ಯುದ್ಧೋದ್ದೇಶಗಳಿಗೆ ವಿಮಾನಗಳನ್ನು ಮೊತ್ತಮೊದಲು ಬಳಸಿದುದು 1939–45 ರಲ್ಲಿ ನಡೆದ ಎರಡನೆಯ ಜಾಗತಿಕ ಯುದ್ಧದಲ್ಲಿ. ಸಹಜವಾಗಿಯೇ ವಿಮಾನಗಳ ಬಳಕೆಯಲ್ಲಿ ಕಂಡುಬರುವ ಸಾಧಕ ಬಾಧಕಗಳ ಬಗ್ಗೆ ಆಗಿನ್ನೂ ಹೆಚ್ಚು ತಿಳಿದಿರಲಿಲ್ಲ. ವಿಮಾನಗಳ ಕಾರ್ಯಾಚರಣೆಯಲ್ಲಿ ನಾವು ಎದುರಿಸಬೇಕಾಗುವ ಸಮಸ್ಯೆಗಳು ಒಂದೊಂದಾಗಿ ಗೊತ್ತಾದಂತೆ ಆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಪ್ರಯತ್ನಗಳೂ ನಡೆಯುತ್ತಿದ್ದುವು.

ಅಂಥ ಒಂದು ಸಮಸ್ಯೆ ಎಂದರೆ, ವಿಮಾನಗಳ ರೆಕ್ಕೆಗಳ ಮೇಲೆ ಪದೇ ಪದೇ ಮಂಜುಗಡ್ಡೆ ಶೇಖರಗೊಳ್ಳುತ್ತಿದ್ದುದು. ಯುದ್ಧ ಕಾರ್ಯಗಳಿಗೆ ವಿಮಾನವನ್ನು ಬಳಸುವಾಗ ಶತ್ರುಗಳಿಂದ ರಕ್ಷಣೆ ಪಡೆಯಲು ತುಂಬ ಎತ್ತರದಲ್ಲಿ ಹಾರಾಟ ನಡೆಸಬೇಕಾಗುತ್ತಿತ್ತು. ಎತ್ತರದಲ್ಲಿ ಉಷ್ಣತೆ ತುಂಬ ಕಡಿಮೆ ಇರುತ್ತಿದ್ದುದರಿಂದ ಅಲ್ಲಿ ಲಭ್ಯವಿದ್ದ ನೀರಾವಿ ಕೆಲವೊಮ್ಮೆ ಘನೀಭವಿಸುತ್ತಿತ್ತು. ವಿಮಾನಗಳ ರೆಕ್ಕೆಗಳ ಮೇಲೆ ಬರ್ಫದ ರಾಶಿ ರೂಪುಗೊಂಡು ತೊಂದರೆಯುಂಟಾಗುತ್ತಿತ್ತು. ಬರ್ಫ ರೂಪುಗೊಳ್ಳಲು ಶೈತ್ಯ ಒಂದೇ ಸಾಲದೆಂಬುದು ಆ ವೇಳೆಗಾಗಲೇ ಚೆನ್ನಾಗಿ ತಿಳಿದಿತ್ತು. ವಾಯುವಿನಲ್ಲಿ ನೀರಾವಿ ಹೇರಳವಾಗಿದ್ದು, ಉಷ್ಣತೆ 0 ಡಿಗ್ರಿ ಸೆಲ್ಸಿಯಸ್‌ಗಿಂತ ಹಲವಾರು ಡಿಗ್ರಿಗಳಷ್ಟು ಕೆಳಕ್ಕಿಳಿದರೂ ಕೆಲವೊಮ್ಮೆ ಬರ್ಫ ರೂಪುಗೊಳ್ಳುವುದಿಲ್ಲ. ಅದಕ್ಕೆ ಕಾರಣ, ಬರ್ಫದ ಹರಳುಗಳು ರೂಪುಗೊಳ್ಳಲು ಆಸರೆ ಏನೂ ಇಲ್ಲದಿರುವುದು. ದೂಳು ಕಣಗಳಂಥ ಯಾವುದಾದರೂ ಕಣಗಳು ವಾತಾವರಣದಲ್ಲಿದ್ದರೆ, ಅವುಗಳ ಮೇಲೆ ಬರ್ಫದ ಹರಳುಗಳು ಕ್ಷಿಪ್ರವಾಗಿ ಬೆಳೆಯುತ್ತವೆ. ಹಾಗಾದರೆ ವಿಮಾನಗಳ ರೆಕ್ಕೆಗಳ ಮೇಲೆ ಬರ್ಫ ರಾಶಿಗೂಡಲು ಪ್ರಶಸ್ತವಾದ ಪರಿಸ್ಥಿತಿಗಳು ಯಾವುವು, ಮಂಜುಗಡ್ಡೆ ಹಾಗೆ ರಾಶಿಗೂಡದಿರಲು ಏನು ಮಾಡಬೇಕು ಎಂಬ ಪ್ರಶ್ನೆಗಳು ಎದ್ದುವು. ಈ ಸಮಸ್ಯೆಗಳನ್ನು ಕುರಿತು ಸಂಶೋಧನೆ ಕೈಗೊಂಡವರಲ್ಲಿ ಜನರಲ್ ಎಲೆಕ್ಟ್ರಿಕ್ ಕಾರ್ಪೊರೇಷನ್ನಿನ ಸಂಶೋಧನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೊಬೆಲ್ ಪ್ರಶಸ್ತಿ ವಿಜೇತ ಇರ್ವಿಂಗ್ ಲ್ಯಾಂಗ್‌ಮ್ಯೂರ್ ಒಬ್ಬರು. ಅದೇ ಸಂಸ್ಥೆಯಲ್ಲಿದ್ದ ವಿನ್ಸೆಂಟ್ ಜೋಸೆಪ್ ಷೀಫರ್ ಎಂಬಾತನನ್ನು ಲ್ಯಾಂಗ್‌ಮ್ಯೂರ್ ಸಹಾಯಕನನ್ನಾಗಿ ನೇಮಿಸಿಕೊಂಡರು.

ಷೀಫರ್, ನ್ಯೂಯಾರ್ಕ್ ಸಂಸ್ಥಾನದ ಷೆನೆಕ್ಟಡಿ ಎಂಬಲ್ಲಿ ಜನಿಸಿದವನು. ಅವನಿಗೆ ವಿದ್ಯಾರ್ಹತೆ ಅಷ್ಟೇನೂ ಇರಲಿಲ್ಲವಾದರೂ ಚುರುಕು ಬುದ್ದಿಯವ; ಯಾವ ಕೆಲಸವನ್ನು ವಹಿಸಿಕೊಂಡರೂ ಅದರಲ್ಲಿ ಆಸಕ್ತಿ ವಹಿಸಿ, ಸಂಬಂಧಪಟ್ಟ ಎಲ್ಲವನ್ನೂ ಅಧ್ಯಯನ ಮಾಡಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಅದ್ದರಿಂದಲೇ ಅವನನ್ನು ಲ್ಯಾಂಗ್‌ಮ್ಯೂರ್ ಸಹಾಯಕನನ್ನಾಗಿ ನೇಮಿಸಿಕೊಂಡುದು.

ಷೀಫರ್ ತನ್ನ ಪ್ರಯೋಗಗಳಿಗಾಗಿ –23 ಡಿಗ್ರಿ ಸೆ. ಉಷ್ಣತೆಗೆ ಶೈತ್ಯೀಕರಿಸಿದ ಒಂದು ಸಂಪುಟವನ್ನು ನಿರ್ಮಿಸಿಕೊಂಡ. ಅದರಲ್ಲಿ ಯಾವ ಬಗೆಯ ಕಣಗಳನ್ನೊದಗಿಸಿದರೆ ಅದರೊಳಗಿನ ನೀರು ಘನೀಭವಿಸಿ ಬರ್ಫವನ್ನು ಉತ್ಪತ್ತಿ ಮಾಡುವುದೆಂದು ಪರೀಕ್ಷಿಸಲು ಪ್ರಯೋಗಗಳನ್ನು ನಡೆಸುತ್ತಿದ್ದ.

ಜುಲೈ 1946 ರಲ್ಲಿ ಒಂದು ದಿನ ಬಿಸಿಲಿನ ಬೇಗೆ ತುಂಬಾ ಹೆಚ್ಚಾಗಿತ್ತು. ಷೀಫರ್‌ನ ಪ್ರಯೋಗಗಳಿಗೆ ಉಪಯೋಗಿಸುತ್ತಿದ್ದ ಶೈತೀಕೃತ ಸಂಪುಟದ ಉಷ್ಣತೆಯನ್ನು 0 ಡಿಗ್ರಿ ಸೆಲ್ಸಿಯಸ್‌ಗಿಂತ ಸಾಕಷ್ಟು ಕೆಳಗಡೆ ಉಳಿಸಿಕೊಳ್ಳುವುದು ಅವನಿಗೆ ಕಷ್ಟವಾಗುತ್ತಿತ್ತು. ಅದಕ್ಕಾಗಿ ಸಂಪುಟದೊಳಕ್ಕೆ ಸ್ವಲ್ಪ ಘನ ಕಾರ್ಬನ್ ಡೈಆಕ್ಸೈಡ್ ಉದುರಿಸಿದ.

ಕಾರ್ಬನ್ ಡೈ ಆಕ್ಸೈಡ್ ಸಾಮಾನ್ಯ ಪರಿಸ್ಥಿತಿಗಳಲ್ಲಿ ಅನಿಲ. ಅದರ ಘನ ರೂಪವನ್ನು ತಯಾರಿಸುವುದು ಅಷ್ಟೇನೂ ಕಷ್ಟವಲ್ಲ. ಸೋಡ, ಲೆಮನೇಡ್ ಮುಂತಾದ ಪಾನೀಯಗಳನ್ನು ತಯಾರಿಸುವವರು ಕಾರ್ಬನ್ ಡೈಆಕ್ಸೈಡ್ ತುಂಬಿದ ಉಕ್ಕಿನ ಸಿಲಿಂಡರನ್ನು ಇಟ್ಟುಕೊಳ್ಳುತ್ತಾರಷ್ಟೆ? ಅದರ ತಳಭಾಗದಲ್ಲಿ ದ್ರವ ಕಾರ್ಬನ್ ಡೈಆಕ್ಸೈಡ್ ಇರುತ್ತದೆ. ಮೇಲ್ಭಾಗದಲ್ಲಿ ಅನಿಲವಿರುತ್ತದೆ. ಮೇಲ್ಗಡೆಯ ನಲ್ಲಿಯನ್ನು ತಿರುಗಿಸಿದರೆ ಅನಿಲ ಹೊರಬರುತ್ತದೆ. ಸಿಲಿಂಡರನ್ನು ತಲೆಕೆಳಗು ಮಾಡಿ, ನಲ್ಲಿ ತಿರುಗಿಸಿದರೆ ದ್ರವವೇ ಹೊರಬರುತ್ತದೆ. ಅದು ಒಂದು ಪಾತ್ರೆಯಲ್ಲಿ ಸಂಗ್ರಹಗೊಳ್ಳುವಂತೆ ಮಾಡಿದರೆ, ದ್ರವ ಕಾರ್ಬನ್ ಡೈ ಆಕ್ಸೈಡ್‌ನ ಕುದಿಬಿಂದು –78  ಡಿಗ್ರಿ ಸೆಲ್ಸಿಯಸ್ ಆದುದರಿಂದ ಪಾತ್ರೆಯೊಳಕ್ಕೆ ಬೀಳುತ್ತಿದ್ದಂತೆಯೇ ಅದು ಕುದಿಯತೊಡಗುತ್ತದೆ. ಕುದಿದು ಆವಿಯಾಗಲು ಆವೀಕರಣ ಗುಪ್ರೋಬೇಕಲ್ಲವೇ? ಅದನ್ನು ಉಳಿದ ದ್ರವ ಕಾರ್ಬನ್ ಡೈ ಆಕ್ಸೈಡ್‌ನಿಂದ ಪಡೆದುಕೊಳ್ಳುವುದರಿಂದ ದ್ರವದ ಉಷ್ಣತೆ ಕ್ಷಿಪ್ರವಾಗಿ ಇಳಿಯುತ್ತದೆ. ­–111 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಅದು ಘನವಾಗುತ್ತದೆ. ಆ ಪಾತ್ರೆ ಡೀವಾರ್ ಪಾತ್ರೆಯಾದರೆ ಅದರಲ್ಲಿ ಘನ ಹಾಗೇ ಉಳಿಯುತ್ತದೆ.

ಷೀಫರ್ ತನ್ನ ಪ್ರಯೋಗ ಸಂಪುಟದ ಉಷ್ಣತೆಯನ್ನಿಳಿಸಲು ಅದರೊಳಕ್ಕೆ ಆ ಘನ ಕಾರ್ಬನ್ ಡೈಆಕ್ಸೈಡ್ ಉದುರಿಸಿದ. ಅನಿರೀಕ್ಷಿತ ವಿದ್ಯಮಾನ ಕಂಡು ಬಂತು. ಇದ್ದಕ್ಕಿದ್ದಂತೆ ಸಂಪುಟದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬರ್ಫ ಕಾಣಿಸತೊಡಗಿತು. ಸಂಪುಟದಲ್ಲಿದ್ದ ನೀರು ಮತ್ತು ನೀರಾವಿಯೆಲ್ಲ ಬರ್ಫವಾಯಿತು. ನೀರಾವಿಯಿಂದ ಬರ್ಫದ ಹರಳುಗಳು ರೂಪುಗೊಳ್ಳುವಂತೆ ಮಾಡಲು ಘನ ಕಾರ್ಬನ್ ಡೈಆಕ್ಸೈಡ್ ಬಹು ಉತ್ತಮವಾದ ಆಸರೆ ಎಂಬ ವಿಷಯ ಆಕಸ್ಮಿಕವಾಗಿ ಹೊರಬಿತ್ತು.

ಆಕಸ್ಮಿಕವಾಗಿ ದೊರೆತ ಈ ಜ್ಞಾನದ ಫಲವಾಗಿ ಷೀಫರನ ಆಸಕ್ತಿ ಇದ್ದಕ್ಕಿದ್ದಂತೆ ಬೇರೆಡೆ ತಿರುಗಿತು. ಎಷ್ಟೋ ವೇಳೆ ಮಳೆ ಸುರಿಸುವಂಥ ಮೋಡಗಳು ಗಗನದಲ್ಲಿ ದಟ್ಟವಾಗಿ ಮುಸುಕಿದರೂ ಮಳೆ ಸುರಿಸದೆ ಚದರಿ ಹೋಗಿರುವುದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯ. ಅದಕ್ಕೆ ಕಾರಣ, ಬರ್ಫದ ಹರಳುಗಳು ರೂಪುಗೊಳ್ಳಲು ಅಗತ್ಯವಾದ ಆಸರೆ ಕಣಗಳು ಆ ಪ್ರದೇಶದ ವಾತಾವರಣದಲ್ಲಿ ಇಲ್ಲದಿರುವುದು. ಅಂಥ ಕಣಗಳನ್ನು ಒದಗಿಸಿ ಮಳೆ ತರಿಸುವ ಪ್ರಯತ್ನಗಳು ಆ ವೇಳೆಗೆ ಸಾಕಷ್ಟು ನಡೆದಿದ್ದವು. ಹೆಚ್ಚಿನ ಯಶಸ್ಸು ದೊರೆತಿರರಲಿಲ್ಲ. ಷೀಫರ್ ಈ ಸಮಸ್ಯೆಯಲ್ಲಿ ಮೊದಲೇ ಆಸಕ್ತನಾಗಿದ್ದ. ಬೇರೆ ಯಾವುದೋ ಸಂಬಂಧದಲ್ಲಿ ಆಕಸ್ಮಿಕವಾಗಿ ದೊರೆತ ಫಲಿತಾಂಶವನ್ನು ಇದಕ್ಕಾಗಿ ಬಳಸಿಕೊಳ್ಳುವ ಯೋಚನೆ ಅವನ ತಲೆಯಲ್ಲಿ ಸುಳಿಯಿತು. 1946ರ ನವೆಂಬರ್ 13 ರಂದು ಷೆನೆಕ್ವಡಿಯಿಂದ ಆಗ್ನೇಯ ದಿಕ್ಕಿನಲ್ಲಿ ಎಂಬತ್ತು ಕಿಲೊಮೀಟರ್ ದೂರದಲ್ಲಿ ಮೆಸಾಚುಸೆಟ್ಸ್ ಸಂಸ್ಥಾನಕ್ಕೆ ಸೇರಿದ ಪಿಟ್ಸ್‌ಫೀಲ್ಡ್ ಎಂಬಲ್ಲಿ ದಟ್ಟವಾದ ಮೋಡ ಮುಸುಕಿತು. ಆಗ ವಿಮಾನದಲ್ಲಿ ಮೋಡಗಳ ಮೇಲ್ಗಡೆ ಹಾರಿಹೋಗಿ ಸುಮಾರು ಮೂರು ಕಿಲೊಗ್ರಾಮ್‌ನಷ್ಟು ಘನ ಕಾರ್ಬನ್ ಡೈಆಕ್ಸೈಡ್ ಪುಡಿಯನ್ನು ಮೋಡಗಳೊಳಕ್ಕೆ ಸುರಿದರು. ಭಾರೀ ಹಿಮಪಾತ ಉಂಟಾಯಿತು. ಉಷ್ಣ ವಲಯದಲ್ಲಾಗಿದ್ದರೆ ಅದೇ ಭಾರೀ ಮಳೆಯಾಗುತ್ತಿತ್ತು. ಅದೇ ಜಗತ್ತಿನ ಮೊತ್ತ ಮೊದಲ ಕೃತಕ ವೃಷ್ಟಿ.

ಅಲ್ಲಿಂದೀಚೆಗೆ ಅನೇಕ ಬಾರಿ ಕೃತಕ ವೃಷ್ಟಿ ಬರಿಸಿದ್ದಾರೆ. ಅನಂತರ ವೊನೆಗಟ್ ಎಂಬಾತ ನಡೆಸಿದ ಪ್ರಯೋಗಗಳು ಘನ ಕಾರ್ಬನ್ ಡೈ ಆಕ್ಸೈಡ್‌ಗಿಂತ ಬೆಳ್ಳಿಯ ಆಯೊಡೈಡ್ ಇನ್ನೂ ಉತ್ತಮ ವೃಷ್ಟಿಕಾರಿ ಎಂಬುದನ್ನು ತೋರಿಸಿವೆ. ಘನ ಕಾರ್ಬನ್ ಡೈಆಕ್ಸೈಡ್ ಆವಿಯಾಗದಂತೆ ಹೆಚ್ಚು ಕಾಲ ಅದನ್ನು ಕಾಪಾಡುವುದು ಕಷ್ಟ. ಬೆಳ್ಳಿಯ ಅಯೊಡೈಡ್ ಎಷ್ಟು ದಿನ ಬೇಕಾದರೂ ಇದ್ದಂತೆಯೇ ಇರುತ್ತದೆ. ಎರಡನೆಯದಾಗಿ ಅದನ್ನು ವಿಮಾನದಿಂದ ಉದುರಿಸಬೇಕಾಗಿಲ್ಲ. ಕೃತಕವಾಗಿ ಮೇಲ್ಮಖ ಬೀಸುಗಾಳಿಯನ್ನುಂಟುಮಾಡಿ ಬೆಳ್ಳಿಯ ಅಯೊಡೈಡನ್ನು ಮೇಲಕ್ಕೆ ಕಳಿಸಬಹುದು. ಘನ ಕಾರ್ಬನ್ ಡೈಆಕ್ಸೈಡ್ ಅದರೋ ಹಾದಿಯಲ್ಲಿಯೇ ಆವಿಯಾಗಿಬಿಡುತ್ತದೆ. ಬೆಳ್ಳಿ ಅಯೊಡೈಡ್ ದುಬಾರಿ, ನಿಜ. ಆದರೆ ಇದಕ್ಕೆ ಬೇಕಾಗುವ ಪ್ರಮಾಣ ತುಂಬ ಕಡಿಮೆ.