ತಾಂಬೂಲವನ್ನು ಹಿಡಿ, ಮನ್ಮಥನ ಬಾಣಗಳ ಸಮೂಹವು ಈಗಾಗಲೇ ಸುಡುತ್ತಿರುವ ನನ್ನ ಎದೆಯು ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು. ೬೫. ಚದುರಿದ ನಿನ್ನ ಮುಂಗುರುಳು ಚಲಿಸುತ್ತಿರುವ ಗಂಧವನ್ನು ಅರೆಯುತ್ತ ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡಲು ನಿನ್ನ ಆ ನೋಡಿದ ನೋಟ ನನ್ನನ್ನು ಮನ್ಮಥನೆಂಬ ಸರ್ಪದ ವಿಷಾಗ್ಮಿಯೇ ಸುಟ್ಟ ಹಾಗೆ ಸುಟ್ಟಿತು ನೋಡು. ೬೬. ನಿನ್ನ ಕಂದಿಹೋಗಿರುವ ಶರೀರವನ್ನು ನನ್ನ ತೋಳಿನಲ್ಲಿ ಕೂಡಿಸಿ ಕಾಮಬಾಣವೇ ವಿಶೇಷವಾಗಿ ಸಾಣೆಯನ್ನು ಹೊಂದಿತು ಎನ್ನುವ ಹಾಗೆ ಸುಖಿಸು ನೀನು. ನನ್ನ ಈ ಐಶ್ವರ್ಯಲಕ್ಷ್ಮಿಯನ್ನು ಬರಸೆಳೆದು ನಿನ್ನ ಸೇವಕಿಯನ್ನಾಗಿ ಮಾಡಿಕೊ, ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು. ನನ್ನ ಮಾತನ್ನು ಕೇಳಿ ಒಂದು ವಸ್ತ್ರವನ್ನು ಹೊದೆದುಕೊ ಎಲೌ ಕಮಲದಳದಂತೆ ಕಣ್ಣುಳ್ಳವಳೇ ಏಕವಸ್ತ್ರವನ್ನುಟ್ಟಿರುವೆ ನಿನ್ನ ಈ ದುರವಸ್ಥೆಯಿದೇನು? ೬೭. ಬಿಗಿದುಕೊಂಡು ಗಟ್ಟಿಯಾಗಿ ಹೊರಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಗುಳ್ಳೆಗಳು ಅಂಟಿಕೊಳ್ಳಲು ಯೋಗ್ಯವಾಗಿರುವ ಹಾಗೆ ಬ್ರಹ್ಮನು ನನ್ನ ಎದೆಯನ್ನು ವಿಶಾಲವಾಗಿ ಸೃಷ್ಟಿಸಿದ್ದಾನೆ. ಇದು ಅತಿಶಯವಲ್ಲ ನಿನ್ನನ್ನು ಬ್ರಹ್ಮನು ನನಗಾಗಿಯೇ ನಿರ್ಮಿಸಿದ್ದಾನೆ- ೬೮. ರಾಣಿಯಾದ ಸುದೇಷ್ಣೆಯಾಣೆ. ಇಂದು ನಾನು ಪರಿಹಾಸ್ಯಕ್ಕಾಗಿ ನಿನ್ನೊಡನೆ ಮಾತನಾಡಿದರೆ ದೋಷವೇನು? ನನ್ನ ದೃಷ್ಟಿಗೂ ಮನಸ್ಸಿಗೂ ಒಪ್ಪಿಗೆಯಾಗಿರುವ ನಿನ್ನಲ್ಲಿ ನನಗೆ ಮೋಸವುಂಟೇ? ೬೯. ಬಾಯಿಸೋಲುವಷ್ಟು ಬೇಡಿದರೂ ಅಯ್ಯೋ ಎಂದು ಹೇಳಲಾರೆಯಲ್ಲ. ವಿಶೇಷವಾಗಿ ಸಶರೀರವಾಗಿ ಉರಿಯುತ್ತಿರುವ ನನ್ನ ಎದೆಯನ್ನು ಸಮಾಧಾನಮಾಡಲು ನೀನು ಬಾಯಲ್ಲಿ ತಂಬುಲವನ್ನಾದರೂ ಕೊಡಲೊಲ್ಲೆಯಾ? ವ|| ಎಂದು ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ ಗೋಗರೆದು ತನ್ನ ಮಾತುಗಳೂ ಆಸೆಯೂ ತಿರಸ್ಕೃತವಾಗಲು ಸಹಿಸಲಾರದೆ ಕೀಚಕನು ಅವಳನ್ನು ಹಿಡಿಕೊಳ್ಳಲು ಹೋದನು. ದ್ರೌಪದಿಯು ಹೀಗೆಂದಳು- ೭೦. ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ. ಚಿ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ.

ವ|| ಪೊಯ್ದೊಡೆ ಬಱುಬಂ ಪೊಯಿಲ್ವೆತ್ತೆಂತೇನುಮನಱಯದೆ ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡನಡುಗಿ ಕಾಯ್ಪಿನೊಳ್ ಪಿಡುಗಿ ತಳೋದರಿ ವೃಕೋದರನಲ್ಲಿಗೆ ವಂದು ಕ್ಟಟೇಕಾಂತದೊಳಿಂತೆಂದಳ್-

ಮ||ಸ್ರ|| ಪೆಱನಿಕ್ಕುಂಗೂೞೊಳಂ ಕೀೞಲೊಳಮಳವಿಗೆಟ್ಟಿರ್ಪ ನಿಮ್ಮಿರ್ಪುದರ್ಕಂ
ಮಱುಗುತ್ತಿರ್ಪಳ್ಗೆ ನೋಡಾದೞಲನೆನಗೆ ಕಣ್ಸೋಲದಿಂ ಕೀಚಕಂ ಬಂ|
ದುಱದೆನ್ನಂ ಕಾಡಿ ಕೈಗೆಲ್ದುಗಿದನವನದೊಂದುರ್ಕನೇವೇೞ್ವೆನಿನ್ನೀ
ನಱವಯ್ ಪೂಣ್ದೆನ್ನದೊಂದಂ ಪರಿಭವಮನಿದಂ ನೀಗು ನೀಂ ಭೀಮಸೇನಾ|| ೭೧

ವ|| ಎಂಬುದುಂ ಭೀಮಸೇನನೇವದೊಳ್ ಕಣ್ಗಾಣದಿವನೊರ್ವಂ ದುಶ್ಶಾಸನನ ನಂಟನಕ್ಕುಮಾದೊಡೇನಾಯ್ತು-

ಕಂ|| ಮುಳಿಸೆಂಬುದೆನಗೆ ಕೌರವ
ರೊಳೆ ಪಿರಿದಾ ಬಲಿದ ಬಯಕೆಯಂ ಮಾದುರದೊಳ್|
ಕಳೆವಂತನ್ನೆಗಮಿವನೊಳ್
ಕಳೆವೆಂ ನಿನ್ನೊಂದು ಮುಳಿಸನಬ್ಜದಳಾಕ್ಷೀ|| ೭೨

ವ|| ಎಂದು ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಮೆನ್ನಿಂ ಮುನ್ನಮೆ ಪೋಗಿರ್ಪುದಾನಲ್ಲಿಗೆ ವರ್ಪೆನೆಂದಾ ಪಾಣ್ಬನಂ ನಂಬೆ ನುಡಿದಾ ಪೋೞಗೆನ್ನನಲ್ಲಿಗೆ ವರಿಸವಂಗೆ ತಕ್ಕುದನಾನೆ ಬಲ್ಲೆನೆಂದು ನುಡಿದು ಕೞಪಲಾ ದ್ರೌಪದಿ ಸಂತಸಂಬಟ್ಟಂತೆಗೆಯ್ವೆನೆಂದು ಪೋಗಿ-

ಚಂ|| ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈ
ಸೆಯೆನಿಪಂಗರಾಗಮನಿಳೇಶ್ವರವಲ್ಲಭೆಯಟ್ಟಲುಯ್ದೊಡಾ|
ನಱಯದೆ ನಿನ್ನೆ ನೋಯಿಸಿದೆನಿಂದೆನಗೆಂಬುದನೆಂಬುದೆಂದು ಕಾ
ಲ್ಗೆಱಗಿದೊಡೊಳ್ಳಿತಾಗೆ ನಿನಗಿಂತಿನಿತೊಂದೊಲವುಳ್ಳೊಡೊಲ್ಲೆನೇ|| ೭೩

ಬಿಟ್ಟುಬಿಡು, ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುತ್ತೀಯೆ ಎಂದಳು. ಹಾಗಾದರೆ ಬಿಡುವುದಿಲ್ಲ. ನನಗೂ ವಂಚನೆಯ ಮಾತುಗಳನ್ನಾಡುತ್ತಿರವೆಯಲ್ಲ ; ಸಮರ್ಥರಾಗಿದ್ದರೆ ನಿನ್ನನ್ನು ರಕ್ಷಿಸುವ ಗಂಧರ್ವರೆ ಬಿಡಿಸಿಕೊಳ್ಳಲಿ ಹೋಗು ಎಂದು ದುರಾತ್ಮನಾದ ಅವನು ಅವಳನ್ನು ಹೊಡೆದನು. ವ|| ಹೊಡೆಯಲಾಗಿ ಸಹಾಯವಿಲ್ಲದವನು ಪೆಟ್ಟು ತಿಂದಹಾಗೆ ಏನು ಮಾಡಲೂ ತಿಳಿಯದೆ ಅವಮಾನವೆಂಬ ಗಾಳಿಯಿಂದ ದುಖಾಗ್ನಿಯು ಇಮ್ಮಡಿಸಲು ವಿಶೇಷವಾಗಿ ನಡುಗಿ ಕೋಪದಿಂದ ಸಿಡಿದು ದ್ರೌಪದಿಯು ಭೀಮನ ಬಳಿಗೆ ಬಂದು ಅತ್ಯಂತ ರಹಸ್ಯವಾಗಿ ಹೀಗೆಂದು ತನ್ನ ದುಖವನ್ನು ತೋಡಿಕೊಂಡಳು. ೭೧. ಪರಾನ್ನದಿಂದಲೂ ಪರರ ಸೇವಾವೃತ್ತಿಯಿಂದಲೂ ಕೀಳಂತಸ್ತಿನಲ್ಲಿ ದುಸ್ಥಿತಿಯಿಂದ ದುಖಪಡುತ್ತಿರುವ ನನಗೆ ಉಂಟಾದ ದುಖವನ್ನು ನೋಡು. ನನ್ನ ಮೇಲಿನ ಮೋಹದಿಂದ ಕೀಚಕನು ಬಂದು ವಿಶೇಷವಾಗಿ ನನ್ನನ್ನು ಹಿಂಸಿಸಿ ಕೈಮೀರಿ ಹೊಡೆದು ಬಿಸಾಡಿದನು. ಅವನ ಕೊಬ್ಬನ್ನು ಏನೆಂದು ಹೇಳಲಿ; ಭೀಮಸೇನಾ ನನ್ನನ್ನು ಆವರಿಸಿರುವ ಈ ಅವಮಾನವನ್ನು ನೀನು ತಿಳಿದಿದ್ದೀಯೆ. ಇದನ್ನು ನೀನು ಪರಿಹಾರಮಾಡು ಎಂದು ಬಾಯಳಿದಳು. ವ|| ಭೀಮಸೇನನು ಕೋಪದಲ್ಲಿ ಕುರುಡನಾಗಿರುವ ಇವನು ಮತ್ತೊಬ್ಬ ದುಶ್ಶಾಸನನ ನೆಂಟನಾಗಿರಬೇಕು, ಆದರೇನಾಯ್ತು? ೭೨. ನನಗೆ ಕೌರವರಲ್ಲಿ ವಿಶೇಷ ಆಗ್ರಹವುಂಟು. ಈ ಸಂಪೂರ್ಣವಾದ ಬಯಕೆಯನ್ನು ಮಹಾಯುದ್ಧದಲ್ಲಿ ಕಳೆಯುವವರೆಗೆ ನಿನಗಾಗಿ ಉಂಟಾದ ಕೋಪವನ್ನು ಎಲೌ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ. ವ|| ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ಮನೆಯನ್ನಾಗಿ ಮಾಡಿಕೊಂಡು ಸೂರ್ಯಾಸ್ತಮಾನವಾದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು, ನಾನು ಅಲ್ಲಿಗೆ ಬರುತ್ತೇನೆಂದು ಕಾಮುಕನನ್ನು ನಂಬಿಕೆ ಬರುವಂತೆ ಮಾತನಾಡಿ ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು. ಅವನಿಗೆ ತಕ್ಕುದನ್ನು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು. ದ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋದಲು. ೭೩. ಮಾರನೆಯ ದಿನ ಲತೆಯಂತೆ ಕೋಮಲವಾದ ಶರೀರವುಳ್ಳ ದ್ರೌಪದಿಯ ಕಯ್ಯಲ್ಲಿ ಮಹಾರಾಣಿಯಾದ ಸುದೇಷ್ಣೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು ಕೀಚಕನಲ್ಲಿಗೆ ಕಳುಹಿಸಿದಳು. ಕೀಚಕನು ದ್ರೌಪದಿಯನ್ನು ಕುರಿತು ‘ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋವನ್ನುಂಟುಮಾಡಿದೆ. ಈ ದಿನ ನನಗೆ ಹೇಳಬೇಕಾದುದನ್ನು ಹೇಳು’ ಎಂದು ಅವಳ ಕಾಲಿಗೆ ಬಿದ್ದನು. ‘ಒಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ?’ ವ|| ಎಂದು ನಂಬುವ ಹಾಗೆ ಮಾತನಾಡಿ ಹಿಂದೆಯೇ ಸೂಚಿತವಾಗಿದ್ದಂತೆ ವಿರಾಟನ ನಾಟಕಶಾಲೆಯನ್ನೇ ಗುರುತು ಹೇಳಿ ಸೂರ್ಯನು ಮುಳುಗುವ ವೇಳೆಯಲ್ಲಿ ಭೀಮಸೇನನಿಗೆ ಆ

ವ|| ಎಂದು ನಂಬೆ ನುಡಿದು ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತಕ್ರಮದೊಳ್ ಕುಱುಪುವೇೞ್ದು ಸೂರ್ಯಾಸ್ತಮಯಸಮಯದೊಳ್ ಭೀಮಸೇನಂಗೆ ತದ್ವ ತ್ತಕಮನಱಪಿದೊಡೆ ಬಾಹುಯುದ್ಧಸನ್ನದ್ಧನಾಗಿ ಕಲಿಗಂಟಿಕ್ಕಿ ಗಂಡುಡೆಯುಮನುಟ್ಟು ಮೇಲುದನಿೞಯೆ ಮುಸುಕಿಟ್ಟು ಪೋಗಿ ಗುಣಣೆಯ ಬಾಗಿಲೊಳ್ ದ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೊಳಪೊಕ್ಕು-

ಕಂ|| ಸಿಂಗಬಲನೆಂಬಗುರ್ವಿನ
ಸಿಂಗಮನಸಿಧೇನುಕಿರಣಕೇಸರಮಾಲಾ|
ಸಂಗತಮನಡಸಿ ನುಂಗಲ್
ಸಂಗತಬಲನೊಂದು ಶರಭಮಿರ್ಪಂತಿರ್ದಂ|| ೭೪

ವ|| ಅನ್ನೆಗಮಿತ್ತ ಕೀಚಕನೆಂಬ ಪಾಣ್ಬಂ-
ಉ|| ಅಚ್ಚಿಗದಿಂದೞಲ್ದಿನನಡಂಗದ ಬೇಸಳಂತೆ ನೀರೊಳಂ
ಕಿಚ್ಚಿನೊಳಂ ಪೊರಳ್ದು ಪಗಲಂದಿರುಳಾದೊಡೆ ರಾಜ್ಯಮಾದವೋಲ್|
ಪೆರ್ಚಿ ಮನಕ್ಕೆ ಬಿಚ್ಚತಿಕೆವಂದಿರೆ ನಾಟಕಶಾಲೆವೊಕ್ಕು ವಿ

ದ್ಯುಚ್ಚಪಳಂ ಮನೋಜಪರಿತಾಪದಿನೋಪಳೆಗತ್ತು ಭೀಮನಂ|| ೭೫

ಚಂ|| ನುಡಿಯದೆ ಕೆಮ್ಮನಿರ್ಪಿರವಿದಾವುದು ಕಾರಣಮಾವುದೀ ಮೊಗಂ
ಗುಡದಿರವಿಂತು ಕಣ್ಬಡಿಗರಪ್ಪರೆ ಮಾನಸರಪ್ಪರೆದು ಮೆ|
ಳ್ಪಡೆ ನುಡಿದೆಯ್ದೆವಂದು ಮುಸುಕಂ ತೆಗೆದಾಗಡೆ ಮೇಲೆವಾಯ್ದು ಬ
ಲ್ದಡಿಗನವುಂಕಿ ಬಲ್ದಡಿಗನಂ ಪಿಡಿದೊರ್ಮೆಯೆ ಮಲ್ಲಯುದ್ಧದೊಳ್|| ೭೬

ವ|| ಪೋರ್ದು ಮಲ್ಲಾಮಲ್ಲಿಯಾಗೆ ಪಲವುಂ ಗಾಯಗಳೊಳಾಯಂದಪ್ಪದೆ ತನಗವಂ ಸಮಾನಬಳನಪ್ಪುದಱಂ ಪಿರಿದು ಪೊೞ್ತು ಸಂತರ್ಪಿನಂ (?) ಪೋರ್ದು ಬಳೆಯ ಪೇಱನಾನೆ ಮೆಟ್ಟಿದಂತೆ ನುರ್ಚುನೂಱಪ್ಪಿನಮವುಂಕಿ ಪಿಡಿದಡಸಿಯಗುರ್ವು ಪರ್ವೆ ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಮಾಸೋಟಿಸಿ ತಾಟಿಸಿದಾಗಳ್-

ಕಂ|| ಬಿಸುನೆತ್ತರ್ ನೆಣನಡಗೆ
ಲ್ವು ಸಮಸ್ತಂ ಸುರಿಯೆ ಕೈಗೆ ತೊವಲುೞಯಲಗು|
ರ್ವಿಸಿದುದು ತೀವಿದ ಗುಳ್ಳೆಯ
ಪಸುಬೆಂಯಂ ಸೋರ್ಚಿದಂತೆ ತನು ಕೀಚಕನಾ|| ೭೭

ಸಮಾಚಾರವನ್ನು ತಿಳಿಸಿದಳು. ಭೀಮಸೇನನು ಮಲ್ಲಯುದ್ಧಮಾಡುವುದಕ್ಕೆ ಸಿದ್ಧನಾಗಿ ವೀರಗಚ್ಚೆಯನ್ನು ಹಾಕಿ ಗಂಡಸಿನ ಉಡುಪನ್ನು ಧರಿಸಿ ಮೇಲುಹೊದಿಕೆ(ಉತ್ತರೀಯ)ಯನ್ನು ಕೆಳಗಿನವರೆಗೆ ಮುಸುಕುಹಾಕಿಕೊಂಡು ಹೋಗಿ ದ್ರೌಪದಿಯನ್ನು ನಾಟ್ಯಶಾಲೆಯ ಬಾಗಿಲಿನಲ್ಲಿರಿಸಿ ವೀರಲಕ್ಷ್ಮಿಯ ವಿವಾಹಮಂಟಪವನ್ನು ಪ್ರವೇಶಮಾಡುವ ಹಾಗೆ ಒಳಹೊಕ್ಕನು. ೭೪. ಕತ್ತಿಯ ಕಿರಣಗಳೆಂಬ ಕೇಸರದ ಮಾಲೆಯಿಂದ ಕೂಡಿರುವ ಸಿಂಹಬಲ (ಕೀಚಕ)ನೆಂಬ ಸಿಂಹವನ್ನು ಹಿಡಿದು ನುಂಗಲು ಭೀಮನು ಶಕ್ತಿಯುತವಾದ ಶರಭಮೃಗವಿರುವ ಹಾಗಿದ್ದನು. ವ|| ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರಿಕೆಯ ದುಖದಿಂದ ವ್ಯಥೆಪಟ್ಟು ನೀರಿನಲ್ಲಿಯೂ ಬೆಂಕಿಯಲ್ಲಿಯೂ ಹೊರಳಿ ಹಗಲು ರಾತ್ರಿಯಾದ ತಕ್ಷಣ ರಾಜ್ಯಪ್ರಾಪ್ತಿಯಾದ ಹಾಗೆ ಉಬ್ಬಿ ಮನಸ್ಸಿಗೆ ಸಂತೋಷವುಂಟಾಗಿರಲು ನಾಟಕಶಾಲೆಯನ್ನು ಪ್ರವೇಶಿಸಿ ಮಿಂಚಿನಂತೆ ಚಪಲನಾದ ಕೀಚಕನು ಕಾಮತಾಪದಿಂದ ಭೀಮನನ್ನು ಪ್ರಿಯೆಯೆಂದೇ ಭಾವಿಸಿ ‘ಇದೇನಿದು ಪ್ರಿಯೆ. ೭೬. ಮಾತನಾಡದೆ ಸುಮ್ಮನೆ ಇರುವುದಕ್ಕೆ ಕಾರಣವೇನು? ಮುಖವನ್ನು ತೋರಿಸದೇ ಇರುವ ಈ ಸ್ಥಿತಿಯೇನು? ಮನುಷ್ಯರಾಗಿರುವವರು ಈ ಸ್ಥಿತಿಯಲ್ಲಿ ಮೋಸಗಾರರಾಗುವುದುಂಟೇ?’ ಎಂದು ಮೋಹದ ಮಾತುಗಳನ್ನಾಡಿ ಸಮೀಪಕ್ಕೆ ಬಂದು ಮುಸುಕನ್ನು ತೆಗೆದೊಡನೆಯೇ ಬಲುದಡಿಗನಾದ ಭೀಮನು ಬಲುದಡಿಗನಾದ ಕೀಚಕನನ್ನು ಅಮುಕಿ ಹಿಡಿದುಕೊಂಡು ಮಲ್ಲಯುದ್ಧದಲ್ಲಿ ಒಂದೇ ಸಮನಾಗಿ ವ|| ಹೋರಾಡಿ ದ್ವಂದ್ವಯುದ್ಧವಾಡಿ ಅನೇಕ ಪಟ್ಟುಗಳಲ್ಲಿ ಶಕ್ತಿಹೀನನಾಗದೆ ತನಗೆ ಅವನು ಸಮಾನಬಲನಾದುದರಿಂದ ಬಹಳಹೊತ್ತು ಸಮಾನನಾಗಿ ಕಾದಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ನುಚ್ಚುನೂರಾಗುವಂತೆ ಅಮುಕಿ ಹಿಡಿದು ನೆಗ್ಗಿ ಭಯವು ಹಬ್ಬುವ ಹಾಗೆ ಬೀಸಿ ನಾಟ್ಯಶಾಲೆಯ ಕಂಭಗಳಿಗೂ ಗೋಡೆಗಳಿಗೂ ಬಡಿದು ಆಸೋಟಿಸಿ ಬೀಸಿದನು. ೭೭. ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದು ಹೋಗಿ ಕೈಯಲ್ಲಿ ತೊಗಲು ಮಾತ್ರ ಉಳಿಯಿತು. (ಪದಾರ್ಥದಿಂದ) ತುಂಬಿ ಉಬ್ಬಿಕೊಂಡಿದ್ದ ಹಸುಬೆಯ ಚೀಲವನ್ನು

ಉ|| ಆಂ ಜಗದೊಳ್ ಬಲಸ್ಥನೆನಿದಿರ್ಚುವರಾರೆನಗೆಂದು ಸೋಲದಿಂ
ಕಂಜದಳಾಕ್ಷಿಯಂ ಪಿಡಿದನೀ ಖಳನೆಂಬೞಲಿಂದಮತ್ತಮಿ|
ತ್ತಂ ಜವನೊಕ್ಕಲಿಕ್ಕಿದೊಡೆ ನಾಟಕಶಾಲೆಯೊಳೆಯ್ದೆ ರಕ್ತ ಪು
ಷ್ಪಾಂಜಳಿಗೆಯ್ದ ಮಾೞ್ಕೆಯವೊಲಿರ್ದುವು ಸೂಸಿದ ಖಂಡದಿಂಡೆಗಳ್|| ೭೮

ವ|| ಅಂತು ಸಂ ಸಂಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನಶ್ರಮದೊಳೆ ಬಾಣಸಿನ ಮನೆಯೊಳ್ ಬಂದಿರ್ದನಿತ್ತ ದ್ರೌಪದಿಯುಮುಪಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು-

ಕಂ|| ಗಂಧರ್ವವನಿತೆಯೆಂ ನಿ
ರ್ಬಂಧಂ ಬೇಡಳಿಪೆ ಸಾವೆಯೆನೆ ಮಾಣದೆ ಕಾ|
ಮಾಂಧಂ ಕೀಚಕನಾಟಿಸಿ
ಗಂಧರ್ವರಿನೞದನೆನಗೆ ದೂಱಪ್ಪಿನೆಗಂ|| ೭೯

ವ|| ಎಂದು ಗಗ್ಗರಿಕೆಗೊಳ್ವ ಸರಮಂ ಕರ್ಣಪರಂಪರೆಯಂ ಕೇಳ್ದು ಸಿಂಹಬಲನೊಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್ ಕಣ್ಗಾಣದೆಲ್ಲವಿಡಾಮರ ಡಾಕಿನಿಯಿಂದಮಾದುದೀಕೆಗಮೆಮ್ಮಣ್ಣಂಗಮೊಂದೆ ವಿಯಂ ಮಾೞ್ತೆಮೆಂದಾಕೆಯಂ ಮುಂದಿಟ್ಟು ಪೋದರಿವನನಿರುಳೊಳೆ ಸಂಸ್ಕರಿಸಲ್ವೇೞ್ಕುಮೆಂದು ಕೊಂಡುಪೋಪಾಗಳಾ ಕಳಕಳಮಂ ಭೀಮಸೇನಂ ಕೇಳ್ದವಂದಿರೊಡನೆ ರೂಪುಗರೆದು ಪೊೞಲಂ ಪೊಱಮಟ್ಟು ಬಱಸಿಡಿಲೆಱಗುವಂತೆ ನಿಜಭುಜಶಿಖರಾಸಾಲನಂಗೆಯ್ದು-

ಮ|| ವನಿತಾಹೇತುವೆ ಕೇತುವಾಯ್ತು ನಿಮಗಂ ಗಾಂಧರ್ವರಿಂದಿಂದು ನಿ
ಮ್ಮ ನಿಷೇಕಂ ನೆರೆದತ್ತು ಸತ್ತಿರೆನುತ್ತುಂ ಪೊಕ್ಕಾರ್ದು ಕಾಳಾಂಬುದ|
ಧ್ವನಿಯಿಂ ಬಾೞೆಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ ಪೊ
ಯ್ದಿನಿಸುಂ ಮಾಣದೆ ನೀಚ ಕೀಚಕನಿಕಾಯ ಧ್ವಂಸನಂ ಮಾಡಿದಂ|| ೮೦

ವ|| ಅಂತಳವಿಗೞಯೆ ಕೊರ್ವಿದ ಕೀಚಕವನಮೆಲ್ಲಮೊಂದಿರುಳೊಳೆ ಸಾಹಸ ಭೀಮನುದ್ದಾಮಕೋಪದವದಹನಜ್ವಾಲಾ ಸಹಸ್ರಂಗಳಿನಳ್ಕಿಮೆಳ್ಕಿದಂತಪ್ಪುದುಂ ನೇಸಱು ಮೂಡಿದಾಗಳಾ ಪಡೆಮಾತನಿರ್ದರಿರ್ದಲ್ಲಿಯೆ ಕೇಳ್ದು-

ಅದರಲ್ಲಿದ್ದ ಪದಾರ್ಥವನ್ನು ಖಾಲಿಮಾಡಿದಂತೆ ಕೀಚಕನ ಶರೀರವು ಭಯಂಕರವಾಯಿತು. ೭೮. ಪ್ರಪಂಚದಲ್ಲೆಲ್ಲ ನಾನೇ ಬಲಿಷ್ಠನಾದವನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು ಮೋಹದಿಂದ ಕಮಲದಳನೇತ್ರೆಯಾದ ದ್ರೌಪದಿಯನ್ನು ಈ ದುಷ್ಟನು ಹಿಡಿದನು ಎಂಬ ದುಖದಿಂದ ಯಮನು ಆ ಕಡೆಯಿಂದ ಈ ಕಡೆಗೆ ಒಕ್ಕಣಮಾಡಲಾಗಿ ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು. ವ|| ಹಾಗೆ ಭೀಮನು ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ ಕೊಂದು ಯಮನಿಗೆ ಔತಣವವಿಕ್ಕಿ ನಿತ್ಯದ ಹಾಗೆ ಅಡುಗೆಮನೆಯನ್ನು ಸೇರಿದನು. ಈ ಕಡೆ ದ್ರೌಪದಿಯು ಉಪಾಯದಿಂದ ನಾಟ್ಯಶಾಲೆಯ ಮುಂದುಗಡೆ ನಿಂತುಕೊಂಡು- ೭೯. ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ; ದುರಾಸೆಪಟ್ಟರೆ ಸಾಯುತ್ತೀಯೆ ಎಂದರೂ ಬಿಡದೆ ಕಾಮಾಂಧನಾದ ಕೀಚಕನು ಆಶೆಪಟ್ಟು ನನಗೆ ಅಪಪ್ರಥೆ ಬರುವಹಾಗೆ ಗಂಧರ್ವರಿಂದ ನಾಶವಾದನು. ವ|| ಎಂದು ಆರ್ತಸ್ವರದಿಂದ ಕೂಗಿಕೊಳ್ಳುವ ಧ್ವನಿಯನ್ನು ಕಿವಿಯಿಂದ ಕಿವಿಗೆ ಕೇಳಿದ ಸಿಂಹಬಲನಾದ ಕೀಚಕನ ಸಹೋದರರಾದ ನೂರುಜನ ಕೀಚಕರು ಓಡಿಬಂದು ಕೋಪದಿಂದ ಕುರುಡರಾಗಿ ಎಲ್ಲವೂ ಈ ಪಿಶಾಚಿಯಿಂದಾಯಿತು, ಇವಳಿಗೂ ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು ಅವಳನ್ನು ಮುಂದಿರಿಸಿಕೊಂಡು ಹೋದರು. ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ ಆ ಗಲಭೆಯ ಶಬ್ದವನ್ನು ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು ಪಟ್ಟಣದಿಂದ ಹೊರಟು ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು ೮೦. ನಿಮಗೂ ಸ್ತ್ರೀನಿಮಿತ್ತವೇ (ವಿಪತ್ಕಾರಕ) ಕೇತುಗ್ರಹವಾಯಿತು. ಗಂಧರ್ವರಿಂದ ಈ ದಿನ ಒಸಗೆ (ಮಂಗಳಕಾರ್ಯ-ತಕ್ಕಶಾಸ್ತಿ) ಯಾಯಿತು. ಸತ್ತಿರಿ; ಎನ್ನುತ್ತ ಪ್ರವೇಶಮಾಡಿ ಆರ್ಭಟಿಸಿ ಕಾಲಮೇಘದ ಧ್ವನಿಯಿಂದ ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ಹೊಡೆದು ಸ್ವಲ್ಪವೂ ಬಿಡದೆ ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು. ವ|| ಹಾಗೆ ಅಳತೆಯನ್ನು ಮೀರಿ ಕೊಬ್ಬಿದ ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ ನಾಶಪಡಿಸಿದಂತೆ ಅಗಲು ಸೂರ್ಯೋದಯವಾಯಿತು. ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ

ಮ|| ಪಡಲಿಟ್ಟಂತೆವೊಲಾಯ್ತು ಕೀಚಕಬಲಂ ಗಂಧರ್ವರಿಂದಿಂದಿರು
ಳ್ಗಡಿದೇಂ ಸಂಗಡಮಿೞ್ತುವಾಯ್ತೆ ಪೆಱವೆಣ್ಗೊಲ್ದಂಗಮೇನಾಗದಿಂ|
ದುಡಿದತ್ತಾಗದೆ ಮತ್ಸ್ಯನೊಂದು ಬಲಗೆಯ್ಯೆಂದಕ್ಕಟಾ ಎಂಬುದಂ
ನುಡಿಯಲ್ಕಾರ್ತರುಮಿಲ್ಲ ಪಾರದರದೊಳ್ ಸತ್ತಂಗೞಲ್ವನ್ನರಾರ್|| ೮೧

ಕಂ|| ರಾವಣನುಂ ಗಡ ಸೀತಾ
ದೇವಿಗೆ ಸೋಲ್ತದಱ ಫಲಮನೆಯ್ದಿದನಿವನಾ|
ರಾವಣನಿಂ ಪಿರಿಯನೆ ಪೇ
ೞೇವುದೊ ಶುಚಿಯಲ್ಲದವನ ಗಂಡುಂ ತೊಂಡುಂ|| ೮೨

ವ|| ಎಂದು ಪೊೞಲ ಜನಂಗಳ್ ಗುಜುಗುಜುಗೊಂಡು ಕೀಚಕನ ಪಡೆಮಾತನೆ ನುಡಿಯೆ ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೇನುಮನೆನಲಱಯದೆ ನಾಣ್ಚಿ ತನ್ನೊಳೆ ಮೂಗೞ್ಕೆಯನೞ್ತು ಕೆಮ್ಮನಿರ್ದಳಿತ್ತ ದುರ್ಯೋಧನನ ಗೂಢಪ್ರಣಿಗಳಾ ಮಾತಂ ಜಲಕ್ಕನಱದು ನಾಗಪುರಕ್ಕೆ ವಂದು ಸುಯೋಧನ ಸಭಾಮಧ್ಯದೊಳಿಂತೆಂದು ಬಿನ್ನಪಂಗೆಯ್ದರ್-

ಮ|| ಗುಡಿಗಂ ಬದ್ದವಣಕ್ಕಮಪ್ಪ ಪಡೆಮಾತೇಮಾತಿದಂ ಕೇಳ್ದೊಡೀ
ಗಡೆ ಮೆಚ್ಚೀಯಲೆವೇೞ್ಪುದೆಯ್ದೆ ಪರಮದ್ರೋಹರ್ಕಳಾಗಿರ್ದು ನಿ
ಮ್ಮಡಿಯೊಳ್ ಪೋಗದೆ ಕಾಡುತಿರ್ದ ಸುಭಟರ್ಕಳ್ ನೂರ್ವರುಂ ಕೀಚಕರ್
ಮಡಿದರ್ ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್|| ೮೩

ವ|| ಅದು ಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯಮಾಗಿ ಕೈಗೆವರ್ಕುಮೆಂಬುದುಂ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-

ಮ|| ಇದು ದಲ್ ಚೋದ್ಯಮತರ್ಕ್ಯಮದ್ಭುತಮಸಂಭಾವ್ಯಂ ವಿಚಾರಕ್ಕೆ ಬಾ
ರದುದೆಂತೆಂದೊಡೆ ಸಂದ ಸಿಂಹಬಲನಂ ಕೊಲ್ವನ್ನರಾರ್ ಭೀಮನ
ಲ್ಲದವರ್ ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳ
ಪ್ಪುದಱಂ ತೋಳ್ವಲದೊಳ್ ಪೆಱಂಗಮರಿದೀ ವಿಕ್ರಾಂತಮುಂ ಗರ್ವಮುಂ|| ೮೪

೮೧. ಕೀಚಕಸಮೂಹವು ರಾತ್ರಿ ಗಂಧರ್ವರಿಂದ ಚೆಲ್ಲಾಪಿಲ್ಲಿಯಾದ ಹಾಗಾಯಿತು. ಇದೂ ಸಾಮೂಹಿಕ ಮೃತ್ಯವಾಯಿತಲ್ಲವೇ? ಪರಸ್ತ್ರೀಗೆ ಅಳುಪಿದವನಿಗೆ ಏನುತಾನೆ ಆಗುವುದಿಲ್ಲ? ಈ ದಿನ ವಿರಾಟನ ಬಲಗೈ ಮುರಿದುಹೋಯಿತಲ್ಲವೇ, ಅಯ್ಯೋ ಎಂದು ಹೇಳುವವರೂ ಇಲ್ಲವಲ್ಲಾ, ಹಾದರದಲ್ಲಿ ಸತ್ತವರಿಗೆ ಅಳುವವರಾರಿದ್ದಾರೆ ೮೨. ರಾವಣನೂ ಕೂಡ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು. ಇವನು ಆ ರಾವಣನಿಗಿಂತ ಹಿರಿಯನೆ ಹೇಳು. ಸ್ವಚ್ಛವಾದ ನಡತೆಯಿಲ್ಲದವನ ಪೌರುಷಪರಾಕ್ರಮಗಳಿಂದೇನು ಪ್ರಯೋಜನ? ವ|| ಎಂದು ಪಟ್ಟಣದ ಜನಗಳು ಗುಂಪುಕೂಡಿಕೊಂಡು ಕೀಚಕನ ವಿಷಯವಾದ ಮಾತನ್ನೇ ಆಡುತ್ತಿರಲು ವಿರಾಟನ ಮಹಾರಾಣಿಯಾದ ಸುದೇಷ್ಣೆಯೂ ಹೇಡಿ ಸತ್ತ ಹಾಗೆ ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು ಸುಮ್ಮನಿದ್ದಳು. ಈ ಕಡೆ ದುರ್ಯೋಧನನ ಗೂಢಚಾರರು ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು. ೮೩. ‘ಧ್ವಜಾರೋಹಣಮಾಡುವುದಕ್ಕೂ ಮಂಗಳವಾದ್ಯ ಮಾಡಿಸುವುದಕ್ಕೂ ಯೋಗ್ಯವಾದ ಸಮಾಚಾರ’ ಎಂದರು ದೂತರು. ಅದೇನಂತಹ ಸುದ್ದಿ ಎಂದ ದುರ್ಯೋಧನ. ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು. ‘ನಿಮ್ಮ ವಿಶೇಷಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ ನೂರುಜನ ಕೀಚಕರೂ ಸ್ವಾಮಿಯ ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು. ವ|| ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ’ ಎಂದು ಹೇಳಿದರು. ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿದನು. ೮೪. ಇದು ನಿಜವಾಗಿಯೂ ಆಶ್ಚರ್ಯಕರವಾದುದು, ತರ್ಕಿಸಲಾಗದುದು, ಅದ್ಭುತವಾದುದು, ನಡೆಯಲಾಗದುದು, ವಿಚಾರ ಮಾಡಲಾಗದುದು; ಹೇಗೆಂದರೆ ಭೀಮನಲ್ಲದವರು ಸಿಂಹಬಲನನ್ನು ಕೊಲ್ಲುವವರಾರಿದ್ದಾರೆ? ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ ಈ ಪೌರುಷಮಾರ್ಗವು ಇತರರಿಗೆ ಅಸಾಧ್ಯ. ವ|| ಆದುದರಿಂದ

ವ|| ಅದಱಂ ಪಾಂಡವರೈವರುಂ ವಿರಾಟಪುರದೊಳಿರ್ದರಾಗಲೆವೇೞ್ಕುಮವರಿರ್ದರಪ್ಪೊಡೆ-

ಚಂ|| ಪರಿಭವದೊಂದು ತುತ್ತ ತುದಿ ಕೃಷ್ಣೆಯ ಬನ್ನದೊಳಾಗೆ ಜೂದಿನೊಳ್
ಪೊರಸೞವಂತೆ ತಮ್ಮರಸುಗೆಟ್ಟು ಕೞಲ್ದೆರ್ದೆಗೆಟ್ಟರಣ್ಯದೊಳ್|
ತಿರಿತರುತಿರ್ದ ಕಣ್ಬಡಿಗರನ್ ಮಗುೞ್ದುಂ ಬಿಱುತೋಡಿ ಬೇಡರೊಳ್
ನೆರೆದಿರಲಲ್ಲದೊಡ್ಡಯಿಸಿ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ|| ೮೫

ವ|| ಎಂಬುದುಮಾ ಕೌರವನ ಮಾತಿಂಗಮರಾಪಗಾನಂದನನಿಂತೆಂದಂ-

ಮ|| ಸ್ರ|| ರಸೆಯೊಳ್ ಕಾಲಾಗ್ನಿರುದ್ರಂ ಜಲಶಯನದೊಳಂಭೋಜನಾಭಂ ಪೊದಳ್ದಾ|
ಗಸದಿಂ ಸುತ್ತಿರ್ದಜಾಂಡೋದರದೊಳಜನಡಂಗಿರ್ಪವೋಲ್ ಕಾರಣಕ್ಕೆಂ||
ದೊಸೆದಿರ್ದರ್ ಪಾಂಡವರ್ ಕಾನನದೊಳಿರದವರ್ ನನ್ನಿಯಂ ತಪ್ಪೆಯುಂ ಸ
ಪ್ತಸಮುದ್ರಂ ಮೇರೆಯಂ ತಪ್ಪೆಯುಮೊಳರೆ ಬಿಗುರ್ತಾಂಪವರ್ ರಾಜರಾಜಾ|| ೮೬

ವ|| ಎನೆ ಕುಂಭಸಂಭವನಿಂತೆಂದಂ-

ಮ|| ಕೃತಶಾಸ್ತ್ರರ್ ಧೃತಶಾಸ್ತ್ರರಪ್ರತಿಹತ ಪ್ರಾಗಲ್ಭ್ಯರೀಗಳ್ ಪೃಥಾ
ಸುತರುದ್ಯೋಗಮನೆತ್ತಿಕೊಳ್ವ ದೆವಸಂ ಸಾರ್ಚಿತ್ತು ಕಾಲಾವ|
ಸ್ಥಿತಿಯುಂ ಬಂದುದಿದರ್ಕೆ ಮಾಣ್ದಿರದೆ ಮಂತ್ರಾವಾಸದೊಳ್ ಮಂತ್ರ ನಿ
ಶ್ಚಿತನಾಗೀಗಡೆ ಕಾದಿದಲ್ಲದಿಳೆಯಂ ನೀನೆಂತುಮೇನಿತ್ತಪಯ್|| ೮೭

ವ|| ಎಂದೊಡೆ ಕರ್ಣನಿಂತೆಂದಂ-

ಚಂ|| ಬಗೆಯದೆ ಸಾಮಮಂ ಬಿಸುಟು ಭೇದಮನೊಲ್ಲದುದಗ್ರದಾನಮಂ
ನೆಗೞದೆ ದಂಡಮಂ ನಿನಗೆ ಮಾಡಿದಕೃತ್ಯರನಂತು ಮಾಣ್ಬುದೇ|
ಬಗೆ ಪಗೆ ನೀಗೆಯುಂ ಮುಳಿಸು ಪೋಗೆಯುಮಾಯತಿ ಪೆರ್ಚೆಯುಂ ಜಗಂ
ಪೊಗೞೆಯುಮಾಂತರಾತಿನೃಪರಂ ತವೆ ಕೊಲ್ವುದಹೀಂದ್ರಕೇತನಾ|| ೮೮

ವ|| ಎಂಬುದುಂ ಸುಯೋಧನನಿರ್ವರ ನುಡಿಯುಮಂ ಕೇಳ್ದು ತನ್ನ ಮನದೊಳಾದ ಕಜ್ಜಮನಿಂತೆಂದಂ-

ಪಾಂಡವರೈದು ಜನವೂ ವಿರಾಟನಗರದಲ್ಲಿದ್ದೇ ತೀರಬೇಕು. ಅವರಿರುವುದಾದರೆ- ೮೫. ದ್ರೌಪದಿಯ ಅವಮಾನದ ಪರಮಾವಯಿಂದ ಜೂಜಿನಲ್ಲಿ ಪಾರಿವಾಳವು ನಾಶವಾಗುವಂತೆ ತಮ್ಮ ರಾಜ್ಯವನ್ನು ಕಳೆದುಕೊಂಡು, ಗೌರವವನ್ನು ನೀಗಿ, ಉತ್ಸಾಹಶೂನ್ಯರಾಗಿ ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು ಪುನ ಹೆದರಿ ಓಡಿಹೋಗಿ ಬೇಡರಲ್ಲಿ ಸೇರಿರಬೇಕಲ್ಲದೆ ಗುಂಪುಕೂಡಿ ರಾಜ್ಯದಲ್ಲಿ ಸೇರುವುದು ಸೂಕ್ತವೇ? ಎಂದ ದುರ್ಯೋಧನ. ವ|| ಆ ದುರ್ಯೋಧನನ ಮಾತಿಗೆ ಭೀಷ್ಮನು ಹೇಳಿದನು: ೮೬. ಕಾಲಾಗ್ನಿರುದ್ರನು ಪಾತಾಳದಲ್ಲಿಯೂ ವಿಷ್ಣುವು ಜಲಶಯನದಲ್ಲಿಯೂ ಬ್ರಹ್ಮನು (ವ್ಯಾಪ್ತವಾದ) ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿಯೂ ಅಡಗಿರುವ ಹಾಗೆ ಯಾವುದೋ ಒಂದು ಕಾರಣಕ್ಕಾಗಿ ಪಾಂಡವರು ಸಮಾಧಾನ ಚಿತ್ತದಿಂದ ಕಾಡಿನಲ್ಲಿ ಅಡಗಿದ್ದರು. ದುರ್ಯೋಧನ ಅವರು ಹಾಗೆ ಮಾಡದೆ ಸತ್ಯವನ್ನು ತಪ್ಪಿದರೂ ಏಳು ಸಮುದ್ರಗಳು ಮೇಲೆದಪ್ಪಿದರೂ ಪ್ರತಿಭಟಿಸುವವರು ಯಾರು ಇದ್ದಾರೆ? ಎನ್ನಲು ದ್ರೋಣಾಚಾರ್ಯರು ಹೀಗೆಂದರು. ೮೭. ಪಾಂಡವರು ಶಾಸ್ತ್ರವನ್ನು ತಿಳಿದವರು. ಶಸ್ತ್ರವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು. ಅವರು ಕಾರ್ಯಾರಂಭಮಾಡುವ ಕಾಲ ಸಮೀಪಿಸಿದೆ. ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು. ಯುದ್ಧಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವುದಿಲ್ಲವಲ್ಲವೆ? ವ|| ಎನ್ನಲು ಕರ್ಣನು ಹೀಗೆ ಹೇಳಿದನು- ೮೮. ದುರ್ಯೋಧನ, ಸಾಮೋಪಾಯವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠರಾದ ದಾನೋಪಾಯವನ್ನು ಅಂಗೀಕರಿಸದೆ ನಿನಗೆ ದಂಡೋಪಾಯವನ್ನೇ ನಿಷ್ಕರ್ಷಿಸಿದ ಆ ಕೃತಘ್ನರನ್ನು ಹಾಗೆಯೇ ಬಿಡುವುದು ಯೋಗ್ಯವಲ್ಲ. ಶತ್ರು ತೊಲಗುವಂತೆಯೂ ಕೋಪವು ಪರಿಹಾರವಾಗುವಂತೆಯೂ ಪೌರುಷವು ಹೆಚ್ಚುವಂತೆಯೂ ಲೋಕವು ಹೊಗಳುವಂತೆಯೂ

ಚಂ|| ಅಱಯಲೆವೇೞ್ಪುದಿರ್ದೆಡೆಯನಿರ್ದೆಡೆಯಿಂ ತೆಗೆದಾಜಿರಂಗದೊಳ್
ನಿಱಸಲೆವೇೞ್ಪುದಂತವರನಂತವರಿರ್ಪೆಡೆಯುಂ ವಿರಾಟನಿ|
ರ್ಪಱಕೆಯ ಪಟ್ಟಣಂ ನಮಗಿದೇವಿರಿದಪ್ಪುದು ತಳ್ವದೆಯ್ದಿ ನಾಂ
ತುಱುವನೆ ಕೊಳ್ವಮಂತು ತುಱುಗೊಂಡೊಡೆ ಪಾಂಡವರಿರ್ಪ ಗಂಡರೇ|| ೮೯

ವ|| ಎಂದು ಪಿರಿದುಮಾಗ್ರಹಂಬೆರಸು ಗೋಗ್ರಹಣಪ್ರಪಂಚಮನೆ ನಿಶ್ಚಯಿಸಿ ವಿರಾಟನ ದಾಯಿಗಂ ತ್ರಿಗರ್ತಾಶಂ ಸುಶರ್ಮನುಮಂ ನಾಲ್ಭಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇೞ್ದು ತುಱುವಂ ಕೊಳಿಸಿದಾಗಳ್-

ಚಂ|| ಕರೆದು ವಿರಾಟನುತ್ತರನನಾತ್ಮತನೂಜನನಾ ಪೊೞಲ್ಗೆ ಕಾ
ಪಿರಿಸಿ ಧರಾತಳಂ ತಳರ್ವವೋಲ್ ನಡೆದಾಗಳೆ ಪಾಂಡುಪುತ್ರರ|
ಯ್ವರುಮಿದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮಿಲ್ಲಿ ಮಾ
ಣ್ದಿರಲಣಮಾಗ ಪೂಣ್ದವಯುಂ ನೆದತ್ತು ಕಡಂಗಿ ಕಾದುವಂ|| ೯೦

ವ|| ಎಂದು ತಮ್ಮಯ್ವರುಮಾಳೋಚಿಸಿ ವಿಕ್ರಮಾರ್ಜುನನಂ ಪೆಱಗಣ ಕಾಪಿಂಗಿರಲ್ವೇೞ್ದು ನಾಲ್ವರುಂ ನಾಲ್ಕು ಸಮುದ್ರಂಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಳ್-

ಚಂ|| ಕಡಲ ಪೊದಳ್ದ ಪೆರ್ದೆರೆಗಳೆಯ್ದೆ ಕುಲಾದ್ರಿಗಳೊಳ್ ಪಳಂಚಿ ತೂ
ಳ್ದೊಡನೆ ಮರಲ್ದವೋಲ್ ಕೆಡೆಯೆ ಪಾಯಿಸಿದುಗ್ರರಥಂಗಳೞತ||
ಳ್ತಡಿಗಿಡೆ ಪಾಯ್ದರಾತಿನೃಪರಂ ತಱದಾಂತಿರದಾ ಸುಶರ್ಮನಂ
ಪಿಡಿದು ನೆಗೞ್ತೆಯಂ ಪಡೆದು ಸಾಹಸದಿಂ ತುಱುವಂ ಮಗುೞದರ್|| ೯೧

ವ|| ಅನ್ನೆಗಮತ್ತ ಸುಯೋಧನಂ ಸಮಸ್ತ ಸಾಧನಂಬೆರಸು-

ಉ|| ಉತ್ತರಂ ಗೋಗ್ರಹಂ ಪಿರಿದುಮಾಗ್ರಹಮಂ ಮನದೊಳ್ ತಗುಳ್ಚೆ ದಿ
ಗ್ಭಿತ್ತಿ ವಿಭೇದಿ ಪೆರ್ಚೆ ಕದನಾನಕರಾವಮಗುರ್ವಿನುರ್ವು ಪ|
ರ್ವುತ್ತಿರೆ ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳ್ದು ತು
ಳ್ಕುತ್ತಿರೆ ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ|| ೯೨

ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಎಂದನು. ೮೯. ಎನ್ನಲು ದುರ್ಯೋಧನನು ಇಬ್ಬರ ಮಾತನ್ನು ಕೇಳಿ ತನ್ನ ಅಭಿಪ್ರಾಯವನ್ನು ಸೂಚಿಸಿದನು. ಮೊದಲು ಅವರು ಇರುವ ಸ್ಥಳವನ್ನು ತಿಳಿಯಬೇಕು. ಅವರನ್ನು ಅವರಿರುವ ಸ್ಥಳದಿಂದ ಓಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು. ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರವು ಅವರಿರುವ ಸ್ಥಳ. ನಮಗೆ ಆ ವಿರಾಟನಗರವು ಏನು ದೊಡ್ಡದು? ಸಾವಕಾಶಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ. ಹಾಗೆ ಹಸುಗಳನ್ನು ಬಂಸಿದರೆ ಪಾಂಡವರು ಸುಮ್ಮನಿರುವ ಶೂರರಲ್ಲ. ವ|| ಎಂದು ವಿಶೇಷ ಕೋಪದಿಂದ ಕೂಡಿ ಪಶುಗಳನ್ನು ಬಂಸುವ ವಿಷಯವನ್ನೇ ನಿಶ್ಚಯಿಸಿದರು. ವಿರಾಟನ ಜ್ಞಾತಿಯೂ ತ್ರಿಗರ್ತಾಶನೂ ಆದ ಸುಶರ್ಮನನ್ನು ನಾಲ್ಕು ಸಾವಿರ ತೇರುಗಳೊಡನೆ ದಕ್ಷಿಣ ದಿಗ್ಭಾಗಕ್ಕೆ ಕಳುಹಿಸಿ ಪಶುಗಳನ್ನು ಹಿಡಿಸಿದರು. ೯೦. ವಿರಾಟನು ತನ್ನ ಮಗನಾದ ಉತ್ತರನನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಪಾಂಡವರೈವರೂ ‘ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು. ಇಲ್ಲಿ ತಡೆದಿರಲಾಗದು. ಪ್ರತಿಜ್ಞೆ ಮಾಡಿದ ಗಡುವೂ ಪೂರ್ಣವಾಗಿದೆ. ಉತ್ಸಾಹದಿಂದ ಯುದ್ಧಮಾಡೋಣ’ ವ|| ಎಂದು ತಾವಯ್ದುಜನವೂ ತಮ್ಮಲ್ಲಿ ಆಲೋಚಿಸಿ ವಿಕ್ರಮಾರ್ಜುನನನ್ನು ನಗರದ ಹಿಂಗಾವಲಿಗೆ ಇರಹೇಳಿ ನಾಲ್ಕು ಜನರೂ ನಾಲ್ಕು ಸಮುದ್ರಗಳೇ ಮೇರೆದಪ್ಪಿದಂತೆ ವಿರಾಟನೊಡನೆ ಕೂಡಿ ಹೋಗಿ ಪ್ರತಿಭಟಿಸಿದರು. ೯೧. ಸಮುದ್ರದಲ್ಲಿ ವ್ಯಾಪ್ತವಾದ ದೊಡ್ಡ ಅಲೆಗಳು ಕುಲಪರ್ವತಗಳನ್ನು ತಗುಲಿ ಹಿಂದಕ್ಕೆ ಮರಳಿದಂತೆ ಮುಂದಕ್ಕೆ ನುಗ್ಗಿಸಿದ ಭಯಂಕರವಾದ ರಥಗಳನ್ನು ಹಿಂದಕ್ಕೆ ತಳ್ಳಿ ಬೀಳಿಸಿ ತಳಭಾಗವು ನಾಶವಾಗಿ ಅಡಿಮೇಲಾಗಲು ನುಗ್ಗಿದ ಶತ್ರುರಾಜರನ್ನೂ ಸುಶರ್ಮನನ್ನೂ ಬಿಡದೆ ಎದುರಿಸಿ ಹಿಡಿದು ಪ್ರಸಿದ್ಧಿಯನ್ನು ಪಡೆದು ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು. ವ|| ಅಷ್ಟರಲ್ಲಿ ಆ ಕಡೆ ದುರ್ಯೋಧನನು ಸಮಸ್ತ ಸೈನ್ಯದೊಡಗೂಡಿ- ೯೨. ಉತ್ತರದಿಕ್ಕಿನ ಗೋವುಗಳನ್ನು ಹಿಡಿಯಲು ಯೋಚಿಸಿ ದಿಗಂತವನ್ನು ಒಡೆಯುತ್ತಿರುವ ಯುದ್ಧಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚು ಹೊರಹೊಮ್ಮುತ್ತಿರಲು ಪ್ರಭುವಾದ ದುರ್ಯೋಧನನು

ಚಂ|| ಪಸರಿಸಿ ಪೊಕ್ಕು ಕೂಕಿಱದು ಕಾದುವ ಬಲ್ಲಣಿಗಳ್ ಪಳಂಚೆ ಪಾ
ಯಿಸುವ ದೞಕ್ಕಗುರ್ವೆಸೆಯೆ ನೂಂಕಿದ ಬಲ್ಲಣಿಗೆತ್ತಮೆಯ್ದೆ ಚೋ|
ದಿಸುವ ರಥಕ್ಕೆ ಪೆಳ್ಪಳಿಸದೊರ್ವರಿನೊರ್ವರೆ ಮಿಕ್ಕು ಪಾರ್ದು ಸಾ
ರ್ದಿಸೆ ತುಱುಗಾಱರಂದಿನಿಸು ಬಲ್ವಲನಾದುದೊಂದು ಕಾಳೆಗಂ|| ೯೩

ಕಂ|| ಮಚ್ಚರದಿನೊರ್ವರೊರ್ವರ
ನುಚ್ಚಳಿಸಿ ತಗುಳ್ದು ಗೋವರಾರ್ದಿಸೆ ಕೀೞಂ|
ಕರ್ಚಿ ಪುಡಿಯೊಳ್ ಪೊರಳ್ದುವು
ನಚ್ಚಿನ ಕಾಂಭೋಜವಾಜಿಗಳ್ ಕೆಲವಾಗಳ್|| ೯೪

ವ|| ಅಂತು ಮತ್ತು ಮನದೊಳೊಡಂಬಟ್ಟಂತೆ ಮನಮನೆಡಗಲಿಸಿ ಪರಿವ ಜಾತ್ಯಶ್ವಂಗಳೆಲ್ಲ ಮೞಗಾಳೆಗದೊಳ್ ಸತ್ತೊಡೆ-

ಚಂ|| ತುಱು ಪರಿವಾಗಳೆಮ್ಮ ಪೆಣನಂ ತುೞದುಂ ಪರಿಗುಂ ದಲೆಂದು ಚಿ
ತುಱುಗೊಳೆ ಬಾೞೆಮೆಂದು ತುಱುಗೋಳೊಳೆ ಸಾವುದು ಸೈಪಿದೆಂದು ಪಾ|
ಯ್ದಱಕೆಯ ಗೋವರಣ್ಮಿ ಬರೆ ಪಾಯಿಸಿ ಘೋೞಯಿಲರ್ ತಗುಳ್ದು ತ
ತ್ತಱ ತಱದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್|| ೯೫

ವ|| ಆಗಳೊರ್ವ ಗೋವಳನನಿಬರ ಸಾವುಮಂ ಕಂಡು ಮನದೊಳಾದೇವಂ ಪೆರ್ಚೆಯುಂ ತುಱುವ ಪೋಗಿಂಗಾಱದೆ ವಿರಾಟಪುರಕ್ಕೆ ವಂದುತ್ತರಂಗೆ ಪೇೞುಗಳ್-

ಚಂ|| ಪೆಱಗಣ ಕಾಪೆನ್ನನೆ ಮಹೀಪತಿ ಪೂಣಿಸಿ ಪೋದನಾಂ ಗಡಂ
ತುಱುಗೊಳೆ ಮಾಣೆನೆನ್ನಿದಿರ್ಗೆ ರಾವಣ ಕೋಟಿಯುಮಾಂತುಮೇಂ ಗೆಲಲ್|
ನೆಗುಮೆ ತನ್ನಿಮಿನ್ನೆನಗೆ ಸಾರಥಿಯಪ್ಪನನೀಗಳೆಂದು ಪೊ
ಚ್ಚಱಸೆ ವಿರಾಟನಂದನನದೆಲ್ಲಮನಾಗಡೆ ವಿಕ್ರಮಾರ್ಜುನಂ|| ೯೬

ವ|| ಕೇಳ್ದಾ ಪೊೞ್ತೆ ಪೊೞುಗೆ ದ್ರೌಪದಿಗೆ ಬೞಯನಟ್ಟಿ ಬರಿಸಿ-

ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು. ೯೩. ಪ್ರಸರಿಸಿ ಹೊಕ್ಕು ಮೇಲಕ್ಕೆ ನೆಗೆದು ಹೋರಾಡುವ ಬಲಿಷ್ಠರಾದ ಕಾಲಾಳುಗಳು ತಾಗಲು, ಮುನ್ನುಗ್ಗಿಸುವ ಸೈನ್ಯಕ್ಕೆ ಭಯವುಂಟಾಗುವಂತೆ ಮುಂದೆ ನುಗ್ಗಿದ ಬಲವಾದ ಕಾಲಾಳುಗಳಿಗೂ ವೇಗವಾಗಿ ನಡೆಸುತ್ತಿರುವ ತೇರುಗಳಿಗೂ ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ ಸಮೀಪಕ್ಕೆ ಬಂದು ಬಾಣಪ್ರಯೋಗಮಾಡಲು ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು. ೯೪. ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟದಿಂದ ಹೊಡೆಯಲು (ಜಯಿಸಿಯೇ ತೀರುತ್ತೇವೆಂದು) ನಂಬಿದ್ದ ಕೆಲವು ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು. ವ|| ಹಾಗೆ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಮನಸ್ಸನ್ನೂ ಮೀರಿ ಓಡುವ ಜಾತಿಕುದುರೆಗಳೆಲ್ಲ ಆ ಸಾಮಾನ್ಯಯುದ್ಧದಲ್ಲಿ ಸತ್ತವು. ೯೫. ದನಗಳು ಓಡುವಾಗ ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲವೇ? ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು. ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ (ಅದೃಷ್ಟ) ಎಂದು ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷಪ್ರದರ್ಶನಮಾಡಿ ಬರಲು ಕುದುರೆಯ ರಾವುತರು ಕುದುರೆಗಳನ್ನು ಮುನ್ನುಗ್ಗಿಸಿ ಅವರನ್ನು ಬೆನ್ನಟ್ಟಿ ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು. ವ|| ಆಗ ಒಬ್ಬ ಗೋಪಾಲಕನು ಅಷ್ಟುಮಂದಿಯ ಸಾವನ್ನು ಕಂಡು ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ ವಿರಾಟನಗರಕ್ಕೆ ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು. ೯೬. ನಗರದ ಹಿಂಗಾವಲಿಗೆ ರಾಜನು ನನ್ನನ್ನು ನಿಯಮಿಸಿ ಹೋದನು. ಆದರೂ ಪಶುಗಳನ್ನು ಸೆರೆಹಿಡಿಯುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ, ನನ್ನ ಇದಿರಾಗಿ ಕೋಟಿ ರಾವಣರು ಬಂದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ? ಈ ನನಗೆ ಸಾರಥಿಯಾಗುವವನನ್ನು ಈಗಲೆ ತನ್ನಿರಿ ಎಂದು ಉತ್ತರಕುಮಾರನು ವಿಜೃಂಭಿಸಲು (ಜಂಬ ಕೊಚ್ಚಲು) ಅದೆಲ್ಲವನ್ನೂ ಅರ್ಜುನನು ಕೇಳುತ್ತಿದ್ದನು. ವ|| ತಕ್ಷಣವೇ ದ್ರೌಪದಿಗೆ ದೂತರ ಮೂಲಕ ಸಮಾಚಾರವನ್ನು ಕಳುಹಿಸಿ ಬರಮಾಡಿದನು.

ಉ|| ಸಾರಥಿ ಮಾಡು ಮತ್ಸ್ಯಸುತನುತ್ತರನಂ ತದರಾತಿಸೈನ್ಯ ಕೂ
ಪಾರದ ಪಾರಮಂ ತಡೆಯದೆಯ್ದುವೆನೆಂಬುದುಮಂತೆ ಬಂದು ಪಂ|
ಕೇರುಹವಕ್ತ್ರೆ ಮತ್ಸ್ಯಸುತನಂ ನುಡಿದಳ್ ನಿನಗಾಜಿರಂಗದೊಳ್
ಸಾರಥಿಯಪ್ಪೊಡಪ್ಪುದು ಶಿಖಂಡಿಯೆ ನಿನ್ನೊರೆಗುಂತೆ ಗಂಡರಾರ್|| ೯೭

ವ|| ಎಂಬುದುಂ ಬೃಹಂದಳೆಯಲ್ಲಿಗುತ್ತರಂ ತನ್ನ ತಂಗೆಯುತ್ತರೆಯನೆ ಬೞಯನಟ್ಟಿ ಬರಿಸಿ-

ಉ|| ಸಾರಥಿಯಪ್ಪೊಡಪ್ಪನೆನಗೀತನೆ ಪೋ ಪೆಱರೇವರಿನ್ ನೆರಂ
ಬಾರೆನೆನುತ್ತೆ ತನ್ನ ರಥಮಂ ತರವೇೞರದೆಯ್ದೆ ಘೋರ ಕಾಂ||
ತಾರಮನೊಂದು ಬೇಗೆ ಪರಿವಂತು ರಥಂ ಪರಿದತ್ತು ವೈರಿ ಕಾಂ
ತಾರಮನೞ್ವಲಂಕದ ಬೃಹಂದಳೆ ಚೋದಿಸೆ ಚೋದ್ಯಮುಪ್ಪಿನಂ|| ೯೮

ವ|| ಅಂತು ಕಿಱದಂತರಮಂ ಪೋಗೆವೋಗೆ-

ಚಂ|| ಕರಿಘಟೆ ನೀಳಮೇಘಘಟೆಯಂತೆ ತುರಂಗದೞಂ ಸಮುದ್ರದೊಳ್
ತರತರದಿಂದಮೇೞ್ವ ತೆರೆಯಂತೆ ರಥಂ ಮಕರಂಗಳಂತಗು
ರ್ವುರಿವರಿಯುತ್ತಮಿರ್ಪಣಿ ಬೃಹದ್ಬಡಬಾನಳನಂತೆ ತೋ ಭೀ
ಕರತರಮಾದುದುತ್ತರನ ಕಣ್ಗೆ ಸುಯೋಧನಸೈನ್ಯಸಾಗರಂ|| ೯೯

ವ|| ಆಗಳದಂ ಕಂಡುತ್ತರನೊತ್ತರಮೊತ್ತಿದಂತೆ ಬೆರ್ಚಿ ಬೆಗಡುಗೊಂಡು-

ಉ|| ನೋಡಲೞುಂಬಮೆಂದೊಡಿದನಾಂತಿಱದಾರ್ ತವಿಪನ್ನರೆಂದು ನಾ
ಣೋಡೆ ವಿರಾಟಸೂನು ರಥದಿಂದಿೞದೋಡಿದೊಡೆಯ್ದೆ ಪೂಣ್ದು ಬೆ|
ರ್ಚೋಡೆ ಕಿರೀಟಿ ತನ್ನನಱಪುತ್ತೆ ಶವಿದ್ರುಮದಲ್ಲಿಗಾತನಂ
ನೀಡಿರದುಯ್ದು ನೀಡಿಸಿದನಾತನಿನಲ್ಲಿಯ ಕೈದುವೆಲ್ಲಮಂ|| ೧೦೦

ವ|| ಅಂತು ಗಾಂಡೀವಿ ಗಾಂಡೀವಂ ಮೊದಲಾಗೆ ದಿವ್ಯಶರಾಸನಶರ ವಿಚಿತ್ರತನುತ್ರಂಗಳೆಲ್ಲಮಂ ಗೆಲ್ಲಮಂ ತನಗಾವಗಂ ಕೊಳ್ವಂತೆ ಕೊಂಡು ಪಗೆವರ ಗಂಟಲ ಬಳೆಯನೊಡೆದು ಕಳೆವುದನನುಕರಿಸುವಂತೆ ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ಕಳೆದು-

೯೭. ‘ಮತ್ಸ್ಯನ ಮಗನಾದ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು. ಅವನ ಶತ್ರುಸೇನಾಸಮುದ್ರವನ್ನು ನಾನು ಜಯಿಸಿ ಬಿಡುತ್ತೇನೆ ಎಂದು ಹೇಳಿದನು. ದ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು. ಯುದ್ಧರಂಗದಲ್ಲಿ ನಿನಗೆ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು. ನಿನಗೆ ಸಮಾನರಾದ ಶೂರರಾಗಿದ್ದಾರೆ? ಎಂದಳು. ವ|| ಉತ್ತರನು ತನ್ನ ತಂಗಿಯಾದ ಉತ್ತರೆಯ ಮೂಲಕ ಸಮಾಚಾರವನ್ನು ಕಳುಹಿಸಿ ಬೃಹಂದಳೆಯನ್ನು ಬರಮಾಡಿದನು. ೯೮. ಸಾರಥಿಯಾಗುವುದಾದರೆ ಈತನೇ ಸಮರ್ಥ ಬಿಡು; ಇತರರು ಏನು ಮಾಡಿಯಾರು? ಇನ್ನು ಯಾರ ಸಹಾಯವನ್ನೂ ನಾನು ಅಪೇಕ್ಷಿಸುವುದಿಲ್ಲ ಎಂದು ಹೇಳುತ್ತ ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೊರಟನು. ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ಶೂರನಾದ ಬೃಹಂದಳೆಯು ಆಶ್ಚರ್ಯವಾಗುವ ಹಾಗೆ ತೇರನ್ನು ನಡೆಸಿದನು. ಶತ್ರುಗಳೆಂಬ ಕಾಡಿನ ಕಡೆಗೆ ತೇರು ಧಾವಿಸಿತು. ವ|| ಹಾಗೆ ಸ್ವಲ್ಪ ದೂರ ಹೋಗುತ್ತಲು ೯೯. ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ ಕುದುರೆಯ ಸೈನ್ಯವು ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆಯೂ ತೇರುಗಳು ಮೊಸಳೆಗಳಂತೆಯೂ ದೊಡ್ಡ ಕಿಚ್ಚಿನಂತೆ ಹರಿದುಬರುತ್ತಿರುವ ಪದಾತಿಸೈನ್ಯವು ದೊಡ್ಡ ಬಡಬಾಗ್ನಿಯಂತೆಯೂ ಕಾಣಲು ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು. ವ|| ಅದನ್ನು ನೋಡಿ ಉತ್ತರನು ಇದ್ದಕ್ಕಿದ್ದ ಹಾಗೆ ಆಕ್ರಮಿಸಲ್ಪಟ್ಟವನ ಹಾಗೆ ಬೆಚ್ಚಿ ಭಯವನ್ನು ಹೊಂದಿದನು. ೧೦೦. ‘ನೋಡುವುದಕ್ಕೆ, ಅಸಾಧ್ಯವಾದ ಇದನ್ನು ಪ್ರತಿಭಟಿಸಿ ನಾಶಮಾಡುವವರಾರು’ ಎಂದು ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಿದನು. (ಹಿಂದೆ) ಹೆಮ್ಮೆಯಿಂದ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಿಹೋಗುತ್ತಿರುವ ಉತ್ತರನಿಗೆ ಅರ್ಜುನನು ತನ್ನ ಪರಿಚಯವನ್ನು ಮಾಡಿಕೊಟ್ಟು ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು- (ತೆಗೆದುಕೊಂಡನು) ವ|| ಹಾಗೆ ಅರ್ಜುನನು ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ವಿಜಯಸೂಚಕವಾಗಿಯೇ ಅಂಗೀಕರಿಸಿದನು. ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ ಪೂರ್ಣವಾಗಿ

ಚಂ|| ಬಿಡೆ ಪಿಣಿಲಂ ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದಂದು ಗಂ
ಡುಡೆಯುಡೆ ಗಂಡುಗೆಟ್ಟುದು ನೆಗೞ್ತೆಯ ಗಾಂಡಿವಮಂ ತಗುಳ್ದು ಜೇ|
ವೊಡೆಯೆ ಸಿಡಿಲ್ ಸಿಡಿಲ್ದು ಪೊಡೆವಂತೆವೊಲಾಯ್ತೆನೆ ಗಂಡಗಾಡಿ ನೂ
ರ್ಮಡಿ ಮಿಗಿಲಾದುದಾ ರಥಮನೇಱಲೊಡಂ ಪಡೆಮೆಚ್ಚೆಗಂಡನಾ|| ೧೦೧

ವ|| ಅನ್ನೆಗಮತ್ತ ಪರಸೈನ್ಯಭೈರವನ ಬರವಿಂಗಳ್ಕಿ ಗಾಂಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುಧ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ-

ಚಂ|| ಅವಯ ಲೆಕ್ಕಮಂ ನೆಱಪಿ ನನ್ನಿಗೆ ಮಾಣದೆ ಕಾದಲೆಂದು ಬಂ
ದವನಿವನರ್ಜುನಂ ತೊಡರ್ದು ನಿಲ್ಲದೆ ನೀನೊಡಗೊಂಡು ಪೋಗು ಗೋ|
ವಹಮನಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂ
ಬಿವರ್ವೆರಸಾಂಪೆನಾನಿನಿಸನೀ ಯೆಡೆಯೊಳ್ ಕದನತ್ರಿಣೇತ್ರನಂ|| ೧೦೨

ವ|| ಎಂಬುದುಂ ಸುಯೋಧನಂ ಪಿರಿದುಮಾಕುಳಂಬೆರಸು ಗೋಕುಲಮಂ ಕೊಂಡುಪೋಗೆ ಪೋಗಲೀಯದುತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದು-

ಮ|| ಪಗೆ ತೀರ್ಗುಂ ಬಗೆ ತೀರ್ಗುಮಾ ಕುರುಕುಳಪ್ರಖ್ಯಾತನಂ ಕಾದಿ ತೊ
ಟ್ಟಗೆ ಗೋವೃಂದಮನಾಂ ಮಗುೞದಪೆನೆಂದಾರ್ದೆಚ್ಚು ತನ್ನಂಕದಂ|
ಬುಗಳೊಂದೊಂದಱಲೊಂದು ಲಕ್ಕ ಬಲಮಂದೞುಡೆ ದುರ್ಯೋಧನಂ
ಮಿಗೆ ಸೋಲ್ತೋಡೆ ಮಗುೞದಂ ತುಱುಗಳಂ ವಿದ್ವಿಷ್ಟವಿದ್ರಾವಣಂ|| ೧೦೩

ಚಂ|| ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಯೊಳ್ ತೊಡಂಕಿ ನಿ
ಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ|
ಗ್ಗದ ನಿಡುಗೋಡು ಮೇಡುಮಮರುತ್ತುಮಿಱುಂಕಿದ ಕೆಚ್ಚಲೆತ್ತಮೆ
ತ್ತಿದ ಕುಡಿವಾಲಮಂದೆಸೆಯೆ ಕರ್ಬಸುಗಳ್ ಪರಿಗೊಂಡುವಾಜಿಯೊಳ್|| ೧೦೪

ವ|| ಅಂತು ತುಱುವಂ ಮಗುೞ ಮಗುೞದೆ ತನಗಿದಿರೊಡ್ಡಿ ನಿಂದರಿನೃಪಬಲಮನರೆದು ಸದೆದು-

ತೊಟ್ಟಿದ್ದ ಮುಂಗಯ್ಯಿನ ಬಳೆಗಳನ್ನು ಒಡೆದುಹಾಕಿದನು. ೧೦೧. ಕೂದಲಿನ ಗಂಟನ್ನು (ಹೆರಳನ್ನು) ಬಿಚ್ಚಲು ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಮತ್ತು ಭಯದಿಂದ ಬಾಯಿಬಿಟ್ಟಿತು. ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು ತನ್ನ ಪೌರುಷವನ್ನು ನೀಗಿತು. ಗಾಂಡೀವವನ್ನು ಹಿಡಿದು ಹೆದೆಯಿಂದ ಶಬ್ದಮಾಡಲು ಸಿಡಿಲು ಸಿಡಿದು ಹೊಳೆಯುವ ಹಾಗಾಯಿತು ಎನ್ನಲು ಪಡೆಮೆಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರರಷ್ಟು ಹೆಚ್ಚಾಯಿತು. ವ|| ಅಷ್ಟರಲ್ಲಿ ಆ ಕಡೆ ಪರಸೈನ್ಯಭೈರವನಾದ ಅರ್ಜುನನ ಬರವಿಕೆಗೆ ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ವಿಶೇಷವಾಗಿ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು. ೧೦೨. ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ ಸತ್ಯವಾಕ್ಕಿಗೆ ತಪ್ಪದೆ ನಡೆದು ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ. ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಪಶುಸಮೂಹವನ್ನು ಕರ್ಣ, ಕೃಪ, ದ್ರೋಣರೇ ಮುಖ್ಯರಾದ ಯೋಧಾಗ್ರೇಸರರನ್ನು ಒಡಗೊಂಡು ಹಿಂತಿರುಗಿಸು. ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಸ್ವಲ್ಪಮಟ್ಟಿಗೆ ಎದುರಿಸುತ್ತೇನೆ ಎಂದನು. ವ|| ದುರ್ಯೋಧನನು ವಿಶೇಷಗಾಬರಿಯಿಂದ ಕೂಡಿ ಪಶುಸಮೂಹವನ್ನೊಡಗೊಂಡು ಹೋಗಲು ಹಾಗೆ ಹೋಗುವುದಕ್ಕೆ ಬಿಡದೆ ಉತ್ತರನನ್ನು ತೇರನ್ನು ನಡೆಸುವಂತೆ ಹೇಳಿ (ಅರ್ಜುನನು ದುರ್ಯೋಧನನ) ಸಮೀಪಕ್ಕೆ ಬಂದನು. ೧೦೩. ಶತ್ರುವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ. ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ಧಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಹೊಡೆದು ತನ್ನ ಪ್ರಸಿದ್ಧವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದನು. ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು. ೧೦೪. ಶೂರರ ಮತ್ತು ಪರಾಕ್ರಮಶಾಲಿಗಳ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡ ನಿಂತುಕೊಳ್ಳದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ, ಸಂಪೂರ್ಣವಾಗಿ ಮೇಲೆತ್ತಿಕೊಂಡಿರುವ ಬಾಲದ ತುದಿಯೂ ಪ್ರಕಾಶಿಸುತ್ತಿರಲು ಕರಿಯ ಹಸುಗಳು, ಯುದ್ಧರಂಗದಲ್ಲಿ ಓಡಿಹೋದುವು. ವ|| ಹಾಗೆ ಹಸುಗಳನ್ನು ಹಿಂತಿರುಗಿಸಿ ಹಿಂತಿರುಗದೆ ತನಗೆ

ಚಂ|| ಪೞುವೞಯಂ ತಗುಳ್ದಳುರ್ವ ಬೇಗೆವೊಲೆಚ್ಚ ಶರಾಳಿಗಳ್ ಛೞಲ್
ಛೞಲೆನೆ ಪಾಯೆ ಪಾಯ್ವ ಬಿಸುನೆತ್ತರ ಸುಟ್ಟುರೆ ಚಾತುರಂಗಮಂ|
ಕೞಕುಱಮಾಗೆ ಪೇೞೆಪೆಸರಿಲ್ಲೆನೆ ಪಾಯಿಸಿ ತೇರನೆಯ್ದೆ ತೊ
ತ್ತೞದುೞದತ್ತು ವೈರಿಬಲಮೆಲ್ಲಮನಮ್ಮನ ಗಂಧವಾರಣಂ|| ೧೦೫

ಕುರುಬಲದೊಳ್ ಕರಂ ನೆಗೞ್ದ ಬೀರರ ಚೆನ್ನರ ಸಂದ ಚೆನ್ನಪೊಂ
ಗರ ತಲೆ ತಾೞಪಣ್ ಕೆದಱದಂತೆ ನಿರಂತರಮಾಜಿರಂಗದೊಳ್|
ಪರೆದಿರೆ ಲೋಹಿತಾಂಬುಯೊಳಾನೆಗಳಟ್ಟೆಗಳಾಡೆ ನೋಡಲ
ಚ್ಚರಿಯುಮಗುರ್ವುಮದ್ಭುತಮುಮಾಯ್ತು ರಣಂ ಕದನತ್ರಿಣೇತ್ರನಾ|| ೧೦೬

ವ|| ಆಗಳದಂ ಕಂಡಂಗರಾಜಂ ರಾಜರಾಜನ ನಡಪಿದುದುಮಂ ತನ್ನ ಬಲ್ಲಾಳ್ತನಮುಮಂ ನೆನೆದು ವಿಕರ್ಣಂಬೆರಸರ್ಣವನಿನಾದ ದಿಂದಾರುತ್ತುಂ ಬಂದ ಗುಣಾರ್ಣವನೊಳ್ ತಾಗೆ-

ಚಂ|| ಸಮೆದುದು ಪೋಗು ಗೋಗ್ರಹಣದಲ್ಲಿಯೆ ಭಾರತಮೆಂಬ ಮಾತನಂ
ದಮರ ನರೋರಗರ್ ನುಡಿಯೆ ರೌದ್ರಶರಂಗಳಿನೆಚ್ಚು ಯುದ್ಧದೊಳ್|
ಸಮಸಮನಾಗಿ ಕಾದಿದೊಡೆ ಕರ್ಣನ ವಕ್ಷಮನೆಚ್ಚು ಗರ್ವಮಂ
ಸಮೆಯಿಸಿ ಕೊಂದನಂಕದ ವಿಕರ್ಣನನೊಂದೆ ವಿಕರ್ಣದಿಂ ನರಂ|| ೧೦೭

ವ|| ಅಂತು ಕರ್ಣನ ನೋವುಮಂ ವಿಕರ್ಣನ ಸಾವುಮಂ ಕಂಡು-

ಉ|| ತಸ್ಕಿನ ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರೆ
ಕ್ಕೆಕ್ಕೆಯಿನೊರ್ವರೊರ್ವರೆ ಬಿಗುರ್ತಿರದಾಂತು ನಿಶಾತ ಬಾಣ ಜಾ|
ಲಕ್ಕೆ ಸಿಡಿಲ್ದು ಜೋಲ್ದು ಸೆರಗಂ ಬಗೆದೋಡಿದರೊಂದು ಪೋೞ್ತುಮೊಂ
ದರ್ಕಮಿದಿರ್ಚಲಾಱದೆ ಮನಂಗಲಿಗಳ್ ಕದನತ್ರಿಣೇತ್ರನಾ|| ೧೦೮

ಕಂ|| ಮನದೊಳ್ ಕರುಣಿಸಿ ಸಂಮೋ
ಹನಾಸ್ತ್ರದಿಂದೆಚ್ಚು ಬೀರರಂ ಬೀರದ ಶಾ|
ಸನಮನೆ ನಿಱಸುವ ಬಗೆಯಿಂ
ದನಿಬರ ಪೞವಿಗೆಯನೆೞೆದುಕೊಂಡಂ ಹರಿಗಂ|| ೧೦೯

ಪ್ರತಿಭಟಿಸಿ ನಿಂತ ಶತ್ರುಸೈನ್ಯವನ್ನು ಪುಡಿಮಾಡಿ ನಾಶಪಡಿಸಿದನು. ೧೦೫. ಅರಣ್ಯಮಾರ್ಗವನನ್ನುಸರಿಸಿ ವ್ಯಾಪಿಸುವ ಕಿಚ್ಚಿನ ಹಾಗೆ ಪ್ರಯೋಗ ಮಾಡಿದ ಅರ್ಜುನನ ಬಾಣಸಮೂಹಗಳು ಛಳಿಲ್ ಛಳಿಲ್ ಎಂದು ನುಗ್ಗಿಸುತ್ತಾ ಹರಿದುಬರುತ್ತಿರುವ ಬಿಸಿರಕ್ತದ ಸುಂಟರಗಾಳಿಯಿಂದ ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿದನು. ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ ತೇರನ್ನು ಹಾಯಿಸಿ ಸೊಕ್ಕಿದಾನೆಯಂತೆ ಅರ್ಜುನನು ಶತ್ರುಸೈನ್ಯವನ್ನೆಲ್ಲ ಸಂಪೂರ್ಣವಾಗಿ ತುಳಿದು ಹಾಕಿದನು. ೧೦೬. ಕೌರವಸೈನ್ಯದಲ್ಲಿ ವಿಶೇಷಪ್ರಖ್ಯಾತರಾದ ವೀರರ ಸೌಂದರ್ಯಶಾಲಿಗಳ ಪ್ರಸಿದ್ಧರಾದ ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿದುವು. ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು ಕದನತ್ರಿಣೇತ್ರನಾದ ಅರ್ಜುನನ ಯುದ್ಧವು ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು. ವ|| ಆಗ ಕರ್ಣನು ಅದನ್ನು ನೋಡಿ ದುರ್ಯೋಧನನು ತನ್ನನ್ನು ಸಾಕಿದುದನ್ನೂ ತನ್ನ ಪರಾಕ್ರಮವನ್ನೂ ನೆನೆದು ವಿಕರ್ಣನೊಡಗೂಡಿ ಸಮುದ್ರಘೋಷದಿಂದ ಆರ್ಭಟಿಸುತ್ತ ಬಂದು ಗುಣಾರ್ಣವನಾದ ಅರ್ಜುನನನ್ನು ತಾಗಿದನು. ೧೦೭. ಗೋಗ್ರಹಣದಲ್ಲಿಯೇ ಮಹಾಭಾರತಯುದ್ಧವು ಮುಗಿದುಹೋಯಿತು ಎಂಬ ಮಾತನ್ನು ಆ ದಿನ ದೇವತೆಗಳೂ ಮನುಷ್ಯರೂ ಉರಗರೂ (ಮೂರು ಲೋಕದವರೂ) ಹೇಳುವ ಹಾಗೆ ಅರ್ಜುನನು ಭಯಂಕರವಾದ ಬಾಣಗಳಿಂದ ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದ ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಕಡಿಮೆ ಮಾಡಿ ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು. ವ|| ಹಾಗೆ ಕರ್ಣನ ನೋವನ್ನೂ ವಿಕರ್ಣನ ಸಾವನ್ನೂ ನೋಡಿ-

೧೦೮. ಸಮರ್ಥರಾದ ದ್ರೋಣ, ಭೀಷ್ಮ, ಕೃಪರೇ ಮುಖ್ಯರಾದ ವೀರಾಗ್ರೇಸರರೂ ಗುಂಪುಗುಂಪಾಗಿ ಒಬ್ಬೊಬ್ಬರೂ ಅರ್ಜುನನ ಹರಿತವಾದ ಬಾಣಸಮೂಹಗಳಿಗೆ ತಡೆಯಲಾರದೆ ಹೆದರಿ ಓಡಿಹೋದರು. ಮನಸ್ಸಿನಲ್ಲಿ ಮಾತ್ರ ಶೂರರಾದ ಅವರು ಕದನತ್ರಿಣೇತ್ರನಾದ ಅರ್ಜುನನ ಒಂದು ಹೊತ್ತಿನ ಯುದ್ಧಕ್ಕೂ ಪ್ರತಿಭಟಿಸಿ ನಿಲ್ಲಲಾರದೆ ಹೋದರು. ೧೦೯. ಆಗ ಅರ್ಜುನನ ಅವರ ಮೇಲೆ ದಯೆತೋರಿ

ವ|| ಅಂತು ವರ ಶಶಿ ವಿಶದಯಶಪಟಂಗಳಂ ನನ್ನಿಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುೞ್ದು ಬರ್ಪಾಗಳ್-

ಉ|| ಸೂಸುವ ಸೇಸೆ ಬೀಸುವ ಚಳಚ್ಚಮರೀರುಹಮೆಕ್ಕೆಯಿಂ ರಣಾ
ಯಾಸ ಪರಿಶ್ರಮಾಂಬು ಲವಮಂ ತವೆ ಪೀರೆ ಪುರಾಂಗನಾಮುಖಾ|
ಬ್ಜಾಸವಗಂಧದೊಳ್ ಬೆರಸಿದೊಂದೆಲರೊಯ್ಯನೆ ತೀಡೆ ಪೊಕ್ಕನಾ
ವಾಸವನಂತೆ ಮತ್ಸ್ಯಮಹಿಪಾಳಕಮಂದಿರಮಂ ಗುಣಾರ್ಣವಂ|| ೧೧೦

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಅಷ್ಟಮಾಶ್ವಾಸಂ

ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ ಅವರು ಮೈಮರೆತಿರಲು ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು. ವ|| ಹಾಗೆ ಶ್ರೇಷ್ಠವಾದ ಚಂದ್ರನಂತೆ ವಿಸ್ತಾರವಾಗಿರುವ ಯಶಸ್ಸೆಂಬ ವಸ್ತ್ರಗಳನ್ನು ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು ಜಯಪ್ರದನಾಗಿ ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು. ೧೧೦. ಸೂಸುತ್ತಿರುವ ಮಂತ್ರಾಕ್ಷತೆಗಳೂ ಚಲಿಸುತ್ತಿರುವ ಚಾಮರಗಳೂ ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು ಸಂಪೂರ್ಣವಾಗಿ ಹೀರಲು ಪರಸ್ತ್ರೀಯರ ಮುಖಕಮಲದ ನಸುಗಂಧದಿಂದ ಬೆರಸಿದ ಗಾಳಿಯು ನಿಧಾನವಾಗಿ ಬೀಸುತ್ತಿರಲು ವಿರಾಟನ ಅರಮನೆಯನ್ನು ಅರ್ಜುನನು ದೇವೇಂದ್ರನಂತೆ ಪ್ರವೇಶ ಮಾಡಿದನು- ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನವಿಜಯದಲ್ಲಿ ಎಂಟನೆ ಆಶ್ವಾಸ.