ಬಹುಮಟ್ಟಿಗೆ ಇತಿಹಾಸ ಪುರಾಣಗಳಂಥ ಪ್ರಾಚೀನ ವಸ್ತುಗಳನ್ನಾರಿಸಿಕೊಂಡು ಕೃತಿ ರಚನೆ ಮಾಡಬೇಕಾಗಿದ್ದ ಹಿಂದಿನ ಕಾವ್ಯಪರಂಪರೆಯಲ್ಲಿ, ವಸ್ತುಗಳು ತಮ್ಮ ವಾಸ್ತವತೆಯಿಂದ ತೀರ ದೂರದಲ್ಲಿದ್ದವುಗಳಾದುದರಿಂದಲೋ, ಮತ್ತು ಆ ಕಥಾ ವಸ್ತುಗಳಲ್ಲಿನ ನಾಯಕರು ಮತ್ತು ಪಾತ್ರಗಳು, ಒಂದು ಬಗೆಯ ಅಲೌಕಿಕ ಮಹಿಮಾ ಸಂಪನ್ನರಾಗಿದ್ದುದರಿಂದಲೋ, ಅಂಥ ಕವಿ ಕೃತಿಗಳಲ್ಲಿ ವರ್ಣಿತವಾಗುವ ಅವರ ನಡವಳಿಕೆಯನ್ನೋ ಅಥವಾ ಘಟನೆಗಳನ್ನೋ ಅಂದಿನ ಓದುಗರು ಅವುಗಳ ಯಥಾರ್ಥತೆಯನ್ನು ಅಷ್ಟಾಗಿ ಪ್ರಶ್ನಿಸದೆ ಆಸ್ವಾದಿಸುತ್ತಿದ್ದರೆಂದು ತೋರುತ್ತದೆ. ಅಲ್ಲದೆ ಸಾಹಿತ್ಯದ ಬಗ್ಗೆ ಇಂದಿನಂತೆ, ಸಾಹಿತ್ಯವೆಂದರೆ ಲೋಕ ವಾಸ್ತವನಿಷ್ಠವಾಗಿರಬೇಕು, ನಮ್ಮ ದೈನಂದಿನ ಬದುಕಿಗೆ ಬದ್ಧವಾಗಿದ್ದರೆ ಅದು ನಿಜವಾದ ಸಾಹಿತ್ಯ ಎಂಬಿತ್ಯಾದಿ  ವಾಸ್ತವವಾದೀ ನಿಲುವುಗಳು ಅಷ್ಟು ಪ್ರಧಾನವಾಗಿರಲಿಲ್ಲ. ಕಾವ್ಯ ಎಂದರೆ ಲೋಕವಾಸ್ತವದಿಂದ ಒಂದಷ್ಟು ಅತಿಶಯವಾದದ್ದು, ಅದರ ಭಾವ ಹಾಗೂ ಭಾಷೆಯಲ್ಲಿ; ಮಾನುಷ ಚಾರಿತ್ರವಾಗಲೀ, ಇನ್ನಿತರ ನಡವಳಿಕೆಗಳಾಗಲೀ ಅನುಕ್ರಮವಾಗಿ ಲೋಕ ವಾಸ್ತವದ ನೆಲೆಯಿಂದ ಮೇಲೇರಿ ಹೋಗುವುದರಿಂದಲೇ ಅವು ಕಾವ್ಯದ ನೆಲೆಗೇರುತ್ತವೆ -ಎಂದು ಭಾವಿಸಿದ ಪರಿಸರದಲ್ಲಿ, ನಮ್ಮ ಆಲಂಕಾರಿಕರು ಕಾವ್ಯದ ಘಟನೆಗಳನ್ನು ಲೋಕಾತಿಶಯ, ಲೋಕೋತ್ತರ ಹಾಗೂ ಲೋಕಾತಿಕ್ರಾಂತ ಎಂದು ವರ್ಣಿಸಿದರು. ಈ ವರ್ಣನೆ ಅನುಕ್ರಮವಾಗಿ, ಕಾವ್ಯ ಈ ಲೋಕವಾಸ್ತವ ಸ್ತರದಿಂದ ಮೇಲೇರುವ ಬಗೆಯನ್ನು ಕುರಿತದ್ದು. ಕಾವ್ಯ ಲೋಕಾತಿಶಯದ ಅಂಶಗಳನ್ನು ಒಳಗೊಳ್ಳುವುದೇ, ಅದು ವಾಸ್ತವದ ನೆಲೆಯಿಂದ ಮೇಲೇರುವಲ್ಲಿನ ಮೊದಲ ಹೆಜ್ಜೆ. ಹೀಗೆ ಅತಿಶಯದ ಅಂಶವಿಲ್ಲದ ಯಾವ ಬರಹವೂ ಕಾವ್ಯವಾಗಲಾರದು. ಈ ಅತಿಶಯತೆಯ ಅಂಶ ಕಾವ್ಯಾಭಿವ್ಯಕ್ತಿಯ ಭಾಷೆಯಲ್ಲೋ ಅಥವಾ ಅದರ ಉಕ್ತಿ ವೈಚಿತ್ರ್ಯದಲ್ಲೋ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ‘ಮುಖಕಮಲ’ ಎಂಬಂಥ ಅಲಂಕಾರವೇ, ಮುಖವು ಸುಂದರವಾಗಿದೆ ಎಂಬ ವಾಸ್ತವ ಸಂಗತಿಯ ತೀವ್ರಾನುಭವಕ್ಕೆ ಕೊಟ್ಟ ಅತಿಶಯದ ಅಭಿವ್ಯಕ್ತಿಯಾಗಿದೆ. ಇರುವುದನ್ನೇ ಒಂದಷ್ಟು ಅತಿಶಯವನ್ನಾಗಿ ಮಾಡಿ ಹೇಳುವ ಕವಿಯ ಅಭಿವ್ಯಕ್ತಿಗಳನ್ನು ಕುರಿತು, ಅದರ ಆಸ್ವಾದವನ್ನು ಕುರಿತು ಅಂಥ ತಕರಾರುಗಳೇನೂ ಏಳುವುದಿಲ್ಲ. ಆದರೆ ಲೋಕೋತ್ತರ ಹಾಗೂ ಲೋಕಾತಿಕ್ರಾಂತ ಘಟನೆಗಳನ್ನು ಕಥಾ ವಸ್ತುಗಳಲ್ಲಿ ಕವಿ ತಂದಾಗ, ಅವುಗಳನ್ನು ಅಥವಾ ಅವುಗಳ ಸಂಭಾವ್ಯತೆಯನ್ನು ಕುರಿತು ಓದುಗರಲ್ಲಿ ಪ್ರಶ್ನೆಗಳೂ, ಶಂಕೆಗಳೂ ಏಳುವ ಸಾಧ್ಯತೆಗಳುಂಟೆಂಬ ವಿಚಾರವನ್ನು, ನಮ್ಮ ಪ್ರಾಚೀನ ಆಲಂಕಾರಿಕರು ಚರ್ಚಿಸಿದ್ದಾರೆನ್ನುವುದು ಮಹತ್ವದ ಸಂಗತಿಯಾಗಿದೆ.

ಆನಂದವರ್ಧನನು ಧ್ವನ್ಯಾಲೋಕದಲ್ಲಿ, ಕವಿಗಳು ತಮ್ಮ ಕೃತಿ ರಚನೆಯಲ್ಲಿ ವಹಿಸಬೇಕಾದ ಎಚ್ಚರವನ್ನೂ, ಅನುಸರಿಸಬೇಕಾದ ರೀತಿಗಳನ್ನೂ ಕುರಿತು ಹಲವು ಮೌಲಿಕವಾದ ಸಂಗತಿಗಳನ್ನೂ ಸೂಚನೆಗಳನ್ನೂ ಕೊಡುತ್ತಾನೆ. ಅವುಗಳಲ್ಲಿ ಅವನು ಔಚಿತ್ಯವನ್ನು ಕುರಿತು ಹೇಳುವ ಮಾತೂ ಒಂದು. ಕಾವ್ಯದಲ್ಲಿ ವರ್ಣಿತವಾಗಿರುವ ಯಾವುದೇ ಘಟನೆಯಾಗಲೀ, ನಡವಳಿಕೆಯಾಗಲೀ, ಕಾವ್ಯಾಸ್ವಾದದಲ್ಲಿ ತೊಡಗಿದ ಓದುಗನಲ್ಲಿ ಇದು ಹೀಗೆ ನಡೆಯಲು ಸಾಧ್ಯವೇ, ಅಥವಾ ಹೀಗೆ ನಡೆಯುವುದು ಯಾವ ದೃಷ್ಟಿಯಿಂದಲೂ ಸಮ್ಮತವೆಂಬಂತೆ  ತೋರುವುದಿಲ್ಲವಲ್ಲ -ಎಂದು ಅನ್ನಿಸಿದರೆ ಅದಕ್ಕೆ ‘ಅನೌಚಿತ್ಯ’ವೇ ಕಾರಣ. ಅಂದರೆ ಕಾವ್ಯಾಸ್ವಾದ ಸಂದರ್ಭಗಳಲ್ಲಿ ನಿಜವಾದ ಓದುಗನಲ್ಲಿ ಈ ಬಗೆಯ ಗೊಂದಲವೇರ್ಪಟ್ಟರೆ ಕೂಡಲೇ ಅದು ರಸಭಂಗಕ್ಕೆ ಕಾರಣವಾಗುತ್ತದೆ. “ರಸಭಂಗಕ್ಕೆ ಅನೌಚಿತ್ಯವನ್ನು ಬಿಟ್ಟು ಬೇರಾವುದೂ ಕಾರಣವಲ್ಲ.”[1] ಹೀಗೆ ರಸಭಂಗವಾಗಲು ಕಾರಣ, ಕಾವ್ಯದಲ್ಲಿ ವರ್ಣಿತವಾಗಿರುವ ಅತಿಶಯವಾದ ಘಟನೆಗಳು, ಅದ್ಭುತವಾದ ಸಂಗತಿಗಳು, ಲೋಕವಾಸ್ತವದೊಂದಿಗೆ ಹೋಲಿಸಿದರೆ ಸುಳ್ಳೆಂಬಂತೆ ತೋರುತ್ತವೆ ಎಂಬುದರಿಂದಾಗಲೀ, ಅವು ವಾಸ್ತವವಾಗಿರಬೇಕಾಗಿತ್ತು ಎಂಬ ಕಾರಣದಿಂದಾಗಲೀ ಅಲ್ಲ; ಆದರೆ ವರ್ಣಿತವಾಗಿರುವ ಸಂಗತಿಗಳು ಕವಿ ಚಿತ್ರಿಸಿರುವಂತೆ ಎಂದಾದರೂ ನಡೆಯಲು ಸಾಧ್ಯವೇ ಎಂಬ ಶಂಕೆಯನ್ನು ಓದುಗರಲ್ಲಿ ಉಂಟುಮಾಡಿದಾಗ, ಈ ಅನೌಚಿತ್ಯವೇ ನಿಜವಾದ ದೋಷ. ಇದನ್ನು ಅಭಿನವ ಗುಪ್ತರು ‘ಸಂಭಾವನಾವಿರಹ’ ಅಥವಾ ‘ಅಸಂಭಾವ್ಯತೆ’ ಎಂದು ಕರೆಯುತ್ತಾರೆ.

ರಸಾನುಭವದ ಸ್ವರೂಪವನ್ನು ಕುರಿತು ಚರ್ಚಿಸುವಾಗ ಅಭಿನವಗುಪ್ತರು, ಸಹೃದಯನ ರಸಾನುಭವಕ್ಕೆ ಇರುವ ಅಡ್ಡಿ-ತಡೆಗಳನ್ನು ಪ್ರಸ್ತಾಪಿಸುತ್ತಾ, ರಸ ನಿಷ್ಪತ್ತಿಗೆ ಇರುವ ವಿಘ್ನಗಳನ್ನು ಏಳು ಎಂದು ಪಟ್ಟಿಮಾಡುತ್ತಾರೆ. ಈ ಸಪ್ತ ವಿಘ್ನಗಳಲ್ಲಿ ಸಂಭಾವನಾವಿರಹ ಅಥವಾ ಅಸಂಭಾವ್ಯತೆ ಮೊದಲನೆಯದು. ಎಂದರೆ ಕಾವ್ಯ ಅಥವಾ ನಾಟಕದಲ್ಲಿ ವರ್ಣಿತವಾಗಿರುವ ಅಥವಾ ಪ್ರದರ್ಶಿತವಾಗುತ್ತಿರುವ “ಕಥಾವಸ್ತು, ನಡೆ, ನುಡಿ, ಮೊದಲಾದ ಪ್ರತಿಯೊಂದೂ ನಂಬಲರ್ಹವಾಗಿರಬೇಕು; ಅಲ್ಲಿಯ ನಿರೂಪಣೆ ಸಂಭವವೆಂದು ತೋರಬೇಕು. ನಾಟಕದ ಯಾವ ಪಾತ್ರವನ್ನಾದರೂ ಸಂಗತಿಯನ್ನಾದರೂ ಕುರಿತು ಹೀಗೆ ಆಗುವುದುಂಟೆ ಎಂಬ ಸಂದೇಹ ಹುಟ್ಟಿದರೆ ತೀರಿತು, ಮನಸ್ಸು ಅಲ್ಲಿ ನೆಲೆಗೊಳ್ಳದೆ ಹಿಮ್ಮೆಟ್ಟುತ್ತದೆ.”[2] ಹೀಗೆ ಹಿಮ್ಮೆಟ್ಟಿದಾಗ, ಸಹೃದಯನ ಮನಸ್ಸು ತಾದಾತ್ಮ ವನ್ನು ಕಳೆದುಕೊಳ್ಳುತ್ತದೆ. ಈ ರೀತಿ ವರ್ಣಿತವಾಗಿರುವ ಸಂಗತಿಯ ಸಂಭಾವ್ಯತೆಯ ಬಗ್ಗೆ ಓದುಗನಲ್ಲಿ ಶಂಕೆ ಹುಟ್ಟುವುದೇ ‘ಅಸಂಭಾವ್ಯತೆ’ ಎನ್ನಿಸಿಕೊಳ್ಳುತ್ತದೆ. ಆದುದರಿಂದ ಕೃತಿಯೊಂದರ ಸಂದರ್ಭದಲ್ಲಿ ವರ್ಣಿತವಾಗಿರುವ ಸಂಗತಿಗಳು, ಇವು ಹೀಗೆ ನಡೆಯುವುದು ಸಾಧ್ಯವೆ ಎಂಬ ಶಂಕೆಯನ್ನು ಉಂಟು ಮಾಡುವಷ್ಟು ಕಲಾತ್ಮಕವಾಗಿ ಚಿತ್ರಿತವಾಗಿರಬೇಕು ಅಥವಾ ಸಂಗತಿಗಳು ಹೀಗೆ ನಡೆಯಲು ಸಾಧ್ಯವೇ ಎಂಬುದಕ್ಕಿಂತ, ಹೀಗೂ ನಡೆಯುವುದು ಅಸಂಭವವೇನಲ್ಲ ಎನ್ನುವ ನಂಬಿಕೆಯನ್ನು ಓದುಗನಲ್ಲಿ ಮೂಡಿಸುವಂತೆ ಚಿತ್ರಿತವಾಗಿರಬೇಕು. ಹೀಗೆ ಮಾಡುವುದು ಕವಿಯ ಪ್ರತಿಭಾ ಸಾಮರ್ಥ್ಯವನ್ನು ಅವಲಂಬಿಸಿದೆ.

ಇದೇ ಪ್ರಶ್ನೆಯನ್ನು ಪಾಶ್ಚಾತ್ಯ ಕಾವ್ಯಮೀಮಾಂಸೆಯ ಪ್ರಥಮಾಚಾರ್ಯನಾದ ಅರಿಸ್ಟಾಟಲ್, ತನ್ನ ಕಾವ್ಯಚರ್ಚೆಯಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ ಎಂಬುದನ್ನು ಇಲ್ಲಿ ನೆನೆಯಬಹುದು. ಕಾವ್ಯ ಹಾಗೂ ಚರಿತ್ರೆಗಳು ಲೋಕವಾಸ್ತವವನ್ನು ಚಿತ್ರಿಸುವುದರಲ್ಲಿ ಅನುಸರಿಸುವ ವಿಧಾನಗಳನ್ನು ಕುರಿತು ಹೇಳುತ್ತಾ, “ಕವಿಯ ಕೆಲಸ ವಾಸ್ತವವಾಗಿ ಏನೇನು ನಡೆಯಿತೋ ಅದನ್ನೆಲ್ಲಾ ವರ್ಣಿಸುವುದಲ್ಲ; ಆದರೆ ಏನೇನು ನಡೆಯಲು ಸಾಧ್ಯವೋ, ಆಯಾ ಸಂದರ್ಭಕ್ಕೆ ಅನುಗುಣವಾಗಿ, ಅವುಗಳನ್ನು ವರ್ಣಿಸುವುದು…. ಚರಿತ್ರಕಾರ ವಾಸ್ತವವಾಗಿ ನಡೆದುದನ್ನು ದಾಖಲಿಸುತ್ತಾನೆ, ಕವಿ ನಡೆಯಬಹುದಾದ್ದನ್ನು ನಿರೂಪಿಸುತ್ತಾನೆ. ಈ ಕಾರಣದಿಂದ ಕವಿಯ ಕೆಲಸ ಚರಿತ್ರಕಾರನದ್ದಕ್ಕಿಂತ ಹೆಚ್ಚು ತಾತ್ವಿಕ ಸ್ವರೂಪದ್ದು…. ಒಂದು ವೇಳೆ ಕಾವ್ಯದಲ್ಲಿ, ಲೋಕದಲ್ಲಿ ನಡೆಯಲು ಸಾಧ್ಯವಿಲ್ಲ ವೆಂಬಂಥಾದ್ದು ಚಿತ್ರಿತವಾಗಿದ್ದರೂ, ಕವಿ ಅದನ್ನು ನಡೆಯಿತೆಂಬಂತೆಯೆ ಚಿತ್ರಿಸಬೇಕಾಗುತ್ತದೆ. ಆದ್ದರಿಂದ ನಂಬಲರ್ಹವಾಗುವ ಸಾಧ್ಯತೆ, ನಂಬಲರ್ಹವಲ್ಲದ ಸಾಧ್ಯತೆಗಿಂತ ಅಪೇಕ್ಷಣೀಯವಾದದ್ದು-ಕಾವ್ಯ ಉಂಟುಮಾಡುವ ಪರಿಣಾಮದ ದೃಷ್ಟಿಯಿಂದ”[3] ಎನ್ನುತ್ತಾನೆ.

ಈ ಎಲ್ಲ ಅಭಿಪ್ರಾಯಗಳ ಸಾರಾಂಶವೆಂದರೆ, ಕಾವ್ಯದಲ್ಲಿ ಎಷ್ಟೋ ಸಂಗತಿಗಳು ನಿಜವಾಗಿಯೂ ಅಸಂಭಾವ್ಯವಾದವುಗಳೇ; ಇಂಥ ಅಸಂಭಾವ್ಯಗಳನ್ನು ಸಂಭಾವ್ಯವೆನ್ನಿಸುವಂತೆ ಚಿತ್ರಿಸುವುದೇ ನಿಜವಾದ ಕವಿಯ ಕೆಲಸ. ಆದರೆ ಅವು ಅಸಂಭಾವ್ಯವೆಂದು ತೋರುವುದು ಲೋಕವಾಸ್ತವದ ಅಥವಾ ಕಾವ್ಯದ ನೆಲೆಯಲ್ಲಿ ಅಲ್ಲ. ಹೀಗೆ ಲೋಕ ವಾಸ್ತವವನ್ನು ಅಥವಾ ಚರಿತ್ರೆಯ ದೃಷ್ಟಿಯಿಂದ ನೋಡಿದಾಗಲೆ ಹೊರತು, ಎರಡನ್ನೂ ಮೀರಿದ ಕಾವ್ಯದ ನೆಲೆಯಲ್ಲಿ ಅಲ್ಲ. ಹೀಗೆ ಲೋಕ ವಾಸ್ತವವನ್ನು ಅಥವಾ ಚರಿತ್ರೆಯನ್ನು ಅತಿಕ್ರಮಿಸಿ ಸಂಭಾವ್ಯವೆನ್ನಿಸುವ ಕವಿ ನಿರ್ಮಿತಿಯ ಸ್ವರೂಪವನ್ನು, ಮಮ್ಮಟನು “ನಿಯತಿಕೃತ ನಿಯಮ ರಹಿತಾಂ”[4] ಎಂದು ಪ್ರಶಂಸಿಸಿದ್ದಾನೆ.

‘ನಿಯತಿ ಎಂದರೆ ಅನೇಕ ನಿಯಮಗಳ ಒಂದು ಸಮಷ್ಟಿ. ಈ ಲೋಕದ ಬೇರೆ ಬೇರೆಯ ‘ಭೂತ’ಗಳಿಗೆ ಅದರದರ ನಿಯಮಗಳನ್ನು ನಿರ್ಮಿಸಿ, ಅವೆಲ್ಲವನ್ನೂ ತನ್ನ ಅಧೀನದಲ್ಲಿರಿಸಿಕೊಂಡಿರುವ ನಿಯಂತ್ರಣ ಶಕ್ತಿ ಅದು. ವಿಶಾಲವಾದ ಅರ್ಥದಲ್ಲಿ ಇದೇ ಋತ. ಈ ನಿಯತಿಯನ್ನು, ಅದು ರೂಪಿಸಿಕೊಂಡಿರುವ ನಿಯಮಗಳನ್ನು ಯಾರೂ ಮೀರಲಾರರು. ಈ ಲೋಕವೆಂಬುದು ಇಂಥ ಅನೇಕ ನಿಯಮಗಳ ಮೂಲಕ ಅಭಿವ್ಯಕ್ತವಾಗುವ ನಿಯತಿಯ ವಿಲಾಸ. ನೆಲದ ಮೇಲೆ ಸಲೀಸಾಗಿ ನಡೆಯುತ್ತೇವಲ್ಲ ಎಂದು ನೀರಿನ ಮೇಲೂ ಹಾಗೇ ನಡೆದರೆ ತಟಕ್ಕನೆ ಮುಳುಗಿ ಹೋಗುತ್ತೇವೆ. ಏಕೆಂದರೆ ನೀರಿನ ನಿಯತಿ ನೆಲದ ನಿಯತಿಯಿಂದ ಬೇರೆಯಾದದ್ದು. ಮೀನಾದರೋ ನೀರಿನ ನಿಯತಿಗೆ ಅನುಸಾರವಾಗಿ ಆದ ಸೃಷ್ಟಿಯಾದುದರಿಂದ, ಅದು ನೀರಿನಲ್ಲಿ ಸಲೀಸಾಗಿ ವ್ಯವಹರಿಸುತ್ತದೆ. ಆದ ಕಾರಣ ನಾವು ನೀರಿನೊಂದಿಗೆ ವ್ಯವಹರಿಸಬೇಕಾದರೆ, ನೆಲದ ನಿಯತಿಯಿಂದ ಬೇರೆಯಾದ ನೀರಿನ ನಿಯತಿಯ ರಹಸ್ಯವನ್ನು ಕಂಡುಕೊಳ್ಳಬೇಕು, ಎಂದರೆ ನಾವೂ ಮೀನಿನಂತಾಗಬೇಕು. ಬೇರೆಯ ಮಾತಿನಲ್ಲಿ ಹೇಳುವುದಾದರೆ, ಮೀನು ನೀರಿನ ನಿಯತಿಯಲ್ಲಿ ಸಂಚರಿಸಲು ಕೈಕೊಳ್ಳುವ ತಂತ್ರವನ್ನು ಅನುಸರಿಸಬೇಕು. ಹಾಗೆಯೇ ನೀರಿನ ನಿಯತಿಗೆ ಅನುಸಾರವಾಗಿ ಬದುಕುವ ಮೀನನ್ನು ನೆಲದ ಮೇಲಿರಿಸಿದರೆ, ನೆಲದ ನಿಯತಿ ಅದಕ್ಕೆ ಮೃತ್ಯುವಾದೀತು. ಆದುದರಿಂದ ಪ್ರತಿಯೊಂದೂ, ತನ್ನ ಆವರಣದ ನಿಯತಿಗೆ ಅನುಸಾರವಾಗಿ ನಡೆದುಕೊಳ್ಳಬೇಕು. ನಿಯತಿ ಭಂಗದಿಂದ ಸುಖವಿಲ್ಲ. ಅದರ ಬದಲು ಅಪಾಯವಿದೆ. ಆದರೆ ಒಂದು ನಿಯತಿಯಿಂದ ಮತ್ತೊಂದು ನಿಯತಿಗೆ ಪ್ರವೇಶಿಸಲು ಉಪಾಯವೂ ಇದೆ. ಅದೆಂದರೆ ಆಯಾ ನಿಯತಿಯ ನಿಯಮಗಳಿಗೆ ಅನುಸಾರವಾದ ತಂತ್ರ (techniques)ಗಳನ್ನು ಅನುಸರಿಸುವುದು. ಈ ಕಾರಣದಿಂದಲೇ ಹಡಗು, ದೋಣಿ, ಹರಿಗೋಲು ಇತ್ಯಾದಿಗಳು ಜಲಚರ ಪ್ರಾಣಿಗಳ ಆಕೃತಿಯನ್ನೂ, ಆಕಾಶದಲ್ಲಿ ಹಾರುವ ವಿಮಾನ ಇತ್ಯಾದಿಗಳು ಪಕ್ಷಿಯ ಆಕೃತಿಯನ್ನೂ ಅನುಕರಿಸುವುದು ಅನಿವಾರ್ಯವಾಗಿದೆ.

ಕಾವ್ಯ ಎಂಬುದು ಕವಿ ಪ್ರತಿಭೆಯಿಂದ ನಿರ್ಮಿತವಾದ ಒಂದು ವಿಶಿಷ್ಟ ಪ್ರಪಂಚ. ಅದರ ಮೂಲದ್ರವ್ಯ ನಮ್ಮ ವಾಸ್ತವ ಲೋಕದ ಅನುಭವಗಳೇ ಆದರೂ, ಪ್ರತಿಭಾವಶವಾದ ಆ ಅನುಭವಗಳು ಅಲ್ಲಿ ತಾಳುವ ಪರಿವರ್ತಿತ ರೂಪಗಳು ಎಷ್ಟೋ ವೇಳೆ ಈ ವಾಸ್ತವ ಲೋಕದ ನಿಯತಿಯ ಗೆರೆಯನ್ನು ದಾಟಿದವುಗಳಾಗುತ್ತವೆ. ಆಂಜನೇಯ ಸಾಗರವನ್ನು ಹಾರಿ ದಾಟುತ್ತಾನೆ. ನಾರದರು ನೀರದ ಮಾರ್ಗದಿಂದ  ಅವತರಿಸುತ್ತಾರೆ. ಯಕ್ಷನು ಮೋಡವೊಂದರ ಮೂಲಕ ನಲ್ಲೆಗೆ ಸಂದೇಶವನ್ನು ಕಳುಹಿಸುತ್ತಾನೆ. ಸೀತೆ ಅಗ್ನಿ ಪ್ರವೇಶಮಾಡಿ ಹೊಸ ತೇಜಸ್ಸಿನಿಂದ ಹೊರಕ್ಕೆ ಬರುತ್ತಾಳೆ. ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ದುರ್ಯೋಧನ, ಭೀಮನ ಮೂದಲಿಕೆಯ ಮಾತುಗಳನ್ನು ಕೇಳಿ, ನೀರಿನೊಳಗಿದ್ದೂ ಕೋಪದಿಂದ ಬೆವರುತ್ತಾನೆ. ಭೀಮನ ಗದಾಘಾತಕ್ಕೆ ಕೂರ್ಮನ ಬೆನ್ನು ಕುಸಿಯುತ್ತದೆ. ಈ ಬಗೆಯ ವರ್ಣನೆಗಳನ್ನೋದಿದರೆ, ಇವೆಲ್ಲಾ ಸುಳ್ಳು ಎಂದೋ ಅಸಂಭಾವ್ಯವೆಂದೋ ಮೇಲು ನೋಟಕ್ಕೆ ತೋರಿದರೂ, ಶತಮಾನಗಳಿಂದ ಕವಿಗಳು ಇಂಥ ಸಂಗತಿಗಳನ್ನು ಕಲ್ಪಿಸುತ್ತಲೇ ಬಂದಿದ್ದಾರೆ; ಸಹೃದಯರು ಇವುಗಳನ್ನು ಒಪ್ಪಿಕೊಂಡು ಆಸ್ವಾದಿಸಿ ಆನಂದಿಸುತ್ತಾ ಬಂದಿದ್ದಾರೆ. ಆದ್ದರಿಂದ ಇವುಗಳನ್ನು ಅಸಂಭಾವ್ಯಗಳೆಂದೋ, ಸುಳ್ಳೆಂದೋ ತಳ್ಳಿ ಹಾಕಲು ಬರುವುದಿಲ್ಲ.

ಆದರೆ ಮೇಲೆ ಹೇಳಿದಂಥ ನಿದರ್ಶನಗಳನ್ನು ಕಾವ್ಯ ವಿಮರ್ಶಕರು ಅವುಗಳು ಸಂಪೂರ್ಣ ಸತ್ಯ ಎಂದು ಒಪ್ಪಿಕೊಂಡೂ ಇಲ್ಲ ಅಥವಾ ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿಯೂ ಇಲ್ಲ. ಅದರ ಬದಲು ಈ ಸಂಗತಿಗಳನ್ನು ‘ನಿಯತಿಕೃತ ನಿಯಮರಹಿತಾಂ’ ಎಂದು ಪ್ರಶಂಸಿಸಿದ್ದಾರೆ. ಎಂದರೆ ಅವುಗಳ ಸಂಭಾವ್ಯತೆಯನ್ನು, ನಮಗೆ ಪರಿಚಿತವಾದ ಲೋಕದ ನಿಯಮಗಳನ್ನು ಅನ್ವಯಿಸಿ ನೋಡಲು ಬರುವುದಿಲ್ಲ; ಅವುಗಳನ್ನು ಬೇರೊಂದು ನಿಯತಿಯ, ಎಂದರೆ ಕಲಾಲೋಕದ ನಿಯತಿಯ ಚೌಕಟ್ಟಿನಲ್ಲಿ ನೋಡುವುದಲ್ಲದೆ ಬೇರೆಯ ದಾರಿಯಿಲ್ಲ ಎಂಬ ಅರ್ಥದಲ್ಲಿ, ಕಾವ್ಯ ನಿರ್ಮಿತಿಯನ್ನು ‘ನಿಯತಿಕೃತ ನಿಯಮ ರಹಿತವಾದದ್ದು’ ಎಂದು ಮಮ್ಮಟನು ಕರೆದಿದ್ದಾನೆ.

ಈ ‘ನಿಯತಿಕೃತಿ ನಿಯಮರಾಹಿತ್ಯ’ವನ್ನು ಕಾಣುವುದು ಕಾವ್ಯ-ಕಲಾ ನಿರ್ಮಿತಿಗಳಲ್ಲಿ ಮಾತ್ರವಲ್ಲ, ಸಾಧು-ಸಿದ್ಧ-ಸಂತರ ಅನುಭಾವಿಕ ಜಗತ್ತಿನಲ್ಲೂ ಅವು ತಾನೇ ತಾನಾಗಿವೆ. ಅವರು ಮಾಡುವ ನಿಯತಿಕೃತ ನಿಯಮರಹಿತ ಕ್ರಿಯೆಗಳನ್ನು ನಾವು ಪವಾಡಗಳೆಂದೋ, ಸಿದ್ಧಿಗಳೆಂದೋ ಗುರುತಿಸುತ್ತೇವೆ. ಅನೇಕ ಯೌಗಿಕಾನುಭವಗಳು ತಮ್ಮ ‘ನಿಯತಿಕೃತಿ ನಿಯಮರಾಹಿತ್ಯ’ದಿಂದ ನಮ್ಮನ್ನು ವಿಸ್ಮಯಗೊಳಿಸುತ್ತವೆ. ಅವು ‘ನಿಯತಿಕೃತ ನಿಯಮರಹಿತವಾದವು’ ಎಂದರೆ, ಅಲ್ಲಿ ಯಾವ ನಿಯಮಗಳೂ ಇಲ್ಲವೆಂದೂ, ಎಲ್ಲಾ ನಿಯಮಗಳನ್ನೂ ಮೀರಿದವುಗಳೆಂದೂ ಅರ್ಥವಲ್ಲ. ಅಲ್ಲಿರುವ ನಿಯಮಗಳು ನಮಗೆ ತಿಳಿದಿಲ್ಲ ಎಂದು ಮಾತ್ರ ಅರ್ಥ. ಎಲ್ಲಾ ನಿಯಮಗಳೂ ನಮಗೆ ತಿಳಿಯಲೇ ಬೇಕಾಗಿಲ್ಲ; ನಮಗೆ ತಿಳಿಯದ ಅಸಂಖ್ಯಾತ ನಿಯಮಗಳೂ ಇಲ್ಲದಿಲ್ಲ. ಇದುವರೆಗೂ ವಿಜ್ಞಾನದ ಮೂಲಕ ಕಂಡುಕೊಂಡ ನಿಯಮಗಳಷ್ಟೇ ನಿಯಮಗಳಲ್ಲ. ವಿಜ್ಞಾನವಿನ್ನೂ ಅರಿಯಲಾಗದ ಎಷ್ಟೋ ನಿಯಮಗಳು ಇರಬಹುದು. ಆದಕಾರಣ ನಾವರಿಯದ ಅಥವಾ ನಿಯತಿಕೃತ ನಿಯಮ ರಹಿತವೆಂಬಂಥ ಸಂಗತಿಗಳೂ, ಬೇರೆ ಯಾವುದೋ ಒಂದು ನಿಯಮಕ್ಕನುಸಾರ ವಾಗಿಯೇ ನಡೆಯುತ್ತವೆ. ಯಾಕೆಂದರೆ ಯಾವುದೂ ನಿಯಮರಹಿತವಾಗಿರಲು ಸಾಧ್ಯವೇ ಇಲ್ಲ. ಸೃಷ್ಟಿ ಎಂದರೆ ನಿಯಮಬದ್ಧವಾದ ನಿಯತಿಯ ಒಂದು ವಿನ್ಯಾಸವೇ.

ಕವಿ-ಕಲಾವಿದರ ಪ್ರತಿಭಾ ನಿರ್ಮಿತಿ, ಸಂತ-ಸಿದ್ಧರ ಸಂಕಲ್ಪ ನಿರ್ಮಿತಿ ಇವುಗಳ ಮಾತು ಹಾಗಿರಲಿ. ನಮ್ಮಂಥ ಸಾಮಾನ್ಯರ ಅನುಭವಗಳಾದ ಕನಸುಗಳನ್ನೂ ಒಂದು ಅರ್ಥದಲ್ಲಿ ನಿಯತಿಕೃತ ನಿಯಮ ರಹಿತವಾದ ಘಟನೆಗಳ ಸಾಲಿಗೆ ಸೇರಿಸಬಹುದು. ಕನಸಿನ ಎಷ್ಟೋ ಘಟನೆಗಳು ವಿಲಕ್ಷಣವೂ, ಅಘಟಿತವೆಂಬಂತೆಯೂ ತೋರಬಹುದು.

ಪರಿಸ್ಥಿತಿ ಹೀಗಿರುವಾಗ “ನಿಯತಿಕೃತ ನಿಯಮರಾಹಿತ್ಯ” ಮೇಲೆ ನೋಡಲು ಎಷ್ಟೇ ವಿಸ್ಮಯವನ್ನುಂಟುಮಾಡುವ ಸಂಗತಿಯಾದರೂ, ಲೋಕವಾಸ್ತವದೊಂದಿಗೆ ಹೋಲಿಸಿದರೆ ಅಸಂಭಾವ್ಯವೆಂದು ತೋರುವುದಾದರೂ, ಅದು ಅಷ್ಟೇನೂ ಅಪರಿಚಿತವಾದುದಲ್ಲ. ಹಾಗೆ ನೋಡಿದರೆ ಈ ನಿಯತಿಕೃತ ನಿಯಮದಿಂದ ತಪ್ಪಿಸಿಕೊಳ್ಳುವುದರಲ್ಲೇ ಏನೋ ಒಂದು ಸೊಗಸಿದೆ. ಚಿರಪರಿಚಿತವಾದ ದೈನಂದಿನ ಲೋಕ ರೂಢಿಯ ಹಿಡಿತದಿಂದ ನಮ್ಮನ್ನು ನಾವು ಪಾರುಮಾಡಿ ಕೊಳ್ಳುವುದರಿಂದ ಒದಗುವ ಆನಂದ ಅಪೇಕ್ಷಣೀಯವಾದದ್ದು. ಕವಿಯ ಕಾವ್ಯ ಮಾಡುವುದು ಇದನ್ನೇ. “ಕವಿಯ ಅಗ್ಗಳಿಕೆ ಇರುವುದು ತಾನು ಲೌಕಿಕಾಕರ್ಷಣದಿಂದ ತಪ್ಪಿಸಿಕೊಂಡು ಬೇರೊಂದು ಮೇಲಾದ ನಿಲುಗಡೆಯಲ್ಲಿ ನಿಂತು ಈ ಭವದ ಮರ್ಮಗಳನ್ನು ನಮಗೆ ತೋರುವುದರಲ್ಲಿ.”[5]

ಈ ಆಪೇಕ್ಷೆಯನ್ನು ಕಾವ್ಯವಂತೂ ಸಮೃದ್ಧವಾದ ರೀತಿಯಲ್ಲಿ ಪೂರೈಸುತ್ತದೆ. ಆದರೆ, ಯಾವುದೇ ಅನುಭವ ಕಲೆಯಾಗಲು ‘ನಿಯತಿಕೃತ ನಿಯಮರಾಹಿತ್ಯ’ವನ್ನು ಸಾಧಿಸಲೇಬೇಕೆಂದೇನೂ ಇಲ್ಲ. ಅದಿಲ್ಲದೆಯೂ ಕವಿಯ ಅನುಭವ ಕಲೆಯಾಗಲು ಸಾಧ್ಯವಿದೆ. ಲೋಕದ ಯಥಾವತ್ತಾದ ನಿರೂಪಣೆಯನ್ನು ಮಾಡಲು ಬದ್ಧವಾದ ವಾಸ್ತವವಾದೀ ಪ್ರತಿಕೃತಿ ಸಾಹಿತ್ಯದಲ್ಲಿ ‘ನಿಯತಿಕೃತ ನಿಯಮರಾಹಿತ್ಯ’ ವಿರಬೇಕಾಗಿಲ್ಲ. ಮತ್ತು ಇರುವುದು ಅಪೇಕ್ಷಣೀಯವೂ ಅಲ್ಲ. ಸಮಕಾಲೀನ ಕಾದಂಬರಿಯ ಕಥಾನಾಯಕನೊಬ್ಬ, ತನ್ನ ನಲ್ಲೆಯನ್ನು ಸಂದರ್ಶಿಸುವ ಕಾತರದಲ್ಲಿ ಭೋರ್ಗರೆಯುವ ಹೊಳೆಯೊಂದನ್ನು ಉಲ್ಲಂಘಿಸಿದನೆಂದು ಚಿತ್ರಿಸಿದರೆ ಅದನ್ನು ‘ನಿಯತಿಕೃತ ನಿಯಮ ರಾಹಿತ್ಯ’ವೆಂದು ಸಮರ್ಥಿಸಲು ಬರುವುದಿಲ್ಲ. ಬದಲು, ಅದೊಂದು ನಿಜವಾಗಿಯೂ ‘ಅಸಂಭಾವ್ಯತೆ’ಯೆಂಬ ರಸವಿಘ್ನಕ್ಕೆ ಒಳ್ಳೆಯ ನಿದರ್ಶನವಾಗುವುದು ಮಾತ್ರವಲ್ಲ, ಅದೊಂದು ಹಾಸ್ಯಾಸ್ಪದವಾದ ಸುಳ್ಳೂ ಆಗಿ, ಅದರ ಕಲೋದ್ದೇಶಕ್ಕೇ ಧಕ್ಕೆಯೊದಗುತ್ತದೆ. ಯಾಕೆಂದರೆ ಪ್ರಸ್ತುತ ಘಟನೆಯಲ್ಲಿ ವಾಸ್ತವಾಂಶಗಳಾದ ಆ ನಲ್ಲನ ಪ್ರೀತಿಯ ಆಧಿಕ್ಯ, ಅವನ ಕಾತರ ಇತ್ಯಾದಿಗಳು ಸತ್ಯವೆಂದು ಒಪ್ಪಿಕೊಂಡರೂ, ಆತ ತನ್ನ ನಲ್ಲೆಯನ್ನು ಕಾಣಲು ಅನುಸರಿಸಿದನೆಂದು ಹೇಳಲಾದ ವಿಧಾನ ಮಾತ್ರ ‘ನಿಯತಿಕೃತ ನಿಯಮ’ಗಳಿಗೆ ಅಪರಿಚಿತವೂ, ಆಘಾತಕರವೂ ಆಗಿ, ಇಡೀ ಪ್ರಸಂಗ ನಗೆಪಾಟಲಾಗುತ್ತದೆ, ಅಥವಾ ನಂಬಿಕೆಗೆ ಅನರ್ಹವಾಗುತ್ತದೆ. ಆದರೆ, ಅದೇ ಕಾದಂಬರಿಯ ನಾಯಕ ತನ್ನ ನಲ್ಲೆಯನ್ನು ಕಾಣುವ ಕಾತರದಲ್ಲಿ, ಭೋರ್ಗರೆಯುವ ನದಿಯನ್ನು, ದೋಣಿಯಲ್ಲೋ ಹರಿಗೋಲಿನಲ್ಲೋ ದಾಟಿದನೆಂದರೆ ಅದು ಒಪ್ಪುವ ಸಂಗತಿಯಾಗುತ್ತದೆ; ಅಥವಾ ಇಂಥ ಹುಚ್ಚು ಹೊಳೆಯನ್ನು ಈಜಿ, ಪ್ರಾಣವನ್ನು ಪಣವನ್ನಾಗಿಸಿ ಆಚೆಯ ದಡವನ್ನು ಸೇರಿದನೆಂದು ವರ್ಣಿತವಾದರೂ, ಅಲ್ಲಿ ಅದು ಅವನ ಕಾತರ, ಸಾಹಸ ಇತ್ಯಾದಿಗಳಿಗೆ ಪ್ರತೀಕವಾಗುವ ನಿಲುವಿಗೆ ಏರುತ್ತಿತ್ತು. ಅದರ ಬದಲು ಅವನು ಭೋರ್ಗರೆಯುವ ಹೊಳೆಯೊಂದನ್ನು ಹಾರಿ ದಾಟಿದನೆಂದು ಚಿತ್ರಿಸಿದರೆ “ನಿಯತಿಕೃತ ನಿಯಮ ವಿರುದ್ಧ”ವಾಗಿ ಹಾಸ್ಯಾಸ್ಪದವಾಗುತ್ತದೆ. ಹಾಗಾದರೆ ಆಂಜನೇಯನು ಸಾಗರವನ್ನು ಉಲ್ಲಂಘಿಸಿದ ಬಗೆಗೂ ಈ ಪ್ರಶ್ನೆಯನ್ನೆತ್ತಬಹುದಲ್ಲ; ಅವನೂ ಹಡಗಿನಲ್ಲೋ ದೋಣಿಯಲ್ಲೋ ಕಡಲನ್ನು ದಾಟಿದನೆಂದು ವರ್ಣಿಸಿದ್ದರೆ ಅದು ಸಂಭಾವ್ಯವೆನ್ನಬಹುದಾಗಿತ್ತು; ಆದರೂ ವಾಲ್ಮೀಕಿ, ಆಂಜನೇಯನು ಸಾಗರವನ್ನು ಉಲ್ಲಂಘಿಸಿದನೆಂಬಂಥ ನಿಯತಿಕೃತ ನಿಯಮರಹಿತವಾದ ವರ್ಣನೆಯನ್ನು ಯಾಕೆ ಮಾಡಿದ ಎಂಬ ಆಕ್ಷೇಪಣೆಯನ್ನೆತ್ತಲು ಇಲ್ಲಿ ಅವಕಾಶವಿದೆ. ನಿಜ, ವಾಸ್ತವವಾದೀ ಪ್ರತಿಕೃತಿ ದೃಷ್ಟಿಗೆ ಆಂಜನೇಯನು ಸಮುದ್ರವನ್ನು ಹಡಗಿನಲ್ಲೋ ದೋಣಿಯಲ್ಲೋ ದಾಟಬಹುದಾಗಿತ್ತು ಎಂದು ಅನ್ನಿಸುವುದು ಸಹಜವೆ. ಆದರೆ ವಾಲ್ಮೀಕಿ ಕಲ್ಪಿಸಿರುವ ಆಂಜನೇಯನು, ಪವಮಾನಸುತನೂ, ಯೌಗಿಕ ಶಕ್ತಿಸಂಪನ್ನನೂ, ಮಹಾವಾನರೋತ್ತಮನೂ ಆಗಿರದಿದ್ದ ಪಕ್ಷದಲ್ಲಿ, ಹಿಂದೆ ಹೇಳಿದ ನಿದರ್ಶನದಲ್ಲಿ ಪ್ರಸ್ತಾಪಿತವಾದ ಕಾದಂಬರಿಯ ಕಥಾನಾಯಕನಿಗೂ ಇವನಿಗೂ ಏನೇನೂ ವ್ಯತ್ಯಾಸವಿರುತ್ತಿರಲಿಲ್ಲ. ರಾಮಾಯಣದಂಥ ಕಥಾವಸ್ತುವಿನಲ್ಲಿ, ಅಲ್ಲಿನ ವ್ಯಕ್ತಿಗಳ ಮನೋಭೂಮಿಕೆಯಲ್ಲೇ ಒಂದು ಬಗೆಯ ಅಲೌಕಿಕತೆ ತಾನೇ ತಾನಾಗಿ ಸಹಜವಾಗಿದೆ. ಅಲ್ಲದೆ ಸಾಮಾನ್ಯ ವ್ಯಕ್ತಿಗಳಿಂದ ಭಿನ್ನವಾಗಿ, ಅಂಜನೇಯನು ವಾಯುಪುತ್ರನೂ, ಸಮಸ್ತ ಯೌಗಿಕ ಶಕ್ತಿಸಂಪನ್ನನೂ ಆಗಿರುವನೆಂದು ಭಾವಿತವಾಗಿರುವಾಗ, ಕೇವಲ ಪ್ರತಿಕೃತಿ ದೃಷ್ಟಿಗೆ ಮಾತ್ರ ಸಾಧ್ಯವಾಗಬಹುದಾದ ವ್ಯವಹಾರವನ್ನು ವರ್ಜಿಸಿ, ಕವಿ ಪ್ರತಿಮಾದೃಷ್ಟಿಗೆ ಮಾತ್ರ ಉಚಿತವಾಗಬಹುದಾದ ಸಾಗರೋಲ್ಲಂಘನದ ಸಂದರ್ಭವನ್ನು, ಅತ್ಯಂತ ಸಂಭಾವ್ಯವೆಂದು ನಂಬುವ ರೀತಿಯಲ್ಲಿ ಚಿತ್ರಿಸಿದ್ದಾನೆ. ಇದು ‘ನಿಯತಿಕೃತ ನಿಯಮ ವಿರುದ್ಧ’ವೇನೂ ಆಗುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಆಂಜನೇಯನ ಸಾಗರೋಲ್ಲಂಘನದ ಘಟನೆಯನ್ನು, ‘ಅಸಂಭಾವ್ಯ’ವೆಂದು ಓದುಗರು ಶಂಕಿಸದಷ್ಟು ಕಲಾತ್ಮಕವಾಗಿ ಕವಿ ಚಿತ್ರಿಸಿದ್ದಾನೆ.

ಇಲ್ಲಿ ಮುಖ್ಯವಾಗಿ ಎದುರು ಬದುರಾಗುವ ಸಂಗತಿ ಎಂದರೆ ಕವಿಯ ಚಿತ್ರಣ ಕೇವಲ ‘ನಿಯತಿಕೃತ ನಿಯಮರಹಿತ’ವಾದರಷ್ಟೆ ಸಾಲದು; ಆ ನಿಯತಿಕೃತ ನಿಯಮ ರಹಿತತೆಯ ನೆಲೆಯಲ್ಲಿ ಸಂಭವಿಸಿದಂತೆ ಚಿತ್ರಿತವಾದ ಘಟನೆಗಳು, ಸಂಭಾವ್ಯವೆಂದು ಓದುಗರಲ್ಲಿ ನಂಬಿಕೆಯನ್ನುಂಟುಮಾಡಬೇಕು ಎನ್ನುವುದು. ಈಗಾಗಲೇ ಚರ್ಚಿಸಿರುವಂತೆ, ಕಾವ್ಯ ಅಥವಾ ನಾಟಕದ, ವರ್ಣನೆಗಳು ಅಥವಾ ಪ್ರದರ್ಶಿತವಾಗುವ ಸಂಗತಿಗಳು, ಹೀಗೆ ನಡೆಯಲು ಸಾಧ್ಯವೇ ಎಂಬ ಶಂಕೆಯನ್ನುಂಟುಮಾಡದಂತೆ ನಿರೂಪಿತವಾಗಬೇಕು. ಹಾಗಲ್ಲದೆ ಆ ವರ್ಣಿತ ಅಥವಾ ಪ್ರದರ್ಶಿತ ಸಂಗತಿಗಳು, ಹೀಗೆ ನಡೆಯಲು ಸಾಧ್ಯವೆ ಎಂಬ ಶಂಕೆಯನ್ನುಂಟುಮಾಡಿದರೆ ಅದು ‘ಅಸಂಭಾವ್ಯತೆ’ ಎಂಬ ರಸವಿಘ್ನವಾಗಿ ಪರಿಣಮಿಸುತ್ತದೆ. ಆದುದರಿಂದ ಕವಿಯಾದವನು ತನ್ನ ಕೃತಿ ಇಂಥ ‘ಅಸಂಭಾವ್ಯತೆ’ಗೆ ಪಕ್ಕಾಗದಂತೆ ನೋಡಿಕೊಳ್ಳಬೇಕು. ಕಾವ್ಯದ ಘಟನೆಗಳ ನಿಲುವನ್ನು ‘ನಿಯತಿಕೃತ ನಿಯಮ ರಹಿತಾಂ’ಎಂದು ಪ್ರಶಂಸಿಸಿ, ಮತ್ತೆ ಅಲ್ಲಿ ‘ಅಸಂಭಾವ್ಯತೆ ಒಂದು ರಸವಿಘ್ನ’ -ಎಂದು ಹೇಳಿದರೆ ಈ ಎರಡನ್ನೂ ಹೊಂದಿಸುವುದು ಹೇಗೆ ಎನ್ನುವುದು ಇಲ್ಲಿನ ಪ್ರಶ್ನೆ. ಹಾಗೆ ನೋಡಿದರೆ, ಹಿಂದಿನ ಅಥವಾ ಕಲ್ಪನಾ ಪ್ರಧಾನವಾದ ಕಾವ್ಯದ ತುಂಬಾ ಇರುವುದು ಇಂಥ ‘ಅಸಂಭಾವ್ಯ’ವಾದ ಸಂಗತಿಗಳೇ, ಅಥವಾ ಮಮ್ಮಟನ ಮಾತಿನಲ್ಲಿ ಹೇಳುವುದಾದರೆ ‘ನಿಯತಿಕೃತ ನಿಯಮರಹಿತ’ವಾದ ನೆಲೆಯಲ್ಲಿ ಸಂಭವಿಸುವ ಸಂಗತಿಗಳೇ.

ಲೋಕ ವಾಸ್ತವದ ನೆಲೆಯಿಂದ ಮೇಲೇರುವ, ಲೋಕಾತಿಶಯ, ಲೋಕೋತ್ತರ ಲೋಕಾತಿಕ್ರಾಂತಗಳೆಂದು ಗುರುತಿಸಬಹುದಾದ ಸಂಗತಿಗಳು, ತಮ್ಮ ‘ನಿಯತಿಕೃತ ನಿಯಮರಾಹಿತ್ಯ’ದ ನೆಲೆಯಲ್ಲಿ ಒಂದು ದೃಷ್ಟಿಯಿಂದ ‘ಅಸಂಭಾವ್ಯ’ವಾದವುಗಳೇ. ಇಂಥ ಅಸಂಭಾವ್ಯತೆಯಿಂದಲೇ ಕಾವ್ಯಕ್ಕೆ ರಮ್ಯತೆ ಒದಗುತ್ತದೆ ಎನ್ನುತ್ತಾರೆ ಕವಿ ಪು.ತಿ.ನ. ತಮ್ಮದೊಂದು ಲೇಖನದಲ್ಲಿ.[6] ಆದರೆ ಇವು ಲೋಕ ವಾಸ್ತವದೃಷ್ಟಿಗೆ ‘ಅಸಂಭಾವ್ಯ’ಗಳೇ ಹೊರತು, ನಿಯತಿಕೃತ ನಿಯಮರಾಹಿತ್ಯದ ನೆಲೆಯಲ್ಲಿ ‘ಅಸಂಭಾವ್ಯ’ಗಳಲ್ಲ. ಆ ನೆಲೆಯಲ್ಲೂ ಅವು  ಅಸಂಭಾವ್ಯವೆಂಬಂತೆ ತೋರಿದರೆ, ಅದೊಂದು ಕಲಾ ದೋಷವೇ ಆಗುತ್ತದೆ. ನಿದರ್ಶನಕ್ಕೆ, ಆಂಜನೇಯನು ಸಾಗರವನ್ನು ಉಲ್ಲಂಘಿಸಿದನೆಂಬ ಘಟನೆ ನಿಜಕ್ಕೂ ‘ನಿಯತಿಕೃತ ನಿಯಮರಹಿತ’ವಾದ ನೆಲೆಗೆ ಸೇರಿದುದು. ಯಾಕೆಂದರೆ ನಿಯತಿಕೃತನಿಯಮ ಸ್ತರದಲ್ಲಿ ಯಾರೂ, ಸಮುದ್ರವನ್ನು ಹಾರುವುದು  ಅಸಂಭವನೀಯವಾದ ಸಂಗತಿಯಾಗಿದೆ. ಈ ದೃಷ್ಟಿಯಿಂದ ಆಂಜನೇಯನು ಸಾಗರವನ್ನು ಉಲ್ಲಂಘಿಸಿದನೆಂಬುದು, ನಿಜಕ್ಕೂ ನಿಯತಿಕೃತ ನಿಯಮರಹಿತವಾದ ವಿಷಯವೇ. ಆದರೆ ಈ ನಿಯತಿ ಕೃತ ನಿಯಮದ ನೆಲೆಯಲ್ಲಿ ನಡೆದ ಸಾಗರೋಲ್ಲಂಘನದ ಘಟನೆ, ಸಂಭಾವ್ಯವೆನಿಸುವಂತೆ ಚಿತ್ರಿತವಾಗದೆ ಹೋಗಿದ್ದರೆ, ಅದು ‘ಅಸಂಭಾವ್ಯತೆ’ಯೆಂಬ ಕಲಾ ದೋಷಕ್ಕೆ ಪಕ್ಕಾಗುತ್ತಿತ್ತು. ಎಂದರೆ ಆಂಜನೇಯನು ತಾನಿದ್ದ ಗಾತ್ರದಲ್ಲೇ, ತಟಕ್ಕನೆ ಕಡಲನ್ನು ಹಾರಿದನೆಂದು ವಾಲ್ಮೀಕಿ ವರ್ಣಿಸಿ ಕೈ ತೊಳೆದುಕೊಂಡಿದ್ದರೆ, ಅದು ಕೇವಲ ‘ನಿಯತಿಕೃತ ನಿಯಮರಾಹಿತ್ಯ’ವೂ, ‘ಅಸಂಭಾವ್ಯ ’ವೂ ಆಗಿ, ಓದುಗರಲ್ಲಿ ಆಂಜನೇಯನ ಈ ಸಾಗರೋಲ್ಲಂಘನದ ಬಗೆಗೇ ಶಂಕೆ ಉಂಟಾಗುತ್ತಿತ್ತು. ಆಂಜನೇಯನು ವಾಯುಪುತ್ರನೂ, ವಾನರೋತ್ತಮನೂ, ಸಮಸ್ತ ಯೌಗಿಕಬಲ ಸಂಪನ್ನನೂ ಆಗಿದ್ದನೆಂದು ಅವನ ವ್ಯಕ್ತಿತ್ವದ ಮಹಿಮಾತಿಶಯಗಳನ್ನು ಚಿತ್ರಿಸಿ, ಅವನು ಅಂಥ ನೂರು ಯೋಜನದ ಕಡಲನ್ನು ಹಾರಲು ಯಾವ ಬೃಹದ್ ಭೂಮಗಾತ್ರಕ್ಕೆ ಬೆಳೆದು ನಿಂತನೆಂಬುದನ್ನೂ ವರ್ಣಿಸಿ, ಇಂಥ ಅಘಟಿತ ಘಟನೆಗೆ ಉಚಿತವಾಗುವ, ಒಂದು ಹಿನ್ನೆಲೆಯನ್ನು ಕವಿ ಕಲ್ಪಿಸಿ, ಇಂಥ ಶಕ್ತಿಸಮನ್ವಿತನಾದ ವಾಯುಪುತ್ರನು ಕಡಲನ್ನು ದಾಟಿದ್ದು ‘ಅಸಂಭಾವ್ಯ’ವಲ್ಲವೆಂಬ ನಂಬಿಕೆಯನ್ನು ಓದುಗರಲ್ಲಿ ಉಂಟುಮಾಡುತ್ತಾನೆ. ಜತೆಗೆ ಇಂಥ ಭೂಮ ವ್ಯಕ್ತಿತ್ವ ಸಾಗರವನ್ನು ಉಲ್ಲಂಘಿಸುವಾಗ, ನೀರ ಮೇಲೆ, ನೆಲದ ಮೇಲೆ, ಆಕಾಶದ ಮೇಲೆ, ಕೆಳಗೆ ನಿಂತು ನೋಡುವ ಕಪಿವೀರರ ಮೇಲೆ, ಏನೇನು ಪರಿಣಾಮಗಳಾಯಿತೆಂಬುದನ್ನು ಕವಿ ಅತ್ಯಂತ ಲೋಕ ಸಹಜವಾದ ಘಟನೆಯೆಂಬಂತೆ ಚಿತ್ರಿಸಿದ್ದಾನೆ. ಆಂಜನೇಯನ ಸಾಗರೋಲ್ಲಂಘನ ‘ನಿಯತಿಕೃತ ನಿಯಮರಹಿತ’ವಾದ ಘಟನೆಯಾಗಿದ್ದರೂ, ಅದು ಅತ್ಯಂತ ಸಂಭಾವ್ಯವೆಂದು ಓದುಗರು ನಂಬುವಷ್ಟು ಪರಿಣಾಮಕಾರಿಯಾಗಿದೆ.

ಸಾರಾಂಶವೆಂದರೆ, ಕವಿ ವರ್ಣಿಸುವ ಸಂಗತಿಗಳು, ಕೇವಲ ‘ನಿಯತಿಕೃತ ನಿಯಮ ರಾಹಿತ್ಯ’ದ ನೆಲೆಗೆ ಏರಿದರೆ ಸಾಲದು ಕಲೆಯಾಗುವುದಕ್ಕೆ; ಅವುಗಳ ನಿರ್ವಹಣೆ, ‘ಅಸಂಭಾವ್ಯತೆ’ಯ ದೋಷಕ್ಕೆ ಪಾತ್ರವಾಗದಂಥ ಕಲಾತ್ಮಕತೆಯನ್ನು ಪಡೆದು ಕೊಂಡಿರುವುದೂ ಅಗತ್ಯ.


[1] ಡಾ. ಕೆ. ಕೃಷ್ಣಮೂರ್ತಿ: ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ, ಪು. ೧೪೭.

[2] ತೀ.ನಂ. ಶ್ರೀಕಂಠಯ್ಯ: ಭಾರತೀಯ ಕಾವ್ಯಮೀಮಾಂಸೆ, ಪು. ೩೮೪.

[3] Aristotle-Horace-Longinus : Classical Literary Criticism, Tr. J.S. Dorsch, P. 43-44 and P. 73.

[4] ಮಮ್ಮಟನ ಕಾವ್ಯಪ್ರಕಾಶ : ೧-೧

[5] ಪು.ತಿ.ನ. : ಕಾವ್ಯ ಕುತೂಹಲ, ಪು. ೬೬-೭೦

[6] ಪು.ತಿ.ನ. ಕಾವ್ಯ ಕುತೂಹಲ, ಪು. ೬೯-೭೫.