೧೮೨೭, ಡಿಸೆಂಬರ ೧೯ !

ಚಳಿಗಾಲದ ಸೂರ್ಯ ತಡವಾಗಿ ಮೂಡಿ ಚಳಿಯಿಂದ ತವಕಿಸುತ್ತಿದ್ದ ಲೋಕಕ್ಕೆ ತನ್ನ ಹೊಂಬಿಸಿಲಿನಿಂದ ಸಂತಸವನ್ನೆರೆಯತೊಡಗಿದ್ದ.

ಅದೇ ವೇಳೆಗೆ ಫೈಜಾಬಾದಿನ ಜಿಲ್ಲಾ ಜೈಲಿನಲ್ಲಿ ಕ್ರಾಂತೀ ವೀರನೊಬ್ಬನ ರುದ್ರ ಗಂಭೀರ ಜೀವನ ನಾಟಕದ ಕೊನೆಯ ಅಂಕದ ಸಿದ್ಧತೆಗಳು ಸಾಗಿದ್ದುವು. ನೇಣುಗಂಬದ ಸುತ್ತ ಹಿರಿಯ ಕಿರಿಯ ಅಧಿಕಾರವರ್ಗ ನೆರೆದು ತಮ್ಮ ತಮ್ಮ ಕಾರ್ಯಭಾರವನ್ನು ಬಹಳ ಆಸ್ಥೆಯಿಂದ ನಡೆಸಿದ್ದರು. ಜೈಲಿನ ಮುಖ್ಯಾಧಿಕಾರಿಯು ನೇಣು ಹಗ್ಗ, ಮರಳು ಚೀಲ ಗಳೂ, ಹಲಗೆಯನ್ನು ಜಾರಿಸುವ ವ್ಯವಸ್ಥೆಯ ಎಲ್ಲವನ್ನೂ ಒಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದ.

ಎಲ್ಲಾ ಸರಿಯಾಗಿದೆಯೆಂಬ ತೃಪ್ತಿಯಿಂದ “ದಫೇದಾರ್‌, ಖದಿಯನ್ನು ಕರೆದುತಾ” ಎಂದು ಅಪ್ಪಣೆ ನೀಡಿದ.

ದಫೇದಾರ, ಅವನೊಂದಿಗೆ ಹತ್ತು ಜನ ಸಿಪಾಯಿ ಗಳು ಹೊರಟರು. ಖಣ ಖಣನೆ ಶಬ್ದ ಮಾಡುತ್ತಾ ಫಾಸಿ ಕೈದಿಯ ಕೋಣೆಯ ಬಾಗಿಲು ತೆರೆಯಿತು. ಅದು ಕೊನೆಯ ಬಾರಿ. ಇನ್ನೂ ಆ ಬಾಗಿಲು ಆ ಖೈದಿಗಾಗಿ ತೆರೆಯುವಂತಿಲ್ಲ.

ಆ ಕರೆಗಾಗಿಯೇ ಕಾದು ಕುಳಿತ್ತಿದ್ದ ಕ್ರಾಂತಿವೀರ ಕೇಳಿದ, “ಎಲ್ಲವು ಸಿದ್ಧವೋ?”

ಪುರುಷಸಿಂಹ :

ಸಾವನ್ನಪ್ಪಲು ಸಿದ್ಧನಾಗಿದ್ದ ಅವನ ಆ ಧೃಢ ಧ್ವನಿ, ಕರೆದೊಯ್ಯಲು ಬಂದವರನ್ನು  ಒಮ್ಮೆ ಅಲ್ಲಾಡಿಸಿಬಿಟ್ಟಿತು. ದಫೇದಾರ ಬಹು ಕಷ್ಟದಿಂದ “ಹೂಂ” ಎಂದ.

ಕ್ರಾಂತಿವೀರ ತಾನು ಓದುತ್ತಿದ್ದ ಪವಿತ್ರ ಖುರಾನನ್ನು ಮುಚ್ಚಿ, ಬಗಲಿಗೆ ಸೇರಿಸಿಕೊಂಡ. ಎದ್ದುನಿಂತು “ಹೊರಡಿ” ಎಂದ.

ಆರಡಿ ಎತ್ತರದ,ವಿಶಾಲವಾದ ಎದೆಯ, ಉಕ್ಕಿನ ಶರೀರದ ಪುರುಷಸಿಂಹ. ಕೆಲವು ತಿಂಗಳುಗಳಿಂದ ಬೆಳೆಸಿದ್ದ ಗಡ್ಡವೂ ಆತನಿಗೆ ಕಳೆ ತುಂಬಿತು. ಬದುಕಿನಲ್ಲಿ ತೋರಿದ್ದ ದಿಟ್ಟ ಮುಗುಳ್ನಗೆ ಮುಖದಲ್ಲಿ ಮಿಂಚುತ್ತಿತು.

ಸಿಪಾಯಿಗಳ ನಡುವೆ, ಬೇಡಿ ಸಂಕೊಲೆಗಳಿಂದ ಶೃಂಗಾರಗೊಂಡ ಕ್ರಾಂತಿವೀರ ದಿಟ್ಟ ಹೆಜ್ಜೆಯಿಟ್ಟು ನೇಣುಗಂಬದತ್ತ ನಡೆದ. ಕೂಡಿದ್ದ ಜನ, ತಮ್ಮ ಅಧಿಕಾರ ಅಂತಸ್ತುಗಳನ್ನು ಮರೆತು ಅವನನ್ನೇ ನೋಡುತ್ತಿದ್ದರು.  ಎರಡೇ ಹೆಜ್ಜೆಯಲ್ಲಿ ವಧಾಸ್ಥಾನದ ಮೆಟ್ಟಿಲುಗಳನ್ನು ಹತ್ತಿ ನಿಂತ. ಬೇಡಿ, ಸಂಕೊಲೆಗಳನ್ನು ತೆಗೆದು ಹಾಕಿದರು. ಕೈ ನೀಡಿ  ನೆಣುಹಗ್ಗವನ್ನು ಒಮ್ಮೆ ಸೆಳೆದು ಮುತ್ತಿಟ್ಟು ಕ್ರಾಂತಿವೀರ.

“ನನ್ನ ಕೈಗಳು ಮಾನವ ಹತ್ಯೆಯಿಂದ ಮಲಿನವಾಗಲಿಲ್ಲ. ನನ್ನ ಮೇಲೆ ಹೊರಿಸಿರುವ ಅಪಾದನೆ ಸುಳ್ಳು. ದೇವನೆದುರಿನಲ್ಲಿ ನ್ಯಾಯ ನನಗೆ ದೊರೆಯುತ್ತದೆ” ಎಂದು ಘೋಷಿಸಿದ.

“ಲಾ ಇಲಾಹಿ ಇಲ್ ಅಲ್ಲಾ, ಮಹ್ಮದ್ ಉರ್‌ ರಸೂಲ್ ಅಲ್ಲಾ” ಎಂದು ದೃಢ ಧ್ವನಿಯಲ್ಲಿ ಪ್ರಾರ್ಥನೆ ವಾಕ್ಯವನ್ನು ಪಠಿಸಿದ.

ನೇಣಿನ ಹಗ್ಗ ಅವನ ಕೊರಳನ್ನು ಬಳಸಿತು :ಕೀಲು ಅದುಮಿದೊಡನೆ ಹಲಗೆ ಜಾರಿ ನೇಣುಬಾವಿಗೆ ಸರ‍್ನೆ ಅವನನ್ನು ಕುಕ್ಕಿತು.

ಭಾರತಮಾತೆಯ ಪದತಲದಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಬಲಿದಾನ  ಮಾಡಿದ ಹುತಾತ್ಮರ ಸಾಲಿನಲ್ಲಿ ಸೇರಿ ಹೋದ ಆ ಧೀರ.

ಆ ಕ್ರಾಂತಿವೀರನೇ ಆಶ್ಪಾಕ್ ಉಲ್ಲಾ ಖಾನ್.

ಕ್ರಾಂತಿಯತ್ತ :

ಆಶ್ಫಾಕ್ ಉಲ್ಲಾ ಉತ್ತರ ಪ್ರದೇಶಧ ಷಾಜಹಾನ್ ಪುರದ ಗಣ್ಯ ಪಠಾಣ ಮನೆತನದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಆದಿ ಭಾಗದಲ್ಲಿ ಜನಿಸಿದ. ಆತನ ತಂದೆ ಫಿಕ್ ಉಲ್ಲಾ ಖಾನ್.

೧೯೨೧ನೆಯ ಇಸವಿ. ಅಶ್ಪಾಕ್ ಹೈಸ್ಕೂಲಿನಲ್ಲಿ ಓದುತ್ತಿದ್ದ. ಭಾಋತ ಇನ್ನೂ ಗುಲಾಮರಿಗಿಯಲ್ಲಿತ್ತು. ದೇಶದಾದ್ಯಂತ ಅಸಹಕಾರ ಚಳುವಳಿ ಪ್ರಾರಂಭವಾಯಿತು. ಇದಕ್ಕೆ ನಾಯಕರು ಮಹಾತ್ಮ ಗಾಂಧೀ. ಬ್ರಿಟಿಷರೊಡನೆ ಸಹಕರಿಸಬೇಡಿ. ತೆರಿಗೆ ಕೊಡಬೇಡಿ, ಹೀಗೆ ಗಾಂಧೀಜಿ ಕರೆಯಿತ್ತರು. ಈ ಚಳುವಳಿ ಇಡೀ ಯುವ ಜನಾಂಗದಲ್ಲಿ ಸ್ವಾತಂತ್ಯ್ರಾಕಾಂಕ್ಷೆಯ ಕಿಚ್ಚನ್ನು ಹೊತ್ತಿಸಿತು. ಆದರೆ ಚೌರಿ ಚೋರ ಎನ್ನುವ ಕಡೆ ಕೆಲವು ಜನರು ಅಹಿಂಸೆಯನ್ನು ಮರೆತರು. ಅನೇಕ ಮಂದಿ ಪೋಲಿಸರನ್ನು ಸುಟ್ಟರು. ಇದನ್ನು ಕೇಳಿದ ಗಾಂಧೀಜಿಗೆ ನೋವಾಯಿತು. “ದೇಶ ಇನ್ನೂ ಅಹಿಂಸಾಯುತ ಹೋರಾಟಕ್ಕೆ ಸಿದ್ಧವಾಗಿಲ್ಲ” ಎಂದು ಹೇಳೀ ೧೯೨೨ರ ಫೆಬ್ರವರಿಯಲ್ಲಿ ಚಳುವಳಿಯಲ್ಲಿ ನಿಲ್ಲಿಸಿ ಬಿಟ್ಟರು. ಇದರಿಂದ ಯುವಜನಾಂಗ ತೀವ್ರ ಹತಾಶೆಗೆ ಗುರಿಯಾಯಿತು.

ಹೀಗೆ ಹತಗಾಶರಾದ ಯುವಕರಲ್ಲಿ ಅಶ್ಫಾಕ್ ಒಬ್ಬ. ಹೇಗಾದರೂ  ದೇಶವು ಬಹುಬೇಗ ಸ್ವತಂತ್ರ್ಯ ವಾಗಬೇಕು ಎಂಬ ಹಂಬಲ ಅವನನ್ನು ಕ್ರಾಂತಿಕಾರಿಗಳತ್ತ  ನಡೆಸಿತು.  ಆಗ ಷಾಹಜಾನ ಪುರದಲ್ಲಿದ್ದ ಪ್ರಸಿದ್ಧ ಕ್ರಾಂತಿಕಾರಿ ರಾಮ ಪ್ರಸಾಧನ ಗೆಳೆತನ ಸಾಧಿಸುವ ದೃಢ ನಿಶ್ಚಯ ಮೂಡಿತು.

ಪಂಡಿತ ರಾಮ ಪ್ರಸಾದ ಬಿಸ್ಮಿಲ್ಲ ಆಗಾಗಲೇ ಹೆಸರುಗಳಿಸಿದ್ದ ಕ್ರಾಂತಿಕಾರಿಯಾಗಿದ್ದ.ಗೇಂದಾಲಾಲ್ ದೀಕ್ಷಿತ ಎಂಬ ಉಪಾಧ್ಯಾಯನ ನಾಯಕತ್ವದಲ್ಲಿ ಶಸ್ತ್ರ ಸಂ‌ಗ್ರಹಣೆ, ಡಕಾಯಿತಿ ನಡಸಿ ಹಣ ಕೊಡುವುದು ಮುಂತಾದುವುಗಳಲ್ಲಿ ನಿಷ್ಣಾತನಾಗಿದ್ದ.

ರಾಮಪ್ರಸಾದನ ಗೆಳೆತನ ಗಳಿಸಲು ಅಶ್ಫಾಕ್ ಗೆ ಬಹು ದೊಡ್ಡದಾದ ತಡೆಯೊಂದಿತ್ತು. ರಾಮಪ್ರಸಾದ್ ಆರ್ಯ ಸಮಾಜಕ್ಕೆ ಸೇರಿದವನು. ಹಿಂದೂ ಧರ್ಮದ ಹಿರಿಮೆಯನ್ನು ವಿವರಿಸಿ, ಆ ಧರ್ಮಕ್ಕೆ ಹಿಂದಿರುಗಲು ಬಯಸಿದ  ಇತರೆ ಧರ್ಮಗಳವರನ್ನು ಮತ್ತೇ ಸೇರಿಸಿಕೊಳ್ಳಲು ಪಣ ತೊಟ್ಟವ, ಅಶ್ಪಾಕ ಮುಸಲ್ಮಾನ. ತನ್ನ ಧರ್ಮದಲ್ಲಿ ಶ್ರದ್ಧೆಯುಳ್ಳವ.

ಆದರೆ ಅಶ್ಪಾಕ್‌ ಹಿಂಜರಿಯಲಿಲ್ಲ. ತನ್ನ ಶಾಲೆಯಲ್ಲಿಯೇ ಒಮ್ಮೆ ರಾಮ ಪ್ರಸಾದನನ್ನು ಭೇಟಿಯಾದ. ರಾಮಪ್ರಸಾದನಿಗೆ “ಇವನು ಯಾರೋ? ಮುಸಲ್ಮಾನ ವಿದ್ಯಾರ್ಥಿ! ನಿಜವಾಗಿ ಕ್ರಾಂತಿಕಾರನಾಗುವ ಬಯಕೆಯೋ, ಇಲ್ಲವೋ ಸೋಗೋ?” ಎಂದೆಲ್ಲಾ ಅನುಮಾನವೇ. ಔಪಚಾರಿಕವಾಗಿಯೇ ಮಾತನಾಡಿ ಮುಗಿಸಿದ ಅಶ್ಫಾಕ್ ಅವನ ಬಿಗುವನ್ನು ಗಮನಿಸಿದ. ಆದರೂ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ಇಬ್ಬರಿಗೂ ಪರಿಚಯವಿದ್ದ ಕೆಲವರ ಮೂಲಕ ರಾಮ ಪ್ರಸಾದನಿಗೆ ತನ್ನ ಕಳಕಳಿಯನ್ನು ಮನದಟ್ಟು ಮಾಡಲೆತ್ನಿಸಿದ. ಅದೃಷ್ಟವಶಾತ್ ರಾಮಪ್ರಸಾದನೂ, ಸ್ನೇಹಿತರು. ಎಡೆಬಿಡದ ಪ್ರಯತ್ನದಿಂದ ಇವರಿಬ್ಬರ ಗೆಳೆತನ ಕೂಡಿ ಬಂದಿತು. ಇಬ್ಬರು ಒಟ್ಟಿಗೆ ಉಂಡರು, ಕ್ರಾಂತಿ ಜೀವನ ನಡೆಸಿದರು. ಕೊನೆಗೆ ಒಂದೇ ದಿನ ಬೇರೆ ಬೇರೆ ಜೈಲು ಗಳಲ್ಲಿ ಜೈಲು ಗಂಭಕ್ಕೆ ಬಲಿಯಾಗಿ ಪ್ರಾಣಾರ್ಪಣೆ ಮಾಡಿದರು.

ಕ್ರಾಂತಿಕಾರರು ಒಂದಾದರು:

ಅಸಹಾಕರ ಚಳುವಳಿ ಹಿಂತೆಗೆದುಕೊಳ್ಳಲ್ಪಟ್ಟು, ಹತಾಶರಾದ ಯುವಜನರಲ್ಲಿ ಕ್ರಾಂತಿಕಾರಿ ಭಾವನೆಗಳು ಬಲಗೊಂಡವು. ಬ್ರಿಟಿಷರದು ದೊಡ್ಡ ಸಾಮ್ರಾಜ್ಯ: ಅವರಿಗೆ ಸೈನ್ಯಗಳುಂಟು, ಪ್ರಬಲವಾದ ಆಯುಧಗಳುಂಟು. ಇಂತಹವರು ಒಳ್ಳೆಯ ಮಾತಿಗೆ ಭಾರತವನ್ನು ಬಿಟ್ಟು ಹೋಗುತ್ತಾರೆಯೇ? ಹೋರಾಟ ನಡೆಸಬೇಕು, ಅಗತ್ಯವಾದಾಗ ರಿವಾಲ್ವಾರ್‌, ಬಾಂಬ ಇಂತಹ ಅಯುಧಗಳನ್ನೂ ಉಪಯೋಗಿಸಬೇಕು, ಬ್ರಟಿಷರ ಎದೆ ನಡುಗುವಂತೆ ಮಾಡಬೇಕು, ಅವರು ಹೆದರಿಕೊಂಡು ಭಾರತವನ್ನು  ಬಿಟ್ಟು ಹೋಗುವಂತೆ ಅವರಿಗೆ ತಲ್ಲಣವನ್ನು ಮಾಡಬೇಕು ಎಂದು ಇವರ ದೃಢನಂಬಿಕೆ. ಪರಿಣಾಮವಾಗಿ ಅಲ್ಲಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿ ದಳಗಳು ಸುಸಂಘಟಿತವಾಗಿ ತೊಡಗಿದವು. ಕಾಶಿ ಕ್ರಾಂತಿಕಾರರ ಪ್ರಮುಖ ಕೇಂದ್ರವಾಯಿತು. ಸಶಸ್ತ್ರ ಕ್ರಾಂತಿಯಿಂದ ನಾಡನ್ನು ಸ್ವತಂತ್ರ ಗೊಳಿಸುವುದನ್ನೇ ಮುಖ್ಯ ಗುರಿಯಾಗಿ ಉಳ್ಳ “ಹಿಂದೂಸ್ಥಾನ ರಿಪಬ್ಲಿಕನ್ ಅಸೊಸಿಯೇಷನ್” ಎಂಬ ಸಂಘವು ರೂಪಗೊಂಡಿತು.

ಈ ಸಂಘವು ೧೯೨೫ರಲ್ಲಿ “ಕ್ರಾಂತಿಕಾರಿ” ಎಂಬ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿ ತನ್ನ ರೂಪುರೇಷೆಗಳನ್ನು ಪ್ರಸಿದ್ಧಗೊಳಿಸಿತು. ಕಲ್ಕತ್ತಾದಿಂದ ಲಾಹೋರಿನವರೆಗೆ ಈ ಪ್ರಣಾಳಿಕೆ ಏಕ ಕಾಲದಲ್ಲಿ ಹೊರಬಂದು, ಸರಕಾರವನ್ನು ದಂಗುಬಡಿಸಿತು. ಭಾರತದ ಎಲ್ಲಾ ರಾಜ್ಯಗಳು ಸೇರಿ ಒಂದು ಒಕ್ಕೂಟವಾಗಬೇಕು, ಪ್ರಾಂತಗಳಿಗೆ ತಮ್ಮ ತಮ್ಮ ಒಳ ಆಡಳಿತ ನಡೆಸಿಕೊಳ್ಳುವಷ್ಟು ಅಧಿಕಾರವಿರಬೇಕು, ಒಬ್ಬ ಮನುಷ್ಯ ಇನ್ನೊಬ್ಬನನ್ನು ದುಡಿಸಿಕೊಂಡು ಹಣ ಪಡೆಯುವುದು, ಅಧಿಕಾರ ನಡೆಸುವುದು ಹೋಗಬೇಕು-ಇವು  ಈ ಸಂಘದ  ಗುರಿಗಳೆಂದು ಸಾರಲ್ಪಟ್ಟಿತ್ತು.

“ಹಿಂದೂಸ್ಥಾನ ರಿಪಬ್ಲಿಕನ್ ಆಸೊಸಿಯೇಷನ್ ಷಾಹಜನ್ ಪುರದ ವಿಭಾಗಕ್ಕೆ ರಾಮಪ್ರಸಾದನು ಮುಖ್ಯ ಸಂಘಟಕನಾದನು. ಆತನಿಗಿದ್ದ ಅನುಭವದಿಂದ ಆತ ಸಹಜವಾಗಿ ಪಕ್ಷಕ್ಕೆ ಒಳ್ಳೆಯ ಆಸ್ತಿಯಂತಾದ.

ಹಣ ಬೇಕಲ್ಲವೇ,. ಎಲ್ಲಿದೆ?

ಈಗ ಕ್ರಾಂತಿಕಾರಿ ಪಕ್ಷಕ್ಕೆ ಇದ್ದ ಪ್ರಮುಖ ಕೊರತೆ ಹಣದ್ದಾಯಿತು. ಶಸ್ತ್ರಗಳನ್ನು ಸಂಗ್ರಹಿಸಲು , ಕಾರ್ಯಕರ್ತರನ್ನು ಪೋಷಿಸಲು, ಪ್ರಚಾರಕಾರ್ಯಗಳನ್ನು ನಡೆಸಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಹಣ ಬೇಕಾಗುತ್ತಿತ್ತು. ಸದಸ್ಯರಿಂದ ಚಂದಾ ಸೇರಿಸಿಯಾಯಿತು. ಕೆಲವರು ತಮ್ಮ ತಮ್ಮ ಮನೆಗಳಿಂದ ಕದ್ದು, ಬೇಡಿ ತಂದುದಾಯಿತು. ಮಿತ್ರರಿಂದ ಹಣ ಕೂಡಿಸಿದ್ದೂ ಆಯಿತು. ಆದರೆ ಇವರು ಇಟ್ಟುಕೊಂಡಿದ್ದ ಗುರಿಗೆ, ಮಾಡಬೇಕಾದ ಕೆಲಸಕ್ಕೆ ಹತ್ತಾರು ಸಹಸ್ರ ರೂಪಾಯಿಗಳೇ ಬೇಕಾಗಿತ್ತು. ದೇಶದ ಕೆಲಸಕ್ಕೆ ಹಣ ಬೇಕು, ಎಲ್ಲದೆ ಹಣ?

ರಾಮಪ್ರಸಾದನ ನೇತೃತ್ವದಲ್ಲಿ ಒಂದೆರಡು ಗ್ರಾಮಗಳಲ್ಲಿ ಡಕಾಯಿತಿ ನಡೆಸಿದರು ಕ್ರಾಂತಿಕಾರಿಗಳು. ತನ್ನ ಅಣ್ಣ ಪಡೆದಿದ್ದ ಲೈಸನ್ಸ ಬಂದೂಕವನ್ನು ತಂದು ಅಶ್ಪಾಕ್ ಈ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದ. ಡಕಾಯಿತಿಗಳಲ್ಲಿ ದೊರೆಯುತ್ತಿದ್ದ ನೂರಿನ್ನೂರು ರೂಪಾಯಿಗಳು ಪಕ್ಷದ ವಿಶಾಲ ಕಾರ್ಯಗಳಿಗೆ ಸಾಲುತ್ತಿರಲಿಲ್ಲ. ಮೇಲಾಗಿ ಸ್ವಾತಂತ್ರ್ಯ ಗಳಿಸುವುದಕ್ಕೆ ಆದರೂ ನಮ್ಮ ದೇಶದ ಜನರನ್ನೇ ಸುಲಿಗೆ ಮಾಡಬೇಕಾಗಿ ಬರುತ್ತಿದ್ದುದು ರಾಮಪ್ರಸಾದನಿಗೆ ಹಿಡಿಸುತ್ತಿರಲಿಲ್ಲ.

ಇಲ್ಲಿದೆಯಲ್ಲ ಹಣ !

ರಾಮಪ್ರಸಾದ್ ಒಂದು ದಿನ ಷಾಜಹಾನ್ ಪುರದಿಂದ ಲಕ್ನೋವಿಗೆ ಹೋಗುತ್ತಿದ್ದ ರೈಲು ಗಾಡಿಯನ್ನು ಏರಿದ. ರೈಲು ನಿಂತ ನಿಲ್ದಾಣಗಳಲ್ಲೆಲ್ಲ ತಾನೂ ಕೆಳಗಿಳೀದು ಸುಮ್ಮನೆ ನಿಲ್ಲುತ್ತಿದ್ದ ಅವನು. ಒಂದು ಸ್ಟೇಷನ್ನಿನಲ್ಲಿ ಸ್ಟೇಷನ ಮಾಸ್ಟರನು ಹಣದ ಚೀಲವೊಂದನ್ನು ತಂದು ಗಾರ್ಡಿನ ಡಬ್ಬಿಯೊಳಕ್ಕೆ ಒಯ್ಯುತ್ತಿದ್ದುದನ್ನು ಗಮನಿಸಿದ. ಕೂಡಲೇ ಅವನು ಗಾರ್ಡಿನ ಡಬ್ಬಯ ಪಕ್ಕದ ಡಬ್ಬಿಗೆ ಬಂದು ಕುಳಿತ. ಪ್ರತಿ ಸ್ಟೇಷನ್ನಿನಲ್ಲಿಯೂ ಹೀಗೆ ಹಣದ ಚೀಲಗಳು ಬಂದು ಗಾರ್ಡಿನ ಡಬ್ಬಿಯಲ್ಲಿಟ್ಟಿದ್ದ ಒಂದು ಕಬ್ಬಿಣದ ಸಂದೂಕದೊಳಕ್ಕೆ ಬಿಳುತ್ತಿದ್ದವು. ಲಕ್ನೋನಲ್ಲಿ ಇಳಿದು ಗಮನಿಸುವಲ್ಲಿಯಾವ ವಿಶೇಷವಾದ ಭದ್ರತೆಯ ಏರ್ಪಾಡು ಇದ್ದಂತೆ ತೋರಲಿಲ್ಲ. ಅವನು ಓಡಿ ಹೋಗಿ ತಾನು ಬಂದ ಗಾಡಿ ಯಾವುದು ಎಂದು ವೇಳಾ ಪಟ್ಟಿಯಿಂದ ಅರಿತ. ಅದು ಎಂಟನೆಯ ನಂಬರ ಡೌನ್ ಗಾಡಿ.

“ಎಲ್ಲಾ ! ಏನು ಇಲ್ಲವೆಂದರೂ ಇದರಲ್ಲಿ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲ. ಇಂತಹ ಸದಾವಕಾಸವನ್ನು ಬಿಡಬಾರದು” ಎಂದು ಸರಸರನೆ ನಿರ್ಧಾರಕ್ಕೆ ಬಂದ.

ಮುಂದೆ ಕಾಕೋರಿಯಲ್ಲಿ ನಡೆದ ರೈಲು ಡಕಾಯಿತಿ ಪ್ರಕರಣಕ್ಕೆ ಅಂಕುರಾರ್ಪಣೆಯಾದಂತಾಯಿತು.

ಹೌದು, ಆದರೆ

ಕ್ರಾಂತಿಕಾರರ ಸಭೆ ಕೂಡಿತು. ಕಾಶಿ, ಕಾನ್ಪುರ, ಲಕ್ನೋ, ಆಗ್ರಾಗಳಿಂದ ಸದಸ್ಯರು ಬಂದಿದ್ದರು. ರಾಮ ಪ್ರಸಾದ ತಮ್ಮ ಆಲೋಚಿಸಿದ್ದನ್ನು ಸಭೆಗೆ ವಿವರಿಸಿದ.

“ನಾವು ರೈಲಿನಲ್ಲಿ ಬರುವ ಸರಕಾರಿ ಹಣದಲೂಟಿ ಮಾಡಿದರೆ ನಮ್ಮ ಚಳುವಳಿಗೆ ಬೇಕಾದ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಮೇಲಾಗಿ ನಮ್ಮ ಜನರಲ ಮೇಲೆಯೇ ನಾವು ಕೈ ಮಾಡುವ ಅವಶ್ಯಕತೆಯಿರುವುದಿಲ್ಲ. ಕಾರ್ಯವೇನೋ ಕಠಿಣವಾದುದು.ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಾದ ಕೆಲಸ. ಆದರೆ ನಮ್ಮ ಪ್ರಯತ್ನಗಳಿಗೆ ಸಕಲ ದೃಷ್ಟಿಗಳಿಂದಲೂ ತಕ್ಕ ಪ್ರತಿಫಲವಿದೆ. ಸರಕಾರಕ್ಕೂ ಸಹ ಕ್ರಾತಿಕಾರಿಗಳು ಬರಿ ಬಾಯ ಕ್ರಾಂತಿಕಾರರಲ್ಲ, ಕಾರ್ಯತಃ ಕ್ರಾಂತಿಕಾರಿಗಳು ಎಂಬುವುದನ್ನು ತಿಳಿಸಿಕೊಟ್ಟಂತಾಗುತ್ತದೆ” ಎಂದ.

ಸಭೆಗೆ ಆ ಸೂಚನೆ ಕೇಳಿ ಬಹಳ ಮೆಚ್ಚುಗೆಯಾಯಿತು. ಪರಾಕ್ರಮ ತೋರಿ ಮಾಡಬಹುದಾದ ಕಾರ್ಯಚರಣೆಗಳಿಗಾಗಿ ಕ್ರಾಂತಿಕಾರರು ಕಾತುರರಾಗಿದ್ದರು.  ಹೆಚ್ಚು ಕಡಿಮೆ ಎಲ್ಲರೂ “ಸರಿ, ಸರಿ, ಸೊಗಸಾದ ಅಲೋಚನೆ” ಎಂದರು.

ಮೌನವಾಗಿ ಎಲ್ಲವನ್ನೂ ಕೇಳುತ್ತಾ ಆಶ್ಪಾಕ್ ಆ ಯೋಜನೆಯನ್ನು ಕುರಿತು ಪೂರ್ವಭಾವಿಯಾಗಿ ರಾಮ ಪ್ರಸಾದನಿಂದ ಕೇಳಿದಾಗಿನಿಂದ ಕೂಲಂಕುಷವಾಗಿ ಆಲೋಚಿಸಿದ್ದ. ಎಲ್ಲರೂ ಹೂಂ, ಹೂಂ ಎನ್ನುವವರೇ ಆದಾಗ ತಾನು ಸುಮ್ಮನಿದ್ದರಾಗದು ಎಂದುಕೊಂಡು, “ಮಿತ್ರರೇ ನನಗೇನೋ  ಈ ಹೆಜ್ಜೆ ಆತುರದ್ದು ಎನಿಸುತ್ತದೆ.  ರಾಮಪ್ರಸಾದ್ ಹೇಳಿದಂತೆ ಹಲವು ದೃಷ್ಟಿಗಳಿಂದ ಅದು ಒಳ್ಳೆಯದೇ ಇರಬಹುದು. ಆದರೆ ನಮ್ಮ ಬಲವೆಷ್ಟು, ನಾವು ಎದುರಿಸುತ್ತಿರುವ ಸರಕಾರದ  ಬಲವೆಷ್ಟು ಎಂಬುವುದನ್ನು ಕುರಿತು ಯಾರೂ ಅಲೋಚಿಸಿದಂತಿಲ್ಲ. ಸಾಧಾರಣವಾದ ಡಕಾಯಿತಿ ನಡೆಸಿದಾಗ ದೊರೆಯುವ ಧದ ಕಡಿಮೆ. ಅಷ್ಟೇ ಮಟ್ಟಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಹತತಾರು ಘಟನೆಗಳಲ್ಲಿ ಒಂದಾಗಿ ಅದನ್ನು ಸರಕಾರ ಎಣಿಸುತ್ತದೆ.  ಮಾಮೂಲಾಗಿ  ಪೋಲಿಸರು ಏನು ಮಾಡುತ್ತಾರೆಯೋ ಅಷ್ಟನ್ನೇ  ನಾವು ಎದುರಿಸಬೇಕಾಗುತ್ತದೆ. ಸರಕಾರದ ಖಜಾನೆಗೆ ಕೈಯಿಟ್ಟರೆ ಮಾತೇ ಬೇರೆ. ಇಡೀ ಆಡಳಿತ ಯಂತ್ರ ನಮ್ಮನ್ನುಜ ಪತ್ತೇ ಮಾಡಿ ಹತ್ತಿಕ್ಕುವುದರಲ್ಲಿ ತೊಡಗುತ್ತದೆ. ನಮ್ಮ ಪಕ್ಷಕ್ಕೆ ಅದರಿಂದ ಪಾರಾಗುವಷ್ಟು ಬಲವಿಲ್ಲವೆಂಬುವುದನ್ನು ನನ್ನ ಅಭಿಪ್ರಾಯಲ. ಈ ಯೋಜನೆಯನ್ನು  ಕೈಬಿಡುವುದು ಒಳ್ಳೆಯದು” ಎಂದು ಸ್ಪಷ್ಟವಾಗಿ ತಿಳಿಸಿದ.

ಉತ್ಸಾಹದ ಪ್ರವಾಹದಲ್ಲಿದ್ದ ಕ್ರಾಂತಿಕಾರರು ಈ ರೀತಿಯ ವಿವೇಕವನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಹಳ ಹೊತ್ತು ಚರ್ಚೆ ಮಾಡಿ, ಆ ಯೋಜನೆಯನ್ನು ಒಪ್ಪಿ, ಅದರ ನಿರ್ವಹಣೆಯನ್ನು ರಾಮ ಪ್ರಸಾದನಿಗೆ ಬಿಟ್ಟರು.

ಆಗ ರಾಮಪ್ರಸಾದ್, “ಮಿತ್ರರೇ, ಒಂದು ಮಾತು.ನಮ್ಮ ಮೇಲೆ ಗುಂಡು ಹಾರಿಸಿದುರಲ್ಲದೇ ನಾವಾಗಿ ಯಾರನ್ನೂ ಕೊಲೆ ಮಾಡಲು ಮುಂದಾಗಬಾರದು. ಸಾಧ್ಯವಿದ್ದಷ್ಟು ಮಟ್ಟಿಗೆ ರಕ್ತಪಾತವಾಗದಂತೆ ಕಾರ್ಯ ಸಾಗಬೇಕು ” ಎಂದು ಎಚ್ಚರಿಸಿದ. ಸಭೆ ಚದುರಿತು.

 

ಅಶ್ಪಾಕ್, "ಮಿತ್ರರೇ, ನನಗೇನೋ ಈ ಹೆಜ್ಜೆ ಆತುರದ್ದು ಎನಿಸುತ್ತದೆ" ಎಂದ.

ರೈಲನ್ನು ತಡೆದದ್ದಾತಯಿತು:

೧೯೨೫ನೆಯ ಇಸವಿ ಅಗಸ್ಟ್ ತಿಂಗಳ ಒಂಬತ್ತರಂದು ಸಂಜೆ ಷಾಹಜನಪುರದಿಂದ ಲಕ್ನೋವಿಗೆ ಹೊರಟಿದ್ದ ಎಂಟನೆಯ ನಂಬರ ಡೌನ್ ರೈಲುಗಾಡಿ ಕಾಕೋರಿ ಗ್ರಾಮದ ಬಳಿ ಸಾಗಿತ್ತು. ಸೂರ್ಯ ಸರಸರನೆ ಪಶ್ಚಿಮಕ್ಕೆ ಇಳಿಯುತ್ತಿದ್ದ.

ತಟಕ್ಕನೆ ರೈಲಿನ ಸರಪಳಿ ಎಳೆಯಲ್ಪಟ್ಟಿತ್ತು. ವೇಗದಿಂದ ಸಾಗಿದ್ದ ಗಾಡಿ ಹಠಾತ್ತಾನೆ ನಿಂತಿತ್ತು.

ಎರಡನೆಯ ತರಗತಿಯ ಡಬ್ಬಿಯೊಂದರಿಂದ ಅಶ್ಪಾಕ್ ಉಲ್ಲಾ ತನ್ನ ಸಂಗಡಿಗರಾದ ಶಚೀಂದ್ರ ಬಕ್ಷಿ ಮತ್ತು ರಾಜೇಂದ್ರ ಲಾಹಿರಿಯವರೊಂದಿಗೆ ನೆಲಕ್ಕೆ ಜಿಗಿದ. ಕಾಕೋರಿ ಕಾರ್ಯಕ್ರಮದಲ್ಲಿ ಅವನಿಗೆ ವಹಿಸಿದ್ದ ಮೊದಲ ಜವಾಬ್ದಾರಿಯು ಮುಗಿದಿತ್ತು.

ಆ ವೇಳೆಗೆ ಗಾರ್ಡು ತನ್ನ ಡಬ್ಬಿಯಿಂದ ಇಳಿದು ಸರಪಳಿ ಎಳೆದುದುಯಾವ ಡಬ್ಬಿಯಲ್ಲಿ, ಏನಾಗಿದೆ ವಿಚಾರಿಸಲು ಹೊರಟಿದ್ದ. ಇಬ್ಬರು ಕ್ರಾಂತಿಕಾರರು ಅವನ ಮೇಲೆ ಬಿದ್ದರು. ಮುಖವನ್ನು ಕೆಳಕ್ಕೆ ಮಾಡಿ ಮಲಗಿಸಿ ಎದ್ದರೆ ತಲೆ ಹಾರಿಸುವುದಾಗಿ ಎಚ್ಚರಿಕೆ ನೀಡಿ ಪಿಸ್ತೂಲನ್ನು ಗುರಿಯಿಟ್ಟು ನಿಂತರು.

ಇನ್ನಿಬ್ಬರು ಕ್ರಾಂತಿಕಾರರು ಡ್ರೈವರನ್ನು ಎಂಜಿನ್ನಿನಿಂದ ಕೆಳಕ್ಕೆ ತಳ್ಳಿ ನೆಲಕ್ಕೆ ಬೀಳಿಸಿ ಕಾವಲು ನಿಂತರು.

ಗಾಡಿಯ ಆ ತುದಿಯಲ್ಲಿ ಒಬ್ಬ, ಈ ತುದಿಯಲ್ಲಿ ಒಬ್ಬ ಕ್ರಾಂತಿಕಾರರು ನಿಂತು ತಮ್ಮ ಮೌಜರ್‌ ಪಿಸ್ತೂಲುಗಳಿಂದ ಗುಂಡುಹಾರಿಸಿದರು. ನಡುವೆ ಗಂಭೀರ ಧ್ವನಿಯಿಂದ “ಪ್ರಯಣಿಕರೇ, ಹೆದರಬೇಡಿ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರರು. ನಿಮ್ಮ ಜೀವಕ್ಕಾಗಲೀ,ಹಣಕ್ಕಾಗಲಿ, ಮಾನಕ್ಕಾಗಲೀ ಯಾವ ಅಪಾಯವೂ ಇಲ್ಲ. ಆದರೆ ತಲೆ ಹೊರಗೆ ಇಟ್ಟೀರಿ ಜೋಕೆ!” ಎಂದು ಘೋಷಿಸತೊಡಗಿದರು.

 

ಆಶ್ಫಾಕ್ ಸುತ್ತಿಗೆಯನ್ನು ಎತ್ತಿ ಸಂದೂಕದ ಮೇಲೆ ಏಟುಗಳನ್ನು ಜಡಿದ.

ಉಳಿದ ನಾಲ್ವರು ಕ್ರಾಂತಿಕಾರರು ಗಾರ್ಡನ ಡಬ್ಬಿಯನ್ನು ಹತ್ತಿದರು. ಬಹಳ ಶ್ರಮದಿಂದ ಸಂದೂಕವನ್ನು ಹೊರ ತಳ್ಳಿದರು. ಅದಕ್ಕೆ ಭದ್ರವಾದ ಬೀಗ ಹಾಕಿತ್ತು. ಡ್ರೈವರನನ್ನಾಗಲೀ, ಗಾರ್ಡನಲ್ಲಾಗಲೀ ಕೀಲಿ ಇರಲಿಲ್ಲ. ಆ ಸಂದೂಕಕ್ಕೆ ಚೀಲಗಳನ್ನು ಹಾಕಲು ರಂಧ್ರವೊಂದಿತ್ತು. ಅದರಿಂದ ಏನನ್ನೂ ತೆಗೆಯಲು ಆಗುತ್ತಿರಲಿಲ್ಲ.

ಕ್ರಾಂತಿಕಾರರು ಸುತ್ತಿಗೆಗಳನ್ನೆತ್ತಿ ಅದನ್ನು ಒಡೆಯಲು ತೊಡಗಿದರು. ಹತ್ತೇಟು ಬಿದ್ದರೂ ತಡೆದುಕೊಂಡು ಜಗ್ಗದೆ ನಿಂತಿತು ಸಂದೂಖ. ಗಸ್ತು ತಿರುಗುತ್ತಿದ್ದ ಆಶ್ಪಾಕ್ ನೋಡಿದ.  ದೇಹಬಲದಲ್ಲಿ ಆ ಕ್ರಾಂತಿಕಾರಿ ದಳದಲ್ಲಿ ಅವನೇ ಅಸಮಾನ. ತನ್ನ ಕೈಯಲ್ಲಿದ್ದ ಮೌಜರ ಪಿಸ್ತೂಲನ್ನು ಮನ್ಮಥ ನಾಥನಿಗೆ ಕೊಟ್ಟು ಸಂದೂಕದತ್ತ ಓಡಿದ. ಸುತ್ತಿಗೆ ಎತ್ತಿ ರಂಧ್ರವನ್ನು ದೊಡ್ಡದು ಮಾಡಲೆಂದು ಏಟಿನ ಮೇಲೆ ಎಟು ಜಡಿದ. ಅವನ ಏಟುಗಳ ಧ್ವನಿ ಸುತ್ತಲಿನ ನಿರ್ಜನ ಪ್ರದೇಶದಲ್ಲಿ ಢಣ್, ಢಣ್ ಎಂದು  ಪ್ರತಿಧ್ವನಿತವಾಗತೊಡಗಿತು.

 

ಕ್ರಾಂತೀವೀರನು ನೇಣುಹಗ್ಗವನ್ನು ಮುತ್ತಿಟ್ಟ.

ಅಯ್ಯೋ, ಇನ್ನೊಂದು ರೈಲು !

ಅಷ್ಟರಲ್ಲಿ ಲಕ್ನೋವಿನ ಕಡೆಯಿಂದ ರೈಲು ಗಾಡಿಯೊಂದು ಬರುತ್ತಿರುವ ಶಬ್ದ ಕೇಳೀಬಂದಿತು. ರಾಮ ಪ್ರಸಾದ ಕ್ಷಣಕಾಲ ತಲ್ಲಣಿಸಿದ. ಅಯ್ಯಯ್ಯೋ, ನಿಂತಿರುವ ಈ ರೈಲಿಗೂ, ಬರುತ್ತಿರುವ ರೈಲಿಗೂ ಡಿಕ್ಕಿ ಹೊಡೆದರೆ ಗತಿಯೇನು? ನೂರಾರು ಜನರ ಹತ್ಯೆಗೆ, ನಿರಾಪರಾಧಿಗಳ ಕೊಲೆಗೆ ತಾನು ಹೊಣೆಯಾದಂತಾಯಿತೇ? ಆಗ ಅವನ ಗಮನಕ್ಕೆ ಬಂತು, ತಾವು ರೈಲನ್ನು ನಿಲ್ಲಿಸಿರುವ ಸ್ಥಳದಲ್ಲಿ ಎರಡು ರೈಲ್ವೆ ಹಳಿಗಳಿವೆ ಎಂಬುವುದು.

ಇತರೆ ಕ್ರಾಂತಿಕಾರರ ಗಮನವೂ ಬರುತ್ತಿದ್ದ ರೈಲಿನತ್ತ ಹರಿಯಿತು. ಆ ರೈಲಿನ ಡ್ರೈವರ ತನ್ನ ಗಾಡಿಯನ್ನು ನಿಲ್ಲಿಸಿದರೆ? ನೆಲದ ಮೇಲೆ ಅದುಮಲ್ಪಟ್ಟಿದ ಡ್ರೈವರು, ಗಾರ್ಡು ಗಲಭೆಯೆಬ್ಬಿಸಿ ಅದನ್ನು ನಿಲ್ಲಿಸಿದರೆ? ಪ್ರಯಾಣೀಕರು ಚೀರಾಡಿ ಅವರ್‌ ಗಮನವನ್ನು ಸೆಳೆದರೆ ?

ಎಲ್ಲರ ದೃಷ್ಟಿಯೂ ರಾಮ ಪ್ರಸಾದನಲ್ಲಿ ನೆಟ್ಟಿತು.  ನಾಯಕ ಆದೇಶವಿತ್ತ: “ಪಿಸ್ತೂಲಗಳನ್ನು ಕೆಳಮುಖ ಮಾಡಿ, ಗುಂಡು ಹಾರಿಸುವುದನ್ನು ನಿಲ್ಲಿಸಿ, ಸಂದೂಕ ಒಡೆಯುತ್ತಿರುವವರು ತಡೆಯಿರಿ. ಆಶ್ಪಾಕ್ , ಸ್ವಲ್ಪ ತಡಿ.”

ಆತಂಕದಿಂದ ಆ ಕೆಲವು ಕ್ಷಣಗಳೇ ಯುಗಗಳಂತೆ ತೋರಿತು. ವೇಗವಾಗಿ ಬರುತ್ತಿದ್ದ ಆ ರೈಲು ಇದೇನನ್ನೂ ಗಮನಕ್ಕೆ ತಂದುಕೊಳ್ಳದೇ ಪಕ್ಕದ ಹಳ್ಳಿಗಳ ಮೇಲೆ ಓಡಿತು.

ಸಿಕ್ಕಿತು ಹಣ !

ಮತ್ತೇ ಕಾರ್ಯಚರ‍್ಣೆ ಆರಂಭವಾಯಿತು. . ಢಣ್ ! ಡಣ್ !! ಡಣಾರ !!! ಸಂದೂಕದ ರಂದ್ರದ ಮೇಲೆ ಬಲವಾದ ಏಟುಗಳು ಮೇಲೆ ಏಟುಗಳು ಬಿದ್ದು ಅದು ದೊಡ್ಡದಾಯಿತು. ಹಣದ ಚೀಲಗಳು ಹೊರ ಬಂದವು.

ಈ ನಡುವೆ ಗಾಡಿಯಲ್ಲಿದ್ದ ಪ್ರಯಾಣಿಕರು ಶಾಂತರಾಗಿಯೇ ಇದ್ದರು. ಪಿಸ್ತೂಲಗಳಿದ್ದ ಆಂಗ್ಲ ಅಧಿಕಾರಿಗಳೂ ಇದ್ದರು ಅವರಲ್ಲಿ. ದೊಡ್ಡ ಡಕಾಯಿತರ ಗುಂಪು ದಾಳಿ  ನಡೆಸಿದೆ ಎಂದು ಭಾವಿಸಿದ ಅವರು ಕಮಕ ಕಿಮಕ್ಕೆನ್ನದೆ ಕುಳಿತಿದ್ದರು.

ಆದರೆ ಹೊಸದಾಗಿ ಮದುವೆಯಾಗಿ ಆ ರೈಲಿನಲ್ಲಿ ಹೆಂಡತಿಯನ್ನು ಕರೆತರುತ್ತಿದ್ದ ಒಬ್ಬ ತರುಣ, ಹೆಂಗಸರ  ಡಬ್ಬಿಯನ್ನು  ಕುಳಿತ್ತಿದ್ದ ಹೆಂಡತಿಗೆ ಏನಾದರೂ ಅಪಾಯವೊದಗಿತೋ ಎಂಬ ಯೋಚನೆಯಿಂದ ತಲೆಯನ್ನು ಒಮ್ಮೆ ಹೊರಚಾಚಿದ. ಕ್ರಾಂತಿಕಾರನೊಬ್ಬನ ಗುಂಡು ಅವನ ತಲೆಗೆ ಹೊಡೆದು ಅಲ್ಲಿಯೇ ಸತ್ತು ಬಿದ್ದ.

ಇದಾವುದೂ ಇತರತ ಕ್ರಾಂತಿಕಾರರ ಗಮನಕ್ಕೆ ಬರಿಕಲ್ಲ. ಸಂದೂಕ ಬಾಯಿ ಬಿಟ್ಟಿತು. ಹಣದ ಚೀಳಗಳು ಹೊರ ಬಂದಿದ್ದವು. ಅವುಗಳನ್ನು ಕಂಬಳಿಗಳಲ್ಲಿ ಕಟ್ಟಿ  ಹೊತ್ತು ಲಕ್ನೋವಿನತ್ತ ನಡೆದರು!.

ಹತ್ತೇ ಹತ್ತು ಮಂದಿ ಧೈರ್ಯ, ಸಾಹಸ, ಶಿಸ್ತು ತಾಳ್ಮೆ ಮೇಲಾಗಿ ಅಮೋಘ ನಾಯಕತ್ವ ಹಾಗೂ ಅಪಾರ ಶ್ರದ್ದೇಗಳಿಂದಾಗಿ ಮಹಾನ್ ಕಾರ್ಯಚರಣೆಯನ್ನು ಯಶಸ್ವಿಯಾಗಿ ಮುಗಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟ ಹೋರಾಟ ದಲ್ಲಿ ಸಾಹಸದ ಅಧ್ಯಾಯವೊಂದನ್ನು ಬರೆದರು. ಆ ಹತ್ತು ಮಂದಿ ಕ್ರಾಂತಿವೀರರ ಹೆಸರುಗಳು- ರಾಮಪ್ರಸಾದ್ ಬಿಸ್ಮಿಲ್ಲ, ರಾಜೇಂದ್ರ ಲಾಹಿರಿ, ಠಾಕೂರ ರೋಷನ್ ಸಿಂಹ, ಶಚೀಂದರ ಬಕ್ಷಿ, ಚಂದ್ರಶೇಖರ ಅಜಾದ್, ಕೇಶವ ಚಕ್ರವರ್ತಿ, ಗನವಾರಿಲಾಲ್, ಮುಕುಂದೀಲಾಲ್, ಮನ್ಮಥ ನಾಥ ಗುಪ್ತ ಮತ್ತು ಅಶ್ಪಾಕ್ ಉಲ್ಲಾ ಖಾನ್.

ತಪ್ಪಿಸಿಕೊಂಡ ಸಿಂಹ :

ಕಾಕೋರಿ ರೈಲು ಡಕಾಯಿತಿ ನಡೆದು ಒಂದು ತಿಂಗಳು ಉರುಳಿದರೂ ಯಾರೂ ಬಂಧಿತರಾಗಲಿಲ್ಲ. ಸರಕಾಋವು ದೊಡ್ಡ ಬಲೆಯನ್ನು ಬೀಸಿತ್ತು.

೧೯೨೫ರ ಸೆಪ್ಟೆಂಬರ ೨೬ರ ಬೆಳಿಗ್ಗೆ ಹಠಾತ್ತಾಗಿ ಬಂಧನಗಳಾದವು. ರಾಮ ಪ್ರಸಾದ್ ಸೆರೆಯಾದ.

ಆಶ್ಪಾಕ್, ಪೋಲಿಸರು ಅವನ ಮನೆಯನ್ನು ಸುತ್ತು ವರೆಯುವುದರಲ್ಲಿ ಪರಾರಿಯಾದ. ಅಲ್ಲಿಂದ ಅರ್ಧ ಮೈಲಿ ದೂರದಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಅಡಗಕೊಂಡ. ರಾತ್ರಿ ವೇಳೆ ಗುಪ್ತ ಪೋಲಿಸರ ಕಣ್ಣು ತಪ್ಪಿಸಿ ಅವನಿಗೆ ಊಟ ಕಳಿಸುತ್ತಿದ್ದರು. ಅಶ್ಪಾಕನನ್ನು ಹುಡುಕಿ ಬೇಸತ್ತ ಪೋಲಿಸರು ಅವನ ಅಣ್ಣನ ಲೈಸನ್ಸನ್ನು ರದ್ದುಮಾಡಿ, ಬಂದೂಕುವನ್ನು ವಶಪಡಿಸಿಕೊಂಡರು.

ತನ್ನ ಹೊರತು  ಉಳಿದವರೆಲ್ಲರಾ ಸಿಕ್ಕಿ ಬಿದ್ದ ನಂತರ ಷಾಹಜಹಾನ್ ಪುರದಲ್ಲಿ ಅಡಗಿ ಕುಳಿತಿರುವುದು  ವ್ಯಥ್ಯೆ ಎನ್ನಿಸಿತು. ಹಣವನ್ನು ಒದಗಿಸಿಕೊಂಡು ಅಶ್ಪಾಕ  ಷಾಹಜಾನ್ ಪುರವನ್ನು ಬಿಟ್ಟ. ಅವನ ಗುರಿ ಕಾಶಿ. ಅಲ್ಲಿ ಕೆಲವರು ನಾಯಕರು ಸೆರೆಸಿಕ್ಕದೆ ಉಳಿದಿದ್ದರು. ಅವರೊಂದಿಗೆ ಕೂಡಿದರೆ  ಮುಂದಿನ ಕಾರ್ಯಕ್ರಮದ ನಿಶ್ಚಯ ಮಾಡಬಹುದು. ಅಲ್ಲಿ ಸುತ್ತಿ, ಇಲ್ಲಿ ತಿರುಗಿ ಕಾಶಿಗೆ ಹೋದ. ಕಾಶಿ ವಿಶ್ವವಿದ್ಯಾನಿಲಯದಲ್ಲಿ ಕೆಲವು ಮಿತ್ರರು ಭೇಟಿಯಾದರು. ಕೆಲವು ಕಾಲವಾದರೂ ಸದ್ದಿಲ್ಲದೆ ಭೇಟಿಯಾದರು. ಕೆಲವು ಕಾಲವಾದರು ಸದ್ದಿಲ್ಲದೆ ಸುರಕ್ಷಿತವಾಗಿರುವುದೇ ಮೇಲು ಎಂದು ಸೂಚಿಸಿದರು.

ಅವರ ನೆರವಿನಿಂದ ಅಶ್ಪಾಕ್ ಬಿರ್‌ರ್ಗೆ ಹೋದ. ಪಲಾಮು ಜಿಲ್ಲೆಯ ಡಾಲ್ಟನ್ ಗಂಜಿನಲ್ಲಿ ಒಂದು ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ. ಮಥುರಾ ಜಿಲ್ಲೆಯ ಕಾಯಸ್ಥ ಎಂದು ಹೇಳಿಕೊಂಡು ಎಂಟು ಹತ್ತುತಿಂಗಳ ಕಾಲ ಇದ್ದ.

ದ್ರೋಹದ ಬೋನಿನಲ್ಲಿ ಸಿಂಹ:

ಅಶ್ಫಾಕ್ ಕ್ರಾಂತಿಕಾರಿಯಾಗಿದ್ದಂತೆ ಕವಿಯೂ ಆಗಿದ್ದ. ಉರ್ದುವಿನಲ್ಲಿ ಶೇರ್‌ ಎಂಬ ದ್ವೀಪದಿ ರಚನೆ ಮತ್ತು ಹಾಡುವಿಕೆಯ ಕಚೇರಿಗಳನ್ನೇ ಮುಷೈರಾ ಎನ್ನವುದು. ಅಶ್ಫಾಕ ಕೆಲಸ ಮಾಡುತ್ತಿದ್ದ ಸಂಸ್ಥೆಯ ಒಡಯನಿಗೆ ಶೇರ‍್ಗಳ ಮೇಲೆ ಬಹು ಪ್ರೀತಿ. ತನ್ನ ನೌಕರನೊಬ್ಬ ಶೇರ್‌ ರಚನೆಯಲ್ಲಿ ಎತ್ತಿದ ಕೈ ಎಂದು ಅರಿತ ಅವನಿಗೆ ಅಶ್ಫಾಕನ ಮೇಲೆ ಪ್ರೀತಿ ಗೌರವಗಳು ಹುಟ್ಟಿದವು. ಅಲ್ಲಿಯೇ ಏರ್ಪಟ್ಟ ಒಂದು ಮುಷೈರಾದಲ್ಲಿ  ಅಶ್ಪಾಕ್ ತಾನೇ ರಚಿಸಿದ ನಾಲ್ಕಾರು ಶೆರ್‌ ಗಳನ್ನು ಹಾಡಿದ. ಸಭೆ ತಲೆಗೂದಿತು. ವಾಹ್ಹಾ ! ವಾಹ್ಹಾ! ಎಂದು ಹತ್ತು ಮಂದಿ ಮೆಚ್ಚಿ ಹೊಗಳಿದರು. ಸಂತಗೋಷಗೊಂಡ ಯಜಮಾನ ಅವನ ಸಂಬಳ ಹೆಚ್ಚಿಸಿದ.

ಈ ರೀತಿಯ ಪ್ರೋತ್ಸಾಹಕರವಾದ ವಾತಾವರಣದಲ್ಲಿ ಅಶ್ಪಾಕ್ ತನ್ನಹಿಂದಿ ಜ್ಞಾನವನ್ನು ಬೆಳೆಸಿಕೊಂಡ. ಬಂಗಾಳಿ ಭಾಷೆಯನ್ನು ಕಲಿತ. ಉರ್ದು, ಹಿಂದಿ ಕವಿತೆಗಳೊಂದಿಗೆ ಬಂಗಾಳಿ ಗೀತೆಗಳನ್ನು ಹಾಡತೊಡಗಿದ.

ಪೋಲಿಸರಿಂದ ತಪ್ಪಿಸಿಕೊಂಡು ಇರುವುದೇ ಉದ್ದೇಶ ವೆಂದಾದರೆ ಡಾಲ್ಟನ್ ಗಂಜಿನಲ್ಲಿ ಇಡೀ ಜೀವಮಾನ ಕಳೆಯಬಹುದಿತ್ತು. ಆದರೆ ಈ ದೀರ್ಘ ಕಾಲದ ಬಲವಂತದ ವಿಶ್ರಾಂತಿ ಸಾಕಾಗಿ ಹೋಯಿತು.  ಯಾವುದಾದರೂ ವಿದೆಶಕ್ಕೆ ಹೋದರೆ ಎಂಬ ಇಚ್ಛೆ ತಲೆದೊರಿತು.  ಇಂಜಿನಿಯರಿಂಗ್ ಕಲಿತರೆ ತನಗೂ ಉಪಯೋಗ ಕ್ರಾಂತಿಗೂ ಉಪಯೋಗ ಎನ್ನಿಸಿತು.

ತನ್ನ ವಿದೇಶ ವ್ಯಾಸಂಗಕ್ಕೆ ತಕ್ಕ ಅನುಕೂಲತೆಗಳ ಕುರಿತು ವಿಚಾರಿಸಿ , ಏರ್ಪಾಡುಗಳನ್ನು ಮಾಡೋಣವೆಂದು ದೆಹಲಿಗೆ ಹೋದ. ಅಲ್ಲಿ ಅವನು ಒಂದೆಡೆ ತಂಗಿ, ಶಹಾಜಾನ್ ಪುರದವನೇಆಗಿದ್ದ ಒಬ್ಬ ಪಠಾಣ ಮಿತ್ರನನ್ನು ಭೇಟಿಯದ. ಅವರಿಬ್ಬರೂ ಶಾಲೆಯಲ್ಲಿ ಒಟ್ಟಿಗೆ ಕಲಿತವರು. ಬಹು ಕಾಲದ ನಂತರ ಆಶ್ಪಾಕನನ್ನು ಭೇಟಿಯಾದುದಕ್ಕೆ ಅವನು ಬಹಳ ಸಂತೋಷಪಟ್ಟ. ತನ್ನ ಕೋಣೆಗೆ ಕರದೊಯ್ದು ಊಟ ಹಾಕಿಸಿದ. ರಾತ್ರಿ ಹನ್ನೊಂದರವರೆಗೆ ಮಿತ್ರರು ಮಾತನಾಡುತ್ತ ಇದ್ದರು. ಬಳಿಕ ಅಶ್ಪಾಕ್ ತನ್ನ ಕೊಣೆಗೆ ಹಿಂತಿರುಗಿದ.

ಮರುದಿನ ಬೆಳಗಿನ ಜಾವ ಅಶ್ಫಾಕ್ ಸೊಂಪು ನಿದ್ರೆಯಲ್ಲಿದ್ದ. ಡಬಡಬನೆ ಬಾಗಿಲು ಬಡಿಯಿತು. ಕಣ್ಣು ಹೊಸಕಿಕೊಂಡು ಬಾಗಿಲು ತೆರೆದ ಅಶ್ಪಾಕ್ ಪೋಳಿಸರ ಕೈಗೆ ಸಿಕ್ಕಿಬಿದ್ದ. ಸ್ನೇಹ, ಧರ್ಮ, ಒಂದೇ ಊರಿನವರೆಂಬ ಅಭಿಮಾನ- ಯಾವುದೂ ಹಣದ ಆಸೆಯ ಮುಂದೆ ಅಡ್ಡನಿಲ್ಲಲಿಲ್ಲ. ಅನ್ನವಿಕ್ಕಿ, ಸವಿ ಮಾತನ್ನಾಡಿ ಮಿತ್ರ ದ್ರೋಹಬಗೆದಿದ್ದ ಅವನ ಪಠಾಣ ಮಿತ್ರ.

ಬಂಧಿತನದ ಅಶ್ಫಾಕನ ಮನಸ್ಸನ್ನು ಪರಿವರ್ತಿಸಲು ಗುಪ್ತಚಾರ ಶಾಖೆ ವಿಶೇಷ ಪ್ರಯತ್ನಗಳನ್ನು ನಡೆಸಿತು.  ಮೊದಲನೆಯ ಮಹಾಯುದ್ಧದಲ್ಲಿ ಅರೇಬಿಯಾದಲ್ಲಿ ಬ್ರಿಟಿಷ ಸರಕಾರದ ಏಜೆಂಟನಾಗಿ ಮಹಾ ಸೇವೆ ಸಲ್ಲಿಸಿದ್ದ ತಸದ್ರುಕ್ ಖಾನ್ ಎಂಬಾತನಿದ್ದ. ಆತ  ಆ ಕಾಲಕ್ಕೆ ಪೋಲಿಸ ಸುಪರಿಂಟೆಂಡೆಂಟ್ ಪದವಿಗೆ ಏರಿದ್ದ. ಭಾರತೀಯರಲ್ಲಿ ಒಬ್ಬ. ಅತ ಸೆರೆಮನೆಯಲ್ಲಿ ಅಶ್ಪಾಕನನ್ನು ಭೇಟಿಯಾದ. ಸರಕಾರದ ಪರವಾಗಿ, ತನ್ನ ಹಿಂದಿನ ಸಂಗಾತಿಗಳ ವಿರುದ್ಧ ಸಾಕ್ಷಿ ಹೇಳುವಂತೆ ಅವನನ್ನು ಒಲಿಸುವುದೇ ಆ ಅಧಿಕಾರಿಯ ಉದ್ದೇಶ.

ತಸದ್ರುಕ್ ಹಿತೈಷಿಯಂತೆ, ಹೇಳುತ್ತಿದ್ದ, “ಹಿಂದುಗಳು ತಮ್ಮ ರಾಜ್ಯವನ್ನು ಸ್ಥಾಪಿಸಿಕೊಳ್ಳಳು ಹೋರಾಡುತ್ತಾ ಇದ್ದಾರೆ. ಈ ತಂಟೆಯಲ್ಲಿ ನಾವೇಕೆ ಸಿಕ್ಕಿ ಬೀಳಬೇಕು. ಹೇಳು ಲಭ ಲಾಭ ವಿವೇಚನೆಯಿಲ್ಲದೆ ಪ್ರಾಣವನ್ನೂ ಪಣ ಒಡ್ಡಿ ಕೆಲಸಗಳಿಗೆ ಇಳಿಯಬೇಕಾದರೆ ಅದಕ್ಕೆ ಸಾಕಷ್ಟು ಕಾರಣಬೇಡವೇ? ನಮ್ಮ ಮುಸ್ಲಿಂ ಜನರಿಗೆ ಯಾವ ಲಾಭವಿದೆಯೆಂದು ಈ ಕೆಲಸಕ್ಕೆ ಕೈ ಹಚ್ಚಿದೆ? ಈಗಲಾದರೂ ಸರಿಯಾದ ದಾರಿಯನ್ನು ಮನಗಂಡರೆ ನಿನ್ನನ್ನು ಪಾರು ಮಾಡಲು ಪ್ರಯತ್ನಿಸಬಹುದು”.

ಹೀಗೆ ಕಂಡಾಗಲೆಲ್ಲಾ ತಾನು ತುಳಿದ ದಾರಿ ತಪ್ಪೋ ಎಂಬ ಸಂಶಯ ಬರುವಂತೆ ಮಾತನಾಡತೊಡಗಿದ ತಸದ್ರುಕ್ ಖಾನ್, ಆಶ್ಪಾಕನೂ ಕೇಳಿ ಕೇಳಿ ಬೇಸತ್ತ. ಕೊನೆಗೆ ಹೇಳಿದ. “ಖಾನ್ ಸಾಹೇಬರೇ, ಹೇಗಿದ್ದರೂ ಹಿಂದೂ ರಾಜ್ಯವು ಬ್ರಿಟಿಷ್ ರಾಜ್ಯಕ್ಕಿಂತ ಮೇಲಾಗಿರುತ್ತದೆ.

ಬ್ರಿಟಿಷರ ನ್ಯಾಯಾಲಯ :

ತಮ್ಮ ಈ ಪ್ರಯತ್ನವು ವಿಫಲವಾದ ನಂತರ ಪೋಲಿಸರು ಅವನ ಮೇಲೆ ಕೋರ್ಟಿನಲ್ಲಿ ಮೊಕದ್ದಮ್ಮೆ ಹೂಡಿದರು.   ಈ ವೇಳೆಗೆ ಕಾಕೋರಿಯ ಮುಖ್ಯ ಮೊಕದ್ದಮ್ಮೆ ಸಾಕಷ್ಟು ಮುಂದುವರೆದಿದ್ದುದರಿಂದ ಪೂರಕ ಮೊಕದ್ದಮ್ಮೆ ದಾಖಲಾಯಿತು. ಮುಖ್ಯ ಮೊಕದ್ದಮ್ಮೆಯ ಅಪಾದಿತರನ್ನು ಪಾರು ಮಾಡಲು ಜವಾಹರಲಾಲರ ತಂದೆ ಪಂಡಿತ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಏರ್ಪಟ್ಟಿತ್ತು. ಆ ಸಮಿತಿಯಲ್ಲಿ ಜವಾಹರಲಾಲ್ ನೆಹರು, ಶ್ರೀ ಪ್ರಕಾಶ, ಆಚಾರ್ಯ ನರೇಂದ್ರದೇವ, ಗೋವಿಂದವಲ್ಲಭ ಪಂತ್, ಚಂದ್ರಬಾನು ಗುಪ್ತರಮತಹ ಪ್ರಮುಖ ನಾಯಕರಿದ್ದರು.

ಅಶ್ಫಾಕನ ಮೇಲಿನ ಮೊಕದ್ದಮ್ಮೆ ಕೆಲವು ಕಾಲ ಮುಂದುವರೆದ ನಂತರ ಶಚೀಂದ್ರ ಬಕ್ಷಿ ಬಾಗಲ್ಪುರದಲ್ಲಿ ಬಂಧಿತನಾದ. ಅವನ ಮೊಕದ್ದಮೆಯನ್ನು ಕೆಳ ಕೋರ್ಟಿನಲ್ಲಿ ಪ್ರತ್ಯೇಕವಾಗಿ ನಡೆಸಿ, ಸ್ಟೇಷನ್ನಿಗೆ ಬಂದಾಗ ಇಬ್ಬರ ಮೇಲೆಯೂ ಒಂದಾಗಿ ನಡೆಸಿದರು.

ಅದುವರೆಗೆ ಪ್ರತ್ಯೇಕವಾಗಿ ಬಂಧಿತರಾಗಿದ್ದ ಅವರಿಬ್ಬರೂ ಮೊದಲಿಗೆ ತಮ್ಮ ತಮ್ಮಲ್ಲಿ ಪರಿಚಯವೇ ಇಲ್ಲವೇನೋ ಎಂಬಂತೆ ವರ್ತಿಸಲು ಪ್ರಯತ್ನಿಸಿದರು. ಅದರೆ ಪರಸ್ಪರ ಮಿತ್ರರಾಗಿ, ಸಹ ಕ್ರಾಂತಿಕಾರ, ಸಹ ಅಪಾದಿತರಾಗಿ ಹಾಗೆ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇಬ್ಬರು ಉದ್ವೇಗದಿಂದ ಅಪ್ಪಿಕೊಂಡಾಗ ಜೈಲಿನ ಅಧಿಕಾರಿಗಳು, “ಈ ರಾಮಭರತಪುರ ಪುನರ್ದಶನಕ್ಕೆ ನಾವು ಕಾದಿದ್ದೇವು” ಎಂದು ಉದ್ಗರಿಸಿದರು. ಈ ಮಿತ್ರರ ಪುನರ್‌ ಮಿಲನ ಹಾಗಿತ್ತು.

ಜೈಲು ಜೀವನ ನಡೆಸುತ್ತಾ, ಅಶ್ಫಾಕನಲ್ಲಿ ಧರ್ಮ ಶ್ರದ್ದೇ ಹೆಚ್ಚಿತು. ಆತ ದಾಡಿ ಬೆಳೆಸಿದ: ನಿತ್ಯವೂ ಕ್ರಮವಾಗಿ ನಮಾಜು ಹೇಳತೊಡಗಿದ. ರಂಜಾನ್ ತಿಂಗಳು ಬಂದಾಗ ನಿಷ್ಠೆಯಿಂದ ಉಪವಾಸವ್ರತವನ್ನು ಮಾಡಿದ.

ಆಗಾಗ್ಯೆ ಅವನಿಗೂ, ಶಚೀಂದ್ರ ಬಕ್ಷಿಗೂ ಧರ್ಮ, ದೇವರುಗಳ ವಿಷಯದಲ್ಲಿಚರ್ಚೆ ಹತ್ತುತ್ತಿತ್ತು.  ಬಕ್ಷ ನಾಸ್ತಿಕನಾಗಿದ್ದ. ಅವನಿಗೆ ದೇವರಲ್ಲಿ ನಂಬಿಕೆಯಿರಲಿಲ್ಲ. ಆಗ ಆಶ್ಪಾಕನು, ನಾನು ಯಾವುದೊ ಒಂದು ಶಕ್ತಿಯನ್ನು ಸರ್ವೊಚ್ಛವೆಂದು ಭಾವಿಸುತ್ತೇನೆ. ನಮ್ಮ ಮೇಲೆ ಈ ಪ್ರಪಂಚವನ್ನು ಮೀರಿ ಆಸ್ತಿತ್ವದಲ್ಲಿದೆ ಅದು ಎಂದು ನನ್ನ ವಿಶ್ವಾಸ. ನೀನು ಅದನ್ನ ಒಪ್ಪುವುದಿಲ್ಲ. ಇದು ವ್ಯಕ್ತಿಗತವಾದ ವಿಶ್ವಾಸದ ಮಾತು ಎನ್ನುತ್ತಿದ್ದ. ಧರ್ಮವು ಮನುಷ್ಯನನ್ನೂ, ದೇವರನ್ನೂ ಏಕ ಸೂತ್ರದಲ್ಲಿ ಪೋಣಿಸುವ ಅತ್ಯುಚ್ಛ ಮನೋಭಾವ; ಅದು ಬೀದಿಯಲ್ಲಿ ಹೋರಾಅಡುವ ವಸ್ತುವಲ್ಲ ಎಂಬುವುದು ಅವನ ಖಚಿತ ನಂಬಿಕೆಯಾಗಿತ್ತು.

ಕಾಕೋರಿ ರೈಲು ಡಕಾಯಿತಯ ಮುಖ್ಯ ಮೊಕದ್ದಮೆಯೂ ಪೂರಕ ಮೊಕದ್ದಮ್ಮೆಯೂ ಮುಗಿದವು. ಆಳರಸರ ನ್ಯಾಯಾಲಯ ತೀರ್ಪು ಕೊಟ್ಟಿತು.  ರಾಮಪ್ರಸಾದ ಬಿಸ್ಮಿಲ್, ಅಶ್ಪಾಕ್ ಉಲ್ಲಾ ಖಾನ್, ರಾಜೇಂದ್ರ ಲಾಹಿರಿ, ರೋಶನ್ ಸಿಂಹ, ಈ ನಾಲ್ವರಿಗೆ ಮರಣದಂಡನೆಯಾಯಿತು. ಹಲವರಿಗೆ ಜೀವಾವಧಿ ಸಜೆ ಆಯಿತು.

ಮರಣದಂಡನೆಯ ವಿರುದ್ಧವಾಗಿ ದೇಶದಾದ್ಯಂತ ಚಳುವಳಿ ಎದ್ದಿತು. ಕೇಂದ್ರ ಶಾಸನಸಭೆಯ ಸದಸ್ಯರು ವೈಸ್ ರಾಯರಲ್ಲಿ ಮರಣ ದಂಡನೆಯನ್ನು ಜೀವಾವಧಿ ಶಿಕ್ಷಗೆ ಇಳಿಸುವಂತೆ ಮನವಿ ಮಡಿಕೊಂಡರು. ಆಗಿನ ಕಾಲದಲ್ಲಿ ಭಾರತೀಯರು ಮನವಿ ಮಾಡಿಕೊಳ್ಳಬಹುದಾದ ಅತ್ಯುಚ್ಛ ನ್ಯಾಯಾಲಯ “ಪ್ರೀವಿ ಕೌನ್ಸಿಲ್” ಎಂಬುವದು. ಅಲ್ಲಿಗೂ ಮನವಿ ಹೋಯಿತು.

ಆದರೆ ಬ್ರಿಟಿಷ್ ಸಮ್ರಾಜ್ಯಶಾಹಿ ಕ್ರಾಂತಿವೀರರ ರಕ್ತಕ್ಕಾಗಿ ತವಕಿಸುತ್ತಿತ್ತು.

“ಸಾವು ಎಂದಾದರೊಂದುದಿನ ಬಂದೇ ಬರುತ್ತದೆ; ಅದಕ್ಕೆ ಹೆದರಬೇಕೇಕೆ?

“ಅಶ್ಪಾಕನೇ ತನ್ನ ಒಂದುಕವನದಲ್ಲಿ ಈ ಮಾತನ್ನು ಹೇಳಿದ್ದ. ಎಲ್ಲಾ ಕ್ರಾಂತಿವೀರರ ದೃಢ ವಿಶ್ವಾಸವೂ ಇದೆ. ನಾಲ್ವರು ನಗುನಗುತ್ತಾ, ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮರಳಿ ಜನ್ಮ ನೀಡೆಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಪ್ರಾಣ ತೆತ್ತರು:ಹುತಾತ್ಮರಾದರು.

ಕ್ರಾಂತಿಚೇತನದ ಕಾವ್ಯ ಜ್ಯೋತಿ :

ಆಶ್ಪಾಕನೂ, ಅವನ ಮಿತ್ರ ಹಾಗೂ ನಾಯಕ ರಾಮ ಪ್ರಸಾದ ಬಿಸ್ಮಿಲ್ಲನೂ ಕ್ರಾಂತಿಕಾರಿಗಳಾಗಿದ್ದಂತೆ ಕವಿಗಳೂ ಆಗಿದ್ದರು. ಅಶ್ಪಾಕನೂ ಮುಖ್ಯವಾಗಿ ಉರ್ದುವಿನಲ್ಲಿ ಕವನಗಳನ್ನು ಬರೆದ: ಹಿಂದಿ ಭಾಷೆಯಲ್ಲಿಯೂ ಕೆಲವು ಕವನಗಳನ್ನು ಬರೆದಿದ್ದಾನೆ. ವಾರಸಿ, ಹಜರತ್ ಎಂಬುವುದು ಅತನ ಕಾವ್ಯನಾಮಗಳು.

ಒಂದು ಕವಿತೆಯಲ್ಲಿ ಅವನು ನೋವಿನಿಂದ ಉದ್ಗರಿಸುತ್ತಾನೆ, “ಎಲ್ಲಾ , ನಮ್ಮನ್ನು ನಾವೇ ಹತ್ತಿಕ್ಕಿ ಕೊಳ್ಳುತ್ತಿದ್ದೇವೆ! ನಮ್ಮನ್ನು ತುಳಿಯುತ್ತಿರುವವರು ಇಂಗ್ಲೀಷರಲ್ಲ,ಜರ್ಮನ್ನರಲ್ಲ, ರಷ್ಯನರಲ್ಲ, ತುರ್ಕರಲ್ಲ, ಭಾರತೀಯರೇ ನಮ್ಮನ್ನು ಹತ್ತಿಕ್ಕುತ್ತಿರುವರು!”

ಮತ್ತೊಂದು ಕವಿತೆ, “ಹೇ ಮಾತೃಭೂಮಿಯೇ?, ನಿನ್ನ ಸೇವೆಗೆಂದೇ ನಾನಿದ್ದೇನೆ. ನೇಣುಗಂಭವೇ ದೊರಯಲಿ, ಆಜನ್ಮ ಸೆರೆಯೇ ದೊರೆಯಲಿ, ಕೈಗೆ ಹಾಕಿದ ಸಂಕೊಲೆಗಳಿಂದಲೇ ತಾಳ ಬಾಜಿಸುತ್ತಾ ನಿನ್ನ ಭಜನೆ ಮಾಢುತ್ತೇನೆ ಎನ್ನುತ್ತದೆ.

ಒಂದು ನೀಳ್ಗವಿತೆಯಲ್ಲಿ ಅಶ್ಪಾಕ್  ಹೇಳುತ್ತಾನೆ: ಜೀವನ ಮರಣಗಳೆಂಬುವುದು ನಿಜವಲ್ಲ ಎಂದು ಯುದ್ಧದ ನಡುವೆ ಅರ್ಜುನನಿಗೆ ಕೃಷ್ಣ ಹೇಳಲಿಲ್ಲವೇ? ಅಯ್ಯೋ, ಆ ಅರಿವು ಎಲ್ಲಿ ಹೋಯಿತು? ಒಮ್ಮೆ ಹೇಗೊ ಸಾವು ಬರಲಿದೆ. ಅದಕ್ಕೇಕೆ ಹೆದರೋಣ? ದೇಶದ ಸಾವು ಉಜ್ವಲವಾಗಿ ,ಸ್ವತಂತ್ರವಾಗಿರಲಿ. ನಮ್ಮದ್ದೇನು ಮಹಾ! ನಾವು ಇದ್ದರೇನು, ಇಲ್ಲದಿದ್ದರೇನು?”

ಶುದ್ಧ ದೇಶ ಪ್ರೇಮ ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಜನರಲ್ಲಿ ಇದ್ದ ಅನಾವಸ್ಥೆಯ ಬಗ್ಗೆ ತೊಳಲಿಕೆ ಅವನ ಕವನಗಳಲ್ಲಿ ಎದ್ದು  ಮೂಡುತ್‌ಉತದೆ.

ನೇಣುಗಂಬಕ್ಕೆ ನಡೆಯುವ ಮುನ್ನ ಈ ಕವಿ ಕ್ರಾಂತಿಕಾರ, “ತಾಳಲಾಗದ ಈ ಅಪಾರ ದಬ್ಬಾಳಿಕೆಯಿಂದ ನೊಂದುಬೇಸತ್ತು, ನಾವು ಫೈಜಾಬಾದಿನ ಸೆರೆಮನೆಯಿಂದ ಪರಲೋಕದತ್ತ ನಡೆದಿದ್ದೇವೆ: ಎಂದು ಬಿಸು ಸುಯ್ದಿದ್ದಾನೆ.

ಮರಣದ ಕಪ್ಪು ನೆರಳಿನಲ್ಲಿ :

ಪಂಡಿತ ರಾಮಪ್ರಸಾದ್ ಬಿಸ್ಮಿಲ್ಲ ತನ್ನ ಮರಣಕ್ಕೆ ಕೆಲವು ದಿನಗಳ ಮೊದಲು ಸೆರೆಮನೆಯಲ್ಲಿ ತನ್ನ ಆತ್ಮ ಕಥೆಯನ್ನು ಬರೆದ. ಅಧಿಕಾರಿಗಳೀಗೆ ಈ ವಿಷಯ ತಿಳಿದಿದ್ದರೆ ಅದು ಹೊರ ಜಗತ್ತಿಗೆ ಸಿಕ್ಕುತ್ತಲೇ ಇರಲಿಲ್ಲ. ಆದರೆ ರಾಮಪ್ರಸಾದ ರಹಸ್ಯವಾಗಿ ಅದನ್ನು ಹೊರ ಸಾಗಿಸಿದ. ಅದರಲ್ಲಿ ತನ್ನ ಹಾಗೂ ಅಶ್ಪಾಕನ ಮಿತ್ರತ್ವದ ಮಾರ್ಮಿಕ ನಿರೂಪಣೆ ನೀಡಿದ್ದಾನೆ-

“ಸರಕಾರದ ಘೋಷಣೆ ಪ್ರಕಟವಾದ ಮೇಲೆ, ನಾನು ಷಾಹಜಾನ್ ಪುರಕ್ಕೆ ಬಂದಾಗ, ಶಾಲೆಯಲ್ಲಿ ನಿನ್ನೊಂದಿಗೆ ಭೇಟಿಯದುದು ನನಗೆ ಸ್ಪಷ್ಟವಾಗಿ ನೆನಪಿದೆ. ನನ್ನನ್ನು ಕಾಣಲು ನೀನು ಹೃದಯಪೂರ್ವಕವಾಗಿ ಇಚ್ಛಿಸುತ್ತಿದ್ದೆ.  ನನ್ನೊಂದಿಗೆ ಮೇನ್ಪುರಿ ಪಿತೂರಿಯ ಬಗ್ಗೆ ಮಾತನಾಡಲು ನೀನು ಬಯಸುತ್ತಿದ್ದೆ. ನಾನು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ  ಮುಸ್ಲಿಂ ವಿದ್ಯಾರ್ಥಿ ಈ ರೀತಿಯ ಮಾತುಗಳನ್ನು ಏಕೆ ಆಡುತ್ತಿರುವನೋ ಎಂಬ ಸಂಶಯ ದಿಂದ ಉಪೇಕ್ಷಯ ದೃಷಟಿಯಿಂದ ಉತ್ತರ ನೀಡಿದೆ. ನೀನು ಆಗ ಬಹಳವಾಗಿ ನೊಂದುಕೊಂಡೆ. ನೀನು ಸೋಗಿನ ವ್ಯಕ್ತಿಯಲ್ಲ: ಪ್ರಮಾಣಿಕ, ಶ್ರದ್ಧಾವಂತ ಎಂಬುವುದನ್ನು ಇಷ್ಟಮಿತ್ರ ಮೂಲಕ ನನಗೆ ಮನವರಿಕೆ ಮಾಡಲೆತ್ನಿಸಿದೆ. ನಿನ್ನ ಹೃದಯದಲ್ಲಿ ದೇಶೋನ್ನತಿಗಾಗಿ ಶ್ರಮಿಸಬೇಕೆಂಬ ದೃಢ ನಿಶ್ಚಯವಿತ್ತು. ಕೊನೆಗೆ ನೀನು ವಿಜಯಿಯಾದೆ. ನಿನ್ನ ಪ್ರಯತ್ನಗಳಿಂದಾಗಿ ನನ್ನ ಮನದಲ್ಲಿ ಒಂದು ಸ್ಥಾನ ಗಳಿಸಿಕೊಂಡೆ”.

ತನ್ನ ಅನುಮಾನಗಳ ಗೋಡೆ ಉರುಳಿದ  ಮೇಲೆ ಅಶ್ಫಾಕನೊಡನೆ ತನ್ನ ಸ್ನೇಹ ಹೇಗೆ ಬೆಳೆಯಿತು ಎಂಬುವುದನ್ನು ರಾಮಪ್ರಸಾದ್ ತುಂಬಿದ ಹೃದಯದಿಂದ ವರ್ಣಿಸುತ್ತಾನೆ. ” ಕೆಲವು ದಿನಗಳಲ್ಲಿ ನೀನು ನನ್ನ ತಮ್ಮನಂತಾದೆ. ಆದರೆ ತಮ್ಮನಾದುದರಿಂದ ನಿನಗೆ ತೃಪ್ತಿಯಾಗಲಿಲ್ಲ. ನೀನು ಸಮನಾತೆಯ ಅಧಿಕಾರವನ್ನು ಬಯಸುತ್ತಿದ್ದು ನನ್ನ ಮಿತ್ರ ಶ್ರೇಣಿಯಲ್ಲಿ ಒಬ್ಬನಾಗಲು ಇಚ್ಛಿಸುತ್ತಿದ್ದೆ. ಹಾಗೆಯೇ ಆಯಿತು. ನೀನು ನನ್ನ ಸನ್ಮಿತ್ರನಾದೆ. ಎಲ್ಲರಿಗೂ ಆಶ್ಚರ್ಯ: ನಾನು ನಿಷ್ಠಾವಂತ ಆರ್ಯ ಸಮಾಜಿ, ನೀನೋ ಮುಸಲ್ಮಾನ. ನಮ್ಮಿಬ್ಬರಿಗೆ ಸ್ನೇಹ ಹೇಗೆ ಎಂದು ನಾನು ಮುಸಲ್ಮಾನರನ್ನು ಹಿಂದೂ ಧರ್ಮಕ್ಕೆ ಕರೆಯುತ್ತಿದ್ದೆ. ಆರ್ಯ ಸಮಾಜದ ಮಂದಿರದಲ್ಲಿ ವಾಸಿಸುತ್ತಿದ್ದೆ. ನೀನು ಎಳ್ಳಷ್ಟು ಚಿಂತೆ ಮಾಡಲಿಲ್ಲ. ನನ್ನ ಕೆಲವು ಮಿತ್ರರು ನೀನು ಮುಸಲ್ಮಾನನೆಂಬ ಕಾರಣದಿಂದ ಸಂಶಯ ದೃಷ್ಟಿಯಿಂದಲೇ ನೋಡುತ್ತಿದ್ದರೂ ನೀನು ನಿನ್ನ ದಾರಿಯಲ್ಲಿ ದೃಢತೆಯಿಂದ ನಡೆದೆ. ನೀನೂ ನನ್ನೊಂದಿಗೆ ಆರ್ಯ ಸಮಾಜದ ಮಂದಿರಕ್ಕೆ ಬಂದು ಹೋಗತೊಡಗಿದೆ. ಹಿಂದೂ , ಮುಸ್ಲಿಂ ಗಲಭೆಯಾದಾಗ ನಿನ್ನನ್ನು ನಿನ್ನ ನೆರೆಹೊರೆಯವರು ಬಾಯಿಗೆ ಬಂದಂತೆ ಬೈದು, ಕಾಫಿರನೆಂದು ಕರೆಯುತ್ತಿದ್ದರು. ಆದರೆ ನೀನು ಅವರೊಂದಿಗೆ ಸೇರಿಕೊಳ್ಳಲಿಲ್ಲ. ಸದಾ ನೀನು ಹಿಂದೂ ಮುಸ್ಲಿಂ ಒಗ್ಗಟ್ಟಿನ ಪಕ್ಷಪಾತಿಯಾಗಿದ್ದೆ. ನೀನು ಒಬ್ಬ ನಿಜವಾದ ಮುಸ್ಲಿಮನಾಗಿದ್ದೆ ಹಾಗೂ ನಿಷ್ಠೆಯ ದೇಶಭಕ್ತನಾಗಿದ್ದೆ. ನಿನಗೆ ಚಿಂತೆಯೆಂಬುವುದು ಇದ್ದಿದ್ದರೆ ಅದು ದೇವರು ಮುಸ್ಲಿಮರಿಗೆ, ಹಿಂದೂಗಳೊಂದಿಗೆ ಸೇರಿಕೊಂಡು ದೇಶದ ಒಳಿತಿಗಾಗಿ ಶ್ರಮಿಸುವ ಬುದ್ಧಿ ಕೊಡಲಿ ಎಂಬುವದೊಂದೆ. ನಾನು ಹಿಂದಿಯಲ್ಲಿ ಲೇಖನವನ್ನೋ, ಪುಸ್ತಕವನ್ನೋ ಬರೆದಾಗಲೆಲ್ಲಾ, ಅವುಗಳನ್ನು ಮುಸ್ಲಿಮರೂ ಓದಲು ಅವಕಾಶವಾಗುವಂತೆ ಉರ್ದುವಿನಲ್ಲಿಯೂ ಏಕೆ ಬರೆಯುವುದಿಲ್ಲ ಎಂದು  ಕೇಳುತ್ತಿದ್ದೆ. ದೇಶಭಕ್ತಿಯ ಭಾವದ ಪೂರ್ಣ ಅರ್ಥ ಪಡೆದುಕೊಳ್ಳಲು ಹಿಂದಿಯನ್ನುಚೆನ್ನಾಗಿ ಅಧ್ಯಯನ ಮಾಢಿದೆ. ಮನೆಯಲ್ಲಿ ಮಾತನಾಡುವಾಗ, ಹಿಂದೀ ಶಬ್ದಗಳನ್ನು ಬಳಸುತ್ತಿದ್ದೆ, ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು.

ಅಶ್ಫಾಕ್ ರಾಮಪ್ರಸಾದನ ಸ್ನೇಹ ಬಯಸಿದಾಗ ರಾಮ ಪ್ರಸಾದನಿಗೆ ಅವನ ವಿಷಯ ಸಂದೇಹಗಳು ಉಂಟಾದವು. ಅವನು ರಾಮಪ್ರಸಾದನ ಸ್ನೇಹವನ್ನು ಪಡೆದ ಮೇಲೆ ಹಲವರ ಮನಸ್ಸಿನಲ್ಲಿ ಅನಗತ್ಯ ಸಂದೇಹಗಳು ಮೊಳಕೆ ಇಟ್ಟವು. ರಾಮಪ್ರಸಾದ್ ಹೇಳುತ್ತಾನೆ: “ನಿನ್ನ ಈ ಪ್ರವೃತ್ತಿಯನ್ನು ಕಂಡುಎಲ್ಲರಿಗೂ ನೀನು ಇಸ್ಲಾಂ ಮತವನ್ನು ತ್ಯಾಗ ಮಾಡಿಬಿಡುವೆ ಎಂಬ ಸಂದೇಹ ಹುಟ್ಟುತ್ತಿತ್ತು. ನಿನ್ನ ಹೃದಯದಲ್ಲಿ ಯಾರ ಬಗೆಯೂ ಅಶುದ್ಧಿಯೂ ಇಲ್ಲದಿದ್ದಾಗ, ನಿನ್ನನ್ನು ಯಾವುದರಿಂದ, ಏತಕ್ಕಾಗಿ ಶುದ್ಧಿಗೊಳಿಸಬೇಕು? ನಿನ್ನಲ್ಲಿ ಆದ ಈ ಪ್ರಗತಿಯನ್ನು ಕಂಡು ನನ್ನ ಹೃದಯ ಮಾರುಹೋಯಿತು.  ಕೆಲವರು ಸ್ನೇಹಿತರೇನೋ ಮುಸ್ಲಿಮರಲ್ಲಿ ವಿಶ್ವಾಸವಿಟ್ಟು ಮೋಸಹೋಗಬೇಡ ಎಂದು ಗೇಲಿ ಮಾಡುತ್ತಿದ್ದರು”.

“ನಿನಗೆ ಜಯ ದೊರೆಯಿತು, ನನ್ನ- ನಿನ್ನಲ್ಲಿ ಯಾವ ಭೇದವೂ ಉಳಿಯಲಿಲ್ಲ. ಬಹುತೇಕ ನಾನೂ ನೀನು ಒಂದೇ ಪಾತ್ರೆಯಿಂದ ಉಂಡೇವು. ನನ್ನ ಹೃದಯದಲ್ಲಿ ಹಿಂದೂ-ಮುಸ್ಲಿಂರಲ್ಲಿ ಏನಾದರೂ ಭೇದವಿದೆಯೆಂಬ ಭಾವವೂ ಬಂದಿತು. ನೀನು ನನ್ನ ಮೇಲೆ ಅಚಲ ವಿಶ್ವಾಸವನ್ನು, ಅಗಾಧ ಪ್ರೀತಿಯನ್ನೂ ಇಟ್ಟಿದ್ದೆ. ನೀನು ನನ್ನ ಪೂರ್ತಾ ಹೆಸರನ್ನು ಹಿಡಿದು ಕರೆಯುತಿತರಲಿಲ್ಲ. ಸದಾ ನನ್ನನ್ನು ರಾಮನೆಂದೇ ಕರೆಯುತ್ತಿದ್ದೆ. ಒಮ್ಮೆ ಮನಸ್ಸು ಯಾವುದೋ ಕಳವಳದಲ್ಲಿದ್ದು, ನೀನು ಪ್ರಜ್ಞೆ ತಪ್ಪಿದೆ.  ನೀನು ಆಗಾಗ್ಗೆ “ರಾಮ, ಹಾಯ್, ರಾಮ್, ಎಂದು ಎನ್ನುತ್ತಿದ್ದೆ. ಸುತ್ತಲಿದ್ದ ಬಂಧುಗಳಿಗೆ ಮುಸ್ಲಿಮನೊಬ್ಬ “ರಾಮ ರಾಮ್”  ಹೇಳುತ್ತಿದ್ದಾನೆಎಂದು ಆಶ್ಚರ್ಯ. ಅವರುಗಳು “ಅಲ್ಲಾ, ಅಲ್ಲಾ” ಎನ್ನು ಎಂದರೂ ನೀನು “ರಾಮ ರಾಮ್”ದಲ್ಲಿಯೇ ಇದ್ದೆ. ಆಗ ಆಕಸ್ಮಿಕವಾಗಿ “ರಾಮದ ” ಅರ್ಥ ತಿಳಿದಿದ್ದ ಮಿತ್ರನೊಬ್ಬನು ಬಂದುದರಿಂದ ನನಗೆ ಕರೆ ಬಂದಿತು. ನನ್ನನ್ನು ಕಂಡೊಡನೆ ನೀನು ಶಾಂತನಾದೆ”.

ಈ ಸ್ನೇಹದ ಹಾದಿಯಲ್ಲಿ ಈ ಎರಡೂ ಜೀವಗಳು ಎತ್ತ ನಡೆದವು? ರಾಮಪ್ರಸಾದನೇ ವಿವರಿಸುತ್ತಾನೆ: “ಕೊನೆಗೂ ಈ ಪ್ರೇಮ, ಪ್ರೀತಿ, ಮತ್ತು ಸ್ನೇಹಗಳ ಪರಿಣಾಮವೇನಾಯಿತು? ನನ್ನ ಭಾವನೆಗಳಿಂದ ನಿನ್ನ ಭಾವನೆಗಳು ರೂಪುಗೊಂಡವು. ನೀನು ಒಬ್ಬ ಕಟ್ಟಾ ಕ್ರಾಂತಿಕಾರಿಯಾದೆ. ಆಗ ನಿನಗೆ ಇದ್ದದ್ದು ಒಂದೇ ಗುರಿ: ಹೇಗಾದರೂ ಮಾಡಿ,. ಮುಸ್ಲಿಮ್ ಯುವಕರಲ್ಲಿ ಕ್ರಾಂತಿಕಾರಿ ಭಾವನೆಗಳ ಪ್ರಚಾರವಾಗುವಂತೆ ಮಾಡುವುದು. ಇದಕ್ಕಾಗಿ ಶತ ಪ್ರಯತ್ನ ಮಾಡಿದೆ. ಅವರನ್ನೂ ಕ್ರಾಂತಿಕಾರಿ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದರತ್ತ ನಿನ್ನ ಪ್ರಯತ್ನ ಹರಿಯಿತು. ನಿನ್ನ ನೆಂಟರು, ಸ್ನೇಹಿತರು ಎಲ್ಲರ ಮೇಲೆ ನಿನ್ನ ವಿಚಾರದ ಪ್ರಭಾವ ಬೀರುವ ಪ್ರಯತ್ನ ನಡೆಸಿದೆ. ನೀನು ಎಂದೂ ನನ್ನ ಆಜ್ಞೆಯನ್ನು ಅವಹೇಳನ ಮಾಡಲಿಲ್ಲ. ಒಬ್ಬ ಆಜ್ಞಾಧಾರಿ ಭಕ್ತನಂತೆ, ನೀನು ನನ್ನ ಆಜ್ಞಾಪರಿಪಾಲನೆಯಲ್ಲಿ ನಿರತನಾದೆ”.

ತಾಯ್ನಾಡಿನ ಸೇಗವೆಯ ಹಾದಿಯನ್ನು ಆರಿಸಿದ ಅಶ್ಪಾಕ್, ಉಲ್ಲಾ; ಆ ಹಾದಿ ನೇಣುಗಂಬಕ್ಕೆ ಕರೆದೊಯ್ದಿತು. ಅವನ ನಾಯಕನಗಿದ್ದ ರಾಮಪ್ರಸಾದ್ ತಾನೇಸಾವಿನ ಹೊಸ್ತಿಲಲ್ಲಿ ನಿಂತವರು- ಅವನನ್ನು ಬಿಳ್ಕೊಡುತ್ತಾನೆ: “ನೀನು ಈ ಪ್ರಪಂಚದಲ್ಲಿ ನನ್ನ ಮುಖಕ್ಕೆ ಹೊಸ ಕಳೆಯನ್ನು ಕೊಟ್ಟೆ ಎಂಬುವುದು ನನಗೆ ಅತ್ಯಂತ ಸಮಾಧಾನದ ಸಂಗತಿ. ಅಶ್ಪಾಕ್ ಉಲ್ಲಾ ಕ್ರಾಂತಿಕಾರಿ ಅಂದೋಲನದಲ್ಲಿ ಭಾಗವಹಿಸಿದ್ದನೆಂಬುವದು ಭಾರತದ ಇತಿಹಾಶದಲ್ಲಿ ಉಲ್ಲೇಖನೀಯ. ಸೆರೆಗೆ ಒಳಗಾದರೂ ನಿನ್ನ ಭಾಅವನೆಗಳು ದೃಢವಾಗಿಯೇ ಉಳಿದವು. ನೀನು ಹೇಗೆ ಶಾರೀರಿಕವಾಗಿ ಬಲಶಾಲಿಯೋ ಅಂತೆಯೇಮಾನಸಿಕವಾಗಿ ವೀರನಾಗಿದ್ದೀ: ನಿನ್ನ ಆತ್ಮ ಉದ್ದಾತ್ ರೀತಿಯಲ್ಲಿ ಸಿದ್ಧವಾಗಿದೆ. ಇದೆಲ್ಲದರ ಪರಿಣಾಮ ನಿನ್ನನ್ನು ನನ್ನ ಸಹಾಯಕ (ಲೆಫ್ಟಿನೆಂಟ್)ನೆಂದೂ ಕೋರ್ಟಿನಲ್ಲಿ ಹೆಸರಿಸಿ, ನ್ಯಾಯಾಧೀಶನು ಮೊಕದ್ದಮೆಯ ತೀರ್ಪು ಹೆಳುವಾಗ್ಯೆ ನಿನ್ನ ಕೊರಳಿಗೂ ಜಯಮಾಲೆ (ನೇಣುಹಗ್ಗ) ಯನ್ನು ತೊಡಿಸುವುದರಲ್ಲಿ ಪರ್ಯವಸಾನವಾಯಿತು. ಪ್ರೀತಿಯ ತಮ್ಮಾ, ಯಾವನು ತನ್ನ ತಂದೆ ತಾಯಿಗಳಧನಸಂಪದವನ್ನೆಲ್ಲಾ ದೇಶಸೇವೆಗಾಗಿ ಅರ್ಪಿಸಿ ಅವರನ್ನು ಭಿಕಾರಿಗಳನ್ನಾಗಿ ಮಾಡಿದನೋ, ಯಾವನು ತನ್ನ ತಮ್ಮನ ಭವಿಷ್ಯದ ಭಾಗ್ಯವನ್ನೆಲ್ಲ ದೇಶ ಸೇವೆಗೆಂದು ದಾನ ಮಾಢಿಬಿಟ್ಟನೋ ಯಾವನು ತನ್ನ ತನು-ಮನ-ಧನಗಳನ್ನು ಮಾತೃಸೇವೆಗಾಗಿ ಅರ್ಪಣೆಮಾಡಿ ಕೊನೆಗೆ ಸ್ವಯಂ ತನ್ನನ್ನೇ ಬಲಿದಾನ ಮಾಡಿಕೊಂಡನೋ, ಅವನು ತನ್ನ ಪ್ರೀಯ ಸಖನಾದ ಅಶ್ಪಾಕನನ್ನೂ ಸಹ ಮಾತೃಭೂಮಿ ಗಾಗಿಯೇ ಅರ್ಪಿಸಿಬಿಟ್ಟನು ಎಂಬುವುದನ್ನು ತಿಳಿದು ನೀನು ಸಂತೋಷಗೊಳ್ಳುವೆ”.

ಮರಣದಂಡನೆಗೆ ಗುರಿಯಾಗಿದ್ದ ಒಬ್ಬ ನಾಯಕ ತನ್ನ ಅನುಯಾಯಿ ಬಗ್ಗೆ ನುಡಿದ ಮೆಚ್ಚುಗೆಯ ಮಾತುಗಳಿವು.

ಭಾರತೀಯನ ಬಾಳು, ಸಾವು ಭಾರತಕ್ಕೆ:

ಅಶ್ಪಾಕ ಉಲ್ಲಾ ಆದರ್ಶ ಕ್ರಾಂತಿವೀರ. ತಾನು ಸೇರಿದ ಚಳುವಳಿಗೆ ಕೊನೆಯ ತನಕ ಆವನು ತೋರಿದ ನಿಷ್ಠೆ ಅವನನ್ನು ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದವರಲ್ಲಿ ಅಗ್ರ ಪಂಕ್ತಿಗೆ ಸೇರಿಸಿದೆ.

ಕಾಕೋರಿ ಪ್ರಸಂಗದಿಂದ ಕ್ರಾಂತಿಕಾರಿ ಚಳುವಳಿಗೆ ಎಂತಹ ವಿಪತ್ತು ಒದಗೀತು ಎಂಬುವುದನ್ನು ಅವನು ಸೂಕ್ಷ್ಮವಾಗಿ ವಿವೇಚನೆ ಮಾಡಿ ಮನಗಂಡಿದ್ದ. ಆಧರೆ ತನ್ನವರೆಲ್ಲ ಅದು ಸರಿ ಎಂದು ತಿಳಿದು ಕಾರ್ಯರಂಗಕ್ಕೆ ಇಳಿದಾಗ ಮುಂಬರುವ ಅಪಾಯವನ್ನರಿತು ಹಿಂಜರಿಯುವಂತಹ ಹೇಡಿ ಅವನಲ್ಲ. ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಲು ಅಳುಕಲಿಲ್ಲ. ನಾಯಕ ತೀರ್ಮಾನ ಮಾಡಿದ ನಂತರ ಪ್ರಾಣವನ್ನು ಪಣವಿಟ್ಟಾದರೂ ನಡೆಯಲು ಅಳೂಕಲಿಲ್ಲ.

ದೇಶಪ್ರೇಮ, ಸ್ಪಷ್ಟ ಚಿಂತನೆ, ಸಾಹಸ, ದೃಢತೆ, ನಿಷ್ಠೆ, ಇಂತಹ ಆದರ್ಶ ಗುಣಗಳ ಏಕೀಕೃತ ರೂಪವಾಗಿ ಅಶ್ಪಾಕ್ ಉಲ್ಲಾ ಚಿರಸ್ಮರಣೀಯ , ಮಾನ್ಯ.

ಸ್ವಾತಂತ್ರ್ಯ ಬಂದ ಮೇಲೆ ಪ್ರಜೆಗಳು ಬಲವನ್ನೂ ಹಿಂಸೆಯನ್ನೂಉಪಯೋಗಿಸುವುದೇ ಬೇಕಿಲ್ಲ, ನಿಜ. ಅಶ್ಫಾಕ್ ಉಲ್ಲಾ ಮತ್ತು ಅವನ ಸ್ನೇಹಿತರು ದೇಶ ದಾಸ್ಯದಲ್ಲಿದ್ದಾಗ ದೇಶಧ ವಿಮೋಚನೆಗೆ ಹೋರಾಡಲು ಹಣಬೇಕಾಯಿತು: ತಮಗಾಗಿ ಅಲ್ಲ, ದೇಶಕ್ಕಾಗಿ ಅವರು ಹಣ ಬೇಕೆಂದು ಬಯಸಿದರು.  ರೈಲನ್ನು ನಿಲ್ಲಿಸಿ ಸರಕಾರದ ಹಣ ತೆಗೆದುಕೊಂಡರು. ಆಗ ಸ್ವಾತಂತ್ರ್ಯ ಬಂದಿದೆ. ಇಂತಹ ಸಾಹಸದ ಅಗತ್ಯವಿಲ್ಲ.

ಆದರೂ, ಅಶ್ಪಾಕ್ ಉಲ್ಲಾ ನಾವು ಮರೆಯಲಾಗದ, ಮರೆಯಬಾರದ ಪಾಠವನ್ನು ಹೇಳಿಕೊಟ್ಟು ನಡೆದ.

ಭಾರತದಲ್ಲಿ ಹುಟ್ಟಿದವರೆಲ್ಲರ ಕರ್ತವ್ಯ, ಎಲ್ಲರ ಹಕ್ಕು, ಎಲ್ಲರ ಭಾಗ್ಯ ಭಾರತದ ಸೇವೆ: ಯಾರೆ ಯಾವ ಧರ್ಮಕ್ಕೆ ಸೇರಿರಲಿ, ನಾಡಿನ ಸೇವೆ ಮೊದಲನೆಯ ಕರ್ತವ್ಯ, ಎಂಬುವುದನ್ನು ಆಶ್ಪಾಕ್ ಉಲ್ಲಾ ತನ್ನ ರಕ್ತದಿಂದ ಜನರ ಮನಸ್ಸುಗಳಲ್ಲಿ ಬರೆದು ಹೋದ. ಆ ಸಂದೇಶ, ಆ ಮೇಲ್ಪಂಕ್ತಿ ಎಂದೂ ನಮ್ಮ ಹೃದಯಗಳಿಂದ ಮಾಸಬಾರದು.