ಪ್ರಸ್ತಾವನೆ

ಭಾರತೀಯರು ಮೂಲತಃ ಪ್ರಕೃತಿಯ ಆರಾಧಕರು ಹಾಗಾಗಿ ಆರಾಧನೆ ಕಲೆ ಪ್ರಾರಂಭದಿಂದಲೂ ನಡೆದುಕೊಂಡು ಬಂದಿದೆ. ಆರಾಧನೆ ಮಾಡುವುದೆಂದರೆ ಒಂದು ಹಬ್ಬವಿದ್ದಂತೆ. ವೇದಪೂರ್ವ ಕಾಲದಿಂದಲೂ ಭೂತಾರಾಧನೆ, ಗೋವು ಆರಾಧನೆ, ನಾಗಾರಾಧನೆ ಮುಂತಾದ ಆರಾಧನೆಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಬಂದಿವೆ.

ವಿಶೇಷವಾಗಿ ದೇವತಾರಾಧನೆಯೂ ಮನುಷ್ಯನ ಒಂದು ಜೀವನದ ಭಾಗವಾಗಿ ರೂಪಗೊಂಡಿರುವುದನ್ನು ಕಾಣುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಧರ್ಮ ಆಚರಣೆಗಳು ಇವೆ. ಅವುಗಳಿಗೆ ಅನುಗುಣವಾಗಿ ಅನೇಕ ದೇವಾನುದೇವತೆಗಳು ಉದಯಗೊಂಡಿವೆ. ಹಾಗಾಗಿ ಒಂದೊಂದು ಸಮುದಾಯ ಒಂದು ರೀತಿಯಲ್ಲಿ ಆರಾಧನೆಯನ್ನು ಮಾಡುತ್ತವೆ. ಉದಾಹರಣೆಗಾಗಿ-ಶೈವ, ವೀರಶೈವ ಲಿಂಗಾಯತರು, ಬ್ರಾಹ್ಮಣರು ಗೋವು ಆರಾಧನೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರೆ, ಬುಡಕಟ್ಟು ಸಮುದಾಯಗಳು ಭೂತಾರಾಧನೆಗೆ ಹೆಚ್ಚಿನ ಮನ್ನಣೆಯನ್ನು ನೀಡಿವೆ. ಆರಾಧನೆ ಮಾಡುವ ಉದ್ದೇಶ ಒಂದು ಗ್ರಾಮಕ್ಕೆ, ಸಮುದಾಯಕ್ಕೆ ಒಳ್ಳೆಯದಾಗಬೇಕೆಂಬುದಾಗಿರುತ್ತದೆ. ಇದರ ಜೊತೆಗೆ ಮಾನವ ದಿನನಿತ್ಯ ಜೀವನಕ್ಕೆ ಉಪಯೋಗವಾಗುವ ಪ್ರಾಣಿಗಳನ್ನು ದೇವರು ಎಂಭ ಅರ್ಥದಲ್ಲಿ ಗ್ರಹಿಸಿ ಪೂಜಿಸುತ್ತಾ ಬಂದಿದ್ದಾನೆ. ಹಾಗೆ ನೋಡಿದರೆ, ಶಿವನ ವಾಹನ ‘ನಂದಿ’, ಇಂದ್ರನ ವಾಹನ ‘ಆನೆ, ಗಣೇಶನ ವಾಹನ ‘ಇಲಿ’, ಸರಸ್ವತಿಯ ವಾಹನ ‘ನವಿಲು’, ದತ್ತಾತ್ರೇಯನ ವಾಹನ ‘ನಾಯಿ’, ದುರ್ಗಾ-ಕಾಳಿಕಾದೇವಿಯ ವಾಹನ ‘ಸಿಂಹ’ ಇರುವಂತೆ, ಕುದುರೆ ಮೈಲಾರಲಿಂಗ, ಬೀರಲಿಂಗೇಶ್ವರನ ವಾಹನವಾಗಿರುವುದನ್ನು ಇಲ್ಲಿ ಗುರುತಿಸಬಹುದು. ಈ ಎಲ್ಲಾ ಪ್ರಾಣಿಗಳು ಮನುಷ್ಯನ ಒಡನಾಡಿಗಳಾಗಿರುವುದು ಹೆಚ್ಚು. ಇವುಗಳಿಗೆ ಸಾಮಾಜಿಕ ಪ್ರಾಶಸ್ತ್ಯದ ಜೊತೆಗೆ ಪೌರಾಣಿಕ ಮನ್ನಣೆ ಕೊಡುವುದರ ಮೂಲಕ ‘ದೇವರು’ ಎಂಬ ಅರ್ಥದಲ್ಲಿ ಜನಸಾಮಾನ್ಯರು ಪೂಜಿಸುತ್ತಾ ಬಂದಿದ್ದಾರೆ. ಇದು ಆರಾಧನೆ ಎಂಬ ಅರ್ಥದಲ್ಲಿ ವಿಶಾಲತೆಯನ್ನು ಪಡೆದುಕೊಂಡು ಬಂದಿದೆ.

ಪ್ರಾಚೀನ ಕಾಲದಲ್ಲಿ ಮಾನವನಿಗೆ ಉಪಯೋಗವಾಗುವ ಪ್ರಾಣಿಗಳ ಕುರಿತು ಅಪಾರವಾದ ಭಕ್ತಿ ಪ್ರೀತಿ ಆಧರಗಳಿರುವುದನ್ನು ಕಾಣುತ್ತೇವೆ . ಹಾಗೆ ನೋಡಿದರೆ ನಮ್ಮ ಹತ್ತಿರವಾದ ನಂಬಿಗಸ್ಥ ಪ್ರಾಣಿಗಳಲ್ಲಿ ನಾಯಿಯನ್ನು ಬಿಟ್ಟರೆ ಕುದುರೆಗೆ ಎರಡನೆಯ ಪ್ರಾಶಸ್ತ್ಯ ದೊರೆಯುತ್ತದೆ. ಯುದ್ಧ ಸಂದರ್ಭದಲ್ಲಿ ತೃತೀಯ ಅಂಗಶಕ್ತಿಯಾಗಿ ಹೆಸರು ಗಳಿಸಿದೆ. ಕುದುರೆಯ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಕ್ರಿ.ಪೂ.೪೦೦೦ ವರ್ಷಗಳಷ್ಟು ಹಿಂದಿನ ಹಳೆಯದಾದ ಚೀನಿ ಕಡತಗಳ ಮೊರೆ ಹೋಗಬೇಕಾಗುತ್ತದೆ. ಹರಪ್ಪ ಮತ್ತು ಮೆಹಂಜೋದಾರೋ ಸಂಸ್ಕೃತಿಯಲ್ಲಿ ಕುದುರೆಯ ಅವಶೇಷಗಳು ಮತ್ತು ಎಲಬುಗಳು ದೊರೆತಿರುವುದರಿಂದ ಜೊತೆಗೆ ಲೋಥಾಲ್‌ನಲ್ಲಿ ಮೂರು ಕುದುರೆಯ ಮಣ್ಣಿನ ಗೊಂಬೆಗಳು ದೊರೆತಿರುವುದರಿಂದ ಆರ್ಯಪೂರ್ವಯುಗದ ಭಾರತೀಯರಿಗೆ ಕುದುರೆಯ ಬಗ್ಗೆ ಮಾಹಿತಿ ಇತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ.

ಮೇಗಾಸ್ತಾನೀಸ್‌ನ ಅಭಿಪ್ರಾಯದಲ್ಲಿ ಹೇಳುವುದಾದರೆ ವೇದಗಳಲ್ಲಿ ಬರುವಂತೆ ಓ ದೇವ ಮಾನವಾದಿಗಳೆಲ್ಲರ ವೀರನೇ ನೀನು ಯಾರು, ನಿನ್ನ ಕುದುರೆಗಳಲ್ಲಿ ಲಗಾಮೆಲ್ಲಿ ‘ನೀನು ಬಲಶಾಲಿಯಾದುದು ಹೇಗೆ’ ಎಂದು ಮರುತರನನ್ನು ಕುರಿತು ಬರುವ ಈ ಉಲ್ಲೇಖದಲ್ಲಿ ಕುದುರೆಗಳನ್ನು ಯುದ್ಧದಲ್ಲಿ ಬಳಸುತ್ತಿದ್ದರು ಎಂಬ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಹೀಗಾಗಿ ಕುದುರೆ ಸಂಸ್ಕೃತಿ ಜೊತೆಗೆ ಜಾಗತಿಕ ಮನ್ನಣೆ ದೊರೆತಿದೆ.

‘ಅಶ’ಎಂಬ ಪದವು ಸಂಸ್ಕೃತ ಜನ್ಯವಾಗಿದ್ದು, ಕನ್ನಡದಲ್ಲಿ ಶಾಸ್ತ್ರಗಳು ರಚನೆಯಾಗದ ಸಂದರ್ಭದಲ್ಲಿ ಸಂಸ್ಕೃತದಿಂದ ರಚನೆಯಾದ ಶಾಸ್ತ್ರಕೃತಿಗಳನ್ನು ಕನ್ನಡಿಗರು ಎರವಲಾಗಿ ಪಡೆದುಕೊಂಡ ಕಾರಣ ‘ಅಶ್ವ’ ಎಂಬ ಪದವು ಗಟ್ಟಿಗೊಂಡಿರುವುದನ್ನು ಕಾಣುತ್ತೇವೆ. ತದನಂಥರ ಕನ್ನಡದ ಶಾಸ್ತ್ರಕಾರರು ಇತ್ತಕಡೆ ಲಕ್ಷ್ಯವಹಿಸಿದಾಗ ‘ಅಶ್ವ’ ಎಂಬ ಪದವನ್ನು ಸಡಿಲಗೊಳಿಸಿ ಕುದುರೆ, ಹಯ, ತೇಜ, ತುರಗ ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾ ಬಂದಿದ್ದಾರೆ.

ನೀರಾಜನಾರಾಧನೆ

ಸಾಮಾನ್ಯ ಅರ್ಥದಲ್ಲಿ ಈ ಪದವನ್ನು ಮನೆಯಲ್ಲಿ, ದೇವಸ್ಥಾನಗಳಲ್ಲಿ ದೇವರ ಮುಂದೆ ಎತ್ತುವ ಆರತಿಗೆ ಸಂಸ್ಕೃತದಲ್ಲಿ ‘ನೀರಾಜನ’ ಎಂಬ ಪದ ಬಳಕೆಗೊಂಡಿದೆ. ನವವಧುವರರಿಗೆ, ವಿಜಯಯಾತ್ರೆಗೆ ಹೊರಡುವ ಯೋಧರಿಗೆ, ಯುದ್ಧದಲ್ಲಿ ಜಯಶೀಲರಾದ ರಾಜರಿಗೆ, ಸಾಮಂತರಿಗೆ, ಸೈನಿಕರಿಗೆ, ವಿಶೇಷವಾದ ಸಾಧನೆಗೈದವರಿಗೆ ಈ ರೀತಿ ದೀಪದ ಆರತಿಯನ್ನು ಬೆಳಗುವುದು ಸಂಪ್ರದಾಯವಾಗಿತ್ತು. ಇದಲ್ಲದೆ ರಾಜಲಾಂಛನಗಳಿಗೂ, ಸಾರ್ವಭೌಮತ್ವದ, ಸಾರ್ವಭೌಮತ್ವದ ಗುರುತುಗಳಾದ ಪಟ್ಟದ ಕುದುರೆಗಳು, ಪಟ್ಟದ ಆನೆಗಳು ಮತ್ತು ಆಯುಧಗಳಿಗೂ ಈ ಬಗೆಯ ದೀಪದಾರತಿಯ ವಿಶೇಷ ಪೂಜೆ ಬಳಕೆಯಲ್ಲಿತ್ತು. ಕಾಶ್ಮೀರದಲ್ಲಂತೂ ಇದಕ್ಕೊಂದು ಪ್ರಮುಖ ಸ್ಥಾನವಿದೆ. ಕಾಳಿದಾಸನ ರಘುವಂಶದಲ್ಲಿ ಈ ಆರಾಧನೆ ಕುರಿತು ಪ್ರಸ್ತಾಪ ಬರುತ್ತದೆ. ರಘುಮಹಾರಾಜ ದಿಗ್ವಿಜಯಕ್ಕೆ ಹೊರಟಿದ್ದಾನೆ ಅದಕ್ಕೆ ನಾಂದಿಯಾಗಿ ರಾಜಧಾನಿಯಲ್ಲಿ ಮಾಡಿದ್ದೇನು ಎಂದು ಕವಿ ಹೇಳುತ್ತಾನೆ. ನೀರಾಜನ ವಿಧಿಯಿಂದ ಕುದುರೆಗಳನ್ನು ಪೂಜಿಸುತ್ತಾ ವಿಧಿವತ್ತಾಗಿ ಅಗ್ನಿಯಲ್ಲಿ ಹವಿಸ್ಸನ್ನು ಸಮರ್ಪಿಸುತ್ತಿದ್ದಾಗ, ಅಗ್ನಿಕುಂಡದ ಜ್ವಾಲೆ ಪ್ರದಕ್ಷಿಣಪೂರ್ವಕವಾಗಿ ತಿರುಗಿದ್ದು ಹೇಗಿತ್ತಪ್ಪಾ ಅಂದರೆ ಅದು ರಾಜನಿಗೆ ಹಸ್ತಲಾಘವ ಕೊಡುತ್ತಾ ಜಯವನ್ನು ಕೋರುತ್ತಿರೋ ಏನೋ ಎನ್ನುವಂತಿತ್ತು. ಇಲ್ಲಿ ‘ವಾಜಿ’ ಎಂದರೆ ಕುದುರೆಯೊಂದೇ ಅಲ್ಲ, ಪಟ್ಟದ ಆನೆಯೂ ಸೇರಿದೆ ಎಂದು ಹೇಳಬಹುದು. ಏಕೆಂದರೆ ಕಾಮಂದಕ ನೀತಿಶಾಸ್ತ್ರದಲ್ಲಿ ಹೇಳುವ ಸೈನಿಕರ ಕುದುರೆಗಳನ್ನು ಮತ್ತು ಆನೆಗಳನ್ನು ವಿಧಿಪೂರ್ವಕವಾಗಿ ಬೆಳಗುವ ವಿಧಿಯೂ ಇದೆ. (ಕೌಟಿಲ್ಯನ ಅರ್ಥಶಾಸ್ತ್ರ(ಸಂ), ಎನ್‌.ಎಸ್‌. ವೆಂಕಟನಾಥಾಚಾರ್ಯ, ಅಧ್ಯಾಯ-೨)

ಯಾವುದಾದರೂ ದಂಡಯಾತ್ರೆಗೆ ಹೋಗುವ ಮುನ್ನ ರಾಜರು ಆಚರಿಸುತ್ತಿದ್ದ ಈ ನೀರಾಜನ ವಿಧಿಯಲ್ಲಿ ಯೋಧರಿಗೂ ಸೈನ್ಯದ ಕುದುರೆ ಮತ್ತು ಆನೆಗಳ ಜೊತೆಗೆ ಎತ್ತು, ಒಂಟೆ ಮೊದಲಾದ ಪ್ರಾಣಿಗಳಿಗೂ ವಿಶೇಷ ರೀತಿಯಲ್ಲಿ ಆರತಿಗಳನ್ನು ಎತ್ತಿ ಬೆಳಗುವುದು ಮುಖ್ಯವಾಗಿತ್ತು. ಅಗ್ನಿಪುರಾಣವೂ ಇದನ್ನೇ ಸಮರ್ಥಿಸುತ್ತಾ ಆ ದಿನ ರಾಜಲಾಂಛನಗಳಾದ ಆನೆ, ಕುದುರೆ, ಛತ್ರ, ಖಡ್ಗ, ಬಿಲ್ಲುಬಾಣ, ದುಂದುಭಿ, ಧ್ವ ಜ, ಪತಾಕ ಇವೆಲ್ಲವುಗಳನ್ನು ವಿಶೇಷವಾಗಿ ಅಲಂಕರಿಸಿ ಮಂತ್ರಪೂರ್ವಕವಾಗಿ ಪೂಜಿಸಬೇಕು ಎನ್ನುತ್ತಾ ರಾಜಲಾಂಛನಗಳಿಗೂ ಈ ಪೂಜೆಯು ಅನ್ವಯಿಸುತ್ತದೆ. ನೀರಾಜನವೆಂದರೆ ಪ್ರಕಾಶಮಾನವಾಗಿ ಬೆಳಗುವ ಒಂದು ಭಾವ ಎಂದೂ, ನೀರಿನಿಂದ ಸ್ಪರ್ಶಿಸಿಕೊಳ್ಳುವುದು ಎಂದು ಹೇಳಬಹುದು. ಶಾಂತಿಯಿಂದ ಪವಿತ್ರಗೊಂಡ ನೀರನ್ನು ಸಿಂಪಡಿಸುವ ಒಂದು ಆಚರಣೆ ಎಂದು ಕರೆಯುವುದು ವಾಡಿಕೆ.

ವರಾಹಮಿಹಿರನ ಬೃಹತ್‌ ಸಂಹಿತೆಯಲ್ಲಿ (ದೇವರ ವಿಗ್ರಹದ ಮುಂದೆ ಇಡುವ ‘ನೀಲಾಂಜನ ದೀಪ ನೀರಾಜನದ ತದ್ಭವ) ಬೆಳಗುವುದು ಎಂಬ ಅರ್ಥದಲ್ಲಿ ನೀರಾಜಿತ ಪದ ಬಳಕೆಗೊಂಡಿದೆ. ವಿಷ್ಣು, ಬ್ರಹ್ಮ, ಇಂದ್ರ ಮೊದಲಾದ ದೇವತೆಗಳನ್ನು ನಿನ್ನ ಅಡಿಗೆರಗಿದಾಗ ಅವರುಗಳು ಧರಿಸಿದ ವಜ್ರ ಖಚಿತ ಕಿರೀಟದಿಂದ ಪ್ರತಿಫಲನಗೊಂಡ ಬೆಳಕು ನಿನ್ನ ಪಾದಗಳನ್ನು ಬೆಳಗುತ್ತಿವೆ ಎಂದು ಆಚಾರ್ಯ ಶಂಕರರು ತಮ್ಮ ಸೌಂದರ್ಯ ಲಹರಿಯಲ್ಲಿ “ಮುಕುಂದ ಬ್ರಹ್ಮೇಂದ್ರ ಸ್ಫುಟ ಮುಕುಟ ನೀರಾಜಿತ ಪದಾಮ್‌” ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕೌಟಿಲ್ಯನ ಪ್ರಕಾರ ಅಶ್ವಾಯುಜದ ಒಂಭತ್ತನೆಯ ದಿನ ಪ್ರಯಾಣ ಸಮಯದಲ್ಲಿ ಯುದ್ಧಕ್ಕೆ ಹೊರಟಾಗ, ಆಕ್ರಮಣ ಮುಗಿಸಿ ಹಿಂತಿರುಗಿದಾಗ ಮತ್ತು ರಾಜ್ಯದಲ್ಲಿ ವ್ಯಾಧಿಗಳು ತಲೆದೋರಿದಾಗ ಈ ನೀರಾಜನ ವಿಧಿಯನ್ನು ಆಚರಿಸಬೇಕು ಎಂದು ಹೇಳುತ್ತಾನೆ. ಈ ನೀರಾಜನ ವಿಧಿಯಲ್ಲಿ ಹಲವು ಬಗೆಗಳಿದ್ದು, ದೀಪಮಾಲೆಯಿಂದ ನೀರೊಳಗಿದ್ದ ತಾವರೆಯ ಹೂವಿನಿಂದ ಒಗೆದ ಶುಚಿಯಾದ ಬಟ್ಟೆಯಿಂದ, ಮಾವಿನ ಮತ್ತು ಅಶ್ವತ್ಥ ಎಲೆಗಳಿಂದ ಮತ್ತು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಅಡ್ಡ ಬೀಳುವುದರಿಂದ ಹಿಡಿದು ಈತರಹದ ಐದು ನೀರಾಜನಾರಾಧನೆಯನ್ನು ತಿಳಿಸುತ್ತಾನೆ.

“ಬೃಹತ ಸಂಹಿತೆಯಲ್ಲಿ ವರಾಹಮಿಹಿರನ ೪೪ನೇ ಅಧ್ಯಾಯದ ಎಲ್ಲಾ ೨೮ ಶ್ಲೋಕಗಳು ನೀರಾಜನ ವಿಧಿಗೆ ಮೀಸಲಾಗಿವೆ. ವರಾಹಮಿಹಿರ ಹೇಳುವಂತೆ ಭಗವಂತ ರೆಪ್ಪೆ ಬಿಚ್ಚಿ (ಮೋಡಗಳನ್ನು ಚದುರಿಸಿ) ತನ್ನ ಕಣ್ಣುಗಳನ್ನು (ಸೂರ್ಯ ಮತ್ತು ಚಂದ್ರ) ಕತೆರೆದು ತನ್ನ ಯೋಗ ನಿದ್ರೆಯಿಂದ ಎಚ್ಚೆತ್ತಾಗ ಆನೆಗಳಿಗೂ, ಕುದುರೆಗಳಿಗೂ, ಯೋಧರಿಗೂ ಈ ನೀರಾಜನ ವಿಧಿಯನ್ನು ಆಚರಿಸಬೇಕು. ಆಷಾಢ ಮಾಸದ ಏಕಾದಶಿ ಯಂದು ವಿಷ್ಣು ತನ್ನ ಯೋಗ ನಿದ್ರೆಯಲ್ಲಿ ತೊಡಗಿ ನಾಲ್ಕು ತಿಂಗಳ ಕಾಲ ಹಾಗೆ ಯೋಗನಿದ್ರೆಯಲ್ಲಿದ್ದು, ಮೇಲೆ ಹೇಳಿದ ಭಗವಂತನ ಕಣ್ಣುಗಳ ಉನ್ಮೀನ ಕಾರ್ತಿಕದ ಏಕಾದಶಿಯಲ್ಲಿ ಆಗುತ್ತದೆಂದು ಜನರ ನಂಬಿಕೆ. ಕಾರ್ತಿಕ ಮಾಸದ ಅಥವಾ ಆಶ್ವೀಜ ಮಾಸದ ಶುಕ್ಲಪಕ್ಷ ೮, ೧೨ ಅಥವಾ ೧೫ನೇ ದಿನ ಈ ಶಾಂತಿ ವಿಧಿಯನ್ನು ಆಚರಿಸಬೇಕು ಎಂದಿರುವನು. (ಗೋವಿಂದ ವೈದ್ಯ ಸಂ.ಡಾ.ಆರ್. ಶಾಮಾಶಾಸ್ತ್ರಿ ೪-೪೨)

ಉತ್ತರ ಭಾರತದಲ್ಲಿ ಕೆಲವು ಕಡೆ ಚಾಂದ್ರಮಾನ ತಿಂಗಳುಗಳ ಗಣನೆಯಲ್ಲಿ ಮೊದಲು ಕೃಷ್ಣಪಕ್ಷ ಆಮೇಲೆ ಶುಕ್ಲಪಕ್ಷ ಈ ಮಾದರಿಯ ಗಣನೆಗೆ ಪೂರ್ಣಿಮಾಂತ ಮಾಸಗಳು ಎಂದು ಹೇಳುತ್ತಾನೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ದ್ವಾದಶಿಯಿಂದ ಹಿಡಿದು ಕಾರ್ತಿಕ ಶುದ್ಧ ಪ್ರಥಮ ತಿಥಿವರೆಗೆ ನಡೆಸುವ ಒಂದು ವಿಶೇಷ ಹಬ್ಬ ಈ ನೀರಾಜನ ವಿಧಿ. ಸಾಮಾನ್ಯವಾಗಿ ರಾಜಮಹಾರಾಜರು ಇದನ್ನು ನಡೆಸಿಕೊಂಡು ಬರುತ್ತಿದ್ದರು (ಮಾರ್ಕಂಡೇಯ ಪುರಾಣ, ದೇವಿ ಮಹಾತ್ಮೆ, ಪುಟ. ೩೩೪).

ರಾಜಧಾನಿಯ ಈಶಾನ್ಯ ಭಾಗದಲ್ಲಿ ಪ್ರಶಸ್ತವಾದ ಭೂಮಿಯನ್ನು ಆರಿಸಿಕೊಂಡು ಒಂದು ವಿಶಾಲವಾದ ಮಂಟಪವನ್ನು ನಿರ್ಮಿಸಿ, ಹಲಸು, ದೇವದಾರು ಮುಂತಾದ ಪ್ರಶಸ್ತಿ ಮರಗಳಿಂದ ಹದಿನಾರು ಮೊಳ ಎತ್ತರ, ಹತ್ತು ಮೊಳ ತೋರಣ ಕಮಾನುಗಳನ್ನು ಕಟ್ಟಿದ ಮಂಟಪವನ್ನು ನಿರ್ಮಿಸುತ್ತಾರೆ. ತಳಿರು ತೋರಣಗಳಿಂದ ಅದನ್ನು ಅಲಂಕರಿಸುತ್ತಾರೆ. ಸಾಮಾನ್ಯವಾಗಿ ಮೂರು ಕಮಾನುಗಳುಳ್ಳ ಪ್ರವೇಶ ದ್ವಾರಗಳು ಇರುತ್ತವೆ. ಅಲ್ಲೊಂದು ಪ್ರಾರ್ಥನಾ ಮಂದಿರ (ಶಾಂತಿಸದ್ಮ, ಯೋಗಶಾಲೆ) ನಿರ್ಮಿಸಬೇಕು. ಅದನ್ನು ಸಾಲವೃಕ್ಷ, ಔದುಂಬರ, ಅರ್ಜುನ ಮರಗಳಿಂದಲೂ ಕುಶಹುಲ್ಲಿನಿಂದ ನಿರ್ಮಿಸಿ, ಯಾಗಶಾಲೆಗೆ ಬಿದುರಿನ ಬಾಗಿಲು, ಮತ್ಸ್ಯ, ಧ್ವಜ ಮತ್ತು ಚಕ್ರಗಳಿಂದ ಅಲಂಕಾರಗೊಳಿಸಬೇಕು. ದೇವತಾಪೂಜೆ ಮತ್ತು ಹೋಮಗಳು ನಡೆಯುವುದರಿಂದ ಸೂರ್ಯನು ಚಿತ್ತಾ ನಕ್ಷತ್ರಕ್ಕೆ ಪ್ರವೇಶಿಸಿದ ದಿನದಿಂದ ಅವನು ಸ್ವಾತಿ ನಕ್ಷತ್ರಕ್ಕೆ ಹೋಗುವವರೆಗೆ ಈ ವ್ರತವನ್ನು ನಡೆಸುತ್ತಾರೆ. ಐದು ಬಗೆಯ ಎಲೆಗಳಿಂದಲೂ, ನೂಲುಗಳಿಂದಲೂ, ಅಲಂಕೃತವಾದ ಪೂರ್ಣ ಕುಂಭಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಕೇಸರಿಯಲ್ಲಿ ಅದ್ದಿದ ಒಂದು ಹಗ್ಗಕ್ಕೆ ಅಕ್ಕಿ, ಬಿಳಿಸಾಸವೆ ಮುಂತಾದವುಗಳನ್ನು ಕಟ್ಟಿ ನಂತರ ಕುದುರೆಗಳ ಕೊರಳಿಗೆ ಆ ಹಗ್ಗವನ್ನು ಕಟ್ಟಿ ಪೂಜಾಗ್ರಹಕ್ಕೆ ಕರೆತರಬೇಕು. ತೋರಣದ ಪಶ್ಚಿಮ ಭಾಗದಲ್ಲಿ ಆನೆಗಳನ್ನು ಮತ್ತು ಕುದುರೆಗಳನ್ನು ಕರೆತಂದು ಅಲ್ಲಿ ಅವುಗಳಿಗೆ ವಿಶೇಷ ರೀತಿಯಲ್ಲಿ ಮಂತ್ರಪೂರ್ವಕವಾಗಿ ಸ್ನಾನ ಮಾಡಿಸುತ್ತಾರೆ. ಏಳು ದಿನಗಳ ಕಾಲ ಸೂರ್ಯ, ವರುಣ, ವಿಶ್ವದೇವ, ಬ್ರಹ್ಮ, ಇಂದ್ರ ಮತ್ತು ವಿಷ್ಣುವನ್ನು ಉದ್ದೇಶಿಸಿ ವೇದ ಮಂತ್ರಗಳಿಂದ ಕುದುರೆಗಳನ್ನು ಈ ಪೂಜಾಗೃಹದಲ್ಲಿ ಪೂಜಿಸಿ ಶಾಂತಿ ಮಾಡಿಸಬೇಕು; ವಿಧಿವತ್ತಾಗಿ ಹೋಮ ಮಾಡಬೇಕು. ಹಾಗೆ ಪೂಜಿಸಲ್ಪಟ್ಟ ಕುದುರೆಗಳನ್ನು ಗದರಿಸಬಾರದು, ಹೊಡೆಯಲೂಬಾರದು. ಬದಲಾಗಿ ಅವುಗಳ ಮನಸ್ಸಿನಲ್ಲಿ ಇರಬಹುದಾದ ಶಂಕೆ, ಭಯಗಳನ್ನು ದೂರ ಮಾಡುವುದಕ್ಕಾಗಿ ಶುಶ್ರಾವ್ಯವಾಗಿ ಪುಣ್ಯಾ ಮಂತ್ರಗಳನ್ನು ಹಾಡಬೇಕು. ಶಂಖ, ತೂರ್ಯ ಮುಂತಾದ ವಾದ್ಯಗಳ ಧ್ವನಿಯಿಂದ ಹಾಡುಗಳಿಂದ ಸಂತೋಷ ಪಡಿಸಬೇಕು.

ಎಂಟನೆಯ ದಿನ ಬೆಳಗಾದಾಗ ಒಂದು ಕುಟೀರವನ್ನು ಮರದ ತೊಗಟೆಗಳಿಂದ ಮತ್ತು ಹುಲ್ಲಿನಿಂದ ಮಂಟಪದ ದಕ್ಷಿಣ ಭಾಗದಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಬೇಕು. ಈ ಕುಟೀರದ ಮುಂಭಾಗದಲ್ಲಿ ಒಂದು ಅಗ್ನಿಕುಂಡದ ವೇದಿಕೆಯನ್ನು ನಿರ್ಮಿಸಬೇಕು. ಹೋಮಕ್ಕಾಗಿ ಪೂರ್ಣ ಕುಂಭಗಳಲ್ಲಿ ವಿವಿಧ ಹೋಮ ಸಾಮಗ್ರಿ, ಸಮಿಧೆಗಳನ್ನೂ ತಂದಿಟ್ಟುಕೊಳ್ಳಬೇಕು. ಬೆಳ್ಳಿಯ ಅಥವಾ ಚಿನ್ನದ ಸ್ರುಕ್‌ (ಸೌಟು)ಗಳನ್ನು ಉಪಯೋಗಿಸಬೇಕು. (ದರ್ವೆಹುಲ್ಲು, ಫಲಾಶ ಮರದ ತೊಗಟೆಗಳು ಮತ್ತು ಮೊಳಕೆ ಬಂದ ಜವೆಗೋಧಿಯನ್ನು ಈ ಪೂಜೆಯಲ್ಲಿ ಉಪಯೋಗಿಸುತ್ತಿದ್ದರು ಎಂದು ಕಾಳಿದಾಸ ರಘುವಂಶದಲ್ಲಿ ಹೇಳುತ್ತಾನೆ) ಅಶ್ವವೈದ್ಯ ಮತ್ತು ದೈವಜ್ಞ ಅವರೊಂದಿಗೆ ಹುಲಿಯ ಚರ್ಮದ ಮೇಲೆ ಪೂರ್ವಾಭಿಮುಖವಾಗಿ ಯಜ್ಞಕುಂಡದ ಎದುರು ರಾಜನು ಕುಳಿತುಕೊಳ್ಳಬೇಕು. ಮಂತ್ರಪೂರ್ವಕವಾಗಿ ಹೋಮ ನಡೆಸಬೇಕು. ಈಗ ವಾದ್ಯಗಳು ಮೊಳಗುತ್ತಿರಲು ಪಟ್ಟದ ಕುದುರೆಯನ್ನು ಮತ್ತು ಪಟ್ಟದ ಆನೆಯನ್ನು ಅಲಂಕರಿಸಿ ಮೆಲ್ಲ ಮೆಲ್ಲನೆ ಆ ಶಾಂತಿಗೃಹದ ಕುಟೀರಕ್ಕೆ ಕರೆತರಬೇಕು. ಈ ಕುರಿತು ನಂಬಿಕೆಯ ಮಾತನ್ನು ವರಾಹಮಿಹಿರ ಹೀಗೆ ಹೇಳುತ್ತಾನೆ. “ಶಾಂತಿಸದ್ಮಕ್ಕೆ ಕರೆತಲ್ಪಟ್ಟ ಪಟ್ಟದ ಕುದುರೆಗಳು ಮತ್ತು ಆನೆಗಳು ನಿಲ್ಲುವ ಭಂಗಿ ರಾಜನ ಮುಂದಿನ ವರ್ಷದ ಉನ್ನತಿ ಯಾ ಅವನತಿಗಳಿಗೆ ಸೂಚಕವಾಗಿರುತ್ತದೆ.” (ವರಾಹಮಿಹಿರನ ಬೃಹತ ಸಂಹಿತೆಯ ಉದೃತ ಭಾಗದ ಕೆಲವು ಅಂಶಗಳು)

ಪಟ್ಟದ ಕುದುರೆಗೆ ಮಂತ್ರಪೂರ್ವಕವಾಗಿ ನೈವೇದ್ಯದ ಅನ್ನವನ್ನು ರಾಜಪುರೋಹಿತರು ಸಮರ್ಪಿಸಬೇಕು. ಔದುಂಬರ ವೃಕ್ಷಶಾಖೆಯನ್ನು ಶುದ್ಧೋದಕದಲ್ಲಿ ಅದ್ದಿ ಕುದುರೆಗಳ ಮತ್ತು ಆನೆಗಳ ಮೇಲೆ ಸಿಂಪಡಿಸುತ್ತಾ ಪುರೋಹಿತರು ವೇದಘೋಷ ಮಾಡಬೇಕು. ಇದನ್ನೇ ರಾಜನ ಮೇಲೂ, ಸೈನಿಕರ ಮೇಲೂ ಪೋಷಣೆ ಮಾಡಬೇಕು. ಸೂರ್ಯನು ಸ್ವಾತಿ ನಕ್ಷತ್ರದಲ್ಲಿ ಇರುವವರೆಗೆ ಬೇರೆ ಬೇರೆ ಅಶ್ವಶಾಲೆ, ಗಜಶಾಲೆಗಳಲ್ಲಿ ಒಂದೊಂದು ದಿನ ಒಂದೊಂದು ಕಡೆ ಈ ಪೂಜೆಗಳು ನಡೆಯುತ್ತಿದ್ದವು ಮ ತ್ತು ಕುದುರೆಗಳು ಹಾಗೂ ಆನೆಗಳೂ ಸುತ್ತುವರಿಸಲ್ಪಡುತ್ತಿದ್ದವು. ಅವುಗಳನ್ನು ಗದರಿಸುವುದಾಗಲಿ ಅವುಗಳಿಗೆ ಹೊಡೆಯುವುದಾಗಲೀ ಈ ದಿನಗಳಲ್ಲಿ ನಿಷಿದ್ಧ ಕಾರ್ಯಗಳಾಗಿದ್ದವು. ಈ ನೀರಾಜನ ವಿಧಿಗಾಗಿ ನಿರ್ಮಿಸಲ್ಪಟ್ಟ ಪೂಜಾ ಮಂಟಪವನ್ನು ಶಸ್ತ್ರಜ್ಜಿತರಾದ ಯೋಧರು, ದೈವಜ್ಞರು ಮತ್ತು ಕುದುರೆಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಪಶುವೈದ್ಯರುಗಳು ದಿನಶಿ ಮಂಟಪದ ಬಳಿಯೇ ಇರುತ್ತಿದ್ದರು.

ರಾಜನ ವೈರಿಯ ಒಂದು ಮಣ್ಣಿನ ಮೂರ್ತಿಯನ್ನು ಅಲ್ಲಿ ಇರಿಸಿಕೊಂಡಿರಬೇಕು. ಪುರೋಹಿತನು ಅಭಿಚಾರ ಮಂತ್ರೋಚ್ಛಾರ ಮಾಡುತ್ತಾ ಒಂದು ಭರ್ಚಿಯಿಂದ ಆ ಮಣ್ಣಿನ ಮೂರ್ತಿಯನ್ನು ತಿವಿಯಬೇಕು. ಪಟ್ಟದ ಕುದುರೆಗೆ ಆಹಾರವನ್ನು ಸ್ವಲ್ಪ ಸ್ವಲ್ಪವಾಗಿ ಕೊಟ್ಟು ಅದು ತಿಂದ ನಂತರ ರಾಜನು ಆ ಕುದುರೆಯನ್ನೇರಿ ತನ್ನ ಸೈನ್ಯದೊಂದಿಗೆ ಈಶಾನ್ಯಭಿಮುಖವಾಗಿ ಮೆರವಣಿಗೆ ಹೊರಡಬೇಕು. ಈ ಸಮಾರಂಭಕ್ಕೆ ಮೀಸಲಾದ ವಿಶೇಷ ಆಭರಣಗಳೊಂದಿಗೆ, ರಾಜ್ಯ ಲಾಂಛನಗಳೊಂದಿಗೆ ಆನೆಯ ಮೇಲೆ ಅಂಬಾರಿಯನ್ನೇರಿ ರಾಜನು ಉತ್ತರಾಭಿಮುಖವಾಗಿ (ಇಲ್ಲವೇ ಈಶಾನ್ಯದ ಕಡೆ) ಮೆರವಣಿಗೆ ಹೊರಡಬೇಕು. ಸೂರ್ಯನು ಸ್ವಾತಿ ನಕ್ಷತ್ರ ಬಿಟ್ಟು ವಿಶಾಖಾ ನಕ್ಷತ್ರಕ್ಕೆ ಪ್ರವೇಶಿಸಿದ ದಿನ ವಿಶೇಷ ಪೂಜೆ ನಡೆಯುತ್ತಿತ್ತು. ಪುರೋಹಿತರು ಮಂತ್ರೋಚ್ಛಾರ ಮಾಡುತ್ತಿದ್ದಾಗ ಭೇರಿ, ನಗಾರಿಗಳೂ ಮೊಳಗುತ್ತಿದ್ದಾಗ ಕುದುರೆ ಮತ್ತು ಆನೆಗಳಿಗೆ ವಿಶೇಷ ಪೂಜೆ ಮಾಡಿ ಪಟ್ಟದ ಕತ್ತಿ ಮತ್ತು ಶ್ವೇತಛತ್ರಕ್ಕೆ ಪೂಜಿಸಿ ರಾಜನು ತನ್ನ ಪಟ್ಟದ ಕುದುರೆಯ ಮೇಲೆ ಹತ್ತುತ್ತಿದ್ದನು. ಅದಾದ ನಂತರ ಪಟ್ಟದ ಆನೆಯ ಮೇಲೆಯೂ ಹತ್ತಿ ರಾಜ ಆ ಮಂಟಪದಿಂದ ಹೊರಬರುತ್ತಿದ್ದನು. ಹೊರಬರುತ್ತಿದ್ದಂತಲೇ ವೇದಘೋಷ ಮೊಳಗುತ್ತಿತ್ತು. ರಾಜನ ಹಿಂದೆ ಮತ್ತು ಮುಂದೆ ಇದಕ್ಕಾಗಿ ಸೀಮಿತರಾಗಿದ್ದ ಅವನ ಸೈನಿಕರು ಆನೆ, ಕುದುರೆ ಮುಂತಾದ ವಿವಿಧ ವಾಹನಗಳನ್ನೇರಿ ರಾಜನ ಹಿಂದೆ ಮತ್ತು ಮುಂದೆ ಬರುತ್ತಿದ್ದರು. ರಾಜಧಾನಿಯ ನಾಗರಿಕರು ಸಹ ಹಿಂಬಾಲಿಸಿ ಬರುತ್ತಿದ್ದರು. ಈ ಶೋಭಾಯಾತ್ರೆ ಮಂಟಪದಿಂದ ಹೊರಟು ರಾಜನ ಅರಮನೆಯ ಕಡೆ ರಾಜಧಾನಿಯ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಅರಮನೆಯನ್ನು ತಲುಪುತ್ತಿತ್ತು. ಅರಮನೆಯನ್ನು ತಲುಪಿದ ಮೇಲೆ ಅಲ್ಲಿ ರಾಜನು ದರ್ಬಾರನ್ನು ನಡೆಸಿ ರಾಜ್ಯದ ಗಣ್ಯವ್ಯಕ್ತಿಗಳಿಗೆ ಸನ್ಮಾನ ಮಾಡುತ್ತಿದ್ದನು.

ಮುಖ್ಯವಾಗಿ ಈ ನೀರಾಜನ ವಿಧಿಯ ವ್ರತ ಒಂದು ಶಾಂತಿಯ ರೂಪದಲ್ಲಿ ರಾಜರುಗಳು ಮಾಡುತ್ತಿದ್ದ ವಿಶೇಷ ಉತ್ಸವ, ಯುದ್ಧದಲ್ಲಿ ವಿಜಯಕ್ಕೂ ಮತ್ತು ಬೇರೆ ಬೇರೆ ಉದ್ದೇಶಗಳಿಗೂ ಸಾಕಿಕೊಂಡಿದ್ದ ತನ್ನ ಅಶ್ವದಳ ಮತ್ತು ಗಜಸಮೂಹದ ಕ್ಷೇಮಾಭಿವೃದ್ಧಿಗಾಗಿಯೂ ಮಾಡುತ್ತಿದ್ದ ಪೂಜೆ ಇದಾಗಿದೆ. ಈ ಅವಧಿಯಲ್ಲಿ ನವಮಿಯೆಂದು ರಾತ್ರಿ ದುರ್ಗಾಪೂಜೆ ನಡೆಯುತ್ತಿತ್ತು. ಆಯುಧಗಳನ್ನು ಮತ್ತೊಮ್ಮೆ ಈ ರಾತ್ರಿ ಪೂಜಿಸುತ್ತಿದ್ದರು. ಮರುದಿನ ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ನೀರಾಜನ ಶಾಂತಿಯ ನಡೆಸುತ್ತಿದ್ದರು ಎಂದು ನೀಲಮತ ಪುರಾಣ ಹೇಳುತ್ತದೆ.

ದ್ವಾದಶಿ (ಉತ್ತರ ಭಾರತದ ಕಾರ್ತಿಕ ಶುದ್ಧ ೧೨) ಯಂದು ನಡೆಸುತ್ತಿದ್ದ ಪೂಜೆಗೆ ನೀರಾಜನ ದ್ವಾದಶಿ ಎನ್ನುತ್ತಿದ್ದರು. ಈ ರಾತ್ರಿ ಶ್ರೀ ವಿಷ್ಣು ನಿದ್ರೆಯಿಂದ ಏಳುತ್ತಾನೆ ಎಂದು ನಂಬಿ, ವಿಷ್ಣುವಿನ ವಿಗ್ರಹದ ಮುಂದೆ ದ್ವೀಪಗಳನ್ನು ಬೆಳಗುತ್ತಿದ್ದರು. ವಿಷ್ಣುವಿನೊಂದಿಗೆ ಸೂರ್ಯ, ಶಿವ, ಗೌರಿಯನ್ನು ಗೋಶಾಲೆಯಲ್ಲಿದ್ದ ಹಸು ಕರುಗಳನ್ನು, ಕುದುರೆಗಳನ್ನೂ, ಆನೆಗಳನ್ನು ಆಯುಧಾಗಾರದಲ್ಲಿದ್ದ ಎಲ್ಲ ಆಯುಧಗಳನ್ನೂ ಮತ್ತು ರಾಜಲಾಂಛನಗಳನ್ನು ಈ ದಿನ ಮತ್ತೆ ಪೂಜಿಸುತ್ತಿದ್ದರು. ಒಬ್ಬ ಮುತ್ತೈದೆಯು (ಕೆಲವೊಮ್ಮೆ ರಾಜನಿಗೆ ಅಚ್ಚು ಮೆಚ್ಚಾಗಿದ್ದ ರಾಜ ನರ್ತಕಿಯೋ, ವೇಶ್ಯೆಯೋ ಒಬ್ಬಳು) ರಾಜನಿಗೆ ವಿಶೇಷವಾಗಿ ಆರತಿ ಎತ್ತುತ್ತಿದ್ದಳು. ಈ ಆರತಿ ಮೂರು ಬಾರಿ ನಡೆಯುತ್ತಿತ್ತು. ಈ ಶಾಂತಿಯಿಂದ ರಾಜಪರಿವಾರಕ್ಕೂ, ಪ್ರಜೆಗಳಿಗೂ ಅಭ್ಯುದಯವಾಗುತ್ತದೆ. ಜೊತೆಗೆ ರೋಗರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಇತ್ತು. ಹೇಮಾದ್ರಿಯ ಪ್ರಕಾರ ಈ ಪದ್ಧತಿಯನ್ನು ಅಜಪಾಲ ಎಂಬ ರಾಜನು ಚಲಾವಣೆಗೆ ತಂದು ಪ್ರತಿ ವರ್ಷವು ನಡೆಸಬೇಕೆಂಬ ನಿಯಮವನ್ನು ಮಾಡಿದ್ದನು. ಇದು ವರಾಹಮಿಹಿರ ವರ್ಣಿಸುವ ನೀರಾಜನ ವಿಧಿಯಾಗಿದೆ. ಗೋವಿಂದ ವೈದ್ಯ ಬರೆದ ಕಂಠೀರವ ನರಸರಾಜ ವಿಜಯ (ಕ್ರಿ.ಶ. ೧೬೪೮) ಕಾವ್ಯದಲ್ಲಿ “ದೊರೆಯರಾಯ ನರಸೇಂದ್ರನ ಮಹಾನವಮಿಯು ಪುರದುತ್ಸವ, ನರಸೇಂದ್ರನ ಮಹಾನವಮಿಯ ಒಡ್ಡೋಲಗದ ಉತ್ಸವದ ಬಲ್ಸಿರಿಯ ಸಂಭ್ರಮದ ಮತ್ತು ಭೂಪನ ಪೂಜೆ, ವಿಜಯದಶಮಿಯ ಜಂಬೂ ಸವಾರಿಗಳೂ ಬಣ್ಣಿಸಲ್ಪಟ್ಟಿವೆ.

ಕಂಠೀರವ ನರಸರಾಜ ವಿಜಯ ಕಾವ್ಯದಲ್ಲಿ ಬರುವ, ನೀರಾಜನ ವಿಧಿಗೆ ಸಂಬಂಧ ಪಟ್ಟ ವಿವರಗಳನ್ನು ಈ ರೀತಿಯಾಗಿ ಗಮನಿಸಬಹುದು.

ಗಜಲಕ್ಷ್ಮಿ ಹಯಲಕ್ಷ್ಮೀಯಾಯುಧಲಕ್ಷ್ಮಿಯರ್
ನಿಜವಾದ ದಾನಲಕ್ಷ್ಮಿಯರ
ಭುಜಲಕ್ಷ್ಮಿ ಸೌಭಾಗ್ಯ ಸಿರಿ ಕೀರ್ತಿಲಕ್ಷ್ಮಿಯ
ಭಜಿಸಿ ಪ್ರತ್ಯಕ್ಷಗೆಸಿದರು (೨೧೩೦)

ಈ ವಿಧಾನವನ್ನು ಅನುಸರಿಸುವುದರಿಂದ ರಾಜರಿಗೆ ಗಜಲಕ್ಷ್ಮಿ, ಹಯಲಕ್ಷ್ಮಿ, ಆಯುಧ ಲಕ್ಷ್ಮಿ, ದಾನಲಕ್ಷ್ಮಿ, ಸೌಭಾಗ್ಯಸಿರಿ ಕೀರ್ತಿಲಕ್ಷ್ಮಿ ಒಲಿಯುವಳು ಮತ್ತು ಪ್ರತ್ಯಕ್ಷಗೊಂಡು ಫಲನೀಡುವಳೂ ಎಂದು ವಿವರಿಸುತ್ತಾನೆ. ಕ್ರಿ.ಶ. ಸುಮರು ೧೧೭೦-೧೨೦೦ರ ಸಂದರ್ಭದಲ್ಲಿದ್ದ ಅಭಿನವಚಂದ್ರ ತನ್ನ ಅಶ್ವಶಾಸ್ತ್ರ ಕೃತಿಯ ೮ನೆಯ ಅಧ್ಯಾಯದಲ್ಲಿ ನೀರಾಜನ ವಿಧಿಯನ್ನು ಈ ಕೆಳಗಿನಂತೆ ವಿವರಿಸುತ್ತಾನೆ. ಶತ್ರುಕುಲವನ್ನು ಸಂಹಾರ ಮಾಡುವ ಉದ್ದೇಶದಿಂದಲೂ, ಆ ಮೂಲಕ ಮೇಲೆದ್ದು ಬರಲಿರುವ ಜಯವಧುವನ್ನು ಕೈಹಿಡಿಯುವ ಸಲುವಾಗಿ ಈ ನೀರಾಜನ ವಿಧಿಯನ್ನು ಸಾಂಗೋಪಾಂಗವಾಗಿ ಆಚರಿಸತಕ್ಕದ್ದು ಎಂದು ವಿವರಣೆ ಕೊಡುತ್ತಾನೆ. ಇಲ್ಲಿ ಆಶ್ವೀಜ ಶುದ್ಧ ಬಿದಿಗೆಯ ದಿನ ಅಶ್ವಾನೀಕಕ್ಕೆ ರಕ್ಷೆಯಿಡುವ ಉದ್ದೇಶದಿಂದ ಉತ್ಸಾಹದಿಂದ, ಮಹಾಮಂಗಲಕರವಾದ ಈ ನೀರಾಜನ ವಿಧಿಯಹನ್ನು ನೇರವೇರಿಸುತ್ತಿದ್ದು, ಪಟ್ಟದ ಕುದುರೆಯನ್ನು ಆಯ್ಕೆಮಾಡಿಕೊಳ್ಳುವ ವಿಚಾರವನ್ನು ಕವಿ ಇಲ್ಲಿ ವರ್ಣಿಸುತ್ತಾನೆ. ಅದರ ಜೊತೆಗೆ ಯುವರಾಜ ಕುದುರೆ, ಸೇನಾಧಿಪತಿ ಕುದುರೆ, ಅಮಾತ್ಯ ಕುದುರೆ ಇವುಗಳನ್ನೆಲ್ಲಾ ಈ ದಿನ ವಿಧಿವತ್ತಾಗಿ ಪೂಜಿಸುತ್ತಿದ್ದರು. ಗುಡ(ಬೆಲ್ಲ), ಶಾಲಿ(ಭತ್ತ), ತಂಡುಲಂ(ಅಕ್ಕಿ), ಕನ್ನಡಿ, ಕಲಶ, ಕರುಕೆ(ಗರಿಕೆ), ತೋರಣಂ, ದಧಿ, ಪುಷ್ಪಂ, ಸೊಡರು(ದೀಪ), ಎಸೆವ ರಂಗವಲಿ, ಎಲೆಯಡಕೆ ಮುಂತಾದ ಪ್ರಸಿದ್ಧ ಪವಿತ್ರ ಪೂಜಾ ದ್ರವ್ಯಗಳನ್ನು ಅಲ್ಲಿ ಬಳಸುತ್ತಿದ್ದರು. ಶ್ವೇತಪತ್ರ(ಕೊಡೆ), ಮಂಗಲಗೀತ, ಆನಕ(ವಾದ್ಯ), ಪಟಹ, ಹೇಮಚಾಮರ, ಗಣಿಕಾವ್ರಾತ(ನಿತ್ಯ ಸುಮಂಗಲಿಯರ ಸಮೂಹ), ಸುಭಟ, ಸುಸಂಘಾತ, ಕಹಳಾರವ ಈ ಎಲ್ಲಾ ಬಗೆಯ ವಸ್ತುಗಳು ಜೊತೆಗೆ ಕೋಲಾಹಲದೊಂದಿಗೆ ಮಹಾನವಮಿಯವರೆಗೆ ಕುದುರೆಗಳನ್ನು ಸ್ನಾನ ಮಾಡಿಸುತ್ತಿದ್ದರು. ಅದಕ್ಕಾಗಿ ತೊರೆ, ಸಮುದ್ರ, ಪೆರ್ಗೆರೆ, ತಾವರೆಗೋಳ ಮುಂತಾದ ಕಡೆಗಳಿಂದ ನೀರನ್ನು ತರುತ್ತಿದ್ದರು. ಕುದುರೆಗಳ ಮೇಲೆ ಇದ್ದ ಮಣ್ಣಿನ ಕೊಳೆಯನ್ನು ತೊಳೆದು ಆ ಮೇಲೆ ಪಂಚಗವ್ಯವನ್ನು ತೊಳೆಯುತ್ತಿದ್ದರು.

ದೇವತಾ ಪ್ರತಿಷ್ಠಾಪನೆಯ ಮುನ್ನ ಪುಷ್ಟಾಧಿವಾಸ, ಫಲಾಧಿವಾಸ, ರತ್ನಾಧಿವಾಸ ಧಾನ್ಯಾಧಿವಾಸ, ಜಲಾಧಿವಾಸ ಎಂಬ ಕ್ರಮವಿದೆ. ಆಯಾ ವಸ್ತುಗಳಲ್ಲಿ ಈ ದೇವತಾ ವಿಗ್ರಹಗಳನ್ನು ಒಂದು ರಾತ್ರಿ ಅವಧಿಯವರೆಗೆ ಮುಳುಗಿಸಿ ಇಟ್ಟು, ಮರುದಿನ ಅದನ್ನು ತೆಗೆದು ಶುದ್ಧಿಗೊಳಿಸುವ ಕ್ರಮವಿದೆ. ಇದೇ ರೀತಿಯನ್ನು ಅಶ್ವಪೂಜೆಯಲ್ಲಿ ಕುದುರೆಯನ್ನು ನೀರಿನ ಒಂದು ತೊಟ್ಟಿಯಲ್ಲಿ ಕೆಲಕಾಲ ಕುತ್ತಿಗೆಯ ಮಟ್ಟದವರೆಗೆ ಮುಳಗಿಸಿ, ಎಬ್ಬಿಸಿ ಹೊರಗೆ ತರುವ ಜಲವಾಸದ ಅರ್ಚನೆಯನ್ನು ಈ ವಿಧಿಯಲ್ಲಿ ಮಾಡುತ್ತಿದ್ದರು. ನಂತರ ಈ ವಾಜಿಗೆ ಕುಂಕುಮ, ಅರಿಶಿನ, ಗಂಧ ಮುಂತಾದವುಗಳಿಂದ ಪೂಜಿಸುತ್ತಿದ್ದರು. ಈಗ ರತ್ನಾವಳಿಯಿಂದ ಕೂಡಿದ ಕಳಶದ ತೋವಾಲನ್ನು ಕುದುರೆ ಪುಸ್ತಕದಲ್ಲಿ ಧರಿಸುತ್ತಿತ್ತು. ಮೇಖಲೆ(ಒಂದು ಡಾಬು), ಮಣಿಸರ, ರೇಷ್ಮೆ ಬಟ್ಟೆ, ರಕ್ಷೆ ಮುಂತಾದವುಗಳಿಂದ ಕೊರಳನ್ನು ಅಲಂಕರಿಸುತ್ತಿದ್ದರು. ಹಣೆಯ ಮೇಲೆ ಪಟ್ಟದ ಕುದುರೆಯ ಲಾಂಛನವನ್ನು ಕಟ್ಟುತ್ತಿದ್ದರು. ಇಷ್ಟೆಲ್ಲಾ ಅಲಂಕಾರವಾದ ನಂತರ ಕುದುರೆಗೆ ಕೆಟ್ಟ ದೃಷ್ಟಿಗಳ ಕೆಡಕು ಆಗದಿರಲಿ ಎಂದು ಒಂದು ಸೀರೆಯಲ್ಲಿ ಅರಿಶಿನ, ಉತ್ತರಣೆ (ಅಪಾಮಾರ್ಗ) ಬಿಳಿಸಾಸುವೆ, ಗಜ್ಜುಗ, ಇಂಗು ಆಮರ್ದುವಳ್ಳೀ, ಬೇವು, ಲೋದ್ರ, ಬಾಗೆ(ಸಿರಿಸ) ಬಜೆ, ಗಗ್ಗುಳ, ಹಿಪ್ಪೆ, ಕಕ್ಕೆ, ರಾಜವೃಕ್ಷ, ಸರಳ ಗೋರೋಜನಗಳನ್ನು ಕಟ್ಟಿ ಆ ಸೀರೆಯ ಪಟ್ಟಣವನ್ನು ಕುದುರೆಯ ಕೊರಳಿಗೆ ಕಟ್ಟುತ್ತಿದ್ದರು.

ದೇವಸ್ಥಾನದ ಮಣ್ಣು, ಮದಗಜಗಳ ಕೋಡದ ಮಣ್ಣು, ಹುತ್ತದ ಮಣ್ಣು ಮತ್ತು ಅರಮನೆಯ ಮಣ್ಣು ಈ ಮೃತ್ತಿಕೆಗಳನ್ನು ಕುದುರೆಯ ಹೃದಯ ಭಾಗಕ್ಕೆ ಹಚ್ಚುತ್ತಿದ್ದರು. ವಿಶಾಲವಾದ ಈ ಅಶ್ವಶಾಲೆಯ ಮಂಟಪವನ್ನು ರಂಗವಲ್ಲಿ, ತೋರಣ, ಬಾವುಟ, ತಮಟೆ, ವೇದಘೋಷ, ಶೇಷಾಕ್ಷತೆ, ಪುಷ್ಪ, ಗಂಧ, ದೀಪ, ಧೂಪ ಮುಂತಾದವುಗಳಿಂದ ಅಲಂಕರಿಸುತ್ತಿದ್ದರು. ಅಲ್ಲಿ ಹೋಮ ಮಾಡಿಸಿ ಪುರೋಹಿತರಿಗೆ ದಕ್ಷಣೆಕೊಟ್ಟು ಮುಂಬರುವ ಸಂಗ್ರಾಮ ವಿಜಯಯಾತ್ರೆಗೆ ನೆರೆದ ಎಲ್ಲ ಜನರಿಂದ ಹಾರೈಕೆಗಳನ್ನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತಿದ್ದರು.

ನಂತರ ರೇವಂತನ ಪೂಜೆಯನ್ನು ಮಾಡುತ್ತಿದ್ದರು. ಚರು, ಬಲಿ, ತಾಂಬೂಲ, ಹೂವು, ಅಕ್ಷತೆ, ಗಂಧ, ಕೈದೀವಿಗೆ, ಪಟಗಳು, ಶಂಖ, ಭೇರಿರುವ ಈ ಪೂಜೆಯಲ್ಲಿ ವಿಜೃಂಭಿಸುತ್ತಿದ್ದವು. ಜಯದೇವ, ಭಾನುಪುತ್ರಕ, ಜಯ, ತುರುಗಾರೂಢ, ಸಾರವಿಜ್ಞಾನ ನಿಧಿ, ಜಯ ತರುಗ, ಹೃದಯ ಚಿತ್ತಮ, ಜಯ ತರುಗಪ್ರಿಯ, ಸುರೇಜ್ಯ, ಜಯರೇವಂತ ಎನ್ನುತ್ತ ಮಹಾರಾಜನು, ರಾಜಪುತ್ರನು ರಾಜಪರಿವಾರದವರು ರೇವಂತನಿಗೆ ನಮಸ್ಕಾರ ಮಾಡುತ್ತಿದ್ದರು. ಆ ಮೇಲೆ ಅಶ್ವ ವೈದ್ಯನಿಗೆ ಮಂಗಳ ಚೌಳಿ, ಜಣಂಬ, ಉಂಗುರ, ಕರ್ಣಕುಂಡಲ ಮುಂತಾದವುಗಳನ್ನು ಸಂತೋಷದಿಂದ ಉಡುಗೊರೆಯಾಗಿ ಆ ವೈದ್ಯನಿಗೆ ಕೊಟ್ಟು ಕೊನೆಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಮಹಾರಾಜನು ಕ್ರಮಬದ್ಧವಾಗಿ ಪೂಜಿಸುತ್ತಿದ್ದನು. “ಇದು ನೀರಾಜನವಿಧಿ ಎಂಬುದು ಪೂಜ್ಯಂ ಚಂದ್ರಮತದೊಳ್‌ ಎಂದು ಅಭಿನವಚಂದ್ರ ಮುಕ್ತಾಯಗೊಳಿಸುವುದನ್ನು ಕಾಣಬಹುದು. (ಅಭಿನವ ಚಂದ್ರ ವಿರಚಿತ ಅಶ್ವಶಾಸ್ತ್ರ, ಸಂ.ಜಿ.ಜಿ. ಮಂಜುನಾಥ ಮೈಸೂರು ವಿ.ವಿ, ಪುಟ-೧೦೮-೧೧೬).

ಮಹಾನವಮಿಯಲ್ಲಿ ಕುದುರೆಗೆ ನೀರಾಜನವನ್ನು ಮಾಡುವುದರಿಂದ ವೈರಿಯನ್ನು ಗೆಲ್ಲಬಹುದು. ಆಶ್ಚಿಜ ಶುದ್ಧ ಬಿದಿಗೆಯ ದಿನ ಕುದುರೆಗೆ ರಕ್ಷೆಯ ಕಟ್ಟುವುದರಿಂದ ಅರಸನಿಗೆ ಸಂತೋಷ ಉಂಟಾಗಿ ಮಂಗಳವಾದ್ಯ ಮಾಡುವನು. ಅತಿ ಬಿಳಿದಾಗಿರುವ ಆಯುತವುಳ್ಳ, ದೊಡ್ಡದಾದ ದೀರ್ಘಾಯುವನ್ನು ಗುಡುಗಿನರೂಪ ಧ್ವನಿಯನ್ನು ಹೊಂದಿರುವ ಬ್ರಾಹ್ಮಣನನ್ನು ಕರೆಯಿಸಿ ಪೂಜಿಸುವುದು.

ಲಕ್ಷಣಯುಕ್ತ ಸರ್ವಭ
ರಕ್ಷಮನಂ ಕ್ರೋಧಿರಾಜನೆನಿಪ ನಿಲಜವಂ
ಶಿಕ್ಷಿತ ವಿದನಂ ಪಂಚ ವಿ
ಧಂ ಕಾಂತಿಯ ಶೋಣವರ್ಣನದು ಯುವರಾಜಂ ()

ಉತ್ತಮ ಲಕ್ಷಣವುಳ್ಳ, ಸರ್ವಗುಣ ಸಂಪನ್ನ, ಕೋಪವುಳ್ಳ, ವಾಯುವೇಗವುಳ್ಳ, ನಾನಾಸಾಧನೆಯನ್ನು ಮಾಡಬಲ್ಲ ಐದು ಗುಣಗಳಿರುವ ಹವಳದ ವರ್ಣದ ಕೆಂಪು ಕುದುರೆಯನ್ನು ಯುವರಾಜ ಪಟ್ಟ ಕಟ್ಟುವದು. ಹಗೆಯ ಕುಲ, ಬಲ, ತೇಜಸ್ವರ ಇವುಗಳಲ್ಲಿ ಸತ್ವವುಳ್ಳ ಜೀವ, ಪ್ರಾಣ ಲಕ್ಷಣಗಳಲ್ಲಿ ಸಂಪೂರ್ಣವಾದ ಶುಭ ಲಕ್ಷಣ ಹೊಂದಿರುವುದನ್ನು ದಳವಾಯಿ ಪಟ್ಟಕ್ಕೆ ಕಟ್ಟುವುದು. ಹಾಗೆಯೇ ಬೋರ ಎಂಬ ಕುದುರೆಯು ನಾಲ್ಕು ವರ್ಣಗಳಲ್ಲಿ ವಿಶೇಷಜ್ಞ ವರ್ಣಲಕ್ಷಣ, ವೀರವನುಳ್ಳ ದೊಡ್ಡದಾದ ಧೀರೋದಾರವಾದ ಕುದುರೆಯು ಪ್ರಮುಖವಾದದ್ದು.

ಗುಡಶಾಲಿ ತಡುಲಂಕ
ನ್ನಡಿ ಕಲಶಂ ಕರುಕೆ ತೋರಣಂ ದಧಿ ಪುಷ್ಪಂ.
ಸೊಡರೆಸವ ರಂಗವಲಿ ಎಲೆ
ಯಡಕೆ ಪವಿತ್ರಂ ಪ್ರಸಿದ್ಧಿಮಿವೆ ಗುಣರತ್ನಾ (೧೧)

ಗುಡಿ ರಾಜನ್ನದಕ್ಕಿ, ಕನ್ನಡಿ, ಕಳಶ, ಗರಿಕೆಯ ಕೊನರು, ತೋರಣ, ಮೊಸರು, ಹಣತೆ ದೀಪ, ಎಲೆ, ಅಡಿಕೆ, ಪವಿತ್ರ, ಬಿಳಿಯ ಸಾಸವೆ ಮುಂತಾದ ಎಲ್ಲಾ ಮಂಗಳ ದ್ರವ್ಯಂಗಳನ್ನು ಹಾಗೂ ಸುತ್ತಿಗೆ ಮಂಗಳವಾದ್ಯ ಪಟಹ, ಚಿನ್ನದ ಕಾವಿನ ಚಮರ, ಸೂಳೆಯರು, ಪರಿಹಾರ ಸಮೂಹ, ಕಹಳೆಯ ಧ್ವನಿ ಇವೆಲ್ಲವುಗಳನ್ನು ತಂದು ನಂತರ ತೊರೆ, ಸಮುದ್ರ, ದೊಡ್ಡಕೆರೆ, ತಾವರಕೊಳ ಇರುವಲ್ಲಿಗೆ ಕುದುರೆಯನ್ನು ಕರೆದುಕೊಂಡು ಹೋಗಿ ಅಲಂಕರಿಸಿ ಹರೆ, ಕಹಳೆ, ಶಂಖಧ್ವನಿ ನೆರವೇರಿಸಿ ಲಾಯಕ್ಕೆ ಕರೆತಂದು ನಂತರ ಕುಂಕುಮ, ಅರಿಶಿನ, ಪರಿಮಳದ ಗಂಧಗಳನ್ನು ಲೇಪಿಸಿ, ಕಳಸ, ತೋಮರ ರತ್ನವನ್ನು ಹಣೆಯಲ್ಲಿ ಹಚ್ಚಿ, ಬಣ್ಣದ ಸೀರೆಗಳನ್ನು ಹೊಟ್ಟೆಯಲ್ಲಿ ಇಳಿಬಿಟ್ಟು ಮೆತ್ತಲಿಯಾದಿಯಾದ ಶೃಂಗಾರಗಳನ್ನು ಮಾಡಿ ಪಟುಗೆಯನ್ನು, ಮಣಿಸರವನ್ನು, ರಕ್ಷೆಯನ್ನು, ಪವಿತ್ರಗಳನ್ನು, ತೊಡರನ್ನು ಸಹ ಕುದುರೆಯ ಹಣೆಯಲ್ಲಿ ಪಟ್ಟವ ಕಟ್ಟುತ್ತಾರೆ.

ಅರಿಶಿನ, ಉತ್ತರಣೆ, ಬಿಳಿಯ ಸಾಸುವೆ, ಗಜ್ಜುಗ, ಅಮರದಬಳ್ಳಿ, ಬೇವು, ಲೋಂದ್ರ, ಬಾಗೆ, ಬಜೆ, ಗುಗ್ಗುಳ, ಹಿಪ್ಪಲಿ, ಕಕ್ಕೆಲೋಹ, ಗೋರೋಜನ ಇವೆಲ್ಲವುಗಳನ್ನು ಕುದುರೆಯ ಕೊರಳಿಗೆ ಧಾನ್ಯದ ಪೊಟ್ಟಣವನ್ನು ರಕ್ಷೆಯನ್ನು ಕಟ್ಟಿದರೆ ರಾಕ್ಷಸ, ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ. ಜೊತೆಗೆ ಮುಟ್ಟಲು ಸಾಧ್ಯವಾಗುವುದಿಲ್ಲ ಅವುಗಳ ದೃಷ್ಟಿಗಳು ಸಹ ತಾಕುವುದಿಲ್ಲ, ದೇವರ ಗುಡಿಯ ಮಣ್ಣು, ಆನೆಯಕೊಂಬು, ಹುತ್ತದ ಮಣ್ಣು, ಅರಮನೆಯ ಮಣ್ಣು ಇವೆಲ್ಲವುಗಳನ್ನು ಕೂಡಿಸಿ ಕುದುರೆಯ ಮೈಗೆ ಲೇಪನ ಮಾಡಿ ರಂಗವಲ್ಲಿ, ತೋರಣ, ಮಂಗಳವಾದ್ಯ, ವೇದಘೋಷ, ಅಕ್ಷತೆ, ಪುಷ್ಪ, ಗಂಧ ಧೂಪ ದೀಪದಿಂದ ಕುದುರೆಗೆ ಶಿಶ್ನದ ಸರಿಸದಲ್ಲಿ ಅರ್ಪಿಸುತ್ತಾರೆ.

ಲಾಯದಲ್ಲಿ ಬ್ರಾಹ್ಮಣರ ಕೈಯಲ್ಲಿ ಹೋಮವನ್ನು ಮಾಡಿಸಿ ಅವರಿಗೆ ದಕ್ಷಿಣೆಯನ್ನು ಕೊಟ್ಟು, ಅವರ ಕೈಯಲ್ಲಿ ಮಂತ್ರಾಕ್ಷತೆ ತೆಗೆದುಕೊಂಡರೆ ತನ್ನ ವೈರಿಯನ್ನು ಜಯಸಿ ಪರಲೋಕ ಸಾಧನವನ್ನು ಪಡೆದು ಚೆನ್ನಾಗಿ ಬದಕುತ್ತದೆ ಎಂಬ ವಿಚಾರವನ್ನು ಶಾಸ್ತ್ರಕಾರರು ವ್ಯಕ್ತಪಡಿಸುತ್ತಾರೆ.

ಅಭಿಷೇಕಮಕಂ ತೋರಣದೊಳ್
ವಿಭೂತಿಯಂ ತಂದು ಪಟ್ಟವರ್ಧನಕೆ ಜಗ
ತ್ಪ್ರಭುವಂ ಪೊಡೆವಡಿಸುವುದಿರು
ಳಭಿಮುಖವಾಗಿರ್ದು ಶಾಸ್ತ್ರ ವೇದ್ಯಂವೈದ್ಯಂ (೨೫)

ಅಭಿಷೇಕವನ್ನು ಮಾಡಿ ತೋರಣದಲ್ಲಿ ಸಂಪತ್ತುಗಳಿಂದ ತಂದ ಪಟ್ಟದ ಕುದುರೆಗೆ ಅರಸನು ನಮಸ್ಕರಿಸಿ ರಾತ್ರಿಯ ಸಮಯದಲ್ಲಿ ಆಯುಧ ಪೂಜೆಗಳನ್ನು ವಿಧಿ ವಿಧಾನದ ಮೂಲಕ ಶಾಸ್ತ್ರೋಕ್ತವಾಗಿ ಮಾಡುವನು. ಬ್ರಹ್ಮನ ಕಣ್ಣೀರಿನಿಂದ, ಚಂದ್ರನಿಂದ, ಕಿಚ್ಚಿನಿಂದ, ಮೃಗದಿಂದ, ದುಗ್ಧ ಮಥನದಿಂದ ಹುಟ್ಟಿದ ಕುದುರೆಗಳಿಗೆ ಜಯವೆಂದೂ ಜಯ ಧನುಜ ಕುಲವಿಧೆಯ ಐಶ್ವರ್ಯಕ್ಕೆ ಕಾರಣ ಜಯಕ್ಕೆ ಒಡೆಯನೆ ಜಯ ಜಯವೆಂದೂ ಶತ್ರುಕ್ಷಯ ಕೀರ್ತಿ ಜಯವೆಂದು ಕೊಂಡಾಡಿ ಅನಂತರ ಹರುಷ, ಸಂತೋಷದಿಂದ ನಮಸ್ಕರಿಸಿ ನಾನಾವಾದ್ಯಗಳಿಂದ ಜಯವೆಂದು ದೇವಾನುದೇವತೆಗಳಿಗೆ ವಂದಿಸಿ, ಮಂಗಳ ಜವಳಿಯನ್ನು, ಆಭರಣವನ್ನು, ಉಂಗುರವನ್ನು ವೈದ್ಯನಿಗೆ ಕೊಟ್ಟು ಬಳಿಕ ಆಯುಧಗಳನ್ನು ಅರ್ಚನೆ ಮಾಡುತ್ತಾರೆ.