ಖಚಿತ ದಾರಿಯಲ್ಲಿ ನಡೆಯುವ ವಿಜ್ಞಾನದ ಅನ್ವೇಷಣೆಯಲ್ಲಿ ಅದೃಷ್ಟದಂಥ ಅತೀಂದ್ರಿಯ ಪರಿಕಲ್ಪನೆಗೆ ಯಾವುದಾದರೂ ಸ್ಥಾನವಿದೆಯೆ? ಕೇವಲ ಅದೃಷ್ಟದಿಂದಲೇ ಮಹತ್ತರವಾದದ್ದನ್ನು ಕಂಡು ಹಿಡಿಯುವುದು ಸಾಧ್ಯವೆ?

ಈ ಪ್ರಶ್ನೆಗಳಿಗೆ “ಆಷಾಡಭೂತಿಯಲ್ಲದ ಯಾವುದೇ ವಿಜ್ಞಾನಿಯು ವಿಜ್ಞಾನದ ಅನ್ವೇಷಣೆಯಲ್ಲಿ ಅದೃಷ್ಟ ವಹಿಸುವ ಪಾತ್ರದ ಪ್ರಾಮುಖ್ಯವನ್ನು ಒಪ್ಪಿಕೊಳ್ಳುತ್ತಾನೆ,” ಎಂದು ನುಡಿದ ನೋಬೆಲ್ ಪಾರಿತೋಷಕ ವಿಜೇತ ವಿಜ್ಞಾನಿ ಸರ್ ಪೀಟರ್ ಮೆದಾವರ್‌ನ ಮಾತು ಉತ್ತರವೆನಿಸೀತೆ? ಇದರ ಸ್ಪಷ್ಟನೆಗೆ ಈ ಕೆಳಗಿನ ಕೆಲವು ವೈಜ್ಞಾನಿಕ ಅನ್ವೇಷಣೆಗಳನ್ನು ಪರಿಶೀಲಿಸಬಹುದೇನೋ.

ವಿದ್ಯುತ್

ಮಾನವನ ಬದುಕಿನ ಸ್ವರೂಪವನ್ನೇ ಬದಲಿಸಿದ ವಿದ್ಯುತ್ತನ್ನು ಕಂಡುಹಿಡಿದ ರೀತಿ ಮತ್ತು ಸಂದರ್ಭಗಳನ್ನು ಗಮನಿಸಿ. ಇಟಲಿಯ ಶರೀರ ವಿಜ್ಞಾನಿ ಲೂಗಿ ಗ್ಯಾಲ್ವಾನಿಯ ಕಣ್ಣ್ಣಿಗೆ ಆಕಸ್ಮಿಕವಾಗಿ ಬಿದ್ದ ಒಂದು ಸಣ್ಣ ಘಟನೆ ವಿದ್ಯುಚ್ಛಕ್ತಿಯ ಆವಿಷ್ಕಾರಕ್ಕೆ ಕಾರಣವಾಯಿತು.

೧೭೮೬ರ ಒಂದು ದಿನ ಗ್ಯಾಲ್ವಾನಿ ತನ್ನ ಮನೆಯಲ್ಲಿ ಕಪ್ಪೆಯ ಕಾಲುಗಳನ್ನು ವಿಚ್ಛೇದನ ಮಾಡುತ್ತಿದ್ದ. ತಾಮ್ರದ ತಂತಿಯಿಂದ ನೇತಾಡುತ್ತಿದ್ದ ಕಪ್ಪೆಯ ಕಾಲುಗಳು ಗಾಳಿಗೆ ತುಯ್ದಾಡಿ ಕಬ್ಬಿಣಕ್ಕೆ ತಾಗಿದಾಗಲೆಲ್ಲ ಅವು ತುಡಿಯುತ್ತಿದ್ದವು. ಹಾಗೇಕೆಂದು ಯೋಚಿಸಿದ ಗ್ಯಾಲ್ವಾನಿ “ಕಪ್ಪೆಯ ಮಾಂಸ ಖಂಡಗಳಲ್ಲಿ ಪ್ರಾಣಿ ವಿದ್ಯುತ್ ಇರುತ್ತದೆ. ಕಪ್ಪೆಯ ಕಾಲು ಕಬ್ಬಿಣದ ಸಂಪರ್ಕ ಹೊಂದಿದಾಗಲೆಲ್ಲ ಅದು ಬಿಡುಗಡೆಯಾಗುತ್ತದೆ,” ಎಂದು ತರ್ಕಿಸಿದ.

ಆದರೆ ಅವನ ತರ್ಕ ತಪ್ಪಾಗಿತ್ತು. ಗ್ಯಾಲ್ವಾನಿಯ ಸಮಕಾಲೀನ ಪ್ರತಿಭಾವಂತ ಭೌತವಿಜ್ಞಾನಿ ಅಲೆಕ್ಸಾಂಡ್ರಾ ವೋಲ್ಟಾ “ವಿಜಾತೀಯ ಲೋಹಗಳು ಸಂಪರ್ಕ ಹೊಂದಿದಾಗ ಉತ್ಪತ್ತಿಯಾಗುವ ವಿದ್ಯುದಾವೇಗವೇ ಕಪ್ಪೆಯ ಕಾಲುಗಳ ತುಡಿತಕ್ಕೆ ಕಾರಣ,” ಎಂಬ ಕ್ರಮಬದ್ಧವಾದ ತಾರ್ಕಿಕ ವಿವರಣೆಯನ್ನು ಒದಗಿಸಿದ. ವಿಜ್ಞಾನಿಯ ಪ್ರತಿಭೆ ಹೊಳೆಯುವುದು ಇಂಥ ಕಡೆಯೆ. ಮುಂದುವರಿದ ವೋಲ್ಟಾ, ಬೇರೆ ಬೇರೆ ವಿಜಾತೀಯ ಲೋಹಗಳ ಸಂಯೋಜನೆಗಳನ್ನು ಅಭ್ಯಾಸ ಮಾಡಿದ. ಯಾವುದೇ ರೀತಿಯ ಮಾಂಸಖಂಡದ ಸಹಾಯವಿಲ್ಲದೆ ಕೆಲವು ಸರಳ ದ್ರಾವಣಗಳ ಸಂಪರ್ಕ ಕಲ್ಪಿಸಿ ಪ್ರಥಮ ಸತತ ವಿದ್ಯುತ್ ಸರಬಾರಾಜಿನ ಉಪಯುಕ್ತ ಆಕರ ‘ವಿದ್ಯುತ್‌ಕೋಶ’ವನ್ನು ೧೮೦೦ರಲ್ಲಿ ಅಭಿವೃದ್ಧಿಪಡಿಸಿದ.

ವಲ್ಕನೀಕರಣ

ಅನೇಕ ದಶಲಕ್ಷ ಡಾಲರುಗಳ ಉದ್ಯಮಕ್ಕೆ ಬುನಾದಿ ಹಾಕಿದ ವಲ್ಕನೀಕರಣ ಬೆಳಕಿಗೆ ಬಂದದ್ದು ಕೂಡ ಒಂದು ಕೈ ತಪ್ಪಿನಿಂದಲೇ!

ರಬ್ಬರ್ ತನ್ನ ಸಹಜ ಸ್ಥಿತಿಯಲ್ಲಿ ಅಷ್ಟೇನೂ ಉಪಯುಕ್ತವಲ್ಲ. ಬಿಸಿಲಿನ ವಾತಾವರಣದಲ್ಲಿ ಮೃದುವಾಗಿಯೂ, ಅಂಟಂಟಾಗಿಯೂ ಇರುತ್ತದೆ. ಚಳಿಯ ವಾತಾವರಣದಲ್ಲಿ ಪೆಡಸಾಗಿಯೂ, ಭಂಗುರವಾಗಿಯೂ ಇರುತ್ತದೆ. ರಬ್ಬರಿನ ಈ ‘ಅವಗುಣ’ಗಳನ್ನು ನೀಗಿಸುವಂಥ ಸಂಸ್ಕರಣವನ್ನು ಕಂಡುಹಿಡಿಯಲು ಅಮೆರಿಕಾದ ಶೋಧಕ ಚಾರ್ಲ್ಸ್ ಗುಡ್ ಇಯರ್ ೧೮೩೦ ರಿಂದ ಸತತವಾಗಿ ಪ್ರಯತ್ನಿಸುತ್ತಿದ್ದ. ಒಂಬತ್ತು ವರ್ಷಗಳು ಕಳೆದರೂ ಏನೊಂದೂ ಯಶಸ್ಸು ಸಿಕ್ಕಿರಲಿಲ್ಲ. ೧೮೩೯ರಲ್ಲಿ ಒಂದು ದಿನ ಗುಡ್ ಇಯರ್‌ನ ಕೈ ಮೀರಿ ಗಂಧಕ ಮತ್ತು ರಬ್ಬರ್ ಇದ್ದ ಮಿಶ್ರಣ ಬಿಸಿ ಒಲೆಯ ಮೇಲೆ ಚೆಲ್ಲಿದ್ದರಿಂದ ರಬ್ಬರಿನ ಸಮಸ್ಯೆಗೊಂದು ಪರಿಹಾರ ದೊರಕಿತು! ಚೆಲ್ಲಿದ ಮಿಶ್ರಣವನ್ನು ಆತುರಾತುರವಾಗಿ ತೆಗೆದು ನೋಡಿದಾಗ ರಬ್ಬರ್ ತನ್ನ ಅಂಟುತನವನ್ನು ಕಳೆದುಕೊಂಡಿದ್ದುದು ಗೋಚರವಾಯಿತು. ಜೊತೆಗೆ, ಅದಕ್ಕೆ ಸರಿಯಾದ ಪ್ರಮಾಣದ ಮೆದುತನವೂ ಇತ್ತು. ಅಷ್ಟೇ ಅಲ್ಲದೆ, ಅದು ತಾಪದೊಂದಿಗೆ ವಿಷಮವಾಗಿ ವರ್ತಿಸುವುದನ್ನೂ ತೊರೆದಿತ್ತು. ನಂತರ ಅನೇಕ ಪ್ರಯೋಗಗಳನ್ನು ಕೈಗೊಂಡ ಗುಡ್ ಇಯರ್, ರಬ್ಬರನ್ನು ದೃಢಗೊಳಿಸಲು ಅಗತ್ಯವಾದ ಗರಿಷ್ಠ ತಾಪ ಮತ್ತು ಕಾಯಿಸಬೇಕಾದ ಕಾಲವನ್ನು ಕಂಡುಹಿಡಿದ.

ಚೋದ್ಯವೆಂದರೆ ಗುಡ್ ಇಯರ್ ಸಾಯುವವರೆಗೂ ತನ್ನ ಶೋಧನೆಗಾಗಿ ಪೇಟೆಂಟ್ ಪಡೆಯಲು ಹೋರಾಡುತ್ತಲೇ ಇದ್ದ. ಸತ್ತಾಗ ಮೈ ತುಂಬಾ ಸಾಲವಿತ್ತು!

ಕ್ಷಕಿರಣ

ಕ್ಷ-ಕಿರಣ ಯಾರಿಗೆ ಗೊತ್ತಿಲ್ಲ! ಮರ, ರಬ್ಬರ್, ತೆಳುವಾದ ಲೋಹ ಮತ್ತು ಮಾಂಸಖಂಡಗಳನ್ನೂ ತೂರಿಕೊಂಡು ಹೋಗಬಲ್ಲ ಕ್ಷ-ಕಿರಣದಂಡದ ಶೋಧ ಆದದ್ದು ಹೇಗೆ?

೧೮೯೫ರಲ್ಲಿ ಜರ್ಮನಿಯ ವಿಲ್ಹೆಮ್ ಕೊನ್ರಾಡ್ ರಾಂಟಜನ್ ಎಂಬಾತ ಕ್ಯಾಥೋಡ್ ಕಿರಣಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತಿದ್ದ. ನಿರ್ವಾತಗೊಳಿಸಿದ ಕ್ರೂಕ್ಸ್ ನಳಿಕೆಯ ಎರಡು ವಿದ್ಯುದ್ವಾರಗಳ ನಡುವೆ ಅಧಿಕ ವಿದ್ಯುತ್ ವಿಭವವನ್ನು ಉಣಿಸಿದಾಗ ಕ್ಯಾಥೋಡ್ ಕಿರಣಗಳು ಹೊಮ್ಮುತ್ತವೆ. ಹೀಗೆ ಒಂದು ದಿನ ರಾಂಟಜನ್ ಪ್ರಯೋಗದಲ್ಲಿ ನಿರತನಾಗಿರುವಾಗ ಕ್ರೂಕ್ಸ್ ನಳಿಕೆಯಿಂದ ಸುಮಾರು ದೂರದಲ್ಲಿ ಬಿದ್ದಿದ್ದ ಬೇರಿಯಂ ಪ್ಲಾಟಿನೋ ಸೈಯನೈಡ್‌ನ ಪ್ರತಿದೀಪ್ತ ಪರದೆಯು ಪ್ರಕಾಶಿಸುವುದನ್ನು ಗಮನಿಸಿದ. ಕ್ಯಾಥೋಡ್ ಕಿರಣಗಳು ತೂರಲಾರದಂಥ ದಪ್ಪನಾದ ಕಪ್ಪು ರಟ್ಟಿನಿಂದ ಕ್ರೂಕ್ಸ್ ನಳಿಕೆಯನ್ನು ಮುಚ್ಚಿದ್ದರೂ ಪ್ರತಿದೀಪ್ತ ಪದರೆಯು ಹೊಳೆಯುತ್ತಲೇ ಇತ್ತು. ಪರದೆಯನ್ನು ಮತ್ತೂ ದೂರಕ್ಕೆ ಸರಿಸಿ ನೋಡೋಣವೆಂಬ ಕೂತುಹಲ ರಾಂಟಜನ್‌ಗೆ ಉಂಟಾಯಿತು. ಹೀಗೆ ಮಾಡುವಾಗ ಅವನ ಮುಂಗೈ ಪರದೆ ಮತ್ತು ಕಿರಣಗಳ ನಡುವೆ ಬಂತು. ಆಗ ಅವನಿಗೊಂದು ಅಚ್ಚರಿ ಕಾದಿತ್ತು. ಅವನ ಮುಂಗೈ ಎಲುಬುಗಳ ನೆರಳು ಪರದೆಯ ಮೇಲೆ ಕಂಡಿತು! ಕೂಡಲೆ ತೀಕ್ಷ್ಣ ಬುದ್ಧಿಯ ರಾಂಟಜನ್‌ಗೆ ಕ್ಯಾಥೋಡ್ ಕಿರಣದ ಜೊತೆಗೆ ಕಣ್ಣಿಗೆ ಕಾಣಿಸದ, ಹೆಚ್ಚಿನ ವೇಧಕ ಸಾಮರ್ಥ್ಯವುಳ್ಳ ಮತ್ತೊಂದು ರೀತಿಯ ವಿಕಿರಣವೂ ಉತ್ಸರ್ಜನೆಯಾಗುತ್ತಿದೆ ಮತ್ತು ಇದೇ ವಿಕಿರಣವೇ ಪರದೆಯ ಮೇಲೆ ಹೊಳಪನ್ನೂ ಮುಂಗೈ ಮೂಳೆಗಳ ನೆರಳನ್ನೂ ಉಂಟುಮಾಡುತ್ತಿದೆ ಎಂಬ ಅರಿವಾಯಿತು. ೧೮೯೬ರ ಜನವರಿ ೨೩ರಂದು ರಾಂಟಜನ್ ಕ್ಷ-ಕಿರಣ ದಂಡಗಳ ವಿಷಯವನ್ನು ಬಹಿರಂಗಗೊಳಿಸಿದಾಗ ಅದನ್ನು ಭೌತಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳ ಮೇಲೆ ಅಗಾಧ ಪರಿಣಾಮಬೀರಬಲ್ಲ ವರದಂಡವೆಂಬಂತೆ ಸ್ವಾಗತಿಸಲಾಯಿತು.

ಸೋಂಕು ತಡೆ ತತ್ವ

೧೮೭೯ರಲ್ಲಿ ಫ್ರಾನ್ಸ್‌ನ ಲೂಯಿ ಪಾಶ್ಚರ್ ಕೋಳಿಗಳಿಗೆ ತಗಲುತ್ತಿದ್ದ ಕಾಲರಾ ಬಗ್ಗೆ ಅಧ್ಯಯನ ನಡೆಸುತ್ತಿದ್ದ. ಆಗ್ಗೆ ಅದು ಫ್ರಾನ್ಸಿನ ಪ್ರತಿಶತ ಹತ್ತರಷ್ಟು ಕೋಳಿಗಳನ್ನು ಬಲಿತೆಗೆದುಕೊಂಡಿದ್ದ ಸಾಂಕ್ರಾಮಿಕವಾಗಿತ್ತು. ಪಾಶ್ಚರ್ ಈ ರೋಗವನ್ನು ಹರಡುತ್ತಿದ್ದ ಬ್ಯಾಕ್ಟೀರಿಯಾವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದ. ಒಮ್ಮೆ ಅವನು ಎಂಥ ಉಗ್ರ ಬ್ಯಾಕ್ಟೀರಿಯಾದ ಬೆಳೆಯನ್ನು ತಯಾರಿಸಿದ್ದನೆಂದರೆ ಕೋಳಿಮರಿಯ ಚರ್ಮದಡಿಯಲ್ಲಿ ಅದರ ಸ್ವಲ್ಪ ಪ್ರಮಾಣದ ಚುಚ್ಚು ಮದ್ದನ್ನು ಕೊಟ್ಟರೂ ಕೋಳಿಮರಿ ಒಂದೇ ದಿನದಲ್ಲಿ ಸತ್ತು ಹೋಗುತ್ತಿತ್ತು.

ಈ ಹಂತದಲ್ಲಿ ಪಾಶ್ಚರನ ಕೆಲಸವು ರಜೆಗಾಗಿ ಕೆಲವು ವಾರ ನಿಂತು ಹೋಗಿತ್ತು. ಪುನಃ ಕೆಲಸವನ್ನು ಪ್ರಾರಂಭಿಸಿದಾಗ ಅವನ ಬೆಳೆಯಲ್ಲಿದ್ದ ಸೋಂಕುಕಾರಕ ಜೀವಿ ದುರ್ಬಲವಾಗಿ ಬಿಟ್ಟಿತ್ತು. ಅದರ ಚುಚ್ಚು ಮದ್ದನ್ನು ತೆಗೆದುಕೊಂಡ ಕೋಳಿಗಳು ಸ್ವಲ್ಪವೇ ಸೊರಗಿ ಕ್ರಮೇಣ ಚೇತರಿಸಿಕೊಂಡವು. ನಂತರ ದುರ್ಬಲವಾಗಿದ್ದ ಬೆಳೆಯನ್ನು ಬಿಸಾಡಿದ ಪಾಶ್ಚರ್ ಬ್ಯಾಕ್ಟೀರಿಯಾದ ಉಗ್ರವಾದ ಹೊಸ ಬೆಳೆಯನ್ನು ತಯಾರು ಮಾಡಿದ. ಕುತುಹಲಕ್ಕೋ ಏನೋ ದುರ್ಬಲ ಚುಚ್ಚು ಮದ್ದನ್ನು ತೆಗೆದುಕೊಂಡಿದ್ದ ಕೋಳಿಗಳಿಗೇ ಉಗ್ರವಾದ ಹೊಸ ಬೆಳೆಯನ್ನು ಚುಚ್ಚಿದ. ಅವನ ಆಶ್ಚರ್ಯಕ್ಕೆ ಎಲ್ಲ ಕೋಳಿಗಳೂ ರೋಗ ವಿಷವನ್ನು ತಾಳಿಕೊಂಡವು. ಒಂದೂ ಸಾಯಲಿಲ್ಲ! ಅಂದರೆ ಮೊದಲೆ ಕೊಟ್ಟಿದ್ದ ಬ್ಯಾಕ್ಟೀರಿಯಾದ ದುರ್ಬಲ ಚುಚ್ಚು ಮದ್ದು ನಂತರ ಕೊಟ್ಟ ಉಗ್ರ ಚುಚ್ಚು ಮದ್ದಿನ ವಿರುದ್ಧ ಒಂದು ರೀತಿಯ ರಕ್ಷಣಾ ಸಾಮರ್ಥ್ಯವನ್ನು ಒದಗಿಸಿತ್ತು. ಇದರಿಂದಲೇ ದುರ್ಬಲ ಸೂಕ್ಷ್ಮ ಜೀವಾಣುಗಳಿಂದಾಗುವ ಸೋಂಕು ರಕ್ಷಾ ತತ್ವವನ್ನು ಗುರುತಿಸುವುದು ಅವನಿಗೆ ಸಾಧ್ಯವಾಯಿತು. ಈ ವಿಧಾನವನ್ನೇ ಅನುಸರಿಸಿ ಪಾಶ್ಚರ್ ಕುರಿಗಳಿಗೆ ಪ್ರಾಣಾಂತಿಕವಾಗಿದ್ದ ನೆರಡಿ ರೋಗ ಮತ್ತು ಮನುಷ್ಯರಿಗೆ ಭಯಂಕರವಾಗಿದ್ದ ಹುಚ್ಚು ನಾಯಿ ಕಡಿತಗಳಿಗೆ ನಿವಾರಣೋಪಾಯಗಳನ್ನು ಕಂಡುಹಿಡಿದ.

ಪೆನಿಸಿಲಿನ್

ಆಕಸ್ಮಿಕ ಅನ್ವೇಷಣೆಗಳಲ್ಲಿ ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ೧೯೨೮ರಲ್ಲಿ ಕಂಡು ಹಿಡಿದ ಪೆನಿಸಿಲಿನ್ ತುಂಬಾ ಪ್ರಸಿದ್ಧವಾದುದು. ಸೈಫಿಲೋಕೊಕಸ್ ಬ್ಯಾಕ್ಟೀರಿಯಾದ ಬೆಳೆಯೊಂದಿಗೆ ಫ್ಲೆಮಿಂಗ್ ಕೆಲಸ ಮಾಡುತ್ತಿರುವಾಗ ಅವನು ಉಪಯೋಗಿಸುತ್ತಿದ್ದ ಬ್ಯಾಕ್ಟೀರಿಯಾ ತಳಿಗೆಯೊಂದರ ಮುಚ್ಚಳ ಅಕಸ್ಮಾತ್ತಾಗಿ ಬಿದ್ದು ಹೋಗಿತ್ತು. ಗಾಳಿಗೆ ತೆರೆದುಕೊಂಡ ಅದು ಒಂದು ರೀತಿಯ ಬೂಸ್ಟಿನಿಂದ ಕಲುಷಿತಗೊಂಡಿತು. ಹೀಗೆ ಕಲುಷಿತಗೊಂಡ ಬೆಳೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಬೂಸ್ಟಿನ ಸುತ್ತ ಸೈಫಿಲೋಕೊಕಸ್ ಕರಗಿದ್ದುದನ್ನು ಫ್ಲೆಮಿಂಗ್ ಗಮನಿಸಿದ. ಬೂಸ್ಟು ಒಂದು ರೀತಿಯ ವಸ್ತುವನ್ನು ಸ್ರವಿಸುತ್ತಿದ್ದುದು ಸಿದ್ಧವಾಯಿತು. ಅದು ಸೋಂಕುಕಾರಕ ಕ್ರಿಮಿಗಳ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಪಡೆದಿತ್ತು.

ಫ್ಲೆಮಿಂಗ್ ಆ ರಹಸ್ಯಮಯ ಬೂಸ್ಟನ್ನು ಪೆನಿಸಿಲಿನ್ ಶಿಲೀಂಧ್ರ ಎಂದು ಗುರುತಿಸಿದ. ಪೆನಿಸಿಲಿನ್ ಶಿಲೀಂಧ್ರ ಸ್ರವಿಸಿದ ಬ್ಯಾಕ್ಟೀರಿಯಾ ನಾಶಕ ವಸ್ತುವನ್ನು ಪೆನಿಸಿಲಿನ್ ಎಂದು ಕರೆದ.

ಹಾಗೆಯೆ ಮುಂದುವರಿದ ಫ್ಲೆಮಿಂಗ್ ಪೆನಿಸಿಲಿನ್‌ಅನ್ನು ಸಾವಿರಾರು ಪಟ್ಟು ಸಾರರಿಕ್ತಗೊಳಿಸಿದ ಮೇಲೂ ಅದು ತನ್ನ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತದೆ ಮತ್ತು ಮನುಷ್ಯನ ಕೋಶಗಳಿಗೆ ನಿರಪಾಯಕಾರಿಯಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ್ಟ. ಮುಂದೆ ಪೆನಿಸಿಲಿನ್ ಅನೇಕ ತರದ ಬ್ಯಾಕ್ಟೀರಿಯಾ ಸೋಂಕುಗಳಿಗೆ ‘ಅದ್ಭುತ ಔಷಧ’ ಅನ್ನುವ ಹೆಸರಿಗೆ ಪಾತ್ರವಾಯಿತು.

ಅದೃಷ್ಟದ ಹೆಚ್ಚುಗಾರಿಕೆ

ದೊಡ್ಡದೊಂದು ಆವಿಷ್ಕಾರಕ್ಕೆ ನಿಮ್ಮಲ್ಲಿ ಅದೃಷ್ಟವಿರಲೇಬೇಕು. ಇಲ್ಲವಾದರೆ ನೀವು ಕಣ್ಣೆದುರಿನ ಮಾದರಿಗಳಿಗಿಂತ ಆಚೆಗೆ ಯೋಚಿಸಲಾರಿರಿ – ಪ್ರೊ. ಜಾನ್ ಕ್ರಿಸ್ಟ್‌ಮನ್.

ಮೇಲೆ ವಿವರಿಸಿರುವ ಐದೂ ಅನ್ವೇಷಣೆಗಳಲ್ಲಿ, ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ವಿಜ್ಞಾನಿಗಳು ಯಾವುದರ ಹುಡುಕಾಟದಲ್ಲಿರಲಿಲ್ಲವೋ ಅದನ್ನೇ ಕಂಡು ಹಿಡಿದಿದ್ದಾರೆ. ಇಂಥ ಅನ್ವೇಷಣೆಗಳನ್ನು ಅದೃಷ್ಟದ ಅಥವಾ ಆಕಸ್ಮಿಕ ಅನ್ವೇಷಣೆಗಳೆಂದು ಕರೆಯಬಹುದು. ಪ್ರಸಿದ್ಧ ಹಾಸ್ಯ ಬರಹಗಾರನೊಬ್ಬ (ಈ ರೀತಿಯ) ಆಕಸ್ಮಿಕ ಘಟನೆಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾನೆ: “ಹುಲ್ಲು ಮೆದೆಯೊಳಗೆ ಸೂಜಿಯನ್ನು ಹುಡುಕಲು ಹೋಗಿ ರೈತನ ಮಗಳನ್ನು ಕಂಡು ಹಿಡಿದಂತೆ!” ಎಂದು.

ಮೇಲ್ನೋಟಕ್ಕೆ ಅವೈಜ್ಞಾನಿಕ ರೀತಿಯಲ್ಲಾದ ಈ ವೈಜ್ಞಾನಿಕ ಅನ್ವೇಷಣೆಗಳನ್ನು ವಿವರಿಸುವುದು ಹೇಗೆ? ವಿಜ್ಞಾನಿಗಳ ಮತ್ತು ವಿಜ್ಞಾನದ ಇತಿಹಾಸಕಾರರ ಕುತೂಹಲವನ್ನು ಸಮನಾಗಿ ಕೆರಳಿಸಿರುವ, ವಿಜ್ಞಾನದ ಅಡಿಗಲ್ಲುಗಳನ್ನೇ ಅಲ್ಲಾಡಿಸಿ ಮಾನವ ಕೋಟಿಯ ಬದುಕನ್ನೆ ಬದಲಿಸಿರುವ ಈ ‘ಆಕಸ್ಮಿಕ ಪತ್ತೆ’ಗಳ ಹಿಂದಿನ ತಾಕತ್ತು ಅಡಗಿರುವುದೆಲ್ಲಿ? ಪ್ರೊ. ವಾಲ್ಟರ್ ಬೆವರಿಟ್ಜ್‌ರ ಪ್ರಕಾರ “ಹೊಸ ಹಾದಿಯನ್ನು ತೆರೆಯುವ ಬಹಳಷ್ಟು ಅನ್ವೇಷಣೆಗಳನ್ನು ಅವುಗಳ ಗುಣಲಕ್ಷಣಗಳಿಂದಲೇ ಮುಂಗಾಣಲು ಸಾಧ್ಯವಿಲ್ಲ. ಅಂಥ ಅನ್ವೇಷಣೆಗಳನ್ನು ಮಾಡಲು ಇರುವ ಬಹುಶಃ ಏಕಮಾತ್ರ ದಾರಿಯೆಂದರೆ ಕೆಲವೊಂದು ಸುಳಿವುಗಳ ಮೇಲೆ ಆಕಸ್ಮಿಕವಾಗಿ ಎಡವಿ ಬೀಳುವುದೇ ಆಗಿದೆ.”

ಸನ್ನದ್ಧ ಮನಸ್ಸಿನ ಅಗತ್ಯ

ಅವಲೋಕನ ಕ್ಷೇತ್ರದಲ್ಲಿ ಅವಕಾಶವು ಸನ್ನದ್ಧ ಮನಸ್ಸನ್ನು ಮಾತ್ರ ಓಲೈಸುತ್ತದೆ ಎನ್ನುತ್ತಾನೆ ಲೂಯಿ ಪಾಶ್ಚರ್.

ವಿಜ್ಞಾನದಲ್ಲಿ ಅದೃಷ್ಟಬಲ ಬಹಳ ಮುಖ್ಯ ಅಂಶವಾಗಿದ್ದರೂ ಯಾರೊಬ್ಬರೂ ಸ್ವಲ್ಪ ಅದೃಷ್ಟ ತನ್ನೆಡೆಗೆ ಇದ್ದ ಮಾತ್ರಕ್ಕೆ ಅನ್ವೇಷಣೆಯನ್ನು ಮಾಡಿಬಿಡಬಲ್ಲನೆಂಬುದು ಇದರ ಅರ್ಥವಲ್ಲ. ಅದೃಷ್ಟದ ಪಾತ್ರ ಒಂದು ಅವಕಾಶವನ್ನು ಒದಗಿಸುವುದಷ್ಟೆ. ಅವಕಾಶ ಒದಗಿದಾಗ ವಿಜ್ಞಾನಿಯು ತನ್ನ ಸತತ ಪ್ರಯತ್ನದ ನಡುವೆ ಎಡತಾಕಿದ ಸುಳಿವನ್ನು ಗಮನಿಸಬೇಕು; ಅದರ ಮಹತ್ವವನ್ನು ಅರಿಯಬೇಕು; ಮತ್ತು ಅದನ್ನು ಛಲದಿಂದ ಬೆಂಬತ್ತಬೇಕು. ಇದಕ್ಕೆ ವಿಶೇಷವಾದ ಪ್ರತಿಭೆ ಬೇಕು; ದೀರ್ಘಕಾಲದ ಕಾರ್ಯತತ್ಪರತೆಯಿಂದ ಗಳಿಸಿದ ವಿಶಿಷ್ಟ ಮಾನಸಿಕ ಸಿದ್ಧತೆ ಬೇಕು. ಮಹತ್ವದ ಅನ್ವೇಷಣೆಯ ಹೊಳಹು ಹಿಡಿತಕ್ಕೆ ಸಿಗುವಂತಾಗಲು ಅಳವಾದ ಮತ್ತು ವ್ಯಾಪಕವಾದ ಜ್ಞಾನವು ತೀರ ಅಗತ್ಯವಾದ ಪೂರ್ವಭಾವಿ ಅಂಶ. ಮನಸ್ಸು ಪೂರ್ಣವಾಗಿ ಸನ್ನದ್ಧವಾಗಿಲ್ಲದೆ ಹೋದರೆ ಪ್ರತಿಭೆsಯ ಕಿಡಿ ಹೊತ್ತಿಸಲು ಏನೂ ಸಿಗದೆ, ತಾನೂ ಬೆಳಕಿಗೆ ಬಾರದೆ ನಂದಿಹೋಗುತ್ತದೆ. ವಿಜ್ಞಾನದ ಇತಿಹಾಸವು ಸನ್ನದ್ಧ ಮನಸ್ಸಿನ ಕೊರತೆಯಿಂದಾಗಿ ಅವಕಾಶ ವಂಚಿತರಾದ ಅನೇಕ ನತದೃಷ್ಟರ ಉದಾಹರಣೆಗಳಿಂದ ತುಂಬಿದೆ.

ಗ್ಯಾಲ್ವಾನಿಗಿಂತ ಸುಮಾರು ಒಂದು ಶತಮಾನದ ಹಿಂದೆಯೇ ಜಾನ್ ಸ್ವಾಮರ್ ಡಾಮ್ ಎಂಬಾತ ಹಾಲೆಂಡ್‌ನಲ್ಲಿ ಗ್ಯಾಲ್ವಾನಿ ಮಾಡಿದ್ದಂತಹ ಅವಲೋಕನವನ್ನು ಮಾಡಿದ್ದ. ಆದರೆ ಆತ ಅದನ್ನು ಕ್ಷುಲ್ಲಕವೆಂದು ಕಡೆಗಣಿಸಿದ್ದ; ಮತ್ತೆ ಅದನ್ನು ಹಿಂಬಾಲಿಸಿ ಹೋಗುವ ಗೋಜಿಗೇ ಹೋಗಿರಲಿಲ್ಲ.

ರಾಂಟಜನ್‌ಗೆ ಮೊದಲು ಸರ್ ವಿಲಿಯಂ ಕ್ರೂಕ್ಸ್ ಕೂಡ ಕ್ಷ-ಕಿರಣದ ಅನ್ವೇಷಣೆಗೆ ದಾರಿ ಮಾಡಿಕೊಟ್ಟ ಅದ್ಬುತವನ್ನು ಗಮನಿಸಿದ್ದ. ಕ್ರೂಕ್ಸ್ ಅದರ ಮಹತ್ವವನ್ನು ಅರಿಯಲಾರದೆ ಹೋದ.

ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟನ್ನಿನ ರಾಯಲ್ ವೆಟರಿನರಿ ಕಾಲೇಜಿನ ಪ್ರೊ. ಮೆಫಾಡನ್ ಸಾಮಾನ್ಯ ಬ್ರೆಡ್ಡಿನ ಬೂಸ್ಟಿನಂತಹದೇ ಶಿಲೀಂಧ್ರದ ಬೀಜಕಣಗಳು ತನ್ನ ಬ್ಯಾಕ್ಟೀರಿಯಾ ಬೆಳೆಯನ್ನು ಕಲುಷಿತಗೊಳಿಸಿದಾಗ ಅದನ್ನು ನಿರಾಳ ಬಿಸಾಡಿ ತನ್ನ ವಿದ್ಯಾರ್ಥಿಗಳಿಗೂ ‘ಇಂಥ ಕಲ್ಮಶದ ವಿರುದ್ಧ ಎಚ್ಚರಿಕೆಯಿಂದಿರಬೇಕು’ ಎಂದು ಉಪದೇಶಿಸಿದ್ದ. ಅಷ್ಟೇ ಅಲ್ಲದೆ ಇಂಥ ಕಲ್ಮಶದಿಂದ ಬ್ಯಾಕ್ಟೀರಿಯಾ ಬೆಳೆ ಹಾಳಾಗುವುದನ್ನು ತಡೆಗಟ್ಟಬೇಕು. ಸಾಧ್ಯವಾಗದಿದ್ದರೆ ಅದನ್ನು ಬಿಸಾಡಬೇಕು ಎಂದೂ ಅಪ್ಪಣೆ ಕೊಡಿಸಿದ್ದ! ಅಂಥದೇ ಕಲ್ಮಶ ಫ್ಲೆಮಿಂಗನ ಬೆಳೆಯನ್ನು ‘ಕೆಡಿಸಿ’ದಾಗ ಅವನು ಅದನ್ನು ಬಿಸಾಡಲಿಲ್ಲ. ಬದಲಿಗೆ, ಅದನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಪೆನಿಸಿಲಿನ್ ಕಂಡುಹಿಡಿದ!

ಹೀಗೆ ಒಂದು ಆಕಸ್ಮಿಕವು ಸರಿಯಾದ ವ್ಯಕ್ತಿಗೆ ಆಗುವವರೆಗೆ ಅದು ಆಕಸ್ಮಿಕವಾಗಿಯೆ ಉಳಿದು ಬಿಡುತ್ತದೆ; ಯಾರ ಕಣ್ಣಿಗೂ ಬೀಳದೆ ಮರೆಯಾಗಿ ಬಿಡುತ್ತದೆ. ಅದೇ ಸರಿಯಾದ ವ್ಯಕ್ತಿಗೆ ಆದಾಗ ಆಕಸ್ಮಿಕವು ಅನ್ವೇಷಣೆಯಾಗುತ್ತದೆ.

ಫ್ಲೆಮಿಂಗನ ಪರಿಣಾಮ: ತ್ರಿಗುಣಗಳ ಸಂಗಮ

ಈ ಎಲ್ಲ್ಲವನ್ನು ಗಮನಿಸಿದಾಗ ಅದೃಷ್ಟ, ಪ್ರಯತ್ನ ಮತ್ತು ಪ್ರತಿಭೆಗಳ ಸೂಕ್ತ ಸಂಗಮದಿಂದ ಮಾತ್ರ ಅನ್ವೇಶಣೆಯ ದಾರಿ ತೆರೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ನಿದರ್ಶನವಾಗಿ ಫ್ಲೆಮಿಂಗನ ಅದೃಷ್ಟದ ಪರಿಣಾಮವನ್ನು ಮತ್ತೊಮ್ಮೆ ಹೆಚ್ಚು ವಿವರಣಾತ್ಮಕವಾಗಿ ಗಮನಿಸಬಹುದು.

ಪೆನಿಸಿಲಿನ್ ಕಂಡುಹಿಡಿಯುವಲ್ಲಿ ಫ್ಲೆಮಿಂಗ್‌ನ ಅದೃಷ್ಟದ ಪಾತ್ರ ಹಿರಿದಾಗಿತ್ತು, ನಿಜ. ಫ್ಲೆಮಿಂಗ್ ಅಧ್ಯಯನಮಾಡುತ್ತಿದ್ದ ಸೈಫಿಲೋಕೊಕಸ್ ಬ್ಯಾಕ್ಟೀರಿಯಾಗಳಿಗೆ ಪೆನಿಸಿಲಿನ್ ಭಯಂಕರವಾಗಿದ್ದರೂ ಉಳಿದಂತೆ ಬೇರೆ ರೀತಿಯ ಬ್ಯಾಕ್ಟೀರಿಯಾಗಳ ಮೇಲೆ ಅದು ಪರಿಣಾಮಕಾರಿಯಲ್ಲ. ಮತ್ತೆ ಫ್ಲೆಮಿಂಗ್‌ನ ಬೆಳೆಯ ಮೇಲಿದ್ದ ವಿಶಿಷ್ಟ ರೀತಿಯ ಬೂಷ್ಟು ಪೆನಿಸಿಲಿನ್ ಉತ್ಪಾದಿಸುತ್ತಿದ್ದರೂ ಬಹಳಷ್ಟು ರೀತಿಯ ಇತರೆ ಬೂಷ್ಟುಗಳು ಪೆನಿಸಿಲಿನ್‌ಅನ್ನು ಉತ್ಪಾದಿಸುವುದಿಲ್ಲ. ಫ್ಲೆಮಿಂಗ್ ತನ್ನ ಅದೃಷ್ಟದ ಬಗ್ಗೆ ತುಂಬಾ ಮುಕ್ತ ಮನಸ್ಸಿನಿಂದ ಈ ರೀತಿ ಹೇಕೊಂಡಿದ್ದಾನೆ: “ಸಾವಿರಾರು ವಿಭಿನ್ನ ಬೂಷ್ಟುಗಳು ಮತ್ತು ಸಾವಿರಾರು ವಿಭಿನ್ನ ಬ್ಯಾಕ್ಟೀರಿಯಾಗಳು ಇರುತ್ತವೆ. ಅದೃಷ್ಟವೊಂದೇ ಇವುಗಳಲ್ಲಿ ಸರಿಯಾದ ಬೂಷ್ಟನ್ನು ಸರಿಯಾದ ಜಾಗದಲ್ಲಿ ಸರಿಯಾದ ವೇಳೆಯಲ್ಲಿ ಇಟ್ಟಿದ್ದು. ಇದು ಐರಿಷ್ ಜೂಜಿನ ಒಟ್ಟು ಮೊತ್ತವನ್ನು ಗೆದ್ದಂತೆ.”

ಆದರೆ ಈ ಶೋಧನೆಯ ಹಿಂದೆ ಕೇವಲ ಅದೃಷ್ಟವೊಂದೇ ಇರಲಿಲ್ಲ ಎಂಬುದು ತುಂಬಾ ಮುಖ್ಯವಾದ ಅಂಶ. ಅದೃಷ್ಟದ ಜೊತೆಗೆ ಬೇರೆಲ್ಲವೂ ಇತ್ತು: ಪರಿಶ್ರಮ, ಪ್ರತಿಭೆ, ಅನುಭವ. ಪ್ರಥಮ ಮಹಾಯುದ್ಧದ ಕಾಲದಲ್ಲಿ ವೈದ್ಯಾಧಿಕಾರಿಯಾಗಿದ್ದ ಫ್ಲೆಮಿಂಗ್ ಗಾಯಾಳುಗಳಿಗೆ ಆಗುತ್ತಿದ್ದ ಅಂಗಕ್ಷಯ ಮತ್ತು ಶೀತ ನಂಜುಗಳನ್ನು ಬಹಳವಾಗಿ ಕಂಡಿದ್ದ. ಇದು ಅವನ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರಿತ್ತು. ಗಾಯಗಳಿಗೆ ಸೋಂಕನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲಬಲ್ಲ ವಸ್ತುವಿಗಾಗಿ ಶೋಧಿಸುವಂತೆ ಅವನನ್ನು ಪ್ರೇರಿಸಿತ್ತು. ಯುದ್ಧ ಮುಗಿದ ಮೇಲೆ ಈ ಸಮಸ್ಯೆಯ ಪರಿಹಾರಕ್ಕಾಗಿ ದುಡಿಯಲು ತನ್ನನ್ನು ತಾನೆ ಅರ್ಪಿಸಿಕೊಂಡುಬಿಟ್ಟ. ಹತ್ತು ವರ್ಷಗಳ ಕಾಲ ಸತತವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವಸ್ತುವಿನ ಶೋಧನೆಯಲ್ಲಿ ಕಳೆದ. ಯಾರಿಗಾದರೂ ಅದೃಷ್ಟ ಖುಲಾಯಿಸುವುದಿದ್ದರೆ ಅದು ಫ್ಲೆಮಿಂಗನಿಗೇ ಖುಲಾಯಿಸಬೇಕಾಗಿತ್ತು. ಆ ಮಟ್ಟಿಗೆ ಆತ ಶ್ರಮ ಪಟ್ಟಿದ್ದ. ಚಾರ್ಲ್ಸ್ ಕೆಟ್ಟರಿಂಗ್‌ನ ಪ್ರಸಿದ್ಧ ನುಡಿಯನ್ನು ನೆನಪಿಸುವಂತೆ: “ಪ್ರಯತ್ನಿಸುತ್ತಲೇ ಇರಿ. ಅವಕಾಶಗಳು ಹೇಗಿರುತ್ತವೆ ಎಂದರೆ ನೀವು ಯಾವ ನಿರೀಕ್ಷೆಯನ್ನು ಇಟ್ಟು ಕೊಳ್ಳದಿರುವಾಗಲೆ ಯಾವುದಾದರೊಂದರ ಮೇಲೆ ಮುಗ್ಗರಿಸುತ್ತೀರಿ.” ಹಾಗೆಯೆ ಫ್ಲೆಮಿಂಗ್ ತನ್ನ ಪ್ರಯೋಗಾಲಯದಲ್ಲಿ ತಪಸ್ವಿಯಂತೆ ಪ್ರಯತ್ನಿಸುತ್ತಲೇ ಇದ್ದ – ಆಕಸ್ಮಿಕವಾಗಿ ಪೆನಿಸಿಲಿನ್ ಮೇಲೆ ಮುಗ್ಗರಿಸುವವರೆಗೆ.

ಇದರ ಜೊತೆಗೆ ಫ್ಲೆಮಿಂಗ್ ತುಂಬಾ ಚೆನ್ನಾಗಿ ಓದಿಕೊಂಡಿದ್ದ ಮತ್ತು ಸೂಕ್ಷ್ಮಜೀವಾಣು ವಿಜ್ಞಾನದಲ್ಲಿ ಒಳ್ಳೆಯ ತರಬೇತಿ ಪಡೆದಿದ್ದ. ಫ್ಲೆಮಿಂಗ್ ತನ್ನ ಸ್ಕಾಟಿಷ್ ಮೂಲದ ಅಂತರ್ಗತ ಹಸಿವಿನ ವರ್ಚಸ್ಸಿನಿಂದಾಗಿ ಯಾವುದೇ ಬೆಳೆಯ ತಳಿಗೆಯನ್ನು ಅದರಿಂದ ಸಾಧ್ಯವಿರುವುದೆಲ್ಲವನ್ನು ಕಲಿಯದೆ ಬಿಸಾಡುತ್ತಿರಲಿಲ್ಲ! ಇದಕ್ಕೆ ಕಳಸವಿಟ್ಟಂತೆ, ಆರು ವರ್ಷಗಳ ಹಿಂದಿನ ಒಂದು ಅನುಭವದಿಂದಾಗಿ ಅವನ ಮನಸ್ಸು ಅನ್ವೇಷಣೆಗೆ ಅಗತ್ಯವಾದ ಪೂರ್ಣ ಸಿದ್ಧತೆಯನ್ನು ಗಳಿಸಿಕೊಂಡಿತ್ತು. ೧೯೨೨ರಲ್ಲಿ ನೆಗಡಿಯಿಂದ ನರಳುತ್ತಿದ್ದರೂ ಫ್ಲೆಮಿಂಗ್ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಮೂಗಿನಿಂದ ಹರಿದ ಲೋಳೆ ಒಂದು ಬ್ಯಾಕ್ಟೀರಿಯಾ ಬೆಳೆಗೆ ಬಿದ್ದು ಬಿಟ್ಟಿತು. ಕೂಡಲೆ ಈ ಲೋಳೆಯ ಸುತ್ತ ಇದ್ದ ಬ್ಯಾಕ್ಟೀರಿಯಾ ಕರಗಲು ಪ್ರಾರಂಭಿಸಿದ್ದನ್ನು ಫ್ಲೆಮಿಂಗ್ ಗಮನಿಸಿದ. ಇದನ್ನೆ ಬೆನ್ನಟ್ಟಿದ ಫ್ಲೆಮಿಂಗ್ ಮುಂದೆ ಕಣ್ಣೀರು ಮತ್ತು ನಾಸಿಕಲೋಳೆಯಲ್ಲಿರುವ ಲೈಸೋಜೈಮ್ ಎನ್ನುವ ಕಿಣ್ವವನ್ನು ಕಂಡುಹಿಡಿದ. ಇದರಿಂದ ಗಳಿಸಿದ ಅನುಭವ ಬ್ಯಾಕ್ಟೀರಿಯಾ ಬೆಳೆಯಲ್ಲಿ ಉತ್ಪತ್ತಿಯಾದ ಪೆನಿಸಿಲಿಯಂ ಬೂಸ್ಟಿನಿಂದಾಗಿ ಉಂಟಾದ ಸ್ವಚ್ಛ ಕ್ಷೇತ್ರದ ಅರ್ಥವನ್ನು ತಕ್ಷಣ ಗ್ರಹಿಸುವಂತೆ ಮಾಡಿತು. ಆ ಮೂಲಕ ಫ್ಲೆಮಿಂಗ್ ಪೆನಿಸಿಲಿನ್ ಕಂಡು ಹಿಡಿಯುವುದು ಸಾಧ್ಯವಾಯಿತು. ಫ್ಲೆಮಿಂಗ್‌ನ ಮಾತುಗಳಲ್ಲಿ ಹೇಳುವುದಾದರೆ “ಲೈಸೋಜೈಮ್‌ನೊಂದಿಗಿನ ನನ್ನ ಹಿಂದಿನ ಅನುಭವ ಇಲ್ಲದೇ ಹೋಗಿದ್ದಿದ್ದರೆ ನಾನು ಕೂಡ ಬೇರೆ ಅನೇಕ ಬ್ಯಾಕ್ಟೀರಿಯಾ ಶಾಸ್ತ್ರಜ್ಞರು ಮಾಡಿದಂತೆ ಬ್ಯಾಕ್ಟೀರಿಯಾ ಬೆಳೆಯಿದ್ದ ತಳಿಗೆಯನ್ನು ಚೆಲ್ಲಿಬಿಡುತ್ತಿದ್ದೆ…..ಬದಲಿಗೆ ನಾನು ಸ್ವಲ್ಪ ಅನ್ವೇಷಣೆಯನ್ನು ಮಾಡಿದೆ.”

ಫ್ಲೆಮಿಂಗ್‌ನ ಈ ಅದೃಷ್ಟದ ಪರಿಣಾಮವನ್ನು ಬೇರೆಲ್ಲ ಶೋಧಗಳಲ್ಲೂ ನಾವು ಕಾಣಬಹುದು.

ಆಕಸ್ಮಿಕ ಶೋಧನೆಗೆ ತರಬೇತಿ

ಅದೃಷ್ಟದ ಹೊಳಹನ್ನು ಗ್ರಹಿಸುವಂತೆ ಮತ್ತು ಅದರ ಲಾಭ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಸಾಧ್ಯವೆ? ಸಾಧ್ಯ ಎನ್ನುತ್ತಾರೆ ರೋನಾಲ್ಡ್ ಎಸ್. ಲೆನಾಕ್ಸ್. ಅವರ ಪ್ರಕಾರ ಮೊದಲ ಹಂತದಲ್ಲಿ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡುವಾಗ ನಿರೀಕ್ಷಿತ ಫಲಿತಾಂಶಗಳನ್ನಷ್ಟೆ ಅಲ್ಲದೆ ಅನಿರೀಕ್ಷಿತ ಫಲಿತಾಂಶಗಳನ್ನು ದಾಖಲಿಸುವಂತೆ ಪ್ರೋತ್ಸಾಹಿಸಬೇಕು. ಸಧ್ಯ ಈಗಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ನಿರೀಕ್ಷಿತ ಫಲಿತಾಂಶಗಳ ಕಡೆಗೇ ಗಮನ ಕೇಂದ್ರೀಕರಿಸುವಂತೆ – ಕುದುರೆಗೆ ಕಣ್ಪಟ್ಟಿ ಕಟ್ಟಿದಂತೆ – ಬೋಧಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಯು ಬೇರೆ ಘಟನೆಗಳನ್ನು ಗಮನಿಸುವುದೇ ಇಲ್ಲ. ಗಮನಿಸಿದರೂ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವುದಿಲ್ಲ. ಯಾರು ಕೇವಲ ನಿರೀಕ್ಷಿತ ಫಲಿತಾಂಶಗಳನ್ನಷ್ಟೇ ನೋಡುತ್ತಾರೋ ಮತ್ತು ಅನಿರೀಕ್ಷಿತ ಫಲಿತಾಂಶಗಳನ್ನು ಕೆಲಸಕ್ಕೆ ಬಾರದ್ದೆಂದು ತಿರಸ್ಕರಿಸುತ್ತಾರೋ ಅಂಥವರು ಹೊಸ ಸಂಶೋಧನೆಯನ್ನು ಮಾಡಲಾರರು. ಸಂಶೋಧಕರಿಗೆ ಒಂದು ಒಳ್ಳೆಯ ನೀತಿ ವಾಕ್ಯವೆಂದರೆ “ಅನಿರೀಕ್ಷಿತವಾದದ್ದನ್ನು ತಡಕು.”

ಎರಡನೆಯದಾಗಿ, ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಈಗ ಮಾಡುತ್ತಿರುವಂತೆ ಕೇವಲ ‘ಸರಿ’ ಮತ್ತು ‘ತಪ್ಪು’ ಫಲಿತಾಂಶಗಳ ಆಧಾರದ ಮೇಲೆ ಶ್ರೇಣಿಯನ್ನು ಕೊಡುತ್ತಿರುವಂತೆ ವಿದ್ಯಾರ್ಥಿಗಳ ಅವಲೋಕನ ಮತ್ತು ದಾಖಲಿಸುವ ಸಾವರ್ಥ್ಯದ ಆಧಾರದ ಮೇಲೂ ಶ್ರೇಣಿಯನ್ನು ಕೊಡಬೇಕು. ಇದು ತುಂಬಾ ಮುಖ್ಯವಾದ ಅವಲೋಕನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ನಿಖರವಾಗಿ ದಾಖಲಿಸುವ ಅಭ್ಯಾಸವನ್ನು ಬೆಳೆಸುತ್ತದೆ. ಅವಕಾಶಗಳು ಮುಂದೊಡ್ಡುವ ಸುಳಿವನ್ನು ಗ್ರಹಿಸಲು ತುಂಬಾ ತೀಕ್ಷ್ಣವಾದ ಅವಲೋಕನ ಶಕ್ತಿಯ ಅಗತ್ಯವಿದೆ. ಇದರ ಗೈರು ಹಾಜರಿಯಲ್ಲಿ ಸುಳಿದಾಡುವ ವಿರಳವಾದ ಅವಕಾಶಗಳೂ ಸಂಶೋಧಕನ ಗಮನಕ್ಕೆ ಬಾರದೆ ನುಣುಚಿ ಹೋಗುತ್ತವೆ.

ಮೂರನೆಯದಾಗಿ, ವಿದ್ಯಾರ್ಥಿಗಳು ತಮ್ಮ ಆಲೋಚನೆ ಮತ್ತು ನಿರೂಪಣೆಯಲ್ಲಿ ಮುಕ್ತವಾಗಿರುವಂತೆ ಪ್ರೊತ್ಸಾಹಿಸಬೇಕು. ಎಷ್ಟೆಂದರೂ ಆಲ್ಬರ್ಟ್ ಸ್ಜೆಂಟ್-ಗ್ಯೋರ್ಗಿ ಹೇಳಿದ್ದೂ ಇದನ್ನೆ: “ಅನ್ವೇಷಣೆ ಎಂದರೆ ಎಲ್ಲರೂ ನೋಡುವುದನ್ನೆ ನೋಡುವುದು ಮತ್ತೆ ಯಾರು ಯೋಚಿಸದಿರುವುದನ್ನು ಯೋಚಿಸುವುದು.”