ವಿಜ್ಞಾನಿಗಳು ತಮ್ಮ ಕೆಲಸದಲ್ಲಿನ ಭಾವೋದ್ವೇಗ, ಆನಂದ, ಸಂತೋಷ ಹಾಗೂ ಅನುಭವಗಳನ್ನು ಸಾಮಾನ್ಯ ಜನರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯ ಎಂದು ನಾನು ನಂಬುತ್ತೇನೆ. ಕಠಿಣ, ಸಂಕೀರ್ಣ ವಿಚಾರಗಳನ್ನು ಸರಳವಾಗಿ, ಅರ್ಥವಾಗುವಂತೆ ವಿವರಿಸುವ ಸವಾಲನ್ನು ನಾವು ಖುಷಿಯಿಂದ ಸ್ವೀಕರಿಸುತ್ತೇನೆ.

ಆಂಥೋನಿ ಹೆವಿಷ್

ಖಭೌತ ವಿಜ್ಞಾನದಲ್ಲಿ ಸಂಚಲನವನ್ನುಂಟು ಮಾಡಿದ ‘ಪಲ್ಸಾರ್’ಗಳ ಆವಿಷ್ಕಾರದಲ್ಲಿ ಪ್ರಧಾನ ಹಾಗೂ ಗಣನೀಯ, ನಿರ್ಣಾಯಕ ಪಾತ್ರವಹಿಸಿದವರು ಆಂಥೋನಿ ಹೆವಿಷ್.

ಏನಿದು, ಪಲ್ಸಾರ್?! ಎನ್ನುವಿರಾ?ನೋಡಿ, ಪಲ್ಸಾರ್ ಎಂಬುದು ನಕ್ಷತ್ರಗಳ ಜೀವ ಚಕ್ರದಲ್ಲಿನ ಒಂದು ಹಂತ. ತನ್ನ ಅಕ್ಷದ ಸುತ್ತಲೂ, ವೇಗವಾಗಿ ತಿರುಗುವ ನ್ಯೂಟ್ರಾನ್ ತಾರೆಯೇ ಪಲ್ಸಾರ್. ಇವು ಪ್ರತಿ ಸೆಕೆಂಡಿಗೆ ಒಂದರಿಂದ ಹಿಡಿದು ಸಾವಿರಾರು ಬಾರಿ ಬುಗುರಿಯಂತೆ ತಿರುಗುವ ಸಾಂದ್ರ ಕಾಯಗಳು. ಒಂದು ನಕ್ಷತ್ರದ ರಾಶಿಯು ಸೌರರಾಶಿಗಿಂತ 1.44ಪಟ್ಟು ಹೆಚ್ಚಾಗಿದ್ದರೆ ಅದು ನ್ಯೂಟ್ರಾನ್ ನಕ್ಷತ್ರವಾಗಿ ವಿಕಾಸವಾಗುತ್ತದೆ. ಭಾರೀ ನಕ್ಷತ್ರಗಳು ಸ್ಫೋಟವಾದಾಗ, ನಕ್ಷತ್ರದ ಹೊರ ದ್ರವ್ಯವೆಲ್ಲಾ ಕಿತ್ತೆಸೆಯಲ್ಪಟ್ಟು, ಕೇಂದ್ರದಲ್ಲಿ ದ್ರವ್ಯವೆಲ್ಲ ನ್ಯೂಟ್ರಾನುಗಳಿಂದ ತುಂಬಿಹೋಗುವುದು. ಇದೇ ನ್ಯೂಟ್ರಾನ್ ನಕ್ಷತ್ರ.

ಪಲ್ಸಾರ್, ಕ್ವೇಸಾರ್‌ನಂತಹ ಖಗೋಲ ಕಾಯಗಳು ಪತ್ತೆಯಾಗಿದ್ದು 1960ನೇ ದಶಕದಲ್ಲಿ.  1967ರಲ್ಲಿ ಪಲ್ಸಾರ್‌ಗಳ ಪತ್ತೆಯಾಯಿತು. ಅಂದಿನಿಂದ ಖಗೋಲಜ್ಞರು ಸುಮಾರು ನೂರಕ್ಕೂ ಹೆಚ್ಚು ಪಲ್ಸಾರ್‌ಗಳನ್ನು ಗುರುತಿಸಿದ್ದಾರೆ. ನಮ್ಮ ಆಕಾಶಗಂಗೆ ಗೆಲಕ್ಸಿಯಲ್ಲಿ ಸರಿಸುಮಾರು ಒಂದು ಮಿಲಿಯನ್‌ಗೂ ಹೆಚ್ಚು ಪಲ್ಸಾರುಗಳಿವೆ ಎಂದು ಅಂದಾಜು ಮಾಡಿದ್ದಾರೆ.

ಹೆವಿಷ್‌ರವರು ಕ್ರಿ.ಶ. 1924, ಮೇ 11ರಂದು ಇಂಗ್ಲೆಂಡ್‌ನ ಕಾರನ್‌ವಾಲ್‌ಗೆ ಸೇರಿದ ‘ಪೋವೇ’ ಎಂಬಲ್ಲಿ ಜನಿಸಿದರು. ಕೇಂಬ್ರಿಜ್‌ನಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವ ಸಮಯದಲ್ಲಿ ಎರಡನೇ ಮಹಾಯುದ್ಧದ ಕಾರಣ ವಿದ್ಯಾಭ್ಯಾಸಕ್ಕೆ ಅಡಚಣೆಯಾಯಿತು. ಯುದ್ಧ ಸಂಬಂಧಿ ಕೆಲಸಗಳಿಗೆ ಅವರು ಸೇರಬೇಕಾಯಿತು. ಮೊದಲು ರಾಯಲ್ ವಿಮಾನ ಯಂತ್ರವ್ಯಾಪಾರ ಸಂಸ್ಥೆಯಲ್ಲೂ ಅನಂತರ ರೇಡಿಯೋ ಮೂಲಕ ಸಂದೇಶ ಸಂವಹನ ನಡೆಸುವ ದೂರವಾಣಿ ಸಂಸ್ಥೆಯಲ್ಲೂ ಕೆಲಸ ಮಾಡಿದರು. ಆಗ, ಇವರಿಗೆ ಮಾರ್ಟಿನ್ ರಿಲೇ ಅವರ ಪರಿಚಯವಾಯಿತು.

ಹೆವಿಷ್ 1946ರಲ್ಲಿ ಕೇಂಬ್ರಿಜ್‌ಗೆ ಹಿಂತಿರುಗಿದರು. ಇಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ ತಕ್ಷಣ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ರಿಲೇ ಅವರ ಸಂಶೋಧನಾ ತಂಡವನ್ನು ಸೇರಿಕೊಂಡರು. ಯುದ್ಧ ಕಾಲದಲ್ಲಾದ ಇಲೆಕ್ಟ್ರಾನಿಕ್ಸ್ ಹಾಗೂ ರೇಡಿಯೋ ಆಂಟೆನಾ ನಿರ್ವಹಣೆಯ ಅನುಭವ ಹಾಗೂ ವಿದ್ಯುತ್ಕಾಂತೀಯ ತರಂಗಗಳ ಬಗ್ಗೆ ಶಿಕ್ಷಕರಾದ ಜಾಕ್ ರಾಕ್ಲಿಫ್ ನೀಡಿದ ಶಿಕ್ಷಣವು ಹೆವಿಷ್‌ರವರನ್ನು ರೇಡಿಯೋ ಖಗೋಲ ವಿಜ್ಞಾನದ ಕಡೆಗೆ ಆಕರ್ಷಿಸಿದವು. 1952ರಲ್ಲಿ ಇವರು ಪಿ.ಹೆಚ್‌ಡಿ. ಪದವಿ ಪಡೆದರು. 1961ರಲ್ಲಿ ಚರ್ಚಿಲ್ ಕಾಲೇಜಿನಲ್ಲಿ ಭೌತ ವಿಜ್ಞಾನ ವಿಭಾಗದ ನಿರ್ದೇಶಕರಾಗಿ ನೇಮಕಗೊಂಡರು. 1961 ರಿಂದ 1969ರ ವರೆಗೆ ವಿಶ್ವವಿದ್ಯಾನಿಲಯದ ಉಪನ್ಯಾಸಕರಾಗಿ, 1969ರಿಂದ 71ರ ವರೆಗೆ ರೀಡರ್ ಆಗಿ, 1971ರ ನಂತರ ರೇಡಿಯೋ ಖಗೋಲ ವಿಜ್ಞಾನದ ಪ್ರೊಫೆಸರ್ ಆಗಿ ದುಡಿದು, 1977ರಲ್ಲಿ ನಿವೃತ್ತರಾದರು.

ನಿವೃತ್ತಾನಂತರ ಕೇಂಬ್ರಿಜ್ ರೇಡಿಯೋ ಖಗೋಲ ವಿಜ್ಞಾನ ಸಮೂಹದ ನಾಯಕತ್ವ ವಹಿಸಿಕೊಂಡರು. ಆಮೇಲೆ 1982ರಿಂದ 88ರ ವರೆಗೆ ಮುಲ್ಲಾರ್ಡ್‌ ರೇಡಿಯೋ ಖಗೋಲ ವೇಧಶಾಲೆಯ ಮುಖ್ಯಸ್ಥರಾದರು. ಹೀಗೆ ಹೆವಿಷ್‌ರವರ ವಿಜ್ಞಾನ ಸೇವೆ ನಿರಂತರವಾಗಿ ಸಾಗುತ್ತಾ ಬಂದಿತು.

ತಮ್ಮ ಸಂಶೋಧನಾ ಕಾಲದ ಪ್ರಾರಂಭದಲ್ಲಿ ಹೆವಿಷ್‌ರವರು ಅಯಾನುಗೋಲದ ವಿವರವಾದ ಅಧ್ಯಯನಕ್ಕೆ ರೇಡಿಯೋ ತರಂಗಗಳ ಪ್ರೇಷಣೆಯನ್ನು ಉಪಯೋಗಿಸಿಕೊಂಡರು.

ಮೂರು ರೀತಿಯ ಪ್ರೇಷಣೆಗಳು ಅಯಾನೀಕೃತ ಅನಿಲಗಳಿಂದ ಉಂಟಾಗುತ್ತದೆ. ಅವು (i) ಅಂತರ ನಕ್ಷತ್ರಗಳ ಮಾಧ್ಯಮದಲ್ಲಿ, (ii)ಅಂತರ ಗ್ರಹೀಯ ಮಾಧ್ಯಮದಲ್ಲಿ ಮತ್ತು (iii) ಭೂಮಿಯ ವಾಯುಮಂಡಲದಲ್ಲಿ.

ಅಂತರ ನಕ್ಷತ್ರೀಯ ಪ್ರೇಷಣೆಯ ಶೋಧನೆಯಲ್ಲಿ ಯಶಸ್ವಿಯಾದ ನಂತರ ಹೆವಿಷ್‌ರು ರೇಡಿಯೋ ಗೆಲಕ್ಸಿಗಳ ಸತ್ಯ ಬಯಲಿಗೆಳೆಯಲು ಗಮನ ಹರಿಸಿದರು. ಇದಕ್ಕಾಗಿ ದೈತ್ಯ ಗಾತ್ರದ ಆಂಟೆನಾ ಬೇಕಾಗಿತ್ತು. ಇದರ ಸಲುವಾಗಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಮುಲ್ಲಾರ್ಡ್‌ ರೇಡಿಯೋ ಖಗೋಲ ವಿಜ್ಞಾನ ವೇಧಶಾಲೆಯಲ್ಲಿ ರೇಡಿಯೋ ದೂರದರ್ಶಕವೊಂದನ್ನು ರಚಿಸಿದರು. ಅವರ ಈ ಪ್ರಯತ್ನಗಳ ಫಲಶೃತಿಯೇ ಪಲ್ಸಾರ್ ತಾರೆಯ ಶೋಧ.

1965ರಲ್ಲಿ ಜೋಸೆಲಿನ್ ಬೆಲ್ ಎಂಬ ವಿದ್ಯಾರ್ಥಿನಿ ಇವರ ತಂಡಕ್ಕೆ ಸೇರಿದರು.  1967ರಲ್ಲಿ ಬೃಹತ್ ರೇಡಿಯೋ ದೂರದರ್ಶಕ ತಯಾರಾಯಿತು. ಇದರ ಸಹಾಯದಿಂದ ಇವರಿಬ್ಬರೂ ಜಂಟಿಯಾಗಿ ರಾತ್ರಿಯಾಕಾಶದ ಶೋಧನೆ ಪ್ರಾರಂಭಿಸಿದರು. 1967ರ ಆಗಸ್ಟ್ ತಿಂಗಳ ಒಂದು ದಿನ ಜೋಸೆಲಿನ್‌ರು ಬದಲಾಗುವ ಸಂಜ್ಞೆಗಳಿಂದ ಕೂಡಿದ ದಾಖಲೆಯನ್ನು ಹೆವಿಷ್‌ರಿಗೆ ತೋರಿಸಿದರು. ಅದೇ ವರ್ಷ ನವೆಂಬರ್ ತಿಂಗಳ 28ರಂದು ಮೊದಲ ದಾಖಲೆಗಳು ದೊರಕಿದವು. ಈ ನಿಗೂಢ ಆಕರಗಳು ಸಂಜ್ಞೆಗಳನ್ನು ನಿಯಮಿತವಾಗಿ ಒಂದು ಸೆಕೆಂಡಿನ ಅಂತರದಲ್ಲಿ ಹೊರಸೂಸುತ್ತಿದ್ದವು. ಇವುಗಳ ಬಗ್ಗೆ ಮತ್ತಷ್ಟು ಸಂಶೋಧನೆಗಳನ್ನು ನಡೆಸಲಾಯಿತು. ಈ ಕಾಯ ಸೌರವ್ಯೆಹದಿಂದ ಆಚೆ ಇರುವುದಾಗಿಯೂ, ಒಂದು ಚಿಕ್ಕ ಗ್ರಹದ ಗಾತ್ರಕ್ಕಿಂತಲೂ ದೊಡ್ಡದಿರಲಾರದೆಂದೂ ವಿಶ್ಲೇಷಿಸಲಾಯಿತು. ನಂತರ ಇದು ನಕ್ಷತ್ರ ವಿಕಾಸದ ಹಂತದಲ್ಲಿನ ಒಂದು ‘ಸ್ಥಿತಿ’ಎಂಬುದನ್ನು ಖಚಿತಪಡಿಸಿದರು.

ಹೀಗೆ ‘ಪಲ್ಸಾರ್’ರೇಡಿಯೋ ಆಕರವನ್ನು ಮೊತ್ತ ಮೊದಲು ಆವಿಷ್ಕರಿಸಿದ್ದು ಜೋಸೆಲಿನ್ ಬೆಲ್, 1967ರಲ್ಲಿ. ಈ ಶೋಧನೆಯು ಸಾಮಾನ್ಯ ಜನರ ಹಾಗೂ ಖಗೋಲಜ್ಞರ ಗಮನ ಸೆಳೆಯಿತು. ಪಲ್ಸಾರನ್ನು ಬೆಲ್ ಗುರುತಿಸಿದ ಹೊಸದರಲ್ಲಿ ಇಂಥ ಈ ಕಾಯಗಳು ಅಂತರ ನಕ್ಷತ್ರೀಯ ವಲಯದಲ್ಲಿನ ಅಪಾಯ ಸೂಚಕಗಳು ಅಥವಾ ಅನ್ಯಲೋಕದ ರೇಡಿಯೋ ವಿಕಿರಣದ ಸೂಚಕಗಳೆಂದು ಹಲವು ಖಗೋಲತಜ್ಞರು ನಂಬಿದ್ದರು. ಅವರು ಇದನ್ನು ‘ಪುಟಾಣಿ ಹಸುರು ಮನುಷ್ಯರು‑1’ (Little Green Men-1; LGM-1) ಎಂದು ಹೆಸರಿಸಿದ್ದರು. ಆದರೆ ಅಲ್ಪಾವಧಿಯಲ್ಲಿ ಮತ್ತೆ ಮೂರು ಪಲ್ಸಾರುಗಳ ಪತ್ತೆಯಾದದ್ದು ಈ ನಂಬಿಕೆಯನ್ನು ಹುಸಿಗೊಳಿಸಿತು.

ಪಲ್ಸಾರ್ ಸಂಶೋಧನಾ ಕಾರ್ಯದಲ್ಲಿ ಮಾಡಿದ ಕೆಲಸಗಳಿಗಾಗಿ ಹೆವಿಷ್‌ರಿಗೆ ನೊಬೆಲ್ ಬಹುಮಾನ ದೊರೆಯಿತು. ಆದರೆ, ಇವರೊಂದಿಗೆ ಕಾರ್ಯನಿರ್ವಹಿಸಿದ್ದು ಹಾಗೂ ಪ್ರಥಮವಾಗಿ ಪಲ್ಸಾರನ್ನು ಪತ್ತೆ ಮಾಡಿದ ಮಹಿಳಾ ಸಹಪಾಠಿಯಾದ ಜೋಸೆಲಿನ್ ಬೆಲ್‌ಳನ್ನು ನೊಬೆಲ್‌ಗೆ ಪರಿಗಣಿಸದಿದ್ದುದು ವಿಪರ್ಯಾಸವೇ ಸರಿ!