲ್ಲ.

ಇತಿಹಾಸ ಅಗಸದ ಧ್ರುವ ನಕ್ಷತ್ರ !

ಸಮರ್ಥ ಸಾಮ್ರಾಟನಾಗಿ, ಕುಶಲ, ಶಾಸಕನಾಗಿ ಆಜೆಯವೀರನಾಗಿ, ರಾಜಯೋಗಿಯಾಗಿ, ಶ್ರೇಷ್ಠಧರ್ಮಬೋಧಕನಾಗಿ, ಪ್ರಜಾ ಹಿತಚಿಂತಕನಾಗಿ ಸುಮಾರು ಮೂವತ್ತೇಳು ವರ್ಷಗಳವರೆಗೆ ರಾಜ್ಯಭಾರ ಮಾಡಿ,  ಮುಂದಿನ ಅರಸರಿಗೆಲ್ಲ ಆದರ್ಶ ಅರಸನಾದ ಅಶೋಕ, ಪ್ರಪಂಚದ ಇತಿಹಾಸದಲ್ಲಿಯೇ ಅಪೂರ್ವ ವ್ಯಕ್ತಿ.

“ದೇವನಾಂಪ್ರೀಯ” , “ಪ್ರೀಯದರ್ಶಿನಿ” ಹೀಗೆ ಅಶೋಕ ಶಾಸನಗಳಲ್ಲಿ ತನ್ನ ಹೆಸರುಗಳನ್ನು ಹೇಳಿಕೊಂಡಿದ್ದಾನೆ. “ದೇವನಾಂಪ್ರೀಯ:” ಎಂದರೆ ದೇವತೆಗಳಿಗೆ ಪ್ರೀಯನಾದವನು. “ಪ್ರೀಯದರ್ಶಿ” ಎಂದರೆ ನೋಡಿದರೆ  ಸಂತೋಷವಾಗುವಂತಹದು. ಎಂದರೆ, ದೇವತೆಗಳಿಗೂ ಮನುಷ್ಯರಿಗೂ ಪ್ರೀಯನಾದವನು ಎಂದು ಈ ಹೆಸರುಗಳ ಅರ್ಥ. ಅಶೋಕನ ವಿಷಯದಲ್ಲಿ ಇವು ಅನ್ವರ್ಥವಾದ ಹೆಸರುಗಳು. ಇಂತಹ ಸುಗುಣಿಯಾದ ಅರಸನಲ್ಲಿ ದೇವತೆಗಳಿಗೆ ಪ್ರೀತಿ ಇರಲೇಬೇಕು. ಅಶೋಕನನ್ನು ಅಂಕೆಯಲ್ಲಿಡಬಲ್ಲವರು, ತಪ್ಪುಮಾಡಿದರೆ ದಂಡಿಸಬಲ್ಲವರು ಯಾರು ಇರಲಿಲ್ಲ. ಆದರೆ ತನಗೆ ತಾನೇ ಗುರುವಾದ, ತನ್ನ ಆಸೆಗಳನ್ನು ತಾನೇ ತಡೆಹಿಡಿದ. ಹೀಗೆ ಪ್ರಜೆಗಳ ಹಿತವನ್ನೇ ಸದಾ ನೆನೆಯುತ್ತ ತಾನು ಅವರಿಗಾಗಿಯೇ ಇದ್ದೇನೆ ಎಂಬಂತೆ ನಡೆದುಕೊಂಡ ರಾಜನನ್ನು ಕಂಡರೆ ಪ್ರಜೆಗಳಿಗೆ ಸಂತೋಷವಾಗುತ್ತಿದ್ದುದು ಆಶ್ಚರ್ಯವಲ್ಲ.

ಅಶೋಕ ಬೌದ್ಧ ಧರ್ಮವನ್ನು ಎಷ್ಟರಮಟ್ಟಿಗೆ ಆಚರಿಸಿದ ಎಂದರೆ ಅವರು ಬೌದ್ಧ ಭಿಕ್ಷುಕವೇ ಆದ ಎಂದು ಕೆಲವರು ಚರಿತ್ರಕಾರರು ಹೇಳಿದ್ದಾರೆ.  ಚಕ್ರವರ್ತಿಯಾಗಿದ್ದು, ವಿಶಾಲವಾದ ಸಾಮ್ರಾಜ್ಯದ ಆಡಳಿತವನ್ನು ಹೊತ್ತವನು ಆಗಾಗ ಬೌದ್ಧ ವಿಹಾರಗಳಲ್ಲಿಯೇ ವಾಸ ಮಾಡಿದ ಎಂದು ಕಾಣುತ್ತದೆ. ವಿಹಾರಗಳಲ್ಲಿ ವಾಸ ಮಾಡಿದಾಗ ಭಿಕ್ಷುಗಳಂತೆ ಉಪವಾಸ ಮಾಡಿ ಕಟ್ಟುನಿಟ್ಟಾಗಿ ವ್ರತ್ತಗಳನ್ನಾಚರಿಸಿದ. ಅವರಿಂದ ಬೌದ್ಧ ಧರ್ಮದ ಉಪದೇಶಗಳನ್ನು ವಿವರವಾಗಿ ತಿಳದುಕೊಂಡ.

ಅಶೋಕನ ತಮ್ಮ ಶಿಷ್ಯನೂ ಅಳಿಯ ಅಗ್ನೀಬ್ರಹ್ಮನೂ ಬೌದ್ಧ ಭಿಕ್ಷುಗಳಾದರು. ಮಗ ಮಹೇಂದ್ರನೂ ಮಗಳು ಸಂಘಮಿತ್ರಳೂ ಭಿಕ್ಷು ಧರ್ಮವನ್ನು ಸ್ವೀಕರಿಸಿ, ಬೌದ್ಧ ಧರ್ಮ ವನ್ನು ಉಪದೇಶಿಸಲು ಸಿಂಹಳಕ್ಕೆ ಹೋದರು.

ಅಶೋಕನ ನಶ್ವರ ದೇಹ  ಕಣ್ಮರೆಯಾಗಿ ಎರಡು ಸಾವಿರ ವರ್ಷಗಳು ಕಳೆದರೂ ಸತ್ಯ, ಧರ್ಮ, ಅಹಿಂಸೆ, ಕರುಣೆ, ಪ್ರಜಾ ಪ್ರೇಮಗಳಿಂದ ಕೂಡಿದ ಅವನ ಧರ್ಮ- ಸಾಮ್ರಾಜ್ಯ ಇಂದಿಗೂ ಆದರ್ಶವಾಗಿದೆ: ಅಮರವಾಗಿದೆ.  ಅಂತೆಯೇ ಸುಪ್ರಸಿದ್ಧ ಆಂಗ್ಲ ಇತಿಹಾಸಕಾರರಾದ ಎಚ್.ಜಿ.ವೆಲ್ಸ್ ಎಂಬುವರು ಇತಿಹಾಸದ ಅಗಸದಲ್ಲಿ ಎಂದೋ ಮಿನುಗಿ ಮಾಯವಾದ ನೂರಾರು ಸಾವಿರಾರು ರಾಜರು, ರಾಜಪರಮೇಶ್ವರರ ನಡುವೆ ಪ್ರಜ್ವಲಿಸಿ, ಇಂದಿಗೂ ಬೆಳಗುತ್ತಿರುವ ಅಕ್ಷಯ ತಾರೆ, ಅಶೋಕ” ಎಂದು ಹೇಳಿದುದು ಯಥಾರ್ಥವಾಗಿದೆ.