ತಮಿಳುನಾಡಿನಲ್ಲಿ ಪಾಂಡ್ಯದೇಶವೆಂಬುದು ಒಂದು ರಾಜ್ಯ. ಅದರ ರಾಜಧಾನಿ ಮಧುರೆ. ಅಲ್ಲಿಯ ದೊರೆ ವಲ್ಲಭದೇವ. ಇವನು ತುಂಬ ಒಳ್ಳೆಯ ರಾಜ. ತಾನು ಚೆನ್ನಾಗಿ, ಪ್ರಜೆಗಳು ಸುಖವಾಗಿರುವಂತೆ ನಡೆಯುತ್ತಿದ್ದ. ಜೊತೆಗೆ ತನ್ನ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿರುವರೇ ಎಂದು ಪರೀಕ್ಷಿಸುತ್ತಿದ್ದ.

ಪುಣ್ಯವನ್ನು ಸಂಪಾದಿಸುವುದು ಹೇಗೆ?

ಒಂದು ದಿನ ರಾಜನು ನಗರ ರಕ್ಷಕರನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಬೇರೆ ವೇಷದಲ್ಲಿ ಕುದುರೆ ಏರಿ ಹೊರಟನು. ಒಂದು ಜಗುಲಿಯ ಮೇಲೆ ಒಬ್ಬ ಮಲಗಿದ್ದನು. ದೊರೆ ಅವನನ್ನು ಎಬ್ಬಿಸಿ, “ನೀನು ಯಾರು?” ಎಂದು ಕೇಳಿದನು. “ಗಂಗಾಸ್ನಾನ ಮಾಡಿ ಸೇತು ಯಾತ್ರೆ ಹೋಗುತ್ತಿರುವ ನಾನೊಬ್ಬ ಬ್ರಾಹ್ಮಣ ಯಾತ್ರಿಕ” ಎಂದು ಉತ್ತರ ಬಂತು. ಅದಕ್ಕೆ ರಾಜ ಅವನನ್ನು ಕುರಿತು “ನಿನಗೆ ಮುಖ್ಯ ಎಂದು ತೋರಿರುವ ಒಂದು ವಿಷಯವನ್ನು ಹೇಳು” ಎಂದನು.

ಬ್ರಾಹ್ಮಣ, “ಎಲೈ ದೊರೆಯೇ! ಮನುಷ್ಯ ಒಂದು ವರ್ಷ ಪೂರ್ತಿ ಜೀವಿಸಲು ಬೇಕಾದ ವಸ್ತುಗಳನ್ನು ಸಂಪಾದಿಸಲು ಎಂಟು ತಿಂಗಳ ಕಾಲದಲ್ಲಿ ದುಡಿಯಬೇಕು. ಮುದಿತನದಲ್ಲಿ ಸುಖವಾಗಿರಲು ಚಿಕ್ಕ ವಯಸ್ಸಿನಲ್ಲಿಯೇ ಚೆನ್ನಾಗಿ ಸಂಪಾದಿಸಿ ಹಣ ಕೂಡಿಹಾಕಬೇಕು. ಪರಲೋಕದಲ್ಲಿ ಅನುಭವಿಸುವ ಸುಖಕ್ಕಾಗಿ ಈ ಜನ್ಮದಲ್ಲಿ ಎಲ್ಲ ವಿಧದಿಂದಲೂ, ಎಲ್ಲಾ ಸಮಯದಲ್ಲೂ ದುಡಿದು ಪುಣ್ಯ ಸಂಪಾದಿಸಬೇಕು” ಎಂದು ಹೇಳಿದನು.

ಈ ಮಾತನ್ನು ಕೇಳಿ ದೊರೆಗೆ ಬಹಳ ಚಿಂತೆ ಯಾಯಿತು. “ಹೌದು, ಪರಲೋಕಕ್ಕಾಗಿ ನಾನು ಏನೂ ಮಾಡಿಲ್ಲ. ಪುಣ್ಯವನ್ನು ಸಂಪಾದಿಸುವುದು ಹೇಗೆ? ಪುಣ್ಯ ಸಂಪಾದನೆಗೆ ಒಂದೊಂದು ಶಾಸ್ತ್ರ ಒಂದೊಂದು ರೀತಿಯನ್ನು ತಿಳಿಸುತ್ತದೆ. ನನ್ನ ಈ ಸಂದೇಹ ಪರಿಹಾರಕ್ಕೆ ಎಲ್ಲ ದೇಶಗಳ ವಿದ್ವಾಂಸರನ್ನೂ ಕರೆಸಿ ಅವರಿಂದ ಈ ತತ್ವನಿರ್ಣಯ ಮಾಡಿಸಬೇಕು” ಎಂದು ನಿಶ್ಚಯಿಸಿದ. ಅದರಂತೆ ಸಭೆ ಸೇರಿತು.

ದೊಡ್ಡ ಆಳ್ವಾರರು

ಮಧುರೆಯಲ್ಲಿ ದೇಶ ವಿದೇಶದ ಪ್ರಸಿದ್ಧ ವಿದ್ವಾಂಸರು ಸೇರಿದ್ದಾರೆ. ಈ ಸಭೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಬೇಕಾದಷ್ಟು ಹಣ; ಆ ಹಣವನ್ನು ಸಭೆಯ ಮಂದಿರದ ಬಾಗಿಲಲ್ಲೆ ಇಟ್ಟಿದೆ. ವಿದ್ವಾಂಸರು ತಮ್ಮ ತಮ್ಮ ಅಭಿಪ್ರಾಯಗಳನ್ನು ದೊರೆಗೆ ತಿಳಿಸುತ್ತಿದ್ದಾರೆ.

ವಲ್ಲಭದೇವನ ಅರಮನೆಯ ಅಧಿಕಾರಿಯೊಬ್ಬರಿಗೆ ಒಂದು ಕನಸಾಯ್ತು. ಮಧುರೆಗೆ ಹತ್ತು ಮೈಲಿ ದೂರದಲ್ಲಿರುವ ಸಿಂಹಾದ್ರಿಯ ಶ್ರೀನಿವಾಸ ದೇವರು ಕನಸಿನಲ್ಲಿ ಬಂದು, “ಈಗಲೇ ಶ್ರೀವಿಲ್ಲಿಪುತ್ತೂರಿಗೆ ಹೊರಟು, ವಿಷ್ಣುಚಿತ್ತರನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದಂತೆ ಆಯಿತು.

ಶೆಲ್ವನಂಬಿ ಎಂಬುವರು ವಲ್ಲಭದೇವನ ಮಂತ್ರಿ ಮತ್ತು ಪುರೋಹಿತರು. ಇವರೀಗೆ ಈ ಕನಸಾದದ್ದು. ಮಧುರೆಯಿಂದ ಶ್ರೀವಿಲ್ಲಿಪುತ್ತೂರಿಗೆ ಎಲ್ಲಿದ್ದಾರೆ ಎಂದು ವಿಚಾರಿಸಿದರು. ಯಾರೋ ತಿಳಿಸಿದರು. “ಅಗೋ ಅಲ್ಲದೆ ಅವರ ತೋಟ.”

ವಿಷ್ಣುಚಿತ್ತರು ಮಧುರೆಗೆ

ಸುಂದರವಾದ ಕೈತೋಟ. ದೂರದಿಂದಲೇ ತುಳಸಿಯ ವಾಸನೆ ಘಮಘಮಿಸುತ್ತಿದೆ. ಜೊತೆಗೆ ಮಲ್ಲಿಗೆ, ಸಂಪಿಗೆ, ಸೇವಂತಿಗೆಗಳ ಪರಿಮಳ. ನೋಡಲು ತೋಟದಲ್ಲಿ ಬಣ್ಣ ಬಣ್ಣದ ಹೂ ಗೊಂಚಲು, ತುಂಬಾ ಸುಂದರವಾಗಿದೆ. (ಈ ಹೂದೋಟ ಈಗಲೂ ಇಲ್ಲದೆ. ಇದೇ ತೋಟದ ಹೂವನ್ನೆ ಇಂದೂ ದೇವರಿಗೆ ಮುಡಿಸುತ್ತಾರೆ.) ತೋಟದಲ್ಲಿ ಹನ್ನೆರಡು ನಾಮ ಧರಿಸಿ ಮಧ್ಯವಯಸ್ಸಿನವರೊಬ್ಬರು ದೇವರ ನಾಮವನ್ನು ಹೇಳುತ್ತಾ ತುಳಸಿ, ಪುಷ್ಪಗಳನ್ನು ಸಂಗ್ರಹಿಸಿ ತೆಂಗಿನಗರಿಯ ಬುಟ್ಟಿಗಳಲ್ಲಿ ತುಂಬುತ್ತಿದ್ದಾರೆ. ಅವರಿಗೆ ಬೇರೆ ಕಡೆ ಗಮನವೇ ಇಲ್ಲ. ಕೈಗಳು ದೇವರ ಸೇವೆಯಲ್ಲಿ ನಿರತವಾಗಿವೆ; ಮನಸ್ಸು ದೇವರಲ್ಲಿ ನಿಂತಿದೆ. ಇವರೇ ವಿಷ್ಣುಚಿತ್ತರು. ಶ್ರೀವೈಷ್ಣವರು, ಸಾತ್ವಿಕರು, ದೇವರಲ್ಲಿ ತುಂಬಾ ಭಕ್ತಿಯುಳ್ಳವರು.

ಶೆಲ್ವನಂಬಿ ಈ ತೋಟಕ್ಕೆ ಬಂದರು. ಪರಸ್ಪರ ಕುಶಲ ಸಂಭಾಷಣೆ ಆಯಿತು. ವಿಷ್ಣುಚಿತ್ತರು ಪೂಜಿಸುತ್ತಿದ್ದುದು ವಟಪತ್ರಶಾಯಿ (ಅಂದರೆ ಅರಳಿ ಎಲೆಯಲ್ಲಿ ಮಲಗಿರುವವನು ಎಂದು ಅರ್ಥ) ದೇವರನ್ನು. ಅವರಿಗೂ ದೇವರ ಆಜ್ಞೆ ಆಯಿತು. “ನೀನು ಮಧುರಾ ನಗರಕ್ಕೆ ಹೋಗಿ ಬಾ. ಅಲ್ಲಿಯ ದೊರೆ ವಲ್ಲಭದೇವನ ಸಭೆಯಲ್ಲಿ ’ಪರತತ್ವ’ (ಶ್ರೀಮನ್ನಾರಾಯಣನೇ ಪರಲೋಕದಲ್ಲಿ ಹೊಂದಬೇಕಾದ ವಸ್ತು)ವನ್ನು ನಿರ್ಣಯ ಮಾಡು” ಎಂದಂತಾಯಿತು. ಶೆಲ್ವನಂಬಿಯ ಪ್ರಾರ್ಥನೆಯೂ ಬಂದಿತು.

ವಿಷ್ಣುಚಿತ್ತರು ವೇದ ಶಾಸ್ತ್ರಗಳನ್ನು ಕಲಿತವರಲ್ಲ. ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಶ್ರದ್ಧಾವಂತ ಬ್ರಾಹ್ಮಣರು ಓದಿರುವಷ್ಟನ್ನು ಓದಿದ್ದರು, ಬಹಳ ಹಿರಿಯ ವಿದ್ವಾಂಸರಲ್ಲ. ತಾವೇ ಹೂವುಗಿಡಗಳನ್ನು ಬೆಳೆಸಿ, ಹೂವುಗಳನ್ನು ಬಿಡಿಸಿ, ದೇವರಿಗೆ ಹಾರಗಳನ್ನು ಕಟ್ಟಿ ಸಮರ್ಪಿಸುತ್ತಿದ್ದರು. ದೇವರು ಕನಸಿನಲ್ಲಿ ಬಂದು ಮಧುರಾ ನಗರಕ್ಕೆ ಹೋಗಿ ಬಾ ಎಂದು ಹೇಳಿದ್ದರೂ ಅವರಿಗೆ ಮನಸ್ಸಿನಲ್ಲಿ ಆತಂಕ ಇದ್ದೇ ಇದ್ದಿತು. ಶೆಲ್ವನಂಬಿಯವರು ರಾಜನ ಪರವಾಗಿ ಅವರನ್ನು ಬನ್ನಿ ಎಂದು ಕರೆದರೂ ಆತಂಕ ಇದ್ದಿತು.

ರಾಜನ ಸಭೆ, ಅದೂ ರಾಜ ಪ್ರಯತ್ನಪಟ್ಟು ಬೇರೆ ಬೇರೆ ಕಡೆಗಳಿಂದ ವಿದ್ವಾಂಸರನ್ನು ಕರೆಸಿದ ಸಭೆ. ಪ್ರಚಂಡ ವಿದ್ವಾಂಸರೆಂದು ಹೆಸರಾದವರೆಲ್ಲ ಸೇರಿರುತ್ತಾರೆ. “ನಾನು ವೇದಗಳನ್ನು ಅಭ್ಯಾಸ ಮಾಡಿದವನಲ್ಲ, ಹಿರಿಯ ವಿದ್ವಾಂಸನಲ್ಲ. ಮಹಾವಿದ್ವಾಂಸರೆಲ್ಲ ಸೇರಿರುವ ಸಭೆಯಲ್ಲಿ ನಾನೇನು ಮಾಡಬಲ್ಲೆ?” ಎಂದೇ ಎನ್ನಿಸಿತು. ಕಡೆಗೆ ದೇವರ ಆಜ್ಞೆ ಎಂದು ತಲೆಬಾಗಿ ಹೊರಟರು.

ದೇವರು ವಿಷ್ಣುಚಿತ್ತರ ಭಕ್ತಿಗೆ ಒಲಿದಿದ್ದ. ಸಭೆಯಲ್ಲಿ ಅವರಿಗೆ ಅನುಗ್ರಹ ಮಾಡಿದ. ವಿಷ್ಣುಚಿತ್ತರು ವೇದಗಳ ಉಪದೇಶವನ್ನು ಸ್ಪಷ್ಟವಾಗಿ ವಿವರಿಸಿದರು. ನೆರೆದಿದ್ದ ಪಂಡಿತರು ತಲೆದೂಗುವಂತಾಯಿತು. ಅವರಿಗೇ ಮರ್ಯಾದೆ ಸಲ್ಲುವ ಹಾಗಾಯಿತು.

ರಾಜ ವಲ್ಲಭದೇವನಿಗೆ ತುಂಬಾ ಸಂತೋಷವಾಯಿತು. ’ಪಟ್ಟರ್ ಪಿರಾನ್’ (ಭಟ್ಟ ನಾಥ) ಎಂಬ ಬಿರುದನ್ನು ಕೊಟ್ಟ. ಆನೆಯ ಮೇಲೆ ಮೆರವಣಿಗೆ ಮಾಡಿಸಿದ.

ವಿಷ್ಣುಚಿತ್ತರು ’ತಿರುಪ್ಪಲ್ಲಾಂಡು’ (ಮಂಗಳವಾಗಲಿ) ಎಂದು ಭಕ್ತಿಗೀತೆ ಹಾಡಿದ ಭಕ್ತರು. ಇದರಲ್ಲಿ ತಮಗಾಗಿ ಅವರು ಏನೊಂದನ್ನೂ ಬೇಡಲಿಲ್ಲ. ಆದರೆ ದೇವರ ಅನುಗ್ರಹ ಇಡೀ ಪ್ರಪಂಚಕ್ಕೇ ಆಗಲಿ, ಎಲ್ಲರಿಗೂ ಭಗವಂತನ ಭಕ್ತಿ ಉಂಟಾಗಲಿ, ಎಂದು ಪ್ರಾರ್ಥಿಸಿದರು. ಮೊದಲನೆಯ ಪದ್ಯದಲ್ಲಿ ಅವರು ದೇವರನ್ನು ಹೀಗೆ ಬೇಡುತ್ತಾರೆ:

“ನಿನ್ನ ಕೆಂಪು ಪಾದಪದ್ಮಗಳು ಕೋಟಿಕೋಟಿ ವರ್ಷಗಳು ಬೆಳಗಲಿ, ಎಂದೆಂದೂ ಬೆಳಗಲಿ. ಮಲ್ಲರನ್ನು ಗೆದ್ದು ಶ್ಯಾಮಲ ಭುಜಗಳ ಓ ಪ್ರಭು, ಎಂದೆಂದೂ ನಿನ್ನ ಪಾಪಪದ್ಮಗಳ ಸೌಂದರ್ಯ ಬೆಳಗುತ್ತಿರಲಿ.”

ಹನ್ನೊಂದು ವರ್ಷಗಳಲ್ಲಿ ಭಗವಂತನನ್ನು ಹೊಗಳಿ ಎಂದೆಂದೂ ತಾವು ನಾರಾಯಣನ ನಾಮವನ್ನು ಧ್ಯಾನ ಮಾಡುವುದಾಗಿ ಹಾಡಿ ’ತಿರುಪ್ಪಲ್ಲಾಂಡ’ನ್ನು ಮುಕ್ತಾಯ ಮಾಡಿದ್ದಾರೆ.

ಅನೇಕ ಶ್ರೀ ವೈಷ್ಣವ ದೇವಾಲಯಗಳಲ್ಲಿ ’ತಿರುಪ್ಪಲ್ಲಾಂಡ’ನ್ನು ಪ್ರತಿದಿನ ಹಾಡುತ್ತಾರೆ.

ಇವರಿಗೆ ’ಪೆರಿಯಾಳ್ವಾರ್’ ಎಂದು ಹೆಸರು ಬಂದಿತು. ’ಆಳ್ವಾರ್’ ಎಂದರೆ ದೇವರಲ್ಲೇ ಸದಾ ಪ್ರೀತಿ ಇಟ್ಟಿರುವವರು; ಇವರ ಭಕ್ತಿ ಎಷ್ಟು ಎಂದರೆ ದೇವರೇ ಇವರನ್ನು ಮೆಚ್ಚಿ ಇವರು ಹೇಳಿದಂತೆ ನಡೆಯುತ್ತಾನೆ ಎಂದು ಭಕ್ತರು ನಂಬುತ್ತಾರೆ. ವಿಷ್ಣುಚಿತ್ತರು ’ಹಿರಿಯ ಆಳ್ವಾರರು’. ಇಷ್ಟು ಭಕ್ತಿಯಿಂದ ಕೂಡಿ, ತಮಗೆ ಏನೂ ಬೇಡ ಎಂದು ಹಾಡಿದ ಇವರಿಗೆ ಈ ಹೆಸರು ಬಂದದ್ದು ಸಹಜವೇ.

ಶ್ರೀ ವೈಷ್ಣವ ಪಂಥದಲ್ಲಿ ಹೆಂಗಸು ’ಆಳ್ವಾರ್’ ಒಬ್ಬರೇ-ಆಂಡಾಳ್. ಈಕೆಯನ್ನು ಸಾಕಿ ಬೆಳೆಸಿದವರು ವಿಷ್ಣುಚಿತ್ತರು. ಇಷ್ಟು ಶುದ್ಧ ಮನಸ್ಸಿನ ಭಕ್ತರ ಸಾಕುಮಗಳು ಆ ಶುದ್ಧ ಮನಸ್ಸಿನ ಆಂಡಾಳ್-ತಂದೆ, ಮಗಳು ಇಬ್ಬರೂ ಪುಣ್ಯ ಮಾಡಿದ್ದರು.

ಆಂಡಾಳ್ ಪೆರಿಯಾಳ್ವಾರರ ಸಾಕುಮಗಳಾದದ್ದೇ ಒಂದು ಕುತೂಹಲಕರ ಕಥೆ.

ಭೂಮಿಯಲ್ಲಿ ಮಗು

ವಿಷ್ಣುಚಿತ್ತರು ಮಧುರೆಯಿಂದ ಹಿಂದಿರುಗಿದರು. ಎಂದಿನಂತೆ ತಮ್ಮ ದೇವರ ಪುಷ್ಪ ಸೇವೆಯಲ್ಲಿ ನಿರತರಾದರು.

ಒಂದು ದಿನ ಬೆಳಿಗ್ಗೆ. ಸೂರ್ಯ ಆಗ ತಾನೆ ಹುಟ್ಟಿ ತನ್ನ ಕೆಂಪು ಕಿರಣವನ್ನು ಹರಡುತ್ತಿದ್ದಾನೆ. ವಿಷ್ಣುಚಿತ್ತರು ತೋಟದಲ್ಲಿ ಗುದ್ದಲಿಯಿಂದ ತುಳಸಿಯ ಬುಡಗಳಿಗೆ ಪಾತಿ ಮಾಡುತ್ತಿದ್ದಾರೆ. ಒಂದು ದೊಡ್ಡ ತುಳಸಿಯ ಗಿಡದ ಕೆಳಗೆ ಅಗೆಯುತ್ತಿದ್ದಾರೆ. ಏನೋ ಗುದ್ದಲಿಗೆ ತಗುಲಿ ಶಬ್ದವಾಗಿ ಗುದ್ದಲಿ ಸಡಿಲವಾಯಿತು. ಮತ್ತೊಮ್ಮೆ ಗುದ್ದಲಿಯನ್ನು ಸರಿಯಾಗಿ ಹಿಡಿದರು; ಅಗೆದರು; ಸುತ್ತ ಮಣ್ಣನ್ನು ತೆಗೆದುಹಾಕಿದರು. ನೋಡಿದರೆ ಅದೊಂದು ಪೆಟ್ಟಿಗೆ. ಕಂಡೊಡನೆ ಅದರಲ್ಲಿ ಹಣ ಇರಬಹುದು, ಬಂಗಾರ ಒಡವೆಗಳು ಇರಬಹುದು ಎಂದು ಹೆದರಿದರು. ಈ ನಿಧಿಯಿಂದ ಭಗವಂತನಿಗೆ ಕೈಂಕರ್ಯ ಇನ್ನೂ ಹೆಚ್ಚು ನಡೆಸಬಹುದಲ್ಲಾ ಎಂಬ ಅಚ್ಚರಿಯ ಸಂತಸ! ಆದರೆ ’ಈ ನಿಧಿ ತಮಗೆ ಸಲ್ಲಬಾರದು’ ಎಂಬ ಭಯದಿಂದ ಬೆದರಿದರು; ಯೋಚಿಸಿದರು. ಇದು ವಟಪತ್ರಶಾಯಿಯ ಮಹಿಮೆಯೇ ಇದ್ದೀತು! ಇದರಲ್ಲಿರುವುದು ಅವನ ಕೈಂಕರ್ಯಕ್ಕೇ ಮೀಸಲು ಎಂದು ನಿರ್ಣಯಿಸಿದರು. ಪೆಟ್ಟಿಗೆಯ ಬಾಗಿಲನ್ನು ತೆರೆದೊಡನೆ, ಅವರು ಕನಸಿನಲ್ಲೂ ನೆನೆಸಿರದ ಅದ್ಭುತ ಘಟನೆ! ಸುಂದರವಾದ ಚೆನ್ನಾಗಿ ಬೆಳೆದ ಹೆಣ್ಣು ಮಗು ಒಂದು ಅದರಲ್ಲಿತ್ತು. ಕಣ್ಣಿಗೆ ತಂಪೀಯುವ ದಿವ್ಯಕಾಂತಿಯೊಡನೆ ತೇಜಸ್ಸು ಹೊರಹೊಮ್ಮಿತ್ತು.

ಇದು ದೈವಲೀಲೆ ಎಂದೇ ಪೆರಿಯಾಳ್ವಾರ್ ಭಾವಿಸಿದರು. ಆ ದಿವ್ಯ ತೇಜಸ್ಸಿನ ಮಗುವನ್ನು ತಮ್ಮ ಕುಟೀರಕ್ಕೆ ಕರೆತಂದರು.

ಇದು ನಡೆದದ್ದು ಸುಮಾರು ಒಂದು ಸಾವಿರದ ಒಂದು ನೂರು ವರ್ಷಗಳ ಹಿಂದೆ.

ಪೆಟ್ಟಿಗೆಯ ಬಾಗಿಲನ್ನು ತೆರೆದರೆ, ಸುಂದರವಾದ ಮಗು ಕಾಣಿಸಿತು.

ಪೆರಿಯಾಳ್ವಾರರು ಮಗುವನ್ನು ಮನೆಗೆ ಕರೆತಂದ ನಂತರ ಯೋಚನೆಗಳು ಒಂದೊಂದಾಗಿ ಪ್ರಾರಂಬವಾದವು.

ದೇವರೇ ಇದಕ್ಕೆ ಗತಿ!

ಮನೆಯಲ್ಲಿ ಯಾರೂ ಹೆಂಗಸರಿಲ್ಲ! ಈ ಮಗುವನ್ನು ಬೆಳೆಸುವದಾದರೂ ಯಾರು? ಹೇಗೆ? ಮಗುವನ್ನು ಪೋಷಿಸಿ ಲಾಲಿಸುವ ರೀತಿಗಳಾವುವೂ ಅವರಿಗೆ ತಿಳಿಯದು.

ಯೋಚನೆಯ ಸುಳಿಗೆ ಸಿಕ್ಕ ಪೆರಿಯಾಳ್ವಾರ್ ಭಗವಂತನ ಕೈಂಕರ್ಯಕ್ಕೆ ಮೀಸಲಾದ ಈ ಮಗುವಿಗೆ ಭಗವಂತನೇ ಗತಿ ಎಂದು ತಿಳಿದರು. ಮಗುವಿಗೆ ’ಗೋದಾ’ ಎಂದು ಹೆಸರಿಟ್ಟರು (ಗೋ= ಭೂಮಿಯಿಂದ, ದಾ= ಕೊಡಲ್ಪಟ್ಟವಳು). ತಮಿಳುನಲ್ಲಿ ’ಕೋದೈ’ (ಸುಂದರ ಕೂದಲುಳ್ಳವಳು) ಎಂದು ಕರೆದರು. ’ಆಂಡಾಳ್’ (ಆಕರ್ಷಕ ರೂಪು ಉಳ್ಳವಳು) ಎಂದೂ ಈಕೆಯನ್ನು ಕರೆಯುತ್ತಿದ್ದರು.

ಮಗುವಿನಲ್ಲಿ ವಿಷ್ಣುಚಿತ್ತರಿಗೆ ಬಹಳ ಪ್ರೀತಿ ಯುಂಟಾಯಿತು. ಅಕ್ಕರೆಯಿಂದ ತಾವೇ ಅವಳನ್ನು ಸಾಕಿ, ಸಲಹಿದರು. ತಾವೇ ತಾಯಿಯೂ ತಂದೆಯೂ ಆಗಿ ಮಗುವಿನ ಲಾಲನೆ ಪೋಷಣೆಗಳಲ್ಲಿ ನಿರತರಾದರು.

ಹುಟ್ಟಿದ ಹಬ್ಬ ದೇವರ ಪ್ರಸಾದ

ಪೆರಿಯಾಳ್ವಾರ್ ಮನೆಯಲ್ಲಿ ತಮಗಾಗಿ ಎಂದೂ ಅಡಿಗೆ ಮಾಡಿದವರಲ್ಲ. ವಟಪತ್ರಶಾಯಿಯ ದೇವಸ್ಥಾನದಲ್ಲಿ ಕೊಡುವ ಪ್ರಸಾದವೇ ಅವರ ಊಟ. ಹಾಗೆಯೇ ತಮ್ಮ ಸಾಕುಮಗಳು ಅಂಡಾಳಿಗೂ ಅಭ್ಯಾಸ ಮಾಡಿಸಿದರು. ಮೊದಲಿನಿಂದಲೇ ದೇವರ ಸಂಪರ್ಕ ಮಗುವಿಗೆ ಆಗಲಿ ಎಂಬ ಉದ್ದೇಶ.

ಆಂಡಾಳ್ ಸಿಕ್ಕಿ ಒಂದು ವರ್ಷವಾಯಿತು. ಹುಟ್ಟು ಹಬ್ಬದ ಸಂಭ್ರಮ ಆಚರಿಸಬೇಕು. ಹೇಗೆ? ಏನೂ ಮಾಡಲಾಗಲಿಲ್ಲ.

ದೇವರ ಸೇವೆ, ಧ್ಯಾನ ಇಷ್ಟನ್ನೆ ಇವರು ಮಾಡಿದರು. ಅಂದು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾದ ಸಿಹಿ ಪೊಂಗಲನ್ನೇ ತಂದರ. ಮಗುವಿಗೆ ಕೊಟ್ಟರು. ಮಗು ಆಂಡಾಳ್ ಆನಂದದಿಂದ ತಿನ್ನುವುದನ್ನುನೋಡಿ ಆನಂದಪಟ್ಟರು. ಆಂಡಾಳಿಗಂತೂ ದೇವರು, ದೇವರ ಪ್ರಸಾದ ಅಂದರೆ ಎಲ್ಲಿಲ್ಲದ ಸಂತೋಷ. ಚಿಕ್ಕ ವಯಸ್ಸಿನಲ್ಲೇ ದೇವರ ಧ್ಯಾನ ಮತ್ತು ಪೂಜೆ ಎಂದರೆ ಅವಳಿಗೆ ತಂಬಾ ಆಸಕ್ತಿ.

ಆಂಡಾಳಿನ ಬಾಲ್ಯ

ದಿನ ಕಳೆದಂತೆ ಮಗುವಿನ ಆಟಪಾಠಗಳನ್ನು ಪೆರಿಯಾಳ್ವಾರರು ನೋಡಿ ಸಂತೋಷಪಡುತ್ತಿದ್ದರು. ಒಂದೊಂದು ಸಲ “ನಾನು ಕಡುಬಡವ, ಈ ಮಗು ನನಗೆ ದೊರೆಯಿತು; ಇದೂ ಬಡತನದಲ್ಲೇ ಬೆಳೆಯಬೇಕೆ?” ಎಂದು ಮರುಗುತ್ತಿದ್ದರು. ಆದರೆ ಬಡತನದಲ್ಲೇ ಒಳ್ಳೆಯ ಗುಣಗಳನ್ನೂ ಪಡೆದು ಭಗವಂತನನ್ನೇ ಒಲಿದ ಆಂಡಾಳಿನ ಶ್ರೀಮಂತಿಕೆಯನ್ನು ಅನಂತರ ಕಂಡುಕೊಂಡರು.

ಪುಟ್ಟ ಆಂಡಾಳ್ ಸದಾ ಅವರ ಜೊತೆಯಲ್ಲಿಯೆ ಇರುತ್ತಿದ್ದಳು. ತೋಟಕ್ಕೆ ಹೋಗುವಾಗ ಮಗು ಆಂಡಾಳನ್ನೂ ಜೊತೆಯಲ್ಲೇ ಕರೆದೊಯ್ಯುತ್ತಿದ್ದರು. ದೇವರ ಕಥೆಗಳನ್ನೂ ಅವನ ಪೌರುಷ ಪರಾಕ್ರಮಗಳನ್ನೂ, ಕಲ್ಯಾಣ ಗುಣ ಕಥೆಗಳನ್ನೂ ತಿಳಿಸುತ್ತಿದ್ದರು. ಮಗು ತೊದಲು ನುಡಿಯಲ್ಲಿ ರಾಮ ಮತ್ತು ಕೃಷ್ಣರ ಹೆಸರುಗಳನ್ನು ಹೇಳುವುದನ್ನು ಕೇಳಿಯೇ ಅವರಿಗೆ ಆನಂದ. ಮಗು ಆಂಡಾಳ್ ರಾಮ ಮತ್ತು ಕೃಷ್ಣರ ಕಥೆಗಳನ್ನಂತೂ ಬಹಳ ಶ್ರದ್ಧೆಯಿಂದ ಕೇಳುತ್ತಿದ್ದಳು. ಇವುಗಳಲ್ಲಿ ಅವಳ ಆಸಕ್ತಿ ಹೆಚ್ಚುತ್ತಿತ್ತು. ಇದರಿಂದ ಆಂಡಾಳಿಗೆ ಎಳೆತನದಿಂದಲೇ ಭಗವಂತನಲ್ಲಿ ಭಕ್ತಿ ಮತ್ತು ಪ್ರೀತಿ ಉಂಟಾಯಿತು. ಪುಟ್ಟ ಹೆಜ್ಜೆಯಿಡುತ್ತಿರುವ ಆಂಡಾಳ್ ತನಗೆ ತಿಳಿಯದಂತೆಯೇ ತಂದೆಗೂ ಅಚ್ಚರಿ ಉಂಟುಮಾಡುವಂತೆ ಅವರ ಕೆಲಸಗಳಲ್ಲಿ ಸಹಾಯ ಮಾಡುವ ಉತ್ಸಾಹ ತೋರುತ್ತಿದ್ದಳು. ಹೂವುಗಳಲ್ಲಿ ಸಹಾಯ ಮಾಡುವ ಉತ್ಸಾಹ ತೋರುತ್ತಿದ್ದಳು. ಹೂವುಗಳನ್ನು ಆರಿಸಿ ಬುಟ್ಟಿಯಲ್ಲಿ ತುಂಬುತ್ತಿದ್ದಳು. ತಂದೆ ’ಎಲ್ಲವೂ ಭಗವಂತನಿಗೆ’, ’ಎಲ್ಲವೂ ಭಗವಂತನಿಗೆ’ ಎಂದು ಮತ್ತೆಮತ್ತೆ ಹೇಳುತ್ತಿದ್ದರು. ಆಂಡಾಳ್ ಹೂವನ್ನು ಸಂಗ್ರಹಿಸುವಾಗಲೂ ಆ ಮಾತುಗಳನ್ನು ಸ್ಮರಿಸುವಳು. ತಾನು ಹೂ ಕಟ್ಟುವಾಗ ತಂದೆಯಂತೆ ಹಾಡುತ್ತಿದ್ದಳು. ಒಂದೊಂದು ಹೂವನ್ನು ಆರಿಸುವಾಗ ಇದು ಭಗವಂತನ ತಲೆಗೆ ಏರುತ್ತದೆ, ಇದು ದೇವರ ಪಾದ ಸೇರುತ್ತದೆ ಎಂದು ಯೋಚಿಸುತ್ತಿದ್ದಳು. ಒಂದೊಂದು ಹೂವನ್ನೂ ತನ್ನಂತೆಯೇ ಭಾವಿಸಿ ತನ್ನನ್ನೂ ದೇವರ ಪಾದಗಳಲ್ಲಿ ಅರ್ಪಿಸಿಕೊಳ್ಳಲು ತೊಡಗಿದಳು. ಕೃಷ್ಣಾರ್ಪಣಕ್ಕೆ ಹೂವುಗಳನ್ನೆಲ್ಲಾ ಸೇರಿಸಿ ಕಟ್ಟುವ ಮಾಲೆಕಾರನನ್ನೂ ಮೀರಿಸಿದಳು.

ನಾನೂ ದೇವರಿಗೆ ಮೆಚ್ಚುಗೆಯಾಗಬೇಕು

ಒಂದು ದಿನ ಪೆರಿಯಾಳ್ವಾರ್ ಕಟ್ಟಿದ ದೊಡ್ಡ ಹಾರ; ಗುಡಿಸಲಿನ ಬಿದರಿನ ಕೊಕ್ಕರೆಯಲ್ಲಿ ತೂಗಿದ್ದಾರೆ. ಅದನ್ನು ಕಂಡ ಆಂಡಾಳಿಗೆ ಆ ಹೂವಿನ ಹಾರವನ್ನು ತಾನು ಒಂದು ಸಲ ಹಾಕಿಕೊಳ್ಳಬೇಕೆಂದು ಆಸೆಯಾಯಿತು. ತಾನೂ ಈ ಹಾರದಂತೆ ದೇವರಿಗೆ ಮೆಚ್ಚುಗೆ ಆಗಬೇಕೆಂದೂ ಯೋಚಿಸಿದಳು. ಹಾರ ಹಾಕಿಕೊಂಡರೆ ತಂದರೆ ಏನು ಹೇಳುವರೋ ಎಂಬ ಹೆದರಿಕೆ. ಆದರೆ ಪೆರಿಯಾಳ್ವಾರ್ ಗುಡಿಸಲಿನಲ್ಲಿರಲಿಲ್ಲ. ಹೂವಿನ ಹಾರವನ್ನು ಧೈರ್ಯದಿಂದ ಹಾಕಿಕೊಂಡಳು. ಅಂದಚೆಂದವನ್ನು ನೋಡಿ ದೇವರಿಗೆ ತಾನೂ ಮೆಚ್ಚುಗೆ ಆಗಬಹುದೆಂದು ಸಂತೋಷಪಟ್ಟಳು. ಪುನಃ ಆ ಹೂಮಾಲೆಯನ್ನು ಅದರ ಸ್ಥಳದಲ್ಲೇ ಇಟ್ಟುಬಿಟ್ಟಳು. ಇದಾದ ಮೇಲೆ ಪ್ರತಿನಿತ್ಯವೂ ಹೀಗೆಯೇ ಆಯಿತು. ಪೆರಿಯಾಳ್ವಾರ್ ಮಾಲೆಯನ್ನು ಭಗವಂತನಿಗೆ ಅರ್ಪಿಸುತ್ತಾರೆ. ಅಂತೆಯೇ ಆಂಡಾಳ್ ದಿನವೂ ಮಾಲೆಯನ್ನು ತಾನೊಮ್ಮೆ ಧರಿಸಿ ಭಗವಂತನಿಗೆಂದೇ ತೆಗೆದಿಡುತ್ತಾಳೆ.

ಪೆರಿಯಾಳ್ವಾರರು “ಮಗೂ, ಇದೇನು ಕೆಲಸ ಮಾಡಿಬಿಟ್ಟೆ?” ಎಂದು ಅಂಡಾಳನ್ನು ಕೇಳಿದರು.

ಮಗಳು ಇದೇನು ಕೆಲಸ ಮಾಡಿದಳು!

ಒಂದು ದಿನ ಮಾಲೆ ಧರಿಸಿ ಭಗವಂತನಿಗೇ ಅರ್ಪಣೆ ಎಂದಳು ಆಂಡಾಳ್. ಈ ಮಾತನ್ನು ಕೇಳಿ ಅಶ್ಚರ್ಯದಿಂದ ಪೆರಿಯಾಳ್ವಾರರು ತಿರುಗಿ ನೋಡಿದರು. ದೇವರಿಗೆಂದು ಇಟ್ಟ ಹಾರವನ್ನು ಅವಳೇ ಹಾಕಿಕೊಂಡಿದ್ದಾಳೆ! ಪೆರಿಯಾಳ್ವಾರರಿಗೆ ದಿಗ್ಭ್ರಮೆಯಾಯಿತು. ಅವರು ಹೂವನ್ನು ಬಿಡಿಸುವಾಗ ಮತ್ತು ಕಟ್ಟುವಾಗ ಹೂವನ್ನು ಬೆರಳುಗಳಿಂದ ಮುಟ್ಟುತ್ತಿದ್ದರು. ಅಷ್ಟೇ; ಕೈಯ ಬೇರೆ ಭಾಗಕ್ಕೆ ಹೂವನ್ನು ಮುಟ್ಟಲು ಬಿಡುತ್ತಿರಲಿಲ್ಲ. ದೇವರಿಗೆ ಅರ್ಪಿಸುವ ಹೂವು ತಾವು ಮುಟ್ಟಿ ನಲುಗಬಾರದು ಎಂದು ಅಷ್ಟು ಎಚ್ಚರಿಕೆ. ಹೂವಿನ ವಾಸನೆ ಬಾರದಂತೆ ಹೂವು ಕಟ್ಟುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದರು, ಗಟ್ಟಿಯಾಗಿ ಉಸಿರಾಡುತ್ತಿರಲಿಲ್ಲ. ಇಷ್ಟು ಭಯಭಕ್ತಿಗಳಿಂದ ಹೂವನ್ನು ದೇವರಿಗೆ ಅವರು ಸಮರ್ಪಿಸುತ್ತಿದ್ದರು. ತಮ್ಮ ಮಗಳು ದೇವರಿಗಾಗಿ ಮಾಡಿದ ಹಾರವನ್ನು ತನ್ನ ಶರೀರಕ್ಕೆಲ್ಲ ತಾಕುವಂತೆ ಹಾಕಿಕೊಂಡು ಬಿಟ್ಟಿದ್ದಾಳೆ! ನೋಡಿ ಪೆರಿಯಾಳ್ವಾರರು ಬೆಚ್ಚಿದರು. “ಅಯ್ಯೋ, ಹಾರ ಅಪವಿತ್ರವಾಗಿ ಹೋಯಿತು!” ಎಂದು ಅವರಿಗೆ ಸಂಕಟವಾಯಿತು.

ಶ್ರೀರಂಗನಾಥನೊಂದಿಗೆ ಆಂಡಾಳಿನ ಸಂಭ್ರಮದ ಮದುವೆ ನಡೆಯಿತು.

“ಮಗಳು ಇದೇನು ಕೆಲಸ ಮಾಡಿದಳು! ದೇವರಿಗೆ ಅರ್ಪಿತವಾಗಬೇಕಿದ್ದ ಹೂವಿನ ಮಾಲೆಯನ್ನು ತಾನೇ ಹಾಕಿಕೊಂಡು ಬಿಟ್ಟಳಲ್ಲಾ! ಯಾರೂ ಉಪಯೋಗಿಸದ ಹೂವನ್ನು ದೇವರಿಗೆ ಕೊಡಬೇಕಾದ್ದು ನಮ್ಮ ಕರ್ತವ್ಯ; ದೊಡ್ಡ ತಪ್ಪು ನಡೆಯಿತಲ್ಲಾ? ದೇವಾ! ಏನೂ ತಿಳಿಯದ ನನ್ನ ಈ ಮಗುವನ್ನು ಮನ್ನಿಸು, ಈ ತಪ್ಪನ್ನು ಕ್ಷಮಿಸು” ಎಂದು ದೇವರಲ್ಲಿ ಮೊರೆ ಇಟ್ಟರು. ಮಗುವನ್ನು ಕೇಳಿದರೆ ಅವಳು ನೊಂದುಕೊಳ್ಳುವಳಲ್ಲಾ ಎಂಬ ಚಿಂತೆ ಒಂದು ಕಡೆ. ಅವಳಿಗೆ ಈ ವಿಚಾರ ತಿಳಿಸಲೇಬೇಕು. ಇಲ್ಲದಿದ್ದಲ್ಲಿ ದಿನವೂ ಈ ತಪ್ಪನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ ಎಂಬ ಭೀತಿ ಮತ್ತೊಂದೆಡೆ. ಎಷ್ಟೆಂದರೂ ಹೆಣ್ಣುಮಗು; ಹೂವನ್ನು ಕಂಡೊಡನೆ ಅದಕ್ಕೆ ಸಹಜವಾದ ಆಸೆ ಇದ್ದೀತು. ತಪ್ಪನ್ನು ತಿದ್ದಬೇಕು, ಇದು ಹಿರಿಯರಾದ ತಮ್ಮ ಕರ್ತವ್ಯ ಎಂದು ಕೊಂಡರು.ಆಂಡಾಳನ್ನು ಬಳಿಗೆ ಕರೆದರು. ಮೆಲ್ನುಡಿಯಲ್ಲಿ “ಮಗೂ! ಇದೇನು ಕೆಲಸ ಮಾಡಿಬಿಟ್ಟೆ? ನಾವು ಮುಡಿದ ಹೂವನ್ನು ದೇವರಿಗೆ ಕೊಡುವುದು ಸರಿಯಲ್ಲ” ಎಂದರು. ಆಂಡಾಳ್ ಕೂಡಲೇ ನೊಂದ ದನಿಯಿಂದ “ಇನ್ನು ಮುಂದೆ ಎಂದೂ ಈ ರೀತಿ ಮಾಡುವುದಿಲ್ಲಪ್ಪ” ಎಂದು ತಂದೆಯನ್ನು ಬೇಡಿದಳು.

ಹೂ ಮುಡಿದುಕೊಟ್ಟ ನಾಯಕಿ

ಅಂದು ಹೂಮಾಲೆಯನ್ನು ದೇವರಿಗೆ ಕೊಡಲು ಪೆರಿಯಾಳ್ವಾರರ ಮನಸ್ಸು ಒಪ್ಪಲಿಲ್ಲ. ವಟಪತ್ರಶಾಯಿಗೆ ದಿನನಿತ್ಯದಂತೆ ಮಾಲೆ ತಲುಪಲಿಲ್ಲ. ಬರಿಕೈಯಿಂದ ಬಂದ ಪೆರಿಯಾಳ್ವಾರ್ ದೇವರಿಗೆ ಕೈಜೋಡಿಸಿ ತನ್ನ ಮಗಳಿಂದ ಆದ ತಪ್ಪನ್ನು ಕ್ಷಮಿಸಲು ಪ್ರಾರ್ಥಿಸಿದರು.

ಆಗ ವಟಪತ್ರಶಾಯಿಯ ಮೂರ್ತಿ ಮಾತನಾಡಿದಂತಾಯಿತು. “ಪೆರಿಯಾಳ್ವರರೇ, ತಮ್ಮ ಮಗಳು ಮುಡಿದಳಿದ, ಭಕ್ತಿಯ ಕಂಪಿನಿಂದ ಕೂಡಿದ ಆ ಹೂವಿನ ಮಾಲೆಯೇ ನನಗೆ ಬಹಳ ಇಷ್ಟ” ಎಂದದ್ದು ಆಳ್ವಾರರಿಗೆ ಕೇಳಿಸಿತು.

ಆಳ್ವಾರರಿಗೆ ಬಹು ಆಶ್ಚರ್ಯವಾಯಿತು, ಸಂತೋಷವಾಯಿತು. ಅವರು ದೇವರನ್ನು ಒಲಿಸಿಕೊಳ್ಳಲು ಎಷ್ಟೋ ವರ್ಷಗಳಿಂದ ಪೂಜಿಸುತ್ತಿದ್ದರು. ಎಳೆವಯಸ್ಸಿನ ಈ ಹುಡುಗಿಯ ಭಕ್ತಿಯಿಂದ ದೇವರು ಮೆಚ್ಚಿದ. “ನನ್ನ ಮಗಳು ಅದೃಷ್ಟವಂತಳು! ಭಗವಂತನ ಪ್ರೀತಿಗೆ, ಅನುಗ್ರಹಕ್ಕೆ ಪಾತ್ರಳಾಗಿದ್ದಾಳೆ. ನನಗಿಂತ ಜ್ಞಾನದಲ್ಲಿ ಹಿರಿಯವಳೇ ಆದಳು! ಇದನ್ನು ನಾನು ತಿಳಿಯಲಾರದೆ ಹೋದೆ” ಎಂದು ಪಶ್ಚಾತ್ತಾಪಟ್ಟರು. ಆಂಡಾಳ್ ಧರಿಸಿದ್ದ ಆ ಮಾಲೆಯನ್ನೇ ದೇವರಿಗೆ ಅರ್ಪಿಸಿದರು. ಅಂದಿನಿಂದ ಆಂಡಾಳ್ ಮುಡಿದ ಹೂವೇ ಭಗವಂತನ ಕೊರಳನ್ನು ಅಲಂಕರಿಸಿತು. ’ಶೂಡಿಕ್ಕೊಡುತ್ತ ನಾಯ್ಚ್ಚಿಯಾರ್’ (ಹೂ ಮುಡಿದು ಕೊಟ್ಟ ನಾಯಕಿ) ಆದ ಆಂಡಾಳಿಗೆ ಇದರಿಂದ ತೃಪ್ತಿಯೂ ಆಯಿತು. ಪೆರಿಯಾಳ್ವಾರನ್ನೇ ತನ್ನ ಗುಣಗಳಿಂದ ಆಳಿದಳು – ’ಆಂಡಾಳ್’ ಆದಳು.

ಗೆಳತಿಯರಿಗೆ ದಾರಿದೀಪ

ಆಂಡಾಳ್ ಎಂದೂ ಒಂಟಿಯಾಗಿ ಬಾಳಿದವಳಲ್ಲ. ತನ್ನ ಗೆಳತಿಯರೂ ತನ್ನಂತೆಯೇ ಭಗವಂತನಲ್ಲಿ ಭಕ್ತಿ-ಪ್ರೀತಿಗಳುಳ್ಳವರಾಗಬೇಕು, ಅವನಿಗೆ ಪ್ರಿಯಭಕ್ತರಾಗಬೇಕು, ದೇವರ ಧ್ಯಾನ, ಪೂಜೆಗಳಿಂದ ಭಗವಂತನಿಗೆ ಮೆಚ್ಚಿಕೆ ಆಗಬೇಕೆಂಬ ಬಯಕೆ ಈಕೆಯದು. ಇದಕ್ಕಾಗಿ ಒಂದು ಗುಂಪನ್ನೇ ಸಿದ್ಧಮಾಡಿದಳು.

ವ್ರತವೆಂದರೆ ನಿಯಮ. ಮಾರ್ಗಶಿರ ವ್ರತ ಶ್ರೇಷ್ಠ ಮತ್ತು ಕಠಿಣ. ಮಾರ್ಗಸಿರ ಮತ್ತು ಪುಷ್ಯ ಹೇಮಂತ ಋತು. ಇದು ಮೈನಡುಗಿಸುವ ಛಳಿಯ ಕಾಲ. ಹಿಮ ಬೀಳುತ್ತದೆ. ಬೆಳಿಗ್ಗೆ ಸ್ವಲ್ಪ ಬೇಗ ಏಳುವುದೆಂದರೂ ಕಷ್ಟ ಎನ್ನಿಸುತ್ತದೆ. ಮಾರ್ಗಶಿರ ಮಾಸದಲ್ಲಿ ಬೆಳಿಗ್ಗೆ ಬೇಗನೆ ಎದ್ದು ದೇವರ ಧ್ಯಾನ ಮಾಡುವುದು ಮಾರ್ಗಶಿರ ವ್ರತ. ಈ ವ್ರತ ಮಾಡುವವರು ಎಷ್ಟೇ ಕಷ್ಟವಾದರೂ ಬೆಳಿಗ್ಗೆ ಬಹುಬೇಗನೇ ಏಳಲೇಬೇಕು. ಇದನ್ನು ಆಂಡಾಳ್ ತುಂಬಾ ಶ್ರದ್ಧೆಯಿಂದ ಆಚರಿಸಿದಳು. ತನ್ನ ಗೆಳತಿಯರನ್ನೆಲ್ಲಾ ಈ ಹಬ್ಬಕ್ಕಾಗಿ ಸಿದ್ಧಗೊಳಿಸಿದಳು. ಶ್ರೀಕೃಷ್ಣ ಆಂಡಾಳೀಗೆ ಅಚ್ಚುಮೆಚ್ಚಿನ ದೇವರು. ಅವನನ್ನು ಎಬ್ಬಿಸಲು ಹಾಡುವುದಕ್ಕಾಗಿ ಸುಂದರವಾದ ಮೂವತ್ತು ಪದ್ಯಗಳನ್ನು ರಚಿಸಿದಳು, ಹಾಡಿದಳು, ಅದು ’ತಿರುಪ್ಪಾವೈ’ ಎಂದು ಪ್ರಸಿದ್ಧಿಹೊಂದಿತು. (’ತಿರು’ ಎಂದರೆ ’ಶ್ರೇಷ್ಠವಾದ’ ’ಪಾವೈ’ ಎಂದರೆ ವ್ರತ.) ತನ್ನ ಗೆಳತಿಯರಿಗೂ ಭಕ್ತಿಯ ದಾರಿಯನ್ನು ತೋರಿಸಿ ’ಸಾಮೂಹಿಕ ಭಕ್ತಿ’  ಮತ್ತು ’ಸಾಮೂಹಿಕ ಪ್ರಾರ್ಥನೆ’ಯ ಮಾರ್ಗವನ್ನು ಸಮಾಜಕ್ಕೆ ನೀಡಿದ ಕೀರ್ತಿ ಆಂಡಾಳಿಗೆ ಸೇರುತ್ತದೆ.

ಆಂಡಾಳಿನ ಉಪದೇಶ

ಆಂಡಾಳ್ ದೇವರ ಭಕ್ತಿಯ ಸಾಧನೆಗಾಗಿ ಐದು ಲಕ್ಷ ಹೆಂಗಸರನ್ನು ಸೇರಿಸಿದಳು. ಅವರೊಡನೆ ದೇವರ ಧ್ಯಾನ, ಭಜನೆ ಮಾಡಿದಳು. ಅವರಿಂದ ಪೂಜೆಗಳನ್ನು ಮಾಡಿಸಿ ಅವರಿಗೂ ದೇವರಲ್ಲಿ ಪ್ರೀತಿ ಬರುವಂತೆ ಉಪದೇಶ ಕೊಡುತ್ತಿದ್ದಳು.

ದೇವರನ್ನು ಒಲಿಸಲು ಆಂಡಾಳ್ ತೋರಿಸಿದ ದಾರಿ ಬಹು ಸುಲಭವಾಗಿತ್ತು. ಎಲ್ಲರಿಗೂ ಶಾಸ್ತ್ರಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಎಲ್ಲರಿಗೂ ಹಣ ಖರ್ಚು ಮಾಡಿದ ದೇವರ ಸೇವೆ ಮಾಡುವುದು ಸಾಧ್ಯವಿಲ್ಲ. ಆಂಡಾಳ್ “ದೇವರು ಎಲ್ಲರನ್ನೂ ಒಂದೇ ಸಮನಾಗಿ ಕಾಣುತ್ತಾನೆ. ಅವನಿಗೆ ನಿಜವಾದ ಭಕ್ತಿ ಮತ್ತು ಪ್ರೀತಿಯೇ ಮುಖ್ಯ” ಎಂದಳು.

ಆಂಡಾಳ್ ಮನೆಯಲ್ಲಿ ಸದಾ ದೇವರ ಸ್ತೋತ್ರಗಳನ್ನು ಹಾಡುತ್ತಿರುತ್ತಿದ್ದಳು. ಕಣ್ಣುಮುಚ್ಚಿ ಧ್ಯಾನದಲ್ಲಿ ಮೈಮರೆಯುತ್ತಿದ್ದಳು. ತಂದೆ ಇದನ್ನೆಲ್ಲಾ ಕಂಡು ಇವಳ ಭಕ್ತಿಮಾರ್ಗವನ್ನು ಮೆಚ್ಚಿಕೊಳ್ಳುತ್ತಿದ್ದರು. ಸದಾ ದೇವರ ಧ್ಯಾನದಲ್ಲಿ ಇರುವ ಆಂಡಾಳನ್ನು ನೋಡಿ ಸಂತೋಷ ಪಡುತ್ತಿದ್ದರು. ಹೀಗೆಯೇ ಹಲವು ವರ್ಷಗಳು ಕಳೆದವು.

ಶ್ರೀರಂಗನಾಥನೇ ನನ್ನ ಪತಿ

ಆಂಡಾಳ್ ಮದುವೆಯಾದುದನ್ನು ಕುರಿತು ಭಕ್ತರು ಒಂದು ಸುಂದರವಾದ ಕಥೆಯನ್ನು ಹೇಳುತ್ತಾರೆ.

ಆಂಡಾಳಿಗೆ ಮದುವೆಯ ವಯಸ್ಸಾಯಿತು. ತಂದೆ ಪೆರಿಯಾಳ್ವಾರ್ ಈ ವಿಷಯದ ಬಗ್ಗೆ ಯೋಚಿಸಿದರು. ಆಂಡಾಳನ್ನು ನೀನು ಯಾರನ್ನು ಮದುವೆಯಾಗುತ್ತೀ ಎಂದು ಕೇಳಿದರು ವಿಷ್ಣುಚಿತ್ತರು.

“ಶ್ರೀರಂಗಕ್ಷೇತ್ರದ ರಾಜನಾದ ದೇವರು ಶ್ರೀರಂಗನಾಥನೇ ನನ್ನ ಗಂಡ, ಯಾವ ಮನುಷ್ಯನನ್ನೂ ನನ್ನ ಪತಿಯಾಗಿ ಸ್ವೀಕರಿಸುವುದಿಲ್ಲ” ಎಂದು ಆಂಡಾಳ್ ಉತ್ತರಿಸಿದಳು. ಆಂಡಾಳಿನ ಈ ಮಾತಿನಿಂದ ವಿಷ್ಣುಚಿತ್ತರಿಗೆ ತುಂಬಾ ಯೋಚನೆ ಆಯಿತು. ಭಗವಂತನಾದ ಶ್ರೀರಂಗನಾಥನೆಲ್ಲಿ, ನಾವೆಲ್ಲಿ? ಇದೇ ಯೋಚನೆಯಲ್ಲಿ ದೇವರನ್ನು ಪ್ರಾರ್ಥಿಸುತ್ತಿದ್ದರು.

ಆಂಡಾಳನ್ನು ಮೆಚ್ಚಿದ್ದೇನೆ

ಒಂದು ದಿನ ಪೆರಿಯಾಳ್ವಾರರಿಗೆ ಕನಸಾಯಿತು. ಶ್ರೀರಂಗನಾಥನು ಕನಸಿನಲ್ಲಿ ಬಂದು “ಆಂಡಾಳನ್ನು ಮೆಚ್ಚಿದ್ದೇನೆ, ಮದುವೆ ಮಾಡಿಕೊಡು” ಎಂದನು.

ಪೆರಿಯಾರ್ಳವಾರರಿಗೆ ಸಂತೋಷದಿಂದ ಹೃದಯ ತುಂಬಿತು. ಚಿಂತೆ ಒಮ್ಮೆಗೇ ದೂರವಾಯಿತು. ಆದರೆ, ಶ್ರೀರಂಗಕ್ಕೆ ಹೋಗುವ ಬಗೆ? ಶ್ರೀರಂಗಕ್ಷೇತ್ರ ಅಲ್ಲಿಂದ ಸುಮಾರು ೨೦೦ ಮೈಲಿಗಳು. ಆಗಿನ ಕಾಲದಲ್ಲಿ ಇಷ್ಟು ದೂರದ ಪ್ರಯಾಣ ಬಹಳ ಕಷ್ಟ. ಜನಸಹಾಯವಿಲ್ಲ. ಏನು ಮಾಡುವುದು?

ಪೆರಿಯಾಳ್ವಾರರಿಗೆ ಪಾಂಡ್ಯ ದೇಶದ ರಾಜ ವಲ್ಲಭ ದೇವನ ಜ್ಞಾಪಕ ಬಂತು. ಅವನಿಗೆ ಹೇಳಿಕಳುಹಿಸಿದರು. ಮಗಳ ನಿಶ್ಚಯವನ್ನೂ ಶ್ರೀರಂಗಕ್ಷೇತ್ರಕ್ಕೆ ಮಗಳ ಜೊತೆಗೆ ಹೋಗಬೇಕು, ಪ್ರಯಾಣಕ್ಕೆ ಏರ್ಪಾಡು ಮಾಡಿಕೊಡು” ಎಂದು ಕೇಳಿದರು. ರಾಜನಿಗೆ ಬಹಳ ಸಂತೋಷವಾಯಿತು. ತಾನೇ ವಧುವಿನ ಕಡೆಯವನಾಗಿ ನಿಂತು, ಆಳ್ವಾರರು ಮತ್ತು ಆಂಡಾಳ್ ಪ್ರಯಾಣ ಮಾಡಲು ವೈಭವದಿಂದ ಏರ್ಪಾಡು ಮಾಡಿದ.

ಅತ್ತ ಶ್ರೀರಂಗನಾಥ ಅರ್ಚಕರಿಗೆ ಸ್ವಪ್ನ ಆಯಿತು. “ನಾನು ಆಂಡಾಳನ್ನು ವರಿಸುವೆ, ಅವಳನ್ನು ಇಲ್ಲಿಗೆ ಕರೆತರಬೇಕು, ಸಕಲ ಮರ್ಯಾದೆಗಳೊಡನೆ ಮೆರವಣಿಗೆ ಹೊರಡಲಿ” ಎಂದು ಅಪ್ಪಣೆಯಾಯಿತು. ಅರ್ಚಕರಿಗೂ ಆಶ್ಚರ್ಯ! ತಡಮಾಡಲಿಲ್ಲ, ಕೂಡಲೇ ಹೊರಟರು.

ಶ್ರೀರಂಗನಾಥನ ಹೆಂಡತಿ

ಶ್ರೀವಿಲ್ಲಿಪುತ್ತೂರಿನಿಂದ ವಲ್ಲಭದೇವನೂ ಹೆಣ್ಣಿನ ಕಡೆಯವನಾಗಿ ಬಂದನು. ಆಂಡಾಳ್ ಸರ್ವಾಭರಣಗಳಿಂದ ಅಲಂಕರಿಸಿಕೊಂಡು ’ವಧು’ವಾದಳು. ಶ್ರೀರಂಗದಿಂದ ಬಂದ ವೈಭವದ ಪರಿವಾರ ಕಂಡು ಪೆರಿಯಾಳ್ವಾರ್ ಆನಂದಗೊಂಡರು.

ಆಂಡಾಳ್ ಮೇನೆಯಲ್ಲಿ ಕುಳಿತರು. ಸಕಲ ವಾದ್ಯ-ಮರ್ಯಾದೆಗಳೊಡನೆ ಹೊರಟ ಮದುವೆ ಮೆರವಣಿಗೆ ಶ್ರೀರಂಗಕ್ಷೇತ್ರವನ್ನು ತಲುಪಿತು. ಎಲ್ಲಾ ಕಡೆಯಿಂದಲೂ ಈ ಆಶ್ಚರ್ಯದ ವೈಭವದ ಮದುವೆ ನೋಡಲು ಜನ ಗುಂಪು ಗುಂಪಾಗಿ ಬಂದು ಸೇರಿದರು.

ಮೇನೆಯಿಂದ ಇಳಿದ ಆಂಡಾಳ್ ಶ್ರೀರಂಗನಾಥನ ಮುಂದೆ ನಿಂತಳು. ಅವನ ಅಂದಚೆಂದಗಳನ್ನು ಕಂಡು ಆನಂದ ಪುಳಕಿತಳಾದಳು. ಎಲ್ಲರೂ ನೋಡುತ್ತಿದ್ದಾರೆ!  ಆಂಡಾಳಿನ ಸಂಭ್ರಮದ ಮದುವೆ ನಡೆದೇ ನಡೆಯಿತು. ಆಂಡಾಳ್ ಶ್ರೀರಂಗನಾಥನ ಪಾದಾರವಿಂದ ಸೇರಿ ತನ್ನನ್ನೇ ಅರ್ಪಿಸಿಕೊಂಡಳು. ಅವಳ ಕನಸು ನನಸಾಯಿತು. ಶ್ರೀರಂಗನಾಥ ಆಂಡಾಳನ್ನು ಆದರದಿಂದ ಸ್ವೀಕರಿಸಿದ. ಅಲ್ಲಿ ಸೇರಿದ್ದವರಿಗೆಲ್ಲಾ ಆಂಡಾಳಿನ ಹಿರಿಮೆ ಅರ್ಥವಾಯಿತು. ಪೆರಿಯಾಳ್ವಾರರಿಗೆ ಮಗಳಿಲ್ಲದ ದುಃಖ ಒಂದು ಕಡೆ; ಶ್ರೀರಂಗನಾಥನನ್ನೇ ಪಡೆದ ಅವಳ ಭಾಗ್ಯಕ್ಕಾಗಿ ಆನಂದ ಇನ್ನೊಂದು ಕಡೆ!

ಆಂಡಾಳ್ ಎಲ್ಲರಿಗೂ ದೇವರಾದಳು. ಸಾಮಾನ್ಯವಾಗಿ ಇದ್ದ ಇವಳು ಪೂಜೆಗೆ ಅರ್ಹಳಾದಳು.

ಶ್ರೀವಿಲ್ಲಿಪುತ್ತೂರಿನಲ್ಲಿ ಆಂಡಾಳಿನ ದಿವ್ಯವಾದ ಸುಂದರ ಮಂದಿರವಿದೆ. ಪಕ್ಕದಲ್ಲೇ ಹೂದೋಟ. ಅದರಲ್ಲಿ ಬೆಳೆದ ಹೂವಿನ ಹಾರವನ್ನೇ ಆಂಡಾಳಿಗೆ ಇಂದೂ ಅರ್ಪಿಸುತ್ತಾರೆ. ಇಂದು ಆಂಡಾಳಿಗೆ ಧರಿಸಿದ ಹಾರ ನಾಳೆ ವಟಪತ್ರಶಾಯಿಗೆ ಅರ್ಪಿತವಾಗುತ್ತದೆ.

ಕವನಗಳ ಮಾಲೆ ಕೊಟ್ಟ ಆಂಡಾಳ್

ಆಂಡಾಳ್ ’ಪೂಮಾಲೈ-ಪಾಮಾಲೈ’ ಕೊಟ್ಟವಳು. ದೇವರಿಗೆ ಹೂಮಾಳೆಯನ್ನು ಮುಡಿದು ಸಮರ್ಪಿಸಿದಂತೆಯೇ ಪದ್ಯಮಾಲಿಕೆಯನ್ನೂ ನೀಡಿದಳು. ಇದರಿಂದ ಇವಳಿಗೆ ’ಗೋದಾ’ (ಗೋ= ಮಾತುಗಳನ್ನು, ದಾ= ನೀಡಿದವಳು) ಎಂಬ ಹೆಸರು ಸಾರ್ಥಕವಾಯಿತು.

ಆಂಡಾಳಿನ ಒಂದು ಕೃತಿ ’ನಾಯಚ್ಚಿಯಾರ್ ತಿರುಮೊಳಿ’ – ಎಂದರೆ ’ನಾಯಕೀ ಗೀತೆ/.’ ಇದರಲ್ಲಿ ೧೪೩ ಪದ್ಯಗಳಿವೆ. ಇದೊಂದು ಸುಂದರ ಕಾವ್ಯ. ಭಕ್ತಳಿಗೆ ದೇವರಲ್ಲಿ ಪ್ರೇಮ ಇದ್ದರೆ ಸಾಲದು, ದೇವರಿಗೂ ಭಕ್ತಳಲ್ಲಿ ಪ್ರೇಮ ಉಂಟಾಗಬೇಕು ಎಂಬ ಹಂಬಲ ಈ ಕಾವ್ಯದಲ್ಲಿದೆ. ಆಂಡಾಳ್ ತಪಸ್ಸಿನಿಂದ ಮನಸ್ಸನ್ನು ಶುದ್ಧ ಮಾಡಿಕೊಂಡಿದ್ದಾಳೆ, ’ದೇವರಿಗೂ ನನ್ನಲ್ಲಿ ಪ್ರೇಮ ಬರಲಿ’ ಎಂದು ಅವಳ ಪ್ರಾರ್ಥನೆ. ಭಗವಂತನ ಸುಂದರ ರೂಪವನ್ನು ಮರೆಯುವುದಕ್ಕೆ ಅವಳಿಗೆ ಸಾಧ್ಯವಿಲ್ಲ. ಅವನನ್ನು ಸದಾ ಸ್ಮರಿಸುತ್ತಾಲೆ. ಅವಳಿಗೆ ಆಹಾರ ಬೇಡ, ನಿದ್ರೆ ಬೇಡ, ಅಷ್ಟು ಭಗವಂತನಲ್ಲಿ ಪ್ರೀತಿ. ದೇವರ ಜೊತೆಗೆ ತನಗೆ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಚಿತ್ರಿಸಿಕೊಳ್ಳುತ್ತಾಳೆ. ರಾಜಾಧಿರಾಜರು, ಚಕ್ರವರ್ತಿಗಳ ಮಕ್ಕಳು ಅವರ ಮದುವೆಗಿಂತ ವೈಭವದಿಂದ ನಡೆಯುತ್ತದೆ ದೇವರ ಜೊತೆಗೆ ತನ್ನ ಮದುವೆ ಎಂದುಕೊಳ್ಳುತ್ತಾಳೆ. ’ತಿರುಮೊಳಿ’ ಸಂತೋಷದ ಸಂಭ್ರದ ಹಾಡು-ದೇವರಲ್ಲಿ ಆಳವಾದ ಪ್ರೀತಿ ಇದ್ದರೆ ಅದರಿಂದ ಬರುವ ಸಂತೋಷದ ಸಂಭ್ರಮದ ಹಾಡು.

ತಮಿಳಿನಲ್ಲಿರುವ ಈ ಪದ್ಯಗಳನ್ನು ಮದುವೆಯ ಸಂದರ್ಭದಲ್ಲಿ ಹಾಡಲು ತುಂಬಾ ಚೆನ್ನಾಗಿರುತ್ತದೆ. ತಮಿಳು ಸಾಹಿತ್ಯದಲ್ಲಿ ಆಂಡಾಳಿನ ಸೇವೆ ತುಂಬಾ ದೊಡ್ಡದು. ಆದ್ದರಿಂದಲೇ ಒಂದು ದೊಡ್ಡ ಸ್ಥಾನವನ್ನು ಪಡೆದಳು.

ತಿರುಪ್ಪಾವೈ

ಆಂಡಾಳ್ರಚಿಸಿರುವ ’ತಿರುಪ್ಪಾವೈ’ ಎಂಬ ಕಾವ್ಯ ತುಂಬಾ ಸುಂದರವಾದ ಪದ್ಯಗಳ ಮಾಲೆ. ಶ್ರೀಕೃಷ್ಣನನ್ನು ವಿಧವಿಧವಾಗಿ ಪ್ರಾರ್ಥಿಸುವುದು ಮತ್ತು ತನ್ನ ಜೊತೆಗಾರ್ತಿಯರನ್ನು ದೇವರ ಪೂಜೆಗಾಗಿ ಕರೆಯುವ ರೀತಿ ತುಂಬಾ ಚೆನ್ನಾಗಿದೆ.

ಭಾಗವತ ಎಂಬುದು ನಮ್ಮಲ್ಲಿ ಪ್ರಸಿದ್ದವಾದ ಒಂದು ಗ್ರಂಥ. ಕೃಷ್ಣನ ಬಾಲ್ಯದ ಕಥೆ, ಅವನನ್ನು ಕುರಿತ ಹಲವು ಕಥೆಗಳು, ಅವನ ಭಕ್ತರನ್ನು ಕುರಿತ ಹಲವು ಕಥೆಗಳು ಈ ಗ್ರಂಥದಲ್ಲಿವೆ. ಭಾಗವತ ಹೇಳುವ ಒಂದು ಕಥೆಯಲ್ಲಿ ಕೆಲವರು ಹುಡುಗಿಯರು ದುರ್ಗಾಕಾತ್ಯಾಯಿನೀ ದೇವಿಗೆ ಪ್ರಾರ್ಥನೆ ಮಾಡುತ್ತಾರೆ-ನಮಗೆ ಒಳ್ಳೆಯ ಗಂಡಂದಿರು ಸಿಕ್ಕಲಿ, ನಾವು ಮದುವೆಯಾದ ಮೇಲೆ ಸಂತೋಷವಾಗಿ, ಸುಖವಾಗಿ ಇರುವಂತೆ ಹರಸು ಎಂದು ಬೇಡುತ್ತಾರೆ. ಆಂಡಾಳ್ ಈ ಕಥೆಯನ್ನು ಉಪಯೋಗಿಸಿಕೊಂಡಿದ್ದಾಳೆ. ಆದರೆ ’ತಿರುಪ್ಪಾವೈ’ಯಲ್ಲಿ ಭಕ್ತಳು ಬೇಡುವುದೇ ದೇವರೇ ನನ್ನ ಗಂಡನಾಗಲಿ ಎಂದು. ಕೃಷ್ಣನ ಪ್ರೇಮ ನನಗೆ ದೊರೆಯಲಿ ಎಂದು ಬೇಡುತ್ತಾಲೆ ಆಂಡಾಳ್. ಕೃಷ್ಣನು ತನ್ನ ಹಾಸಿಗೆಯನ್ನು ಬಿಟ್ಟು ಏಳಲಿ, ನನ್ನ ಹೃದಯವೇ ಅವನ ಸಿಂಹಾಸನ, ಆ ಸಿಂಹಾಸನದಲ್ಲಿ ಅವನು ಸದಾ ಬೆಳಗಲಿ ಎಂದು ಪ್ರಾರ್ಥನೆ ಮಾಡುತ್ತಾಳೆ. ಶ್ರೀಕೃಷ್ಣ ದೇವರ ಅವತಾರ ಎಂದೇ ಜನ ನಂಬಿ ಪೂಜಿಸುತ್ತಾರೆ, ಅಲ್ಲವೆ? ಆ ದೇವರು ದೇವಕಿಯ ಮಗನಾಗಿ ಹುಟ್ಟಿದ; ಕಂಸ ಅವನನ್ನು ಕೊಲ್ಲುತ್ತಾನೆ ಎಂದು ಕೃಷ್ಣನ ತಂದೆ ವಸುದೇವ ಅವನನ್ನು ನಂದಗೋಕುಲಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದ. ಅಲ್ಲಿ ಅವನನ್ನು ಯಶೋದೆ ಸಾಕಿದಳು. ಕೃಷ್ಣನನ್ನು ಪಡೆದ ತಾಯಿ ದೇವಕಿಯೂ ಮನುಷ್ಯಳೆ, ಅವನನ್ನು ಸಾಕಿದ ತಾಯಿ ಯಶೋದೆಯೂ ಮನುಷ್ಯಳೆ. ಇದನ್ನು ಸ್ಮರಿಸಿ ಆಂಡಾಳ್ ಶ್ರೀಕೃಷ್ಣನನ್ನು, “ನಾವು ನಿನ್ನ ಬಳಿಗೆ ಬಂದಿದ್ದೇವೆ. ನಮ್ಮ ಆಸೆಯನ್ನು ನೀವೇ ಪೂರೈಸಬೇಕು. ಕೊನೆಯಿಲ್ಲದ ಆನಂದವನ್ನು ನೀನು ಕೊಟ್ಟೆ ಎಂದು ನಾವು ಹಾಡಿ ಸಂತೋಷ ಪಡುತ್ತೇವೆ” ಎಂದು ಬೇಡುತ್ತಾಳೆ.

ಈ ಕೃತಿಯ ಒಂದು ಪದ್ಯದಲ್ಲಿ ಆಂಡಾಳ್ ಗೆಳತಿಯನ್ನು ಹೀಗೆ ಎಬ್ಬಿಸುತ್ತಾಲೆ: “ಹಕ್ಕಿಗಳು ಹಾಡುತ್ತಿವೆ, ದೇವಮಂದಿರದಲ್ಲಿ ಶಂಖ ಧ್ವನಿ ಕೇಳಲಿಲ್ಲವೇ? ಪೂತನಿಯ ಹಾಲನ್ನು ಕುಡಿಯುವ ನೆಪದಿಂದ ಆ ರಾಕ್ಷಸಿಯನ್ನು ಕೊಂದ ಆ ಶ್ರೀಕೃಷ್ಣನನ್ನು ಎಲ್ಲಾ ಋಷಿಗಳೂ ’ಹರಿ’ ಎಂದು ಧ್ಯಾನ ಮಾಡುತ್ತಿದ್ದಾರೆ. ಆದ್ದರಿಂದ ನೀನು ಏಳು.”

ಇನ್ನೊಂದು ಪದ್ಯದಲ್ಲಿ ಆಂಡಾಳ್ ತನ್ನ ಸ್ನೇಹಿತೆಯನ್ನು ಕುರಿತು “ನಿಮ್ಮ ಮನೆಯ ಹಿಂದುಗಡೆ ಇರುವ ತೋಟದ ಕೊಳದಲ್ಲಿ ಸೌಗಂಧಿಕೆ ಎಂಬ ಪುಷ್ಪ ಬಾಯಿ ತೆರೆಯಿತು. ನೈದಿಲೆ ಬಾಯಿ ಮುಚ್ಚಿತು. ಸೂರ್ಯೋದಯವಾಗಿದೆ. ಸಂನ್ಯಾಸಿಗಳು ದೇವರ ಪೂಜೆಗಾಗಿ ಹೋಗುತ್ತಿದ್ದಾರೆ- ನೀನೂ ಏಳು. ಈ ಶಂಖಚಕ್ರಧಾರಿಯಾದ ದೇವರನ್ನು ಭಜಿಸಿ ನಾವೂ ಹಾಡೋಣ” ಎಂದು ಹೇಳುತ್ತಾಳೆ.

ಆಂಡಾಳ್ ದೇವರನ್ನು ಹೀಗೆ ಪ್ರಾರ್ಥಿಸುತ್ತಾಳೆ; “ಬೆಳಗಿನ ಝಾವದಲ್ಲಿ ಬಂದು ನಿನ್ನನ್ನು ಆರಾಧಿಸಿ ನಿನ್ನ ಪಾದಗಳನ್ನು ಸೇವಿಸುವುದೇ ನಮ್ಮ ಆಸೆ. ಗೋಪಾಲಕನಾದ ನೀನು ನಮ್ಮ ಪ್ರೀತಿಯ ಈ ಸೇವೆಯನ್ನು ಸ್ವೀಕರಿಸು. ಏಳೇಳು ಜನ್ಮಕ್ಕೂ ನಿನ್ನ ಬಂಧುಗಳಾಗುವೆವು. ನಿನ್ನ ಸೇವಕರಾಗಿ ಇರುತ್ತೇವೆ.

’ತಿರುಪ್ಪಾವೈ’ ಭಕ್ತಿಮಾರ್ಗದ ಎಲ್ಲರನ್ನೂ ಆಕರ್ಷಿಸಿತು. ಶ್ರೀರಾಮಾನುಜರಿಗೆ ಇದು ಬಹಳ ಪ್ರಿಯವಾಯಿತು. ಆಂಡಾಳ್ ತೋರಿದ ಮಾರ್ಗವನ್ನು ಒಪ್ಪಿದರು; ಅನುಸರಿಸಿದರು. ಅವಳ ನಡೆದ ದಾರಿಯನ್ನು ಮೆಚ್ಚಿ ’ಆದರ್ಶ ಸ್ತ್ರಿ’ ಎಂದು ಕರೆದರು. ಇಂದು ಆಂಡಾಲಿನ ತಿರುಪ್ಪಾವೈ ತುಂಬಾ ಪರಿಚಿತವಾದ ಪದ್ಯಸಮೂಹವಾಗಿದೆ.

ಭಕ್ತಿಯನ್ನು ಶ್ರಮದ ಕೆಲಸದಲ್ಲಿ ತೋರಿಸಿ

ಶ್ರೀಕೃಷ್ಣನಿಗೆ ಸುಂದರವಾಗಿ ಪುಷ್ಪಹಾರಗಳನ್ನು ಕಟ್ಟಿಕೊಟ್ಟು ಹೂವಾಡಿಗನೊಬ್ಬ ಮುಕ್ತಿಯನ್ನು ಪಡೆದ ಎಂಬ ಕಥೆಯಿದೆ.

ಉತ್ತರ ಭಾರತದಲ್ಲಿ ಮಥುರಾ ಎಂಬ ನಗರವಿದೆ. ಇದು ದೆಹಲಿಗೆ ಸುಮಾರು ೩೦೦ ಮೈಲಿ ದಕ್ಷಿಣಕ್ಕೆ ಇದೆ. ಇಲ್ಲಿಯೇ ಚಂದ್ರವಂಶದ ಅರಸರುಗಳು ವಾಸವಾಗಿದ್ದರು. ಮಥುರಾ ನಗರ ಇವರ ರಾಜಧಾನಿ. ಇಲ್ಲಿ ಉಗ್ರಸೇನನೆಂಬ ರಾಜನಿದ್ದ. ಅವನ ಮಗ ಕಂಸ. ರಾಜ್ಯದಾಸೆಯಿಂದ ಅವನು ತಂದೆಯನ್ನು ಸೆರೆಮನೆಯಲ್ಲಿಟ್ಟು ತಾನೇ ರಾಜನಾದ. ಅನೇಕ ಒಳ್ಳೆಯವರು ಕಂಸನಿಂದ ತೊಂದರೆ ಪಡುತ್ತಿದ್ದರು.

ಶ್ರೀಕೃಷ್ಣನನ್ನು ಕಂಡರೆ ಕಂಸನಿಗೆ ತುಂಬಾ ದ್ವೇಷ. ಹೇಗಾದರೂ ಕೃಷ್ಣನನ್ನು ಕೊಲ್ಲಲು ಪ್ರಯತ್ನ ಪಡುತ್ತಿದ್ದ. ಇದಕ್ಕಾಗಿ ಜಟ್ಟಿಗಳನ್ನೂ, ಆನೆಗಳನ್ನೂ ಸಿದ್ಧಮಾಡಿದ. ಶ್ರೀಕೃಷ್ಣ ನಂದಗೋಕುಲ ಎಂಬ ಸ್ಥಳದಲ್ಲಿದ್ದ. ಕಂಸ ಅವನನ್ನು ಮಥುರಾ ನಗರಕ್ಕೆ ಕರೆಸಿಕೊಂಡ.

ಶ್ರೀಕೃಷ್ಣ ಮತ್ತು ಅವನ ಬಲರಾಮರು ಮಥುರೆಗೆ ಬಂದರು. ಹಳ್ಳಿಯ ಹುಡುಗರಾದ್ದರಿಂದ ಸಾದಾ ಉಡುಪು. ರಾಜಾಸ್ಥಾನಕ್ಕೆ ಹೋಗಲು ಸರಿಯಾದ ಬಟ್ಟೆ ಬೇಡವೇ? ಅದೇ ಸಮಯಕ್ಕೆ ಆ ದಾರಿಯಲ್ಲಿ ಕಂಸನ ಆಸ್ಥಾನದ ಅಗಸ ಬರುತ್ತಿದ್ದ. ಅವನಿಂದ ಒಳ್ಳೆಯ ಬಟ್ಟೆಗಳನ್ನು ಅವರು ತೆಗೆದುಕೊಂಡರು. ಮುಂದೆ ಗಂಧ ಅರೆದುಕೊಡುವ ಡೊಂಕು ಬೆನ್ನಿನವಳು ಸಿಕ್ಕಳು; ಅವಳಿಂದ ಗಂಧ ತೆಗೆದುಕೊಂಡು ಧರಿಸಿಕೊಂಡು ಮುಂದೆ ನಡೆದರು.

ಮುಂದೆ ಕಂಸನ ಅರಮನೆಗೆ ಅಲಂಕಾರದ ಹೂಗಳನ್ನು ಕೊಡುವವನ ಮನೆ ಸಿಕ್ಕಿತು. ಅವನ ಹೆಸರು ಸುದಾಮ, ಎಂದರೆ ಒಳ್ಳೆಯ ಹೂಹಾರ ಕಟ್ಟುವವನು ಎಂದರ್ಥ. ಹೂ ಕಟ್ಟಿ ಮಾರಿಯೇ ಜೀವನ ನಡೆಸುತ್ತಿದ್ದ.

ತನ್ನ ಮನೆಗೆ ರಾಮಕೃಷ್ಣರು ಬಂದುದನ್ನು ಕಂಡು ಸುದಾಮ ತನಗೆ ತಿಳಿಯದೆಯ ಎದ್ದು ನಿಂತು ಅವರಿಗೆ ತಲೆಬಾಗಿ ನಮಸ್ಕರಿಸಿದ. ಕೈಕಾಲಿಗೆ ನೀರು ಕೊಟ್ಟು ಒಳಗೆ ಕರೆದು ಆಸನ ಕೊಟ್ಟು ಉಪಚರಿಸಿದ. ಕೃಷ್ಣನೊಡನೆ ಬಂದಿದ್ದ ಪರಿವಾರದವರಿಗೂ ಇದೇ ರೀತಿಯ ಉಪಚಾರವಾಯಿತು.

ಹೂವಾಡಿಗನಿಗೂ ಎಲ್ಲಿಲ್ಲದ ಸಂತೋಷ. ಕೃಷ್ಣನನ್ನು ಕುರಿತು, “ಸ್ವಾಮಿ! ಈಗಲೀಗ ನನ್ನ ಜನ್ಮ ಸಾರ್ಥಕವಾಯಿತು. ನನ್ನ ಕುಲವೆಲ್ಲ ಪವಿತ್ರವಾಯಿತು. ನಿಮ್ಮನ್ನು ಪೂಜೆ ಮಾಡಿದರೆ ಎಲ್ಲ ದೇವತೆಗಳನ್ನೂ ಋಷಿಗಳನ್ನೂ ಪೂಜೆ ಮಾಡಿದ ಪುಣ್ಯ ಬರುತ್ತದೆ” ಎಂದು ಸ್ತೋತ್ರ ಮಾಡಿದ.

ಅನಂತರ ಬಣ್ಣದ ಹೂಗಳಿಂದ ಕಟ್ಟಿದ ಮಾಲೆಗಳನ್ನು ಶ್ರೀಕೃಷ್ಣ ಬಲರಾಮರಿಗೆ ಅರ್ಪಿಸಿದ. ಶ್ರೀಕೃಷ್ಣನ ಮೈಬಣ್ಣ ಶ್ಯಾಮಲ.ಇದಕ್ಕೆ ಸರಿಯಾಗಿ ಶ್ಯಾಮಲ ಬಣ್ಣದ ಹೂ ಧರಿಸಿದ. ಬಲರಾಮನ ಮೈಬಣ್ಣ ಬಿಳಿ. ಇದಕ್ಕೆ ಅನುಗುಣವಾದ ಹೂಧರಿಸಿದ. ಶ್ರೀಕೃಷ್ಣ ಬಲರಾಮರಿಗೆ ಬಹಳ ಸಂತೋಷವಾಯಿತು. “ಸುದಾಮ, ನಿನಗೇನು ಬೇಕು? ಕೇಳು, ಎಲ್ಲವನ್ನೂ ಕೊಡುವೆನು” ಎಂದು ಶ್ರೀಕೃಷ್ಣ.

ಅದಕ್ಕೆ ಮಾಲೆಕಾರ, “ಸ್ವಾಮಿ, ನೀನೇ ನನಗೆ ಸರ್ವಸ್ವ. ನಾನು ನಿನ್ನ ಭಕ್ತ. ನಿನ್ನಲ್ಲಿ ಅಚಲವಾದ ಭಕ್ತಿ ಇರಲಿ. ಯಾರ ಕಷ್ಟಗಳನ್ನೂ ನೋಡಿದರೂ ಮರುಗುವಂತಹ ಕರುಣಾಗುಣ ಬರಲಿ” ಎಂದು ಬೇಡಿದ.

ತನಗಾಗಿ ಸುದಾಮ ಏನನ್ನೂ ಕೇಳಲಿಲ್ಲವಲ್ಲ ಎಂದು ಶ್ರೀಕೃಷ್ಣನಿಗೆ ತುಂಬಾ ಆಶ್ಚರ್ಯವಾಯಿತು. ಅವನನ್ನು ಕುರಿತು, “ಅಯ್ಯಾ! ನೀನು ಕೇಳಿದಂತೆಯೇ ವರ ಕೊಟ್ಟಿರುತ್ತೇನೆ. ಆದರೆ ನಾನು ಹೇಳಿದಂತೆ ನೀನೂ ಕೇಳಲೇಬೇಕು. ನಿನ್ನ ವಂಶಪಾರಂಪರ್ಯವಾಗಿ ನೀನು ಕೇಳಿದ ವರಗಳೂ ಬರುವವು. ನಿನ್ನ ವಂಶ ಬೆಳೆಯಲಿ. ದೇವರ ಸೇವೆಗೆ ಉಪಯೋಗವಾಗುವ ಐಶ್ವರ್ಯ ನಿನಗೆ ಬರಲಿ. ನೀನು ಎಲ್ಲಾ ಸೌಖ್ಯವನ್ನೂ ಪಡೆದು ಆನಂದದಿಂದಿರು” ಎಂದು ಆಶೀರ್ವದಿಸಿ ಶ್ರೀಕೃಷ್ಣ ಮುಂದೆ ಹೊರಟನು.

ಈ ರೀತಿ ಮಾಲೆಕಾರನಿಗೆ ಶ್ರೀಕೃಷ್ಣ ಒಲಿದು ಅನುಗ್ರಹಿಸಿದ. ಪೆರಿಯಾಳ್ವಾರನೂ ಈ ಹೂಡವಾಡಿಗ ನಂತೆಯೇ ತಮಗಾಗಿ ಏನೂ ಕೇಳಲಿಲ್ಲ.

ಅವನಂತೆಯೇ ವಿಧವಿಧವಾದ ಹೂಗಳನ್ನು ಸೊಗಸಾಗಿ ಸೇರಿಸಿ ಹಾರವನ್ನು ಕಟ್ಟಿ ದೇವರಿಗೆ ಭಕ್ತಿಯಿಂದ ಅರ್ಪಿಸುತ್ತಿದ್ದರು.

ಸುದಾಮನು ಒಂದಾದ ಮೇಲೆ ಒಂದು ಮಾಲೆಯನ್ನು “ಇದು ಚೆನ್ನಾಗಿದೆ, ಇದು ಇನ್ನೂ ಚೆನ್ನಾಗಿದೆ” ಎಂದು ರಾಮಕೃಷ್ಣರಿಗೆ ಅರ್ಪಿಸಿದಂತೆ ಪೆರಿಯಾಳ್ವಾರರು ದೇವರಿಗೆ ಹೂ ಕೊಟ್ಟು ಧನ್ಯರಾಗುತಿದ್ದರು. ದೇವರಿಗಲ್ಲದೆ ಬೇರೆ ಯಾರಿಗೂ ಒಂದು ಹೂ ಕೊಡುತ್ತಿರಲಿಲ್ಲ. ಅಷ್ಟು ಪ್ರೀತಿಯ ಆಂಡಾಳಿನಲ್ಲೂ ಅವಳು ಹಾರವನ್ನು ಧರಿಸಿದಳೆಂದು ಸಿಟ್ಟುಗೊಂಡಿದ್ದರಲ್ಲವೆ?

ಹೀಗೆ ಆಳ್ವಾರರು, ಆಂಡಾಳ್ ಇಬ್ಬರೂ, ಭಕ್ತರು ತಮ್ಮ ಶ್ರಮದಲ್ಲಿ ಭಕ್ತಿಯನ್ನು ತೋರಿಸಬೇಕು ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. ಇಷ್ಟೇ ಅಲ್ಲ. ಪೆರಿಯಾಳ್ವಾರರೂ, ಆಂಡಾಳ್ ಇಬ್ಬರೂ ತಾವೇ ಸ್ವತಃ ಕಷ್ಟಪಟ್ಟು ಹೂದೋಟವನ್ನು ಬೆಳೆಸುತ್ತಿದ್ದರು. ತೋಟದ ಪ್ರತಿ ಹೂವು ದೇವರಿಗೆ ಅರ್ಪಣೆಯಾಗುತ್ತದೆ ಎಂಬುದನ್ನು ಒಂದುಕ್ಷಣವೂ ಮರೆಯುತ್ತಿರಲಿಲ್ಲ. ಪ್ರತಿ ಗಿಡವನ್ನೂ ಪ್ರತಿ ಹೂವನ್ನೂ ಮನೆಯ ಮಗುವಿನಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ತಾವು ಶ್ರಮದಿಂದ, ಪ್ರೀತಿಯಿಂದ ಬೆಳೆಸಿದ ಗಿಡಗಳ ಹೂವುಗಳನ್ನು ಭಕ್ತಿಯಿಂದ, ಪ್ರೀತಿಯಿಂದ ದೇವರಿಗೆ ಅರ್ಪಣೆ ಮಾಡುತ್ತಿದ್ದರು.

ಸ್ವತಃ ಪರಿಶ್ರಮ ಪಟ್ಟು ಕೃಷಿಮಾರ್ಗದಿಂದಲೇ ದೇವರನ್ನು ಸೇರುವವರು ಎಷ್ಟು ಜನ? ಭಗವಂತನಿಗೆ ಕಾಯಕವೂ ಅತಿ ಪ್ರಿಯವಾದುದು. ’ಕಾಯಕವೇ ವೈಕುಂಠ’ ಎಂಬ ದಾರಿಯನ್ನು ಆಳ್ವಾರ್-ಆಂಡಾಳ್ ತೋರಿಸಿದರು.

ಹಿರಿಯಾಳ್ವಾರರು ಹಾಡುಗಳನ್ನು ರಚಿಸಿದರು, ಆಂಡಾಳ್ ಸಹ ಹಾಡುಗಳನ್ನು ರಚಿಸಿದಳು. ಇವರಿಬ್ಬರ ಹಾಡುಗಳಲ್ಲಿಯೂ ಅವರ ದೊಡ್ಡತನವನ್ನು ತೋರಿಸುವ ಅಂಶ ಒಂದಿದೆ. ಇಬ್ಬರೂ ಭಗವಂತನನ್ನು, “ಅಧರ್ಮವನ್ನು ಹೋಗಲಾಡಿಸು, ಧರ್ಮ ಬೆಳೆಯುವಂತೆ ಮಾಡು” ಎಂದು ಬೇಡುತ್ತಾರೆ. ಯಾವ ದೇಶದವರಾಗಲಿ, ಯಾವ ಧರ್ಮದವರಾಗಲಿ ಬೇಡುವುದು ಇದನ್ನೆ ಅಲ್ಲವೆ? ಕೆಟ್ಟತನ ಕಡಿಮೆಯಾಗಲಿ, ಒಳ್ಳೆಯತನ ಹೆಚ್ಚಾಗಲಿ, ಜನರು ಒಬ್ಬರಿಗೆ ಒಬ್ಬರು ಅನ್ಯಾಯ ಮಾಡದೆ ಸಹಾಯ ಮಾಡುತ್ತ ಬಾಳಲಿ ಎಂದೇ ಅಲ್ಲವೇ ಎಲ್ಲರ ಪ್ರಾರ್ಥನೆ? ಇದರಿಂದ ಇವರು ಎಲ್ಲ ಧರ್ಮಗಳವರಿಗೆ ಸೇರಿದವರೇ. ಎಲ್ಲ ಜನರಿಗೆ ಒಳ್ಳೆಯದಾಗಲಿ ಎಂದು ಬಯಸುವ ಎಲ್ಲರಿಗೂ ಸೇರಿದವರೇ. ಸ್ವಾರ್ಥ ಬಿಡುವುದು-ನನಗೆ ಇದು ಬೇಕು. ಅದು ಬೇಕು ಎಂದು ಆಸೆ ಪಡದೆ ಇರುವುದು-ಎನ್ನುವುದನ್ನು  ಜೀವನದಲ್ಲಿ ಇಬ್ಬರೂ ಆಚರಿಸಿ ತೋರಿಸಿದವರು. ಇಂತಹವರಿಗೆ ಎಲ್ಲ ಧರ್ಮಗಳವರೂ ಎಲ್ಲ ಕಾಲದವರೂ ಗೌರವ ತೋರಿಸುವುದು ಆಶ್ಚರ್ಯವಲ್ಲ.

ಆಂಡಾಳ್ ಹುಟ್ಟಿದ ದಿನವಾದ ಆಡಿ ಮಾಸದ (ಕರ್ಕಾಟಕ) ಪುಬ್ಬಾ ನಕ್ಷತ್ರ ’ತಿರುವಾಡಿಪ್ಪೊರ’ವೆಂದು ಎಲ್ಲೆಲ್ಲೂ ಸಂಭ್ರಮವಾಗಿ ಆಚರಿಸುತ್ತಾರೆ.

ಇಂದೂ ಎಲ್ಲಾ ಶ್ರೀವೈಷ್ಣವ ಮಂದಿರಗಳಲ್ಲೂ ಆಂಡಾಳಿನ ದಿವ್ಯ ವಿಗ್ರಹವನ್ನು ದರ್ಶನ ಮಾಡಬಹುದು. ಅವಳ ರಚಿಸಿದ ತಿರುಪ್ಪಾವೈ ಪಠಣ ಪ್ರತಿನಿತ್ಯವೂ ನಡೆಯುತ್ತಿದೆ.

ಶ್ರೀವಿಲ್ಲಿಪುತ್ತೂರಿನಲ್ಲಿ ಆಂಡಾಳಿನ ಉತ್ಸವ ಎಂದರೆ ದೊಡ್ಡ ಜಾತ್ರೆಯಂತೆ. ಊರಿನ ಸ್ತ್ರೀಯರೆಲ್ಲಾ ಹೆಮ್ಮೆಯಿಂದ ಉತ್ಸವದಲ್ಲಿ ಭಾಗವಹಿಸುತ್ತಾರೆ. ಸ್ತ್ರೀಯರ ಪಂಗಡಕ್ಕೇ ಆಂಡಾಳ್ ಒಂದು ರತ್ನದಂತೆ ಇದ್ದಾಳೆ.