. ವಜ್ರಸೂಚಿ ಮತ್ತು ವಜ್ರ ಸೂಚಿಕೋಪನಿಷತ್ತು

ವಜ್ರ ಸೂಚಿಕೋಪನಿಷತ್ತು ನೇರವಾಗಿ ಅಶ್ಚಘೋಷನ ವಜ್ರಸೂಚಿಯಿಂದ ಪ್ರಭಾವಿತವಾಗಿ ರಚಿತವಾದ, ಗಾತ್ರದಲ್ಲಿ ಚಿಕ್ಕದಾದ, ಒಂದು ಉಪನಿಷತ್ತಾಗಿದೆ. ಅದು ತನ್ನ ಕೇಂದ್ರವಸ್ತುವನ್ನು ವಜ್ರಸೂಚಿಯಿಂದ ಎರವಲು ಪಡೆದಿಯಾದರೂ ಅದನ್ನು ಉಪನಿಷತ್ತು ಶೈಲಿಯನ್ನು ಪ್ರಸ್ತುತ ಪಡಿಸಿದೆ. ಆದರೂ ಅದು ತನ್ನ ಶೈಲಿ ಮತ್ತು ವಿಚಾರ ಮಂಡನೆಯ ವಿಧಾನದಲ್ಲಿ ಉಳಿದ ಉಪನಿಷತ್ತುಗಲಿಗಿಂತ ಭಿನ್ನವಾಗಿದೆ. ಈ ಪಠ್ಯದಲ್ಲಿ ಮಹಾಭಾರತ, ಮನು ಮತ್ತು ಶುಕ್ರರಿಂದ ಉದ್ಧರಿತ ವಾಕ್ಯಗಳನ್ನು ನಾವು ಕಾಣುತ್ತೇವೆ. ಈ ಗ್ರಂಥವನ್ನು ವಜ್ರಸೂಚಿಯೊಡನೆ ಹೋಲಿಸುತ್ತಾ ಪ್ರೊ. ಲಲ್ಲಂಜಿ ಗೋಪಾಲ ಅವರು “ಅನಂತರದ ಈ ರಚನೆ ಬೌದ್ಧ ಕೃತಿಯನ್ನು ಬ್ರಾಹ್ಮಣೀಕರಿಸಿ ಅಳವಡಿಸಿಕೊಂಡ ಒಂದು ಅನುಕರಣೆ” ಎಂದು ಅಭಿಪ್ರಾಯಪಡುತ್ತಾರೆ. ಎರಡು ಕೃತಿಗಳಲ್ಲಿ ಕೆಲವು ಸಾಮಾನ್ಯ ಸಂಗತಿಗಳಿವೆಯಾದರೂ ಬ್ರಾಹ್ಮಣನನ್ನು ಗುರುತಿಸಲು ವಜ್ರಸೂಚಿಕೋಪನಿಷತ್ತು ಕೇವಲ ಪರಿಮಿತ ಅಂಶಗಳನ್ನು ಮಾತ್ರ ಸ್ವೀಕರಿಸಿದೆ. ಅಶ್ವಘೋಷನ ಮೂಲಕೃತಿಯಲ್ಲಿರುವ ಇನ್ನೂ ಅನೇಕ ಅಂಶಗಳು ಇದರಲ್ಲಿ ಸೇರಿಲ್ಲ. ಉಪನಿಷತ್ತಿನಲ್ಲಿ ವಾದಗಳನ್ನು ಸುವ್ಯವಸ್ಥಿತವಾಗಿ ಮಂಡಿಸಲಾಗಿದೆಯಾದರೂ ಎರಡು ಕೃತಿಗಳಲ್ಲಿ ಮಂಡಿಸಲಾದ ಬ್ರಾಹ್ಮಣನ ಗುಣ ಲಕ್ಷಣಗಳು ಸ್ವಲ್ಪ ಮಟ್ಟಿಗೆ ಭಿನ್ನ ರೀತಿಯಲ್ಲಿರುವುದನ್ನೂ ನಾವು ನೋಡಬಹುದು.

ಈಗ ಉಪನಿಷತ್ತು ಮೂಲಕ್ಕೆ ಹೋಗೋಣ : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣ (ಜಾತಿ) ಗಳಿವೆ. ಸ್ಮೃತಿಗಳು ಸಹ, ವೇದಗಳನ್ನು ಅನುಸರಿಸಿ, ಬ್ರಾಹ್ಮಣ ವರ್ಣ ಬಹುಮುಖ್ಯವಾದುದು ಎಂದು ಹೇಳುತ್ತವೆ.

ಬ್ರಾಹ್ಮಣ ಅಂದರೆ ಏನು ಎಂಬುದನ್ನು ಪರೀಕ್ಷಿಸಬೇಕಾಗಿದೆ, ಅದು ಜೀವವೆ? ಅದು ಶರೀರವೆ? ಅದೊಂದು ವರ್ಗವೆ? ಜ್ಞಾನವೆ? ಕರ್ಮವೆ? ಅಥವಾ ಅದೊಂದು ಧಾರ್ಮಿಕ ಕ್ರಿಯೆಯೆ?

ಜೀವವು ಬ್ರಾಹ್ಮಣವೆ? ಎಂದು ಪ್ರಾರಂಭಿಸಿದರೆ ಉತ್ತರ ಅಲ್ಲ ಎಂದಾಗುತ್ತದೆ. ಪೂರ್ವಜನ್ಮ ಹಾಗೂ ಪುನರ್ಜನ್ಮಗಳಲ್ಲಿ ಅದೇ ಜೀವ ಮುಂದುವರಿಯುತ್ತದೆ. ಪ್ರಾರಾಬ್ಧ ಕರ್ಮದಿಂದ ಅದೇ ಜೀವ ಮುಂದುವರಿಯುವುದರಿಂದ ಜೀವ ಎಂಬುದು ಬ್ರಾಹ್ಮಣ ಅಲ್ಲ.

ಹಾಗಾದರೆ ದೇಹ ಬ್ರಾಹ್ಮಣವೆ? ಅಲ್ಲ, ಅದು ಪಂಚಭೂತಗಳಿಂದ ಮಾಡಲ್ಪಟ್ಟು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಎಲ್ಲ ಮಾನವರಿಗೂ ಅದು ಸಮಾನವಾಗಿರುವುದರಿಂದ ದೇಹ ಬ್ರಾಹ್ಮಣ ಅಲ್ಲ.

ಹಾಗಾದರೆ ಜಾತಿ ಬ್ರಾಹ್ಮಣವೆ? ಅಲ್ಲ, ಏಕೆಂದರೆ ಅನೇಕ ಋಷಿಗಳು ಬೇರೆ ಬೇರೆ ಜಾತಿಯಿಂದ ಹುಟ್ತಿದವರಾಗಿದ್ದಾರೆ. ಋಷ್ಯಶೃಂಗನು ಜಿಂಕೆಯಿಂದ, ಕೌಶಿಕನು ಕುಶ (ಗರಿಕೆ) ಹುಲ್ಲಿನಿಂದ, ಜಂಬೂಕನು ನರಿಯಿಂದ ವಾಲ್ಮೀಕಿಯು ಹುತ್ತದಿಂದ, ವ್ಯಾಸನು ಮೀನುಗಾರನ ಮಗಳಿಂದ, ಗೌತಮನು ಮೊಲದಿಂದ ವಸಿಷ್ಠನು ಊರ್ವಶಿಯಿಂದ, ಅಗಸ್ತ್ಯನು ನೀರಿನ ಕುಂಭದಿಂದ ಹೀಗೆ ಅನೇಕ ಋಷಿಗಳು ಎಲ್ಲೆಲ್ಲೊ ಹೇಗೋ ಜನಿಸಿದರು. ಆದರೆ ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಮಹಾಜ್ಞಾನಿಗಳಾಗಿ ದಿವ್ಯೋಪದೇಶ ಮಾಡುವ ಸಂತರಾದರು. ಆದ್ದರಿಂದ ಜಾತಿ ಬ್ರಾಹ್ಮಣವಲ್ಲ.

ಜ್ಞಾನ ಬ್ರಾಹ್ಮಣವೆ? ಅಲ್ಲ ಎಷ್ಟೋ ಕ್ಷತ್ರಿಯರು ದಿವ್ಯಜ್ಞಾನ ಪಾರಂಗತರಾಗಿದ್ದಾರೆ. ಆದ್ದರಿಂದ ಜ್ಞಾನ ಬ್ರಾಹ್ಮಣವಲ್ಲ.

ಹಾಗಾದರೆ ಕರ್ಮ ಬ್ರಾಹ್ಮಣವೆ? ಅಲ್ಲ, ಏಕೆಂದರೆ ಹಿಂದಿನ ಜನ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೇವೆ. ಅದನ್ನು ಪ್ರಾರಾಬ್ಧ ಕರ್ಮ ಎನ್ನಲಾಗುತ್ತದೆ. ಹಿಂದಿನ, ಈಗಿನ ಕರ್ಮಫಲಗಳು ಮುಂದಿನ ಜನ್ಮಕ್ಕೆ ಸಾಗಿಬರುತ್ತವೆ. ಅವನ್ನು ಸಂಚಿತ ಎನ್ನುತ್ತೇವೆ. ಎಲ್ಲರಿಗೂ ಕರ್ಮ ಒಂದೇ ಆಗಿರುತ್ತದೆ. ಅವರು ಇಂದು ಮಾಡುವ ಕಾರ್ಯ ಪ್ರಾರಾಬ್ಧ ಹಾಗೂ ಸಂಚಿತ ಕರ್ಮಗಳ ಫಲವಾಗಿರುತ್ತದೆ. ಅದ್ದರಿಂದ ಕರ್ಮ ಬ್ರಾಹ್ಮಣವಲ್ಲ.

ಹಾಗಾದರೆ, ಧಾರ್ಮಿಕ ಕಾರ್ಯಗಳನ್ನು ಮಾಡುವವನು ಬ್ರಾಹ್ಮಣನೆ? ಅಲ್ಲ, ಎಷ್ಟೋ ಕ್ಷತ್ರಿಯರು ಚಿನ್ನವನ್ನು ದಾನವಾಗಿ ನೀಡುತ್ತಾರೆ. ಆದ್ದರಿಂದ ಅವರು ಸತ್ಕಾರ್ಯ ಮಾಡಿದಂತಾಗುತ್ತದೆ. ಅ ಸತ್ಕಾರ್ಯವೇ ಬ್ರಾಹ್ಮಣ ವಾಗುವುದಿಲ್ಲ.

ಹಾಗಾದರೆ ನಿಜವಾಗಿಯೂ ಬ್ರಾಹ್ಮಣನಾರು? ಯಾರು ತನ್ನ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೋ ಅವನೇ ಬ್ರಾಹ್ಮಣ. ಯಾರು ತನ್ನ ಆತ್ಮವನ್ನು ಅಂಗೈಯೊಳಗಣ ಅಂಜೂರವನ್ನು ಕಾಣುವಂತೆ ಕಾಣುವನೋ, ಯಾರಿಗೆ ಹಸಿವು, ನೀರಡಿಕೆ, ದುಃಖ, ಗೊಂದಲ, ವೃದ್ಧಾಪ್ಯ ಮತ್ತು ಸಾವಿನ ಭೀತಿ ಇರುವುದಿಲ್ಲವೊ, ಯಾರಿಗೆ ಸತ್ಯ, ಜ್ಞಾನ, ಆನಂದ ಮತ್ತು ಚಿರಂತನ ಭಾವಗಳ ಅರಿವಿದೆಯೋ, ಯಾರಿಗೆ ಜಡ ಮತ್ತು ಸೂಕ್ಷ್ಮ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪಿಸಿರುವ ಆಕಾಶವನ್ನು ಮತ್ತು ತರ್ಕಾತೀತವಾದ ಸತ್ಯವನ್ನು ತನ್ನ ಅಂತಃ ಶಕ್ತಿಯಿಂದ ಕಾಣುವನೋ ಅವನು ಬ್ರಾಹ್ಮಣ, ಯಾರು ಭೌತಿಕ ಜಗತ್ತಿನ ಆಸೆ ಆಮಿಷಗಳನ್ನು ಶಮ, ದಮ, ಉಪ್ರತಿ, ತಿತಿಕ್ಷ, ಸಮಾಧಾನ ಮತ್ತು ಶ್ರದ್ಧೆಗಳ ಮೂಲಕ ಗೆದ್ದಿರುವನೋ ಅವನು ಬ್ರಾಹ್ಮಣ.

ವೇದಗಳು, ಸ್ಮೃತಿಗಳು, ಇತಿಹಾಸ ಮತ್ತು ಪುರಾಣಗಳು ಅದನ್ನೇ ಹೇಳುತ್ತವೆ. ಮಾನವನು ತನ್ನ ಆತ್ಮವನ್ನು ಸತ್ – ಚಿತ್ – ಆನಂದ ಸ್ಥಿತಯಲ್ಲಿ ಧ್ಯಾನಿಸಬೇಕು. ಅದೇ ಅದ್ವೈತ ಸಿದ್ಧಾಂತ ಎಂದು ವಜ್ರಸೂಚಿಕೋಪನಿಷತ್ತು ಹೇಳುತ್ತದೆ.

* * *

. ವಜ್ರಸೂಚಿ ಮತ್ತು ಭವಿಷ್ಯ ಪುರಾಣ

ವಜ್ರಸೂಚಿಯಿಂದ ಮೂಡಿಬಂದ ಸಾಮಾಜಿಕ ಚಿಂತನೆಯ ಪ್ರಭಾವ ಮತ್ತು ಪರಿಣಾಮ ಎಂಥ ಅಗಾಧವಾದುದು ಎಂಬುದು ‘ಭವಿಷ್ಯ ಪುರಾಣ’ ದಿಂದ ಅಭಿವ್ಯಕ್ತವಾಗಿದೆ. ಆ ಪುರಾಣದ ಬ್ರಹ್ಮಪರ್ವದ ೪೦ ರಿಂದ ೪೪ನೇ ಅಧ್ಯಾಯದ ವರೆಗಿನ ಭಾಗಗಳಲ್ಲಿ ವಜ್ರಸೂಚಿಯ ಅಚ್ಚಳಿಯದ ಛಾಪು ಎದ್ದು ಕಾಣುತ್ತದೆ. ಕೇವಲ ವೇದಾದ್ಯಯನದಿಂದ ಒಬ್ಬ ವ್ಯಕ್ತಿಯು ಬ್ರಾಹ್ಮಣನಾಗುವುದಿಲ್ಲ ಎಂಬ ವಾದವನ್ನು ಭವಿಷ್ಯ ಪುರಾಣ ಅಳವಡಿಸಿಕೊಂಡಿದೆ, ಭಿನ್ನಜಾತಿಯ ಪ್ರಾಣಿಗಳಲ್ಲಿ ಇರುವಂತೆ ಮಾನವರಲ್ಲಿ ಬ್ರಾಹ್ಮಣ ನನ್ನು ಶೂದ್ರನಿಂದ ಬೇರ್ಪಡಿಸುವ ಯಾವುದೇ ವಿಶೇಷಗಳು ಲಭ್ಯವಿಲ್ಲ ಎಂಬ ವಾದವನ್ನು ಬಲವಾಗಿ ಪ್ರತಿಪಾದಿಸುತ್ತದೆ. ವಜ್ರಸೂಚಿಯ ಹಾದಿಯಲ್ಲೇ ಈ ಪುರಾಣವೂ ದೇಹ ಮತ್ತು ದೈಹಿಕ ಕ್ರಿಯೆಗಳ ಮೂಲಕ ಬ್ರಾಹ್ಮಣರು ಇತರ ವರ್ಣೀಯರಿಗಿಂತ ಯಾವುದೇ ರೀತಿಯಲ್ಲಿ ಭಿನ್ನರಲ್ಲ ಎಂದು ತೋರಿಸುತ್ತದೆ. ಸುಖ, ಸಂಪತ್ತು, ಭಯ, ವ್ಯಾಪಾರ, ಆಯುಷ್ಯ, ವೈರಾಗ್ಯ, ಶೌರ್ಯ, ನೈಪುಣ್ಯ, ರೂಪ, ಚಿಕಿತ್ಸೆ ಇತ್ಯಾದಿ, ಮಾನವೀಯ ವರ್ತನೆಗಳ ದೃಷ್ಟಿಯಿಂದಲೂ ಅವರಲ್ಲಿ ಭೇದಗಳಿಲ್ಲ. ಸಂವಹನ ರೀತಿ, ಪದಗಳು ವ್ಯಕ್ತಪಡಿಸುವ ಅರ್ಥಗಳಲ್ಲೂ ಸಾಮ್ಯತೆ ಇದೆ. ಈ ಪುರಾಣದ ಒಂದು ಪದ್ಯದಲ್ಲಿ ಒಬ್ಬ ತಂದೆಯ ನಾಲ್ಕು ಮಕ್ಕಳು ಒಂದೇ ಜಾತಿಗೆ ಸೇರುತ್ತಾರೆ. ಅದೇ ರೀತಿ ಎಲ್ಲ ಮಾನವರೂ ಒಬ್ಬನೇ ಸೃಷ್ಟಿ ಕರ್ತನಿಂದ ಉಗಮವಾದವರು, ಆದ್ದರಿಂದ ಒಂದೇ ಜಾತಿಗೆ ಸೇರಿದವರು ಎಂಬ ವಾದವೂ ಸ್ಪಷ್ಟವಾಗಿ ವಜ್ರಸೂಚಿಯನ್ನು ಆಧರಿಸಿದುದಾಗಿದೆ. ಮರದ ಬುಡ, ನಡು ಹಾಗೂ ಶಿರೋಭಾಗಗಳಲ್ಲಿ ಬಿಟ್ಟ ಹಲಸಿನ ಹಣ್ಣುಗಳು ಬಣ್ಣ, ಆಕಾರ, ರುಚಿ ಇತ್ಯಾದಿ ಎಲ್ಲ ದೃಷ್ಟಿಯಿಂದಲೂ ಒಂದೇ ಎಂಬ ಹೋಲಿಕೆಯು ಸ್ಪಷ್ಟವಾಗಿ ವಜ್ರಸೂಚಿಯಿಂದಲೇ ಪ್ರೇರಿತವಾದುದಾಗಿದೆ. ಅದೇ ರೀತಿ ವಜ್ರಸೂಚಿಯ ೨೨ ರಿಂದ ೨೭ರ ವರೆಗಿನ ಶ್ಲೋಕಗಳ ಭವಿಷ್ಯ ಪುರಾಣದ, ಬ್ರಹ್ಮಪರ್ವದ, ೪೨ನೇ ಅಧ್ಯಾಯದ ೨೬-೩೦ ಶ್ಲೋಕಗಳಿಗೆ ಮಾದರಿಯಾಗಿವೆ. ಎರಡು ಕಿತಿಗಳ ಶ್ಲೋಕಗಳ ಎರಡನೆ ಸಾಲುಗಳು ಬಹುಮಟ್ಟಿಗೆ ಒಂದೇ ಮಾದರಿಯಲ್ಲಿವೆ.

(ತಪಸಾ ಬ್ರಾಹ್ಮಣೊ ಜಾತಸ್ತತ್ಮಾ ಜ್ಜಾತಿರಕಾರಣಮ್ – ವಜ್ರಸೂಚಿ. ತಪಸಾ ಬ್ರಾಹ್ಮಣೊ ಜಾತಃ ಸಂಸಾರಸ್ತೆನ ಕಾರಣಮ್ – ಭವಿಷ್ಯ ಪುರಾಣ)

ಋಷ್ಯಶೃಂಗನನ್ನು ಕುರಿತ ಶ್ಲೋಕ ಎರಡು ಕೃತಿಗಳಲ್ಲೂ ಒಂದೇ ಆಗಿದೆ. (ವಜ್ರಸೂಚಿ, ೨೫, ಭವಿಷ್ಯ ಪುರಾಣ, ಬ್ರಹ್ಮ ೪೨೨೬), ವಜ್ರ ಸೂಚಿಯ ವಸಿಷ್ಠನಿಗೆ ‘ಊರ್ವಶಿ’ಯ ಸ್ಥಾನದಲ್ಲಿದ್ದವಳು ಭವಿಷ್ಯ ಪುರಾಣದಲ್ಲಿನ ವಸಿಷ್ಠನಿಗೆ ‘ಗಣಿಕೆ’ ಯಾಗಿದ್ದಾಳೆ, ಎರಡು ಕೃತಿಗಳಲ್ಲಿ ಉಲ್ಲೇಖಗೊಂಡ ಸಂತರು ಬೇರೆಬೇರೆ ಯಾದುದರಿಂದ ಉಳಿದ ಶ್ಲೋಕಗಳು ವಿವರಣೆಯಲ್ಲಿ ಭಿನ್ನವಾಗಿವೆ. ಬ್ರಾಹ್ಮಣನನ್ನು ನಿರ್ಣಯಿಸಲು ಅಗತ್ಯವಾದ ನೈತಿಕ ಮೌಲ್ಯಗಳನ್ನು ಭವಿಷ್ಯ ಪುರಾಣದಲ್ಲಿ ಒತ್ತಿ ಹೇಳಲಾಗಿದೆ. ಅಲ್ಲಿಯೂ ಭವಿಷ್ಯ ಪುರಾಣದ ೨೮ ಮತ್ತು ೩೧ನೇ ಶ್ಲೋಕಗಳು ವಜ್ರ ಸೂಚಿಯ ೪೩ ಮತ್ತು ೪೮ನೇ ಶ್ಲೋಕಗಳಿಗೆ ಅತ್ಯಂತ ಸಮೀಪರ್ವತಿಯಾಗಿವೆ. ಭವಿಷ್ಯ ಪುರಾಣದ ೩೦ನೇ ಶ್ಲೋಕವು ವಜ್ರಸೂಚಿಯ ೫೨ನೇ ಶ್ಲೋಕದಿಂದ ಸ್ಪೂರ್ತಿಪಡೆದಂತೆ ಕಾಣುತ್ತದೆ. ಗುಣ ವಿಶೇಷಣಗಳನ್ನು ಕುರಿತ ಅಭಿವ್ಯಕ್ತಿಯಲ್ಲಿ ಎರಡು ಕೃತಿಗಳಲ್ಲಿ ನಿಕಟ ಸಮಾಂತರತೆ ಎದ್ದು ಕಾಣುತ್ತದೆ. ಇದರಿಂದ ಭವಿಷ್ಯ ಪುರಾಣದ ರಚನೆಯ ಕಾಲದಲ್ಲಿ ಲೇಖಕನ ಹತ್ತಿರ ವಜ್ರ ಸೂಚಿಯ ಒಂದು ಪ್ರತಿ ಇದ್ದಂತೆ ತೋರುತ್ತದೆ.

* * *

. ವಜ್ರಸೂಚಿ ಮತ್ತು ದಿವ್ಯ ಅವದಾನ

ಚೀನಾದ ಟಿಹು-ಚ-ಹೂ ಎಂಬುವನು ಕ್ರಿ.ಶ. ೨೨೬೫ ರಷ್ಟು ಹಿಂದೆಯೇ ‘ದಿವ್ಯ ಅವದಾನ’ವನ್ನು ಸಂಸ್ಕೃತದಿಂದ ಚೈನೀಸ್ ಭಾಷೆಗೆ ಅನುವಾದಿಸಿದ. ’ದಿವ್ಯ ಅವದಾನ’ ದ ಒಂದು ಭಾಗವಾದ ‘ಶಾರ್ದೂಲ ಕರ್ಣ ಅವದಾನ’ ಮತ್ತು ‘ವಜ್ರ ಸೂಚಿ’- ಈ ಎರಡರ ಶೈಲಿ, ಪಾರಿಛಾಷಿಕ ಪದಗಳ ಆಯ್ಕೆ ಮತ್ತು ವಿವರಣೆಗಳ ದೃಷ್ಟಿಯಿಂದ ಬಹಳಷ್ಟು ಸಾಮ್ಯವಿದೆ. ಗಂಗಾನದಿಯ ತೀರದ ಒಂದು ಕಾಡಿನಲ್ಲಿ ತ್ರಿಶಂಕು ಎಂಬ ಒಬ್ಬ ಚಂಡಾಲ ವಾಸವಾಗಿದ್ದ. ಅವನು ಹತ್ತು ಸಾವಿರ ಆದಿವಾಸಿಗಳ ಒಂದು ಬುಡಕಟ್ಟಿಗೆ ನಾಯಕನಾಗಿದ್ದ. ಅವನು ತನ್ನ ಪೂರ್ವಜನ್ಮದಲ್ಲಿ ವೇದಗಳು, ಇತಿಹಾಸ ಮತ್ತು ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದ ಮತ್ತು ಅವುಗಳನ್ನು ತನ್ನ ಈಗಿನ ಜನ್ಮದಲ್ಲೂ ನೆನಪಿನಲ್ಲಿಟ್ಟುಕೊಂಡಿದ್ದ. ಅವನಿಗೆ ಶಾರ್ದೂಲ ಕರ್ಣನೆಂಬ ಒಬ್ಬ ಮಗನಿದ್ದ ಮತ್ತು ಅವನಿಗೆ ತಾನು ಗತಕಾಲದಲ್ಲಿ ಕಲಿತಿದ್ದ ವಿದ್ಯೆಯನ್ನೆಲ್ಲಾ ಬೋಧನೆ ಮಾಡಿದ. ತರುಣನು ಹೀಗೆ ಪ್ರೌಢ ವಿದ್ಯಾ ಪಾರಂಗತನಾದ, ತ್ರಿಶಂಕು ಪುಷ್ಕರಸರಿ ಎಂಬ ಒಬ್ಬ ಬ್ರಾಹ್ಮಣನ ಬಗ್ಗೆ ಚಿಂತಿಸಿದ. ಆ ಬ್ರಾಹ್ಮಣನಿಗೆ ಸರ್ವಗುಣ ಸಂಪನ್ನಳಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಅವಳು ತನ್ನ ಮಗನಿಗೆ ಯೋಗ್ಯಳಾದ ಕನ್ಯೆ ಎಂದು ತ್ರಿಶಂಕು ಭಾವಿಸಿದ. ಮರು ದಿನವೇ ಅವನು ತನ್ನ ದೊಡ್ಡ ಪರಿವಾರದೊಡನೆ ಆ ಬ್ರಾಹ್ಮಣನ ಮನೆಗೆ ನಡೆದ. ಅಲ್ಲಿ ಅವನಿಗೆ ಒಳ್ಳೆಯ ಸ್ವಾಗತ ದೊರೆಯಿತು. ಆದರೆ ಅಲ್ಲಿ ಅವನು ತನ್ನ ಬೇಡಿಕೆಯನ್ನು ಮುಂದಿಟ್ಟಾಗ ಅತಿಥೇಯನು ಅತಿಥಿಯನ್ನು ಗದರಿಸಿದ. ಚಾಂಡಾಲ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಬೇಡಿದ ತ್ರಿಶಂಕು ಬ್ರಾಹ್ಮಣನ ಕೋಪ, ಸಿಡುಕುಗಳಿಗೆ ಪಾತ್ರನಾದ. ಇದು ಒಂದು ದೀರ್ಘ ಚರ್ಚೆ ವಾದಗಳಿಗೆ ದಾರಿ ಮಾಡಿಕೊಟ್ಟಿತು.

ತ್ರಿಶಂಕು ಹೇಳಿದ : ಬೂದಿ ಮತ್ತು ಚಿನ್ನಗಳ ನಡುವೆ ಎದ್ದು ಕಾಣುವ ವ್ಯತ್ಯಾಸವಿದೆ. ಆದರೆ ಬ್ರಾಹ್ಮಣ ಮತ್ತು ಇತರ ಜಾತಿ ವ್ಯಕ್ತಿಯ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ. ಬ್ರಾಹ್ಮಣನು ಒಣ ಕೊರಡುಗಳ ಉಜ್ಜವಿಕೆಯಿಂದ ಹುಟ್ಟುವ ಬೆಂಕಿಯಲ್ಲ, ಆಕಾಶದಿಂದ ಇಳಿದು ಬಂದವನೂ ಅಲ್ಲ. ಬ್ರಾಹ್ಮಣನೂ ಚಂಡಾಲನಂತೆ ತಾಯಿಯ ಗರ್ಭದಿಂದ ಹುಟ್ಟಿ ಬಂದವನಲ್ಲವೆ? ಅವನು ಮಡಿದಾಗ ಚಾಂಡಾಲನು ಮಡಿದಾಗ ಆಗುವಂತೆಯೇ ಮೈಲಿಗೆಯಾಗುತ್ತದೆ. ಅದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಮಾಂಸ ಭೋಜನಕ್ಕೆ ಕಾತರರಾದ ಬ್ರಾಹ್ಮಣರು ಅತ್ಯಂತ ಕ್ರೂರವಾದ ಯಜ್ಞಗಳನ್ನು ಮಾಡುತ್ತಾರೆ. ಗಂಡು ಮೇಕೆ ಯಂತಹ ಪ್ರಾಣಿಗಳನ್ನು ಮಂತ್ರಗಳನ್ನು ಪಠಿಸುತ್ತಾ, ಬಲಿಕೊಟ್ಟಾಗ ಅವು ನೇರವಾಗಿ ಸ್ವರ್ಗಕ್ಕೆ ಹೋಗುವ ದಾರಿಯಾದರೆ ಅವರು ತಮ್ಮ ತಂದೆ, ತಾಯಿ, ಸೋದರ ಸೋದರಿಯರನ್ನೇಕೆ ಅದೇ ಮಾರ್ಗವಾಗಿ ಸ್ವರ್ಗಕ್ಕೆ ಕಳಿಸುವುದಿಲ್ಲ? ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುವು ಕೇವಲ ಹೆಸರುಗಳು ಮತ್ತು ಆ ವ್ಯಕ್ತಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಎಲ್ಲ ಮಾನವರಿಗೂ ಪಾದ, ತೊಡೆ, ಭುಜ, ತಲೆ, ಮಾಂಸ ಇತ್ಯಾದಿಗಳು ಒಂದೇ ರೀತಿಯಲ್ಲಿವೆ. ಆದ್ದರಿಂದ ನಾಲ್ಕು ಭಿನ್ನ ವರ್ಣ(ಜಾತಿ) ಗಳಿರುಲು ಸಾಧ್ಯವಿಲ್ಲ. ಬೀದಿಯಲ್ಲಿ ಆಟವಾಡುವ ಮಕ್ಕಳೂ ಮಣ್ಣಲ್ಲಿ ಆಟವಾಡುವಾಗ ಮಣ್ಣಿನ ಉಂಡೆಗಳನ್ನು ತೆಗೆದು ಕೊಂಡು ಇದು ರೊಟ್ಟಿ, ಇದು ಅನ್ನ, ಇದು ಚಟ್ನಿ, ಇದು ಮೊಸರು ಎಂದು ವಿಭಾಗ ಮಾಡಿ ಹಂಚಿಕೊಂಡು ಊಟಮಾಡುವ ಆಟ ಆಡುತ್ತಾರೆ. ಆದರೆ ಆ ಮಣ್ಣು ಯಾವುದೇ ಊಟದ ವಸ್ತುವಾಗುವುದಿಲ್ಲ. ಹಾಗೆಯೇ ಬ್ರಾಹ್ಮಣ ಇತ್ಯಾದಿಗಳು ಕೇವಲ ಹೆಸರುಗಳು, ಅವು ನಾಲ್ಕು ಭಿನ್ನ ವರ್ಣಗಳಾಗುವುದಿಲ್ಲ. ಹಸು, ಕುದುರೆ ಇತ್ಯಾದಿ ಪ್ರಾಣಿಗಳ ದೇಹಗಳಲ್ಲಿ ಖಚಿತವಾದ ವ್ಯತ್ಯಾಸಗಳಿರುತ್ತವೆ. ಆದ್ದರಿಂದ ಹಸು, ಕುದುರೆ ಮತ್ತು ಇತರ ಪ್ರಾಣಿಗಳೂ ಭಿನ್ನ ಜಾತಿಗಳಿಗೆ ಸೇರುತ್ತವೆ. ಅದೇ ರೀತಿ ಮಾವು, ದ್ರಾಕ್ಷಿ, ಸೇಬು, ಖರ್ಜೂರ ಇತ್ಯಾದಿ ಹಣ್ಣುಗಳು ವಿಭಿನ್ನ ಜಾತಿಗೆ ಸೇರುತ್ತವೆ. ಆದರೆ ಬ್ರಾಹ್ಮಣ, ಕ್ಷತ್ರಿಯ ಇತ್ಯಾದಿಗಳ ಆಕಾರದಲ್ಲಿ ಯಾವ ವ್ಯತ್ಯಾಸಗಳು ಇಲ್ಲದಿರುವುದರಿಂದ ಅವರ ಜಾತಿಗಳಲ್ಲೂ ಸಹ ಭಿನ್ನತೆ ಇರಲು ಸಾಧ್ಯವಿಲ್ಲ. ದೇವತೆಗಳು ಬ್ರಾಹ್ಮಣರಾಗಿ, ಯಕ್ಷರು ಕ್ಷತ್ರಿಯರಾಗಿ, ನಾಗರು ವೈಶ್ಯರಾಗಿ ಮತ್ತು ಅಸುರರು ಶೂದ್ರರಾಗಿ ಅವತರಿಸಿದರು ಎಂಬ್ ಶ್ರುತಿ ವಾಕ್ಯದಲ್ಲಿ ಸತ್ಯವೇನಾದರೂ ಇದ್ದಿದ್ದರೆ ಅವರಲ್ಲಿ ಏನಾದರೂ ವ್ಯತ್ಯಾಸಗಳಿರಬೇಕಾಗಿತ್ತು. ಈ ನಾಲ್ಕು ವರ್ಣಗಳ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಗಳ ಗುಣಮಟ್ಟವನ್ನು ಆಧರಿಸಿ ಸ್ವರ್ಗವನ್ನು ಗಳಿಸಬಹುದು. ಅಲ್ಲಿ ಜಾತಿಯ ಆಧಾರದಿಂದ ಯಾವ ತೊಡಕೂ ಸಂಭವಿಸುವುದಿಲ್ಲ. ಮಾನವರಲ್ಲಿ ಯಾರು ನೆಲವನ್ನು ಉತ್ತು, ಬಿತ್ತಿ ಬತ್ತವನ್ನು ಬೆಳೆಯುತ್ತಾರೋ ಅವರು ಕ್ಷತ್ರಿಯರು, ಯಾರು ಕುಟುಂಬವನ್ನು ತ್ಯಜಿಸಿ, ಕಾಡಿಗೆ ತೆರಳಿ, ಪರ್ಣಕುಟಿಗಳನ್ನು ಕಟ್ಟಿಕೊಂಡು ತಮ್ಮ ಅಂತಿಮ ಜೀವನವನ್ನು ಧ್ಯಾನ, ತಪಸ್ಸುಗಳಲ್ಲಿ ಕಳೆಯುವರೊ ಅವರು ಬ್ರಾಹ್ಮಣರು, ಮತ್ತು ಯಾರು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಹಳ್ಳಿಗೆ ಹೋಗಿ ಮಂತ್ರೋಪದೇಶ ಮಾಡುವವರು ಅಧ್ಯಾಪಕರು ಮತ್ತು ಯಾರು ಲಾಭವನ್ನು ಗುರಿಯಾಗಿಟ್ಟು ಕೊಡು ವ್ಯಾಪಾರ ವ್ಯವಾಹರ ಮಾಡುವರೋ ಅವರು ವೈಶ್ಯರು ಎನಿಸಿಕೊಳ್ಳುತ್ತಾರೆ. ಯಾರು ಕೆಳಮಟ್ಟದ ಕೆಲಸಮಾಡಿ ಜೀವನ ನಿರ್ವಹಿಸುವರೊ ಅವರು ಶೂದ್ರ ರಾಗುತ್ತಾರೆ. ಯಾರು ತಮ್ಮ ಸದ್ಗುಣಗಳಿಂದ ಪ್ರಜೆಗಳ ಪರಿಪಾಲನೆ ಮಾಡುವರೋ ಅವರು ರಾಜರಾಗುತ್ತಾರೆ. ಮೇಲಿನ ಯಾವ ವೃತ್ತಿಯಲ್ಲಿಯೂ ಒಂದು ವಿಶಿಷ್ಟ ದೈಹಿಕ ವಿಭಿನ್ನತೆ ಇಲ್ಲ.

ಈ ವಾದ ಮತ್ತು ಅಂತಹ ಇತರ ವಾದಗಳಿಂದ ತ್ರಿಶಂಕುವು ಬ್ರಾಹ್ಮಣನನ್ನು ಉಸಿರೆತ್ತದಂತೆ ಮಾಡಿದ. ಆಗ ಬ್ರಾಹ್ಮಣನು “ನಿನಗೆ ಸಾವಿತ್ರಿ (ಗಾಯತ್ರಿ) ಗೊತ್ತೆ?” ಎಂದು ಕೇಳಿದ. ಅದಕ್ಕೆ ಉತ್ತರವಾಗಿ ತ್ರಿಶಂಕು ಹೇಳಿದ :

“ಹೌದು, ಅದು ನನಗೆ ಗೊತ್ತು ಮತ್ತು ಅದರ ಉಗಮವನ್ನು ನಾನು ಬಲ್ಲೆ. ಬಹು ಪ್ರಾಚೀನ ಕಾಲದಲ್ಲಿ ವಸು ಎಂಬ ಋಷಿ ನಕ್ಷತ್ರನ ಮಗಳಾದ ಕಪಿಲಾಳನ್ನು ಮದುವೆಯಾದ. ಅವಳಲ್ಲಿ ಗಾಢವಾಗಿ ತಲ್ಲೀನವಾಗಿ ಅವನು ತನ್ನ ವೀರ್ಯವನ್ನು ಕಳೆದು ಕೊಂಡ, ಅದನ್ನು ಪುನಃ ಗಳಿಸುವ ಸಲುವಾಗಿ ಅವನು ಸಾವಿತ್ರಿ ಮಂತ್ರವನ್ನು ಜಪಿಸಿದ “ಭೂರ್ ಭೂವರ್ ಯತ್ ಸವೀರ್ ನ ಕಪಿಲಾಯ ಭರ್ಗೊ ದೇವಸ್ಯ ಧೀಮಹಿ”. ಕ್ಷತ್ರಿಯರ ಸಾವಿತ್ರಿ ಹೀಗಿದೆ ‘ಓಂ ಜಾತಿಲಸ್ತಪಸೊ-ಭೂತ ಗಹನಮ್ ವನಮಶ್ರಿತಾ…..” ವೈಶ್ಯನದು ‘ಓಂ, ಆತಪಹ್ ಸುತಪಹ್ ಜೀವೆದಹಮ್ ವರ್ಷ ಶತಮ್ ಪಶ್ಯೆದಹಮ್ ಶಾರದಮ್ ಶತಮ್.”

ಬ್ರಾಹ್ಮಣನು ತ್ರಿಶಂಕುವನ್ನು ನಕ್ಷತ್ರಗಳ ಬಗ್ಗೆ ಮತ್ತು ಅವುಗಳ ಸ್ಥಾನದ ಬಗ್ಗೆ, ಗ್ರಹಗಳ ಬಗ್ಗೆ ಹಾಗೂ ಖಗೋಳ ಶಾಸ್ತ್ರದ ಬಗ್ಗೆ, ಶಕುನಗಳ ಬಗ್ಗೆ ಪ್ರಶ್ನಿಸಿದ. ಅವನ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯಿತು. ಬ್ರಾಹ್ಮಣನು ಎಲ್ಲ ರೀತಿಯಿಂದಲೂ ಸೋಲನ್ನು ಅನುಭವಿಸಿದ, ಕೊನೆಗೆ ತನ್ನ ಸೋಲನ್ನು ಒಪ್ಪಕೊಂಡ. ಅಷ್ಟೇ ಅಲ್ಲ, ತನ್ನ ಅನುನ್ಯಾಯಿಗಳ ಹಾಗೂ ಶಿಷ್ಯರ ವಿರೋಧವನ್ನು ಧಿಕ್ಕರಿಸಿ ತನ್ನ ಮಗಳನ್ನು ಶಾರ್ದೂಲ ಕರ್ಣನಿಗೆ ನೀಡಿದ. ಎಂ.ಬರ್ನಾಫ್‍ನೂ ಈ ಕಥೆಯನ್ನು ತನ್ನ ‘ಭಾರತೀಯ ಧರ್ಮದ ಪರಿಚಯ’ ಎಂಬ ಗ್ರಂಥದಲ್ಲಿ ಸಂಗ್ರಹ ರೂಪದಲ್ಲಿ ಉಲ್ಲೇಖಿಸಿದ್ದಾನೆ.