ಪದ್ಮಾವತಿ ಸೂಳೆ. ಅವಳಿಗೆ ಪದ್ಮಗಂದಿನಿ ಮಗಳು. ಸುರಸುಂದರಿ. ಜಕಣಾಚಾರಿ ಕಟ್ಟಿದ ಮನಿಗೆ ಬೋರ್ಡ ಹಕಿತ್ತು. ಬರುಕೆ ಬಹಳ ಜನ ಅಸಿ ಮಾಡಿದ್ರು. “ನಿನ್ನ ಕೂಡಬೇಕು” ಹೇಳಿ ನಿಬಂಧನೆ ಹಾಕ್ತು. ಬೋರ್ಡ ಹಚ್ಚಿಸಿತು.

ಮೊದಲು ಕೆಲಸಿ, ಅವನಿಗೆ ಸಮಾದಾನ ಮಾಡಬೇಕು

ಯೆರಡನೆ ಆನೆ ಅದ್ಕೂ ಸಮಾದಾನ ಮಾಡಬೇಕು

ಮೂರನೆ ಹುಲಿ ಅದ್ಕೂ ಸಮಾದಾನ ಮಾಡಬೇಕು

ನಾಲ್ಕನೇ ಸರ್ಪ ಅದ್ಕೂ ಸಮಾದಾನ ಮಾಡಬೇಕು

ಸಮಾದಾನ ಮಾಡಿ, ಮುಂದೆ ಮನೆ ಪ್ರವೇಶ ಮಾಡಿ ಅದ್ರ ಸಂಪರ್ಕ ಮಾಡಬೇಕು. ಸಂಪರ್ಕ (ಕೂಡ್ಬೇಕು) ಹೇಳಿ ಮಾಡ್ಬೇಕಾದರೆ ಇಷ್ಟೆಲ್ಲಾ ಕೆಲ್ಸ ಮಾಡಬೇಕು. ಮನಿವಳ್ಗೆ ಅಂತಃ ಪುರದಲ್ಲಿ ಬೆಕ್ಕದೆ. ತಲಿಮೇನೆ ದೀಪ ಹಚ್ಚಿಟ್ಟದೆ. ದೀಪಾ ನೆನ್ಸಬೇಕು, ಆದ್ರ ಮಗಳ ಸಂಪರ್ಕ ಮಾಡಬೇಕದ್ರೆ.

ಸಾವಿರಾರು ಜನ ಹೋಗಿ ಗೆಲ್ಲು ಕಾಗಲಿಲ್ಲ. ಸೋತ್ರು ತಿರುಗಿ ಹೋದ್ರು. ಒಬ್ಬ ಅರಸು ಮಗ ಜಕಣಾಚಾರಿ ಹತ್ರೆ ಹೋದ. ಸಾವಿರಾರು ಜನ ಕೆಲ್ಸಿ ಕೊಂದ್ ಹಾಕ್ದ. ಆನಿ ವಬ್ನ ಕೊಂದೆತು. ಹುಲಿ ತಿಂತು. ಸರ್ಪ ಕಡಿತದೆ. ಯಾರೂ ಹಿಂದೆ ಬರಲಿಲ್ಲ.

ಜಕಣಾಚಾರಿ ಹತ್ರ “ಯೇನಪ್ಪ ಅರಸರು ಬೇರೆ ಜನರು ಹೋದವರು ತಿರುಗಿ ಬರಲಿಲ್ಲ. ನಾಶವಾದರು. ಅದ್ರ ಗೆಲ್ಲುವದು ಹೇಗೆ? ಹೇಗೆ ಅದ್ರ ಗೆಲ್ಲಬೇಕಾಯ್ತು?” ಜಕಣಾಚಾರಿ ಹತ್ರ ಕೇಳ್ದ. ವಿಚಾರ ಮಾಡ್ದ. “ಅದರ ಗೆಲ್ಲಬೇಕಲ್ಲ. ಹೇಗೆ ಗೆಲ್ಲಬೇಕು?” ಕೇಳ್ದ.

ಜಕಣಾಚಾರಿ ಯೇನಂದಾ “ಯೆಲಾ ರಾಜಾ ನಾ ಹೇಳ್ದೆ ರೀತಿಯಾಗಿ ಮಾಡಕಂಡ್ ಹೋದ್ರೆ ಅದ್ನ ಗೆಲ್ಲಬಹುದು. ಪಸ್ಟ್‌ಗೆ ಕೆಲ್ಸಿ ಸಿಕ್ತಾನ್. ಕೂಪ ಮಸ್ದ ಕೂಡ್ಲೆ ಮರನ ಗೊಂಬಿ ತಕಂಡ ಹೋಗಬೇಕು. ಅವನ ಕೈಲಿ ಕೊಡಬೇಕು. ಗೊಂಬಿ ಕೊಟ್ಟ ಕೂಡ್ಲೆ ಗೊಂಬಿಜೌರ ಮಾಡುಕೆ ಕೆತ್ತತ್ತೆ ಕೂತ. ಇವ ಮುಂದೆ ಪಾಸಾದ. ಮುಂದೆ ಹೋದ ಕೂಡ್ಲೆ “ಕಬ್ ತಕ್ಕೊಬೇಕು. ಒಂದ ಹೊರಿ ಆನಿ ಬಾಯ್ಗೆ ಕೊಡಬೇಕು. ಅದು ತಿಂತಾ ಇರ್ತದೆ.” ಇವ್ನ ಸುದ್ದಿಗೆ ಬರೊದಿಲ್ಲ. ಇವ ಮುಂದೆ ಪಾಸಾದ. ಮುಂದೆ ಹುಲಿ ಬಾಯಿ ಕಳಕಂಡ್ ಬತ್ತದೆ. ಬಾಯಿಗೆ ನಾಯಿಮರಿ ಕೊಡಬೇಕು. ನಾಯಿ ಮರಿ ಜೋಬಲ್‌ಹಾಕಂಡೆ ಹೋಗು ಹೇಳಿಕೊಟ್ಟಿದ್ದ. ಇವ ಮುಂದೆ ಸಾಗ್ತ ಮತ್ತೊಂದು ರೂಮಿಗೆ. ಸರ್ಪ ಭಯಂಕರ ಮಾಶೇಶ. ದೊಡ್ಡದು ಅದು. ಇವನ ಕೊಲ್ಲುಕೆ ಹೆಡಿ ಬಿಚ್ಕಂಡ್ ಬತ್ತದೆ. ಬೋರೆಗುಡ್ಡ ಬಂದೆ ಕೂಡ್ಲೆ ಹತ್ ಕೊಳಿ ಮೊಟ್ಟೆ ಕೊಡು ಅಂದ ಜಕಣಾಚಾರಿ ಹೇಳಿ ಕೊಟ್ಟಿದ್ದ.

ಕೊಟ್ಟ ಆಚೆ ರೂಮಿಗೆ ಹೋದ. ಅಲ್ ಬೆಕ್ಕದೆ. ಬೆಕ್ನ ತಲಿಗೆ ದೀಪ ಹಚ್ಚಿಟ್ಟಿತ್ತು. ದೀಪ ನಂದ್ಸ್‌ಬೇಕು. ಅವ ವಂದ್ ಇಲಿಯನ್ನು ಕಿಸಿಲಿ ಹಾಯ್ಕೊಂಡ್ ಹೋಗಬೇಕು. ಇಲಿ ಬಿಟ್ ಬಿಟ್ಟ. ಬೆಕ್ಕು ಇಲಿಯನ್ನು ಕಂಡು ಗಾಬರಿಯಿಂದ ಇಲಿ ಹಿಡೋಕ್ ವೋಡ್ತು. ತಲಿ ಮೇನ್ನ ದೀಪ ಹಚ್‌ದ ಹತಿಗೆ ಕಮಚಿ ಕೆಳ್ಗೆ ಬಿದ್ ಹೋಯ್ದು. ಆಗ ಪದ್ಮಗಂದಿನಿ ಮಗಳು ಹೇಳ್ತದೆ “ಇಂತಾ ವ್ಯಕ್ತಿ ಜಗತ್‌ನಾಗೇ ಇಲ್ಲ. ನಾ ಸೋತಿ. ಆಸ್ತಿ ಅಟ್ಟೂ ನಿನ್ಗೆ ಬಿಟ್‌ಕೊಟ್ತೆ. ನೀನು ನನ್ನ ಕೂಡು” ಹೇಳ್ತದೆ. ರಾಜ ಮಾಡ್‌ಕಂಡ್ರು. ಅಲ್ಗೆ ಕತಿ ಮುಗಿಯಿತು.

 ಹೇಳಿದವರು:

ಶ್ರೀ ಹೊನ್ನಪ್ಪ ಸಂಕು ಪಟಗಾರ, ಮಾಸೂರ,
ತಾಲೂಕಾ ಕುಮಟಾ