ರಾಂಟ್‌ಜನ್ ಎಕ್ಸ್ ಕಿರಣಗಳನ್ನು ಕಂಡುಹಿಡಿದ ಸುದ್ದಿ ದೇಶವಿದೇಶಗಳಲ್ಲಿ ಹರಡಿದಾಗ ಎಲ್ಲೆಲ್ಲಿಯೂ ಅದು ಭೌತವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿತು. ಸಾಮಾನ್ಯ ಬೆಳಕಿನ ಕಿರಣಗಳಂತೆ ವಿಶಿಷ್ಟ ಪದಾರ್ಥಗಳಲ್ಲಿ ಪ್ರತಿದೀಪ್ತಿ ಉಂಟುಮಾಡುತ್ತವೆ; ಅಡ್ಡ ಬಂದಾಗ ಅದಕ್ಕೆ ಮಣಿಯದೆ ತೂರಿಕೊಂಡು ಹೋಗುತ್ತವೆ; ಮನುಷ್ಯನ ಕಣ್ಣಿಗೆ ಮಾತ್ರ ಗೋಚರವಾಗುವುದಿಲ್ಲ – ಇಂಥ ವಿಚಿತ್ರ ಗುಣಗಳಿರುವ ಆ ಕಿರಣಗಳು ಅಂದಿನವರ ಪಾಲಿಗೆ ಕಲ್ಪನಾತೀತವಾಗಿದ್ದುವು.

ಎಕ್ಸ್ ಕಿರಣಗಳ ಬಗ್ಗೆ ಹಾಗೆ ಬಹುವಾಗಿ ಕುತೂಹಲಗೊಂಡವರಲ್ಲಿ ಪ್ರೆಂಚ್ ವಿಜ್ಞಾನಿ ಹೆನ್ರಿ ಬೆಕರಲ್ ಒಬ್ಬರು. ಅವರಿಗೆ ಅವುಗಳ ಬಗ್ಗೆ ಹೆಚ್ಚಿನ ಆಸಕ್ತಿ ಉಂಟಾಗಲು ಒಂದು ವಿಶೇಷ ಕಾರಣವಿತ್ತು. ಬೇರಿಯಮ್ ಪ್ಲಾಟಿನೊಸಯನೈಡ್ ಲೇಪಿಸಿದ್ದ ಕಾಗದದಲ್ಲಿ ಉಂಟಾದ ಪ್ರತಿದೀಪ್ತಿಯಿಂದ ತಾನೇ ರಾಂಟಜನ್ ಎಕ್ಸ್‌ಕಿರಣಗಳನ್ನು ಗುರುತಿಸಿದ್ದು? ಆ ಪ್ರತಿದೀಪ್ತಿ ಬೆಕರಲ್‌ಗೆ ಹೊಸ ವಿಷಯವಾಗಿರಲಿಲ್ಲ. ಆ ಮೊದಲೇ ಅವರು ಅದರಲ್ಲಿ ಆಸಕ್ತರಾಗಿದ್ದರು. ಒಂದು ರೀತಿಯಲ್ಲಿ ಆ ಆಸಕ್ತಿ ಅವರಿಗೆ ಪಿತ್ರಾರ್ಜಿತವಾದದ್ದು. ಅವರ ತಂದೆಯೂ ಭೌತವಿಜ್ಞಾನಿಯಾಗಿದ್ದು ಪ್ರತಿದೀಪ್ತಿಯನ್ನು ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದರು. ಆದುದರಿಂದ ಮಗನಿಗೆ ಅದು ಸುಪರಿಚಿತ ಕ್ಷೇತ್ರವಾಗಿತ್ತು.

ಬೆಕರಲ್‌ಗೆ ಒಂದು ಯೋಚನೆ ಬಂದಿತು. ಸಾಮಾನ್ಯ ಬೆಳಕಿನ ಕ್ರಿಯೆಯಿಂದ ಅನೇಕ ಪದಾರ್ಥಗಳಲ್ಲಿ ಪ್ರತಿದೀಪ್ತಿ ಉಂಟಾಗುವುದಷ್ಟೆ. ಹಾಗೆ ಉತ್ಪತ್ತಿಯಾಗುವ ಪ್ರತಿದೀಪ್ತಿಯ ಕಿರಣಗಳಲ್ಲಿ ಎಕ್ಸ್ ಕಿರಣಗಳೇನಾದರೂ ಇರಬಹುದೇ ಎಂದು ಅವರು ಯೋಚಿಸಿದರು. ಪರೀಕ್ಷಿಸಿ ನೋಡುವುದಕ್ಕಾಗಿ ಒಂದು ಪ್ರಯೋಗ ಮಾಡಲು ನಿರ್ಧರಿಸಿದರು. ಪ್ರತಿದೀಪ್ತಿಯನ್ನು ಸೂಸಬಲ್ಲ ಒಂದು ಪದಾರ್ಥವನ್ನು ತೆಗೆದುಕೊಂಡರು. ಅವರ ತಂದೆ ತಮ್ಮ ಪ್ರಯೋಗಗಳಿಗೆ ವಿಶೇಷವಾಗಿ ಬಳಸುತ್ತಿದ್ದ ಪೊಟ್ಯಾಸಿಯಮ್ ಯೂರನೈಲ್ ಸಲ್ಫೇಟ್‌ನ ಒಂದು ದೊಡ್ಡ ಹರಳನ್ನು ತೆಗೆದುಕೊಂಡರು. ಕಪ್ಪು ಕಾಗದ ಹೊದಿಸಿರುವ ಫೋಟೊ ಫಿಲ್ಮ್ ಮೇಲೆ ಒಂದು ಲೋಹದ ತಗಡನ್ನೂ ಅದರ ಮೇಲೆ ಆ ಹರಳನ್ನೂ ಇಟ್ಟು ಅದನ್ನು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿಟ್ಟರು. ಸೂರ್ಯ ರಶ್ಮಿಯ ಪ್ರಭಾವದಿಂದ ಆ ಹರಳಿನಲ್ಲಿ ಪ್ರತಿದೀಪ್ತಿ ಉಂಟಾಗುತ್ತದೆ, ಪ್ರತಿದೀಪ್ತಿ ಕಿರಣಗಳಲ್ಲಿ ಎಕ್ಸ್ ಕಿರಣಗಳೇನಾದರೂ ಇದ್ದರೆ ಅವು ಲೋಹದ ತಗಡನ್ನೂ ಕಪ್ಪು ಕಾಗದವನ್ನೂ ತೂರಿಕೊಂಡು ಹೋಗಿ ಫೋಟೊ ಫಿಲ್ಮಿನ ಮೇಲೆ ವರ್ತಿಸಿ ಫಿಲ್ಮನ್ನು ಮಸಕು ಮಾಡಿರುತ್ತವೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಸಂಜೆ ಫಿಲ್ಮನ್ನು ಅಭಿವರ್ಧಿಸಿ ನೋಡಿದಾಗ ನಿರೀಕ್ಷಿಸಿದ್ದಂತೆ ಫಿಲ್ಮ್ ಮಸಕಾಗಿತ್ತು. ಮಸಕಾಗಿದ್ದ ಪ್ರದೇಶದ ಆಕೃತಿ ಹರಳಿನ ಆಕೃತಿಯೇ ಆಗಿತ್ತು. ತಾವು ಊಹಿಸಿದ್ದಂತೆಯೇ ಪೊಟ್ಯಾಸಿಯಮ್ ಯೂರನೈಲ್ ಸಲ್ಫೇಟ್‌ನಿಂದ ಹೊಮ್ಮುವ ಪ್ರತಿದೀಪ್ತಿ ಕಿರಣಗಳಲ್ಲಿ ಎಕ್ಸ್ ಕಿರಣಗಳಿರುವುದು ನಿಜ ಎಂದು ಅವರು ತೀರ್ಮಾನಿಸಿದರು. ತಮ್ಮ ಊಹೆ ಸರಿ ಎಂದು ಕಂಡುಬಂದುದಕ್ಕೆ ಸಂತೋಷಗೊಂಡರು.

ಯಾವ ಪ್ರಯೋಗವೇ ಆಗಲಿ, ಅದನ್ನು ಒಮ್ಮೆ ಮಾತ್ರ ಮಾಡಿ ಅದರಿಂದ ದೊರೆತ ಫಲಿತಾಂಶವನ್ನು ಸಿಂಧುವೆಂದು ಸ್ವೀಕರಿಸಿ ಪ್ರಕಟಿಸಿಬಿಡುವುದು ವಿಜ್ಞಾನ ಮಾರ್ಗಕ್ಕೆ ಹೊರತು. ಪ್ರಯೋಗವನ್ನು ಪುನಃ ಪುನಃ ಮಾಡಿನೋಡಬೇಕು. ಅದೇ ಫಲಿತಾಂಶ ತಪ್ಪದೆ ದೊರೆತಾಗ ಮಾತ್ರ ಅದಕ್ಕೆ ಬೆಲೆ. ಆದುದರಿಂದ ಬೆಕರೆಲ್ ಆ ಪ್ರಯೋಗವನ್ನು ಪುನರಾವರ್ತಿಸಲು ನಿರ್ಧರಿಸಿದರು. ಪ್ರತಿನಿತ್ಯ ಕಪ್ಪುಕಾಗದದ ಹೊದಿಕೆಯುಳ್ಳ ಫಿಲ್ಮ್ ಮೇಲೆ ಲೋಹದ ತಗಡನ್ನೂ ಅದರ ಮೇಲೆ ಪೊಟ್ಯಾಸಿಯಮ್ ಯೂರನೈಲ್ ಸಲ್ಫೇಟ್‌ನ ಹರಳನ್ನೂ ಇಟ್ಟು ಬಿಸಿಲಿಗಿಡುತ್ತಿದ್ದರು. ಸಂಜೆಯಾದ ಮೇಲೆ ಫಿಲ್ಮನ್ನು ಅಭಿವರ್ಧಿಸುತ್ತಿದ್ದರು. ನಿತ್ಯವೂ ಫಿಲ್ಮ್ ಮಸಕಾಗುತ್ತಿತ್ತು. ಮಸಕಾದ ಆಕೃತಿ ಹರಳಿನ ಆಕೃತಿಯೇ ಆಗಿರುತ್ತಿತ್ತು. ಆ ಪ್ರಯೋಗ ಸರಣಿಯನ್ನು ಅವರು ಪ್ರಾರಂಭಿಸಿದುದು 1896ರ ಫೆಬ್ರವರಿಯಲ್ಲಿ; ರಾಂಟ್‌ಜನ್ ಎಕ್ಸ್‌ಕಿರಣಗಳನ್ನು ಕಂಡು ಹಿಡಿದ ಕೆಲವು ತಿಂಗಳುಗಳೊಳಗೆ. ಫೆಬ್ರವರಿ 26ರಂದು ಎಂದಿನಂತೆ ಪ್ರಯೋಗಕ್ಕೆ ಎಲ್ಲವನ್ನೂ ಅಣಿಮಾಡಿ ಬಿಸಿಲುಮಚ್ಚಿಗೆ ಒಯ್ದು ಇಟ್ಟರು. ಆದರೆ ಅಂದು ಮೋಡ ಕವಿದಿತ್ತು. ಎಷ್ಟು ಹೊತ್ತಾದರೂ ಮೋಡ ಚದರಲಿಲ್ಲ; ಚದರುವ ಸೂಚನೆಯೂ ಕಾಣಿಸಲಿಲ್ಲ. ತಗಡು ಮತ್ತು ಅದರ ಮೇಲಿನ ಹರಳು ಸಮೇತ ಫಿಲ್ಮನ್ನು ಹಾಗೇ ಒಳಕ್ಕೆ ತೆಗೆದುಕೊಂಡು ಹೋಗಿ ಮೇಜಿನ ಖಾನೆಯಲ್ಲಿಟ್ಟು ಬೆಕರೆಲ್ ಬೇರೆ ಕಡೆ ಗಮನ ಹರಿಸಿದರು.

ಫೆಬ್ರವರಿ 26ರಂದು ಕವಿದ ಮೋಡ ನಾಲ್ಕು ದಿನಗಳಾದರೂ ಚದರಲಿಲ್ಲ. ಆ ವರ್ಷ ಫೆಬ್ರವರಿಯಲ್ಲಿ 29 ದಿನ ತಾನೆ? 29ರಂದೂ ಮೋಡ ಮುಚ್ಚಿಕೊಂಡೇ ಇತ್ತು. ಮಾರ್ಚಿ 1ರಂದು ಬಿಸಿಲು ಬಂತು. ಫಿಲ್ಮನ್ನು ಬಿಸಿಲಿಗಿಡುವ ಉದ್ದೇಶದಿಂದ ಅದನ್ನು ತೆಗೆದುಕೊಂಡು ಹೊರಟಾಗ ಒಂದು ಸಂದೇಹ ಅವರನ್ನು ಕಾಡತೊಡಗಿತು. 26ನೆಯ ತಾರೀಕು ಫಿಲ್ಮನ್ನು ಹೊರಗಡೆ ಇಟ್ಟು ಬಿಸಿಲಿಗಾಗಿ ಕೆಲವು ಗಂಟೆಗಳ ಕಾಲ ಕಾದಿದ್ದುದು ಸರಿಯಷ್ಟೆ. ಬಿಸಿಲು ಬರಲಿಲ್ಲ, ನಿಜ. ಆದರೆ ಮೋಡಗಳನ್ನು ತೂರಿಕೊಂಡು ಬಂದ ಸೂರ್ಯನ ಬೆಳಕು ಹರಳಿನ ಮೇಲೆ ವರ್ತಿಸಿ ದುರ್ಬಲವಾಗಿಯಾದರೂ ಪ್ರತಿದೀಪ್ತಿಯನ್ನುಂಟು ಮಾಡಿದ್ದರೆ? ಆ ರೀತಿ ಸಂದೇಹಕ್ಕೆ ಎಡೆಗೊಡುವ ಪ್ರಯೋಗ ಬೇಡ ಎಂದು ಅವರು ನಿರ್ಧರಿಸಿ ಹೊಸ ಫಿಲ್ಮೊಂದನ್ನು ತೆಗೆದುಕೊಂಡು ಅದನ್ನು ಕಪ್ಪು ಕಾಗದದಲ್ಲಿ ಸುತ್ತಿ, ಅದರ ಮೇಲೆ ತಗಡನ್ನೂ ಅದರ ಮೇಲೆ ಪೊಟ್ಯಾಸಿಯಮ್ ಯೂರನೈಲ್ ಸಲ್ಪೇಟಿನ ಹರಳನ್ನೂ ಇಟ್ಟು ಬಿಸಿಲಿನಲ್ಲಿಟ್ಟರು. ನಾಲ್ಕು ದಿನ ಮೇಜಿನ ಖಾನೆಯಲ್ಲಿಟ್ಟಿದ್ದ ಫಿಲ್ಮು ಹೇಗಿದ್ದರೂ ಉಪಯೋಗಕ್ಕೆ ಬರುವುದಿಲ್ಲವೆಂದು ತೀರ್ಮಾನಿಸಿದ್ದುದರಿಂದ ಅದಕ್ಕೇನಾಗಿದೆ ನೋಡೋಣ ಎಂದು ಅದನ್ನು ಅಭಿವರ್ಧಿಸಿದರು. ಅವರ ಅದೃಷ್ಟ ಖುಲಾಯಿಸಿದ್ದರಿಂದ ಅವರು ಆ ಫಿಲ್ಮನ್ನು ಅಭಿವರ್ಧಿಸುವ ಯೋಚನೆ ಮಾಡಿದರು ಎನ್ನಬೇಕಾಗುತ್ತದೆ. ಏಕೆಂದರೆ ಅದು ನೊಬೆಲ್ ಪ್ರಶಸ್ತಿಗೆ ದಾರಿಯಾಯಿತು.

ಮೋಡಗಳನ್ನು ತೂರಿಕೊಂಡು ಬಂದ ಸೂರ್ಯನ ಬೆಳಕು ಹರಳಿನಲ್ಲಿ ಅಕಸ್ಮಾತ್ ಸ್ವಲ್ಪ ಮಟ್ಟಿಗೆ ಪ್ರತಿದೀಪ್ತಿಯುಂಟು ಮಾಡಿರಬಹುದೇ, ಅದರಿಂದ ಫಿಲ್ಮು ತುಸು ಮಸಕಾಗಿರಬಹುದೇ ಎಂಬ ಸಂದೇಹದಿಂದ ಅವರು ಫಿಲ್ಮನ್ನು ಅಭಿವರ್ಧಿಸಿದ್ದರು. ಫಿಲ್ಮ್ ಮೇಲೆ ಹರಳಿನ ಆಕೃತಿ ದಟ್ಟವಾಗಿ ಮೂಡಿದ್ದುದನ್ನು ಕಂಡು ಅವರಿಗೆ ಅತ್ಯಾಶ್ಚರ್ಯವಾಯಿತು. ಫಿಲ್ಮ್ ಮೇಲೆ ಬಿಂಬವನ್ನು ಮೂಡಿಸಿರುವ ಕಿರಣಗಳು ಪ್ರತಿದೀಪ್ತಿಯಿಂದ ಬಂದವಲ್ಲ ಎಂಬುದು ಖಂಡಿತ. ಏಕೆಂದರೆ ಸೂರ್ಯನ ಮಂದ ಬೆಳಕು ಒಂದು ವೇಳೆ ಪ್ರತಿದೀಪ್ತಿಯನ್ನುಂಟುಮಾಡಿದ್ದರೂ ಅದು ದುರ್ಬಲವಾದುದಾಗಿರಬೇಕೇ ವಿನಾ ಅಷ್ಟು ತೀಕ್ಷ್ಣವಾದ ಕಿರಣಗಳನ್ನು ಹೊಮ್ಮಿಸಿರಲಾರವು. ಹಾಗಾದರೆ ಹರಳು ಯಾವ ಪ್ರಚೋದನೆಯೂ ಇಲ್ಲದೆ ತನಗೆ ತಾನೇ ಎಕ್ಸ್ ಕಿರಣಗಳಂಥ ಕಿರಣಗಳನ್ನು ಸದಾ ಹೊರಸೂಸುತ್ತಿದೆಯೇ? ನಂಬುವುದು ಕಷ್ಟ. ಅದನ್ನು ಪರೀಕ್ಷೆ ಮಾಡಿ ನೋಡಲು ನಿರ್ಧರಿಸಿದರು. ಮರುದಿನ ಕಪ್ಪು ಕಾಗದ ಸುತ್ತಿದ ಒಂದು ಫೋಟೊ ಫಿಲ್ಮನ್ನು ತೆಗೆದುಕೊಂಡು ಅದರ ಮೇಲೆ ಲೋಹದ ತಗಡನ್ನೂ ಅದರ ಮೇಲೆ ಪೊಟ್ಯಾಸಿಯಮ್ ಯೂರನೈಲ್ ಸಲ್ಫೇಟಿನ ಹರಳನ್ನೂ ಇಟ್ಟು ಅದನ್ನು ಮೇಜಿನ ಖಾನೆಯಲ್ಲಿಟ್ಟು ಒಂದು ದಿನ ಬಿಟ್ಟರು. ಮರುದಿನ ಫಿಲ್ಮನ್ನು ಅಭಿವರ್ಧಿಸಿ ನೋಡಿದಾಗ ಹರಳಿನ ಬಿಂಬ ಸ್ಪಷ್ಟವಾಗಿ ಅದರಲ್ಲಿ ಮೂಡಿತ್ತು. ಪ್ರಯೋಗವನ್ನು ಪುನಃ ಪುನಃ ಮಾಡಿ ನೋಡಿದರು. ಸಂದೇಹಕ್ಕೆಡೆಯಿಲ್ಲದಂತೆ ಅದೇ ಫಲಿತಾಂಶ ದೊರೆಯಿತು. ಹೊರಗಿನ ಯಾವ ಪ್ರಚೋದನೆಯೂ ಇಲ್ಲದೆ ಆ ಹರಳು ತನಗೆ ತಾನೇ ತೀಕ್ಷ್ಣ ಕಿರಣಗಳನ್ನು ಹೊರಸೂಸುವುದೂ, ಆ ಕಿರಣಗಳು ಲೋಹದ ತಗಡನ್ನೂ ಕಪ್ಪು ಕಾಗದವನ್ನೂ ತೂರಿಕೊಂಡು ಸಾಗಿ ಫೋಟೊಫಿಲ್ಮನ್ನು ಮಸಕು ಮಾಡುವುದೂ ನಿಜ ಎಂಬುದು ಖಚಿತವಾಯಿತು.

ಎಕ್ಸ್ ಕಿರಣಗಳು ಆವಿಷ್ಕಾರವಾದೊಡನೆ ಅನೇಕ ಭೌತವಿಜ್ಞಾನಿಗಳು ಅದರಲ್ಲಿ ಆಸಕ್ತರಾದಂತೆಯೇ ಈ ಹೊಸ ವಿದ್ಯಮಾನವೂ ಬಹುಬೇಗ ಎಲ್ಲ ಭೌತವಿಜ್ಞಾನಿಗಳ ಗಮನವನ್ನೂ ಸೆಳೆಯಿತು. ಅನೇಕರು ಅದರ ಬಗ್ಗೆ ಸಂಶೋಧನೆ ನಡೆಸತೊಡಗಿದರು. ಅಂಥವರಲ್ಲಿ ಒಬ್ಬರಾದ ಫ್ರೆಂಚ್ ವಿಜ್ಞಾನಿ, ಮೇರಿ ಕ್ಯೂರಿ ಈ ವಿದ್ಯಮಾನಕ್ಕೆ ರೇಡಿಯೊಆಕ್ಟಿವಿಟಿ ಎಂಬ ಹೆಸರು ಕೊಟ್ಟರು. ಕನ್ನಡದಲ್ಲಿ ಅದನ್ನು ವಿಕಿರಣಪಟುತ್ವ ಅಥವಾ ವಿಕಿರಣಶೀಲತೆ ಎಂದು ಕರೆದಿದ್ದಾರೆ. ಈ ವಿದ್ಯಮಾನದ ಫಲವಾಗಿ ಹೊರಬರುವ ಅಯಾನುಕಾರಕ ಕಿರಣಗಳನ್ನು ವಿಕಿರಣ ಪಟು ವಿಕಿರಣ ಎಂದು ಕರೆಯಲಾಗಿದೆ. ಅದಕ್ಕೆ ಬೆಕರಲ್ ಕಿರಣಗಳೆಂಬ ಹೆಸರೂ ಇದೆ.

ಪೊಟ್ಯಾಸಿಯಮ್ ಯೂರನೈಲ್ ಸಲೆೇೀಟ್‌ನಲ್ಲಿರುವುದು ಪೊಟ್ಯಾಸಿಯಮ್, ಯುರೇನಿಯಮ್, ಗಂಧಕ ಮತ್ತು ಆಕ್ಸಿಜನ್ – ನಾಲ್ಕು ಧಾತುಗಳು. ಈ ನಾಲ್ಕು ಧಾತುಗಳಲ್ಲಿ ಯುರೇನಿಯಮ್ ಒಂದನ್ನು ಬಿಟ್ಟು ಇತರ ಮೂರು ಧಾತುಗಳು ಇರುವ ಪೊಟ್ಯಾಸಿಯಮ್ ಸಲೆೇೀಟ್ ಹರಳು ವಿಕಿರಣಶೀಲವಲ್ಲ. ಆದುದರಿಂದ ವಿಕಿರಣಪಟುತ್ವ ಎಂಬುದು ಯುರೇನಿಯಮ್ ಧಾತುವಿನ ಗುಣ ಎಂದು ತೀರ್ಮಾನಿಸಬೇಕಾಯಿತು. ಯುರೇನಿಯಮ್ ಧಾತುವೇ ಆಗಲಿ, ಅದರ ಯಾವುದೇ ಸಂಯುಕ್ತವಾಗಲಿ, ಯುರೇನಿಯಮ್ ಉಳ್ಳ ಖನಿಜವಾಗಲಿ, ಅದರಲ್ಲಿ ಈ ವಿದ್ಯಮಾನ ಕಂಡು ಬರುವುದಾದ್ದರಿಂದ ಯುರೇನಿಯಮ್ ಪರಮಾಣುಗಳು ಅದಕ್ಕೆ ಕಾರಣ ಎಂದು ಗೊತ್ತಾಯಿತು. ವಿಕಿರಣಪಟುತ್ವವನ್ನು ಕುರಿತು ಸಂಶೋಧನೆ ಕೈಗೊಂಡ ಮೇರಿ ಕ್ಯೂರಿ ಮತ್ತು ಆಕೆಯ ಗಂಡ ಪಿಯರ್ ಕ್ಯೂರಿ ಇನ್ನೊಂದು ವಿಷಯವನ್ನು ಹೊರಗೆಡಹಿದರು. ಥೋರಿಯಮ್ ಧಾತು ಮತ್ತು ಅದರ ಸಂಯುಕ್ತಗಳೂ ವಿಕಿರಣಪಟು ಎಂದು ಅವರು ತೋರಿಸಿದರು. 1903ರ ಭೌತಶಾಸ್ತ್ರದ ನೊಬೆಲ್ ಬಹುಮಾನವನ್ನು ಬೆಕರೆಲ್, ಪಿಯರ್ ಕ್ಯೂರಿ ಮತ್ತು ಮೇರಿ ಕ್ಯೂರಿ – ಈ ಮೂವರಿಗೂ ಹಂಚಿ ಕೊಡಲಾಯಿತು.

ಕ್ಯೂರಿ ದಂಪತಿಗಳೂ ಬ್ರಿಟನ್ನಿನ ರುದರ್ಫರ್ಡ್ ಅವರೂ ನಡೆಸಿದ ಸಂಶೋಧನೆಯ ಫಲವಾಗಿ ಇನ್ನೊಂದು ಮುಖ್ಯ ಸಂಗತಿ ಗೊತ್ತಾಯಿತು. ವಿಕಿರಣಪಟು ಪದಾರ್ಥಗಳಿಂದ ಹೊರಬರುವ ವಿಕಿರಣ ವಾಸ್ತವವಾಗಿ ಒಂದು ಮಿಶ್ರಣ ಎಂದು ಕಂಡು ಬಂತು. ಸಾಕಷ್ಟು ಪ್ರಬಲವಾದ ವಿದ್ಯುತ್ ಕ್ಷೇತ್ರದಲ್ಲಿಟ್ಟರೆ ಬೆಕರಲ್ ಕಿರಣಗಳು ಕವಲೊಡೆಯುತ್ತವೆ (ಚಿತ್ರ 12). ಒಂದು ಶಾಖೆ ಋಣ ಇಲೆಕ್ಟ್ರೋಡ್ ಕಡೆಗೆ ಸ್ವಲ್ಪ ಮಾತ್ರ ಬಾಗಿ ಮುಂದುವರಿಯುತ್ತದೆ. ಆ ಶಾಖೆಗೆ ಆಲೇ ಕಿರಣ ಎಂಬ ಹೆಸರು ಬಂದಿದೆ. ಧನ ವಿದ್ಯುದಾವೇಶ ಉಳ್ಳ ಕಣಗಳ ಪ್ರವಾಹ ಅದು ಎಂಬುದು ಸ್ಪಷ್ಟ. ನಿಜವಾಗಿಯೂ ಅವು ಕಿರಣಗಳಲ್ಲ. ಆಲೇ ಕಣಪ್ರವಾಹ ಎಂದು ಅವುಗಳನ್ನು ಕರೆಯುವುದು ಯುಕ್ತ. ಧನ ಇಲೆಕ್ಟ್ರೋಡ್ ಕಡೆಗೆ ತುಂಬ ಬಾಗಿ ಮುಂದುವರಿಯುವ ಬೀಟ ಕಿರಣಗಳು ನಿಜಕ್ಕೂ ಋಣ ಆವೇಶ ಉಳ್ಳ ಬೀಟ ಕಣಗಳ ಪ್ರವಾಹ. ಯವ ಕಡೆಯೂ ಬಾಗದೆ ನೇರವಾಗಿ ಮುಂದುವರಿಯುವ ಗ್ಯಾಮ ಕಿರಣಗಳು ನಿಜವಾಗಿಯೂ ಕಿರಣಗಳು – ಎಕ್ಸ್ ಕಿರಣಗಳಂಥವು. ಆದರೆ ಅವಕ್ಕಿಂತ ತೀಕ್ಷ್ಣವಾದವು.

ಯುರೇನಿಯಮ್ ಮತ್ತು ಥೋರಿಯಮ್ ಪರಮಾಣುಗಳು ಅಸ್ಥಿರವಾಗಿದ್ದು ಅವುಗಳ ವಿಘಟನೆಯ ಫಲವಾಗಿ ಆಲೇ ಮತ್ತು ಬೀಟ ಕಣಗಳೂ ಗ್ಯಾಮ ಕಿರಣಗಳ ರೂಪದಲ್ಲಿ ಶಕ್ತಿಯೂ ಹೊರಬರುವುದೆಂಬುದು ಅನಂತರದ ಸಂಶೋಧನೆಗಳಿಂದ ಸಿದ್ಧವಾಯಿತು. ಪರಮಾಣುಗಳೇ ಅಂತಿಮವಲ್ಲ, ಅವುಗಳಿಗೂ ರಚನೆಯುಂಟು ಎಂಬ ತೀರ್ಮಾನ ಅನಿವಾರ್ಯವಾಯಿತು. ಅನಂತರದ ಸಂಶೋಧನೆಗಳ ಫಲವಾಗಿ ಪರಮಾಣುಗಳ ರಚನೆಯ ಬಗ್ಗೆ ನಮ್ಮ ಜ್ಞಾನ ವೃದ್ದಿಯಾಯಿತು. ಇದೆಲ್ಲವೂ ವಿಕಿರಣಪಟುತ್ವದ ಆಕಸ್ಮಿಕ ಆವಿಷ್ಕಾರದ ಪರಿಣಾಮವಾಗಿ ನಮಗೆ ದೊರೆತ ಬಳುವಳಿ.