ಮಲೆನಾಡಿನ ಒಲೆಗಳು ಬಕಾಸುರನಂತೆ.  ಕಟ್ಟಿಗೆಯನ್ನು ಬೆಳಗಿನಿಂದ ರಾತ್ರಿಯವರೆಗೂ ತಿನ್ನುತ್ತಲೇ ಇರುತ್ತವೆ.  ಜೊತೆಗೆ ಹೊಗೆ.  ಹೊಗೆಯಿಂದಾಗಿ ಆರೋಗ್ಯ ಹಾಳು.  ಕ್ಯಾನ್ಸರ್, ಟಿಬಿ, ಅಸ್ತಮಾ ಹೀಗೆ ನೂರಾರು ರೋಗಗಳಿಗೆ ಒಲೆಗಳೇ ತೌರುಮನೆ.

ಹೊಲಗಳಿಗೆ ಬಳಸುವ ಯಾವುದೇ ಕೃಷಿತ್ಯಾಜ್ಯಗಳನ್ನು ಇಂಧನವಾಗಿ ಬಳಸಬಹುದಾಗ ಒಲೆಗಳು ಬಂದಿವೆ.  ಇವು ಪ್ರತ್ಯಕ್ಷವಾಗಿ ಕಟ್ಟಿಗೆ ಉಳಿಸುತ್ತವೆ.  ಮರಗಿಡಗಳನ್ನು ಕಡಿಯುವುದು ಕಡಿಮೆಯಾಗುತ್ತದೆ.  ಹೀಗೆ ಒಂದರ ಹಿಂದೊಂದು ಸರಪಳಿ ಉಪಯೋಗಗಳಿವೆ.

ಅಸ್ತ್ರ ಒಲೆಗಳು ಅಥವಾ ಸುಧಾರಿತ ಒಲೆಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಕಟ್ಟಿಗೆಗಾಗಿ ವ್ಯರ್ಥವಾಗುತ್ತಿದ್ದ ಇಡೀ ದಿನದ ಸಮಯದ ಉಳಿತಾಯದಿಂದ ಆರೋಗ್ಯದವರೆಗೂ ಉಪಯುಕ್ತ.  ಇದು ಮಹಿಳೆಯರಿಗೆ ಅತ್ಯಂತ ಸಹಾಯಕ.  ಪ್ರತಿಮನೆಯ ಮಹಿಳೆಯು ಸುಧಾರಿತ ಅಥವಾ ಅಸ್ತ್ರ ಒಲೆಗಳನ್ನು ಮಾಡಿಸಲೇಬೇಕು.  ಇದು ಆಕೆಯ ಮೊದಲ ಕರ್ತವ್ಯವಾಗಲಿ.  ಒಲೆಯೊಂದು ಬದುಕನ್ನು ಹೇಗೆ ಬದಲಿಸುತ್ತದೆ ಎನ್ನುವುದು ತಿಳಿಯುತ್ತದೆ.

ವಿಳಾಸ: ಜಿ. ಗೋಪಾಲಕೃಷ್ಣ ಹೆಗಡೆ, ದೂ.೦೮೧೮೩-೨೨೧೨೧೫, ೯೮೮೬೩೪೧೬೭೦

ಮಲೆನಾಡಿನ ಮನೆ ಮನೆಗಳಲ್ಲೂ ಬಚ್ಚಲು ಹಂಡೆಗಳಲ್ಲಿ ವರ್ಷದ ಎಲ್ಲಾ ದಿನವೂ ೨೪ ಗಂಟೆಗಳ ಕಾಲ ಬಿಸಿನೀರು ಇರಲೇಬೇಕು.  ಬರೀ ಸ್ನಾನಕ್ಕೊಂದೇ ಬಿಸಿನೀರಿದ್ದರೆ ಸಾಲದು.  ಆಗಾಗ ಕೈಕಾಲು ತೊಳೆಯಲು, ಜಾನುವಾರುಗಳಿಗೆ ಕಲಗಚ್ಚು ಕುಡಿಸಲು, ಬಟ್ಟೆ ತೊಳೆಯಲು ಹೀಗೆ ಕಟ್ಟಿಗೆ ಖರ್ಚು ಕನಿಷ್ಠ ೧೨ ಎತ್ತಿನ ಗಾಡಿಗಳು.  ಬೆಳಗ್ಗೆ ಎದ್ದಕೂಡಲೇ ಒಲೆಗೆ ಬೆಂಕಿ ಒಡ್ಡಿದರೆ, ರಾತ್ರಿ ಮಲಗುವವರೆಗೂ ಒಲೆಯಲ್ಲಿ ಧಗಧಗ ಬೆಂಕಿ ಇರಲೇಬೇಕು.  ಒಬ್ಬೊಬ್ಬರೂ ಹಂಡೆ ಭರ್ತಿ ನೀರನ್ನು ಸ್ನಾನ ಮಾಡುವ ಅಥವಾ ಮೈಗೆ ಹೊಯ್ದುಕೊಳ್ಳುವ ಪದ್ಧತಿ.

ಕಟ್ಟಿಗೆಯ ಅಭಾವ ಈ ಪದ್ಧತಿಗೊಂದು ಮಿತಿ ತಂದಿತು.  ೧೨ ಗಾಡಿಯಿಂದ ನಾಲ್ಕು ಗಾಡಿಗೆ ಇಳಿಯಿತು.  ಆದರೆ ದಿನವಿಡೀ ಬಿಸಿನೀರು ಬೇಕೆಂದರೆ ಸಾಧ್ಯವಾಗುತ್ತಿರಲಿಲ್ಲ.  ಆಗಲೇ ಭಾರತೀಯ ವಿಜ್ಞನ ಮಂದಿರದ ಅಸ್ತ್ರ ಯೋಜನೆಯಲ್ಲಿ ರೂಪಿಸಲಾದ ಒಲೆಗಳು ಜನಪ್ರಿಯವಾಯಿತು.  ಅನೇಕ ಪ್ರಗತಿಪರ ಚಿಂತಕರು, ಪರಿಸರಪ್ರಿಯರು ಈ ರೀತಿಯ ಒಲೆಗಳನ್ನು ಬಚ್ಚಲಿನ ನೀರು ಕಾಯಿಸಲು, ಅಡುಗೆಗೋಸ್ಕರ ಹಾಗೂ ಅಡಿಕೆ ಬೇಯಿಸಲು ನಿರ್ಮಿಸತೊಡಗಿದರು.  ಶಿರಸಿ ಸಮೀಪದ ಎಡೆಹಳ್ಳಿಯಲ್ಲಿ ಭಾರತೀಯ ವಿಜ್ಞಾನ ಮಂದಿರದ ಘಟಕವೊಂದು ಕೆಲಸ ಮಾಡತೊಡಗಿತು.  ನುರಾರು ಯುವಕರನ್ನು ತರಬೇತುಗೊಳಿಸತೊಡಗಿತು.  ಒಲೆಯ ನಿರ್ಮಾಣ ಸಉಲಭ.  ಬಳಸುವ ವಸ್ತುಗಳು ಇಟ್ಟಿಗೆಗಳು, ಮಣ್ಣು ಹಾಗೂ ಉದ್ದನೆಯ ಹೊಗೆಕೊಳವೆ ಮತ್ತು ಮರಳು.

ಹೊಗೆರಹಿತ ಬೆಂಕಿಯಿಂದಾಗಿ ಇದು ದಿನೇ ದಿನೇ ಜನಪ್ರಿಯವಾಯಿತು.  ಮಲೆನಾಡಿನ ಅಡುಗೆಮನೆ, ಹೋಟೆಲ್‌ಗಳಲ್ಲಿ ಅಸ್ತ್ರ ಒಲೆ ಅಥವಾ ಸುಧಾರಿತ ಅಸ್ತ್ರ ಒಲೆಗಳಿಗೆ ಬೇಡಿಕೆ ಹೆಚ್ಚಿತು.  ಆಗ ಯಡೆಹಳ್ಳಿಯಲ್ಲಿ ತರಬೇತಿ ಪಡೆದು, ಅನೇಕ ಅಸ್ತ್ರ ಒಲೆ ಕಟ್ಟಿದ್ದ ಜಿ. ಗೋಪಾಲಕೃಷ್ಣ ಹೆಗಡೆಯವರು ಸಾಗರ ಪ್ರಾಂತ್ಯಕ್ಕೆ ಬಂದರು.  ಸೊರಬ, ಸಾಗರ, ಹೊಸನಗರ ತಾಲ್ಲೂಕಿನ ಅಸ್ತ್ರ ಒಲೆಗಳ ಕ್ರಾಂತಿಗೆ ರೂವಾರಿಯಾದರು.

ಸೊರಬ ಅರೆ ಮಲೆನಾಡು.  ಕಟ್ಟಿಗೆಯ ಬವಣೆ ಹೆಚ್ಚು.  ಅಸ್ತ್ರ ಒಲೆಗಳಿಗೆ ಯಾವುದೇ ತ್ಯಾಜ್ಯವಾದರೂ ಆದೀತು.  ಸೊರಬದ ಪಟ್ಟಣದಲ್ಲಿ ಕೆಲವು ಮನೆಗಳಿಗೆ ಅಸ್ತ್ರ್ರ ಒಲೆ ನಿರ್ಮಿಸಿಕೊಟ್ಟರು. ಅವರು ಕಾಗದದ ರಟ್ಟುಗಳು, ಪೆಟ್ಟಿಗೆಗಳು, ವ್ಯರ್ಥ ಪತ್ರಿಕೆಗಳನ್ನೇ ಬಳಸಿ ನೀರು ಕಾಯಿಸುತ್ತಿದ್ದರು.  ಯಾವುದೇ ತ್ಯಾಜ್ಯದಿಂದಲಾದರೂ ಆದೀತು ಎಂದುಕೊಂಡಾಗ ಸಾಲು ಸಾಲು ಮನೆಗಳಲ್ಲಿ ಅಸ್ತ್ರ ಒಲೆಗಳು ನಿರ್ಮಾಣಗೊಂಡವು.  ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲೂ ಬೆಂಕಿಯ ಉಳಿತಾಯ, ಕಟ್ಟಿಗೆ ಉಳಿತಾಯ.  ತಲಕಾಲುಕೊಪ್ಪದಲ್ಲಂತೂ ಸಾಲಾಗಿ ೧೫ ಮನೆಗಳಲ್ಲಿ ಬಚ್ಚಲು, ಅಡುಗೆ, ಡ್ರೈಯರ್ ಎಲ್ಲದಕ್ಕೂ ಅಸ್ತ್ರ ಒಲೆ ಎದ್ದಿತು.  ಕಟ್ಟಿಗೆ ಖರ್ಚು ಉಳಿದದ್ದೊಂದೇ ಅಲ್ಲ, ಮನೆಯಲ್ಲಿದ್ದ ತೆಂಗಿನಗರಿ, ಮಡಿಲು, ಇತರ ತ್ಯಾಜ್ಯಗಳು, ಅಡಿಕೆಸೋಗೆ ಮತ್ತು ಇತರ ತ್ಯಾಜ್ಯಗಳು ಎಲ್ಲವೂ ಅಸ್ತ್ರ ಒಲೆಗೆ ಆಹಾರ.  ಸುಗ್ಗಿಯ ಕಾಲ ಮುಗಿದ ಕೂಡಲೇ ಅಡಿಕೆ ಸಿಪ್ಪೆಯೊಂದೇ ಮೂರು ತಿಂಗಳು ಒಲೆ ಉರಿಸಲು ಸಾಕು.

ದಿನೇ ದಿನೇ ಜಿ. ಗೋಪಾಲಕೃಷ್ಣ ಹೆಗಡೆಯವರು ಗೋಪಾಲಣ್ಣನಾದರು.  ಅಸ್ತ್ರ ಒಲೆ ಸಾಗರ ಪ್ರಾಂತ್ಯವನ್ನೇ ತುಂಬತೊಡಗಿತು. ಇಸವಿ ೧೯೮೫ರಿಂದ ಕಟ್ಟಲು ಪ್ರಾರಂಭಿಸಿದ ಹೆಗಡೆಯವರು ಇಲ್ಲಿಯವರೆಗೆ ೧೦೦೦ಕ್ಕೂ ಹೆಚ್ಚು ಒಲೆಗಳನ್ನು ಕಟ್ಟಿದ್ದಾರೆ.  ಅಂದು ಅಡುಗೆ ಒಲೆ ಕಟ್ಟಲು ೫೦ ರೂಪಾಯಿಗಳು.  ಬಚ್ಚಲು ಒಲೆ ಕಟ್ಟಲು ೧೫೦ ರೂಪಾಯಿಗಳಿತ್ತು.  ಇಂದು ೩೦೦ ಹಾಗೂ ೭೦೦ ರೂಪಾಯಿಗಳಾಗಿದೆ.  ಒಲೆ ಕಟ್ಟಲು ಬಳಸುವ ವಸ್ತುಗಳಿಗೆ ೧೨೦೦ ಹಾಗೂ ೨೦೦೦ ರೂಪಾಯಿಗಳಾಗಿದೆ.  ಹೀಗೆ ೧೫೦೦ರಿಂದ ೩೦೦೦ ರೂಪಾಯಿಗಳೊಳಗೆ ನಿರ್ಮಿಸಲಾದ ಒಲೆಯಿಂದ ವರ್ಷಕ್ಕೆ ಸುಮಾರು ೧೦ ಸಾವಿರ ರೂಪಾಯಿಗಳ ಉಳಿತಾಯ, ಹೊಗೆರಹಿತ ಆರೋಗ್ಯಯುತ ಉಸಿರಾಟ ಹಾಗೂ ಕಡಿಮೆ ಶ್ರಮ.  ಇಷ್ಟೆಲ್ಲಾ ಉಪಯೋಗಗಳಾಗಿವೆ.

ಮನೆಗಳಿಗೆ ಅಸ್ತ್ರ ಒಲೆಗಳನ್ನು ನಿರ್ಮಿಸುವ ಕೆಲಸ ಸುಲಭ.  ಆದರೂ ಕೆಲವರು ವಿಭಿನ್ನ ಯೋಚನೆಗಳನ್ನು ಹೇಳಿದಾಗ ಸವಾಲುಗಳು ಎದುರಾಗುತ್ತವೆ ಎನ್ನುತ್ತಾರೆ ಹೆಗಡೆಯವರು.

ಸೊರಬದ ಕೃಷ್ಣಮೂರ್ತಿ ಕಾಕಡೆಯವರದು ತೀರಾ ಇಕ್ಕಟ್ಟಿನ ಮನೆ.  ಮನೆಯ ಮಧ್ಯದಲ್ಲಿ ಬಚ್ಚಲು.  ಬಚ್ಚಲು ಒಲೆಗೆ ಬೆಂಕಿ ಹಾಕಿದರೆ ಮನೆ ತುಂಬಾ ಹೊಗೆ.  ಈ ರೀತಿಯ ಹೊಗೆಯಲ್ಲೇ ಅರ್ಧ ಶತಮಾನ ಕಳೆದಿದ್ದರು.  ಬೇರೆ ದಾರಿ ಹೊಳೆದಿರಲೇ ಇಲ್ಲ.  ಹೆಗಡೆಯವರಿಗೆ ಇದೊಂದು ಸವಾಲಾಯಿತು.  ಮನೆಯ ಗೋಡೆ ಒಡೆಯುವಂತಿಲ್ಲ.  ಬಚ್ಚಲು ದೊಡ್ಡ ಮಾಡುವಂತಿಲ್ಲ.  ಮಹಡಿಯಿಂದ ದಾರಿ ಮಾಡುವುದೂ ಕಷ್ಟ.  ಆದರೂ ಹೊಗೆ ಪೈಪು ಹಾದುಹೋಗಲು ದಾರಿ ಮಾಡಿಯೇಬಿಟ್ಟರು.  ಒಲೆ ನಿರ್ಮಿಸಿದರು.  ಈಗ ಹೊಗೆ ಮನೆ ತುಂಬುವುದಿಲ್ಲ.  ಕೇವಲ ದಿನಕ್ಕೆ ನಾಲ್ಕೈದು ಕಿಲೋಗ್ರಾಂ ತ್ಯಾಜ್ಯ ಬಳಸಿದರಾಯಿತು.  ಮನೆಮಂದಿಯೆಲ್ಲಾ ಸ್ನಾನ ಮಾಡುವಷ್ಟು ಬಿಸಿನೀರು ಸಿಗುತ್ತಿದೆ ಎನ್ನುತ್ತಾರೆ ಆರು ಜನರ ಕುಟುಂಬದ ಕಾಕಡೆಯವರು.

ಇದಕ್ಕಿಂತ ವಿಭಿನ್ನ ಅನುಭವ ತಾಗರ್ತಿಯ ವೀರಾಪುರದ ಮಲ್ಲಿಕಾರ್ಜುನಗೌಡರ ಮನೆಯ ಒಲೆಯದು.  ದೊಡ್ಡ ಕುಟುಂಬ.  ಆಳುಕಾಳುಗಳಿಗೂ ಮನೆಯಲ್ಲೇ ಊಟ.  ಅದಕ್ಕಾಗಿ ಸದಾ ಉರಿಯುತ್ತಲೇ ಇರುವ ಅಡುಗೆ ಒಲೆ.  ಜನ ಬಂದಂತೆಲ್ಲಾ ರೊಟ್ಟಿ ಸುಡುವುದೇ ಕೆಲಸ.  ಅಡುಗೆ ಒಲೆಯ ಸುಳಿ ವ್ಯರ್ಥವಾಗುತ್ತಿತ್ತು.  ಒಲೆ ಹೂಡಲು ಹೋದ ಹೆಗಡೆಯವರಿಗೆ ಉಪಾಯ ಹೊಳೆಯಿತು.  ಅಡುಗೆ ಒಲೆಯ ಹಿಂದೆ ಮತ್ತೊಂದು ಬಚ್ಚಲು ಒಲೆಯನ್ನೂ ಹೂಡಿದರು.  ಅಡುಗೆ ಒಲೆಯಲ್ಲಿ ಹೆಚ್ಚಾದ ಬೆಂಕಿ ಸೀದಾ ಬಚ್ಚಲು ಒಲೆಗೆ ಹೋಗುವ ವ್ಯವಸ್ಥೆ ಮಾಡಿದರು.  ಗೌಡರ ಮನೆಯಲ್ಲಿ ದಿನಪೂರ್ತಿ ಬಿಸಿ ಬಿಸಿ ನೀರು.  ಅಡುಗೆ ಮಾಡುತ್ತಿದ್ದಷ್ಟು ಹೊತ್ತು ನೀರು ಬಿಸಿಯಾಗುತ್ತಲೇ ಇರುತ್ತದೆ.  ಇದನ್ನು ನೋಡಿ ಕಲ್ಯಾಣಪುರದ ರಾಜಶೇಖರಗೌಡ್ರು ಹಾಗೇ ಮಾಡಿಸಿದರು.  ಹೀಗೆ ಒಬ್ಬರಿಂದ ಒಬ್ಬರಿಗೆ ಹರಡಿ ಅನೇಕ ಮನೆಗಳಲ್ಲಿ ಈ ವ್ಯವಸ್ಥೆ ಅಳವಡಿಸತೊಡಗಿದ್ದಾರೆ.

ಹೆಗಡೆಯವರು ಒಲೆಯ ಆಯಸ್ಸು ಹೆಚ್ಚಿಸಲು ಮಣ್ಣು, ಮರಳಿನೊಂದಿಗೆ ಶೇಕಡಾ ಒಂದರಷ್ಟು ಸಿಮೆಂಟ್ ಬಳಸುತ್ತಾರೆ.  ಕೇವಲ ಮಣ್ಣು, ಮರಳು ಬಳಸಿ ನಿರ್ಮಿಸಿದ ಒಲೆಗಳು ೨೦ ವರ್ಷಗಳ ಬಾಳಿಕೆ ಬರುತ್ತವೆ.  ಆದರೆ ಹಂಡೆ ಹಾಳಾಗಿ, ಅತಿಯಾದ ಬೆಂಕಿಯಿಂದ ಒಲೆಗಳನ್ನು ಕೀಳಬೇಕಾಗುತ್ತದೆ.  ಬಚ್ಚಲು ಒಲೆಗಳಲ್ಲಿ ಹೊಗೆ ಬರುವುದೇ ಇಲ್ಲ.  ಆದರೆ ಅಡುಗೆ ಒಲೆಗಳಲ್ಲಿ ಶೇಕಡಾ ೫ರಿಂದ ೧೦ರಷ್ಟು ಹೊಗೆ ಬರುವ ಸಾಧ್ಯತೆಯನ್ನು ತಿಳಿಸುತ್ತಾರೆ.

ಅಸ್ತ್ರ ಒಲೆಗಳಲ್ಲಿ ಹೊಗೆ ಕೊಳವೆಯೊಂದಿಗೆ ಕಾರ್ಬನ್ ಕಿಟ್ಟ ತೆಗೆಯುವ ವ್ಯವಸ್ಥೆಯನ್ನೂ ನಿರ್ಮಿಸಲಾಗುತ್ತದೆ.  ಕಾರ್ಬನ್ ಕಿಟ್ಟವನ್ನು ಆಗಾಗ ತೆಗೆಯುತ್ತಿರಬೇಕು.  ಇಲ್ಲದಿದ್ದರೆ ಬೆಂಕಿಯ ಸುಳಿ ಹಂಡೆಯ ಸುತ್ತ ಸರಿಯಾಗಿ ತಿರುಗದೆ ನೀರು ಬಿಸಿಯಾಗುವಿಕೆ ನಿಧಾನವಾಗುತ್ತದೆ.  ಈ ವಿಚಾರ ಗೊತ್ತಿರದೇ ಅನೇಕರು ಒಲೆ ಹಾಳಾಗಿದೆ ಎಂದೂ ಭಾವಿಸುತ್ತಾರೆ ಅಥವಾ ಹೆಚ್ಚು ಕಟ್ಟಿಗೆ ಖರ್ಚಾಗುತ್ತದೆ ಎಂದು ಆರೋಪಿಸುತ್ತಾರೆ.  ವಾಸ್ತವವೇನೆಂದರೆ ಸಾದಾ ಒಲೆಗಳಲ್ಲಿ ಬೆಂಕಿಯ ತುದಿಮಾತ್ರ ಹಂಡೆಗೆ ತಾಗಿ ನೀರು ಬಿಸಿಯಾಗುತ್ತದೆ.  ಅಸ್ತ್ರ ಒಲೆಗಳಲ್ಲಿ ಬೆಂಕಿ ಸಂಪೂರ್ಣ ಹಂಡೆಯ ಸುತ್ತಲೂ ಸುತ್ತಿ ಸುತ್ತಿ ನೀರು ಬಿಸಿಯಾಗುತ್ತದೆ.  ಹೀಗಾಗಿ ಬೆಂಕಿ ಸ್ವಲ್ಪವೂ ವ್ಯರ್ಥವಾಗದು.  ಆದರೆ ಈ ರೀತಿ ಸುತ್ತಲೂ ಕೇವಲ ಜಾಗವೊಂದಿದ್ದರೆ ಸಾಲದು.  ಕೆಳಗಿನಿಂದ ಉರಿಯಲು ಆಮ್ಲಜನಕ ಮತ್ತು ಗಾಳಿಯು ಹೊರಹೋಗಲು ಸೂಕ್ತ ದಾರಿಯೂ ಇರಬೇಕು.  ಒಲೆಯ ನಿರ್ಮಾಣದಲ್ಲಿ ಈ ತಂತ್ರವೇ ಪ್ರಮುಖ ಪಾತ್ರ ವಹಿಸುತ್ತದೆ.  ಹೊರದಾರಿಗೆ ಕಾರ್ಬನ್‌ಕಿಟ್ಟ ಅಡ್ಡ ತಡೆಯಾದಾಗ ಉರಿಯ ಪ್ರಮಾಣ ತಗ್ಗುತ್ತದೆ.

ಅಸ್ತ್ರ ಒಲೆಗಳು ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿವೆ.  ಚನ್ನಗಿರಿ, ಭದ್ರಾವತಿ, ಕೊಪ್ಪ, ಶೃಂಗೇರಿಗಳಲ್ಲಿ ಡ್ರೈಯರ್‌ಗಳಿಗೆ ಬೇಡಿಕೆ ಹೆಚ್ಚು.  ಮಲೆಗಾಲದಲ್ಲೇ  ಕೊಯ್ಲಿಗೆ ಬರುವ ಅಡಿಕೆ ಒಣಗಿಸಲು ಅಲ್ಲಿನ ರೈತರಿಗೆ ಡ್ರೈಯರ್ ಅತ್ಯಂತ ಅವಶ್ಯಕ.

ನಿರ್ಮಿಸಿ ಅಡಿಕೆ ಒಣಗಿಸುವುದರೊಂದಿಗೆ ಏಲಕ್ಕಿ, ಕಾಫಿ, ಕೊಬ್ಬರಿ, ಬಾಳೆಹಣ್ಣು ಹೀಗೆ ಬೇರೆ ವಸ್ತುಗಳನ್ನೂ ಒಣಗಿಸುತ್ತಾರೆ.  ಬಟ್ಟೆ ಒಣಗಿಸಲೂ ಬಳಸುತ್ತಾರೆ.  ಬೆಳಗ್ಗೆ ಒಮ್ಮೆ ಬೆಂಕಿ ಹಾಕಿದರೆ ಸುಮಾರು ಐದು ಕಿಲೋಗ್ರಾಂ ಕಟ್ಟಿಗೆಗೆ ೧೪ ತಾಸುಗಳ ಕಾಲ ಇಡೀ ಕೋಣೆ ಬಿಸಿಯಾಗಿ ಬೆಚ್ಚಗೆ ಇರುತ್ತದೆ ಎನ್ನುವ ಅನುಭವ ಉಮಾಪತಿಗೌಡರದು.  ಅಡಿಕೆ ಹೆಚ್ಚಿದ್ದರೆ ಹೆಚ್ಚು ಕಟ್ಟಿಗೆ ಬೇಕು.  ಅದೇ ಬಿಸಿಗೆ ತೆಂಗಿನಕಾಯಿ, ರಬ್ಬರ್, ಬಾಳೆಹಣ್ಣು ಎಲ್ಲವನ್ನೂ ಒಣಗಿಸಬಹುದು ಎನ್ನುತ್ತಾರೆ.

ಅಡಿಕೆ ಬೇಯಿಸುವ ಒಲೆಗೆ ಕಟ್ಟಿಗೆಯೇ ಬೇಕಾಗಿಲ್ಲ, ಕೇವಲ ಸೋಗೆ, ಹಾಳೆ, ದಬ್ಬೆಗಳೇ ಸಾಕು ಎನ್ನುವ ಅನುಭವ ಸಾಂಬಶಿವ ಸಾಗರ ಇವರದು.  ಹೀಗೆ ಅಸ್ತ್ರ ಒಲೆಗಳು ಮನೆ ಮನೆಯಲ್ಲೂ ಜನಪ್ರಿಯವಾಗುತ್ತಿವೆ.

ಅದಕ್ಕಿಂತಲೂ ಹೆಗಡೆಯವರಿಗೆ ಹೆಚ್ಚು ಖುಷಿಯಾಗಿದ್ದು ಹೋಟೆಲ್‌ಗಳಲ್ಲಿ ನಿರ್ಮಿಸುವ ಒಲೆಗಳ ಇಂಧನ ಉಳಿತಾಯ.  ಸಾಗರದ ಮಾರಿಗುಡಿಯ ಹಿಂಭಾಗದ ಕೃಷ್ಣಶೆಟ್ಟಿಯವರ ಹೋಟೆಲ್ಲಿಗೆ ಕೇವಲ ಅಡಿಕೆ ಸಿಪ್ಪೆ ಬಳಸಿ ಉರಿಯುವ ಒಲೆ ನಿರ್ಮಿಸಿಕೊಟ್ಟಿದ್ದಾರೆ.  ಒಂದು ಚೀಲ ಸಿಪ್ಪೆಗೆ ಬೆಲೆ ೨೦ ರೂಪಾಯಿಗಳವರೆಗಿದೆ.  ಅವರ ಹೋಟೆಲ್‌ನಲ್ಲಿ ದಿನಕ್ಕೆ ೨ರಿಂದ ೫ ಚೀಲ ಸಿಪ್ಪೆಯ ಉಪಯೋಗ.  ಹಿಂದೆ ಕಟ್ಟಿಗೆಯಾಗಿದ್ದಾಗ ದಿನಕ್ಕೆ ೫೦೦ ರೂಪಾಯಿಗಳವರೆಗೆ ಖರ್ಚು ಬರುತ್ತಿತ್ತು.  ಈ ಖರ್ಚು ಕಡಿಮೆ ಮಾಡಿದ್ದು ಲಾಭವಾಗುತ್ತಿದೆ ಎನ್ನುತ್ತಾರೆ ಶೆಟ್ಟರು.  ಸ್ವಲ್ಪವೂ ಹೊಗೆ ಇಲ್ಲ.  ಪದಾರ್ಥಗಳು ರುಚಿಯಾಗಿಯೇ ಇದೆ.  ಸಾಗರದ ಮಧುರ ಹೋಟೆಲ್‌ನವರಿಗೆ ಮೊದಲ ಒಲೆಯಲ್ಲಿ ಇಡ್ಲಿ ಬೇಯಿಸಲು ಕಷ್ಟವಾಗುತ್ತಿತ್ತು.  ಬೆಂಕಿಯ ಉಷ್ಣಾಂಶ ಒಮ್ಮೆ ಹೆಚ್ಚು, ಮತ್ತೊಮ್ಮೆ ಕಡಿಮೆ.  ಅದಕ್ಕಾಗಿ ಒಲೆಯನ್ನು ಸುಧಾರಣೆ ಮಾಡಿ ಹೆಚ್ಚು ಇಟ್ಟು ಎರಡನೇ ಒಲೆಗೆ ನಿಯಮಿತವಾಗಿ ಒಂದೇ ರೀತಿಯ ಉಷ್ಣಾಂಶ ಬರುವಂತೆ ಮಾಡಲಾಯಿತು.  ಈಗ ಎಲ್ಲಾ ಹೊತ್ತಿನಲ್ಲೂ ಬಿಸಿ ಬಿಸಿ ರುಚಿ ರುಚಿ ಇಡ್ಲಿ ಲಭ್ಯ.

ಹೆಗಡೆಯವರ ಪ್ರಕಾರ ಕಟ್ಟಿಗೆ ಉಪಯೋಗಿಸುವ ಎಲ್ಲಾ ಹೋಟೆಲ್‌ನವರೂ ಅಸ್ತ್ರ ಒಲೆ ಮಾಡಿಸಿಕೊಳ್ಳಲೇಬೇಕು.  ಇದರಿಂದ ಕಟ್ಟಿಗೆಯೊಂದೇ ಅಲ್ಲ, ಬೆಂಕಿ ಹೊತ್ತುವ ಯಾವುದೇ ತ್ಯಾಜ್ಯಗಳನ್ನಾದರೂ ಬಳಸಿ ಅಡುಗೆ ಮಾಡಬಹುದು.  ಇದರಿಂದ ಕಟ್ಟಿಗೆ ಉಳಿತಾಯ.   ಬೆಂಕಿ ಉರಿಸುವ ಶ್ರಮ ಉಳಿತಾಯ.  ಹೊಗೆ ಇಲ್ಲ, ಸಮಯದ ಉಳಿತಾಯ ಎನ್ನುತ್ತಾರೆ.  ಬೀದಿ ಬದಿಯ ಅನೇಕ ಹೋಟೆಲ್‌ಗಳಿಗೆ ಅವರಿಗೆ ಬೇಕಾದ ಮಾದರಿಯಲ್ಲಿ, ಇರುವಷ್ಟೇ ಜಾಗದಲ್ಲಿ ಒಲೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.  ಕೆಲವು ಕೈಗಾಡಿ ಹೋಟೆಲ್‌ಗಳವರಿಗೂ ಒಲೆ ನಿರ್ಮಿಸಲು ಪ್ರಯತ್ನಿಸಿದ್ದುಂಟು.  ಆದರೆ ಬೆಂಕಿ ಬಿಸಿಯಿಂದಾಗಿ ಗಾಡಿಯ ಹಲಗೆಗಳು ಸುಟ್ಟುಹೋಗಿ ವಿಫಲರಾಗಿದ್ದಾರೆ.  ಹಾಗಂತ ಬೇರೆ ಉಪಾಯಗಳಿವೆಯೇ ಎಂದು ಯೋಚಿಸುವುದನ್ನು ಬಿಟ್ಟಿಲ್ಲ.

ಹೆಗಡೆಯವರು ೧೯೯೫ರಿಂದ ತಮ್ಮ ಒಲೆಗಳ ದಾಖಲೆ ಇಟ್ಟಿದ್ದಾರೆ.  ಆಗಾಗ ಒಲೆ ಓನರ್‌ಗಳನ್ನು ಮಾತನಾಡಿಸಿ ಒಲೆಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ.  ಹೊಸ ವಿಷಯಗಳಿದ್ದರೆ ಅಳವಡಿಸಿಕೊಳ್ಳಲು ಸೂಚಿಸುತ್ತಾರೆ.

ಒಲೆಗಳೇ ಇವರ ಬದುಕು.  ಈ ಉದ್ಯೋಗ ನೆಮ್ಮದಿಯನ್ನು ನೀಡಿದೆ.  ಜನರೊಂದಿಗಿನ ಸಂಪರ್ಕ, ವಿಶ್ವಾಸಗಳು ಇವರ ಉದ್ಯೋಗವನ್ನು ಬೆಳೆಸುತ್ತಲೂ ಇವೆ.  ಕೇರಳ, ತಮಿಳುನಾಡು, ಆಂಧ್ರ, ಗೋವಾಗಳಿಗೂ ಹೋಗಿ ಒಲೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.  ಈಗ ಇಂಡೋನೇಷಿಯಾಕ್ಕೂ ಕರೆ ಬಂದಿದೆ.  ಸ್ವಉದ್ಯೋಗವಾಗಿ ಒಲೆ ನಿರ್ಮಾಣ ನಿರುದ್ಯೋಗಿ ಯುವಕರಿಗೆ ಬಹಳ ಉಪಯುಕ್ತ.  ಜೊತೆಗೆ ಎರಡು ಜನರಿಗೆ ಕೆಲಸವನ್ನು ನೀಡಬಹುದು ಎನ್ನುವ ಅಭಿಪ್ರಾಯ ಹೆಗಡೆಯವರದು.  ಆದರೆ ಹೆಗಡೆಯವರನ್ನು ಬಿಟ್ಟರೆ ಒಲೆ ನಿರ್ಮಾಣವೊಂದನ್ನೇ ಮಾಡುತ್ತಿರುವ ಯುವಕರು ಸುತ್ತಲ ತಾಲ್ಲೂಕುಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು.  ಹೆಗಡೆಯವರು ಯಾರೇ ಯುವಕರು, ಆಸಕ್ತರು ಬಂದರೂ ತರಬೇತಿ ನೀಡಲು ಸಿದ್ಧರಿದ್ದಾರೆ.  ಯಾವುದಾದರೂ ಸಂಸ್ಥೆ, ಯುವ ಸಂಘಗಳು, ಮಹಿಳಾ ಸಂಘಗಳು, ಸ್ವಸಹಾಯ ಸಂಘಗಳು ತರಬೇತಿ ಯೋಜನೆ ಏರ್ಪಡಿಸಿದರೆ, ಕೆಲವರ ಬದುಕಿಗೊಂದು ಉದ್ಯೋಗವಾಗುತ್ತದೆ.

ಪ್ರತಿ ಮನೆಯಲ್ಲೂ ಕಟ್ಟಿಗೆ ಉಳಿತಾಯವಾಗಬೇಕೆಂದರೆ ಅಸ್ತ್ರ ಒಲೆಗಳು, ಸುಧಾರಿತ ಒಲೆಗಳ ಅವಶ್ಯಕತೆ ಖಂಡಿತಾ ಇದೆ.  ಆದರೆ ಅವರನ್ನು ಮನ ಒಲಿಸುವ ಕೆಲಸ ಮಾಡುವುದು ಕಷ್ಟ.   ಜೊತೆಗೆ ಒಲೆ ಕಟ್ಟುವವರೂ ಕಡಿಮೆ.  ಕಟ್ಟುವವರು ಹೆಚ್ಚಾದರೆ ಒಲೆಗಳೂ ಹೆಚ್ಚಾಗಬಹುದು ಅಥವಾ ಇಂಧನ ಉಳಿತಾಯದ ಚಿಂತನೆ ಬರುತ್ತದೆ.  ಈ ಕೆಲಸವನ್ನು ಗ್ರಾಮ ಪಂಚಾಯ್ತಿಗಳ ಮೂಲಕವೂ ಮಾಡಿಸಬಹುದು.  ಜನಪ್ರತಿನಿಧಿಗಳು ಇದನ್ನು ಮುಖ್ಯ ಕೆಲಸವಾಗಿಸಿಕೊಳ್ಳಬೇಕು.  ಈ ಒಲೆಗಳಿಂದ ಕೇವಲ ಉಳಿತಾಯ ಮಾತ್ರವಲ್ಲ, ಆರೋಗ್ಯದ ರಕ್ಷಣೆಯೂ ಆಗುತ್ತದೆ.