ಆಂಧ್ರದ ಮೈಲಾರಲಿಂಗ ಸಂಪ್ರದಾಯಕ್ಕೆ ಹೇಳಿಕೊಳ್ಳುವಷ್ಟು ಸಮಕಾಲೀನ ಅಸ್ತತ್ವ ಇಲ್ಲದಿದ್ದರೂ ಭವ್ಯಪರಂಪರೆ ಇದೆ. ಮೈಲಾರ ದೇವ, ಮೈಲಾರ ಭಟರು ಮತ್ತು ಗೊರವರು ತೆಲುಗರಿಗೆ ಚಿರಪರಿಚಿತರಾಗಿದ್ದಾರೆ. ‘ಗೊರಪಲ್’ ಎಂಬ ಶಬ್ದ 7 ನೆಯ ಶತಮಾನದ ಬುಡಮನಾರಾಯಲಪಾಡು ಶಾಸನದಲ್ಲಿ ಕಂಡು ಬರುತ್ತದೆ. ‘ಗೊರಗ’ ‘ಗೊರವಲ್’ ಮುಂತಾದ ಶಬ್ದಗಳು ಹತ್ತನೆಯ ಶತಮಾನಕ್ಕೆ ಸೇರಿದ ಅನೇಕ ಶಾಸನಗಳಲ್ಲಿ ಕಂಡುಬರುತ್ತವೆ. ಪಾಲ್ಕುರಿಕೆ ಸೋಮನಾಥನ ‘ಬಸವ ಪುರಾಣ’ (13 ನೆಯ ಶತಮಾನ)ದಲ್ಲಿ ‘ಗಬ್ಬು ಮೈಲಾರ’ ಎಂಬ ಶಬ್ದ ಕಂಡು ಬರುತ್ತದೆ.

ಆಂಧ್ರದ ಪ್ರಾಚೀನ ಮೈಲಾರ ಸಂಪ್ರದಾಯವನ್ನು ತಿಳಿಯಲು ಮುಖ್ಯ ಆಕರ ಗ್ರಂಥ ‘ಕ್ರೀಡಾಭಿರಾಮಮು?’. 15 ನೆಯ ಶತಮಾನಕ್ಕೆ ಸೇರಿದ ಈ ಗ್ರಂಥಕ್ಕೆ ‘ಪ್ರೇಮಾಭಿರಾಮ’ ವೆಂಬ ಸಂಸ್ಕೃತಗ್ರಂಥ ಮೂಲ. ಅದು ಬಹುಶಃ 14 ನೆಯ ಶತಮಾನದ್ದಾಗಿದ್ದು ಈಗ ಅಲಭ್ಯವಾಗಿದೆ. ವಲ್ಲಭರಾಯನ ‘ಕ್ರೀಡಾಭಿರಾಮ’ ‘ವೀಥಿ’ ಎಂಬ ರೂಪಕ ಪ್ರಕಾರಕ್ಕೆ ಸೇರಿದ ವಿಶಿಷ್ಟ ಗ್ರಂಥ. ಓರುಗಲ್ಲು ಪಟ್ಟಣದ ಸಾಮಾಜಿಕ ಚಿತ್ರವನ್ನು ಅದ್ಭುತವಾಗಿ ನಿರೂಪಿಸಿರುವ ಈ ರಚನೆಯಲ್ಲಿ ಮೈಲಾರನ ಸಂಪ್ರದಾಯಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ಲಭಿಸುತ್ತದೆ.

ಕ್ರೀಡಾಭಿರಾಮದ ಉಲ್ಲೇಖ.

ಟಿಟಿಭ ಸೆಟ್ಟಿ ಎಂಬುವನು ತನ್ನ ಸಖನಾದ ಗೋವಿಂದ ಮಂಚನ ಶರ್ಮನನ್ನು ಹೀಗೆ ಕೇಳುತ್ತಾನೆ. “ಮಂದ್ರ ಮಧ್ಯತಾರ ಮಾನ ತ್ರಯೀ ಭಿನ್ನದಿಂದ ಮಹಿಷ ಶೃಂಗನಾದ ಲಹರಿಯಿಂದ ಕೂಡಿ, ಡಮರು ಡಿಂಡಿಮ ಡಮಡಮ ಧ್ವನಿ ಬರುತ್ತಿದೆ. ಈ ಅದ್ಭುತ ಆರ್ಭಟ ಯಾವುದು”. ಆಗ ವ್ರಂಚನ ಶರ್ಮನ ಉತ್ತರದ ರೂಪದಲ್ಲಿ ಮೈಲಾರ ವೀರಭಟರ ಸಾಹಸ ಕೃತ್ಯಗಳು ವರ್ಣಿತವಾಗಿವೆ. ಉರಿಯುವ ಕೆಂಡದ ಕುಂಡ ಹಾರುವವರು. ಚರ್ಮಕ್ಕೆ ಗಾಳ ಚುಚ್ಚಿ ಗಗನದಲ್ಲಿ ಉಯ್ಯಾಲೆಯಂತೆ ತೂಗಾಡುವವರು, ಲೋಹದ ಗುಂಡುಗಳನ್ನು ನುಂಗುವವರು, ಎಡಗೈಯಿಂದ ಬಲಗೈಯಿಂದ ಆರತಿ ಕೊಡುವವರು ಆದ ವೀರಭಟರ ಧೀರ ಹೃದಯವನ್ನು ಕವಿ ವರ್ಣಿಸಿದ್ದಾನೆ (ಪದ್ಯ 142) ಮೈಲಾರ ದೇವರ ವೀರಭಟರು ಹೆಂಗಸರಿಂದ ‘ಗೊಂಡ್ಲಿ’ ಎಂಬ ನೃತ್ಯವನ್ನು ಆಡಿಸುವುದು ಕೂಡ ಇದೇ ಸಂದರ್ಭದಲ್ಲಿ ವರ್ಣಿತವಾಗಿದೆ. ಗೊಂಡ್ಲಿಯೆಂಬುದು ಡೊಂಬರಾಟದಂತೆ ಕೆಲವು ಸಾಹಸ ಕೃತ್ಯಗಳಿಂದ ಕೂಡಿದ ಆಟವೆಂದು ತೋರುತ್ತದೆ. ಇದು ಕುಂಡಲಾಕಾರ ನೃತ್ಯವೆಂದು, ಗೊಂಥಲ್ ಅಥವಾ ಗೊಂದಲಕ್ಕೆ ಸಂಬಂಧಿಸಿದ್ದೆಂದು ಕೂಡ ಶಬ್ದ ಸಾಮ್ಯದಿಂದ ಊಹಿಸಬಹುದು. ಕ್ರೀಡಾಭಿರಾಮದ ಹುಡುಗಿ ಹಿಂದಕ್ಕೆ ಬಗ್ಗಿ, ಒಂದು ತೊಟ್ಟಿಲಿನ ನೀರಿನಲ್ಲಿ ಮುಳುಗಿ, ಅದರಲ್ಲಿದ್ದ ಮೂಗುತಿಯನ್ನು ಮೂಗಿಗೆ ಚುಚ್ಚಿಕೊಂಡು ಎದ್ದು – ಈ ತರಹದ ಕೆಲವು ಅದ್ಭುತಗಳನ್ನು ಪ್ರದರ್ಶಿಸಿದಳು. (ಪದ್ಯ 144).

ಅನಂತರ ಬರುವ ಮೈಲಾರ ದೇವನ ಸ್ತುತಿಯಿಂದ ಆಂಧ್ರದ ಮೈಲಾರ ಸಂಪ್ರದಾಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ: “ಶನಿವಾರ ಸಿ‌ದ್ದಿ, ಸಜ್ಜನ ಪಾರಿಜಾತ, ಆದಿತ್ಯವಾರ ಭೋಗಿ, ಮಾಡಚಿ ರಮಣ, ಮಾಯಾ ವಿನೋದ, ಮಾಳವೀ ಪ್ರಿಯ ಪತಿ, ಪಲ್ಲೆಮ್ಮ ನಾಯಕ, ಎಲ್ಲ ದೇವತೆಗಳ ರಾಜ, ಬೇಟೆಗಾರರ ಅರಸ, ಭೈರವನ ಸ್ನೇಹಿತನಾದ ಓರುಗಲ್ಲು ನಿವಾಸಿ ಮೈಲಾರದೇವ ನಮಗೆ ಶುರಭವನ್ನೊದಗಿಸಲಿ” ಈ ವರ್ಣನೆಗಳಾದ ಅನಂತರ ಭೈರವಾಲಯದ ವರ್ಣನೆ ಮತ್ತು ಭೈರವ ಸ್ತುತಿ ಇದೆ (ಪದ್ಯ 149-52).

ಶ್ರೀನಾಥ (15ನೇ ಶ.) ಬರೆದ ‘ಕಾಶಿಖಂಡ’ದಲ್ಲಿ ಗೊರಗರು ಮೈಲಾರ ದೇವನನ್ನು ಸ್ತುತಿಸುತ್ತಾ ಫಾಲ ಭಾಗದಲ್ಲಿ ಅರಸಿನ ಧರಿಸುವ ವಿಷಯ ಹೇಳಲ್ಪಟ್ಟಿದೆ. (7-230) ಇನ್ನೂ ಕೆಲವು ಕಾವ್ಯಗಳಲ್ಲಿ ಮೈಲಾರನನ್ನು ಒಂದು ಕ್ಷುದ್ರದೇವತೆ ಎಂದು ನಿರೂಪಿಸಲಾಗಿದೆ. ತೆಲಗು ನಿಘಂಟುಗಳು ‘ಮೈಲಾರು’ ಎಂಬುದಕ್ಕೆ ‘ಒಂದು ಕ್ಷುದ್ರ ದೇವತೆ’ ಎಂಬ ಅರ್ಥವನ್ನು ಕೊಡುತ್ತವೆ. ‘ಮೈಲಾರಿ’ ಕ್ಷುದ್ರದೇವತೆಯನ್ನು ಪೂಜಿಸುವವನು ಎಂದು ಹೇಳಲಾಗಿದೆ. ‘ಮೈಲ'(ಮೈಲಿಗೆ)ಮೈಲಾರ ಶಬ್ದಕ್ಕೆ ಮೂಲವೆಂದು ನಿಘಂಟುಕಾರರು ಊಹಿಸಿದ್ದಾರೆ.

ಆಂಧ್ರದಲ್ಲಿ ಪೆರಿಕೆ ಎಂಬ ಕುಲವಿದೆ. ಪೆರಿಕೆ ಎಂದರೆ ಎರಡು ಚೀಲಗಳು. ಇವನ್ನು ಹೊತ್ತುಕೊಂಡು ವ್ಯಾಪಾರ ಮಾಡುತ್ತಿದ್ದ ಕುಲವಿದು. ಇವರ ಆರಾಧ್ಯದೈವ ಮೈಲಾರದೇವ. ‘ಮಲ್ಲಾರಿ ಚರಿತ್ರೆ’ ಅಥವಾ ‘ಕರ್ಣಕುಲೀನುಲ ಚರಿತ್ರ’ ಎಂಬ ಒಂದು ಕಾವ್ಯ (1780ರದು)ವಿದ್ದು ಅದರಲ್ಲಿ ಮೈಲಾರ ಸಂಪ್ರದಾಯವನ್ನು ಕುರಿತ ಕೆಲವು ವಿಷಯಗಳು ಹೇಳಲ್ಪಟ್ಟಿವೆ. ‘ಓಘವತೀ ಪರಿಣಯ’ ಎಂಬ ಮತ್ತೊಂದು ಕಾವ್ಯ (1739ರದು)ದ ಕೃತಿಪತಿ ಗೋಡೇ ಸೂರ್ಯ ಪ್ರಕಾಶರಾವು. ಇನರು ಪೆರಿಕೆ ಕುಲದವರಾದುದರಿಂದ ಕವಿ ಅಕ್ಕಿನೇಪಲ್ಲಿ ನೃಸಿಂಹ ಕವಿ ಕಾವ್ಯಪ್ರಾರಂಭದ ವಂಶವರ್ಣನೆಯಲ್ಲಿ ಕೆಲವು ಮೈಲಾರ ಸಂಪ್ರದಾಯಗಳನ್ನು ಉಲ್ಲೇಖಿಸಿದ್ದಾನೆ.

ಮದರಾಸಿನ ಪ್ರಾಚ್ಯಲಿಖಿತ ಭಾಂಡಾಗಾರದಲ್ಲಿ ‘ಮೈಲಾರಮಂತ್ರ’ ಎಂಬ ಹೆಸರಿನ ಪುಟ್ಟಕೃತಿ ಒಂದಿದೆ. (ಜಿ.ಆರ್.ವರ್ಮ, ಮೈಲಾರದೇವ, ಪು. 41). ಇದರಲ್ಲಿ ಮೈಲಾರನ ರೂಪವರ್ಣನೆ, ಅವನನ್ನು ಏಕೆ ಪೂಜಿಸಬೇಕು ಎಂಬ ವಿಷಯ, ಅವನ ಹೆಂಡತಿ ಮಾಳವಿ (ಮಾಡಚಿ) ವಿಚಾರ ಸಂಕ್ಷಿಪ್ತವಾಗಿದೆ. “ಅಸ್ಯಶ್ರೀ ಮೈಲಾರುದೇವೋ ಮಂತ್ರಸ್ಯ” ಎಂದು ಪ್ರಾರಂಭವಾಗುವ ಈ ಮಂತ್ರದಲ್ಲಿ ಷಡಂಗನ್ಯಾಸ, ಧ್ಯಾನ, ಮಂತ್ರ ಮುಂತಾದುವಿವೆ. ಧ್ಯಾನದಲ್ಲಿ ಮೈಲಾರನನ್ನು “ನೀಲಂ ಜೀಮೂತವರ್ಣನಂ, ಸಕಲ ಮೋಹನ ಮಯಂ, ತ್ರಿಶೂಲ ಡಮರುಕಂ ಖಡ್ಗಂ ಪಾನ ಪಾತ್ರಂ ತ್ರಿಲೋಚನಂ” ಎಂದು ಹೇಳಲಾಗಿದೆ.

ಇಂದಿನ ಸಂಪ್ರದಾಯ :

ದೇವತಾವಿಗ್ರಹಗಳ ಮೂಲಕ, ಆಚಾರ, ಉತ್ಸವಾದಿಗಳ ಮೂಲಕ, ಐತಿಹ್ಯಗಳ ಮೂಲಕ ಮೈಲಾರಲಿಂಗ ಸಂಪ್ರದಾಯ ಇಂದಿಗೂ ಆಂಧ್ರದ ಕೆಲವು ಪ್ರದೇಶಗಳಲ್ಲಿ ತನ್ನತನವನ್ನು ಉಳಿಸಿಕೊಂಡಿದೆ. ಪೆರಿಕೆ ಕುಲದವರ ಪೂರ್ವಜರ ಕಥೆಯಂತೆ ಪರಶುರಾಮನಿಗೆ ಹೆದರಿದ ಸಿದ್ಧರಾಜ, ವೀರಮಲ್ಲ ಮುಂತಾದವರು ಸಾರ್ಥವಾಹರಾದರು, ವೀರಮಲ್ಲು ಮತ್ತು ಪರಶುರಾಮರನ್ನು ಶಾಂತಿಸುವಂತೆ ಮಾಡಿದವನು ಮೈಲಾರದೇವ. ಪೆರಿಕೆ ಕುಲದವರ ಮದುವೆಗಳಲ್ಲಿ ಚೀಲದ ಮೇಲೆ ಮೈಲಾರನನ್ನು ಚಿತ್ರಿಸುತ್ತಾರೆ. ಒಂದು ಖಡ್ಗ ಅಥವಾ ತ್ರಿಶೂಲ ಅದರ ಎರಡು ಪಕ್ಕದಲ್ಲಿ ಸೂರ್ಯ ಚಂದ್ರರಂತೆ ಸೊನ್ನೆ, ಅರ್ಧ ಸೊನ್ನೆ ಇರುತ್ತವೆ. ಬಹುಶಃ ಆಚಂದ್ರಾರ್ಕ ಎಂದು ಹೇಳಲು ಈ ಸಂಕೇತವನ್ನು ಬಳಸಿರಬಹುದು. ಮೈಲಾರ ಚರಿತೆಯನ್ನು ಕಿವಿಯಾರ ಕೇಳಿದುದರ ಫಲವಾಗಿ ಇವರಿಗೆ ಕರ್ಣಕುಲ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಇವರ ಹಳೆಯ ಹೆಸರು ಮಲ್ಲವಂಶ ಎಂಬುದು. ಕರ್ಣಕುಲ ಎಂದಿರುವುದರಿಂದ ಕರ್ಣಾಟಕಕ್ಕೆ ಸೇರಿದವರೇನೋ ಎಂಬ ಸಂದೇಹ ಬರುತ್ತದೆ. ಆಂಧ್ರದ ನಲ್ಗೊಂಡ ಜಿಲ್ಲೆಯ ಕೊಲನುಪಾಕ ಎಂಬಲ್ಲಿರುವ ಸೋಮನಾಥ ದೇವಸ್ಥಾನದ ಬಳಿ ಪೆರಿಕೆ ಮಠ ಇದೆ.

ಓರುಗಲ್ಲಿನ ಮೈಲಾರ ಸಂಪ್ರದಾಯವನ್ನು ಕುರಿತು “ಕ್ರೀಡಾಭಿರಾಮ” ಹೇಳುತ್ತಾದಾದರೂ ಅದು ಮೈಲಾರಕ್ಷೇತ್ರವಾಗಿತ್ತೇ ಎಂಬುದನ್ನು ಸೂಚಿಸಿಲ್ಲ. ಆದರೆ ಈಗಲೂ ಓರುಗಲ್ಲಿ ಪಟ್ಟಣದ ಬಳಿ ಇರುವ ‘ಕಟ್ಟ ಮಲ್ಲನ್ನ’ ಪೂಜೆಗಳನ್ನು ಪಡೆಯುತ್ತಿದ್ದಾವೆ. ಗಡ್ಡ, ಮೀಸೆ, ಚತುರ್ಭುಜ ಇರುವ ಭೀಮರೂಪಿ ಕಟ್ಟಮಲ್ಲನ್ನ ಇವನ ಹೆಂಡತಿಯರು ಮೇಡಲ್ದೇವಿ. ಗೊಲ್ಲಕೇತಮ್ಮ. ಇಲ್ಲೊಂದು ಶಿಲಾಫಲಕವಿದೆ. ಅದರಲ್ಲಿ ಧ್ಯಾನಮುದ್ರಾಂಕಿತರಿದ್ದಾರೆ. ಅವರ ಮೇಲ್ಭಾಗದಲ್ಲಿ ಆಶ್ವಿಕ ವೀರನೊಬ್ಬನಿದ್ದಾನೆ. ಇವನನ್ನು ಮೈಲಾರನೆನ್ನುತ್ತಾರೆ. ಕಟ್ಟಮಲ್ಲನ್ನ ಗುಡಿಯ ಪೂಜಾರಿಗಳು ಕೆಂಪುಗೊಲ್ಲರು ಎಂಬ ಜಾತಿಗೆ ಸೇರಿದವರು.

ಕೊಮುರೆಲ್ಲಿ ಮಲ್ಲನಃ ನಲ್ಗೊಂಡ ಜಿಲ್ಲೆ, ಜನಗಾಮ ತಾಲೂಕಿನ ಕೊಮುರೆಲ್ಲಿ ಎಂಬಲ್ಲಿ ಮಲ್ಲನ ಪ್ರಖ್ಯಾತನಾಗಿದ್ದಾನೆ. ಈತ ಕುರುಬರ ದೇವರು. ಕೊಲ್ಹಾಪುರದ ರಾಜನಾಗಿದ್ದ ಆದಿರೆಡ್ಡಿ ಶಿವನ ಶಾಪದಿಂದ ರಾಜ್ಯ ಕಳೆದುಕೊಂಡು ಕಲ್ಯಾಣಕ್ಕೆ ಹೋದ. ಈತನ ಮಕ್ಕಳಲ್ಲಿ ಚಿಕ್ಕವನು ಮಲ್ಲನ. ಈತ ಅತ್ತಿಗೆಯರ ಕಾಟದಿಂದ ರಾಜ್ಯ ಬಿಟ್ಟು ಕೃಷಿಕನಾದ. ಇವನಿಗೆ ಒಂದು ಹುತ್ತದಲ್ಲಿ ಕುರಿ, ನಾಯಿ ಸಿಕ್ಕಿದವು. ಇವನು ಒಬ್ಬ ರಾಕ್ಷಸನನ್ನು ಕೊಂದು ರತ್ನಾಂಗಿ ಎಂಬ ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ. ಇವನ ಪಟ್ಟಮಹಿಸಿ ಪದ್ಮಾಕ್ಷಿ, ಇನ್ನೊಬ್ಬಳು ಭ್ರಮರಾಂಬೆ ಅಥವಾ ಮೇಡಲ, ಚಿಕ್ಕ ಹೆಂಡತಿ ಗೊಲ್ಲಕೇತಮ್ಮ.

ಹೈದರಾಬಾದ : ಹೈದರಾಬಾದ ಮಹಾನಗರದ ಸುಲ್ತಾನ್‌ಬಜಾರ ಕಂದಸಾಮಿ ಮಾರ್ಕೆಟ ಹಿಂಭಾಗದಲ್ಲಿ ಖಂಡೋಬಾ ದೇವಳ್ ಬೀದಿ ಇದೆ. ಅಲ್ಲಿ ಅನೇಕ ತಲೆಮಾರುಗಳಿಂದ ಮರಾಠಿಗರು ಮತ್ತು ಪೆರಿಕೆ ಕುಲದವರು ವಾಸಮಾಡುತ್ತಿದ್ದಾರೆ. ಅಲ್ಲಿ ಚಿಕ್ಕಲಿಂಗವೊಂದಿದೆ. ಸತೀಸಮೇತವಾಗಿ ಆಯುಧ ಹಿಡಿದ ಆಶ್ವಿಕವೀರನೊಬ್ಬನ ವಿಗ್ರಹ ಅಲ್ಲಿದೆ. ಅದು ಖಂಡೋಬ ಎಂದು ಮರಾಠಿಗರು, ಮಲ್ಲರಿ ಎಂದು ಪೆರಿಕೆಯವರು ಹೇಳುತ್ತಾರೆ.

ಐನವೋಲು : ಇಂದಿಗೂ ಮೈಲಾರ ಸಂಪ್ರದಾಯ ಜೀವಂತವಾಗಿ ಉಳಿದಿರುವ ಪ್ರದೇಶಗಳಲ್ಲಿ ಐನವೋಲು ಒಂದು. ಆಂಧ್ರದ ಪ್ರಾಚೀನ ಶಿಲಾಮುಖ ದ್ವಾರಗಳಲ್ಲಿ ೧೨ನೆಯ ಶತಮಾನಕ್ಕೆ ಸೇರಿದ ಐನವೋಲು ಮೈಲಾರಾಲಯ ದ್ವಾರ ಒಂದು. ಇಲ್ಲಿರುವ ದೇವಸ್ಥಾನದಲ್ಲಿ ಆಶ್ವಿಕ ಉತ್ಸವ ಮೂರ್ತಿ ಇದೆ. ಪಕ್ಕದಲ್ಲಿ ಇಬ್ಬರು ಹೆಂಗಸರಿದ್ದಾರೆ. ಮುಂಭಾಗದಲ್ಲಿ ಎರಡು ನಾಯಿಗಳಿವೆ. ಇಲ್ಲಿ ನಡೆಯುವ ಉತ್ಸವದಲ್ಲಿ ಹೆಚ್ಚಾಗಿ ಗೊಲ್ಲರು ಪಾಲ್ಗೊಳುತ್ತಾರೆ.

ಓರುಗಲ್ಲು (ಈಗ ವರಂಗಲ್) ನಗರಕ್ಕೆ ಹತ್ತು ಮೈಲಿ ದೂರದಲ್ಲಿರುವ ಐನವೋಲು ಕಾಕತೀಯರ ಮಂತ್ರಿಯಾಗಿದ್ದ ಅಯ್ಯನನ ಹೆಸರಿನಲ್ಲಿ ಪ್ರಖ್ಯಾತವಾಗಿದೆ. ಇಲ್ಲಿ ೧೧ ನೆಯ ಶತಮಾನದಲ್ಲಿ ನಿರ್ಮಿತವಾದ ದೇವಸ್ಥಾನವಿದೆ. ಇಲ್ಲಿಯ ಮೈಲಾರ ದೇವ ಕಾಕತೀಯರ ಆರಾಧ್ಯದೈವವಾಗಿದ್ದನೆಂದು ಹೇಳಲಾಗಿದೆ. ರುದ್ರಮದೇವಿ, ಪ್ರತಾಪರುದ್ರ ಮುಂತಾದವರು ತಮ್ಮ ಯುದ್ಧ ಸಮಾಲೋಚನೆಗಳನ್ನು ಈ ದೇವಸ್ಥಾನದಲ್ಲೇ ಮಾಡುತ್ತಿದ್ದರೆಂದು ಹೇಳುತ್ತಾರೆ.

ಐನವೋಲು ಮೈಲಾರಗುಡಿಯ ವಿಗ್ರಹ ಕುಳಿತಪೀಠವೂ ಸೇರಿದಂತೆ ಆರಡಿ ಎತ್ತರ ಇದೆ. ಬಲಭಾಗದಲ್ಲಿ ಗೊಲ್ಲಕೇತಮ್ಮ, ಎಡ ಭಾಗದಲ್ಲಿ ಬಲಿಜ ಮೇಡಲಮ್ಮ ವಿಗ್ರಹಗಳು ಸುಮಾರು ನಾಲ್ಕಡಿ ಎತ್ತರ ಇವೆ. ಮೈಲಾರನ ಬಲಕೈಯಲ್ಲಿ ಡಮರುಗ, ಖಡ್ಗ, ಎಡಗೈಯಲ್ಲಿ ತ್ರಿಶೂಲ, ಪದ್ಮ ಇವೆ. ಕೊರಳಲ್ಲಿ ನಾಗಾಭರಣ, ಬಲಕಾಲಿ ನಡಿಯಲ್ಲಿ ರಾಕ್ಷಸಾಕೃತಿಯ ಸಿರಸ್ಸು ಇವೆ. ಹುಲಿಯ ಚರ್ಮವನ್ನು ಧರಿಸಿರುವ ಭೀಕರ ಮೂರ್ತಿ ಇದು.

ಪ್ರತಿ ವರ್ಷ ಸಂಕ್ರಾಂತಿಯಿಂದ ಯುಗಾದಿಯವರೆಗೂ ಇಲ್ಲಿ ಉತ್ಸವಗಳು ನಡೆಯುತ್ತವೆ. ಸುಮಾರು ತೊಂಬತ್ತು ದಿನ ನಡೆಯುವ ಈ ಉತ್ಸವಗಳಿಗೆ ಲಕ್ಷಗಟ್ಟಲೆ ಜನ ಹಾಜರಾಗುತ್ತಾರೆ. ಇಲ್ಲಿಯ ಪೂಜಾರಿಗಳು ಒಗ್ಗಯ್ಯರು. ಇವರು ಒಗ್ಗು (ದೊಡ್ಡ ಡಮರುಗ) ಎಂಬ ವಾದ್ಯನುಡಿಸುತ್ತಾ ಹಾಡು ಹೇಳುತ್ತಾರೆ. ಬುಧವಾರ ಮತ್ತು ಭಾನುವಾರ ಪ್ರತ್ಯೇಕ ಪೂಜೆಗಳು ನಡೆಯುತ್ತವೆ.

ಕರ್ನೂಲು, ಅನಂತಪುರಂ : ಕರ್ನಾಟಕದ ಮೂಡಲ ಗಡಿಪ್ರದೇಶಕ್ಕೆ ಸಮೀಪವಾಗಿರುವ ಜಿಲ್ಲೆಗಳಲ್ಲಿ ಈಗಲೂ ಗೊರವರು ಹೇರಳವಾಗಿ ಕಂಡುಬರುತ್ತಾರೆ. ಕರ್ನೂಲು ಮತ್ತು ಅನಂತಪುರಂ ಜಿಲ್ಲೆಗಳಲ್ಲೇ ಹೆಚ್ಚಾಗಿ ಮೈಲಾರ ಸಂಪ್ರದಾಯ ಇಂದಿಗೂ ಕಂಡುಬರುತ್ತದೆ. ಆದರೆ ಈ ಸಂಪ್ರದಾಯ ವರಂಗಲ್ ಜಿಲ್ಲೆಯ ಪ್ರಾಚೀನಾಂಧ್ರ ಸಂಪ್ರದಾಯದಂತಿರುವ ಕರ್ನಾಟಕ ಸಂಪ್ರದಾಯದ ಪ್ರತಿಬಿಂಬದಂತಿದೆ. ಕರ್ನೂಲ ಮತ್ತು ಅನಂತಪುರಂ ಜಿಲ್ಲೆಗಳಲ್ಲಿ ಈಗಲೂ ಕಾಣಿಸಿಕೊಳ್ಳುವ ಗೊರವರು ಕನ್ನಡಿಗರೇ ಆಗಿದ್ದಾರೆ. ಆದುದರಿಂದ ಇಲ್ಲಿಯ ಸಂಪ್ರದಾಯ ಕರ್ನಾಟಕ ಮೈಲಾರ ಸಂಪ್ರದಾಯದ ವ್ಯಾಪ್ತಿಗೆ ಒಳಪಡುತ್ತದೆನ್ನಬಹುದು.

ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿರುವ ಭಕ್ತರು ಪೂಜಿಸುವ ಮೈಲಾರ ಮೂರ್ತಿಗಳಲ್ಲಿ ಒಂದು ಕರ್ನೂಲು ಜಿಲ್ಲೆಯ ಆಲೂರು ತಾಲೂಕಿನ ನೇರಣಿಕೆಯಲ್ಲಿದೆ ಇನ್ನೊಂದು ಬಳ್ಳಾರಿ ಜಿಲ್ಲೆಯ ತೆಕ್ಕಲಕೊಟಿಯಲ್ಲಿದೆ. ನೇರಣಿಕಿಯಲ್ಲಿರುವುದು ಉದ್ಭವ ಕೂರ್ಮರೂಪ. ಇದು ಬೆಟ್ಟದ ಮೇಲಿರುವ ಎರಡು ದೊಡ್ಡ ಬಂಡೆಗಳ ನಡುವೆ ಉದ್ಭವಿಸಿರುವ ಕೂರ್ಮರೂಪದಶಿಲೆ. ಇದು ಮೂಲರೂಪವೆಂದೂ ತೆಕ್ಕಲಕೋಟಿಯದು ಉತ್ಸವ ಮೂರ್ತಿಯೆಂದೂ ಹೇಳುತ್ತಾರೆ. ತೆಕ್ಕಲಕೋಟೆಯ ವೀರವಿಗ್ರಹ ಕುದುರೆಯನ್ನೇರಿರುವ ಮೂರ್ತಿ, ತ್ರಿಶೂಲ, ಡಮರುಗ, ಪಾನಪಾತ್ರೆ ಇದೆ. ಆಂಧ್ರದ ನೇರಣಿಕಿಯ ಮೂಲರೂಪಕ್ಕೆ ಆಶ್ವಯುಜ ಶುದ್ಧದಶಮಿಯಂದು ಜೈತ್ರಯಾತ್ರೆ ನಡೆಯುತ್ತದೆ. ರಾತ್ರಿ ಹನ್ನೆರಡು ಗಂಟೆಗೆ ಕಲ್ಯಾಣೋತ್ಸವ ನಡೆಯುತ್ತದೆ. ಕಾಂಚಾಬೀರ, ಮದ್ದಳೆ ಗೊರವ ಮತ್ತು ಪೂಜಾರಿಗಳದು ಇದರಲ್ಲಿ ಪ್ರಧಾನ ಪಾತ್ರ. ಮಲ್ಲಾಸುರ ನರಬಲ ಕೇಳಿದುದಕ್ಕೆ ಕಂಚಾಬೀರ ಒಂದು ಪಾವು ರಕ್ತ ಮಾತ್ರ ಕೊಡುತ್ತೇನೆಂದು ಹೇಳಿದ್ದನಂತೆ. ಇದಕ್ಕಾಗಿ ಜಾತ್ರೆಯ ದಿನ ಉತ್ಸವ ವಿಗ್ರಹ ಹತ್ತಿರ ಬಂದಾಗ ಒಂಬತ್ತು ಮಾರುದ್ದದ ಹಗ್ಗವನ್ನು ಕಾಲಿನ ಮಾಂಸದಿಂದ ಎಳೆಯುತ್ತಾರೆ. ಬೆಳಗಿನ ಜಾವ ಶಮೀಪೂಜೆ ನಡೆಯುತ್ತದೆ. ಗೊರವರು, ದೇವದಾಸಿಯರು ಹಾಡು ಹೇಳುತ್ತಾರೆ.

ನೇರಣಿಕಿ ಜಾತ್ರೆಯಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸುತ್ತಾರೆ. ಇದರಲ್ಲಿ ಅರ್ಧ ಜನ ದೊಣ್ಣೆಗಳನ್ನು ಹಿಡಿದಿರುತ್ತಾರೆ. ಅವನ್ನು ವಿಧವಿಧವಾಗಿ ಅಲಂಕರಿಸಿರುತ್ತಾರೆ. ಇವರು ಮಲ್ಲೇಶ್ವರನ ಸೈನ್ಯದ ಸಂಕೇತವಾಗಿ ಹೀಗೆ ಮಾಡುತ್ತಾರೆಂದು ಹೇಳಲಾಗಿದೆ.

ಮಲ್ಲಯ್ಯನನ್ನು ಮನೆದೇವರು ಮಾಡಿಕೊಂಡ ಬ್ರಾಹ್ಮಣರೂ ಈ ಜಿಲ್ಲೆಗಳಲ್ಲಿ ಹೇರಳವಾಗಿದ್ದಾರೆ. ಮನೆಯಲ್ಲಿ ಯಾವುದೇ ಮದುವೆ ನಡೆದರೂ ಗೊರವರನ್ನು ಕರೆತಂದು ಊಟ ಹಾಕುತ್ತಾರೆ. ಗೊವರಿಗೆ ಗೊಗ್ಗಯ್ಯ ಎಂದೂ ಕರೆಯುವುದುಂಟು. ಇವರು ತ್ರಿಶೂಲ, ಪಾನಪಾತ್ರೆ, ಡಮರುಗ ಹಿಡಿಯುತ್ತಾರೆ. ಕರ್ನೂಲು ಜಿಲ್ಲೆ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಪ್ರದೇಶಗಳಿಗೆ ನಡುವೆ ಇದೆ. ಇದರಿಂದ ಇಲ್ಲಿಯ ಗೊರವರು ದಕ್ಷಿಣ ಕರ್ನಾಟಕದ ವೇಷದ ಜೊತೆಗೆ ಉತ್ತರ ಕರ್ನಾಟಕದಲ್ಲಿರುವಂತೆ ಪಿಳ್ಳುಂಗೋವಿಯನ್ನೂ ಹಿಡಿದಿರುತ್ತಾರೆ.

ಆಶ್ವಯುಜ ಶುದ್ಧ ಪಂಚಮಿಯಂದು ಗೊರವ ದೀಕ್ಷೆ ತೆಗೆದುಕೊಳ್ಳುತ್ತಾರೆ. ಬಿಕಂಕಣಕಟ್ಟುವ ಗೊರವ ಎಂಬವನು ಈ ದೀಕ್ಷೆಯನ್ನು ಕೊಡುತ್ತಾನೆ. ನೇರಣಿಕಿಯಲ್ಲಿ ಪ್ರಚಲಿತವಾಗಿರುವ ಕಥೆ ಬ್ರಹ್ಮಾಂಡ ಪುರಾಣದ ಕಥೆಯನ್ನು ಹೋಲುತ್ತದೆ. ಮಣಿಮಲ್ಲಾಸುರರು ಬ್ರಹ್ಮನಿಂದ ಅಮರ ವರ ಪಡೆಯುತ್ತಾರೆ. ರಾಕ್ಷಸರಿಗೆ ಹಿಂಸೆ ಕೊಡುತ್ತಾರೆ. ಶಿವನ ಜಟಾಜೂಟದಿಂದ ಘೃತ ಮಾರಿ (ತುಪ್ಪದ ಮಾಳಮ್ಮ) ಹುಟ್ಟಿದಳು. ಆದರೆ ಆಕೆಗೆ ಮಣಿ ಮಲ್ಲಾಸುರರನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆಗ ಶಿವನೇ ಮೈಲಾರನ ರೂಪವೆತ್ತಿ ಕೊಂದ. ಬ್ರಹ್ಮಾಂಡ ಪುರಾಣದ ಕಥೆಯನ್ನು ರಾಮಾಶಾಸ್ತ್ರಿ ಎಂಬವರು ತೆಲುಗಿಗೆ ಅನುವಾದ ಮಾಡಿದರು. ಮೈಲಾರ ಸಂಪ್ರದಾಯದ ಬ್ರಾಹ್ಮಣರ ಮನೆಗಳಲ್ಲಿ ಪ್ರತಿ ಭಾನುವಾರ ಇದನ್ನು ಪಾರಾಯಣ ಮಾಡುತ್ತಾರೆ.

ನೇರಣಿಕಿ ಮೈಲಾರ ಸಂಪ್ರದಾಯದವರು ಮೈಲಾರನನ್ನು ಹೀಗೆ ವರ್ಣಿಸುತ್ತಾರೆ :

        ಮುಳ್ಳೆಯ ಹಾವುಗೆ ಮೆಟ್ಟಿ ಮೊಳೆ ಗಂಟಿ ಕಟ್ಟಿ
ಒಳ್ಳೆಯ ಕಂಬಳಿ ಮೇಲೆ ಹುಲಿ ಚರ್ಮದ ತೊಟ್ಟಿ
ಬೆಳ್ಳಿಯ ಸರಪಣಿ ಗಂಟೆ ಬಿಗಿದ ಜಗಜೆಟ್ಟಿ

ಆರತಿಯ ಹಾಡು ಹೀಗಿದೆ.

        ಕರಿ ಚರ್ಮಾಂಬರ ಧರನೇ ಕಪ್ಪಿನ ಕೊರಳವನೇ
ಸುರಮುನಿಗಣ ಸೇವಿತನೆ ಜಗವ ಪಾಲಿಪನೆ
ಧರೆಯೊಳು ತೆಕ್ಕಲಕೊಟಿ ದೇಶವ ನಾಳುವನೆ,
ಹರಹರ ಸಿವಶಂಕರ ವನಿಕೇರಿ ಮಲ್ಲೇಶ್ವರನೇ

ತೌಲನಿಕ ವಿವೇಚನೆ :

ಮೇಲಿನ ವಿವರಣೆಯನ್ನು ಪರಿಶೀಲಿಸಿದ ಮೇಲೆ ತೌಲನಿಕ ವಿವೇಚನೆಯನ್ನು ಮಾಡಬಹುದು. ಮೈಲಾರ ಸಂಪ್ರದಾಯದ ಕಥೆ ಬ್ರಹ್ಮಾಂಡ ಪುರಾಣದ ಕ್ಷೇತ್ರ ಖಂಡದಲ್ಲಿದೆ. ಮೈಲಾರ ಸಹಸ್ರನಾಮಗಳು ಪದ್ಮ ಪುರಾಣದಲ್ಲಿವೆ. ದೇವರ ಗುಡ್ಡದಲ್ಲಿ ಮೈಲಾರಲಿಂಗ ಸ್ವಯಂಭೂ ಎಂದು ಹೇಳುವಂತೆ ಆಂಧ್ರದ ನೇರಣಿಕಿಯಲ್ಲೂ ಹೇಳುತ್ತಾರೆ. ಉತ್ಸವ ಕಾಲದಲ್ಲಿ ಸಾಹಸ ಮೆರೆಯುವ ಸಂಪ್ರದಾಯ ಕರ್ನಾಟಕದಲ್ಲೂ ಆಂಧ್ರದಲ್ಲೂ ಇದೆ. ಕರ್ನಾಟಕದಲ್ಲಿರುವಂತೆ ಆಂಧ್ರದಲೂ ಬೇರೆ ಬೇರೆ ಜಾತಿಯವರು ಮೈಲಾರಲಿಂಗ ಸಂಪ್ರದಾಯವನ್ನು ಅನುಸರಿಸುತ್ತಾರೆ. ಆದರೆ ಕುರುಬ ಜನಾಂಗದಲ್ಲೇ ಇದು ಹೆಚ್ಚು.

ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮೈಲಾರಲಿಂಗನ ಪೂಜಾರಿ ಹೇಳುವ ಕಾರ್ಣಿಕ ಕುತೂಹಲಕಾರಿಯಾದುದು. ಕೆಸರಿನ ಮಧ್ಯದಲ್ಲಿರುವ ಎಣ್ಣೆ ಸವರಿದ ಸ್ತಂಭವನ್ನೇರಿ ಗೊರವನು ನಾಲ್ಕಾರು ನುಡಿ ಹೇಳುತ್ತಾನೆ. ಕಂಬ ಏರುವ ಉಟ್ಟು ಎಂಬ ಈ ಸಂಪ್ರದಾಯ ಆಂಧ್ರದಲ್ಲೂ ಇದೆ. ಇದನ್ನು ಕ್ರೀಡಾಭೀರಾಮ ಕಾರನೂ ವರ್ಣಿಸಿದ್ದಾನೆ. ಗೊರವರು ಹೇಳುವ ನುಡಿಗೆ ಕಾರ್ಣಿಕ ಎಂದು ಹೆಸರಿರುವುದಕ್ಕೂ ಪೆರಿಕೆ ಕುಲದವರನ್ನು ಕಾರ್ಣಿಕರೆಂದು ಕರೆಯುವುದಕ್ಕೂ ಸಂಬಂಧವಿದ್ದಂತೆ ತೋರುತ್ತದೆ. ಮಲ್ಲಣ್ಣನ ಕಥೆಗಳನ್ನು ಕೇಳಿದ ಕುಲವಾದುದರಿಂದಲೇ ಕಾರ್ಣಿಕರೆಂಬ ಹೆಸರು ಬಂದಿರುವುದಾಗಿ ಪೆರಿಕೆ ಕುಲ ಚರಿತ್ರೆಯು ಹೇಳುತ್ತದೆ. ಈ ಕಾರ್ಣಿಕರಿಗೂ ಕರ್ನಾಟಕಕ್ಕೂ ಇರುವ ಸಂಬಂಧವನ್ನು ಆಳವಾಗಿ ಪರಿಶೀಲಿಸಬೇಕಾಗಿದೆ.

ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಮೈಲಾರರಲಿಂಗ ಸಂಪ್ರದಾಯಗಳನ್ನು ತೌಲನಿಕವಾಗಿ ವಿವೇಚನೆ ಮಾಡಿದಾಗ ಈ ಸಂಪ್ರದಾಯದ ಬಗೆಗೆ ಏನಾದರೂ ಹೊಸ ಬೆಳಕು ಚೆಲ್ಲಬಹುದೇ ಎನ್ನುವುದೇ ಪ್ರಕೃತ ಪ್ರಬಂಧದ ಉದ್ದೇಶ ಕರ್ನಾಟಕದ ಮೂಲಕವೇ ಇದು ತೆಲುಗುನಾಡನ್ನು ಪ್ರವೇಶಿಸಿತೆಂಬುದರಲ್ಲಿ ಸಂದೇಹವಿಲ್ಲ. ಕರ್ನಾಟಕದಿಂದ ಆಂಧ್ರಕ್ಕೆ ಬಂದ ಪೆರಿಕೆ ಕುಲದವರಿಂದಲೋ, ಕರ್ನಾಟಕದಿಂದಲೇ ಆಂಧ್ರಕ್ಕೆ ಹೊದರೆಂದು ಊಹಿಸಬಹುದಾದ ಕಾಕತೀಯರಿಂದಲೋ ಮೈಲಾರಲಿಂಗ ಸಂಪ್ರದಾಯ ಆ ಪ್ರಾಂತ್ಯದಲ್ಲಿ ಹರಡಿರಬೇಕು.

ಪ್ರಾಚೀನ ಕಾಲದಲ್ಲೇ ಬೇರೆ ಪ್ರಾಂತ್ಯಗಳಿಗೆ ವಲಸೆ ಹೋದವರಲ್ಲಿ, ಗಡಿ ಪ್ರದೇಶಗಳಲ್ಲಿ ವಾಸಮಾಡುವವರಲ್ಲಿ ಹಳೆಯ ಸಂಪ್ರದಾಯಗಳು, ಭಾಷೆ ಮುಂತಾದುವು ಉಳಿದಿರುವುದು ಸಹಜವೇ ಈ ನಿಟ್ಟಿನಿಂದ ನೋಡಿದಾಗ ಕ್ರೀಡಾಭಿರಾಮ ಮುಂತಾದ ತೆಲುಗು ಗ್ರಂಥಗಳಲ್ಲಿ ಮತ್ತು ತೆಲುಗು ಶಾಸನಗಳಲ್ಲಿ ಕೆಲವು ಪ್ರಾಚೀನ ರೂಪಗಳು ಮತ್ತು ಸಂಪ್ರದಾಯಗಳು ಉಳಿದಿವೆ ಎಂದು ಊಹಿಸಬಹುದು. ಉದಾಹರಣೆಗೆ ‘ಗೊಗ್ಗಯ್ಯ’ ಎನ್ನುವುದಕ್ಕೆ ಮೂಲರೂಪವೆನ್ನಬಹುದಾದ ಗೊರಗಯ್ಯ ಹಲವು ತೆಲುಗು ಶಾಸನಗಳಲ್ಲಿ ಕಂಡುಬರುತ್ತದೆ. ಒಗ್ಗಯ್ಯ ಎನ್ನುವುದು ಈಗಲೂ ಒಂದು ವೃತ್ತಿಗಾಯಕ ಪರಂಪರೆಗೆ ಆಂಧ್ರದಲ್ಲಿ ಬಳಸುತ್ತಿರುವ ಪದ ಒಗ್ಗು ಎಂಬ ವಾದ್ಯದಿಂದ ಇದು ಬಂದಿದೆ ಒಗ್ಗು ದೊಡ್ಡ ಆಕಾರದ ಡಮರುಗವೇ ಆಗಿದೆ. ಇದನ್ನು ಬಳಸುವವರು ಕುರುಬರು ಇವರು ಐನವೋಲಿನ ಮೈಲಾರ ಸಂಪ್ರದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಮೈಲಾರ ಕ್ಷುದ್ರದೇವತೆ ಎಂದೂ ಮೈಲದಿಂದ ಆ ಪದ ಬಂದಿರಬಹುದೆಂದೂ ತೆಲುಗು ನಿಘಂಟುಗಳು ಸೂಚಿಸಿರುವುದಾಗಿ ಹಿಂದೆ ಹೇಳಿದೆ. ಮಲೆಗಳಲ್ಲಿ ವಾಸ ಮಾಡುವವರನ್ನು ಗೆದ್ದವರಿಗೆ ಮಲವರ, ಮಲ್ಲಾರ ಮುಂತಾದ ಬಿರುದುಗಳಿದ್ದಂತೆ ಶಾಸನಗಳಲ್ಲಿ ಆಧಾರಗಳಿವೆ. ಇದರಿಂದೇನಾದರೂ ಮೈಲಾರ ಪದ ಬಂದಿರಬಹುದೆಂದು ಊಹಿಸಲಾಗಿದೆ. ಮೈಲಾರ ಭಕ್ತರಾದ ಪೆರಿಕೆ ಕುಲದವರನ್ನು ಕರ್ಣಕುಲದವರೆನ್ನುತ್ತಾರೆಂದು ಹಿಂದೆ ಹೇಳಿದೆ. ಸಾತಕರ್ಣಿಗಳಲ್ಲಿರುವ ಕರ್ಣಕ್ಕೂ ಇವರ ಕರ್ಣಕ್ಕೂ ಯಾವ ಸಂಬಂಧವೋ ತಿಳಿಯದು. ಸಾತಕರ್ಣಿಗಳಲ್ಲಿ ಸ್ಕಂಧ, ವಿಶಾಖ ನಾಮಧೇಯರಿದ್ದಾರೆ. ತಮಿಳುನಾಡಿನ ಪ್ರಧಾನ ದೇವತೆ, ಸಂಗಕಾಲದಲ್ಲಿ ಹೆಚ್ಚಿನ ಪ್ರಾಧಾನ್ಯವಹಿಸಿದ ದೇವತೆ ಮುರುಗನ್ ಅಥವಾ ಕುಮಾರ ಸ್ವಾಮಿ. ಈತನ ವಾಸವೆಲ್ಲಾ ಬೆಟ್ಟದ ಮೇಲೆ ಕಾರ್ತಿಕೇಯ ದೇವ ಸೇನಾನಿ. ಮೈಲಾರ ಶುನಕ ಸೇನಾನಿ. ಮುರುಗನ್‌ಗೆ ಮೈಲೇರಿ ಎಂದು ಹೆಸರು – ಎಂದರೆ ನವಿಲೇರಿದವನು.

ಮೈಲಾರನ ರೂಪವರ್ಣನೆ ವಿಧವಿಧವಾಗಿದೆ. ಕ್ರೀಡಾಭಿರಾಮದಿಂದ ಅವನ ರೂಪ ಹೇಗಿತ್ತು ಎಂಬುದು ಗೊತ್ತಾಗುವುದಿಲ್ಲ. ಪೆರಿಕೆಯವರ ಮದುವೆಯಲ್ಲಿ ಸಾಂಕೇತಿಕವಾಗಿ ಚೀಲದ ಮೇಲೆ ಚಿತ್ರಿಸುತ್ತಾರೆ. ಖಡ್ಗ ಅಥವಾ ತ್ರಿಶೂಲ ಚಿತ್ರಿಸಿರುವುದರಿಂದ ವೀರ ಅಥವಾ ಶಿವರೂಪ ಎಂದು ಅರ್ಥವಾಗುತ್ತದೆ. ಮಧ್ಯಪ್ರದೇಶದ ಖಾಂದೇಶ ಭಿಲ್ಲರು ಧಾನ್ಯರಾಶಿಯ ರೂಪದಲ್ಲಿ ಮೈಲಾರನನ್ನು ಕಾಣುತ್ತಾರೆ. ಮೈಲಾರ ಮಂತ್ರದಲ್ಲಿ ಚತುರ್ಭುಜ, ತ್ರಿನೇತ್ರ, ನೀಲಜೀಮೂತವರ್ಣ, ಕೋರೆ ಖಡ್ಗ, ತ್ರಿಶೂಲ, ಡಮರುಗ, ಪಾನಪಾತ್ರೆ ಇದೆ ಎಂದು ಹೇಳಲಾಗಿದೆ. ಆಂಧ್ರದ ತೆಲಂಗಾಣದ ವಿಗ್ರಹಗಳಲ್ಲಿ ಹಳದಿ ವರ್ಣದ ಬಳಕೆ ಹೆಚ್ಚು, ಪೆರಿಕೆ ಮದುವೆಯಲ್ಲಿ ಅರಿಸಿನ ಉಪಯೋಗ ಹೆಚ್ಚು. ಹುಲಿ ಆದಿ ಗಿರಿಜನರ ದೇವತೆ. ಮಧ್ಯಪ್ರದೇಶದ ಗಿರಿಜನರು ವ್ಯಾಘ್ರೇಶ್ವರನನ್ನು ಸೇವಿಸುವರು. ವ್ಯಾಘ್ರಕ್ಕೂ ಒಗ್ಗಯ್ಯನಿಗೂ ಇರುವ ಸಂಬಂಧದ ಊಹೆ, ಅರಿಸಿನದ ಉಪಯೋಗ ಕೆಲವು ಊಹೆಗಳಿಗೆ ಆಸ್ಪದ ನೀಡುತ್ತವೆ.

ಇತಿಹಾಸದ ಕುರುಹುಗಳು ಮೈಲಾರ ಐತಿಹ್ಯಗಳಲ್ಲಿ ತುಂಬ ಕಡಿಮೆ. ಕ್ರೀಡಾಭಿರಾಮದ ವರ್ಣನೆ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳ ಸಂಗಮದಂತಿದೆ. ಮಾಯಾ ವಿನೋದ ಭೈರವ ಸ್ನೇಹಿತ ಎಲ್ಲ ದೇವತೆಗಳ ರಾಜ ಎನ್ನುವುದು ಪೌರಾಣಿಕ ಸೂಚನೆಯಾದರೆ, ಬೇಟೆಗಾರರ ಅರಸ, ಮಾಡಚೀರಮಣ, ಮಾಳವೀ ಪ್ರಿಯಪತಿ, ಪಲ್ಲೆಮ್ಮ ನಾಯಕ ಮುಂತಾದ ವಿಶೇಷಣಗಳು ಒಬ್ಬ ಐತಿಹಾಸಿಕ ವ್ಯಕ್ತಿಯ ಮೇಲೆ ಬೆಳಕನ್ನು ಚೆಲ್ಲುತ್ತವೆ. ಮೈಲಾರ ಸಂಪ್ರದಾಯದೊಡನೆ ಅನೇಕ ಜಾತಿಗಳಿಗೆ ಸಂಬಂಧವಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಗೊಲ್ಲರು, ವರ್ತಕರಾದ ಬಳೆ ಬಲಿಜರು ತಮ್ಮ ಶಾಖಾನಾಮಗಳಲ್ಲಿ ಮಲ್ಲಾರಿ ಮೈಲಾರಿ ಎಂದಿಟ್ಟು ಕೊಳ್ಳುತ್ತಾರೆ. ಮಹಾರಾಷ್ಟ್ರದ ಬಳೆಸೆಟ್ಟಿ ಮಲ್ಲಾರಿ, ಆಂಧ್ರದ ಬಳೆಗಾರನ ವಸ್ತುಗಳನ್ನು ಮಲಾರ ಎನ್ನುತ್ತಾರೆ. ಐನವೋಲು ಮುಂತಾದ ಕಡೆ ಕೆಂಪುಗೊಲ್ಲರು ಪೂಜಾರಿಗಳು. ಇವರು ಗೊಲ್ಲ ಸ್ತ್ರೀಗೆ ಬ್ರಾಹ್ಮಣರಿಂದ ಹುಟ್ಟಿದವರೆಂದು ಹೇಳುತ್ತಾರೆ. ಹೆಚ್ಚಿನ ಕಥೆಗಳು ಮೈಲಾರ ಕುರುಬರ ಜಾತಿಗೆ ತುಂಬ ಬೇಕಾದವನೆಂಬುದನ್ನು ಸಾರುತ್ತವೆ. ಇಂದಿನ ಸಂಪ್ರದಾಯಗಳೂ ಇದನ್ನೇ ಬೆಂಬಲಿಸುತ್ತವೆ. ಕ್ರಿಸ್ತ ಪೂರ್ವದಲ್ಲಿ ತೆಲುಗರೂ ಕನ್ನಡಿಗರೂ ಒಂದೇ ಗುಂಪಿನವರಾಗಿದ್ದರೆಂದೂ, ಕುರುಬರಾಗಿದ್ದ ಈ ಜನ ವೇದ ಪೂರ್ವಕಾಲದ ಉತ್ತರ ಭಾರತದಲ್ಲಿ ಸಂಸ್ಕೃತಿ ನಿರ್ಮಾಣ ಮಾಡಿದರೆಂದೂ ಹೇಳುವ ಶಂ.ಬಾ.ಜೋಷಿಯವರ ಅಭಿಪ್ರಾಯಗಳು ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತವೆ (ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ). ಮೈಲಾರನ ಶ್ವಾನ ಸೈನ್ಯ. ಏಳುಕೋಟಿ ಋಗ್ವೇದದಲ್ಲಿ ಶತ್ರುಗಳಲ್ಲಿ ಏಳುಕೋಟಿಗಳನ್ನು ನಾಶಮಾಡಿದ, ಬಲಿಷ್ಠರಲ್ಲಿ ಬಲಿಷ್ಠನಾದ ನಾನು ತುರ್ವಶ ಮತ್ತು ಯದುಗಳನ್ನು ಕೀರ್ತಿವಂತರನ್ನಾಗಿ ಮಾಡಿದೆನು, ಎಂದು ಇಂದ್ರಮಂತ್ರದಲ್ಲಿರುವುದನ್ನು ಜೋಷಿಯವರು ತೋರಿಸಿ ಕೊಟ್ಟಿದ್ದಾರೆ. ಇಂದ್ರ ಯುದ್ಧ ದೇವತೆ. ಮೈಲಾರನೂ ಯುದ್ಧವೀರ. ಮೈಲಾರ ಬೇಟಿಗಾರರ ಅರಸ ಅವನಿಗೆ ನಾಯಿಗಳ ಸೈನ್ಯ ಇರುವುದು ಸಹಜವೇ. ಆದರೆ ಖಡ್ಗ ಅಥವಾ ತ್ರಿಶೂಲ, ಕುದುರೆ ಆಮೇಲೆ ಬಂದು ಸೇರಿಕೊಂಡಿರಬೇಕು. ಕ್ರೀಡಾಭಿರಾಮ ಮೈಲಾರ ಮತ್ತು ಭೈರವ ಬೇರೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಶ್ರೀನಾಥ ಕವಿ ಕಲಿಯುಗದಲ್ಲಿ ಮೈಲಾರನೇ ಭೈರವನಾದ ಎಂದ. ಇವು ಮೈಲಾರನ ಬಗೆಗಿನ ಆಲೋಚನೆಗಳ ಪರಿಣಾಮವನ್ನು ಸೂಚಿಸುತ್ತವೆ.

ದಕ್ಷಿಣ ಭಾರತದ ಎಲ್ಲ ಪ್ರಾಂತ್ಯಗಳಿಗೆ ಸೇರಿದ ಮೈಲಾರ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ತೌಲನಿಕ ಅಧ್ಯಯನ ನಡಿಸಿದರೆ ಮಾತ್ರ ಈ ಸಂಪ್ರದಾಯವನ್ನು ಕುರಿತ ರೇಖಾ ಚಿತ್ರವಾದರೂ ಲಭಿಸುವುದು ಸಾಧ್ಯ ಎಂದು ಹೇಳಬಹುದು.

ಆಧಾರ ಗ್ರಂಥಗಳು

೧. ಜಿ.ಆರ್. ವರ್ಮ, ಮೈಲಾರದೇವ, ವರ್ಮನ್ ಪಬ್ಲಿಕೇಷನ್ಸ್, ತಾಡೇಪಲ್ಲಿ ಗೂಡೆಂ, ಆಂಧ್ರಪ್ರದೇಶ, ೧೯೭೩.

೨. ಕ್ರೀಡಾಭಿರಾಮ, ವಲ್ಲಭರಾಯ, ಎಂ. ಶೇಷಾಚಲಂ ಮತ್ತು ಕಂಪೆನಿ, ಮದ್ರಾಸು.

೩. ಶಂ.ಬಾ. ಜೋಷಿ, ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಸಮಾಜ ಪುಸ್ತಕಾಲಯ, ಧಾರವಾಡ, ೧೯೬೬.

೪. ಆರ್ವಿಯಸ್ ಸುಂದರಂ, ಆಂಧ್ರಲ ಜಾನಪದ ವಿಜ್ಞಾನಂ, ಆಂ.ಪ್ರ. ಸಾಹಿತ್ಯ ಅಕಾಡೆಮಿ, ೧೯೮೩.