ತೇಜಮ್ಮನ ಆರಾಧನೆ

ಪ್ರಾಚೀನ ಕಾಲದಿಂದ ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆರಾಧನೆಗಳು ಕಂಡು ಬರುತ್ತವೆ. ಹಾಗೆ ನೋಡಿದರೆ ದೇವಾರಾಧನೆ, ಭೂತಾರಾಧನೆ ಕಂಡು ಬರುವಂತೆ ಪ್ರಾಣಿಗಳ ಆರಾಧನೆಯು ಸಹ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ಅದಕ್ಕೆ ಕುದುರೆಯ ಆರಾಧನೆಯು ಹೊರತಾಗಿಲ್ಲ. ಕಾರಣ ಮನುಷ್ಯನಿಗೆ ಅತ್ಯಂತ ಉಪಯೋಗವಾಗುವ ಪ್ರಾಣಿಗಳನ್ನು ದೇವರು ಎಂದು ಭಾವಿಸಿ ಆರಾಧನೆ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗೋವು ಆರಾಧನೆ ಅದರಲ್ಲಿ ಪ್ರಮುಖವಾದದ್ದು, ‘ಆರಾಧನೆ’ ಎಂಬುದಕ್ಕೆ ಸೇವೆ, ಪೂಜೆ, ಆಚರಣೆ ಎಂಬ ಸಾಮಾನ್ಯವಾದ ಅರ್ಥಗಳು ಬರುತ್ತವೆ. ಹೀಗಾಗಿ ಆರಾಧನೆ ಮಾಡುವ ಎಲ್ಲಾ ಬಗೆಯ ಪ್ರಾಣಿಗಳು ಮತ್ತು ವಸ್ತುಗಳು ವಿಶೇಷವೆನಿಸಿಕೊಳ್ಳುತ್ತವೆ.

ಇಲ್ಲಿ ಗ್ರಹಿಸುವುದೆನೆಂದರೇ ‘ತೇಜ’ ಎಂದರೆ ‘ಕುದುರೆ’ ಎಂಬ ಅರ್ಥವಿದ್ದು; ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕುದುರೆ ಕುಣಿತದ ಜೊತೆ ಜೊತೆಗೆ ತೇಜಮ್ಮ ಆರಾಧನೆ ಮಾಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ಹೆಚ್ಚು ಜನಜನಿತವಾಗಿರುವುದನ್ನು ಕಾಣುತ್ತೇವೆ. ಕುದುರೆ ಮನೆ ಮನೆಗೆ ಬರುತ್ತಿತ್ತು. ಅದಕ್ಕೆ ಪೂಜೆ ಮಾಡಲಾಗುತ್ತಿತ್ತು. ನಂತರ ಅದು ಕುಣಿತದಿಂದ ಎಲ್ಲರನ್ನು ರಂಜಿಸುತ್ತಿದ್ದ ಬಗ್ಗೆ ಹಿಂದಿನ ತಲೆಮಾರಿನ ಹಿರಿಯರು ಹೇಳುತ್ತಾರೆ. ಇದು ಕರಡಿ ಕುಣಿತದಷ್ಟೇ ಪ್ರಚಲಿತವಾಗಿದ್ದು, ಇಂತಹ ಒಂದು ಪದ್ಧತಿ ಕೊಗಳಿನಾಡಿನ ಬಹುತೇಕ ಹಳ್ಳಿಗಳಲ್ಲಿ ಕಂಡು ಬರುತ್ತದೆ. ಅದರಲ್ಲಿ ವಿಶೇಷವಾಗಿ ಕೊಗಳಿ, ಅಂಬಳಿ, ಕೊಟ್ಟೂರು ಗ್ರಾಮಗಳನ್ನು ಹೆಸರಿಸಬಹುದು. ಚಿಮ್ಮಹ ಹಳ್ಳಿಯಿಂದ ಕುದುರೆಯು ಬರುತ್ತಿದ್ದು, ಊರಲ್ಲಿ ಸಂಭ್ರಮ ಸಡಗರದಿಂದ ದೇವಿ ಬಂದಳು ಎಂದು ಪೂಜಿಸುವುದರ ಮೂಲಕ ಕಪ್ಪಕಾಣಿಕೆಯನ್ನು ಕೊಡುವ ಪದ್ಧತಿಯಿದ್ದು, ಕುದುರೆಯನ್ನು ಮನರಂಜನೆಯ ಪ್ರಾಣಿ ಎಂದು ಗುರುತಿಸುವುದರ ಜೊತೆಗೆ ದೇವರು ಎಂಬ ನಂಬಿಕೆಯೂ ಮನೆಮಾತಾಗಿದೆ. ಹಾಗೆಯೇ ಅಲ್ಲಿಯ ಜನರು ಇವತ್ತಿಗೂ ಆ ಭಾಗದಲ್ಲಿ ಚಿಮ್ಮನಹಳ್ಳಿಯಮ್ಮ, ತೇಜಮ್ಮ ಎಂದು ಕರೆಯುವುದು ವಾಡಿಕೆಯಾಗಿದೆ.

ಹಾಗೆ ನೋಡಿದರೆ ಆಕಳನ್ನು ‘ಗೋಮಾತೆ’ ಎಂದು ಪೂಜಿಸುವುದನ್ನು ಬಿಟ್ಟರೆ ನಂತರದ ಸ್ಥಾನ ಆನೆ ಮತ್ತು ಕುದುರೆಗಳಿಗೆ ಸಿಗುತ್ತದೆ. ಪ್ರತಿಯೊಂದು ಪ್ರಾಣಿಯನ್ನು ಒಬ್ಬೊಬ್ಬರು ಅಂದರೆ ಒಂದೊಂದು ಸಮುದಾಯ ಬೇರೆ ಬೇರೆ ಮಜಲುಗಳಲ್ಲಿ ಆಚರಣೆಗೆ ತೊಡಗಿಸಿಕೊಳ್ಳುತ್ತಾರೆ. ಉದಾಹರಣೆಗೆ-ಗಣೇಶನ ವಾಹನ ಇಲಿ, ಸರಸ್ವತಿಯ ವಾಹನ ನವಿಲು, ಮೈಲಾರಲಿಂಗಪ್ಪನ ವಾಹನ ನಾಯಿ, ಶಿವನ ವಾಹನ ನಂದಿ, ಅದರಂತೆ ಬೀರಲಿಂಗೇಶ್ವರನ ವಾಹನವಾಗಿ ಹಾಲುಮತ ಸಂಸ್ಕೃತಿಯ ಬಹುತೇಕ ಜನ ಸಮುದಾಯ ‘ಕುದುರೆ’ಯನ್ನು ಪೂಜಿಸುತ್ತಿರುವುದು ವಿಶೇಷ. ಈ ಆರಾಧನೆ ಮಾಡುವ ಸಂಪ್ರದಾಯ ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ಭಾಗದಲ್ಲಿ ಹೆಚ್ಚು ಕಂಡು ಬರುತ್ತದೆ. ಇದನ್ನು ಹೊರತು ಪಡಿಸಿದರೆ ಸೊಲ್ಲಾಪುರ ಭಾಗದ ಯಾವುದೇ ಜನ ಸಮುದಾಯವಿರಲಿ ಅಲ್ಲಿಯ ಜನರು ಉತ್ಸವಗಳಲ್ಲಿ, ಮೆರವಣಿಗೆಗಳಲ್ಲಿ ಕುದುರೆಯನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ಕಾಣಬಹುದು. ಆದ್ದರಿಂದ ಕುದುರೆ ಸಂಪ್ರದಾಯ ಆದಿಕಾಲದಿಂದಲೂ ನಡೆದುಕೊಂಡು ಬಂದ ಒಂದು ಪ್ರಮುಖ ಸಂಪ್ರದಾಯವಾಗಿದೆ. ಮೂಲತಃ ಕುದುರೆಯನ್ನು ಸಾಕುವ ಮತ್ತು ಅಭಿವೃದ್ಧಿಪಡಿಸುವ ತಾಣಗಳೂ ಈ ಪ್ರದೇಶದ ಸುತ್ತಮುತ್ತಲಲ್ಲಿಯೇ ಇರಬೇಕು ಎಂಬ ಅಂಶ ಮನದಟ್ಟಾಗುತ್ತದೆ.

ಪ್ರಸ್ತುತ ಕುದುರೆ ಆರಾಧನೆ ಮಾಡುವ ಪದ್ಧತಿಗೆ ನಿದರ್ಶನ ಎಂಬಂತೆ ಅಥಣಿಗೆ ಸಮೀಪವಿರುವ (ಅಂದರೆ ೮ ಕಿ.ಮೀ.) ಮೀರಜ್‌ಗೆ ಹೋಗುವ ಮಾರ್ಗದಲ್ಲಿ ಬರುವ ಮುರಗುಂಡಿಯ ಶ್ರೀಮರುಸಿದ್ಧೇಶ್ವರ ದೇವಸ್ಥಾನದಲ್ಲಿ ಈ ಆರಾಧನೆ ಕಂಡುಬರುತ್ತದೆ. ಹಾಲುಮತ ಸಂಸ್ಕೃತಿಯ ಬೀರಲಿಂಗೇಶ್ವರ ಸಂಪ್ರದಾಯದ ಈ ದೇವಸ್ಥಾನದಲ್ಲಿ ಕುದುರೆಯನ್ನು ಕಟ್ಟಿ ಹಾಕಿ ಪೂಜೆ ಮಾಡುತ್ತಾ ಬಂದಿದ್ದಾರೆ. ಈ ಕಾರ್ಯ ಈಗಲೂ ನಡೆಯುತ್ತಲೇ ಇದೆ. ಕುದುರೆ ಈ ಸಂಪ್ರದಾಯದ ಆರಾಧ್ಯದೇವರ ವಾಹನ ಎಂದು ಅಲ್ಲಿಯ ಗ್ರಾಮಸ್ಥರು ನಂಬಿಕೊಂಡು ಬಂದಿದ್ದಾರೆ. ಸುಮಾರು ೫೦೦ ವರ್ಷಗಳ ಇತಿಹಾಸವಿರುವ ಈ ಆರಾಧನೆಗೆ ಹೆಚ್ಚು ಮಹತ್ವ ಬಂದಿದೆ. ಇಲ್ಲಿ ಕುದುರೆಗೆ ಹೆಚ್ಚಾಗಿ ದೇವರು ಎಂದು ಭಾವಿಸುವ ಜನ ದೇವರ ಮುಂದೆ ಕುದುರೆಯ ಮೂರ್ತಿಯನ್ನು ಮಾಡಿಸಿ ಪೂಜಿಸುತ್ತಾ ಬಂದಿದ್ದಾರೆ. ಶ್ರೀ ಮರುಸಿದ್ಧೇಶ್ವರ ದೇವರ ಕವಚದಲ್ಲಿ, ಪಟ್ಟಕೆಗಳಲ್ಲಿ ಕುದುರೆಯ ಚಿತ್ರಗಳು ಇರುವುದು ಇದಕ್ಕೆ ಸಾಕ್ಷಿಯಾಗಿದೆ.

ಈ ಕುರಿತು ವಿಚಾರಿಸಿದರೆ ಅಲ್ಲಿಯ ಕುದುರೆಯನ್ನು ಪಾಲನೆ-ಪೋಷಣೆ ಮಾಡುವ ಸೇವಕರಾದ ಶ್ರೀ ಮುರಿಗೆಪ್ಪ, ಬೀರಪ್ಪ ಊಗಾರ ಸಾ. ಮುರಗುಂಡಿ ವಯಸ್ಸು ೬೦ ಇವರನ್ನು ಸಂದರ್ಶಿಸಿದಾಗ ಅವರು ಹೇಳಿದ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸಲಾಗಿದೆ. ‘ನಾಲ್ಕು ತಲೆಮಾರಿನಿಂದ ಕುದುರೆಯನ್ನು ಪೂಜೆ ಮಾಡುತ್ತಿದ್ದು, ಇದುವರೆಗೂ ೬ ಕುದುರೆಗಳು ತಲೆ ಮುಗಿದು ೭ನೆಯ ತಲೆಯ ಕುದುರೆ ಇದು ಎಂದು ಹೇಳುತ್ತಾ, ಹೆಚ್ಚಾಗಿ ಬಿಳಿ’ ಕುದುರೆಯನ್ನು ಪೂಜಿಸುತ್ತಿದ್ದು, ಕುದುರೆಯು ಮರಣಹೊಂದಿದ ಸಂದರ್ಭದಲ್ಲಿ ಆ ಕುದುರೆಯನ್ನು ದೇವಸ್ಥಾನದ ಆವರಣದಲ್ಲಿ ಹೂಳಿಟ್ಟು ಗದ್ದುಗೆಯನ್ನು ಕಟ್ಟಲಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಗದ್ದುಗೆಯ ಮೇಲೆ ಕುದುರೆಯ ಮೂರ್ತಿಯನ್ನು ಇಟ್ಟು ಪೂಜಿಸುತ್ತಿರುವುದು ಅಂದಿನಿಂದ ಇಂದಿನವರೆಗೂ ಪ್ರತಿನಿತ್ಯ ನಡೆದುಕೊಂಡು ಬಂದಿದೆ.

ಇನ್ನೊಂದು ವಿಶೇಷವೆಂದರೆ ಕುದುರೆಯನ್ನು ರವಿವಾರಕ್ಕೆ ಒಮ್ಮೆ ಮೆರವಣಿಗೆ ಮಾಡಲಾಗುತ್ತದೆ. ದೇವಸ್ಥಾನದಿಂದ ಪಾಲ್ಕಿಯು ಊರಲ್ಲಿ ಮೆರವಣಿಗೆಗೆ ಹೋಗುತ್ತದೆ. ಊರಲ್ಲಿಯೂ ಒಂದು ಮರುಸಿದ್ಧೇಶ್ವರನ ದೇವಸ್ಥಾನವಿದ್ದು, ಅಲ್ಲಿಗೆ ಪಾಲ್ಕಿಯು ಹೋದನಂತರ ಪೂಜೆಯ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಊರಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಕುದುರೆಯನ್ನು ಪಾಲ್ಕಿಯ ಮುಂದೆ ಮುಂದೆ ಕರೆದುಕೊಂಡು ಹೋಗಲಾಗುತ್ತದೆ. ಹೀಗೆ ಮೆರವಣಿಗೆ ಮುಗಿದ ನಂತರ ಮತ್ತೆ ದೇವಸ್ಥಾನಕ್ಕೆ ಬಂದು ಕುದುರೆಯನ್ನು ಕಟ್ಟಲಾಗುತ್ತದೆ. ಇಲ್ಲಿಯ ಸಂಪ್ರದಾಯ ಭಂಡಾರ ಧರಿಸುವ ಈ ಪರಂಪರೆ ಹಾಲುಮತದವರಾಗಿದ್ದು, ಈ ದೇವಸ್ಥಾನ ಆ ಮತಸ್ಥರ ಆರಾಧ್ಯ ದೈವವಾಗಿದೆ. ಪ್ರತಿ ವರ್ಷ ಯುಗಾದಿ ಪಾಡ್ಯಕ್ಕೆ ಜಾತ್ರೆ ನಡೆಯುತ್ತಿದ್ದು, ಕುದುರೆಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಇದೇ ರೀತಿಯ ಆರಾಧನೆಯನ್ನು ಹಾರುಗೇರಿ ಸಮೀಪವಿರುವ ಕರಿಸಿದ್ಧೇಶ್ವರ ದೇವಸ್ಥಾನ, ಅಲಕನೂರು ಮತ್ತು ಯಲಪಾರಹಟ್ಟಿ ಅರಣ್ಯ ಸಿದ್ಧೇಶ್ವರ ದೇವಸ್ಥಾನ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ಕಾಣಬಹುದು. ಜನರು ಕುದುರೆಯ ಬಗ್ಗೆ ಇಟ್ಟುಕೊಂಡಿರುವ ನಂಬಿಕೆ, ವಿಶ್ವಾಸ, ಪ್ರೀತಿ, ಭಕ್ತಿಯ ರೂಪದಲ್ಲಿ ಬೆಳೆದುಕೊಂಡು ಬಂದಿದೆ. ಶರಣರ ಒಂದು ಮಾತು ಇಲ್ಲಿ ನೆನಪಿಗೆ ತಂದುಕೊಳ್ಳುವುದು ಸೂಕ್ತವೆನಿಸುತ್ತದೆ. “ದಯವಿಲ್ಲದ ಧರ್ಮದಾವುದಯ್ಯ ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಮದೇವ” ಎಂಬ ಬಸವಣ್ಣನವರ ಸಾಲುಗಳು ಈ ಆರಾಧನೆಗೆ ಹತ್ತಿರವಾಗಿ ನಿಲ್ಲುತ್ತವೆ.

ದೇವರ ವಾಹನ ಕುದುರೆ

ಆದಿಮಾನವ ಅಲೆಮಾರಿ ಜೀವನವನ್ನು ನಿಲ್ಲಿಸಿ ಒಂದೆಡೆ ನೆಲೆ ನಿಂತು ಕೃಷಿಯನ್ನು ತನ್ನ ಉಪಜೀವನಕ್ಕಾಗಿ ಅವಲಂಬಿಸಿದನು. ಕೃಷಿ ಹಾಗೂ ವ್ಯಾಪಾರ ಪ್ರಧಾನವಾದ ಮಾನವನ ಬದುಕಿನಲ್ಲಿ ಪ್ರಾಣಿಗಳ ಸಹಾಯ-ಸಹಕಾರ ಮುಖ್ಯವಾಯಿತು. ಇದರಿಂದಾಗಿ ಸಹಜವಾಗಿಯೇ ಅವುಗಳನ್ನು ಕುರಿತು ಅವನಲ್ಲಿ ಭಯ-ಭಕ್ತಿ-ಪ್ರೀತಿ-ಗೌರವ ಭಾವನೆಗಳು ಮೂಡಿ ಬಂದವು. ದುಷ್ಟ ಪ್ರಾಣಿಗಳಾದ ಕೋಣ, ಚಿರತೆ, ಸಿಂಹ, ಹುಲಿ, ಹಾವು ಮುಂತಾದವುಗಳಿಗೆ ದೈವೀಶಕ್ತಿಯನ್ನು ಆರೋಪಿಸಿ ಪೂಜ್ಯತೆಯಿಂದ ಕಂಡನು. ಇದರಿಂದಾಗಿ ಪ್ರಾಣಿಗಳಿಗೂ ಪೌರಾಣಿಕ ಸ್ಥಾನಮಾನಗಳು ಸಿಕ್ಕವು. ಒಂದೊಂದು ಧರ್ಮ, ಮತ, ಪಂಗಡದ ಜನರು ತಮಗೆ ಇಷ್ಟವಾದ ಪ್ರಾಣಿಗಳನ್ನು ಲಾಂಛನವಾಗಿರಿಸಿಕೊಂಡು ಪ್ರಾವಿತ್ರ್ಯತೆಯ ಹಿನ್ನೆಲೆಯಲ್ಲಿ ಉನ್ನತ ಸ್ಥಾನ ನೀಡಿದರು.

ಗೋವು ಹಿಂದೂ ಹಾಗೂ ಬ್ರಾಹ್ಮಣರಿಗೆ, ಮೇಕೆ ಕ್ರಿಶ್ಚಿಯನ್ನರಿಗೆ, ಕೋಣ, ಕತ್ತೆ, ಎಮ್ಮೆ, ನಾಯಿಗಳು ಶೂದ್ರರಿಗೆ ಪೂಜ್ಯವಾಗಿ ಕಂಡು ಬಂದವು. ಐತಿಹ್ಯ, ನಂಬಿಕೆ, ಆಚರಣೆ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಬದುಕಿನುದ್ದಕ್ಕೂ ಪರಂಪರಾಗತವಾಗಿ ಉಳಿದು ಬಂದವು. ಶಿವನವಾಹನ ವೃಷಭವೆಂದೂ, ನಂದಿಯೆಂದು ಕರೆಯುತ್ತಾರೆ. ಹಾಗೆಯೇ ಇಂದ್ರನ ವಾಹನವಾದ ಬಿಳಿ ಆನೆಯನ್ನು ಐರಾವತವೆಂತಲೂ, ಸಿಂಹ ಭಾರತದಲ್ಲಿ ಗ್ರಾಮದೇವತೆಗಳ ವಾಹನವೆಂದೂ ಇದು ವಿಷ್ಣುವಿನ ದಶಾವತಾರಗಳಲ್ಲೊಂದು ಹಾಗೂ ಅಯ ಶಂಕುವಿನ ವಾಹನ. ದುರ್ಗದ ಎಲ್ಲಮ್ಮ, ದುರ್ಗಮ್ಮ, ರೇಣುಕಮ್ಮ , ಬನಶಂಕರಿ, ಅನ್ನಪೂರ್ಣೇಶ್ವರಿ, ಜಗದಂಬೆ ಮುಂತಾದ ದೇವತೆಗಳ ವಾಹನವೆಂದು ಗುರುತಿಸಲಾಗಿದೆ. ಹುಲಿ ದುರ್ಗೆ ಕಾಳಿಕಾದೇವಿಯವರಿಗೆ ಮತ್ತು ಮಲೆಮಾದೇಶ್ವರನಿಗೆ, ವ್ಯಾಘ್ರವಾಹನ, ಮಠಾಧೀಶರು, ಮಕಹರ್ಷಿಗಳು ಹುಲಿ, ಚರ್ಮದ ಮೇಲೆ ಆಸೀನರಾಗಿರುವರೆಂದೂ, ಇಲಿ ಗಣೇಶನವಾಹನ, ಕೋಣ ಯಮಧರ್ಮನ ವಾಹನ, ಜಿಂಕೆ ವಾಯುವಿನ (ಮಾರುತ) ವಾಹನವೆಂದೂ, ನಾಯಿ ದತ್ತಾತ್ರೇಯನ ವಾಹನವೆಂದೂ ಹಾಗೆಯೇ ಮೈಲಾರಲಿಂಗನ ಸಂಪ್ರದಾಯದಲ್ಲಿ ‘ನಾಯಿಗೊರವದೀಕೆ’ ಆಚರಣೆಯಲ್ಲಿರುವಂತೆ ‘ಕುದುರೆ’ಯನ್ನು ಇಂದ್ರವಾಹನವೆಂದೂ, ಇಂದ್ರನ ಚಿನ್ನದ ರಥಕ್ಕೆ ಒಂದು ಸಹಸ್ರ ಕುದುರೆಗಳು, ಸೂರ್ಯನ ರಥಕ್ಕೆ ‘ಏಳು ಕೆಂಪು’ ಕುದುರೆಗಳು, ರಾಹು-ಕೇತುವಿನ ರಥಕ್ಕೆ ಎಂಟು ಮಾಸಲು ಕೆಂಪು ಬಣ್ಣದ ಕುದುರೆಯನ್ನು ಕಟ್ಟಲಾಗಿದೆ. ಪ್ರಹ್ಲಾದ, ಆದಿತ್ಯ, ಹನ್ನೊಂದು ಜನ ರುದ್ರರು, ಕುಂಜಂಭ ಹಾಗೂ ನವಗ್ರಹಗಳ ರಥಗಳಿಗೆ ಕುದುರೆಯನ್ನು ಕಟ್ಟಲಾಗಿದೆ.

ರಥವು ನವಗ್ರಹಗಳ ವಾಹನವಾಗಿದ್ದು, ಕುದುರೆಗಳನ್ನು ಕಟ್ಟಿದ ದೊಡ್ಡ ರಥ ಶುಕ್ರ ಗ್ರಹದ ವಾಹನ. ಸೂರ್ಯನ ವಾಹನವಾದ ರಥಕ್ಕೆ ಒಂದೇ ಚಕ್ರ ಹಾಗೂ ಹನ್ನೆರಡು ಅರೆಕಾಲುಗಳು, ವರುಣದೇವ ಸೂರ್ಯನ ರಥದ ಸಾರಥಿ, ಹತ್ತು ಬಿಳಿ ಕುದುರೆಗಳನ್ನು ಕಟ್ಟಿದ ಮೂರು ಚಕ್ರದ ರಥ ಚಂದ್ರನ ವಾಹನ, ಬುಧ ಗ್ರಹದ ರಥವನ್ನು ಗಾಳಿ, ಬೆಂಕಿ ಮತ್ತು ಚಿನ್ನದ ಬಣ್ಣಗಳಿಂದ ನಿರ್ಮಿಸಲಾಗಿದೆ. ಗಾಳಿವೇಗದಲ್ಲಿ ಚಲಿಸುವ ಕುದುರೆಗಳನ್ನು ಕಟ್ಟಲಾಗಿದೆ. ಚಿನ್ನದಿಂದ ಮಾಡಿದ ಅಗ್ನಿಯಿಂದ ಹುಟ್ಟಿದ ಕುದುರೆಗಳನ್ನು ಕಟ್ಟಿದ ರಥ ಕುಜ ಗ್ರಹದ ವಾಹನ. ಬೃಹಸ್ಪತಿಯ ವಾಹನವಾದ ಚಿನ್ನದ ರಥವನ್ನು ಎಂಟು ಬಿಳಿಯ ಕುದುರೆಗಳು, ಶನಿದೇವನ ರಥವನ್ನು ಹಲವು ಬಣ್ಣದ ಕುದುರೆಗಳು ರಾಹುವಿನ ರಥವನ್ನು ಜೀರುಂಡೆಯಂತಹ ಕಪ್ಪು ಬಣ್ಣದ ಕುದುರೆಗಳು, ಕೇತುವಿನ ರಥವನ್ನು ಗಾಳಿವೇಗದ ಕುದುರೆಗಳು ಎಳೆಯುತ್ತವೆ.

ಹೀಗೆ ವಿವಿಧ ದೇವಾನುದೇವತೆಗಳು, ನವಗ್ರಹಗಳು ಮುಂತಾದ ವಿಶಿಷ್ಟ ಬಗೆಯ ಶಕ್ತಿದೇವತೆಗಳ ವಾಹನವಾಗಿ ಕುದುರೆ ಆಚರಣೆ ಮತ್ತು ಆರಾಧನೆಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದರಿಂದ ಸಾಂಸ್ಕೃತಿಕ ಮಹತ್ವ ಹೆಚ್ಚಿದಂತಾಗಿದೆ.

ದೇವತಾ ಕುದುರೆಗಳು

ಕುದುರೆಗಳನ್ನು ಪ್ರಾಚೀನ ಕಾಲದಲ್ಲಿ ದೇವತೆಗಳ ವಾಹನವೆಂದು ದೇವರ ಪ್ರತಿರೂಪವೆಂದು ಕರೆಯುತ್ತಿದ್ದರು. ಹೀಗಾಗಿ ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕುಮಾರರಾಮನ ಸಂಪ್ರದಾಯದಲ್ಲಿ ಕುದುರೆ ಕುರಿತು ಜಾನಪದರು, ಬುಡಕಟ್ಟು ಜನಸಮುದಾಯದವರು ಹಾಡುಗಳನ್ನು ಕಟ್ಟಿ ಹಾಡುವುದರ ಮೂಲಕ ಮನರಂಜನೆಯನ್ನು ಪಡೆಯುತ್ತಿದ್ದರು. ತಮ್ಮದೇ ಭಾಷೆಯನ್ನು ಹೊಂದಿರುವ ಜನಸಮುದಾಯ ದೇಶೀ ಸಂಸ್ಕೃತಿಯನ್ನು ಗ್ರಾಮ್ಯ ಭಾಷೆಯಲ್ಲಿ ಸಹಜವಾಗಿ ಹಿಡಿದಿಟ್ಟಿರುವುದನ್ನು ಕಾಣಬಹುದು.

ಉದಾಹರಣೆಗಾಗಿ

ಆಗ ಇನ್ನು ಎರಡು ಕುದುರಿ
ನಾಕು ಕಾಲು ಎರಡು ರೆಕ್ಕೆ
ದೇವತಾ ಕುದ್ರಿಗಳು
ಕಡ್ಲಿ ತಿಂಬಾಕ
ಸಟ್ಟ ಸರಿಹೊತ್ನ್ಯಾಗ
ಪಟ ಪಟ ರೆಕ್ಕೆ ಬಡಿಯೋದು

ಎರ್ಡ ರೆಕ್ಕೆ ನಾಕಪಾದ ಕುದುರಿಗಳು
ದೇವತೆ ಕುದುರಿಗಳು
ಅವು ಏನೂ ತಿಂಬಂಗಿಲ್ಲ
ಕಡ್ಲಿ ತಿಂಬವು ತೊಗರಿ ತಿಂಬವು
ಆಗ ಜನಲೋಕ ನೋಡವಲ್ಲ
ಅಂಥ ದೇವತಾ ಕುದುರಿಗಳು
(
ಕುಮಾರ ರಾಮ ಮತ್ತು ಕೃಷ್ಣ ಗೊಲ್ಲರ ಕಾವ್ಯ)

ಮೌಖಿಕ ಸಾಹಿತ್ಯದಲ್ಲಿ ಹಾಡುಗಳನ್ನು ಹಾಡುವುದರ ಮೂಲಕ ಒಂದು ಪ್ರಾಣಿಯ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರುವ ಜನಸಮುದಾಯ ತಮಗೆ ಹೊಳೆದ ವಿಚಾರಗಳನ್ನು ಸಂಭಾಷಣೆಯ ರೂಪದಲ್ಲಿ ಕಟ್ಟಿಕೊಟ್ಟಿರುವುದು ಅವರ ಭಾಷಾ ಪರಂಪರೆಯ ಇತಿಹಾಸವನ್ನು ಬಿಂಬಿಸುತ್ತದೆ. ಜೊತೆಗೆ ಐತಿಹಾಸಿಕವಾಗಿ ಮನ್ನಣೆ ಪಡೆದ ವಿಚಾರ ಲಹರಿಗಳು ಮೂಡಿ ಬಂದ ಆಲೋಚನಾ ಕ್ರಮಗಳನ್ನು ಮೇಲಿನ ಸಾಲುಗಳು ಸ್ಪಷ್ಟಪಡಿಸುತ್ತವೆ. ಮೇಲೆ ವಿವರಿಸಿದ ಪದ್ಯಗಳು ಓರಂಗಲ್ಲಿನ ಗಣಪತಿರಾಜನ ಕುರಿತು ಆತನ ಕೃಷಿ ಪದ್ಧತಿ, ಆಡಳಿತ ವ್ಯವಸ್ಥೆಯನ್ನು ಬಿಂಬಿಸುತ್ತವೆ. ಓರಂಗಲ್ಲಿನ ರಾಜಕೆರೆಯಲ್ಲಿ ಕಡ್ಲಿ ಹಾಕಿದ ವಿವರ, ಅದನ್ನು ಕಾಯಲು ಬಂದ ಇಬ್ಬರು ಆಳುಗಳು, ದೇವತಾ ಕುದುರೆಗಳು ಬಂದು ಕಡ್ಲಿ ತಿನ್ನಲಿಕ್ಕೆ ಬರುವ ಸನ್ನಿವೇಶ, ಕುದುರೆಗಳ ಅಂಗಾಂಗ ವರ್ಣನೆ ಅವುಗಳಿಗೆ ರೆಕ್ಕೆ ಇರುವ ಸನ್ನಿವೇಶ, ಕುದುರೆ ಬರುವುದು, ರೆಕ್ಕೆಯಿಂದ ಕಡ್ಲಿ ಬಳಿದುಕೊಂಡು ನಾಶ ಮಾಡುವುದು ಮುಂತಾದ ವಿಷಯಗಳನ್ನು ಜನಪದ ಗಾಯಕರು ಸಂಭಾಷಣೆ ರೂಪದಲ್ಲಿ ಚಿತ್ರಿಸಿದ್ದಾರೆ.

ಗಂಡು ಕುದುರಿ ಪಟ ಪಟ ರೆಕ್ಕೆ ಬಡಿದು
ಮೂರು ಮೇಗ್ದಾಗ ಹೋಗಿ ಬಿಡ್ತು
ಹೆಣ್ಣು ಕುದುರಿ ಆಗೋ ಈಗೋ ಈದಂಗೈತಿ
ದಿವ್ಯದಲ್ಲೆ ಇನ್ನ ರೆಕ್ಕೆ ಬಡ್ದು ಮ್ಯಾಕ ಏರುವಾಗ

ಮೂರು ಮೇಘು ಹೋಗೊನೆಂದುವಾಗ
ಆಹಾ ಕುದುರೆಣ್ಣಾ
ಮುಂದೆ ಬಂದವರನ್ನೋ
ಇನ್ನ ಕಡ್ಯಾಕ ಬರತೈತೋ
ಹಿಂದು ಬಂದವರರ್ನ ಕಾಲಿಲೆ ಒದಿತೈತೋ

ಬಲಗೈಲಿ ಬಂದವರನ್ನು
ಬಲ ರೆಕ್ಕೆಲಿ ಹೊಡಿತೈತೋ
ಎಡಕ್ಕಾಗಿ ಬಂದವನ್ನ
ಎಡ ರೆಕ್ಕೇಲಿ ಹೊಡಿತೈತೋ
ಕುದುರ್ಯಾಗಿ ಬರಗೊಡ್ಸದಿಲ್ಲೊ
ಒಬ್ಬ ಮಣುಷ್ಯಾನ್ನಾ

ಗಂಡು ಕುದುರಿ ಪಟ ಪಟ್ಟ ರೆಕ್ಕೆ ಬಡಿಯುತ್ತಾ ಮೂರು ಲೋಕ ಆಕಾಶದ ಕಡೆಗೆ ಹೋದ ನಂತರ; ಹೆಣ್ಣು ಕುದುರೆ ತನ್ನ ಮಗುವಿಗೆ ಜನ್ಮ ಕೊಟ್ಟು ಸ್ವಲ್ಪ ಸಮಯದಲ್ಲೇ, ಇನ್ನ ರೆಕ್ಕೆ ಬಡಿದು ಮೇಲಕ್ಕೆ ಏರುವಾಗ ಮೂರು ಮೇಘಕ್ಕೆ ಹೋಗುವ ಸಂದರ್ಭದಲ್ಲಿ ಹೊಟ್ಟೆಯೊಳಗಿನ ಪಿಂಡ ಜ್ಯಾರಿ ಬಿದ್ದ ಕ್ಷಣ ರೆಕ್ಕೆ ಕೂಡ ಆರಿಲ್ಲ ಆದರೂ ಮೂವರ್ನ ಕೊಲ್ಲುತೈತಿ ಅನ್ನಿಸುತ್ತದೆ. ಸುಂದರವಾದ ಎರಡು ರೆಕ್ಕೆ ಹೊಂದಿರುವ ಕುದುರೆ ಇದ್ದು, ಇಂತಹ ಕುದುರೆ ಭೂಲೋಕದೊಳಗೆ ಇರಬೇಕು ಎಂಬ ಆಶಯ ಜನಪದರ ದೂರ ದೃಷ್ಟಿತವಾಗಿದೆ. ಈ ಕುದುರೆಯನ್ನು ಮುಟ್ಟಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಹಂದಿಯ ಬಲೆಯನ್ನು ಹಾಕಲಾಗಿದೆ. ಕುದುರೆ ಮಾತ್ರ ಮುಂಧೆ ಬಂದವರ್ನ ಕಡಿಯ್ಯಾಕ ಬರತೈತಿ , ಹಿಂದೆ ಬಂದವರರ್ನ ಕಾಲಿಲೆ ಒದೆಯ್ಯಾಕ ಬರತೈತಿ, ಬಲಗಡೆ ಬಂದವರರ್ನ ಬಲರೆಕ್ಕೆಯಲಿ ಹೊಡೆಯುತೈತಿ, ಎಡಗಡೆ ಬಂದವರ್ನ ಎಡ ರೆಕ್ಕೆಯಲಿ ಹೊಡೆಯುತೈತಿ, ಕುದುರೆ ಹತ್ತಿರ ಒಬ್ಬ ಮನುಷ್ಯನನ್ನು ಬರಗೊಡವಲ್ತು. ಇಂತಹ ಬಲಿಷ್ಠವಾದ ಕುದುರೆ ಎಂದು ಅದರ ಶೌರ್ಯ, ಸಾಹಸ, ವೀರತ್ವ ಗುಣವನ್ನು ಕೊಂಡಾಡುತ್ತಾರೆ. (ಕುಮಾರ ರಾಮ ಮತ್ತು ಕೃಷ್ಣ ಗೊಲ್ಲರ ಮಹಾಕಾವ್ಯ, ಸಂ. ಡಾ.ಕೆ.ಎಂ. ಮೈತ್ರ, ಪುಟ ೬೨-೬೩)

ಮೈಲಾರಲಿಂಗನ ಸಂಪ್ರದಾಯದಲ್ಲಿ ‘ಕುದುರೆ ಗೊರವನ ದೀಕ್ಷೆ’ ಎಂಬ ಪದ್ಧತಿ ಕುರಿತು ಹೀಗೊಂದು ಕಥೆಯಿದೆ. ಮೈಲಾರಲಿಂಗ ಒಬ್ಬ ಅರಸನಾಗಿದ್ದು, ಆತ ಕುದುರೆ ಮೇಲೆ ಕುಳಿತು ದೈತ್ಯ ಸಂಹಾರ ಮಾಡಿದನೆಂದೂ, ಕುದುರೆ ಮೈಲಾರಲಿಂಗನ ವಾಹವಾಗಿದ್ದರಿಂದ ಕುದುರೆಯಾಗಿ ಸೇವೆ ಸಲ್ಲಿಸುತ್ತೇವೆ ಎಂದು, ಹರಕೆ ಹೊತ್ತವರು ಈ ದೀಕ್ಷೆ ಪಡೆದು ಕುದುರೆಯಂತೆ ಕುಣಿಯುತ್ತ ತಮ್ಮ ಮೈಯನ್ನು ಚಾಟಿಯಿಂದ ಹೊಡೆದುಕೊಳ್ಳುತ್ತಾರೆ. ‘ಮೈಲಾರ ಗೊರವನಂತೆ ತಂತಮನೆ ಬಂದು ಕೊಳ್ವಚ್ಚುಳಾಯಿಲರು’ ಎಂಬ ನಯಸೇನ ಹಾಗೂ ಬ್ರಹ್ಮಶಿವ ಕವಿಗಳ ವಿಡಂಬನಾತ್ಮಕ ಮಾತುಗಳು ಈ ಆಚರಣೆಯ ಪ್ರಾಚೀನತೆಗೆ ಕುರುಹುಗಳಾಗಿವೆ. ಕುಲದೇವತೆಗೆ ಕೆಂಪು ಬಣ್ಣದ ಕುದುರೆ, ಬೇರೆ ಕೆಲವು ದೇವತೆಗಳಿಗೆ ಹಳದಿ, ಬಿಳಿ, ಹಸಿರು ಬಣ್ಣದ ಕುದುರೆಗಳನ್ನು ವಾಹನಗಳಿಗಾಗಿ ನಿರ್ಮಿಸುತ್ತಾರೆ. ಒಂದು ಕುಟುಂಬ ಇಲ್ಲವೇ ಜನಾಂಗಕ್ಕೆ ಮೀಸಲಾದ ದೇವತೆಗಳನ್ನು ಅವುಗಳ ವಾಹನಗಳಿಂದ ಗುರುತಿಸಲು ಸಾಧ್ಯವಾಗುತ್ತದೆ. ಗುಡ್ಡದ ಎಲ್ಲಮ್ಮ ಕುದುರೆ ಮೇಲೆ ಆಸೀನಳಾಗಿರುತ್ತಾಳೆ. ಈಗಲೂ ಬಿದಿರಿನಿಂದ ಮೈಯನ್ನು ತಯಾರಿಸಿ, ಕಟ್ಟಿಗೆಯಿಂದ ಮಾಡಿದ ಕುದುರೆ ಮುಖ ತೊಡಿಸಿ, ನಾರಿನಿಂದ ಬಾಲ ರೂಪಿಸಿಕೊಂಡು ಕಟ್ಟಿಗೆ ಕಾಲನ್ನು ಹಾಕಿಕೊಂಡು ಕುದುರೆ ಕುಣಿತ ಕುಣಿಯುವ ಪದ್ಧತಿ ಮದುವೆ ಹಬ್ಬ ಹರಿದಿನಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ.

ಕರಕುಶಲ ಕಲೆಗಾರರು ಕುದುರೆಯನ್ನು ರಟ್ಟದಿಂದ (ನೀರಿನ ಹಾಳೆಯನ್ನು ನೆನಸಿ ಆ ಮುದ್ದೆಯಿಂದ ಕುದುರೆಯನ್ನು ತಯಾರಿಸುವ ಬಗೆ) ನಿರ್ಮಿಸುತ್ತಾರೆ. ಕುದುರೆ ಬಾಲಕ್ಕೆ ಕಪ್ಪು, ಶರೀರಕ್ಕೆ ಬಿಳಿ ಮತ್ತು ಗೋಧಿ ವರ್ಣದ ಬಣ್ಣ, ಕಣ್ಣುಗಳಿಗೆ ಕೆಂಪು ಬಣ್ಣ ವಿಶೇಷವಾಗಿ ಬಳಸಲಾಗುತ್ತದೆ. ಕುದುರೆಯ ಮೈಮೇಲಿನ ಜೀವನವು ವೈವಿಧ್ಯಮಯ ವರ್ಣಗಳಿಂದ ಕಲಾತ್ಮಕವಾಗಿ ವಿನ್ಯಾಸಗೊಂಡಿರುತ್ತದೆ. ಅಶ್ವಮೇಧದ ಯಜ್ಞದ ಕುದುರೆ ದೇವತಾಂಶವನ್ನು ಪ್ರತಿನಿಧಿಸುವಂತಾಗಿದ್ದು, ಜನಪದ ಕಲಾವಿದರ ಮುಗ್ಧ ಕಲಾವಂತಿಕೆಯು ಈ ಕುದುರೆ ನಿರ್ಮಾಣದಲ್ಲಿ ಎದ್ದು ಕಾಣುತ್ತದೆ. (‘ಅಗ್ನಿದಿವ್ಯ’ಡಾ.ಕೆ. ರವೀಂದ್ರನಾಥ ಪುಟ . ೧೧೫, ೧೧೬)

ಮೈಲಾರಲಿಂಗನ ಸಂಪ್ರದಾಯದಲ್ಲಿ ಕುದುರೆ ಆಚರಣೆ ಮತ್ತು ವಿಧಿವಿಧಾನ ಕುರಿತು ವಿಪುಲವಾದ ಮಾಹಿತಿ ದೊರೆಯುತ್ತದೆ. ಮೈಲಾರದ ದೇವರ ಗುಡ್ಡದಕ್ಷೇತ್ರ ಆ ಭಾಗದ ಎರಡನೆಯ ಅತೀ ಮಹತ್ವದ ದೇವಾಲಯ. ದೇವಾಲಯದ ಪೂರ್ವ ಪಶ್ಚಿಮ ಮತ್ತು ಉತ್ತರ ದಿಕ್ಕುಗಳಿಗೆ ಪ್ರವೇಶದ್ವಾರವಿದ್ದು, ಮುಖಮಂಟಪದ ಎಡಭಾಗದಲ್ಲಿ ದೊಡ್ಡದೊಂದು ಕಟ್ಟೆಯಿದ್ದು, ಅದರ ಮೇಲೆ ದೇವರ ವಾಹನವಾದ ಕುದುರೆಯ ಅನೇಕ ಮೂರ್ತಿಗಳನ್ನು ಇಡಲಾಗಿದೆ. ಇವೆಲ್ಲ ಕಟ್ಟಿಗೆಯಿಂದ ಮಾಡಿದ್ದು, ಬಣ್ಣವನ್ನು ಕೊಡಲಾಗಿದೆ.

ಉತ್ತರ ಬದಿಯು ಪ್ರವೇಶ ದ್ವಾರದ ಎಡ ಬಲಗಳಲ್ಲಿ ಎರಡು ಕಟ್ಟೆಗಳಿದ್ದು, ಬಲಬದಿಯ ಕಟ್ಟೆಯ ಮೇಲೆ ಒಂದು ತೂಗು ಮಂಚವನ್ನು ಇಳಿಬಿಡಲಾಗಿದೆ. ಅದರ ಮೇಲೆ ಚೆನ್ನಾಗಿ ಬಣ್ಣ ಬಳಿದ ಸುಂದರ ಕುದುರೆಯನ್ನಿಡಲಾಗಿದೆ. ಇದು ಕಟ್ಟಿಗೆಯ ಮೂರ್ತಿಯಾಗಿದ್ದು, ‘ಕುದುರೆಪ’ ಎಂದು ಅಲ್ಲಿನ ಜನ ಕರೆಯುತ್ತಾರೆ. ಇದಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ಗೌರವ ಆದರಗಳು ಸಲ್ಲುತ್ತವೆ. ಈ ಕುದುರೆಯ ಸಮ್ಮುಖದಲ್ಲಿ ಇಲ್ಲಿಯ ಒಡೆಯ ಹೊರೆ ಹೊದಿಸುವ ಕಾರ್ಯಗಳನ್ನು ಮಾಡುತ್ತಾರೆ.

ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಮಲ್ಲಯ್ಯ ದೇವಸ್ಥಾನವಿದ್ದು, ಮಲ್ಲಯ್ಯ ಕಟ್ಟೆಯ ಎದುರುಗಡೆಯ ಸ್ವಲ್ಪ ಅಂತರದಲ್ಲಿ ಕಲ್ಲಿನಿಂದ ಕೆತ್ತಿದ ಕುದುರೆಯನ್ನು ಶಿಲಾಪೀಠದ ಮೇಲೆ ಸ್ಥಾಪಿಸಲಾಗಿದೆ. ಕಲ್ಲಿನ ಕುದುರೆ ದಕ್ಷಿಣಾಭಿಮುಖವಾಗಿದ್ದು ಸುಂದರವಾಗಿದೆ. ಕುದುರೆಯ ಎದೆಯ ಮೇಲೆ ಸರ್ಪವನ್ನು ಬಿಡಿಸಲಾಗಿದೆ. ಹಾಗೆಯೇ ಮೈಲಾರದಲ್ಲಿ ರಾವುತರಾಯನ ಬಲಬದಿಯ ಕಟ್ಟೆಯ ಮೇಲೆ ಅಶ್ವಾರೋಹಿಯಾದ ಮೈಲಾರಲಿಂಗನ ಇನ್ನೊಂದು ಮೂರ್ತಿಯಿದ್ದು, ಇದರ ಮಗ್ಗುಲಲ್ಲಿ ಚಿಕ್ಕದಾದ ಗಂಗಿ ಮಾಳವ್ವನನ್ನು ತೋರಿಸಲಾಗಿದೆ. ಆಶ್ವೀಜ ಶುದ್ಧ ಏಕಾದಶಿಯಂದು ರಾವುತರಾಯನ ಬಂಡಿ ಕಟ್ಟುತ್ತಾರೆ. ಆ ಬಂಡಿಯ ಮೇಲೆ ಕಟ್ಟಿಗೆಯ ಕುದುರೆಯನ್ನು ಸ್ಥಾಪಿಸಿ ಅದರ ಮೇಲೆ ರಾವುತರಾಯನ ಮೂರ್ತಿಯನ್ನು ಬಿಗಿಯಾಗಿ ಕಟ್ಟುತ್ತಾರೆ. ಊರಲ್ಲಿಂದ ಉತ್ಸವ ಹೊರಟು ರಸ್ತೆಯ ಮೇಲಿರುವ ಶಿರಗಟ್ಟಿಗೆ ಬಂದು ಅಲ್ಲಿ ಹೇಳಿಕೆಯ ಕಾರ್ಯಕ್ರಮ ನಡೆಯುತ್ತದೆ. ಏಕಾದಶಿಯ ತರುವಾಯ ನಡೆಯುವ ಈ ಉತ್ಸವ ಕುದುರೆಯ ಹಬ್ಬದ ರೂಪಾಂತರವೆಂಬುದು ನಿಶ್ಚಯ. ಈ ಹಬ್ಬದಲ್ಲಿ ದೇವರು ಕುದುರೆ ಏರಿ ಮುಖ್ಯ ದೇವಾಲಯದಿಂದ ದೂರ ಹೋಗಿ ಕುರುಬತೆವ್ವನ ದರ್ಶನ ಮಾಡಿ ಬರುವುದು ಸಾಮಾನ್ಯವಾದ ಸಂಪ್ರದಾಯ. ‘ಮಳ್ಳರು’ ಎಂದು ಕರೆಯಲಾಗುವ ಇನ್ನೊಂದು ಕುರುಬ ಮನೆತನದವರು ರಾವುತ ರಾಯನ ಏರುವ ಕುದುರೆಯ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಕುದುರೆಗೆ ಬಣ್ಣ ಹಾಕುವುದು, ಬಂಡಿ ಕಟ್ಟುವಾಗ ಅದನ್ನು ತಂದು ಬಂಡಿಯ ಮೇಲೆ ಸ್ಥಾಪಿಸುವುದು ಪುನಃ ಗರ್ಭಗೃಹದಲ್ಲಿ ಅದನ್ನು ನೆಲೆಗೊಳಿಸುವುದು ಇವು ‘ಮಳ್ಳರು’ ಮಾಡುವ ವಿಶೇಷ ಸೇವೆಗಳು.

ಕುದುರೆ ಹಬ್ಬ

ಕುದುರೆಯ ಹಬ್ಬವನ್ನು ಶೀಗೆಯ ಹುಣ್ಣಿಮೆಯ ತರುವಾಯ ಏಳನೆಯ ದಿನಕ್ಕೆ ಆಚರಿಸುವರು. ಅಂದು ನಾಲ್ಕು ಗಂಟೆಯ ಸುಮಾರಿಗೆ ಅಶ್ವಾರೋಹಿಯಾಗಿ ಮಲ್ಲಯ್ಯ ಬೇಟೆಗಾಗಬಿ ಹೊರಡುವನು. ಇವರು ಹೊರಟಿರುವುದು ಹೆಸರಿಗೆ ಹುಲಿ ಬೇಟೆಗಾಗಿಯಾದರೂ ನಿಜವಾದ ಉದ್ದೇಶ ಕುರುಬತಿಯ ಮನೆಗೆ ಹೋಗಿ ಬರುವದು. ಅಶ್ವರೋಹಿಯಾಗಿರುವ ಉತ್ಸವ ಮೂರ್ತಿಯನ್ನು ಕಟ್ಟಿಗೆಯ ಕುದುರೆಯೊಂದರ ಮೇಲೆ ಬಿಗಿದು ಕಟ್ಟಿ ಅದನ್ನು ಪುನಃ ಒಂದು ಚಿಕ್ಕ ಬಂಡಿಯ ಮೇಲೆ ಬಿಗಿಯಾಗಿ ಕಟ್ಟುವರು. ಜೊತೆಯಲ್ಲಿ ಪಲ್ಲಕ್ಕಿಯೊಳಗೆ ಉತ್ಸವ ಮೂರ್ತಿಯನ್ನು ಹೊರಡಿಸುವರು. ಅದರ ಮುಂದೆ ಕುದುರೆಯನ್ನು ಕಟ್ಟಿದ ಬಂಡಿಯನ್ನು ಎಳೆದೊಯ್ಯುವರು. ಕಾರಣ ದೇವರು ಹೊಳಲದ ದಾರಿಯಲ್ಲಿರುವ ಶಿಬಾರಕ್ಕೆ ಹೋಗಿ ನಂತರ ಕುರುಬತೆವ್ವನ ಸ್ಥಾನಕ್ಕೆ ಹೋಗಿ ನೇರವಾಗಿ ಹಿಡಿದು ಬರದೆ ಕುದುರೆ ಬದಿಯ ಹೊಲಗಳಲ್ಲಿ ಸಿಕ್ಕಾಪಟ್ಟೆ ಓಡುತ್ತದೆ; ಎಂದರೆ ಬಂಡಿಯನ್ನು ಲಂಗು-ಲಗಾಮಿಲ್ಲದೆ ಜನ ಎಳೆಯುವರು. ಹೊಲಗಳಲ್ಲಿ ಬೆಳೆ ಬೆಳೆದು ನಿಂತಿದ್ದರೂ ಈ ರೀತಿ ಕುದುರೆಯ ಓಡಾಟ ನಡೆಯಲೇಬೇಕು.

ಗಂಗಿ ಮಾಳಮ್ಮ, ತುಪ್ಪದ ಮಾಳಮ್ಮ, ಚಿಕ್ಕಯ್ಯ, ಜುಂಜಯ್ಯ ಹೆಗ್ಗಡೆ ಮೊದಲಾದ ಎಲ್ಲ ದೇವರಿಗೆ ಪೂಜೆ ಸಲ್ಲುತ್ತದೆ. ಅನಂತರ ‘ಕುದುರೆಮನೆ’ ಎಂದಿರುವ ಒಡೆಯರ ಮನೆಯ ಸ್ಥಳಕ್ಕೆ ಮುಖ್ಯ ಒಡೆಯರು ಪತ್ನಿ ಸಮೇತರಾಗಿ ಭಕ್ತರು ಪರಿವಾರ ವಾಲಗಗಳಿಂದೊಡಗೂಡಿ ಆ ತಟ್ಟೆಯೊಂದಿಗೆ ಬರುತ್ತಾರೆ. ಇತ್ತ ಬದಿಯ ಬಯಲಿನಲ್ಲಿ ಕುದುರೆ, ಕತ್ತಿ ಗೂಳಪ್ಪಗಳ ಓಡಾಟ, ‘ನಾಯಿ ಜಿಗಳದ ಸೇವೆ’ ಕುದುರೆ ಕುಣಿತ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮಹಾಲಯ ಅಮವಾಸ್ಯೆಯಿಂದ ಪ್ರಾರಂಭವಾಗುವ ಒಟ್ಟು ಕಾರ್ಯಕ್ರಮಗಳು ಈ ಕುದುರೆಯ ಹಬ್ಬದ ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತವೆ. ಮೈಲಾರದಲ್ಲಿ ನಡೆಯುವಂತೆ, ದೇವರಗುಡ್ಡದಲ್ಲಿಯೂ ಇಂತಹ ಸಂಪ್ರದಾಯ ನಡೆಯುತ್ತದೆ. ಬೆಳಗಿನ ನಾಲ್ಕು ಗಂಟೆಗೆ ಗೊರವರು, ಪೂಜಾರಿಗಳು ಮುಂತಾದವರು ಸೇರಿ ಅರುಣೋದಯಕ್ಕೆ ಮುಂಚೆ ಭೇಟಿ ಕೊಟ್ಟು ಬೀಗಮುದ್ರೆ ತೆರೆದು ಭಂಡಾರವನ್ನು ‘ಕುದುರೆಯಪ್ಪನ’ ಸ್ಥಾನಕ್ಕೆ ಒಯ್ಯುತ್ತಾರೆ. ಭಂಡಾರ ಪಡೆದ ಸುದ್ದಿ ಊರಲ್ಲಿ ಹರಡಿ ಬಂದ ಭಕ್ತಾದಿಗಳು ಕುದುರೆಯಪ್ಪನ ಎದುರು ಭಂಡಾರ ಪಡೆದು ತಮ್ಮ ಊರುಗಳಿಗೆ ಹಿಂದಿರುಗುವರು.

ಮಹರಾಷ್ಟ್ರದ ವ್ಯಾರ್ಘ ಮುರಳಿಯವರು ಕರ್ನಾಟಕದವರಂತೆ ಕಂಬಳಿಯ ನಿಲುವಂಗಿ, ಮುರಗಿ , ಮುಂಡಾಸ, ಕುಲಾವಿ ಮುಂತಾದವನ್ನು ಧರಿಸುವುದಿಲ್ಲ. ಸಾಮಾನ್ಯ ಬಟ್ಟೆಯಲ್ಲಿಯೇ ಇರುತ್ತಾರೆ. ಪೇಂಬರ ಮೈಲಾರದ ಖದಾಮತಿ ವೆಗ್ಗೆರು ಕಸೆಯಂಗಿ ಅಲ್ಲಿ ‘ಕುದುರೆ’ ಇರುವ ಮಂಟಪದ ಮುಂದೆ ಆ ತಟ್ಟೆಯನ್ನಿಟ್ಟು ದಂಡೆಯ ಹೂಗಳಿಂದ ಕುದುರೆ ಮೊದಲಾದ ದೇವರ ಪ್ರತೀಕಗಳನ್ನು ಪೂಜಿಸುವರು.

ಕುದುರೆಯ ಹಬ್ಬವನ್ನು ಮೈಲಾರದಲ್ಲಿ ಶೀಗೆಹುಣ್ಣಿಮೆ (ಆಶ್ವೀಜ ಶುದ್ಧ ೧೫) ಯ ತರುವಾಯ ೭ನೆಯ ದಿನದಂದು ಆಚರಿಸಿದರೆ, ದೇವರ ಗುಡ್ಡದಲ್ಲಿ ೯ನೆಯ ದಿನದಂದು ಆಚರಿಸುತ್ತಾರೆ. ದೇವರಗುಡ್ಡದ ಆಚರಣೆಯಲ್ಲಿಯೂ ಕೆಲವು ವ್ಯತ್ಯಾಸಗಳು ಸಧ್ಯ ಗೋಚರಿಸುವುದರಿಂದ ಇಲ್ಲಿಯೂ ಅದನ್ನು ತಕ್ಕಷ್ಟು ವಿವರಗಳಿಂದ ವರ್ಣಿಸಲಾಗುವುದು. ೯ನೆಯ ದಿನ ರಾತ್ರಿ ಏಳುವರೆ ಗಂಟೆಯ ಸುಮಾರಿಗೆ ನಗಾರಿ ಬಾರಿಸಲಾಗುತ್ತದೆ. ಅದನ್ನು ಕೇಳಿ ಒಡೆಯರು ಗೊರವ-ಗೊರವಿಯರು ಇತರ ಪರಿಚಾರಕರು ಮುಂತಾದವರೆಲ್ಲ ದೇವಸ್ಥಾನದಲ್ಲಿ ಬಂದು ಸೇರಿ ದೇವರ ಉತ್ಸವ ಮೂರ್ತಿಯನ್ನು ಸಜ್ಜುಗೊಳಿಸುವರು. ಜೊತೆಗೆ ಕಟ್ಟಿಗೆಯ ಕುದುರೆ ಮತ್ತು ‘ಖಂಡೇರಾಯ’ನ ಮೂರ್ತಿಯನ್ನು ಮೈಲಾರದಲ್ಲಿನಂತೆ ಬಂಡಿಯ ಮೇಲೆ ಚೆನ್ನಾಗಿ ಬಿಗಿಯುವರು. ಏಳೆಂಟು ಜನ ಆ ಬಂಡಿಯ ಮೇಲೆ ಏರಿ ನಿಂತು ಮೂರ್ತಿಯನ್ನು, ಕುದುರೆಯನ್ನೂ ಗಟ್ಟಿಯಾಗಿ ಹಿಡಿದುಕೊಳ್ಳುವರು.

ಪಲ್ಲಕ್ಕಿ ಸಮೇತ ಎಲ್ಲರೂ ಉತ್ತರ ತುದಿಯಲ್ಲಿರುವ ಗುಡ್ಡದ ಶಿಬಿರಕ್ಕೆ ಹೊರಡುವರು. ಪಲ್ಲಕ್ಕಿಯೇನೋ ಮೆಲ್ಲನೆ ಸಾಗುತ್ತಿರುತ್ತದೆ. ಆದರೆ ಕುದುರೆ ಮತ್ತು ಕತ್ತಿಯ ಗೂಳಪ್ಪ ಮಾತ್ರ ಜೋರಾಗಿ ಓಡಾಡುತ್ತಾರೆ . ಕುದುರೆಕಾರರು ಕಂಬಳಿಯ ನಿಲುವಂಗಿಯ ಬದಲು ಹಸಿರು, ಕೆಂಪು ಮುಂತಾದ ಬಣ್ಣಗಳ ಕುತನಿಯ ನಿಲುವಂಗಿ ಧರಿಸುವರು. ಕಾಲಲ್ಲಿ ‘ಗಗ್ಗರ’ ಅಥವಾ ಗೆಜ್ಜೆಸರ ಕಟ್ಟಿಕೊಳ್ಳುವರು. ಕೈಯಲ್ಲಿ ಬಾರಕೋಲು (ಚಾಟಿ) ಹಿಡಿದಿರುವರು. ದೀಕ್ಷೆಯ ಕಾಲಕ್ಕೆ ಈ ಗಗ್ಗರ ಮತ್ತು ಚಾಟಿಗಳಿಗೂ ಪೂಜೆ ಸಲ್ಲುವುದು. ಒಡೆಯರು ದೀಕ್ಷೆಕೊಟ್ಟು ತರುವಾಯ ಇವರು ಸ್ವಲ್ಪ ಹೊತ್ತು (ಗಂಗಿ ಮಾಳಮ್ಮನ) ಗುಡಿಯ ಮುಂದೆ ಕುಣಿದು ತಮ್ಮ ಹೊರೆಯ ಕಾಯಕ ಪ್ರಾರಂಭಿಸುವರು. ಜೊತೆಗೆ ‘ಕುದರೆಯ ದಾಣ’ (ಆಹಾರ) ಎಂದರೆ ಮಂಡಕ್ಕಿ, ಸೇವು, ಚೂಡಾ, ಹುರಿಗಡಲೆ ಮುಂತಾದ ಐದು ದಿನಸುಗಳುಳ್ಳ ‘ಪಳಾರ’ವನ್ನು ಬಾಯಿಂದ ಮುಕ್ಕುತ್ತ ಕುಣಿಯುವರು. ಇತರ ಭಕ್ತರು ಇವರ ಮುಂದೆ ಎತ್ತರದ ಒಂದು ಬಟ್ಟೆಯಲ್ಲಿ ‘ದಾಣ’ ಹಾಕಿ ಹಿಡಿದಿರುತ್ತಾರೆ. ‘ಕುದುರೆಗಳು ಕುಣಿಯುತ್ತ ಬಂದು ಅದನ್ನು ಬಾಯಿಂದ ಮುಕ್ಕಬೇಕು.

ಮೈಲಾರಲಿಂಗನ ವಾಹನ ಕುದುರೆಯಷ್ಟೆ. ಇವರು ತಾವು ಅವರ ಕುದುರೆಗಳೇ ಎಂದು ಭಾವಿಸಿಕೊಂಡು ಕುಣಿಯುವರು. ವಿಶೇಷವಾಗಿ ಗಂಗಿಮಾಳಮ್ಮನ ಗುಡಿಯ ಮುಂದೆ ಉತ್ಸವ ಹೊರಟಾಗ ಪಲ್ಲಕ್ಕಿಯ ಮುಂದೆ ಕುಣಿಯುತ್ತಿರಬೇಕಾದುದು ಇವರ ಕಾರ್ಯ. ಕಾಲಿಗೆ ಗಗ್ಗರ ಕಟ್ಟಿಕೊಂಡು ವಿಶೇಷ ಗತ್ತಿನಿಂದ ಥೈ ಥೈ ಎಂದು ಕುಣಿಕಯುತ್ತ ಕೈಯಲ್ಲಿಯ ತಮ್ಮ ಚಾಟಿಯಿಂದ ಕಾಲುಗಳಿಗೆ ತಾವೇ ಧಡ್‌ ಧಡ್‌ ಎಂದು ಹೊಡೆದುಕೊಳ್ಳುವರು. ಅನೇಕ ವೇಳೆ ಕಾಲಿನ ಚರ್ಮ ಕಿತ್ತು ರಕ್ತ ಸೋರುತ್ತಿದ್ದರೂ ಬಿಡದೆ ಹೊಡೆದುಕೊಳ್ಳುತ್ತಲೇ ಇರುವರು. ಮಹಾರಾಷ್ಟ್ರದಲ್ಲಿ ಇದು ಕ್ವಚಿತ್ತಾಗಿ ಕಂಡು ಬರುವ ಹೊರೆ.