ವಂದೂರೊಳಗೆ ಅಜ್ಜಿ ಮೊಮ್ಮಗ ಕಾಲಾ ಕಳೆಯುತ್ತಿದ್ದರು. ಒಂದು ದಿವಸ ಅಜ್ಜಿಯು ಮೊಮ್ಮಗನ ಹತ್ತರ “ಮಗನೇ, ನೀನು ರಾಗೀ ಬೀಸಲಿಕ್ಕೆ ಕಲ್ಲನ್ನು ತರಬೇಕು. ರೊಕ್ಕ ನಾನು ಕೊಡುತ್ತೇನೆ” ಎಂದು ಹೇಳಿದಳು. ಅಜ್ಜವ್ವಿ ಕೊಕ್ಕ ಕೊಟ್ಟಳು ಮತ್ತು ಊಟ ಮಾಡಲು ಬುತ್ತಿ ಕಟ್ಟಿ ಹೇಳಿದಳು. “ಮೊಮ್ಮಗನೇ, ನೀರು ಕಂಡಲ್ಲಿ ಊಟಮಾಡು, ಸಂಜಿಯಾದಲ್ಲಿ ಮಲಗಿಕೊಳ್ಳಬೇಕು”.

ಆ ಮಾತನ್ನು ಕೇಳಿದ ಮೊಮ್ಮಗ ಮನೆಯಿಂದ ಹೊರಟೇ ಬಿಟ್ಟ. ಸಮೀಪದಲ್ಲಿ ನೀರಿನ ಹಳ್ಳ ಸಿಕ್ಕಿತು. ಬುತ್ತಿ ಬಿಚ್ಚಿ ಊಟ ಮಾಡಿ ಮುಂದೆ ಹೋಗುತ್ತಿರುವಾಗ ಹೋಗುತ್ತಾ ರಾತ್ರಿಯಾಯಿತು. “ಸಂಜಿಯಾದಲ್ಲಿ ಮಲಗು ಮಗನೇ” ಅಂತ ನನ್ನಜ್ಜಿ ಹೇಳಿದಳು ಎಂದು ತಿಳಿದುಕೊಂಡ ಮೊಮ್ಮಗ ದಾರಿ ಮೇಲೆ ಮಲಗಿ ಬಿಟ್ಟ. ಆ ದಾರಿ ಕಳ್ಳರು ಹಳ್ಳಿ ಬಂದು ಕಳವು ಮಾಡುವ ದಾರಿ. ಎಂಟು ಮಂದಿ ಕಳ್ಳರು ಬರುತ್ತ ಬರುತ್ತ ದಾಟಿ, ದಾಟಿ ಏಳು ಮಂದಿ ದಾಟಿ ಬಂದರು. ಎಂಟನೇಯವನು “ನಾವು ಬರುತ್ತಿರುವ ದಾರಿ ಈ ತುಂಡು ದಾರಿಯಲ್ಲಿ ಬಿದ್ದಿದೆ” ಎಂದು ಕಾಲಲ್ಲಿ ತೂರಿ ಬಿಟ್ಟ.

ಅಜ್ಜಿ ಮುದುಕಿಯ ಮೊಮ್ಮಗ ಸಿಟ್ಟಿಗೆದ್ದು “ಅಜ್ಜ(ಜ್ಜಿ) ಮುದುಕಿಯ ಮೊಮ್ಮಗ ಎಂದು ಸಸಾರ ಮಾಡಿ ತುಳಿದು ಬಿಟ್ಟಿಯಾ?” ಎಂದು ಅಬ್ಬರ ಮಾಡಿದ.

ಕಳ್ಳರು ಹೇಳಿದರು ನೀನೆಲ್ಲಿಗೆ ಹೊರಟಿರುವೇ? “ನಾನು ರಾಗಿ ಕಲ್ಲು ತರುಕೇ ಹೊರಟವ” “ನಮ್ಮ ಸಂಗಡ ಬಾ ರಾಗೀಕಲ್ಲನ್ನು ನಿನಗೆ ಕೊಡುತ್ತೇವೆ”.

“ನಾ ಬಂದು ಏನು ಮಾಡಬೇಕು?” ಕೇಳಿದ ….  ನೀನು ನಮ್ಮ ಸಂಗಡ ಬಂದು ಮನೆಯೊಳಗೆ ಪ್ರವೇಶ ಮಾಡಿ (ಮಾಡು) ನಿನಗೆ ಬೇಕಾದ ರಾಗಿ ಕಲ್ಲನ್ನು ನಾವು ನಿನಗೆ ಕೊಡಿಸುತ್ತೇವೆ” ಎಂದು ಕಳ್ಳರು ಹೇಳಿದರು. ಅವನಿಗೆ ಚೀಲದಲ್ಲಿ ಮಳಲು ಹಾಕಿ ಅವನ ಹತ್ತಿರ ಕೊಟ್ಟರು. ಮನೆಯ ಹಂಚು ತೆಗೆದು ಅವರು ಮನೆಯ ಒಳ ಪ್ರವೇಶ ಮಾಡಿದರು. “ಏ ಕಣ್ಣು ಮುಚ್ಚಿಕೊಳ್ಳಿ ಹೊಯ್ಗೆ ಕಣ್ಣಿಗೆ ಬೀಳಬಹುದು” ಎಂದು ಕೂಗಿದ.

ಆ ಮೇಲೆ, ಯಾಲಕ್ಕಿ ಹಾಕಿ ಪಾಯಸ ಮಾಡಿದ್ದರು, ಅವರ ಮನೆಯಲ್ಲಿ; ಆ ಪರಿಮಳ ಕೇಳಿ ಕೆಳಗಿಳದ. ಆ ಮನೆಯಲ್ಲಿ ವಂದ ಅಜ್ಜಿ ಅಲ್ಲೇ ಮಲಗಿತ್ತು. ಪಾಯಸದ ಗಡಿಗೆ ಹತ್ತಿರ, ಅವನಿಗೆ ಮನೆಯಲ್ಲಿದ್ದ ಅಜ್ಜಿಯ ಹಂಬಲವಾಯಿತು. ಅಜ್ಜವ್ವಿ ಬಾಯಿಗಿಟ್ಟು ಹಾಕಿದ ಪಾಯಸವ ಅಜ್ಜಿ ಹ್ಯಾಗದೆ ಅಂದಿ, ನಿದ್ರೆಯಲ್ಲಿದ್ದ ಅಜ್ಜಿ ಗದ್ದಲ ಎಬ್ಬಿಸಿ ಬಿಟ್ಟಳು. ದೀಪಾ ಹಚ್ಚಿ ನೋಡುವಾಗ ಎಲ್ಲರೂ ಅಡಗಿ ಕೂತು ಬಿಟ್ಟಿದ್ದಾರೆ.

ಆಗ ಎದ್ದವರು “ದೇವರೇ, ಮೇಲೆ ಹೋಗುವವನಲ್ಲ, ನಿನಗೆ ಗೊತ್ತಿದ್ದರೆ ಸಾಕು” ಎಂದರು ದೇವರಿಗೆ; ಇದನ್ನು ಕೇಳಿದ ಅಜ್ಜಿ ಮುದುಕಿ ಮೊಮ್ಮಗ ಸಿಟ್ಟು ಬಂದು “ಮೇಲಿದ್ದವನ ನನ್ನ ಹೆಸರನ್ನೇ ಕೇಳುತ್ತಿದ್ದಿರಲ್ಲ? ಮ್ಯಾಲೆ ಕೂತವರು ನಿನ್ನಪ್ಪನೇನೂ?” ಅಂತ ಗದರಿಸಿ ಬಿಟ್ಟ ಎಲ್ಲರೂ ಒಟ್ಟಾಗಿ ಕಳ್ಳರನ್ನು ಇವನನ್ನೂ ಬಂಧಿಸಿ ಬಿಟ್ಟರು.

ಊರ ಗೌಡರಲ್ಲಿ ಪ್ರಕರಣ ಹೋಯಿತು. ತೀರ್ಮಾ ಕೊಡುವಾಗ ಅಜ್ಜವ್ವಿಯ ಮೊಮ್ಮಗ “ರಾಗಿ ಕಲ್ಲಿಗಾಗು ನಾನು ಹೋಗುತ್ತಿರುವಾಗ ಈ ಕಳ್ಳರು ನನ್ನನ್ನು ರಾಗಿಕಲ್ಲು ಕೊಡುತ್ತೇವೆ ಎಂದು ಹೇಳಿ ನನ್ನನ್ನು ಇಲ್ಲಿಗೆ ತಂದರು. ನನಗೆ ರಾಗಿ ಕಲ್ಲು ಕೊಟ್ಟು ಕಳಿಸಿ” ಅಂತ ಹೇಳಿದ. ಕಳ್ಳರನ್ನು ಜೈಲಿಗೆ ಹಾಕಿ ಶಿಕ್ಷೆಯಾಯಿತು. ರಾಗಿಕಲ್ಲನ್ನು ಕೊಟ್ಟು ಇವನನ್ನು ಕಳಿಸಿದರು.

 

ಹೇಳಿದವರು:

ಶ್ರೀ ಧಾಕು ಮಾರು ಪಟಗಾರ,
ಮಸಳೆಸಾಲು, ಅಘನಾಶಿನಿಯಲ್ಲಿ ನನ್ನ ಭಾವ ಶ್ರೀ ಗಜಾನನ ಪಂಡಿತರ ಮನೆಯಲ್ಲಿ
ಹೇಳಿಸಿ ಬರೆದುಕೊಂಡಿದ್ದು. ೭೫ ವರ್ಷ, ಕಲಿಯಲಿಲ್ಲ, ರೈತಾಬಿ ದಂಧೆ, ತಕ್ಕೊಂಡ
ದಿನಾಂಕ: ೨೫-೦೯-೯೯