೨೬. ಕಷ್ಟದಿಂದ ಸಂಪಾದಿಸಿದ ಫಲ ಹೃದ್ಯವಾಗದೇ ಇರುತ್ತದೆಯೇ? ಈಶ್ವರನು ಮನಪ್ರೀತಿಯಿಂದ

ವ|| ಆಗಳೀಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಮಂಜರಿಕಾಸ್ತ್ರಮೆಂಬ ಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ ಮೂವತ್ತುಮೂದೇವರುಂ ತಂತಮ್ಮ ನಚ್ಚಿನಂಬುಗಳಂ ತಂದೀಯೆ ಗುಣಾರ್ಣವಂ ಸಂಪೂರ್ಣ ಮನೋರಥನಾಗಿರ್ದಾಗಳಿಂದ್ರಂ ಪರಾಕ್ರಮಧವಳನ ಪರಾಕ್ರಮಕ್ಕಮೇಗೆಯ್ವ ತೆಱನುಮಱಯದೆಯುಮತಿಸ್ನೇಹದಿಂ ಪುಷ್ಪವೃಷ್ಟಿಯುಮನಾನಂದಬಾಷ್ಪ ವೃಷ್ಟಿಯುಮನೊಡನೊಡನೆ ಸುರಿದು ಪಲವು ದಿವಸಮುಗ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶ್ರಮಂ ಪೋಗೆ ಕೆಲವು ದಿವಸಮನೆಮ್ಮ ಲೋಕದೊಳ್ ವಿಶ್ರಮಿಸಿ ಬರ್ಪೆ ಬಾ ಪೋಪಮೆಂದು ತನ್ನೊಡನೆ ರಥಮನೇಱಸಿಕೊಂಡು ಗಗನತಳಕ್ಕೊಗೆದು ತನ್ನಮರಾವತೀಪುರಮನೆಯ್ದಿ ಮಗಂ ಬಂದೊಸಗೆಗೆ ಪೊೞಲೊಳಷ್ಟ ಶೋಭೆಯಂ ಮಾಡಿಸಿ ಪೊೞಲಂ ಪೊಕ್ಕಾಗಳ್-

ಮ|| ಪರಿತಂದಂದಮರಾವತೀಪುರದ ವಾರಸ್ತ್ರೀಯರೇನೀತನೇ
ನರನಾ ಖಾಂಡವಮೆಲ್ಲಮಂ ಶಿಖಿಗುಣಲ್ ಕೊಟ್ಟಾತನೀಗಳ್ ಮಹೇ|
ಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತಮಂ ಪೆತ್ತಾತನೇ ಸಾಹಸಂ
ಪಿರಿದುಂ ಚೆಲ್ವನುಮಪ್ಪನೆಂದು ಮನದೊಳ್ ಸೋಲ್ತೞ್ಕಱಂ ನೋಡಿದರ್|| ೨೭

ವ|| ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಗಳಪ್ಪ ಶೇಷಾಕ್ಷತಂಗಳನೀಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳುತ್ತುಂ ದೇವರಾಜನೊಡನೆ ದೇವಾಪ್ಸರೋನಿಚಯನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯಾಹಾರಂಗಳನೊಡನಾರೋಗಿಸಿ ತಂಬುಲಂಗೊಂಡು ತನ್ನ ತುಡುವ ತುಡುಗೆಗಳೆಲ್ಲಮಂ ತುಡಿಸಿ ಕಿರೀಟಿಯಂ ಕೋಟಿ ಮಾೞ್ಕೆಯಿಂ ಕೊಂಡಾಡಿ ಕೆಲವು ದಿವಸಮನಿರ್ದು ತನಗವಧ್ಯರುಮಸಾಧ್ಯರುಮಾಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬಱುವತ್ತು ಕೋಟಿ ರಕ್ಕಸರನೆನಗೆ ಗೆಲ್ದೀಯಲ್ವೇೞ್ಕುಮೆಂದು ಮಾತಳಿಯೆಂಬ ಸಾರಥಿವೆರಸು ವಿವಿಧಾಸ್ತ್ರಗರ್ಭಮಪ್ಪ ರಥಮಂ ಕೊಟ್ಟೊಡದನೇಱ ಪೋಗಿ-

ಮ|| ದನುಜಾನೀಕರದ ನಿಂದದೊಂದು ನೆಲೆಯಂ ಮುಟ್ಟುತ್ತೆ ಮಾದೇವನಿ
ತ್ತ ನಿಜೋಗ್ರಾಸ್ತ್ರದೆ ದೈತ್ಯರೆಂಬ ಪೆಸರಿಲ್ಲೆಂಬಂತುಟಂ ಮಾಡಿ ಬಂ|
ದೆನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದೊಂದು ಪೆಂಪಿಂದಮಿಂ
ದ್ರನೊಳರ್ಧಾಸನಮೇಱದೊಳ್ಪು ಹರಿಗಂಗಕ್ಕುಂ ಪೆಱಂಗಕ್ಕುಮೇ|| ೨೮

ಪ್ರಸಿದ್ಧವಾದ ದಿವ್ಯಾಸ್ತ್ರವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು ಅರ್ಜುನನನ್ನು ‘ಶತ್ರುಗಳನ್ನು ಗೆಲ್ಲುವವನಾಗು’ ಎಂದು ಹರಸಿದನು. ವ|| ಆಗ ಈಶ್ವರನು ಕೊಟ್ಟುದಕ್ಕೆ ಸಮಾನವಾದ ಬಹುಮಾನವೆಂದು ಗೌರೀದೇವಿಯು ಅಂಜರಿಕಾಸ್ತ್ರವೆಂಬ ಬಹು ಬೆಲೆಯುಳ್ಳ ಅಸ್ತ್ರವನ್ನು ವಿಕ್ರಮಾರ್ಜುನನಿಗೆ ಕೊಟ್ಟಳು. ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತ್ರಗಳನ್ನು ತಂದುಕೊಟ್ಟರು. ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನೋರಥನಾದನು. ಇಂದ್ರನು ಪರಾಕ್ರಮಧವಳನಾದ ಅರ್ಜುನನ ಶೌರ್ಯಪರಾಕ್ರಮಗಳಿಗೆ ಯಾವ ರೀತಿಯ ಸತ್ಕಾರ ಮಾಡಬೇಕೆಂಬುದನ್ನು ತಿಳಿಯದೆ ವಿಶೇಷವಾದ ಸ್ನೇಹದಿಂದ ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು. ‘ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸ ಪರಿಹಾರವಾಗುವ ಹಾಗೆ ಕೆಲವು ಕಾಲ ನಮ್ಮ ಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ’ ಎಂದು ತನ್ನ ಜೊತೆಯಲ್ಲಿಯೇ ತೇರನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು. ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು-

೨೭. ಅಮರಾವತೀ ಪಟ್ಟಣದ ವೇಶ್ಯಾಸ್ತ್ರೀಯರು ಓಡಿ ಬಂದು ಇವನೇ ಅರ್ಜುನನೇನು! ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು, ಈಗ ಮಹೇಶ್ವರನನ್ನು ಮೆಚ್ಚಿಸಿ ಶ್ರೇಷ್ಠವಾದ ಪಾಶುಪತಾಸ್ತ್ರವನ್ನು ಪಡೆದವನೆ. ಪರಾಕ್ರಮಶಾಲಿಯೂ ವಿಶೇಷ ಸೌಂದರ್ಯವಂತನೂ ಆಗಿದ್ದಾನೆ. ಎಂದು ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು. ವ|| ಹಾಗೆ ಕಡಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಮುಖಕಮಲದ ವಧುವಿನ ಸಂಬಂಧವುಳ್ಳ ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ದೇವೇಂದ್ರನೊಡನೆ ದೇವಲೋಕದ ಅಪ್ಸರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು. ದೇವೇಂದ್ರನು ಅರ್ಜುನನಿಗೆ ತನ್ನೊಡನೆ ಸ್ನಾನಮಾಡಿಸಿ ದಿವ್ಯಾಹಾರಗಳ ಸಹಪಂಕ್ತಿ ಭೋಜನವನ್ನು ಮಾಡಿದನು. ಜೊತೆಯಲ್ಲಿಯೇ ತಾಂಬೂಲವನ್ನು ಸ್ವೀಕರಿಸಿದನು. ತಾನು ಧರಿಸುವ ಎಲ್ಲ ಆಭರಣಗಳನ್ನು ತೊಡಿಸಿ ಅರ್ಜುನನನ್ನು ಕೋಟಿ ರೀತಿಯಿಂದ ಕೊಂಡಾಡಿದನು. ಕೆಲವು ದಿನಗಳಿದ್ದು ತಾನು ಕೊಲ್ಲಲು ಅಸಾಧ್ಯರಾಗಿದ್ದ ನಿವಾತಕವಚ ಕಾಲಕೇಯ ಪೌಲೋಮ ತುಳುತಾಳುಕರೆಂಬ ಅರುವತ್ತು ಕೋಟಿ ರಾಕ್ಷಸರನ್ನು ಗೆದ್ದು ಕೊಡಬೇಕು ಎಂದು ಕೇಳಿದನು. ಅರ್ಜುನನು ಸಾರಥಿಯಾದ ಮಾತಲಿಯೊಡನೆ ಕೂಡಿ ಅನೇಕ ರೀತಿಯ ಬಾಣಗಳಿಂದ ತುಂಬಿದ ತೇರನ್ನು ಹತ್ತಿ

೨೮. ರಾಕ್ಷಸ ಸಮೂಹವು ವಾಸಮಾಡುತ್ತಿದ್ದ ಸ್ಥಳವನ್ನು ಮುಟ್ಟಿದನು.

ವ|| ಅಂತು ದೇವಲೋಕದೊಳ್ ತನ್ನ ಮಾತೆ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ತು ಸೈರಿಸಲಾಱದೇಕಾಂತದೊಳ್ ಮೇಲೆ ಬಿೞ್ದೊಡೆ-

ಕಂ|| ಎಂದು ಪುರಂದರನರಸಿಯ
ಯಂದು ದಲೆನಗಬ್ಬೆಯೇ ತೊದಳ್ ನುಡಿಯದೆ ಪೋ|
ಗೆಂದೊಡದೊಂದಬ್ಬದೊಳೆ ಬೃ
ಹಂದಳೆಯಾಗೆಂದು ಮುನಿದು ಶಾಪವನಿತ್ತಳ್|| ೨೯

ವ|| ಇತ್ತೊಡೆಂತುಮಾನ್ ಪರಸ್ತ್ರೀಯರ ದೆಸೆಯೊಳಮಣ್ಣನ ನನ್ನಿಯ ವರ್ಷಾವಯೊಳಮೋತು ಪಿಡಿರೆಂ ನಿನ್ನ ನುಡಿಯೊಳೇ ದೋಷಮೆಂದು ತನ್ನ ಶೌಚದ ಮೇಗಣ ಕಲಿತನಮುಮಂ ಸೌಭಾಗ್ಯದ ಮೇಗಣ ಬಲ್ಲಾಳ್ತನಮುಮನಿಂದ್ರಲೋಕದಿಂ ಪೊಗೞಸಿ ಸುಖಮಿರ್ಪನ್ನೆಗಮಿತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಷ್ಠಿರ ಭೀಮಸೇನ ನಕುಳ ಸಹದೇವರುಂ ದ್ರೌಪದಿಯುಂ ವ್ಯಾಕುಳಚಿತ್ತರಾಗಿ-

ಸ್ರ|| ಆ ದಿವ್ಯಾಸ್ತ್ರಂಗಳಂ ಸಾಸಲೆ ನೆಗೞ್ದ ಪಾರಾಸರಂ ಪೇೞೆ ಮುನ್ನಂ
ಪೋದಂ ಸಂದಿಂದ್ರಕೀಲಕ್ಕದನಱವಮದೇನಾದುದೋ ಕಾರ್ಯಸಿದ್ಧಿ|
ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವಱಯಲ್ಬುರ್ಕುಮೇ ಬಾರದಲ್ಲಿಂ
ಪೋದಂ ವಿಕ್ರಾಂತತುಂಗಂ ಗಡಮದನಱಯಲ್ಕಾಗದಿನ್ನೆಲ್ಲಿ ಕಾಣ್ಬಂ|| ೩೦

ವ|| ಎಂದು ಪೋದ ದೆಸೆಯನಱಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವ್ಯೋಪದೇಶದೊಳಯ್ವರುಂ ಗಂಧಮಾದನಗಿರಿಗೆವಂದು ತದ್ಗಿರೀಂದ್ರದೊಳ್ ಭೀಮಸೇನಂ ದ್ರೌಪದಿಯ ಬಯಕೆಗೆ ಧನದನ ಕೊಳದೊಳಗಣ ಕನಕಕಮಳಂಗಳಂ ತರಲೆಂದು ಪೋಗಿ-

ಕಂ|| ಪ್ರಕಟಿತ ಸಾಹಸನಱುವ
ತ್ತು ಕೋಟಿ ಧನದಾನುಚರರನತಿ ರೌದ್ರಭಯಾ|
ನಕಮಾಗೆ ಕೊಂದು ಸೌಗಂ
ಕಕಾಂಚನಕಮಳಹರಣಪರಿಣತನಾದಂ|| ೩೧

ವ|| ಮತ್ತಂ ಜಟಾಸುರನೆಂಬಸುರನನಾ ಗಿರೀಂದ್ರಕಂದರದೊಳ್ ಸೀಳ್ದು ಸೀಱುಂಬುಳಾಡಿ ಕೆಲವು ದಿವಸಮನಿರ್ದೊಂದು ದಿವಸಮೊರ್ವನೆ ಬೇಂಟೆಯ ನೆವದಿಂದಲ್ಲಿಂ ತಳರ್ದು ಬಟ್ಟೆಯ ಕಣ್ಣೊಳಡ್ಡಂಬಿೞರ್ದ ವೃದ್ಧ ವಾನರನಂ ಕಂಡು-

ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತ್ರದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ ಬಂದನು. ವಿಶೇಷ ಮಹಾತ್ಮೆಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಸಮಪೀಠ)ವನ್ನು ಹತ್ತುವ ಸೌಭಾಗ್ಯವು ಅರ್ಜುನನಿಗಲ್ಲದೆ ಮತ್ತಾರಿಗೆ ಸಾಧ್ಯ. ವ|| ಹಾಗೆ ದೇವಲೋಕದಲ್ಲಿ ತನ್ನ ಮಾತೇ ಮಾತಾಗಿದ್ದ ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ರಂಭೆಯು ಸೋತು ಸಹಿಸಲಾರದೆ ರಹಸ್ಯವಾಗಿ ಬಂದು ಮೇಲೆ ಬಿದ್ದು ತನ್ನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದಳು.

೨೯. ‘ಎಲ್ಲಿಯವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ. ಕೆಟ್ಟ ಮಾತನಾಡದೆ ಹೋಗಿ ಎಂದು ಅವಳನ್ನು ಅರ್ಜುನನು ತಿರಸ್ಕರಿಸಿದನು. ರಂಭೆಗೆ ಕೋಪ ಬಂದಿತು. ‘ಒಂದು ವರ್ಷಕಾಲ ಬೃಹಂದಳೆಯಾಗು’ ಎಂದು ಶಾಪವನ್ನು ಕೊಟ್ಟಳು. ವ|| ಹೇಗೂ ನಮ್ಮಣ್ಣನ ಪ್ರತಿಜ್ಞೆಯ ವರ್ಷಾವಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ಸಂತೋಷದಿಂದ ಅಂಗೀಕಾರ ಮಾಡುತ್ತೇನೆ. ನಿನ್ನ ಮಾತಿನಲ್ಲಿ ದೋಷವೇನಿಲ್ಲ ಎಂದನು. ಹೀಗೆ ತನ್ನ ಶುದ್ಧನಡತೆಯೊಡನೆ ಕೂಡಿದ ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ ಇಂದ್ರಲೋಕದವರಿಂದ ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ ಈ ಕಡೆ ವಿಕ್ರಾಂತತುಂಗನಾದ ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದ್ರೌಪದಿ ಮೊದಲಾದವರು ಚಿಂತಾಕ್ರಾಂತರಾದರು.

೩೦. ಪ್ರಸಿದ್ಧನಾದ ವ್ಯಾಸಮಹರ್ಷಿಯು ದಿವ್ಯಾಸ್ತ್ರಗಳನ್ನು ಪಡೆಯಲೇಬೇಕು ಎಂದು ಹೇಳಲು ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು. ಅದೇನಾಯಿತೋ ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವಾಗುವುದಿಲ್ಲ. ಅರ್ಜುನನು ಇಂದ್ರಕೀಲದಿಂದ ಮುಂದೆ ಹೋದನೋ ಇಲ್ಲವೋ ಎಂಬುದನ್ನೂ ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ. ವ|| ಎಂದು ಅರ್ಜುನನು ಹೋದ ದಿಕ್ಕನ್ನು ತಿಳಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಯ ದಿವ್ಯೋಪದೇಶದಿಂದ ಅಯ್ದು ಮಂದಿಯೂ ಗಂಧಮಾದನಪರ್ವತಕ್ಕೆ ಬಂದರು. ಆ ಶ್ರೇಷ್ಠಪರ್ವತದಲ್ಲಿ ಭೀಮಸೇನನು ದ್ರೌಪದಿಯ ಆಶೆಯನ್ನು ತೀರಿಸುವುದಕ್ಕಾಗಿ ಕುಬೇರನ ಸರೋವರದಲ್ಲಿದ್ದ ಚಿನ್ನದ ಕಮಲಗಳನ್ನು ತರಲು ಹೋಗಿ

೩೧. ಸಾಹಸವನ್ನು ಪ್ರದರ್ಶಿಸಿ ಕುಬೇರನ ಅರವತ್ತು ಕೋಟಿ ಭಟರನ್ನು

ಚಂ|| ತೊಲಗೆನೆ ಬಟ್ಟೆಯಿಂ ತೊಲಗಲಾನಶಕ್ತನೆನಾರ್ಪೊಡೆನ್ನನಿನ್
ತೊಲಗಿಸಿ ಪೋಗು ನೀನೆನೆ ವೃಕೋದರನೊಯ್ಯನೆ ನಕ್ಕು ಬಾಲಮಂ|
ಸಲೆ ಮುರಿದೆತ್ತಲಾಟಿಸೆ ಧರಿತ್ರಿಗೆ ಕೀಲಿಸಿದಂತುಟಾಗೆ ದೋ
ರ್ವಲದ ಪೊಡರ್ಪುಗೆಟ್ಟು ನಡೆ ನೋಡಿ ಮರುತ್ಸುತನಂ ಮರುತ್ಸುತಂ|| ೩೨

ಕಂ|| ನೀನೆಮ್ಮಣ್ಣನೆ ವಂಶದ
ವಾನರನಲ್ಲಯ್ ವಲಂ ಮಹಾಬಲ ಪೇೞೇ|
ಕೀ ನಗದೊಳಿರ್ದೆಯೆನೆ ತ
ದ್ವಾನರನೞ್ಕರ್ತು ಭೀಮನೆಂಬಂ ನೀನೇ|| ೩೩

ವ|| ಎಂಬುದುಮಪ್ಪೆನೆಂದೊಡೆ ನಿಮ್ಮಣ್ಣನಪ್ಪಣುವನೆ ನಾನಪ್ಪೆನೆಂದು ಪೇೞ್ವುದುಮಾಗಳ್ ಸಾಷ್ಟಾಂಗಮೆಱಗಿ ಪೊಟವಟ್ಟ ಭೀಮಸೇನನಂ ಪರಸಿ-

ಕಂ|| ಎನ್ನಂತಪ್ಪೊಡವುಟ್ಟಿದ
ರಿನ್ನಿನಗೊಳರಾಗಲಹಿತರಿದಿರಾಂಪರೆ ಪೇೞು|
ನಿನ್ನಂ ಪಗೆವರ ಬೇರೊಳ್
ಬೆನ್ನೀರಂ ಪೊಯ್ದು ನಿನಗೆ ಮಾೞ್ಪೆಂ ಧರೆಯಂ|| ೩೪

ವ|| ಎಂಬುದುಂ ಭೀಮಸೇನನಿಂತೆಂದಂ-

ಮ|| ಬೆಸನಂ ಪೂಣ್ದು ಕಡಂಗಿ ಪಾಯ್ದು ಕಡಲಂ ಮುಂ ಪೂಣ್ದರಂ ಕೊಂದು ಪೊ
ಕ್ಕು ಸಮಂತಾಗಡೆ ಲಂಕೆಯಂ ಬನಮನಾಟಂದುರ್ಕಿ ಕಿೞಕ್ಕಿ ಸಂ|
ತಸಮಂ ಸೀತೆಗೆ ಮಾಡಿ ಸುಟ್ಟು ಪೊೞಲಂ ಕಾಳಾನಳಂಗಿತ್ತು ಬೇ
ವಸಮಂ ರಾಮನಿನುಯ್ದ ನೀಂಬರೆಗಮೇನಾ ಕೌರವರ್ ಗಂಡರೇ|| ೩೫

ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು ಬಂದನು.

೩೨. ಮತ್ತು ಜಟಾಸುರನೆಂಬ ರಾಕ್ಷಸನನ್ನು ಆ ಪರ್ವತದ ಗುಹೆಯಲ್ಲಿ ಸೀಳಿ ಚೆಲ್ಲಾಪಿಲ್ಲಿ ಮಾಡಿ ಅಲ್ಲಿ ಕೆಲವು ದಿವಸವಿದ್ದನು. ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು ದಾರಿಯ ಎದುರಿಗೆ ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು ‘ದಾರಿಯಿಂದ ತೊಲಗು’ ಎಂದನು. ಅದಕ್ಕೆ ಆ ಕಪಿಯು ತೊಲಗಲಶಕ್ತನಾಗಿದ್ದೇನೆ. ನಿನಗೆ ಸಾಮರ್ಥ್ಯವಿದ್ದರೆ ನೀನೇ ನನ್ನನ್ನು ತೊಲಗಿಸಿ ಹೋಗು’ ಎಂದಿತು. ಭೀಮನು ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ಬಗ್ಗಿಸಿ ಎತ್ತಲು ಪ್ರಯತ್ನಿಸಿದರೂ ಭೂಮಿಗೆ ಬೆಸೆದಿರುವಂತಿರಲು ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೇ ವಿನಾ ಭೀಮಸೇನನು ಆ ವಾನರನ ಬಾಲವನ್ನು ಅಲುಗಿಸಲೂ ಆಗಲಿಲ್ಲ. ಆಗ ಆಂಜನೇಯನನ್ನು ದೀರ್ಘವಾಗಿ ನೋಡಿ

೩೩. ‘ನೀನು ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ (ಆಂಜನೇಯನೇ) ಅಲ್ಲವೇ? ಪರಾಕ್ರಮಶಾಲಿಯೇ ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು’ ಎಂದು ಕೇಳಿದನು. ಆ ವಾನರನು ಪ್ರೀತಿಸಿ ನೋಡಿ ಓಹೋ ಭೀಮನೆಂಬುವವನು ನೀನೆಯೊ ವ|| ಎನ್ನಲು ‘ಭೀಮನು ನಾನು’ ಎಂದನು. ಹೌದು, ಹಾಗಾದರೆ ನಿಮ್ಮಣ್ಣನಾದ ಹನುಮಂತನು ನಾನೆಂಬುದೂ ಸತ್ಯ ಎಂದನು, ಆಗ ಸಾಷ್ಟಾಂಗ ನಮಸ್ಕಾರ ಮಾಡಿದ ಭೀಮನನ್ನು ಆಂಜನೇಯನು ಹರಸಿದನು.

೩೪. ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ. ನಿನ್ನನ್ನು ದ್ವೇಷಿಸುವವರ ಬೇರಿನಲ್ಲಿ ಬಿಸಿನೀರನ್ನು ಸುರಿದು ನಿನಗೆ ರಾಜ್ಯವನ್ನು ದೊರಕಿಸುತ್ತೇನೆ ಎಂದನು. ವ|| ಅದಕ್ಕೆ ಭೀಮಸೇನನು ಹೀಗೆ ಹೇಳಿದನು.

೩೫. ಅಣ್ಣಾ ; ಕಾರ್ಯ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ ಪ್ರತಿಜ್ಞೆಮಾಡಿದ್ದವರನ್ನು ಕೊಂದೆ, ಆಗಲೇ ಲಂಕಾಪ್ರವೇಶಮಾಡಿದೆ, ಅಶೋಕವನ್ನಾಕ್ರಮಿಸಿ ಉತ್ಸಾಹದಿಂದ ಉಬ್ಬಿ (ಅದನ್ನು) ನಾಶಪಡಿಸಿದೆ. ಸೀತಾದೇವಿಗೆ ಸಂತೋಷವನ್ನುಂಟುಮಾಡಿದೆ. (ಲಂಕಾ) ಪಟ್ಟಣವನ್ನು ಸುಟ್ಟು ಹಾಕಿದೆ (ಕಾಲಾಗ್ನಿಗೆ ಕೊಟ್ಟು) ರಾಮನ ದುಖವನ್ನು ಪರಿಹಾರಮಾಡಿದೆ. ನಿನ್ನವರೆಗೂ (ನಿನ್ನನ್ನೂ ಪ್ರತಿಭಟಿಸುವಷ್ಟು)

ಕಂ|| ಎನಗೆ ದಯೆಗೆಯ್ವುದೊಂದನೆ
ಮೊನೆಯೊಳ್ ವಿಜಯಂಗೆ ವಿಜಯಮಾಗಿರೆ ನೀಮಾ|
ತನ ಕೇತನದೊಳ್ ಫಣಿಕೇ
ತನಬಲಕುತ್ಪಾತಕೇತುವಪ್ಪುದೆ ಸಾಲ್ಗುಂ|| ೩೬

ವ|| ಎಂದು ಬೇಡಿಕೊಂಡೊಡದೇವಿರಿದಿತ್ತೆನೆಂದಣುವನದೃಶ್ಯಮಾದನಾಗಳ್ ಭೀಮಸೇನಂ ಬೀಡಿಂಗೆ ವಂದು ಧರ್ಮಪುತ್ರಂಗಾ ಮಾತೆಲ್ಲಮಂ ಪೇೞ್ದು ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪನ್ನೆಗಮಿತ್ತ ವಿಬುಧವನಜವನಕಳಹಂಸನುಂ ಪಲವುಂ ದಿವಸಮಗಲ್ದಿರ್ದ ತನ್ನೊಡವುಟ್ಟಿದರಂ ನೆನೆದು ಪೋಪೆನೆಂದಿಂದ್ರನಂ ಬೀೞ್ಕೊಂಡು ತನಗೆ ದೇವೇಂದ್ರನಿತ್ತ ಐಂದ್ರಮೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯ್ಕೊಂಡು ದೇವಸ್ತ್ರೀಯರ ಮನಮನಿೞ್ಕುಳಿಗೊಂಡಿಂದ್ರಂ ತನ್ನ ಪುಷ್ಪಕಮನೇಱಸಿ ಮಾತಳಿಯಂ ಸಾರಥಿಯಾಗಲ್ವೇೞ್ದು ಕೞಪೆ ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆವಂದು ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ತನ್ನ ಬರವನೆ ಪಾರುತ್ತಿರ್ದ ಧರ್ಮಪುತ್ರನ ಮರುತ್ಸುತನ ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಮರ್ಚಿಸಿ ತದೀಯಾಶೀರ್ವಚನಮನಾಂತು ತನಗ ಪೊಡವಟ್ಟ ನಕುಳ ಸಹದೇವರಿರ್ಬರುಮನೞ್ಕಱಂ ಪರಸಿ ಬೞಯಮಿಂದ್ರಕೀಲನಗೇಂದ್ರದೊಳೀಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತ್ರಮಂ ತೋಱ ತನ್ನನಿಂದ್ರನೊಡಗೊಂಡು ಪೋದುದುಮನಿಂದ್ರಲೋಕದೊಳಾತನಲ್ಲಿ ಪಡೆದ ಮಹಿಮೆಯುಮನಱಯೆ ಪೇೞ್ದು ನಾವಿಲ್ಲಿರಲ್ಬೇಡ ದ್ವೈತವನದೊಳಿರ್ಪಂ ಬನ್ನಿಮೆಂದು ಮಾತಳಿಯಂ ಬೀೞ್ಕೊಟ್ಟು ಕೞಪಿ ನಿಜಪರಿಜನಸಹಿತಂ ಬಂದು ಸುಖಮಿರ್ಪನ್ನೆಗಮೊಂದು ದಿವಸಮೊಂದು ಮಾಯಾ ಮತ್ತಹಸ್ತಿ-

ಮ|| ಮಸಕಂ ಕಾಯ್ಪು ಜವಂ ಜವಂಗಮಿದಿರೊಳ್ ನೋಡಲ್ಕಗುರ್ವಾಗೆ ಮಾಂ
ದಿಸಿವಿ ವಂದುದು ಕೊಂದುದೆಂದು ಭಯದಿಂ ವಿಪ್ರರ್ ತೆರಳ್ದೋಡೆ ತಾ|
ಪಸರಂ ಬೆರ್ಚಿಸಿ ತೂಳ್ದಿ ಬೇಳ್ವರಣಿಯಂ ಕೊಂಡಾಶ್ರಮಕ್ಕಿಂತು ಬೇ
ವಸಮಂ ಮಾಡುವುದಾಯ್ತದೊಂದು ವಿಭವಂ ಮತ್ತೇಭವಿಕ್ರೀಡಿತಂ|| ೩೭

ವ|| ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್ ಬಂದು ಯುಷ್ಠಿರಂಗಱಪಿ ನೀಮೆಮಗದಱ ಕೈಗೆ ಪೋದರಣಿಯಂ ತಂದೀಯದಾಗಳಿಷ್ಟಿ ವಿಘ್ನಂಗಳಂ ಮಾಡಿದಿರೆಂದೊಡಯ್ವರುಂ ಪ್ರಚಂಡಕೋದಂಡಹಸ್ತರ್ ಕಾಳಕಾಳಸ್ವರೂಪಮಂ ಆ ಕೌರವರು ಶೂರರೇ ಏನು

೩೬. ‘ನನಗೆ ದಯಮಾಡಿ ಒಂದನ್ನು ಕರುಣಿಸಬೇಕು; ಯುದ್ಧದಲ್ಲಿ ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು? ಎಂದು ಬೇಡಿದನು. ವ|| ‘ಅದೇನು ದೊಡ್ಡದು ಆಗಬಹುದು’ ಎಂದು ಹೇಳಿ ಹನುಮಂತನು ಅದೃಶ್ಯನಾದನು. ಭೀಮಸೇನನು ಬೀದಿಗೆ ಬಂದು ಧರ್ಮರಾಜನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿದನು. ಎಲ್ಲರೂ ವಿಕ್ರಮಾರ್ಜುನನ ಬರವನ್ನೇ ಇದಿರುನೋಡುತ್ತಿದ್ದರು. ಈ ಕಡೆ ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನೂ ಅನೇಕಕಾಲ ಅಗಲಿದ್ದ ತನ್ನ ಸಹೋದರರನ್ನು ಜ್ಞಾಪಿಸಿಕೊಂಡು ಹಿಂದಿರುಗಲು ಮನಸ್ಸುಮಾಡಿ ಇಂದ್ರನನ್ನು ಬೀಳ್ಕೊಟ್ಟು ತನಗೆ ದೇವೇಂದ್ರನು ಕೊಟ್ಟ ಐಂದ್ರವೆಂಬ ದಿವ್ಯಾಸ್ತ್ರವನ್ನೂ ನೈಷ್ಠಿಕವೆಂಬ ಮುಷ್ಟಿಯನ್ನೂ (ಮಂತ್ರವಿಶೇಷ) ಅಂಗೀಕಾರಮಾಡಿ ಇಂದ್ರನು ತನ್ನನ್ನು ಅವನ ಪುಷ್ಪಕವಿಮಾನವನ್ನು ಹತ್ತಿಸಿ ಮಾತಲಿಯನ್ನು ಸಾರಥಿಯಾಗಿರ ಹೇಳಿ ಕಳುಹಿಸಲು ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದನು. ವರ್ಷಾಕಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ ತನ್ನ ಬರವನ್ನೇ ಎದುರು ನೋಡುತ್ತಿದ್ದ ಧರ್ಮರಾಜ ಮತ್ತು ಭೀಮರ ಪಾದಕಮಲಗಳನ್ನು ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ ಅವರ ಆಶೀರ್ವಾದವನ್ನು ಧರಿಸಿದನು. ತನಗೆ ನಮಸ್ಕಾರಮಾಡಿದ ನಕುಲಸಹದೇವರಿಬ್ಬರನ್ನೂ ಪ್ರೀತಿಯಿಂದ ಆಶೀರ್ವಾದ ಮಾಡಿದನು. ಆನಂತರ ಇಂದ್ರಕೀಲಪರ್ವತದಲ್ಲಿ ಈಶ್ವರನ ವರಪ್ರಸಾದದಿಂದ ಪಡೆದ ದಿವ್ಯಾಸ್ತ್ರ (ಪಾಶುಪತಾಸ್ತ್ರ)ವನ್ನು ತೋರಿ ತನ್ನನ್ನು ಇಂದ್ರನು ಜೊತೆಯಲ್ಲಿ ಕರೆದುಕೊಂಡು ಹೋದುದನ್ನೂ ಇಂದ್ರಲೋಕದಲ್ಲಿ ಇಂದ್ರನಿಂದ ಪಡೆದ ಮಹಿಮೆ (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿದನು. ನಾವಿಲ್ಲಿರುವುದು ಬೇಡ ದ್ವೆ ತವನದಲ್ಲಿರೋಣ ಬನ್ನಿ ಎಂದು ಹೇಳಿ, ಮಾತಲಿಯನ್ನು ಕಳುಹಿಸಿಕೊಟ್ಟು ತನ್ನ ಬಂಧುಗಳ ಸಮೇತ ದ್ವೆ ತವನಕ್ಕೆ ಬಂದು ಸುಖವಾಗಿದ್ದನು.

೩೭. ಹಾಗಿರುವಾಗ ‘ರಭಸ ಕೋಪ ಮತ್ತು ವೇಗದಲ್ಲಿ ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ ಹಾಗೆ ಇರುವ ಮಾಯಾಗಜವು ಬಂದಿತು! ತಡೆಯಿರಿ, ಕೊಂದುಹಾಕುತ್ತಿದೆ’ ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಿದರು. ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು (ಅಗ್ನಿಯನ್ನುಂಟುಮಾಡಲು ಉಪಯೋಗಿಸುವ ಕಡೆಗೋಲು) ಕೊಂಡು ಓಡಿತು. ವ|| ಆಗ ಆ ಮದ್ದಾನೆಯ ಕೋಲಾಹಲವನ್ನು ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ

ಕೆಯ್ಕೊಂಡು ಮದಾಂಧಗಂಧಸಿಂಧುರದ ಬೞಯಂ ನಿರ್ವಂದದಿಂ ತಗುಳ್ವುದುಮಾ ಮಾಯಾ ಮತ್ತಹಸ್ತಿಯುಂ ಮೂಱು ಜಾವರಂಬರಂ ರೂಪುದೋಱ ಪರಿದು ಬೞಯಮದೃಶ್ಯಮಾದೊಡಯ್ವರುಂ ಚೋದ್ಯಂ ಬಟ್ಟು ಘರ್ಮಕಿರಣಸಂತಾಪತಾಪಿತಶರೀರರೊಂದಾಲದ ಮರದ ಕೆಳಗೆ ವಿಶ್ರಮಿಸೆ ಧರ್ಮ ಪುತ್ರಂ ನೀರಡಸಿ ಸಹದೇವನನೆಲ್ಲಿಯಾದೊಡಂ ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದುದು ಮಂತೆಗೆಯ್ವೆನೆಂದು ಕೂಜಜ್ಜಳಚರಕುಳಕಳರವದೊಳಂ ಕಮಳಕುವಳಯರಜಕಷಾಯ ಪರಿಮಿಳದಳಿಪಟಳಜಟಿಳಮಾಗಿ ಬಂದು ತೀಡುವ ಮಂದಾನಿಳನಿಂ ನೀರ ದೆಸೆಯನಱದು ಪೋಗೆ ವೋಗೆ-

ಕಂ|| ಬಕ ಕಲಹಂಸ ಬಲಾಕ
ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱ|
ತ್ತು ಕೊಳಂ ಪರಿ ವಿಕಸಿತ ಕನ
ಕ ಕಂಜಕಿಂಜಲ್ಕಪುಂಜಪಿಂಜರಿತಜಳಂ|| ೩೮

ವ|| ಅಂತು ಸೊಗಯಿಸುವ ಸರೋವರಮಂ ಕಂಡು ತಾನುಂ ನೀರಡಸಿದನಪ್ಪುದಱಂದದಱ ಕೆಲದ ಲತೆಯ ಮೆಳೆಯೊಳ್ ಬಿಲ್ಲುಮಂಬುಮಂ ಸಾರ್ಚಿ ಕೊಳನಂ ಪೊಕ್ಕು ಕರಚರಣ ವದನಪ್ರಕ್ಷಾಲನಂಗೆಯ್ದು ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳೊಂದು ದಿವ್ಯವಚನಮಾಕಾಶದೊಳ್-

ಕಂ|| ತೋಯಜಷಂಡಮನಿದನಾ
ನಾಯತಿಯಿಂ ಕಾವೆನೆನ್ನ ಮಾತಿಂಗಲೆ ಕೌಂ|
ತೇಯ ಮಱುಮಾತನಿತ್ತು ಮ
ದೀಯ ಸರೋವರದ ತೋಯಮಂ ಕುಡಿ ಕೊಂಡುಯ್|| ೩೯

ವ|| ಎಂಬುದುಮಾ ದಿವ್ಯವಚನಮನುಲ್ಲಂಘಿಸಿ ನೀರೞ್ಕೆಪೋಪಿನಂ ನೀರಂ ಕುಡಿದು ಪದ್ಯಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂ ಪೊಱಮಟ್ಟೊಂದೆರಡಡಿಯನಿಡುತೆ ಗತಪ್ರಾಣನಾಗಿ ಬಿೞರ್ದನಿತ್ತ ಧರ್ಮಪುತ್ರಂ ಸಹದೇವಂ ತಡೆದುದರ್ಕುಮ್ಮಳಿಸಿ ನಕುಲನ ಮೊಗಮಂ ನೋಡಿ ಸಹದೇವನೊಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದೊಡಂತೆಗೆಯ್ವೆನೆಂದು ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿೞರ್ದ ತಮ್ಮನಂ ಕಂಡು ಚೋದ್ಯಂಬಟ್ಟು-

ತಂದುಕೊಡದಿದ್ದರೆ ಯಜ್ಞವಿಘ್ನಮಾಡಿದವರಾಗುತ್ತೀರಿ ಎಂದರು. ಅಯ್ದು ಜನವೂ ಭಯಂಕರವಾದ ಬಿಲ್ಲನ್ನು ತರಿಸಿ ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ ಹಿಂದೆ ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು ಆ ಮಾಯಾಮದಗಜವು ಮೂರು ಜಾವದವರೆಗೂ ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು. ಅಯ್ದು ಜನವೂ ಆಶ್ಚರ್ಯಪಟ್ಟು ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ ಒಂದು ಆಲದಮರದ ಕೆಳಗೆ ವಿಶ್ರಮಿಸಿಕೊಂಡರು ಧರ್ಮರಾಜನು ಬಾಯಾರಿ ಸಹದೇವನನ್ನು ಎಲ್ಲಿಂದಲಾದರೂ ಬೇಗ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಮಾಡುತ್ತೇನೆ ಎಂದು ಶಬ್ದಮಾಡುತ್ತಿರುವ ಜಲಚರಪ್ರಾಣಿಗಳ ಕಲಕಲಶಬ್ದದಿಂದಲೂ ಕುಮಲಕನ್ನೆ ದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ಬಂದು ಬೀಸುವ ಮಂದಮಾರುತದಿಂದಲೂ ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದನು.

೩೮. ಬಕ, ಹಂಸ ಮತ್ತು ಬೆಳ್ಳಕ್ಕಿಗಳ ಸಮೂಹದ ನಯವಾದ ಶಬ್ದದಿಂದಲೂ ರಮ್ಯವಾಗಿ ಅರಳಿರುವ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಹಳದಿಯ ಬಣ್ಣವನ್ನುಳ್ಳ ನೀರಿನಿಂದಲೂ ಕೂಡಿದ ಸರೋವರವೊಂದು ಇದಿರಿನಲ್ಲಿ ಕಾಣಿಸಿಕೊಂಡಿತು. ವ|| ಹಾಗೆ ಸೊಗಯಿಸುತ್ತಿರುವ ಸರೋವರವನ್ನು ನೋಡಿ ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ ಬಳ್ಳಿಯ ಮೆಳೆಯಲ್ಲಿ ಬಿಲ್ಲನ್ನೂ ಬಾಣವನ್ನೂ ಇಟ್ಟು ಸರೋವರವನ್ನು ಪ್ರವೇಶಿಸಿ ಕೈಕಾಲುಮುಖವನ್ನು ತೊಳೆದುಕೊಂಡು ನೀರನ್ನು ಕುಡಿಯುವುದಕ್ಕೋಸ್ಕರ ತನ್ನ ಕೈಬೊಗಸೆಯನ್ನು ನೀಡಿದಾಗ ಒಂದು ಅಶರೀರವಾಣಿಯು ಆಕಾಶದಲ್ಲಿ ಹೀಗೆಂದಿತು.

೩೯. ‘ಈ ಕೊಳವನ್ನು ನಾನು ಎಚ್ಚರದಿಂದ ಕಾಯುತ್ತಿದ್ದೇನೆ. ಎಲೈ ಕೌಂತೇಯನೆ ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟು ನನ್ನ ಸರೋವರದ ನೀರನ್ನು ಕುಡಿದುಕೊಂಡು ಹೋಗು’ ವ|| ಎನ್ನಲು ಆ ದಿವ್ಯವಚನವನ್ನುಲಂಘನೆ ಮಾಡಿ ಬಾಯಾರಿಕೆ ಹೋಗುವವರೆಗೂ ನೀರು ಕುಡಿದು ಕಮಲಪತ್ರಗಳ ಸಮೂಹದಲ್ಲಿ ತಮ್ಮಣ್ಣನಿಗೆ ನೀರನ್ನು ತುಂಬಿಕೊಂಡು ಸರೋವರದಿಂದ ಹೊರಟನು. ಒಂದೆರಡು ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು. ಎಷ್ಟು ಹೊತ್ತಾದರೂ ಸಹದೇವನು ಹಿಂತಿರುಗಿ ಬರದಿದ್ದುದರಿಂದ

ಕಳವಳಪಟು  ಯುಷ್ಠಿರನು ನಕುಲನನ್ನು ನೋಡಿ ಸಹದೇವನನ್ನು ಕರೆದುಕೊಂಡು ನೀನರ‍್ನೂ ತೆಗೆದುಕೊಂಡು ಬಾ ಎಂದು ಹೇಳಿದನು.

ಕಂ|| ತಾನುಂ ಸರೋಜಷಂಡಮ
ನಾನತರಿಪು ಪೊಕ್ಕು ದಿವ್ಯಚನಮನದನಂ|
ತೇನು ಬಗೆಯದೆ ಕುಡಿದ
ಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ|| ೪೦

ವ|| ಅನ್ನೆಗಂ ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನೊಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂತೆಗೆಯ್ವೆನೆಂದು ಬಂದು ಕೊಳನ ತಡಿಯೊಳಚೇತನರಾಗಿ ಬಿೞರ್ದ ತಮ್ಮಂದಿರಿರ್ವರುಮಂ ಕಂಡು ವಿಸ್ಮಯಂಬಟ್ಟು-

ಕಂ|| ಆ ಕಮಳಾಕರಮಂ ಪೊ
ಕ್ಕಾಕಾಶಧ್ವನಿಯನುಱದೆ ಕುಡಿದರಿಭೂಪಾ|
ನೀಕಭಯಂಕರನುಂ ಗಡ
ಮೇಕೆಂದಱಯೆಂ ಬೞಲ್ದು ಜೋಲ್ದಂ ಧರೆಯೊಳ್|| ೪೧

ವ|| ಅನ್ನೆಗಮತ್ತ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ ಭೀಮಸೇನನಂ ನೀಂ ಪೋಗಿ ಮೂವರುಮನೊಡಂಗೊಂಡು ನೀರಂ ಕೊಂಡು ಬಾಯೆಂದೊಡಂತೆಗೆಯ್ವೆನೆಂದು ವಾಯುವೇಗದಿಂ ಬಂದು ಪುಂಡರೀಕಷಂಡೋಪಾಂತದೊಳ್ ವಿಗತಜೀವಿತರಾಗಿರ್ದ ಮೂವರನುಜರುಮಂ ಕಂಡಿದು ಮನುಜರಿಂದಾದುಪದ್ರವಮಲ್ಲ ಮೇನಾನುಮೊಂದು ದೇವತೋಪದ್ರವಮಾಗಲೆ ವೇೞ್ಕುಮೆಂದು

ಕಂ|| ಬಿಡದೆ ಕಡುಕೆಯ್ದ ದಿವ್ಯದ
ನುಡಿಗೆ ಕಿವುೞ್ಕೇಳ್ದು ಕುಡಿದು ನೀರಂ ಭೀಮಂ|
ಪಿಡಿದ ಗದೆವೆರಸು ಭೋಂಕೆನೆ
ಕೆಡೆದಂ ಗಿರಿಶಿಖರದೊಡನೆ ಕೆಡೆವಂತಾಗಳ್|| ೪೨

ವ|| ಅಂತು ನಾಲ್ವರುಂ ವಿಳಯಕಾಲವಾತಾಹತಿಯಿಂ ಕೆಡೆದ ಕುಲಗಿರಿಗಳಂತೆ ಕೆಡೆದು ವಿಗತಜೀವಿತರಾಗಿರ್ದ ಪದದೊಳತ್ತ ದುರ್ಯೋಧನನ ಬೆಸದೊಳಾತನ ಪುರೋಹಿತಂ ಕನಕಸ್ವಾಮಿಯೆಂಬಂ ಪಾಂಡವರ್ಗಾಭಿಚಾರಮಾಗೆ ಬೇಳ್ವ ಬೇಳ್ವೆಯ ಕೊಂಡದೊಳಗಣಿಂದ ಮಂಜನ ಪುಂಜದಂತಪ್ಪ ಮೆಯ್ಯುಂ ಸಿಡಿಲನಡಸಿದಂತಪ್ಪ ದಾಡೆಯುಮುರಿಯುರುಳಿಯಂತಪ್ಪ ಕಣ್ಣುಂ ಕೃತಾಂತನಂತಾಕಾರಮಾಗಿ ತೞತೞಸಿ ಪೊಳೆವ ಕತ್ತಿಗೆಯುಂ ಬೆರಸು ಪೊಱಮಟ್ಟು ಕೀರ್ತಿಗೆಯೆಂಬುಗ್ರದೇವತೆ ಬೆಸಸು ಬೆಸಸೆಂದು ಬೆಸನಂ ಬೇಡೆ ಪಾಂಡವರನೆಲ್ಲಿವೊಕ್ಕೊಡಂ ಕೊಲ್ಲೆಂದೊಡಂತೆ ಗೆಯ್ವೆನೆಂದು ಪೋಗೆಲ್ಲಿಯುಮಱಸಿ ಕಾಣದೆ ಕೊಳನ ತಡಿಯೊಳ್ ಬಿೞರ್ದ ನಾಲ್ವರುಮಂ ಕಂಡು ಬಾಪ್ಪು ಬೞ್ದೆನೆಂದು ತಿನಲ್ ಸಾರ್ವಾಗಳವರ್ಗಳ್ಗನಿತಂ ಮಾಡಿದ ದೈವಂ ಪ್ರತ್ಯಕ್ಷಮಾಗಿ ಗಜಱ ಗರ್ಜಿಸುತ್ತುಂ ಬಂದು-

೪೦. ಅವನೂ ಸರೋವರವನ್ನು ಪ್ರವೇಶಿಸಿ ಶತ್ರುಗಳನ್ನು ಅನಮಾಡಿಕೊಂಡಿದ್ದ ಆ ನಕುಲನು ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ಅವಿವೇಕದಿಂದ ಕುಡಿದ ವಿಷಪಾನ ಮಾಡಿದವರ ಹಾಗೆ ಬಿದ್ದನು. ವ|| ಆಗ ಧರ್ಮರಾಯನು ಇಬ್ಬರ ಬರುವಿಕೆಯನ್ನೂ ಕಾಣದೆ ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ ಅರ್ಜುನನನ್ನು ನೀನು ಬೇಗಹೋಗಿ ಆ ಮಕ್ಕಳುಗಳನ್ನೊಳಗೊಂಡು ನೀರನ್ನೂ ತೆಗೆದುಕೊಂಡು ಸಾವಕಾಶಮಾಡದೆ ಬಾ ಎಂದನು. ಹಾಗೆಯೇ ಮಾಡುತ್ತೇನೆ ಎಂದು ಅರ್ಜುನನು ಬಂದು ಕೊಳದ ದಡದಲ್ಲಿ ಸತ್ತು ಬಿದ್ದಿದ್ದ ಇಬ್ಬರು ತಮ್ಮಂದಿರನ್ನು ನೋಡಿ ಆಶ್ಚರ್ಯಪಟ್ಟನು.

೪೧. ಶತ್ರುರಾಜರ ಸಮೂಹಕ್ಕೆ ಭಯವನ್ನುಂಟುಮಾಡುವ ಅರ್ಜುನನೂ ಆ ಸರೋವರವನ್ನು ಪ್ರವೇಶಿಸಿ ಏನೆಂದು ತಿಳಿಯದೆ ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು. ವ|| ಅಷ್ಟರಲ್ಲಿ ಆ ಕಡೆ ಧರ್ಮರಾಯನು ಮೂವರು ತಮ್ಮಂದಿರ ಬರವನ್ನು ಕಾಣದೆ ಉತ್ಸಾಹಶೂನ್ಯನಾಗಿ (ಒಡೆದ ಮನಸ್ಸುಳ್ಳವನಾಗಿ) ಭೀಮಸೇನನನ್ನು ‘ನೀನು ಹೋಗಿ ಮೂವರನ್ನೂ ಕೂಡಿಕೊಂಡು ನೀರನ್ನೂ ತೆಗೆದುಕೊಂಡು ಬಾ’ ಎಂದನು, ‘ಹಾಗೆಯೇ ಮಾಡುತ್ತೇನೆ’ ಎಂದು ವಾಯುವೇಗದಿಂದ ಬಂದು ಸರೋವರದ ಸಮೀಪದಲ್ಲಿ ಸತ್ತು ಹೋಗಿದ್ದ ಮೂವರು ತಮ್ಮಂದಿರನ್ನೂ ನೋಡಿ ಇದು ಮನುಷ್ಯರಿಂದಾದ ಕೇಡಲ್ಲ ; ಯಾವುದಾದರೂ ದೇವತೆಯ ಹಿಂಸೆಯಾಗಿರಬೇಕೆಂದು ಊಹಿಸಿ

೪೨. ತನಗೂ ಅವಕಾಶಕೊಡದೆ ತಡೆದ ದೇವತೆಯ ಮಾತನ್ನು ಉದಾಸೀನಮಾಡಿ ನೀರನ್ನು ಕುಡಿದು ಹಿಡಿದ ಗದೆಯೊಡನೆಯೇ ಶಿಖರಸಹಿತವಾಗಿ ಪರ್ವತವು ಉರುಳುವಂತೆ (ಭೀಮ) ತಟಕ್ಕನೆ ಬಿದ್ದನು. ವ|| ಹಾಗೆ ನಾಲ್ಕು ಮಂದಿಯೂ ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಬಿದ್ದ ಕುಲಪರ್ವತಗಳಂತೆ ಕೆಡೆದು ಗತಪ್ರಾಣರಾಗಿದ್ದ ಸ್ಥಿತಿಯಲ್ಲಿ ಆ ಕಡೆ ದುರ್ಯೋಧನನ ಆಜ್ಞೆಯಿಂದ ಆತನ ಪುರೋಹಿತನಾದ ಕನಕಸ್ವಾಮಿಯೆಂಬುವನು ಪಾಂಡವರಿಗೆ ಮಾಟಮಾಡಲು ಒಂದು ಹೋಮಮಾಡುತ್ತಿದ್ದನು. ಆ ಯಜ್ಞಕುಂಡದಿಂದ ಕತ್ತಲೆಯ ಸಮೂಹದಂತಿರುವ ಶರೀರವೂ ಸಿಡಿಲನ್ನು ತುಂಬಿಕೊಂಡ

ಕಂ|| ಎಲೆ ಪಿಱತಿನಿ ಪೋ ಮುಟ್ಟದೆ
ತೊಲಗೀ ನಾಲ್ವರ್ಕಳಸುವನವರ್ಗಳ ಮೆಯ್ಯಿಂ|
ತೊಲಗಿಸಿ ಮುನ್ನಮೆ ಕಾದಿ
ರ್ದಲಂಘ್ಯಬಲನೆನಿಸಿದೆನಗೆ ನೀನಗ್ಗಳಮೇ|| ೪೩

ವ|| ಅದಲ್ಲದೆಯುಂ ನೀನೆ ಜಾತಿದೇವತೆಯಪ್ಪೊಡೆನ್ನೆಂಜಲನೆಂತು ತಿಂಬೆಯೆಂಬುದುಂ ಪಾಂಡವರ್ ಮುನ್ನಮೆ ನಿನ್ನ ಕೆಯ್ಗೆ ವಂದರೆನಗಮಾ ಬೆಸಂ ತಪ್ಪಿದುದಾನಾರಂ ತಿಂಬೆಂ ಪೇೞೆನೆ ನಿನ್ನನಾವನೊರ್ವನಕಾರಣಂ ಪುಟ್ಟಿಸಿದನಾತನನೆ ತಿನ್ನೆಂಬುದುಮಂತೆಗೆಯ್ವೆನೆಂದು ಪೋಗಿ-

ಕಂ|| ಕನಕನ ಬೇಳ್ವೆ ತಗುಳ್ದುದು
ಕನಕನನೆಂಬೊಂದು ಮಾತು ಧರೆಗೆಸೆಯೆ ಸುಯೋ|
ಧನನ ಪುರೋಹಿತನಪ್ಪಾ
ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್|| ೪೪

ವ|| ಅನ್ನೆಗಮಿತ್ತ ಕೃತಾಂತನಂದನಂ ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ-

ಕಂ|| ಪೋದರನೊಡಗೊಂಡು ಬರಲ್
ಪೋದರುಮಾ ಪೋದ ಪೋಗೆ ಪೋದರ್ ತಡೆಯಲ್|
ಪೋದವರಲ್ತೆಂದು ಮನ
ಖೇದಂಬೆರಸೆಯ್ದವಂದನಬ್ಜಾಕರಮಂ|| ೪೫