ಮಧ್ಯಾಹ್ನದ ಸಮಯ. ಸುಶೀಲೆ ಎಲೆಯನ್ನು ಹಾಕಿಕೊಂಡು ಅನ್ನದತಪ್ಪಲೆಯನ್ನು ಎದುರಿಗಿಟ್ಟುಕೊಂಡು ಊಟಕ್ಕೆ ಕೂತಿದ್ದಾಳೆ. ಹೊರಗಿನಿಂದ “ಅಮ್ಮಾ ಬಿಕ್ಷಾಂದೇಹಿ:” ಎಂಬ ಕೂಗು. ಸುಶೀಲೆ ತಕ್ಷಣ ಎದ್ದು ಹೊರಗೆ ಬಂದು ನೋಡಿದಳು. ಕಾವಿ ಧರಿಸಿದ್ದ ಒಬ್ಬ ಸಂನ್ಯಾಸಿ ನಿಂತಿದ್ದಾನೆ.  “ಬನ್ನಿ” ಎಂದು ಅವನ್ನು ಒಳಗೆ ಕರೆದುಕೂಡಿಸಿ ಎಲೆ ಹಾಕಿದಳು. ತಪ್ಪಲೆಯನ್ನು ಅವಳೊಬ್ಬಳಿಗೆ ಮಾತ್ರ ಸಾಕಾಗುವಷ್ಟು ಅನ್ನವಿತ್ತು. ಹೊಟ್ಟೆ ಹಸಿವಿನಿಂದ ಕಾದಿತ್ತು. ಆದರೂ ತನ್ನ ಹಸಿ ವಿನ ಬಗೆಗೆ ಯೋಚಿಸದೇ ಅತಿಥಿಗೆ ಅತ್ಯಾದಾರದಿಂದ ಸತ್ಕಾರ ನಡೆಸಿದಳು. ಉಂಡು ತೃಪ್ತಿನಾದ ಸಂನ್ಯಾಸಿ, “ನಿನ್ನ ಸಂತತಿಗೆ ಶ್ರೇಯಸ್ಸುಂಟಾಗಲಮ್ಮ” ಎಂದು ಹರಿಸಿದ.

ಸುಶೀಲೆಯ ಕಣ್ಣಲ್ಲಿ ನೀರಾಡಿತು.  ಸಂನ್ಯಾಸಿಯ ಮನಸ್ಸು ಕಲಕಿತು. ಏಕೆ ತಾಯಿ, ಏನಾಯಿತು? ಎಕಮ್ಮ ಈ ಕಣ್ಣೀರು!” ಎಂದು ಕೇಳೀದ.

ನಮ್ಮಗೆ ಮಕ್ಕಳೇ ಇಲ್ಲ ಸ್ವಾಮೀಜಿ”.

ಸಂನ್ಯಾಸಿ ಒಂದು ನಿಮಿಷ ಯೋಚಿಸಿ, “ಕೊಲ್ಲಾಪೂರದ ಲಕ್ಷ್ಮೀದೇವಿಯ ಸೇವೆ ಮಾಡಿದರೆ ನಿಮಗೆ ಖಂಡಿತ ಮಕ್ಕಳಾಗುತ್ತದೆ” ಎಂದು ಹೇಳಿ ಹೊರಟು ಹೋದ.

ಸಂನ್ಯಾಸಿಯ ಮಾತಿನಂತೆ ಆ ದಂಪತಿಗಳು ಕೊಲ್ಲಾಪೂರಕ್ಕೆ ಹೋಗಿ ಸೇವೆ ಮಾಡಿದರು. ಒಂದು ದಿನ ಅವರಿಬ್ಬರಿಗೂ ಜಗದಂಬೆ ಕನಸಿನಲ್ಲಿ ಕಾಣಿಸಿಕೊಂಡು “ನಿಮ್ಮ ಇಷ್ಟಾರ್ಥ ನೆರವೇರುತ್ತದ” ಎಂದು ಹೇಳೀದಂತಾಯಿತು. ಅದನ್ನು ಕೇಳಿ ಸಂತೋಷಗೊಂಡು ಅವರು ಊರಿಗೆ ಹಿಂತಿರುಗಿದರು.  ೧೭೨೫ರ ಒಂದು ಶುಭದಿನದಲ್ಲಿ ಸುಶೀಲೆ ಹೆಣ್ಣು ಮಗುವಿಗೆ ಜನ್ಮಕೊಟ್ಟಳು. ಆ ಮಗುವೇ ಇತಿಹಾಸದಲ್ಲಿ ಪ್ರಸಿದ್ಧಳಾದ ಅಹಲ್ಯಾಬಾಯಿ!ಹೀಗೆ ಅಹಲ್ಯಾಬಾಯಿ ಲಕ್ಷ್ಮೀದೇವಿಯ ಕೃಪೆಯಿಂದ ಹುಟ್ಟಿದವಳು ಎಂದು ಹೇಳುತ್ತಾರೆ.

ಮಹಾರಾಷ್ಟ್ರ ಔರಂಗಾಬಾದ ಜಿಲ್ಲೆಯ ಚೌಂದಿ ಎಂಬ ಹಳ್ಳಿಯಲ್ಲಿ ಅಹಲ್ಯಾಬಾಯಿಯ ತಂದೆ ಮೆಂಕೋಜಿ ಸಿಂಧೆ ಪಟೇಲನಾಗಿದ್ದ. ಈತ ವ್ಯವಸಾಯ ಮಾಡಿಕೊಂಡು ಸಂಸಾರ ತೂಗಿಸುತ್ತಿದ್ದ. ತನ್ನಿಂದಾದ ಮಟ್ಟಿಗೆ ಪರೋಪಕಾರ ಮಾಡುತ್ತಿದ್ದ . ಹಳ್ಳಿಯ ಎಲ್ಲ ಜನರಿಗೂ ಬೇಕಾದವನಾಗಿದ್ದ.

ಬೆಳೆಯುವ ಪೈರು ಮೊಳಕೆಯಲ್ಲೇ:

ಅಹಲ್ಯಾಬಯಿ ಐದು ವರ್ಷದ ಹುಡುಗಿಯಾಗಿದ್ದಾಗಲೇ ಮುಂದೆ ಅವಳು ತೋರಿಸಿದ ಸದ್ಗುಣಗಳ ಅಂಕುರವು ಕಾಣಿಸತೊಡಗಿತು.  ತನ್ನ ಒಡನಾಡಿಗಳ್ನು ಕಂಡರೆ ಅವಳಿಗೆ ಬಹಳ ಪ್ರೀತಿ. ಯಾರಾದರೂ ತಿನ್ನಲು ಏನಾದರೂ ಕೊಟ್ಟರೆ ಅದನ್ನು ತನ್ನ ಜೊತೆಗಾತಿಯರಿಗೆ ಕೊಡದೇ ತಿನ್ನುತ್ತಿರಲಿಲ್ಲ. ಯಾವ ಪದಾರ್ಥವನ್ನಾದರೂ “ಶಿವ” ಎಂದು ಭಾವಿಸಿ ಪೂಜಿಸುವ ಆಟವೆಂದರೆ ಅವಳೀಗೆ ಬಲು ಇಷ್ಟ. ಯಾವಾಗಲೂ ನಿಜವನ್ನೇ ಹೇಳುವಳು,ಸುಳ್ಳು ಹೇಳುವುದೆಂದರೆ ಅವಳಿಗಾಗುತ್ತಿರಲಿಲ್ಲ.

ಚೌಂದಿ ಹಳ್ಳಿಯಲ್ಲಿ ಪಾಠಶಾಲೆಗಳು ಇರಲಿಲ್ಲ. ಆದುದರಿಂದ ಅಹಲ್ಯಾಬಾಯಿಯ ವಿದ್ಯಾಭ್ಯಾಸ ಮನೆಯಲ್ಲಿಯೇ ನಡೆಯಿತು.  ಅವಳ ತಂದೆಯೂ ಮನೆಯಲ್ಲಿ ಅವಳಿಗೆ ಪಾಠ ಹೇಳಿಕೊಡುತ್ತಿದ್ದ.  ಹುಡುಗಿಗೆ ಚುರುಕುಬುದ್ಧಿ. ಧರ್ಮಗ್ರಂಥಗಳಲ್ಲಿ ಹೆಚ್ಚಿನ ಆಸಕ್ತಿ.  ತಂದೆ ತಾಯಿಯ ದೈವಭಕ್ತಿ, ಕರ್ತವ್ಯ ನಿಷ್ಠೆ ಅವಳ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನುಂಟು ಮಾಡಿದವು. ದೇವರಲ್ಲಿ ಅವಳ ನಂಬಿಕೆ ಅಚಲವಾಯಿತು.

ಅದೃಷ್ಟದ ಕಣ್ಣು ತೆರೆಯಿತು:

ಒಂದು ಸಂಜೆ, ಶಿವನ ಗುಡಿಯಲ್ಲಿ ಶಂಕ ಗಂಟೆಯ ಸದ್ದು, ದೇವರಿಗೆ ಮಂಗಳಾರತಿಯಾಗುತ್ತಿದೆ. ಅಲ್ಲಿ ನೆರೆದಿದ್ದ ವರು ಕೆಲವರು ಪ್ರಯಾಣೀಕರು. ಎಲ್ಲರ ಮುಖದಲ್ಲಿಯೂ ಭಕ್ತಿ ಭಾವ. ಅದೇ ಸಮಯಕ್ಕೆ ಸರಿಯಾಗಿ ಬಾಲಕಿಯಾದ ಅಹಲ್ಯಾಬಾಯಿ ತಟ್ಟೆಯೊಂದರಲ್ಲಿ ಪೂಜಾ ಸಾಮಗ್ರಿಗಳನ್ನು ಹಿಡಿದುಕೊಂಡು ಒಳಗೆ ಬಂದಳು.ಅವಳ ಮುಖದಲ್ಲಿ ಅಸಾಧಾರಣ ಕಳೆ ತುಂಬಿತು. ಎಲ್ಲರ ಕಣ್ಣೂ ಅವಳ ಮೇಲೆಯೇ ನಿಂತವು. ಅವಳು ದೇವರಿಗೆ ಹೂವನ್ನು ಅರ್ಪಿಸಿ ಭಕ್ತಿಯಿಂದ ಕೈ ಜೋಡಿಸಿದಳು. ಪ್ರಾರ್ಥನೆ ಮುಗಿದ ಮೇಲೆ ದೇವರಿಗೆ ನಮಸ್ಕರಿಸಿ, ಗುಡಿಗೆ ಪ್ರದಕ್ಷಿಣೆ ಹಾಕಿ ಮನೆಗೆ ಹೊರಟು ಹೋದಳು.

ಅಲ್ಲಿ ನೆರೆದಿದ್ದ ಪ್ರಯಾಣಿಕರಲ್ಲಿ ಸುಬೆದಾರ್ ಮಲ್ಲಾರಿ ರಾವ ಹೋಲ್ಕರ್ ಮತ್ತು ಅವನ ಸಂಗಡಿಗರೂ ಇದ್ದರು.  ಉತ್ತರ ಭಾರತದ ಪ್ರವಾಸವನ್ನು ಮುಗಿಸಿಕೊಂಡು ಪುಣೆಗೆ ಹಿಂತಿರುಗುತ್ತ ದಾರಿಯಲ್ಲಿ ಚೌಂದಿಯ ಈ ದೇವಾಲಯಕ್ಕೆ ಬಂದಿದ್ದರು.  ರಾತ್ರಿಯನ್ನು ಇಲ್ಲಿಯೇ ಕಳೆದು ಬೆಳಗ್ಗೆ ಪುಣೆಗೆ ಹಿಂತಿರುಗುವ ಅಲೋಚನೆ ಅವರದು. ಅಹಲ್ಯಾಬಾಯಿಯನ್ನು ಕಂಡ ಮೇಲೆ ಅದು ಬದಲಾಯಿತು.  ಅಹಲ್ಯಾಬಾಯಿಯ ದೈವಭಕ್ತಿ, ವಿನಯ, ಸಜ್ಜನಿಕೆಗೆ ಮಲ್ಲಾರಿರಾಯ ಮಾರು ಹೋಗಿದ್ದನು.  ಅಹಲ್ಯಾಬಾಯಿ ಕವಿಗಳು ವರ್ಣಿಸುವಂತೆ ಸೌಂಧರ್ಯವತಿಯಾಗಲಿ, ಆಕರ್ಷಕವಾಗಿಯಾಗಲಿ ಇರಲಿಲ್ಲ. ಕಪ್ಪು ಬಣ್ಣ,ಆದರೆ ಮುಖದಲ್ಲಿ ರಾಜತೇಜಸ್ಸು ಹೊಳೆಯುವ ಬಟ್ಟಲುಗಣ್ಣುಗಳು, ನೀಳ ರೆಪ್ಪೆಗಳು. ಅಗಲವಾದ ಹಣೆ, ತಲೆಯ ತುಂಬ ಕಪ್ಪಗೆ ಮಿರುಗುವ ಕೂದಲು. ಉದ್ಧವಾದ ಜಡೆ, ಗುಂಡುಮುಖ, ದೇಹ ಆರೋಗ್ಯವಾಗಿ ಬೆಳೆದಿತ್ತು. ಅವಳಿಗೆ ಆಗ ಕೇವಲ ಎಂಟು ವರ್ಷ. ಆದರೆ ಅವಳ ನಡವಳಿಕೆ ಗಂಭೀರವಾಗಿತ್ತು. ಮಲ್ಲಾರಿರಾಯ ತನ್ನ ಮಗ ಖಂಡೇರಾಯನಿಗೆ ಇವಳೇ ತಕ್ಕಹೆಂಡತಿ ಎಂದು ಅಲ್ಲಿಯೇ ನಿರ್ಧರಿಸಿದು.

ಮಲ್ಲಾರಿರಾಯನಿಗೆ ಖಂಡೇರಾಯ ಒಬ್ಬನೇ ಮಗ.  ಆದರೆ ಅವನು ತಂದೆಯಂತೆ ವೀರನಾಗಲಿ, ರಾಜ್ಯಾಡಳಿತ ನೋಡಿಕೊಳ್ಳುವ ಜವಾಬ್ದಾರಿಯುತ ಮನುಷ್ಯನಾಗಲಿ ಆಗಿರಲಿಲ್ಲ. ಮೊಂಡು ಸ್ವಭಾವದ ಪುಂಡುಹುಡುಗನಾಗಿದ್ದ. ಅವನನ್ನು ದಾರಿಗೆ ತರಲು ಅಹಲ್ಯಾಬಾಯಿಯೇ ಸರಿ ಎಂದುಕೊಂಡ. ಮದುವೆಯ ಮಾತುಕತೆಗಳು ನಡೆದವು. ಮಲ್ಲಾರಿ ರಾಯನ ಅಂತಸ್ತಿಗೆ ಸರಿಯಾಗಿ ಅಹಲ್ಯಾಬಾಯಿಗೂ ಖಂಡೇರಾಯನಿಗೂ ಪುಣೆಯಲ್ಲಿ ವೈಭವವಾಗಿ ಮದುವೆಯಾಯಿತು. ಸಾಮಾನ್ಯರ ಮನೆಯಲ್ಲಿ ಹುಟ್ಟಿದ ಅಹಲ್ಯಾ ಬಾಯಿ ಶ್ರೀಮಂತ ಹೋಳ್ಕರನ ವಂಶವನ್ನುಸೇರಿದಳು.

ದೇವರಿಗೆ ಹೂವನ್ನು ಅರ್ಪಿಸಿ ಭಕ್ತಿಯಿಂದ ಕೈ ಜೋಡಿಸಿದಳು.

ಮುದ್ದಿನ ಸೊಸೆ:

ಅಹಲ್ಯಾಬಾಯಿ ಗಂಡನ ಮನೆಗೆ ಬಂದ ಮೇಲೆ ಅತ್ತೆ-ಮಾವ ನಾದಿನಿಯರೆಲ್ಲರ ಪ್ರೀತಿಪಾತ್ರಳಾದಳೂ. ದೊಡ್ಡವರನ್ನು ಕಂಡರೆ ಬಲು ಗೌರವ ಎಲ್ಲರೊಡನೆ ವಿನಯವಾದ ಮಾತುಕತೆ. ಸದ್ಗುಣಿಯಾದ ಸೊಸೆಯನ್ನು ಕಂಡರೆ ಮಾವನಿಗೆ ಅಪಾರ ಮೆಚ್ಚುಗೆ. ಅಹಲ್ಯಾಬಾಯಿ ಅವರ ಮನೆಗೆ ಕಾಲಿಟ್ಟಂದಿನಿಂದ ಮಲ್ಲಾರಿರಾಯನ ಯುದ್ಧಗಳಲ್ಲೆಲ್ಲ ಜಯವುಂಟಾಯಿತು. ರಾಜ್ಯ ವಿಸ್ತಾರವಾಯಿತು. ಹೋಳ್ಕರ ವಂಶ ಪ್ರಸಿದ್ಧವಾಯಿತು. ಮನೆ ಐಶ್ವರ್ಯದಿಂದ ತುಂಬಿತು. ಆದುದರಿಂದ ಮಾವ ಜಯಲಕ್ಷ್ಮಿಯೆ ಸೊಸೆಯ ರೂಪದಲ್ಲಿ ಅವತರಿಸಿ ತಮ್ಮ ಮನೆಗೆ ಬಂದಿದ್ದಾಳೆಂದು ಭಾವಿಸಿದ. ಗಂಡನ ಕೆಟ್ಟ ಗುಣ, ನಡವಳಿಕೆಗಳನ್ನು ತಿಳಿದಿದ್ದರೂ ಅಹಲ್ಯಾಬಾಯಿ ಅವನಿಗೆ ಅಗೌರವ ತೋರುತ್ತಿರಲಿಲ್ಲ. ತಾನು ಚಿಕ್ಕಂದಿನನಲ್ಲಿ ಕಲಿತ ಧರ್ಮಗ್ರಂಥಗಳ ಕತೆಗಳನ್ನು ಹೇಳುತ್ತ ಅವನನ್ನು ಒಳ್ಳೆಯ ದಾರಿಗೆ ತರಲು ಪ್ರಯತ್ನಿಸುತ್ತಿದ್ದಳು. ಆಗಾಗ ಆಡಳಿತದ ವಿಷಯದ  ಬಗ್ಗೆಯೂ ಅವನೊಡನೆ ಚರ್ಚಿಸುತ್ತಿದ್ದಳು. ಅವನನ್ನು ಸಂತೋಷವಾಗಿಟ್ಟುಕೊಂಡಿದ್ದಳು.

೧೭೪೫ರಲ್ಲಿ ಅಹಲ್ಯಾಬಾಯಿಗೆ ಮಾಲೇರಾಯ ಎಂಬ ಮಗನೂ ಅದಾಗಿ ಮೂರು ವರ್ಷಕ್ಕೆ  ಮುಕ್ತಾಬಾಯಿ ಎಂಬ ಮಗಳೂ ಹುಟ್ಟಿದರು. ರಾಜ್ಯವೆಲ್ಲಾ ಸಂತೋಷಭರಿತ ವಾಯಿತು.

ಮಾವನೆ ಗುರು :

ಮಗ ಮದುವೆಯಾದ ಮೇಲಾದರೂ ಸರಿ ಹೋಗುತ್ತಾನೆಂಬ ತಂದೆಯ ಆಸೆ ಸುಳ್ಳಾಯಿತು. ಖಂಡೇರಾಯನಿಗೆ ಹೆಂಡತಿಯಲ್ಲಿ ಆಸಕ್ತಿಯಾಗಲಿ, ತಿರಸ್ಕಾರವಾಗಲಿ ಇರಲಿಲ್ಲ. ರಾಜ್ಯಾಡಳಿತದಲ್ಲಂತೂ ಆಸಕ್ತಿ ತೋರಿಸಲೇ ಇಲ್ಲ. ಮಲ್ಲಾರಿ ರಾಯನಿಗೆ ಚಿಂತೆಯಾಯಿತು. ತಾನು ಊರಲ್ಲಿಲ್ಲದಿರುವಾಗ, ರಾಜ್ಯವನ್ನೂ ನೋಡಿಕೊಳ್ಳುವವರಾರು ಎಂಬ ಯೋಚನೆ. ಬುದ್ಧಿವಂತೆಯಾದ ಸೊಸೆಯ ಚುರುಕುತನವನ್ನು ಗಮನಿಸಿ ಮನಸ್ಸಿಗೆ ಸಮಾಧಾನವಾಯಿತು. ರಾಜ್ಯಾಡಳಿತ ನೋಡಿ ಕೊಳ್ಳಲು ಅವಳೇ ತಕ್ಕವಳೆಂಬ ನಂಬಿಕೆಯುಂಟಾಯಿತು.  ಅಂದಿನಿಂದ ಅವನು ಅಹಲ್ಯಾಬಾಯಿಗೆ ರಾಜ್ಯಾಡಳಿತದ ಬಗ್ಗೆ ತರಬೇತಿ ಕೊಡಲಾರಂಭಿಸಿದ. ದಕ್ಷ ಆಳ್ವಿಕೆ, ಯುದ್ಧ ಕಾಲದಲ್ಲಿ ವಹಿಸಬೇಕಾದ ಎಚ್ಚರಿಕೆ, ಪ್ರಜೆಗಳ ರಕ್ಷಣೆ ಮತ್ತು ಸರಕಾರದ ನಿಯಮಗಳ ಬಗ್ಗೆ ಶಿಕ್ಷಣ ಕೊಟ್ಟನು. ತೀಕ್ಷ್ಣಮತಿ ಯಾದ ಅಹಲ್ಯಾಬಾಯಿ ಅವುಗಳನ್ನೆಲ್ಲ ಬೇಗನೆ ಕಲಿತು ಮಾವನಿಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡತೊಡಗಿದಳು. ಕಂದಾಯ ವಸೂಲಿ, ಲೆಕ್ಕ ಪತ್ರಗಳನ್ನು ಬರೆದಿಡುವುದು, ಸೈನ್ಯದ ಮೇಲ್ವೀಚಾರಣೆ ಮಾಡುವುದನ್ನೂ ತಿಳಿದಿದ್ದಳೂ.

ಕೆಲವೇ ವರ್ಷಗಳಲ್ಲಿ ಅವಳು ಮಲ್ಲಾರಿರಾಯ ಇಂದೂರಿನಲ್ಲಿ ಇಲ್ಲದ ಸಮಯಗಳಲ್ಲಿ ದಕ್ಷತೆಯಿಂದ ಆಳುವುದನ್ನು ಕಲಿತಳೂ. ಇದರಿಂದ ಮಲ್ಲಾರಿಯಾರಾಯನಿಗೆ ತುಂಬ ಸಂತೋಷವುಂಟಾಯಿತು. ಅವಳ ಆಳ್ವಿಕೆಯಲ್ಲಿ ಅಧಿಕಾರಿಗಳು, ಪ್ರಜೆಗಳು ಸಂತೋಷವಾಗಿದ್ದರು. ಮಲ್ಲಾರಿ ರಾಯನಿಗೆ ಈಗ ಚಿಂತೆಯೇ ಇರಲಿಲ್ಲ. ತನ್ನಷ್ಟಕ್ಕೆ ದಕ್ಷಳಾಗಿ ರಾಜ್ಯ ಸೂತ್ರಗಳನ್ನು ಹಿಡಿದಿರುವ ಸೊಸೆಯನ್ನು ನೆನೆದಾಗ ಹೆಮ್ಮೆ ಪಡುತ್ತಿದ್ದನು. ಯುದ್ಧಕ್ಕೆ ಹೋಗಿರುತ್ತಿದ್ದ ಮಾವನಿಂದ ಬರುವ ಅಪ್ಪಣೆ, ಸೂಚನೆಗಳನ್ನು ಸೊಸೆ ತಪ್ಪದೇ ಪಾಲಿಸುತ್ತಿದ್ದಳು. ಅಲ್ಲದೇ ಅವನಿಗೆ ಬೇಕಾದ ಹಣ, ಸೈನ್ಯ, ಯುದ್ಧ ಸಾಮಗ್ರಿಗಳನ್ನು ತಡವಿಲ್ಲದೇ ಕಳುಹಿಸಿಕೊಡುತ್ತಿದ್ದಳು. ಎಷ್ಟೋ ಬಾರಿ ಮಲ್ಲಾರಿರಾಯ ಅಹಲ್ಯಾಬಯಿಯನ್ನು ಅನೇಕ ಯುದ್ಧಗಳಿಗೆ ಕರೆದುಕೊಂಡು ಹೋಗಿದ್ದನು. ಅವಳು ಯುದ್ಧ ರಂಗದಲ್ಲಿ ವೀರಾವೇಶದಿಂದ ಕಾದಾಡಿ ತನ್ನ ಧೈರ್ಯ, ಪರಾಕ್ರಮಗಳನ್ನು ತೋರಿಸಿದಳು.  ಪ್ರಸಿದ್ಧವಾದ ಪಾಣಿಪತ್ತಿನ ಯುದ್ಧದಲ್ಲಿ ಸೀಂಧೆಯ ದಳದ ಅಧಿಕಾರಿಯಾಗಿದ್ದಳು. ಯುದ್ಧ ರಂಗದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಅವಳು ನಾಡಿನಲ್ಲೆಲ್ಲ ಸಂಚಾರ ಮಾಡಬೇಕಾಗುತ್ತಿತ್ತು.  ಕಷ್ಟವಾದ ಪರಿಸ್ಥಿತಿಗಳ ವಿಚಾರವನ್ನೂ ನ್ಯಾಯದಾನವನ್ನೂ ಸಹ ಅವಳೇ ಮಾಡಬೇಕಾಗಿತ್ತು.  ಎಲ್ಲವನ್ನೂ ಪರಿಹರಿಸಿ ಪ್ರಜೆಗಳ ಮನಸ್ಸನ್ನು ಅರಿತುಕೊಂಡು ಆಳ್ವಿಕೆ ನಡೆಸಿದಳೂ.

“ನೀನೇ ನಮ್ಮ ಮಗ”:

ಅಹಲ್ಯಾಬಾಯಿಯ ಪ್ರೇಮ, ವಿನಯ, ಕರ್ತವ್ಯಪರತೆ ಖಂಡೇರಾಯನ ಮೇಲೆ ದಟ್ಟವಾದ ಪರಿಣಾಮವನ್ನುಂಟು ಮಾಡಿದವು. ಅವನ ಕೆಟ್ಟ ಗುಣಗಳನ್ನೆಲ್ಲ ಮಾಯವಾಗತೊಡಗಿತು. ರಾಜ್ಯದಲ್ಲಿ ಆಸಕ್ತಿ ಮೂಡತೊಡಗಿತು. ರಣ ವಿದ್ಯೆಯಲ್ಲಿ ಪರಿಣಿತನಾದ,. ತಂದೆಯೂ ಮಗನನ್ನು ಆಗಾಗ ಯುದ್ಧಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಗಂಡ ಇಷ್ಟರ ಮಟ್ಟಿಗೆ ಬದಲಾದುದುನ್ನು ಕಂಡು ಅಹಲ್ಯಾಬಾಯಿಗೆ ಸಂತೃಪ್ತಿ. ಗಂಡ ಮಕ್ಕಳೊಡನೆ ಸಂತೋಷವಾಗಿ ದಿನಗಳನ್ನು ಕಳೆಯುತ್ತಿದ್ದಳು. ಆದರೆ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ.

೧೭೫೪ರಲ್ಲಿ ಮಲ್ಲಾರಿರಾಯನು ಕುಂಬೇರುವೆಂಬ ಕೋಟೆಯನ್ನು ವಶಪಡಿಸಿಕೊಳ್ಳಲು ಮುತ್ತಿಗೆ ಹಾಕಿದನು. ಯುದ್ಧದಲ್ಲಿ ಅವನೊಡನೆ ಖಂಡೇರಾಯನೂ ಅಹಲ್ಯಾಬಾಯಿಯೂ ಇದ್ದರು. ನಾಲ್ಕು ತಿಂಗಳು ಯುದ್ಧ ನಡೆಯಿತು. ಮಾರ್ಚ ೨೪ ರಂದು ಗುಂಡೊಂದು ಬಂದು ಖಂಡೇರಾಯನ ಎದೆಯನ್ನು ಹೊಕ್ಕಿತ್ತು. ಅವನು ಸಾವಿಗೀಡಾದನು. ಈ ಸುದ್ಧಿಯನುನ ಕೇಳಿದೊಡನೆಯೇ ಅಹಲ್ಯಾಬಯಿ ಮೂರ್ಛಿತಳಾದಳೂ. ಮಲ್ಲಾರಿರಾಯ ಓಡಿ ಬಂದನು. ಅಹಲ್ಯಾಬಾಯಿ ಎಚ್ಚೆತ್ತ ಮೇಲೆ ದುಃಖಿಸಿದಳು. ಕಲ್ಲಿನಂತೆ ಕುಳಿತು ಗಂಡನ ದೇಹವನ್ನೇ ದಿಟ್ಟಿಸಿದಳು. ಅಂದಿನ ಕಾಲದಲ್ಲಿ ಗಂಡ ಸಂತ್ತಾಗ ಹೆಂಡತಿಯೂ ಅವನೊಡನೆ ಚಿತೆಯೇರುವುದು ಪದ್ಧತಿ. ಅದಕ್ಕೆ “ಸತಿ” ಅಥವಾ ” ಸಹಗಮನ” ಎಂದು ಹೆಸರು. ಗಂಡನ ಅಂತ್ಯಕ್ರಿಯೆಗೆ ಸಿದ್ಧವಾದಾಗ ಆ ಧೀರಳಾದ ಹೆಣ್ಣು ಸತಿಯಾಗಲು ನಿರ್ಧರಿಸಿದಳು. ಇದನ್ನು ಕೇಳೀ ಮಲ್ಲಾರಿರಾಯನ ಎದೆ ಒಡೆಯಿತು. ಇದ್ದ ಒಬ್ಬನೇ ಮಗನೂ ಹೋದ. ಈಗ ಪ್ರೀತಿಯ ಮಗಳಂತಿರುವ ಸೊಸೆಯೂ ಹೊರ‍ಟ ಹೋದರೆ ತಮ್ಮಗತಿ ಏನು ಎಂದು ಮಗುವಿನಂತೆ ಗೋಳಾಡಿದ. “ಮಗಳೇ ನ ಈನು ನಮ್ಮನ್ನು ಬಿಟ್ಟು ಹೋಗಬೇಡಮ್ಮ… ಮುದುಕನಾದ ನನಗಾರು ಗತಿ? ನನ್ನ ಮಾತನ್ನು ಕೇಳು.. ನೀನೇ ನಮ್ಮ ಮಗ” ಎಂದು ಅಂಗಲಾಚಿ ಬೇಡಿಕೊಂಡನು. ಅನೇಕ ರೀತಿಯಾಗಿ ಅವಳಿಗೆ ಸಮಾಧಾನ ಹೇಳಿದನು.

ಪ್ರಜೆಗಳಿಗಾಗಿ ಬದುಕು :

ಮಾವನ ಬೇಡಿಕೆ ಅವಳ ಮನಸ್ಸನ್ನು ತಿರುಗಿಸಿತು. ಮಕ್ಕಳು ಸಣ್ಣವರು, ಅವರಿಗೆ ತನ್ನನ್ನು ಬಿಟ್ಟರೆ ಯಾರು ದಿಕ್ಕು? ಮಗನ ಸಾವಿನಿಂದ ಮೊದಲೇ ದುಃಖಿತವಾದ ಮಾವನನ್ನು ತಾನು ಸತಿಯಾಗಿ ಮತ್ತಷ್ಟು ದುಃಖಗೊಳಿಸುವುದು ಒಳ್ಳೆಯದಲ್ಲವೆನಿಸಿತು. ಇವೆಲ್ಲಕ್ಕಿಂತಲೂ  ಹೆಚ್ಚಾಗಿ ಮಾವ ತನ್ನ ಹೆಗಲ ಮೇಲೆ ಹೊರಿಸಿದ ರಾಜ್ಯದ ಹೊಣೆ ಅವಳನ್ನು ಸಾಯಲು ಬಿಡಲಿಲ್ಲ. ಅವಳಿಗೆ ಕರ್ತವ್ಯದ ಅರಿವಿತ್ತು.  ರಾಜ್ಯವನ್ನೂ ಪ್ರಜೆಗಳನ್ನೂ ಅನಾಥರನ್ನಾಗಿ ಮಾಡಲು ಅವಳು ಮನಸ್ಸು ಒಪ್ಪಲಿಲ್ಲ. ಸ್ವಂತ ದುಃಖಕ್ಕಾಗಿ ತಾನು ಗಂಡನೊಡನೆ ಪ್ರಾಣ ಬಿಟ್ಟರೆ ಎಷ್ಟೊಂದು ಜನರಿಗೆ ದುಃಖ!  ಈ ಬದುಕು ತನಗಾಗಿ ಅಲ್ಲ. ಸ್ವಾರ್ಥತೃಪ್ತಿ ಮುಖ್ಯವಲ್ಲ. ಪ್ರಜೆಗಳ ಹಿತಕ್ಕಾಗಿ ತಾನು ಬದುಕಬೇಕು, ಲೋಕೋಪಕಾರದಲ್ಲಿ ದಿನಗಳನ್ನು ಕಳೆಯಬೇಕು ಎಂದು ಅವಳು ನಿರ್ಧರಿಸಿದಳು. ಖಂಡೇರಾಯನ ಚಿತೆಯಲ್ಲಿಯೇ ತನ್ನ ಮುಂದಿನ ಬದುಕಿನ ಆಸೆ, ಸುಖಗಳನ್ನು ಸುಟ್ಟು ಬೂದಿ ಮಾಡಿದಳು. ತನ್ನ ಗಂಡನ ನೆನಪಿಗಾಗಿ ಕುಂಭೆರುವಿನ ಹತ್ತಿರ ಸ್ಮಾರಕವೊಂದನ್ನು ಕಟ್ಟಿಸಿದಳು.

ಸರಳ ಜೀವನ :

ಅಹಲ್ಯಾಬಾಯಿ ವಿಧವೆಯಾದಂದಿನಿಂದ ತನ್ನೆಲ್ಲ ಆಭರಣಗಳನ್ನೂ ಬಿಚ್ಚಿಟ್ಟಳು. ಅದುವರೆಗಿದ್ದ ರಾಜ ವೈಭವಗಳನ್ನೆಲ್ಲ ತೊರೆದಳೂ. ಅವಳ ಜೀವನದ ರೀತಿ ಸರಳವಾಯಿತು. ಶುಭ್ರವಾದ ಬಿಳಿ ಬಟ್ಟೆಯನ್ನೇ ತೊಟ್ಟುಕೊಳ್ಳುತ್ತಿದ್ದ. ದಿನದ ಹೆಚ್ಚು ಹೊತ್ತನ್ನು ದೇವರ ಪೂಜೆ, ಪ್ರಾರ್ಥನೆಗಾಗಿಯೇ ಮೀಸಲಾಗಿಟ್ಟಿದ್ದಳು. ಅವಳದು ಅತಿ ಚಟುವಟಿಕೆಯ ಸ್ವಭಾವ. ಸೋಮಾರಿತನವೆಂದರೆ ಅವಳಿಗೆ ಆಗದು. ಬೆಳಗಾಗುವಷ್ಟರಲ್ಲಿಯೇ ಎದ್ದು ಸ್ನಾನ ಮಾಡಿ ದೇವರ ಪೂಜೆಗೆ ಕುಳಿತುಕೊಳ್ಳುತ್ತಿದ್ದಳು. ಅನಂತರ ಪುರಾಣ ಶ್ರವಣ ಮಾಡಿ, ಬಡವರಿಗೆ ದಾನ-ಧರ್ಮಗಳನ್ನು ಮಾಡಿಯೆ ಅವಳು ಊಟ ಮಾಡುತ್ತಿದ್ದುದು. ಇವರ ಮತದಲ್ಲಿ ಅನೇಕರು ಮಾಂಸಹಾರ ಮಾಡುತ್ತಿದ್ದರೂ ಈಕೆ ಮಾತ್ರ ಎಂದೂ ಮಾಂಸಹಾರವನ್ನು ಸೇವಿಸಿರಲಿಲ್ಲ. ಊಟವಾದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ. ಆಮೇಲೆ ರಾಜಸಭೆಗೆ ಹೋಗಿ ಲೆಕ್ಕ ಪತ್ರ, ವ್ಯವಹಾರ, ಪ್ರಜೆಗಳ ಕ್ಷೇಮದ ವಿಚಾರ. ಸಂಜೆ ದೇವರ ಪೂಜೆ, ಇತರ ರಾಜಕಾರ್ಯ. ಅಲ್ಪಾಹಾರ ಸೇವಿಸಿ ರಾತ್ರಿ ತಡವಾಗಿ ನಿದ್ರಿಸುತ್ತಿದ್ದಳು. ಮಾಹೇಶ್ವರದಲ್ಲಿಯ ಅವಳ ಮನೆಯಂತೂ ರಾಣಿಯ ಅರಮನೆ ಎನ್ನುವಂತೆಯೇ ಇರಲಿಲ್ಲ. ದೇವ ಮಂದಿರದಷ್ಟು ಸರಳ ಸಾಮಾನ್ಯವಾಗಿತ್ತು.

ಎಂತಹ ಹೋಣೆ !

ಪೇಶ್ವೆಯ ರಘುನಾಥರಾಯರು ಮಲ್ಲಾರಿರಾಯನನ್ನು ಉತ್ತರ ಭಾರತದ ಯುದ್ಧವೊಂದಕ್ಕೆ ಕಳುಹಿಸಿದ್ದನು.  ಬರುವಾಗ ದಾರಿಯಲ್ಲಿ ಮಲ್ಲಾರಿರಾಯನ ಆರೋಗ್ಯ ಕೆಟ್ಟಿತು. ಅವನ ಮೈಮೇಲಿನ ಯುದ್ಧದ ಗಾಯಗಳು ಮಾಗಿರಲಿಲ್ಲ. ಜೊತೆಗೆ ಮಗ ಸತ್ತ ದುಃಖ ಇನ್ನೂ ಆರಿರಲಿಲ್ಲ. ಇವೆಲ್ಲವೂ ಅವನನ್ನು ಮೆತ್ತಗೆ ಮಾಡಿದವು. ೧೭೬೬ರ ಮೇ ೨೬ ರಂದು ಅವನು ಮರಣ ಹೊಂದಿದನು. ಮಾವನ ಸಾವು ಅಹಲ್ಯಾ ಬಾಯಿಗೆ ಅಪಾರ ನೋವು ತಂದಿತು. ಅವನ ಸಾವಿನ ವೇಳೆಯಲ್ಲಿ ತಾನು ಬಳಿಯಲ್ಲಿರಲಿಲ್ಲವೆಂದು ದುಃಖ. ಈಗ ರಾಜ್ಯಾಡಳಿತ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಇದ್ದಕ್ಕಿದ್ದಂತೆಯ ಅವಳ ಮೇಲೆಯೇ ಬಿತ್ತು.

ಮಗನ ಸಾವು:

ಮಲ್ಲಾರಿರಾಯನ ಮರಣದ ನಂತರ ಮಾಲೇರಾಯನು ಸುಬೇದಾರನಾದನು. ಸದ್ಗುಣಿಯಾದ ತಾಯಿಗೆ ವ್ಯತಿರೀಕ್ತನಾದ ಮಗ, ಕೆಟ್ಟ ಗುಣಗಳ ತವರು, ಸಿಡುಕು, ಚಂಚಲ ಸ್ವಭಾವದ, ಉಪಯೋಗವಿಲ್ಲದ ಮನುಷ್ಯನಾಗಿದ್ದ. ರಾಜ್ಯಸೂತ್ರ ಹಿಡಿದ ಅವನಿಗೆ ಅದಕ್ಕಿರಬೇಕಾದ ಯೋಗ್ಯತೆಯಿರಲಿಲ್ಲ. ತಾಯಿ ಮಗನ ಕೆಟ್ಟ ಗುಣಗಳನ್ನು ಬಿಡಿಸಲು ಪ್ರಯತ್ನಿಸಿ ಸೋತಳು. ದುಃಖದಿಂದ ಯೋಚನೆಗೀಡಾದಳು ಮಲ್ಲಾರಿರಾಯ ಕಷ್ಟ ಪಟ್ಟು ಕಟ್ಟಿದ ಹೋಳ್ಕರ್ ವಂಶದ ಕೀರ್ತಿ ನಾಶವಾಗುವದೆಂದು ಅಹಲ್ಯಾಬಾಯಿ ಮಗನಿಗೆ ದಿನನಿತ್ಯ ಬುದ್ಧಿ ಮಾತು ಹೇಳಿದಳು. ಆದರೆ, ಅವನು ಅವಳ ಮಾತುಗಳನ್ನು ಕಿವಿಯ ಮೇಲೆಯೇ  ಹಾಕಿಕೊಳ್ಳುತ್ತಿರಲಿಲ್ಲ. ಧರ್ಮವೆಂದರೆ ಅವನಿಗೆ ಅನಾಧಾರ. ತಾಯಿಯ ಧರ್ಮಬುದ್ಧಿ ಸ್ವಲ್ಪವೂ ಸರಿಹೋಗುತ್ತಿರಲಿಲ್ಲ. ಪ್ರಜೆಗಳನ್ನು ಹಿಂಸಿವುದು ಎಂದರೆ ಸಂತೋಷ, ತಾಯಿ ಬಟ್ಟೆ, ಪಾತ್ರೆಗಳನ್ನು ದಾನ ಮಾಡುವಾಗ ಅವುಗಳಲ್ಲಿ ವಿಷದ ಹಾವು, ಚೇಳುಗಳನ್ನು ಅಡಗಿಸಿಟ್ಟು ಕೊಡುತ್ತಿದ್ದರು. ಬಟ್ಟೆಯನ್ನು ಧರಿಸಲು, ಪಾತ್ರೆಯೊಳಗೆ ಕೈ ಹಾಕಲು ಹೇಳುತ್ತಿದ್ದರು. ಏನೂ ತಿಳೀಯದ ಜನರು ಅದರೊಳಗೆ ಕೈಹಾಕುತ್ತಿದ್ದರು. ವಿಷ ಪ್ರಾಣಿಯಿಂದ ಕಚ್ಚಿಸಿಕೊಂಡು ಒದ್ದಾಡಿ ಸಾಯುತ್ತಿದ್ದರು. ಅದನ್ನು ನೋಡಿ ಮಾಲೆರಾಯ ನಕ್ಕು ಸಂತೋಷಿಸುತ್ತಿದ್ದ. ಈ ನಡವಳಿಕೆಗಳು ಅಹಲ್ಯಾಬಾಯಿ ಯನ್ನು ಬಹಳವಾಗಿ ನೋಯಿಸುತ್ತಿದ್ದವು. ಇದಲ್ಲದೇ ಅವನು ಕೈಕೆಳಗಿನವರನ್ನು ಹೊಡೆದು, ಬಡಿದು ದ್ವೇಷ ಕಟ್ಟಿಕೊಂಡಿದ್ದನು. ಹೀಗೆಯೇ ದಿನದ ವೇಳೆಯನ್ನೆಲ್ಲ ದಂಡ ಮಾಡುತ್ತಿದ್ದ.

ಇದ್ದಕ್ಕಿದ್ದ ಹಾಗೆ ಮಾಲೆರಾಯ ಕಾಯಿಲೆ ಬಿದ್ದ. ದಿನೇ ದಿನೇ ಅದು ಹೆಚ್ಚಾಯಿತು. ಅಹಲ್ಯಾಬಯಿ ಮಾಡಿಸಿದ ಯಾವ ಚಕಿತ್ಸೆಯೂ ಪ್ರಯೋಜನವಾಗಲಿಲ್ಲ. ಮಾಲೆರಾಯ ಸಾವಿಗೀಡಾದನು. ಅವನ ಹೆಂಡತಿಯರಿಬ್ಬರೂ ಅವನೊಡನೆ ಸಹಗಮನ ಮಾಡಿದರು. ಒಟ್ಟಿನಲ್ಲಿ ಅವನು ಎಂಟುತಿಂಗಳು ಸಹ ರಾಜ್ಯವನ್ನು ಆಳಲಿಲ್ಲ.

ಇದ್ದ ಒಬ್ಬನೇ ಮಗ ಸತ್ತು ಹೋದಾಗ ಅಹಲ್ಯಾಬಯಿ ದುಃಖದ ಸಾಗರದಲ್ಲಿ ಮುಳುಗಿದಳು. ಮಗನಿಗೆ ರಾಜ್ಯವಹಿಸಿ ತನ್ನ ಕಡೆಗಾಲವನ್ನು ಹಿಮಾಲಯದಲ್ಲಿ ಶಾಂತಿ ಯಿಂದ ಕಳೆಯಬೇಕೆಂಬಾಸೆ ಕನಸಾಯಿತು. ಅದೇ ದುಃಖದಲ್ಲಿ ನಾಲ್ಕಾರು ದಿನ ಕೊರಗಿದಳು. ಅಷ್ಟರಲ್ಲಿಯೇ ಅವಳಿಗೆ ರಾಜ್ಯ, ಕರ್ತವ್ಯ, ಪ್ರಜೆಗಳ ಹಿತ ನೆನಪಾಯಿತು. ಕಣ್ಣೀರನ್ನು ಒರೆಸಿಕೊಂಡಳೂ. ಬದುಕುಏತಕ್ಕಾಗಿ ಎಂದು ಹಿಂದೆ ಮಾಡಿದ ನಿರ್ಧಾರವನ್ನು ನೆನೆಸಿಕೊಂಡಳು. ತನ್ನ ಬುದ್ಧಿ ಮತ್ತು ತಾಳ್ಮೆಯ ಶಕ್ತಿಗಳಿಂದ ಮತ್ತೇ ಅವಳು ಮೊದಲಿನಂತಾದಳು. ಎಲ್ಲರಿಗೂ ಪರಮಾಶ್ಚರ್ಯ!

ತನ್ನ ಮಗನ ನೆನಪಿಗಾಗಿ ಅವಳು ಇಂದೂರಿನಲ್ಲಿ ಸುಂದರವಾದ ಒಂದು ಸ್ಮಾರಕವನ್ನು ಕಟ್ಟಿಸಿದಳು.

 

ನಾನೇ ರಾಜ್ಯವನ್ನು ಆಳುತ್ತೇನೆ. ನಿಮಗೆ ಆ ಚಿಂತೆ ಬೇಡ".

ಕನಸುಗಾರ ಬಂದ:

ಮಗನ ಸಾವಿನ ಅನಂತರ ಅಹಲ್ಯಾಬಾಯಿಯೇ ರಾಜ್ಯ ಭಾರ ಮಾಡುತ್ತಿದ್ದಳು. ಕೆಲವು ಸ್ವಾರ್ಥಿಗಳಾದ ಅಧಿಕಾರಿಗಳು ಏನಾದರೂ ಮಾಡಿ ಅವಳಿಂದ ರಾಜ್ಯವನ್ನು ಕಸಿದುಕೊಳ್ಳಬೇಕೆಂದು ಹೊಂಚು ಹಾಕುತ್ತಿದ್ದರು. ಹೇಗೋ ಅವಳೀಗೆ ಇನ್ನು  ಗಂಡು ಮಕ್ಕಳಿಲ್ಲ, ಮಗಳು ಮುಕ್ತಾಬಾಯಿಗೆ ಸುಬೇದಾರ ಪಟ್ಟ ಸಿಗುವಂತಿಲ್ಲ.  ಎಂಬುವುದೇ ಸ್ವಾರ್ಥಿಗಳ ದುರಾಸೆಗೆ ಕಾರಣವಾಗಿತ್ತು. ಅವರಲ್ಲಿ ಗಂಗಾಧರ ಯಶ್ವಂತರಾಯನೂ ಒಬ್ಬ. ಒಂದು ದಿನ ಅವನು, “ನೀವು ಹೆಂಗಸರು. ರಾಜ್ಯಭಾರ ಮಾಡುವುದಕ್ಕೆ ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ ಯಾವುದಾದರೂ ಒಬ್ಬ ಹುಡುಗನನ್ನು ದತ್ತು ಮಾಡಿಕೊಳ್ಳಿ. ಅವನು ದೊಡ್ಡವನಾಗುವವರೆಗೆ ನಾನೇ ರಾಜ್ಯವನ್ನು ಆಳುತ್ತಿರುತ್ತೇನೆ. ಎಂದು ಅಹಲ್ಯಾಬಾಯಿಗೆ ಹೇಳಿದನು.

“ಇಲ್ಲ… ನಾನೇ ರಾಜ್ಯವನ್ನು ಆಳುತ್ತೇನೆ. ನಿಮಗೆ ಆ ಚಿಂತೆ ಬೇಡ” ಎಂದಳು ಅಹಲ್ಯಾಬಾಯಿ.

ಇದನ್ನು ಕೇಳಿ ಯಶ್ವಂತರಾಯನಿಗೆ ಅವಮಾನ, ಸಿಟ್ಟು ಒಟ್ಟೊಟ್ಟಿಗೆ ಉಕ್ಕಿದವು. ಇವಳಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ಮಹಾರಾಷ್ಟ್ರದ ಪೇಶ್ವೆ ಮಾಧವರಾಯನ ತಮ್ಮ ರಘುನಾಥರಾಯನಿಗೆ ಗುಟ್ಟಾಗಿ ಒಂದು ಕಾಗದವನ್ನು ಬರೆದನು. “ಹೋಳ್ಕರನ ಈರಾಜ್ಯಕ್ಕೆ ಈಗ ಗಂಡು ವಾರಸುದಾರರಿಲ್ಲ. ನೀವು ಇದನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು. ಅದಷ್ಟು ಬೇಗ ಬನ್ನಿ” ಎಂದು ದುರಾಸೆಯನ್ನು  ತೋರಿಸಿ ದಂಡೆತ್ತಿ ಬರಲು ಕರೆ ನೀಡಿದ. ಈ ಮಾತನ್ನು  ಕೇಳಿ ಆಸೆಬುರುಕನಾದ ರಘುನಾಥರಾಯನಿಗೆ  ತಾನು ಆ ರಾಜ್ಯದ ಅಧಿಕಾರಿಯಾಗುವ ಕನಸು. ಕೂಡಲೇ ಸೈನ್ಯಸಮೇತನಾಗಿ ಇಂದೂರಿಗೆ ದಾಳಿಯಿಡಲು ಹೊರಟುಬಿಟ್ಟನು.

ಯುದ್ಧಕ್ಕೆ ಸಿದ್ಧತೆ :

ಇದುವರೆಗೂ ಒಂದಾದಮೋಲೊಂದರಂತೆ ದುಃಖವನ್ನು ಅನುಭವಿಸಿದ ಅಹಲ್ಯಾಬಾಯಿ ಈ ಸುದ್ಧಿ ಕೇಳಿ ಎದೆಗೆಡಲಿಲ್ಲ. ಅಧಿಕಾರಿಗಳ ಸಭೆ ಸೇರಿಸಿ ಯುದ್ಧಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಸಿದಳೂ. ಜನರನ್ನೂ ಯೋಧರನ್ನೂ ಹುರಿದುಂಬಿಸಿದಳು. ವೀರಾವೇಶದಿಂದ ಮಾತನಾಡಿ ಅವರಲ್ಲಿ ಕಲಿತನವನ್ನು ತುಂಬಿದಳು. ಪ್ರಜೆಗಳಿಗಂತೂ ಅವಳು ಪ್ರೀತಿಯ ತಾಯಿಯಂತೆ:  ಎಂದೆಂದಿಗೂ ಅವಳೇ ತಮ್ಮ ಒಡತಿಯಾಗಿರಬೇಕೆಂಬ ಹಂಬಲ. ಪ್ರಜೆಗಳ ದೊಡ್ಡ ಸಭೆಯಲ್ಲಿ ಅಹಲ್ಯಾ ಬಾಯಿ ಗುಡುಗಿದಳು ! “ಯಾರು ನನ್ನನ್ನು ಅಬಲೆ ಎಂದು ತಿಳಿಯುವುದು ಬೇಡ… ನಾನು ಶಸ್ತ್ರಗಳನ್ನು ಹಿಡಿದು ರಣಭೂಮಿಗೆ ಹೊರಟೇನೆಂದರೆ ಎಂಥವರೂ ನನ್ನನ್ನು ಎದುರಿಸಲಾರರು. ನಾನು ಪೇಶ್ವೆಯವರ ಕೈಕೆಳಗಿರಲು ಒಪ್ಪಿದ್ದೇನೆ. ಆದರೆ ನನ್ನ ರಾಜ್ಯದ ಮೇಲೆ ಯಾರಾದರೂ ಕಣ್ಣು ಹಾಕಿದರೆ ಮಾತ್ರ ಅವರೂ ಎಂದು ಗೆಲ್ಲಲು ಸಾಧ್ಯವಿಲ್ಲ. ಇದು ಸತ್ಯ!

ಅಹಲ್ಯಾಬಾಯಿ ತಾನೇ ಖುದ್ದಾಗಿ ನಿಂತು ತರಬೇತಿ ಕೊಟ್ಟ ಮಹಿಳಾ ಪಡೆಯನ್ನು ಯುದ್ಧಕ್ಕೆ ಸಿದ್ಧಪಡಿಸಿದಳು. ಅಕ್ಕ ಪಕ್ಕದ ಸೀಮೆಯವರಾದ ಬೌನ್ಸ್ಲೆ, ಗಾಯಕವಾಡ, ಧಾಬಾಡೆ ಮೊದಲಾದ ರಾಜ್‌ರುಗಳಿಗೆ ಸಹಾಯವನ್ನು ಬೇಡಿ ಕಾಗದಗಳನ್ನು ಬರೆದಳು. ಸೈನ್ಯವನ್ನೆಲ್ಲ ಒಟ್ಟಗೂಡಿಸಿ ತಾನೂ ಸೊಂಟಕ್ಕೆ ಕತ್ತಿಯನ್ನು ಸಿಕ್ಕಿಸಿಕೊಂಡು ಹೊರಟಳು. ಅಷ್ಟರಲ್ಲಿ ರಘುನಾತನ ಸೈನ್ಯ ಕ್ಷಪ್ರಾನದಿಯ ತೀರಕ್ಕೆ ಬಂದಿಳಿದಿರುವ ಸುದ್ಧಿ ಬಂದಿತು. ಅಹಲ್ಯಾಬಾಯಿಯ ಇಡೀ ಸೈನ್ಯ ಅವಳ ದೂರದ ಬಂಧುವಾದ ಯೋಧ ತುಕಾಜಿಯನ್ನು ಮುಖಂಡ ನನ್ನಾಗಿಟ್ಟುಕೊಂಡು ಹೊರಟಿತು. ತುಕ್ಕಾಜಿ ತಕ್ಷಣ ರಘುನಾಥನಿಗೆ  ಎಚ್ಚರಿಕೆಯ ಪತ್ರವೊಂದನ್ನು ಕಳುಹಿಸಿದನು: “ನೀವು ನದಿಯನ್ನು ದಾಟಿ ಬಂದರೆ ನಮ್ಮವರು ಕತ್ತಿಯನ್ನು ಹಿರಿದು ನಿಂತಿರುವುದನ್ನು ಕಾಣುತ್ತೀರಿ. ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇನೆ. ಚೆನ್ನಾಗಿ ಆಲೋಚಿಸಿದ ಮುಂದೆ ಹೆಜ್ಜೆ ಇಡಿ.

ರಘುನಾತರಾಯನಿಗೆ ತಮ್ಮ ಕೈಕೆಳಗಿರುವ ಹೋಳ್ಕರ ರಾಜ್ಯದ ಜನರೇ ತನಗೆ ವಿರುದ್ಧವಾಗಿರುವುದನ್ನು ಕಂಡು ಸ್ವಲ್ಪ ಅಳುಕುಂಟಾಯಿತು. ಇದನ್ನು ಅವನು ನಿರೀಕ್ಷಿಸಿರಲಿಲ್ಲ.  ಸುಲಭವಾಗಿ ರಾಜ್ಯ, ಐಶ್ವರ್ಯ ಸಿಗುತ್ತದೆ ಎಂದು ಕೊಂಡದ್ದು, ಈಗ ಕಷ್ಟವೆನಿಸತೊಡಗಿತು. ಆದರೆ ಗಂಗಾದರ ಯಶ್ವಂತರಾಯ ಅವನನ್ನು ಬಿಡದೇ ಪ್ರೋತ್ಸಾಹಿಸಿದ.

“ಯೋಚಿಸಿ:-

ಅಹಲ್ಯಬಾಯಿ ಬಹಳ ಜಾಣ ಹೆಂಗಸು. ದಂಡೋಪಾಯಕ್ಕಿಂತ ಮೊದಲು ಸಾಮೋಪಾಯ ಮಾಡಿ ನೋಡಬೇಕೆಂದು ಅವಳಿಗೆ ತೋರಿತು. ರಘುನಾತರಾಯನಿಗೆ “ನನ್ನ ರಾಜ್ಯ ಕಸಿದುಕೊಳ್ಳುವ ಅಸೆಯಿಂದ ನೀವು ಸೈನ್ಯ ಸಮೇತರಾಗಿ ಬಂದಿದ್ದೀರಿ. ಖಂಡಿತ ನಿಮ್ಮಾಸೆ  ನೆರವೇರುವುದಿಲ್ಲ. ನನ್ನನ್ನು ಅಬಲೆಯಾದ ಸ್ತ್ರಿಯೆಂದು ತಿಳಿದಿದೀರಿ. ನಾನು ಎಂಥವಳೆಂಬುವುದನ್ನು ಯುದ್ಧರಂಗದಲ್ಲಿ ನೋಡಿ. ಅಕಸ್ಮಾತ್ ಯುದ್ಧದಲ್ಲಿ ಸೋತರಂತೂ  ಹೆಣ್ಣಾದ ನನಗೆ ಅಪಮಾನವಲ್ಲ. ಆದರೆ ಮೀಸೆ ಹೊತ್ತ ಗಂಡಸರು ನೀವು ಹೆಣ್ಣೋಬ್ಬಳಿಂದ ಸೋತರೆ ಯಾರಿಗೂ ಮುಖ ತೋರಿಸುವಂತಿಲ್ಲ.  ನೀವು ಬದುಕಿರುವವರೆಗೂ ಈ ಕೆಟ್ಟ ಹೆಸರು ನಿಮಗೆ ಅಂಟಿಯೇ ಇರುತ್ತದೆ. ವಿಚಾರ ಮಾಡಿ ಮುಂದೆ ಬನ್ನಿರಿ: ಎಂದು ಪತ್ರವನ್ನು ಬರೆದು ಕಳುಹಿಸಿದಳು. ಈ ಮಾತುಗಳನ್ನು ಕೇಳಿ ರಘುನಾಥರಾಯನಿಗೆ ತುಂಬಾ ನಾಚಿಕೆಯುಂಟಾಯಿತು. ಇದೇ ಹೊತ್ತಿಗೆ ವಿಷಯ ತಿಳಿದು ಪೇಶ್ವೆ ಮಾಧವರಾಯ ತಮ್ಮನ ಬುದ್ಧಿಗೇಡಿತನಕ್ಕೆ ಮರುಗಿ ಅವನಿಗೆ ಬುದ್ಧಿವಾದ ಬರೆದು ಕಳುಹಿಸಿದನು. ಬಂದ ಮೇಲೆ ಹೇಗಾದರೂ ಮರ್ಯಾದೆ ಉಳಿಸಿಕೊಳ್ಳಬೇಕೆಂದು ರಘುನಾಥರಾಯ ಅಹಲ್ಯಾಬಾಯಿಗೆ ಈ ರೀತಿ ಪತ್ರ ಬರೆದನು: “ನಿಮಗೆ ಮಗನ ಸಾವಿನಿಂದ ದುಃಖವಾಗಿದೆ, ಸಮಾಧಾನ ಹೇಳುವುದಕ್ಕಾಗಿಯೇ ನಾವು ಬಂದದ್ದು. ಆದರೆ ನೀವು ತಪ್ಪು ತಿಳಿದಿರುವಂತಿದೆ.

ರಘುನಾಥನನ್ನೂ ಅವನ ಅಧಿಕಾರಿಗಳನ್ನೂ ಅಹಲ್ಯಾಬಾಯಿ ವಿಶ್ವಾಸದಿಂದ ಸ್ವಾಗತಿಸಿದಳು. ಮರ್ಯಾದೆಯಿಂದ  ಒಂದು ತಿಂಗಳವರೆಗೆ ಅವರಿಗೆ ಅತಿಥ್ಯ ನಡೆಸಿದಳು. ಅವಳ ಆಳ್ವಿಕೆ, ಜಾಣತನವನ್ನು ಕಣ್ಣಾರೆ ಕಂಡ ರಘುನಾಥರಾಯನಿಗೆ ಇವಳು ಯಾವ ಪುರುಷನಿಗೂ ಕಡಿಮೆಯಿಲ್ಲವೆಂದು ಮನವರಿಕೆಯಾಯಿತು. ಇಷ್ಟೆಲ್ಲ ಹಗರಣಕ್ಕೆ ಕಾರಣವಾದ ಗಂಗಾದರ ಯಶ್ವಂತರಾಯ ಅವಳಿಗೆ ಮುಖ ತೋರಿಸಲಾರದೆ ಸಂನ್ಯಾಸಿಯಾಗಿ ಹೊರಟು ಹೋದ. ೧೭೬೭ರಲ್ಲಿ ಅಹಲ್ಯಾಬಾಯಿಯ ನಂಬಿಕಸ್ಥನಾಗಿದ್ದ ತುಕಾಜಿಯನ್ನೇ ಇಂದೂರಿನ ಸುಬೇದಾರನನ್ನಾಗಿ ಮಾಡಿ ತನ್ನ ಆಳ್ವಿಕೆಯನ್ನು ಮುಂದುವರೆಸಿದಳು.

ಮಮತೆಯ ತಾಯಿ :

ಅಹಲ್ಯಾಬಾಯಿ ಪ್ರಜೆಗಳನ್ನು ತನ್ನ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದಳು. ಅವರ ಸುಖವೇ ಅವಳ ಬಾಳಿನ ಮುಖ್ಯಗುರಿ. ಬಡವ-ಶ್ರೀಮಂತ, ದೊಡ್ಡವರು- ಚಿಕ್ಕವರು ಎಲ್ಲರೂ ಅವಳಿಗೆ ಸಮಾನರು. ಯಾವ ವ್ಯತ್ಯಾಸವೂ ಅವಳಿಗೆ ಸೇರದು. ಎಲ್ಲರಲ್ಲಿಯೂ ಒಂದೇ ರೀತಿಯ ಮಮತೆ. ಕೈ ಕೆಳಗಿನವರನ್ನೂ ತನ್ನ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದಳು. ಅವರ ಅನುಕೂಲ, ಸುಖದ ಕಡೆಯೇ ಅವಳ  ಹೆಚ್ಚಿನ ಗಮನ. ಎಲ್ಲರನ್ನೂ ತಾಯಿಯಂತೆ ಕಾಪಾಡುತ್ತಿದ್ದಳು.

ತಾನು ಸಾಮಾನ್ಯ ಕುಟುಂಬದಿಂದ ಇಲ್ಲಿಗೆ ಬಂದು ಸೇರಿದವಳು ಎಂಬುವುದನ್ನು ಅವಳೆಂದೂ ಮರೆತಿರಲಿಲ್ಲ. ಗರ್ವ ಅವಳ ಬಳಿ ಸುಳಿಯುತ್ತಿರಲಿಲ್ಲ. ಶಾಂತತೆ, ಸೌಮ್ಯತೆ, ಸ್ನೇಹ, ವಾತ್ಸಲ್ಯ, ಅವಳಲ್ಲಿ ಎದ್ದು ಕಾಣುತ್ತಿದ್ದವು. ಮೋಸ, ಅನ್ಯಾಯ ಎನ್ನುವುದನ್ನೇ  ಕಾಣಳೂ.  ತನ್ನ ರಾಜಭಂಡಾರದಲ್ಲಿ ಹಣದ ಹೊಳೆಯನ್ನು ನೋಡುವುದಕ್ಕಿಂತ ಪ್ರಜೆಗಳು ನೆಮ್ಮದಿಯಾಗಿರುವುದನ್ನು ನೋಡುವುದೇ ಅವಳ ಆಸೆ.

ತಪ್ಪು, ಅನ್ಯಾಯ ಮಾಡಿದವರನ್ನು ಮಾತ್ರ ಅವಳು ಸಮ್ಮನೆ ಬಿಡುತ್ತಿರಲಿಲ್ಲ.  ಅವಳು ಕೊಡುವ ಉಗ್ರ ಶಿಕ್ಷೆಗೆ ರಾಜ್ಯವೇ ಗಡಗಡ ನಡುಗುತ್ತಿತ್ತು. ಆದುದರಿಂದ ಅವಳ ರಾಜ್ಯದಲ್ಲಿ ಯರು ಅನ್ಯಾಯಗಳನ್ನು ಮಾಡಲು ಹೋಗುತ್ತಿರಲಿಲ್ಲ. ಘೋರ ಶಿಕ್ಷೆ ವಿಧಿಸುವಷ್ಟು ಕಟ್ಟುನಿಟ್ಟು ಅವಳಲಿದ್ದರೂ ದಯೆ, ಕ್ಷಮೆಯೂ ಅವಳ ಸಹಜ ಗುಣಗಳಾಗಿದ್ದವು. ಹೊಟ್ಟೆಗಿಲ್ಲದೆ ಕಳ್ಳತನ ಮಾಡುವವರನ್ನು ಕ್ಷಮಿಸಿ ಅವರಿಗೆ ಭೂಮಿ ಮತ್ತು ಬಿತ್ತನೆ ಬೀಜವನ್ನು ಕೊಡಿಸುತ್ತಿದ್ದಳು. ಅಲ್ಲದೇ ಮುಂದೆ ಕಳ್ಳತನ ಮಾಡುವುದಿಲ್ಲವೆಂದು ಅವರಿಂದ ಮಾತು ತೆಗೆದುಕೊಳ್ಳುತ್ತಿದ್ದಳು.

ಧರ್ಮಬುದ್ಧಿ:

ಅಹಲ್ಯಾಬಾಯಿ ಈಶ್ವರನ ಪರಮ ಭಕ್ತಳು. ಉಳಿದ  ದೇವರುಗಳ ಬಗ್ಗೆಯೂ ಅವಳಿಗೆ ಅಷ್ಟೇ ಗೌರವವಿತ್ತು. ದಾನ ಧರ್ಮಗಳಲ್ಲಿ ಅಪಾರವಾದ ಒಲವು. ದಿನನಿತ್ಯ ಬೆಳಗಿನ ಪೂಜೆಯಾದ ಮೇಲೆ ದಾನದ ಒಂದು ಕಾರ್ಯಕ್ರಮವನ್ನೇ ಇಟ್ಟುಕೊಂಡಿರುತ್ತಿದ್ದಳು. ಹಣ ವಸ್ತ್ರ, ಆಹಾರ ಪದಾರ್ಥಗಳನ್ನು ಬಡಬಗ್ಗರಿಗೆ ದಾನ ಕೊಡುತ್ತಿದ್ದಳು. ಊಟದ ಸಮಯಕ್ಕೆ ಅವಳಲ್ಲಿಗೆ ಹೋದವರು  ಊಟ ಮಾಡದೆ ಹಿಂತಿರುಗುವ ಹಾಗಿರಲಿಲ್ಲ. ತಾನೇ ಇಂತು ಅವರಿಗೆಲ್ಲ ಊಟದ ವ್ಯವಸ್ಥೆಯನ್ನು ಮಾಡಿಸುತ್ತಿದ್ದಳು. ಪರೋಪಕಾರವೇ ಅವಳ ಸಂತೋಷ, ತೃಪ್ತಿ. ಸಹಾಯ ಬೇಡಿ ಅವಳ ಬಳಿ ಹೋದವರು ಯಾರು ಬರಿಗೈಯಲ್ಲಿ ಹಿಂತಿರುಗುತ್ತಿರಲಿಲ್ಲ.

ಅಹಲ್ಯಾಬಾಯಿ ಮಾಡಿದ ಧರ್ಮ ಕಾರ್ಯಗಳು ಇಂದೂ ಭಾರತದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ನರ್ಮದಾ, ಕ್ಷಿಪ್ರಾ ನದಿಗಳ ಮೂಲ  ಪ್ರದೇಶದಲ್ಲಿ, ಅನೇಕ ಯಾತ್ರಾ ಸ್ಥಳಗಳಲ್ಲಿ  ಹಲವಾರು ಛತ್ರಗಳನ್ನೂ ದಾನ ಕೊಡುವ ಅಂಗಡಿಗಳನ್ನೂ ಕಟ್ಟಿಸಿದಳು. ಸೌರಾಷ್ಟ್ರದಲ್ಲಿ ಸೋಮನಾಥ ಗಯೆಯಲ್ಲಿ ವಿಷ್ಣು, ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಗಳನ್ನು ಜೀರ್ಣೊದ್ದಾರಗೊಳಿಸಿದಳು. ಕಲ್ಕತ್ತೆಯಿಂದ ಕಾಶಿಯವರೆಗಿದ್ದ ರಸ್ತೆಯನ್ನು ಸರಿಮಾಢಿಸಿದಳು. ಹೊಸದಾಗಿ ದೇವಾಲಯಗಳನ್ನು ಕಟ್ಟಿಸುವುದು, ಅನ್ನಛತ್ರ, ಮಂಟಪ, ಕೆರೆ ಬಾವಿಗಳನ್ನು ಮಾಡಿಸುವುದು, ಯಾತ್ರಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುವುದು-ಇಂಥ ಪುಣ್ಯ ಕಾರ್ಯಗಳನ್ನು ಕೈಗೊಂಡಳು. ಅವಳೀಗೆ ಈ ಜಗತ್ತೆ ತನ್ನ ಕುಟುಂಬ ಎಂಬ  ಭಾವನೆ. ತನ್ನ ಮಾವನ ಮರಣ ಕಾಲದಲ್ಲಿ ಮಿಕ್ಕಿದ್ದ ನಾಲ್ಕು ಕೋಟಿ ರೂಪಾಯಿಗಳನ್ನು, ತನ್ನ ಸ್ವಂತ ಆಸ್ತಿಯನ್ನೂ ಅನೇಕ ಧರ್ಮ ಕಾರ್ಯಗಳಿಗಾಗಿ ಉಪಯೋಗಿಸಿದಳು.

ದಯೆ:

ಪಶು ಪಕ್ಷಿ ಮುಂತಾದವುಗಳನ್ನು ಕಂಡರೂ ಅವಳದು ದಯಾದೃಷ್ಟಿ ರೈತರು ಹೊಲಗಳಲ್ಲಿ ಪಕ್ಷಿಗಳಿಗೆ ಕಾಳೂ ತಿನ್ನಲು ಬಿಡುವುದಿಲ್ಲವೆಂದು ಅವಳಿಗೆ ತಿಳಿದಿತ್ತು. ಆದುದರಿಂದ ತನ್ನ ಸ್ವಂತ ಹಣದಿಂದ ಕುಯ್ಲಿಗೆ ಬಂದ ಹೊಲಗಳನ್ನು ಕೊಂಡು ಕೊಂಡು ಅವುಗಳನ್ನು ಪಕ್ಷಿಗಳಿಗಾಗಿ ಬಿಡುತ್ತಿದ್ದಳು. ದನಕರುಗಳು ಸಂಜೆ ಮನೆಗೆ ಬರುವ ದಾರಿಯಲ್ಲಿ ನೀರು, ಹುಲ್ಲುಗಳನ್ನು ಒದಗಿಸಲು ಏರ್ಪಾಡು ಮಾಡಿದ್ದಳು. ಮೀನುಗಳಿಗಾಗಿ ನರ್ಮದಾ ನದಿಯಲ್ಲಿ  ಪ್ರತಿದಿನವೂ ಅಕ್ಕಿಯನ್ನು ಹಾಕುತ್ತಿದ್ದಳು. ಇರುವೆಗಳಿಗಾಗಿ ಧಾನ್ಯವನ್ನು ಇರುವೆಗೂಡಿನ ಬಳಿ ಚೆಲ್ಲುತ್ತಿದ್ದಳು.

ಆಗಿನ ಕಾಲದಲ್ಲಿ ಊರಿಂದೂರಿಗೆ ಸಂಚರಿಸುವುದು ಬಹಳ ಕಷ್ಟಕರವಾಗಿತ್ತು. ದಟ್ಟ ಕಾಡು, ಕ್ರೂರ ಮೃಗಗಳು, ಕಳ್ಳರು, ದರೋಡೆಕೋರರ ಭಯವಿತ್ತು. ಅದಕ್ಕಾಗಿ ಅಹಲ್ಯಾ ಬಾಯಿ ದೊಡ್ಡ ರಸ್ತೆಗಳನ್ನು ಮಾಡಿಸಿ ಸಾಲುಮರಗಳನ್ನು ಹಣ್ನಿನ ಗಿಡಗಳನ್ನು ನೆಡಿಸಿದಳು. ದೇವಸ್ಥಾನಗಳಿಗೆ ದತ್ತಿಗಳನ್ನು ಕೊಟ್ಟಂತೆ ಮಸೀದಿಗಳಿಗೂ ನೀಡಿದ್ದಳು. ಸಂನ್ಯಾಸಿ, ಫಕೀರ, ಮೌಲ್ವಿಗಳೆಲ್ಲರಿಗೂ ಸಮಾನ ಅನುಕೂಲ ಮಾಡಿಕೊಟ್ಟಿದ್ದಳು. ಅವಳ ಮನಸ್ಸು ಸಾಗರದಷ್ಟು ವಿಶಾಲ, ತನಗೆ  ಪ್ರಚಾರ, ಕೀರ್ತಿ ಸಿಕ್ಕಬೇಕೆಂಬ ಉದ್ದೇಶದಿಂದ ಅವಳು ಈ ಧರ್ಮಕಾರ್ಯಗಳನ್ನು ಮಾಡಲಿಲ್ಲ.  ಅಥವಾ ಜನರನ್ನು ಪ್ರಭಾವಗೊಳಿಸಲೂ ಅಲ್ಲ. ಈ ರೀತಿ ಅಹಲ್ಯಾಬಾಯಿಯಂತೆ ಸ್ವಾರ್ಥವಿಲ್ಲದೇ ಆಳಿದ ರಾಣಿಯರು ಬಹಳ ಅಪರೂಪ!

ಇಷ್ಟೆಲ್ಲ ಧರ್ಮ ಕಾರ್ಯಗಳನ್ನು ಮಾಡಿ, ಇವುಗಳೆಲ್ಲ ನನ್ನದಲ್ಲ. ನನಗೆ ಯಾರು ಕೊಟ್ಟಿದ್ದರೋ ಅವರಿಗೆ  ಇದನ್ನು ಹಿಂತಿರುಗಿಸುತ್ತಿದ್ದೇವೆ. ಆದರೂ ನನ್ನ ಸಾಲ ತೀರಲಿಲ್ಲ. ಅದು ನನ್ನಿಂದ ಸಾಧ್ಯವೂ ಇಲ್ಲ” ಎಂದು ಹೇಳುತ್ತಿದ್ದಳು. ಎಲ್ಲವನ್ನುದೇವರು ತನ್ನ ಮೂಲಕ ಮಾಡಿಸುತ್ತಾನೆ ಎನ್ನುತ್ತಿದ್ದಳು. ಒಮ್ಮೆ ತುಕಾಜಿಯು ಮಕ್ಕಳಿಲ್ಲದೆ ವಿಧವೆಯೊಬ್ಬಳ ಆಸ್ತಿಯನ್ನೆಲ್ಲ ರಾಜಭಂಡಾರಕ್ಕೆ ಸೇರಿಸಿಕೊಂಡುಬಿಟ್ಟಿದ್ದನು. ಆ ವಿಧವೆ ಅಹಲ್ಯಾಬಾಯಿಯ ಬಳಿ ದೂರು ತಂದಳು. “ಮಕ್ಕಳಿಲ್ಲದಿದರೆ ಅವಳ ಹೆಣವನ್ನೆಲ್ಲ ಸರಿತೋರಿದಂತೆ ಖರ್ಚು ಮಾಡಲಿ. ನಮಗೆ ಸೇರಿಸಿಕೊಳ್ಳಲು ಏನೂ ಅಧಿಕಾರವಿಲ್ಲ. ಜೊತೆಗೆ ಅದು ನ್ಯಾಯವೂ ಅಲ್ಲ” ಎಂದು ಅಹಲ್ಯಾಬಾಯಿ ಅವಳ ಆಸ್ತಿಯನ್ನೆಲ್ಲ ಹಿಂತಿರುಗಿಸಿದಳು. ತನ್ನ ರಾಜ್ಯದಲ್ಲಿ ಮುಂದೆಂದೂ ಇಂತಹ ಅನ್ಯಾಯ ನಡೆಯಕೂಡದೆಂದು ತುಕಾಜಿಗೆ ಬುದ್ಧಿ ಹೇಳಿದಳೂ.

ಇನ್ನೊಮ್ಮೆ ಮಕ್ಕಳಿಲ್ಲದ ಒಬ್ಬಳೂ ತನ್ನೆಲ್ಲಾ ಆಸ್ತಿಯನ್ನು ತಾನಾಗಿಯೇ ಬಂದು ಅಹಲ್ಯಾಬಾಯಿಗೆ ತಂದೊಪ್ಪಿಸಿದಳು. ಆಗ ಅಹಲ್ಯಾಬಾಯಿ, “ಇದು ನಿನ್ನ ಗಂಡ ಕಷ್ಟಪಟ್ಟು ಸಂಪಾದಿಸಿದ್ದು. ಇದು ನಿನ್ನ ಹತ್ತಿರವೇ ಇರಬೇಕು. ಬೇಕಾದರೆ ಒಬ್ಬ ಮಗನನ್ನು ದತ್ತು ತೆಗೆದುಕೋ. ಅಥವಾ ಧರ್ಮ ಕಾರ್ಯಕ್ಕೆ  ಉಪಯೋಗಿಸು. ಅದು ನಿನ್ನಿಷ್ಟ” ಎಂದಳೂ. ಆಗ ಆಕೆ ಅಹಲ್ಯಾಬಾಯಿ ಹೇಳಿದಂತೆ ನರ್ಮದಾ ನದಿಗೆ ಸುಂದರ ವಾದ ಸೊಪಾನವನ್ನು ಕಟ್ಟಿಸಿದಳು.

ಹೀಗೆ ಅಹಲ್ಯಾಬಾಯಿ ಪ್ರಜೆಗಳಿಗೆಲ್ಲ ಅವರ ಹಣವನ್ನು ಧರ್ಮ ಕಾರ್ಯಕ್ಕೆ ವೆಚ್ಚ ಮಾಡುವಂತೆ ಧರ್ಮದ ದಾರಿ ತೋರಿಸುತ್ತಿದ್ದಳು. ಹೀಗಾಗಿ ನಾಡಿನಲ್ಲೆಲ್ಲ ಸದಾ ಕಾಲ ದಾನ ಧರ್ಮ ನಡೆಯುತ್ತಿತ್ತು.

ಅಹಲ್ಯಾಬಾಯಿಯ ಕೀರ್ತಿ ಭಾರತದ ಎಲ್ಲ ಭಾಗಗಳಲ್ಲಿಯೂ ಹರಡಿತ್ತು. ಅವಳನ್ನು ಪ್ರೀತಿಸುವವರಿಗೆ ಮಾತ್ರವಲ್ಲ ಶತ್ರುಗಳಿಗೂ ಅವಳಲ್ಲೇನೋ ಅಸಾಧಾರಣ ಶಕ್ತಿ ಇರಬೇಕು ಎನ್ನಿಸುತ್ತಿತ್ತು.

‘ಮನುಷ್ಯರನ್ನು ಹೊಗಳಬೇಡಿ’

ಲೋಕದಲ್ಲಿ ಧರ್ಮ ಪ್ರವೃತ್ತಿ, ವೈರಾಗ್ಯ ಎಷ್ಟೋ ಜನರಿಗೆ ಬರಬಹುದು. ಆದರೆ ತಮ್ಮ ಒಳ್ಳೆಯಗುಣಗಳನ್ನು ಹೊಗಳುತ್ತಿರುವಗ ಮುಖ ಅರಳಿಸಿಕೊಳ್ಳದೇ ಇರುವವರು ಬಹು ಕಡಿಮೆ. ಎಂಥವರಿಗೂ ಹೊಗಳೀಕೆ ಕೇಳಿದಾಗ ಹೆಮ್ಮೆಯುಂಟಾಗುತ್ತದೆ. ಆದರೆ ಇದಕ್ಕೆ ಅಹಲ್ಯಾಬಾಯಿ ಸಂಪೂರ್ಣವಾಗಿ ಹೊರತಾಗಿದ್ದಳು.

ಒಮ್ಮೆ ಒಬ್ಬ ಕವಿಯು ಆಕೆಯ ಗುಣಗಳನ್ನು ಹೊಗಳಿ ಒಂದು ಕಾವ್ಯವನ್ನು ಬರೆದು ಅವಳ ಮುಂದೆ ಓದಿದ.

“ಅಯ್ಯಾ, ನಿನ್ನ ಕಾವ್ಯದಲ್ಲಿ ನನ್ನ ಹೊಗಳಿಕೆ ಬಿಟ್ಟರೆ ಬೇರೇನಿದೆ? ಇದೆಂತಹ ಕಾವ್ಯ?” ಎಂದು ಅಹಲ್ಯಾ ಬಾಯಿಯು ಅಚ್ಚರಿಯಿಂದ ಕೇಳೀದಳು.

“ತಾಯಿ, ಇದು ನಿಮ್ಮನ್ನು ಕುರಿತು ಬರೆದದ್ದೇ. ಕಾರಣ  ನೀವು ತುಂಬಾ ದೊಡ್ಡ ವ್ಯಕ್ತಿ” ಎಂದ ಕವಿ.

“ಮನುಷ್ಯರನ್ನು ಹೊಗಳಿ ಹಾಡುವುದರಲ್ಲಿ ನಿನ್ನ ಪ್ರತಿಭೆಯನ್ನು ಹಾಳು ಮಾಡಿಕೊಳ್ಳಬೇಡ. ಇದರಿಂದ ನಿನ್ನ ಪರಿಶ್ರಮ ದಂಡ. ಸರ್ವೆಶನಾದ ಆ ಪರಮಾತ್ಮನನ್ನು ಕುರಿತು ಬರೆದುದು ನಿನ್ನ ಜನ್ಮ ಸಾರ್ಥಕಪಡಿಸಿಕೋ” ಎಂದು ಅವನಿಗೆ ಬುದ್ಧಿ ಹೇಳಿ ಅಹಲ್ಯಾಬಾಯಿ ಆ ಕಾವ್ಯವನ್ನು ನರ್ಮದಾ ನದಿಯಲ್ಲಿ ಬಿಸುಟಳು. ಅವಳು ಅನೇಕ ಕಲಾವಿದರು, ವಿದ್ವಾಂಸರು, ಸಂಗೀತಗಾರರು, ಕವಿಗಳಿಗೆ ಉದಾರ ಆಶ್ರಯ. ನೀಡಿದ್ದಳು. ಅವರೆಲ್ಲರಿಗೂ ಅವಳದೊಂದೇ ಉಪದೇಶ:” ಮನುಷ್ಯರನ್ನು ಹೊಗಳುವುದರಲ್ಲಿ ನಿಮ್ಮ ವೇಳೆಯನ್ನೂ ಶಕ್ತಿಯನ್ನೂ ಹಾಳು ಮಾಡಬೇಡಿ”.

ಮಾಹೇಶ್ವರ ನಿರ್ಮಾಣ :

ಮಗ ಸತ್ತಮೇಲೆ ಅಹಲ್ಯಾಬಾಯಿಗೆ ಇಂದೂರಿನಲ್ಲಿ ಇರಲು ಕಷ್ಟವಾಯಿತು. ನರ್ಮದಾ ನದಿ ತೀರದಲ್ಲಿರುವ ಮಾಹೇಶ್ವರಕ್ಕೆ ರಾಜಧಾನಿಯನ್ನು ಬದಲಾಯಿಸಿದಳು. ಇಲ್ಲೇ ಅವಳ ಜೀವಿತದ ಬಹುಕಾಲ ಕಳೆದದ್ದು,  ಇಲ್ಲಿ ಅನೇಕ ದೇವಸ್ಥಾನಗಳನ್ನು ಕಟ್ಟಡಗಳನ್ನು ನದಿಗೆ ಸೋಪಾನಗಳನ್ನು ಕಟ್ಟಿಸಿದಳು. ಹಳೆಯ ದೆವಾಲಯಗಳನ್ನು ಜೀರ್ಣೋದ್ಧಾರಗೊಳಿಸಿದಳು. ಸಂಸ್ಕೃತ ಪಾಠ ಶಾಲೆಗಳನ್ನು ಪ್ರಾರಂಭಿಸಿದಳು. ಪ್ರತಿಮೆ, ದೇವಾಲಯಗಳು ನಿರ್ಮಾಣಕ್ಕೆ ಶಿಲ್ಪಿಗಳನ್ನು ಬೇರೆ ಬೇರೆ ಊರುಗಳಿಂದ ಕರೆಸಿದಳು. ಬಟ್ಟೆ ಗಿರಣಿಗಳನ್ನು ಅಭಿವೃದ್ಧಿ ಪಡಿಸಿದಳು. ಹೀಗೆ ಇವಳ ಸ್ಫೂರ್ತಿ, ಕ್ರೀಯಾಶಕ್ತಿಗಳಿಂದ ಮಾಹೇಶ್ವರ ಅನೇಕ ಚಟುವಟಿಕೆಗಳ  ಕೇಂದ್ರಸ್ಥಾನವಾಗಿತ್ತು.

ಬಹುಮಾನವಾಗಿ ಮುಕ್ತಾಬಾಯಿ :

ಆಹಲ್ಯಾಬಾಯಿಯ ಆಳ್ವಿಕೆಯು ಬಹು ದಕ್ಷವಾಗಿದ್ದರೂ ಅಲ್ಲಲ್ಲಿ ಕಳ್ಳತನ, ದರೋಡೆಗಳು ಪ್ರಾರಂಭವಾಗಿದ್ದವು. ರಾಜ್ಯದ ಉತ್ತರ ಭಾಗದಲ್ಲಿ ಮೊಗಯರ, ಸಿಂಧ್ಯರ, ದಕ್ಷಿಣದ ನೇಮರ, ಖಂಡೇಶದಲ್ಲಿ ಬಿಲ್ಲರ ತೊಂದರೆ, ಮಾಹೇಶ್ವರದ ಹತ್ತಿರದ ಪ್ರದೇಶಗಳಲ್ಲಿ ದರೋಡೆಕೋರ ಗಣಪತಿರಾಯನ ಪೀಡೆ.ರಾಜ್ಯದಲ್ಲಿ ಎದ್ದ ಅಶಾಂತಿ ಅಹಲ್ಯಾಬಾಯಿಗೆ ದೊಡ್ ಚಿಂತೆಯಾಯಿತು. ಉಪಾಯ ಚತುರಳಾದ ಅಹಲ್ಯಾಬಾಯಿ ಕಳ್ಳ ಕಾಕರನ್ನು ನಾಶಪಡಿಸಲು ಒಂದು ಸಭೆ ಸೇರಿಸಿದಳು. ಅವಳು ಒಂದು ಘೋಷಣೆ ಮಾಡಿದಳು : “ರಾಜ್ಯದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಿದೆ. ಇವರನ್ನು ನಾಪಡಿಸಿ ರಾಜ್ಯದಲ್ಲಿ ಶಾಂತಿ, ಸುಭದ್ರತೆ ನೆಲೆಸುವಂತೆ ಮಾಡಿದವರಿಗೆ ನನ್ನ ಪ್ರಾಣಕ್ಕಿಂತ ಹೆಚ್ಚಾದ ನನ್ನ ಮಗಳನ್ನೇ ಮದುವೆ  ಮಾಡಿಕೊಡುತ್ತೇನೆ”.

ಸ್ವಲ್ಪ ಹೊತಿನಲ್ಲಿ ಒಬ್ಬ ದೃಢಕಾಯದ ಯುವಕ ಎದ್ದು ನಿಂತ. ತಾನು ಆ ಕಾರ್ಯ ಮಾಡುವುದಾಗಿ ಒಪ್ಪಿಕೊಂಡ. ಆತನ ಹೆಸರು ಯಶವಂತರಾಯ ಫಾನ್ಸೆ. ಕೆಲವೇ ದಿನಗಳಲ್ಲಿ ಅಹಲ್ಯಾಬಾಯಿಯ ಸಹಾಯದಿಂದ ಅವನು ಬಿರುಗಾಳಿ ಯಂತೆ ರಾಜ್ಯದ ತುಂಬ ಓಡಾಡಿದ. ಹಾವಳಿಗಾರರನ್ನು ಸದೆಬಡಿದ. ಪ್ರಜೆಗಳು ನೆಮ್ಮದಿಯನ್ನು ಪಡೆದರು. ಮುಕ್ತಾಬಾಯಿ ಅವನ ಹೆಂಡತಿಯಾದಳು!

ಸಂಧಾನ- ಗೆಲುವು:

ಮಲ್ಲಾರಿರಾಯನ ಕಾಲದ ಮಾತು. ಜಯಪುರದ ದೊರೆಯಾಗಲು ಮಧೋಸಿಂಗನಿಗೆ ಮಲ್ಲಾರಿರಾಯ ಸಹಾಯ ಮಾಡಿದ್ದ. ಅದಕ್ಕೆ ಕೃತಜ್ಞತೆಯಾಗಿ ಸಿಂಗನು ಇವನಿಗೆ ರಾಮಪುರವನ್ನು ಕೊಟ್ಟಿದ್ದನು. ರಾಮಪುರ ಉದಯಪುರಕ್ಕೆ ಸೇರಿತ್ತು. ರಾಮಪುರ ಮಲ್ಲಾರಿರಾಯನಿಗೆ ಸೇರಿದ್ದು ಆ ಊರಿನ ಅಧಿಕಾರಿಗಳಿಗೆ ಸಹಿಸಲಿಲ್ಲ. ಚಂದ್ರಾವತದ ರಾಜಪುತ್ರರು ಮಲ್ಲಾರಿರಾಯನಿಂದ ರಾಮಪುರವನ್ನು ಕಿತ್ತು ಕೊಳ್ಳಲು ಪ್ರಯತ್ನಿಸಿ ಸೋತ್ತಿದ್ದರು. ಮಲ್ಲಾರಿರಾಯ ಬದುಕಿರುವರೆಗೂ ಅವರು ಸುಮ್ಮನಿದ್ದರು. ರಾಜ್ಯಾಡಳಿತವನ್ನು ಅಹಲ್ಯಾಬಾಯಿ ವಹಿಸಿಕೊಂಡಾಗ ಅವರು ಮರಳಿ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸಿದರು. ಚಂದ್ರಾವತರು ರಾಮಪುರದ ಇನ್ನಿತರೆ ರಾಜಪುತ್ರರನ್ನೂ ಒಟ್ಟುಗೂಡಿಸಿದರು. ಉದಯಪುರದ ರಾಣನೂ ತನ್ನ ಸೈನ್ಯವನ್ನು ಕಳೂಹಿಸಿದ. ಮರಾಠರ  ಬಹು ಸೈನ್ಯ ಉತ್ತರ ಭಾಗದ ಯುದ್ಧದಲ್ಲಿ ಮಗ್ನವಾಗಿತ್ತು. ಹೋಳ್ಕರ ರಾಜ್ಯದಲ್ಲಿ ತುಕಾಜಿಯು ಇರಲಿಲ್ಲ. ಇರುವ ಒಬ್ಬಳೆ ಹೆಂಗಸನ್ನು ಎದುರಿಸುವುದು ಕಷ್ಟವಲ್ಲವೆಂದು ಚಂದ್ರಾವತರು ಮುನ್ನುಗ್ಗಿ ಬಂದರು. ಅಹಲ್ಯಬಾಯಿ ಏಕಾಂಗಿಯಾಗಿದ್ದಳೂ. ಹೆಚ್ಚಿನ ಸೈನ್ಯ ಸಹಾಯವೂ ಇರಲಿಲ್ಲ. ಅವಳು ಅಲೋಚಿಸಿ ಚಂದ್ರಾವತರಿಗೆ ಮೂವತ್ತೊಂದು ಹಳ್ಳೀಗಳನ್ನು ಕೊಟ್ಟು ಸಂಧಿ ಮಾಡಿಕೊಂಡಳು.

೧೭೭೧ರಲ್ಲಿ ಚಂದ್ರಾವತರು ಮತ್ತೇ ದಂಡೆತ್ತಿ ಬಂದರು. ಆಗಲೂ ತುಕಾಜಿ ರಾಜ್ಯದಲ್ಲಿ ಇಲ್ಲದೆ ಸೈನ್ಯದ ಬಹುಬಾಗ ಅವನೊಡನೆ  ಹೋಗಿತ್ತು. ಅದರೂ ಅಹಲ್ಯಾ ಬಾಯಿ ಧೈರ್ಯಗುಂದದೆ ಇದ್ದಷ್ಟೆ ಸೈನ್ಯವನ್ನು ಸಿದ್ಧಗೊಳಿಸಿದಳು. ನಿಷ್ಠರಾದ ವೀರ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟಳು. ಪರಾಕ್ರಮಿ ಯಾದ ಶರೀಫ ಭಯೊಂದಿಗೆ ಸೈನ್ಯವನ್ನು ಹುರಿದುಂಬಿಸಿ ಕಳುಹಿಸಿಕೊಟ್ಟಳು. ಮೊದ ಮೊದಲು ಅವಳ ಸೈನ್ಯ ಪೆಟ್ಟು ತಿಂದಿತು. ಮುಂದೆ ಅವಳ ದೃಢ ಸಂಕಲ್ಪದಿಂದ ಮತ್ತು ಯೋಧರಲ್ಲಿ ಅವಳು ತುಂಬಿಸಿದ  ಹುರುಪಿನಿಂದ ಜಯಲಕ್ಷ್ಮೀ ಅವಳ ಕಡೆಗೆ ಒಲಿದಳು.

ಸಿಡಿಮದ್ದಿನ ಮಳೆ:

೧೭೮೭ರಲ್ಲಿ ರಜಪೂತರಿಗೆ ಮೊದಲು ಸಿಂಧ್ಯರನ್ನು ಅನಂತರ ಹೋಳ್ಕರರನ್ನು ಸೋಲಿಸಿದು. ಜಾವದನ್ನು ಆಕ್ರಮಿಸಿಕೊಂಡರು. ಇದರಿಂದ ಚಂದ್ರಾವತರಿಗೆ ಬಹಳ ಸಂತೋಷವಾಯಿತು. ತಮ್ಮನ್ನು ಸೋಲಿಸಿದ ಹೋಳ್ಕರರ ಮೇಲೆ ಸೇಡು ತೀರಿಸಿಕೊಳ್ಳಲು ಇದೇ ಸಮಯವೆಂದು ರಜಪೂತರ  ಜೊತೆಗೆ ಸೇರಿದರು.

ಅಹಲ್ಯಾಬಾಯಿ ಇದಕ್ಕೆ ಸಿದ್ಧವಾಗಿಯೇ ಇದ್ದಳು. ಅನುಭವಶಾಲಿಯಾದ ಅವಳ ಮಾರ್ಗದರ್ಶನದಲ್ಲಿ ಯುದ್ಧ ನಡೆಯಿತು. ರಜೂತರು ಸೋತು ಹೋದರು. ಹೋಳ್ಕರರು ರಾಮಪುರವನ್ನು ವಶಪಡಿಸಿಕೊಂಡರು. ಚಂದ್ರಾವತರು  ಓಡಿ ಹೋಗಿ ಅಮದ ಕೋಟೆಯಲ್ಲಿ ಬಚ್ಚಿಟ್ಟುಕೊಂಡರು. ಅಹಲ್ಯಾಬಾಯಿಯ ಸೈನಿಕರು ಶತ್ರುಗಳ ಮೇಲೆ ಬೆಂಕಿಯಂತೆ ಸಿಡಿ ಮದ್ದಿನ ಮಳೆಯನ್ನೇ ಕರೆದರು.  ಈ ವಿಜಯದ ಸುದ್ಧಿ ಕೇಳಿ ಪೇಶ್ವೆಯು ಉಬ್ಬಿ ಹೋದನು. ನಾನು ಫಡ್ನವೀಸನು ಅಹಲ್ಯಾಬಾಯಿಯ ವೀರೋಚಿತ ಗುಣಗಳನ್ನು ಕೊಂಡಾಡಿದನು.

ಸಾವಿನ ದಾಳಿ :

ಮುಕ್ತಾಬಾಯಿಗೆ ಒಬ್ಬನೆ ಮಗ. ಮೊಮ್ಮಗ ನಾಥೂ ಅಜ್ಜಿಯ ಕಣ್ಣಗೊಂಬೆ. ಅಹಲ್ಯಾಬಾಯಿಯೇ ಅವನನ್ನು ಸಾಕುತ್ತಿದದ್ಳು. ತನ್ನ ಅನಂತರ ಅವನೇ ಹೋಳ್ಕರ್ ರಾಜ್ಯಕ್ಕೆ ಅಧಿಪತಿಯಾಗಬೇಕೆಂಬಾಸೆ.

೧೭೮೭ರಲ್ಲಿ ಅವನು ಕಾಯಿಲೆ ಬಿದ್ದನು. ರೋಗ ಕ್ಷಯಕ್ಕೆ ತಿರುಗಿತು. ಎಲ್ಲಾ ಚಕಿತ್ಸೆಯೂ ಆಯಿತು. ಅಹಲ್ಯಾ ಬಾಯಿ ಒಂದೇ ಸಮನೆ ದೇವರನ್ನು ಪ್ರಾರ್ಥಿಸಿದಳೂ. ಬೇಕಾದಷ್ಟು ದಾನ ಮಾಡಿದಳು. ಏನಾದರೇನು, ವಿಧೆಯ ಇಚ್ಛೆ ಬೇರೆಯಾಗಿತ್ತು. ನಾಥೂ ಕೊನೆಯುಸಿರೆಳೆದನು. ಅವನ ಹೆಂಡತಿಯರಿಬ್ಬರುಸತಿಯಾಧರು.

ನಾಥೂವಿನ ಸಾವು ಮನೆಯವರೆನ್ನಲ್ಲ ದುಃಖ ಸಾಗರದಲ್ಲಿ ಮುಳುಗಿಸಿತು.ಅಹಲ್ಯಾ ಬಾಯಿಯ ಮನಸ್ಸಿನ ಶಾಂತಿ ಕಳೆದು ಹೋಯಿತು. ಹುಡುಗನ ತಂದೆ ತಾಯಿಗಳು ಗೋಳಾಡಿದರು. ಹಗಳು ರಾತ್ರಿ ಯಶ್ವಂತರಾಯನಿಗೆ ಇದೇ ಕೊರಗು. ೧೭೯೧ರ ಡಿಸೆಂ ರ ೩ ರಂದು ಅವನೂ ದಿವಂಗತನಾದ. ಮುಕ್ತಾಬಾಯಿಯ ನೋವಿಗೆ ಕೊನೆ ಇಲ್ಲದಂತಾಯಿತು. ತಾಯಿಗೆ ಮಗಳ ಕಣ್ಣೀರನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ .ಮಗಳ ಸಹಗಮನ ಮಾಡಲು ನಿರ್ಧರಿಸಿದಾಗ ಅಹಲ್ಯಾ ಬಾಯಿಯ ಎದೆ ಒಡೆಯಿತು. ತನಗುಳಿದಿರುವ ಒಬ್ಬಳೆ ಬಂಧು ಮುಕ್ತಾಬಾಯಿ. ಅವಳೂ ತನ್ನನ್ನು ಬಿಟ್ಟು ಹೋಗುವುಳೆಂದು ಕೇಳಿ ಅವಳ ದುಃಖ ಉಕ್ಕಿತು. ತಾಯಿಯ ಬುದ್ಧಿವಾದ, ಒತ್ತಾಯ ಮುಕ್ತಾಬಾಯಿಯನ್ನು ತಡೆಯಲಿಲ್ಲ. ಮಗಳೂ ಗಂಡನೊಡನೆ ಚಿತೆಯೇರಿದಾಗ ಅಹಲ್ಯಾಬಾಯಿ ಮೂರ್ಛೆ ಹೋದಳು.

ರಾಜ್ಯದಲ್ಲಿ ಸುಭದ್ರತೆ ನೆಲೆಸುವಂತೆ ಮಾಡಿದವರಿಗೆ ನನ್ನ ಮಗಳನ್ನೇ ಮದುವೆ ಮಾಡಿಕೊಡುತ್ತೇನೆ".

ಕೊನೆಯ ದಿನಗಳು :

ಅವಳ ಅತ್ಯಂತ ಪ್ರೀತಿಪಾತ್ರಳಾದ ಮಗಳ ಸಾವೇ ಅಹಲ್ಯಾಬಾಯಿಗೆ ಕೊನೆ ತಂದಿತು. ಹಿಂದಿನ ದುಃಖಗಳನ್ನೆಲ್ಲ ಮರುಕಳಿಸಿದವು. ಸತ್ತ ಗನ್ನ ಗಂಡ, ಮಕ್ಕಳು, ಅಳಿಯ, ಮೊಮ್ಮಗ, ಇವರದೇ ಸದಾ  ನೆನಪು. ಎಲ್ಲದರಲ್ಲಿಯೂ ಅನಾಸಕ್ತಿ, ಕಡಗೆ ಅವಳ ಪರಿಸ್ಥಿತಿ ಹೆಗೆಟ್ಟಿತು. ಮೂರು ಹಗಲು-ರಾತ್ರಿ ಅವಳು ಆಹಾರವನ್ನು ಮುಟ್ಟಲಿಲ್ಲ. ಕಡೆಯಲ್ಲಿ ಅವಳ  ವಿವೇಕ ಎಚ್ಚೆತ್ತಿತ್ತು. ತನ್ನ ಬದುಕು ಯಾವುದಕ್ಕಾಗಿ ಮುಡಿಪು ಎಂದು ಹಿಂದಿನ ನಿರ್ಧಾರವನ್ನು ನೆನೆದು ರಾಜ್ಯದ ಕಡೆಗೆ ಗಮನ ಹರಿಸಿದಳು.

ಈ ವೇಳೆಗೆ ಅಹಲ್ಯಾಬಾಯಿಗೆ  ಎಪ್ಪತ್ತು ವರ್ಷ ವಯಸ್ಸಾಗಿತ್ತು. ಒಂದಾದ ಮೇಲೊಂದರಂತೆ ಬಂದ ದುಃಖಗಳು ಅವಳನ್ನು  ಮೆತ್ತಗೆ ಮಾಡಿದ್ದವು. ೧೭೯೫ರ ಆಗಸ್ಟ ೧೩ ರಂದು ಅಹಲ್ಯಾಬಾಯಿ ಮಾಹೇಶ್ವರದ ತನ್ನ ಮನೆಯಲ್ಲಿದ್ದಳೂ. ತನ್ನ ಕಡೆಗಾಲ ಹತ್ತಿರವಾಗಿದೆ ಎಂದು ಅವಳಿಗೆ ಗೊತ್ತಾಯಿತು. ಹನ್ನೆರಡು ಸಾವಿರ ಮಂದಿಗೆ ಬೋಜನ ಮಾಡಿಸಿ ಅಪಾರವಾದ ಐಶ್ವರ್ಯವನ್ನು ದಾನವಾಗಿ ಕೊಟ್ಟಳು. ಕಡೆಯಲ್ಲ ತನ್ನ ಮನಸ್ಸನ್ನೆಲ್ಲಾ ದೇವರ ಪದಗಳಲ್ಲಿಯೇ ನೆಟ್ಟಳು. ದೇವರನ್ನು ಸ್ಮರಿಸುತ್ತಲೇ ಶಾಂತಿಯಿಂದ ಪ್ರಾಣಬಿಟ್ಟಳೂ.

ಆದರ್ಶ ವೀರ ಮಹಿಳೆ :

ಅಹಲ್ಯಾಬಾಯಿಯ ಜೀವನದಲ್ಲಿ ನಾನಾ ವಿಧವಾದ ದುಃಕಗಳು ಬರುತ್ತಲೇ ಇದ್ದರೂ ಅವಳು ಜನರ ಹಿತಕ್ಕಾಗಿ ಬದುಕಿದಳು. ಆಳಿದರು, ಬೆಳಗಿದಳು. ಅವಳ ಧೈರ್ಯ ಸಾಹಸದ, ಧರ್ಮನಿಷ್ಠೆಯ ಬದುಕು ಇಂದೂ ಎಲ್ಲರಿಗೆ ಮಾರ್ಗದರ್ಶಕವಾಗಿದೆ.

ಅಹಲ್ಯಾ ಬಾಯಿ ಸತ್ತು ಸುಮಾರು ಇನ್ನೂರು ವರ್ಷಕ್ಕೆ ಬಂತು. ಆದರೂ ಜನರ ಅವಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಗಯಾ ಮತ್ತು ಮಾಹೇಶ್ವರದಲ್ಲಿರುವ ಅವಳ ವಿಗ್ರಹಗಳಿಗೆ ಇಂದಿಗೂ ದೇವರಿಗೆ ನಡೆಯುವಂತೆಯೇ ಪೂಜೆಗಳು ನಡೆಯುತ್ತಿವೆ.