ಯಾವುದೋ ಉದ್ದೇಶದಿಂದ ಪ್ರಯೋಗ ಒಂದರಲ್ಲಿ ತೊಡಗಿರುವಾಗ ಇಲ್ಲವೇ ಸಂಬಂಧಿಸಿದ ನಿಸರ್ಗ ವ್ಯಾಪಾರಗಳ ವೀಕ್ಷಣೆ ನಡೆಸುತ್ತಿರುವಾಗ, ಬೇರೆ ಯಾವುದೋ ಘಟನೆ ಜರುಗಿ, ಅದರಿಂದ ಮುಖ್ಯವಾದ ವೈಜ್ಞಾನಿಕ ಸತ್ಯ ಹೊರಬಿದ್ದಿರುವುದುಂಟು. ಕೆಲವೊಮ್ಮೆ ವಿಜ್ಞಾನಕ್ಕೆ ಸಂಬಂಧಿಸಿಯೇ ಇಲ್ಲದ ಏನನ್ನೋ ಮಾಡುತ್ತಿರುವಾಗಲೂ ಹಾಗಾಗಿರುವುದುಂಟು. ಅಂಥ ಆಕಸ್ಮಿಕ ಘಟನೆಯಿಂದ ವಿಜ್ಞಾನಕ್ಕೆ ಮಾತ್ರವಲ್ಲ, ತಂತ್ರವಿದ್ಯೆಗೂ ಲಾಭ ಉಂಟಾದ ಸಂದರ್ಭಗಳಿವೆ. ಅಂದರೆ, ಆಕಸ್ಮಿಕ ಘಟನೆಯ ಫಲವಾಗಿ ದೊರೆತ ತಿಳಿವಳಿಕೆಯನ್ನು ಮನುಷ್ಯ ನೇರವಾಗಿ ತನ್ನ ಅನುಕೂಲಕ್ಕೆ ಉಪಯೋಗಿಸಿಕೊಂಡಿದ್ದಾನೆ.

ಕಲ್ಲಿದ್ದಲನ್ನು ಗಾಳಿಯ ಸಂಪರ್ಕವಿಲ್ಲದಂತೆ ಕಾಸಿದಾಗ ಡಾಮರಿನಂಥ ತೈಲಮಿಶ್ರಣ ದೊರೆಯುತ್ತದೆ.  ಅದರಲ್ಲಿ ಬೆನ್ಸೀನ್ ಎಂಬ ಒಂದು ಕಾರ್ಬನಿಕ ಸಂಯುಕ್ತವಿರುತ್ತದೆ. 1825ರಲ್ಲಿ ಅದನ್ನು ಫ್ಯಾರಡೆ ಕಂಡು ಹಿಡಿದ. ಅನೇಕ ಬಗೆಯ ವರ್ಣ ದ್ರವ್ಯಗಳನ್ನೂ ಔಷಧಿ ಸಾಮಗ್ರಿಗಳನ್ನೂ ಅದರಿಂದ ತಯಾರಿಸುತ್ತಾರೆ. ಅದರ ಅಣುರಚನೆಯನ್ನು ಕರಾರುವಾಕ್ಕಾಗಿ ನಿರ್ಣಯಿಸುವುದರಲ್ಲಿ ರಸಾಯನ ವಿಜ್ಞಾನಿಗಳಿಗೆ ಆಸಕ್ತಿ. ಅದರ ಅಣುವಿನಲ್ಲಿ ಆರು ಕಾರ್ಬನ್ ಮತ್ತು ಆರು ಹೈಡ್ರೊಜನ್ ಪರಮಾಣುಗಳಿವೆ ಎಂಬುದು ಖಚಿತವಾಗಿತ್ತು. ಅದುದರಿಂದ ಅದರ ಅಣುಸೂತ್ರ C6H6 ಎಂಬ ಬಗ್ಗೆ ಸಂಶಯವಿರಲಿಲ್ಲ. ಆದರೆ, ಅಣುವಿನಲ್ಲಿ ಆ ಹನ್ನೆರಡು ಪರಮಾಣುಗಳು ಪರಸ್ಪರ ಹೇಗೆ ಬಂಧಿಸಿಕೊಂಡಿವೆ ಎಂಬುದು ಗೊತ್ತಾಗಿರಲಿಲ್ಲ. ಅಣುವಿನಲ್ಲಿರುವ ಆರು ಹೈಡ್ರೊಜನ್ ಪರಮಾಣುಗಳೂ ಅಣುವಿನಲ್ಲಿ ಸಮಾನ ಸ್ಥಾನದಲ್ಲಿವೆ ಎಂದು ನಂಬಲು ಪ್ರಬಲ ಕಾರಣಗಳಿದ್ದುವು. ಉದಾಹರಣೆಗೆ, ಆರು ಹೈಡ್ರೊಜನ್ ಪರಮಾಣುಗಳ ಪೈಕಿ ಒಂದರ ಸ್ಥಾನದಲ್ಲಿ ಕ್ಲೋರೀನ್ ಪರಮಾಣುವನ್ನೋ ಬ್ರೋಮೀನ್ ಪರಮಾಣುವನ್ನೋ ಸೇರಿಸಿದರೆ C6H5Cl ಅಥವಾ C6H5Br ಸೂತ್ರದ ಸಂಯುಕ್ತ ದೊರಕಬೇಕಷ್ಟೆ. ಬೆನ್ಸೀನ್ ಅಣುವಿನಲ್ಲಿರುವ ಹೈಡ್ರೊಜನ್‌ಗಳು ಅಸಮಾನ ಸ್ಥಾನಗಳಲ್ಲಿರುವುದಾದರೆ, C6H5Cl ಸೂತ್ರದ ಹಲವಾರು ಸಂಯುಕ್ತಗಳು ದೊರಕಬೇಕು – ಅಣುವಿನ ತುದಿಯಲ್ಲಿ ಕ್ಲೋರೀನ್ ಇರುವ ಒಂದು ಸಂಯುಕ್ತ, ಮಧ್ಯದಲ್ಲಿ ಕ್ಲೋರೀನ್ ಇರುವ ಇನ್ನೊಂದು ಸಂಯುಕ್ತ ಇತ್ಯಾದಿ. C6H5Cl ಸೂತ್ರ ಉಳ್ಳ ಒಂದೇ ಸಂಯುಕ್ತ ದೊರಕುತ್ತಿದ್ದುದನ್ನು ನೋಡಿ, ಹೈಡ್ರೊಜನ್ ಪರಮಾಣುಗಳೆಲ್ಲ ಸಮಾನ ಸ್ಥಾನಗಳಲ್ಲಿವೆ ಎಂದು ತೀರ್ಮಾನಿಸಬೇಕಾಗಿ ಬಂದಿತು. ಇಂಥ ಇನ್ನಿತರ ಪ್ರಬಲ ಕಾರಣಗಳಿಂದಾಗಿ ಆ ತೀರ್ಮಾನ ಅನಿವಾರ್ಯವೆನಿಸಿತ್ತು. ಹಾಗಾದರೆ ಬೆನ್ಸೀನ್ ಅಣುವಿನ ರಚನೆ ಏನಿರಬಹುದು ಎಂಬುದು ರಸಾಯನ ವಿಜ್ಞಾನಿಗಳಿಗೆ ಒಂದು ಸಮಸ್ಯೆಯಾಗಿತ್ತು.

ಬೆನ್ಸೀನ್ ಅಣುರಚನೆಯ ಬಗ್ಗೆ ಈ ರೀತಿ ತಲೆ ಕೆಡಿಸಿಕೊಂಡಿದ್ದ ರಸಾಯನ ವಿಜ್ಞಾನಿಗಳ ಪೈಕಿ ಜರ್ಮನಿಯ ಹೈಡಲ್‌ಬರ್ಗ್ ವಿಶ್ವವಿದ್ಯಾನಿಲಯದ ಫ್ರೀಡ್ರಿಖ್ ಆಗಸ್ಟ್ ಕೆಕೂಲೆ ಒಬ್ಬ. ಈ ಸಮಸ್ಯೆಗೆ ಆತ ಪರಿಹಾರ ಕಂಡುಕೊಂಡದ್ದು ವಾಸ್ತವವಾಗಿ ಜರುಗಿದ ಆಕಸ್ಮಿಕ ಘಟನೆಯಿಂದ ಅಲ್ಲ: ಕನಸಿನಲ್ಲಿ ಕಂಡ ಅಂಥ ಒಂದು ಘಟನೆಯಿಂದ. ಆತನೇ ಒಂದೆಡೆ ಹೇಳಿಕೊಂಡಿರುವಂತೆ – 1865ರ ಬೇಸಗೆಯಲ್ಲಿ ಒಮ್ಮೆ ಆತ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದ. ಗಾಡಿಯ ಓಲಾಟದಿಂದ ಆತನಿಗೆ ಜೊಂಪು ಹತ್ತಿತು. ಅರೆ ನಿದ್ರೆಯಲ್ಲಿ ಆತ ಒಂದು ಕನಸು ಕಂಡ. ಆವನ ಮನಸ್ಸನ್ನು ಆವರಿಸಿದ್ದ ಪರಮಾಣುಗಳು ಅವನೆದುರಿಗೆ ಕುಣಿದಾಡತೊಡಗಿದಂತೆ ಭಾಸವಾಯಿತು. ಕ್ರಮೇಣ ಆವು ಕಪಿಗಳ ರೂಪ ತಾಳಿದುವು, ಒಂದು ಕಪಿ ಇನ್ನೊಂದರ ಬಾಲ ಹಿಡಿಯಿತು. ಅದು ಇನ್ನೊಂದರ ಬಾಲ ಹಿಡಿಯಿತು. ಸಾಲಿನಲ್ಲಿ ಇತರ ಎಲ್ಲ ಕಪಿಗಳಿಗಿಂತ ಮುಂದೆ ಇದ್ದ ಕಪಿ ಹಿಂದಕ್ಕೆ ತಿರುಗಿ ಓಡಿ ಬಂದು ಅತ್ಯಂತ ಹಿಂದೆ ಇದ್ದ ಕಪಿಯ ಬಾಲವನ್ನು ಹಿಡಿಯಿತು. ಹೀಗೆ ಕಪಿಗಳ ಒಂದು ಉಂಗುರ ಅಥವಾ ವೃತ್ತ ರೂಪುಗೊಂಡಿತು. ಪ್ರತಿಯೊಂದು ಕಪಿಯೂ ತನ್ನ ಒಂದು ಕೈಯಿಂದ ಇನ್ನೊಂದರ ಬಾಲ ಹಿಡಿದಿದ್ದುದರಿಂದ, ಇನ್ನೊಂದು ಕೈಗೆ ಬಿಡುವಿತ್ತು. ಅದರಿಂದ ಅದು ಒಂದು ಚೆಂಡನ್ನೋ ಮತ್ತೇನನ್ನೋ ಎತ್ತಿಕೊಂಡಿತು. ಆ ಏರ್ಪಾಟನ್ನು ಹಾಗೆಯೇ ಉಳಿಸಿಕೊಂಡು ಆರು ಕಪಿಗಳೂ ಕುಣಿತವನ್ನು ಮುಂದುವರಿಸಿದವು. ಬೆನ್ಸೀನ್ ಅಣುರಚನೆಯ ಬಗ್ಗೆ ಕೆಕೂಲೆಗೆ ಸುಳಿವು ಸಿಕ್ಕಿತು. ಅದರಿಂದ ಕೂಡಲೇ ಅವನಿಗೆ ಎಚ್ಚರವಾಯಿತು. ಆರು ಕಾರ್ಬನ್ ಪರಮಾಣುಗಳಿರುವ ಒಂದು ಉಂಗುರ, ಒಂದೊಂದು ಕಾರ್ಬನ್ ಪರಮಾಣುವಿಗೂ ಒಂದೊಂದು ಹೈಡ್ರೊಜನ್ ಪರಮಾಣು ತಗಲಿಕೊಂಡಿದೆ. ಕಾರ್ಬನ್ ಪರಮಾಣುವಿನ ವೇಲೆನ್ಸಿ 4 ಆದುದರಿಂದ (ಅಂದರೆ ಅದು ಬೇರೆ ಪರಮಾಣುಗಳೊಂದಿಗೆ ಸಂಯೋಗಗೊಳ್ಳಲು ನಾಲ್ಕು ಬಾರಿ ಸಾಧ್ಯವಾಗಿರುವುದರಿಂದ) ಪ್ರತಿಯೊಂದು ಕಾರ್ಬನ್ ಪರಮಾಣುವೂ ಒಂದು ಪಕ್ಕದ ಕಾರ್ಬನ್‌ನೊಂದಿಗೆ ದ್ವಿಬಂಧದಿಂದಲೂ ಇನ್ನೊಂದು ಪಕ್ಕದ ಕಾರ್ಬನ್‌ನೊಂದಿಗೆ ಏಕಬಂಧದಿಂದಲೂ ಬಂಧಿಸಿಕೊಂಡಿದೆ (ಚಿತ್ರ 16). ಇದು ಬೆನ್ಸೀನ್ ರಚನೆ ಎಂದು ಆತ ತೀರ್ಮಾನಿಸಿದ. ಈ ರಚನೆಯಲ್ಲಿ ಆರು ಹೈಡ್ರೊಜನ್‌ಗಳೂ ಸಮಾನ ಸ್ಥಾನಗಳಲ್ಲಿವೆ.

ಬೆನ್ಸೀನ್ ಬಳಗದ ಸಂಯುಕ್ತಗಳಿಗೇ ಸಂಬಂಧಿಸಿದ ಇನ್ನೊಂದು ಆಕಸ್ಮಿಕ ಆವಿಷ್ಕಾರ ಸ್ವಾರಸ್ಯಕರವಾಗಿದೆ. ಬಟ್ಟೆಗಳಿಗೆ ನುಸಿ ಬಾರದಂತೆ ಮಾಡಲು ನಾವು ಬಟ್ಟೆಗಳ ನಡುವೆ ನ್ಯಾಫ್ತಲೀನ್ ಗೋಲಿಗಳನ್ನಿಡುವೆವಷ್ಟೆ. ನ್ಯಾಫ್ತಲೀನ್ ಎಂಬುದು ಬೆನ್ಸೀನ್ ಬಳಗದ ಸಂಯುಕ್ತ. ಅದರ ಅಣುವಿನಲ್ಲಿ ಎರಡು ಬೆನ್ಸೀನ್ ಅಣುಗಳು ಒಂದಕ್ಕೊಂದು ಅಂಟಿಕೊಂಡಿವೆ (ಚಿತ್ರ 17). ಬೆನ್ಸೀನ್ ಅಣುವಿನಲ್ಲಿ ಆರು ಹೈಡ್ರೊಜನ್  ಪರಮಾಣುಗಳು ಇರುವಂತೆ ನ್ಯಾಫ್ತಲೀನ್ ಅಣುವಿನಲ್ಲಿ ಎಂಟು ಹೈಡ್ರೊಜನ್ ಪರಮಾಣುಗಳು ಇವೆ. ಅವುಗಳ ಸ್ಥಾನದಲ್ಲಿ ಕ್ಲೋರೀನ್, ಬ್ರೋಮೀನ್‌ಗಳನ್ನು ಸೇರಿಸಿ ಜನ್ಯ ಸಂಯುಕ್ತಗಳನ್ನು ತಯಾರಿಸಬಹುದು. ಅದೇ ರೀತಿ ಹೈಡ್ರೊಜನ್ ಸ್ಥಾನದಲ್ಲಿ –SO3H ಪರಮಾಣುಗುಚ್ಛವನ್ನು ಸೇರಿಸಿ ನ್ಯಾಫ್ತಲೀನ್ ಸಲ್ಫೋನಿಕ್ ಆಮ್ಲವೆಂಬ (ಚಿತ್ರ 18) ಜನ್ಯ ಸಂಯುಕ್ತವನ್ನು ತಯಾರಿಸಬಹುದು. ಹಾಗೆ ಮಾಡಲು ನ್ಯಾಫ್ತಲೀನ್ ಪುಡಿಯನ್ನು ಸಾರಯುತ ಸಲ್ಫೋರಿಕ್ ಆಮ್ಲದೊಂದಿಗೆ ಕಾಸಬೇಕು.

 

ರಾಸಾಯನಿಕ ಕ್ರಿಯೆ ವಿಹಿತವಾಗಿ ಜರುಗಲು ಸಲ್ಫೋರಿಕ್ ಆಮ್ಲವನ್ನು ಯಾವ ಉಷ್ಣತೆಗೆ ಕಾಸಬೇಕು, ಎಷ್ಟು ಕಾಲ ಕಾಸಬೇಕು ಎಂಬುದನ್ನು ಖಚಿತಮಾಡಿಕೊಳ್ಳಲು ಪ್ರಯೋಗಗಳನ್ನು ಮಾಡುತ್ತಿದ್ದರು. ಉಷ್ಣತೆಯನ್ನು ಅಳೆಯುವುದಕ್ಕಾಗಿ ನ್ಯಾಫ್ತಲೀನ್ – ಸಲ್ಫೋರಿಕ್ ಆಮ್ಲ ಮಿಶ್ರಣದಲ್ಲಿ ಒಂದು ಥರ್ಮಾಮೀಟರ್ ಬುಡವನ್ನು ಅದ್ದಿರಿಸಿ ಪ್ರಯೋಗವನ್ನು ಮಾಡಬೇಕಷ್ಟೆ. ಪ್ರಯೋಗವನ್ನು ಹಲವು ಬಾರಿ ಪುನ: ಪುನ: ಮಾಡಿ ಫಲಿತಾಂಶವನ್ನು ದೃಢಪಡಿಸಿಕೊಳ್ಳುವ ಅಗತ್ಯವಿತ್ತು. ಹಾಗೆ ಮಾಡುತ್ತಿರುವಾಗ ಒಮ್ಮೆ ಥರ್ಮಾಮೀಟರಿನ ಬುಡ ಯಾವುದಕ್ಕೋ ಬಡಿದು ಒಡೆದುಹೋಯಿತು. ಅದರಲ್ಲಿದ್ದ ಪಾದರಸ ಕ್ರಿಯಾಮಿಶ್ರಣದಲ್ಲಿ ಬೆರೆತು ಹೋಯಿತು. ಪ್ರಯೋಗ ಮಾಡುತ್ತಿದ್ದವರಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು. ಥರ್ಮಾಮೀಟರ್ ಒಡೆದು, ಪಾದರಸ ಕ್ರಿಯಾಮಿಶ್ರಣದಲ್ಲಿ ಬೆರೆತೊಡನೆಯೇ ಕ್ರಿಯಾ ಗತಿ ತೀವ್ರವಾಯಿತು. ಮಿಶ್ರಣದಲ್ಲಿ ಬುರುಗು ಎದ್ದಿತು. ಬೇರೆ ಏನೋ ಕ್ರಿಯೆ ಜರುಗಿರಬೇಕು ಎಂಬ ಸಂದೇಹ ಬಂದಿತು. ಪ್ರಯೋಗವನ್ನು ನಿಲ್ಲಿಸಿ ಮಿಶ್ರಣವನ್ನು ರಾಸಾಯನಿಕ ಪರೀಕ್ಷೆಗೆ ಗುರಿಪಡಿಸಿದಾಗ ಅದರಲ್ಲಿ ನ್ಯಾಫ್ತಲೀನ್ ಸಲ್ಫೋನಿಕ್ ಆಮ್ಲ ಇರಲಿಲ್ಲ. ರಸಾಯನ ವಿಜ್ಞಾನಿಗಳಿಗೆ ಮೊದಲೇ ಪರಿಚಯವಾಗಿದ್ದ ಥ್ಯಾಲಿಕ್ ಆಮ್ಲ ಇತ್ತು. ಥ್ಯಾಲಿಕ್ ಅಮ್ಲ (ಚಿತ್ರ 19) ಹೇಗೆ ಉತ್ಪತ್ತಿಯಾಗಿರಬಹುದೆಂದು ಊಹಿಸುವುದು ಕಷ್ಟವೇನಲ್ಲ.

ನ್ಯಾಫ್ತಲೀನ್ ಅಣುವಿನಲ್ಲಿರುವ ಎರಡು ಬೆನ್ಸೀನ್ ಉಂಗುರಗಳಲ್ಲಿ ಒಂದು ಸೀಳಿಹೋಗಿ, ಉಳಿದ ಬೆನ್ಸೀನ್ ಉಂಗುರಕ್ಕೆ ತಗುಲಿಕೊಂಡಿರುವ ಎರಡು ಕಾರ್ಬನ್ ಪರಮಾಣುಗಳೂ ಆಕ್ಸಿಡೀಕರಣಗೊಂಡಿವೆ ಎಂಬುದು ಸ್ಪಷ್ಟ. ನಿರೀಕ್ಷಿಸಿದ್ದ ರಾಸಾಯನಿಕ ಕ್ರಿಯೆ ಜರುಗದೆ ಆಕ್ಸಿಡೀಕರಣ ಜರುಗಲು ಕಾರಣ, ಮಿಶ್ರಣದೊಳಕ್ಕೆ ಬಿದ್ದ ಪಾದರಸ. ಅದು ಆಕ್ಸಿಡೀಕರಣ ಕ್ರಿಯೆಗೆ ಕ್ರಿಯಾವರ್ಧಕವಾಗಿ ಕೆಲಸಮಾಡಿತೆಂಬುದು ಸ್ಪಷ್ಟ.

ನಿರೀಕ್ಷಿಸಿದ್ದ ಕ್ರಿಯೆ ಜರುಗದಿದ್ದುದಕ್ಕಾಗಲೀ ಥರ್ಮಾಮೀಟರ್ ಒಡೆದುದಕ್ಕಾಗಲೀ ಪ್ರಯೋಗಕಾರನಿಗೆ ನಿರಾಶೆಯೂ ಆಗಲಿಲ್ಲ, ದು:ಖವೂ ಆಗಲಿಲ್ಲ. ಬಹುಶ: ಅವನು ಸಂತೋಷದಿಂದ ಮೈಮರೆತು ಕುಣಿದಾಡಿರಬೇಕು. ಏಕೆಂದರೆ, ಬಟ್ಟೆಗಳಿಗೆ ಹಾಕುವ ಬಣ್ಣಗಳ ತಯಾರಿಕೆಗೆ ಥ್ಯಾಲಿಕ್ ಆಮ್ಲ ಬೇಕು. ಆದರೆ ಅಂದಿನವರೆಗೆ ಅದನ್ನು ಯಾವುದೋ ಬಳಸು ವಿಧಾನದಿಂದ ತಯಾರಿಸುತ್ತಿದ್ದುದರಿಂದಲೂ ಅದಕ್ಕೆ ಬೇಕಾಗಿದ್ದ ಕಚ್ಚಾವಸ್ತು ಹೇರಳವಾಗಿ ಸಿಕ್ಕುತ್ತಿರಲಿಲ್ಲವಾದುದರಿಂದಲೂ ಮಾರುಕಟ್ಟೆಯಲ್ಲಿ ಥ್ಯಾಲಿಕ್ ಆಮ್ಲಕ್ಕೆ ತುಂಬ ಬೆಲೆ ಇತ್ತು. ಈಗಲಾದರೋ ಅದನ್ನು ಲೀಲಾಜಾಲವಾಗಿ ನ್ಯಾಫ್ತಲೀನಿನಿಂದ ತಯಾರಿಸಬಹುದಾಯಿತು. ಅದಕ್ಕೆ ಬೇಕಾದುದು ಸಲೂೇರಿಕ್ ಆಮ್ಲ ಮತ್ತು ಒಂದು ಹನಿ ಪಾದರಸ. ಕಲ್ಲಿದ್ದಲು ಡಾಮರಿನಿಂದ ಟನ್‌ಗಟ್ಟಲೆ ಪ್ರತ್ಯೇಕಿಸಬಹುದಾಗಿದ್ದ ನ್ಯಾಫ್ತಲೀನ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇರಲಿಲ್ಲ. ಅಂಥ ಅಗ್ಗವಾದ ಕಚ್ಚಾ ಮಾಲಿನಿಂದ ಸುಲಭವಾಗಿ ಥ್ಯಾಲಿಕ್ ಆಮ್ಲವನ್ನು ಪಡೆಯುವ ವಿಧಾನ ಕರಗತವಾದಂತಾಯಿತು. ಥ್ಯಾಲಿಕ್ ಅಮ್ಲದ ಬೆಲೆ ನೂರುಪಟ್ಟು ಇಳಿಯಿತು. ಅದರಿಂದ ತಯಾರಿಸುತ್ತಿದ್ದ ವರ್ಣದ್ರವ್ಯಗಳೂ ಅಗ್ಗವಾದುವು. ಥ್ಯಾಲಿಕ್ ಆಮ್ಲವನ್ನು ತಯಾರಿಸುವ ಈ ಸುಲಭ ವಿಧಾನವನ್ನು ಬಳಕೆಗೆ ತಂದವರು ಶ್ರೀಮಂತರಾದರು.

ಇಂಥ ಇತ್ತೀಚಿನ ಇನ್ನೊಂದು ಲಾಭದಾಯಕ ಆಕಸ್ಮಿಕದ ಬಗ್ಗೆ ಹೇಳಿ ಅವಿಷ್ಕಾರಗಳ ಕಥೆಯನ್ನು ಮುಗಿಸಬಹುದು. ಐವತ್ತು ಆರುವತ್ತು ವರ್ಷಗಳಷ್ಟು ಹಿಂದಿನ ಮಾತು. ಸಿಮ್‌ಚ ಬ್ಲ್ಯಾಸ್ ಎಂಬೊಬ್ಬ ಇಸ್ರೇಲೀ ನೀರಾವರಿ ಎಂಜಿನಿಯರು ಒಂದು ಸಂಜೆ ವಾಯು ವಿಹಾರಕ್ಕೆಂದು ಹೊರಟ. ಅವನು ಹೋಗುತ್ತಿದ್ದ ದಾರಿಯ ಪಕ್ಕದಲ್ಲಿ ನೂರಾರು ಮೀಟರ್ ಉದ್ದದ ಒಂದು ಬೇಲಿ ಇತ್ತು. ಅದರ ಪಕ್ಕದಲ್ಲಿ ಅದರುದ್ದಕ್ಕೂ ಅಲ್ಲಲ್ಲಿ ಪಾತಿಗಳನ್ನು ಮಾಡಿದ್ದರು. ಒಂದೊಂದು ಪಾತಿಯಲ್ಲೂ ಒಂದೊಂದು ಮರ ಇತ್ತು. ಎಲ್ಲವೂ ಒಂದೇ ಜಾತಿಯ ಮರಗಳಾಗಿದ್ದುದರಿಂದಲೂ ಸರಿ ಸುಮಾರು ಒಂದೇ ಎತ್ತರವಿದ್ದ ಆ ಎಲ್ಲ ಮರಗಳಿಗೂ ಪಾತಿ ಇದ್ದುದರಿಂದಲೂ ಅವೆಲ್ಲವನ್ನೂ ಒಂದೇ ಸಮಯದಲ್ಲಿ ನೆಟ್ಟು ಬೆಳೆಸುತ್ತಿದ್ದಾರೆಂದು ಊಹಿಸಬಹುದಾಗಿತ್ತು. ಎಲ್ಲ ಮರಗಳೂ ಹೆಚ್ಚು ಕಡಮೆ ಒಂದೇ ಎತ್ತರ ಇದ್ದುವಾದರೂ ಒಂದು ಮಾತ್ರ ಸರಾಸರಿಯ ಒಂದೂವರೆಯಷ್ಟು ಎತ್ತರ ಬೆಳೆದಿತ್ತು. ಅದು ಬ್ಲ್ಯಾಸ್‌ನ ಕುತೂಹಲವನ್ನು ಕೆರಳಿಸಿತು. ಹತ್ತಿರಹೋಗಿ ನೋಡಿದ. ಎಲ್ಲ ಮರಗಳಿಗೂ ಪಾತಿಯಲ್ಲಿ ನೀರು ಕಟ್ಟಿದ್ದಂತೆ ಕಂಡಿತು. ನೀರು ಎಲ್ಲ ಪಾತಿಗಳಲ್ಲೂ ಇಂಗಿ ನೆಲ ಬಿರುಕು ಬಿಡುತ್ತಿತ್ತು. ಎಲ್ಲದಕ್ಕಿಂತ ಎತ್ತರವಾಗಿದ್ದ ಮರದ ಪಾತಿಯೂ ಒಣಗಿತ್ತು. ಆದರೆ ಬುಡದ ಸುತ್ತಲೂ ಸ್ವಲ್ಪ ಒದ್ದೆ ಇತ್ತು. ಏಕೆಂದರೆ, ಅಲ್ಲಿ ಹಾದುಹೋಗುತ್ತಿದ್ದ ನೀರು ಸರಬರಾಜು ಪೈಪು ಸೋರುತ್ತಿತ್ತು. ಅದರಿಂದ ಒಂದೊಂದೇ ತೊಟ್ಟು ನಿಧಾನವಾಗಿ ನೇರವಾಗಿ ಮರದ ಬುಡಕ್ಕೆ ಬೀಳುತ್ತಿತ್ತು. ಈ ಅಂಶ ಮುಂದಿನ ಸಂಶೋಧನೆಗೆ ವಸ್ತುವನ್ನೊದಗಿಸಿತು.

ಅದರ ಫಲವಾಗಿ ಬಳಕೆಗೆ ಬಂದ ಹನಿ ನೀರಾವರಿ ವಿಧಾನ ಇಸ್ರೇಲಿನಲ್ಲಿ 25-30 ವರ್ಷಗಳ ಕೆಳಗೆ ಬಳಕೆಗೆ ಬಂದಿತು. ಇಂದು ನಮ್ಮಲ್ಲಿಯೂ ಅಲ್ಲಲ್ಲಿ ಬಳಕೆಗೆ ಬರುತ್ತಿದೆ. ಪಾತಿ ಮಾಡಿ ಕಟ್ಟಿದಾಗ ನೀರು ಬಹುಬೇಗ ನೆಲದಲ್ಲಿಳಿದು ಹೋಗುತ್ತದೆ. ಅದರಲ್ಲಿ ಸ್ವಲ್ಪ ಭಾಗ ಮಾತ್ರ ಮರದ ಬೇರುಗಳಿಗೆ ಸಿಕ್ಕುತ್ತದೆ. ಹನಿ ನೀರಾವರಿಯಲ್ಲಿ ಹೆಚ್ಚು ಕಡಿಮೆ ಎಲ್ಲ ನೀರೂ ಉಪಯೋಗಕ್ಕೆ ಬರುತ್ತದೆ. ಸಾಮಾನ್ಯ ನೀರಾವರಿಯಲ್ಲಿ ಬಳಸುವ ನೀರಿನ ಸೇಕಡ 50ರಷ್ಟು ನೀರಿನಿಂದ ಎಂದಿಗಿಂತ ಅಧಿಕ ಪ್ರಯೋಜನ ಪಡೆಯಬಹುದು. ಆ ಎತ್ತರದ ಮರವೇ ಅದಕ್ಕೆ ಸಾಕ್ಷಿ.

ಜಗತ್ತಿನಾದ್ಯಂತ ಮಾಮೂಲು ನೀರಿನ ಆಕರಗಳು ನಮ್ಮ ಎಲ್ಲ ಅಗತ್ಯಗಳನ್ನೂ ಪೂರೈಸುವಲ್ಲಿ ವಿಫಲವಾಗುತ್ತಿರುವುದರಿಂದ ಕೊರೆಬಾವಿಗಳ ನೆರವಿನಿಂದ ನಾವು ಅಂತರ್ಜಲವನ್ನು ದುಂದುಮಾಡುತ್ತಿರುವುದನ್ನೂ ಮನುಷ್ಯರು ಉಪಯೋಗಿಸಿಕೊಳ್ಳುವ ನೀರಿನ ಸೇಕಡ 73ರಷ್ಟು ಕೃಷಿಗೆ ವ್ಯಯವಾಗುತ್ತಲಿದ್ದು ಅದರ ಸೇಕಡ 37 ಭಾಗ ಮಾತ್ರ ಪೈರುಗಳಿಗೆ ತಲಪುತ್ತದೆ ಎಂಬುದನ್ನೂ ನೆನೆದರೆ ಹನಿ ನೀರಾವರಿ ಬರುವ ದಿನಗಳಲ್ಲಿ ಮಾನವ ಕುಲಕ್ಕೆ ಎಂಥ ವರವಾಗಬಲ್ಲುದು ಎಂಬುದು ಗೊತ್ತಾಗುತ್ತದೆ.