ಒಂದಲ್ಲಾ ಒಂದೂರಲ್ಲಿ ಒಂದು ಅರಸ್ತಾನ ಇತ್ತು. ಆ ಮೇಲೆ ಧರ್ಮದಂತೆ ರಾಜ್ಯವನ್ನು ಪರಿಪಾಲಿಸುತ್ತ ಸಕಲ ಧರ್ಮವನ್ನು ಪಾಲಿಸುತ್ತ ಪ್ರಜೆಗಳ ಕಷ್ಟ ಸುಖಗಳನ್ನು ಧರ್ಮದಿಂದ ನೋಡಿಕೊಳ್ಳುತ್ತ ಬರುತ್ತಿದ್ದನು. ಈ ಅರಸುವ ಧರ್ಮದಾನವನ್ನು ಪ್ರಜೆಗಳು ಪರಿಪರಿಯಿಂದ ಪಾಲಿಸುತ್ತ ಇರುತ್ತಿದ್ದರು. ಬಹುಮಂದಿ ಸಾಧುಗಳು, ಸಂತರು ಎಲ್ಲವರೂ ಇವರ ರಾಜ್ಯದಲ್ಲಿ ತುಂಬುತ್ತಿದ್ದರು.

ಒಂದು ದಿವಸ ಈ ರಾಜನ ನಗರಕ್ಕೆ ಒಳ್ಳೇ ಸಾಧುಗಳು ಪ್ರವೇಶ ಮಾಡಿದರು. “ನನ್ನ ನಗರಿಗೆ ಬಂದವರಿಗೆ ಯೋಗ್ಯ ಉಪಚಾರವನ್ನು ಮಾಡಬೇಕಾದದ್ದು ನನ್ನ ಧರ್ಮವಾಗಿರುತ್ತದೆ. ಕಾರಣ ಬಂದಿರುವ ಅತಿಥಿಗಳು, ಯೋಗಿಗಳು, ಬಡವರು, ಪ್ರಜೆಗಳು ಎಲ್ಲರೂ ಸೇರಿರುವ ಈ ಸಭೆಯಲ್ಲಿ ಊಟ ನಡೆಯಬೇಕಾಗಿದೆ”. ಅದಕ್ಕಾಗಿ ಎಲ್ಲವರೂ ಊಟಕ್ಕೆ ಸಿದ್ಧರಾಗಿದ್ದರು.

ಆ ಕಾಲದಲ್ಲಿ ಮಾಡಬೇಕಾದ ತಮ್ಮ ಧರ್ಮವನ್ನು ಸಾಧುಪೂಜೆಯನ್ನು ಪಾದಕ್ಕೆ ನೀರು ಹಾಕಿ ತೊಳೆದು ಹಣಿಗೆ ಗಂಥ, ತಲೆ ಮೇಲೆ ಹೂವು ಗಂಧ ಎಲ್ಲವ್ನು ಸೇರಿಸಿ ಹಣ್ಣು, ಕಾಯಿ ಮುಂದಿಟ್ಟು ಅವರು ಮುಂದೆ ಆರತಿ ಎತ್ತಿದರು. ಎಲ್ಲರ ಊಟವಾಯಿತು.

“ನಿಮ್ಮಿಂದ ನಮ್ಮೆಲ್ಲರಿಗೂ ಆಶೀರ್ವಾದ ಮಾಡಬೇಕು. ಅಷ್ಟೇ ಅಲ್ಲ. ಸ್ವಾಮೀ ನನ್ನಿಂದ ನಿಮಗೇನಾಗಬೇಕು? ನಿಮ್ಮ ಬೇಡಿಕೆಯನ್ನು ಕೇಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ” ಅಂದನು. ಅಷ್ಟನ್ನು ಕೇಳಿದ ಸಾಧುಗಳು ಈ ರೀತಿಯಾಗಿ ತನ್ನ ಬೇಡಿಕೆಯನ್ನು ಹೇಳಿದರು. “ನಿಮ್ಮ ಹೆಂಡತಿಯನ್ನು ನನಗೆ ಒಪ್ಪಿಸಬೇಕು” ಎಂದು ಸಾಧುಗಳು ಹೇಳಿದರು. ಧರ್ಮಪತ್ನಿಯನ್ನು ಅರಸು ಗುರುಗಳ ಪಾದಕ್ಕೆ ಒಪ್ಪಿಸಿದನು.

ಆ ಮೇಲೆ ಇನ್ನೇನು ಮಾಡಬೇಕು ತಾನು ಎಂಬ ಯೋಚನೆ ಮಾಡುತ್ತ ಸಾಧು ನಡೆಯುತ್ತಾನೆ. ನಡೆಯುತ್ತ ಅರಸು ಹೆಂಡತಿಯನ್ನು ಸಾಧು ಕರೆದುಕೊಂಡು ಹೋಗುತ್ತಿರುವಾಗ ಮನಸ್ಸಿನಲ್ಲಿ ಯೋಚಿಸುತ್ತ ದಾರಿಯನ್ನು ಸಾಗಿಸುತ್ತ ಹೋಗುವಾಗ ಪೂರ್ವದಲ್ಲಿರುವ ಸೂರ್ಯನು ಪಶ್ಚಿಮಾಂಬುಧಿಯನ್ನು ಸೇರುವದರೊಳಗಾಗಿ ನನ್ನ ವಿಚಾರವನ್ನು ಹೇಳುವದಾದರೆ (ತನ್ನಷ್ಟಕ್ಕೇ ಹೇಳಿಕಂತ) ಮನಸ್ಸಿನಲ್ಲಿ ಕಳವಳವಾಗುತ್ತದೆ. ಯಾಕೆಂದರೆ, ಇಷ್ಟು ದಿವಸದ ಪರಿಯಂತರ ನಾನೊಬ್ಬನೇ ಪ್ರವಾಸ ಮಾಡಿ ರಾಜರ ಅರಮನೆಯನ್ನು ಸೇರಿ ಆಹಾರ, ಆದರಾತಿಥ್ಯವನ್ನು ಪಡೆಯುತ್ತಾ ಇದ್ದನು. ಈ ದಿವಸ ನನ್ನ ಸಂಗಡ ಬಂದಿರುವ ಈ ನಾಡಿಯ ವಿಚಾರವಾಗಿ ವಿಚಾರ ಮಾಡುತ್ತಿದ್ದೇನೆ. ಏನು ಮಾಡಲಿ? ಇಲ್ಲಿ ಸಮೀಪದಲ್ಲಿ ಒಂದು ಧರ್ಮಶಾಲೆಯು ಕಂಡಿತು. ಇಲ್ಲಿ ರಾತ್ರಿಯನ್ನು ಕಳೆದು ಹೋಗಬೇಕಾಗಿದೆ.

ಆವಾಗ ಇಬ್ಬರೂ ಮಲಗಲು ಸಿದ್ಧರಾದರು. ಆವಾಗ ಅರಸು ಹೆಂಡತಿ ಸಾಧುವ ಸಂಗಡ ಕೇಳಿದಳು. “ಸ್ವಾಮಿ, ನಮ್ಮ ಅರಸರು ನಿಮ್ಮ ಸ್ವಾಧೀನವಾಗಿ ನನ್ನನ್ನು ಕಳುಹಿಸಿ ಕೊಟ್ಟಿದ್ದಾರೆ. ನನ್ನ ಧರ್ಮವನ್ನು ನಾನು ತಿಳಿದುಕೊಂಡಿದ್ದೇನೆ. ಆದರೂ ನಿಮ್ಮ ಇಚ್ಛೆಯನ್ನು ಪೂರ್ತಿ ಮಾಡಿಕೊಳ್ಳುವುದಕ್ಕೆ ನನ್ನ ತೊಂದರೆಯಿಲ್ಲ ಮತ್ತು ನೀನು ನನ್ನನ್ನು ಸೇರುವದಾದರೆ ನೀವು ಬತ್ತಲೆಯಲ್ಲಿ ಬರಬೇಕು. ನಾನು ಬತ್ತಲೆಯಲ್ಲೇ ಸೇರುತ್ತೇನೆ”. ಇವನೂ ಬತ್ತಲೆಯಾಗಿ ಸೇರುವ ಸಂದರ್ಭವನ್ನು ಮಾಡಿ ಎಂದು ಬತ್ತಲೆಯಾಗಿಯೇ ಶಯನ ಮಾಡಿದಳು. ಆವಾಗ ಸಾಧು ತನ್ನಷ್ಟಕ್ಕೆ ಬೇರೆ ಯೋಚನೆ ಬಂದು ತಾನು ಯೋಚಿಸಿ ಹೆದರಿದ. ನೀನು ನನ್ನನ್ನು ಬಿಟ್ಟು ಬಿಡಬೇಕೆಂತ ನನ್ನ ಬೇಡಿಕೆ ಎಂದನು. “ಈ ಹೊತ್ತು ನೀನು ನಗೆ ತಾಯಿ ಸಮಾನ” ಎಂದು ಕೈ ಮುಗಿದು ಬಿಟ್ಟ. ಆಮೇಲೆ ಸಾಧು ಧರ್ಮ ಶಾಲೆಯಲ್ಲೇ ಉಳಿದ.

ಇವಳು ಸಾಧುವಿನ ಮಾತನ್ನು ಕೇಳಿದ ಮೇಲೆ ರಾತ್ರಿಯಲ್ಲೇ ಮನೆಗೆ ಬಂದಳು. ಬಂದು ಬೆಳಗಾಗುವದರೊಳಗೆ ಮನೆಗೆ ಮುಟ್ಟಿ ಡನಲ್ಲಿಗೆ ಬಂದಳು. “ಸ್ವಾಮಿ, ನಿಮ್ಮ ಬೇಡಿಕೆಯಂತೆ ನಾನು ಸಾಧು ಸಂಗಡ ಹೋದೆನು. ಧರ್ಮ ಶಾಲೆಯಲ್ಲಿ ಬತ್ತಲೆಯಾಗಿ ಸಾಧುವೂ ಬತ್ತಲೆಯಾಗಿ ಮಲಗಿಕೊಂಡು ನನ್ನನ್ನು ಸೇರಬೇಕು ಅಂತ ನಾನು ಹೇಳಿದೆ. ಆ ಕಾಲದಲ್ಲಿ ಸಾಧುಗಳು ನನ್ನ ಹೇಳಿಕೆಯಂತೆ ಬತ್ತಲೆಯಾದರು. ಆವಾಗ ಸಾಧುಗಳಿಗೆ ಬತ್ತಲೆಯಾದ ನನ್ನನ್ನು ನೋಡಿ ಮನಸ್ಸು ತಿರುಗಿತು. ಸಾಧು ನನ್ನ ಸಂಗಡ ಈ ರೀತಿಯಾಗಿ ಹೇಳಿದ. ಅಂದರೆ ನಿನ್ನ ಬೇಡಿಕೆ ನೀನು ಮುಗಿಸಿದೆ. ನೀನು ನನಗೆ ತಾಯಿ ಸಮಾನ. ಆದ ಕಾರಣ ಮನೆಗೆ ಹೊರಟು ಹೋಗು” ಅಂದರು. ಸಾಧುಗಳಿಗೆ ನಮಸ್ಕರಿಸಿ ಸೀರೆ ಉಟ್ಟು ಗಂಡನಲ್ಲಿಗೆ ಬಂದಳು. ಬಂದು ಗಂಡನ ಕಾಲಿಗೆ ನಮಸ್ಕರಿಸಿದಳು. ನಿಮ್ಮ ಹೇಳಿಕೆಯಂತೆ ನಾನು ಸಾಧು ಸಂಗಡ ಹೋಗಿದ್ದೇನೆ. ಬತ್ತಲೆಯಾದ ನನ್ನನ್ನು ನೋಡಿ ಆ ಸಾಧುಗಳಿಗೆ ಜಿಗುಪ್ಸೆಯಾಗಿ ನೀನು ನನ್ನ ತಾಯಿ ಸಮಾನ ಎಂದು ಹೇಳಿ ನಮಸ್ಕರಿಸಿ, ನಿನ್ನನ್ನು ನಾನು ಅಪೇಕ್ಷೆ ಮಾಡಿದ್ದು ನನ್ನದು ಮಹಾದೊಡ್ಡ ತಪ್ಪಾಗಿದೆ. ನೀನು ಹೊರಟು ಹೋಗಲು ನನ್ನ ಬೇಡಿಕೆ ಎಂದು ಸಾಧು ಹೇಳಿದರು.

“ಅದಕ್ಕಾಗಿ ನಾನು ನಿಮ್ಮಲ್ಲಿ ಬಂದು ಸೇರಿಕೊಂಡಿದ್ದೇನೆ.” ಆ ಮೇಲೆ ಗಂಡ ಹೆಂಡತಿ ಸುಖವಾಗಿ ರಾಜ್ಯವಾಳುತ್ತ ಕಾಲ ಕಳೆದರು.

 ಹೇಳಿದವರು:

ಶ್ರೀ ಧಾಕು ಮಾರು ಪಟಗಾರ,
ಮೊಸಳೆಸಾಲು, ೭೦ ವರ್ಷ, ಹೇಳಿಸಿ ಬರೆದುಕೊಂಡಿದ್ದು, ನನ್ನ ಭಾವ ವೇ.
ಗಜಾನನ ವೆಂಕಟ್ರಮಣ ಪಂಡಿತ ಅಘನಾಶಿನಿ ಇವರ ಮನೆಯಲ್ಲಿ,
ದಿನಾಂಕ:೧೭-೦೪-೨೦೦೧