ಒಂದ ಗಂಡ ಹಿಣ್ತಿ. ಅವರಿಗೆ ನಾಲ್ಕು ಜನ ಮಕ್ಕಳು, ಒಬ್ಬ ರಾಮಪ್ಪ, ಒಬ್ಬ ಭೀಮಪ್ಪ, ವಬ್ಬ ಸೋಮಪ್ಪ, ಮತ್ತೊಬ್ಬ ಜಟ್ಟಪ್ಪ. ಅವರ ಉದ್ಯೋಗ ಕೂಲಿ ಮಾಡಿ ಸಂಬಳ ತಕ್ಕಂಡು ಊಟ ಮಾಡೂದು. ಇದೇ ರೀತಿ ಜೀವನ ನಡೆಯಿತು. ಆ ಮೇಲೆ ಮೂರು ಮಂದಿ ಲಗ್ನಾದರು. ಆ ಮೇಲೆ ಕಿರಿಯವ ಮದುವೆಯಾಗಲಿಲ್ಲ.

ಆವಾಗ ತಾಯಿ ತಂದೆಯ ಹತ್ತರ ಮೂರು ಮಂದಿ ಕೇಳಿದರು. ನಿಮ್ಮ ಕಿರಿಯ ಮಗ ಕೆಲಸ ಮಾಡುವುದಿಲ್ಲ. ಊಟ ಮಾಡುವುದು, ಡ್ರೇಸ್ ಮಾಡಿ ತಿರುಗಾಟ ಮಾಡಿ ಊಟಕ್ಕೆ ಬರುತ್ತಾನೆ. ನಾಳೆಯಿಂದ ಊಟಾ ಹಾಕಬಾರದು ಎಂದು ಆಜ್ಞೆ ಮಾಡಿ ಬಿಟ್ಟರು. ಕಿರಿಯವ ಬಂದು ಊಟಕ್ಕೆ ಕುಳಿತ. ತಾಯಿ ಹೇಳಿದಳು. “ಮಗನೇ, ನಾ ಮುದುಕಿಯಾಗಿದ್ದೇನೆ. ನಿನಗೆ ಬಡಿಸಲು ನನ್ನ ಹತ್ತಿರ ಸಾಧ್ಯವಿಲ್ಲ” ಎಂದು ಹೇಳಿದಳು. ಯೆಷ್ಟು ಹೇಳಿದರೂ ತಾಯಿ, ನೀನೇ ನನಗೆ ಬಡಿಸು, ಹಟ ಹಿಡಿದು ಕೂಗುತ್ತಾ ಕುಳಿತೇ ಬಿಟ್ಟ. ತಾಯಿಗೆ ಸಿಟ್ಟು ಬಂದು ಬಿಸಿಯ ತೆಳಿಯನ್ನು ಅವನಿಗೆ ತೋಕಿ ಬಿಟ್ಟಳು. ಮೈ ಸುಟ್ಟು ಹೋಯ್ತು. ಆವಾಗೆ ಅಳುತ್ತಾ ಮನೆ ಹೆರಬಿದ್ದಾ. ಮನೆ ಬಿಟ್ಟು ಹೊರಟೇ ಬಿಟ್ಟ.

ಹೋಗುವಾಗ ಅವನ ಅಣ್ಣಂದಿರು ಮೂರು ಮಂದಿ ವಟ್ಟಾಗ ಅವನ ಮಯ್ಯ ಮೇಲಿದ್ದ ವಸ್ತ್ರವನ್ನೆಲ್ಲಾ ಕಳಚಿ ಬರೀ ಮೈಯಿಂದ (ದುಂಡಗೆ) ಬಿಟ್ಟರು. ಬರುವಾಗ ಅವನ ಕಿರಿಯ ಅಣ್ಣನ ಹೆಂಡತಿ ಆ ಬತ್ತಲೆಯಾದವನನ್ನು ಕಂಡು ತನ್ನ ಮೈ ಮೇಲೆ ಹೊಡೆದು ಬಂದ ಸೆರಗನ್ನು ಮರ್ಯಾದಿ ಮುಚ್ಚಿಕೋ ಎಂದು ಹರಿದು ಬೀಸಾಡಿದಳು. ಅದನ್ನು ಉಟ್ಟುಕೊಂಡು ಮನೆಬಿಟ್ಟು ಬಹುದೂರ ಹೋಗಿ ಬಿಟ್ಟ.

ಅಲ್ಲಿ ಒಂದು ಅಸ್ವತಕಟ್ಟೆ ಸಿಕ್ಕಿತು. ಅದರ ಮೇಲೆ ಸುಮ್ಮನೆ ಮಲಗಿದ. ಬಹಳ ಟ್ಯಾಂ, ಊಟದ ಟೈಮ್ ಆಗುತ್ತ ಬಂತು. ಇನ್ನೇನು ದೇವರೇ ಎಂದು ಕಣ್ಣು ಮುಚ್ಚಿಕೊಂಡು ತಲೆ ಚಾಚಿಕೊಂಡು ಮಲಗಿ ಬಿಟ್ಟ ಕಟ್ಟೆಗೆ ಆ ಸಂದರ್ಭದಲ್ಲಿ ಸಮೀಪದಲ್ಲಿ ಒಂದು ಅರಸು ಮನೆ ಇತ್ತು. ಆ ಅರಸನಿಗೆ ಒಂದು ಹುಡುಗಿ ಪ್ರಾಯಪ್ರಬುದ್ಧಳಾಗಿದ್ದಳು. ಎಲ್ಲಿ ಹುಡುಕಿದರೂ ಯೋಗ್ಯ ಗಂಡ ದೊರಕಲಿಲ್ಲ. ತನ್ನ ಮಾಳಿಗೆ ಮೇಲೆ ನಿಂತು ನೋಡುವಾಗ ಈ ಕಟ್ಟೆ ಮೇಲೆ ಮಲಗಿದ್ದವನ ರೂಪವನ್ನು ಕಂಡಾಕ್ಷಣ ಅರಸು ಹುಡುಗಿ ಒಂದು ತಾಟಿನಲ್ಲಿ ಊಟದ ಎಲ್ಲಾ ವಸ್ತುವನ್ನು ಸಿದ್ಧಪಡಿಸಿಕೊಂಡು ಮಾಳಿಗೆಯ ಕೆಳಗೆ ಇಳಿದು ಮಲಗಿಕೊಂಡವನ ಸಮೀಪದಲ್ಲಿ ಬಂದು “ಸ್ವಾಮೀ ನಿಮಗೆ ಯಾವ ಊರಾಯಿತೆಂತ ನನಗೆ ಗೊತ್ತಿಲ್ಲ. ಆದರು ಊಟದ ಸಿದ್ಧತೆಯನ್ನು ಮಾಡಿ” ಎಂದು ಹೇಳಿದಳು. ಅದನ್ನು ಕೇಳಿದ. ಕಣ್ಣೊಡೆದು ನೋಡುವಾಗ ಪ್ರಾಯ ಪ್ರಬುದ್ಧಳು ಆದ ಹುಡುಗಿ. ವಿಚಾರಿಸುತ್ತ ಊಟ ಮಾಡಿದ. ಊಟವನ್ನು ಕೊಟ್ಟು ಅರಸು ಮಗಳು ಮನೆಗೆ ಹೋದಳು. ತಂದೆಯೊಡನೆ ಕಟ್ಟೆ ಮೇಲೆ ಮಲಗಿದವನ (ಊಟಕ್ಕೊಟ್ಟದ್ದು ಹೇಳಿತು) ಮಾತು ಮುಗಿಸಿ ಅವನೇ ನನ್ನ ಗಂಡನಾಗಬೇಕೆಂತ ನಾನು ನಿಶ್ಚೈಸಿಕೊಂಡಿದ್ದೇನೆ. ಅರಸು ಹುಡುಗಿಯ ಅಭಿಪ್ರಾಯದಂತೆ ಅವನು ತನ್ನ ಮನೆಗೆ ಕರೆಸಿ ಮದುವೆ ಮಾಡಲು ಸಿದ್ಧಮಾಡಿದ.

ಆಮೇಲೆ ಅರಸು ಕೇಳಿದ “ನಿಮ್ಮ ಊರ್ಯಾವದು? ನೀವು ಊರಿಗೆ ಹೋಗುವಿರೋ ಇಲ್ಲೇ ಇರುವಿರೋ?” ಎಂದು ಅಭಿಪ್ರಾಯ ಕೇಳಿದ. “ನನಗೆ ಇದ್ದದು ಒಂದೇ ಹುಡುಗಿ. ಅದಕ್ಕಾಗಿ ಅಭಿಪ್ರಾಯವನ್ನು ಕೇಳುತ್ತಿದ್ದೇನೆ”. “ತೊಂದರೆ ಇಲ್ಲ ಇಲ್ಲೇ ಉಳಿತೆ” ಅಂದ.

ಆಮೇಲೆ ಅವನ ಅಣ್ಣಂದಿರು ಹೊಟ್ಟೆಗೆ ಅನ್ನಕ್ಕಾಗಿ ಎಲ್ಲವರ ಕಟ್ಟಿಗೆ ಹೊರೆಯನ್ನು ಹೊರುತ್ತಾ ಜೀವನ ಸಾಗಿಸುತ್ತಿದ್ದಾರೆ. ಕಟ್ಟಿಗೆ ಹೊರೆ ಬೇಕೋ ಎಂತ ಕೂಗುತ್ತ ಬೀದಿಯಲ್ಲಿ ಹೋಗುತ್ತಿರುವಾಗ ಈ ಅರಸು ಮನೆಯವರು “ನಾಳೆ ದೊಡ್ಡ ಕಾರ್ಯವಿದೆ. ಎಲ್ಲವರು ನಮ್ಮ ಮನೆ ಮುಂದೆ ಕಟ್ಟಿಗೆ ಹೊರೆಯನ್ನು ತೆಗೆದುಕೊಂಡು ಬರಬೇಕು” ಎಂತಾ ತಿಳಿಸಿದರು.

ಮರುದಿವಸ ಎಲ್ಲರೂ ಕಟ್ಟಿಗೆ ಹೊರೆಯನ್ನು ತಂದರು. ಕಟ್ಟಿಗೆಯ ರೊಕ್ಕವನ್ನು ಕೊಟ್ಟು “ನೀವೆಲ್ಲರೂ ಇಲ್ಲೇ ಊಟ ಮಾಡಬೇಕು”, ಅವ ಹೇಳಿದ. ತಮ್ಮ ಎಲ್ಲವರಿಗೂ ಊಟ ಸಿದ್ಧವಾಯಿತು. ಆಮೇಲೆ ಊಟ. ಎಲ್ಲವರೂ ಮಾಡುತ್ತಿರುವ ಸಮಯದಲ್ಲಿ ಆಮೇಲೆ ಮಿಂದು ಬರುವದಕ್ಕಾಗಿ ಅವರ ಕಿರಿ ಅತ್ತಿಗೆಯನ್ನು ಆಳುಗಳಿಂದ ಕರಿಸಿ ಸ್ನಾನ ಮಾಡಿಸಿ ಊಟಕ್ಕೆ ಕುಳಿಸಿದ. ಆವಾಗ ನಮ್ಮ ಮೂರು ಮಂದಿಯಲ್ಲಿ ಒಬ್ಬಳನ್ನೇ ಸ್ನಾನ ಮಾಡಲು ಕರೆದರಲ್ಲಾ ಎಂದು ಇಬ್ಬರೂ ಅತ್ತಿಗೆಯದು ವಿಚಾರ ಮಾಡಿದರು.

ಆ ಸಂದರ್ಭದಲ್ಲಿ ಈ ಅರಸು ತಮ್ಮ ಎದ್ದು ನಿಂತು ಎಲ್ಲರಿಗೂ ನಮಸ್ಕರಿಸಿ “ನಮ್ಮ ಅಣ್ಣಂದಿರೂ ಅತ್ತಿಗೆಯರೂ ನನಗೆ ಮಾಡಿದ ವಿಚಾರ ನೆರೆದಿರುವ ಎಲ್ಲರಿಗೂ ಗೊತ್ತಿಲ್ಲ ಹೇಳುತ್ತೇನೆ” ಎಂದು ಹೇಳಿದ. ಆ ಸಂದರ್ಭದಲ್ಲಿ ಇವನಿಗೆ ತ್ರಾಸು ಕೊಟ್ಟಂಥವರು ಕಣ್ಣೀರು ಇಳಿಸಿದರು. ಮರ್ಯಾದೆ ಮುಚ್ಚುವದಕ್ಕಾಗಿ ಸೀರೆ ಸೆರಗನ್ನು ಕೊಟ್ಟಂತಾ ಅತ್ತಿಗೆಗೆ ತನ್ನ ವಂದನೆಯನ್ನು ತಿಳಿಸಿ, ಅವರೆಲ್ಲರನ್ನೂ ತಾಯಿ-ತಂದೆ ಎಲ್ಲರನ್ನೂ ಇರಿಸಿಕೊಂಡು ಸುಖಸಂತೋಷದಿಂದ ಆಳುತ್ತ ಇರುತ್ತಿದ್ದಾರೆ.

 ಹೇಳಿದವರು:

ಶ್ರೀ ಧಾಕುಮಾರು ಪಟಗಾರ,
ಮಸಳೆನಾಲು, ಅಘನಾಶಿನಿ, ೭೫ ವರ್ಷ, ಬರಹ ಕಲಿತವರಲ್ಲ.