ಜಗದ್ಗುರು ಮಂಜುಘೋಷನಿಗೆ ತ್ರಿಕರಣ ಪೂರ್ವಕವಾಗಿ ವಂದಿಸುತ್ತಾ ನನ್ನ ಸ್ವಂತ ವಿಚಾರಗಳಿಗೆ ಅನುಗುಣವಾಗಿ ಅಶ್ವಘೋಷನಾದ ನಾನು ’ವಜ್ರಸೂಚಿ’ಯನ್ನು ರಚಿಸುತ್ತಿದ್ದೇನೆ. (೧)

ವೇದಗಳು ಪ್ರಮಾಣ, ಸ್ಮೃತಿಗಳು ಪ್ರಮಾಣ ಮತ್ತು ‘ಧರ್ಮ’ ಅಂದರೆ ಆರ್ಯೋಕ್ತಗಳು ಪ್ರಮಾಣ, ಸರಿ. ಆದರೆ ಯಾವ ವ್ಯಕ್ತಿಯು ಪ್ರಮಾಣವನ್ನು ಪ್ರಮಾಣ ರೂಪದಲ್ಲಿ ಸ್ವೀಕರಿಸುವುದಿಲ್ಲವೋ ಅಂಥವನ ಮಾತನ್ನು ಯಾರು ಮಾನ್ಯ ಮಾಡುತ್ತಾರೆ ? ಅಥವಾ ಪ್ರಮಾಣವನ್ನು ಅಪ್ರಮಾಣ ಮಾಡುವ ವ್ಯಕ್ತಿಯ ಮಾತು ಹೇಗೆ ತಾನೇ ಪ್ರಮಾಣವಾಗಲು ಸಾಧ್ಯ? (೨)

ಈ ಜಗತ್ತಿನಲ್ಲಿ ಗಣ್ಯರ ಅಪೇಕ್ಷೆ ವರ್ಣಗಳಲೆಲ್ಲಾ ಬ್ರಾಹ್ಮಣ ಶ್ರೇಷ್ಠವಾದುದು ಎಂದು ಸಾದಿಸುವುದಾಗಿದೆ. ಆದರೆ ಅವರ ಮುಂದೆ ನಾನು ಕೆಲವು ಪ್ರಶ್ನೆಗಳನ್ನು ಇಡಬಯಸುತ್ತೇನೆ.

೧. ಬ್ರಾಹ್ಮಣ ಅಂದರೆ ಏನು?
೧. ಏನು, ಜೀವವೆಂಬುದು ಬ್ರಾಹ್ಮಣವೇ?
೨. ಜಾತಿ ಬ್ರಾಹ್ಮಣವೇ?
೩. ಶರೀರ ಬ್ರಾಹ್ಮಣವೇ?
೪. ಜ್ಞಾನ ಬ್ರಾಹ್ಮಣವೇ?
೫. ಆಚಾರ ಬ್ರಾಹ್ಮಣವೇ?
೬. (ಕರ್ಮ) ವೃತ್ತಿ ಬ್ರಾಹ್ಮಣವೇ?
೭. ವೇದ ಪಾಂಡಿತ್ಯ ಬ್ರಾಹ್ಮಣವೇ?

೧.೧    ಜೀವವು ಬ್ರಾಹ್ಮಣವಲ್ಲ. ಅದು ವೇದಗಳಲ್ಲಿ ಹೀಗೆ ದೃಢಪಟ್ಟಿದೆ

“ಸೂರ್ಯನು ಜೀವಿ, ಸೋಮನು ಜೀವಿ, ಇಂದ್ರನು ಜೀವಿ”.

ಅಂದರೆ ದೇವತೆಗಳು ಪ್ರಾಣಿಗಳು, ಚಾಂಡಾಲನೂ ಒಬ್ಬ ದೇವತೆ. ಹೀಗೆ ಜೀವಿಯಾದ ಮಾತ್ರಕ್ಕೆ ಒಬ್ಬನು ಬ್ರಾಹ್ಮಣನಾಗಲಾರ ಎಂಬ ನಿಲುವನ್ನು ವೇದಗಳು ಬೆಂಬಲಿಸುತ್ತವೆ.

೧.೧.೨ ಮಹಾಭಾರತವೂ ಅದನ್ನು ದೃಢೀಕರಿಸುತ್ತ ಹೀಗೆ ಹೇಳಿದೆ:

“ದಶಾರಣ್ಯದ ಎಲ್ಲಾ ಸಪ್ತ ವಾಧ್ಯರು ಕಾಲಂಜರ ಗಿರಿಯಲ್ಲಿದ್ದ ಜಿಂಕೆಗಳು, ಶರದ್ವೀಪದ ಚಕ್ರವಾಕ ಪಕ್ಷಿಗಳು ಮತ್ತು ಮಾನಸ ಸರೋವರದ ಹಂಸಪಕ್ಷಿಗಳು ಕುರುಕ್ಷೇತ್ರದಲ್ಲಿ ವೇದಪಾರಂಗತರಾದ ಬ್ರಾಹ್ಮಣರಾಗಿ ಜನಿಸಿದರು (೩-೪)” ಮಹಾಭಾರತದ ಈ ಹೇಳಿಕೆಯಿಂದ ಬೇಟೆಗಾರ, ಜಿಂಕೆ, ಚಕ್ರವಾಕ, ಬಾತು ಇತ್ಯಾದಿ ಬ್ರಾಹ್ಮಣರಾಗಿ ಜನಿಸಿದರು ಎಂದು ಸಾಧಿಸಿದಂತಾಯಿತು. ಆದ್ದರಿಂದ ಯಾವುದೇ ಜೀವಂತ ಪ್ರಾಣಿ(ಜೀವಿ)ಯು ಬ್ರಾಹ್ಮಣನಾಗಲು ಸಾಧ್ಯ.

೧.೧.೩ ಮಾನವ ಧರ್ಮದಲ್ಲಿಯೂ ಇದು ಉಕ್ತವಾಗಿದೆ. ನಾಲ್ಕು ವೇದಗಳನ್ನು ಸಾಂಗೋಂಪಾಂಗವಾಗಿ ಅಧ್ಯಯನ ಮಾಡಿ ಅವುಗಳಿಗೆ ತತ್ವಾರ್ಥಗಳನ್ನು ತಿಳಿದುಕೊಂಡು ಬ್ರಾಹ್ಮಣನಾದವನೂ ಸಹ ಶೂದ್ರನಿಂದ ದಾನ ಪಡೆದದ್ದೇ ಆದರೆ ಅವನು ಕತ್ತೆಯಾಗಿ ಜನಿಸುತ್ತಾನೆ. (೫)

ಅವನು ಸತತವಾಗಿ ಹನ್ನೆರಡು ಜನ್ಮಗಳ ಪರ್ಯಂತ ಕತ್ತೆಯ ಯೋನಿಯಿಂದ ಜನಿಸುತ್ತಾನೆ. ಅನಂತರ ೬೦ನೇ ಮತ್ತು ೭೦ನೇ ಜನ್ಮದಲ್ಲಿ ಕ್ರಮವಾಗಿ ಹಂದಿ ಮತ್ತು ನಾಯಿಗಳ ಯೋನಿಯಲ್ಲಿ ಜನಿಸುತ್ತಾನೆ ಎಂದು ಮನು ಹೇಳಿದ್ದಾನೆ. (೬)

೧.೨.    ಹೀಗೆ ಮಾನವ ಧರ್ಮದ ಪ್ರಕಾರವೂ ಜಾತಿಯಿಂದ ಯಾರೂ ಬ್ರಾಹ್ಮಣನಾಗುವುದಿಲ್ಲ – ‘ಜಾತಿ ರೂಪಿ ಬ್ರಾಹ್ಮಣೋ ನ ಭವತಿ’

.. ಸ್ಮೃತಿಗಳಲ್ಲಿ ಹೀಗೆ ಉಕ್ತವಾಗಿದೆ

ದೇವರ್ಷಿ ಅಚಲನು ಆನೆಯಿಂದ, ಕೇಶ ಪಿಂಗಲನು ಗೂಬೆಯಿಂದ, ಅಗಸ್ತ್ಯನು ಅಗಸ್ತಿ ಪುಷ್ಪದಿಂದ, ಕೌಶಿಕನು ಕುಶ (ಗರಿಕೆ ಹುಲ್ಲು) ದಿಂದ ಕಪಿಲನು ಕಂದು ಬಣ್ಣದ ಹಸುವಿನಿಂದ, ಹಾಗೂ ಗೌತಮನು ಸೋನೆ ಹುಲ್ಲಿ (ಶರಗುಲ್ಮ) ನ ಪೊದರಿನಿಂದ ಹುಟ್ಟಿದವರು. ದ್ರೋಣಾಚಾರ್ಯನು ಕುಂಭ (ನೀರಿನ ಗಡಿಗೆ) ದಿಂದ ಮತ್ತು (ಕೃಷ್ಣ ಯಜುರ್ವೇದದ ಪ್ರಬೋಧಕ) ತಿತ್ತಿರಿಯು ತಿತ್ತಿರಿ ಪಕ್ಷಿಯಿಂದ ಜನಿಸಿದ. ರೇಣುಕೆಯಿಂದ (ಪರಶು) ರಾಮ ಉದಿಸಿದ ಮತ್ತು ಋಷ್ಯಶೃಂಗ ಜಿಂಕೆಯಿಂದ ಉದ್ಭವಿಸಿದ. ಬೆಸ್ತ ಮಹಿಳೆ ಕೇವರ್ತಿನಿ ಮತ್ತು ಅಸ್ಪೃಶ್ಯ ಮಹಿಳೆ ಶೂದ್ರಿಕೆಯರು ಕ್ರಮವಾಗಿ ವ್ಯಾಸ ಮತ್ತು ಕೈಶಿಕರಿಗೆ ಜನ್ಮ ನೀಡಿದರು. ಒಬ್ಬ ಚಾಂಡಾಲ ಹೆಣ್ಣು ವಿಶ್ವಾಮಿತ್ರನಿಗೆ ಮತ್ತು ಊರ್ವಶಿಯು ವಸಿಷ್ಠನಿಗೆ ಜನ್ಮ ನೀಡಿದರು. ಮೇಲಿನ ಋಷಿ ಪುಂಗವರ ತಾಯಂದಿರು ಯಾರೂ ಬ್ರಾಹ್ಮಣ ವರ್ಗದವರಲ್ಲ ಆದರೂ ಅಂದಿನ ಲೋಕಾಚಾರಗಳಿಗೆ ಅನುಗುಣವಾಗಿ ಅವರ ಸದ್ಗುಣಗಳಿಂದ ಅವರನ್ನು ಬ್ರಾಹ್ಮಣರು ಎಂದು ಸ್ವೀಕರಿಸಲಾಯಿತು. (೭-೧೦) ಹೀಗೆ ಸ್ಮೃತಿಗಳಿಂದಲೂ ಸಹ ಜಾತಿಯ ಆಧಾರದ ಮೇಲೆ ಬ್ರಾಹ್ಮಣರೆಂಬುವರಿಲ್ಲ ಎಂದು ಸಾಧಿಸಬಹುದು.

ತಾಯಿ ಬ್ರಾಹ್ಮಣೇತರಳಾಗಿದ್ದರೂ ತಂದೆ ಬ್ರಾಹ್ಮಣನಿದ್ದಾಗ ಪುತ್ರರು ಬ್ರಾಹ್ಮಣರಾಗುತ್ತಾರೆ ಎಂದು ನೀವು ಹೇಳುವುದಾದರೆ ಬ್ರಾಹ್ಮಣರಿಂದ ಜನಿಸಿದ ದಾಸಿ ಪುತ್ರರೆಲ್ಲರೂ ಬ್ರಾಹ್ಮಣರಾಗುತ್ತಾರೆ ಎಂದು ನೀವು ಹೇಳಿದಂತಾಯಿತು. ಆದರೆ ಇದನ್ನು ನೀವು ಮಾನ್ಯ ಮಾಡುವುದಿಲ್ಲ ಏಕೆ?

೧.೨.೩. ಬ್ರಾಹ್ಮಣರ ಪುತ್ರರು ಮಾತ್ರ ಬ್ರಾಹ್ಮಣರೆಂದಾದರೆ ಬ್ರಾಹ್ಮಣರ ಅಭಾವವುಂಟಾಗುತ್ತದೆ. ಏಕೆಂದರೆ

ವರ್ತಮಾನ ಕಾಲದ ಬ್ರಾಹ್ಮಣರೆಲ್ಲ ಬ್ರಾಹ್ಮಣ ತಂದೆಯ ರಿಂದ ಜನಿಸಿದವರು ಎಂಬ ಬಗ್ಗೆ ಯಾವಾಗಲೂ ಸಂಶಯವಿದ್ದೇ ಇರುತ್ತದೆ. ಗೋತ್ರ ಬ್ರಾಹ್ಮಣ ಸಂತತಿಯಿಂದ ಆರಂಭಿಸಿ ಇಂದಿನ ವರೆಗೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬ್ರಾಹ್ಮಣೆಯರು ಶೂದ್ರರೊಡನೆಯೂ ಸಂಬಂಧವುಳ್ಳವರಾಗಿರುತ್ತಾರೆ. ಆದ್ದರಿಂದ ಜಾತಿಯಿಂದ ಯಾರೂ ಬ್ರಾಹ್ಮಣರಿರಲು ಸಾಧ್ಯವಿಲ್ಲ.

೧.೨.೪ ಇದನ್ನು ಮಾನವ ಧರ್ಮದ ಆಧಾರದಿಂದಲೂ ಸಮರ್ಥಿಸಬಹುದು. ಅದರಲ್ಲಿ ಹೀಗೆ ಹೇಳಲಾಗಿದೆ.

“ಯಾವ ಬ್ರಾಹ್ಮಣನು ಮಾಂಸ, ಲಾಕ್ಷಾ (ಅರಗು) ಮತ್ತು ಲವಣವನ್ನು ಮಾರುತ್ತಾನೋ ಅವನು ಬ್ರಾಹ್ಮಣತ್ವದಿಂದ ಚ್ಯುತನಾಗುತ್ತಾನೆ. ಯಾವ ಬ್ರಾಹ್ಮಣನು ಹಾಲು ಮಾರುತ್ತಾನೆಯೊ ಅವನಿಗೆ ಮೂರು ದಿನಗಳಲ್ಲಿ ಶೂದ್ರತ್ವ ಪ್ರಾಪ್ತಿಯಾಗುತ್ತದೆ.” (೧೧)

ಯೋಗ ಬಲದಿಂದ ಆಕಾಶದಲ್ಲಿ ಸಂಚರಿಸುವ ಬ್ರಾಹ್ಮಣನಾದರೂ ಮಾಂಸಭಕ್ಷಣೆ ಮಾಡಿದ್ದೇ ಆದರೆ ಅವನು ಕೆಳಗೆ ಬೀಳುತ್ತಾನೆ. ಕೆಳಗೆ ಬೀಳುವ ಬ್ರಾಹ್ಮಣನನ್ನು ನೋಡಿಯಾದರೂ ಮಾಂಸ ತಿನ್ನುವುದನ್ನು ಪರಿತ್ಯಜಿಸಬೇಕು. (೧೨)

ಹೀಗೆ, ಯಾವೊಬ್ಬನೂ ಕೇವಲ ಜಾತಿಯಿಂದ ಬ್ರಾಹ್ಮಣನಾಗಲಾರ ಎಂಬುದನ್ನು ಮಾನವ ಧರ್ಮ ದೃಢಪಡಿಸುತ್ತದೆ.

೧.೨.೫. ಒಬ್ಬ ವ್ಯಕ್ತಿಯ ಜಾತಿಯಿಂದ ಬ್ರಾಹ್ಮಣನಾಗಿದ್ದರೆ ಅವನು ಕೆಳಗೆ ಬೀಳುವುದರಿಂದಲೇ ಶೂದ್ರನಾಗುವುದಿಲ್ಲ. ಕಾಯಿಲೆಯಿಂದ ಕೆಳಗೆ ಬಿದ್ದ ಕುದುರೆಯು ಹಂದಿಯಾಗುವುದೆ? ಆದ್ದರಿಂದ ಜಾತಿಯಿಂದ ಬ್ರಾಹ್ಮಣನಾಗುವುದಿಲ್ಲ.

.. ದೇಹದಿಂದಲೂ ಯಾರೂ ಬ್ರಾಹ್ಮಣನಾಗುವುದಿಲ್ಲ, ಏಕೆಂದರೆ:

೧.೩.೧ ದೇಹವು ಬ್ರಾಹ್ಮಣನಾದರೆ ಬ್ರಾಹ್ಮಣನ ಶರೀರವನ್ನು ಸುಡುವ ಅಗ್ನಿಯೂ (ಪಾವಕ = ಶುದ್ದೀಕರಿಸುವ ದೇವತೆ) ಪಾಪಿಯಾಗುತ್ತಾನೆ.

೧.೩.೨ ಬ್ರಾಹ್ಮಣರು ತಮ್ಮ ಸಂಬಂಧಿಗಳಾದ ಬ್ರಾಹ್ಮಣರ ಶವಗಳನ್ನು ಚಿತೆಯಲ್ಲಿ ಸುಟ್ಟರೆ ಬ್ರಾಹ್ಮಣ ಹತ್ಯೆಯ ಪಾತಕವನ್ನು           ಮಾಡಿದಂತಾಗುತ್ತದೆ.

ಬ್ರಾಹ್ಮಣರ ಸಂಪರ್ಕಕ್ಕೆ ಬಂದ ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಸಹ ಬ್ರಾಹ್ಮಣರಾಗುತ್ತಾರೆ. ಆದರೆ ಎಂದೂ ಹಾಗೆ ಆಗಿಲ್ಲ.

೧.೩.೩ ಬ್ರಾಹ್ಮಣನ ದೇಹವನ್ನು ನಾಶಗೊಳಿಸಿದ ಮೇಲೆ ಪ್ರಾರ್ಥನೆ. ಪೂಜೆ, ಅಧ್ಯಯನ, ಬೋಧನೆ, ದಾನ ಮತ್ತು ಅದರ ಫಲಗಳೂ ನಾಶವಾಗಬೇಕಾಗುತ್ತದೆ. ಆದರೆ ಅದನ್ನು ನೀವು ಒಪ್ಪುವುದಿಲ್ಲ. ಆದ್ದರಿಂದ ದೇಹದಿಂದ ಒಬ್ಬನು ಬ್ರಾಹ್ಮಣನಾಗುವುದಿಲ್ಲ ಎಂದು ನಮ್ಮ ಗ್ರಹಿಕೆ.

೧.೪    ಜ್ಞಾನದಿಂದ ಒಬ್ಬನು ಬ್ರಾಹ್ಮಣನಾಗುವುದಿಲ್ಲ. ಏಕೆಂದರೆ ಎಷ್ಟೇ ಜ್ಞಾನವಿದರೂ ಅದಕ್ಕೆ ಬೆಲೆಯಿಲ್ಲ. ಇದ್ದಿದ್ದರೆ ಜ್ಞಾನಿಗಳಾದ ಶೂದ್ರರೆಲ್ಲರೂ ಬ್ರಾಹ್ಮಣರಾಗುತ್ತಿದ್ದರು. ಕೆಲವು ವೇಳೆ ವೇದ, ವ್ಯಾಕರಣ, ಮೀಮಾಂಸ. ಸಾಂಖ್ಯಾ, ವೈಶೇಷಿಕ, ಜ್ಯೋತಿಷ ಇತ್ಯಾದಿಗಳ ಮೇಲೆ ಶೂದ್ರರು ಪಾಂಡಿತ್ಯ ಸಾಧಿಸಿರುವುದನ್ನು ನೋಡಬಹುದು. ಆದ್ದರಿಂದ ಜ್ಞಾನವೂ ಸಹ ಬ್ರಾಹ್ಮಣತ್ವಕ್ಕೆ ಕಾರಣ ವಾಗುವುದಿಲ್ಲ.

೧.೫.    ಒಳ್ಳೆಯ ನಡತೆಯಿಂದಲೂ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಹಾಗಿದ್ದರೆ ಒಳ್ಳೆಯ ನಡತೆಯ ಶೂದ್ರರೆಲ್ಲರೂ ಬ್ರಾಹ್ಮಣರಾಗುತ್ತಿದ್ದರು. ಅನೇಕ ನಟರು, ಭಟ (ಸೈನಿಕ)ರು, ಕೈವರ್ತರು (ಮೀನುಗಾರರು), ಭಂಡ (ವಿದೂಷಕ) ಇತ್ಯಾದಿಗಳು ಒಳ್ಳೆಯ ನಡತೆಯವರಾಗಿದ್ದರೂ ಅವರು ಬ್ರಾಹ್ಮಣರಾಗಿಲ್ಲದಿರುವುದನ್ನು ನಾವು ನೋಡುತ್ತೇವೆ. ಆದ್ದರಿಂದ ತನ್ನ ಸದ್ಗುಣಗಳಿಂದ ಒಬ್ಬನು ಬ್ರಾಹ್ಮಣನಾಗಲಾರ.

೧.೬.    ತನ್ನ ವೃತ್ತಿಯಿಂದಲೂ ಒಬ್ಬನು ಬ್ರಾಹ್ಮಣನಾಗಲಾರ. ಕ್ಷತ್ರಿಯ, ವೈಶ್ಯ, ಶೂದ್ರರು ಪ್ರಾರ್ಥನೆ, ಅಧ್ಯಯನ, ಮಂತ್ರ          ಪಠನ, ಬೋಧನೆ, ದಾನ ಇತ್ಯಾದಿಗಳಿಂದ ಕೂಡಿದ್ದರೂ ಅವರನ್ನು ನೀವು ಬ್ರಾಹ್ಮಣರೆಂದು ಒಪ್ಪುವುದಿಲ್ಲ. ಆದ್ದರಿಂದ ವೃತ್ತಿಯಿಂದಲೂ ಬ್ರಾಹ್ಮಣತ್ವ ಸಾಧ್ಯವಿಲ್ಲ.

೧.೭. ವೇದಪಾರಂಗತನಾಗುವುದರಿಂದ ಒಬ್ಬನು ಬ್ರಾಹ್ಮಣನಾಗುವುದಿಲ್ಲ. ರಾವಣ ಹೆಸರಿನ ಒಬ್ಬ ಋಗ್, ಯಜರ್, ಸಾಮ         ಮತ್ತು ಅಥರ್ವ ವೇದಗಳ ಮೇಲೆ ಪ್ರಭುತ್ವಗಳಿಸಿದ್ದ, ರಾಕ್ಷಸರ ಪ್ರತಿಯೊಂದು ಮನೆಯಲ್ಲೂ ವೇದಾನುಷ್ಠಾನ ನಡೆದಿತ್ತು. ಆದರೆ ಅವರನ್ನು ಬ್ರಾಹ್ಮಣರೆಂದು ಅಂಗೀಕರಿಸಿರಲಿಲ್ಲ. ಆದ್ದರಿಂದ ವೇದ ಪಾಂಡಿತ್ಯದಿಂದಲೂ ಒಬ್ಬನು ಬ್ರಾಹ್ಮಣನಾಗಲಾರ ಎಂದು ನಾವು ತಿಳಿಯುತ್ತೇವೆ.

. ಹಾಗಾದರೆ ಬ್ರಾಹ್ಮಣತ್ವವನ್ನು ಗಳಿಸುವುದು ಹೇಗೆ?

೨.೧.    ಶಾಸ್ತ್ರಗಳ ಜ್ಞಾನದಿಂದ, ವಿವಿಧ ಸಂಸ್ಕಾರಗಳಿಂದ, ಕುಲದಿಂದ ವೇದ ಪಠನದಿಂದ ಮತ್ತು ಯಾವುದೇ ವೃತ್ತಿ (ಕರ್ಮ) ಯಿಂದ ಬ್ರಾಹ್ಮಣತ್ವ ಪ್ರಾಪ್ತಿಯಾಗುವುದಿಲ್ಲ. (೧೩)

ಬ್ರಾಹ್ಮಣತ್ವವು ಆಧ್ಯಾತ್ಮದ ಬೆಳವಣಿಗೆಯಲ್ಲಿ ಒಂದು ಹಂತವನ್ನು ಪ್ರತಿನಿಧಿಸುತ್ತದೆ. ಅದು ಎಲ್ಲ ಪಾಪಗಳ ನಿರ್ಮೂಲ ಹಾಗೂ ಕುಂದ ಪುಷ್ಪ ಮತ್ತು ಚಂದ್ರನ ಧವಳಕಾಂತಿಯಂತೆ ಶ್ವೇತವೂ ಶುದ್ಧವೂ ಆಗಿದೆ.

೨.೨.    ವ್ರತ, ತಪಸ್ಸು, ನಿಯಮ (ಸ್ವ ಪ್ರೇರಣೆಯಿಂದ ಧರ್ಮ ಪಾಲನೆ) ಉಪವಾಸ, ದಾನ, ದಮ (ಸ್ವ ನಿಯಂತ್ರಣ), ಶಮ (ಮನಸ್ಯಾಂತಿ) ಮತ್ತು ಸಂಯಮಗಳನ್ನು ಪಾಲಿಸುವುದರಿಂದ ಬ್ರಾಹ್ಮಣತ್ವವನ್ನು ಹೊಂದಬಹುದೆಂದು ಹೇಳಲಾಗಿದೆ.

೨.೩.    ಯಾರು ಸ್ವಾರ್ಥ, ಮಮಕಾರ, ಅಹಂಕಾರ, ಪರಿಗ್ರಹ ಮತ್ತು ರಾಗದ್ವೇಷಗಳಿಂದ ಮುಕ್ತನಾಗಿರುತ್ತಾನೋ ಅವನನ್ನು ವೇದಗಲ್ಲಿ ಬ್ರಾಹ್ಮಣ ಎಂದು ಕರೆಯಲಾಗಿದೆ. (೧೪)

ಸತ್ಯ, ತಪಸ್ಸು, ಇಂದ್ರಿಯ ನಿಗ್ರಹ, ಸರ್ವ ಜೀವಿಗಳಲ್ಲಿ ದಯೆ – ಇವು ಬ್ರಾಹ್ಮಣ ಲಕ್ಷಣಗಳು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ. (೧೫) ಈ ಸದ್ಗುಣಗಳ ಕೊರತೆ ಯಾರಲ್ಲಿರುವುದೋ ಅವನೇ ಚಾಂಡಾಲ. (೧೬) ದೇವತೆಗಳು, ಮಾನವರು ಹಾಗೂ ತಿರ್ಯಗ್ಯೋನಿಯಿಂದ ಜನಿಸಿದ ಪಶುಪ್ರಾಣಿ ಪಕ್ಷಿಗಳು ಸಹ ಮೈಥುನಾದಿ ಸಂಸಾರಿಕ ಸುಖಗಳಿಂದ ವಿರಕ್ತರಾದಾಗ, ಅಂತಹ ಸಹ ಎಲ್ಲ ವಿಪ್ರರು ಬ್ರಾಹ್ಮಣರಾಗುತ್ತಾರೆ. (೧೭)

೨.೪    ಶುಕ್ರನೀತಿಯಲಿ ಹೀಗೆ ಹೇಳಿದೆ : ಬ್ರಾಹ್ಮಣತ್ವ ಹೊಂದಲು ಹುಟ್ಟು, ಜಾತಿ ಪ್ರಸ್ತುತ ಅಲ್ಲ, ಯಾರಲ್ಲಿ ಕಲ್ಯಾಣ ಕರವಾದ ಸದ್ಗುಣಗಳಿವೆಯೋ ಅವನು, ಚಾಂಡಾಲ ಜಾತಿಯವನಾದರೂ ಅವನನ್ನು ದೇವತೆಗಳು ಬ್ರಾಹ್ಮಣನೆಂದು ಸ್ವೀಕರಿಸುತ್ತಾರೆ. (೧೮)

ಆದ್ದರಿಂದ ಬ್ರಾಹ್ಮಣತ್ವವನ್ನು ಜಾತಿ, ಜೀವ, ದೇಹ, ಜ್ಞಾನ, ವೃತ್ತಿ ಅಥವಾ ವೇದಗಳಿಂದ ಗುರುತಿಸಾಗುವುದಿಲ್ಲ.

. ಸಮಾಜದಲ್ಲಿ ಶೂದ್ರರ ಸ್ಥಾನ ಮಾನ

೩.೧.    ಶೂದ್ರರು ಪ್ರವ್ರಜ್ಯ (ಸನ್ಯಾಸ) ದೀಕ್ಷೆ ತೆಗೆದು ಕೊಳ್ಳಲು ಅನರ್ಹರು, ಅವರು ಬ್ರಾಹ್ಮಣರ ಸೇವೆ ಮಾಡಬೇಕು ಮತ್ತು ಅವರು ಚಾತುರ್ವರ್ಣ್ಯಗಳಲ್ಲಿ ಕಟ್ಟ ಕಡೆಯುವರು ಎಂದು ನೀವೇ ಹೇಳಿದ್ದೀರಿ.

೩.೨.    ಹಾಗಿದ್ದರೆ, ದೇವತೆಗಳಲ್ಲಿ ಪ್ರಮುಖನಾದ ಇಂದ್ರನು ಸಹ ಕಟ್ಟ ಕಡೆಯುವನು. ಏಕೆಂದರೆ (ಪಾಣಿನಿ) ಸೂತ್ರ – ‘ಶ್ವಯುವ ಮಘೋನಾಮತದ್ದಿತೆ’ ಯು ಅವನ ಹೆಸರನ್ನು ಕೊನೆಯಲ್ಲಿರಿಸಿದೆ. ‘ಶ್ವ’ ಎಂದರೆ ‘ನಾಯಿ’ ‘ಯುವಾ’ ಅಂದರೆ ಮನುಷ್ಯ ಮತ್ತು ‘ಮಘವಾ’ ಎಂದರೆ ದೇವತೆಗಳ ರಾಜನಾದ ಸುರೇಂದ್ರ, ಅಂದರೆ ನಾಯಿ ಮತ್ತು ಮಾನವರೊಡನೆ ಹೋಲಿಸಿದಾಗ ಇಂದ್ರನು ಅವರಿಗಿಂತ ಕೆಳಗಿನವನು. ಆದರೆ ಅದು ಹಾಗಿಲ್ಲ.

೩.೩    ಉದಾಹರಣೆಗೆ, ಸಮಾಜದಲ್ಲಿ ’ಉಮಾಮಹೇಶ್ವ ರೌ’ (ಉಮಾ ಮತ್ತು ಮಹೇಶ್ವರ) ಹಾಗೂ ‘ದಂತೋಷ್ಠಮ್’ (ಹಲ್ಲು ಮತ್ತು ತುಟಿ) ಎಂಬಂತಹ ಪದ ಸಂಯೋಜನೆಯನ್ನು ಬಳಸಲಾಗುವುದು. ಅಂದರೆ ಮಹೇಶ್ವರನಿಗಿಂತ ಉಮಾ ಮೊದಲು ಜನಿಸಿದವಳು ಮತ್ತು ಹಲ್ಲು ತುಟಿಗಳಿಗಿಂತ ಮೊದಲು ಉಗಮವಾಯಿತು ಎಂದರ್ಥವೇ? ಭಾಷೆಯಲ್ಲಿ ಅಂತಹ ಪದಸಂಯೋಜನೆ ಸಹಜ. ಅದೇ ರೀತಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುದು ಒಂದು ವಾಕ್ ಸರಣಿ. ಆದ್ದರಿಂದ ಸೇವೆಯೇ ಶೂದ್ರನ ಏಕೈಕ ಕರ್ತವ್ಯ ಎಂಬ ನಿಮ್ಮ ತೀರ್ಮಾನ ಸರಿಯಲ್ಲ.

. ಆದ್ದರಿಂದ ಬ್ರಾಹ್ಮಣತ್ವದ ಪರಿಕಲ್ಪನೆ ಸ್ಪಷ್ಟವಾಗಿಲ್ಲ. ಮಾನವ ಧರ್ಮ (ಮನುಸ್ಮೃತಿ) ದಲ್ಲಿ ಹೀಗೆ ಹೇಳಿದೆ :

“ಯಾವ ಬ್ರಾಹ್ಮಣನು ಶೂದ್ರಳೊಡನೆ ಸಹವಾಸ ಮಾಡಿ ಅವಳ ಮುಖಾಂಬುಜದ ಆಸ್ವಾದನೆ ಮಾಡುತ್ತಾನೋ ಅಥವಾ ಅವಳಿಂದ ಸಂತಾನೋತ್ಪತ್ತಿ ಮಾಡುತ್ತಾನೋ ಅವನು ಅದಃ ಪತನಕ್ಕೀಡಾಗುತ್ತಾನೆ. ಅಂತಹ ಪಾಪ ಕೃತ್ಯಕ್ಕೆ ಪ್ರಾಯಶ್ಚಿತ್ತದ ಮೂಲಕ ಶುದ್ಧೀಕರಣದ ಯಾವ ವಿಧಾನವೂ ಇಲ್ಲ” (೧೯)    

“ಯಾವ ಬ್ರಾಹ್ಮಣನು ಸತತವಾಗಿ ಒಂದು ತಿಂಗಳು ಶೂದ್ರ ಸ್ತ್ರೀಯು ಮಾಡಿದ ಅಡಿಗೆಯನ್ನು ಭೋಜನ ಮಾಡುತ್ತಾನೋ ಅವನು ತನ್ನ ಜೀವನ ಪರ್ಯಂತ ಶೂದ್ರನಾಗಿರುತ್ತಾನೆ ಮತ್ತು ಸತ್ತನಂತರ ನಾಯಿಯಾಗಿ ಜನಿಸುತ್ತಾನೆ.” (೨೦)

“ಯಾವ ಬ್ರಾಹ್ಮಣನು ಶೂದ್ರ ಸ್ತ್ರೀಯರಿಂದ ಪರಿವೃತನಾಗಿರುತ್ತಾನೋ ಅಥವಾ ಶೂದ್ರ ಸ್ತ್ರೀಯು ಅವನ ಗೃಹಿಣಿಯಾಗಿರುತ್ತಾಳೋ ಅಂತಹ ಬ್ರಾಹ್ಮಣನ ಧಾರ್ಮಿಕ ಕ್ರಿಯೆಗಳನ್ನು ಪಿತೃ ದೇವತೆಗಳು ಅಂಗೀಕರಿಸುವುದಿಲ್ಲ. ಮರಣಾನಂತರ ಅವನು ರೌರವ ನರಕದಲ್ಲಿ ಬೀಳುತ್ತಾನೆ” (೨೧)

ನಿಮ್ಮ ಮಾತುಗಳಿಂದಲೇ ಬ್ರಾಹ್ಮಣತ್ವದ ಪರಿಕಲ್ಪನೆ ಸ್ಪಷ್ಟವಾಗಿಲ್ಲವೆಂದು ದೃಢಪಡುತ್ತದೆ.

. ಇನ್ನೊಂದು ಮುಖಶೂದ್ರನೂ ಬ್ರಾಹ್ಮಣನಾಗಬಲ್ಲ.

ಹೇಗೆಂಬುದನ್ನು ಮಾನವ ಧರ್ಮದಲ್ಲಿ ಹೇಳಲಾಗಿದೆ – “ಮಹಾಮುನಿ ಕಠನು ಅರಣಿಯ ಗರ್ಭದಿಂದ ಜನಿಸಿದವನು – ತಪಸ್ಸಿನಿಂದ ಅವನು ಬ್ರಾಹ್ಮಣನಾದ. ಆದ್ದರಿಂದ ಜಾತಿಯು ಬ್ರಾಹ್ಮಣತ್ವಕ್ಕೆ ಕಾರಣವಾಗುವುದಿಲ್ಲ: (೨೨)

“ಮಹರ್ಷಿ ವ್ಯಾಸನು ಒಬ್ಬ ಬೆಸ್ತರವಳ ಗರ್ಭದಿಂದ ಜನಿಸಿದ. ಅವನೂ ತಪಸ್ಸಿನ ಸಾಮರ್ಥ್ಯದಿಂದ ಬ್ರಾಹ್ಮಣನಾದ. ಆದ್ದರಿಂದ ಬ್ರಾಹ್ಮಣನಾಗಲು ಹುಟ್ಟೇ ಆಧಾರವಾಗಬೇಕಾಗಿಲ್ಲ” (೨೩)

“ಮಹಾಮುನಿ ವಸಿಷ್ಠನು ಊರ್ವಶಿಯ ಗರ್ಭದಿಂದ ಜನಿಸಿದವನು. ತಪೋ ಬಲದಿಂದ ಅವನು ಮುಂದೆ ಬ್ರಾಹ್ಮಣನಾದ”. ಆದ್ದರಿಂದ ಜನ್ಮದಿಂದ ಬ್ರಾಹ್ಮಣನಾಗುತ್ತಾನೆ ಎಂಬುದರಲ್ಲಿ ಹುರುಳಿಲ್ಲ. (೨೪)

“ಪ್ರಖ್ಯಾತ ಮಹಾಮುನಿ ಋಷ್ಯಶೃಂಗ ಒಂದು ಜಿಂಕೆಯಿಂದ ಉಗಮಿಸಿದ ಮತ್ತು ತನ್ನ ಉತ್ಕೃಷ್ಟ ತಪಸ್ಸಿನಿಂದ ಅವನೂ ಬ್ರಾಹ್ಮಣನಾದ. ಬ್ರಾಹ್ಮಣತ್ವ ಪ್ರಾಪ್ತವಾಗಲು ಕಾರಣ ಜಾತಿ ಅಲ್ಲ.” (೨೫)

“ಮಹಾಸಂತ ವಿಶ್ವಾಮಿತ್ರ ಒಬ್ಬ ಚಾಂಡಾಲಿನಿಯ ಗರ್ಭದಿಂದ ಜನಿಸಿದ. ಉಗ್ರ ತಪ್ಪಸ್ಸಿನಿಂದ ಬ್ರಾಹ್ಮಣನಾದ, ಬ್ರಾಹ್ಮಣನಾಗಲು ಕಾರಣ ಜಾತಿ ಅಲ್ಲ” (೨೬)

“ಮಹರ್ಷಿನಾರದ ತಂಡೂಲಿ (ಮನೆ ಕೆಲಸದವಳು)ಯ ಗರ್ಭದಲ್ಲಿ ಜನಿಸಿದವನು. ತಪೋಬಲ ದಿಂದ ಅವನು ಬ್ರಾಹ್ಮಣನಾದ. ಜಾತಿಯ ಬ್ರಾಹ್ಮಣತ್ವಕ್ಕೆ ಕಾರಣವಲ್ಲ.” (೨೭)

ಆತ್ಮ ಸಂಯಮಿಯಾದ ವ್ಯಕ್ತಿಯನ್ನು ಜಿತೇಂದ್ರಿಯ ‘ಯತಿ’ ಅಥವಾ ‘ಸಂತ’ ಎಂದೂ ಕರೆಯುತ್ತಾರೆ. ತಪಸ್ಸಿನಿಂದ ವ್ಯಕ್ತಿ ತಪಸ್ವಿಯಾಗುತ್ತಾನೆ. ಹಾಗೆಯೇ ಬ್ರಹ್ಮಚರ್ಯೆ ಪಾಲನೆ ಅಂದರೆ ಇಂದ್ರಿಯ ಸುಖ ವಿರಕ್ತಿಯ ಮೂಲಕ ಅವನು ಬ್ರಾಹ್ಮಣ ಎಂದು ಕರೆಯಲ್ಪಡುತ್ತಾನೆ. (೨೮)

ಸಮಾಜದಲ್ಲಿ ಬ್ರಾಹ್ಮಣರೆಂದು ಗುರುತಿಸಲ್ಪಡುವ ಬ್ರಾಹ್ಮಣ ಸ್ತ್ರೀಯ ಪುತ್ರರು ಬ್ರಾಹ್ಮಣರಲ್ಲ. ಶೀಲ ಸಚ್ಛಾರಿತ್ರ್ಯಗಳಿಂದ ಕೂಡಿದವರು ಬ್ರಾಹ್ಮಣರು. ಆದ್ದರಿಂದ ಕುಟುಂಬವು ಬ್ರಾಹ್ಮಣತ್ವಕ್ಕೆ ಕಾರಣವಾಗುವುದಿಲ್ಲ. (೨೯)

“ಒಬ್ಬ ವ್ಯಕ್ತಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ ಅವನಿಗೆ ಸಚ್ಚಾರಿತ್ರ್ಯ ವಿಲ್ಲವಾದರೆ ಏನು ಪ್ರಯೋಜನ. ಕೆಳಸ್ತರದ ಕುಟುಂಬಗಳಲ್ಲಿ ಜನಿಸಿದವರಾದರೂ ಅನೇಕ ಸದ್ಗುಣ ಸಂಪನ್ನರಾದ ಧೀರರು ಅವರ ನಡತೆಯಿಂದ ಸ್ವರ್ಗವನ್ನು ತಲುಪಿದ್ದಾರೆ.” (೩೦)

. ಮಹಾ ಮುನಿಗಳಾದ ಕಠ, ವ್ಯಾಸ, ವಸಿಷ್ಠ, ಋಷ್ಯಶೃಂಗ, ವಿಶ್ವಾಮಿತ್ರ ಇತ್ಯಾದಿಗಳೆಲ್ಲಾ ಕೆಳಮಟ್ಟದ ಕುಟುಂಬಗಳಲ್ಲಿ ಜನಿಸಿದರೂ ಅವರನ್ನು ಬ್ರಾಹ್ಮಣರೆಂದು ಕರೆಯಲಾಗುತ್ತಿತ್ತು:

ಆದ್ದರಿಂದ ಬ್ರಾಹ್ಮಣರನ್ನು ಕುರಿತ ನಿಮ್ಮ ಮೇಲಿನ ಮಾನದಂಡಗಳು ಅಸ್ಪಷ್ಟವಾಗಿವೆ. ಶೂದ್ರ ಕುಟುಂಬದಲ್ಲಿ ಜನಿಸಿದವನೂ ಬ್ರಾಹ್ಮಣನಾಗಲು ಸಮರ್ಥನಿರುತ್ತಾನೆ.

. ನಿಮ್ಮ ಧೋರಣೆ ಹೀಗೂ ಇದೆ: “ಸೃಷ್ಟಿಕರ್ತನ ಮುಖದಿಂದ ಬ್ರಾಹ್ಮಣ, ಬಾಹುಗಳಿಂದ ಕ್ಷತ್ರಿಯ, ತೊಡೆಗಳಿಂದ ವೈಶ್ಯ ಮತ್ತು ಪಾದಗಳಿಂದ ಶೂದ್ರನ ಉತ್ಪತ್ತಿಯಾಯಿತು” (ಋಗ್ವೇದ x, ೯೦) (೩೧)

ಇದಕ್ಕೆ ಉತ್ತರವಾಗಿ ನಾವು ಹೀಗೆ ಹೇಳುತ್ತೇವೆ. ಮುಖದಿಂದ ಹುಟ್ಟಿದ ಅನೇಕ ಬ್ರಾಹ್ಮಣರ ವಿಷಯ ನಮಗೇನೂ ತಿಳಿಯದು. ಆದರೆ ಸಮಾಜದಲ್ಲಿ ಮೀನುಗಾರರ (ಕೈವರ್ತ), ಮಡಿವಾಳರ ಹಾಗೂ ಇತರ ಅಸ್ಪೃಶ್ಯ (ಚಾಂಡಾಲ) ಕುಟುಂಬಗಳಿಂದ ಬಂದ ಬ್ರಾಹ್ಮಣರನ್ನೂ ನಾವು ಕಾಣುತ್ತೇವೆ.

ಆವರ ತಲೆಬೋಳು ಮಾಡಿಸುವಂತಹ (ಚೂಡಾಕರ್ಮ) ಧಾರ್ಮಿಕ ಆಚರಣೆಗಳು ಚೆನ್ನಾಗಿ ನೆರವೇರುತ್ತವೆ. ಅವರು ಬ್ರಾಹ್ಮಣರಾಗಲು ಅರ್ಹತೆ ಪಡೆಯುತ್ತಾರೆ.

ಆದ್ದರಿಂದ ಬ್ರಾಹ್ಮಣ, ಕ್ಷತ್ರಿಯ ಇತ್ಯಾದಿ ಎಲ್ಲರೂ ಒಂದೇ ವರ್ಣಕ್ಕೆ ಸೇರಿದವರು. ಇರುವುದು ಒಂದೇ ವರ್ಣ, ನಾಲ್ಕಲ್ಲ.

. ಇರುವುದು ಒಂದೇ ವರ್ಣ, ನಾಲ್ಕು ವರ್ಣಗಳಾಗಿ ವಿಭಜಿಸುವುದು ಸರಿಯಲ್ಲ.

ಒಬ್ಬನೇ ಸೃಷ್ಠಿಕರ್ತ (ಪುರುಷ) ನಿಂದ ಉತ್ಪನ್ನವಾದ ಸಂತಾನದಲ್ಲಿ ನಾಲ್ಕು ವರ್ಣಗಳು ಹೇಗೆ ಉದಿಸಿದುವು? ಉದಾಹರಣೆಗೆ ದೇವದತ್ತನೆಂಬ ಹೆಸರಿನ ಒಬ್ಬ ವ್ಯಕ್ತಿ ಇದ್ದಾನೆ ಎಂದು ಭಾವಿಸಿ, ಅವನು ಒಬ್ಬಳೇ ಸ್ತ್ರೀಯಿಂದ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾನೆ. ಆ ಪುತ್ರರಲ್ಲಿ ವರ್ಣ ಭೇದವಿರುವುದಿಲ್ಲ. ಆದರೂ ಅವರಲ್ಲಿ ಒಬ್ಬ ಬ್ರಾಹ್ಮಣ, ಒಬ್ಬ ಕ್ಷತ್ರಿಯ, ಒಬ್ಬ ವೈಶ್ಯ ಮತ್ತು ಒಬ್ಬ ಶೂದ್ರ ಹೇಗಾದರು? ಅವರೆಲ್ಲರೂ ಒಬ್ಬನೇ ತಂದೆಯಿಂದ ಜನಿಸಿದವರು. ಆದರೂ ಈ ಭೇದ ಹೇಗೆ ಉಂಟಾಯಿತು? ಈ ವರ್ಗೀಕರಣ ಸರಿಯಲ್ಲ.

೮.೧    ಜಗತ್ತಿನಲ್ಲಿ ಮಾನವರಂತೆಯೇ ಹಸು, ಆನೆ, ಕುದುರೆ, ಜಿಂಕೆ, ಹುಲಿ ಚಿರತೆ ಇತ್ಯಾದಿ ಪ್ರಾಣಿಗಳಿವೆ. ನಾವು ಅವುಗಳನ್ನು ಆಯಾ ಹೆಸರಿನಲ್ಲಿ ಕರೆಯುತ್ತೇವೆ, ಮನುಷ್ಯರನ್ನು ಕರೆಯುವಂತೆ ಬ್ರಾಹ್ಮಣ ಇತ್ಯಾದಿ ಹೆಸರುಗಳಿಂದ ಕರೆಯುವುದಿಲ್ಲ.

೮.೨    ಹಸು, ಎಮ್ಮೆ, ಕುದುರೆ ಇತ್ಯಾದಿ ಪ್ರಾಣಿಗಳ ಯೋನಿ, ಲಿಂಗ, ಬಣ್ಣ, ಆಕಾರ, ಮಲ, ಮೂತ್ರ, ವಾಸನೆ, ಶಬ್ದಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಬ್ರಾಹ್ಮಣ ಮತ್ತು ಇತರ ವರ್ಣಗಳ ಮಾನವರ ಯೋನಿ, ಲಿಂಗ, ಆಕಾರ, ಮಲ, ಮೂತ್ರ ಇತ್ಯಾದಿಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಎಲ್ಲ ಹಸುಗಳ ಹೆಜ್ಜೆ ಗುರುತುಗಳು ಒಂದೇ ರೀತಿ, ಎಲ್ಲ ಹುಲಿಗಳ ಹೆಜ್ಜೆಗುರುತುಗಳು ಒಂದೇ ರೀತಿ, ಎಲ್ಲ ಕುದುರೆಗಳ ಹೆಜ್ಜೆಗುರುತುಗಳು, ಒಂದೇ ರೀತಿ ಇರುತ್ತವೆ. ಹಾಗೆಯೆ ಎಲ್ಲ ಮಾನವರ ಹೆಜ್ಜೆಗುರುತುಗಳೂ ಒಂದೇ ರೀತಿ ಇರುತ್ತವೆ. ಅವುಗಳಲ್ಲಿ ಇದು ಬ್ರಾಹ್ಮಣನದು, ಇದು ಕ್ಷತ್ರಿಯನದು, ಇದು ಶೂದ್ರನದು ಎಂದು ಗುರುತಿಸಲು ಬರುವುದಿಲ್ಲ. ಆದ್ದರಿಂದ ಎಲ್ಲಾ ಮಾನವರೂ ಒಂದೇ ವರ್ಣದವರು. ಅವರಲ್ಲಿ ಭೇದ ಭಾವ ಸಲ್ಲದು.

೮.೩    ಅದೇ ರೀತಿ ಹಂಸ, ಪಾರಿವಾಳ, ಗಿಳಿ, ನವಿಲು ಇತ್ಯಾದಿ ಪಕ್ಷಿಗಳ ಆಕಾರ, ಬಣ್ಣ ಕೊಕ್ಕು ಇತ್ಯಾದಿಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ರೀತಿಯ ಭೇದ ಭಾವಗಳಿರುವುದಿಲ್ಲ.

೮.೪    ಆಲ, ಬಕುಲ, ಮುತ್ತುಗ, ಅಶೋಕ, ಹೊಂಗೆ, ನಾಗ ಕೇಸರ, ಬಾಗಿಯ, ಸಂಪಿಗೆ ಇತ್ಯಾದಿ ಮರಗಳ ಬೊಡ್ಡೆ, ಎಲೆ, ಹೂವು, ಹಣ್ಣು, ಸಿಪ್ಪೆ, ಬೀಜ, ರಸ, ವಾಸನೆ, ಬಣ್ಣ ಮತ್ತು ಆಕಾರಗಳಲ್ಲಿ ವ್ಯತ್ಯಾಸವಿರುವುದನ್ನು ನಾವು ನೋಡಬಹುದು.

ಆದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ದೇಹ ಮತ್ತು ಅದರ ಭಾಗಗಳಾದ ಚರ್ಮ, ಮಾಂಸ, ರಕ್ತ, ಎಲುಬು, ವೀರ್ಯ, ಮಲ, ಬಣ್ಣ ಮತ್ತು ಆಕಾರಗಳಲ್ಲಾಗಲಿ ಅಥವಾ ಅವರ ಜೀವನ ಚಕ್ರದಲ್ಲಾಗಲಿ ಯಾವ ವ್ಯತ್ಯಾಸವೂ ಇಲ್ಲ.

೮.೫    ಸುಖ, ದುಃಖ, ಜೀವನ, ಬುದ್ಧಿ, ವ್ಯಪಾರ ವ್ಯವಹಾರ, ಜನನ, ಮರಣ, ಭಯ, ಮೈಥುನ ಇತ್ಯಾದಿ ವಿವಿಧ ಕ್ರಿಯಾ ಕಲಾಪಗಳಲ್ಲಿ ನಿಶ್ಚಯವಾಗಿಯೂ ಬ್ರಾಹ್ಮಣ ಮತ್ತು ಇತರೆ ವಿವಿಧ ಕ್ರಿಯಾ ಕಲಾಪಗಳಲ್ಲಿ ನಿಶ್ಚಯವಾಗಿಯೂ ಬ್ರಾಹ್ಮಣ ಮತ್ತು ಇತರೆ ವರ್ಣಗಳಲ್ಲಿ ಯಾವುದೇ ಭೇದವಿಲ್ಲ.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಸುಖ ದುಃಖಗಳು ಜೀವಾವಧಿ ಬುದ್ಧಿ, ಕ್ರಿಯಾ ಶಕ್ತಿ, ವರ್ತನೆ, ಹುಟ್ಟು, ಸಾವು, ಭಯ, ಚಿಕಿತ್ಸೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ, ಸಾಮತ್ಯೆಯೇ ಇದೆ.

೮.೬    ನಾಲ್ಕು ವರ್ಣಗಳ ಉತ್ಪನ್ನದ ವಿರುದ್ಧ ಇನ್ನೂ ಎರಡುವಾದಗಳಿವೆ:

೮.೬.೧ ಒಂದು ವೃಕ್ಷದಿಂದ ಉತ್ಪನ್ನವಾದ ಹಣ್ಣುಗಳು ಮರದ ಶಿರೋಭಾಗದಲ್ಲಿ ಬಿಟ್ಟಿರಲಿ, ನಡುಭಾಗದಲ್ಲಿ ಬಿಟ್ಟಿರಲಿ ಅಥವಾ       ಮರದ ಬುಡದಲ್ಲೇ ಬಿಟ್ಟರಲಿ ಅವುಗಳಲ್ಲಿ ವರ್ಣಭೇದವಿರುವುದಿಲ್ಲ. ಉದಾಹರಣಗೆ ಹಲಸಿನ ಮರವನ್ನು ತೆಗೆದುಕೊಳ್ಳಬಹುದು. ಆ ವೃಕ್ಷದ ಹಣ್ಣುಗಳು ಅವು ಮರದ ಶಿರೋಭಾಗದಲ್ಲಿ ಉತ್ಪನ್ನವಾಗಿರಲಿ ನಡು ಭಾಗದಲ್ಲಿ ಅಥವಾ ಬುಡದಲ್ಲಿ ಉತ್ಪನ್ನವಾಗಿರಲಿ ಅವುಗಳಲ್ಲಿ ಯಾವ ವರ್ಣಭೇದವಾಗಲಿ, ವ್ಯತ್ಯಾಸವಾಗಲಿ ಇರುವುದಿಲ್ಲ, ಹಾಗೆಯೇ ಜೂರ ಅಥವಾ ಅತ್ತಿಹಣ್ಣಿನ ಮರದ ಹಣ್ಣುಗಳೂ, ಅವು ಮರದ ಯಾವುದೇ ಭಾಗದಲ್ಲಿ ಬಿಟ್ಟವಾದರೂ ಒಂದೇ ರೀತಿಯಲ್ಲಿ ಇರುತ್ತವೆ. ಶಿರದ ಭಾಗದಲ್ಲಿ ಬಿಟ್ಟ ಹಣ್ಣು ಬ್ರಾಹ್ಮಣ ಹಣ್ಣಿಂದಾಗಲಿ, ನಡುಭಾಗದಲ್ಲಿ ಬಿಟ್ಟ ಹಣ್ಣು ಕ್ಷತ್ರಿಯ ಹಣ್ಣೆಂದಾಗಲಿ, ಕೆಳಗಿನ ಬುಡದಲ್ಲಿ ಬಿಟ್ಟ ಹಣ್ಣು ಶೂದ್ರ ಹಣ್ಣೆಂದಾಗಲಿ ವರ್ಣೇಕೃತ ಗೊಂಡಿಲ್ಲ; ಅವೆಲ್ಲಾ ಸಮಾನ. ಹಾಗೆಯೇ ಮಾನವರೆಲ್ಲಾ ಒಬ್ಬನೇ ಪುರುಷ (ಸೃಷ್ಟಿಕರ್ತ) ನಿಂದ ಉತ್ಪನ್ನವಾದವರಾದುದರಿಂದ ಅವರಲ್ಲಿ ಭೇದವಿರಲು ಸಾಧ್ಯವಿಲ್ಲ.

೮.೬.೨ ಭೇದ ಭಾವ ಎಣಿಸುವುದರಲ್ಲಿ ಇನ್ನೊಂದು ದೋಷವೂ ಇದೆ. ಬ್ರಾಹ್ಮಣನು ಪುರುಷನ ಬಾಯಿಯಿಂದ ಹುಟ್ಟದವನಾದರೆ ಬ್ರಾಹ್ಮಣ ಸ್ತ್ರೀಯೂ ಬಾಯಿಯಿಂದಲೇ ಹುಟ್ಟಿದವಳಿರಬೇಕಲ್ಲವೆ? ಆದ್ದರಿಂದ ಬ್ರಾಹ್ಮಣ ಕನ್ಯೆಯನ್ನು ಮದುವೆಯಾಗುವ ಬ್ರಾಹ್ಮಣ ಪುರುಷನು ತನ್ನ ತಂಗಿಯನ್ನೇ ಮದುವೆಯಾದಂತಲ್ಲವೆ? ಇದು ಲೋಕ ಮಾನ್ಯ ವಲ್ಲದ ಆಚರಣೆಯಾಗುತ್ತದೆ. ಆದ್ದರಿಂದ ಬ್ರಾಹ್ಮಣತ್ವವು ಅನಿಶ್ಚಿತ.

. ಭಿನ್ನ ವೃತ್ತಿಗಳು ಚಾತುರ್ವರ್ಣ್ಯಕ್ಕೆ ಕಾರಣ.

ಯುಧಿಷ್ಠಿರನು ಕೇಳಿದ ಪ್ರಶ್ನೆಗೆ ಉತ್ತರವಾಗಿ ವೈಶಂಪಾಯನನು ನಿರ್ದಿಷ್ಟ ನಡತೆಗೆ ಅನುಗುಣವಾಗಿ ನಾಲ್ಕು ವರ್ಣಗಳು ವಿಭಜನೆಗೊಂಡಿವೆ ಎಂದನು. “ಪಾಂಡು ಪುತ್ರನೂ ಜ್ಞಾನಿಯೂ ಆದ ಯುಧಿಷ್ಠಿರನು ವೈಶಂಪಾಯನ ಋಷಿಯ ಬಳಿಗೆ ಬಂದು ಕೈಜೋಡಿಸಿ ನಿಂತು ಒಂದು ಪ್ರಶ್ನೆ ಕೇಳಿದ”. (೩೨)

“ಬ್ರಾಹ್ಮಣ ಯಾರು? ಅವನು ಹೇಗೆ ಬ್ರಾಹ್ಮಣನಾದ? ಬ್ರಾಹ್ಮಣನ ಲಕ್ಷಣಗಳೇನು? ವಿಶದ ಪಡಿಸಿ.” (೩೩)

೯.೧ ವೈಶಂಪಾಯನ ಹೇಳಿದ : ಬ್ರಾಹ್ಮಣನ ಪ್ರಥಮ ಲಕ್ಷಣ ಸೇವೆ ಮತ್ತು ಕ್ಷಮಾ ಗುಣ. ಅವನು ಅಹಿಂಸಾವಾದಿ ಮತ್ತು ಸಸ್ಯಾಹಾರಿ. (೩೪)

೯.೨ ಬ್ರಾಹ್ಮಣನ ಎರಡನೆ ಲಕ್ಷಣವೇನೆಂದರೆ ಪರದ್ರವ್ಯ ಅದು ಮನೆಯಲ್ಲಿರಲಿ, ಬೀದಿಯಲ್ಲಿರಲಿ ಅದಕ್ಕೆ ಆಸೆ  ಪಡದಿರುವುದು. (೩೫)

೯.೩ ಬ್ರಾಹ್ಮಣನ ಮೂರನೆ ಲಕ್ಷಣ ಯಾರು ಕ್ರೌರ್ಯ ರಾಹಿತ್ಯ ನೂ ನಿಸ್ವಾರ್ಥಿಯೂ ಮತ್ತು ಸಂಸಾರದಲ್ಲಿ ನಿರಾಸಕ್ತನೂ ಆಗಿರುತ್ತಾನೋ ಅವನು ಬ್ರಾಹಣ ಎನಿಸಿಕೊಳ್ಳುತ್ತಾನೆ. (೩೬)

೯.೪ ದೇವ, ಮಾನವ ಅಥವಾ ತಿರ್ಯಂಗ್ ಯೋನಿಯಲ್ಲಿ ಜನಿಸಿದ ಸ್ತ್ರೀ ಪುರುಷರಾರೇ ಇರಲಿ ಅವರು ಸಾಂಸಾರಿಕ ವಿಷಯ ಹಾಗೂ ಮೈಥುನಾದಿ ಭೋಗಗಳಲ್ಲಿ ನಿರಾಸಕ್ತರಾಗಿರುವುದೇ ಬ್ರಾಹ್ಮಣತ್ವದ ನಾಲ್ಕನೆ ಲಕ್ಷಣ. (೩೭)

೯.೫ ಸತ್ಯ, ದಯಾ, ಇಂದ್ರಿಯಾ ನಿಗ್ರಹ, ಸರ್ವಪ್ರಾಣಿಗಳಲ್ಲಿ ದಯಾಭಾವ ಮತ್ತು ತಪಸ್ಸು ಪುಣ್ಯ ವಿಶೇಷಗಳಾಗಿವೆ. ಅವುಗಳಲ್ಲಿ ತೊಡಗಿರುವುದೇ ಬ್ರಾಹ್ಮಣತ್ವದ ಐದನೆ ಲಕ್ಷಣ. (೩೮)

ಯುದಿಷ್ಠಿರನೆ, ಮೇಲಿನ ಉಪಯುಕ್ತ ಪಂಚ ಲಕ್ಷಣಗಳಲ್ಲಿ ಸಮನ್ವಿತನಾದ ದ್ವಿಜನನ್ನು ನಾನು ಬ್ರಾಹ್ಮಣನೆಂದು ಕರೆಯುತ್ತೇನೆ, ಉಳಿದವರು ಶೂದ್ರರು. (೩೯)

ಜಾತಿ, ವಂಶಪರಂಪರೆ ಅಥವಾ ಧಾರ್ಮಿಕ ಕ್ರಿಯೆಗಳಿಂದ ಯಾವನೂ ಬ್ರಾಹ್ಮಣನಾಗಲಾರ, ಒಬ್ಬ ಚಾಂಡಾಲನಾದರೂ ಶೀಲ ಸಂಪನ್ನನಾಗಿ ಸದಾಚಾರಿಯಾಗಿದ್ದರೆ ಅವನು ಬ್ರಾಹ್ಮಣನಾಗುತ್ತಾನೆ. ಸಾರಾಂಶವೇನೆಂದರೆ ಬ್ರಾಹ್ಮಣತ್ವಕ್ಕೆ ಕಾರಣ ಜನ್ಮ, ಜಾತಿ, ಉಚ್ಛ ಕುಲ ಪರಂಪರೆ, ಅಥವಾ ಧಾರ್ಮಿಕ ಕ್ರಿಯೆಗಳಲ್ಲ; ಮೇಲೆ ಹೇಳಲಾದ ಸದಾಚರಣೆಗಳು (೪೦)

ವೈಶಂಪಾಯನನು ಮುಂದುವರಿಸುತ್ತಾನೆ :

“ಯುಧಿಷ್ಠಿರನೆ ಆಲಿಸು, ಪ್ರಾಚೀನ ಕಾಲದಲ್ಲಿ ಜಗತ್ತಿನಲ್ಲೆಲ್ಲಾ ಒಂದೇ ವರ್ಣವಿತ್ತು. ಚಾತುರ್ವರ್ಣ್ಯ ವ್ಯವಸ್ಥೆಯು ವ್ಯಕ್ತಿಯ ಕರ್ಮ ಎಂದರೆ ವೃತ್ತಿಯ ಆಧಾರದ ಮೇಲೆ ನಿಶ್ಚಿತವಾಯಿತು. (೪೧)

ಎಲ್ಲ ಮಾನವರು ಸಮಾನ. ಅವರು ಮಾತೃಗರ್ಭದಿಂದ ಉಗಮವಾದವರು. ಎಲ್ಲ ವರ್ಣೀಯರು ಮಲ ಮೂತ್ರಗಳನ್ನು ಒಂದೇ ರೀತಿಯಲ್ಲಿ ವಿಸರ್ಜಿಸುತ್ತಾರೆ. ಅವರಿಗೆ ಒಂದೇ ರೀತಿಯ ಇಂದ್ರಿಯಗಳಿದ್ದು ಅವು ಒಂದೇ ರೀತಿಯ ವಸ್ತುಗಳಿಗಾಗಿ ಹಂಬಲಿಸುತ್ತವೆ. ಆದ್ದರಿಂದ “ಸದಾಚಾರ ಹಾಗೂ ಸದ್ಗುಣಗಳಿಂದ ಮಾನವನು ದ್ವಿಜನಾಗುತ್ತಾನೆ”. (೪೨)

ಯಾವನೇ ಒಬ್ಬ ಆರಂಭದಲ್ಲಿ ಶೂದ್ರನಾಗಿದ್ದರೂ ಶೀಲ ಸಂಪನ್ನನಾಗಿ ಸದಾಚಾರಶೀಲನಾಗಿ ಮುನ್ನಡೆದರೆ ಅವನಿಗೆ ಬ್ರಾಹ್ಮಣತ್ವ ಪ್ರಾಪ್ತವಾಗುತ್ತದೆ. ಮತ್ತು ಯಾವನೇ ಒಬ್ಬ ಆರಂಭದಲ್ಲಿ ಬ್ರಾಹ್ಮಣನಾಗಿದ್ದರೂ ಸದಾಚಾರ ಮತ್ತು ಸದ್ಗುಣ ವಿಹೀನನಾದರೆ ಅವನು ಶೂದ್ರನಿಗಿಂತಲೂ ಕೆಳಗಿನವನಾಗಿ ನಿಕೃಷ್ಠನಾಗುತ್ತಾನೆ. (೪೩)

ಇದು ವೈಶಂಪಾಯನ ಉವಾಚ : “ಓ ಯುಧಿಷ್ಠಿರ ಪಂಚೇಂದ್ರಿಯ ಮಹಾಸಾಗರವನ್ನು ಒಬ್ಬ ಶೂದ್ರನಾದವನು ಯಶಸ್ವಿಯಾಗಿ ದಾಟಿ ದಡವನ್ನು ಮುಟ್ಟಿದರೆ ಅವನಿಗೆ ನಿಸ್ಸಂಕೋಚವಾಗಿ ಪ್ರಶಸ್ತಿ, ದಾನದತ್ತಿಗಳನ್ನು ಪ್ರಧಾನ ಮಾಡಬೇಕು.” (೪೪)

“ಹೇ ರಾಜನೆ, ಯಾರು ತಮ್ಮ ಜೀವನದಲ್ಲಿ ಧರ್ಮ (ವರ್ಣಧರ್ಮವನ್ನಲ್ಲ ಮಾನವ ಧರ್ಮ) ವನ್ನು ಪಾಲಿಸುತ್ತಾರೋ, ಯಾರು ತಮ್ಮ ಜೀವನವನ್ನು ಇತರರಿಗಾಗಿ ಮೀಸಲಿಟ್ಟರುತ್ತಾರೋ ಮತ್ತು ಯಾರು ಹಗಲು ರಾತ್ರಿ ಎನ್ನದೆ ಎಲ್ಲ ಕಷ್ಟಗಳನ್ನು ಸಹಿಷ್ಣತೆಯಿಂದ ಸ್ವೀಕರಿಸುವರೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ಗುರುತಿಸುತ್ತಾರೆ.” (೪೫)

“ಯಾವ ಕೌಟುಂಬಿಕ ಮೋಹವನ್ನು ಪರಿತ್ಯಜಿಸಿ ಸಂಸಾರಿಕ ಕಾಮನೆಗಳಲ್ಲಿ ಅನಾಸಕ್ತನಾಗಿರುವನೋ ಮತ್ತು ಯಾರು ಮೋಕ್ಷಾಕಾಂಕ್ಷಿ (ಪುನರ್ಜನ್ಮದಿಂದ ಬಿಡುಗಡೆ) ಯಾಗಿರುವನೋ ಅವನು ಬ್ರಾಹ್ಮಣ.” (೪೬)

“ಯಾರು ವ್ಯಕ್ತಿ ಅಹಿಂಸೆ, ನಿರ್ಮಮತೆ, ನಿಸ್ವಾರ್ಥಗಳನ್ನು ತನ್ನ ಜೀವನದಲ್ಲಿ ಪಾಲಿಸುವನೋ, ದುಷ್‍ಕೃತ್ಯಗಳಿಂದ ಮಿಮುಖನಾಗಿರುವನೋ ಹಾಗೂ ಯಾರು ರಾಗ ದ್ವೇಷಗಳಿಂದ ನಿವೃತ್ತನಾಗಿರುವನೋ ಅಂಥವನಲ್ಲಿ ಬ್ರಾಹ್ಮಣ ಲಕ್ಷಣಗಳನ್ನು ಕಾಣಬಹುದು.” (೪೭)

“ಕ್ಷಮಾಗುಣ, ದಯೆ, ಜಿತೇಂದ್ರಿಯತ್ವ, ದಾನ, ಸತ್ಯ ಶುದ್ಧತೆ, ವಿದ್ಯೆ ವಿಜ್ಞಾನ ಇತ್ಯಾದಿ ಗುಣಗಳಲ್ಲಿ ಸದ್ಭಾವನೆ ಹೊಂದುವವನೇ ಬ್ರಾಹ್ಮಣ.” (೪೮)

“ವೇದ ಪಾರಂಪಗತನಾದರೂ ಆತ್ಮ ಸಂಯಮಿಯಲ್ಲ ದವನು, ತಿನ್ನಬಾರದುದನ್ನು ತಿನ್ನುವವನು, ಅನೈತಿಕ ವ್ಯಾಪರ ವ್ಯವಹಾರಗಳಲ್ಲಿ ತೊಡಗಿರುವವನು ಆಗಿದ್ದರೆ ಅವನಿಗಿಂತ ಗಾಯತ್ರಿ ಮಂತ್ರದ ಜ್ಞಾನ ಸಾರವನ್ನು ಪಡೆದ ಅತ್ಮ ಸಂಯಮಿಯು ಶ್ರೇಷ್ಠನಾಗುತ್ತಾನೆ.” (೪೯)

“ಬ್ರಹ್ಮಚರ್ಯವನ್ನು ಪಾಲಿಸುತ್ತಾ ಎಲ್ಲೂ ನೆಲೆನಿಲ್ಲದೆ ಸಂಚರಿಸುವವನು ಬ್ರಾಹ್ಮಣ. ಅವನು ಅದನ್ನು ಒಂದು ರಾತ್ರಿ ಪಾಲಿಸಿದರೂ ಸಾಕು. ಸಾವಿರಾರು ಯಜ್ಞಕರ್ಮಗಳಿಗಿಂತ ಅದು ಹೆಚ್ಚು ಪರಿಣಾಮ ಕಾರಿ.” (೫೦)

“ಯಾರು ವೇದಗಳ ತಿರುಳನ್ನು ತಿಳಿದಿರುವನೊ, ಯಾರು ಪುಣ್ಯ ಜಲದಲ್ಲಿ ಮಿಂದಿರುವನೋ ಮತ್ತು ಯಾರು ಧರ್ಮಮಾರ್ಗದಲ್ಲಿ ನಡೆಯುವನೋ ಅವನು ಬ್ರಾಹ್ಮಣ.” (೫೧)

“ದ್ವಿಜರ ಅಜ್ಞಾನದ ವಿನಾಶಕ್ಕಾಗಿ ನನ್ನ (ಅಶ್ವಘೋಷ) ಮೂಲಕ ಉಪಯುಕ್ತವಾದ ಯಾವ ವಿಚಾರಗಳು ವ್ಯಕ್ತವಾಗಿವೆಯೋ ಅವನ್ನು ಪ್ರಾಂಜಲ ಮನಸ್ಸಿನ ದ್ವಿಜರು, ಸರಿ ಎನಿಸಿದರೆ, ಸ್ವೀಕರಿಸಬೇಕು. ಅವರಿಗೆ ಅವು ತಪ್ಪು ಎನಿಸಿದರೆ ಅವರು ಡೋಲಾಯಮಾನ ಸ್ಥಿತಿಯಲ್ಲಿ ಮುಂದುವರಿಯಬಹುದು.” (೫೩)

ಈ ಕೃತಿಯ ಕರ್ತೃ ಸಿದ್ಧಾಚಾರ್ಯ ಅಶ್ವಘೋಷ.