ಕಣ್ಣಂಚೊಳು ಮಿಂಚುವ
ಕಂಬನಿಯಲಿ ಕೇಳಿರುವೆನು
ನೋವಿನೆದೆಯ ಗಾನವ !
ಬಾನಿನಲ್ಲಿ ತಿರು ತಿರುಗುವ
ಇಬ್ಬನಿಯೊಲು ಮಿರುಗುತಿರುವ
ತಾರೆ ಚಂದ್ರ ಗ್ರಹಗಳಲ್ಲು
ನಾನು ಕೇಳಿ ಬಲ್ಲೆನಯ್ಯ
ವಿಶ್ವದಶ್ರುಗಾನವ !

ಕಡಲು ಮೊರೆವುದೇಕೆ ಅಂತು
ಹಗಲಿರುಳೂ ಯುಗ ಯುಗ !
ಯಾರನೋ ಕರೆಯುತಿಹುದು
ಎದೆಯ ನೋವ ತೆರೆಯುತಿಹುದು
ಆಲಿಸಿಹುದು ಈ ಜಗ !

ಇರುಳು ತನ್ನ ಸಾಸಿರ ಕಣ್
ತೆರೆದು ಬೆಳಕಿನುದಯಕಾಗಿ
ಹಂಬಲಿಸಿದ ಕಂಬನಿಯೊಲು
ಹಸುರೊಳು ಹಿಮ ಮಣಿಗಳು
ಥಳ ಥಳ ಥಳ ಹೊಳೆಯಲು-
ತಿರೆಯ ಕರೆಗೆ ಮರುಗಿ ಕರಗಿ
ಬಾನಿನ ಕಣ್ಣೀರು ಸುರಿಯ-
ಲದನು ಕುಡಿದು ನೆಲ ಹಸುರಿನ
ನುಡಿಯೊಳೆದೆಯ ತೆರೆಯಲು-

ಚೆಲುವೆಂಬುದು ನೋವಿನಿಂದ
ಮೂಡಿಬಂದುದೆನಿಪುದು,
ಸ್ವಾರ್ಥದ ಕಣ್ಣೀರ್ಗಳಿಂದ
ಮಂಜಾಗಿಹ ನಮ್ಮ ಕಣ್ಗ-
ಳದನು ತಿಳಿಯಲಾರದು !