ಹೀಗೆ ಒಂದೂರಲ್ಲಿ ನಗದರಸು ಇದ್ನಂತೆ. ನಗದರಾಜ ಇದ್ರೆ ಪರಾಯದ ಮೇಲೆ ವಂದ ಹುಡುಗಿ ಹೆರಿಯಳು, ಹುಡ್ಗ ಕಿರ್ಯವ (ಹುಟ್‌ದು). ಸಾಮಗ್ರಿಗಳು ತೋಲಿದೆ ಮನೆ ಭೂಮಿಗದ್ದೆ ಪರದಾನಿ ಇಟ್ಕಂಡರೆ, ಅಜಳತಿ ಪರದಾನಿಗೆ ವಯ್ಸಿ ನಗದರಸು ರಾಜ ಕಚೂರ ಲೆಕ್ಕ ಪತ್ರ ನೋಡ್ಕಂತ ವಳದರು. ದೇವರ ಪೂಜೆ ಮಾಡೂಕೆ ಭಟ್ರ ಇಟ್ಕಂಡಿರು ಹದ್ನಾಕ್ನೆವರ್ಸೆ ಮಗಳು ಪರಾಯಕ್ಕ ಬಂತು. ರಾಜತನಕೆ ಲಗ್ನ ಮಾಡ್‌ಕೊಟ್ರು, ಒಂದೆಯ್ಡು ವರ್ಷ ಕಳೂರೊಳ್ಗೆ ಮುಪ್ನ ಕಾಲ ಬಂತು, ಗಂಡ ಹೆಂಡ್ತಿ ಹುಡುಗನ ಲಗ್ನ ಮಾಡಬೇಕು ಹೇಳಾರ್‌ಕಂಡಿದ್ರು.

‘‘ಚಲೋ ನೆಂಟಸ್ತನ ಹೆಣ್ಣಗಾರ್ಕಿ ಮಾಡ್ಕಂಬಾ ಹೇಳಿ’’ ನಗದಸುರ ಪರದಾನಿ ಕಳಸ್‌ದ. ಪರದಾನಿ ಚಲೋ ನೆಂಟಸ್ತನ ಮಾಡ್ಕಂಡೆ ಬರವಂತವನಾದ. ಚಲೋ ದಿವಸ ವಾರಮೊಕವ ಹುಡ್ಕಿ ಲಗ್ನ ಮೊರ್ತ ಇಟ್ರು, ಪರದಾನಿ ನಾ ಹೆಣ್ಣಗಾರ್ಕಿ ಮಾಡ್ಕಬಂದನೆ, ಇಂತಾ ದಿವಸಕೆ ಆಯಿತಾರ ದಿವಸ ಲಗ್ನ ನಿಕ್ಕಿ ಮಾಡನೆ ಹೇಳ್ದ.

ಅರಸ ಬೇಕಾದ ಸಾಮಗ್ರಿಗೊಳೆಲ್ಲಾ ತಯಾರ ಮಾಡು, ಚಪ್ರಚಾವಡಿ ಹಾಕವಂತವನಾಗು ಹೇಳ್‌ಹೇಳವಂತವನಾದ. ಪರದಾನಿ ಗನಾಣಲು ಎಲ್ಲ ಸಾಮಗ್ರಿ (ತರಿಸಿದ) ಕೇಳೂ ಊರಿಗೆ ಡಂಗ್ರ ಸಾರಿ ಕೇಳದೂರಿಗೆ ವಾಲೆ ಬರದು ಸಾಗ್ಸಿ ಬಿಡ್ವ. ನಗ್ನ ನಿಕ್ಕಿ ಮಾಡಿ ನಗ್ನಾಯ್ತು. ಬೇರೆ ಅರಸ್ತನಕೆ ಹೋಗಿ ಐದ್‌ದಿವನ ಉಳಿದ ಸಾಸ್ತ್ರ ಮಾಡ್ಕಂಡಿ ಮನಿಗೆ ಬರುವಂತವನಾದ, ಸುಕಸಂತೋಸದಲ್ಲಿ ಎಲ್ಲಾ ಉಳವಂತವರಾದ್ರು. ನಗದರಸು ಕಚೂರಿಗೆ ಹೋಗ್ತ ಬರ್ತಉಳ್ದ. ಶೀಕಾಗಿ ಮರಣ ಹೊಂದನಂತೆ ಆದ.

ನಗದಸುಮಗ ಚಲೋ ದಿವ್ಸ ಕೇಳವಂತವನಾದ. ಪರದಾನೀ ತಂದ್ಯವ್ರು ಲೆಕ್ಕ ಪತ್ರ ನೋಡ್ಕಂತಾ ಇದ್ರು. ನಾನು ಅಪ್ಪನಂತೆ ಮಾಡ್ಬೇಕಾತದೆ, ಯಜಮಾನ್ಕಿ ನೀವಯ್ಸಕ ನಾನು ತಾಜಕಚೂರಿಗೋಗಿ ಲೆಕ್ಕ ಪತ್ರ ನೋಡ್ಕಂತ ಇರ್ತೆ; ಬಟ್ಟ ಬಿಲಾಮಣರ ಕರದ ದೇವರ ಪೂಜಿಗೆ ತಂದಿರವಂತೆ ಮಾಡ್ಕಂತಾ ಇರಬೇಕು, ಹೇಳ ತಾಗ್ಸದ ರಾಜಕಚೂರಿಗೆ ಹೋಗ್‌ಬರೂದು.

ಒಂದಲ್ಲ ಒಂದ ದಿವಸ್ ಬಿರಾಮಣ ಹತ್ತಿರ ಹಿಂಡತಿ ಚಂದಾಗಿದ್ರೆ (ಹಿಂಡತಿ) ಅಕ್ಕೆ ತಮ್ಮ ಕೈಲಿ ರೊಕ್ಕವಾದ್ರೆ ದೋಸ್ತರು, ಗೆಣಿಯರು, ನಗದರಸು ಮಗ ಹಿಡಂಬಿಲೆ ಎಚ್ಚರಿಲ್ಲಡೆ ಕೆಟ್ಟ ಹೇಳ್ ಬರದಿಟ್ಟನೆ.

ನಗದರಸು ಮಗ ಬಂದ ಮಿಂದವ ದೇವರ ಪೂಜೀಗೆ ದೇವರ ಸಜ್ಜನಕೆ ಹೋಗವಾಗೆ ಪತ್ರ ತೆಗೆದು ನೋಡವಂತವನಾದ, ಇದೇನಾಶ್ಚರ್ಯ! ಹೇಳ್ದ ತಗದಿ ನೋಡವಂತವನಾದರೂ ಬಟ್ರುಗಳು ಬಂದ್ರು.

ಹೀಗೆ ಬರ್ಯೂ ಕಾರಣ್ಯೀನು? ಕಪಾಟಿನ ವೆಟ್ಟಿಗಿಲಿ ಹಾಕವಂತನಾದೆ. ರಾಜಾ ಆಲಚ್ನಿ ಮಾಡ್ದ್‌ಕಾರಣಯೇನು? (ಬಟ್ರು ಕೇಳ್‌ದ್ರು) ಉಪಾಯ ಮಾಡ್ತೆ ನಾನು, ಹೇಳ ಪ್ಯಾಟಿಲಿ ಕುಟ್ಟ ಸಾಮಾನಾಗ ಬೇಕು ಲವಂಗ, ಜಾಯಿಕಾಯಿ ಹೇಳಿ ಹೇಳವಂತವನಾದ. ಚಲೋ ಕುಟ್ಲ ಮಾಡಸದರೂ ಗೌಡಿರೆಲ್ಲ ಕುಟ್ಟಮಾಡ್‌ದ್ರು.

ಅಂಡಿಲಿ ತುಂಬಿದ್ದ ವರ್ಸಾಲಿ ಯೆಯ್ಡವರ್ಸಾಲಿ ಬೇಕಾದ ಸಾಮಾನ ತಂದ್ಕಂತ ಇರಬೇಕು; ಆಡಳಿತ ನೋಡು (ಪರದಾನಿಗೆ ಹೇಳ್ದ) ಮಾರನೆ ದಿವಸ ಪೊಟ್ಲಿ ಕಟ್ಕಂಡು ನಾಡಜೋಗಿರ್ ಯಾಸತಾಳ್ ಇವರದೆಲ್ಲ ಬಳಿ ನೋಡ್ಬೇಕೂ ಅಂತ ಬಿಡ್ ರಸ್ತಿಲ್ ಹೋದ.

ಮದಿಮಾಡ್ದ ಬಳಿಕ ನೆಂಟರ ಮನಿಗೆ ಹೋದನಲ್ಲ ಹಿಂಡ್ತಿದ್ದಲೆ ಹೋದ್ರ, ಅರಸೂ ಮನಿಲ್ ದಡ್ ಸೋಮರಾಜ್ಞೆ, ಅದೇ ದಿವಸ ನನ್ಗ್‌ಮುಟಿ ಬಿಕ್ಸ ಹಾಕ ಅಂದ ಅರಸಗೋಳು ಸಮರಾಜ್ಞೆ. ಪರಿಹಾಕ್ಲಿಕ್ಕೆ ಸಕ್ಯಿಲ್ಲ. ಮೂರ್ ಗಂಟೀಗ್ ಊಟ ಮಾಡು ಅಂದು ಕೊಡ್ರಿನಾಲಿ ಬದಿಗ್ ಹೋಗ್ ಕುಳ್ಳವಂತವನಾಗು ಅಂದ. ಹೋಗಕೂತ ಜನ ಬಂದು ಊಟ ಮಾಡ್ಕಂಡಿ ಮನಿಗೋದ್ರು.

ಐದ್‌ ಗೆಂಟಿಗ್ ಬಂತು ಆದ್ರೂ ಕೂಳಿಲ್ಲ. ಕಪ್ಪಾಯ್ತು ಮಾತಾಡ್ಸ್‌ವರಿಲ್ಲ ಕೂತ್ಕಂಡೇವಳು ಮೂರ್ ತಾಸ್ ರಾತ್ರಿವರೆಗೆ ಅಲ್ಲೆ ಕುತ್ಕಂಡೆವಳ, ಕೊದ್ರಿ ಸಾರ ಕೊದ್ರಿಸಾಲಿಲ್ಲ ಇದ್ದ. ಕ್ಷೇಮ ಮಾಡ್ತ ಅರಸ ಹುಡಗಿ ಹೇಳವಂತಳು ದಾತ್ರಿಯಾದ್ರಿಂದ ವೋಟ ಉಪಚಾರ ತಕಂಡಿ ಬಂತು ನಾಜೊಗಿ ಕೂತನೆ, ತನಗೆವಂದೆ ತುತ್ ಹಾಕ್ರವ್ವ ಅಂದ ವೋಟ ಉಪಚಾರ ಮುಗಿದು ಹನ್ನಂದ ಗಂಟೆ ದಾತ್ರಿಗೆ ಮನಿಕಂಡ್ರು.

ಹುಡಗಿ ದಿನಾ ಮನಗೂಕೆ ಕೊದ್ರಿಸಾಲಿಗೆ ಬರತಿತ್ತು. ಕವಳಗಿವಳ ಆಸರ ಬೇಕಾದ ತಕಬರತಿತ್ತು. ಆವಾಗ ಕವಳ ತರಲಿಲ್ಲ ಯಾಕ ತರಲಿಲ್ಲ? ಕೇಳ್ದ. ನೆಂಟ್ರು ಗಿಂಟ್ರು ವಾಗ್‌ಕ್ಸೇವ ಮಾಡೂಕಾಯ್ತು ಕವಳತರಲಿಲ್ಲ ಅಂತ. ಬಾರಕೋಲ ತೆಗ್ದು ಬಡ್ದ ತೊಡಿಮೇಲೆಲ್ಲಾ. ಸೊಮ್ಗೆ ಉಳೀತು. ಮನಗಿದರು ಹೇಳಾಯ್ದು. “ಎಲೇ ಹುಡಗಿ, ಆಗಿನ ಹುಡತಕೆ ಈಗಿನ ಜಡತಕೆ ನಿನ್‌ಉದರದೊಳಗೆ ಹೇಗೆ ಕಾಣ್ತದೆ ಕೇಳ್ದ.”

“ಸ್ವಾಮೀ ಆ ಲೋಕ ಈ ಲೋಕ ಹದ್ನಾಲ್ಕ್‌ಲೋಕನ ನನ್ ಉದ್ರದೊಳಗೆ ಕಾಣ್ತದೆ” ಹೇಳ್ತು.

ಕುದ್ರಿ ಸಾಲಿಲಿದೆ ಹೋಗಪ್ಪ ಯೇನಂಪ್ಪಾ? “ಸ್ವಾಮಿ, ಮೊನ್ನಾಗ್ನ ಸುಮಾರ್ ಗಾಳ್ಯಗ ನಂದೊಂದೆ ಕಂಬ್ಳಿ, ಚಾಪಿ ಹಾಕಹೋಗೈದೆ. ಅದೊಂದೆ ಕಾಣ್ತದೋ, ನಿಮ್ ಉದ್ರದೊಳಗೆ” ಅಂದ ಕೇಳ್ದ. ಆವಾಗೆ ಹುಡಗಿ ಮೈಕೈ ಮಂಡಿ ಹರಿಕಂತು, ಅಪ್ಪನಿದ್ದಲೆ ದೂರಕಂತ ಹೋಯ್ತು.

“ಜೋಗಿ ಬಂದು ಮೈಮೇನ್ ಬಿದ್ದ”. ಅರಸ ಪುಲ್ಲಿಸನರ ಜನ್ರ ಕಾವಾಕಿದ್ರು. ಕೆಂಚನಾಯ್ಕ, ಹನುಮನಾಯ್ಕ, ಬರಮನಾಯ್ಕ ಹಾಲಿ ಹಾಜಿರಾಗಿ ಅಂದ್ರು. ಏನು ಸ್ವಾಮಿ? ಕೇಳ್ಕಂತ ಬರವಂತವ ರಾದ್ರು. “ಕುದ್ರಿನಾಲೀಲೆ ಬಡಜೋಗಿ ಬಂದನೆ, ಯಚಾರಿಲ್ದೆಪಚಾರಿಲ್ದೆ ಕೋಣಿಲ್‌ದಬ್ಬಿ” ಅಂದ.

ಅವರ ಬಂದ್ರು. ಜೋಗವ್ನ ಕೋಣಿಲ್ ದಬ್ ಬಿಟ್ರು, ಬೆಳಗಾಯ್ತು. ಇವ ಹೋಗಬೇಕಾರೆ ಅನ್ನ ಬುತ್ತಿ ಹೊನ್ನ ಬುತ್ತಿ ಹೋಗವಾಗೆ ಕಟ್ಕಂಡೇ ಹೋಗಿ ಬೆಳಗಾದ ಕೂಡ್ಲೆ ನೀರಿಲ್ದಲ್ಲಿ ತಲಿ ಹೊಡೀಬೇಕು ಹೇಳ್ ಹುಕುಂ ಬಿಟ್ಟ ಅರಸು.

ಅಟ್ಟೂ ಜನ ಗೋರಣ ಅಡವಿಗೆ ತಕಂಡ ಹೋಗವಂತರಾದ್ರ. “ನೀವು ಗೋರಣ ಅಡವಿಗೆ ಕರಕಬಂದಿರಿ, ಅನ್ನಬುತ್ತಿ ನಾ ಉಣ್ತಿ. ನೀವು ಹೊನ್ನಬುತ್ತಿ ಹಚ್ಕಂಡ್ ನೆಡಿರಿ” ಅಂದ.

ಅವರು ಏನ ಹೇಳಂದ್ರು “ಅನ್ನ ಕೊಟ್ಟನೂ ಸಮ, ಹೊನ್ನ ಕೊಟ್ಟನೂ ಸಮ” ಹೇಳ್ ದೇಸಾವರಿ ಹೋಗಿ ಹೇಳ ಹೊನ್ನ ಹಚ್ಕಂಡ್ರು, ತಲಿ ಕಡಿಲಿಲ್ಲ.

“ನೀವು ನಾ ಬಂದ ಊರಾಗ ಕೇಳ್ದಾಗ ಒಂದು ಯೇಳಿದಾಗ್ ಬಂದಾಗೆ ದಾರಿ ತಪ್ಪಿ ಬರೂರೆ?” ಕೇಳ್ದ. “ಬತ್ರು” ಹೇಳ್‌ರು, ಹೆಸ್ರ ತಕಂಡಿಟ್ಕಂಡ. ಹಿಂಡ್ರಿಗುಣ ನೋಡ್ದ ಹಾಗಾಯ್ತು.

 

ಹೇಳಿದವರು:

ಶ್ರೀ ಜಟ್ಟ ನಾಗಪ್ಪ ಪಟಗಾರ, ನೆರಿಬೋಳೆ ಹೆಗಡೆ ಊರು ತಾಲೂಕು, ಕುಮಟಾ-೭೦,
೧೩-೦೩-೭೦.