ಐವತ್ತು ವರ್ಷಗಳ ಹಿಂದಿನ ಮಾತು. ಆಗ ಕನ್ನಡ ರಂಗಭೂಮಿ ಈಗಿನ ಹಾಗೆ ಮೈತುಂಬಿಕೊಂಡಿರಲಿಲ್ಲ. ಕೆಲವೇ ನಾಟಕ ಸಂಸ್ಥೆಗಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಆ ನಾಟಕಗಳಾದರೋ ಹಳೆಯವು. ಪುರಾಣದ ಕಥೆಗಳು, ರಾಜ ರಾಣಿಯರ ಕಥೆಗಳು ರಂಗವನ್ನು ತುಂಬಿಕೊಂಡಿದ್ದವು. ನಮ್ಮ ಸಮಾಜದ ಸಮಸ್ಯೆಗಳು, ಜನರ ಜೀವನ ಕ್ರಮ, ಅವರ ಸುಖ, ದುಃಖಗಳನ್ನು ಚಿತ್ರಿಸುವ ನಾಟಕಗಳು ಆಗ ಇರಲಿಲ್ಲ.

ನಾನೇ”!

ಈ ಸಂಗತಿ ಒಬ್ಬ ವಿಚಾರಶೀಲ ಹುಡುಗನ ಮನಸ್ಸಿಗೆ ತಟ್ಟಿತ್ತು. ತನಗೆ ಪರಿಚಯವಿದ್ದ ಒಬ್ಬ ಹಿರಿಯ ನಾಟಕ ಕಂಪೆನಿ ಒಡೆಯರ ಬಳಿ ಅವನು ವಾದ ಹೂಡಿದ.

“ನೀವು ಬರೀ ಪೌರಾಣಿಕ ನಾಟಕಗಳನ್ನೇ ಆಡುತ್ತಿದ್ದೀರಲ್ಲ, ನಮ್ಮ ಜನರ ಜೀವನವನ್ನು ತೋರಿಸಿಕೊಡುವಂಥ ಸಾಮಾಜಿಕ ನಾಟಕಗಳನ್ನು ಏಕೆ ಆಡುವುದಿಲ್ಲ?”

“ಆಡಬಹುದು ಮಗು. ಆದರೆ ಕನ್ನಡದಲ್ಲಿ ಅಂಥ ನಾಟಕಗಳು ಇಲ್ಲವಲ್ಲ?” ಎಂದು ಅವರು ಮರುಪ್ರಶ್ನೆ ಹಾಕಿದರು.

“ಇಲ್ಲ ಎಂದರೆ, ನೀವು ಹೇಳಿ ಬರೆಸಬೇಕು”.

“ಬರೆಯುವವರು ಯಾರು”?

“ನಾನೇ! ನಾನು ಬರೆದುಕೊಟ್ಟರೆ ನೀವು ಅಭಿನಯಿಸುತ್ತೀರಾ?” ಹುಡುಗ ಸವಾಲು ಹಾಕಿದ.

“ಓಹೋ! ಯಾವಾಗ ಬರೆದುಕೊಡುತ್ತೀಯ?”

“ನಾಳೆ” ಎಂದ ಹುಡುಗ.

ಈ ಮಾತು ತಮಾಷೆಗೆ ಆಡಿದ್ದಿರಬೇಕು ಎಂದು ಆ ಹಿಡಿಯರು ಸುಮ್ಮನಾದರು.

ಹುಡುಗ ರಾತ್ರಿಯೆಲ್ಲಾ ಕೂತು ನಿದ್ರೆಗೆಟ್ಟು ಒಂದು ನಾಟಕ ಬರೆದ. ಮಾರನೆಯ ದಿನ ಅದನ್ನು ಆ ಹಿರಿಯರ ಬಳಿಗೆ ತೆಗೆದುಕೊಂಡು ಹೋಗಿ. “ಇಗೋ ನಾಟಕ ಬರೆದಿದ್ದೇನೆ” ಎಂದು ಕೊಟ್ಟ. ಅವರಿಗೆ ಬಹಳ ಆಶ್ಚರ್ಯವಾಯಿತು. ಅದನ್ನು ಅವನಿಂದಲೇ ಓದಿಸಿ ಕೇಳಿದರು.ಓದುವುದು ಮುಗಿಯುವಷ್ಟರಲ್ಲಿ ಅವರ ಕಣ್ಣು ಸಂತೋಷದಿಂದ ಹನಿಗೂಡೊತು. ಹುಡುಗನನ್ನು ವಾತ್ಸಲ್ಯದಿಂದ ತಬ್ಬಿಕೊಂಡು,

“ತುಂಬಾ ಚೆನ್ನಾಗಿ ಬರೆದಿದ್ದಿ ಮಗೂ. ನೀನು ಮುಂದೆ ದೊಡ್ಡ ಸಾಹಿತಿಯಾಗುತ್ತೀಯ, ಕೀರ್ತಿವಂತನಾಗು” ಎಂದು ಹಾರೈಸಿದರು.

 

"ನಾನು ಪರೆದುಕೊಟ್ಟರೆ ನೀವು ಅಭಿನಯಿಸುತ್ತೀರಾ?"

ಅವರ ಹಾರೈಕೆ, ಆಶೀರ್ವಾದ ಸತ್ಯವಾಯಿತು.

ಆ ಹುಡುಗ ಅ.ನ. ಕೃಷ್ಣರಾವ್.

“ಮದುವೆಯೋ ಮನೆಹಾಳೋ” ಎಂಬ ನಾಟಕವನ್ನು ಬರೆದಾಗ ರಾಯರಿಗೆ ಕೇವಲ ಹದಿನಾರು ವರ್ಷ. ಅವರ ನಾಟಕವನ್ನು ಓದಿ ಮೆಚ್ಚಿದವರು ಪ್ರಸಿದ್ಧ ನಟರಾಗಿದ್ದ ವರದಾಚಾರ್ಯರು.

ಅ.ನ. ಕೃಷ್ಣರಾಯರು “ಅ.ನ.ಕೃ” ಎಂಬ ಕಾವ್ಯನಾಮದಿಂದ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲೂ ಪ್ರಖ್ಯಾತರು. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಜೀವನಚರಿತ್ರೆ, ಅನುವಾದ, ವಿಮರ್ಶೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಸುಮಾರು ಇನ್ನೂರು ಪುಸ್ತಕಗಳನ್ನು ಬರೆದಿದ್ದಾರೆ.

“ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ” ಎಂದು ಹೇಳುತ್ತಿದ್ದ ಅವರು ಕನ್ನಡದ ಏಳಿಗೆಗಾಗಿ ಇಡೀ ಜೀವಮಾನವನ್ನು ಸವೆಸಿದರು. ಅವರ ಬದುಕೇ ಕನ್ನಡವಾಗಿತ್ತು.

ಬಾಲ್ಯದಿಂದ ಸಾಹಿತ್ಯ ಕೆಲೆಗಳ ಸಂಗ

ಕಲೆ, ಸಾಹಿತ್ಯಕ್ಕೆ ಪುರಸ್ಕಾರವಿದ್ದ ಒಂದು ಸುಂಸ್ಕೃತ ಮನೆತನದಲ್ಲಿ ಅ.ನ.ಕೃ. ಹುಟ್ಟಿದರು. ಅವರ ಅಜ್ಜ ಅರಕಲಗೂಡು ಕೃಷ್ಣಪ್ಪನವರು ಸಾಹಿತ್ಯ-ಸಂಗೀತದಲ್ಲಿ ದೊಡ್ಡ ವಿದ್ವಾಂಸರು. ಅವರ ಮಗ ನರಸಿಂಗರಾಯರೇ ಅ.ನ.ಕೃಷ್ಣರಾಯರ ತಂದೆ. ಇವರು ನಾಟಕಪ್ರಿಯರು. ನರಸಿಂಗರಾಯರೂ ಅವರ ಸ್ನೇಹಿತರೂ ಸ್ಥಾಪಿಸಿದ “ಬೆಂಗಳೂರು ಯೂನಿಯನ್” ಎಂಬ ನಾಟಕ ಸಂಸ್ಥೆಯ ಮೂಲಕವೇ ಮುಂದೆ ಶ್ರೇಷ್ಠರೆಂದು ಪ್ರಖ್ಯಾತರಾದ ವರದಾಚಾರ್ಯರು ನಾಟಕ ರಂಗಕ್ಕೆ ಕಾಲಿಟ್ಟಿದ್ದು.

ಅ.ನ.ಕೃ. ಹುಟ್ಟಿದ್ದು ೧೯೦೮ ರ ಮೇ ೯ ರಂದು. ಅವರ ತಾಯಿ ಅನ್ನಪೂರ್ಣಮ್ಮ. ಆಕೆ ಹೆಸರಿಗೆ ತಕ್ಕ ಹಾಗೆ ಅನ್ನಪೂರ್ಣೇಯೇ. ಅವರಿಗೆ ದೇವರಲ್ಲಿ ಬಹಳ ಭಕ್ತಿ. ತಾವು ಪುಣ್ಯಗ್ರಂಥಗಳನ್ನು ಓದಿಕೊಳ್ಳುತ್ತಿದ್ದರು. ನೆರೆಹೊರೆಯ ಹೆಣ್ಣುಮಕ್ಕಳನ್ನೂ ಸೇರಿಸಿ ಅವರಿಗೂ ಓದಿ ಹೇಳುತ್ತಿದ್ದರು. ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳ ಅನ್ನಪೂರ್ಣಮ್ಮನವರು ಪತಿಯ ಗಳಿಕೆಯಲ್ಲಿ ಓರಣವಾಗಿ ಸಂಸಾರ ತೂಗಿಸುತ್ತಾ ಸ್ವಲ್ಪವಾಗಿ ಹಣವನ್ನು ಕೂಡಿಟ್ಟರು.

ನರಸಿಂಗರಾಯರು ಬೆಂಗಳೂರಿನಲ್ಲಿ ಮನೆ ಕಟ್ಟಿಸಬೇಕೆಂದು ಯೋಚಿಸಿದಾಗ ಹಣದ್ದೇ ಒಂದು ದೊಡ್ಡ ಸಮಸ್ಯೆಯಾಯಿತು. ಆಗ ಅನ್ನಪೂರ್ಣಮ್ಮನವರು ತಾವು ಕೂಡಿಟ್ಟಿದ್ದ ಸುಮಾರು ಒಂಬತ್ತು ಸಾವಿರ ರೂಪಾಯಿಗಳು ಅವರಿಗೆ ಕೊಟ್ಟರು. ಆ ಹಣದೊಡನೆ ಇನ್ನಷ್ಟು ಸೇರಿಸಿ ನರಸಿಂಗರಾಯರು ಮನೆ ಕಟ್ಟಿಸಿದರು. ಹೆಂಡತಿಯ ನೆನಪಿಗಾಗಿ “ಅನ್ನಪೂರ್ಣ” ಎಂದೇ ಹೆಸರಿಟ್ಟರು.

ಓದಿನ ರೀತಿ

ಕೃಷ್ಣರಾಯರ ಪ್ರಾಥಮಿಕ ಶಿಕ್ಷಣ ಒಂದು ಬಹು ಸಣ್ಣ ಶಾಲೆಯಲ್ಲಿ ಆರಂಭವಾಯಿತು. ಅಲ್ಲಿನ ಓದು ಮುಗಿದ ಮೇಲೆ ಬೆಂಗಳೂರು ನಗರದ ಕೋಟೆ ಪ್ರದೇಶದಲ್ಲಿದ್ದ ಎ.ವಿ. ಶಾಲೆಗೆ ಸೇರಿದರು. ಪಾಠದ ವಿಷಯಗಳೆಂದರೆ ಅವರಿಗೆ ಮೊದಲಿನಿಂದಲೂ ಆಸಕ್ತಿ ಕಡಿಮೆಯೇ. ಲೆಕ್ಕ, ಭೂಗೋಳವೆಂದರಂತೂ ತಲೆನೋವು. ಆದರೆ ಇಂಗ್ಲಿಷ್, ಕನ್ನಡ ಕಥೆ-ಕಾದಂಬರಿಗಳೆಂದರೆ ಪಂಚಪ್ರಾಣ. ಮನೆಯ ಹತ್ತಿರದಲ್ಲಿದ್ದ ಪುಸ್ತಕ ಭಂಡಾರಕ್ಕೆ ಪ್ರತಿನಿತ್ಯ ಹೋಗಿ ಪುಸ್ತಕವನ್ನು ತೆಗೆದುಕೊಂಡು ಓದುತ್ತಿದ್ದರು. ಮನೆಯಲ್ಲೂ ಶಾಲೆಯ ಪುಸ್ತಕಗಳ ರಟ್ಟಿನಲ್ಲಿ ಕಥೆ ಪುಸ್ತಕಗಳನ್ನು ಇಟ್ಟುಕೊಂಡು ಓದುತ್ತಿದ್ದರು. ಒಂದು ಸಲ ಅವರ ತಾಯಿಗೆ ಅನುಮಾನ ಬಂದು ಪರೀಕ್ಷಿಸಿದಾಗ ಗುಟ್ಟು ರಟ್ಟಾಯಿತು.

ಕೃಷ್ಣರಾಯರು ಲೋಯರ್ ಸೆಕೆಂಡರಿಯಲ್ಲಿದ್ದಾಗಲೇ ತಾಯಿ ಅನ್ನಪೂರ್ಣಮ್ಮ ದಿವಂಗತರಾದರು.

ಮನಸ್ಸು ಅರಳಿತು

ಎ.ವಿ. ಸ್ಕೂಲ್ ವ್ಯಾಸಂಗ ಮುಗಿದ ಮೇಲೆ ಪ್ರೌಢಶಾಲೆಯ ಶಿಕ್ಷಣಕ್ಕಾಗಿ ಕೃಷ್ಣರಾಯರು ದೇಶೀಯ ವಿದ್ಯಾಶಾಲೆ ಸೇರಿದರು. ಆ ಶಾಲೆ ಶಿಸ್ತಿಗೆ, ವಿದ್ಯಾದಾನಕ್ಕೆ, ವಿದ್ಯಾರ್ಥಿಗಳಿಗೆ ಒಳ್ಳೆಯ ದಾರಿ ತೋರುವುದಕ್ಕೆ ಹೆಸರಾಗಿತ್ತು. ಬೆಂಗಳೂರಿಗೆ ಬರುತ್ತಿದ್ದ ರಾಷ್ಟ್ರಭಕ್ತರು, ಸ್ವಾತಂತ್ಯ್ರ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಮೊದಲಾದವರನ್ನು ದೇಶೀಯ ವಿದ್ಯಾಶಾಲೆಯವರು ಬರಮಾಡಿಕೊಂಡು ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಇದರಿಂದ ಬಾಲ್ಯದಿಂದಲೇ ಕೃಷ್ಣರಾಯರಿಗೆ ಕಲೆ, ಸಾಹಿತ್ಯ ಆಸಕ್ತಿ ಬೆಳೆಯ ತೊಡಗಿತು. ರಾಷ್ಟ್ರಭಕ್ತಿ ಬೆಳೆಯಿತು. ದೃಷ್ಟಿ ವಿಶಾಲವಾಗತೊಡಗಿತು.

ಸ್ವಾಮಿ ವಿವೇಕಾನಂದರ “ಷಿಕಾಗೋ ಭಾಷಣ”ವನ್ನು ಉಪಾಧ್ಯಾಯರಾಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರು ವಿದ್ಯಾರ್ಥಿಗಳಿಗೆ ವಿವರಿಸಿ ಹೇಳುತ್ತಿದ್ದರು. ಇದರಿಂದ ಕೃಷ್ಣರಾಯರ ಮನಸ್ಸು ಸರ್ವಧರ್ಮಗಳ ಕಡೆಗೂ ಹರಿಯಿತು. ರಾಮಕೃಷ್ಣ ಪರಮಹಂಸ, ವಿವೇಕಾನಂದರ ಚಿಂತನೆಯ ಕಡೆಗೆ ಅವರ ದೃಷ್ಟಿ ಬಿತ್ತು. ಹೀಗೆ ಚಿಕ್ಕಂದಿನಿಂದಲೇ ಕೃಷ್ಣರಾಯರ ಆಸಕ್ತಿಗಳು ಹಲವು ಮುಖವಾಗಿ ಚಿಗುರತೊಡಗಿದವು.

ಪುಸ್ತಕಗಳ ಭಕ್ತ

ಪಠ್ಯ ಪುಸ್ತಕಗಳಿಗಿಂತ ಬೇರೆ ಪುಸ್ತಕಗಳನ್ನೇ ಹೆಚ್ಚಾಗಿ ಓದುತ್ತಿದ್ದುದರಿಂದ ಕೃಷ್ಣರಾಯರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮೊದಲನೆಯ ಸಲ ಫೇಲಾಗಿ ಮರುವರ್ಷ ಹೇಗೋ ಪಾಸಾದರು. ಮುಂದೆ ಎಂಟ್ರೆನ್ಸ್ (ಈಗಿನ ಪಿ.ಯು.ಸಿ) ತರಗತಿ ಸೇರಿದರು. ಆ ವೇಳೆಗೆ ಓದುವ ಚಟ ಅವರ ಮೈಗೆ ಅಂಟಿಕೊಂಡಿತ್ತು. ನಿತ್ಯ ಸಾರ್ವಜನಿಕ ಪುಸ್ತಕ ಭಂಡಾರಗಳಿಗೆ ಹೋಗಿ ತಮ್ಮ ಆಸಕ್ತಿಯ ವಿಷಯಗಳನ್ನು ಒಂದೇ ಸಮನೆ ಓದುತ್ತಿದ್ದರು. ಓದಿದ್ದು ಬಡತನ, ಅನ್ಯಾಯ, ಮೌಢ್ಯ ಕಂಡು ಸಿಡಿದೆದ್ದ ಬರಹಗಾರರ ಪುಸ್ತಕಗಳನ್ನು: ಮನುಷ್ಯ ಮನುಷ್ಯನಿಗೆ ಮಾಡುವ ಅನ್ಯಾಯಕ್ಕೆ ಬೆಂಕಿ ಕಾರಿದವರ ಪುಸ್ತಕಗಳನ್ನು.

ಓದಿದ್ದು, ಮನನ ಮಾಡಿದ್ದು ಈ ಪುಸ್ತಕಗಳನ್ನು. ಇವೇ ಹುಡುಗನ ಸಂಗಾತಿಗಳು. ಪರೀಕ್ಷೆಯ ಯೋಚನೆ ಎಲ್ಲಿ ಅವನಿಗೆ? ಹುಡುಗ ಉತ್ತೀರ್ಣನಾಗಲಿಲ್ಲ.

ಅ.ನ.ಕೃ. ತರಗತಿಯಲ್ಲಿ ಕಲಿಯುವುದು ಅಲ್ಲಿಗೆ ನಿಂತಿತು. ಆದರೆ ಜೀವನದುದ್ದಕ್ಕೂ ಅವರು ವಿದ್ಯಾರ್ಥಿಗಳೇ. ಕಡೆಯವರೆಗೆ ಓದಿದರು, ಕಲಿತರು, ಜನಕ್ಕೆ ಕಲಿಸಿದರು.

ಕಲಾ ಪ್ರಪಂಚದಲ್ಲಿ

ಅ.ನ.ಕೃ. ಅವರ ಮನೆಗೆ ನಟರು, ಕಲಾವಿದರು ಬರುತ್ತಿದ್ದರು. ನರಸಿಂಗರಾಯರು ಮಗನನ್ನು ನಾಟಕಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಅ.ನ.ಕೃ. ಬಾಲ್ಯದಿಂದಲೇ ಕಲೆ, ಸಾಹಿತ್ಯಗಳಲ್ಲಿ ಒಲವು ಬೆಳೆಸಿಕೊಂಡರು. ಒಂದೇ ರಾತ್ರಿಯಲ್ಲಿ ಮೂರಂಕದ “ಮದುವೆಯೋ ಮನೆಹಾಳೋ” ನಾಟಕವನ್ನು ಬರೆದು ಕೊಟ್ಟ ಸಂಗತಿಯನ್ನು ಆಗಲೇ ಹೇಳಿದೆ. ವರಚಾಚಾರ್ಯರು ಆ ನಾಟಕವನ್ನು ಮೆಚ್ಚಿದರು. ಆದರೆ ಆ ನಾಟಕ ಒಂದೇ ಗಂಟೆಯಲ್ಲಿ ಮುಗಿದುಹೋಗುತ್ತಿತ್ತು. ವರಚಾಚಾರ್ಯರಿಗೆ ಮೂರು ಗಂಟೆಗಳ ಕಾಲ ನಡೆಯುವಷ್ಟು ದೊಡ್ಡ ನಾಟಕ ಬೇಕಾಗಿತ್ತು. ಆದುದರಿಂದ ಅ.ನ.ಕೃ. ಬರೆದ ನಾಟಕವನ್ನು ಅವರು ಕೈಗೆತ್ತಿಕೊಳ್ಳಲಿಲ್ಲ. ಏನೇ ಆಗಲಿ ಅಂತೂ ಈ ನಾಟಕದಿಂದ ಅ.ನ.ಕೃ. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರವೇಶ ದೊರೆಯಿತು. ಮುಂದೆ ಐದು ವರ್ಷಗಳ ನಂತರ ೧೯೨೯ ರಲ್ಲಿ ಆ ನಾಟಕ ದ.ಕೃ. ಭಾರದ್ವಾಜರು ಸಂಪಾದಿಸುತ್ತಿದ್ದ “ರಂಗಭೂಮಿ” ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಅ.ನ.ಕೃ. “ರಂಗಭೂಮಿ”ಗೆ ಲೇಖನಗಳನ್ನು ಬರೆಯುತ್ತಿದ್ದರಲ್ಲದೆ ಪರೋಕ್ಷವಾಗಿ ಸಂಪಾದಕನ ಕೆಲಸವನ್ನೂ ಮಾಡುತ್ತಿದ್ದರು. ಇಲ್ಲಿ ಅವರಿಗೆ ಪತ್ರಿಕಾ ರಂಗದ ಅನುಭವವೂ ಸಾಕಷ್ಟು ಆಯಿತು.

ಈ ಸಮಯದಲ್ಲಿ ಕೆಲವು ಮಿತ್ರರು ಸೇರಿಕೊಂಡು “ಅಮೆಚೂರ್ ಮಂಡಳಿ”ಯೊಂದನ್ನು ಸ್ಥಾಪಿಸಿ ನಾಟಕಗಳನ್ನು ಆಡುತ್ತಿದ್ದರು. ಅ.ನ.ಕೃ. ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೈಲಾಸಂ, ಸಂಸ, ಬಳ್ಳಾರಿ ರಾಘವಾಚಾರ್ಯ, ಪಂಡಿತ ತಾರಾನಾಥ ಮೊದಲಾದವರ ಸಹವಾಸ ಅ.ನ.ಕೃ. ಅವರಿಗೆ ಈ ಸಂದರ್ಭದಲ್ಲಿ ದೊರೆಯಿತು.

ಕೃಷ್ಣರಾಯರು ಕಾಲೇಜು ವ್ಯಾಸಂಗ ಮಾಡಲಿಲ್ಲ. ಆದರೆ ಅವರ ಅಣ್ಣ ಮೈಸೂರಿನಲ್ಲಿ ಓದುತ್ತಿದ್ದರು. ಕೃಷ್ಣರಾಯರು ಮೈಸೂರಿಗೆ ಹೋದಾಗಲೆಲ್ಲ ತಮ್ಮ ಅಣ್ಣನೊಡನೆ ಕಾಲೇಜಿಗೆ ಹೋಗಿ ಬಿ.ಎಂ. ಶ್ರೀಕಂಠಯ್ಯನವರ ತರಗತಿಗಳಲ್ಲಿ ಕೂಡುತ್ತಿದ್ದರು. ಬಿ.ಎಂ.ಶ್ರೀ. ಶ್ರೇಷ್ಠ ಉಪನ್ಯಾಸಕರೆಂದು ಆಗ ಪ್ರಸಿದ್ಧರಾಗಿದ್ದರು. ಕೃಷ್ಣರಾಯರು ಮೈಸೂರಿನಲ್ಲಿದ್ದ ತಮ್ಮ ಅಕ್ಕನ ಮನೆಗೆ ಹೋದಾಗಲೆಲ್ಲ ಅರಮನೆಯ ಸಂಗೀತ ಕಾರ್ಯಕ್ರಮಗಳಿಗೆ ತಪ್ಪದೆ ಹೋಗುತ್ತಿದ್ದರು. ಹೀಗೆ ಸಂಗೀತದಲ್ಲೂ ಅವರಿಗೆ ಆಳವಾದ ಆಸಕ್ತಿ ಬೆಳೆಯಿತು. ಅವರು ಸಂಗೀತಾರ ಆಗದಿದ್ದರೂ ಕರ್ನಾಟಕ, ಹಿಂದೂಸ್ಥಾನಿ ಸಂಗೀತವನ್ನು ಸವಿಯಬಲ್ಲ ರಸಿಕರಾಗಿದ್ದರು.

ಶಾಂತಿನಿಕೇತನ

ಬಂಗಾಳದ ಪ್ರಖ್ಯಾತ ಕವಿ ರವೀಂದ್ರನಾಥ ಠಾಕೂರರು ಕರ್ನಾಟಕಕ್ಕೆ ಬಂದಿದ್ದಾಗ ಕೃಷ್ಣರಾಯರು ಅವರ ಕವಿತೆಯನ್ನು ಉತ್ಸಾಹದಿಂದ ಕೇಳಿದರು. ಆಗಿನಿಂದ ರವೀಂದ್ರತ ಸಾಹಿತ್ಯದಲ್ಲಿ ಕೃಷ್ಣರಾಯರ ಆಸಕ್ತಿ ಕೆರಳಿತು. ಅವರ ಪುಸ್ತಕಗಳನ್ನೆಲ್ಲಾ ಒಂದೊಂದನ್ನಾಗಿ ಓದಿಮುಗಿಸಿದರು. ಕೆಲವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಕಾಲದಲ್ಲಿ ರವೀಂದ್ರರು ಕಲ್ಕತ್ತೆಯಲ್ಲಿ “ಶಾಂತಿನಿಕೇತನ” ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿದ್ದರು. ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿ ಕೃಷ್ಣರಾಯರು ಶಾಂತಿನಿಕೇತನಕ್ಕೆ ಹೊರಟರು. ಅಲ್ಲಿಗೆ ಹೋಗಿ ಸೇರಿದ್ದಾಯಿತು. ಅಲ್ಲಿನ ಶಾಂತವಾದ ವಾತಾವರಣ ಕೃಷ್ಣರಾಯರಿಗೆ ಪ್ರಿಯವಾಯಿತು. ಅಲ್ಲಿ ಯಾವ ವಿಷಯದಲ್ಲಿ ಶಿಕ್ಷಣ ಪಡೆಯಬೇಕೆಂದು ಅವರು ನಿರ್ಧರಿಸಲಿಲ್ಲ. ಆದುದರಿಂದ ಅಲ್ಲಿದ್ದ ದೊಡ್ಡ ಪುಸ್ತಕ ಬಂಧಾರಡಲ್ಲಿ ತಮಗೆ ಬೇಕಾದ ಗ್ರಂಥವನ್ನು ಓದುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದರು.

ಒಂದು ಸಲ ಅವರು ಗುರುದೇವ ರವೀಂದ್ರರನ್ನು ಭೇಟಿಯಾದರು. ಕೃಷ್ಣರಾಯರು ಕರ್ನಾಟಕದವರೆಂದು ತಿಳಿಯುತ್ತಲೇ ರವೀಂದ್ರರು ಚಿತ್ರಕಲಾವಿದ ವೆಂಕಟಪ್ಪ, ವೀಣೆ ಶೇಷಣ್ಣ ಮತ್ತು ನಟ ವರದಾಚಾರ್ಯರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿಕೊಂಡರು. ಕನ್ನಡ ನಾಡಿನ ಈ ಮೂವರು ಹಿರಿಯ ಕಲಾವಿದರ ಬಗೆಗೆ ರವೀಂದ್ರರಿಗೆ ಇದ್ದ ಗೌರವ, ವಿಶ್ವಾಸಗಳನ್ನು ಕಂಡು ಅ.ನ.ಕೃ. ಹೃದಯ ಸಂತೋಷದಿಂದ ಹಿಗ್ಗಿತು. ಕರ್ನಾಟಕದ ವಿಷಯದಲ್ಲಿ ಅವರ ಅಭಿಮಾನ ಉಕ್ಕಿತು.

ಹೊಸ ದೇಶ, ಹೊಸ ಭಾಷೆ, ಹೊಸ ಜನಗಳ ನಡುವೆ ಅ.ನ.ಕೃ. ಅವರಿಗೆ ಹೊಸ ಹೊಸ ರೀತಿಯ ಅನುಭವಗಳಾಗತೊಡಗಿದವು. ಬಂಗಾಳಿಗಳಿಗೆ ತನ್ನ ನಾಡು, ಭಾಷೆ ಮತ್ತು ಕವಿಗಳ ವಿಷಯದಲ್ಲಿ ತುಂಬ ಅಭಿಮಾನವಿತ್ತು. ಅದನ್ನು ಕಂಡು ಅ.ನ.ಕೃ. ಅವರಲ್ಲಿ ಹುದುಗಿಕೊಂಡಿದ್ದ ಕನ್ನಡ ಅಭಿಮಾನ ಈಗ ಎಚ್ಚರಗೊಂಡಿತು.

ಗುರುದೇವರ ಎದುರಿನಲ್ಲಿ ಕನ್ನಡ ಕವಿ, ಸಂತರನ್ನು ಕುರಿತು ಭಾಷಣ ಮಾಡುವ ಅವಕಾಶವೂ ದೊರೆಯಿತು. ಶಾಂತಿನಿಕೇತನದಲ್ಲಿದ್ದುದರಿಂದ ಅ.ನ.ಕೃ. ಅವರಿಗೂ ಬಂಗಾಳದ ಮತ್ತು ಭಾರತದ ಹಿತಿಯ ಕವಿಗಳ ಮತ್ತು ಕಲಾವಿದರ ಕೃತಿಗಳ ಪರಿಚಯವಾಯಿತು.

ಕಥಾಂಜಲಿ”

ಶಾಂತಿನಿಕೇತನದಲ್ಲಿ ಓದಿ ಪದವಿ ಪಡೆಯಬೇಕೆಂಬ ಅವರ ಆಸೆ ಈ ವೇಳೆಗೆ ಇಲ್ಲವಾಗಿತ್ತು. ಕನ್ನಡ ಕೆಲಸವನ್ನು ಕೈಗೆತ್ತಿಕೊಳ್ಳುವ ಹಿರಿಯಾಸೆಯಿಂದ ಕೃಷ್ಣರಾಯರು ಕನ್ನಡ ನಾಡಿಗೆ ವಾಪಸು ಬಂದರು.

ಈ ವೇಳೆಗೆ ಅವರಿಗೆ ಪತ್ರಿಕಾರಂಗದಲ್ಲಿ ತಕ್ಕಮಟ್ಟಿಗೆ ಅನುಭವವಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ೧೯೨೮ ನೆಯ ಇಸವಿಯಲ್ಲಿ “ಕಥಾಂಜಲಿ” ಎಂಬ ಒಂದು ಮಾಸಪತ್ರಿಕೆಯನ್ನು ಆರಂಭಿಸಿದರು. ಸಣ್ಣ ಕಥೆಗೆ ಮೀಸಲಾಗಿದ್ದ ಈ ಪತ್ರಿಕೆ ಒಂದೆರಡು ತಿಂಗಳಲ್ಲೇ ಅಪೂರ್ವ ಕೀರ್ತಿ ಗಳಿಸಿತು. ಅದರ ಮುಖಾಂತರ ಹಲವಾರು ಕನ್ನಡ ಕಥೆಗಾರರು ಬೆಳಕಿಗೆ ಬಂದರು.

ಪತ್ರಿಕೋದ್ಯಮ-ಮದುವೆ

ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಜನಗಳಿಗೆ ಇರಲಿಲ್ಲ. “ಓದಲು ಯೋಗ್ಯವಾಗಿರುವ ಪುಸ್ತಕ ಕೊಳ್ಳಲೂ ಯೋಗ್ಯ” ಎಂಬ ಮಾತು ಓದುಗರಿಗೆ ಮನವರಿಕೆಯಾಗಿರಲಿಲ್ಲ. ಆದುದರಿಂದ “ಕಥಾಂಜಲಿ” ಉತ್ತಮ ಪತ್ರಿಕೆಯೆಂದು ಜನಪ್ರಿಯವಾದರೂ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಕೃಷ್ಣರಾಯರಿಗೆ ನಷ್ಟವಾಯಿತು. ಯಾವ ಉದ್ಯೋಗವೂ ಇಲ್ಲದೆ ತಂದೆಯವರ ಹಣದಿಂದಲೇ ತಮ್ಮ ಎಲ್ಲ ಸಾಹಸಗಳನ್ನೂ ನಡೆಸಿಕೊಂಡು ಬರುತ್ತಿದ್ದ ಕೃಷ್ಣರಾಯರು ಈಗ “ಕಥಾಂಜಲಿ”ಯನ್ನು ಬೇರೆಯವರಿಗೆ ವಹಿಸಿಕೊಟ್ಟರು. ಸ್ವಲ್ಪ ಕಾಲ ಅ.ನ.ಕೃ. ಮುಂಬಯಿಯ “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಕೆಲಸ ಮಾಡಿದರು. ಅನಂತರ ಬೆಂಗಳೂರಿಗೆ ಬಂದವರು ಬೇರೆ ಯಾವ ಉದ್ಯೋಗವನ್ನೂ ಕೈಗೊಳ್ಳಲಿಲ್ಲ. ಕನ್ನಡದ ಸೇವೆಯೇ ಅವರ ಬದುಕಾಯಿತು.

೧೯೩೧ ರಲ್ಲಿ ಹೈದರಾಬಾದಿನ ಪ್ರೊಫೆಸರ್ ಕೃಷ್ಣಸ್ವಾಮಿ ಯವರ ಮಗಳು ವಿಶಾಲಾಕ್ಷಿಯೊಡನೆ ಕೃಷ್ಣರಾಯರ ಮದುವೆಯಾಯಿತು. ಅವರು ತಮ್ಮ ಪತ್ನಿಗೆ ವಸಂತಾದೇವಿ ಎಂದು ಮರು ನಾಮಕರಣ ಮಾಡಿದರು. ಕಲೆ, ಸಾಹಿತ್ಯಗಳಲ್ಲಿ ತುಂಬ ಆಸಕ್ತಿ ಇದ್ದ ವಸಂತಾದೇವಿಯವರು ಕೃಷ್ಣರಾಯರಿಗೆ ಎಲ್ಲ ರೀತಿಯ ಸಹಕಾರ ನೀಡಿದರು. ಮನೆಯ ಕಡೆಯ ಯೋಚನೆ ಇಲ್ಲದ ಹಾಗೆ ಸಂಪೂರ್ಣವಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಮಗ್ನವಾಗಲು ಅ.ನ.ಕೃ. ಅವರಿಗೆ ಇದರಿಂದ ಸಾಧ್ಯವಾಯಿತು.

ಕಾದಂಬರಿಕಾರ

ಕನ್ನಡಕ್ಕಾಗಿ, ಕನ್ನಡ ನಾಡಿಗಾಗಿ, ಕನ್ನಡ ಜನತೆಗಾಗಿ ಅ.ನ.ಕೃ. ಎಷ್ಟು ರೀತಿಗಳಲ್ಲಿ ಕೆಲಸ ಮಾಡಿದರು, ಕನ್ನಡದ ಹಿತ, ಕನ್ನಡಿಗರ ಹಿತ ಎಂದರೆ ಮೈಯೆಲ್ಲ ಕಣ್ಣಾಗಿ ಎಚ್ಚರಿಗೆ ವಹಿಸಿದರು ಎಂಬುದನ್ನು ನೆನೆದರೆ ಬೆರಗಾಗುತ್ತೇವೆ.

ಅವರು ಸೃಷ್ಟಿಸಿದ ಸಾಹಿತ್ಯವೇ ಒಂದು ವಿಶಿಷ್ಟ ಕೊಡುಗೆ. ಕಾದಂಬರಿಕಾರರಾಗಿ ಅವರು ತುಂಬ ಜನಪ್ರಿಯರಾದರು.

೧೮೩೪ ರಲ್ಲಿ ಒಮ್ಮೆ ಪಂಡಿತ ತಾರಾನಾಥರು, ಸಮಾಜದಲ್ಲಿ ನಡೆದಿದ್ದ ಒಂದು ಕರುಣಾಜನಕ ಪ್ರಸಂಗವನ್ನು ವಿವರಿಸಿ ಅದರ ಮೇಲೆ ಒಂದು ಕಾದಂಬರಿಯನ್ನು ಕೃಷ್ಣರಾಯರು ಬರೆಯಬೇಕೆಂದು ಅಪೇಕ್ಷೆಪಟ್ಟರು. ಕೃಷ್ಣರಾಯರು ಬೆಂಗಳೂರಿಗೆ ಹಿಂತಿರುಗಿದ ಮೇಲೆ ಆ ವಿಷಯವನ್ನು ಎತ್ತಿಕೊಂಡು “ಜೀವನಯಾತ್ರೆ” ಎಂಬ ಒಂದು ಕಾದಂಬರಿಯನ್ನು ಬರೆದರು. ಇದೇ ಅವರ ಮೊದಲ ಕಾದಂಬರಿ.

ತಮ್ಮ ದಾರಿ, ಕಾದಂಬರಿಯ ರಚನೆಯಲ್ಲಿದೆ ಎಂದು ಅ.ನ.ಕೃ. ಕಂಡುಕೊಂಡರು. ೧೯೩೪ ರಲ್ಲಿ ಅವರ ಮೊದಲ ಕಾದಂಬರಿ ಪ್ರಕಟವಾದ ಮೇಲೆ ಅವರ ಲೇಖನಿಯಿಂದ ಒಂದಾದ ಮೇಲೆ ಒಂದರಂತೆ ಹೊಸ ಹೊಸ ಕಾದಂಬರಿಗಳು ಹೊರಬಂದರು. ೧೯೬೪ ರಲ್ಲಿ ಅವರ ನೂರನೆಯ ಕಾದಂಬರಿ “ಗರುಡ ಮಚ್ಚೆ” ಪ್ರಕಟವಾಯಿತು. ಕೃಷ್ಣರಾಯರು ತಮ್ಮ ಜೀವಿತದ ಅವಧಿಯಲ್ಲಿ ಸುಮಾರು ಇನ್ನೂರು ಪುಸ್ತಕಗಳನ್ನು ಬರೆದರು. ಅಂದರೆ ಸುಮಾರು ೨೫೦೦ ಮುದ್ರಿತ ಪುಟಗಳಷ್ಟು ಬರಹ. ಈ ಗಾತ್ರದ ಸಾಹಿತ್ಯ ಸೃಷ್ಟಿ ಮಾಡಿದವರು ಪ್ರಪಂಚದಲ್ಲಿ ಹೆಚ್ಚು ಜನ ಇರಲಾರರು. ಕೃಷ್ಣರಾಯರು ಸೃಷ್ಟಿಸಿದ ಪಾತ್ರಗಳು ಇಡೀ ಒಂದು ಊರನ್ನು ತುಂಬುವಷ್ಟು ಸಂಖ್ಯೆಯಲ್ಲಿವೆ.

ಬದುಕಿನ ಹಲವು ಮುಖಗಳನ್ನು ಆರಿಸಿಕೊಂಡು, ಅವುಗಳನ್ನು ಕುರಿತು ಆಳವಾಗಿ ಯೋಚಿಸಿ ಅವರು ಕಾದಂಬರಿಗಳನ್ನು ಬರೆಯುತ್ತಿದ್ದರು. ಸರಳವಾದ ಶೈಲಿ, ಸುಂದರವಾದ ಸಂಭಾಷಣೆಗಳಿಂದ ಅವರ ಕಾದಂಬರಿಗಳು ಸುಲಭವಾಗಿ ಓದಿಸಿಕೊಳ್ಳುತ್ತವೆ. ಎಷ್ಟೋ ಮಂದಿ ಕನ್ನಡಿಗರಿಗೆ ಪುಸ್ತಕದ ಓದಿನಲ್ಲಿ ರುಚಿ ಹುಟ್ಟಿದ್ದು ಅ.ನ.ಕೃ. ಅವರ ಕಥೆ, ಕಾದಂಬರಿಗಳನ್ನು ಓದಿದ್ದರಿಂದ ಎಂದರೆ ಉತ್ಪ್ರೇಕ್ಷೆಯಲ್ಲ- ಅಷ್ಟು ಆಕರ್ಷಕವಾಗಿತ್ತು ಅವರ ಕಥೆ ಹೇಳುವ ರೀತಿ, ಅವರ ಶೈಲಿ.

ಕೃಷ್ಣರಾಯರು ಗಂಡುಗಲಿ. ಬೇರೆಯವರು ಬರೆಯಲು ಹೆದರುತ್ತಿದ್ದ ವಸ್ತುಗಳನ್ನು ಎತ್ತಿಕೊಂಡು ತಾವು ಕಾದಂಬರಿಗಳನ್ನು ಬರೆದರು. ಸಮಾಜವನ್ನು ಪೀಡಿಸುವ ಹಲವಾರು ಸಮಸ್ಯೆಗಳನ್ನು ನಿಸ್ಸಂಕೋಚದಿಂದ ತಮ್ಮ ಕಾದಂಬರಿಗಳಲ್ಲಿ ಚರ್ಚಿಸಿದರು. ವಿಮರ್ಶಕರು ಅವನ್ನು ಟೀಕಿಸಿದಾಗ ತಮ್ಮ ನಿಲುಮೆಯನ್ನು ಸಮರ್ಥವಾಗಿ ವಿವರಿಸಿದರು.

ಅವರ ಕಾದಂಬರಿಗಳು ಸಾಹಿತ್ಯ ಪ್ರಪಂಚದಲ್ಲಿ ವಿಶೇಷವಾದ ಸ್ಥಾನವನ್ನು ಗಳಿಸಿದವು. ಕನ್ನಡ ಓದುಗರು ಅವರ ಹೊಸ ಕಾದಂಬರಿಗಳಿಗೆ ಹಾತೊರೆಯುವಂತಾಯಿತು. ಅವರ ಶ್ರೇಷ್ಠ ಕಾದಂಬರಿಯೆಂದು ವಿಮರ್ಶಕರು ಒಪ್ಪಿರುವ “ಸಂಧ್ಯಾರಾಗ” ಅವರ ಮೂವತ್ತನೆಯ ವಯಸ್ಸಿನಲ್ಲಿ ಬರೆದದ್ದು. “ನಟ ಸಾರ್ವಭೌಮ”, “ಆಶೀರ್ವಾದ”, “ಅನುಗ್ರಹ”, “ಗೃಹಲಕ್ಷ್ಮಿ”, “ಸಾಹಿತ್ಯರತ್ನ”, “ಮಂಗಳ ಸೂತ್ರ” ಮುಂತಾದ ಹಲವಾರು ಕಾದಂಬರಿಗಳು ತುಂಬ ಜನಪ್ರಿಯವಾದವು. ವಿಜಯನಗರ ಸಾಮ್ರಾಜ್ಯಕ್ಕೆ ಹತ್ತು ಸಂಪುಟಗಳಲ್ಲಿ ತಮ್ಮ ಲೇಖನಿಯ ಶಕ್ತಿಯಿಂದ ಮತ್ತೆ ಜೀವ ಕೊಟ್ಟಿದ್ದಾರೆ.

ಬಹುಮುಖ ಸಾಹಿತ್ಯ ಸೇವೆ

ಕಥೆ, ಕಾದಂಬರಿಗಳನ್ನಲ್ಲದೆ ಅ.ನ.ಕೃ. ನಾಟಕಗಳನ್ನೂ ಬರೆದಿದ್ದಾರೆ. “ಗೋಮುಖ ವ್ಯಾಘ್ರ”, “ಜಗಜ್ಯೋತಿ ಬಸವೇಶ್ವರ”, “ಸ್ವರ್ಣ ಮೂರ್ತಿ”, “ರಜಪೂತ ಲಕ್ಷ್ಮಿ”. ಮೊದಲಾದ ಹಲವು ಒಳ್ಳೆಯ ನಾಟಕಗಳನ್ನು ಬರೆದರು. ಜನರು ತಾವು ಬರೆದದ್ದನ್ನು ಓದಬೇಕು ಎಂದಷ್ಟೆ ಅವರ ಬಯಕೆಯಲ್ಲ. ಎಲ್ಲ ಒಳ್ಳೆಯ ಸಾಹಿತ್ಯವನ್ನು ಓದಬೇಕು ಎಂದು ಅವರ ಬಯಕೆ. ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಅವರು ಒಂದು ದೊಡ್ಡ ಕೆಲಸವನ್ನು ಮಾಡಿದರು. ಕನ್ನಡದ ಇಪ್ಪತ್ತನಾಲ್ಕು ಮಂದಿ ಕಥೆಗಾರರ ಒಂದೊಂದು ಒಳ್ಳೆಯ ಕಥೆಗಳನ್ನು ಆರಿಸಿ, ತಾವೇ ಒಂದು ಒಳ್ಳೆಯ ಮುನ್ನುಡಿ ಬರೆದು, “ಕಾಮನ ಬಿಲ್ಲು” ಎಂಬ ದೊಡ್ಡ ಸಂಕಲನವನ್ನು ಪ್ರಕಟಿಸಿದರು. “ಕಾಮನ ಬಿಲ್ಲು” ನ ಎರಡನೆಯ ಭಾಗದಲ್ಲಿ ತಮಿಳು, ತೆಲುಗು, ಹಿಂದಿ, ಉರ್ದು ಮೊದಲಾದ ಒಂಬತ್ತು ಭಾರತೀಯ ಭಾಷೆಗಳಿಂದ ಅನುವಾದಿಸಿದ ೨೭ ಕಥೆಗಳಿವೆ. ಸಾಹಿತ್ಯ ಎಂದರೇನು, ಅದರ ಫಲವೇನು ಮೊದಲಾದ ಮುಖ್ಯ ಪ್ರಶ್ನೆಗಳನ್ನು ತೆಗೆದುಕೊಂಡು “ಸಾಹಿತ್ಯ ಮತ್ತು ಜೀವನ”, “ಸಜೀವ ಸಾಹಿತ್ಯ”, “ಸಾರ್ಥಕ ಸಾಹಿತ್ಯ” ಮೊದಲಾದ ಪುಸ್ತಕಗಳಲ್ಲಿ ಕೂಲಂಕುಷವಾಗಿ ಪರಿಶೀಲಿಸಿದರು. ವೀರಶೈವ ಸಾಹಿತ್ಯ ಮತ್ತು ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ್ದ ಅವರು “ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ” “ಬಸವಣ್ಣನವರ ಅಮೃತವಾಣಿ” ಮೊದಲಾದ ಕೃತಿಗಳಲ್ಲಿ ತಮ್ಮ ಅಧ್ಯಯನದ ಫಲವನ್ನು ಕನ್ನಡಿಗರಿಗೆ ಧಾರೆ ಎರೆದರು. ಒಳ್ಳೆಯದು ಎಲ್ಲಿದ್ದರೂ ನಮ್ಮದು, ನಮ್ಮ ಮನಸ್ಸಿನ ಮನೆಗೆ ಎಲ್ಲಿಂದ ಒಳ್ಳೆಯ ಗಾಳಿ ಬೆಳಕು ಬಂದರೂ ಏಕೆ ಬೇಡ ಎಂಬ ವಿಶಾಲ ಭಾವನೆಯ ಅ.ನ.ಕೃ. ಭಗವದ್ಗೀತೆಯನ್ನೂ ಜನಕ್ಕೆ ಪರಿಚಯ ಮಾಡಿಕೊಟ್ಟರು. ರಷ್ಯಾ ದೇಶದ ಮ್ಯಾಕ್ಸಿಂ ಗಾರ್ಕಿಯನ್ನೂ ಪರಿಚಯ ಮಾಡಿಕೊಟ್ಟರು. “ಸ್ವಾಮಿ ವಿವೇಕಾನಂದ”, “ಭಾರತದ ಬಾಪೂ”, “ದೀನಬಂಧು ಕಬೀರ” ಮೊದಲಾದ ಜೀವನ ಚರಿತ್ರೆಗಳನ್ನೂ ರಚಿಸಿದರು. ಕನ್ನಡ ನಾಡಿನ ವೈಭವ, ಕನ್ನಡ ನಾಡಿನ ಪುಣ್ಯ ಜೀವಿಗಳ ಹಿರಿಮೆ, ಅವರ ಸಂದೇಶ ಇವು ಚಿಕ್ಕ ವಯಸ್ಸಿನ ಕನ್ನಡ ಮಕ್ಕಳಿಗೆ ನಿಲುಕುವಂತೆ ಮಾಡಲು ಪ್ರಾರಂಭವಾದ “ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆ” ಪುಸ್ತಕ ಮಾಲೆಗೆ ಮೊದಲೆಯ ಪ್ರಧಾನ ಸಂಪಾದಕರಾಗಿದ್ದರು.

ತಮ್ಮ ಸಾಹಿತ್ಯದಲ್ಲೆಲ್ಲ ಅವರು ತುಂಬಾ ಬೆಲೆಕೊಟ್ಟದ್ದು ಮನುಷ್ಯನ ಅಂತಃಕರಣಕ್ಕೆ, ಸಂಸ್ಕೃತಿಗೆ, ಶ್ರೀಮಂತರಲ್ಲಾಗಲಿ, ವಿದ್ವಾಂಸರಲ್ಲಾಗಲಿ, ಹಳ್ಳಿಯ ರೈತರಲ್ಲಾಗಲಿ, ಅ.ನ.ಕೃ. ನಿರ್ಮಲ ವಿಶ್ವಾಸಕ್ಕೆ, ಸುಸಂಸ್ಕೃತ ಬಾಳಿಗೆ ಪ್ರಣಾಮ ಮಾಡಿದರು. ತಂದೆ ತಾಯಿಯ ಪ್ರೀತಿ, ಹೆಂಡತಿಯ ಪ್ರೀತಿ, ಮಕ್ಕಳ ಪ್ರೀತಿ, ಗೆಳೆಯರ ವಿಶ್ವಾಸ, ದೇಶಪ್ರೇಮ, ಮನುಷ್ಯ-ಮನುಷ್ಯರ ನಡುವೆ ಅಂತಃಕರಣದ ಬಾಂಧವ್ಯ ಇವು ಹೃದಯವನ್ನು ಮುಟ್ಟುವಂತೆ ಅ.ನ.ಕೃ. ಚಿತ್ರಿಸಿದ್ದಾರೆ.

ಪ್ರಗತಿ ಶೀಲ ಚಳವಳಿ

ಅ.ನ.ಕೃ. “ಪ್ರಗತಿಶೀಲ ಚಳವಳಿ” ಎಂಬ ಚಳವಳಿಯ ಮುಖಂಡರಾದರು. ಈ ಸಮಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೆಚ್ಚಾಗಿ ಉಚ್ಚವರ್ಗ ಮತ್ತು ಮಧ್ಯಮವರ್ಗದವರ ಜೀವನ ಚಿತ್ರಣವೇ ಹೆಚ್ಚಾಗಿತ್ತು. ಕೆಳವರ್ಗದವರ ಬದುಕನ್ನು ಹತ್ತಿರದಿಂದ ನೋಡಿ ಅವರ ಸಮಸ್ಯೆಗಳನ್ನು ಬಿಚ್ಚಿ ತೋರಿಸುವ ಸಾಹಿತ್ಯ ಕೃತಿಗಳು ಇರಲಿಲ್ಲ. ಇದನ್ನು ಮನಗಂಡು ಅ.ನ.ಕೃ. ತಮ್ಮ ಸಾಹಿತ್ಯ ಮಿತ್ರರ ಜೊತೆಗೆ ಸೇರಿಕೊಂಡು ಪ್ರಗತಿಶೀಲ ಚಳವಳಿಯನ್ನು ಆರಂಭಿಸಿದರು. ನಮ್ಮ ಸುತ್ತಮುತ್ತ ಎಷ್ಟೊಂದು ಬಡತನ, ಮೋಸ, ದಗಾಕೋರತನ, ನೋವು, ಆಷಾಢಭೂತಿತನ ಕಾಣುತ್ತೇವೆ! ಸಾಹಿತ್ಯ ಮೋಸ, ದಗಾಕೋರತನ, ನೋವು, ಆಷಾಢಭೂತಿತನಗಳಿಗೆ ಛಾಟಿ ಏಟು ಬಿಗಿಯಬೇಕು. ಬಡವರ ಮತ್ತು ಕೆಳಕ್ಕೆ ಬಿದ್ದವರ ಕಷ್ಟ-ನೋವುಗಳನ್ನು ಚಿತ್ರಿಸಬೇಕು. ಸಮಾಜದ ಕ್ರಾಂತಿಗೆ ನಾಯಕನಾಗಬೇಕು ಸಾಹಿತಿ ಎಂಬುದು ಅವರ ದೃಷ್ಟಿ. ಈ ಧೋರಣೆಗೆ ಅನುಗುಣವಾದ ಪುಸ್ತಕಗಳು ಪ್ರಕಟವಾಗತೊಡಗಿದವು.

ಭಾರತ ದರ್ಶನ

ಅ.ನ.ಕೃ. ಸಾಹಿತ್ಯದಲ್ಲಿ ಮಾತ್ರ ಆಸಕ್ತಿ ವಹಿಸಿದವರಲ್ಲ. ಚಿತ್ರಕಲೆ, ಸಂಗೀತ, ನೃತ್ಯ, ಚಲನಚಿತ್ರ ಎಲ್ಲ ಕಲೆಗಳಲ್ಲಿ ಅವರಿಗೆ ಆಸಕ್ತಿ. “ಕನ್ನಡ ಕುಲರಸಿಕರು”, “ಕರ್ನಾಟಕದ ಕಲಾವಿದರು” ಮೊದಲಾದ ಕೃತಿಗಳಲ್ಲಿ ಬೇರೆ ಬೇರೆ ಕಲೆಗಳಿಗಾಗಿ ಬಾಳನ್ನೇ ತೇಯ್ದ ಕಲಾವಿದರನ್ನೂ ರಸಿಕರನ್ನೂ ಚಿತ್ರಿಸಿದ್ದಾರೆ. “ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ” ಎನ್ನುವ ವಿಮರ್ಶಾ ಗ್ರಂಥವನ್ನು ರಚಿಸಿದ್ದಾರೆ. ಚಿತ್ರಕಲೆಯ ಇಂತಹ ವಿಮರ್ಶೆಯ ಗ್ರಂಥ ಕನ್ನಡದಲ್ಲಿ ಇದೇ ಮೊದಲನೆಯದೇನೋ! ಅವರು ಸಂಪಾದಕರಾಗಿ ಎರಡು ಪುಸ್ತಕಗಳನ್ನು ಸಿದ್ಧಮಾಡಿಕೊಟ್ಟರು- “ಭಾರತೀಯ ಕಲಾದರ್ಶನ” ಮತ್ತು “ಭಾರತೀಯ ಸಂಸ್ಕೃತಿ”. ಇಡೀ ಭಾರತದ ಕಲೆಗಳ ಮತ್ತು ಸಂಸ್ಕೃತಿಯ ಸಂಪತ್ತು ಇಲ್ಲಿ ಕಣ್ಣಮುಂದೆ ನಿಲ್ಲುತ್ತದೆ. ಭಾರತೀಯರ ನಿಜವಾದ ಭಾಗ್ಯದ ದರ್ಶನ ಇಲ್ಲಿ ಆಗುತ್ತದೆ.

ತಮ್ಮ ನಾಟಕ, ಸಣ್ಣ ಕಥೆ ಮತ್ತು ವಿಮರ್ಶೆಗಳಿಂದ ಕೃಷ್ಣರಾಯರು ಚಿಕ್ಕ ವಯಸ್ಸಿನಲ್ಲೇ ಕನ್ನಡನಾಡಿನ ಸಾಹಿತ್ಯ ವಲಯದಲ್ಲಿ ಹೆಸರಾಗಿದ್ದರು. ೧೯೨೯ ರಲ್ಲಿ ಧಾರವಾಡದಲ್ಲಿ ನಾಟಕ ಸಮ್ಮೇಳನ ನಡೆಯಿತು. ಕೃಷ್ಣರಾಯರ “ಮದುವೆಯೋ ಮನೆಹಾಳೋ” ಪ್ರದರ್ಶನವಿತ್ತು. ಕಡೆಯ ಗಳಿಗೆಯಲ್ಲಿ ನಟರೊಬ್ಬರಿಗೆ ಕಾಯಿಲೆಯಾಗಿ ಅವರು ಅಭಿನಯ ಮಾಡಲು ಆಗಲಿಲ್ಲ. ಇನ್ನೇನು, ನಾಟಕವೇ ನಿಲ್ಲಬೇಕು; ಕೃಷ್ಣರಾಯರೇ ಪಾತ್ರವನ್ನು ವಹಿಸಿಕೊಂಡು ಸೊಗಸಾಗಿ ಅಭಿನಯಿಸಿದರು. ಅವರ ಹೆಸರು ಇನ್ನೂ ಪ್ರಸಿದ್ಧವಾಯಿತು. ಹಲವಾರು ಊರುಗಳಿಂದ ಭಾಷಣ ಮಾಡಲು ಆಹ್ವಾನಗಳು ಬಂದವು.

ಕನ್ನಡವೇ ಉಸಿರು, ಕನ್ನಡಕ್ಕಾಗಿ ಉಸಿರು

ಪ್ರಾಯಶಃ ಅ.ನ.ಕೃ. ಭೇಟಿ ಕೊಡದಿದ್ದ ಊರು ಕನ್ನಡನಾಡಿನಲ್ಲೇ ಇಲ್ಲ. ಸುಮಾರು ನಲವತ್ತು ವರ್ಷಗಳ ಕಾಲ ಅವರು ಬಿಸಿಲು-ಮಳೆ ಎನ್ನದೆ, ಅನಾರೋಗ್ಯ ಲೆಕ್ಕಿಸದೆ ನಾಡಿದ ಮೂಲೆ ಮೂಲೆಗೂ ಹೋದರು. ಕನ್ನಡ ಸಾಹಿತ್ಯವನ್ನೂ ಈ ನೆಲದ ಸಂಸ್ಕೃತಿಯನ್ನೂ ಪರಿಚಯ ಮಾಡಿಕೊಟ್ಟರು. ಕನ್ನಡಕ್ಕೆ ಅನ್ಯಾಯವಾಗಬಹುದು ಎಂಬ ಸುಳಿವು ಕಾಣುತ್ತಲೇ ಜನರನ್ನು ಎಚ್ಚಿರಿಸಿದರು. ಇದಕ್ಕಾಗಿ ಅವರು ಅಲೆದ ದೂರ ಲೆಕ್ಕವಿಲ್ಲ. ಪಟ್ಟ ಶ್ರಮ ವಿವರಿಸಲು ಸಾಧ್ಯವಿಲ್ಲ. ಕಟ್ಟಿದ ಮತ್ತು ನೆರವಾದ ಸಂಸ್ಥೆಗಳು ಎಷ್ಟೋ!

ಕನ್ನಡದ ಆಚಾರ್ಯರು ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕಾಲದಲ್ಲೇ ಅ.ನ.ಕೃ. ಅವರಿಗೂ ಪರಿಷತ್ತಿಗೂ ನಿಕಟ ಸಂಪರ್ಕ ಬೆಳೆಯಿತು. ಆಗಿನ ಕನ್ನಡ, ಇಂಗ್ಲಿಷ್ ಪತ್ರಿಕೆಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸುದ್ಧಿಗಳು ಹೆಚ್ಚಾಗಿ ಬರುತ್ತಿರಲಿಲ್ಲ. ಆದುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಒಂದು ಪತ್ರಿಕೆಯನ್ನು ಹೊರಡಿಸ ಬೇಕೆಂದು ಶ್ರೀಕಂಠಯ್ಯನವರು ಯೋಚಿಸಿದರು. ತಮ್ಮ ಪತ್ರಿಕಾ ಸಾಹಸಗಳಿಂದ ಆ ಕ್ಷೇತ್ರದಲ್ಲಿ ತಮಗಿದ್ದ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದ ಕೃಷ್ಣರಾಯರಿಗೇ ಅದನ್ನು ಸಂಪಾದಿಸುವ ಹೊಣೆ ಬಿತ್ತು. “ಕನ್ನಡ ನುಡಿ” ವಾರಪತ್ರಿಕೆಯಾಗಿ ೧೯೨೯ ರಲ್ಲಿ ಆರಂಭವಾಯಿತು. ಕನ್ನಡ ನಾಡಿನ ಕನ್ನಡ ಚಟುವಟಿಕೆಗಳಿಗೆ “ಕನ್ನಡ ನುಡಿ” ಯಲ್ಲಿ ಪ್ರಮುಖ ಸ್ಥಾನ. ಒಂದು ವರ್ಷ ಅ.ನ.ಕೃ. ಈ ಪತ್ರಿಕೆಯ ಸಂಪಾದಕರಾಗಿದ್ದರು.

ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ೧೯೬೨ ರಲ್ಲಿ ಅವರು “ಸಂಯುಕ್ತರಂಗ” ಎಂಬ ಸಂಸ್ಥೆ ಆರಂಭಿಸಿದರು. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಪುರಸ್ಕಾರವಿಲ್ಲ. ಕನ್ನಡ ಕಲಾವಿದರು, ಸಂಗೀತಗಾರರು ಇಲ್ಲಿ ಅನಾಥರಾಗಿದ್ದರು. ಇತರ ಪ್ರಾಂತದವರಿಗೇ ಪುರಸ್ಕಾರ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಕನ್ನಡಿಗರಿಗಿಂತ ಕನ್ನಡೇತರರಿಗೇ ಪ್ರಾತಿನಿಧ್ಯ ಹೆಚ್ಚಾಗಿತ್ತು. ಇಲ್ಲಿನ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇತ್ತು. ಇಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಿತ್ರಗಳು ನಡೆಯುತ್ತಿರಲಿಲ್ಲ. ಇಲ್ಲಿನ ಸಂಗೀತ ಕಚೇರಿಗಳಲ್ಲಿ ಸ್ಥಳೀಯ ಸಂಗೀತಗಾರರಿಗೆ ಹಾಡಲು ಅವಕಾಶ ದೊರೆಯುತ್ತಿರಲಿಲ್ಲ. ಅ.ನ.ಕೃ.ಇದನ್ನು ವಿರೋಧಿಸಿದರು. ಮೊದಲು ಮನೆಯ ಮಕ್ಕಳಿಗೆ ಅನ್ನ ಹಾಕಿ, ಆಮೇಲೆ ಉಳಿದವರಿಗೆ ಬಡಿಸಿ ಎಂದು ಅವರು ಹೇಳುತ್ತಿದ್ದರು.

ಅ.ನ.ಕೃ. ತಮ್ಮ ಸ್ನೇಹಿತರೊಡನೆ ಎಲ್ಲ ಕಡೆ ಸುತ್ತಿ ಭಾಷಣಗಳನ್ನು ಮಾಡಿ ಜನರಿಗೆ ಅವರ ಕರ್ತವ್ಯವೇನೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಅವರು ಕನ್ನಡಿಗರಿಗೆ, “ಕನ್ನಡ ಪುಸ್ತಕಗಳನ್ನು ಓದಬೇಕು. ಕನ್ನಡ ಗೀತೆಗಳನ್ನು ಹಾಡಬೇಕು. ಕನ್ನಡ ಚಿತ್ರಗಳನ್ನು ನೋಡಬೇಕು. ಕನ್ನಡಗರಿಗೆ ಕನ್ನಡವೇ ದೇವರು” ಎಂಬ ತಾರಕಮಂತ್ರವನ್ನು ಉಪದೇಶಿಸಿದರು.

ಅ.ನ.ಕೃ. ಒಂದೇ ಸಮನೆ ನಡೆಸಿದ ಈ ಹೋರಾಟದಿಂದ ಕನ್ನಡಿಗರು ಎಚ್ಚೆತ್ತರು. ಪರಿಸ್ಥಿತಿ ಬದಲಾಯಿತು. ಈ ಹೋರಾಟದಲ್ಲಿ ಮುಂದಾಳಾಗಿ ನಿಂತ ಕೃಷ್ಣರಾಯರಿಗೆ “ಕನ್ನಡ ಸೇನಾನಿ” ಎಂಬ ಹೆಸರು ಬಂದಿತು.

ಹಲವು ದೀಪಗಳನ್ನು ಹೊತ್ತಿಸಿದ ಉಪಕಾರಿ ದೀಪ ಅ.ನ.ಕೃ. ತಮ್ಮೆಡೆಗೆ ಬಂದ ಕಿರಿಯ ಲೇಖಕರಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೋಡುತ್ತಿದ್ದ ಕೃಷ್ಣರಾಯರದು ಮತ್ಸರವಿಲ್ಲದ ತಿಳಿಯಾದ ಮನಸ್ಸು. ಹೊಸ ಲೋಖಕರು ಚೆನ್ನಾಗಿರುವ ಏನಾದರೊಂದನ್ನು ಬರೆದರೆ ಅದನ್ನು ಎಲ್ಲರೆದುರು ಬಾಯಿ ತುಂಬ ಹೊಗಳುತ್ತಿದ್ದರು. ಎಷ್ಟೋ ಜನರ ಪುಸ್ತಕಗಳು ಪ್ರಕಟವಾಗಲು ಅವರು ಸಹಾಯ ಮಾಡಿದರು. ಇಂದು ಪ್ರಸಿದ್ಧರಾಗಿರುವ ಹಲವು ಮಂದಿ ಸಾಹಿತಿಗಳು ಅವರ ಪ್ರೋತ್ಸಾಹದಿಂದಲೇ ಮುಂದೆ ಬಂದವರು.

ಆದರೆ ಅ.ನ.ಕೃ. ಒಂದು ಮಾತನ್ನು ಹೇಳಿದ್ದಾರೆ:

“ಸಾಹಿತ್ಯವನ್ನು ಒಂದು ತಪಸ್ಸೆಂದು ಭಾವಿಸಿ ತರುಣ ಸಾಹಿತಿಗಳು ತಮ್ಮ ಗುರಿಯನ್ನು ನಿರ್ದೇಶಿಸಿಕೊಳ್ಳಬೇಕು……… ಅನುಭವ, ಅಭ್ಯಾಸಗಳ ಕೊರತೆಯನ್ನು ತುಂಬಲೆತ್ನಿಸುವುದು ತರವಲ್ಲ”.

ಸಾಹಸ

ಸ್ವಂತ ಕೃತಿಗಳ ರಚನೆಯ ಜೊತೆಗೆ ಕನ್ನಡ ಪತ್ರಿಕೋದ್ಯಮಕ್ಕೆ ಅ.ನ.ಕೃ. ಸಲ್ಲಿಸಿದ ಕಾಣಿಕೆ ಕೂಡ ಮುಖ್ಯವಾದುದ್ದು. “ಕಥಾಂಜಲಿ” ಪ್ರಾರಂಭಿಸಿ ಕನ್ನಡದಲ್ಲಿ ಹೊಸ ಬಗೆಯ ಪತ್ರಿಕೆಯನ್ನು ತಂದುಕೊಟ್ಟರು. ಕೆಲವು ಅತ್ಯತ್ತಮ ಇಂಗ್ಲಿಷ್ ಪತ್ರಿಕೆಗಳನ್ನು ಓದುತ್ತಿದ್ದ ಅವರು ಅದೇ ಮಾದರಿಯಲ್ಲಿ ಕನ್ನಡದಲ್ಲೂ ಒಂದು ಮಾಸಪತ್ರಿಕೆಯನ್ನು ಪ್ರಕಟಿಸಬೇಕೆಂದು ಆಸೆಪಟ್ಟರು. ಸುಂದರವಾದ “ವಿಶ್ವವಾಣಿ” ೧೯೩೬ ರಲ್ಲಿ ಅವತರಿಸಿತು. ಪ್ರಪಂಚದ ವಿವಿಧ ಮೂಲೆಗಳಲ್ಲಿದ್ದ ಬೇರೆ ಬೇರೆ ಭಾಷೆಗಳ ಲೇಖಕರೊಡನೆ ಸಂಪರ್ಕ ಇಟ್ಟುಕೊಂಡು ಅವರಿಂದ ಲೇಖನಗಳನ್ನು ತರಿಸಿ, ಅನುವಾದಿಸಿ ತಮ್ಮ ಪತ್ರಿಕೆಯಲ್ಲಿ ಅ.ನ.ಕೃ. ಪ್ರಕಟಿಸುತ್ತಿದ್ದರು. “ವಿಶ್ವವಾಣಿ” ಜನಪ್ರಿಯವಾದರೂ ಅ.ನ.ಕೃ.ಗೆ ನಾಲ್ಕೈದು ಸಾವಿರ ರೂಪಾಯಿ ನಷ್ಟವಾಗಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.

ಅ.ನ.ಕೃಷ್ಣರಾಯರಿಗೆ ಅವರ ಮೂವತ್ತಾರನೆಯ ವಯಸ್ಸಿನಲ್ಲಿಯೇ ರಬಕವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಬೇಕೆಂದು ಆಹ್ವಾನ ಬಂದಿತ್ತು. ಆದರೆ ತಮಗಿಂತ ಹಿರಿಯರಾದ ಹಲವಾರು ಲೇಖಕರು ಇನ್ನೂ ಅಧ್ಯಕ್ಷರಾಗದೆ ಇರುವಾಗ ತಾವು ಆಗುವುದು ಸರಿಯಲ್ಲವೆಂದು ಅವರು ಆ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

೧೯೬೦ ರಲ್ಲಿ ಮಣಿಪಾಲದಲ್ಲಿ ನಡೆದ ೪೭ನೆಯ ಸಾಹಿತ್ಯ ಸಮ್ಮೇಳನದಲ್ಲಿ ಅ.ನ.ಕೃಷ್ಣರಾಯರಿಗೆ ಅಧ್ಯಕ್ಷ ಪದವಿಯನ್ನು ನೀಡಿ ಕನ್ನಡ ಜನತೆ ಅವರನ್ನು ಗೌರವಿಸಿತು. ಕನ್ನಡ ಸಾಹಿತಿಯ ಬದುಕಿನಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದು ಒಂದು ಮಹತ್ವದ ಘಟನೆ.

 

ಮಣಿಪಾಲದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಸೇವೆ-ಸನ್ಮಾನ

ಮಟ್ಟಸವಾದ ಎತ್ತರ; ನೀಳವಾದ ಮುಖ; ಹಣೆಯ ಮೇಲೆ ಗೊಂಚಲಾಗಿ ಬೀಳುವ ಉದ್ದ ಕೂದಲು; ಜುಬ್ಬ; ಅರ್ಧಕೋಟು, ಪಾಯಿಜಾಮಧಾರಿ, ಹದವಾದ ಕಂಠ, ಕೃಷ್ಣರಾಯರದು ಜನರನ್ನು ಥಟ್ಟನೆ ಆಕರ್ಷಿಸುವ ವ್ಯಕ್ತಿತ್ವ. ವೇದಿಕೆಯ ಮೇಲೆ ಮಾತಿಗೆ ನಿಂತರೆ ಮೂರು ನಾಲ್ಕು ಗಂಟೆಗಳ ಕಾಲ ನಿಲ್ಲಿಸದೆ, ಒಂದೇ ಸಮನೆ ಭಾಷಣ ಮಾಡುತ್ತಿದ್ದರು. ಯಾವ ಟಿಪ್ಪಣಿಯ ಸಹಾಯವಿಲ್ಲದೆ ಒಂದಾದಮೇಲೊಂದರಂತೆ ಅನುಕ್ರಮವಾಗಿ ವಿಷಯವನ್ನು ಪ್ರತಿಪಾದಿಸುತ್ತಿದ್ದರು. ಒಳ್ಳೆಯ ಅಭಿರುಚಿಯ ಸೊಗಸಾದ ಹಾಸ್ಯಪ್ರಜ್ಞೆ. ಸಂದರ್ಭಕ್ಕೆ ತಕ್ಕಹಾಗೆ ಸೂಕ್ತವಾದ ಪದಗಳು ಅವರಿಗೆ ತಾನೇತಾನಾಗಿ ಒದಗಿಬರುತ್ತಿದ್ದವು. ಎಲ್ಲೂ ತಪ್ಪದೆ, ತೊಡರದೆ ಕೇಳುವವರು ಬೆರಗಾಗುವ ಹಾಗೆ ಮಾತನಾಡುತ್ತಿದ್ದರು. ಅವರ ಭಾಷಣ ಒಣ ಭಾಷಣವಾಗಿರದೆ ವಿಚಾರ ಶಕ್ತಿಯನ್ನು ಪ್ರಚೋದಿಸುವ ಹಾಗಿರುತ್ತಿತ್ತು. ತಮ್ಮ ವಿಷಯ ಪ್ರತಿಪಾದನೆಗೆ ಪೂರಕವಾಗಿ ಬೇರೆ ಬೇರೆ ಭಾಷೆಯ ಸಾಹಿತಿಗಳ, ವಿದ್ವಾಂಸರ ಮಾತುಗಳನ್ನು ಎತ್ತಿಕೊಡುತ್ತಿದ್ದರು. ಅವರ ಮಾತಿನಿಂದ ಅವರ ವ್ಯಾಸಂಗ ಎಷ್ಟು ವಿಶಾಲವಾಗಿ, ವ್ಯಾಪಕವಾಗಿ ನಡೆದಿರಬೇಕೆಂದು ಗೊತ್ತಾಗುತ್ತಿತ್ತು. ಕಾಲೇಜಿನ ವಿದ್ಯಾಭ್ಯಾಸವನ್ನು ಒಂದೇ ವರ್ಷಕ್ಕೆ ನಿಲ್ಲಿಸಿದರೂ ಇಂಗ್ಲಿಷ್‌ ಭಾಷೆಯಲ್ಲಿ ಅ.ನ.ಕೃ. ಎಷ್ಟು ನಿರರ್ಗಳವಾಗಿ, ಸರಿಯಾಗಿ ಪದಗಳನ್ನು ಲೀಲಾಜಾಲವಾಗಿ ಬಳಸುತ್ತ ಮಾತನಾಡುತ್ತಿದ್ದರು ಎಂಬುದು ಇಂಗ್ಲಿಷ್ ವಿದ್ವಾಂಸರಿಗೂ ಅಚ್ಚರಿಯನ್ನುಂಟು ಮಾಡುತ್ತಿತ್ತು.

ಕೃಷ್ಣರಾಯರದು ಉದಾರ ಸ್ವಭಾವ. ಸಹಾಯ ಕೇಳಿ ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಸರ್ಕಾರದ ಸಂಗೀತ, ಸಾಹಿತ್ಯ, ಲಲಿತಕಲಾ ಅಕಾಡೆಮಿಗಳಿಗೆ ಅವರು ಸದಸ್ಯರಾಗಿದ್ದರು. ಯಾರ ಕಣ್ಣಿಗೂ ಬೀಳದೆ ಮೂಲೆ ಗುಂಪಾಗಿದ್ದ, ಕಷ್ಟದಲ್ಲಿದ್ದ ಕಲಾವಿದರನ್ನು ತಾವೇ ಹುಡುಕಿ ಅವರಿಗೆ ಸರ್ಕಾರದ ಸಹಾಯ ದೊರೆಯುವಂತೆ ಮಾಡುತ್ತಿದ್ದರು.

ವೀರಶೈವ ಸಾಹಿತ್ಯ ಮತ್ತು ಧರ್ಮವನ್ನು ಕುರಿತು ಅವರು ಆಳವಾಗಿ ಅಧ್ಯಯನ ಮಾಡಿದ್ದರು. ಅವುಗಳ ಬಗೆಗೆ ಗಂಟೆಗಟ್ಟಲೆ ಅಧಿಕಾರ ವಾಣಿಯಿಂದ ಉಪನ್ಯಾಸ ಕೊಡಬಲ್ಲವರಾಗಿದ್ದರು. ಭಾರತದ ಹಾಗೂ ವಿದೇಶಗಳ ಚಿತ್ರಕತೆ, ಕಲಾವಿದರ ರಚನಾಕ್ರಮಗಳನ್ನು ಅವರು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಚಲನಚಿತ್ರರಂಗದಲ್ಲೂ ಕೃಷ್ಣರಾಯರು ಕೈಯಾಡಿಸಿದ್ದರು. “ಸ್ತ್ರೀರತ್ನ” ಮತ್ತು “ಜೀವನ ನಾಟಕ” ಎಂಬ ಎರಡು ಚಿತ್ರಗಳಿಗೆ ಸಾಹಿತ್ಯ ಒದಗಿಸಿದವರು ಕೃಷ್ಣರಾಯರೇ. ಅವರ ಕಾದಂಬರಿಯಾದ “ಸಂಧ್ಯಾರಾಗ” ಹಿಂದಿ, ಬಂಗಾಳಿ ಭಾಷೆಗಳಿಗೆ ಅನುವಾದ ಆದದ್ದಲ್ಲದೆ ಕನ್ನಡದಲ್ಲಿ ಚಲನಚಿತ್ರವಾಗಿಯೂ ತೆರೆಕಂಡಿತು.

ಖ್ಯಾತ ಹಿಂದೂಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನ್ಸೂರರು ಕೃಷ್ಣರಾಯಕ ಪ್ರಿಯ ಸ್ನೇಹಿತರಲ್ಲಿ ಒಬ್ಬರು. ಕನ್ನಡ ವಚನಗಳಿಗೆ ರಾಗ ಹಾಕಿ ಹಾಡುವಂತೆ ಮನ್ಸೂರರನ್ನು ಉತ್ತೇಜಿಸಿದವರು ಕೃಷ್ಣರಾಯರು. ಇದರಿಂದ ಕನ್ನಡ ವಚನಗಳು ಬೇರೆ ದೇಶಗಳಲ್ಲೂ ಪ್ರಚಾರವಾದವು.

ಕರ್ನಾಟಕ ಸರ್ಕಾರ ಅವರಿಗೆ ೧೯೬೬ರಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೧೯೬೮ ರಲ್ಲಿ ಕೃಷ್ಣರಾಯರ ಅರವತ್ತನೆಯ ಹುಟ್ಟುಹಬ್ಬವನ್ನು ಆಚರಿಸಿ, ನಿಧಿ ಸಮರ್ಪಿಸಿ ಗೌರವ ತೋರಿದರು. ಗೋವೆಯ ಕನ್ನಡ ಸಂಘದವರು ಅವರ ಸೇವೆಯನ್ನು ಪ್ರಶಂಸಿಸಿ ಸನ್ಮಾನಿಸಿದರು. ೧೯೭೧ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. ಅದೇ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಕರ್ನಾಟಕ ಸರ್ಕಾರ ನಾಮಕರಣ ಮಾಡಿತು. ಆ ಸ್ಥಾನದಿಂದ ಕನ್ನಡದ ಕೆಲಸವನ್ನು ನೂರು ಕೈಗಳಿಂದ ಮಾಡಬೇಕೆಂಬ ಮಹದಾಸೆ ಕೃಷ್ಣರಾಯರಿಗೆ ಇತ್ತು. ಕನ್ನಡ ಸಾಹಿತಿಗಳ, ಕಲಾವಿದರ ದುರವಸ್ಥೆಗಳನ್ನು ಕಣ್ಣಾರೆ ಕಂಡಿದ್ದ ಅವರು ಅಂಥವರ ಉದ್ಧಾರಕ್ಕಾಗಿ ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದರೋ! ಆದರೆ ಇಷ್ಟು ದಿನದ ಹೋರಾಟದಿಂದ ಅವರ ದೇಹ ಕುಗ್ಗಿ ಕೃಶವಾಗಿತ್ತು. ನೂರಾರು ಕೆಲಸಗಳನ್ನು ಕನ್ನಡಕ್ಕಾಗಿ ಮಾಡಬೇಕೆಂಬ ಹುಮ್ಮಸ್ಸು, ಆದರೆ ಅವರ ಆರೋಗ್ಯ ಕೆಟ್ಟಿತ್ತು. ೧೯೭೧ ಜುಲೈ ೮ ರಂದು ತಮ್ಮ ೬೩ನೆಯ ವರ್ಷದಲ್ಲಿ ಅವರು ತೀರಿಕೊಂಡರು.

ಕೃಷ್ಣರಾಯರ ಸಾಹಿತ್ಯ ದೊಡ್ಡದು. ಕನ್ನಡಕ್ಕಾಗಿ ಅವರ ಕೆಲಸ ದೊಡ್ಡದು; ಆದರೆ ಅವೆಲ್ಲ ಪರ್ವತ ಬೆಟ್ಟಗಳನ್ನು ಹೆತ್ತಂತೆ-ಬಹು ದೊಡ್ಡ ವ್ಯಕ್ತಿತ್ವದ ಕೆಲವು ಸಾಧನೆಗಳು.

ಧೀರರು

ಕೃಷ್ಣರಾಯರೆಂದರೆ ಧೀರತನಕ್ಕೆ ಮತ್ತೊಂದು ಹೆಸರು. ಹತ್ತಾರು ವಾದವಿವಾದಗಳಿಗೆ ಕೇಂದ್ರವಾದರು ಕೃಷ್ಣರಾಯರು. ಇತತರು ನಾಲ್ಕು ಜನರ ಮಧ್ಯೆ ಹೇಳಲು ಹೆದರುವ ಅಭಿಪ್ರಾಯಗಳನ್ನು ಕೃಷ್ಣರಾಯರು ನಿರ್ಭಯವಾಗಿ ನಾಲ್ಕು ಸಾವಿರ ಜನರ ಮುಂದೆ ಹೇಳುತ್ತಿದ್ದರು. ನ್ಯಾಯ, ಸತ್ಯ ಎಂದು ಕಂಡುಬಂದ ಅಭಿಪ್ರಾಯ ಹೇಳಲು ಎಂದೂ ಅಳುಕಿದವರಲ್ಲ. ಇದರಿಂದಾಗಿ ಅವರು ತೆಗಳುವ ಮಾತುಗಳನ್ನು ಕೇಳಬೇಕಾಯಿತು. ಸೋದರ ಸಾಹಿತಿಗಳ ಕೋಪವನ್ನು ಎದುರಿಸಬೇಕಾಯಿತು. ಸಭೆಗಳಲ್ಲಿ ಕಲ್ಲುಗಳನ್ನು ಎದುರಿಸಬೇಕಾಯಿತು. ಮಹಾರಾಷ್ಟ್ರದಲ್ಲಿ ಒಮ್ಮೆ ಭಾಷಣ ಮಾಡುತ್ತ ಶರಣ ಸಾಹಿತ್ಯ, ದಾಸ ಸಾಹಿತ್ಯಗಳು ಪ್ರಭಾವ ಬೀರಿದವು ಎಂದು ಹೇಳಿದರು. ಸಭಿಕರಿಗೆ ಕೋಪ ಬಂತು. ಕನ್ನಡ ರಂಗಭೂಮಿ ಮಹಾರಾಷ್ಟ್ರದ ರಂಗಭೂಮಿಯ ಮೇಲೂ ಪ್ರಭಾವ ಬೀರಿತು ಎಂದಾಗ ರೊಚ್ಚಿಗೆದ್ದ ಸಭೆಯಿಂದ ಅ.ನ.ಕೃ. ಜೀವಸಹಿತ ಬಂದದ್ದೇ ಪುಣ್ಯ. ಅವರು ಸಭೆಗೆ ಹೋಗುವ ಮೊದಲೇ ಅವರಿಗೆ ತಿಳಿದಿತ್ತು, ತಮ್ಮ ಮಾತಿನಿಂದ ಸಭಿಕರು ಕೋಪಗೊಳ್ಳುತ್ತಾರೆ ಎಂದು. ಆದರೆ ಸತ್ಯಕ್ಕೆ ಅಪಚಾರ ಮಾಡಲು ಒಪ್ಪುವವರಲ್ಲ. (ಸಭೆ ಮುಗಿದನಂತರ ಮಹಾರಾಷ್ಟ್ರದ ಹಲವರು ಹಿರಿಯರು ಸಭಿಕರ ನಡತೆ ತಪ್ಪು ಎಂದು ಹೇಳಿದರು. ಅ.ನ.ಕೃ. ಅವರ ವಾದವನ್ನು ತಾಳ್ಮೆಯಿಂದ ಕೇಳಿದರು) ಯಾರಾದರೂ ನಡೆದುಕೊಂಡ ರೀತಿಯಿಂದ ಕನ್ನಡಕ್ಕಾಗಲಿ, ದೇಶಕ್ಕಾಗಲಿ ಅನ್ಯಾಯವಾದೀತು ಎಂದು ತೋರಿದರೆ ಪ್ರತಿಭಟಿಸುವರು, ಅಗತ್ಯವಾದರೆ ತಮ್ಮ ಸ್ಥಾನವನ್ನು ಬಿಟ್ಟುಬಿಡುವರು. ಸರ್ಕಾರವನ್ನು ಎದುರಿಸುವರು, ಸಾವಿರ ಜನರನ್ನು ಎದುರಿಸುವರು. ತಾನು ತಪ್ಪು ಮಾಡಿದೆ, ಒಬ್ಬರನ್ನು ತಪ್ಪರ್ಥ ಮಾಡಿಕೊಂಡೆ ಎಂದು ಕಂಡರೆ ಒಪ್ಪಿಕೊಳ್ಳುವರು- ಅದು ಹೇಗೆ? ಅಚ್ಚಾಗುವ ಲೇಖನದಲ್ಲಿ, ಅಥವಾ ಸಾವಿರ ಜನರ ಎದುರುಗಡೆ ಸಭೆಯಲ್ಲಿ. ಇದಕ್ಕೂ ಧೈರ್ಯ ಬೇಕಲ್ಲವೇ?

ಸೌಜನ್ಯ

ಇತರರನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ರಾಯರು, ತಮ್ಮನ್ನು ಕುರಿತ ಆಕ್ಷೇಪಣೆಯನ್ನು ತಾಳ್ಮೆಯಿಂದ ಕೇಳುವರು. ಹೌದೆ ಎಂದು ಯೋಚಿಸುವರು. ಆಕ್ಷೇಪಣೆ ಮಾಡುವವರಲ್ಲಿ ವೈಯಕ್ತಿಕ ದ್ವೇಷವಿರಬಾರದು, ಅಷ್ಟೆ. ಪಣಿಪಾಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರೇ ಅಧ್ಯಕ್ಷರು. ಜನ ಅವರಿಗೆ ತೋರಿದ ಅಭಿಮಾನ ವರ್ಣನೆ ಮೀರಿದ್ದು. ಅದ್ಭುತವಾದ ಮೆರವಣಿಗೆಯಲ್ಲಿ ಅವರನ್ನು ಕರೆದೊಯ್ದರು. ಸಮ್ಮೇಳನದ ಎರಡನೆಯ ದಿನ ಒಂದು ವಿಚಾರ ಸಂಕಿರಣ-ಕನ್ನಡ ಕಾದಂಬರಿಯ ಮೇಲೆ. ಸಮ್ಮೇಳನಾಧ್ಯಕ್ಷರು, ಜನಪ್ರಿಯ ಕಾದಂಬರಿಕಾರರು, ಅ.ನ.ಕೃ. ಕುಳಿತಿದ್ದಾರೆ. ಭಾಷಣಕಾರರೊಬ್ಬರು ಅ.ನ.ಕೃ. ಕಾದಂಬರಿಗಳನ್ನು ಕಟುವಾಗಿ ಟೀಕಿಸಿದರು. ಅ.ನ.ಕೃ. ತಾಳ್ಮೆಯಿಂದ ಕೇಳಿದರು. ಸಂಜೆ ಸಮಾರಂಭ ಒಂದರಲ್ಲಿ ಅ.ನ.ಕೃ. ಅವರ ಭೇಟಿಯಾದಾಗ ಭಾಷಣಕಾರರಿಗೆ ಸಂಕೋಚವೋ ಸಂಕೋಚ. ಅ.ನ.ಕೃ. ಅವರು ಭುಜದ ಮೇಲೆ ಕೈ ಹಾಕಿ ಹೇಳಿದರು: “ನೀವು ಬೆಳಗ್ಗೆ ಹೇಳಿದ ಮಾತನ್ನು ನಾನು ಒಪ್ಪುವುದಿಲ್ಲ. ಆದರೆ ನಿಮ್ಮ ಜೊತೆಗೆ ಜಗಳವಾಡುವುದೇ ಒಂದು ಸಂತೋಷ”.

ಕನ್ನಡ ದಾರಿ

ಕನ್ನಡ ಅ.ನ.ಕೃ. ಅವರ ಜೀವದುಸಿರು. ಅವರೊಮ್ಮೆ ಹೇಳಿದರು: “ನನ್ನ ಬಗ್ಗೆ ಅಪಪ್ರಚಾರ ಮಾಡಿದವರನ್ನೂ ಮಾಡುವವರನ್ನೂ ಮರೆತು, ಕ್ಷಮಿಸುವ ಔದಾರ್ಯ ನನಗಿದೆ. ಆದರೆ ಕನ್ನಡಕ್ಕೆ ಅಪಚಾರ ಮಾಡಿ ಯಾರೂ ನಾನು ಜೀವಂತವಾಗಿರುವವರೆಗೆ ಬದುಕಿ ಉಳಿಯಲಾರರು; ಅವರು ಸದಾ ನನ್ನ ವೈರಿಗಳು”

ಅ.ನ.ಕೃ. ಇನ್ನೊಮ್ಮೆ ಹೇಳಿದರು: “ಕನ್ನಡ ಸಾಹಿತ್ಯ ಕಡಲಾಚೆ ಹೋಗಬೇಕು; ಪ್ರಯತ್ನದಿಂದಲ್ಲ, ಪ್ರತಿಭೆಯಿಂದ”. ಕನ್ನಡಕ್ಕಾಗಿ ಅಗತ್ಯವಾದಾಗ ಕೂಗಾಡಬೇಕು, ಹೋರಾಡಬೇಕು. ಜೊತೆಗೆ ಕನ್ನಡ ಸಾಹಿತ್ಯ ಸಾಧನೆಯನ್ನು ಬೆಳೆಸಬೇಕು.

ಕನ್ನಡನಾಡಿನಲ್ಲಿ ಎಷ್ಟು ಮಂದಿ ಸಾಹಿತಿಗಳು, ಕಲಾವಿದರು, ವಿಚಾರವಂತರು ಅ.ನ.ಕೃ. ಗೆಳೆಯರೋ ಅದಕ್ಕಿಂತ ಹೆಚ್ಚು ಮಂದಿ ಕನ್ನಡಚಾಡಿನಾಚೆಯ ಭಾರತದ ಸಾಹಿತಿಗಳು, ಕಲಾವಿದರು, ವಿಚಾರವಂತರು, ಅವರ ಗೆಳೆಯರು. ತಮಿಳುನಾಡೇ, ಬಂಗಾಳವೇ, ಮಹಾರಾಷ್ಟ್ರವೇ ಅ.ನ.ಕೃ. ಆತ್ಮೀಯ ಗೆಳೆಯರಿಲ್ಲದ ಭಾರತದ ನೆಲವೆಲ್ಲಿ? ಜೊತೆಗೆ ಷೇಕ್ಸ್‌ಪಿಯರ್, ಷಾ, ಲಾರೆನ್ಸ್, ಎಮಿಲಿ ಜೋಲಾ, ಪ್ಲೇಬೇ, ಇಬ್ಬನ್, ಗಾರ್ಕಿ, ಮೈಕಾವಸ್ತಿ- ಪ್ರಪಂಚದ ಹಿರಿಯ ಸಾಹಿತಿಗಳೆಲ್ಲ ಅ.ನ.ಕೃ. ಅವರ ಹೃದಯದಲ್ಲಿ, ತಲೆಯಲ್ಲಿ ಮನೆಮಾಡಿದ್ದರು. ಬೈಬಲ್, ಖುರಾನ್ ಎಲ್ಲವನ್ನೂ ಅಧ್ಯಯನ ಮಾಡಿದ್ದರು ಅ.ನ.ಕೃ.. ಕಟ್ಟಕಡೆಗೆ ಅವರ ಬಾಳು, ಶಕ್ತಿ ಎಲ್ಲ ಕನ್ನಡನಾಡನ್ನೊಳಗೊಂಡ ಭಾರತಕ್ಕೆ. ಭಾರತದ ಸಂಸ್ಕೃತಿ ಅವರಿಗೆ ಪುಸ್ತಕದ ಬದನೇಕಾಯಿಯಲ್ಲ. ಭಾರತದ ಸಂಸ್ಕೃತಿಯನ್ನು ರಕ್ತಗತ ಮಾಡಿಕೊಂಡವರು ಹೇಗೆ ಬದುಕಬಹುದೆಂಬುದನ್ನು, ಸಾವನ್ನು ಹೇಗೆ ಎದುರಿಸಬಹುದೆಂಬುದನ್ನು ಅವರ “ಸಂಧ್ಯಾರಾಗ”ದ ಶ್ರೀನಿವಾಸರಾಯರು, ಮೀನಾಕ್ಷಮ್ಮ, “ಗೃಹಲಕ್ಷ್ಮಿ”ಯ ರಾಯರು, ರಂಗಮ್ಮ, ರುಕ್ಮಿಣಿ, “ಅಮರ ಆಗಸ್ಟ್‌”ನ ಹಳ್ಳಿಯ ಬಂಧುಗಳು ಇವರೆಲ್ಲರಲ್ಲಿ ಹೃದಯ ಸ್ಪರ್ಶಿಯಾಗುವಂತೆ ಚಿತ್ರಿಸಿದರು. “ಭಾರತೀಯ ಕಲಾದರ್ಶನ” “ಭಾರತೀಯ ಸಂಸ್ಕೃತಿ ದರ್ಶನ” ಈ ಎರಡು ಕೃತಿಗಳ ಸಂಪಾದಕರೂ ಅವರೇ. ಸಾಹಿತ್ಯದ ವಿಷಯದಲ್ಲಿ ಅವರದು ಬಹು ಉದಾತ್ತ ಕಲ್ಪನೆ. ಸಾಹಿತ್ಯ ಓದುಗರ ಹೃದಯವನ್ನು ಮೃದುಗೊಳಿಸಬೇಕು; ಭವ್ಯ ಆದರ್ಶಗಳನ್ನು ಅವರ ಅಂತಃಕರಣಕ್ಕೆ ಮುಟ್ಟಿಸಿ ಅವರಿಗೆ ಉತ್ತಮ ಬಾಳಿನ ದಾರಿಯನ್ನು ತೋರಿಸಬೇಕು ಎಂದು ಅವರ ನಂಬಿಕೆ. ಅ.ನ.ಕೃ. ಹೇಳಿದರು:

“ನನ್ನ ಕಾದಂಬರಿಗಳ ಎರಡು ಮುಖ್ಯ ಲಕ್ಷಣಗಳು- ಒಂದು ನಾನು ಸಮಸ್ಯೆಗಳನ್ನು ನೋಡುವ ದೃಷ್ಟಿ. ಎರಡು ಅವುಗಳ ಅಚ್ಚ ಭಾರತೀಯತ್ವ…… ಭಾರತೀಯ ಅಚ್ಚ ಭಾರತೀಯನಾಗಬೇಕು. ನಮ್ಮ ಸಮಸ್ಯೆಗಳನ್ನು ನಾವೇ ಅರ್ಥ ಮಾಡಿಕೊಂಡು ಅವುಗಳ ಪರಿಹಾರ ಮಾರ್ಗವನ್ನು ನಾವೇ ನಿರ್ದೇಶಿಸಬೇಕು………… ಆರ್ಥಿಕ, ರಾಹಕೀಯ ದಾಸ್ಯದಿಂದ ಭಾರತ ಬಿಡುಗಡೆ ಹೊಂದಿದರೆ ಸಾಲದು. ಭಾವದಾಸ್ಯದಿಂದ, ವಿಚಾರದಾಸ್ಯದಿಂದ, ಸಂಪ್ರದಾಯದ ಹೊರೆಯಿಂದ ಮುಕ್ತಿ ಪಡೆಯಬೇಕು.” ಅವರ ಇನ್ನೊಂದು ಮಾತು: “ಸತ್ಯ, ಸೂರ್ಯನನ್ನು ಸುವರ್ಣ ಸಂಪುಟದಲ್ಲಿಯೂ ಸೆರೆ ಹಾಕಬಾರದು. ಭಾರತವನ್ನು ಅವರ ಅಭೂತಪೂರ್ವ ಆಧ್ಯಾತ್ಮಿಕ ಸಂಪತ್ತನ್ನು ಅಭಿಮಾನ-ಗೌರವದ ಕಣ್ಣಿಂದ ನೋಡಬೇಕು. ಆದರೆ ಗೌರವ ಅಭಿಮಾನ ಸತ್ಯದ ಕಣ್ಣಿಗೆ ಅವಕುಂಠನ ಹಾಕಬಾರದು. ಭಾರತದ ದೌರ್ಬಲ್ಯ, ಅಂಧಕಾರ, ಅಜ್ಞಾನವನ್ನು ಮುಚ್ಚಿಡುವುದು ಬೇಡ. ಅವುಗಳಿಗೆ ನಮ್ಮ ಬುದ್ಧಿವಲದಿಂದ ನೂತನ ಅರ್ಥ ಕಲ್ಪಿಸಿ ಆತ್ಮವಂಚನೆ ಮಾಡಿಕೊಳ್ಳುವುದು ಬೇಡ. ತಪ್ಪನ್ನು ಒಪ್ಪಿಕೊಳ್ಳೋಣ, ತಪ್ಪು ನೆಪ್ಪಾಗಲು ತ್ರಿಕರಣ ಪೂರ್ವಕವಾಗಿ ಪ್ರಯತ್ನಿಸೋಣ”.