ನಳದುರ್ಗ ಮತ್ತು ಪಾಲಿ ಪೇಂಬರ (ಸಾತಾರೆಜಿಲ್ಲೆ)ಗಳಲ್ಲಿ ಇದು ಈಗಲೂ ಊರ್ಜಿತದಲ್ಲಿದೆ. ಕ್ರಿ.ಶ. ೧೧೧೨ರಲ್ಲಿ ನಯಸೇನನಿಂದ ರಚಿತವಾದ ಧರ್ಮಾಮೃತದಲ್ಲಿ ಮೈಲಾರನ ಗೊರವನಂತೆ ತಂತಮ್ಮನೆ ಬಡಿದುಕೊಳ್ವ ‘ಅಚ್ಚುಳಾಯ್ಲರು’ ಎಂಬ ಉಲ್ಲೇಖವಿದೆ. ನಯಸೇನನ ಹೇಳಿಕೆ, ಈ ಕುದುರೆಯ ಕುಣಿತವನ್ನೇ ಕುರಿತಿದೆಯೆಂಬುದು ಸ್ಪಷ್ಟ. ಈ ಸಂಪ್ರದಾಯದ ಆರಾಧನಾ ವಿಧಾನಗಳಲ್ಲಿ ಎಲ್ಲಕ್ಕೂ ಮೊದಲು ಉಲ್ಲೇಖಗೊಂಡ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕರ್ನಾಟಕದಲ್ಲಿ ಕುರುಬತಿ ಸಂಬಂಧವಾದ ಈ ಕತೆಗಳನ್ನೊಳಗೊಂಡ ಹಾಡುಗಳನ್ನು ಕುದುರೆ ಹಬ್ಬದ ಸಂದರ್ಭದಲ್ಲಿ ಹಾಡಲಾಗುತ್ತದೆ ಎಂಬ ವಿಷಯವು ನೆನಪಿಡಬೇಕಾದ ಸಂಗತಿಗಳಾಗಿವೆ. “ನಾಯಿಗೊರವರಿರುವಂತೆ ಕರ್ನಾಟಕದಲ್ಲಿ ಕುದುರೆ ಗೊರವರು ಅಥವಾ ಕುದುರೆಕಾರರು ಪ್ರತ್ಯೇಕವಾಗಿಯೇ ಇದ್ದಾರೆ. ಮಹಾರಾಷ್ಟ್ರದಲ್ಲಿನ ಕುದುರೆಕಾರರ ಸಂಖ್ಯೆ ವಿಶೇಷವಾಗಿ ಕಂಡು ಬರುವುದಿಲ್ಲವಾದರೂ ಕುಣಿತದ ಆಚಾರ ಪಾಲಿ ಮತ್ತು ನಳದುರ್ಗದಲ್ಲಿ ಈಗಲೂ ಉಳಿದುಕೊಂಡು ಬಂದಿರುವುದು ಗಮನಿಸಬೇಕಾದ ಅಂಶವಾಗಿದೆ.

ಹಿರೇಮೈಲಾರ ಮತ್ತು ದೇವರ ಗುಡ್ಡದ ದೇವಸ್ಥಾನಗಳಲ್ಲಿ ‘ಕುದುರೆ’ ಅಥವಾ ‘ಕುದರೆಪ್ಪ’ನ ಪ್ರತ್ಯೇಕ ಪೂಜಾಸ್ಥಾನಗಳಿರುವುದನ್ನು ಮತ್ತು ಅದರ ಸನ್ನಿಧಿಯಲ್ಲಿ ಪ್ರಮುಖ ಆಚರಣೆಗಳು ಮತ್ತು ದೀಕ್ಷೆಯ ಚಟುವಟಿಕೆಗಳು ಜರುಗುವ ವಿಶೇಷವನ್ನು ಈಗಾಗಲೇ ವರ್ಣಿಸಿದೆ. ಅಷ್ಟೇ ಅಲ್ಲದೇ ಕುದುರೆಯ ಹಬ್ಬ ಎಂಬ ಪ್ರತ್ಯೇಕವಾದ ಹಬ್ಬವೇ ರೂಢಿಯಲ್ಲಿರುವುದು ತುಂಬ ಕುತೂಹಲ ಹುಟ್ಟಿಸುವ ಅಂಶ. ಕುರುಬರ ಮಾಳವ್ವನನ್ನು ‘ತುರಂಗಬಾಲ’ ಎಂದು ಎಲ್ಲೆಡೆ ಕರೆಯುವ ಅಂಶವನ್ನು ಈಗಾಗಲೇ ಹೇಳಿದೆ. ಮೈಲಾರದೇವರನ್ನು ‘ಹಯಪತಿ’ ಎಂದೂ ಕರೆಯುಲಾಗುತ್ತದೆ. ಭಕ್ತರು ಕುದುರೆಕಾರರಾಗುವುದು, ಕುದುರೆಗೆ ಪೂಜೆ ಸಲ್ಲಿಸುವುದು (ಕುದುರೆಕಾರರು) ಚಾಟಿಯಿಂದ ತಮ್ಮನ್ನು ಹೊಡೆದುಕೊಳ್ಳುತ್ತ ಕುಣಿಯುತ್ತಾರೆ. ಅಂಥವರಿಗೆ ‘ದಾಣ’ ತಿನ್ನಿಸುವುದು, ದೋಣಾ ತುಂಬುವಾಗ ಕೆಲವರು ಇತರ ಆಹಾರದ ಜೊತೆಗೆ ಗುಗ್ಗರಿಯನ್ನು ತುಂಬುವುದು ಇವು ಕುದುರೆಗೆ ಸಂಬಂಧಿಸಿದ ಪ್ರಮುಖ ಆಚರಣೆಗಳು.ಮಲೇಗಾಂವ್‌ (ಮಹಾರಾಷ್ಟ್ರ) ದೇವಸ್ಥಾನದ ಜಾತ್ರೆಯಲ್ಲಿ ಕುದುರೆಯ ಸಂತೆ ನೆರವೇರುವುದನ್ನು ಇಲ್ಲಿ ಗಮನಿಸಬಹುದಾದ ಅಂಶವೇ ಆಗಿದೆ. (ಮೈಲಾರಲಿಂಗ ಖಂಡೋಬಾ ಒಂದು ಸಾಂಸ್ಕೃತಿಕ ಅಧ್ಯಯನ, ಡಾ.ಎಂ.ಬಿ.ನೇಗಿನಾಳ, ಪುಟ. ೧೩೨-೧೫೭)

ಮಲ್ಲಾರಿ ಮಹಾತ್ಮೆ ನಾಯಿಯನ್ನು ಅಲಕ್ಷಿಸಿದಂತೆ ಕುದುರೆಯನ್ನು ಅಲಕ್ಷಿಸಿಲ್ಲ. ಶಿವನು ನಂದಿ ವಾಹನವಾದರೂ ಅಸುರರ ಜೊತೆಗೆ ಯುದ್ಧಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಶ್ವಾರೂಢನಾದನೆಂದು ವಿವರಣೆ ನೀಡುತ್ತದೆ. ಆದ್ದರಿಂದ ಮೈಲಾರಲಿಂಗನ ಕುಳಿತ ಮೂರ್ತಿಗಳಿರುವಂತೆ ಅಶ್ವಾರೋಹಿಯಾದ ಮೂರ್ತಿಗಳ ಒಂದು ದೊಡ್ಡ ಸಮುದಾಯವೇ ಇದೆ. ಪ್ರೇಮಪುರ, ಮೈಲಾರದಲ್ಲಿ ಮುಂಚೆ ಪೂಜಾಮೂರ್ತಿಯಾಗಿರುವುದು. ಅಶ್ವಾರೋಹಿ ಮೂರ್ತಿಯೇ ಈಗಲೂ ಅಲ್ಲಿಯ ವಗ್ಗೇರ ಗದ್ದುಗೆಯಲ್ಲಿ ಅಂಥ ಮೂರ್ತಿ ಇರುವುದನ್ನು ಕಾಣುತ್ತೇವೆ.

ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಕುದುರೆಯ ಹಬ್ಬ ಅಥವಾ ತುರಂಗ ಬಾಲಿಯ ಗುಡಿಗೆ ಹೋಗುವಾಗ ಉಪಯೋಗುಸವ ಮೂರ್ತಿಗಳು ಅಶ್ವಾರೋಹಿ ಮೂರ್ತಿಗಳೇ ಇವನ್ನು ‘ರಾವುತರಾಯ’ ಎಂದು ಕರೆಯಲಾಗಿದೆ. ಭಕ್ತರು ತಮ್ಮ ಮನೆಗಳಲ್ಲಿ ಪೂಜಿಸಿವು ಮೂರ್ತಿಗಳೆಲ್ಲ ಅಶ್ವಾರೋಹಿ ಮೂರ್ತಿಗಳೇ. ಮೂರ್ತಿಯ ಬದಲು ಉಪಯೋಗಿಸ ಅಚ್ಚು ಒತ್ತುವ ಮೂರ್ತಿಗಳೆಲ್ಲವು ವಿಶೇಷವಾಗಿ ಅಶ್ವರೋಹಿಗಳೇ ಆಗಿರುವುದನ್ನು ಗಮನಿಸಬಹುದು. ಇತ್ತೀಚಿನ ಸಂದರ್ಭದಲ್ಲಿ ಬಳಕೆಗೊಳ್ಳುತ್ತಿರುವ ದೇವರ ಫೋಟೋಗಳು ಅಶ್ವಾರೋಹಿಯಾಗಿರುವುದು ಎಲ್ಲೆಡೆಗೆ ಕಂಡು ಬರುತ್ತದೆ. ದೇವರ ಕುದುರೆ ಬಿಳಲಿಯ ಬಣ್ಣದ್ದು ಎಂಬ ವಿಚಾರ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದೇವಧ್ಯಾನ ಶ್ಲೋಕದಲ್ಲಿ ಶ್ವೇತಾಶ್ವ ಎಂದೇ ಇದೆ.

ಧ್ಯಾಯೇನ್ಮೆಲ್ಲಾರಿದೇವಂ ಕನಕಗಿರಿ ನಿಭಂ ಮ್ಹಾಲಸಾಭೂಷಿತಾಂಕಂ
ಶ್ವೇತಾಶ್ಚಂ ಖಡ್ಗಹಸ್ತಂ ವಿವಿಧ ಬುಧಗಣೈ ಸೇವ್ಯ ಮಾನಂಕೃತಾರ್ಥೈಃ
ಯುಕ್ತಾಘ್ರಿಂ ದೈತ್ಯ ಮೂಧ್ನೀ ಡಮರು ವಿಲಸಿತಂ ನೈಶಚೂರ್ಣೌಭಿರಾಮಂ
ನಿತ್ಯಂ ಭಕ್ತೇಷು ತುಷ್ಟಂಶ್ವಗಣ ಪರಿವೃತಂ ಶುಂಭುಮೋಂಕಾರಗಮ್ಯಂ

ಆದರೆ ಸಂತರಾಮದಾಸರು ತಮ್ಮ ಒಂದು ಪದ್ಯದಲ್ಲಿ ಅಶ್ವದ ಬಣ್ಣ ನೀಲಿ ಎಂದು ಗುರುತಿಸುತ್ತಾರೆ.

ದೇವಾ ಶಿವಾಚಾ ಅವತಾರ ಜಾಉನಿಬಸಲಾ ಗಡಾವರ
ಏಕನೀಳ್ಯಾಘೋಡ್ಯಾವರ ಏಕಢವಳ್ಯಾ ನಂದೀವರ

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿ ಕೂಡ ದೇವರ ವಾಹನ ಕುದುರೆಯ ಬಣ್ಣ ಬಿಳಿ ಮತ್ತು ನೀಲಿ ಎಂದು ಇಬ್ಬಗೆಯ ನಂಬಿಕೆ ಪ್ರಚಲಿತದಲ್ಲಿದೆ. ದೇವರನ್ನು ‘ಮಣಿಪ್ರೇತಾಸನ’ ಎಂದಿರುವುದು ಕಂಡು ಬರುತ್ತದೆ. ದೇವರ ಆಸನ ಅಥವಾ ವಾಹನವಾದ ಕುದುರೆ ಮಲ್ಲನ ತಮ್ಮ ಮಣಿ ಎಂಬ ದೈತ್ಯನೆಂದು ಮಲ್ಲಾರಿ ಮಹಾತ್ಮೆ ಹೇಳುತ್ತದೆ. ಯುದ್ಧದ ಕೊನೆಯಲ್ಲಿ ದೇವರು ಮಣಿಕನನ್ನು ಮೆಟ್ಟಿ ತುಳಿದಾಗ ಅವನಿಗೆ ಜ್ಞಾನೋದಯವಾಯಿತೆಂದೂ, ಆಗ ಅವನು ತನ್ನನ್ನು ವಾಹನವನ್ನಾಗಿ ಮಾಡಿ ಕೊಳ್ಳುವಂತೆ ದೇವರನ್ನು ಪ್ರಾರ್ಥಿಸಿದ್ದರಿಂದ ದೇವರು ಒಪ್ಪಿ ಅಶ್ವರೂಪದ ಮಣಿಕನನ್ನು ವಾಹನವಾಗಿ ಪಡೆದನೆಂದು ಹೇಳಲಾಗಿದೆ.

ಮಣಿ ಎಂದರೆ ದೇವರ ವಾಹನ ಕುದುರೆ ಎಂಬ ಜಾನಪದ ನಂಬಿಕೆಯನ್ನು ಪುರಾಣ ಧಾರಾಳವಾಗಿ ಒಪ್ಪಿಕೊಂಡಿದೆ. ಕುದುರೆ ಕನಸಿನಲ್ಲಿ ಕಾಣಿಸಿಕೊಂಡರೆ ತಾವು ದೇವರಿಗೆ ಒಪ್ಪಿಸಬೇಕಾದ ಹರಕೆಯೊಂದು ಬಾಕಿ ಉಳಿದಿದೆ ಎಂದು ಭಕ್ತರು ನಂಬುತ್ತಾರೆ.

ಆಂಧ್ರಪ್ರದೇಶದ ‘ಮೂಲ’ ಜನಾಂಗದ ಬೆಡಗುಗಳಲ್ಲಿ ಕುದುರೆಯೂ ಒಂದು. ಅದೇ ರೀತಿ ಕರ್ನಾಟಕದ ಕುರುಹಿನಶೆಟ್ಟಿ, ಒಕ್ಕಲಿಗ ಮುಂತಾದ ಜಾತಿಗಳಲ್ಲಿಯೂ ಕುದುರೆ ಬೆಡಗಿನ ಹೆಸರಾಗಿ ಬೆಳೆದುಕೊಂಡು ಬಂದಿದೆ. ಕಪ್ಪು ಸಮುದ್ರ ತೀರದಲ್ಲಿ ಮೊದಲು ಇದನ್ನು ಜನರು ಪಳಗಿಸತೊಡಗಿದರೆಂದು ತಿಳಿಯಲಾಗಿದೆ. ಋಗ್ವೇದ ಮುಂತಾದ ವೈದಿಕ ಸಾಹಿತ್ಯದಲ್ಲಿ ಕುದುರೆ ತುಂಬ ಪರಿಚಿತವಾದ ಪ್ರಾಣಿ. ಅಲ್ಲಿ ಅದಕ್ಕೆ ಗೌರವ ಸಲ್ಲುವಂತೆ ವಧೆಯೂ ಸಲ್ಲುತ್ತದೆ. ಕುಮಾರರಾಮ ಮುಂತಾದ ಪ್ರಾಚೀನ ವೀರರ ಚರಿತ್ರೆಯಲ್ಲಿ ‘ಬೊಲ’ ಮುಂತಾದ ಹೆಸರಿನ ಕುದುರೆಗಳು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಜಾನಪದ ನಂಬಿಕೆಗಳು ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಂಡಿವೆ. (ಮೈಲಾರಲಿಂಗ-ಖಂಡೋಬಾ ಒಂದು ಸಾಂಸ್ಕೃತಿಕ ಅಧ್ಯಯನ ಡಾ. ಎಂ.ಬಿ. ನೇಗಿನಹಾಳ ಪುಟ. ೨೩೫ ರಿಂದ ೨೫೭)

ಕುಮಾರ ರಾಮನ ಸಂಪ್ರದಾಯದಲ್ಲಿ ಕಂಪಿಲರಾಯ ತನ್ನ ರಾಮಯ್ಯನಿಗೆ ವಿಶೇಷವಾದ ಜವಾಬ್ದಾರಿಯನ್ನು ಕೊಡುವ ಸಂದರ್ಭದಲ್ಲಿ ರಾಮಯ್ಯ ಗುಂಡ ಬ್ರಹ್ಮಯ್ಯ ದೇವರಿಗೆ ನಮಸ್ಕರಿಸಿ ಬೇಡಿಕೊಳ್ಳುವ ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಎಪ್ಪತ್ತು ರಾಜನ ಬೊಲ್ಲನು ಸಿಕ್ಕರೆ
ತಪ್ಪದೆ ನಾ ಬಲಗೊಂಬೆ
ಒಪ್ಪುವ ಶೂಲದ ಹಬ್ಬದ ಮೊಳ್ಪೆನು
ಛಪ್ಪನ್ನು ದೇಶರಿವಂತೆ (೨೭ ಹೊಸಕುಮಾರರಾಮ ಸಾಂಗತ್ಯ)

ಎಪ್ಪತ್ತು ರಾಜನ ಬೊಲ್ಲ ಕುದುರೆ ಸಿಕ್ಕರೆ ‘ಶೂಲದ ಹಬ್ಬ’ ಆಚರಿಸುವುದಾಗಿ ಹರಕೆ ಹೊತ್ತ ರಾಮಯ್ಯನ ಕನಸಿನಲ್ಲಿ ಗುಂಡಬ್ರಹ್ಮಯ್ಯ ಬಂದು ವರ ಎಂದು ದಯ ಪಾಲಿಸುತ್ತಾನೆ.

ಕುಮಾರ ರಾಮನ ಕಲ್ಲಿನ ಕೆತ್ತನೆಗಳನ್ನು, ಶಿಲ್ಪಗಳನ್ನು ನೋಡಿದರೆ ಕುಮಾರರಾಮನು ಸದಾ ಕುದುರೆಯ ಮೇಲೆ ಕುಳಿತಿರುವ ಚಿತ್ರಗಳೇ ಹೆಚ್ಚು. ಈತನದು ಎಂದೆನ್ನುವ ಹಲವಾರು ಕೆತ್ತನೆಯ ಚಿತ್ರಗಳು ನಮಗೆ ಮಲೆನಾಡಿನಲ್ಲಿ ಕಂಡು ಬರುತ್ತವೆ. ಸೊರಬ ತಾಲೂಕಿನ ‘ಹೆಜ್ಜೆ’ ಗ್ರಾಮದಲ್ಲಿ ಕುದುರೆ ಮೇಲೆ ಕತ್ತಿ ಹಿಡಿದು ಕುಳಿತ ವೀರನ ಶಿಲ್ಪವಿದೆ. ತೀರ್ಥಹಳ್ಳಿ ಸಮೀಪವಿರುವ ‘ಚಿಕ್ಕೋಡ ಬಯಲಿನಲಿ’ ಕುದುರೆಯ ಮೇಲೆ ಕುಳಿತ ವೀರನ ಕೆತ್ತನೆ ಕಲ್ಲಿನಲ್ಲಿದ್ದು ಅಲ್ಲಿಯ ಜನರು ಈ ಶಿಲ್ಪವನ್ನು ರಾಮದೇವರು ಎಂದು ಕರೆಯುತ್ತಾರೆ. ಬಹುಶಃ ಇದು ಕುಮಾರ ರಾಮನ ಶಿಲ್ಪವಾಗಿರಬಹುದು. ಸಂಡೂರು ತಾಲೂಕಿನ ಹೊಸಮಲೆದುರ್ಗದಲ್ಲಿ ಕುಮಾರ ರಾಮನು ಕುದುರೆಯ ಮೇಲೆ ಕುಳಿತ ಶಿಲ್ಪವಿದೆ. ಕುಮಾರ ರಾಮನ ಬೆಟ್ಟದಲ್ಲಿ ಕುದುರೆಯ ಮೇಲೆ ಕುಳಿತ ವೀರನೊಬ್ಬನ ಚಿತ್ರವಿದ್ದು ರಾಮಶರ್ಮರು ‘ಬೊಲ’ನೆಂಬ ಕುದುರೆ ಏರಿದ ಕುಮಾರ ರಾಮ ಎಂದು ಗುರುತಿಸಿದ್ದಾರೆ.

ಮೌಖಿಕ ಸಾಹಿತ್ಯದಲ್ಲಿ ಕುಮಾರ ರಾಮನ ಕುರಿತು ಒಂದು ಐತಿಹಾಸಿಕ ಕಥೆ ಇದ್ದು, ಕಂಪಿಲರಾಯನಿಗೆ ಬಹಳ ದಿನ ಮಕ್ಕಳಾಗಿರದೆ ಇದ್ದ ಕಾರಣ ಚಿಂತಿಸುತ್ತಿರುವಾಗ ಕಂಪಿಲರಾಯನ ಮನೆದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು ನನ್ನನ್ನು ಮರೆತಿದ್ದಿರೀ ಎಂದು ಹೇಳಿ ನೀವೂ ಮನೆದೇವರ ದರ್ಶನಕ್ಕೆ ಬಂದು ಅಲ್ಲಿ ಒಂದು ಮಾವಿನಗಿಡ ಇದೆ. ಆ ಹಣ್ಣನ್ನು ನೀನೂ ನಿನ್ನ ಹೆಂಡ್ರು ತಿನ್ನಿರೆಂದು ಹೇಳುತ್ತಾನೆ. ಅದೇ ರೀತಿಯಾಗಿ ದೇವಸ್ಥಾನಕ್ಕೆ ಹೋಗಿ ಮಾವಿನಹಣ್ಣು ತಂದು ಹರಿಯಾಲದೇವಿ ಮತ್ತು ಆಕೆಯ ನಾಲ್ಕು ಮಂದಿ ಬಾಣಗಿತ್ತಿಯರು ತಿನ್ನುತ್ತಾರೆ. ಅದರ ಗೊಟ್ಟವನ್ನು ಅಂತಃಪುರದ ಹಿಂದುಗಡೆ ಇರುವ ಕತ್ತೆ ತಿಂದಿತು. ಅದರಿಂದ ಆರು ಜನ ಗರ್ಭಧರಿಸಿ ಕತ್ತೆಯು ‘ಬೊಲ’ನೆಂಬ ಕುದುರೆಗೆ ಜನ್ಮಕೊಟ್ಟಿತು ಎಂಬ ಕಥೆಯನ್ನು ಗಮನಿಸಬಹುದು. ಇದೇ ವಿಚಾರವಾಗಿ ಕಂಪ್ಲಿ ಕಮ್ಮಟದುರ್ಗ ಪರಿಸರದಲ್ಲಿ ಶಂಕ್ರಪ್ಪ ಕೆಂಗಾರಿಯವರ ಕಥೆಯಲ್ಲಿ ಕುಮಾರ ರಾಮನ ಕುದುರೆಯಾದ ‘ಬೊಲ’ ಜಟ್ಟಂಗಿ ರಾಮೇಶ್ವರನ ಆಶೀರ್ವಾದದಿಂದ ಕತ್ತೆಯ ಹೊಟ್ಟೆಯಲ್ಲಿ ಜನ್ಮ ಪಡೆಯುತ್ತದೆ ಎಂಬ ವಿಚಾರ ಬರುತ್ತದೆ. ಕುಮಾರ ರಾಮನ ಚರಿತ್ರೆಯಲ್ಲಿ ‘ಬೊಲ್ಲ’ ಕುದುರೆ ಸಾಂಸ್ಕೃತಿಕ ಚರಿತ್ರೆಯ ಜೊತೆಗೆ ಐತಿಹಾಸಿಕ ಚರಿತ್ರೆಯನ್ನು ಕಟ್ಟಿಕೊಡುವುದರ ಮೂಲಕ ‘ದೇವರು’ ಎಂಬ ಭಾವನೆಯಿಂದ ಪೂಜೆಗೊಂಡಿರುವುದನ್ನು ಕಾಣುತ್ತೇವೆ.

ಪಂಚಕಲ್ಯಾಣಿ ಕುದುರೆಯು ಸಹ ಐತಿಹಾಸಿಕ ಮಹತ್ವವನ್ನು ಪಡೆದಿದ್ದು, ಅಭಿನವ ಚಂದ್ರ ಕವಿ ತನ್ನ ಅಶ್ವಶಾಸ್ತ್ರ ಕೃತಿಯಲ್ಲಿ ಅದರ ಗುಣಗಾನವನ್ನು ಮಾಡುತ್ತಾನೆ.

ವದನದೊಳಂ ನಾಲ್ಕುಂ ಪಾ
ದದೊಳಂ ಬೆಳ್ಪಾಗೆ ಪಂಚಕಲ್ಯಾಣಂ ಬಾ
ಲದೊಳುರದೊಳಂತೆ ತಾಂ ಕೇ
ಶದೊಳತಿ ಬೆಳ್ಪಾದೊಡಶ್ವ ಮಂಗಲನಕ್ಕುಂ” (.೧೯)

ಪ್ರಮುಖವಾಗಿ ಕುದುರೆಯ ನಾಲ್ಕು ಕಾಲುಗಳು ಮತ್ತು ಮುಖ ಬೆಳ್ಳಗಾಗಿದ್ದರೆ ಅಂತಹ ಕುದುರೆಯನ್ನು ಪಂಚಕಲ್ಯಾಣ ಎಂದು ಗುರುತಿಸುತ್ತಾನೆ. ಕುಮಾರ ರಾಮನ ಕಥೆಯಲ್ಲಿ ದಾಸಿ ಮಲ್ಲಮ್ಮನಿಗೆ ಹೊಲಿಕೆ ಹಾರಮ ಹುಟ್ಟಿದ ಕುದುರೆ ಸಿಪ್ಪೆ ತಿಂದು ಹಗ್ಗ ಹರಿದುಕೊಂಡು ಹೋಗಿ ಓರಂಗಲ್ಲು ಪಟ್ಟಣದಲ್ಲಿ ನಿಂತುಕೊಳ್ಳುತ್ತದೆ. ಆ ಕುದುರೆಗೆ ಎರಡು ರೆಕ್ಕೆಯಿರುವ ಪಂಚಕಲ್ಯಾಣ ಕುದುರೆ ಹುಟ್ಟಿತ್ತು. ಓರಂಗಲ್ಲು ಗಣಪತಿರಾಯನ ತಳವಾರರು ಅರವತ್ತು ಮಂದಿ ಆ ಕುದುರೆ ಮರಿಯನ್ನು ಹಿಡಿದುಕೊಂಡು ಕುದುರೆ ಸಾಲಿನಲ್ಲಿ ಕಟ್ಟಿದರು ಎಂಬ ವಿಚಾರ ಬರುತ್ತದೆ.

ಕೆಳದಿ ಬಸವರಸನ ಶಿವತತ್ವರತ್ನಾಕರದಲ್ಲಿ ಪಂಚಕಲ್ಯಾಣಿ ಕುದುರೆಯನ್ನು ಕುರಿತು ಈ ರೀತಿ ವಿಶ್ಲೇಷಿಸುತ್ತಾನೆ.

ಯಸ್ಯ ಪದಾಃ ಸಿತಾಃ ಸರ್ವೇತಥಾ ವಕ್ತ್ರಂಚಮಧ್ಯತಃ
ಕಲ್ಯಾಣ ಪಂಚಕಃ ಪ್ರೋಕ್ತಃ ಸದಾ ಕಲ್ಯಾಣ ಕೃಚ್ಛಸಂ” (೮೩)

ಇದು ಅಶ್ವಮೇಧ ಯಾಗಕ್ಕೆ ಯೋಗ್ಯವಾದ ಕುದುರೆ ಎಂದು ಹೇಳಿ ನಂತರ ಯಾವ ಕುದುರೆಯ ನಾಲ್ಕು ಪಾದಗಲು ಹಾಗೂ ಮುಖದ ಮಧ್ಯ ಭಾಗವು ಬಿಳುಪು ವರ್ಣದಿಂದ ಕೂಡಿದೆಯೋ ಅದು ಕಲ್ಯಾಣಪಂಚಕ ಎಂದು ಕರೆಯುತ್ತಾನೆ. ಇದು ಅಶ್ವಜಾತಿಯಲ್ಲಿ ‘ಅಶ್ವವಿಶೇಷ’ ಸಾಕಿ ಸಲುಹಿದ ಯಜಮಾನನಿಗೆ ಸದಾ ಮಂಗಳವನ್ನುಂಟು ಮಾಡುತ್ತದೆ. ಹೀಗಾಗಿ ಪಂಚಕಲ್ಯಾಣ ಕುದುರೆಗೆ ಐತಿಹಾಸಿಕ ಪ್ರಾಶಸ್ತ್ಯ ಬಂದಿದೆ.

ಪ್ರಾಚೀನ ಕಾಲದಲ್ಲಿ ಕುದುರೆ ಆರಾಧನೆ ಒಂದು ಪ್ರತಿಷ್ಠೆ ಮತ್ತು ಶ್ರೇಷ್ಠತೆಯ ಸಂಕೇತವಾಗಿ ರೂಪಗೊಂಡಿರುವುದನ್ನು ಕಾಣುತ್ತೇವೆ. ಹಳೆಯ ಕಾಲದ ಮನೆಗಳ ಬಾಗಿಲು ಪಟ್ಟಿಕೆಗಳಲ್ಲಿ ಕುದುರೆ ಚಿತ್ರಗಳನ್ನು ಬಿಡಿಸಿ ಪೂಜಿಸುವ ಪರಂಪರೆ ಇತ್ತು. ಉದಾಹರಣೆಗಾಗಿ ಉತ್ತರ ಕರ್ನಾಟಕ ಅದರಲ್ಲಿ ವಿಶೇಷವಾಗಿ ಹೈದ್ರಾಬಾದ ಕರ್ನಾಟಕದ ಪ್ರಮುಖ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಈ ತರಹದ ಆರಾಧನೆಯನ್ನು ಗಮನಿಸಬಹುದು. ಸೇಡಂ, ಶಹಾಪುರ, ಚಿತ್ತಾಪುರ, ಬಸವಕಲ್ಯಾಣ, ಚಿಂಚೊಳ್ಳಿ, ಲಿಂಗಸೂರು, ಮಾನ್ವಿ, ದೇವದುರ್ಗ, ಗುಲಬರ್ಗಾ, ಬೀದರ, ರಾಯಚೂರು, ಕೊಪ್ಪಳ ಮುಂತಾದ ಪರಿಸರದಲ್ಲಿರುವ ಹಳೆಯದಾದ ಪ್ರಾಚೀನ ಅರಸು ಮನೆತನಗಳಲ್ಲಿ ಗೌಡರು, ವಾಲೀಕಾರರು, ಕರಕುಶಲಗಾರರು, ಪಂಚಾಳರು ಮುಂತಾದವರ ಮನೆಯ ಬಾಗಿಲಗಳಲ್ಲಿ ಕುದುರೆಯ ಚಿತ್ರಗಳಿರುವುದನ್ನು ಕಾಣುತ್ತೇವೆ. ದಿನನಿತ್ಯ ಅವುಗಳ ಪೂಜೆಯು ನಡೆಯುತ್ತದೆ. ನಾಯಿಯಂತಹ ಸಣ್ಣ ಪ್ರಾಣಿಯನ್ನು ಬಿಟ್ಟರೇ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ನಂಬಿಗಸ್ಥ ಪ್ರಾಣಿ ಕುದುರೆ. ಹಾಗೆಯೇ ಆನೆ ಸ್ಥಿರತೆಯನ್ನು ಸೂಚಿಸಿದರೆ ಕುದುರೆ ಚಲನಶೀಲತೆಯನ್ನು ಸೂಚಿಸುತ್ತದೆ. ಚಲನಶೀಲವೇ ಅದರ ಹುಟ್ಟು ಗುಣವಾಗಿದ್ದರಿಂದ ಈ ಮಾತು ಅದಕ್ಕೆ ಉಚಿತವೆನಿಸುತ್ತದೆ. ಹಿರಿಯರು ಹೇಳುವಂತೆ ನಮ್ಮ ಮನೆ ಉತ್ತರೋತ್ತರವಾಗಿ ಬೆಳೆಯಲಿ ಎಂಬ ಸದಾಶಯದಿಂದಲೇ ಕುದುರೆಯನ್ನು ಪೂಜಿಸುವುದು ಮತ್ತು ಆರಾಧಿಸುವುದು, ಪ್ರತಿಷ್ಠಾಪನೆ ಮಾಡುವುದು ಎನ್ನುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಲಕ್ಷ್ಮೀ, ಸರಸ್ವತಿ, ದುರ್ಗಾದೇವಿ, ಚಾಮುಂಡೇಶ್ವರಿ, ನಂದಿ, ಗಣೇಶ ಮುಂತಾದ ದೇವರ ಚಿತ್ರಗಳು ಬಾಗಿಲ ಪಟ್ಟಿಕೆಗಳಲ್ಲಿ ಕಂಡು ಬಂದರೆ ಇಲ್ಲಿ ಕುದುರೆಯ ಚಿತ್ರಗಳು, ಮೂರ್ತಿಗಳು ಕಂಡು ಬಂದಿರುವುದು ವಿಶೇಷವೆನಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಕಂಡು ಬರುವ ‘ಕುದುರೆ ಕೋಲ’ ಎಂಬ ಕಲೆಯು ‘ನಲ್ಕೆ’ ಜನಾಂಗದವರ ಆರಾಧನಾತ್ಮಕ ಕಲೆಯಾಗಿದ್ದು, ಸುಗ್ಗಿ, ಬೇಸಾಯ ಆರಂಭಿಸುವ ಮೊದಲು ಈ ಕುಣಿತವನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಬಿತ್ತನೆಗೆ ಗದ್ದೆಯನ್ನು ಹಸನುಗೊಳಿಸಿ ಉಳುಮೆಯನ್ನು ಪ್ರಾರಂಭಿಸುವ ಪೂರ್ತಿಗೊಳಿಸುವ ದಿನಕ್ಕೆ ‘ಕಂಡದ ಕೋರಿ’ ಎಂದು ಕರೆಯುತ್ತಾರೆ.

ಈ ಆಚರಣೆಯನ್ನು ದೊಡ್ಡ ಬೇಸಾಯಗಾರರು, ಅರಸರು, ಬಲ್ಲಾಳರು, ಬೂಡಿನವರು, ಗುತ್ತಿನವರು ವಿಜೃಂಭಣೆಯಿಂದ ನಡೆಸುತ್ತಾರೆ . ಗದ್ದೆಕೋರಿ ಆದ ಬಳಿಕ ಗದ್ದೆ ಮಧ್ಯೆ ಪೊರಕೆ ಹಾಕುವ ಕ್ರಮವಿದೆ. (ಪೊರಕೆ ಎಂದರೆ ಅಡಿಕೆ ಮರದ ಸುತ್ತ ಅಂಕಣ ಅಂಕಣವಾಗಿ ಸಲಿಕೆಯ ತುಂಡುಗಳನ್ನು ಜೋಡಿಸಿ ಐಫಲ್‌ ಮಾದರಿಯ ಗೋಪುರಾಕೃತಿಯಲ್ಲಿ ಕಟ್ಟಿದ ಒಂದು ಆಕೃತಿ) ಇದನ್ನು ಊರಿನ ಸಮಸ್ತ ಜನರ ಸಮ್ಮುಖದಲ್ಲಿ ಕೊಂಬು ವಾಲಗದ ಹಿಮ್ಮೇಳದಲ್ಲಿ ತೆಗೆದುಕೊಂಡು ಹೋಗಿ ಗದ್ದೆಯ ಮಧ್ಯೆ ನೆಡುವ ಕ್ರಮಕ್ಕೆ ಪೊರಕೆ ಹಾಕುವುದು ಎನ್ನುತ್ತಾರೆ. ಗದ್ದೆಕೋರಿ ಆದ ಬಳಿಕ ಪೊರಕೆ ಹಾಕುವ ಮೊದಲು ‘ಕುದುರೆ ಕೋಲ’ ನಡೆಯುತ್ತದೆ. ಸುಗ್ಗಿಯ ನಂತರ ಬೆಳೆ ಬಿತ್ತುವ ಮೊದಲು ಆಗುವ ಈ ಸಮಾರಂಭ ಸಾಮಾನ್ಯವಾಗಿ ಡಿಸೆಂಬರ ತಿಂಗಳಲ್ಲಿ ನಡೆಯುತ್ತದೆ. ಪೊರಕೆ ಮತ್ತು ಕುದುರೆ ಕೋಲಕ್ಕೆ ಅವಿನಾಭಾವ ಸಂಬಂಧ ಇರುವುದರಿಂದ ಈ ಕೋಲಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ.

ಕುದುರೆ ಕೋಲವೆಂದರೆ ನಾಗಬ್ರಹ್ಮನು ಕುದುರೆಯ ಮೇಲೆ ಕುಳಿತುಕೊಂಡು ಬರುವ ದೃಶ್ಯ. ಗದ್ದೆಕೋರಿ ಸಾಮಾನ್ಯವಾಗಿ ವಿಶಾಲವಾದ ಬಾರೆಮಮರು ಗದ್ದೆಯಲ್ಲಿ ನಡೆಯುತ್ತದೆ. ಇದರ ಪಕ್ಕದಲ್ಲಿ ನಾಗಬನವಿರುತ್ತದೆ. ನಾಗಬನದಲ್ಲಿ ನಾಗಬ್ರಹ್ಮನ ವೇಷ ಹಾಕಲಾಗುತ್ತದೆ. ನಾಗಬ್ರಹ್ಮ ಸೊಂಟಕ್ಕೆ ನೀರಿಗೆ ಹಾಕಿದ ಸೀರೆಗಳನ್ನು ಲಂಗದ ರೀತಿಯಲ್ಲಿ ಕಟ್ಟಿಕೊಳ್ಳುತ್ತಾನೆ. ಮೈಗೆ ಕೆಂಪು ಬಣ್ಣ ಉದ್ದತೋಳಿನ ಅಂಗಿ ಇರುತ್ತದೆ. ಮುಖಕ್ಕೆ ಅಂದಾಳ ಹಾಕಿ ಸಾತ್ವಿಕ ಭೂತದ ಮುಖವರ್ಣಿಕೆ ಮಾಡಿಕೊಳ್ಳುತ್ತಾನೆ. ಕೆಂಪಿನ ಮಧ್ಯೆ ಬಿಳಿನಾಮ ಹಾಕಿಕೊಳ್ಳುತ್ತಾನೆ. ತಲೆಗೆ ತಲೆಮಣಿ, ಹೂವಿನಂತೆ ದಂಡೆ ಕಟ್ಟಿ ಮೇಲೆ ಪಟ್ಟಿ (ಕಿರೀಟ) ಕಟ್ಟಿಕೊಳ್ಳುತ್ತಾನೆ. ಇವು ಎಲ್ಲವು ಬೆಳ್ಳಿಯ ಆಭರಣಗಳಾಗಿರುತ್ತವೆ. ಕಾಲಿಗೆ ಗಗ್ಗರವಿರುವುದು ವಿಶೇಷ.

ಬಿದುರಿನ ಸಲಿಕೆಗಳಿಂದ ಮಾಡಿದ ಕುದುರೆಯ ದೇಹದ ಆಕೃತಿಯೊಂದು ಇದ್ದು, ಅದರ ಮುಖಕ್ಕೆ ರಂಗಿನ ಹಾಳೆಯಿಂದ ಮಾಡಿದ ಕುದುರೆಯ ಮುಖವಾಡ ಕಟ್ಟಿರುತ್ತಾರೆ. ಈ ಆಕೃತಿಯನ್ನು ನಾಗಬ್ರಹ್ಮ ವೇಷಧಾರಿ ತನ್ನ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕುದುರೆಯ ದೇಹದ ಇತರ ಭಾಗವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಇದು ಕೀಲು ಕುದುರೆ ಕುಣಿತವನ್ನೇ ಹೋಲುತ್ತದೆ. ಕುದುರೆ ಕೋಲ ಎಂಬುದು ನಾಗಬ್ರಹ್ಮ ಕುದುರೆಯ ಮೇಲೆ ಕುಳಿತುಕೊಂಡು ಒಂದು ಮನೆಯ ಯಜಮಾನನ ಎದುರು ಕುಣಿದ ಮೇಲೆ ನಾಗಬ್ರಹ್ಮನಿಗೆ ಅಣಿಕಟ್ಟಿ ಭೂತ ನಡೆಯುತ್ತದೆ. ಭೂತಾರಾಧನೆಯ ಸಂದರ್ಭದಲ್ಲಿ ಅನ್ವಯವಾಗುವ ಎಲ್ಲಾ ಕಟ್ಟುಪಾಡುಗಳನ್ನು ಕುಣಿತದವರು ಪಾಲಿಸುತ್ತಾರೆ. ಗದ್ದೆಯ ಕೆಲಸದ ಮುಕ್ತಾಯ ಸಮಾರಂಭಕ್ಕೆ ಸೇರಿದ ಜನರು ಮಾತ್ರ ಕುದುರೆ ಕೋಲಕ್ಕೆ ಪ್ರೇಕ್ಷಕರಾಗಿರುತ್ತಾರೆ.

ತುಳುನಾಡಿನಲ್ಲಿ ಯಾವುದೇ ಉತ್ಸವ ಹಾಗೂ ಆರಾಧನೆ ಮಾಡುವ ಸಂದರ್ಭದಲ್ಲಿ ನಾಗಬ್ರಹ್ಮನ ಸೇವೆ ಮೊದಲನೆಯದಾಗಿಯೇ ನಡೆಯುತ್ತದೆ. ಅದೇ ರೀತಿ ಗದ್ದೆಕೋರಿಯ ಸಮಾರಂಭದೆಲ್ಲಿಯೂ ಸಹ ನಾಗಬ್ರಹ್ಮನ ಆರಾಧನೆ ನಡೆಯುವುದು. ಕುದುರೆಯ ಮೇಲೆ ಕುಳಿತುಕೊಂಡು ಬಂದಂತೆ ನರ್ತಿಸುವುದರಿಂದ ಇದಕ್ಕೆ ಕುದುರೆ ಕೋಲ ಎಂಬ ಹೆಸರು ಬಂದಿದೆ. ಕುದುರೆ ಕೋಲ ಈ ಎಲ್ಲಾ ದೃಷ್ಟಿಯಿಂದ ಅಂತಿಮವಾಗಿ ನಾಗಬ್ರಹ್ಮ ಆರಾಧನೆಯೇ ಎನಿಸಿದರೂ ಇಲ್ಲಿ ಮುಖ್ಯವಾಗಿ ಕುದುರೆ ಕೋಲ ಮತ್ತು ನಾಗಬ್ರಹ್ಮನ ಸಂಪ್ರದಾಯ ಎರಡು ಸೇರಿಯೇ ನಡೆಯುವುದರಿಂದ ಒಂದರ ಬಿಂಬ ಇನ್ನೊಂದರ ಪ್ರತಿಬಿಂಬ ಎಂಬಂತೆ ಗ್ರಾಸವಾಗುತ್ತದೆ. (ಕರ್ನಾಟಕ ಜಾನಪದ ಕಲೆಗಳ ಕೋಶ, ಡಾ.ಹೀ.ಚಿ. ಬೋರಲಿಂಗಯ್ಯ, ಹಂಪಿ ವಿವಿ. ಕುದುರೆಕೋಲ ಭಾಗದ ಕೆಲವು ಅಂಶಗಳು)

ಸಮಾರೋಪ

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅನೇಕ ಬಗೆಯ ಆಚರಣೆ, ನಂಬಿಕೆ, ಆರಾಧನೆಗಳು ನಡೆದುಕೊಂಡು ಬಂದಿವೆ. ಹಾಗೆಯೇ ನಡೆಯುತ್ತಲೇ ಇವೆ. ಒಂದೊಂದು ಆಚರಣೆ ಮತ್ತು ಆರಾಧನೆಗೆ ಬಹುಬಗೆಯ ಆಲೋಚನಾಕ್ರಮಗಳು ಪ್ರಾಪ್ತವಾಗಿದ್ದು, ಅವು ತಮ್ಮದೇ ಆದ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ. ಇಲ್ಲಿ ಮಲುಖ್ಯವಾಗಿ ನೀರಾಜನಾರಾಧನೆ, ತೇಜಮ್ಮ ಆರಾಧನೆ, ಕುದುರೆಯ ಹಬ್ಬ, ದೇವರ ವಾಹನವಾಗಿ ಕುದುರೆ ಮುಂತಾದ ವಿಚಾರಗಳು ಅಶ್ವಾರಾಧನೆಯ ವಿವಿಧ ಮಜಲುಗಳನ್ನು ಅಂತರಾತ್ಮದಿಂದ ಬಾಹ್ಯ ಪ್ರಪಂಚಕ್ಕೆ ಬಿತ್ತರಿಸುವ ಕೆಲಸವನ್ನೇ ಮಾಡಿವೆ. ‘ಅಶ್ವ’ ಎಂಬುದು ಕುದುರೆಗೆ ಇರುವ ಸಂಸ್ಕೃತ ಪದ. ಇದರ ಹಿಂದಿರುವ ಗೃಹೀತಗಳನ್ನು ಆರಾಧನೆಯ ಮೂಲಕ ಕಟ್ಟಿಕೊಡುವ ಸಣ್ಣ ಪ್ರಯತ್ನ ಈ ಅಧ್ಯಯನದ ಮೂಲಕ ಮಾಡಲಾಗಿದೆ. ನೀರಾಜನಾರಾಧನೆ ಯುದ್ಧಕ್ಕೆ ಹೊರಟ ಕುದುರೆಗೆ ಯಾವುದೇ ದುಷ್ಟ ಶಕ್ತಿಯ ನೆರಳು ತಾಕದೇ ಇರಲಿ ಎಂಬ ಆಶಯವನ್ನು ಇಟ್ಟುಕೊಂಡು ದೀಪಾರಾಧನೆಯನ್ನು ಮಾಡುವುದಾಗಿದೆ. ತೇಜಮ್ಮ ಆರಾಧನೆ ಒಂದು ಸಂಸ್ಕೃತಿಯ ದೇವತಾ ಆರಾಧನೆಯಾಗಿದ್ದು ಜೊತೆಗೆ ಮನರಂಜನೆಯನ್ನು ನೀಡುವ ಹಬ್ಬವಾಗಿ ಪರಿಣಮಿಸಿದೆ. ಕುದುರೆಹಬ್ಬ ದಕ್ಷಿಣ ಕರ್ನಾಟಕದ ಜಾನಪದ ಕಲೆಯಾಗಿದ್ದು, ಅಲ್ಲಿಯ ಜನ ಸಮುದಾಯ ಜಾನಪದ ಸೊಗಡನ್ನು ಬಿತ್ತರಿಸುವ ಮೂಲಕ ಕುದುರೆಯನ್ನು ದೇವರೆಂದು ಭಾವಿಸಿ ಭಕ್ತಿ, ಪ್ರೀತಿ , ಸಂತೋಷ, ಹರ್ಷ, ತನ್ಮಯತೆಯಿಂದ ಆಚರಣೆ ಮಾಡುತ್ತಾರೆ. ಅದು ತಲೆ ತಲಾಂತರದಿಂದ ಪೀಳಿಗೆಯಿಂದ ಪೀಳಿಗೆಗೆ ಪ್ರಸಾರ ಮಾಡುವ ಒಂದು ಜೀವಂತ ಆರಾಧನಾ ಕಲೆಯಾಗಿ ನಿರೂಪಿತಗೊಂಡಿದೆ. ದೇವರ ವಾಹನವಾಗಿ ಕುದುರೆಯನ್ನು ಪೂಜಿಸುವ ಕುರುಬರ ಜನಾಂಗ ಮತ್ತು ಕರಕುಶಲಗಾರರು ತಮ್ಮ ಆರಾಧ್ಯದೇವರು ಎಂಬ ಕಲ್ಪನೆಯನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಮೈಲಾರಲಿಂಗನ ಸಂಪ್ರದಾಯ, ಬೀರಲಿಂಗೇಶ್ವರನ ಸಂಪ್ರದಾಯದಲ್ಲಿ ಮಹಾರಾಷ್ಟ್ರದ ಸಾತಾರಜಿಲ್ಲೆ, ಸೊಲ್ಲಾಪುರ ಮುಂತಾದ ಭಾಗದ ಜನರು ಕುದುರೆಯ ಆರಾಧನೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ‘ಕುದುರೆ’ ಶುಭಸಂಕೇತ, ಚಲನಶೀಲತೆಯ ಪ್ರತೀಕ, ಶಿಸ್ತು, ಸಂಯಮ, ಸಭ್ಯತೆಯ ಧ್ಯೋತಕ ಎಂದು ನಂಬಿಕೊಂಡು ಬಂದಿದ್ದಾರೆ. ಈ ಎಲ್ಲ ಬಗೆಯ ಆರಾಧನೆಗಳು ಕುದುರೆಗೆ ಇರುವ ಗೌರವ ಸೂಚಕವಾದ ಪಾರಂಪರಿಕ ಸಂಗತಿಗಳಾಗಿ ರೂಪಗೊಂಡಿವೆ. ಒಂದು ಪ್ರಾಣಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಅದರ ನಂಬಿಕೆಯ ನಿರಾಳ ಮನಸ್ಸಿನ ಭಾವವೇ ಅದರ ಘನತೆಯನ್ನು ಇಮ್ಮಡಿಗೊಳಿಸಿದೆ.