ವೈದ್ಯಕೀಯಕ್ಕೆ ಸಂಬಂಧಿಸಿದಂತೆ, ಈಗ ನಡೆಯುತ್ತಿರುವುದು ಪ್ರತಿಜೀವಕಗಳ ಅಥವಾ ಆಂಟಿಬಯೊಟಿಕ್‌ಗಳ ಯುಗ. ಏಕೆಂದರೆ, ವೈರಸ್‌ಗಳಿಂದ ಬರುವ ರೋಗಗಳು ವಿನಾ ಉಳಿದೆಲ್ಲ ಸೋಂಕು ರೋಗಗಳನ್ನೂ ಪ್ರತಿಜೀವಕಗಳ ನೆರವಿನಿಂದ ಹತ್ತಿಕ್ಕಬಹುದಾಗಿದೆ. ಪ್ರತಿಜೀವಕಗಳ ವಿವೇಚನಾರಹಿತ ಬಳಕೆ ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗಿರುವುದು ನಿಜವೇ ಆದರೂ ಐವತ್ತು ಅರುವತ್ತು ವರ್ಷಗಳ ಕೆಳಗೆ ಮಾರಕ ರೋಗಗಳೆನಿಸಿದ್ದ ಕ್ಷಯ, ಟೈಫಾಯಿಡ್, ನ್ಯೂಮೋನಿಯ ಮುಂತಾದ ಹಲವಾರು ರೋಗಗಳ ಬಗ್ಗೆ ಇಂದು ಕಿಂಚಿತ್ತೂ ಭಯವಿಲ್ಲ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಈ ಪರಿಸ್ಥಿತಿಗೆ ಕಾರಣ, ವೈದ್ಯರ ಬತ್ತಳಿಕೆಯಲ್ಲಿರುವ ಹತ್ತಾರು ಪ್ರಬಲ ಪ್ರತಿಜೀವಕಗಳು.

ಪ್ರತಿಜೀವಕಗಳ ಯುಗ ಪ್ರಾರಂಭವಾದುದು ಎರಡನೆಯ ಜಾಗತಿಕ ಯುದ್ಧದ ಕಾಲದಲ್ಲಿ; ಪೆನಿಸಿಲಿನ್ ರಂಗದ ಮೇಲೆ ಕಾಣಿಸಿಕೊಂಡಾಗ. ಪೆನಿಸಿಲಿನ್ನಿನ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಕವನ್ನು ಪಡೆದ ಅಲೆಕ್ಸಾಂಡರ್ ಫ್ಲೆಮಿಂಗ್ ಮೊತ್ತಮೊದಲ ಆ ಪ್ರತಿಜೀವಕವನ್ನು ಕಂಡುಹಿಡಿದುದು ಕೇವಲ ಆಕಸ್ಮಿಕವಾಗಿ ಎನ್ನಬೇಕು. ಹಾಗೆಂದ ಮಾತ್ರಕ್ಕೆ ಫ್ಲೆಮಿಂಗ್‌ನ ಸಾಧನೆ ಗೌಣವಾದುದು, ಅದು ಅಗಣ್ಯ ಎಂದು ಭಾವಿಸಬಾರದು. ಫ್ಲೆಮಿಂಗ್‌ಗಲ್ಲದೆ ಬೇರೆ ಯಾರಿಗಾದರೂ ಆ ಆಕಸ್ಮಿಕ ಇದಿರಾಗಿದ್ದರೆ, ಅದರ ಪರಿಣಾಮ ಬರಡಾಗಿರುತ್ತಿತ್ತು. ಫ್ಲೆಮಿಂಗ್ ತೀಕ್ಷ್ಣಮತಿಯವರಾಗಿದ್ದುದರಿಂದ ಮತ್ತು ತಮಗೆ ಇದಿರಾದ ಆಕಸ್ಮಿಕದಲ್ಲಿ ಹುದುಗಿದ್ದ ಚಿನ್ನವನ್ನು ಗುರುತಿಸಲು ಅವರ ಬುದ್ದಿ ಸಿದ್ಧವಾಗಿದ್ದುದರಿಂದ ಪೆನಿಸಿಲಿನ್ನಿನ ಆವಿಷ್ಕಾರವಾಯಿತು.

ಬಡ ಕುಟುಂಬದಲ್ಲಿ ಹುಟ್ಟಿ ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರಿಂದ, ಫ್ಲೆಮಿಂಗ್ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಶಾಲಾಶಿಕ್ಷಣವನ್ನು ಮುಗಿಸಿದೊಡನೆಯೇ ಜೀವನೋಪಾಯಕ್ಕಾಗಿ ಒಂದು ಕೆಲಸಕ್ಕಾಗಿ ಹುಡುಕಾಡಿದರು. ಹಡಗುಗಾರಿಕೆ ಕಂಪನಿಯೊಂದರಲ್ಲಿ ಗುಮಾಸ್ತೆಯ ಕೆಲಸ ಸಿಕ್ಕಿತು. ತುಂಬ ಮೇಧಾವಿಯಾದ ಬಾಲಕನಿಗೆ ಆ ಕೆಲಸ ತಕ್ಕುದಾಗಿರಲಿಲ್ಲ; ಆದರೆ ಬೇರೆ ಮಾರ್ಗವಿಲ್ಲದೆ ಅಲ್ಲಿ ಐದು ವರ್ಷ ಕೆಲಸ ಮಾಡಿ, ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಒಂದು ವಿದ್ಯಾರ್ಥಿವೇತನವನ್ನು ಗಳಿಸಿಕೊಂಡು ಲಂಡನ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೈಗೊಂಡರು. ವಿದ್ಯಾರ್ಥಿ ದೆಸೆಯಲ್ಲಿ ತುಂಬ ಪ್ರತಿಭಾವಂತರೆನ್ನಿಸಿಕೊಂಡು 1908ರಲ್ಲಿ, ತಮ್ಮ 27ನೆಯ ವಯಸ್ಸಿನಲ್ಲಿ, ವೈದ್ಯಕೀಯ ಪದವೀಧರರಾದರು. ಮೊದಲನೆಯ ಜಾಗತಿಕ ಯುದ್ಧದಲ್ಲಿ ಸೇನಾ ಸೇವೆಯಲ್ಲಿರುವಾಗ ಸಂಶೋಧನೆಯನ್ನು ಪ್ರಾರಂಭಿಸಿ 1922ರಲ್ಲಿ ಲೈಸೊಜೈಮ್ ಎಂಬ ಒಂದು ಪ್ರೋಕಂಡುಹಿಡಿದರು. ಕಣ್ಣೀರಿನಲ್ಲಿ ಮತ್ತು ಲೋಳೆಯಾಗಿರುವ ದೈಹಿಕ ಸ್ರಾವಗಳಲ್ಲಿ ಕಾಣಸಿಕ್ಕುವ ಈ ಪ್ರೋಬ್ಯಾಕ್ಟೀರಿಯಾಗಳಿಗೆ ಮಾರಕವಾದುದೆಂಬುದು ಪತ್ತೆಯಾಯಿತು.

1928ರಲ್ಲಿ ಫ್ಲೆಮಿಂಗ್‌ರವರು ಲಂಡನ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಸೇಂಟ್ ಮೇರೀಸ್ ಆಸ್ಪತ್ರೆಯಲ್ಲಿ ಬ್ಯಾಕ್ಟೀರಿಯಾಲಜಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಆಗ ಅವರು ಆಸಕ್ತರಾಗಿದ್ದುದು ಸ್ಟೆಫಲೊಕಾಕಸ್ ಎಂಬ ಒಂದು ಬಗೆಯ ಬ್ಯಾಕ್ಟೀರಿಯಗಳನ್ನು ಕುರಿತ ಸಂಶೋಧನೆಯಲ್ಲಿ. ಚರ್ಮದ ಮೇಲೆ ಕುರುಗಳನ್ನುಂಟು ಮಾಡುವ ಈ ಬ್ಯಾಕ್ಟೀರಿಯಗಳು ಕಾಕಸ್ ಗುಂಪಿನವು. ಕಾಕಸ್‌ಗಳೆಲ್ಲ ಗೋಳಾಕಾರದವು. ಪ್ರಯೋಗದ ಉದ್ದೇಶಕ್ಕಾಗಿ ಬ್ಯಾಕ್ಟೀರಿಯಗಳನ್ನು ಕೃಷಿ ಮಾಡಲು ಅಗಲವಾದ ಮತ್ತು ಹೆಚ್ಚು ಆಳವಿಲ್ಲದ ತೆಳುಗಾಜಿನ ತಳಿಗೆಗಳನ್ನು ಬಳಸುತ್ತಾರೆ. ಮೊದಲ ಬಾರಿ ಅಂಥ ತಳಿಗೆಗಳನ್ನು ಜರ್ಮನ್ ವಿಜ್ಞಾನಿ ಪೆಟ್ರಿ ಬಳಸಿದನಾದುದರಿಂದ ಅವಕ್ಕೆ ಪೆಟ್ರಿ ತಳಿಗೆಗಳು ಎಂಬ ಹೆಸರು ಬಂದಿದೆ. ತಳಿಗೆಯಲ್ಲಿ ಪೌಷ್ಟಿಕಾಂಶಗಳಿರುವ ದ್ರವವನ್ನು ತೆಗೆದುಕೊಂಡು, ಬ್ಯಾಕ್ಟೀರಿಯ ಉಳ್ಳ ದ್ರವದ ಒಂದು ಸಣ್ಣ ಹನಿಯನ್ನು ಅದರಲ್ಲಿ ಉದುರಿಸುತ್ತಾರೆ. ಬ್ಯಾಕ್ಟೀರಿಯಗಳು ಆ ಮಾಧ್ಯಮದಲ್ಲಿ ಸಿಕ್ಕುವ ಪೌಷ್ಟಿಕಾಂಶಗಳನ್ನು ಉಪಯೋಗಿಸಿಕೊಂಡು ಸಂತಾನ ವೃದ್ದಿ ಮಾಡಿಕೊಳ್ಳುತ್ತವೆ. ಕೆಲವು ಗಂಟೆಗಳಲ್ಲಿ ಆ ದ್ರವ ಮಾಧ್ಯಮದ ತುಂಬ ಬ್ಯಾಕ್ಟೀರಿಯಗಳ ಸಂದಣಿ ಹರಡಿಕೊಳ್ಳುತ್ತದೆ. ಪೆಟ್ರಿ ತಳಿಗೆಗಳಲ್ಲಿ ಈ ರೀತಿ ತಯಾರಿಸಿದ ಸ್ಟೆಫಲೊಕಾಕಸ್ ಕೃಷಿಕೆಗಳನ್ನು ಫ್ಲೆಮಿಂಗ್ ತಮ್ಮ ಪ್ರಯೋಗಗಳಿಗೆ ಬಳಸುತ್ತಿದ್ದರು.

ಒಮ್ಮೆ ಯಾವುದೋ ಪ್ರಯೋಗಕ್ಕಾಗಿ ಬಳಸಿದ ಸ್ಟೆಫಲೊಕಾಕಸ್ ಕೃಷಿಕೆಗಳಿದ್ದ ಹಲವು ಪೆಟ್ರಿ ತಳಿಗೆಗಳು ಪ್ರಯೋಗಶಾಲೆಯ ಮೇಜಿನ ಮೇಲಿದ್ದುವು. ಫ್ಲೆಮಿಂಗ್ ಮೂರು ನಾಲ್ಕು ದಿನ ರಜದ ಮೇಲೆ ಹೋಗಬೇಕಾಗಿತ್ತು. ತಳಿಗೆಗಳನ್ನು ಉಪಯೋಗಿಸಿ ಆಗಿತ್ತು. ಆದರೂ ಅವು ಏತಕ್ಕಾದರೂ ಬೇಕಾಗಬಹುದೆಂದು ಯೋಚಿಸಿ, ಅವುಗಳೊಳಕ್ಕೆ ದೂಳು ಪಾಳು ಬೀಳದಂತೆ ತೆಳುವಾದ ಗಾಜಿನ ಬಿಲ್ಲೆಗಳಿಂದ ತಳಿಗೆಗಳನ್ನು ಮುಚ್ಚಲು ತಮ್ಮ ಸಹಾಯಕಿಗೆ ಹೇಳಿದ್ದರು. ಆಕೆ ಹಾಗೆ ಮಾಡಲು ಮರೆತಿದ್ದಳು. ಸಾಲದುದಕ್ಕೆ ಅವುಗಳ ಪೈಕಿ ಕೆಲವು ತಳಿಗೆಗಳು ಕಿಟಕಿಯ ಬಳಿ ಇದ್ದುದರಿಂದ ಹೊರಗಿನ ದೂಳು ಬಂದು ಅದರಲ್ಲಿ ಬೀಳಲು ಪರಿಸ್ಥಿತಿ ಪ್ರಶಸ್ತವಾಗಿತ್ತು.

ರಜೆಯಿಂದ ಹಿಂದಿರುಗಿದ ಫ್ಲೆಮಿಂಗ್ ಮುಚ್ಚಿಲ್ಲದ ಆ ಪೆಟ್ರಿ ತಳಿಗೆಗಳನ್ನು ಗಮನಿಸಿ, ಹೇಗಿದ್ದರೂ ಅವುಗಳ ಕೆಲಸ ಮುಗಿದಿದೆಯಲ್ಲಾ ಎಂದುಕೊಂಡು ಅವುಗಳನ್ನು ತೊಳೆದಿಡಲು ಮುಂದಾದರು. ಅಷ್ಟರಲ್ಲಿ ಕಿಟಕಿಯ ಬಳಿ ಇದ್ದ ತಳಿಗೆಗಳಲ್ಲಿದ್ದ ಸ್ಟೆಫಲೊಕಾಕಸ್ ಕೃಷಿಕೆಗೆ ಬೂಷ್ಟು ಬಂದಿದ್ದುದು ಅವರ ಗಮನಕ್ಕೆ ಬಂದಿತು. ಹಲವು ದಿನಗಳ ಕಾಲ ಗಾಳಿಯಲ್ಲಿ ಬಿಟ್ಟಿದ್ದ ತೆಂಗಿನ ಕಾಯಿ ಹೋಳಿನ ಮೇಲೆ, ಬ್ರೆಡ್ಡಿನ ಮೇಲೆ ಕಾಣಿಸಿಕೊಳ್ಳುವ ಬೂಷ್ಟಿನಂತೆ ಆ ಕೃಷಿಕೆಗಳ ಮೇಲೂ ಹಸುರು – ನೀಲಿ ಬಣ್ಣದ ಮಚ್ಚೆಗಳಂತೆ ಬೂಷ್ಟು ಕಾಣಿಸುತ್ತಿತ್ತು. ಅಷ್ಟೇ ಆಗಿದ್ದರೂ ಅವರು ಆ ತಳಿಗೆಗಳನ್ನು ಸುಮ್ಮನೆ ತೊಳೆದಿಟ್ಟುಬಿಡುತ್ತಿದ್ದರೇನೋ. ತೀಕ್ಷ್ಣ ವೀಕ್ಷಕರಾಗಿದ್ದ ಫ್ಲೆಮಿಂಗ್ ಇನ್ನೊಂದು ಸ್ವಾರಸ್ಯವನ್ನು ಗಮನಿಸಿದರು. ಒಂದೊಂದು ಬೂಷ್ಟು ಮಚ್ಚೆಯ ಸುತ್ತಲೂ ಸ್ವಲ್ಪ ದೂರ ಸ್ಟೆಫಲೊಕಾಕಸ್ ಬ್ಯಾಕ್ಟೀರಿಯಗಳು ಕಣ್ಮರೆಯಾಗಿದ್ದುವು. ತುಂಬ ಜಾಗರೂಕತೆಯಿಂದ ಪರೀಕ್ಷಿಸಿ ನೋಡಿದರು. ಪ್ರತಿಯೊಂದು ಬೂಷ್ಟು ಮಚ್ಚೆಯ ಸುತ್ತಲೂ ಅಂಥ ಬ್ಯಾಕ್ಟೀರಿಯರಹಿತ ಪ್ರದೇಶ ಇದ್ದುದನ್ನು ಅವರು ಗಮನಿಸಿದರು. ಹಿಂದೆ ಲೈಸೊಜೈಮ್ ಕುರಿತ ಸಂಶೋಧನೆಯಲ್ಲಿ ಅವರು ತೊಡಗಿದ್ದಾಗ, ಬ್ಯಾಕ್ಟೀರಿಯ ಕೃಷಿಕೆಯಲ್ಲಿ ಒಂದು ಹನಿ ಲೈಸೊಜೈಮ್ ಉದುರಿಸಿದಾಗ ಹನಿ ಬಿದ್ದ ಸ್ಥಳದಲ್ಲಿ ಬ್ಯಾಕ್ಟೀರಿಯಗಳು ಕಣ್ಮರೆಯಾಗುತ್ತಿದ್ದುದನ್ನು ಪದೇ ಪದೇ ನೋಡಿ ಅಭ್ಯಾಸವಾಗಿದ್ದ ಅವರ ಕಣ್ಣುಗಳು ಬೂಷ್ಟು ಮಚ್ಚೆಯ ಸುತ್ತ ಬ್ಯಾಕ್ಟೀರಿಯಗಳು ಕಣ್ಮರೆಯಾಗಿದ್ದುದನ್ನು ಸುಲಭವಾಗಿ ಗುರುತಿಸಿದುವು. ಆ ಬೂಷ್ಟು ಒಸರುತ್ತಿದ್ದ ಯಾವುದೋ ರಾಸಾಯನಿಕ ಪದಾರ್ಥ, ಲೈಸೊಜೈಮ್‌ನಂತೆಯೇ, ಬ್ಯಾಕ್ಟೀರಿಯಗಳಿಗೆ ಮಾರಕವಾಗಿರಬಹುದು ಎಂದು ಅವರು ಊಹಿಸಿದರು.

ಚಿಮುಟದಿಂದ ಆ ಬೂಷ್ಟನ್ನು ತೆಗೆದು ಅದನ್ನು ಪ್ರತ್ಯೇಕವಾಗಿ ಕೃಷಿಮಾಡಿದರು. ಸಾಮಾನ್ಯವಾಗಿ ಹಳಸಲು ಬ್ರೆಡ್ಡಿಗೆ ತಗಲುವ ಬೂಷ್ಟಿನಂಥದೇ ಆದ ಪೆನಿಸಿಲಿಯಮ್ ನೊಟ್ಯಾಟಮ್ ಎಂಬ ಒಂದು ಜಾತಿಯ ಬೂಷ್ಟೆಂದು ಅದನ್ನು ಗುರುತಿಸಿದರು. ಅದು ಒಸರುವ ರಾಸಾಯನಿಕ ಪದಾರ್ಥಕ್ಕೆ ಪೆನಿಸಿಲಿನ್ ಎಂಬ ಹೆಸರು ಕೊಟ್ಟರು. ಆ ರಾಸಾಯನಿಕ ಸ್ಟೆಫಲೊಕಾಕಸ್‌ಗೆ ಮಾತ್ರ ಮಾರಕವಾದುದೇ ಅಥವಾ ಇನ್ನಿತರ ಬ್ಯಾಕ್ಟೀರಿಯಗಳಿಗೂ ಮಾರಕವಾದುದೇ ಎಂದು ಪರೀಕ್ಷಿಸಲು ಪೆಟ್ರಿ ತಳಿಗೆಯಲ್ಲಿ ಆ ಬೂಷ್ಟನ್ನಿರಿಸಿ ಅದರ ಸಮೀಪದಲ್ಲಿ ಇತರ ಬ್ಯಾಕ್ಟೀರಿಯಗಳನ್ನು ಕೃಷಿ ಮಾಡಲು ಯತ್ನಿಸಿದರು. ಕೆಲವು ಜಾತಿಯ ಬ್ಯಾಕ್ಟೀರಿಯಗಳು ಆ ಬೂಷ್ಟನ್ನು ಲೆಕ್ಕಿಸದೆಯೇ ಅದರ ನೆರೆಹೊರೆಯಲ್ಲಿಯೇ ತಾವೂ ಪುಷ್ಕಳವಾಗಿ ಬೆಳೆದುವು. ಇನ್ನು ಕೆಲವು ಅದರ ಸಮೀಪದಲ್ಲಿ ಬೆಳೆಯಲಿಲ್ಲ; ನಾಶವಾಗಿ ಹೋದುವು. ಹಾಗೆ ಪೆನಿಸಿಲಿನ್‌ನಿಂದ ನಾಶವಾದ ಬ್ಯಾಕ್ಟೀರಿಯಗಳಲ್ಲಿ ಹಲವಾರು ರೋಗಕಾರಕ ಬ್ಯಾಕ್ಟೀರಿಯಗಳಿದ್ದುವು. ಈ ವಿಷಯ ಅವರಿಗೆ ಆಶಾದಾಯಕವಾಗಿ ಕಂಡಿತು. ಏಕೆಂದರೆ ಆ ರೋಗಗಳಿಂದ ನರಳುವವರಿಗೆ ಪೆನಿಸಿಲಿನ್ ಕೊಟ್ಟು ರೋಗಕಾರಕವನ್ನು ನಾಶಮಾಡಿ ರೋಗವನ್ನು ವಾಸಿ ಮಾಡಬಹುದಲ್ಲವೇ ಎನ್ನಿಸಿತು. ಅದು ಕಾರ್ಯಸಾಧ್ಯವೇ ಎಂದು ಪರೀಕ್ಷಿಸಲು ಮನುಷ್ಯರಿಗೆ ಪೆನಿಸಿಲಿನ್‌ನಿಂದ ಅಪಾಯವಿಲ್ಲವೇ ಎಂದು ಪರೀಕ್ಷಿಸಿ ನೋಡಬೇಕಾಗಿತ್ತು ಅದಕ್ಕಾಗಿ ಅವರು ಇನ್ನೊಂದು ಪೆಟ್ರಿ ತಳಿಗೆಯಲ್ಲಿ ಆ ಬೂಷ್ಟನ್ನು ತೆಗೆದುಕೊಂಡು ಅದರಲ್ಲಿ ಮನುಷ್ಯರ ಬಿಳಿಯ ರಕ್ತ ಕಣಗಳನ್ನು ಹಾಕಿ ನೋಡಿದರು. ಅವುಗಳಿಗೆ ಏನೂ ಆಗಲಿಲ್ಲ. ಸಂಶೋಧನೆಯನ್ನು ಅಲ್ಲಿಂದ ಮುಂದುವರಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಬೂಷ್ಟು ಒಸರುವ ಪೆನಿಸಿಲಿನ್ ಅನ್ನು ರಾಸಾಯನಿಕವಾಗಿ ಪ್ರತ್ಯೇಕಿಸಿ ಅದನ್ನು ರೋಗಿಗಳ ಮೇಲೆ ಪ್ರಯೋಗಿಸಿ ನೋಡಬೇಕಾಗಿತ್ತು. ರಸಾಯನ ವಿಜ್ಞಾನದಲ್ಲಿ ಅವರಿಗೆ ಅಷ್ಟು ಪರಿಶ್ರಮವಿರಲಿಲ್ಲ.


 

ಆ ಕೆಲಸವನ್ನು ಮುಂದುವರಿಸಿದವರು ಆಸೆಲಿಯನ್ – ಬ್ರಿಟಿಷ್ ವಿಜ್ಞಾನಿ, ಪೊರಿ ಮತ್ತು ಜರ್ಮನ್ – ಬ್ರಿಟಿಷ್ ವಿಜ್ಞಾನಿ ಚೇನ್, ಎರಡನೆಯ ಜಾಗತಿಕ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಿ ಅವರನ್ನುಳಿಸಲು ಪ್ರಬಲ ಪೂತಿನಾಶಕಗಳು ಬೇಕಾಗಿತ್ತು. ಪೊರಿ ಮತ್ತು ಚೇನ್‌ರವರು ಫ್ಲೆಮಿಂಗ್‌ರವರ ಸಂಶೋಧನಾ ಫಲಿತಾಂಶಗಳಿಂದ ಆಕರ್ಷಿತರಾಗಿ ಪೆನಿಸಿಲಿನ್ನನ್ನು ರಾಸಾಯನಿಕವಾಗಿ ಪ್ರತೆಕಿಸುವ ಕೆಲಸವನ್ನು ಕೈಗೆತ್ತಿಕೊಂಡು ಜಯಶೀಲರಾದರು. ೧೯೪೩ರಲ್ಲಿ ಟ್ಯೂನೀಷಿಯದಲ್ಲಿ ಮತ್ತು ಸಿಸಿಲಿಯಲ್ಲಿ ಗಾಯಾಳುಗಳ ಮೇಲೆ ಪ್ರಯೋಗಿಸಿ ಪೆನಿಸಿಲಿನ್ ಪರಿಣಾಮಕಾರಿ ಎಂಬುದನ್ನು ದೃಢಪಡಿಸಿಕೊಂಡರು. ೧೯೪೫ರಲ್ಲಿ ಫ್ಲೆಮಿಂಗ್, ಪೊರಿ ಮತ್ತು ಚೇನ್‌ರವರಿಗೆ ನೊಬೆಲ್ ಪಾರಿತೋಷಿಕವನ್ನು ನೀಡಿ ಗೌರವಿಸಲಾಯಿತು.

ಪೆನಿಲಿಸಿಲಿನ್ ಗಳಿಸಿದ ಯಶಸ್ಸಿನಿಂದ ಪೆರಿತರಾದ ಇತರ ವಿಜ್ಞಾನಿಗಳು ಈ ಕೆತ್ರವನ್ನು ಪ್ರವೇಶಿಸಿದರು. ಪೆನಿಲಿಸಿಲನ್ನಿನಂತೆಯೇ ಸೂಕ್ಷಜೀವಿಯೊಂದರಿಂದ ಉತ್ಪಾದಿತವಾಗಿ, ಬೇರೊಂದು ರೋಗಕಾರಕ ಸೂಕ್ಷ್ಮಜೀವಿಗೆ ಮಾರಕವಾಗಿದ್ದು, ಮನುಷ್ಯರಿಗೆ ವಿಷಕರವಲ್ಲದಿರುವ ಅಂಥ ರಾಸಾಯನಿಕಗಳಿಗಾಗಿ ಹುಡುಕಾಡತೊಡಗಿದರು. ಹಾಗೆ ದೊರೆತ ಎರಡನೆಯ ಅಂಥ ರಾಸಾಯನಿಕವೆಂದರೆ, ರಟ್ಜರ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದ ರಷ್ಯನ್ – ಅಮೆರಿಕನ್ ವಿಜ್ಞಾನಿ ವಾಕ್ಸ್‌ಮನ್ ಅವರು ವ್ಯವಸಾಯದ ಮಯ್ಣಿನಲ್ಲಿರುವ ಸ್ಟೆಪ್ಟೊಮ್ಯೆಸಿಸ್ ಎಂಬ ಬೂಷ್ಟಿನಿಂದ ಪಡೆದ ಸ್ಟೆಪ್ಟೊಮ್ಯೆಸಿನ್, ಕ್ಷಯರೋಗದ ವಿರುದ್ಧ ಇದನ್ನು ಬಳಸಲಾಯಿತು. ಅಂಥ ರಾಸಾಯನಿಕ ಪದಾರ್ಥಗಳಿಗೆ ಆಂಟಿಬಯೊಟಿಕ್ (ಜೀವಿ ವಿರೋಧಿ) ಎಂಬ ಹೆಸರನ್ನು ನೀಡಿದವರು ವಾಕ್ಸ್‌ಮನ್ ಅವರೇ. ಮುಂದೆ ಅಂಥ ಹಲವಾರು ಪ್ರತಿಜೀವಕಗಳು ಬಂದುವು. ಇಂದು ಅವು ವೈದ್ಯಕೀಯ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ.