ಅಡವಿಗಳಲ್ಲಿ ಅಲೆದಾಡುತ್ತ ಗೆಡ್ಡೆಗೆಣಸುಗಳನ್ನು ತಿಂದು ಜೀವಿಸುತ್ತಿದ್ದ ಆದಿಮಾನವ ಕ್ರಮೇಣ ನಾಗರಿಕ ಮಾನವನಾದ. ಅವನು ಹಾಗೆ ಮಾರ್ಪಡುವುದರಲ್ಲಿ ಅವನ ನೆರವಿಗೆ ಬಂದ ಸಾಧನಗಳ ಪೈಕಿ ಅತ್ಯಂತ ಪ್ರಭಾವಶಾಲಿಯಾದುದೆಂದರೆ ಚಕ್ರ. ಇದು ಅನೇಕ ಪ್ರಾಜ್ಞರ ಅಭಿಪ್ರಾಯ. ಚಕ್ರವನ್ನು ಕಂಡುಹಿಡಿದವರು ಯಾರು? ಅವರು ಅದನ್ನು ಹೇಗೆ ಕಂಡುಹಿಡಿದರು? ಮೊದಲನೆಯ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ಹಲವು ಸಾವಿರ  ವರ್ಷಗಳ ಹಿಂದಿನಿಂದ ಚಕ್ರ ಬಳಕೆಯಲ್ಲಿದೆ. ದಾಖಲೆಗಳೇ ಇಲ್ಲದಿರುವ ಆ ಕಾಲದಲ್ಲಿ ಅದನ್ನು ಯಾರು ಕಂಡುಹಿಡಿದರು, ಮೊದಲು ಅದನ್ನು ಉಪಯೋಗಕ್ಕೆ ತಂದವರು ಯಾರು ಎಂದು ಹೇಗೆ ಹೇಳುವುದು? ಅದನ್ನು ಹೇಗೆ ಕಂಡುಹಿಡಿದಿರಬಹುದು ಎಂಬ ಬಗ್ಗೆ ಊಹೆ ಮಾಡಿದ್ದಾರೆ. ಅದು ಊಹೆ ಎಂಬುದು ನಿಜವೇ ಆದರೂ ನಂಬಬಹುದಾದಂಥ ಊಹೆ.

ಚಕ್ರ ಬಳಕೆಗೆ ಬರುವುದಕ್ಕೆ ಮುಂಚೆ ಮನುಷ್ಯ ಎಲ್ಲಿಗೆ ಹೋಗಬೇಕಾಗಿ ಬಂದರೂ ನಡೆದೇ ಹೋಗುತ್ತಿದ್ದ. ಸಾಮಾನುಗಳನ್ನು ಸಾಗಿಸಬೇಕಾಗಿ ಬಂದಾಗ ಬೆನ್ನಿನ ಮೇಲೆ, ಹೆಗಲ ಮೇಲೆ, ತಲೆಯ ಮೇಲೆ ಹೊರುತ್ತಿದ್ದ. ಹೊರಲು ಸಾಧ್ಯವಾಗದಂಥ ಭಾರವಾದ ಸಾಮಾನಾದರೆ ಅದನ್ನು ನೆಲದ ಮೇಲೆ ದರದರ ಎಳೆದುಕೊಂಡು ಹೋಗುತ್ತಿದ್ದ. ಮರದ ಕೊರಡನ್ನೋ ಉರುಳೆ ಆಕಾರದ ಬೇರಾವ ಸಾಮಾನನ್ನೋ ಒಮ್ಮೆ ಹಾಗೆ ಎಳೆಯಲು ಪ್ರಯತ್ನಿಸಿದಾಗ ಭೂಮಿ ಸ್ವಲ್ಪ ಇಳುಕಲಾಗಿದ್ದುದರಿಂದ ಬಹುಶಃ ಅದು ಉರುಳಿಕೊಂಡು ಮುಂದಕ್ಕೆ ಹೋಯಿತೆಂದು ಕಾಣುತ್ತದೆ. ವಸ್ತುಗಳನ್ನು ಎಳೆದುಕೊಂಡು ಹೋಗುವುದಕ್ಕಿಂತ ಉರುಳಿಸಿಕೊಂಡು ಹೋಗುವುದು ಸುಲಭ ಎಂಬುದು ಅವನಿಗೆ ಹೊಳೆದಿರಬೇಕು. ಈ ತಿಳಿವಳಿಕೆಯಿಂದ ಪ್ರಯೋಜನ ಪಡೆಯುವುದಕ್ಕಾಗಿ ಬಹುಶಃ ಅವನು ಮರದ ನಾಲ್ಕಾರು ಉರುಳೆಗಳ ಮೇಲೆ ಒಂದು ಹಲಗೆಯನ್ನಿಟ್ಟು ಅದರ  ಮೇಲೆ ಭಾರವಾದ ಸಾಮಾನನ್ನಿರಿಸಿ ಉರುಳೆಗಳನ್ನು ಉರುಳಿಸಿದನೆಂದು ಕಾಣುತ್ತದೆ. ಸಾಮಾನು ಮುಂದಕ್ಕೆ ಜರುಗಿದಂತೆ ಹಿಂದೆ ಉಳಿದುಬಿಡುವ ಉರುಳೆಗಳನ್ನು ತೆಗೆದುಕೊಂಡು ಮುಂದೆ ಹಲಗೆಯ ಅಡಿಯಲ್ಲಿ ಇಡುತ್ತಿದ್ದ. ಹೀಗೆ ಸಾಮಾನುಗಳನ್ನು ಸಾಗಿಸುತ್ತಿದ್ದನೆಂದು ಕಾಣಿಸುತ್ತದೆ (ಚಿತ್ರ 1). ಗುಹೆಗಳಲ್ಲಿ ವಾಸಿಸುತ್ತಿದ್ದ ಆದಿಮಾನವರು ಗುಹೆಗಳ ಗೋಡೆಗಳ ಮೆಲೆ ಬಿಡಿಸಿರುವ ವರ್ಣ ಚಿತ್ರಗಳನ್ನು ನೋಡಿ, ಅವುಗಳ ಆಧಾರದ ಮೇಲೆ, ಇಂಥ ಏರ್ಪಾಟುಗಳು ಆಗ ಬಳಕೆಯಲ್ಲಿದ್ದವು ಎಂದು ಊಹಿಸಿದ್ದಾರೆ. ಈ ಏರ್ಪಾಟನ್ನು ಅನಂತರ ಹಂತ ಹಂತವಾಗಿ ಬದಲಾಯಿಸುತ್ತ, ಉತ್ತಮಪಡಿಸುತ್ತ, ಕೊನೆಗೆ ಚಕ್ರ ಮತ್ತು ಅಚ್ಚುಗಳನ್ನು ರೂಪಿಸಿರಬೇಕು (ಚಿತ್ರ 2). ಚಕ್ರದ ಶೋಧ ಹೀಗೆ ಆಕಸ್ಮಿಕವಾಗಿ ಆಯಿತು ಎಂಬುದು ಸಾರಾಂಶ. ಆಕಸ್ಮಿಕ ಆವಿಷ್ಕಾರಗಳ ಕಥೆ ಅಷ್ಟು ಹಳೆಯದು.


ಆದಿಮಾನವ ಬೆಂಕಿ ಮಾಡುವುದನ್ನು ಕಂಡುಹಿಡಿದುದೂ ಆಕಸ್ಮಿಕವಾಗಿ ಎಂದು ನಂಬಲಾಗಿದೆ. ಚಕಮಕಿ ಕಲ್ಲಿನ ತುಂಡುಗಳನ್ನು ಯಾವಾಗಲೋ ಒಂದಕ್ಕೊಂದು ತಾಡಿಸಿದಾಗ ಕಿಡಿ ಉಂಟಾಗಿ, ಪಕ್ಕದಲ್ಲಿದ್ದ ತರಗೆಲೆಗಳೋ ಒಣ ಹುಲ್ಲೋ ಅದರಿಂದ ಹೊತ್ತಿಕೊಂಡು ಉರಿದಿರಬಹುದು. ಬೆಂಕಿಯನ್ನುಂಟುಮಾಡುವ ವಿಧಾನ ಈ ರೀತಿ ಕರಗತವಾಗಿರಬೇಕು. ಅಂತೆಯೇ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗಲಿ ಒಳಗಿದ್ದ ಪ್ರಾಣಿಗಳು ಬೆಂದುಹೋದುವೆಂದು ಕಾಣುತ್ತದೆ. ಅವುಗಳ ಮಾಂಸದ ರುಚಿ ನೋಡಿದ ಮಾನವ ಆಹಾರ ಪದಾರ್ಥಗಳನ್ನು ಬೇಯಿಸಿ ತಿನ್ನಲು ಪ್ರಾರಂಭಿಸಿದ. ಕಾಳು ಬಿತ್ತಿ ಪೈರು ಬೆಳೆಸುವುದನ್ನೂ ಹಾಯಿಪಟದ ನೆರವಿನಿಂದ ದೋಣಿ ನಡೆಸುವುದನ್ನೂ ಹೀಗೆಯೇ ಆಕಸ್ಮಿಕವಾಗಿ ಕಂಡುಹಿಡಿದನೆಂದು ನಂಬಲಾಗಿದೆ.

ಜೀವಿಗಳ ವಿಕಸನದ ಫಲವಾಗಿ ಉದ್ಭವಿಸಿದ ಮನುಷ್ಯ ಜೀವಿ ಹಿಂಗಾಲುಗಳ ಮೇಲೆ ನೆಟ್ಟಗೆ ನಿಲ್ಲಬಲ್ಲವನಾಗಿ,  ಕಲ್ಲು ಮತ್ತು ಲೋಹಗಳ ಹತಾರುಗಳನ್ನು ರೂಪಿಸುವ ಸಾಮರ್ಥ್ಯವನ್ನು ಪಡೆದುಕೊಂಡು, ಅದೆಲ್ಲದರ ಫಲವಾಗಿ ಹೆಚ್ಚಿನ ಬುದ್ದಿಶಕ್ತಿಯನ್ನು ಗಳಿಸಿಕೊಂಡು, ಇತರ ಪ್ರಾಣಿಗಳ ಮಟ್ಟದಿಂದ ಆಗ ತಾನೇ ಮೇಲಕ್ಕೇರುತ್ತಿದ್ದ ಕಾಲ ಅದು. ಆ ಇತಿಹಾಸಪೂರ್ವ ಕಾಲದಲ್ಲಿ ಮನುಷ್ಯ ಹೊಸ ಹೊಸ ವಿಷಯಗಳನ್ನು ಆಕಸ್ಮಿಕವಾಗಿ ಕಂಡುಕೊಂಡ ಎಂಬ ಮಾತು ನಂಬಬಹುದಾದುದು. ವಿಜ್ಞಾನ ಅಭಿವೃದ್ದಿಗೊಂಡು ಅಗಾಧವಾಗಿ ಬೆಳೆದ ಮೇಲೆ, ಪ್ರಯೋಗ ವಿಧಾನ ಮತ್ತು ಯೋಜಿತ ಸಂಶೋಧನೆಗಳು ರೂಢಿಗೆ ಬಂದ ಮೇಲೆ, ಈಗಲೂ ಆವಿಷ್ಕಾರಗಳು ಆಕಸ್ಮಿಕವಾಗಿ ನಡೆಯುವುವೇ? ಈಗಲೂ ಬಹುಪಾಲು ಶೋಧಗಳು ಆಕಸ್ಮಿಕವಾಗಿಯೇ ನಡೆಯುವುವೆಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಲೂಯಿ ಪಾಸ್ತರ್ ಒಮ್ಮೆ ಹೇಳಿರುವಂತೆ “ಮಹತ್ವ ಉಳ್ಳ ಶೋಧಗಳು ಬಹುತೇಕ ಆಕಸ್ಮಿಕವಾಗಿಯೇ ಆಗಿವೆ, ನಿಜ. ಆದರೆ ಆ ಆಕಸ್ಮಿಕಗಳು ಸಂಭವಿಸುವುದು, ಅವುಗಳನ್ನು ಗುರುತಿಸಲು ಸಿದ್ಧವಾಗಿರುವ ಮತಿಗಳಿಗೆ ಮಾತ್ರ”. ಈ ಮಾತಿನ ಅರ್ಥವನ್ನು ವಿಶದೀಕರಿಸುವುದು ಒಳ್ಳೆಯದು. ಪ್ರತಿನಿತ್ಯ ನಮ್ಮ ಸುತ್ತಮುತ್ತ ಅಂಥ ಆಕಸ್ಮಿಕಗಳು, ಅಂದರೆ ಅನಿರೀಕ್ಷಿತ ಘಟನೆಗಳು ಜರುಗುತ್ತಲೇ ಇರುತ್ತವೆ. ನಾವು ಅವುಗಳನ್ನು ಗಮನಿಸಿದರೂ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಬಂಧಪಟ್ಟ ಸಮಸ್ಯೆಯ ಬಗ್ಗೆ ತೀವ್ರವಾಗಿ ಯೋಚಿಸುತ್ತ ಸಮಸ್ಯೆಯ ಪರಿಹಾರಕ್ಕಾಗಿ ಹಾತೊರೆಯುತ್ತಿರುವ ವ್ಯಕ್ತಿ ಆ ಆಕಸ್ಮಿಕ ಘಟನೆಯಿಂದ ಮಹತ್ವ ಉಳ್ಳ ತೀರ್ಮಾನಕ್ಕೆ ಬರುತ್ತಾನೆ.

ಆರ್ಕಿಮಿಡೀಸ್ ಸ್ನಾನದ ತೊಟ್ಟಿಯಿಂದ ಹೊರಕ್ಕೆ ನೆಗೆದು ಆನಂದಾತಿಶಯದಿಂದ “ಯುರೀಕಾ! ಯುರೀಕಾ!” ಎಂದು ಹೇಳಿಕೊಳ್ಳುತ್ತ ಅರಮನೆಗೆ ಓಡಿದ ಎಂಬ ಕಥೆಯನ್ನು ಕೇಳಿರುವಿರಲ್ಲವೆ? ಆ ಘಟನೆ ಪಾಸ್ತರನ ಮಾತಿಗೆ ಉತ್ತಮ ನಿದರ್ಶನ. ನೀರು ತುಂಬಿರುವ ಪಾತ್ರೆಯಲ್ಲಿ ಲೋಟವನ್ನು ಅದ್ದಿದಾಗ ನೀರು ಹೊರಕ್ಕೆ ಚೆಲ್ಲಿದುದನ್ನು ನಾವು ಎಷ್ಟು ಸಲ ನೋಡಿಲ್ಲ? ನಾವು ಅದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆಯೇ? ಬಹುಶಃ ಆರ್ಕಿಮಿಡೀಸ್‌ನಿಗೂ ಇಂಥ ವಿದ್ಯಮಾನ ಹಿಂದೆ ಅನುಭವಕ್ಕೆ ಬಂದಿದ್ದಿರಬಹುದು, ಅದನ್ನು ಅವನು ಕಡೆಗಣಿಸಿದ್ದಿರಬಹುದು. ಆದರೆ ಅವನು ಸ್ನಾನದ ತೊಟ್ಟಿಯೊಳಕ್ಕೆ ಇಳಿದ ದಿನ ಅವನದು “ಸಿದ್ಧ ಮತಿ”ಯಾಗಿತ್ತು. ಅದರ ಹಿನ್ನೆಲೆ ಏನೆಂದು ನೋಡೋಣ.

ಖಚಿತ ಮಾಹಿತಿ ಸಾಕಷ್ಟು ಲಭ್ಯವಿರುವಂಥ ಪುರಾತನ ವಿಜ್ಞಾನಿಗಳ ಪೈಕಿ ಆರ್ಕಿಮಿಡೀಸ್‌ನೇ ಅತ್ಯಂತ ಪ್ರತಿಭಾವಂತನೆಂದು ದೈರ್ಯವಾಗಿ ಹೇಳಬಹುದು. ಅವನು ಜೀವಿಸಿದ್ದುದು ಕ್ರಿ.ಪೂ. ಮೂರನೆಯ ಶತಮಾನದಲ್ಲಿ (ಜನನ : ಕ್ರಿ.ಪೂ. 287), ಸಿಸಿಲಿ ದ್ವೀಪದಲ್ಲಿರುವ ಸಿರಾಕ್ಯೂಸ್ ನಗರದಲ್ಲಿ. ಅಲ್ಲಿಯ ದೊರೆ ಇಮ್ಮಡಿ ಹೀರಾನ್ ಆರ್ಕಿಮಿಡೀಸ್‌ನ ಸಮೀಪದ ಬಂಧು ಮತ್ತು ಆಪ್ತ ಸ್ನೇಹಿತ. ಒಮ್ಮೆ ಆ ದೊರೆ ಚಿನ್ನದ ಒಂದು ಕಿರೀಟವನ್ನು ಮಾಡಿಸಿದ. ಅದಕ್ಕೆ ಬೇಕಾಗುವಷ್ಟು ಬಂಗಾರವನ್ನು ಅಕ್ಕಸಾಲಿಗ ದೊರೆಯಿಂದ ಪಡೆದಿದ್ದ. ಅವನು ಸ್ವಲ್ಪ ಬಂಗಾರವನ್ನು ಕದ್ದಿಟ್ಟುಕೊಂಡು ಬೆಳ್ಳಿಯನ್ನು ಬೆರೆಸಿ ಕಿರೀಟವನ್ನು ಮಾಡಿರಬಹುದೆಂಬ ಸಂದೇಹ ಅದೇಕೋ ದೊರೆಯನ್ನು ಕಾಡತೊಡಗಿತು. ಅದು ನಿಜವೇ ಎಂಬುದನ್ನು ಪರೀಕ್ಷಿಸಬೇಕಾಗಿತ್ತು. ಎಂಥ ಜಟಿಲ ಸಮಸ್ಯೆಯೇ ಆಗಲಿ, ಅದಕ್ಕೆ ಪರಿಹಾರೋಪಾಯವನ್ನು ನೀಡಬಲ್ಲ ನಿಶಿತ ಮತಿಯವನು ಎನ್ನಿಸಿಕೊಂಡಿದ್ದ ಆರ್ಕಿಮಿಡೀಸ್‌ಗೆ ದೊರೆ ಆ ಕೆಲಸವನ್ನೊಪ್ಪಿಸಿದ.

ಆರ್ಕಿಮಿಡೀಸ್‌ಗೆ ಅಂದಿನಿಂದ ಹಗಲು ರಾತ್ರಿ ಅದೇ ಯೋಚನೆ. ಕಿರೀಟ ಶುದ್ಧ ಚಿನ್ನದ್ದೋ ಅಥವಾ ಬೆಳ್ಳಿ ಬೆರಕೆಯಾಗಿದೆಯೋ ಎಂಬುದನ್ನು ಹೇಗೆ ನಿರ್ಣಯಿಸುವುದು? ಕಿರೀಟವನ್ನು ತೂಗಿ ನೋಡಿದ. ಅಷ್ಟೇ ತೂಕವಿರುವ ಒಂದು ಚಿನ್ನದ ಗಟ್ಟಿಯನ್ನು ತಯಾರಿಸಿದ. ಒಂದು ಬೆಳ್ಳಿ ಗಟ್ಟಿಯನ್ನೂ ತಯಾರಿಸಿದ. ಸಹಜವಾಗಿಯೇ ಚಿನ್ನದ ಗಟ್ಟಿಯ ಗಾತ್ರ ಬೆಳ್ಳಿ ಗಟ್ಟಿಯ ಗಾತ್ರಕ್ರಿಂತ ಕಡಿಮೆ ಇತ್ತು. ಏಕೆಂದರೆ ಚಿನ್ನದ ಸಾಂದ್ರತೆ ಬೆಳ್ಳಿಯದಕ್ಕಿಂತ ಹೆಚ್ಚು ತಾನೆ (ಚಿತ್ರ 3)? ಕಿರೀಟವನ್ನು ಕರಗಿಸಿ ಅದರಿಂದಲೂ ಒಂದು ಗಟ್ಟಿ ತಯಾರಿಸಬಹುದಾಗಿದ್ದರೆ ಸಮಸ್ಯೆಗೆ ಪರಿಹಾರ ಸಿಕ್ಕುಬಿಡುತ್ತಿತ್ತು. ಆ ಗಟ್ಟಿಯ ಗಾತ್ರ ಶುದ್ಧ ಚಿನ್ನದ ಗಟ್ಟಿಯದರಷ್ಟೇ ಇದ್ದರೆ ಕಿರೀಟಕ್ಕೆ ಬಳಸಿದ ಚಿನ್ನ ಶುದ್ಧವಾದುದು ಎಂದರ್ಥ. ಆದರೆ ಕಿರೀಟವನ್ನು ಕರಗಿಸುವಂತಿರಲಿಲ್ಲ. ಅದು ತುಂಬ ಮುದ್ದಾದ ಕಿರೀಟ. ಅದನ್ನು ವಿರೂಪಗೊಳಿಸಬಾರದೆಂದು ರಾಜಾಜ್ಞೆಯಾಗಿತ್ತು. ಆ ಕಿರೀಟಕ್ಕೆ ಏನೂ ಘಾಸಿ ಮಾಡದೆ ಅದರ ಗಾತ್ರವನ್ನು ಅಳೆಯುವುದು ಹೇಗೆ? ಆರ್ಕಿಮಿಡೀಸ್‌ನನ್ನು ಕಾಡುತ್ತಿದ್ದ ಪ್ರಶ್ನೆ ಅದು.

 

ಪ್ರಶ್ನೆ ಸದಾ ತಲೆಯಲ್ಲಿ ಸುಳಿದಾಡುತ್ತಿರುವಂತೆಯೇ ಆರ್ಕಿಮಿಡೀಸ್ ಒಂದು ದಿನ ಸಾರ್ವಜನಿಕ ಸ್ನಾನಗೃಹಕ್ಕೆ ಹೋದ. ಅಂದಿನ ಗ್ರೀಕ್ ಜೀವನದ ಶೈಲಿಯಲ್ಲಿ ಶ್ರೀಮಂತರು ಸ್ನಾನಕ್ಕೆ ಸಾರ್ವಜನಿಕ ಸ್ನಾನಗೃಹಕ್ಕೆ ಹೋಗುತ್ತಿದ್ದರು. ಅಲ್ಲಿ ಸುಗಂಧಮಿಶ್ರಿತ ಬೆಚ್ಚನೆಯ ನೀರು ಸ್ನಾನದ ತೊಟ್ಟಿಗಳಲ್ಲಿ ಸಿದ್ಧವಾಗಿರುತ್ತಿತ್ತು. ಆರ್ಕಿಮಿಡೀಸ್ ಹೋದಾಗ ತೊಟ್ಟಿ ನೀರಿನಿಂದ ತುಂಬಿತ್ತು. ಅವನು ತೊಟ್ಟಿಯೊಳಕ್ಕೆ ಇಳಿದೊಡನೆಯೇ ನೀರು ಹೊರಕ್ಕೆ ಚೆಲ್ಲಿತು. ಆಗಲೇ ಹೇಳಿದಂತೆ, ಹಿಂದೆ ಇದೇ ಅನುಭವ ಅವನಿಗೆ ಉಂಟಾಗಿದ್ದಿರಬಹುದು. ಅದನ್ನು ಅವನು ನಿರ್ಲಕ್ಷಿಸಿದ್ದ. ಆ ದಿನವಾದರೋ ತಲೆಯ ತುಂಬ ಕಿರೀಟದ ಸಮಸ್ಯೆಯೇ ತುಂಬಿದ್ದುದರಿಂದ ಅವನ ಮನಸ್ಸಿಗೆ ಒಂದು ವಿಷಯ ಹೊಳೆಯಿತು. ಅವನು ತೊಟ್ಟಿಯೊಳಕ್ಕೆ ಇಳಿದೊಡನೆಯೇ ಅವನ ಗಾತ್ರಕ್ಕೆ ಸಮನಾದಷ್ಟು ನೀರು ಹೊರಕ್ಕೆ ಚೆಲ್ಲಿತು. ಹಾಗೆ ಚೆಲ್ಲಿದ ನೀರಿನ ಗಾತ್ರವೇ ಅವನ ದೇಹದ ಗಾತ್ರ. ಕಿರೀಟದ ಗಾತ್ರವನ್ನೂ ಹೀಗೆ ಅಳೆಯಬಹುದಲ್ಲವೆ? ನೀರಿನಿಂದ ತುಂಬಿರುವ ಪಾತ್ರೆಯಲ್ಲಿ ಕಿರೀಟವನ್ನು ಮುಳುಗಿಸಿ, ಹೊರಚೆಲ್ಲಿದ ನೀರಿನ ಗಾತ್ರವನ್ನು ಅಳೆದರೆ ಕಿರೀಟವನ್ನು ಅಂದಗೆಡಿಸದೆಯೇ ಅದರ ಗಾತ್ರವನ್ನು ನಿರ್ಣಯಿಸಿದಂತಾಯಿತು.

ಆರ್ಕಿಮಿಡೀಸ್‌ಗೆ ಹಿಡಿಸಲಾರದಷ್ಟು ಸಂತೋಷವಾಯಿತು. ತೊಟ್ಟಿಯಿಂದ ಹಾರಿ ಹೊರಕ್ಕೆ ಬಂದು ಮೈಯನ್ನು ಒರೆಸಿಕೊಳ್ಳದೆಯೇ ಬೆತ್ತಲೆಯಾಗಿ ಅರಮನೆಗೆ ಓಡಿದ. “ಯುರೀಕಾ, ಯುರೀಕಾ” ಎಂದು ಕೂಗಿಕೊಳ್ಳುತ್ತ ಓಡಿದ. ಗ್ರೀಕ್ ಭಾಷೆಯಲ್ಲಿ ‘ಯುರೀಕಾ’ ಎಂದರೆ ‘ನನಗೆ ಗೊತ್ತಾಯಿತು’ ಎಂದರ್ಥ.

ಆಕಸ್ಮಿಕ ಘಟನೆಗಳಿಂದ ಮಹತ್ವಪೂರಿತ ವಿಷಯಗಳನ್ನು ಗ್ರಹಿಸುವುದು ಅದಕ್ಕೆ ಆಗಲೇ ಸಿದ್ಧವಾಗಿರುವ ಮತಿಗಳಿಂದ ಮಾತ್ರ ಸಾಧ್ಯ ಎಂಬುದು ನಿಜವೇ ಆದರೂ ಯಾವುದೋ ಉದ್ದೇಶದಿಂದ ಏನನ್ನೋ ಮಾಡುತ್ತಿರುವಾಗ ಸಂಭವಿಸುವ ಘಟನೆಯಿಂದ ಮುಖ್ಯವಾದ ವೈಜ್ಞಾನಿಕ ವಿಷಯಗಳು ಬಯಲಾಗುವ ಸಂದರ್ಭಗಳು ನಿಜಕ್ಕೂ ಸ್ವಾರಸ್ಯಕರವಾಗಿರುತ್ತವೆ, ಮನೋರಂಜಕವಾಗಿರುತ್ತವೆ. ಅಂಥ ಕೆಲವು ಶೋಧಗಳನ್ನು ಮುಂದೆ ಪರಿಚಯಿಸಿಕೊಳ್ಳಬಹುದು.