(ಕ್ರಿ. ಶ. ೧೭೭೫-೧೮೩೬) (ಇಲೆಕ್ಟೊ-ಡೈನಾಮಿಕ್ಸ್)

ಆಂದ್ರೆ ಮ್ಯಾರೀ ಆಂಪೇರ್ ೧೭೭೫ರಲ್ಲಿ ಜನಿಸಿದರು. ಈತ ಸಣ್ಣ ವಯಸ್ಸಿನಿಂದಲೇ ತನ್ನ ವಾರಿಗೆಯವರಿಗಿಂತ ಹೆಚ್ಚು ಶ್ರಮಶೀಲನಾಗಿದ್ದ. ಪಾಠಗಳನ್ನು ಸ್ವತಃ ಓದಿ ತಿಳಿದುಕೊಳ್ಳುತ್ತಿದ್ದ. ಅಸಾಧಾರಣ ಪ್ರತಿಭಾ ಶಕ್ತಿಯನ್ನು ಪಡೆದಿದ್ದ ಈತನ ಬದುಕು ಅಷ್ಟು ಸುಖಕರವಾಗಿರಲಿಲ್ಲ. ಯಾವಾಗಲೂ ಸಂಕಷ್ಟಗಳನ್ನು ಎದುರಿಸುತ್ತಲೇ ಇರುತ್ತಿದ್ದರು. ಮುಂದೆ ಅಪಾರ ಪಾಂಡಿತ್ಯ ಸಂಪಾದಿಸಿ ಬೋರ್ಗ್‌ನಲ್ಲಿ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪ್ರಾಧ್ಯಾಪಕನಾಗಿ, ಪ್ರಯಾರಿಸ್ಸಿನಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದರು.

ವಿದ್ಯುಚ್ಛಕ್ತಿ ಮತ್ತು ಕಾಂತಶಕ್ತಿ ನಡುವಣ ಸಂಬಂಧವನ್ನು ಕುರಿತು ಹ್ಯಾನ್ಸ್ ಓಸರ್ಟಡ್ ಮಾಡಿದ ಸಂಶೋಧನೆಯ ಆಧಾರದ ಮೇಲೆ ಈತ ಅನೇಕ ಪ್ರಯೋಗಗಳನ್ನು ಮಾಡಿದರು. ತನ್ನ ಸತತ ಪರಿಶ್ರಮದ ಮೂಲಕ ಆಂದ್ರೆ ಮಾರೀ ಆಂಪೇರ್ ಇಲೆಕ್ಟೊ-ಡೈನಾಮಿಕ್ಸ್ (ವಿದ್ಯುತ್-ಗತಿಶಾಸ್ತ್ರ) ಅಧ್ಯಯನ ಶಾಖೆಯನ್ನು ಸ್ಥಾಪಿಸಿದರು. ಈತ ವಿದ್ಯುಚ್ಛಕ್ತಿಯನ್ನು ಅಳೆಯುವ ತಂತ್ರಗಳನ್ನು ಕಂಡು ಹಿಡಿದ ಮೊತ್ತ ಮೊದಲನೆಯ ವಿಜ್ಞಾನಿ. ಈತ ಕಂಡುಹಿಡಿದ ಸಾಧನವನ್ನಾಧರಿಸಿಯೇ ಮುಂದೆ ಗ್ಯಾಲ್ವನೊ ಮೀಟರ್ ಅನ್ನು (ಪ್ರವಾಹ ವಿದ್ಯನ್ಮಾಪಕ) ತಯಾರು ಮಾಡಲಾಯಿತು. ವಿದ್ಯುತ್ ಪ್ರವಾಹ ಮತ್ತು ಅದರಿಂದ ಉತ್ಪತ್ತಿಯಾದ ಅಯಸ್ಕಾಂತ ಕ್ಷೇತ್ರಕ್ಕೆ ಸಂಬಂಧಿಸಿದ ಗಣಿತ ಶಾಸ್ತ್ರೀಯ ವಿವರಣೆಯು “ಆಂಪಿಯರ್ಸ‌ ಲಾ” ಎಂದು ಸುಪರಿಚಿತವಾಗಿದೆ. ಎರಡು ವಿದ್ಯುತ್‌ಪ್ರವಾಹಗಳ ನಡುವನ ಕಾಂತ ಶಕ್ತಿಯ ಕುರಿತು ಈತ ನೀಡಿದ ಗಣಿತೋಕ್ತಿಯನ್ನು ವಿದ್ಯುತ್‌ಪ್ರವಾಹವನ್ನು ಅಳೆಯಲು ಉಪಯೋಗಿಸಬಹುದಾದ್ದರಿಂದ ವಿದ್ಯುತ್‌ಪ್ರವಾಹದ ಯೂನಿಟ್ ಅನ್ನು “ಅಂಪಿಯರ್” ಎಂದು ಕರೆಯಲಾಗಿದೆ. ಆಂದ್ರೆ ಮ್ಯಾರೀ ಆಂಪೇರ್ ೧೮೩೬ರಲ್ಲಿ ನಿಧನ ಹೊಂದಿದರು. ತನ್ನ ಬದುಕಿನುದ್ದಕ್ಕೂ ಪ್ರಯೋಗ-ಅಧ್ಯಯನಗಳಲ್ಲೇ ತೊಡಗಿಕೊಂಡಿರುತ್ತಿದ್ದ ಈತ ಭೌತಿಕ ಜೀವನದ ಬಗ್ಗೆ ಅಷ್ಟು ಗಮನ ಕೊಟ್ಟಿರಲಿಲ್ಲ. ಅಂತಲೇ ಮರಣ ಕಾಲದಲ್ಲೂ ಆತನ ಬಳಿ ಹಣ ಇರಲಿಲ್ಲ ಎಂದು ಹೇಳಲಾಗುತ್ತದೆ.