ಆಕರ್ಷಕ ಏಕ ಶಿಲಾ ಪರ್ವತ, ೧೭೦೦ ಅಡಿ ಎತ್ತರದಲ್ಲಿ ಇರುವ ಇದನ್ನು ಜಮಾಲಾಬಾದ್ ಕೋಟೆ ಎನ್ನುತ್ತಾರೆ. ಆದರೆ ಇದರ ಪ್ರಸಿದ್ಧಿ ಹೆಸರು “ಗಡಾಯಿ ಕಲ್ಲು”. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದಲ್ಲಿದೆ. ಬೆಳ್ತಂಗಡಿಯಿಂದ ಪೆರ್ಮಾಣು ಬಸದಿಯ ಮೂಲಕ ಸಾಗಿದರೆ ಸಿಗುತ್ತದೆ ಜಮಾಲಾಬಾದ್.

ಈ ಪರ್ವತದ ಮೇಲೆ ಕೋಟೆ ಕಟ್ಟಿಕೊಂಡು ನರಸಿಂಹ ವರ್ಮ ಎಂಬ ದೊರೆ ಆಡಳಿತ ನಡೆಸಿರುವುದರಿಂದ ಕೋಟೆ ಸಹಿತವಾದ ಪರ್ವತವನ್ನು “ನರಸಿಂಹಗಡ” ಅಂತಲೂ ಕರೆಯುತ್ತಾರೆ. ಇದರ ಮೊದಲ ಮತ್ತು ಕೊನೆಯ ಅಕ್ಷರ ಸೇರಿಸಿ ಕ್ರಮೇಣವಾಗಿ ಈ ಗ್ರಾಮಕ್ಕೆ ನಡ ಎಂಬ ಹೆಸರನ್ನೂ ಕರೆಯುತ್ತಾರೆ.

ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ೧೭೯೪ರಲ್ಲಿ ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ಪ್ರಾಚೀನ ಕೋಟೆಯನ್ನು ದುರಸ್ತಿಗೊಳಿಸಿ ನಡ ಗ್ರಾಮಕ್ಕೆ

ತನ್ನ ತಾಯಿ “ಜಮಾಲ್ ಬೀ” ಹೆಸರಿನಲ್ಲಿ “ಜಮಾಲಾಬಾದ್” ಎಂದೂ ಕೋಟೆ ಸಹಿತವಾದ ಪರ್ವತಕ್ಕೆ “ಜಮಾಲ್‌ಗಡ” ಎಂದೂ ಹೆಸರಿಟ್ಟನು ಎನ್ನುತ್ತದೆ

ಇಲ್ಲಿನ ಇತಿಹಾಸ

ಬೆಳ್ತಂಗಡಿಯಿಂದ ೬ ಕಿ. ಮೀ. ದೂರದಲ್ಲಿರುವ ಜಮಾಲಾಬಾದ್ ಏರಲು ೩ ಸಾವಿರ ಮೆಟ್ಟಲು ಹತ್ತಬೇಕು. ಬೆಳ್ತಂಗಡಿಯಿಂದ ಪೆರ್ಮಾಣು ಬಸದಿಯ ಮೂಲಕವೂ ಜಮಾಲಾಬಾದ್ ಏರಬಹುದು. ಅಥವಾ ಮಂಜೊಟ್ಟಿಯಿಂದ ವಳಬೈಲ್ ಮೂಲಕವೂ ಜಮಾಲಾಬಾದ್ ಹತ್ತಲು ದಾರಿ ಇದೆ. ಜಮಾಲಾಬಾದ್ ಹತ್ತಿದ ಬಳಿಕ ಸಾವಿರಾರೂ ಎಕರೆ ಪ್ರದೇಶದ ಪಕ್ಷಿನೋಟ ಸಿಗುತ್ತದೆ. ನೋಡುವ ಕಣ್ಣುಗಳಿಗೆ ಸುಂದರ ಪೃಕೃತಿ ಇಲ್ಲಿ ಅನಾವರಣಗೊಂಡಂತಿರುತ್ತದೆ.

ಜಮಾಲಾಬಾದ್ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿದ್ದು ಇದನ್ನು ರಾಷ್ಟ್ರೀಯ ಮಹತ್ವದ ಐತಿಹಾಸಿಕ ಸ್ಮಾರಕ ಎಂದು ಘೋಷಿಸಲಾಗಿದೆ. ಸ್ಥಳೀಯ ಅರಣ್ಯ ಇಲಾಖೆಯ ಅಧಿಕೃತ ಅನುಮತಿ ಇಲ್ಲದೆ ಪ್ರವೇಶ ಸಿಗುವುದಿಲ್ಲ. ಪ್ರವಾಸಿಗರು ಉದ್ಯಾನದ ಒಳಗೆ ತಂಗಲು ಅನುಮತಿ ಸಿಗುವುದಿಲ್ಲ. ಇಲ್ಲಿ ಸಂಜೆ ನಾಲ್ಕು ಗಂಟೆಯ ಬಳಿಕ ಪ್ರವೇಶ ಇರುವುದಿಲ್ಲ.

ಇಲ್ಲಿ ನವೆಂಬರ್‌ನಿಂದ ಮೇ ತನಕ ಮಾತ್ರ ಚಾರಣಕ್ಕೆ ಅನುಕೂಲ ಇರುತ್ತದೆ. ಶಾಲಾ ಮಕ್ಕಳಿಗೆ ರೂಪಾಯಿ ೧೦೦, ವಯಸ್ಕರಿಗೆ ೨೦೦, ವಿದೇಶಿಯರಿಗೆ ೧೦೦೦ ಪ್ರವೇಶ ಶುಲ್ಕ ಪಡೆಯಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: ೦೮೨೫೬-೨೩೩೧೮೯.