ಇರುಳೆಲ್ಲವೂ ಭಜನೆ,
ಎಂಟುಗ್ರಹ ಒಟ್ಟಿಗೇ ಸೇರಿರುವಾಗ
ಏನೋ ಎಂತೋ ಎಂದು
ಇರುಳೆಲ್ಲವೂ ಭಜನೆ!

ಇದ್ದಕಿದ್ದಂತೆ ನೆಲಗುಡುಗಿ ಮನೆಮಠವೆಲ್ಲ
ಪುಡಿಯಾಗಿ ಹೋಗುವುದೆಂದು,
ಮೇಲಿನಾಕಾಶವೇ ರಪ್ಪನೆ ಬಿದ್ದು
ರಂಪವಾಗುವುದೆಂದು,
ಬಿರುಗಾಳಿ ಭೋರ್ಗರೆದು ಎಲ್ಲರೂ ತರಗೆಲೆಯಂತೆ
ತೂರಿ ಹೋಗುವರೆಂದು,
ಮೋಡದ ದಂಡು ಗುಡುಗು-ಮಿಂಚನು ಕರೆದು
ಸುಟ್ಟು ಹಾಕುವುದೆಂದು,
ನಾಳೆಯ ಬೆಳಗು ಹೊತ್ತುಹುಟ್ಟದೆಯೆ ಬರಿಯ
ಕತ್ತಲೇ ಕವಿಯುವುದೆಂದು,
ಏನೇನೋ ಬಹುರೂಪಗಳ ಭೀತಿಯನುಂಡು
ಈಗ ಭಜನೆ ಮಾಡುತ್ತಿದ್ದಾರೆ ಈ ಸಾತ್ವಿಕರು.
ದಿನವೂ ನಾವು ಕಂಡಂತೆ ಇವರೆಲ್ಲ
ಪ್ರಥಮ ವರ್ಗಕ್ಕೆ ಸೇರಿರುವ ಠಕ್ಕರು!
ಜೀವಗಳ್ಳರ ಜಪಕ್ಕೆ ಜಗ್ಗುವನೆ ದೇವರು?
ಈ ಒಂದು ದಿನ ಕಳೆದು ಬೆಳಗಾದಾಗ,
ಇವರ ಭಕ್ತಿಯ ರೀತಿ,
ದಬ್ಬೆ ಬಿಚ್ಚಿದ ಬಾಲ!
ನಾಳೆಯ ದಿವಸ ಕಾಲಡಿಯ ನೆಲೆ ಭದ್ರವೆಂದರಿತಾಗ,
ಇನ್ನೊಂದು ಸಲ ಅಷ್ಟಗ್ರಹಕೂಟವಾಗುವತನಕ
ಇವರನ್ನು ಹಿಡಿಯುವರು ಯಾರು?