ಪ್ರಾಚೀನ ಭಾರತದಲ್ಲಿ ಬ್ರಾಹ್ಮಣ ಮತ್ತು ಬೌದ್ಧ ತತ್ವಗಳ ನಡುವಿನ ಸಂವಾದ ಮತ್ತು ಸಂಘರ್ಷಗಳು ಭಾರತೀಯ ಇತಿಹಾಸದ ಗಣನೀಯ ಮೈಲುಗಲ್ಲುಗಳಾಗಿವೆ. ಆದರೆ ಆ ಬಗ್ಗೆ ಐತಿಹಾಸಿಕ ದಾಖಲೆಗಳು ಬಹಳ ಅಪರೂಪವಾಗಿ ಮಾತ್ರ ಲಭ್ಯ. ಈ ಹಿನ್ನೆಲೆಯಲ್ಲಿ ಅಶ್ವಘೋಷನ “ವಜ್ರಸೂಚಿ” ಒಂದು ಅಪೂರ್ವವಾದ ವೈಚಾರಿಕ ಕೃತಿಯಾಗಿದೆ. ಬ್ರಾಹ್ಮಣ ಮತ್ತು ಬೌದ್ಧ ಸಿದ್ದಾಂತಗಳಲ್ಲಿ ಸಮಾನ ಅಂಶಗಳು ಸಾಕಷ್ಟು ಇವೆ. ಹಾಗೆಯೇ ವಿರೋಧಗಳೂ ಇವೆ. ವಿರೋಧಗಳನ್ನೇ ಒತ್ತಿ ಹೇಳಿ ಅವುಗಳನ್ನು ರಾಜಕೀಯ ವಿಧ್ವಂಸಕ ಕಾರ್ಯಗಳಿಗೆ ಬಳಸಿಕೊಂಡಿರುವುದೂ ಉಂಟು.

ಈ ಎರಡು ತಾತ್ವಿಕ ಪಂಥಗಳ ನಡುವಿನ ಚರ್ಚೆಗಳು ಅನೇಕ ಸಂದರ್ಭಗಳಲ್ಲಿ ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧವಾಗಿದ್ದರೂ ನೈತಿಕವಾಗಿ ಅವುಗಳಲ್ಲಿ ಚರ್ಚೆಗೆ ಅವಕಾಶ ತುಂಬಾ ಕಡಿಮೆ. ಸಾಮಾಜಿಕ ತತ್ವ ಮೀಮಾಂಸೆಯ ಹಿನ್ನೆಲೆಯಲ್ಲಿ ವರ್ಣ ಮತ್ತು ಜಾತಿಗಳ ಪ್ರಸ್ತಾಪ ಎದ್ದು ಕಾಣುತ್ತದೆ ಬ್ರಾಹ್ಮಣ ವರ್ಣಕ್ಕೆ. ಸಮಾಜದಲ್ಲಿ ಅತ್ಯಂತ ಶ್ರೇಷ್ಠಸ್ಥಾನ ಸಲ್ಲುತ್ತದೆ ಎಂಬ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಾ ಬಂದಿವೆ.

ಅಶ್ವಘೋಷನು ಪ್ರತಿಭಾನ್ವಿತ ಬೌದ್ಧ ವಿದ್ವಾಂಸನಾಗಿದ್ದು ಅವನು ಬುದ್ಧ ಚರಿತ ಮತ್ತು ಸೌಂದರ ನಂದ ಎಂಬ ಮಹಾಕಾವ್ಯಗಳ ಕರ್ತೃವಾಗಿ ಪ್ರಖ್ಯಾತನಾಗಿದ್ದಾನೆ. ಅವನು ಬ್ರಾಹ್ಮಣ ವರ್ಣದ ಶ್ರೇಷ್ಠತೆಯ ಬಗ್ಗೆ ಎತ್ತಿದ ಬೌದ್ಧಿಕ ಚರ್ಚೆ ಬ್ರಾಹ್ಮಣ ಪಂಡಿತರಿಗೆ ಸವಾಲನ್ನೊಡ್ಡಿತು ಮತ್ತು ವೈಚಾರಿಕ ಚಿಂತನೆಗೆ ನಾಂದಿಯನ್ನು ಹಾಡಿತು.

ವಜ್ರಸೂಚಿ ಯ ಮೂಲ ಸಂಸ್ಕೃತ ಪಠ್ಯ ೧೮೨೯ರಲ್ಲಿ ನೇಪಾಲದ ಒಬ್ಬ ವೃದ್ಧನಾದ ಬೌದ್ಧ ವಿದ್ವಾಂಸನಿಂದ ಬಿ.ಎಚ್. ಹಡ್‍ಸನ್ (B.H. Hudson)ನಿಗೆ ದೊರೆಯಿತು. ಅವನು ಅದನ್ನು ಇಂಗ್ಲಿಷ್‍ಗೆ ಅನುವಾದ ಮಾಡಿ ರಾಯಲ್ ಏಶಿಯಾಟಿಕ್ ಸೊಸೈಟಿಯ ನಡವಳಿಕೆಗಳ ಮೂರನೆ ಸಂಪುಟದಲ್ಲಿ ಪ್ರಕಟಿಸಿದ. ಅನಂತರ ಅದು ಬೇರೆ ಬೇರೆ ಸಂಪುಟಗಳಲ್ಲಿ ಪ್ರಕಟವಾಗಿದೆ.

ಭಾರತೀಯ ವಿದ್ವಾಂಸರುಗಳಾದ ಎಸ್.ಕೆ. ಮುಖರ್ಜಿ, ಆರ್.ಪಿ. ದ್ವಿವೇದಿ ಹಾಗೂ ಲಲ್ಲಂಜೀ ಗೋಪಾಲ್ ಅವರು ‘ವಜ್ರಸೂಚಿ’ ಯ ಮೂಲ ಪಾಠ ಅನುವಾದ ಹಾಗೂ ವ್ಯಾಖ್ಯಾನಗಳಿಂದ ಕೂಡಿದ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಅದು ಇದುವರೆಗೂ ಕನ್ನಡಲ್ಲಿ ಮೂಡಿ ಬಂದಂತಿಲ್ಲ. ಬಂದಿದ್ದರೂ ನನ್ನ ಕಣ್ಣಿಗಂತೂ ಬಿದ್ದಿಲ್ಲ.

‘ವಜ್ರಸೂಚಿ’ ಕೃತಿಯಲ್ಲಿ ಅದರ ಕರ್ತೃವಿನ ಬಗ್ಗೆ ಹೆಚ್ಚಿನ ವಿವರಗಳು ದೊರೆಯುತ್ತಿಲ್ಲ, ಅಶ್ವಘೋಷನು ಒಬ್ಬ ಬೌದ್ಧ ಧರ್ಮೀಯನಾಗಿದ್ದ. ‘ಮಂಜುನಾಥ’ ಅಥವಾ ‘ಮಂಜುಘೋಷ’ ಎಂಬುದು ಅವನ ಇಷ್ಟ ದೇವತೆ. ಕೃತಿಯ ಅಂತ್ಯ ವಾಕ್ಯದಲ್ಲಿ ‘ಸಿದ್ಧಾಚಾರ್ಯ ಅಶ್ವಘೋಷ’ ಎಂದು ಲೇಖಕನು ತನ್ನನ್ನು ಕರೆದುಕೊಂಡಿದ್ದಾನೆ. ಪಾಶ್ಚಾತ್ಯ ಪ್ರಪಂಚಕ್ಕೆ ಈ ಕೃತಿಯನ್ನು ಪರಿಚಯಿಸಿದ ಹಡ್‍ಸನ್, ‘ಅಶ್ವಘೋಷನು ನೇಪಾಲದ ಬೌದ್ಧ ಧರ್ಮದ ಒಬ್ಬ ಮಹಾಪಂಡಿತ ಮತ್ತು ಸಂತ, ಎಂದು ಹೇಳುತ್ತಾನೆ. ಅಶ್ವಘೋಷನ ಹೆಸರು ಚೈನೀಸ್ ಭಾಷೆಯಲ್ಲಿ ‘ಮಾಮಿಂಗ್’ (ಕುದುರೆಯ ಧ್ವನಿ) ಎಂದು ಅನುವಾದಗೊಂಡು ಪ್ರಚಲಿತವಾಗಿದೆ. ಜಪಾನೀಸ್ ವಿಶ್ವಕೋಶದಲ್ಲಿ ಅವನನ್ನು ಶಾಕ್ಯಮುನಿಯ ನಂತರ ಅವತರಿಸಿದ ಹನ್ನೆರಡನೆಯ ‘ಬೋಧಿಸತ್ವ’ ಎಂದು ವಿವರಿಸಲಾಗಿದೆ. ಪ್ರಾಚೀನ ಪರಂಪರೆಯಲ್ಲಿ ಒಬ್ಬರಿಗಿಂತ ಹೆಚ್ಚು ಅಶ್ವಘೋಷರ ಹೆಸರುಗಳನ್ನು ಹೇಳಲಾಗುತ್ತಿದೆ. ಆದರೆ ವಿದ್ವಾಂಸರು ಐತಿಹಾಸಿಕವಾಗಿ ಬೌದ್ಧ ವಿದ್ವಾಂಸ, ತತ್ವಜ್ಞಾನಿ ಮತ್ತು ಕವಿಯಾಗಿದ್ದ ಒಬ್ಬ ಅಶ್ವಘೋಷನನ್ನು ಮಾತ್ರ ಎತ್ತಿ ಹಿಡಿಯುತ್ತಾರೆ.

ಅಶ್ವಘೋಷನ ಜೀವನದ ಬಗ್ಗೆ ಕವಿದಿದ್ದ ಮುಸುಕನ್ನು ಇತ್ತೀಚಿನ ಸಂಶೋಧಕರು ಪರಿಹರಿಸುತ್ತಾ ಬಂದಿದ್ದಾರೆ. ಭಾರತಕ್ಕೆ ಸುಮಾರು ಕ್ರಿ.ಶ. ೭೦೦ರಲ್ಲಿ ಆಗಮಿಸಿದ್ದ ಚೀನಾದ ಪ್ರವಾಸಿ ಐ-ತ್ಸಿಂಗ್ ತನ್ನ ಪ್ರವಾಸ ಕಥನದಲ್ಲಿ ಅಶ್ವಘೋಷನ ಹೆಸರನ್ನು ಪ್ರಸ್ತಾಪಿಸಿದ್ದಾನೆ. ಅವನು ಗುಪ್ತರ ಕಾಲದಲ್ಲಿದ್ದ ಕಾಳಿದಾಸನಿಗಿಂತ ಹಿಂದಿನವನೆಂದು ತಿಳಿಯಲಾಗಿದೆ, ಬೌದ್ಧ ಧರ್ಮದ ಇತಿಹಾಸದಲ್ಲಿ ಅವನು ಪಾರ್ಶ್ವನ ನಂತರ ಆದರೆ ನಾಗಾರ್ಜುನ ಮತ್ತು ಆರ್ಯದೇವರಿಗಿಂತ ಮುನ್ನ ಕಾಣಿಸಿಕೊಳ್ಳುತ್ತಾನೆ. ಕುಶಾನ ದೊರೆಯಾದ ಕನಿಷ್ಕನ ಆಸ್ಥಾನದೊಡನೆ ಅಶ್ವಘೋಷ ಸಂಬಂಧವುಳ್ಳವನಾಗಿದ್ದ. ಅಷ್ಟೇ ಅಲ್ಲ, ಅವನು ಕನಿಷ್ಕನ ಆಧ್ಯಾತ್ಮಿಕ ಉಪದೇಶಕನೂ ಆಗಿದ್ದ. ಇದರಿಂದ ಅಶ್ವಘೋಷನ ಕಾಲವನ್ನು ತೀರ್ಮಾನಿಸುವುದು ಸಾಧ್ಯವಾಗಿದೆ. ಅವನು ಕನಿಷ್ಕನ ಸಮಕಾಲೀನನಾಗಿದ್ದ ಮಾತೃಚೇತನ ಮೇಲೂ ಪ್ರಭಾವ ಬೀರಿದ. ಕನಿಷ್ಕನ ಕಾಲ ಕ್ರಿ.ಶ. ೭೮ರಿಂದ ಕ್ರಿ.ಶ. ೧೫೦ರ ನಡುವಿನದು ಎಂದು ಇತ್ತೀಚಿನ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಕ್ರಿ.ಶ. ಐದನೆ ಶತಮಾನದ ವೇಳೆಗೆ ಅಶ್ವಘೋಷನ ೧) ಸೂತ್ರಾಲಂಕಾರ ೨) ಬುದ್ಧ ಚರಿತ ಮತ್ತು ೩) ಮಹಾಯಾನ ಶ್ರದ್ಧೋತ್ಪಾದ ಇತ್ಯಾದಿ ಕೃತಿಗಳು ಅನುಭಾಷೆಗಳಿಗೆ ಭಾಷಾಂತರಗೊಂಡಿದ್ದವು. ಆ ಕೃತಿಗಳಲ್ಲಿ ಕ್ರಿ.ಶ. ಒಂದು ಮತ್ತು ಎರಡನೆ ಶತಮಾನಗಳ ಸಾಂಪ್ರದಾಯಿಕ ಬ್ರಾಹ್ಮಣ ಧರ್ಮ ಮತ್ತು ಬೌದ್ಧ ಧರ್ಮದ ಬೆಳವಣಿಗೆಯ ಸ್ಥಿತಿಗತಿಗಳು ಮೂಡಿಬಂದಿವೆ.

ವಜ್ರಸೂಚಿಯ ಭಿನ್ನ ಆವೃತ್ತಿಗಳು :

ನೇಪಾಳ್ ದರ್ಬಾರ್ ನ ರೆಸಿಡೆಂಟ್ ಆಗಿದ್ದ ಬ್ರೈನ್ ಹಡ್‍ಸನ್‍ನು (೧೮೩೩-೧೮೪೩) ನೇಪಾಳದಲ್ಲಿ ಹುದುಗಿದ್ದ ಸಂಸ್ಕೃತ ಭಾಷೆಯ ಅನೇಕ ಬೌದ್ಧ ಹಸ್ತ ಪ್ರತಿಗಳನ್ನು ಶೋಧನೆ ಮಾಡಿದ. ಅವನ ಸಂಶೋಧನೆಯಿಂದ ಬೌದ್ಧಧರ್ಮದ ಇತಿಹಾಸದಲ್ಲಿ ಒಂದು ಕ್ರಾಂತಿಯೇ ಆಯಿತು. ಹಡ್‍ಸನ್‍ನು ಬಂಗಾಳದ ಏಶಿಯಾಟಿಕ್ ಸೊಸೈಟಿಗೆ ಅರ್ಪಿಸಿದ ೮೬ ಮೂಟೆ ಹಸ್ತ ಪ್ರತಿಗಳಲ್ಲಿ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ೧೭೦ ಬೇರೆ ಬೇರೆ ಕೃತಿಗಳು ಸೇರಿದ್ದವು. ಅವುಗಳಲ್ಲಿ ಕೆಲವು ಹಸ್ತಪ್ರತಿಗಳಲ್ಲಿ ೨೦,೦೦೦ ದಷ್ಟು ಶ್ಲೋಕಗಳಿದ್ದರೆ, ಮತ್ತೆ ಕೆಲವು ಕೃತಿಗಳಲ್ಲಿ ೧೦೦ ಕ್ಕಿಂತ ಕಡಿಮೆ ಶ್ಲೋಕಗಳಿದ್ದವು, ಅವು ಮುಖ್ಯವಾಗಿ ಇತಿಹಾಸ, ತತ್ವಜ್ಞಾನ, ನೀತಿಶಾಸ್ತ್ರ ಮತ್ತು ಬೌದ್ಧ ಧರ್ಮದ ಆಚರಣೆಗಳಿಗೆ ಸಂಬಂಧಿಸಿದವಾಗಿದ್ದುವು.

ಈ ಕೃತಿಗಳ ಮಹತ್ವವನ್ನು ಹಡ್‍ಸನ್ ತನ್ನ ಪ್ರಬಂಧಗಳಲ್ಲಿ ಮೊಟ್ಟ ಮೊದಲು ಗುರುತಿಸಿದ. ಆದ್ದರಿಂದ ಅವನು ಕೇವಲ ಹಸ್ತ ಪ್ರತಿಗಳನ್ನು ಪತ್ತೆಮಾಡಿದವನು ಮಾತ್ರವಾಗಿರದೆ ಅವುಗಳ ತಾತ್ವಿಕ ಹಾಗೂ ಆಚರಣೆಗಳ ಮಹತ್ವವನ್ನು ದಾಖಲಿಸಿದವರಲ್ಲಿ ಮೊದಲಿಗನಾಗಿದ್ದಾನೆ. ಬರ್ನಾಫ್ ಎಂಬ ಮತ್ತೊಬ್ಬ ಪಾಶ್ಚಾತ್ಯ ವಿದ್ವಾಂಸ ಹಡ್‍ಸನ್‍ನನ್ನು ‘ಬೌದ್ಧ ಧರ್ಮದ ಪುನರುದ್ಧಾರಕ ಎಂದು ಪ್ರಶಂಸಿದ್ದಾನೆ. ಆದರೆ ಹಡ್‍ಸನ್‍ನ ಯೋಜನೆ ತನ್ನ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ತಾನು ಶೋಧಿಸಿದ ಕೃತಿಗಳ ವಸ್ತು ಮತ್ತು ವಿಷಯಗಳ ವಿವರವಾದ ಅಧ್ಯಯನವಾಗಿರಲಿಲ್ಲ.

ಹಡ್‍ಸನ್‍ನು ೧೮೭೪ ರಲ್ಲಿ ಪ್ರಕಟಿಸಿದ ‘ನೇಪಾಳ ಮತ್ತು ಟಿಬೇಟಿನ ಭಾಷೆ, ಸಾಹಿತ್ಯ ಮತ್ತು ಧರ್ಮಗಳನ್ನು ಕುರಿತ ಪ್ರಬಂಧಗಳು’ ಎಂಬ ಕೃತಿಯಲ್ಲೂ ‘ವಜ್ರಸೂಚಿ’ ಯ ಅನುವಾದ ಸೇರಿದೆ. ಅದು ೧೮೭೭ ರಲ್ಲಿ ಜಾನ್ ವಿಲ್ಸನ್‍ನ ‘Indian Caste’ ಎಂಬ ಕೃತಿಯಲ್ಲೂ ಪುನರ್ ಮುದ್ರಣಗೊಡಿದೆ. ಅದರಲ್ಲಿ ‘ವಜ್ರ ಸೂಚಿ’ ಗೆ ಪ್ರತಿಕ್ರಿಯೆಯಾಗಿ ಒಬ್ಬ ಸಂಪ್ರದಾಯವಾದಿ ಪಂಡಿತ ಸೂಬೋಜಿ ಬಾಪೂ ಎಂಬುವನು ರಚಿಸಿದ ‘ಲಘು ಟಂಕ’ ಕೃತಿಯೂ ಸೇರಿದೆ.

ಅಶ್ವಘೋಷನ ಕಾಲ :

ಅಶ್ವಘೋಷ ಎಂಬುದು ಅವನ ಹುಟ್ಟು ಹೆಸರೋ ಅಥವಾ ಅಡ್ಡ ಹೆಸರೋ, ಬಿರುದೋ ಎಂಬುದು ಖಚಿತವಾಗಿ ತಿಳಿಯದು, ಆ ಬಗ್ಗೆ ಪರಂಪರೆಯಲ್ಲಿ ಪ್ರಚಲಿತವಿದ್ದ ಒಂದು ಉಲ್ಲೇಖವಿದೆ. ಅವನು ಬೌದ್ಧಮತ ಸ್ವೀಕರಿಸಿದ ನಂತರ ಅನ್ಯಧರ್ಮದವವರೊಡನೆ ಚರ್ಚಿಸಲು ಮತ್ತು ಮಹಾಯಾನ ದರ್ಶನವನ್ನು ಬೋಧಿಸಲು ತೊಡಗಿದಾಗ ಅವನ ವಾಕ್ಪಟುತ್ವದಿಂದ ಪ್ರಭಾವಿತರಾದ ಶ್ರೋತೃಗಳು ಕುದುರೆಗಳು ಕೆನೆಯುವಂತೆ ಉದ್ಗರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರಂತೆ, ಹೊರಗಿನ ಕುದುರೆಗಳೂ ಅವನ ವಾಗ್‍ವೈಖರಿಗೆ ದನಿಗೂಡಿಸಿ ಹೇಷಾರವ ಮಾಡುತ್ತಿದ್ದುವಂತೆ, ಅದರಿಂದ ಅವನು ಅಶ್ವಘೋಷ ಎಂದು ಪ್ರಖ್ಯಾತನಾಗುತ್ತಾನೆ.

ಅಶ್ವಘೋಷನ ಕಾಲ ಕ್ರಿ.ಶ. ಸುಮಾರು ಒಂದು, ಎರಡನೆಯ ಶತಮಾನ ಎಂದು ಅಂದಾಜು ಮಾಡಲಾಗಿದೆ. ಪುರುಷಪುರ (ಈಗಿನ ಪಾಕಿಸ್ತಾನದಲ್ಲಿರುವ ಪೇಷಾವರ್) ದಲ್ಲಿ ಅಳುತ್ತಿದ್ದ ಕುಶಾನ ವಂಶದ ರಾಜ ಕನಿಷ್ಕನಿಗೆ ಅಶ್ವಘೋಷನು ಗುರುವಾಗಿದ್ದ ಎಂದು ತಿಳಿದು ಬರುತ್ತದೆ. ಇವನ ಜನನ ಸ್ಥಳ ಸಾಕೇತ, ಅವನ ತಾಯಿಯ ಹೆಸರು ಸುವಾರ್ಣಾಕ್ಷಿ. ಇವನು ಜನಿಸಿದ್ದು ಬ್ರಾಹ್ಮಣ ಜಾತಿಯಲ್ಲಾದರೂ ಅನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡನೆಂಬುದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಅಶ್ವಘೋಷನು ಕಾವ್ಯ, ಶಾಸ್ತ್ರ ಗ್ರಂಥ, ದಾರ್ಶನಿಕ ಗ್ರಂಥ, ನಾಟಕ ಇತ್ಯಾದಿ ಸಾಹಿತ್ಯವನ್ನು ಸೃಷ್ಟಿ ಮಾಡಿದ ಪ್ರತಿಭಾವಂತ ಲೇಖಕನಾಗಿದ್ದಾನೆ. ಆದರೆ ಅವನ ‘ಬುದ್ಧ ಚರಿತ’ ಮತ್ತು ‘ಸೌಂದರನಂದ’ ಕಾವ್ಯಗಳಿಗೆ ದೊರೆತ ಜನಪ್ರಿಯತೆ ಅವನ ಉಳಿದ ಕೃತಿಗಳಿಗೆ ದೊರೆಯಲಿಲ್ಲ. ಮಧ್ಯ ಏಷ್ಯಾದ ಟುರ್ಫಾನ್ ಎಂಬಲ್ಲಿ ೧೯೧೧ ರಲ್ಲಿ ಅವನ ‘ಶಾರದ್ವತಿ ಪುತ್ರ ಪ್ರಕರಣ’ ಎಂಬ ನಾಟಕದ ಕೆಲವು ಭಾಗಗಳು ದೊರೆತ ಮೇಲೆ ಅವನು ನಾಟಕಕಾರನೂ ಆಗಿದ್ದನೆಂಬುದು ತಿಳಿದು ಬಂತು.

ಅಶ್ವಘೋಷದ ದಾರ್ಶನಿಕ ಕೃತಿಗಳಲ್ಲಿ ಮುಖ್ಯವಾದ ‘ವಜ್ರಸೂಚಿ’ ಯ ಬಗ್ಗೆ ಮುಂದೆ ವಿವರವಾಗಿ ನೋಡೋಣ, ಇದಲ್ಲದೆ ’ಮಹಾಯಾನ ಶ್ರದ್ಧೋತ್ಪಾದ ಶಾಸ್ತ್ರ’ ಮತ್ತು ‘ಸೂತ್ರಾಲಂಕಾರ’ ಎಂಬುವು ಸಹ ದಾರ್ಶನಿಕ ಕೃತಿಗಳಲ್ಲಿ ಸೇರುತ್ತವೆ. ಅವುಗಳ ಅನುವಾದಗಳು ಮೊದಲು ಬೆಳಕಿಗೆ ಬಂದುದು ಚೀನೀ ಭಾಷೆಯ ಮೂಲಕ. ‘ಗಂಡಿ ಸ್ತ್ರೋತ್ರ’ ಎಂಬ ಒಂದು ಗೀತಾಕಾವ್ಯವೂ ಅವನಿಂದ ರಚನೆಯಾಗಿದೆ ಎಂದು ತಿಳಿದು ಬರುತ್ತದೆ.

ವೇದಯುಗದ ಆರಂಭದಲ್ಲಿ ಆರ್ಯರು ಪ್ರಧಾನವಾಗಿ ಸೂರ್ಯ, ಚಂದ್ರ, ಭೂಮಿ, ಆಕಾಶ, ಮಳೆ, ಬೆಂಕಿಯಂತಹ ಪ್ರಕೃತಿ ದೇವತೆಗಳನ್ನು ಪೂಜಿಸುತ್ತಿದ್ದರು. ವೈದಿಕ ಸಾಹಿತ್ಯದ ಒಂದು ಭಾಗವಾದ ಬ್ರಾಹ್ಮಣಗಳನ್ನು ಆಧರಿಸಿದ ಬ್ರಾಹ್ಮಣ ಮತ ಬೆಳೆಯುತ್ತಾ ಹೋಯಿತು. ಚಾತುರ್ವಣ್ಯಗಳ ಶ್ರೇಣೀಕರಣ ಬೆಳೆಯಿತು. ಯಜ್ಞ ಯುಗಾದಿಗಳಲ್ಲಿ ಆಗುವ ಹಿಂಸೆಯ ವೈಭವೀಕರಣ ನಂತರ ಬಂದ ಜೈನ, ಬೌದ್ಧ ಧರ್ಮೀಯರಿಗೆ ಹಿಡಿಸಲಿಲ್ಲ. ಅವು ಒಂದಕ್ಕೊಂದು ಪ್ರತಿಸ್ವರ್ಧಿಗಳಾದರೂ ಕಾಲ ಕಳೆದಂತೆ ಅವು ಒಂದರಿಂದ ಒಂದು ಪ್ರಭಾವಗೊಂಡು ಒಂದು ಇನ್ನೊಂದರ ಹಲಕೆಲವು ಭಾವನೆಗಳನ್ನು ಒಪ್ಪಿಕೊಂಡವು.

ಅಲೆಕ್ಜಾಂಡರ್ ಭಾರತದ ಮೇಲೆ ದಂಡೆತ್ತಿ ಬರುವ ವೇಳೆಗೆ ಜೈನ, ಬೌದ್ಧ ಧರ್ಮಗಳು ಭಾರತದ ಮಧ್ಯಭಾಗದಲ್ಲಿ ತಕ್ಕ ಮಟ್ಟಿಗೆ ಬೆಳೆದಿದ್ದುವಾದರೂ, ಭಾರತದ ವಾಯುವ್ಯ ಪ್ರಾಂತಗಳಲ್ಲಿ ಅವಿನ್ನೂ ಬೆಳೆದಿರಲಿಲ್ಲ. ಅಲ್ಲಿ ಬ್ರಾಹ್ಮಣ ಮತ ಬಲವಾಗಿ ಬೇರುಬಿಟ್ಟಿತ್ತು. ಅಲೆಕ್ಜಾಂಡರನ ನಂತರ ಆಡಳಿತ ನಡೆಸಿದ ಗ್ರೀಕ್ ಮೂಲದ ಜನ ಭಾಗವತ ಪಂಥದಿಂದ ಆಕರ್ಷಿತರಾಗಿದ್ದರು.

ಕ್ರಿ.ಶ. ಒಂದನೆ ಶತಮಾನದಲ್ಲಿ ಭಾರತದ ಮೇಲೆ ದಾಳಿಯಿಟ್ಟು ಅಲ್ಲೇ ನೆಲಸಿದ ಕುಶಾನ ವಂಶದ ಎರಡನೆಯ ಕಾಡ್ಫಿಸಿಸ್ ಶೈವ ಭಾಗವತನಾಗಿ ತನ್ನ ಹೆಸರನ್ನು ಮಹೀಶ್ವರನೆಂದು ಬದಲಾಯಿಸಿಕೊಂಡ. ಅವನ ಮಗನಾಗ ಕನಿಷ್ಕನ ಕಾಲಾಕ್ಕೆ ಬೌದ್ಧಮತ ಷೆಷಾವರ, ಕಾಶ್ಮೀರಗಳವರೆಗೆ ಹಬ್ಬಿತ್ತು. ಕನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಸಿ ಚೈತ್ಯ ಮಂದಿರಗಳನ್ನು ಕಟ್ಟಿಸಿದ. ‘ವಜ್ರ ಸೂಚಿ’ಯ ಲೇಖಕ ಅಶ್ವಘೋಷನು ಕನಿಷ್ಕನ ಅಸ್ಥಾನ ವಿದ್ವಾಂಸನಾಗಿದ್ದುದಷ್ಟೇ ಅಲ್ಲದೆ ಅವನಿಗೆ ಬೌದ್ಧ ದರ್ಶನವನ್ನು ಬೋಧಿಸಿದ ಗುರುವೂ ಆಗಿದ್ದ.

ವಜ್ರಸೂಚಿಯ ಸಮೀಕ್ಷೆ

ಇದು ಒಂದು ವಾಸ್ತವವಾದಿ ರಚನೆ. ಪ್ರಾಚೀನ ಕಾಲದ ಭಾರತೀಯ ಸಮಾಜದಲ್ಲಿದ್ದ ವರ್ಣಭೇದ ಮತ್ತು ಶ್ರೇಣೀಕೃತ ಜಾತಿವ್ಯವಸ್ಥೆ ವಿರುದ್ಧದ ಒಂದು ಚಿಮ್ತನೆ ಇಲ್ಲಿ ಕಣ್ಣಿಗೆ ಕಟ್ಟುವಂತೆ ಅಭಿವ್ಯಕ್ತವಾಗಿದೆ. ಇಲ್ಲಿ ಸತ್ಯ ಸಂಗತಿಗಳನ್ನು ನಿರ್ದಾಕ್ಷಿಣ್ಯವಾಗಿ ಮತ್ತು ನಿರ್ಭೀತಿಯಿಂದ ಪ್ರಸ್ತಾಪಿಸಿಲಾಗಿದೆ. ಚಾತುರ್ವರ್ಣಗಳಲ್ಲಿ ಬ್ರಾಹ್ಮಣ ವರ್ಣ ಅತ್ಯಂತ ಮೇಲಂತಸ್ತಿನದು. (ಸರ್ವವರ್ಣ ಪ್ರಧಾನಂ ಬ್ರಾಹ್ಮಣ ವರ್ಣಃ) ಎಂಬವಾದ ಇಲ್ಲಿ ಮುಖ್ಯವಾಗಿ ಚರ್ಚೆಗೆ ಒಳಪಟ್ಟಿದೆ. ಇಲ್ಲಿ ಲೇಖಕ ಬ್ರಾಹ್ಮಣ ಯಾರು? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಮೇಲಿನ ದೃಷ್ಟಿಕೋನದ ಮೇಲೆ ಒಂದು ವೈಚಾರಿಕ ದಾಳಿಯನ್ನೇ ಮಾಡುತ್ತಾನೆ. ಇಲ್ಲಿ ಆತ್ಮ (ಜೀವ), ಹುಟ್ಟು (ಜಾತಿ), ಶರೀರ, ಜ್ಞಾನ, ನಡತೆ (ಆಚಾರ) ವೃತ್ತಿ (ಕರ್ಮ) ಅಥವಾ ಜ್ಞಾನ (ವೇದ)ದಿಂದ ಬ್ರಾಹ್ಮಣನನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಲಾಗಿದೆ.

ಬ್ರಾಹ್ಮಣತ್ವವು ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಯ ಒಂದು ಹಂತವನ್ನು ಪ್ರತಿನಿಧಿಸುತ್ತದೆ. ಎಂಬುದು ಲೇಖಕನ ನಿಲುವು. ಅದು ಎಲ್ಲಾ ಪಾಪಗಳ ವಿಸರ್ಜನೆ, ಅದು ಕುಂದ ಪುಷ್ವ ಹಾಗೂ ಚಂದ್ರನಂತೆ ಪ್ರಕಾಶಮಾನವಾದುದು. (ಕುಂದೇಂದು ಧವಳ ಹಿ ಬ್ರಾಹ್ಮಣತ್ವಂ), ಧಾರ್ಮಿಕ ಸಂಕಲ್ವ (ವ್ರತ) ಮತ್ತು ಸಂಯಮಗಳ ಪಾಲನೆಯಿಂದ ಅದನ್ನು ಗಳಿಸಬಹುದು. ಯಾರು ಸ್ವಾರ್ಥ, ಅಹಂಕಾರ, ಮಮಕಾರ, ದುರಾಸೆ ಮತ್ತು ಕಾಮಗಳಿಂದ ದೂರವಿರುತ್ತಾನೋ ಅವನು ಬ್ರಾಹ್ಮಣ. ಮೇಲಿನ ಗುಣಗಳನ್ನು ಹೊಂದಿಲ್ಲದವನು ಚಾಂಡಾಲ.

ಚತುರ್ವರ್ಣಗಳ ಪಟ್ಟಿಯಲ್ಲಿ ಶೂದ್ರರ ಹೆಸರು ಕೊನೆಯಲ್ಲಿರುವುದರಿಂದ ಅವರು ಅತ್ಯಂತ ಕೆಳಗಿನವರು. ಆದ್ದರಿಂದ ಅವರು ಬ್ರಾಹ್ಮಣರ ಸೇವೆಯನ್ನು ಮಾಡಬೇಕು ಎಂಬ ಮನು ವಾದಕ್ಕೆ ಲೇಖಕನ ಉತ್ತರ ಹೀಗಿದೆ. ಬಾಷೆಯಲ್ಲಿ ಪ್ರಯೋಗಿಸಲಾದ ಪದಗಳಲ್ಲಿ ವಾಕ್ಯದ ಕೊನೆಯಲ್ಲಿ ಬಂದ ಕಾರಣಕ್ಕಾಗಿಯೇ ಅವು ಕನಿಷ್ಟವಾಗುವುದಿಲ್ಲ. ಸದ್ಗುಣಗಳ ಪಾಲನೆಯಿಂದ ಶೂದ್ರರು ಬ್ರಾಹ್ಮಣರಾಗುತ್ತಾರೆ. ಆದ್ದರಿಂದ ಹುಟ್ಟಿನಿಂದ ಬ್ರಾಹ್ಮಣತ್ವ ನಿರ್ಣಯವಾಗುವುದಿಲ್ಲ (ತಪಸಾ ಬ್ರಾಹ್ಮಣೊ ಜಾತಸ್ತಸ್ಮಜ್ಜಾತಿರಕಾರಣಂ). ಒಳ್ಳೆಯ ನಡತೆ ಮತ್ತು ಪರಿಶುದ್ದತೆಯನ್ನು ಯಾರು ಹೊಂದಿರುತ್ತಾರೊ ಅವನು ಬ್ರಾಹ್ಮಣ (ಶೀಲ ಶೌಚಾಮಯಮ್ ಬ್ರಹ್ಮ).

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಕ್ರಮವಾಗಿ ಪುರುಷನ (ಬ್ರಹ್ಮನ) ಬಾಯಿ, ತೋಳು, ತೊಡೆಗಳು ಮತ್ತು ಪಾದಗಳಿಂದ ಹುಟ್ಟಿದವರು ಎಂಬ ಋಗ್‍ವೇದದ ಪುರುಷಸೂಕ್ತದ ಮಂತ್ರ ಒಂದು ಪ್ರಕ್ಷಿಪ್ತ ಭಾಗ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪ್ರಚಲಿತವಿರುವ ಈ ಹೇಳಿಕೆಯನ್ನು ಚರ್ಚಿಸುವಲ್ಲಿ ಅಶ್ವಘೋಷನು ಅತ್ಯಂತ ತರ್ಕಬದ್ಧವಾಗಿ ತನ್ನ ವಾದವನ್ನು ಮಂಡಿಸುತ್ತಾನೆ. ಅವನು ಇರುವುದು ಒಂದೇ ವರ್ಣ, ಮಾನವನನ್ನು ನಾಲ್ಕು ವರ್ಣಗಳಲ್ಲಿ ವಿಭಾಗಿಸುವುದು ಸರಿಯಲ್ಲ (ತಸ್ಮಾದನೀಯತಮ್ ಬ್ರಾಹ್ಮಣ್ಯಂ) ಎಂದು ಈ ಮುಂದಿನಂತೆ ತನ್ನ ವಾದವನ್ನು ಮಂಡಿಸುತ್ತಾನೆ:

೧. ಮೀನುಗಾರರ, ಮಡಿವಾಳರ ಹಾಗೂ ಚಾಂಡಾಲರ ಕುಟುಂಬಗಳಲ್ಲೂ ಬ್ರಾಹ್ಮಣ ಮತ್ತು ಇತರ ವರ್ಣಗಳವರು ಇರುತ್ತಾರೆ.

೨. ಒಬ್ಬನೇ ತಂದೆಯಿಂದ ಹುಟ್ಟಿದ ಮಕ್ಕಳು ಹೇಗೆ ಭಿನ್ನವರ್ಣಗಳಿಗೆ ಸೇರಿದವರಾಗುವುದಿಲ್ಲವೋ ಹಾಗೆ ಒಬ್ಬನೇ ತಂದೆಯಾದ ಪುರುಷನಿಂದ ಉಗಮವಾದುದರಿಂದ ಬ್ರಾಹ್ಮಣರು ಮತ್ತು ಇತರ ವರ್ಣಗಳು ಭಿನ್ನವರ್ಣದವರಾಗುವುದಿಲ್ಲ (ಏಕೋಪುರುಷೋತ್ಪನ್ನಾನಾಮ್).

೩. ಬ್ರಾಹ್ಮಣರ ಮತ್ತು ಇತರ ವರ್ಣಗಳವರ ಪಾದ, ಭಗ, ಲಿಂಗ, ಬಣ್ಣ, ಆಕಾರ, ಮಲ, ಮೂತ್ರ, ಗಂಧ ಮತ್ತು ಧ್ವನಿಗಳಲ್ಲಿ ಭಿನ್ನ ಜಾತಿಯ ಪ್ರಾಣಿಗಳಲ್ಲಿ (ಉದಾ: ಹಸು ಮತ್ತು ಕುದುರೆ.) ತೋರುವಂತಹ ಯಾವ ವ್ಯತ್ಯಾಸಗಳೂ ಕಂಡುಬರುವುದಿಲ್ಲ.

೪. ಅವರಲ್ಲಿ ಭಿನ್ನ ಜಾತಿಯ ಪಕ್ಷಿಗಳ – ಉದಾ: ಗಿಳಿ ಮತ್ತು ಪಾರಿವಾಳ – ರೂಪ, ಬಣ್ಣ, ಪುಕ್ಕ ಮತ್ತು ಕೊಕ್ಕುಗಳಲ್ಲಿ ಕಂಡುಬರುವಂತಹ ಯಾವ ವ್ಯತ್ಯಾಸಗಳೂ ಇಲ್ಲ.

೫. ಅವರಲ್ಲಿ ಭಿನ್ನ ಜಾತಿಯ ವೃಕ್ಷಗಳ – ಉದಾ: ಮಾವಿನ ಮರ ಮತ್ತು ಬೇವಿನ ಮರ – ಅಂಗ ಪ್ರತ್ಯಂಗಗಳಾದ ಎಲೆ, ಹೂವು, ಹಣ್ಣು ಬೀಜ, ರಸ ಮತ್ತು ಗಂಧಗಳಲ್ಲಿ ಕಂಡು ಬರುವಂತಹ ಯಾವ ವ್ಯತ್ಯಾಸಗಳೂ ಇಲ್ಲ.

೬. ಮಾನವರೆಲ್ಲರ ಸುಖ, ದುಃಖ, ಜೀವನಾವಧಿ, ಬುದ್ಧಿಮತ್ತೆ, ರೀತಿ, ನೀತಿ, ಹುಟ್ಟು, ಸಾವು, ಭಯ, ಮೈಥುನ ಹಾಗೂ ಔಷಧೋಪಚಾರಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ.ಬ್ರಹ್ಮ (ಪುರುಷನ್)ನ ದೇಹದ ಬೇರೆ ಬೇರೆ ಭಾಗಗಳಿಂದ ವರ್ಣಗಳು ಉಗಮವಾದುವು ಎಂಬ ವಾದದ ವಿರೋಧವಾಗಿ ಎರಡು ಪ್ರಬಲ ಕಾರಣಗಳನ್ನು ‘ವಜ್ರಸೂಚಿ’ ಮಂಡಿಸುತ್ತದೆ.

೧. ಹಲಸು ಮತ್ತು ಅತ್ತಿ ಹಣ್ಣಿನ (ಉದುಂಬರ) ಮರಗಳ ಬುಡ, ಕೊಂಬೆಗಳು ಮತ್ತು ತುದಿಭಾಗಗಳಲ್ಲಿ ಬಿಡುವ ಹಣ್ಣುಗಳು ಒಂದೇ ಮರದಲ್ಲಿ ಬಿಟ್ಟ ಒಬ್ಬನೇ ‘ಪುರುಷ’ನಿಂದ ಹುಟ್ಟಿದವರಲ್ಲಿ ವ್ಯತ್ಯಾಸವಿರಲು ಹೇಗೆ ಸಾಧ್ಯ?

೨. ಇನ್ನೊಂದು ಕಾರಣವೇನೆಂದರೆ, ಬ್ರಾಹ್ಮಣರು ಬಾಯಿಯಿಂದ ಹುಟ್ಟಿದವರಾದರೆ ‘ಬ್ರಾಹ್ಮಣಿ’ಯರೂ ಅಲ್ಲಿಂದಲೇ ಹುಟ್ಟಿದವರಾಗಬೇಕಲ್ಲವೇ? ಅದು ನಿಷಿದ್ಧ ಕನ್ಯೆಯನ್ನು (ಗಮ್ಯಾ ಗಮ್ಯ) ವಿವಾಹವಾದಂತೆ ಆಗುತ್ತದೆ. ಆದ್ದರಿಂದ ಅದನ್ನು ಖಂಡಿಸಲಾಗಿದೆ.

ಹೀಗೆ ಕೃತಿಯು ಹುಟ್ಟಿನಿಂದ ಬ್ರಾಹ್ಮಣತ್ವವು ಅನಿಶ್ಚಿತ ಎಂದು ಹೇಳುತ್ತದೆ. ಪಠ್ಯದ ಅಂತ್ಯದಲ್ಲಿ ಬರುವ ಶ್ಲೋಕಗಳಲ್ಲಿ (೩೨-೫೩) ಮಹಾಭಾರತದ ಯುಧಿಷ್ಠಿರ ಮತ್ತು ವೈಶಂಪಾಯನರ ಸಂವಾದವನ್ನು ಉದ್ಧರಿಸಿ, ಮೊದಲು ಒಂದೇ ವರ್ಣವಿತ್ತು. ಅನಂತರ ವ್ಯಕ್ತಿಗಳ ‘ಕ್ರಿಯಾ’ ವಿಶೇಷದಿಂದ ನಾಲ್ಕು ವರ್ಣಗಳು ಸೃಷ್ಟಿಯಾದವು ಎಂದು ವಿವರಿಸಲಾಗಿದೆ. ಇಲ್ಲಿ ಗಮನಾರ್ಹವಾದುದೇನೆಂದರೆ ನಾಲ್ಕು ವರ್ಣಗಳು ಪಂಡಿತರು ಹೇಳುವಂತೆ ವೃತ್ತಿಯ ಅಥವಾ ಶ್ರಮವಿಭಜನೆಯ ಆಧಾರದ ಮೇಲೆ ವರ್ಗೀಕರಣವಾಗಿಲ್ಲ. ‘ಕ್ರಿಯಾ’ ಕಲ್ಪನೆಯನ್ನು ವಿವರಿಸುತ್ತಾ ಕೃತಿಯು ಬ್ರಾಹ್ಮಣನ ಐದು ಲಕ್ಷಣಗಳನ್ನು ವಿವರಿಸುತ್ತದೆ : ಅವನು ಯಾವುದೇ ಜೀವಿಗೆ ಹಿಂಸೆಯನ್ನುಂಟು ಮಾಡುವುದಿಲ್ಲ, ಅವನು ಪರರ ವಸ್ತುಗಳನ್ನು ಎತ್ತಿಕೊಳ್ಳುವುದಿಲ್ಲ, ಅವನು ವಿರಾಗಿ, ಸನ್ಯಾಸಿ ಮತ್ತು ಶುಚಿಯಾಗಿರುತ್ತಾನೆ.

ಲೇಖಕನು ಈ ಅಂಶಗಳನ್ನು ಬೇರೆ ಬೇರೆ ರೀತಿಯಲ್ಲಿ ಪುನರುಕ್ತಿಗೊಳಿಸಿ ಬ್ರಾಹ್ಮಣನಾಗಲು ಅಗತ್ಯವಾದ ನೈತಿಕ ಗುಣ ಶೀಲಗಳನ್ನು ಒತ್ತಿಹೇಳುತ್ತಾನೆ. ಅವುಗಳಲ್ಲಿ ಈ ಮುಂದಿನ ನಾಲ್ಕು ಅಂಶಗಳು ಗಮನಾರ್ಹವಾಗಿವೆ.

೧. ಯಾರ ಜೀವನವು ನ್ಯಾಯ ಮತ್ತು ಪರರ ಸೇವೆಗಾಗಿ ಮುಡಿಪಾಗಿದೆಯೋ ಹಾಗು ಯಾರು ಅಹೋರಾತ್ರಿ ಸಹನೆ, ತಾಳ್ಮೆಗಳನ್ನು ಅನುಸರಿಸು ಅನುಸರಿಸುವರೋ ಅವರನ್ನು ದೇವತೆಗಳು ಬ್ರಾಹ್ಮಣರೆಂದು ಪರಿಗಣಿಸುತ್ತಾರೆ.

೨. ನಿಷಿದ್ಧ ಕಾರ್ಯಕಲಾಪಗಳಿಂದ ಹಾಗೂ ರಾಗ ದ್ವೇಷಗಳಿಂದ ದೂರವಿರುವವನು ಬ್ರಾಹ್ಮಣ ಗುಣಲಕ್ಷಣಗಳನ್ನು  ಹೊಂದಿದವನಾಗುತ್ತಾನೆ.

೩. ಇಂದ್ರಿಯಾ ನಿಗ್ರಹ, ಜೀವದಯೆ, ತಾಳ್ಮೆ, ದಾನ, ವಿದ್ಯೆ ಮತ್ತು ವಿಶ್ವಾಸಾರ್ಹತೆಗಳು ಬ್ರಾಹ್ಮಣ ಗುಣ ಲಕ್ಷಣಗಳು

೪. ಯಾರು ತನ್ನ ಕಾಯ, ವಾಕ್, ಮತ್ತು ಮನಸ್ಸಿನಿಂದ ಯಾವುದೇ ಪ್ರಾಣಿಗೆ ದ್ರೋಹ ಬಗೆಯುವುದಿಲ್ಲವೋ ಅವನು ಬ್ರಾಹ್ಮಣನೆನಿಸಿಕೊಳ್ಳತ್ತಾನೆ.

ವರ್ಣ ವ್ಯವಸ್ಥೆ :

ವರ್ಣ ವ್ಯವಸ್ಥೆಯನ್ನು ಶ್ರಮ ವಿಭಜನೆಯನ್ನು ಆಧರಿಸಿದ ಒಂದು ಸಾಮಾಜಿಕ ಸಂಘಟನೆ ಎಂದು ಕೆಲವರು ಪ್ರಶಂಸಿಸುತ್ತಾರೆ. ಅದರ ಆರಂಭವನ್ನು ಖಚಿತವಾಗಿ ನಿರ್ಧರಿಸಲಾಗಿಲ್ಲವಾದರೂ ಅದು ಶ್ರಮ ವಿಭಜನೆಯನ್ನು ಆಧರಿಸಿದ ಒಂದು ವ್ಯವಸ್ಥೆ ಎಂದು ಮೇಲಿಂದ ಮೇಲೆ ಹೇಳುತ್ತಾ ಬರಲಾಗಿದೆ. ಆರಂಭದ ವೇದಗಳ ಕಾಲದಲ್ಲಿ ಪರಿಸ್ಥಿತಿಗಳು ಕಟ್ಟುನಿಟ್ಟಾಗಿರಲಿಲ್ಲ. ಸಂಚಲನ ಸ್ಥಿತಿಯಲ್ಲಿದ್ದುವು. ಆದರೆ ಸ್ವಲ್ಪ ಕಾಲಾನಂತರದಲ್ಲಿ ಸ್ಥಿತಿಗತಿಗಳು ಕಟ್ಟುನಿಟ್ಟಾಗಿ ವರ್ಣವಿಭಜನೆ ಹುಟ್ಟನ್ನಾಧರಿಸಿತು. ಪ್ರಾರಂಭದಿಂದಲೂ ವರ್ಗೀಕರಣದ ಆಧಾರ ವ್ಯಕ್ತಿಯ ಹುಟ್ಟೋ ಅಥವಾ ಅವನ ಗುಣಗಳೋ ಎಂಬ ವಿವಾದ ಇದ್ದೇ ಇದೆ. ವರ್ಣವ್ಯವಸ್ಥೆಯು ಸಮಾಜದಲ್ಲಿ ಎಷ್ಟು ಆಳವಾಗಿ ಬೇರು ಬಿಟ್ಟಿತೆಂದು ಯಾರು ಅದರಿಂದ ಬೇಸತ್ತಿದ್ದರೋ ಅಂತಹವರೂ ಕೂಡ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮುಂದಾಗಲೇ ಇಲ್ಲ.

ವರ್ಣ ವ್ಯವಸ್ಥೆಯ ವಿರುದ್ಧ ಗಮನಾರ್ಹವಾದ ಒಂದು ಆಕ್ರೋಶ ಮೊಟ್ಟಮೊದಲಿಗೆ ವ್ಯಕ್ತವಾಗುವುದು ’ಕಾಠಕ ಸಂಹಿತೆ’ಯಲ್ಲಿ ಹುಟ್ಟಿನಿಂದ ಬ್ರಾಹ್ಮಣ ಶ್ರೇಷ್ಠ ಎಂದೇಕೆ ಪರಿಗಣಿಸಬೇಕು ಮತ್ತು ಬ್ರಾಹ್ಮಣನನ್ನು ಅವನ ತಂದೆಯ ಹಾಗೂ ತಂದೆಯ ತಂದೆಯ ಹೆಸರನ್ನು ಹೇಳಲು ಏಕೆ ಕೇಳಬೇಕು ಎಂದು ಅದರಲ್ಲಿ ಪ್ರಶ್ನಿಸಲಾಗಿದೆ.

ಪ್ರಾರಂಭದ ಬೌದ್ಧ ಸಾಹಿತ್ಯದಲ್ಲೂ ಈ ವ್ಯವಸ್ಥೆಯು ಬೇರು ಬಿಟ್ಟಿರುವುದನ್ನು ನಾವು ಕಾಣುತ್ತೇವೆ. ಬೌದ್ದಾರಾಮಗಳಲ್ಲಿ ವರ್ಣವ್ಯವಸ್ಥೆಯು ಇರಲಿಲ್ಲವಾದರೂ ಜನಸಾಮಾನ್ಯರಲ್ಲಿ ಆ ವಿಭಜನೆ ಇತು. ಬುದ್ಧನು ಆ ವ್ಯವಸ್ಥೆಯನ್ನು ಸಮಗ್ರವಾಗಿ ಪ್ರತಿಭಟಿಸಲಿಲ್ಲ. ಕೆಲವು ಸಾರಿ ಆ ವ್ಯವಸ್ಥೆಯ ಒಳಗೇ ತಾನು ಕಾರ್ಯನಿಷ್ಠನಾದ. ಅವನು ಕೆಲವು ಸಾರಿ ಆ ವ್ಯವಸ್ಥೆಯ ಒಳಗೇ ತಾನು ಕಾರ್ಯನಿಷ್ಠನಾದ. ಅವನು ಕೆಲವು ಸಾರಿ ಕ್ಷತ್ರಿಯರು ಬ್ರಾಹ್ಮಣರಿಗಿಂತ ಶ್ರೇಷ್ಠರು ಎಂದು ಸಾರಿದ (ಮಧ್ಯಮ ನಿಕಾಯ ೧೧.೧೨೮). ಅವನು ಬ್ರಾಹ್ಮಣರಿಗಿಂತ ಕ್ಷತ್ರಿಯರು ಶ್ರೇಷ್ಠರೆಂದು ವಾದಿಸಿದ (ದೀಗ್ಗ ನಿಕಾಯ I ೯೭-೯೯).

ಬುದ್ಧನ ಸ್ವಭಾವ ಮತ್ತು ಬೋಧನೆಗಳನ್ನು ಗಮನಿಸಿದಾಗ ಅವನಿಂದ ನಾವು ತೀವ್ರವಾದ ಪ್ರತಿಭಟನೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆ ವ್ಯವಸ್ಥೆಯನ್ನು ನಿಷೇಧಿಸಲು ಪ್ರಯತ್ನಿಸದೆ, ಅದರೊಳಗೇ ಇದ್ದುಕೊಂಡು ಅದನ್ನು ಸುಧಾರಿಸಲು ಯತ್ನಿಸಿದ. ಬುದ್ಧನು ಯಾವುದೇ ಒಂದು ಅಪ್ರಿಯ ವಿಷಯವನ್ನು ಕುರಿತು ಚರ್ಚಿಸುವ ರೀತಿ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಅವನು ತನ್ನ ಅಭಿಪ್ರಾಯವನ್ನು ತಾನೇ ನೇರವಾಗಿ ಅಭಿವ್ಯಕ್ತಿಪಡಿಸುತ್ತಿರಲಿಲ್ಲ. ತಾನು ಹೇಳುವುದನ್ನು ಹೇಳಿ ಶ್ರೋತೃಗಳೇ ಅಂತಿಮ ನಿನಯಕ್ಕೆ ಬರಲು ಅವರಿಗೇ ಬಿಡುತ್ತಿದ್ದ.

‘ಸೂತ್ತ ನಿಪಾತ’ದಲ್ಲಿ (x x x v 3.37, 57-59) ವಸಿಷ್ಠ ಮತ್ತು ಭರದ್ವಜರು ವರ್ಣ ಭೇದವನ್ನು ಕುರಿತು ತಮ್ಮ ವಾದ ವಿವಾದಗಳಿಗೆ ಒಂದು ಅಂತಿಮ ಪರಿಹಾರವನ್ನು ಕಂಡುಕೊಳ್ಳಲು ಬುದ್ಧನ ಬಳಿಗೆ ಬರುತ್ತಾರೆ. ಬುದ್ಧನು ಅನೇಕ ಜಾತಿಯ ಹುಲ್ಲು, ಮರ, ಕ್ರಿಮಿ, ಕೀಟ, ಮತ್ತು ಪ್ರಾಣಿಗಳನ್ನು ತೋರಿಸಿ, ಅವುಗಳಲ್ಲಿ ಎಲ್ಲೂ ವರ್ಣ ವಿಭಜನೆ ಇಲ್ಲದಿರುವುದನ್ನು ಅವರ ಗಮನಕ್ಕೆ ತರುತ್ತಾನೆ. ಬ್ರಾಹ್ಮಣ ತಾಯಿಯ ಉದರ ಸಂಜಾತನಾದ ಮಾತ್ರಕ್ಕೆ ಒಬ್ಬನ್ನು ಬ್ರಾಹ್ಮಣ ಎಂದು ಕರೆಯಲು ಬುದ್ಧನು ಸಿದ್ಧನಿರಲಿಲ್ಲ. ಮಜ್ಜಿಮ ನಿಕಾಯ (II.3) ದಲ್ಲಿ ಬ್ರಾಹ್ಮಣರು ಬ್ರಹ್ಮನ ಬಾಯಿಂದ ಉಗಮವಾದರು ಎಂಬ ಬಗ್ಗೆ ಚರ್ಚಿಸುತ್ತಾನೆ. ಅವರು ಗರ್ಭವನ್ನು ಧರಿಸಿದ ಮತ್ತು ಹೆತ್ತು ಹೊತ್ತ, ಮೊಲೆಯೂಡಿಸಿ ಸಾಕಿ ಸಲುಹಿದ ತಾಯಿಂದ ಜನಿಸಿದವರೇ ಹೊರತು ಬ್ರಹ್ಮನ ಬಾಯಿಯಿಂದಲ್ಲ ಎಂದು ಹೇಳುತ್ತಾನೆ. ಯೋನ, ಕಾಂಬೋಜ ಮುಂತಾದ ಗಡಿ ರಾಜ್ಯಗಳಲ್ಲಿ ‘ಆರ್ಯ’ ಮತ್ತು ‘ದಾಸ’ ಎಂಬ ಎರಡು ವರ್ಣಗಳು ಮಾತ್ರ ಇದ್ದು, ಅವು ಒಂದು ವರ್ಣದಿಂದ ಇನ್ನೊಂದು ವರ್ಣಕ್ಕೆ ವರ್ಗಾವಣೆ ಹೊಂದಬಹುದು ಎಂಬುದನ್ನು ಅವನು ಹೇಳುತ್ತಾನೆ. ನಾಲ್ಕು ವರ್ಣಗಳಲ್ಲಿ ಸಮಾನತೆ ಇದ್ದು ಅವರು ತಮ್ಮ ನೈತಿಕತೆ, ನಡತೆ ಮತ್ತು ಗುಣಗಳಿಂದ ಸಾಧನೆ ಮಾಡಿ ಬ್ರಾಹ್ಮಣರಾದಾಗ ಅವರನ್ನು ಎಲ್ಲರೂ ಗೌರವಿಸುತ್ತಾರೆ.

ವಜ್ರ ಸೂಚಿಯ ರಚನಾ ವಿಧಾನ

ಅಶ್ವಘೋಷನು ತನ್ನ ಕೃತಿಯ ಆರಂಭದ ಶ್ಲೋಕದಲ್ಲಿಯೇ ತನ್ನ ರಚನಾ ವಿಧಾನವನ್ನು ಸ್ಪಷ್ಟ ಪಡಿಸುತ್ತಾನೆ. ತನ್ನ ಅಭಿಪ್ರಾಯಗಳಿಗೆ ತಕ್ಕ ಸಾಕ್ಷ್ಯಾಧಾರಗಳನ್ನು ಮುಂದಿಡಲು ಬಯಸುತ್ತಾನೆ. ಭಾರತೀಯ ಜ್ಞಾನ ಭಂಡಾರದಲ್ಲಿ ಅಧಿಕೃತ ಗ್ರಂಥಗಳೆಂದು ಪರಿಗಣಿಸಲಾದ ಕೃತಿಗಳಿಂದ ನೀಡಲಾದ ಉದ್ದರಣೆಗಳನ್ನು ಪ್ರಮಾಣಗಳೆಂದು ಅಂಗೀಕರಿಸಲಾಗುತ್ತದೆ. ಎರಡನೆ ಶ್ಲೋಕದಲ್ಲಿ ವೇದಗಳು ಪ್ರಮಾಣ, ಸ್ಮೃತಿಗಳು ಪ್ರಮಾಣ, ಧರ್ಮವನ್ನು ಕುರಿತ ಪ್ರವಚನಗಳು ಪ್ರಮಾಣ ಎಂದು ಲೇಖಕ ಹೇಳುತ್ತಾನೆ. ಪ್ರಮಾಣಗಳನ್ನು ಪ್ರಮಾಣಗಳಲ್ಲ ಎಂದು ಯಾರು ತಿಳಿಯುತ್ತಾರೋ ಅವನ ಪ್ರಮಾಣಗಳನ್ನು ಯಾರು ಗೌರವಿಸುತ್ತಾರೆ? ಹೀಗೆ ಲೇಖಕನು ಸಮಸ್ಯೆಯನ್ನು ಚರ್ಚಾ ವೇದಿಕೆಗೆ ತರುತ್ತಾನೆ ಅವನ ತರ್ಕ ಮತ್ತು ವಾದ ವೈಖರಿಯಿಂದ ತಾನು ಯಾವ ಆಧಾರಗಳನ್ನು ಉದ್ದರಿಸಬಹುದು ಎಂಬುದನ್ನು ಜಾಣ್ಮೆಯಿಂದ ನಿರ್ಧರಿಸಿ ವಾದದಲ್ಲಿ ತಾನು ಎದುರಾಳಿಗಳ ಮನ ಮುಟ್ಟುವ ವಿಧಾನವನ್ನು ಅನುಸರಿಸುತ್ತಾನೆ.

ತನ್ನ ಕೃಷಿಯ ವಾಚಕರು ವೇದ, ಸ್ಮೃತಿ ಮತ್ತು ಧರ್ಮಗ್ರಂಥಗಳನ್ನು ಒಪ್ಪಿಕೊಳ್ಳುವಂತೆ ಮಾಡಿದ ಮೇಲೆ ಲೇಖಕನ ಕೆಲಸ ಸುಗಮವಾಗುತ್ತದೆ. ಈ ಗ್ರಂಥಗಳಿಂದ ಲೇಖಕನು ತನ್ನ ನಿಲುವನ್ನು ಸಮರ್ಥಿಸುವ ಹೇಳಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಇದು ಚರ್ಚೆಗೆ ಒಂದು ಜಾಣ್ಮೆಯ ಹಾಗೂ ಮನವೊಲಿಸುವ ವಿಧಾನ. ವಾದ ಮಾಡುವವನು ಚರ್ಚೆಗೆ ತನ್ನ ಗುಂಪಿನ ಅಥವಾ ಪಂಥದ ಆಧಾರಗಳನ್ನು ಉದ್ಧರಿಸದೆ, ತನ್ನ ವಿರೋಧಿಗಳು ಗೌರವಿಸುವ ಆಧಾರ ಗ್ರಂಥಗಳ ಪ್ರಮಾಣಗಳನ್ನು ಉದ್ಧರಿಸಿದಾಗ ಅವುಗಳನ್ನು ವಿರೋಧಿಗಳು ಪ್ರಶ್ನಿಸಲಾರರು. ಅವು ಎದುರಾಳಿಯನ್ನು ಅವನದೇ ಕೋಲಿನಿಂದ ಬಿಡಿದು ಬಾರಿಸಲು ತೀರ್ಮಾನಿಸಿದ ಲೇಖಕನ ಬೌದ್ಧಿಕ ಮತ್ತು ಅಧ್ಯಯನಾತ್ಮಕ ಸಾಮರ್ಥ್ಯವನ್ನು ತೋರಿಸುತ್ತವೆ. ಅವನು ಪ್ರತಿಪಾದಿಸುವ ವಾದಗಳು ಹಾಗೂ ಮಂಡಿಸುವ ಅಂತಿಮ ಸಿದ್ಧಾಂತ ವೇದ, ಮನುಸ್ಮೃತಿ, ಧರ್ಮಗ್ರಂಥಗಳು ಮತ್ತು ಮಹಾಭಾರತಗಳಿಂದ ಆಯ್ಕೆ ಮಾಡಿಕೊಂಡ ಉದ್ಧರಣಗಳ ಬೆಂಬಲವನ್ನು ಪಡೆದಿವೆ.

ಲೇಖಕನು ತನ್ನ ಅಭಿಪ್ರಾಯಗಳನ್ನು ಮಂಡಿಸಲು ವೈಚಾರಿಕ ಮಾರ್ಗವನ್ನು ಅನುಸರಿಸುತ್ತಾನೆ ಎಂಬುದು ಅವನ ಗ್ರಂಥದ ಹಿರಿಮೆಯಾಗಿದೆ. ಯಾವುದೇ ಭಾವನಾತ್ಮಕ ಒಳತುಡಿತ ಹಾಗೂ ಪಂಗಡಕ್ಕೆ ಶರಣಾಗದೆ ಅವನು ತಾರ್ಕಿಕ ಬೌದ್ಧಿಕತೆಗೆ ಬದ್ದನಾಗಿರುತ್ತಾನೆ. ಲೇಖಕನು ವಾದ ಮಾಡುವುದರಲ್ಲಿ ನಿಪುಣ ಎಂಬುದನ್ನು ಕೂಡಲೆ ಗುರುತಿಸಬಹುದು. ಹಡ್‍ಸನ್‍ನು ಅಶ್ವಘೋಷನ ವಾದ ಕೌಶಲವನ್ನು ಮೆಚ್ಚಿಕೊಳ್ಳುತ್ತಾ ಹೀಗೆ ಹೇಳುತ್ತಾನೆ :

“ಲೇಖಕನು ವಿಷಯದ ಈ ಭಾಗವನ್ನು ಚಿತ್ರಿಸಿರುವ ರೀತಿ, ನನ್ನ ತೀರ್ಮಾನದಂತೆ ಅದು ಯುರೋಪಿಯನನ ಬುದ್ಧಿ ಮತ್ತೆಗೆ ಸರಿಸಾಟಿಯಾಗಿದೆ. ಅದು ಷೇಕ್ಸ್ ಪಿಯರ್ ನ ‘ವೆನಿಸಿನ ವರ್ತಕ’ (Merchant of Venice) ಎಂಬ ನಾಟಕದಲ್ಲಿ ಬರುವ ಜ್ಯೂ ಆದವನಿಗೆ ಕಣ್ಣು, ಕೈ, ಅಂಗಾಂಗಗಳು, ಇಂದ್ರಿಯಗಳು, ಭಾವೋದ್ವೇಗಗಳು ಇಲ್ಲವೆ? ಅವನು ಅದೇ ಆಹಾರ ಸೇವಿಸಿ, ಅದೇ ರೋಗಗಳಿಗೆ ತುತ್ತಾಗುವುದಿಲ್ಲವೆ? ಎಂಬ ವಾಕ್ಸರಣಿಯನ್ನು ನೆನಪಿಗೆ ತರುತ್ತವೆ” ಅದೇ ರೀತಿ ಅಶ್ವಘೋಷನಿಗೆ ತನ್ನ ವೈಚಾರಿಕವಾದ ಸರಣಿಯಲ್ಲಿ ಆತ್ಮ ವಿಶ್ವಾಸವಿದೆ. ಈ ಗ್ರಂಥವು ಅಂಧ ವಿಶ್ವಾಸವುಳ್ಳವರನ್ನು ಮೆಚ್ಚಿಸುವ ಸಲುವಾಗಿ ರಚಿತವಾದುದಲ್ಲ. ಗ್ರಂಥದ ಕೊನೆಯ ಸಾಲು ನಿಷ್ಪಕ್ಷಪಾತಿಗಳಾಗಿ ಸಮತೋಲನ ಕಾಪಾಡಿಕೊಂಡು ಬಂದವರಿಗಾಗಿ ಈ ಗ್ರಂಥ ರಚಿತವಾಗಿದೆ. ಈ ಗ್ರಂಥವು ತರ್ಕಬದ್ಧವಾಗಿದ್ದರೆ ಓದುಗರು ಇದನ್ನು ಅಂಗೀಕರಿಸಬಹುದು. ಇದು ಅತಾರ್ಕಿಕವಾಗಿದ್ದರೆ ಅವರು ಅದನ್ನು ತಿರಸ್ಕರಿಸಬಹುದು ಎಂದು ಘೋಷಿಸಲಾಗಿದೆ.

ವಜ್ರ ಸೂಚಿಯು ನಿರ್ಲಕ್ಷ್ಯಕ್ಕೊಳಗಾದ ಒಂದು ಗಮನಾರ್ಹ ಕೃತಿ. ಅದು ಮಾನವ ಸಮಾನತೆ ಮತ್ತು ವಿಶಾಲ ಮನೋಭಾವವನ್ನು ಬಯಸುವ ವೈಚಾರಿಕ ವಲಯದಲ್ಲಿ ಹೆಚ್ಚು ಮನ್ನಣೆಗೆ ಹಾಗೂ ಪ್ರಸಾರಕ್ಕೆ ಅರ್ಹವಾಗಿದೆ. ಅದು ಜಾತಿ, ವರ್ಣ, ಪಂಥ ಗುಂಪುಗಳ ಹೆಸರಿನಲ್ಲಿ ವ್ಯಕ್ತವಾಗುವ ತಾರತಮ್ಯಗಳ ವಿರುದ್ಧ ಹೋರಾಡುವ ಮಾನವರಿಗೆ ಸ್ಫೂರ್ತಿಯನ್ನು ನೀಡುತ್ತದೆ. ಬೇರೆ ಬೇರೆ ದೇಶಗಳಲ್ಲಿ ಹುಟ್ಟಿನಿಂದ ಪ್ರಾಪ್ತವಾದ ನಾನಾ ವಿಧದ ಭೇದಭಾವಗಳ ವಿರುದ್ಧ ಹೋರಾಡಿದ ಮಹಾನೀಯರಿದ್ದಾರೆ. ಭಾರತದಲ್ಲೂ ತಮ್ಮ ಗ್ರಂಥಗಳ ಕೆಲವು ಪುಟಗಳಲ್ಲಿ ಈ ಸಮಸ್ಯೆಯನ್ನು ಚರ್ಚಿಸಿದ ಲೇಖಕರೂ ಇದ್ದಾರೆ. ಆದರೆ ಅಶ್ವಘೋಷನಂತೆ ಕ್ರಿ.ಶ. ಒಂದು ಅಥವಾ ಎರಡನೆಯ ಶತಮಾನದಷ್ಟು ಪ್ರಾಚೀನ ಕಾಲದಲ್ಲೇ ತನ್ನ ಒಂದು (ಕಿರಿದಾದರೂ) ಪೂರ್ಣಗ್ರಂಥವನ್ನೇ ಮಾನವರ ಸಮಾನತೆಗಾಗಿ ಮೀಸಲಿಟ್ಟು ಜಾತಿಯಿಂದ ಶ್ರೇಷ್ಠರೆಂದು ಬೀಗುವವರಿಗೆ ಸವಾಲನ್ನೊಡ್ಡಿದ ಲೇಖಕರು ಇನ್ನೊಬ್ಬರಿಲ್ಲ