ವಂದಲ್ಲಾ ವಂದೂರಗೆ ವಂದ್ ಗಂಡಾ ಹೆಂಡ್ತಿ ಇದ್ರು. ಅವ್ರಗೆ ವಂದೆ ಹುಡ್ಗಿ ವಂದೆ ಹುಡ್ಗಾ. ಎರಡು ಜನ ಮಕ್ಕಳಿದ್ರು. ಹೆರಿ ಹುಡ್ಗಿ ಮದ್ವಯಾಗದೆ. ಹುಡುಗನಿಗೂ ಮದವೆಯಾಗಿತ್ತು. ಕೆಲವೇ ದಿವ್ಸದ ಮೇಲೆ ತಾಯಿ ತೀರಿಕೊಂಡಳು. ತಂದೆ ಪ್ರಾಯದವನಾದ್ದರಿಂದ ಎರಡನೇ ಮದುವೆಯಾದ.

ಹೀಗೆ ಕಾಲ ಕಳೆಯುತ್ತಿರುವಾಗ ಎರಡನೇ ಹೆಂಡತಿಗೆ ಒಂದು ಹುಡುಗಿ ಹುಟ್ಟಿದಳು. ದಿನ, ದಿನ ಕಳೆದು ಪ್ರಾಯಪ್ರಬುದ್ಧಳಾದಳು. ಹುಡುಗಿ ತಂದೆ ಹುಡುಗಿ ಮದುವೆಗೆ ಗಂಡನ್ನು ನಿಶ್ಚಯ ಮಾಡ್ದ. ಒಳ್ಳೆ ವಿಜೃಂಭಣೆಯಿಂದ ಮದುವೆ ಮಾಡಿ ತನ್ನ ಮನೆಯಲ್ಲಿ ಅಳಿಯನ ಇಟ್ಟುಕೊಂಡ ಕಾಲ ಕಳೆಯುತ್ತಾ ಬಂತು.

ಒಂದು ದಿವಸ ಆ ಹೆರಿಯ ಹೆಂಡತಿಯ ಹುಡುಗ ಹೊಲಕ್ಕೆ ಹೋದ ಸಮಯ ಅವ ಬರುವದರೊಳಗೆ ಕಿರೇ ತಾಯಿ ಅವನ ಹೆಂಡತಿಯನ್ನು ಕೊಂದು ಪಾಯಖಾನಿಯೊಳಗೆ ಹಾಕಿ ಬಿಟ್ಟಳು.

ಹೊಲಕ್ಕೆ ಹೋಗಿ ಬರುವದರೊಳಗಾಗಿ “ನನ್ನ ಹೆಂಡತಿ ಎಲ್ಲಿಗೆ ಹೋಗಿದ್ದಾಳೆ” ಯೆಂತ ಚಿಕ್ಕ ತಾಯೊಯೊಡನೆ ಕೇಳಿದ. “ನಿನ್ನ ಹೆಂಡತಿ ನನ್ನ ಹತ್ತಿರ ಜಗಳ ಮಾಡಿಕೊಂಡು ಅವಳ ತಾಯಿ ಮನೆಗೆ ಹೋಗಿದ್ದಾಳೆ”. ಅದನ್ನು ಕೇಳಿದ ಹುಡುಗ ಅವಳ ತಾಯಿ ಮನೆಗೆ ಹೋಗಿ ತಿಳಿದುಕೊಳ್ಳುವುದಕ್ಕಾಗಿ ಹೋದ. ಅವಳು ಅಲ್ಲಿಗೆ ಬರಲಿಲ್ಲ ಅಂತ ತಿಳಿದ. ಅವ ಪರತ ಬಂದ. ಅವ ಬರುವದರೊಳಗೆ ತನ್ನ ಮಗಳಿಗೆ ಅವಳ ಆಭರಣವೆಲ್ಲವನ್ನು ಹಾಕಿ “ಇದೋ ನಿನ್ನ ಹೆಂಡತಿ ಬಂದಿದ್ದಾಳೆ” ಎಂತ ಹೇಳಿದಳು.

ಆವಾಗ ರಾತ್ರಿ ಕಾಲವಾಯಿತು. ಮಲಗಿಕೊಂಡಾಗ ಚಿಕ್ಕ ತಾಯಿ ತಿಮ್ಮಪ್ಪನ ಹಾಸಿಗೆಗೆ ಹೋಗು ಅಂತು ಮಗಳಿಗೆ. ಆ ಮೇಲೆ ಇದು ನನ್ನ ಹೆಂಡತಿಯಲ್ಲವೆಂದು ಅದರ ಆಚಾರ ವಿಚಾರ ಮೇಲೆ ತಿಳಿದುಕೊಂಡ ತಾಯಿ ಕಳಿಸ ಕೊಟ್ಟಿದೆ.

ಆವಾಗ ತೆಳಿದ ಮೇಲೆ ಸೊಮ್ಮಗೆ ಮನೀಲೆ ಹಾಸ್ಗಿ ಬಿಟ್ಟಯೆದ್ ಬಂದಾ. ತಾಯಿ ಹುಡ್ಗಿ ಕೈಲ್ ಕೇಳ್ತು. “ಸುಮ್ನೆ ಇದ್ದಾ; ತನ್ನ ಮೈ ಮುಟ್ಟಲಿಲ್ಲ, ನನ್ನೊಡನೆ ವಂದ ಮಾತನ್ನು ಆಡಲಿಲ್ಲ. ಸೊಮ್ಮನೆ ನಿದ್ರೆ ಮಾಡಿ ಮಲಗಿ ಬಿಟ್ಟನು”. ಅಂತ ಹೇಳಿದಳು.

ಹೀಗೆ ದಿನ ಕಳಿಯುತ್ತಿರುವಾಗ ಒಂದು ದಿವಸ ನೇರವಾಗಿ ಕೇಳಿದಳು. ಚಿಕ್ಕ ತಾಯಿ “ಏನು? ಹೆಂಡತಿಯ ಮೇಲೆ ಈ ರೀತಿ ಪ್ರೇಮಿಲ್ಲದ ವ್ಯವಹಾರ ಮಾಡುತ್ತೀ?” ಕೇಳುವಾಗಾ ಚಿಕ್ಕತಾಯಿ ಹತ್ತಿರ “ಇದು ನಿನ್ನ ಮಗಳು, ನನ್ನ ಹೆಂಡತಿ ಕೊಂದು ಹಾಕಿ ಬಿಟ್ಟಿದೆ ನೀನು. ನಾನು ತಿಳಿದುಕೊಂಡಿದ್ದೇನೆ.”

ಪಾಯಿಖಾನಿಯೊಳಗಿದ್ದ ಹೆಣವನ್ನು ಮೇಲೆ ತೆಗಿದು ಯೆಲ್ಲವ್ರಿಗೂ ಗೊತ್ತಾಯಿತು. ಆಚೆ ಮನೆಯವರ ಕೂಡ ಹೆಣ ಸುಟ್ಟು ಹಾಕಿದ. ಚಿಕ್ಕ ತಾಯಿಗೆ ಜೀವಾವದಿ ಶಿಕ್ಷೆ ವಿಧಿಸಿದರು.

ನನ್ನ ಕತೆ ಈಗೆ ಮುಗಿಯಿತು.

ಹೇಳಿದವರು: ಶ್ರೀ ಧಾಕು ಮಾರು ಪಟಗಾರ, ಮಸಳೆನಾಲು, ತಾ: ಕುಮಟಾ