ಮೆಲ್ಲನಿಳಿಯುತ್ತಿದ್ದ ಸಂಜೆಯ ಸೂರ್ಯ ಸುದ-
ರ್ಶನ ಚಕ್ರದ ಹಾಗೆ, ಪಡುವಣದ ಕಡಲಿಗೆ,
ಅವಿಶ್ರಾಂತ ತರಂಗ ಜಲವಿಸ್ತಾರ ವಿವಿಧ
ವರ್ಣಗಳಲ್ಲಿ ಶೋಭಿಸಿತು ಶೇಷತಲ್ಪದ ಹಾಗೆ.

ಕಡಲೀಚೆ ಕಾಡು; ಕಾಡಿನ ಬದಿಗೆ ಹೊಲ; ಹೊಲ-
ದಲ್ಲಿ ಒಬ್ಬನೇ ತನ್ನ ಪಾಡಿಗೆ ತಾನು ನೇಗಿಲ
ಹೂಡಿ ದುಡಿಯುವ ರೈತ. ಪೀತಾಂಬರ ಪ್ರಭೆಯ
ಗಗನದಲ್ಲಿ ಗರಿತೆರೆದು ಹಾಯಾಗಿ ಹಾರುವ

ಗರುಡ; ಅಲ್ಲಲ್ಲಿ ಬೆಣ್ಣೆ ಮೋಡಗಳ ಮುಖದಲ್ಲಿ
ಏನೋ ನೆನಪು. ಎತ್ತರದ ಮರಮರದ
ಶಾಖೋಪಶಾಖೆಗಳಲ್ಲಿ ಕೊಳಲನೂದುವ
ಗಾಳಿ; ಈ ನಡುವೆ, ನಾಟಕ ಮುಗಿದ ರಂಗಸ್ಥಲದ

ನಿಶ್ಶಬ್ದ ಕಾನನದೊಳಗೆ ಹಸಿರ ಹೆಡೆ ಬಿಡಿಸಿದ-
ಶ್ವತ್ಥ ವೃಕ್ಷದ ಕೆಳಗೆ ಮಂದಹಾಸದ
ಮೂರ್ತಿ; ಒಂದು ಕಾಲನಿನ್ನೊಂದು ಕಾಲಿನ ಮೇಲೆ
ನವಿಲುಗರಿಯಂತಿರಿಸಿ ಮಲಗಿದ ಮೌನ.

ಸೃಷ್ಟಿಪೂರ್ವದ ಅಥವ ಪ್ರಳಯದಾನಂತರದ
ವಿರಾಮದ ಕ್ಷಣವೊ, ಬಂದನೊಬ್ಬನು ವ್ಯಾಧ
ಬೇಟೆಯನ್ನರಸುತ್ತ, ಕಪ್ಪು ಮೈನೆರಳನುದ್ದುದ್ದ
ಚೆಲ್ಲುತ್ತ ದಟ್ಟ ಹಸುರಿನ ಮೇಲೆ. ಶ್ರೀಹರಿಪಾದ

ಅಪೂರ್ವ ಪಕ್ಷಿಯ ಹಾಗೆ ತೋರಿರಲು ದಟ್ಟಪೊದೆ-
ಗಳ ನಡುವೆ, ಕೂಡಲೇ ಹೂಡಿ ಬಿಲ್ಲಿಗೆ ಬಾಣ
ಬಿಟ್ಟನು ಗುರಿಗೆ. ತಾಗಿದ್ದೆ ತಡ ಛಿಲ್ಲೆಂದು
ಚಿಮ್ಮಿತು ರಕ್ತ : ಕೆಂಪಾಯ್ತು ನೀಲಿಯ ಗಗನ!

ಹೊಲದಲ್ಲಿ ಗೇಯುತ್ತಿದ್ದ ಆ ರೈತ ಕಂಡನೊಂ-
ದದ್ಭುತವ : ಇದ್ದಕ್ಕಿದ್ದಂತೆ ಸಂಜೆಯ ಸೂರ್ಯ
ಜರ್ರನೆ ಜಾರಿ ಕಡಲೊಳಗೆ, ಪಾಂಚಜನ್ಯದ
ಮೊಳಗು ಒಂದೇ ಒಂದು ಕ್ಷಣ ಪರಮಾಶ್ಚರ್ಯ

ಪ್ರಭೆಯಾಗಿ ವ್ಯಾಪಿಸಿತು ಭೂಮಿ-ವ್ಯೋಮಗಳನ್ನು.
ಬೆರಗಾಗಿ, ನೇಗಿಲ ಹೊತ್ತು ನಡೆದನು ರೈತ
ಇಡೀ ದಿವಸ ಹರಗಿ ಹದಮಾಡಿದ್ದ ಹೊಲದೊ-
ಳಗೆ ಬೀಜ ಬಿತ್ತುವ ಬಗ್ಗೆ ಯೋಚಿಸುತ್ತ.