ಭಾರತೀಯರು ಕಾವ್ಯ ಕಲೆಗಳ ಪ್ರೀಯರು. ಕಾವ್ಯ ಸಂಗೀತಗಳು ಅವರಿಗೆ ಸಕ್ಕರೆಯೆಷ್ಟೇ ಸಿಹಿ. ಸುಮಾರು ಒಂದು ಸಾವಿರ ಒಂಬೈನೂರು ವರ್ಷಗಳ ಹಿಂದೆ ಇದ್ದ ಒಬ್ಬ ಹಿರಿಯ ಕವಿ ಅಶ್ವಘೋಷ. ಅವನು ತನ್ನ  “ಸೌಂಧರ್ಯನಂದ” ಕಾವ್ಯದಲ್ಲಿ ತಾನೂ ಕಾವ್ಯವನ್ನು ರಚಿಸಿದ ಉದ್ದೇಶವೇನೆಂದು ವಿವರಿಸಿದ್ದಾನೆ.

ಯಾವುದೇ ಧರ್ಮದ ನಿಯಮಗಳು, ಸೂತ್ರಗಳು ಸಾಮಾನ್ಯರನ್ನು ಆಕರ್ಷಿಸಲಾರವು. ಧರ್ಮದ ಅಂತರಂಗವನ್ನಾಗಲಿ, ಮೂಲತತ್ವಗಳನ್ನಾಗಲಿ ಅರಿಯುವಂತಹ ಧೀಮಂತರು ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ಸಮಾಜಗಳಲ್ಲಿಯೂ ಕೆಲವರೇ. ಅದರೆ ಎಲ್ಲರೂ ಧರ್ಮವನ್ನು ತಿಳಿಯುವುದು ಅಗತ್ಯ.  ಬಾಳು ಕ್ಷಣಿಕ. ಬಹು ಹೆಚ್ಚೆಂದರೆ ತೊಂಬತ್ತು, ನೂರು ವರ್ಷ ಮನುಷ್ಯ ಬದುಕಬಹುದು. ಆನಂತರವಾದರೂ ಸಾಯಲೇಬೇಕು. ಬದುಕಿರುವಾಗಲೂ ಯಾವ ಕ್ಷಣ ಸಾವು ಬರುತ್ತದೋ ಎನ್ನುವ ಭಯ. ಇಂತಹ ಬಾಳು ಸಾರ್ಥಕ ಆಗಬೇಕಾದರೆ ಮನುಷ್ಯ ಒಳ್ಳೆಯವನಾಗಿ ಬದುಕಬೇಕು. ಒಳ್ಳೆಯವನಾಗಿ ಬದುಕುವ ರೀತಿಯನ್ನು ತೋರಿಸುವ ಮಾರ್ಗದರ್ಶಿಯೇ ಧರ್ಮ. ಧರ್ಮವನ್ನು ಜನರಿಗೆ ರುಚಿಸುವಂತೆ ಮಾಡಲು ತಾನೂ ಕಾವ್ಯವನ್ನು ಬರೆದೆ. ಕಾವ್ಯ ಓದುಗರಿಗೆ ಸಂತೋಷ ಕೊಡುತ್ತದೆ. ಆ ಸಂತೋಷಕ್ಕೆಂದು ಅವರು ಕಾವ್ಯ ಓದುವಾಗ ಧರ್ಮ ಅವರ‍ ಹೃದಯವನ್ನು ಪ್ರವೇಶಿಸುತ್ತದೆ ಎಂದು ಹೇಳಿದ ಅಶ್ವಘೊಷ್.

ತಾಯಿಯ ಹೆಸರಿಗೆ ಪ್ರಾಧಾನ್ಯ:

ಮಹಾಕವಿ ಅಶ್ವಘೊಷ ಪ್ರತಿಭಾವಂತ . ಈತ ಸಾಕೇತ ನಗರದವರನು ಎಂಬುವುದು ಆತನೇ ಹೇಳಿಕೊಂಡಿರುವ ಈ ವಾಕ್ಯದಿಂದ ತಿಳಿಯುತ್ತದೆ. “ಆರ್ಯ ಸುವರ್ಣ ಕ್ಷೀಣಪುತ್ರಸ್ಯ ಭಿಕ್ಷೋರಾಚಾರ್ಯ ಭದಂತಾಶ್ವಘೋಷಸ್ವ ಮಹಾಕವೇರ್ಮಹಾವಾದಿನಃ ಕೃತಿರಿಯಂ.

ಸರಿಯೂ ನದಿಯ ತೀರದಲ್ಲಿದ್ದ ಸಾಕೇತ ಪೂರ್ವ ದೇಶದಿಂದ ಉತ್ತರಾಪಥಕ್ಕೆ ಸಾಗುವ ಹೆದ್ದಾರಿಯಲ್ಲಿತ್ತು. ಅದು ನೌಕಾ ವ್ಯಾಪಾರಕ್ಕೆ ಕೇಂದ್ರ.  ಆದುದರಿಂದ ಅದು ವ್ಯಾಪಾರ ಕೇಂದ್ರವೆಂದು ಹೆಸರಾಗಿತ್ತು.  ಲಕ್ಷ್ಮಿ ನಿವಾಸವಾಗಿದ್ದ ಸಾಕೇತದಲ್ಲಿ ಸರಸ್ವತಿಗೂ ಮನ್ನಣೆ ಇತ್ತು. ನಗರದಲ್ಲಿ ಸಂಪನ್ನ ಬ್ರಾಹ್ಮಣ ಪರಿವಾರವೊಂದಿತ್ತು. ಅದು ವಿದ್ಯಾವಂತರ ಕುಟುಂಬ. “ಸವರ್ಣಾಕ್ಷಿಯು ಆ ಮನೆಯ ಒಡತಿ,. ಚಿನ್ನದಂತಹ ಹಳದಿಯ ಕಣ್ಣೀಗೆ ಆಕೆಗೆ ಆರ್ಯ ಸುವರ್ಣಾಕ್ಷೀ ಎಂದೇ ಹೆಸರಾಗಿತ್ತು. (ಆ ಕಾಲದಲ್ಲಿ ಹಲವರಿಗೆ ಹಳದಿಯ ಕಣ್ಣುಗಳಿದ್ದಂತೆ ಕಾಣುತ್ತದೆ. ಆದುದರಿಂದ ಅದು ವಿಚಿತ್ರ ಅಥವಾ ದೋಷ ಎನ್ನಿಸುತ್ತಿರಲಿಲ್ಲ) ಆಕೆಗೆ ಒಬ್ಬನೆ ಮಗ. ಆಕೆಯಂತೆಯೇ ಸುವರ್ಣಕ್ಷ ಪಿಂಗಳ ಕೇಶಿ. ಗೌರವರ್ಣ ದೇಹಿ. ಹೆಸರು ಅಶ್ವಘೊಷ್.

ಈತನ ತಂದೆಯ ಹೆಸರು ತಿಳಿದಿಲ್ಲ. ಅಶ್ವಘೋಷನನ್ನು ಎಲ್ಲೂ ತನ್ನ ತಂದೆಯ ಹೆಸರನ್ನು ಸ್ಮರಿಸಿಕೊಂಡೇ ಇಲ್ಲ.

ಕುಷಾಣವಂಶದ ಕನಿನ (ಕನಿಷ್ಕ) ರಾಜನಿಗೆ ಮಾತೃಚೇಟ ಕಳುಹಿಸಿದ್ದ ಲೇಖನವು ತಿಬೇಟಿಯನ್ ಭಾಷೆಯಲ್ಲಿ ದೊರೆತಿದೆ. ಅಶ್ವಘೋಷ ಕನಿಷ್ಕರನನ್ನು ಕುಷಾಣ ವಂಶದವನೆಂದು ತನ್ನ “ಸೂತ್ರಾಲಂಕಾರ:” ದಲ್ಲಿ ಹೇಳಿರುವನು. ಇದರಿಂದ ಮಾರ್ತಚೇಟನೇ ಅಶ್ವಘೋಷ ಎಂಬ ಅನಿಸಿಕೆಗೆ ಪುಷ್ಟೀ ದೊರೆಯುತ್ತದೆ.

ಅಶ್ವಘೋಷನ ಮಾತೃನಾಮೋಲ್ಲೇಖ, ಹಾಗೂ ತನ್ನನ್ನು ಮಾತೃಚೇಟ ಎಂದು ಕರೆದುಕೊಂಡಿರುವುದು ಅರ್ಥವತ್ತಾಗಿ ಕಾಣಿಸುತ್ತದೆ. ಅಶ್ವಘೋಷ ತನ್ನ “ಸೂತ್ರಲಂಕಾರ” ದಲ್ಲಿಯೂ ಹಿಂದುಗಳ ವರ್ಣ ವಿಭಜನೆಯ ಬಗ್ಗೆ  ವಿರೊಧವನ್ನು ವ್ಯಕ್ತಪಡಿಸಿದ್ದಾನೆ. ಆದ್ದರಿಂದ ಅಶ್ವಘೋಷನಿಗೆ  ಈ ವರ್ಣ ವ್ಯವಸ್ಥೆ, ಬ್ರಾಹ್ಮಣ ಡಂಭ ಸರಿ ಎನಿಸಿರಲಿಲ್ಲ ಎಂಬುವುದು ಸ್ಪಷ್ಟ. ಈ ರೀತಿಯ ಭಾವನೆಗಳಿಗೆ ಒಳಗಾಗಿ ಗೋತ್ರದ ಮಹತ್ವವನ್ನು ಆತ ಗಾಳಿಗೆ ತೂರಿದ.  ತಂದೆಯೂ ಕುಲವನ್ನು ಕೊಡುವವರು ಎಂಬು ನಂಬಿಕೆ ಕೈಬಿಟ್ಟು. ಆದ್ದರಿಂದ ತಂದೆಯ ಹೆಸರಿನ ಉಲ್ಲೇಖ ಆತನ ಪಾಲಿಗೆ ಬೇಡವೆನಿಸಿತು.

ವಸಂತೋತ್ಸವ:

ಅಶ್ವಘೋಷನ ಜೀವನದ ಬಗ್ಗೆ ರಾಹುಲ್ ಸಾಂಕೃತ್ಯಾಯನ ಎಂಬ ಪಂಡಿತರು ಇತಿಹಾಸಕ್ಕೆ ಬಹುಮಟ್ಟಿಗೆ ಸಮ್ಮತವಾಗುವ ರೀತಿಯಲ್ಲಿ ಈ ಕಲ್ಪನೆಯನ್ನು ಮಂಡಿಸಿದ್ದಾರೆ.

ಕ್ರಿಸ್ತಾಬ್ದಿಯ ಪ್ರಾರಂಭದ ಶತಮಾನ. ಆಗ ವಸಂತೋತ್ಸವಗಳು ತುಂಬಾ ವಿಜೃಂಭಣೆಯಿಂದ ನಡೆಯುತ್ತಿದ್ದ ಕಾಲ. ಆಗಲೇ ಗ್ರೀಸ್ ದೇಶದವರು ಭಾರತವನ್ನು ಪ್ರವಶಿಸಿದ್ರು. ಅವರನ್ನು ಯವನರೆಂದು ಕರೆಯಲಾಗುತ್ತದೆ. ಹಲವು ನಗರಗಳಲ್ಲಿ ಅವರ ಗುಂಪುಗಳು ವಾಸಿಸುವುದ್ದುಂಟು. ಸಾಕೇತದಲ್ಲಿಯೂ ವಸಂತಕಾಲದ ಪ್ರವೇಶಿಸಿತ್ತು. ಮರಗಳು ಹಳೆಯ ಎಲೆಗಳನ್ನು ಕೊಡವಿ ಚಿಗುರು ಎಲೆಗಳನ್ನು ಹೊರುತ್ತಿದ್ದವು. ಚೈತ್ರ ಶುಕ್ಲ ನವಮಿಯಂದು ಸಾಕೇತದ ಸರಯೂ ನದಿಯಲ್ಲಿ ಈಜು ಪಂದ್ಯ. ಪ್ರತಿ ವಸಂತೋತ್ಸವದಲ್ಲಿಯೂ ಅಪಾರ ಜನಸ್ತೋಮವನ್ನು ಆಕರ್ಷಿಸಿತ್ತು ಈಜು ಪಂದ್ಯ.  ಹೆಣ್ಣು-ಗಂಡುಗಳ ಅಂತರವಿಲ್ಲದೆ ಪಂದ್ಯದಲ್ಲಿ ಪಾಲ್ಗೋಳ್ಳುತ್ತಿದ್ದರು. ತಾಯಿ ತಂದೆಗಳು ತಮ್ಮ ಮಕ್ಕಳನ್ನು ಪಂದ್ಯದಲ್ಲಿ ಪಾಲ್ಗೊಳ್ಳಲು ಹುರಿದುಂಬಿಸುತ್ತಿದ್ದರು. ಕಾಲದ ಶಿಷ್ಠಾಚಾರ ಅದು.

ನೌಕೆಯನ್ನೇರಿ ಸರಯೂ ನದಿಯ ಮಧ್ಯಭಾಗ ಸೇರಿ ತರುಣ -ತರುಣಿಯರೆಲ್ಲ ನೀರಿಗೆ ಧುಮುಕಿದರು. ಸರಯುವಿನ ನೀಲ ಜಲದಲ್ಲಿ ಅನೇಕ ಬಣ್ಣಗಳ ವಿವಿಧ ರೂಪಗಳ ತಾರುಣ್ಯದಿಂದ ತೊನೆದಾಡುವ ದೇಹಗಳು ತೇಲುತ್ತಾ ಮುಂದಕ್ಕೆ ಸಾಗುತ್ತಿದ್ದವು.  ಆ ದೋಣಿಗಳಲ್ಲಿ ಕುಳಿತವರು, ಈಜುವವರು ಬಳಲಿದರು ಎಂದು ತಿಳಿದೊಡನೆಯೇ ಅವರನ್ನು ದೋಣಿಗಳಲ್ಲಿ ಹತ್ತಿಸಿಕೊಳ್ಳುವರು. ಸಾವಿರಾರು ಮಂದಿಸ್ಪರ್ಧಿಗಳಲ್ಲಿ ಹಲವರು ದಡ ಸೇರಲು ಇನ್ನೂ ಮೂರರಲ್ಲಿ ಒಂದು ಪಾಲಿನ ದೂರವಿದೆ  ಎನ್ನುವ ವೇಳೆಗೆ ಬಳಲಿ ಸೋಲುವುದುಂಟು.

ಈ ಬಾರಿಯ ಪಂದ್ಯದಲ್ಲಿ ಕೊನೆಗೆ ಉಳಿದವರು ಇಬ್ಬರೆ ಒಂದು ಹೆಂಡು  ಮತ್ತೊಂದು ಹೆಣ್ಣು. ದಡ ಹತ್ತಿರವಾದಂತೆ ಅವರ ವೇಗವೂ ಹೆಚ್ಚಿತು. ದೋಣಿಯಲ್ಲಿರುವವರು ಎವೆಯಿಡದೆ ಅವರನ್ನೇ ದಿಟ್ಟಿಸುತ್ತಿದ್ದಾರೆ. ಇಬ್ಬರೂ ಒಂದೇ ಸಾಲಿಗೆ ಬಂದರು. ಇವರಲ್ಲಿ ಮೊದಲಿಗರು ಯಾರು ಎಂಬುವುದು ಜನೆಗೆ ಕುತೂಹಲದ ಸಂಗತಿಯಾಯಿತು. ಇಬ್ಬರನ್ನೂ ನೋಟಕರು ಉತ್ತೇಜಿಸುತ್ತಿದ್ದರು.

ತರುಣ-ತರುಣಿ ಇಬ್ಬರೂ ಒಂದೇ ಸಮಯದಲ್ಲಿ ದಡ ಸೇರಿದರು. ಜನರು ಹರ್ಷೊದ್ಗಾರ ಮಾಡಿದರು. ಇಬ್ಬರಿಗೂ ವಿಜಯವಸ್ತ್ರಗಳನ್ನು ಉಡಿಸಿದರು. ಪಲ್ಲಕ್ಕಿಯಲ್ಲಿ ಅವರ ಮೆರವಣಿಗೆ ಹೊರಟಿತು. ಹೂಮಳೆ ಸುರಿಯಿತು. ಅವರಿಬ್ಬರೂ ಪರಸ್ಪರ ನೋಡಿಕೊಂಡರು.

ಆ ತರುಣ ಅಶ್ವಘೋಷ್, ಯುವತಿಯ ಹೆಸರು   ಪ್ರಭೆ. ಯವನರ ಕುಲದಲ್ಲಿ ಪ್ರಮುಖವಾಗಿದ್ದ ಸಾರ್ಥವಾಹ ದತ್ತ ಮಿತ್ರನ ಮಗಳು.

ಮೆರವಣಿಗೆ ನಗರೋದ್ಯಾನವನ್ನ ತಲುಪಿತು. ಇಬ್ಬರು ಇಜುಗಾರರನ್ನು ಸೇರಿದ್ದ ಜನಸ್ತೋಮಕ್ಕೆ  ಪರಿಚಯ ಮಾಡಿಸಿ ಸನ್ಮಾನಿಸಿದರು. ಅವರು ಪರಸ್ಪರ ಓರೆನೋಟಗಳನ್ನು ಬದಲಿಸಿಕೊಂಡು ಮುಗುಳ್ನಕ್ಕರು. ಅಲ್ಲಿ ಸ್ನೇಹವು ಅಂಕುರಿಸಿತು.

ನಾಟಕ :

ಕೆಲವು ದಿನಗಳ ನಂರ ನಗರೋಧ್ಯಾನದ ಲತಾಗೃಹದ ಬಳ್ಳಿ ಮಾಡದೊಳಗೆ ಅನೇಕ ತರುಣ ತರುಣಿಯರು ನೆರೆದಿದ್ದರು. ಅಲ್ಲಿ ಸ್ಥಳ ಸಿಗದವರು ಹೊರಗೂ ನಿಂತಿದ್ದರು.  ಯಾರು ಮಾತನಾಡಲಿಲ್ಲ. ಮೌನವಾಗಿ ಕಿವಿಗೊಟ್ಟು ಆಲಿಸುತ್ತಿರುವರು. ಮುಖರವೀಣೆಯನ್ನು ನುಡಿಸುತ್ತಾ ಅಶ್ವಘೋಷನು ತನ್ಮಯನಾಗಿ, ತನ್ನ ನೂತನ ಕೃತಿ “ಊರ್ವಶೀ ವಿಯೋಗ” ಹಾಡುತ್ತಿರುವನು. ಪುರೂರವ ದಿಕ್ಕುಗಾಣದೇ ಊರ್ವಶಿಗಾಗಿ ಅಲೆಯುತ್ತಿರುವನು. ಆತನಿಗೆ ಊರ್ವಶಿಯ ದರ್ಶನವಾಗುತ್ತಿಲ್ಲ. ಆದರೂ ಆಕೆಯ ಧ್ವನಿ ಗಾಳಿಯಲ್ಲಿ ತೇಲಿಬರುವುದು.  ಈ ಹಾಡು ಕವಿ- ಗಾಯಕನಲ್ಲೂ, ಶ್ರೋತೃಗಳಲ್ಲಿಯೂ ಕಣ್ಣೀರು ಮಿಡಿಸಿತು.

ಗೀತಗಾಯನ ಮುಗಿಯಿತು. ನೆರೆದ ಮಂದಿ ಕರಗುತ್ತಾ ಬಂತು. ಅಶ್ವಘೋಷನೂ ಹೊರಬಂದ. ಆಗಲೇ ಅವನನ್ನು ತರುಣಿಯರ ಒಂದು ಗುಂಪು ಮುತ್ತಿತು. “ಈ ದಿನದ ಗಾಯನ ಅಪೂರ್ವ. ಅದ್ಭುತ!” ಎಂದಳು ಒಬ್ಬ ತರುಣಿ.

“ಮಹಾಕವಿ, ಸಾಕೇತದಲ್ಲಿಯೇ ನಮ್ಮದೊಂದು ಪುಟ್ಟ ರಂಗಭೂಮಿ ಇದೆ… ” ಒಬ್ಬ  ಯವನ ತರುಣಿ ಹೇಳಿದಳು.”

“ರಂಗಭೂಮಿ- ನೃತ್ಯಕ್ಕಾಗಿಯೇ? ನನಗೂ ನೃತ್ಯವೆಂದರೆ ತುಂಬಾ ಇಷ್ಟ” ಎಂದು ಅಶ್ವಘೋಷ ಹೇಳಿದ.

ಈ ಮಾತು ಕೇಳುತ್ತಲೇ “ನಥ್ಯಕ್ಕಾಗಿ ಅಲ್ಲ, ನಟನೆಗಾಗಿ: ಅಲ್ಲಿ ನಾವು ಅಭಿನಯ ಮಾಡುತ್ತೇವೆ” ಎಂದು ಹೇಳಿದಳು.

“ಅಭಿನಯವೇ? ಚಕಿತನಾಗಿ ಕೇಳಿದ ಅಶ್ವಘೋಷ.

“ಯವನ ಪದ್ಧತಿಯ ಅಭಿನಯ. ಅದೊಂದು ವಿಶೇಷ ರೀತಿಯದು. ಭಿನ್ನ ಕಾಲ ಮತ್ತು ಸ್ಥಳಗಳನ್ನು ತೋರಲು ದೊಡ್ಡ ಚಿತ್ರಪಟಗಳನ್ನು ಸಿದ್ಧಪಡಿಸುತ್ತೇವೆ. ಅದರ ಮುಂದೆ ನಾವು ಘಟನೆಗಳು ನಡೆದುದನ್ನು ವಾಸ್ತವವಾಗಿ ನಟಿಸಿ ತೋರಿಸುತ್ತೇವೆ. ಇದರಿಂದ ಕಲ್ಪನೆಯನ್ನು ವಾಸ್ತವಿಕ ಘಟನೆಯನ್ನಾಗಿ ಪ್ರೇಕ್ಷಕರಿಗೆ ತೋರಿಸಲು ಪ್ರಯತ್ನಿಸುತ್ತೇವೆ”.

“ಕುತೂಹಲಕಾರಿ ವಿದ್ಯೆ! ಸಾಕೇತದಲ್ಲಿಯೇ ಇದ್ದು, ಈ ವಿಚಿತ್ರವಾದುದನ್ನು ನಾನು ಕಾಣಲಿಲ್ಲವಲ್ಲಾ!”

“ನಮ್ಮ ನಟನೆ ಈಕ್ಷಿಸುವವರೂ  ಕೆಲವೇ ಮಂದಿ ಯವನರು ಮತ್ತು ಹಲವು ಮಂದಿ ಇಲ್ಲಿನ ಮಿತ್ರರು. ಆದ್ದರಿಂದ ಬಹುಮಂದಿ ಸಾಕೇತ ವಾಸಿಗಳಿಗೆ ನಮ್ಮ ಈ ಅಭಿನಯದ ಪರಿಚಯ ಇನ್ನೂ ಆಗಿಲ್ಲ. ಇಂದು ನಾವು ಒಂದು ಕಾರ್ಯಕ್ರಮವ ನೀಡಲಿದ್ದೇವೆ. ತಾವು ಬಂದು ಅವಲೋಕಿಸಿದರೆ ನಾವು ಕೃತಾರ್ಥರಾದೇವು”.

“ಸಂತೋಷದಿಂದ ಬರುತ್ತೇನೆ. ನಿಮ್ಮಂತಹ ಸಹೃದಯಿ ಮಿತ್ರರು ಸಿಗುವುದು ಸುಲಭ ಸಾಧ್ಯವೇ?”

ಅಶ್ವಘೋಷನು ಆಗಲೇ ತರುಣಿಯರೊಂದಿಗೆ ಹೊರಟ. ನಾಟ್ಯಶಾಲೆಯ ರಂಗಮಂಟಪದಲ್ಲಿ ಅಂದಿನ ಪ್ರದರ್ಶನದ ಪ್ರೇಕ್ಷಕರ ಮಧ್ಯೆ ಗೌರವ ಆಸನವೊಂದರಲ್ಲಿ ಮಂಡಿಸಿದ. ಯಾವುದೋ ದುಃಖಾಂತ ಪ್ರಕರಣವೊಂದನ್ನು ಮಂಡಿಸಿದ. ಯಾವುದೋ ದುಃಖಾಂತ ಪ್ರಕರಣವೊಂದನ್ನು ಅಭಿನಯಿಸಲಾಯಿತು.

ಅದನ್ನು ನೋಡುತ್ತಿದ್ದಾಗ ಅಶ್ವಘೋಷನಿಗೆ ಭಾರತದಲ್ಲಿ ನೃತ್ಯ ಮತ್ತು ಮೂಕಾಭಿನಯದೊಂದಿಗೆ ದೇವಾಲಯಗಳಲ್ಲಿ ಪರಮಾತ್ಮನ ಸನ್ನಿಧಿಯಲ್ಲಿ ವೈದಿಕ ಅರ್ಖಯಾಯಿಕೆಗಳು ಪ್ರದರ್ಶಿಸುತ್ತಿದ್ದುದು ನೆನಪಿಗೆ ಬಂತು. ಅಲ್ಲಿ ಇಲ್ಲಿರುವಂತೆ ಹಿಂಬದಿಯ ಪರದೆಯಾಗಲಿ ಅದರ ಮೇಲೆ ಚಿತ್ರಣಗಳಾಗಲಿ ಇರುತ್ತಿರಲಿಲ್ಲ. ಇಲ್ಲಿಯೂ ಅಭಿನಯಿಸುವ ಪ್ರಸಂಗವನ್ನು ಜೀವಂತಗೊಳಿಸುವ ಪ್ರಯತ್ನ, ಮೂಕಾಭಿನಯಕ್ಕೆ ಬದಲಾಗಿ  ಹಾಡು-ಮಾತುಗಳು ಸೇರಿವೆ. ಅಶ್ವಘೋಷನಿಗೆ ಇದು ತುಂಬಾ ಪರಿಣಾಮಕಾರಿಯಾದ ಮಾಧ್ಯಮವಾಗಿ ಕಂಡಿತು. ಅದನ್ನು ನಾಟಕ ಎಂದು ಕರೆಯುವುದು ಸೂಕ್ತವೆನಿಸಿತು.

ಅಂದಿನ ನಾಟಕದಲ್ಲಿ ಈಜಾಟದ ಪ್ರತಿಸ್ಪರ್ಧಿಯೇ ನಾಯಕಿಯಾಗಿದ್ದಳು. ಆಕೆಯ ನಟನೆಯ ಕೌಶಲ್ಯವನ್ನು ಮೆಚ್ಚಿ ತಲೆದೂಗಿದ. ನಾಟಕದ ಮಧ್ಯೆ ಅಶ್ವಘೋಷನನ್ನು ಊರ್ವಶಿ ವಿಯೋಗ”ದ ಗೀತೆಯನ್ನು ಹಾಡಬೇಕೆಂದು ಪ್ರಾರ್ಥಿಸಲಾಯಿತು. ಅರ್ಶವಘೋಷ ತನ್ನ ಮಧುರ ಕಂಠಶ್ರೀಯಿಂದ ಶ್ರೋತೃಗಳ ಮನ ತಣಿಸಿದ. ಎಲ್ಲರೂ ಕಣ್ಣೀರು ತುಂಬಿದರು.

ನಾಟಕದ ನಂತರ ನಟರ ಪರಿಚಯವನ್ನು ಮಾಡಿದರು. ಅಶ್ವಘೋಷ ತನ್ನ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಾ “ಸಾಕೇತದಲ್ಲಿಯೇ ಇದ್ದರೂ ಈ ಅನುಪಮ ಕಲೆಯ ಪರಿಚಯ ನನಗಾಗಿರಲಿಲ್ಲ. ಅಜ್ಞಾತ ಪ್ರಭಾವಲೋಕವನ್ನು ತೋರಿಸಿದ ತಮಗೆ ನಾನು ಕೃತಜ್ಞ” ಎಂದ.

“ಪ್ರಭಾಲೋಕ” ವೆಂದಾಗ ಪ್ರಭೆಯ ಮುಖ ಕೆಂಪೇರಿ ತಲೆ ತಗ್ಗಿಸಿದಳು. ಅವಳ ಗೆಳತಿಯರು ಅವಳತ್ತ ನಗುವಿನ ನೋಟ ಬೀರಿದರು. ಅದನ್ನು ಗಮನಿಸದೇ ಅಶ್ವಘೋಷ ತನ್ನ ಮಾತು ಮುಂದುವರೆಸಿದ”… ನೀವು ನಿಮ್ಮ ನಾಢಿನ ಕತೆಯೋಂದರ ಪ್ರಾಕೃತ ರೂಪವನ್ನು ಪ್ರದರ್ಶಿಸಿರುವಿರಿ. ನಮ್ಮ ನಾಢಿನ ಕತೆಗಳನ್ನು ಈ ಮಾಧ್ಯಮದಲ್ಲಿ ಉತ್ತಮವಾಗಿ ಪ್ರದರ್ಶಿಸಲು ಸಾಧ್ಯವಿದೆ  ಎನಿಸುತ್ತದೆ” ಎಂದ.

“ಕವಿ, ನೀವು ಈ  ಕಲೆಯಲ್ಲಿ ಕೈಹಾಕಿದರೆ ನಮ್ಮ ಕೃತಿಗಳಿಗಿಂತಲೂ ಉತ್ತಮವಾದುದನ್ನೇ ನಾವು ಪಡೆಯುತ್ತೇವೆ ಎಂಬ ನಂಬಿಕೆ” ನಮಗಿದೆ.

“ಅಹ ಸರಿ ಸರಿಯಲ್ಲ. ಯವನ ನಾಟಕ ಕಾರರಿಂದ ನಾನು ಅರಿಬೇಕಾದುದು ತುಂಬಾ ಇದೆ… ಊರ್ವಶಿ ವಿಯೋಗವನ್ನೇ ಉತ್ತಮ ನಾಟಕವಾಗಿ ಮಾಡಬಹುದು ಎನಿಸುತ್ತದೆ… ಬರೆಯಲೇ?”

“ಬರೆದರೆ ನಾವು ಅದನ್ನು ಅಭಿನಯಿಸಲು ಸಿದ್ಧ. ಪುರೂರವನ ಪಾತ್ರ ನಿವೇ ವಹಿಸಬೇಕು…. ಹಿಂಬದಿಯ ಚಿತ್ರಪಟಗಳ ಬಗ್ಗೆ ತಿಳೀವು ಕೊಡಸಬೇಕು”

“ಅಷ್ಟು ಮಾತ್ರವೇ ಅಲ್ಲ, ವೇಷಭೂಷಣಗಳನ್ನೂ ನೀವೇ ತಿಳಿಹೇಳಬೇಕು. ಊರ್ವಶಿ ಪಾತ್ರಕ್ಕೆ ಪ್ರಭೆ ಸೂಖ್ತ ಎನಿಸುತ್ತದೆ. ನಿಮ್ಮ ಆಭಿಪ್ರಾಯ…. ಆಕೆಯ ಅಭಿನಯ ಇಂದು ತಾನೇ ನೋಡಿದರಲ್ಲಾ…”

ಊರ್ವಶಿ ವಿಯೋಗವನ್ನೇ ಉತ್ತಮ ನಾಟಕವಾಗಿ ಮಾಡಬಹುದು ಎನ್ನಿಸುತ್ತದೆ. ಬರೆಯಲೇ?"

“ಅಭಿನಯದ ಬಗ್ಗೆ ನಾನೇ ನಿಮ್ಮಿಂದ ಕಲಿಯಬೇಕಾಗಿದೆ ಎಂಬುವುದು ನಿಜ. ಆದರೆ ಪ್ರಭೆಯ ಅಭಿನಯದಲ್ಲಿ ನನಗೆ ಲೋಪಗಳು ಗೊತ್ತಾಗಲಿಲ್ಲ. ಆದ್ದರಿಂದ ಆಗಬಹುದು ಎನಿಸುತ್ತದೆ”.

“ಹಾಗಿದ್ದರೆ ಶುಭಸ್ಯ ಶೀಘ್ರಂ, ಹಸ್ತಪ್ರತಿಯನ್ನು ತ್ವರಿತವಾಗಿ ಸಿದ್ಧಗೊಳಿಸಿ:”.

ಸಂಸ್ಕೃತ ಸಾಹಿತ್ಯದ ಮೊದಲ ನಾಟಕ ರೂಪಗೊಳ್ಳಲು ಇದೇ ಭೂಮಿಕೆಯಾಯಿತು. ಪ್ರಾಕೃತ ಭಾಷೆಯಲ್ಲಿ ಅನೇಕ ಯವನರ ನಾಟಕಗಳು ಅಂದಿನ ಬರಹಗಾರರಿಗೆ ಪರಿಚಿತವಾಗಿತ್ತು. ಭಾರತದಲ್ಲಿ ನೆಲೆಸಿದ್ದ ಯವನರು ತಮ್ಮ ಸಮುದಾಯಗಳಲ್ಲಿ ಅವನ್ನು ಪ್ರದರ್ಶಿಸುತ್ತಲೂ ಇದ್ದರು. ಇದು ಇತಿಹಾಸಕ್ಕೆ ಸಮ್ಮತವಾದ ಸಂಗತಿ. ನಾಟಕವು ಭಾರತದಲ್ಲಿ ಯವನರ ಪ್ರಭಾವದಿಂದಲೇ ರೂಪುಗೊಂಡದ್ದು ಎಂಬುವುದು ಅನೇಕ  ಪಂಡಿತರ ಅಭಿಪ್ರಾಯ. ಕವಿ ಅಶ್ವಘೊಷನೇ ಭಾರತದ ಪ್ರಥಮ ನಾಟಕಕಾರನಾಗಿ ರೂಫುಗೊಂಡಿದ್ದು ಹೀಗೆ ಎಂಬುವುದು ಸಮಂಜಸವಾದ ಕಲ್ಪನೆಯೇ. “ಊರ್ವಶೀ ವಿಯೋಗ” ಸಂಸ್ಕೃತ ಸಾಹಿತ್ಯದ ಹಾಗೂ ಭಾರತದ ಮೊದಲ ನಾಟಕವಾಯಿತು.

ಕವಿಯನ್ನು ಕಾಪಾಡಿಕೊಂಡು ಬನ್ನಿ

ಈ ನಾಟಕದ ಮೂಲಕ ಅಶ್ವಘೋಷ್, ಪ್ರಭಯೆರ ಸಖ್ಯೆ ಮತ್ತಷ್ಟು ಬಂಧುರವಾಯಿತು. ದಿನಕಳೆದಂತೆ ಆ ಸಖ್ಯವು ಅನುರಾಗವಾಯಿತು. ಯವನ ತರುಣ ಅಶ್ವಘೋಷನನ್ನು ಗೌರವಿಸುತ್ತಿದ್ದುದು ಮಾತ್ರವಲ್ಲ, ಅವನು ತಮ್ಮವನೇ ಎನ್ನವಷ್ಟು, ಆತ್ಮೀಯತೆಯಿಂದ ಕಾಣುತ್ತಿದ್ದರು. ಯವನರ ಈ ಕಲೆಯ ಸ್ಮೃತಿಯನ್ನು ಚಿರಂತನಗೊಳಿಸಲು ರಂಗದ ಮೇಲೆ ಹಿಂಬದಿಗಾಗಿ ಇರಿಸುತ್ತಿದ್ದ ಚಿತ್ರಮಯ ಪರದೆಯನ್ನು “ಯವನಿಕಾ” ಎಂದೇ  ತನ್ನ ನಾಟಕ ಗಳಲ್ಲಿ ಅಶ್ವಘೋಷ ಹೆಸರಿಸಿದ.ರಂಗದ ಹಿಂಭಾಗವನ್ನು ನೇಪಥ್ಯ  ಎನ್ನುತ್ತಿದ್ದರು. ಈ “ಯವನಿಕಾ: ರಂಗವನ್ನು ನೇಪಥ್ಯದಿಂದ ಬೇರ್ಪಡಿಸುವ ತೆರೆ ಎಂದು ಗುರುತಿಸಿದ. ಇಂದಿಗೂ ಅದೇ ಹೆಸರೇ ರೂಢಿಯಲ್ಲಿದೆ. ಆ ಕಾಲದಲ್ಲಿ ಪ್ರೇಕ್ಷಕರಿಗೂ, ರಂಗಕ್ಕೂ ಮಧ್ಯೆ ತೆರೆ ಇರುತ್ತಿರಲಿಲ್ಲ. ಹಿನ್ನೆಲೆಯ ತೆರೆ ಒಂದೇ ಇದ್ದು ಅದು ಮಾರ ದೃಶ್ಯಕ್ಕೆ ಅನುಗುಣವಾಗಿ ಬದಲಾಗುತ್ತಿತ್ತು. ಸಾರಿಪುತ್ರ, ಪ್ರಕರಣ, ರಾಷ್ಟ್ರಪಾಲ, ಮುಂತಾದ ನಾಟಕಗಳನ್ನ ನಂತರದಲ್ಲಿ ಅಶ್ವಘೋಷನೇ ಬರೆದ ಎನ್ನುತ್ತಾರೆ.

ಅವನ ಪ್ರೇಯಸಿ ಪ್ರಭೆಯು ಒಮ್ಮೆ “ಸಾಕೇತ ವಾಸಿಗಳೆಲ್ಲರ ನಾಲಿಗೆಯ ಮೇಲೂ ನಿಮ್ಮ ಹೆಸರೇ ನಲಿಯುತ್ತಿದೆ. ನಾನೋ ಅನ್ಯದೇಶಿಯಳು” ಎಂದು ಇನಿದನಿಯಲ್ಲಿ ತನ್ನ ನೋವನ್ನು ಪ್ರೀಯನೊಂದಿಗೆ ತೋಡಿಕೊಂಡಳು.

“ಪ್ರಭಾ, ನನ್ನ ಮಟ್ಟಿಗೆ ನನಗೆ ಊರ್ವಶಿಯೇ ಸರ್ವಸ್ವ. ನಾನು ಅವಳನ್ನು ಕಾಣದೇ ದಿನವನ್ನೇ ಕಳೆಯಲಾರೆ. ಈಗ ಅಷ್ಟು ದುರ್ಬಲ ಚಿತ್ತನಾಗಿದ್ದೇನೆ. ನಿನ್ನನ್ನು ಕಾಣದೆ ಇದ್ದರೆ ಅದೇನಾಗುತ್ತೇನೋ ಎಂದು ನನಗೆ ಅಚ್ಚರಿಯಾಗುತ್ತದೆ”.

“ಕವಿ,. ಇಷ್ಟೊಂದು, ಸ್ವಾರ್ಥಿಗಳಾಗಬೇಡಿ. ನಿಮ್ಮ ನಾಡಿನ ಶಾಶ್ವತ ಗಾಯಕ- ಕವಿ ನೀವು. ಜನಕೋಟಿ ನಿಮ್ಮ ಬಗ್ಗೆ ಎಂತಹ ಭವ್ಯ ಆಶೋತ್ತರಗಳನ್ನು ಇರಿಸಿ ಕೊಂಡಿದೆಯೇ! ಅದನ್ನೆಲ್ಲಾ ನೀವು ಮರೆಯಬಹುದೇ? ನಿಮ್ಮ “ಊರ್ವಶೀ ವಿಯೋಗ” ನಾಟಕವನ್ನೇ ನೋಡಿ, ಎಷ್ಟು ಮಂದಿಯ ಪ್ರಶಂಸೆಯನ್ನು ಗಳಿಸಿದೆ!”

“ನಿನ್ನ ಅಭಿಮಾನಕ್ಕೆ ಕೃತಜ್ಞ, ಪ್ರಭಾ. ನನಗೆ ಬಾಳಿನಲ್ಲಿ ಮತ್ತೇನೂ ಬೇಡ”.

“ಹಾಗೆ ನೀವು ಹೇಳಬಾರದು. ಈ ಪ್ರಭೆಯ ಪ್ರೇಮಿಯಾದ ಅಶ್ವಘೋಷ  ಮತ್ತು ಈ ಯುಗದ ಕವಿ ಸಾಮ್ರಾಟ ಅಶ್ವಘೋಷ ಇಬ್ಬರನ್ನೂ ಬೇರೆಬೇರೆಯಾಗಿ ಪರಿಗಣಿಸಬೇಕು. ಪ್ರಭಾ  ಅಶ್ವಘೋಷನನ್ನು ನೀವು ಏನೇ ಮಾಡಿದರೂ ನನಗೆ ಸಮ್ಮತವೇ. ಆದರೆ ಕವಿ ಸಾಮ್ರಾಟ ಅಶ್ವಘೋಷನನ್ನು ಮಾತ್ರ ಸಮಸ್ತ ಸಾರಸತ್ವತದ ಸಂಪತ್ತೆಂದು ತಿಳಿದು ಕಾಪಾಡಿಕೊಂಡು ಬನ್ನಿ”.

“ನಿನ್ನ ನುಡಿಯಂತೆಯೇ ನಡೆಯುತ್ತೇನೆ ಪ್ರಭಾ”

“ಇಷ್ಟೊಂದು ಸೌಭಾಗ್ಯಶಾಲಿನಿ ನಾನೆಂದು ಭಾವಿಸಿರಲಿಲ್ಲ”.

‘ಏಕೆ ಪ್ರಭಾ?’

“ನನ್ನನ್ನು ನೀವು ಮರೆತಿರಬಹುದೆಂದು ಭಾವಿಸಿದ್ದೇ.” ನಿನ್ನಿಂದಲೇ ನನ್ನ ಕವಿತೆಗೆ ಹೊಸತನ ಬಂದಿದೆ. ನನ್ನ ಕವನ-ಗೀತೆಗಳಿಗೆ ನೀನೇ ಪ್ರೇರಣ ಸ್ರೋತವಾಗಿರುವೆ. ನನ್ನ ಗೀತೆ ಕಾವ್ಯ “ಊರ್ವಶಿ ವಿಯೋಗಕ್ಕೆ” ಮುಖ್ಯ ಪ್ರೇರಣೆ ನೀನೇ. ಈಗ ನಾಟಕವನ್ನು ಪ್ರಸಾಧಿಸಿದ್ದೂ ನೀನೇ.  ನನ್ನ ರಾಷ್ಟ್ರಕ್ಕೆ ಅದನ್ನು ನವೀನ ಸಂಪತ್ತನ್ನಾಗಿಸುತ್ತೇನೆ ಪ್ರಭಾ. ಇಂತಹ ನಿನ್ನನ್ನು ನಾನು ಮರೆಯುವುದು ಸುಲಭವೇ?”

“ಹಾಗಾದರೆ ನೀವಿ ಪ್ರಭೆಯನ್ನು… ” ಎನ್ನುತ್ತಾಪ್ರಭೆಯ ಗಂಟಲು ತುಂಬಿ ಬಂತು.

ಅವಳ ಕಂಬನಿಯನ್ನು ಒರೆಸುತ್ತಾ ಅಶ್ವಘೋಷ “ಎಲ್ಲ ಕಾಲಕ್ಕೂ ಅಶ್ವಘೋಷ ನಿನ್ನವನೇ ಪ್ರಭಾ. ಕಾಲನೂ ಕೂಡ ನಮ್ಮನ್ನು ಅಗಲಿಸಬಾರ ಎಂದ.

“ಊರ್ವಶಿ ವಿಯೋಗ”ದ ಅಭಿನಯ ಅದೆಷ್ಟೋ ಬಾರಿ ನಡೆಯಿತು.  ಆ ನಾಟಕ ಸಾಕೇತ ಕೋಸಲಗಳ ಎಲ್ಲೆಯನ್ನು ಮೀರಿ ದೂರದೂರದ ದೇಶಗಳಲ್ಲಿ ಪ್ರಚಾರ ಗೊಂಡಿತು.

 ತಂದೆ ತಾಯಿಯರಿಗೆ ಅಸಮಾಧಾನ :

ರಂಗದ ಮೇಲೆ ಅಶ್ವಘೋಷನ ಅಭಿನಯ, ಯವನ ತರುಣ ಪ್ರಭೆಯೊಂದಿಗೆ ಅವನ ಸಖ್ಯವು ಅವರ ತಾಯಿ ತಂದೆಗಳಿಂದ ರಹಸ್ಯವಾಗಿ ಉಳಿದಿರಲಿಲ್ಲ. ಪ್ರಭೆಯ ತಾಯಿ ತಂದೆಗಳು ಅಶ್ವಘೊಷನನ್ನು ಅಂಗೀಕರಿಸಿದ್ದರು. ಆದರೆ ಅಶ್ವಘೋಷನ ತಂದೆ ತಾಯಿಗಳಿಗೆ ಇದು ಪ್ರೀಯವಾಗಿರಲಿಲ್ಲ. ಆರ್ಯೆ ಸುವರ್ಣಾಕ್ಷಿಯು ತನ್ನ ಅಕ್ಕರೆಯ ಮಗನನ್ನು ಮಮತೆಯಿಂದ, “ಬ್ರಾಹ್ಮಣ ಕುಲಕ್ಕೆ ಈ ರಿತಿಯ ಸಂಬಂದ ಸಲ್ಲದು ಮಗು” ಎಂದು ತಿಳಿ ಹೇಳಿದಳು.

ಸರ್ವಶಾಸ್ತ್ರ ಪಾರಂಗತನಿಗೆ ತಾಯಿಯ ಮಾತು ಅಜ್ಞಾನದ ಪರಮಾವಧಿ ಎನಿಸಿತು. “ಬ್ರಾಹ್ಮಣವು ತಪ್ಪಸ್ಸು- ಅಧ್ಯಯನ- ಹುಟ್ಟುಗಳಿಂದ ಬರುವಂತಹದು. ಕೇವಲ ಹುಟ್ಟಿನಿಂದ ಬಂದ ಬ್ರಾಹ್ಮಣ ತುಂಬಾ ಕನಿಷ್ಠವಾದಂತಹುದು. ಬ್ರಾಹ್ಮಣ ಸಂಸಾರದಲ್ಲಿ ಹುಟ್ಟಿದ ಮಾತ್ರದಿಂದ ಒಬ್ಬ ಮನುಷ್ಯ ಬ್ರಾಹ್ಮಣ ನಾಗುವುದಿಲ್ಲ. ತಪಸ್ಸು ಮಾಡಬೇಕು. ಚೆನ್ನಾಗಿ ಓದಿ ವಿದ್ಯಾವಂತನಾಗಬೇಕು , ತಪ್ಪಸ್ಸು ಅಧ್ಯಯನಗಳಿಂದ ಸಾಧಿಸುವ ಬ್ರಾಹ್ಮಣ್ಯವೇ ಶ್ರೇಷ್ಠ” ಎಂದು ಬ್ರಾಹ್ಮಣನ ಲಕ್ಷಣಗಳನ್ನು ತಾಯಿಗೆ ವಿವರಿಸಿದ.

ಅಶ್ವಘೋಷನ ಉತ್ತರದಿಂದ ಆ ತಾಯಿಯು ಸಂತುಷ್ಟಗಳಾಗಲಿಲ್ಲವಾದರೂ ತನ್ನ ಮಗ ಅವಳಿಂದ ಬೇರೆಯಾಗಿ ಬದುಕಲಾರನೆಂದು ತಿಳಿದಾಗ ಮುಂದೆ ಮಾತನಾಡಲಾರದಾದಳು. ಪ್ರಭೆಯನ್ನು ಅವನೇ ತನ್ನ ತಾಯಿಯ ಬಳಿಗೆ ಕಳುಹಿಸಿದ. ರೂಪದ ಗಣಿಯಾಗಿದ್ದಂತೆಯೇ ಸುಗುಣಗಳ ಆಗರವಾಗಿದ್ದ ಅವಳು ಅಕೆಯ ಚಿತ್ರವನ್ನು ಮೊದಲ ನೋಟದಲ್ಲಿಯೇ ಅಪಹರಿಸಿದಳೂ. ಆಕೆಯ ಪ್ರಭೇಯನ್ನು ಮೆಚ್ಚಿ ಮನತುಂಬಾ ಹರಸಿದಳು. ಈ ಸಂಬಂಧ ಅಶ್ವಘೋಷನ ತಂದೆಗೆ ಒಪ್ಪಿಗೆಯಾಗಲಿಲ್ಲ. “ಕೇವಲ ಕುಲೀನ ಬ್ರಾಹ್ಮಣ ಕನ್ಯೆಯನ್ನು ಮಾತ್ರವೇ ಸೊಸೆಯಾಗಿ ಸ್ವೀಕರಿಸುವ ಪದ್ಧತಿ ಇರುವ ಶ್ರೇಷ್ಠ ಶ್ರೋತ್ರೀಯ ಬ್ರಾಹ್ಮಣ ಕುಲ ನಮ್ಮದು. ಈಗ ಯವನ ಕನ್ಯೆಯನ್ನು ಸ್ವೀಕರಿಸಿದರೆ ನಮ್ಮ ಸಂತಾನ ವರ್ಣಭ್ರಷ್ಟವಾಗುವುದು ಮಾತ್ರವಲ್ಲ ನಮ್ಮ ವಂಶವೇ ಅಳಿದುಹೋಗುತ್ತದೆ” ಎಂದು ತನ್ನ ಚಿಂತೆಯನ್ನು ತೋಡಿಕೊಂಡ. ಪ್ರಭೆಯ ನೆರವನ್ನು ಕೋರಿದ.

ಆದರೂ ಅಶ್ವಘೋಷ ಪ್ರಭೆಯನ್ನು ಬಿಡುವ ಯೋಚನೆ ಮಾಡಲಿಲ್ಲ.

ಅಶ್ವಘೋಷ್ ವರ್ಣ ವಿಭಜನೆಯ ಪೊಳ್ಳುತನ, ಶ್ರೇಷ್ಠ ಕುಲೀನರ ಅಂತರಂಗದ ಮೌಢ್ಯವನ್ನು ಚೆನ್ನಾಗಿ ಅರಿತ್ತಿದ್ದನು. ಅದನ್ನು ನಂಬಿರುವವರ ಪಾಲಿಗೆ ಬಂಡಾಯದ ಸ್ವರೂಪವಾದನು. ಪ್ರಭೆಯ ಪ್ರೇಮವು ಅವನನ್ನು ವೈದಿಕ ಧರ್ಮದಲ್ಲಿದ್ದ ಜಾತಿ ಪದ್ಧತಿಯ ವಿರುದ್ಧ ಬಲಗೊಳಿಸಿತು.

ಪ್ರಭೆ ದೂರವಾದಳು:

ಯವನರಲ್ಲಿ ಬಹುಪಾಲು ಬುದ್ಧ ಧರ್ಮವನ್ನು ಸ್ವೀಕರಿಸಿದವರೇ. ಇದರಿಂದ ಬೌದ್ಧ ಅಚಾರ-ವಿಚಾರಗಳು ಅವನಿಗೆ ಪರಿಚಯವಾಯಿತು.

ಬುದ್ಧನು ಭಿಕ್ಷುಕ ಸಂಘವನ್ನು ಸಾಗರವೆನ್ನುತ್ತಿದ್ದ ನಂತೆ. ಸಂಘಕ್ಕೆ ಸೇರಿದವರೆಲ್ಲರೂ ತಮ್ಮನಾಮರೂಪಗಳನ್ನು ಕಳೆದುಕೊಂಡು ಬೃಹತ್ತಿನಲ್ಲಿ ಸೇರಿಹೋಗುತ್ತಾರೆ. ಇದು ಕೇವಲ ಭಿಕ್ಷು ಕುಲಕ್ಕೆ ಸೀಮಿತವಾಗಿತ್ತು. ಬೌದ್ಧ ಗೃಹಸ್ಥರು ಇತರರಂತೆ ಅನೇಕ ಅಂತರಂಗಗಳನ್ನು ಪಾಲಿಸುವುದನ್ನೂ ಅಶ್ವಘೋಷ ಗಮನಿಸಿದ. ತಾನು ಹುಟ್ಟಿದ್ದ ವೇದಮತಕ್ಕಿಂತಲೂ ಬೌದ್ಧ ಮತವೇ ಅವನಿಗೆ ಹೆಚ್ಚು ಒಪ್ಪಿಗೆಯಾಗುತ್ತಿತ್ತು.

ಪ್ರಭಾ ಅಶ್ವಘೋಷರ ಸ್ನೇಹ ತುಂಬಾ ವೃದ್ಧಿಸಿತು. ತಂದೆಯ ವಿರೋಧವಿಲ್ಲದಿದ್ದಲ್ಲಿ ಅವರ ವಿವಾಹ ಎಂದೋ ನೆರವೇರಬೇಕಾಗಿತ್ತು. “ಪ್ರಭಾ , ನಿನ್ನ  ಪ್ರೇಮದಿಂದ ನಾನು ವಂಚಿತನಾದರೆ ಏನಾಗುತ್ತೇನೆಯೋ” ಎಂದು ಒಮ್ಮೆ ಅಶ್ವಘೋಷ ಹೇಳಿದ್ದ.

“ಸದಾ ಹುಣ್ಣಿಮೆಯೇ ಇರದು. ಅಮವಾಸ್ಯೆಯು ಬರುವುದು ಸತ್ಯ. ನಮ್ಮಲ್ಲಿ ಒಬ್ಬರು ಇಲ್ಲದಿರುವಾಗ ಇನ್ನೊಬ್ಬರು ಏನು ಮಾಡಬೇಕು ಪ್ರೀಯಾ?” ಪ್ರಭೆಯ ಪ್ರಶ್ನೆ.

ನಿಟ್ಟಿಸಿರಿಡುತ್ತಾ ಅಶ್ವಘೋಷ ” ನೀನೇ ಹೇಳು ಪ್ರೀಯೆ” ಎಂದು ಮೆಲ್ಲನೆ.

“ಆತ್ಮಹತೆಯ ಮೂರ್ಖರ ಕೆಲಸವೆಂದು ಬುದ್ಧ ಭಗವಾನರೇ ಹೆಳಿದ್ದಾರೆ.  ಅದರಿಂದ ಯಾವ ರೀತಿಯ ಸಾಧನೆಯೂ ಸಾಧ್ಯವಿಲ್ಲ. ಈಗ ವೀಣೆ ನುಡಿಸುವುದಲ್ಲಿ ಪ್ರಾವಿಣ್ಯತೆ ಸಾಧಿಸುತ್ತಿದ್ದೇನೆ. ನೀವಿಲ್ಲದಿರುವಾಗ ನನ್ನ ಮನದ ಆರಾಧ್ಯಮೂರ್ತಿ ಅಶ್ವಘೋಷನ ಅರಾಧನೆ ಸಾಗಿಸುತ್ತೇನೆ. ವೀಣೆ ನುಡಿಸುತ್ತಾ ಎಂಟು ದಿಕ್ಕುಗಳೂ ಪ್ರತಿಧ್ವನಿಸುವಂತೆ ನಿಮ್ಮ ಹಾಡುಗಳನ್ನೇ ಹಾಡುತ್ತಾ ಜೀವನ ಸವೆಸುತ್ತೇನೆ.. ನಾನಿಲ್ಲದಿರುವಾಗ ನೀವೇನು ಮಾಡುವಿರಿ?…

ಅಶ್ವಘೋಷನ ತುಟಿ ನಡುಗುತ್ತಿತ್ತು. ಮಾತೇ ಹೊರಬರುತ್ತಿರಲಿಲ್ಲ. ಕಣ್ಣೀರು ತುಂಬಿತು. ತಗ್ಗಿದ ಧ್ವನಿಯಲ್ಲಿ “ಅಬ್ಬ, ನನಗೆ ಆ ಘಳಿಗೆ ತುಂಬಾ ಭಯಾನಕವೆನಿಸುತ್ತದೆ. ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ  ಪ್ರಭಾ. ನಿನ್ನ ಅಮರ ಪ್ರೇಮದ ಪ್ರೇರಣೆಯಿಂದ ನನ್ನ ಹೃದಯದಲ್ಲಿ ಹುಟ್ಟುವ ಗೀತೆಗಳನ್ನು ನನ್ನ ಬಾಳಿನ ಕೊನೆಯ ತನಕ ಹಾಡುತ್ತೇನೆ. ನಿನ್ನ ಅಶ್ವಘೋಷನನ್ನು ಶಾಶ್ವತ ಗೊಳಿಸುತ್ತೇನೆ… ” ಎಂದಾಗ ಅವನ ಕೊರಳು ಪೂರ್ಣವಾಗಿ ಕಟ್ಟಿತು.

ಸುವರ್ಣಾಕ್ಷಿ ಅನಾರೋಗ್ಯದಿಂದ ಹಾಸಿಗೆ ಹಿಡಿದಳು ಅಶ್ವಘೋಷನು ತಾಯಿಯ ಶುಶ್ರೂಷೆಯಲ್ಲಿ ಮಗ್ನನಾದ. ಪ್ರಭೆಯಿಂದ ದೂರ ಉಳಿದ. ಹಠಾತ್ತನೆ ತಾಯಿ ಕೊನೆಯುಸಿರೆಳೆದಾಗ ಅಶ್ವಘೋಷ ದಿಕ್ಕು ಕಾಣದವನಾದ.  ತಾಯಿಗಾಗಿ ಕಣ್ಣೀರು ಸುರಿಸುತ್ತಾ ದಿನವೆಲ್ಲಾ ಕಳೆದ. ದಹನ ಕರ್ಮವನ್ನು ಮುಗಿಸಿದ ನಂತರ ಪ್ರಭೆಯನ್ನು ಕಾಣಲು ಹೊರಟ.

ಪ್ರಭೆ ತನ್ನ ಕೋಣೆಯಲ್ಲಿರಲಿಲ್ಲ. ಅವಳ ಕೋಣೆ ಅಚ್ಚುಕಟ್ಟಾಗಿತ್ತು. ಹಾಸಿಗೆಯೂ ಶುಭ್ರವಾಗಿತ್ತು. ಹಾಸಿಗೆಯ ದಿಂಬಿನ ಬಳಿ ಅಶ್ವಘೋಷನ ಚಿತ್ರವೊಂದನ್ನು ಇರಿಸಲಾಗಿತ್ತು. ಪಕ್ಕದಲ್ಲಿ ಬಾಡಿದ ಮಲ್ಲಿಗೆಯ ಮಾಲೆ, ಅದರಡಿಯಲ್ಲಿ ಮುದೆರೆ ಹೊತ್ತ ಭೂರ್ಜ ಪತ್ರ ಅದರಲ್ಲಿ ಪ್ರಭೆಯ ಸುಂದರ ಬರಹ:

ಪ್ರಿಯತಮ, ಪ್ರಭೇ ನಿಮ್ಮಿಂದ ಬಿಳ್ಕೊಳ್ಳುತ್ತಿದ್ದಾಳೆ. ನನ್ನ ಪ್ರೇಮಕ್ಕೆ ಪ್ರತಿಯಾಗಿ ನೀವು ಕೊಟ್ಟಿರುವ ವಚನವನ್ನು ನೆನಪಿಸಿನಲ್ಲಿರಿಸಿಕೊಳ್ಳಿ. ನನ್ನ ಅನಂತ ಪ್ರೇಮ, ಶಾಶ್ವತ ಸೌಂಧರ್ಯ ಸದಾ ನಿಮ್ಮನ್ನು ಅಮರಕೃತಿಗಳ ರಚನೆಗೆ ಪ್ರೇರೇಪಿಸುತ್ತಿರಲಿ. ಈ ಪ್ರೇರಣೆಯನ್ನು ತಿರಸ್ಕರಿಸಬೇಡಿ. ನೀವು ಸಾರಸ್ವತಲೋಕದಲ್ಲಿ ಅಮರರಾಗಲಿ ಎಂಬ ಮಹದಾಸೆಯಿಂದಲೇ ಈ ಆತ್ಮಾರ್ಪಣೆ ನಡೆಸಿದ್ದೇನೆ. ನಾನು ಆತ್ಮಹತ್ಯೆ ಖಂಡಿತವಾಗಿಯೂ ಮಾಡಿಕೊಂಡಿಲ್ಲ.

ನಿಮ್ಮ ಪ್ರೀತಿಯಪಾತ್ರಳಾದ -ಪ್ರಭೆ.

ಬೌದ್ಧ ಭಿಕ್ಷು :

ಅಶ್ವಘೋಷ ಸ್ತಬದ್ಧನಾಗಿ ನಿಂತ. ಕಣ್ಣೀರು ಪ್ರವಾಹವಾಗಿ ಹರಿಯುತ್ತಿತ್ತು. ತಾಯಿಯ ಸಾವಿನೊಂದಿಗೆ ಪ್ರಭೆಯ ಆತ್ಮಾರ್ಪಣೆ ಬರಸಿಡಿಲಾಗಿತ್ತು. ಮಾತಿಲ್ಲದೆ ಗರಬಡಿದವನಂತೆ ಎರಡು ದಿನ ಅಲ್ಲಿಯೇ ಕುಳಿತ್ತಿದ್ದ. ನಂತರ ಏನೋ ಕಂಡುಕೊಂಡವನಂತೆ ಎದ್ದು “ಪ್ರಭೆ ತನಗೆ ವಹಿಸಿರುವ ಕೆಲಸವನ್ನು ನಾನ ನಿರ್ವಹಿಸಲೇಬೇಕು. ಅವಳ ಆತ್ಮಾರ್ಪಣೆ ನಿಷ್ಪಲವಾಗಬಾರದು. ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ…., ಅಶ್ವಘೋಷ ಕೃತಜ್ಞನಲ್ಲ… ಅವನು ಮಹಾಕವಿ.. ” ಎನ್ನುತ್ತಾ ತನ್ನ ತಂದೆಯ ಬಳಿಗೆ ನಡೆದ. ಭಿಕ್ಷುವಾಗಲು ಅಪ್ಪಣೆ ಬೇಡಿದ.  ತನ್ನ ಗುರಿ ಸಾಧನೆಗೆ ಅದೊಂದು ಹಾದಿ ಎಂಬುವುದನ್ನು ಸ್ವಷ್ಟವಾಗಿ ತಿಳೀಸಿದ.

ಒಬ್ಬನೇ ಮಗನು ಭಿಕ್ಷುಕನಾಗಲು ತಂದೆ ಹೇಗೆ ತಾನೆ ಒಪ್ಪುತ್ತಾನೆ? ಎಷ್ಟು ಬೇಡಿದರೂ ಮಗ ಜಗ್ಗಲಿಲ್ಲ. ಅನ್ಯಮಾರ್ಗ ಕಾಣದೆ ಒಪ್ಪಲೇಬೇಕಾಯಿತು.  ಸಾಕೇತದ ಆರ್ಯ ಸರ್ಲಾಸ್ತಿವಾದ ಸಂಘವು ಅಶ್ವಘೋಷನಿಗೆ ಭಿಕ್ಷು ಧೀಕ್ಷೆ ದಯಪಾಲಿಸಿತು. ಮಹಾಸ್ಥರವಿರ ಧರ್ಮಸೇನರೇ ಆತನ ಉಪಾಧ್ಯಾಯರಾದರು. ಭದಂತ ಧರ್ಮರಕ್ಷಿತರು ಆಚಾರ್ಯರಾದರು. ಸ್ವಲ್ಪ ಕಾಲದ ನಂತರ ಅವರೊಂದಿಗೆ ಸಾಕೇತವನ್ನು ತೊರೆದು ಪಾಟಲಿಪುತ್ರಕ್ಕೆ ತೆರಳಿದ ಅಶ್ವಘೋಷ.

ಇದು ರಾಹುಲ ಸಾಂಕೃತ್ಯಾಯನರ ಒಂದು ಕಲ್ಪನೆ.

 

ಬೌದ್ಧ ಭಿಕ್ಷು

ಕೀರ್ತಿ ಬೆಳೆಯಿತು :

ಪಾಟಲಿಪುತ್ರದಲ್ಲಿಯ ಅಶೋಕಾರಾಮದಲ್ಲಿ ಬೌದ್ಧ ದರ್ಶನದೊಂದಿಗೆ ಯವನ ದರ್ಶನವನ್ನೂ ಅಶ್ವಘೋಷ ಅಧ್ಯಯನ ಮಾಡಿದ. ಮಗಧದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಸ್ಥಾನವನ್ನು ಗಳಿಸಿಕೊಂಡ. ಶಕ ಸಾಮ್ರಾಟ್ ಕನಿಷ್ಕ ಪೂರ್ವ ದೇಶಗಳನ್ನು ಜಯಿಸುತ್ತಾ ಪಾಟಲಿಪುತ್ರ ಪ್ರವೇಶಿಸಿದವು. ಆತ ಆಗಲೇ ಬೌದ್ಧ ಧರ್ಮದತ್ತ ಒಲವು ಬಳೆಸಿಕೊಂಡಿದ್ದ. ಗಾಂಧಾರಕ್ಕೆ ತನ್ನೊಂದಿಗೆ ಕರೆದೊಯ್ಯಲು ಯೋಗ್ಯ ವಿದ್ವಾಂಸನನ್ನು ಕೋರಿದಾಗ ಭಿಕ್ಷೆ ಸಂಘವು ಅಶ್ವಘೋಷನನ್ನು ಅರಿಸಿ ಕಳುಹಿಸಿಕೊಟ್ಟಿತು.

ಗಾಂಧಾರದ ರಾಜಧಾನಿ ಪುರುಷ ಪುರ (ಪೇಷಾವರ)ದಲ್ಲಿ ಶಕ, ಯವನ, ತುರಷ್ಕ, ಪಾರ್ಶವ (ಪಾರ್ಸಿ) ಮತ್ತು ಭಾರತೀಯ ಸಂಸ್ಕೃತಿಗಳು ಸಮಾಗಮ ಹೊಂದ್ದಿದುದನ್ನು ಕಂಡ. ಮೊದಲೇ ಯವನರ ನಾಟಕ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಈಗ ಯವನ ದರ್ಶನವನ್ನೂ ಅಭ್ಯಾಸ ಮಾಡಿದ್ದ. ಅದರ ವಿಶೇಷಗಳನ್ನು ತನ್ನದಾಗಿ ರೂಢಿಸಿಕೊಂಡಿದ್ದ. ಪ್ರಭೆ ಅವರ ಹೃದಯವನ್ನು ವಿಶಾಲಗೊಳಿಸಿದ್ದಳು. ಇದರಿಂದ ಬೌದ್ಧ ದರ್ಶನವು ಸಮೃದವಾಗಿ ಬೆಳೆಯುವುದು ಸಾಧ್ಯವಾಯಿತು. ಇತರರಿಂದ ಸ್ವೀಕರಿಸುವ ವೈಶಾಲ್ಯವನ್ನು ಬುದ್ಧ ಧರ್ಮಕ್ಕೆ ರೂಢಿಸಿಕೊಟ್ಟವನು ಈತನೇ.

ರಾಜಾಶ್ರಯದಲ್ಲಿದ್ದ ಅಶ್ವಘೋಷ ತನ್ನ ಕಾಲದ ಬೌದ್ಧ ಭಿಕ್ಷುಗಳಲ್ಲಿ ಅತ್ಯಂತ ಪ್ರಖ್ಯಾತನೂ, ಗೌರವಾನ್ವಿತನೂ ಆಗಿದ್ದ. ಬೌದ್ಧ ಧರ್ಮದಲ್ಲಿ ಮಹಾಯಾನ ಪಂಥದ ಆದಿ ಪ್ರವರ್ತಕನಾದ. ಇದರಿಂದ ಬೋಧಿಸತ್ವನೆಂಬ ಉಪನಾಮವು ಈತನಿಗೆ ಸಂದಾಯವಾಯಿತು. ಈತನ ಕೃತಿಗಳು ಜಗತ್ತಿನ ಅನೇಕ ಭಾಷೆಗಳಿಗೆ ಎಷ್ಟೋ ಶತಮಾನಗಳ ಹಿಂದೆಯೇ ಅನುವಾದವಾಗಿವೆ ಎಂದರೆ ಅವುಗಳ  ಪ್ರಾಚುರ್ಯವು ಕಲ್ಪನೆಗೆ ನಿಲುಕಬಹುದು. ಈ ಕೃತಿಗಳ ಮೂಲಕ ಪ್ರಭೆಯ ಆತ್ಮವನ್ನು ಚಿರಂತನಗೊಳಿಸಿದಂತೆ ಪ್ರತಿ ಕೃತಿಯಲ್ಲಿಯೂ ತನ್ನ ಜನ್ಮ ಭೂಮಿ ಸಾಕೇತವನ್ನೂ, ತನ್ನ ಜನನಿ ಸುವರ್ಣಾಕ್ಷಿಯನ್ನು ಮಾತ್ರವೇ ಸ್ಮರಿಸಿಕೊಂಡಿರುವನು.

ಬುದ್ಧ ಚರಿತಂ:

ಅಶ್ವಘೋಷನು ಅನೇಕ ನಾಟಕ, ಕಾವ್ಯಗಳನ್ನು ಬರೆದಿರಬಹುದಾದರೂ ಅವುಗಳಲ್ಲಿ ದೊರೆತಿರುವುದು ಕೆಲವೇ. ಅವುಗಳ ಬಗ್ಗೆ ಸ್ವಲ್ಪ ವಿವರಗಳನ್ನು ತಿಳಿಯೋಣ.

) ಬುದ್ಧ ಚರಿತಂ: ಆದಿಕವಿ ವಾಲ್ಮಿಕಿಯ ರಾಮಕಥೆಯು ಯಾವ ರೀತಿಯಾಗಿ ಸನಾತನ ಕಾಲದಿಂದಲೂ ಕಾಲವನ್ನು ಗೆದ್ದು ಜನಮನವನ್ನೂ ರಂಜಿಸುತತಾ ಅಮರ ಕಾ‌ವ್ಯವಾಗಿದೆಯೋಅದೇ ರೀತಿಯಾಗಿ ಬೌದ್ಧರ ಪಾಲಿಗೆ ಅಶ್ವಘೋಷನ ಈ ಕಾವ್ಯವೂ ಉಳಿದುಬಂದಿದೆ. ಇದು ಮೂರು ಸಾವಿರ ಶ್ಲೋಕಗಳನ್ನು ಪಡೆದಿರುವ ಮಹಾಕಾವ್ಯವಾಗಿದ್ದಿರಬೇಕೆಂದು ಅನೇಕ ಪಂಡಿತರು ಅನುಮಾನಿಸುತ್ತಾರೆ.  ಆದರೂ ಈಗ ದೊರೆತಿರುವುದು ೧೩೬೮ ಶ್ಲೋಕಗಳ ೧೩೬೮ ಶ್ಲೋಕಗಳ ೧೭ ಸರ್ಗಗಳು ಮಾತ್ರ. ಅದರಲ್ಲಿಯೂ ಕೊನೆಯ ನಾಲ್ಕು ಸರ್ಗಗಳು ಅಮೃತಾನಂದ ಎಂಬ ಕವಿ ಬರೆದಿರುವಂತೆ ತಿಳಿದುಬರುತ್ತದೆ. ಆದ್ದರಿಂದ ಅಶ್ವಘೋಷನು ಬರೆದಿರುವ ೧೩ ಸರ್ಗಗಳು ಮಾತ್ರವೇ ಲಭಿಸಿವೆ. ಸಂಘ ವರ್ಮನೆಂಬುವನು ಇದನ್ನು ಕ್ರಿಶ. ೪೧೪-೪೨೧ ರಲ್ಲಿ ಚೀನಿ ಭಾಷೆಗೆ ಭಾಷಾಂತರಿಸಿದ್ದಾನೆ. ಇದರಲ್ಲಿ ೨೮ ಸರ್ಗಗಳಿವೆ. ಆದ್ದರಿಂದ ಸಂಸ್ಕೃತ ಮೂಲದಲ್ಲಿಯೂ ಅಷ್ಟೇ ಸರ್ಗಗಳು ಇದ್ದಿರಬಹುದು. ಈತನೇ ೪೦೧ ರಲ್ಲಿ ಸೂತ್ರಾಲಂಕಾರವನ್ನು ಚೀನಿ ಭಾಷೆಗೆ ಅನುವಾದಿಸಿದ್ದಾನೆ. ಕ್ರಿ.ಶ.೬೭೧ ರಲ್ಲಿ ಭಾರತ ಪ್ರವಾಸಕ್ಕೆ ಬಂದ ಚೀನಾದೇಶದ ಯಾತ್ರಿಕ ಇತ್ಸಿಂಗ್ ಈ ಕೃತಿಯನ್ನು ಸಂಪೂರ್ಣವಾಗಿ ಓದಿರುವ ಸಾಧ್ಯತೆಯಿದೆ. ಈ ಕಾವ್ಯದ ವಸ್ತು ಭಗವಾನ್ ಬುದ್ಧನ ಚರಿತ್ರೆ; ಸರಳವಾಗಿ ಕಾವ್ಯದಲ್ಲಿ ಹೇಳಲ್ಪಟ್ಟಿದೆ.

ಹಿಮಾದ್ರಿಯ ಉಡಿಯಲ್ಲಿ ಕಪಿಲವಸ್ತು ರಮಣೀಯವಾಗಿ ರಾರಾಜಿಸುತ್ತಿತ್ತು. ಶಾಕ್ಯವಂಶದ ಶುದ್ದೋಧನ ಮಹಾರಾಜ ಆಳುತ್ತಿದ್ದನು. ಆತನು ತುಂಬಾ ಪ್ರತಾಪಶಾಲಿ, ಬುದ್ಧಿಶಾಲಿ, ವಿಧ್ವಾಂಸ, ದಾನಶೂರ, ಪ್ರಜಾಪಾಲನೆಯಲ್ಲಿ ಸದಾ ನಿರತನಾಗಿರುತ್ತಿದ್ದ. ಮಾಯದೇವಿ ಆತನ ಮಹಾರಾಣಿ. ಆಕೆ ಸಾಕ್ಷಾತ ಲಕ್ಷ್ಮೀದೇವಿಯಂತೆ ಶೋಭಿಸುತ್ತಿದ್ದಳು. ಭಗವಂತನಲ್ಲಿ ಪ್ರಜೆಗಳ ಸಂಪೂರ್ಣ ಸೇವೆಗೆ ಯೋಗ್ಯ ಸಂತಾನವನ್ನು ದಯಪಾಲಿಸುವಂತೆ ಅವರು ಅನುದಿನವೂ ಪ್ರಾರ್ಥನೆ ‌ಸಲ್ಲಿಸುತ್ತಿದ್ದರು.

ಮೂರು ಲೋಕಕಗಳ ಸಂಸರಕ್ಷಣಾರ್ಥವಾಗಿ ಸ್ವಯಂ ಭತವಂತನೇ ಮಾಯಾದೇವಿಯ ಗರ್ಭವನ್ನು ಪ್ರವೇಶಿಸಿದ.  ಮಹಾರಾಣಿಯು ಲುಂಬಿನಿವನದಲ್ಲಿ ತನ್ನ ಪುಷ್ಪ ಮಹಲಿನಲ್ಲಿ ಬೋಧಿಸತ್ವನನ್ನು ಹೆತ್ತಳು. ಈತನ ಜನನದಿಂದ ಲೋಕಕ್ಕೆ ಹೊಸ ಬೆಳಕು ಕಾಣಸಿಕ್ಕಿತ್ತು. ಅಸಿತ ಎಂಬಾತನ ಬಹು ತಪಸ್ಸು ಮಾಡಿದ ಮಹಾಜ್ಞಾನಿ.ಆಗಲೇ ಮುದುಕನಾಗಿದ್ದ. ಆತನು ಬುದ್ಧನು ಹುಟ್ಟಿದುದನ್ನು ತಿಳಿದು ಶುದ್ದೋಧನನ ಅರಮನೆಗೆ ಬಂದ. ತಂದೆ ತಾಯಿಯರು ಸಂಭ್ರಮದಿಂದ ಅವನನ್ನು  ಬರಮಾಡಿಕೊಂಡರು.  ಮಗುವನ್ನು ತೋರಿಸಿದರು. ಆತ ಮಗುವನ್ನು ನೋಡಿ ಕಣ್ಣೀರಿಟ್ಟ. ತಂದೆ ತಾಯಿಗೆ ಆತಂಕವಾಯಿತು .ತಮ್ಮ ಮಗುವಿಗೆ ಹೆಚ್ಚು ಆಯುಷ್ಯವಿಲ್ಲ. ಅದಕ್ಕಾಗಿಯೇ ಅಸಿತ ಕಣ್ಣೀರು ಹಾಕುತಿದ್ದಾನೆ ಎಂದು ಭಾವಿಸಿದರು. ಅಸೀತನು ಅವರಿಗೆ  “ಈತ ಮುಂದೆ ಲೋಕಕ್ಕೆ ಮಾರ್ಗದರ್ಶಕನಾಗುತ್ತಾನೆ. ಇವನ ಉಪದೇಶಗಳನ್ನು ಕೇಳುವವರೆಗೆ ನಾನು ಬದುಕಿರುವುದಿಲ್ಲವಲ್ಲ ಎಂದು ದುಃಖಿಸುತ್ತಿದ್ದೇನೆ” ಎಂದು ವಿವರಿಸಿದ.

ಸಿದ್ದಾರ್ಥ ಪ್ರವೇಶದ ನಂತರ ರಾಜ್ಯವು ಮತ್ತೂ ಸಮೃದ್ಧಗೊಂಡಿತ್ತು . ಅತಿ ಸುಖದ ಅನುಭವವಾಯಿತು. ಶೈಶವ ಕಳೆದು ಕೌಮಾರ್ಯ ಕಾಲ ಬಂತು. ವೈಷ್ಣವಾಚಾರದಂತೆ ಜಾತಕರ್ಮ, ವಿದ್ಯಾಭ್ಯಾಸ ನಡೆಯಿತು. ಮಹರ್ಷಿಗಳ ಅನುಜ್ಞೆಯ ಪ್ರಕಾರ ಶಾಕ್ಯಾಯನ ಮಹಾರಾಜರ ಕುಮಾರಿ ಯಶೋಧರೆಯನ್ನು ಸೊಸೆಯಾಗಿ ತಂದರು.  ಸಿದ್ದಾರ್ಥ ಸದಾ ಸಮಾಧಿಯಲ್ಲಿರಲು ಕಾತುರನಾಗಿರುವುದನ್ನು ತಂದೆ ಗಮನಿಸಿದ. ತನ್ನ ವಂಶ ನಿಂತು ಹೋಗಬಾರದು, ಸಿದ್ದಾರ್ಥನಿಗೆ ರಾಜ್ಯಭಾರ ವಹಿಸಿ ತಾನು ವಾನಪ್ರಸ್ಥಾಶ್ರಮ ಸ್ವೀಕರಿಸಬೇಕು ಎಂದು ಶುದ್ದೋಧನ ಮಹಾರಾಜ ಬಯಸುತ್ತಿದ್ದ. ಅದೇ ಸಮಯಕ್ಕೆ ಯಶೋಧರೆ ಪುತ್ರನನ್ನು ಪ್ರಸವಿಸಿದಳು. ಆ ಕೂಸಿಗೆ ರಾಹುಲ್ ಎಂದು ಹೆಸರಿಟ್ಟರು.

ಪುತ್ರೋತ್ಸವದ ನಂತರ ಸಿದ್ದಾರ್ಥ ಮತ್ತೂ ಅಂತರ್ಮುಖಿಯಾದ. ತಂದೆಯು ಸಿದ್ದಾರ್ಥನ ವಿಹಾರಕ್ಕೆಂದು ನೂತನ ಸ್ವರ್ಣ ರಥವನ್ನು ನಿರ್ಮಿಸಿಕೊಟ್ಟ. ಅದರಲ್ಲಿ ನಗರ ಪರ್ಯವೇಕ್ಷಣೆಗಾಗಿ ರಥವನ್ನೇರಿ ಹೊರಟಾಗ ದೇವತೆಗಳಿಂದ ಕಳುಹಿಸಲ್ಪಟ್ಟ ಮುದಿತನದಿಂದ ಜರ್ಝರಿತವಾದ ಮನುಷ್ಯನನ್ನು ಕಂಡು “ಇವನು ಹೀಗೇಕಿರುವ” ಎಂದು ಸಾರಥಿಯನ್ನು ಕೇಳಿದ್ದಕ್ಕೆ ಸಾರಥಿಯು ಹೀಗೆ ಉತ್ತರಿಸಿದ:

ಪೀತಂ ಹ್ಯ ನೇನಾಪಿ ಪಯಃ ಶಿಶುತ್ವೇ ಕಾಲೇನ ಭೂಯಃ ಪರಿಮೃಷ್ಟಮುರ್ವ್ಯಾಂ |
ಕ್ರಮೇಶ
ಭೂತ್ವಾ ಯುವಾ ವಪುಷ್ಮಾನ್ ಕ್ರಮೇಣ ತೇನೈವ ಜರಾಮುಪೇತಃ ||

(ಬಾಲ್ಯದಲ್ಲಿ ಇವನೂ ಎದಲ್ಲರಂತೆಯೇ ತಾಯಿಯ  ಎದೆಹಾಲಿನಿಂದಲೇ ಪೋಷಿತನಾಗಿ ಕಾಲಕ್ರಮದಲ್ಲಿ ಯೌನವನ್ನು ಪಡೆದು ಕ್ರಮೇಣ ವೃದ್ಧಾವಸ್ಥೆಯನ್ನು ಪಡೆದು ಈ ರೂಪವನ್ನು ಗಳಿಸಿಕೊಂಡಿದ್ದಾನೆ).

ನಂತರದ ವಿಹಾರಗಳಲ್ಲೂ ರೋಗಿಯನ್ನು, ಶವವನ್ನು ಕಂಡು ವಿಚಾಕ್ರಾಂತನಾದನು. ತನ್ನ ಚಿತ್ತವನ್ನು ಇಹದತ್ತ ಮರಳಿಸಲು ಅರಸ ಪ್ರಯತ್ನಿಸುತ್ತಿದ್ದಾಗ ಸಿದ್ದಾರ್ಥ ತನ್ನಲ್ಲಿಯೇ “ಅಬ್ಬ,  ದಯಾಶೂನ್ಯ ಪ್ರಪಂಚವೇ ! ನೆರೆಯವರ ರೋಗ ಸಂಕಟಗಳನ್ನು ಕಂಡು ಮರುಕಗೊಳ್ಳದ ಈ ಲೋಕ ಎಷ್ಟು ಭಯಂಕರ !” ಎಂದುಕೊಂಡು ತನ್ನ ತಂದೆಯಲ್ಲಿ ಈ ರೀತಿ ಪ್ರಾರ್ಥಿಸಿದಳ:

ಪ್ರಣಿಪತ್ಯ ಸಾಂಜಲಿರ್ಬಭಾಷೆ ದಿಶಾ ಮಹ್ಯಂ ನರದೇವ ಸಾಧ್ವನುಜ್ಞಾಂ |
ಪರಿವಿವ್ರಜಿಷಾಮಿ
ಮೊಖ್ಷ ಹೆತೊರ್ನಿಯತೋ ಹ್ಯಸ್ಯ ಜನಸ್ಯ ವಿಪ್ರಯೋಗಃ ||

(ಮಹಾರಾಜ , ಈ ಜಗತ್ತಿನಲ್ಲಿ ದುಃಕವು ನಿಶ್ಚಿತ. ಇದರಿಂದ ಪಾರಾಗಲು ನಾನು ಸನ್ಯಾಸಿಯಾಗಲು ಬಯಸುತ್ತೇನೆ. ತಾವು ಪ್ರಸನ್ನಚಿತ್ತರಾಗಿ ನಾನು ಅರಮನೆಯನ್ನು ತ್ಯಜಿಸಿ ಹೋಗಲು ಅನುಮತಿ ನೀಡಬೇಕೆಂದು ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ).

ಈ ಮಾತನ್ನು ಕೇಳಿದ ಶುದ್ದೋಧನ ಮಹಾರಾಜನು ಅಶ್ರುಪೂರಿತ ನೇತ್ರಗಳಿಂದ “ಜೀವನದ ಪ್ರಥಮ ಚರಣದಲ್ಲಿ ಮನುಷ್ಯನ ಮನ ಸ್ಥಿರವಾಗಿರದು. ಈ ಕಾಲದಲ್ಲಿ ಸನ್ಯಾಸಿಯಾಗುವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ರಾಜ್ಯಭಾರವನ್ನು ನೀನು ವಹಿಸಿಕೋ, ನಾನೇ ವಾನಪ್ರಸ್ಥ ಸ್ವೀಕರಿಸುತ್ತೇನೆ. ನಿನ್ನ ನಿಶ್ಚಯವನ್ನು ಬದಲಿಸು. ಬದಲಿಸು, ಗೃಹಸ್ಥ ಧರ್ಮವನ್ನು ಪಾಲಿಸು. ಯೌವನದಲ್ಲಿ ಸುಖ ಸಂತೋಷಗಳನ್ನು ಅನುಭವಿಸಿದ ನಂತರವೇ ತಪೋವನವನ್ನು ಪ್ರವೇಶಿಸುವುದು ಶ್ರೇಯಸ್ಕರ” ಎಂದು ಹೇಳಿದ.

ತಂದೆಯ ಈ ಕೋರಿಕೆಗೆ ಸಿದ್ದಾರ್ಥ ತನ್ನ ಬೇಡಿಕೆಗಳನ್ನು ಹೀಗೆ ತೋಡಿಕೊಂಡ:

ಭವೇನ್ಮರಣಾಯ ಜೀವತಂ.
ವಿಹರೇತ್ ಸ್ವಾಸ್ಥ್ಯ ಮಿದಂ ಮೇನ್ ರೋಗಃ |
ಯೌವನ ಮಾಕ್ಷಿ ಪೇಜ್ಜ ರಾ ಮೇ
. ಸಂಪತ್ತಿ ಮಪಾಹರೇ ದ್ವೀಪತ್ತಿಃ ||

(ನಾನೆಂದಿಗೂ ಮೃತ್ಯುವಿಗೆ ತುತ್ತಾಗುವುದಿಲ್ಲ, ನನ್ನ ಶರೀರವು ರೋಗಗ್ರಸ್ಥವಾಗದು, ನನ್ನ ಯೌವ್ವನವು ಮುಪ್ಪಿಗೆ ಬಲಿಯಾಗದು, ನನ್ನ ಶ್ರೀಮಂತಿಕೆಯು ದೌರ್ಭಾಗ್ಯಕ್ಕೆ ಕರಗದು ಎಂದು ತಾವು ವಚನಕೊಟ್ಟು ಪಾಲಿಸಿದರೆ ನಾನು ಪರಿವ್ರಾಜಕನಾಗದೆ ಉಳಿಯುತ್ತೇನೆ. ಇದು ಅಸಾಧ್ಯವೆಂಬುವುದನ್ನು ಹೇಳಿದ ನಂತರ.

ಅಥ ಮೇರು ಗುರುರ್ಗುರುಂ ಬಭಾಷೆ
ಯದಿನಾಸ್ತಿ ಕ್ರಮ ಏಷ ನಾಸ್ತಿ ವಾರ್ಯಃ |
ಶರಣಜ್ಜ್ವಲನೇನ ದಹ್ಯಮಾನಾ
ನ್ನಹೀ ನಿಶ್ಚಿಕ್ರಮಿಕಷುಂ ಕ್ಷ ಮಂ ಗ್ರಹಿತುಂ ||    

(ಮೇರು ಪರ್ವತದಂತೆ ಅಚಲನಾಗಿದ್ದ ಸಿದ್ದಾರ್ಥ ಹೇಳಿದ: “ಇವೆಲ್ಲಾ ಅಸಧ್ಯವೆನಿಸಿದ ನಂತರ ನನ್ನ ಮಾರ್ಗಕ್ಕೆ ಅಡ್ಡಿಯಾಗಬೇಡಿ. ಬೆಂಕಿಬಿದ್ದ  ಮನೆಯಿಂದ ಓಡುತ್ತಿರುವವರನ್ನು ಹಿಡಿದು ಅದರಲ್ಲಿ ಬಂಧಿಸುವುದು ಸರಿಯೆ?”)

ಅಥ ವಿಕಚ ಪಂಕಜಾಯತಕ್ಷಃ
ಪುರಮವಲೋಕ್ಯ ನನಾದ ಸಿಂಹನಾದಂ |      
ಜನನಮರ
ಯೋರದೃಷ್ಟ ಪಾರೋ
ಪುನರಹಂ ಕಪಿಲಾಹ್ವಯಂ ಪ್ರವಿಷ್ಟಾಃ ||

(ಜನನ ಮತ್ತು ಮರಣಗಳಿಂದ ತುಂಬಾ ದೂರದಲ್ಲಿರುವ ಶಾಶ್ವತ ಜೀವನವನ್ನು ನಾನು ಕಂಡುಕೊಳ್ಳುವ ತನಕ ಕಪಿಲವೆಂಬ ಹೆಸರು ಪಡೆದಿರುವ ಈ ನಗರವನ್ನು ನಾನು ಪ್ರವೇಶಿಸುವುದಿಲ್ಲ)- ಎಂದು ನಿರ್ಶಚಯಿಸಿ ಕಪಿಲವಸ್ತುವನ್ನು ಬಿಟ್ಟ.

ಈ ರೀತಿ ಕಥೆ ಸಾಗುತ್ತದೆ. ಸಿದ್ದಾರ್ಥ ತನ್ನ ರತ್ನದ ಅಭರಣಗಳನ್ನು ತೆಗೆದು ತಮದೆಗೆ ಕಳುಹಿಸಿದ, ಸಂನ್ಯಾಸಿಯಾದ. ಕಪಿಲವಸ್ತು ದುಃಖದಲ್ಲಿ ಮುಳುಗಿತು. ಮಂತ್ರಿಯೂ ಪುರೋಹಿತನೂ ರಾಜಕುಮಾರನನ್ನು ಹುಡುಕಿಕೊಂಡು ಹೊರಟರು.  ಅವರು ಅವನೊಡನೆ ವಾದ ಮಾಡಿ ಅವನ ಮನಸ್ಸನ್ನು ಬದಲಯಿಸಿ ಹಿಂದಕ್ಕೆ ಕರೆತರಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಸಿದ್ಧಾರ್ಥ ತಪಸ್ಸು ಮಾಡಿದ. ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಅಪೂರ್ಣ ಕಾವ್ಯದಲ್ಲಿ ಬುದ್ಧನ ಕಥೆ ಸಂಪೂರ್ಣ ಗೊಂಡಿಲ್ಲವೆಂಬುವುದನ್ನು  ಹೇಳಬೇಕಾಗಿಲ್ಲ.

ಉಳಿದ ಕೃತಿಗಳು:

) ಸೌಂದರನಂದ :  ಈ ಮಹಾಕಾವ್ಯವು ಹದಿನೆಂಟು ಸರ್ಗಗಳನ್ನು ಪಡೆದಿದ್ದು, ಸಂಪೂರ್ಣವಾಗಿದೆ. ಬುದ್ಧನ ಮಲತಮ್ಮನಾದ ನಂದ ಮತ್ತು ಅವನ ಪ್ರಣಯಕ್ಕೆ ಮುಗ್ಧಳಾದ ಸುಂದರಿಯ ಕತೆಯೇ ಈ ಕಾವ್ಯದ ವಸ್ತು. ಇವರು ಸುಖವನ್ನು ಬಿಡಲಾರದುದನ್ನು ಕಂಡು ನಂದನಿಗೆ ತತ್ವೋಪದೇಶದ ಮೂಲಕ ನಿರ್ವಾಣಮೃತವನ್ನು ಬುದ್ಧ ಕುಡಿಸಿದನೆಂಬುವುದೇ ಈ ಕಥೆ.

ನಂದನು ಸುಂದರಿಯನ್ನು ಹೇಗೆ ಬಿಡಲಾರದೆ ಇದ್ದನೋ ಹಾಗೆಯೇ ಸುಂದರಿಯು ನಂದನನ್ನು ಬಿಡಲಾರದಿದ್ದಳು. ಯಾರ ಮಾತನ್ನು  ಅವರು ಕೇಳಲಿಲ್ಲ.  ಬುದ್ಧನೇ ಭಿಕ್ಷೆಗಾಗಿ ಅವರ ಮನೆಗೆ ಬಂದರೂ, ಸುಖದಲ್ಲಿ ಮೈಮರೆತ್ತಿದ್ದ ಅವರಿಗೆ ಅದು ತಿಳಿಯಲಿಲ್ಲ. ಭಿಕ್ಷೆ ಇಲ್ಲದೆ ಬುದ್ಧ ಹಿಂದಿರುಗಿದ. ಕೊನೆಗೆ ಬುದ್ಧನೇ ತನ್ನ ತಮ್ಮ ಕೈಹಿಡಿದು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗುವಾಗ ಹಿಮವತ್ಪರ್ವತದ ಮಾರ್ಗದಲ್ಲಿ ಕುರೂಪಿಯಾಗಿಯೂ ಏಕಾಕ್ಷಿಯಾಗಿಯೂ ಇದ್ದ ಕಪಿಯೊಂದನ್ನು ತೋರಿಸಿ “ನಂದ, ನಿನ್ನ ಸುಂದರಿಯು ಇದಕ್ಕಿದ್ದಂತಲೂ ಸುಂದರಳಾಗಿರುವಳೇ?” ಎಂದು ಕೇಳಿದ. ನಂದ “ಹೌದು” ಎಂದ.

ಅನಂತರ ಸ್ವರ್ಗದಲ್ಲಿ ಅಪ್ಸರೆಯನ್ನು ನೋಡಿದಾಗ ಅವರಿಗೂ, ತನ್ನ ಮಡದಿ ಸುಂದರಿಗೂ, ಸುಂದರಿಗೂ ಕಪಿಗೂ ಇರುವ ಬೇಧವು ಕಂಡುಬಂದು ಹೇಗಾದರೂ ಆ ಸುರಸುಂದರಿಯರನ್ನು ಪಡೆಯಲಾಶಿಸಿ ತಪವನ್ನು ಕೈಗೊಂಡ. ನಂರ ಬುದ್ಧನ ಶಿಷ್ಯನಾದ ಆನಂದ ಸ್ವರ್ಗಸುಖಕ್ಕೂ ಕೂಡ ಕೊನೆಯುಂಟು ಎಂದು ನಂದನಿಗೆ ಮನವರಿಕೆ ಮಾಡಿಕೊಟ್ಟು ಅಮರ ಸುಖದ ಹಾದಿಗಾಗಿ ಬುದ್ಧನನ್ನು ಆಶ್ರಯಿಸಲು ತಿಳಿಸಿದ.

ಇದನ್ನು ಆರಿತ ನಂದನು ಬುದ್ಧನ ಬಳಿಸಾರಿ “ಮಹಾತ್ಮನೇ, ನನಗೆ ಸ್ವರ್ಗದಲ್ಲಾಗಲೀ, ಸ್ವರ್ಗದಲ್ಲಿಯೂ ಪದಾರ್ಥಗಳಲ್ಲಾಗಲಿ ಆಶೆಯಿಲ್ಲ” ಎಂದು ಭಿನ್ನೈಯಿಸಿಕೊಂಡ.

ಇದನ್ನು ಕೇಳಿ ಹರ್ಷಿತನಾದ ಬುದ್ಧನು ತತ್ವೋಪದೇಶ ಮಾಡಿದನು. ಇದೇಹಲವು ಸರ್ಗಗಳಲ್ಲಿ ಅಡಗಿದೆ. ಆರ್ಹಂತನಾಗಲು ಅರಣ್ಯದಲ್ಲಿ ತಪ್ಪಸ್ಸನಾಚರಿಸಿದ. ಅರ್ಹಂತನಾಗಿ ಬುದ್ಧನ ಬಳಿಗೆ ಬಂದು ನಮಸ್ಕರಿಸಿದ. ಆಗ ಬುದ್ಧನು, “ನಂದ, ನೀನೊಬ್ಬ ಅರ್ಹಂತನಾದುದು ದೊಡ್ಡದಲ್ಲ. ಎಲ್ಲರಿಗೂ ಈ ತತ್ವಗಳನ್ನು ಬೋಧಿಸುತ್ತಾ ಅವರು ಈ ಪದವಿಗೆ ಯೋಗ್ಯರಾಗುವಂತೆ ಮಾಡಿ ಕೃತಕೃತ್ಯನಾಗು” ಎಂದು ಹೇಳಿದ.

ಇದರಲ್ಲಿ ಬೌದ್ಧ ಧರ್ಮದ ತತ್ವಗಳನ್ನು ವಿಸ್ತಾರವಾಗಿ ಹೇಳಿ ಕಥೆಯೊಂದನ್ನು ಧರ್ಮವನ್ನು ಸೇರಿಸಿದ್ದಾನೆ. ಈ ಕಾವ್ಯದ ಪ್ರಾರಂಭದಲ್ಲಿಯೇ ತನ್ನ ಗುರಿಯನ್ನು ವಿವರಿಸಿರವುದು ಈ ಮೊದಲೇ ಹೇಳಿದ.

) ಸೂತ್ರಲಂಕಾರ : ಇದರಲ್ಲಿ ಅನೇಕ ಕಥೆಗಳೀವೆ. ಎಲ್ಲವನ್ನೂ ಬುದ್ಧನ ಜಾತಕ ಕಥೆಗಳಿಂದ ತೆಗದುಕೊಳ್ಳಲಾಗಿದೆ. ಗಧ್ಯ-ಪಧ್ಯ ಸಮ್ಮಿಶ್ರಣ ಚಂಪೂ ಶೈಲಿಯಲ್ಲಿದೆ ಈ ಕೃತಿ. ಹಲವು ಕಥೆಗಳಂತೂ  ತುಂಬಾ ಪುರಾತನವಾದವು.

) ವಜ್ರಸೂಚಿ : ಇದು ತುಂಬಾ ಚಿಕ್ಕ ಕೃತಿ. ಬ್ರಾಹ್ಮಣದ ನೈಜಾರ್ಥ ಪ್ರತಿಪಾದನೆ ನಡೆಸಲಾಗಿದೆ.

) ಸಾರಿಪುತ್ರ ಪ್ರಕರಣಂ : ಸಂಸ್ಕೃತ ಸಾಹಿತ್ಯದ ಪ್ರಥಮ ನಾಟಕಕಾರನೆಂಬ ಹೆಸರನ್ನು ಅಶ್ವಘೋಷ ಪಡೆದಿದ್ರೂ ದೊರೆತಿರುವ ನಾಟಕ ಇದೊಂದೇ. ಅದೂ ಈ ಕೃತಿಯು ಗೋಬಿಮರುಭೂಮಿ ತನ್ನ ಗರ್ಭದಿಂದ ಒಂದು ನೂರು ಎಂಬತ್ತು ವರ್ಷಗಳ ಹಿಂದೆ ದಯಪಾಲಿಸಿದೆ. ಅಶ್ವಘೋಷನ ನಾಟಕ ಕಲೆಯನ್ನು ಕಾಣಲು ದೊರೆಯುವ ಏಕ ಮಾತ್ರ ಕೃತಿ.

ಇನ್ನೂ ಹಲವು ಕೃತಿಗಳು ಅಶ್ವಘೋಷನ ಹೆಸರಿನಲ್ಲಿ ಲಭಿಸಿದೆಯಾದರೂ ಅವೆಲ್ಲವೂ ಮಹಾಕವಿ ಅಶ್ವಘೋಷನದೇ ಎನ್ನುವುದರಲ್ಲಿ ವಿಧ್ವಾಂಸರು ಸಂಶಯ ವ್ಯಕ್ತಪಡಿಸುತ್ತಾರೆ. ಭಾರತದ ಚರಿತ್ರೆಯಲ್ಲಿ ಆರು ಮಂದಿ ಅಶ್ವಘೋಷರು ಇದ್ದರೆಂದು ಅವರೆಲ್ಲರೂ ಬೇರೆ ಬೇರೆ ಕಾಲದಲ್ಲಿದ್ದರೆಂದು ಹೇಳಿ ಮಹಾಕವಿ ಅಶ್ವಘೋಷನು ಕ್ರಿಸ್ತಶಕ ಒಂದನೆಯ ಶತಮಾನದವನು ಎಂದು ನಿರ್ಣಯಿಸಿದ್ದಾರೆ.

ಅಶ್ವಘೋಷ ಬೌದ್ಧ ಮತ ಸೇವೆಯನ್ನು ಪರಿಗಣಿಸದೇ ಹೋದರೂ ಮಹಾಕವಿಯ ಸ್ಥಾನದಿಂದ ಈತನನ್ನು ತೆಗೆಯುವುದು ಸಾಧ್ಯವೇ ಇಲ್ಲ. ಈತನ ಭಾಷೆ ತುಂಬಾ ಲಲಿತವಾಗಿದೆ. ಭಾಷೆಯ ಮೇಲೆ ತುಂಬಾ ಪ್ರಭುತ್ವವು ಈತನಿಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.  ಭಾರತದ ವೈದಿಕ ಮತದ ಅನೇಕ ಆಚಾರಗಳ ವಿವರಣೆ, ಋಷಿ ಮುನಿಗಳ ಉಲ್ಲೇಖ, ಸಂಪ್ರದಾಯಿಕ  ಚರಿತ್ರೆಗಳು ಎರಡು ಮಹಾಕಾವ್ಯಗಳಲ್ಲೂ ದೊರೆಯುತ್ತದೆ. ವೈದಿಕ ಧರ್ಮದ ಬಗ್ಗೆ ವಿರೋಧ ಈತನ ಕೃತಿಯಲ್ಲಿ ಕಾಣಿಸದು.

ಅಶ್ವಘೋಷ ಬಹುದೊಡ್ಡ ವಿದ್ವಾಂಸ, ವೇದ, ಶಾಸ್ತ್ರ ಪುರಾಣ, ಇತಿಹಾಸ, ರಾಮಾಯಣ, ಮಹಾಭಾರತ ಎಲ್ಲವನ್ನೂ ಆಳವಾಗಿ ಅಭ್ಯಾಸ ಮಾಡಿದ್ದವನು. ಈಗ ತಿಳಿದಿರುವ ಮಟ್ಟಿಗೆ ಭಾರತದಲ್ಲಿ ಮೊದಲು ನಾಟಕಗಳನ್ನು ಬರೆದವನು ಇವನೇ. “ಸಾರಿಪುತ್ರ ಪ್ರಕರಣ” ಮತ್ತು ಇನ್ನೆರಡು ನಾಟಕಗಳನ್ನು ಬರೆದ ಎನ್ನುವುದಕ್ಕೆ ಸಾಕ್ಷ್ಯವಿದೆ.

ಹತ್ತಿರ ಹತ್ತಿರ  ಎರಡು ಸಾವಿರ ವರ್ಷಗಳ ಹಿಂದೆಯೇ, ಮನುಷ್ಯ ಯಾವ ಜಾತಿಯಲ್ಲಿ ಹುಟ್ಟಿದ  ಎನ್ನುದು ಮುಖ್ಯವಲ್ಲ. ಅವನ ಯೋಗ್ಯತೆ ಮುಖ್ಯ ಎಂಬುವುದನ್ನು ಕಂಡುಕೊಂಡವನು ತನ್ನ ಕೃತಿಗಳ ಮೂಲಕ ಜನರಿಗೆ ಧರ್ಮಮಾರ್ಗವನ್ನು ತೋರಿಸಿಕೊಟ್ಟವನು.