ವಿಜ್ಞಾನದ ಚರಿತ್ರೆಯಲ್ಲಿ ನಡೆದುವು ಎನ್ನಲಾದ ಎರಡು ಫಟನೆಗಳು ತುಂಬ ಪ್ರಸಿದ್ಧವಾಗಿವೆ. ಶಾಲಾ ಬಾಲಕರು ಸಹ ಅವುಗಳ ಕಥೆ ಕೇಳಿರುತ್ತಾರೆ. ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಜಂತೆಯಿಂದ ನೇತಾಡುತ್ತಿದ್ದ ತೂಗುದೀಪವನ್ನು ನೋಡಿ, ಗೆಲಿಲಿಯೋ ಲೋಲಕದ ನಿಯಮಗಳನ್ನು ಕಂಡುಹಿಡಿದ ಎಂಬುದು ಒಂದು ಕಥೆ. ನ್ಯೂಟನ್ ಒಮ್ಮೆ ತೋಟದಲ್ಲಿ ಕುಳಿತು ವಿರಮಿಸುತ್ತಿದ್ದಾಗ ಮರದಿಂದ ಸೇಬಿನ ಹಣ್ಣು ಬಿದ್ದುದನ್ನು ಕಂಡು ಗುರುತ್ವವನ್ನು ಕಂಡುಹಿಡಿದ ಎಂಬುದು ಇನ್ನೊಂದು ಕಥೆ. ಇವೆರಡೂ ಕೇವಲ ದಂತಕಥೆಗಳು, ನಿಜವಾಗಿ ನಡೆದ ಫಟನೆಗಳಲ್ಲ ಎನ್ನುವವರೂ ಇದ್ದಾರೆ. ಆದರೆ ಮರದಿಂದ ಸೇಬು ಬಿದ್ದುದನ್ನು ಕಂಡು ಅದನ್ನು ಕುರಿತು ಯೋಚಿಸಿದ ಬಗ್ಗೆ ನ್ಯೂಟನ್ನನೇ ಒಂದೆಡೆ ಪ್ರಸ್ತಾಪಿಸಿದ್ದಾನೆ. ಈ ಎರಡು ಫಟನೆಗಳೂ ನಡೆದುದು ನಿಜ ಎಂಬುದಾದರೆ, ಆಕಸ್ಮಿಕ ಆವಿಷ್ಕಾರಗಳಿಗೆ ಇವೆರಡೂ ಒಳ್ಳೆಯ ಉದಾಹರಣೆಗಳು. ಇವೆರಡರ ಹಿನ್ನಲೆಗಳನ್ನೂ ಇವು ನಡೆದಾಗ ವಿಜ್ಞಾನಿಗಳ ಮನಸ್ಸಿನಲ್ಲಿ ಅವು ಪ್ರಚೋದಿಸಿದ ಯೋಚನಾಸರಣಿಗಳನ್ನೂ ಕೆದಕಿ ನೋಡುವುದು ಸ್ವಾರಸ್ಯಕರ.

ಗೆಲಿಲಿಯೊ ಮತ್ತು ತೂಗುದೀಪ :

ಗೆಲಿಲಿಯೋ ಹುಟ್ಟಿದುದು 1564ರ ಫೆಬ್ರವರಿ 15ರಂದು, ಇಟಲಿಯಲ್ಲಿರುವ ಪೀಸಾ ನಗರದಲ್ಲಿ. ತಂದೆ ಒಬ್ಬ ಗಣಿತಜ್ಞ, ತಕ್ಕಮಟ್ಟಿಗೆ ಅನುಕೂಲಸ್ಥರಾಗಿದ್ದ ಒಂದು ಮನೆತನಕ್ಕೆ ಸೇರಿದವ. ಗೆಲಿಲಿಯೋ ಬೆಳೆದು ಶಾಲೆಯನ್ನು ಸೇರುವ ವೇಳೆಗೆ ಕುಟುಂಬದ ಹಣಕಾಸಿನ ಪರಿಸ್ಥಿತಿ ಅದೇಕೋ ಹದಗೆಟ್ಟಿತ್ತು. ಗಣಿತವನ್ನು ನಂಬಿಕೊಂಡು ಜೀವನ ನಡೆಸತೊಡಗಿದುದೇ ಅದಕ್ಕೆ ಕಾರಣವೆಂದು ನಂಬಿದ್ದ ತಂದೆ, ಮಗನನ್ನು ಬೇರೊಂದು ವೃತ್ತಿಗೆ ಹಾಕಲು ನಿರ್ಧರಿಸಿದ. ಆ ಕಾಲದ ಇಟಲಿಯಲ್ಲಿ ಒಬ್ಬ ಗಣಿತಜ್ಞ ನಿರೀಕ್ಷಿಸಬಹುದಾಗಿದ್ದ ವರಮಾನದ ಮೂವತ್ತರಷ್ಟನ್ನು ಸಂಪಾದಿಸಬಹುದಾಗಿದ್ದ ವೃತ್ತಿ ಎಂದರೆ, ವೈದ್ಯಕೀಯ ವೃತ್ತಿ. ಬಹುಶಃ ಈಗಲೂ ಅಷ್ಟೆ. ಆದುದರಿಂದ ಗೆಲಿಲಿಯೊ ವೈದ್ಯನಾಗತಕ್ಕುದೆಂದು ತಂದೆ ನಿರ್ಧರಿಸಿ ಅವನಿಗೆ ವೈದ್ಯಕೀಯ ಶಿಕ್ಷಣ ಕೊಡಿಸಲು ಏರ್ಪಾಟು ಮಾಡಿದ. ಅಷ್ಟೇ ಅಲ್ಲ, ಗಣಿತದ ಸಂಪರ್ಕವೇ ಅವನಿಗೆ ಉಂಟಾಗದಂತೆ ನೋಡಿಕೊಳ್ಳಲು ಯತ್ನಿಸಿದ. ಆದರೇನು? ತಂದೆಯ ಪ್ರಯತ್ನ ವಿಫಲಗೊಂಡಿತು. ಒಂದು ಸಂಜೆ ಗೆಲಿಲಿಯೊ ಸ್ನೇಹಿತನೊಬ್ಬನನ್ನು ಕಾಣಲು ಹೋಗಿ ಅಕಸ್ಮಾತ್ ಜ್ಯಾಮಿತಿಯನ್ನು ಕುರಿತ ಒಂದು ಉಪನ್ಯಾಸವನ್ನು ಕೇಳಿ ಅದರಿಂದ ಆಕರ್ಷಿತನಾದ. ಗಣಿತದ ಗೀಳು ಅಂದಿನಿಂದ ಅವನಿಗೆ ಅಂಟಿಕೊಂಡಿತು.

ಶಾಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿಯೇ ಇದ್ದುಕೊಂಡು ಗೆಲಿಲಿಯೊ ಖಾಸಗಿಯಾಗಿ ಗಣಿತದ ಅಧ್ಯಯನವನ್ನು ಕೈಗೊಂಡ. ಆ ಮೂಲಕ ಅವನಿಗೆ ಆರ್ಕಿಮಿಡೀಸನ ಕೃತಿಗಳ ಪರಿಚಯವಾಯಿತು. ಪರಿಣಾಮವಾಗಿ ಭೌತವಿಜ್ಞಾನದಲ್ಲಿಯೂ ಅವನಿಗೆ ಆಸಕ್ತಿ ಹುಟ್ಟಿತು. ಅದಕ್ಕಿಂತ ಮುಖ್ಯವಾಗಿ ಆರ್ಕಿಮಿಡೀಸ್‌ನ ಕಾರ್ಯವಿಧಾನ ಅವನ ಮೇಲೆ ಗಾಢ ಪ್ರಭಾವ ಬೀರಿತು. ಯಾವುದೊಂದನ್ನೂ ಅಳೆಯಲು ಪ್ರಯತ್ನಿಸುವುದು ಮತ್ತು ಚಿಂತನೆಯ ಫಲವಾಗಿ ರೂಪುಗೊಳ್ಳುವ ಹೊಸ ಭಾವನೆಗಳು, ಸಿದ್ಧಾಂತಗಳು ಮುಂತಾದವು ಸರಿಯೇ ಎಂದು ಪರೀಕ್ಷಿಸಲು ಪ್ರಯೋಗಗಳನ್ನು ಮಾಡುವುದು – ಈ ಕಾರ್ಯವಿಧಾನವನ್ನು ಪ್ರಾಚೀನ ವಿಜ್ಞಾನಿಗಳ ಪೈಕಿ ವಿಶೇಷವಾಗಿ ಬಳಸಿದ ಏಕೈಕ ವ್ಯಕ್ತಿ ಆರ್ಕಿಮಿಡೀಸ್ ಎನ್ನಬಹುದು. ಆತನ ತರುವಾಯ ಬಹುಕಾಲ ಬೇರೆ ಯಾರೂ ಆ ಮಾರ್ಗದಲ್ಲಿ ಮುಂದುವರಿಯಲಿಲ್ಲ. ಪ್ರಾಚೀನ ಗ್ರೀಕ್ ನಾಗರಿಕತೆಯ ತರುವಾಯ ಯೂರೋಪ್‌ನಲ್ಲಿ ಸಾವಿರಾರು ವರ್ಷಕಾಲ ಬೌದ್ದಿಕ ಚಟುವಟಿಕೆ ಸ್ತಬ್ಧಗೊಂಡಿತಷ್ಟೆ. ಆ ಅವಧಿಯನ್ನು ಈಗಲೂ ಕತ್ತಲೆ ಯುಗ ಎಂದೇ ಕರೆಯುತ್ತಾರೆ. ಕತ್ತಲೆ ಯುಗದ ಅನಂತರ ಕಂಡು ಬಂದ ರೆನೆಸಾನ್ಸ್ ಎಂಬ ಬೌದ್ದಿಕ ಪುನರುಜ್ಜೀವನದ ಪ್ರಾರಂಭ ಕಾಲಕ್ಕೆ ಸೇರಿದವ, ಗೆಲಿಲಿಯೊ. ಮೇಲೆ ಹೇಳಿದ ಆರ್ಕಿಮಿಡೀಸ್ ಕಾರ್ಯವಿಧಾನಕ್ಕೆ ಅವನು ಮತ್ತೆ ಜನ್ಮ ನೀಡಿದ. ಈಗ ಅದು ವಿಜ್ಞಾನವಿಧಾನದ ಪ್ರಮುಖ ಅಂಗ ಎನ್ನಿಸಿಕೊಂಡಿದೆ. ಗೆಲಿಲಿಯೊ ಮಾಡಿದ ಆಕಸ್ಮಿಕ ಆವಿಷ್ಕಾರವನ್ನು ಈ ಹಿನ್ನಲೆಯಲ್ಲಿ ನೋಡುವುದು ಯುಕ್ತ.

ಗೆಲಿಲಿಯೋ ಹದಿವಯಸ್ಸಿನ ಬಾಲಕನಾಗಿದ್ದಾಗಲೇ ಆರ್ಕಿಮಿಡೀಸ್‌ನ ಈ ಕಾರ್ಯವಿಧಾನವನ್ನು ಮೆಚ್ಚಿ ರೂಢಿಸಿಕೊಂಡಿದ್ದ. ಒಮ್ಮೆ ಚರ್ಚ್‌ನಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಗೆಲಿಲಿಯೊ ಕುಳಿತಿದ್ದ. ಮೇಲೆ ತೂಗಾಡುತ್ತಿದ್ದ ದೀಪದ ಕಡೆ ಅವನು ಕಣ್ಣು ಹಾಯಿಸಿದ. ಅತ್ತಿಂದಿತ್ತ ತೂಗಾಡುತ್ತಿದ್ದ ದೀಪ, ಗಾಳಿ ಬೀಸಿದಾಗ ಹೆಚ್ಚು ವಿಸ್ತಾರವಾಗಿ ತೂಗಾಡತೊಡಗುತ್ತಿತ್ತು. ಯಾವುದನ್ನೇ ಆಗಲಿ, ನೆಟ್ಟ ಮನಸ್ಸಿನಿಂದ ನೋಡುವುದು ಅವನ ಪ್ರವೃತ್ತಿ. ಅದರಿಂದಾಗಿ ಒಂದು ಸ್ವಾರಸ್ಯವಾದ ಸಂಗತಿ ಅವನ ಗಮನವನ್ನು ಸೆಳೆಯಿತು. ತೂಗಾಡುತ್ತಿದ್ದ ದೀಪ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವಾಗ ಆ ಅಂತರ ಕೇವಲ ಆರೇಳು ಅಂಗುಲಗಳಷ್ಟಿರಲಿ, ಇಲ್ಲವೇ ಗಾಳಿ ಬೀಸಿದಾಗ ಆಗುತ್ತಿದ್ದಂತೆ ಒಂದೂವರೆ ಅಡಿಗಳಷ್ಟಿರಲಿ, ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಅದು ತೆಗೆದುಕೊಳ್ಳುತ್ತಿದ್ದ ಕಾಲ ಯಾವಾಗಲೂ ಒಂದೇ ಆಗಿರುತ್ತದೆ ಎನ್ನಿಸಿತು. ಎಲ್ಲವನ್ನೂ ಅಳೆಯುವ ಗೀಳು ಆ ವೇಳೆಗಾಗಲೇ ಗೆಲಿಲಿಯೋಗೆ ಹಿಡಿದಿತ್ತು. ತೂಗುದೀಪದ ತೂಗಾಟದ ಕಾಲವನ್ನು ಅಳೆಯುವ ಯೋಚನೆ ಅವನಲ್ಲಿ ಮೂಡಿತು. ಅದನ್ನು ಹೇಗೆ  ಅಳೆಯುವುದು? ಆಗ ಯಾವ ಬಗೆಯ ಗಡಿಯಾರಗಳೂ ಇರಲಿಲ್ಲ. ಗೆಲಿಲಿಯೊ ವೈದ್ಯಕೀಯ ವಿದ್ಯಾರ್ಥಿಯಾಗಿದ್ದುದರಿಂದ ತನ್ನ ನಾಡಿಯ ಮಿಡಿತವನ್ನೇ ಉಪಯೋಗಿಸಿಕೊಂಡು ಕಾಲವನ್ನು ಅಳೆದರಾಗದೇ ಎಂದು ಯೋಚಿಸಿದ. ಆ ದಿಕ್ಕಿನಲ್ಲಿ ಪ್ರಯತ್ನಮಾಡಿ ಜಯಶೀಲನಾದ. ತೂಗುದೀಪ ಎಡತುದಿಯಿಂದ ಬಲತುದಿಗೆ ಹೋಗಿ ಪುನಃ ಎಡತುದಿಗೆ ಬರುವ ಹೊತ್ತಿಗೆ ನಾಡಿ ಕರಾರುವಾಕ್ಕಾಗಿ ಐದು ಬಾರಿ ಮಿಡಿಯಿತು ಎನ್ನಿ. ಒಂದು ಆವರ್ತಕ್ಕೆ, ಅಂದರೆ ತೂಗುದೀಪ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿ ಮತ್ತೆ ಅದೇ ತುದಿಗೆ ಬರುವುದಕ್ಕೆ ಐದು ಮಿಡಿತಗಳ ಕಾಲ ಅಥವಾ ಅವಧಿ ಬೇಕು ಎಂದಾಯಿತು. ಗಾಳಿ ಬೀಸಿ, ತೂಗಾಟದ ವಿಸ್ತಾರ ಹೆಚ್ಚಾದಾಗಲೂ ಒಂದು ಆವರ್ತಕ್ಕೆ ಐದು ಮಿಡಿತಗಳ ಕಾಲ ಬೇಕೆಂದು ಕಂಡುಬಂತು.

ಮನೆಗೆ ಬಂದ ಮೇಲೆ ಗೆಲಿಲಿಯೊ ಆ ವಿದ್ಯಮಾನದ ಕ್ರಮಬದ್ಧ ಪರಿಶೀಲನೆಯನ್ನು ಕೈಗೊಂಡ. ದಪ್ಪನಾದ ಒಂದು ಕಲ್ಲನ್ನೋ ಕಬ್ಬಿಣ, ತಾಮ್ರ ಮುಂತಾದ ಯಾವುದೇ ಲೋಹದ ಒಂದು ಗುಂಡನ್ನೋ – ಭಾರವಾದ ಅಂಥ ವಸ್ತು ಒಂದನ್ನು – ದಾರದ ಒಂದು ತುದಿಗೆ ಕಟ್ಟಿ ದಾರದ ಇನ್ನೊಂದು ತುದಿಯನ್ನು ಮೇಲ್ಗಡೆ ಎಲ್ಲಿಯಾದರೂ ಭದ್ರವಾಗಿ ಸಿಕ್ಕಿಸಿದರೆ, ಅಂಥ ಏರ್ಪಾಟನ್ನು ಲೋಲಕ ಎಂದು ಕರೆಯುತ್ತಾರೆ. ಗೆಲಿಲಿಯೊ ಅಂಥ ಒಂದು ಲೋಲಕವನ್ನು ನಿರ್ಮಿಸಿ ಅದರ ತೂಗಾಟವನ್ನು ಪುನಃ ಪುನಃ ಪರೀಕ್ಷಿಸಿದ. ಕಾಲವನ್ನು ಅಳೆಯಲು ತನ್ನ ನಾಡಿ ಮಿಡಿತವನ್ನೇ ಮಾನವಾಗಿಟ್ಟುಕೊಂಡು ಪ್ರಯೋಗ ಮಾಡಿದ. ಲೋಲಕದ ಗುಂಡಿನ ತೂಕವನ್ನಾಗಲೀ ತೂಗಾಟದ ವಿಸ್ತಾರವನ್ನಾಗಲೀ ಬದಲಾಯಿಸಿದರೆ, ತೂಗಾಟದ ಆವರ್ತದ ಅವಧಿ ಬದಲಾಗುವುದಿಲ್ಲವೆಂಬುದನ್ನು ಕಂಡುಕೊಂಡ. ಲೋಲಕದ ಉದ್ದ ಹೆಚ್ಚುಕಡಿಮೆ ಮಾಡಿದರೆ ಮಾತ್ರ ಅದು ಬದಲಾಗುತ್ತದೆ. ಲೋಲಕದ ಉದ್ದ ಹೆಚ್ಚಾದಾಗ ಅವಧಿಯೂ ಹೆಚ್ಚಾಗುತ್ತದೆ. ವಾಸ್ತವವಾಗಿ ಅವಧಿಯು ಲೋಲಕದ ಉದ್ದಕ್ಕೆ ಅನುಲೋಮವಾಗಿರುವುದಿಲ್ಲ, ಉದ್ದದ ವರ್ಗಮೂಲಕ್ಕೆ ಅನುಲೋಮವಾಗಿರುತ್ತದೆ. ಉದಾಹರಣೆಗೆ, ಲೋಲಕದ ಉದ್ದ 4 ಅಂಗುಲ (ವರ್ಗಮೂಲ = 2) ಇರುವಾಗ ಅವಧಿ ಒಂದೂವರೆ ಮಿಡಿತಗಳಷ್ಟಿದೆ ಎನ್ನಿ. ಅವಧಿ ಮೂರು ಮಿಡಿತಗಳಷ್ಟಾಗಬೇಕಾದರೆ ಲೋಲಕದ ಉದ್ದ 16 ಅಂಗುಲ (ವರ್ಗಮೂಲ = 4) ಆಗಬೇಕು. ಇವು ಲೋಲಕದ ನಿಯಮಗಳು.

ಗೆಲಿಲಿಯೋ ಮಡಿದು (1642) ಹಲವು ವರ್ಷಗಳಾದ ಮೇಲೆ, 1656ರಲ್ಲಿ, ಡಚ್ ವಿಜ್ಞಾನಿ ಹಯ್ಗನ್ಸ್ ಲೋಲಕದ ನೆರವಿನಿಂದ ಕೆಲಸ ಮಾಡುವ ಮೊತ್ತಮೊದಲ ಗಡಿಯಾರವನ್ನು ನಿರ್ಮಿಸಿದ.

ನ್ಯೂಟನ್ ಮತ್ತು ಸೇಬು :

ಮರದಿಂದ ಸೇಬು ಬಿದ್ದುದನ್ನು ಕಂಡ ನ್ಯೂಟನ್, ಗುರುತ್ವದ ಬಗ್ಗೆ ಯೋಚಿಸಿದುದರ ಹಿನ್ನಲೆಯನ್ನು ತಿಳಿದುಕೊಳ್ಳುವುದೂ ಯುಕ್ತ. ನ್ಯೂಟನ್ ಹುಟ್ಟಿದುದು 1642ರಲ್ಲಿ, ಗೆಲಿಲಿಯೊ ಮಡಿದ ವರ್ಷ. ಅವನು ಹುಟ್ಟುವುದಕ್ಕೆ ಮುಂಚೆಯೇ ತಂದೆ ತೀರಿಹೋಗಿದ್ದ. ತಾಯಿಗೆ ದಿನ ತುಂಬುವುದಕ್ಕೆ ಮುಂಚೆಯೇ ಹುಟ್ಟಿದ ನ್ಯೂಟನ್ ಜೀವಂತವಾಗಿ ಉಳಿದುದೇ ಒಂದು ವಿಶೇಷ. ಅವನಿಗೆ ಮೂರು ವರ್ಷವಾಗಿದ್ದಾಗ ತಾಯಿಗೆ ಪುನರ್ವಿವಾಹವಾದುದರಿಂದ ಅಜ್ಜಿಯ ಆಶ್ರಯದಲ್ಲಿ ಬೆಳೆದ. ಶಾಲೆಯಲ್ಲಿ ಅವನ ಕಲಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಎಂಟು ವರ್ಷ ತುಂಬುವ ವೇಳೆಗೆ ಶಾಲೆಯನ್ನು ಬಿಡಿಸಿ ವ್ಯವಸಾಯದಲ್ಲಿ ತೊಡಗಿದ್ದ ತಾಯಿಗೆ ಸಹಾಯ ಮಾಡಲು ಕರೆತಂದರು. ಅಲ್ಲಿ ಅವನಿಂದ ತಾಯಿಗೆ ಏನೂ ನೆರವು ದೊರೆಯುತ್ತಿರಲಿಲ್ಲ. ವಿದ್ಯೆಯ ಬಗ್ಗೆ ಅವನಿಗೆ ಗಾಢ ಒಲವಿದೆ ಎಂದು ಗುರುತಿಸಿದ ಸೋದರ ಮಾವನ ಯತ್ನದಿಂದ ಅವನು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಪುನಃ ವಿದ್ಯಾರ್ಜನೆಗಾಗಿ ಕೇಂಬ್ರಿಜ್ ವಿಶ್ವವಿದ್ಯಾನಿಲಯಕ್ಕೆ ಸೇರಿದ. ಐದು ವರ್ಷದ ತರುವಾಯ ಪದವೀಧರನಾದ. ಆ ವೇಳೆಗಾಗಲೇ ಗಣಿತದಲ್ಲಿ ಮಹತ್ವಪೂರಿತ ಸಂಶೋಧನೆ ಮಾಡಿದ್ದ. ದ್ವಿನಾಮ ಪರಿಮೇಯವನ್ನು (binomial theorem) ಸಾಧಿಸಿದ್ದ. ಕಲನ ಶಾಸ್ತ್ರದ (calculus) ಮೂಲತತ್ವಗಳನ್ನು ರೂಪಿಸಿದ್ದ.

1666ರ ಸುಮಾರಿನಲ್ಲಿ ಲಂಡನ್ ನಗರಕ್ಕೆ ಪ್ಲೇಗ್ ತಗುಲಿದ್ದರಿಂದ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ತಾಯಿಯ ಮನೆಗೆ ಹೋದ. ಅಲ್ಲಿರುವಾಗ ಒಂದು ದಿನ ತೋಟದಲ್ಲಿ ವಿರಮಿಸುತ್ತಿರುವಾಗಲೇ ಅವನು ಮರದಿಂದ ಸೇಬು ಬಿದ್ದುದನ್ನು ಕಂಡುದು. ಆಗ ಅವನ ಮನಸ್ಸನ್ನಾವರಿಸಿದ್ದ ವಿಷಯ ಯಾವುದು, ಅವನ ಬುದ್ದಿ ಯಾವ ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ಮುಖ್ಯ. ಭೂಮಿಯೇ ವಿಶ್ವದ ಕೇಂದ್ರವೆಂದೂ ಗ್ರಹನಕ್ಷತ್ರಾದಿಗಳು ಭೂಮಿಯನ್ನು ಸುತ್ತು ಹಾಕುತ್ತಿವೆಯೆಂದೂ ಸಾರಿದ ಟಾಲೆಮಿ ಸಿದ್ಧಾಂತ ಹಲವಾರು ಶತಮಾನಗಳ ಕಾಲ ಮಾನ್ಯತೆ ಗಳಿಸಿತ್ತು. ಆ ಸ್ಥಾನದಿಂದ ಟಾಲೆಮಿ ಸಿದ್ದಾಂತವನ್ನು ಕೆಳಕ್ಕಿಳಿಸಿದ ಕೀರ್ತಿ ಹದಿನಾರನೆಯ ಶತಮಾನದಲ್ಲಿ ಕೊಪರ್ನಿಕಸ್ ಮಂಡಿಸಿದ ಸೂರ್ಯಕೇಂದ್ರ ಸಿದ್ಧಾಂತಕ್ಕೆ ಸಲ್ಲುತ್ತದೆ. ವಿದ್ವಾಂಸರ ವಲಯಗಳಲ್ಲಿ ಕೊಪರ್ನಿಕಸ್ ಸಿದ್ಧಾಂತ ಕ್ರಮೇಣ ಅಂಗೀಕಾರ ಪಡೆಯಿತು. ಕೆಲವು ದಶಕಗಳ ತರುವಾಯ ಕೆಪ್ಲರ್ ಆ ಸಿದ್ಧಾಂತವನ್ನು ಪರಿಷ್ಕರಿಸಿ, ಗ್ರಹಗಳ ಕಕ್ಷೆಗಳು ಅದುವರೆಗೆ ಭಾವಿಸಿದ್ದಂತೆ ವರ್ತುಲಗಳಲ್ಲ, ಅವು ಎಲಿಪ್ಸ್ ಆಕಾರದವು, ಅಂದರೆ ದೀರ್ಫವೃತ್ತಾಕಾರದವು – ಎಂಬುದಕ್ಕೆ ಪುರಾವೆ ನೀಡಿದ. ಗ್ರಹಗಳು ತಮ್ಮ ಕಕ್ಷೆಗಳಲ್ಲಿ ಚಲಿಸುವಾಗ ಪಾಲಿಸುವ ನಿಯಮಗಳನ್ನೂ ಅವನು ವಿವರಿಸಿದ.

ಗ್ರಹಗಳು ಕಕ್ಷೆಗಳನ್ನು ಬಿಟ್ಟು ಆಚೆ ಈಚೆ ಹೋಗದೆ, ಸೂರ್ಯನಿಗೆ ಕಟ್ಟುಬಿದ್ದು, ಸೂರ್ಯಗೋಳವನ್ನು ಸುತ್ತುಹಾಕಲು ಕಾರಣವೇನು? ಅವು ಸೂರ್ಯನ ಆಕರ್ಷಣೆಗೆ ಒಳಗಾಗಿರುವುದೇ ಅದಕ್ಕೆ ಕಾರಣ ಎಂದು ನ್ಯೂಟನ್ ತೀರ್ಮಾನಿಸಿದ್ದ. ಅದೇ ರೀತಿ ಚಂದ್ರ ತನ್ನ ಕಕ್ಷೆಯಲ್ಲಿಯೇ ಉಳಿದುಕೊಂಡು ಭೂಮಿಯನ್ನು ಸುತ್ತುಹಾಕಲು ಕಾರಣ, ಭೂಮಿಯ ಆಕರ್ಷಣೆಗೆ ಒಳಗಾಗಿರುವುದು ಎಂದು ತೀರ್ಮಾನಿಸಿದ್ದ.

ಬಹುಶಃ ನ್ಯೂಟನ್ ತೋಟದಲ್ಲಿ ಕುಳಿತಿದ್ದಾಗ ಅದೇ ಗುಂಗಿನಲ್ಲಿದ್ದುದರಿಂದ ಅವನಿಗೆ ಒಂದು ಯೋಚನೆ ಬಂದಿತು. ಭೂಮಿ ಚಂದ್ರನನ್ನು ಹಿಡಿದಿಟ್ಟುಕೊಂಡಿರುವ ಆಕರ್ಷಣೆಯೇ ಈಗ ಸೇಬನ್ನು ತನ್ನ ಕಡೆಗೆ ಎಳೆದುಕೊಂಡಿರಬಹುದೇ ಎಂದು ಯೋಚಿಸಿದ. ಈ ಕಥೆ ಪದೇಪದೇ ನಮ್ಮ ಕಿವಿಗೆ ಬಿದ್ದಿರುವುದರಿಂದ ಹಿಂದು ಮುಂದು ನೋಡದೆ ಅದನ್ನು ಅಂಗೀಕರಿಸಿ ಬಿಡುತ್ತೇವೆ. ಶಾಂತವಾಗಿ ಯೋಚಿಸಿದರೆ ನ್ಯೂಟನ್‌ಗೆ ಆ ಯೋಚನೆ  ಬಂದುದು ಸಹಜ ಎನ್ನುವಂತಿಲ್ಲ. ಆಸರೆ ಇಲ್ಲದಿರುವ ವಸ್ತುಗಳು ಕೆಳಕ್ಕೆ ಬೀಳುವುದನ್ನು ನಾವು ಹುಟ್ಟಿದಂದಿನಿಂದ ನೋಡಿರುವುದರಿಂದ ಅವು ಹಾಗೆ ಬೀಳುವುದು ಸಹಜ ಅನ್ನಿಸುತ್ತದೆ. ಆಸರೆ ತಪ್ಪಿದ ಆ ಸೇಬು ಏಕೆ ಕೆಳಕ್ಕೆ ಬಿದ್ದಿತು ಎಂಬ ಪ್ರಶ್ನೆ ಅಸಂಬದ್ಧ ಅನ್ನಿಸುತ್ತದೆ. ಹುಟ್ಟಿದಂದಿನಿಂದ ಬಂದಿರುವ ಪೂರ್ವಗ್ರಹವನ್ನು ಕೈಬಿಟ್ಟು, “ಸೇಬಿಗೆ ಆಸರೆ ತಪ್ಪಿತು, ನಿಜ; ಆಸರೆಗಾಗಿ ಅದು ಕೆಳಗೆ ಬಂದುದೇಕೆ? ಅಕ್ಕಪಕ್ಕಕ್ಕಾಗಲೀ ಮೇಲ್ಗಡೆಗಾಗಲೀ ಏಕೆ ಹೋಗಲಿಲ್ಲ?’’ ಎಂದು ನ್ಯೂಟನ್ ಯೋಚಿಸಿರಬೇಕು. ಅದು ಆಶ್ಚರ್ಯದ ವಿಷಯ. ಚಂದ್ರನನ್ನು ಭೂಮಿ ಆಕರ್ಷಿಸುವುದೆಂಬ ಸಂಗತಿ ಆಗಲೇ ಅವನ ಮನಸ್ಸಿನಲ್ಲಿ ಬೀಡುಬಿಟ್ಟಿದ್ದುದರಿಂದ ಆ ಪ್ರಶ್ನೆಯನ್ನು ಮನಸ್ಸಿನಲ್ಲಿ ಹಾಕಿಕೊಳ್ಳುವುದು ಅವನಿಗೆ ಸಾಧ್ಯವಾಯಿತು. ನ್ಯೂಟನ್ನನ ತೀರ್ಮಾನ ಇನ್ನೊಂದು ರೀತಿಯಲ್ಲಿ ಆಶ್ಚರ್ಯ ತರುವಂಥದು. ಆಕಾಶಕಾಯಗಳಿಗೆ ಅನ್ವಯವಾಗುವ ನಿಯಮಗಳೇ ಬೇರೆ, ಭೂಮಿಯ ಮೇಲಿನ ವಸ್ತುಗಳಿಗೆ ಅನ್ವಯವಾಗುವ ನಿಯಮಗಳೇ ಬೇರೆ ಎಂಬ ಭಾವನೆ ಅರಿಸ್ಟಾಟಲನ ಕಾಲದಿಂದ ಬೇರೂರಿತ್ತು. ಹಾಗಿರುವಾಗ ಚಂದ್ರನನ್ನು ಭೂಮಿ ಆಕರ್ಷಿಸುವ ಬಲವೇ ಸೇಬನ್ನೂ ಆಕರ್ಷಿಸುತ್ತದೆ ಎಂಬ ಭಾವನೆ ಆ ಕಾಲಕ್ಕೆ ಕ್ರಾಂತಿಕರವಾದುದು.

ನ್ಯೂಟನ್ನನ ಮನಸ್ಸಿನಲ್ಲಿ ಉದಯಿಸಿದ ಆ ಭಾವನೆ ಕ್ರಮೇಣ ಬೆಳೆದು, ವಿಶ್ವದಲ್ಲಿರುವ ಯಾವುದೇ ಎರಡು ಕಾಯಗಳು ತಮ್ಮ ರಾಶಿಗಳ ಗುಣಲಬ್ಧಕ್ಕೆ ಅನುಲೋಮವಾಗಿಯೂ ತಮ್ಮ ನಡುವಣ ಅಂತರದ ವರ್ಗಕ್ಕೆ ವಿಲೋಮವಾಗಿಯೂ ಇರುವ ಬಲದಿಂದ ಪರಸ್ಪರ ಆಕರ್ಷಿಸುತ್ತವೆ ಎಂಬ ನಿಯಮ ರೂಪ ತಾಳಿತು. ಅದನ್ನೇ ಇಂದು ನ್ಯೂಟನ್ನನ ವಿಶ್ವ (ವ್ಯಾಪೀ) ಗುರುತ್ವ ನಿಯಮ ಎಂದು ಕರೆಯುತ್ತಿರುವುದು.