ಕಂ|| ಶ್ರೀಯಂ ಭುಜಬಳದಿಂ ನಿ

ರ್ದಾಯಾದ್ಯಂ ಮಾೞ್ಪ ಬಗೆಯಿನವಿಕಳನಿಯಮ|
ಶ್ರೀಯನಳವಡಿಸಿ ನಿಂದ ಧ
ರಾಯುವತೀಶನನುದಾತ್ತನಾರಾಯಣನಂ|| ೧

ಕಂಡು ನಿಜತನಯನಳವೆರ್ದೆ
ಗೊಂಡಿರೆ ಮುದುಪಾರ್ವನಾಗಿ ಮೆಲ್ಲನೆ ಸಾರ್ವಾ|
ಖಂಡಳನಂ ಕಾಣಲೊಡಂ
ಗಾಂಡಿವಿಗಿರದುರ್ಚಿ ಪಾಯ್ದುವಶ್ರುಜಲಂಗಳ್|| ೨

ವ|| ಅಂತು ಮನದೊಳಾದ ಮೋಹರಸಮೆ ಕಣ್ಣಿಂ ತುಳುಂಕುವಂತೆ ಪೊಱಪೊಣ್ಮುವ ನಯನಜಲಂಗಳನುತ್ತರೀಯವಲ್ಕಲವಸ ನೋಪಾಂತದೊಳೊತ್ತುತ್ತುಮತಿಥಿಗತಿಥಿಸತ್ಕಾರಮೆಲ್ಲಮಂ ನೆಯೆ ಮಾಡಿದಾಗಳಿಂದ್ರಂನರೇಂದ್ರತಾಪಸನನಿಂತೆಂದಂ-

ಕಂ|| ನೀನಾರ್ಗೆ ನಿನ್ನ ಪೆಸರೇ
ನೀ ನಿಯಮಕ್ಕೆಂತು ಮೆಯ್ಯನೊಡ್ಡಿದೆಯಿದು ದಲ್|
ತಾನಾಶ್ಚರ್ಯಮಿದೇನ
ಜ್ಞಾನಿಯವೋಲ್ ತಪಕೆ ಬಿಲ್ಲುಮಂಬುಂ ದೊರೆಯೇ|| ೩

ವ|| ಎನೆ ಸಾಹಸಾಭರಣನಿಂತೆಂದಂ-

ಕಂ|| ನಿನ್ನೆಂದಂತುಟೆ ಮೋಕ್ಷ
ಕ್ಕೆನ್ನಿರ್ಪಿರವಘಟಮಾನವೈಹಿಕದ ತೊಡ|
ರ್ಪೆನ್ನಿರವಿನೊಳುಂಟಱಪದೆ
ನಿನ್ನಂ ಪುಸಿಯಾಡಿ ಕಾಡೆನಗೇಂ ದೊರೆಯೇ|| ೪

ಮ|| ನಿನಗಂ ಪೇೞ್ವೊಡೆ ಪಾಂಡುರಾಜತನಯಂ ಗಾಂಡೀವಿಯೆಂ ದಾಯಿಗಂ
ಗೆ ನೆಲಂ ಜೂದಿನೊಳೊತ್ತೆವೋಗೆ ಬನಮಂ ಪೊಕ್ಕಣ್ಣನೆಂದೊಂದು ಮಾ|
ತನಣಂ ವಿಱದೆ ನಿಂದು ಶಂಕರನ ನೀನಾರಾಸೆಂದಿಂತಿದಂ
ಮುನಿ ಪಾರಾಶರನೊಲ್ದು ಪೇೞೆ ಹರ ಬರ್ಪನ್ನಂ ತಪಂಗೆಯ್ದಪೆಂ|| ೫

೧. ತನ್ನ ಬಾಹುಬಲದಿಂದ ಜಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಅಭಿಪ್ರಾಯದಿಂದ ಸ್ವಲ್ಪವೂ ಊನವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯೊಡನೆ ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು ಇಂದ್ರನು ಕಂಡನು.

೨. ತನ್ನ ಮಗನ ಪರಾಕ್ರಮವನ್ನು ನೋಡಿ ಎದೆಯು ಸೂರೆಗೊಂಡಿತು. ಮುದಿಬ್ರಾಹ್ಮಣನ ವೇಷದಲ್ಲಿ ಬರುತ್ತಿದ್ದ ಇಂದ್ರನನ್ನು ನೋಡಿ ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿತು. ವ|| ಹಾಗೆ ಮನಸ್ಸಿನಲ್ಲುಂಟಾದ ಮೋಹರಸವೇ ಕಣ್ಣಿನಿಂದ ತುಳುಕುವಂತೆ ಹೊರಹೊರಡುವ ಕಣ್ಣೀರನನು ಮೇಲೆ ಹೊದೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ಅತಿಥಿಯಾದ ಇಂದ್ರನಿಗೆ ಅತಿಥಿ ಸತ್ಕಾರವೆಲ್ಲವನ್ನೂ ಮಾಡಿದಾಗ

೩. ನೀನಾರವನು? ನಿನ್ನ ಹೆಸರೇನು? ಈ ನಿಯಮಕ್ಕೆ ಶರೀರವನ್ನು ಏಕೆ ಅನಗೊಳಿಸಿದೆ. ಇದು ನಿಜವಾಗಿಯೂ ಆಶ್ಚರ್ಯ. ಅಜ್ಞಾನಿಯ ಹಾಗೆ ಇದೇನು ತಪಸ್ಸಿಗೆ ಯೋಗ್ಯವಲ್ಲದ ಬಿಲ್ಲು ಬಾಣಗಳನ್ನು ತೊಟ್ಟಿದ್ದೀಯಲ್ಲ. ವ|| ಎನ್ನಲು ಸಾಹಸಾಭರಣನಾದ ಅರ್ಜುನನು ಹೀಗೆಂದನು.

೪. ನೀನು ಹೇಳಿದ ಹಾಗೆಯೇ ನನ್ನ ಸ್ಥಿತಿ ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ; ಇದು ಇಹಲೋಕದ ಬಂಧನಕ್ಕೊಳಗಾದುದು. ಅದನ್ನು ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವಲ್ಲ.

೫. ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯಾಗಿದ್ದೇನೆ. ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯ ಪ್ರವೇಶಮಾಡಿ ಸ್ಥಿರವಾಗಿ ನಿಂತೆವು. ಶಂಕರನನ್ನು ಆರಾಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ (ಅದರ ಪ್ರಕಾರ) ಈಶ್ವರನು ಪ್ರತ್ಯಕ್ಷವಾಗುವವರೆಗೆ

ವ|| ಅಂತುಮಲ್ಲದೆ-

ಚಂ|| ಸುರಿತ ತಪೋಮಯಾನಳನಿನೀಯೊಡಲಂ ನೆಗ್ದ ಗಿರೀಂದ್ರ ಕಂ
ದರದೊಳಗಿಂತೆ ದಲ್ ಕರಗಿಪೆಂ ಪೆಱತೇಂ ಪಡೆಮಾತೊ ಮೇಣ್ ಪುರಂ|
ದರನೊಸೆದಿತ್ತುದೊಂದು ಬರದಿಂದುಱದೆನ್ನ ವಿರೋವರ್ಗಮಂ
ಕರಗಿಪೆನಲ್ಲದಿಲ್ಲಿ ಸೆರಗಂ ಬೆರಗಂ ಬಗೆಯೆಂ ದ್ವಿಜೋತ್ತಮಾ|| ೬

ಎನೆಯನೆ ರತ್ನ ರಶ್ಮಿ ಜಟಿಳಂ ಮಕುಟಂ ಮಣಿಕುಂಡಳಂ ಕನ
ತ್ಕನಕ ಪಿಶಂಗ ದೇಹರುಚಿ ನೀಳಸರೋಜವನಂಗಳಾಗಳು|
ಳ್ಳನಿತುಮರಲ್ವವೋಲ್ ಪೊಳೆವ ಕಣ್ಗಳುಮೞ್ಕಱನೀಯೆ ವಿಕ್ರಮಾ
ರ್ಜುನನ ಮನಕ್ಕೆ ತೋಱದನಿಳಾಮರನಂದಮರೇಂದ್ರರೂಪಮಂ|| ೭

ವ|| ಅಂತು ತನ್ನ ಸಹಜರೂಪಮಂ ತೋಱ ಮನದೞ್ಕಱಂ ತೋಱಲೆಂದು ಮಗನನಪ್ಪಿಕೊಂಡು-

ಕಂ|| ಸಾಸುವೊಡಮರಿನೃಪಂ
ಸಾಸುವೊಡಮಸ್ತ್ರಚಯಮನಿನ್ನುಂ ತನುವಂ|
ಬಾಸು ತಪೋಗ್ನಿಯಿಂದಾ
ರಾಸು ನೀಂ ಮಗನೆ ದುರಿತಹರನಂ ಹರನಂ|| ೮

ಎಂದು ತಿರೋಹಿತನಾಗಿ ಪು
ರಂದರನುಂ ಪೋದನಿತ್ತ ತಪದೊಳ್ ನರನಿಂ|
ತೊಂದಿ ನಿಲೆ ತಪದ ಬಿಸುಪಿಂ
ಬೆಂದೞದುದು ವನದೊಳುಳ್ಳ ತಪಸಿಯರ ತಪಂ|| ೯

ಖರಕರಕಿರಣಾವಳಿಯಂ
ಪರಿದೆೞ್ಬಟ್ಟಿದುವು ಪಗಲಿರುಳ್ ಶಶಿರುಚಿಯಂ|
ಪರಿಭವಿಸಿ ನಭಮನಡರ್ದುವು
ನರೇಂದ್ರತಾಪಸತಪೋಮಯೂಖಾವಳಿಗಳ್|| ೧೦

ತಪಸ್ಸನ್ನು ಮಾಡುತ್ತೇನೆ. ವ|| ಹಾಗಲ್ಲದೆ-

೬. ಎಲೈ ಬ್ರಾಹ್ಮಣಶ್ರೇಷ್ಠನೇ ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ಕರಗಿಸುತ್ತೇನೆ ನನಗೆ ಬೇರೆ ಮಾತೇ ಇಲ್ಲ. ಮತ್ತು ಆ ಶಿವನು ಪ್ರೀತಿಯಿಂದ ಕೊಡುವ ಒಂದು ವರದಿಂದ ಸಾವಕಾಶ ಮಾಡದೆ ತನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ: ಹಾಗಲ್ಲದೆ ಇಲ್ಲಿ ನಾನು ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ.

೭. ಎನ್ನುತ್ತಿರುವಾಗಲೇ ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ ಕನ್ನೆ ದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು. ವ|| ಹಾಗೆ ತನ್ನ ಸ್ವಭಾವಸಿದ್ಧವಾದ ಆಕಾರವನ್ನು ತೋರಿಸಿ ಮನಸ್ಸಿನ ಪ್ರೀತಿಯನ್ನು ತೋರಬೇಕೆಂದು ಮಗನನ್ನು ತಬ್ಬಿಕೊಂಡು

೮. ಮಗನೇ ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತ್ರ) ಸಮೂಹವನ್ನು ಪಡೆಯಬೇಕಾದ ಪಕ್ಷದಲ್ಲಿ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು. ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು.

೯. ಎಂಬುದಾಗಿ ಹೇಳಿ ಇಂದ್ರನು ಅದೃಶ್ಯನಾದನು. ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾದನು. ತಪಸ್ಸಿನ ಬೆಂಕಿಯಿಂದ ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ ಸುಟ್ಟು ನಾಶವಾದುವು.

೧೦. ರಾಜತಪಸ್ವಿಯಾದ ಅರ್ಜುನನ ತಪಸ್ಸಿನ ಕಿರಣಸಮೂಹಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು. ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು. ವ|| ಹಾಗೆ ಅತ್ಯುಗ್ರಹವಾದ ತಪಸ್ಸನ್ನು ಮಾಡಲು ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು ಕೈಲಾಸಪರ್ವತದಲ್ಲಿ ವಿಳಾಸದಿಂದ ಕೂಡಿ ಪಾರ್ವತಿಯೊಡನಿದ್ದ ಶಿವನಿಗೆ ಸಾಮಂತಚೂಡಾಮಣಿಯ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆ

ವ|| ಅಂತುಗ್ರೋಗ್ರತಪಂಗೆಯ್ಯೆ ತತ್ತಪತ್ಸಪನವಿಪುಳಮರೀಚಿಗಳ್ ತಮಗೆ ತಪವಿಘಾತಮಂ ಮಾಡುವುದುಮಿಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ಕೈಲಾಸದೊಳ್ ವಿಳಾಸಂಬೆರಸು ಗಿರಿಜೆಯೊಳ್ ತಳ್ತಿರ್ದ ಬಾಳೇಂದುಚೂಡಾಮಣಿಗೆ ಸಾಮಂತಚೂಡಾಮಣಿಯ ತಪಪ್ರಭಾವಮನಿಂತೆಂದು ಬಿನ್ನಪಂಗೆಯ್ದರ್-

ಮಲ್ಲಿಕಾಮಾಲೆ|| ಆವನೆಂದಱಯಲ್ಕೆ ಬಾರದಪೂರ್ವನೊರ್ವನರಾತಿವಿ
ದ್ರಾವಣಂ ತಪಕೆಂದು ನಿಂತೊಡೆ ತತ್ತಪೋಮಯಪಾವಕಂ|
ದಾವಪಾವಕನಂತೆವೋಲ್ ಸುಡೆ ಬೆಂದುವೆಮ್ಮ ತಪಂಗಳಿ
ನ್ನಾವ ಶೈಳದೊಳಿರ್ಪೆವಿರ್ಪೆಡೆವೇೞ ನೀಂ ತ್ರಿಪುರಾಂತಕಾ|| ೧೧

ಕಂ|| ಆರೊಪಿತಚಾಪಂ ಸಂ
ಧಾರಿತಕವಚಂ ಧೃತೋಗ್ರಶರಯುಗಂ ತಾ|
ನಾರಂದಮಲ್ಲವಂ ತ್ರಿಪು
ರಾರೀ ಕೇಳ್ ತ್ರಿಪುರಮಿಸುವ ನಿನ್ನನೆ ಪೋಲ್ವಂ|| ೧೨

ವ|| ಎಂಬುದುಮದೆಲ್ಲಮಂ ಕೇಳ್ದಾತನಾವನೆಂಬುದನಱಯಲೆಂದು-

ಕಂ|| ಧ್ಯಾನದೊಳಭವಂ ನೆದಿನಿ
ಸಾನುಮನರೆ ಮುಚ್ಚಿ ಕಣ್ಗಳಂ ನಿಶ್ಚಳಿತಂ|
ತಾನಿರ್ದು ಮದು ಕೆಂದಿದ
ವಿನಂ ತಳ್ತಾಡದಿರ್ದ ಮಡುವಂ ಪೋಲ್ತಂ|| ೧೩

ವ|| ಅಂತು ಪೋಲ್ತು ದಿವ್ಯಜ್ಞಾನದೊಳ್ ಮಹೇಶ್ವರನುದಾರಮಹೇಶ್ವರನಪ್ಪುದನಱದು ಬೆರಲಂ ಮಿಡಿದು ಮುಗುಳ್ನಗೆ ನಕ್ಕು ನೆನೆದಾತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೇೞ್ದು ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆಯ್ದುದನವಧಾರಿಸಿ ಮೂಕದಾನವನಾದಿವರಾಹರೂಪದೊಳಿರ್ದುದುಮನಱದು ಮನುಜ ಮಾಂಧಾತನಿಂದಮಾ ದೈತ್ಯನಂ ಕೊಲಿಸಲುಂ ಸಾಹಸಾಭರಣನೊಳೇನಾನುಮೊಡಂಬಡಂ ಮಾಡಿ ಮಾಯಾಯುದ್ಧದೊಳಾತನ ಸಾಹಸದ ಬಲದ ಬಿಲ್ಲಾಳ್ತನದಳವಿಗಳನಳೆದು ನೋಡಿ ವರದನಪ್ಪೆನೆಂಬುದುಮಂ ಬಗೆದು-

ಚಂ|| ವನಚರನಾಗಿ ಶಂಭು ಗಿರಿಜಾತೆಯನೋತು ಪುಳಿಂದಿ ಮಾಡಿ ನ
ಚ್ಚಿನ ಗುಹನ ಕಿರಾತಬಲ ನಾಯಕನಾಗಿರೆ ಮಾಡಿ ಭೂತಮು|
ಳ್ಳನಿತುಮನೆಯ್ದೆ ಬೇಡವಡೆ ಮಾಡಿ ಯುಗಾಂತ ಪಯೋಧರಾಳಿ ಭೋಂ
ಕೆನೆ ಕವಿವಂದದಿಂ ಕವಿದನಾ ಬನಮಂ ಮೃಗಯಾನಿಧಾನಮಂ|| ೧೪

ಮಾಡಿದರು.

೧೧. ಯಾರೆಂದು ತಿಳಿಯಲಾಗುವುದಿಲ್ಲ. ಹಿಂದೆಂದೂ ಕಾಣದಿರುವ ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಲ್ಲಲು ಅವನ ತಪಸ್ಸಿನಿಂದುಂಟಾದ ಬೆಂಕಿಯಿಂದ ಬೆಂಕಿಯು ಕಾಡಕಿಚ್ಚನ್ನು ಸುಡುವ ಹಾಗೆ ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು.

೧೨. ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ, ಬೆನ್ನಲ್ಲಿ ಧರಿಸಿರುವ ಭಯಂಕರವಾದ ಎರಡು ಬತ್ತಳಿಕೆಗಳು. ಇವನ್ನುಳ್ಳ ಅವನು ಬೇರೆಯಾದ ರೀತಿಯವನೂ ಅಲ್ಲ. ಪರಶಿವನೇ, ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ ಎಂದರು. ವ|| ಅದೆಲ್ಲವನ್ನೂ ಕೇಳಿ ಅವನು ಯಾರೆಂಬುದನ್ನು ತಿಳಿಯಬೇಕೆಂದು

೧೩. ಶಿವನು ಧ್ಯಾನಮಗ್ನನಾಗಿ ಕಣ್ಣುಗಳನ್ನು ಅರ್ಧಮುಚ್ಚಿ ನಿಶ್ಚಲಚಿತ್ತನಾಗಿದ್ದು ಮೈಮರೆತು ಮಲಗಿರುವ ಮೀನುಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವಿಗೆ ಸಮಾನನಾದನು. ವ|| ಹಾಗೆ ಹೋಗಲಿ ತನ್ನ ದಿವ್ಯಜ್ಞಾನದಿಂದ ಶಿವನು, ತಪಸ್ಸು ಮಾಡುತ್ತಿದ್ದವನು ಉದಾರಮಹೇಶ್ವರನಾದ ಅರ್ಜುನನಾಗಿರುವುದನ್ನು ತಿಳಿದನು. (ಸಂತೋಷದಿಂದ) ಬೆರಳನ್ನು ಚಿಟಿಕಿಸಿ ಹುಸಿನಗೆ ನಕ್ಕು ಜ್ಞಾಪಿಸಿಕೊಂಡು ಆತನಿಗೆ ಯೋಗ್ಯವಾದುದನ್ನು ಮಾಡುವುದಕ್ಕೆ ನಾನು ಬಲ್ಲೆ, ನೀವು ಹೊರಡಿ ಎಂದು ಋಷಿಶ್ರೇಷ್ಠರ ಸಮೂಹವನ್ನು ಕಳುಹಿಸಿಕೊಟ್ಟನು. ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡುದನ್ನು ಜ್ಞಾಪಿಸಿಕೊಂಡನು. ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸುತ್ತೇನೆ. ಅರ್ಜುನನೊಡನೆ ಏನಾದರೂ ಕೀಟಲೆ ಮಾಡಿ ಮಾಯಾಯುದ್ಧದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳ್ತನದ ಶಕ್ತಿಯನ್ನೂ ಪರೀಕ್ಷಿಸುತ್ತೇನೆ; ಅನಂತರ ಅವನಿಗೆ ವರದ (ವರವನ್ನು ಕೊಡುವವ)ನಾಗುತ್ತೇನೆ ಎಂದು ನಿಶ್ಚಯಿಸಿದನು.

೧೪. ಈಶ್ವರನು ತಾನು ಬೇಡವರನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯನ್ನಾಗಿಯೂ ತನ್ನ ನಂಬಿಕೆಗೆ ಪಾತ್ರನಾದ

ವ|| ಅಂತು ಕವಿದೊಡಾ ಕಳಕಳಕ್ಕೇವಯಿಸಿ ವರಾಹರೂಪದ ಮೂಕದಾನವಂ-

ತರಳ|| ಪೊರಳೆ ವಾರಿಗಳ್ ಕಲಂಕಿದುವುರ್ದೆ ಮೆಯ್ಯನುದಗ್ರಮಂ
ದರಮದಂದಲುಗಿತ್ತು ಬಾಯ್ಗೆಯೆ ದಿಗ್ಗಜಂ ಪೆಱಗಿಟ್ಟುವಾಂ|
ತರದೆ ತೊಟ್ಟನೆ ದಾಡೆಗುಟ್ಟೆ ಕೞಲ್ದು ತಾರಗೆಗಳ್ ನಭಂ
ಬೆರಸು ಬಿೞ್ದುವು ಪೆಂಪಿದೇಂ ಪಿರಿದಾಯ್ತೊ ದೈತ್ಯವರಾಹನಾ|| ೧೫

ವ|| ಅಂತಾ ವರಾಹನಾದಿವರಾಹನಾದ ಮುರಾಂತಕನುಮನಿೞಸಿ ನೆಲಂ ಕಪ್ಪಂಗವಿಯು ಮಾಗೆ ಬರೆ ಪೆಱಗೆ ಕೃತಕ ಕಿರಾತನಟ್ಟುತ್ತುಂ ಬರೆ ತನ್ನತ್ತ ಮೊಗದೆ ಬರ್ಪುದಂ ಕಂಡಮೋಘಾಸ್ತ್ರ ಧನಂಜಯನೊಂದಮೋಘಾಸ್ತ್ರಮನಕ್ಷೂಣಬಾಣಯಿಂದಮುರ್ಚಿಕೊಂಡು ಗಾಂಡೀವದೊಳ್ ಪೂಡಿ-

ಮ|| ತೆಗೆದೆಚ್ಚರ್ಜುನನಂಬು ತೀವೆ ತುದಿಯಿಂ ಬಾಲಂಬರಂ ಪಂದಿ ಸೌ
ಳಗೆವೋಪಂತಿರೆ ನೋಡ ಸಂಬಳಿಗೆವೋಯ್ತೆಂಬನ್ನೆಗಂ ಕೊಂಡುದೊ|
ಯ್ಯಗೆ ಪಾರ್ದೆಚ್ಚ ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು ತೊ
ಟ್ಟಗೆ ವೈಮಾನಿಕಕೋಟಿಗಂದು ಪಿರಿದೊಂದುತ್ಸಾಹಮಪ್ಪನ್ನೆಗಂ|| ೧೬

ವ|| ಅಂತು ಮೂಕದಾನವನನಾ ನೆವದೊಳೆ ಕೊಂದು ವರಾಹಾರುಣಜಲಧಾರಾರುಣ ಮಾಗಿರ್ದಾತ್ಮೀಯಬಾಣಮಂ ಪರಾಕ್ರಮ ಧವಳನೊಯ್ಯನೆ ಕೊಂಡು ಬಾಣಯೊಳಿಟ್ಟು ಪೋಗಿ ಪೊಗೊಳದೊಳ್ ಕರಚರಣಪ್ರಕ್ಷಾಳನಂಗೆಯ್ದು ಮಗುೞ್ದುಮೇಕಪಾದ ತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನನಹಿಭೂಷಣನೆಂಬಂ ಬೇಡಿಯಟ್ಟಿದೊಡಾತಂ ಬಂದು-

ಚಂ|| ಗೊರವರೆ ಬೂದಿಯುಂ ಜಡೆಯುಮಕ್ಕೆ ತಪಕ್ಕೆ ತನುತ್ರವಿ ಭಯಂ
ಕರ ಧನು ಖೞ್ಗಮತ್ತಪರಮಿಂತೆರಡುಂ ದೊಣೆ ತೀವಿದಂಬುಮೊಂ|
ದಿರವು ತಪಕ್ಕಿದೆಂತುಟೊ ತಪಂಗಳುಮಿಲ್ಲಮವುಳ್ಳೊಡೀಗಳೆ
ಮ್ಮರಸರ ನಚ್ಚಿತೆಚ್ಚ ಶರಮಂ ಸೆರಗಿಲ್ಲದೆ ಕೊಂಡು ಬರ್ಪಿರೇ|| ೧೭

ಷಣ್ಮುಖನನ್ನು ಬೇಡರ ಸೈನ್ಯಕ್ಕೆ ನಾಯಕನನ್ನಾಗಿಯೂ ಮಾಡಿ ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿಸಿದನು. ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ ಬೇಟೆಗೆ ಆಧಾರವಾದ ಆ ಕಾಡನ್ನು ಮುತ್ತಿದನು. ವ|| ಆ ಕೋಲಾಹಲಶಬ್ದಕ್ಕೆ ಅಸಮಾಧಾನಪಟ್ಟು ಹಂದಿಯ ರೂಪದಲ್ಲಿದ್ದ ಆ ಮೂಕದಾನವನು

೧೫. ಹೊರಳಲು ಸಮುದ್ರಗಳು ಕಲಕಿಹೋದವು, ಮೆಯ್ಯನ್ನು ಉಜ್ಜಲ ಎತ್ತರವಾದ ಮಂದರಪರ್ವತವೂ ಅಲುಗಾಡಿತು. ಶಬ್ದಮಾಡಲು ದಿಗ್ಗಜಗಳೂ ಹಿಮ್ಮೆಟ್ಟಿದುವು. ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು. ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತು. ವ|| ಆ ಹಂದಿಯು ಆದಿವರಾಹಾವತಾರ ಮಾಡಿದ ಕೃಷ್ಣನನ್ನು ಹೀಯ್ಯಾಳಿಸಿ (ತಿರಸ್ಕರಿಸಿ) ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ (ನೆಲವನ್ನಲ್ಲಾಡಿಸುತ್ತ) ಬರುತ್ತಿರಲು ಹಿಂಭಾಗದಿಂದ ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬಂದನು. ತನ್ನ ಕಡೆಗೆ ಬರುತ್ತಿರುವುದನ್ನು ಧನಂಜಯನು ಕಂಡು ಒಂದು ಅಮೋಘವಾದ ಬಾಣವನ್ನು ತನ್ನ ಅಕ್ಷಯವಾದ ಬತ್ತಳಿಕೆಯಿಂದ ಸೆಳೆದುಕೊಂಡು ಗಾಂಡೀವದಲ್ಲಿ ಹೂಡಿದನು.

೧೬. ಹೆದೆಯೆಳೆದು ಪ್ರಯೋಗ ಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ವ್ಯಾಪಿಸಿ ಸೌಳೆಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿಕೊಂಡಿತು. ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಒಳನುಗ್ಗಿತು. ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳ ಸಮೂಹಕ್ಕೆ ವಿಶೇಷ ಸಂತೋಷವಾಯಿತು. ವ|| ಹಾಗೆ ಮೂಕದಾನವನನ್ನು ಆ ನೆಪದಿಂದ ಕೊಂದ ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಸೇರಿಸಿ ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು ಪುನ ಏಕಪಾದತಪಸ್ಸಿನಲ್ಲಿ ನಿಲ್ಲಲು ಅರ್ಜುನನ ಹತ್ತಿರಕ್ಕೆ ಸರ್ಪಾಭರಣನಾದ ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಕಳುಹಿಸಿದನು. ಅವನು ಬಂದು

೧೭. ತಪಸ್ವಿಗಳೇ, ಬೂದಿಯೂ ಜಡೆಯೂ ತಪಸ್ಸಿಗಿರಲಿ; ಕವಚ, ಈ ಭಯಂಕರವಾದ ಬಿಲ್ಲು ಕತ್ತಿ ಗುರಾಣಿ, ಬಾಣದಿಂದ ತುಂಬಿದ ಈ ಎರಡು ಬತ್ತಳಿಕೆಗಳು -ಇವು ತಪಸ್ಸಿಗೆ ಹೊಂದಿಕೊಳ್ಳಲಾರವು. ಇದು ಹೇಗೊ (ವಿಚಿತ್ರವಾಗಿದೆ) ತಪಸ್ಸು ಕೂಡ ಇಲ್ಲ, ಅದಿದ್ದ ಪಕ್ಷದಲ್ಲಿ (ನೀವು ತಪಸ್ವಿಗಳಾಗಿದ್ದರೆ) ನಮ್ಮ ರಾಜರು ನಂಬಿಕೆಯಿಂದ (ಗುರಿಯಿಟ್ಟು) ಹೊಡೆದ ಬಾಣವನ್ನು ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ?

ಕಂ|| ಅಱಯದೆ ತಂದೊಡಮೇನೆ
ಮ್ಮೆಯಂಗದನೆಮ್ಮ ಕೆಯ್ಯೊಳಟ್ಟಿಂ ನೀಮಿಂ|
ತಱಯುತ್ತುಂ ಪೆಱರೊಡಮೆಯ
ನು ಸೆವಿಡಿದಿರ್ಪಿರಿನ್ನರುರ್ವಿಯೊಳೊಳರೇ|| ೧೮

ವ|| ಎಂದು ಕಿರಾತದೂತಂ ತನ್ನನತಿಕ್ರಮಿಸಿ ನುಡಿದುದರ್ಕೆ ಮುಳಿದು ಪರಾಕ್ರಮಧವಳನಿಂತೆಂದಂ-

ಕಂ|| ದಸಿಕೊಂದಕ್ಕುಂ ಬೇಡಂ
ಗಿಸಲ್ಕೆ ದೊರೆ ಮೃಗಮನೀ ಜಗಂಗಳನಳ್ಳಾ|
ಡಿಸುವ ಮದೀಯೋಗ್ರಾಸ್ತ್ರಂ
ಪೆಸರ್ಗೊಳಲೇಂ ತನಗೆ ದೊರೆಯೆ ಖಳನಳವಱಯಂ|| ೧೯

ಉ|| ಏಱನೆ ಸೂಗೊಂಡು ನುಡಿವೀ ನುಡಿಯಲ್ಲದೆ ಮತ್ತಮಾಸನಂ
ದೋಱುವ ಬಲ್ಪುದೋಱುವೆರ್ದೆದೋಱುವ ಕಯ್ಪೆಸರಂಗಳೆಮ್ಮನುಂ|
ತೇಱವು ಬೇಡ ಬೇಡದಿರು ಬೇಡ ಚಲಂಬೆರಸಂಬನಂಬನಿನ್
ಕಾಱುತೆ ಮೋದಲಾಟಿಪೊಡೆ ನೀಂ ಬರವೇೞ್ವುದು ನಿನ್ನನಾಳ್ದನಂ|| ೨೦

ವ|| ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ ಬಗ್ಗಿಸಿದೊಡಾ ಮಾತೆಲ್ಲಮನಾ ಮಾೞ್ಕೆಯೊಳೆ ಪೋಗಿ ಕಪಟ ಕಿರಾತಂಗಱಪಿದೊಡಾತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು ಹಸ್ತ್ಯಶ್ವರಥಪದಾತಿಬಲಂಗಳನೆನಿತಾನುಮನಿದಿರೊಳ್ ತಂದೊಡ್ಡಿದಾಗಳ್ ಪರಸೈನ್ಯಭೈರವಂ ಮಹಾಪ್ರಳಯಭೈರವಾಕಾರಮಂ ಕೆಯ್ಕೊಂಡು ಸೆರಗಿಲ್ಲದೆ ಬಂದು ತಾಗಿ-

ಚಂ|| ಕೆದ ಚತುರ್ಬಲಂ ಬೆದ ತಳ್ತ ದೞಂ ಕೆಡೆದೆೞ ತೞ ಮಾ
ಣದೆ ಪೆಱಗಿಟ್ಟು ಬಾಯ್ಬಿಡೆ ಘಟಾಳಿ ಗುರ್ಣಾವನಂಬು ಲಕ್ಕಲೆ|
ಕ್ಕದೆ ಕೊಳೆ ಚಾತುರಂಗಬಲಮಂತೞದೞ್ಗೆ ಕನಲ್ದೊನಲ್ದು ಮಾ
ಣದೆ ಪೆಣೆದಂ ಹರಂ ದಿಗಿಭದೊಳ್ ದಿಗಿಭಂ ಪೆಣೆವಂತೆ ಪಾರ್ಥನೊಳ್|| ೨೧

ವ|| ಅಂತು ಶೂನ್ಯಹಸ್ತದೊಳಿರ್ವರುಂ ಪೆಣೆದು ಪಲವುಂ ಗಾಯದೊಳಾಯಂದಪ್ಪದೆ ಪಿರಿದುಂ ಪೊೞ್ತು ಸಂತರ್ಪಿನಂ (?) ಪೋರೆ ದೇವರೆಲ್ಲರುಮಂಬರತಳದೊಳಿರ್ದು ತಮ್ಮಂ ನೋೞ್ಪಂತೆ (?) ನೋಡೆ-

೧೮. ತಿಳಿಯದೆ ತಂದರೆ ತಾನೆ ಏನು ದೋಷ? ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ. ನೀವು ಹೀಗೆ ತಿಳಿದವರಾಗಿದ್ದರೂ ಇತರರ ಪದಾರ್ಥವನ್ನು ವಿಶೇಷವಾಗಿ ಬಂಸಿಟ್ಟಿದ್ದೀರಲ್ಲ! ಇಂತಹವರೂ ಭೂಮಿಯಲ್ಲಿದ್ದಾರೆಯೇ? ವ|| ಎಂದು ಆ ಬೇಡನ ದೂತನಾದ ಗುಹನು ತನ್ನನ್ನು ಮೀರಿ ಮಾತನಾಡಿದುದಕ್ಕೆ ಕೋಪಿಸಿ ಪರಾಕ್ರಮಧವಳನಾದ ಅರ್ಜುನನು ಹೀಗೆಂದನು-

೧೯. ಬೇಡನಿಗೆ ಒಂದು ಪ್ರಾಣಿಯನ್ನು ಹೊಡೆಯಲು ಒಂದು ಮೊಳೆ ಸಾಕು. ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಬಾಣದ ಹೆಸರು ಹೇಳಲು ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ. ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ.

೨೦. ಕೇವಲ ಕಲಹಮಾಡುವುದಕ್ಕಾಗಿಯೂ ಪೊಳ್ಳು ಪರಾಕ್ರಮವನ್ನು ಮೆರೆಯುವುದಕ್ಕಾಗಿಯೂ ಇಂತಹ ಒರಟಾದ ಉಪೇಕ್ಷೆಯಿಂದ ಕೂಡಿದ ಕಹಿ ಮಾತುಗಳನ್ನು ನಮ್ಮಲ್ಲಿ ಆಡಬೇಡ. ಈ ಕಹಿಯಾದ ಮಾತುಗಳು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು (ನಮ್ಮನ್ನು ಹೆದರಿಸಲಾರವು). ಎಲೋ ಬೇಡ ನಿನಗೆ ಹಟಬೇಡ, ಬಾಣವನ್ನು ಕೇಳಿದರು. ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ಧಮಾಡುವ ಅಪೇಕ್ಷೆಯೇ ಇದ್ದರೆ ನೀನು ನಿನ್ನ ಯಜಮಾನನನ್ನು ಬರಹೇಳು. ವ|| ಎಂದು ಬಂದ ದೂತನಾದ ಗುಹನನ್ನು ವಿಕ್ರಾಂತತುಂಗನಾದ ಅರ್ಜುನನು ಹೆದರಿಸಿ ಕಳುಹಿಸಿದನು. ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದನು. ಆತನೂ ಮಾಯಾಯುದ್ಧವನ್ನು ಹೂಡಲು ಮನಸ್ಸು ಮಾಡಿ ಅಸಂಖ್ಯಾತವಾದ ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದನು. ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ ಆಕಾರವನ್ನು ತಾಳಿ ಭಯವಿಲ್ಲದೆ ಬಂದು ತಾಗಿದನು.

೨೧. ಚತುರಂಗಸೈನ್ಯವು ಚದುರಿತು. ನೆರೆದಿದ್ದ ಸೈನ್ಯವು ಬೆದರಿತು. ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು. ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ ಚತುರಂಗಸೈನ್ಯವೂ ಕುಗ್ಗಿ ನಾಶವಾಯಿತು. ಶಿವನು ವಿಶೇಷವಾಗಿ ಕೋಪಿಸಿಕೊಂಡು ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜನೊಡನೆ ಹೆಣೆದುಕೊಳ್ಳುವಂತೆ ಹೆಣೆದುಕೊಂಡನು. ವ|| ಹಾಗೆ ಇಬ್ಬರೂ ನಿರಾಯುಧರಾಗಿ ಹೆಣೆದುಕೊಂಡು ಅನೇಕ ಪಟ್ಟುಗಳಲ್ಲಿ

ಕಂ|| ಇಕ್ಕಿದನಭವಂ ಪಾರ್ಥನ
ನಿಕ್ಕಿದನಾ ತ್ರಿಪುರಹರನನರ್ಜುನನೆನೆ ಗೆ|
ಲ್ಲಕ್ಕೆ ಮುಡಿಗಿಕ್ಕುವಂತೆವೊ
ಲಿಕ್ಕಿದನವಯವದೆ ನೆಲದೊಳರಿಗಂ ಹರನಂ|| ೨೨

ವ|| ಅಂತು ನೆಲಕ್ಕಿಕ್ಕಿ ಗಂಟಲಂ ಮೆಟ್ಟಿದಾಗಳ್-
ಕಂ|| ಪೊಱಕಣ್ಗಂ ಮುನ್ನಂ ತಾಂ
ಮಱಸಿದ ನೊಸಲೊಂದು ಕಣ್ಣುಮಾಗಳ್ ನೊಸಲಿಂ|
ಪೊಱಮಟ್ಟಂತಿರೆ ತೋಱದ

ನೆಱಕದೆ ಹರಿಗಂಗೆ ರುದ್ರನಗ್ಗಳಗಣ್ಣಂ||
ಉರದೊಳ್ ಫಣಿ ಕರದೊಳ್ ಬಿಲ್
ಶಿರದೊಳ್ ತೊ ತೊಯ ಕೆಲದೊಳೆಸೆದಿರೆ ಪೆ ಮುಂ|
ಗೊರಲೊಳ್ ಕ ಮಯಿಲ್ಲದೆ

ದೊರೆಕೊಳೆ ಮೃಡನಡಿಗೆ ಹರಿಗನೆಱಗಿದನಾಗಳ್|| ೨೪

ವ|| ಅಂತೆಱಗಿ ಪೊಡವಟ್ಟು-

ಕಂ|| ನೀನಪ್ಪುದನಣಮಱಯದೆ
ದಾನವ ಮಾನವ ಸುರೇಂದ್ರ ಮಣಿಮಕುಟತಟಾ|
ವ್ಯಾನಪದಂಗಾ ನೆಗೞ್ದುದ
ನಾನೇತಳೆಂತು ನೀಗುವೆಂ ನೀಂ ಬೆಸಸಾ|| ೨೫

ವ|| ಎಂದು ವಿನಯವಿನಮಿತೋತ್ತಮಾಂಗನಾಗಿ ಕರಕಮಳಂಗಳಂ ಮುಗಿದು ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ ಮೆಚ್ಚಿದೆಂ ಬರವಂ ಬೇಡಿಕೊಳ್ಳೆನೆ ಮಹಾಪ್ರಸಾದಂ ಪೆಱತೇನುಮನೊಲ್ಲೆನೆನಗೆ ನಿಮ್ಮಡಿ ಪಾಶುಪತಾಸ್ತ್ರಮಂ ದಯೆಗೆಯ್ವುದೆನೆ ನಿನ್ನ ತಪಶ್ಶಕ್ತಿಗಂ ಭಕ್ತಿಗಂ ಮೆಚ್ಚಿತ್ತೆನೆಂದು-

ಕಂ|| ಕ್ಲೇಶದ ಫಳಮೆರ್ದೆಗೊಳ್ಳದೆ
ಈಶಂ ಮನಮೊಸೆದು ನೆಗೞ್ದ ದಿವ್ಯಾಸ್ತ್ರಮನಾ.
ಪಾಶುಪತಾಸ್ತ್ರಮನಿತ್ತು ವಿ
ನಾಶಿತರಿಪುವಕ್ಕೆ ಹರಿಗನೆಂದಂ ದಯೆಯಿಂ|| ೨೬

ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು ಕಾದಿದರು. ದೇವತೆಗಳು ಆಕಾಶಪ್ರದೇಶದಲ್ಲಿದ್ದುಕೊಂಡು ಅವರ ದ್ವಂದ್ವ ಯುದ್ಧವನ್ನು ನೋಡುತ್ತಿದ್ದರು.

೨೨. ಶಿವನು ಪಾರ್ಥನನ್ನು ಬೀಳಿಸಿದನು; ಪಾರ್ಥನು ಶಿವನನ್ನು ಬೀಳಿಸಿದನು. ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮವಿಲ್ಲದೆ ನೆಲದಲ್ಲಿ ಬೀಳಿಸಿ ವ|| ಅವನ ಗಂಟಲನ್ನು ಮೆಟ್ಟಿದನು.

೨೩. ಹೊರಗಡೆಯ ಕಣ್ಣುಗಳಿಗೆ ಕಾಣದಂತೆ ಮೊದಲೇ ಮರಸಿಟ್ಟಿದ್ದ ಹಣೆಗಣ್ಣೊಂದು ಆಗ ಹಣೆಯಿಂದ ಹೊರ ಹೊರಟ ಹಾಗಿರಲು ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು.

೨೪. ಎದೆಯಲ್ಲಿ ಹಾವು, ಕಯ್ಯಲ್ಲಿ ಬಿಲ್ಲು, ತಲೆಯಲ್ಲಿ ಗಂಗಾನದಿ, ನದಿಯ ಪಕ್ಕದಲ್ಲಿ ಚಂದ್ರ, ಪ್ರಕಾಶಮಾನವಾಗಿರಲು ಮುಂಭಾಗದ ಕೊರಳಿನಲ್ಲಿ ಕರೆಯು ಪ್ರಕಟವಾಗಿ ಕಾಣಿಸಿಕೊಳ್ಳಲು ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು. ವ|| ಹಾಗೆ ಬಗ್ಗಿ ನಮಸ್ಕಾರಮಾಡಿ-

೨೫. (ನನ್ನನ್ನು ಪ್ರತಿಭಟಿಸಿದವನು ಶಿವನಾದ) ನೀನು ಎಂಬುದನ್ನು ತಿಳಿಯದೆ ರಾಕ್ಷಸ, ಮನುಷ್ಯ, ದೇವೇಂದ್ರ ಇವರುಗಳ ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ ಪಾದಗಳುಳ್ಳ ಶಿವನಾದ ನಿನಗೆ ನಾನು ಮಾಡಿದ ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ ಎಂಬುದನ್ನು ನೀನೇ ಅಪ್ಪಣೆ ಕೊಡಿಸು. ವ|| ಎಂದು ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ (ನಮಸ್ಕರಿಸಿ) ಕರಕಮಲಗಳನ್ನು ಮುಗಿದು ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ ಶಿವನು ‘ಮೆಚ್ಚಿದ್ದೇನೆ ವರವನ್ನು ಕೇಳಿಕೊ’ ಎಂದನು. ಅರ್ಜುನನು ಮಹಾಪ್ರಸಾದ, ಬೇರೆಯೇನೂ ಬೇಡ, ನನಗೆ ತಮ್ಮ ಪಾಶುಪತಾಸ್ತ್ರವನ್ನು ದಯಮಾಡಿ ಕೊಡಿಸಬೇಕು ಎಂದನು. ನಿನ್ನ ತಪ್ಪಶ್ಶಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು.