ಒಂದು ಊರಿನಲ್ಲಿ ಒಂದು ಮನೆಯಲ್ಲಿ ಗಂಡ ಹೆಂಡತಿ, ಒಬ್ಬ ಮಗ ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದರು. ಹಿರಿ ಮಗಳನ್ನೂ ಎರಡನೆಯವಳನ್ನೂ ತಕ್ಕಮಟ್ಟಿಗೆ ಅನುಕೂಲವಿದ್ದ ಕಡೆ ನೋಡಿ ಮದುವೆ ಮಾಡಿಕೊಟ್ಟರು.

ಕಿರಿ ಮಗಳೊಬ್ಬಳನ್ನು ಮಾತ್ರ ಯಾವ ತರದಿಂದಲೂ ಕೊರತೆಯಿರದ ಬಹಳ ದೊಡ್ಡ ಶ್ರೀಮಂತ ಮಗನಿಗೆ ಮದುವೆ ಮಾಡಿಕೊಟ್ಟರು. ಅವಳ ಹೆಸರು ಮಾಲಕ್ಷ್ಮಿ ಯೆಂದಿತ್ತು.

ದೀಪಾವಳಿ ಹಬ್ಬ ಬಂತು. ಅಣ್ಣನು ಮೂವರೂ ಅಕ್ಕ ತಂಗಿಯರ ಮನೆಗಳಿಗೆ ಹೋಗಿ, ಹಬ್ಬಕ್ಕೆ ಕರೆದು ಬಂದನು. ಅಕ್ಕಂದಿರಿಬ್ಬರೂ ತಂಗಿಯ ಮನೆಗೆ ಹೋಗಿ, ತಂಗಿಯೊಡನೆ ಅಪ್ಪನ ಮನೆಗೆ ಹೋಗಲು ಹೊರಟರು. ಅಪ್ಪನ ಮನೆಗೆ ಬರುವಾಗಿ ತಂಗಿಯು ಬೇಕಾದ ಪಟ್ಟೆ ಸೀರೆಯುಟ್ಟು, ಮೈತುಂಬ ದಾಗೀನೆ ಹಾಕಿಕೊಂಡು ಹೊರಟಿದ್ದಳು.

ಅಕ್ಕಂದಿರಿಬ್ಬರೂ ತಂಗಿಯೊಡನೆ ಸಮುದ್ರಕ್ಕೆ ಹೋಗಿ ಮುಂದುಕೊಂಡು ಬರೋಣ ಅಂದರು. ಅವ್ವನು ನೀನು ಸಮುದ್ರ ಮೀಯಲು ಹೋಗಬೇಡ ಎಂದು ಕಿರಿ ಮಗಳ ಹತ್ತಿರ ಹೇಳಿದ್ದಳು. ಆದರೂ ಅಕ್ಕಂದಿರ ಸಂಗಡ ಅವನು ತನ್ನ ಚಿನ್ನವನ್ನೆಲ್ಲಾ ಹಾಕಿಕೊಂಡೇ ಹೊರಟಳು.

ಅಕ್ಕಂದಿರು ಸಮುದ್ರ ಮೀವಾಗ, ಚಿನ್ನ ಗಿನ್ನ ಎಲ್ಲವನ್ನೂ ತೆಗೆದು ದಂಡೆಯ ಮೇಲೆ ಇಡು ಅಂದರು. ಅವಳು ಎಲ್ಲ ಚಿನ್ನವನ್ನೂ, ಮೂಗುತಿಯನ್ನು ಸಹಾ ಅಕ್ಕಂದಿರ ಮಾತಿನಂತೆ ತೆಗೆದು ಇಟ್ಟು ಸಮುದ್ರದಲ್ಲಿ ಮೀಯಲು ಹೋದಳು. ಸಮುದ್ರದಲ್ಲಿ ಮೀವಾಗ ಅಕ್ಕಂದಿಬ್ಬರೂ ದೊಡ್ಡ ತೆರೆ ಬಂದ ಕಾಲದಲ್ಲಿ ನೂಕಿ ಬಿಟ್ಟರು. ದೊಡ್ಡ ತೆರೆ ಮುರಿದು ತಿರುಗಿ ಹೋಗುವಾಗ ಅವಳನ್ನು ಸೆಳೆದುಕೊಂಡು ಹೋಯಿತು. ಗುಡ್ಡದ ಅಂಚಿನ ಸಮುದ್ರ ಭಾಗ ಅದು. ಅಲ್ಲಿ ಒಂದು ಕಡೆ ಕೇದಿಗೆ ಮುಂಡಿಗೆಯ ಹಿಂಡಿತ್ತು. ತಂಗಿಯು ಆ ಹಿಂಡಿನ ನಡುವೆ ಹೋಗಿ ಮುಂಡಿಗೆ ಎಲೆಗಳ ನಡುವೆ ಸಿಕ್ಕು ನಿಂತಳು.

ಅಕ್ಕಂದಿರು ಅವಳ ಪಟ್ಟೆ ಸೀರೆ, ಚಿನ್ನ ಎಲ್ಲವನ್ನೂ ತೆಗೆದುಕೊಂಡು ಪಾಲು ಮಾಡಿಕೊಂಡರು. ಪಟ್ಟೆ ಸೀರೆಯನ್ನೂ ಹರಿದು ಎರಡು ಭಾಗ ಮಾಡಿದರು. ಅದನ್ನೂ ಚಿನ್ನವನ್ನೂ ಹೊಯಿಗೆ (ಉಸುಕು) ಯಲ್ಲಿ ಹೊಂಡ ಮಾಡಿ ಹುಗಿದು, ತಂಗಿ ಸಮುದ್ರದಲ್ಲಿ ಮುಳುಗಿ ಸತ್ತು ಹೋದಳೆಂದು ತಿಳಿದು, ಅಪ್ಪನ ಮನೆಗೆ ಹೋದರು. “ತಂಗಿಯಲ್ಲಿ”? ಎಂದು ಅಪ್ಪ ಅವ್ವ ಕೇಳಿದರು.

“ತಂಗಿಯು ಕೂಡ ಸಮುದ್ರದ ನೀರಿನಲ್ಲಿ ಮುಂದೆ ಹೋಗಿ ಮೀಯಬೇಡ ಅಂದರೂ ಕೇಳದೆ ಮುಂದೆ ಹೋದಳು. ದೊಡ್ಡ ತೆರೆ ಬಂದು ಅವಳು ಬಳಿದು ಹೋದಳು ಅಂತ ಅಕ್ಕಂದಿರು ಹೇಳಿದರು. ಅಪ್ಪ, ಅವ್ವ, ಅಣ್ಣ ಎಲ್ಲರೂ ತಂಗಿ ಬಂದಾಳೆಂದು ದಾರಿ ನೋಡಿದರು. ತಂಗಿ ಬರಲಿಲ್ಲ. ಅಣ್ಣನು ತಂಗಿಯ ಗಂಡನ ಮನೆಗೆ ಹೋಗಿ ತಂಗಿ ಕಾಣೆಯಾದ ಸುದ್ಧಿಯನ್ನು ತಿಳಿಸಿದನು. ಅವಳ ಅತ್ತೆ-ಮಾವ, ಗಂಡ, ಎಲ್ಲರೂ ಅವನ ಸಂಡ ಬಂದರು.

ಎಲ್ಲರೂ ಕೂಡಿ ಸಮುದ್ರ ತೀರಕ್ಕೆ ಹೋದರು. ಅವಳು ಮುಂಡಿಗೆಯ ಹಿಂಡಿನಲ್ಲಿ ಅವರು ಬಂದುದನ್ನು ನೋಡುತ್ತಿದ್ದಳು.

ಅಣ್ಣನು “ಹಾಸರೆಗಲ್ಲಿನ ಮೇಲೆ ಬೀಸುವ ಹುತ್ತ ಬೆಳೆದಿದೆ. ನನ್ನ ತಂಗಿ ಮಾಲಕ್ಷ್ಮಿಯನ್ನು ಯಾರಾದರೂ ಕಂಡಿರುವಿರಾ” ಎಂದು ಹೇಳಿದನು. ಅವಳು ಅಲ್ಲಿಂದಲ್ಲೇ “ಕಡಲ ಸಾಲಿನ ಅಣ್ಣಾ, ಬಿದಿರಿನ ಸಾಲಿನ ಅಣ್ಣಾ, ನಾನು ನಿಮ್ಮ ಮನೆಗೆ ಬರಲಾರೆ” ಅಂತ ಹೇಳಿದಳು. ಅಪ್ಪ ಅವ್ವ, ಅತ್ತಿಗೆ ಎಲ್ಲರೂ ಅವಳನ್ನು ಅದರಂತೆ ಕರೆದರು. ಅವಳು ಅವರಿಗೆಲ್ಲ ತನ್ನ ಸಂಬಂಧಿಕರನ್ನು ಕರೆವ ರೀತಿಯಲ್ಲಿ ಕರೆದು ಅದೇ ಉತ್ತರವನ್ನು ಹೇಳಿದು. ಅಕ್ಕಂದಿರೂ ಅವಳನ್ನು ಕರೆದರು. ಅವರೊಡನೆ ಮಾತ್ರ ‘ರಂಡೇ’ ಎಂಬ ಬಯ್ಗುಳ ಶಬ್ದ ಸೇರಿಸಿ, ‘ನಾನು ನಿಮ್ಮ ಮನೆಗೆ ಬರಲಾರೆ’ ಎಂದು ಉತ್ತರ ಕೊಟ್ಟಳು.

ಅವಳ ಗಂಡನೂ “ಹಾಸರಗಲ್ಲಿನ ಮೇಲೆ ಬೀಸುವ ಹುತ್ತ ಬೆಳೆದಿದೆ. ನಲ್ಲೆ ಮಾಲಕ್ಚ್ಮಿಯನ್ನು ಯಾರಾದರೂ ಕಂಡಿರಾ?” ಎಂದು ಕೇಳಿದನು. ಅವನಿಗೆ “ಕಡಲ ಸಾಲ ಪುರುಷಾ, ಬಿದಿರ ಸಾಲ ಪುರುಷಾ, ನಾನು ನಿಮ್ಮ ಮನೆಗೆ ಬರಲಾರೆ” ಎಂದು ಹೇಳಿದಳು. ಅವಳ ಗಂಡನು ಸಮುದ್ರದಲ್ಲಿಯೇ ಈಸಿ ಹೋದನು. ಮುಂಡಿಗೆ ಹಿಂಡಿನ ಸುತ್ತ ಹೋಳಿ ಅವಳನ್ನು ಕಂಡನು. ಅವಳನ್ನು ಹಿಡಿದು, ಹೆಗಲೇರಿಸಿಕೊಂಡು ಈಸುತ್ತ ಬಂದವನು “ಹಾಲ ಶರಧಿಯ ಕಂಡೆ, ನೀಲ ವರ್ಣವ ಕಂಡೆ, ನಾರಿಯು ಮಿಂದ ಮಡಿಯನೂ ಕಂಡೆ” ಎಂದು ಹೇಳಿತ್ತ, ಅವಳನ್ನು ತನ್ನ ಹೆಗಲಿನ ಮೇಲೆ ಕೂಡ್ರಿಸಿಕೊಂಡು ಈಸುತ್ತ ದಂಡೆಗೆ ಬಂದನು. ಅವಳು “ನಾನು ದೊಡ್ಡ ತೆರೆ ಬಂದು ಬಳಿದು ಹೋಗಲಿಲ್ಲ. ನನ್ನ ಅಕ್ಕಂದಿರು ನನ್ನನ್ನು ತೆರೆಯಲ್ಲಿ ನೂಕಿ ಹಾಕಿದರು. ನನ್ನ ಸೀರೆ, ಚಿನ್ನ ಎಲ್ಲವನ್ನೂ ಪಾಲು ಮಾಡಿಕೊಂಡರು. ಹೊಯಿಗೆಯ ಅಡಿಯಲ್ಲಿ ಅವನ್ನು ಹುದಿಗಿಟ್ಟು ಮನೆಗೆ ಹೋದರು” ಅಂದಳು.

“ಅವನು ನೀನು ಅದ್ಯಾವುದಕ್ಕೂ ಆಸೆ ಮಾಡಬೇಡ. ನಿನಗೆ ಮನೆಯಲ್ಲಿ ಬೇಕಾದಷ್ಟು ಪಟ್ಟೆ ಸೀರೆ, ಚಿನ್ನ ಉಂಟು, ಮನೆಯಲ್ಲಿದ್ದ ಚಿನ್ನ ಪಟ್ಟೆಗಳನ್ನೇ ಉಟ್ಟುಕೋ” ಎಂದು ಹೇಳಿ ತನ್ನೊಡನೆ ಅವಳನ್ನು ತನ್ನ ಮನೆಗೆ ಕರೆದುಕೊಂಡು ನಡೆದನು, ತಿರುಗಿ ನೋಡಲೂ ಇಲ್ಲ.

ಅಪ್ಪ, ಅವ್ವ, ಅಕ್ಕಂದಿರು ತಿರುಗಿ ಮನೆಗೆ ಹೋದರು. ಅಕ್ಕಂದಿರು ತಮ್ಮ ಮನೆಗಳಿಗೆ ಹೋಗುವಾಗ ತಾವು ಹುದಿಗಿಟ್ಟಿದ್ದ ಪಟ್ಟೆ ಸೀರೆ, ಚಿನ್ನಗಳನ್ನು ತೆಗೆದುಕೊಂಡು ತಮ್ಮ ಮನೆಗೆ ಹೋದರು.

ಮಾಲಕ್ಷ್ಮಿ ಗರ್ಭಿಣಿಯಾದಳು. ಅವಳಿಗೆ ಒಂದು ಗಂಡು ಮಗು ಹುಟ್ಟಿತು. ಅವನ ಪುಣ್ಯಾಹಕ್ಕೆ ಊರೂರುಗಳ ಜನರಿಗೆ ಕರೆ ಕೊಟ್ಟಿದ್ದರು. ಬಹಳ ಜನ ಭಟ್ಟರೂ ಊರೂರುಗಳ ಜನರೂ ಅವರ ಮನೆಗೆ ಹೋದರು. ಅವಳ ಅಕ್ಕಂದಿರ ಮನೆಗಳಿಗೂ ತಂದೆ ಮನೆಗೂ ಕರೆ ಕೊಟ್ಟಿದ್ದರು. ಅವರೆಲ್ಲರೂ ಬಂದಿದ್ದರು. ಅಕ್ಕಂದಿರು ತಾವು ಪಾಲು ಮಾಡಿಕೊಂಡಿದ್ದ ಅವಳ ಪಟ್ಟಿ ಸೀರೆ, ಚಿನ್ನ ಹಾಕಿಕೊಂಡೇ ತಂಗಿಯ ಮನೆಗೆ ಬಂದಿದ್ದರು.

ಅಕ್ಕಂದಿರು ಉಟ್ಟ ಸೀರೆ, ಹಾಕಿಕೊಂಡಿದ್ದ ಚಿನ್ನದ ದಾಗಿನೆಗಳನ್ನು ಗಂಡನಿಗೆ ತೋರಿಸಿ ಮಾಲಕ್ಷ್ಮಿ “ಇದು ನನ್ನ ಸೀರೆ, ಇದು ನನ್ನ ಚಿನ್ನ” ಎಂದು ಹೇಳಿದಳು. ಗಂಡನು ಅದು ಹೋಗಲಿ, ಅದಕ್ಕೆಲ್ಲಾ ಆಶೆ ಮಾಡಬೇಡ. ದೇವರ ದಯೆಯಿಂದ ನಿನಗೆ ಚಿನ್ನ ಸೀರೆ ಯಾವುದಕ್ಕೂ ಕೊರತೆಯಿಲ್ಲ ಎಂದು ಸಮಾಧಾನ ಮಾಡಿದನು.

ಎಲ್ಲರೂ ಪುಣ್ಯಾಹದ ಊಟ ಮಾಡಿ, ಮಗುವನ್ನು ಹರಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೋದರು.

ಹೇಳಿದವರು: ನಾಗಿ ಕೋಂ ಶಿವಪ್ಪ ಪಟಗಾರ, ನವಿಲಗೋಣ, ೧೩-೧೧-೧೯೭೭