ಎಲ್ಲಿದ್ದಾನೆ ಮನುಷ್ಯ, ಎಲ್ಲವನ್ನೂ ಮಾರು-
ಕಟ್ಟೆಯ ಮಾಲನ್ನಾಗಿ ಪರಿವರ್ತಿಸುವ
ಈ ವ್ಯವಸ್ಥೆಯ ಒಳಗೆ? ಕಲೆ-ಸಾಹಿತ್ಯ-ಸಂಸ್ಕೃತಿ
ಗಳೂ ಈಗ ತಕ್ಕಡಿಯೊಳಗೆ ! ಬಿಡುವಿರದ

ಯಾಂತ್ರೀಕರಣದುತ್ಪಾದನೆಯ ಜಾಗತಿಕ ಸ್ಪ-
ರ್ಧೆಗಳಲ್ಲಿ, ನಿತ್ಯವೂ ಈ ನೆಲದ ಫಲ-
ವಂತಿಕೆಯು ನಿರ್ನಾಮವಾಗಿರಲು, ಎಲ್ಲಿ
ಹೊಸ ಹುಟ್ಟು? ತಿನ್ನುವ ಅನ್ನ, ಹರಿವ ಜಲ

ಉಸಿರಾಡಿಸುವ ಗಾಳಿಗಳನ್ನೆಲ್ಲ ಹೀಗೆ
ಕಲುಷಿತಗೊಳಿಸಿ ಸಾಧಿಸಿದ ಪ್ರಗತಿ-
ಗೇನಥ? ಇರುವ ಬುದ್ಧಿಯನೆಲ್ಲ ಬಹು
ರಾಷ್ಟ್ರೀಯ ದೂರನಿಯಂತ್ರಣದ ಬೆರಳಿ-

ಗೊಪ್ಪಿಸಿಕೊಂಡು ಬೀಗುವ ನಮಗೆ, ಸಿ-
ದ್ಧಿಸಬಹುದೆ ಸ್ವಯಂ ನಿಯಂತ್ರಣದ
ಕಲೆಗಾರಿಕೆ? ಹಳೆಯ ನೆನಪುಗಳಿರದ, ಯಾವ
ಕನಸೂ ಇರದ ಈ ಅಸ್ವಸ್ಥ ಭಾರತದ

ಕುರ್ಚಿಗಳ ತುಂಬ ಕೂತ ಹೊಟ್ಟೆಗಳಲ್ಲಿ, ಹೊ-
ತ್ತಿ ಉರಿಯುತ್ತಲಿದೆ ಎಲ್ಲವನ್ನೂ ತಿಂದು
ತೇಗುವ ಬಕಾಸುರ ಹಸಿವು! ಸಾರ್ಥಕವಾಯ್ತು
ಐವತ್ತು ವರ್ಷದ ಹಿಂದೆ ಬಿಡುಗಡೆ ಬಂದು!