ಭೂಮಿಯಲ್ಲಿ ನೈಸರ್ಗಿಕವಾಗಿ ಕಾಣಸಿಕ್ಕುವ ತೊಂಬತ್ತಕ್ಕೂ ಹೆಚ್ಚು ರಾಸಾಯನಿಕ ಧಾತುಗಳಲ್ಲಿ ಅತ್ಯಂತ ಸಮೃದ್ಧವಾದುದು ಆಕ್ಸಿಜನ್. ಭೂಮಿಯ ಮೇಲ್ಮೈಯ ಸೇಕಡ 71 ಭಾಗವನ್ನು ಸಾಗರ ಸಮುದ್ರಗಳು ಆವರಿಸಿಕೊಂಡಿವೆಯಷ್ಟೆ. ಅವುಗಳಲ್ಲಿಯ ಅಪಾರ ಜಲರಾಶಿಯ ತೂಕದ ಸೇಕಡ 89 ಭಾಗ ಆಕ್ಸಿಜನ್, 11 ಭಾಗ ಹೈಡ್ರೊಜನ್ ಎಂಬುದನ್ನು ನಾವು ಮರೆಯಬಾರದು. ಅಂತೆಯೇ ವಾಯುಮಂಡಲದ ಸೇಕಡ 20 ಭಾಗ ಆಕ್ಸಿಜನ್. ಭೂಮಿಯ ಮೇಲೆ ಘನಸ್ಥಿತಿಯಲ್ಲಿರುವ ಪದಾರ್ಥಗಳ ಪೈಕಿ ಹೇರಳವಾಗಿರುವ ಮರಳು, ಜೇಡಿ, ಬೆಣಚು, ಸುಣ್ಣಕಲ್ಲು ಮುಂತಾದವೆಲ್ಲ ಆಕ್ಸಿಜನ್ ಸಂಯುಕ್ತಗಳೇ. ಅವು ಒಂದೊಂದರಲ್ಲಿಯೂ ಸೇಕಡ 15 – 20 ರಿಂದ 50 – 60ರ ವರೆಗೆ ಆಕ್ಸಿಜನ್ ಇದೆ. ಅವುಗಳಂತೆ ಹೇರಳವಾಗಿರದೆ ವಿರಳ ಎನ್ನಿಸಿಕೊಂಡಿರುವ ಇತರ ನೂರಾರು ಖನಿಜಗಳೆಲ್ಲ ಬಹುಪಾಲು ಆಕ್ಸಿಜನ್ ಸಂಯುಕ್ತಗಳೇ. ಆಕ್ಸಿಜನ್ ಇಲ್ಲದ ಖನಿಜಗಳು ತುಂಬ ವಿರಳ. ಹೀಗಾಗಿ, ದ್ರವಸ್ಥಿತಿಯಲ್ಲಿರುವ ನೀರು ಮತ್ತು ಅನಿಲ ಸ್ಥಿತಿಯಲ್ಲಿರುವ ವಾಯು ಸಹ ಭೂಗ್ರಹದ ಹೊರಚಿಪ್ಪಿನ ಒಂದು ಭಾಗ ಎಂದು ಪರಿಗಣಿಸುವುದಾದರೆ, ಆ ಚಿಪ್ಪಿನ ತೂಕದ ಅರ್ಧ ಭಾಗ ಆಕ್ಸಿಜನ್ನೇ ಆಗುತ್ತದೆ ಎಂದು ಅಂದಾಜು ಮಾಡಿದ್ದಾರೆ. ಸಮೃದ್ದಿಯ ವಿಷಯ ಒಂದೇ ಅಲ್ಲ, ಬೇರೆ ರೀತಿಯಲ್ಲೂ ಅದು ಬಹು ಮುಖ್ಯವಾದ ಧಾತು. ಆಕ್ಸಿಜನ್ ಇಲ್ಲದೆ ಪದಾರ್ಥಗಳು ದಹಿಸುವಂತಿಲ್ಲ, ಪ್ರಾಣಿಪಕ್ಷಿಗಳು ಉಸಿರಾಡುವಂತಿಲ್ಲ.

ಆಕ್ಸಿಜನ್ ಇಷ್ಟು ಮಹತ್ವ ಉಳ್ಳದ್ದಾದರೂ ಅದೊಂದು ರಾಸಾಯನಿಕ ಧಾತು ಎಂದು ಗುರುತಿಸುವ ಮಾತಿರಲಿ, ಇತರ ಪದಾರ್ಥಗಳಿಂದ ಅದನ್ನು ಪ್ರತ್ಯೇಕಿಸಿ ಅದೊಂದು ಪ್ರತ್ಯೇಕ ಅನಿಲ ಪದಾರ್ಥ ಎಂದು ಗುರುತಿಸಿದುದೇ ತುಂಬ ಈಚೆಗೆ. ಅದನ್ನು ಹಾಗೆ ತಯಾರಿಸಿದುದು ಕೇವಲ ಇನ್ನೂರು ವರ್ಷಗಳ ಕೆಳಗೆ, ಅದೂ ಆಕಸ್ಮಿಕವಾಗಿ ಎಂದರೆ ಆಶ್ಚರ್ಯ ಅನ್ನಿಸುವುದಿಲ್ಲವೆ? ವೃತ್ತಿಯಿಂದ ಕ್ರೈಸ್ತ ಪಾದ್ರಿಯಾಗಿದ್ದರೂ ಧಾರ್ಮಿಕ ವಿಷಯಗಳಲ್ಲಿ ತೀವ್ರಗಾಮೀ ನಿಲುವನ್ನು ತಳೆದಿದ್ದ ಹದಿನೆಂಟನೆಯ ಶತಮಾನದ ಬ್ರಿಟಿಷ್ ವಿಜ್ಞಾನಿ, ಪ್ರೀಸ್ಟ್ಲಿ ಆಕಸ್ಮಿಕವಾಗಿ ಆಕ್ಸಿಜನ್ನನ್ನು ತಯಾರಿಸಿ, ಅದರ ಪ್ರಧಾನ ಗುಣಲಕ್ಷಣಗಳನ್ನು ಅಭ್ಯಸಿಸಿ, ವರದಿ ಮಾಡಿದುದು ಸ್ವಾರಸ್ಯವಾದ ಕಥೆ.

ಜೋಸೆಫ್ ಪ್ರೀಸ್ಟ್ಲಿ ಹುಟ್ಟಿದುದು 1733ರಲ್ಲಿ, ಲೀಡ್ಸ್ ನಗರದ ಬಳಿಯ ಒಂದು ಹಳ್ಳಿಯಲ್ಲಿ. ಬಡ ನೇಕಾರನ ಮಗನಾಗಿ ಹುಟ್ಟಿದ ಪ್ರೀಸ್ಟ್ಲಿ ಕೇವಲ ಏಳು ವರ್ಷದವನಾಗಿರುವಾಗಲೇ ತಾಯಿಯನ್ನು ಕಳೆದುಕೊಂಡ. ತಾಯಿಯ ಒಬ್ಬ ಸಹೋದರಿ ಅವನನ್ನು ಸಾಕಿದಳು. ಆಕೆ ಉದಾರ ದೃಷ್ಟಿಯ ಯುನಿಟೇರಿಯನ್ ಕ್ರೈಸ್ತ ಪಂಥವನ್ನು ಮೆಚ್ಚಿಕೊಂಡಿದ್ದಳಾದುದರಿಂದ ಪ್ರೀಸ್ಟ್ಲಿ ಯುನಿಟೇರಿಯನ್ ಪಾದ್ರಿಯಾಗಲೆಂದು ಅಪೇಕ್ಷಿಸಿ ಅದಕ್ಕೆ ಅಗತ್ಯವಾಗುವ ಶಿಕ್ಷಣವನ್ನು ಅವನಿಗೆ ಕೊಡಿಸಿದಳು. ಅವನ ವಿದ್ಯಾಭ್ಯಾಸದಲ್ಲಿ ವಿಜ್ಞಾನದ ಸಂಪರ್ಕವೇ ಅವನಿಗೆ ದೊರೆಯಲಿಲ್ಲ. ಭಾಷೆಗಳನ್ನು ಕಲಿಯುವುದರಲ್ಲಿ ವಿಶೇಷ ಒಲವನ್ನು ತೋರಿಸಿದ ಪ್ರೀಸ್ಟ್ಲಿ ಹಲವಾರು ಭಾಷೆಗಳನ್ನು ಕಲಿತ.

ವಿದ್ಯಾಭ್ಯಾಸ ಮುಗಿದ ಮೇಲೆ ಕೆಲವು ಕಾಲ ನೀಡ್‌ಹ್ಯಾಮ್ ಎಂಬಲ್ಲಿ. ಅನಂತರ ಸ್ವಲ್ಪ ಕಾಲ ನ್ಯಾಂಟ್‌ವಿಚ್  ಎಂಬಲ್ಲಿ ಧರ್ಮಗುರುವಾಗಿ ಕೆಲಸಮಾಡಿ ಅನಂತರ ವಾರಿಂಗ್‌ಟನ್ ಎಂಬಲ್ಲಿಗೆ ಬಂದ. ಅಲ್ಲಿ ಆತನ ಕರ್ತವ್ಯ ಮುಖ್ಯವಾಗಿ ಭಾಷೆಗಳನ್ನು ಬೋಧಿಸುವುದಾಗಿದ್ದರೂ ಧರ್ಮೋಪದೇಶ ನೀಡುವುದನ್ನು ಮುಂದುವರಿಸಿಕೊಂಡು ಬಂದ. ಪ್ರೀಸ್ಟ್ಲಿ ವಾರಿಂಗ್‌ಟನ್ನಿನಲ್ಲಿದ್ದಾಗ ಪದೇಪದೇ ಲಂಡನ್ನಿಗೆ ಹೋಗಬೇಕಾಗುತ್ತಿತ್ತು. ಒಮ್ಮೆ ಹಾಗೆ ಲಂಡನ್‌ಗೆ ಹೋದಾಗ ಅಮೆರಿಕದಿಂದ ಬಂದಿದ್ದ ಬೆಂಜಮಿನ್ ಫ್ರಾಂಕ್‌ಲಿನ್ನನ ಪರಿಚಯವಾಗಿ ಅದು ಮುಂದೆ ಜೀವನ ಪರ್ಯಂತ ಉಳಿದ ಸ್ನೇಹವಾಗಿ ಪರಿಣಮಿಸಿತು. ವಿಜ್ಞಾನದಲ್ಲಿ ಅವನ ಆಸಕ್ತಿ ಬೆಳೆಯಲು ಆ ಸ್ನೇಹ ಕಾರಣವಾಯಿತು ಎಂಬಂತೆ ತೋರುತ್ತದೆ.

1767ರಲ್ಲಿ ಪ್ರೀಸ್ಟ್ಲಿ, ವಾರಿಂಗ್‌ಟನ್ ಬಿಟ್ಟು ಲೀಡ್ಸ್ ನಗರಕ್ಕೆ ಬಂದ. ಆ ನಗರದಲ್ಲಿ ಆತ ವಾಸಿಸುತ್ತಿದ್ದ ಮನೆಗೆ ತುಸು ದೂರದಲ್ಲಿ ಬಿಯರ್ ಮುಂತಾದ ಮದ್ಯಗಳನ್ನು ತಯಾರಿಸುತ್ತಿದ್ದ ಒಂದು ಕಾರ್ಖಾನೆ ಇತ್ತು. ಒಮ್ಮೆ ಏತಕ್ಕೋ ಆ ಕಾರ್ಖಾನೆಗೆ ಹೋಗಿದ್ದ. ಮದ್ಯ ತಯಾರಿಸುವಾಗ ಕಾರ್ಬನ್ ಡೈ ಆಕ್ಸೈಡ್ ಹೇರಳವಾಗಿ ಉತ್ಪತ್ತಿಯಾಗುತ್ತಿದ್ದುದು ಅವನ ಗಮನವನ್ನು ಸೆಳೆಯಿತು. ಆಗ ಆ ಅನಿಲಕ್ಕೆ ಕಾರ್ಬನ್ ಡೈಆಕ್ಸೈಡ್ ಎಂಬ ಹೆಸರಿರಲಿಲ್ಲ. ಸುಮಾರು ಒಂದು ದಶಕದ ಹಿಂದೆ ಅದನ್ನು ಕಂಡುಹಿಡಿದಿದ್ದ ಜೋಸೆಫ್ ಬ್ಯ್ಲಾಕ್ ಅದನ್ನು ಬಂಧಿತ ವಾಯು (ಫಿಕ್ಸೆಡ್ ಏರ್) ಎಂದು ಕರೆದಿದ್ದ. ಅದರ ರಾಸಾಯನಿಕ ಸ್ವರೂಪ ಆಗಿನ್ನೂ ಗೊತ್ತಿರಲಿಲ್ಲ. ಅದು ಅಲ್ಲಿ ಹೇರಳವಾಗಿ ದೊರೆಯುತ್ತಿದ್ದುದರಿಂದ ಅದನ್ನು ಕುರಿತು ಪ್ರೀಸ್ಟ್ಲಿ ಸಂಶೋಧನೆ ನಡೆಸತೊಡಗಿದ. ಆ ಅನಿಲ ತಕ್ಕಮಟ್ಟಿಗೆ ನೀರಿನಲ್ಲಿ ಕರಗುವುದೆಂದೂ ಅದರ ದ್ರಾವಣ ಕುಡಿಯಲು ಆಹ್ಲಾದಕರವಾಗಿರುವುದೆಂದೂ ತೋರಿಸಿ ಆ ಮೂಲಕ ಇಂದಿನ ಸೋಡ, ಲೆಮನೇಡ್ ಉದ್ಯಮಕ್ಕೆ ನಾಂದಿ ಹಾಕಿದ. ಬಂಧಿತ ವಾಯು ಕುರಿತ ಸಂಶೋಧನೆ ಮುಂದುವರಿದಂತೆ ಇನ್ನಿತರ ಅನಿಲಗಳ ಬಗ್ಗೆಯೂ ಅವನು ಆಸಕ್ತವಾದ. ನೀರಿನ ಮೇಲೆ, ಪಾದರಸದ ಮೇಲೆ, ಅನಿಲಗಳನ್ನು ಸಂಗ್ರಹಿಸುವ ಇಂದಿನ ಪರಿಪಾಠ ಅವನಿಂದಲೇ ಪ್ರಾರಂಭವಾದುದು.

ಯಾರೋ ಒಮ್ಮೆ ಪ್ರೀಸ್ಟ್ಲಿಗೆ ಒಂದು ದೊಡ್ಡ ಉಬ್ಬು ಮಸೂರವನ್ನು ಕೊಡುಗೆಯಾಗಿ ಕೊಟ್ಟರು. ಸುಮಾರು ಒಂದು ಅಡಿ ವ್ಯಾಸದ ಆ ಮಸೂರವನ್ನು ಬಿಸಿಲಲ್ಲಿ ಹಿಡಿದರೆ ಅದು ಸೂರ್ಯನ ಕಿರಣಗಳನ್ನು ಒಂದು ಬಿಂದುವಿನಲ್ಲಿ ನಾಭೀಕರಿಸಿ ಬಹು ಹೆಚ್ಚಿನ ಉಷ್ಣತೆಯನ್ನುಂಟುಮಾಡುತ್ತಿತ್ತು. ಆಗ ಪದಾರ್ಥಗಳನ್ನು ಕಾಸಲು ಇದ್ದಿಲು ಒಲೆಯನ್ನು ಬಳಸುತ್ತಿದ್ದುದು ಸರ್ವಸಾಮಾನ್ಯವಾಗಿತ್ತು. ಅದರಿಂದ ದೊರಕುತ್ತಿದ್ದ ಉಷ್ಣತೆಗಿಂತ ಬಹು ಹೆಚ್ಚಿನ ಉಷ್ಣತೆಯನ್ನು ಆ ಮಸೂರದಿಂದ ಪಡೆಯಬಹುದಾಗಿತ್ತು. ಅದರ ಸಹಾಯದಿಂದ ಸಿಕ್ಕಸಿಕ್ಕ ಪದಾರ್ಥಗಳನ್ನು ಅಧಿಕ ಉಷ್ಣತೆಗೆ ಕಾಸುವುದು, ಯಾವುದಾದರೂ ಅನಿಲ ಉತ್ಪತ್ತಿಯಾದರೆ ಅದನ್ನು ಪರೀಕ್ಷಿಸುವುದು – ಈ ಗೀಳು ಅವನಿಗೆ ಅಂಟಿತು. ಆ ಗೀಳು ಎಷ್ಟು ಪ್ರಬಲವಾಯಿತೆಂದರೆ ಅವನ ಹೆಸರು ಹೇಳಿದೊಡನೆ ಎಲ್ಲರಿಗೂ ಆ ಮಸೂರ ನೆನಪಿಗೆ ಬರುವಂತಾಯಿತು. ಅವನ ನೆನಪಿಗಾಗಿ ಲೀಡ್ಸ್ ನಗರದ ಸಾರ್ವಜನಿಕ ಸ್ಥಳ ಒಂದರಲ್ಲಿ ಸ್ಥಾಪಿಸಿರುವ ಆತನ ಶಿಲಾಪ್ರತಿಮೆಯ ಕೈಯಲ್ಲೂ ಮಸೂರವನ್ನು ಇಂದು ಕಾಣಬಹುದು (ಚಿತ್ರ 4).

ಪ್ರೀಸ್ಟ್ಲಿ ಆಕಸ್ಮಿಕವಾಗಿ ಆಕ್ಸಿಜನ್ ಕಂಡುಹಿಡಿದುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದುವರೆಗೆ ವಿವರಿಸಿರುವ ಹಿನ್ನಲೆ ಬೇಕು. ಒಮ್ಮೆ ಅವನು ಯಾವುದೋ ಪ್ರಯೋಗದಲ್ಲಿ ನಿರತನಾಗಿದ್ದಾಗ ಅಕಸ್ಮಾತ್ ಒಂದು ಉಷ್ಣತಾಮಾಪಕ (ತರ್ಮೊಮೀಟರ್) ಕೈಯಿಂದ ಜಾರಿ ಬಿದ್ದು ಒಡೆದುಹೋಯಿತು. ಅದರಲ್ಲಿದ್ದ ಪಾದರಸ ಹಂಚಿನ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಯಿತು. ತಾಪಮಾಪಕ ಒಡೆದುದರಿಂದ ಪ್ರೀಸ್ಟ್ಲಿ ಬೇಸರಗೊಂಡ; ಹಂಚು ಕಾದಿದ್ದುದರಿಂದ ಅದರ ಮೇಲೆ ಚೆಲ್ಲಿದ್ದ ಪಾದರಸವನ್ನೆಲ್ಲ ತೆಗೆದು ಒರೆಸಿ ಚೊಕ್ಕಟಮಾಡುವಂತೆಯೂ ಇರಲಿಲ್ಲ. ಆದುದರಿಂದ ಅದನ್ನು ಅಲ್ಲಿಗೇ ಕೈಬಿಟ್ಟು ಹೋಗಿ ಸ್ವಲ್ಪ ಕಾಲ ಸುಮ್ಮನೆ ಕುಳಿತು ವಿರಮಿಸಿದ. ತಿರುಗಿ ಬಂದು ನೋಡುವಲ್ಲಿ ಪಾದರಸ ಹನಿಹನಿಯಾಗಿ ಬಿದ್ದಿದ್ದುದು ಕೆಂಪುಬಣ್ಣಕ್ಕೆ ತಿರುಗಿತ್ತು; ಪುಡಿಪುಡಿಯಾಗಿತ್ತು. ಆ ಪುಡಿಯನ್ನೆಲ್ಲ ಒಂದೆಡೆ ಶೇಖರಿಸಿಟ್ಟುಕೊಂಡ.

ಪದಾರ್ಥಗಳು ದಹಿಸುವಾಗ ವಾಸ್ತವವಾಗಿ ಆಗುವುದೇನು, “ದಹನ” ಎಂದರೇನು ಎಂಬ ಬಗ್ಗೆ ಆಗ ಸರಿಯಾದ ತಿಳಿವಳಿಕೆ ಇರಲಿಲ್ಲ. ದಹಿಸಬಲ್ಲ ಎಲ್ಲ ಪದಾರ್ಥಗಳಲ್ಲಿಯೂ ಫ್ಲಾಜಿಸ್ಟಾನ್ ಎಂಬ ಒಂದು ದಹ್ಯ ಸತ್ವ ಇರುವುದೆಂದೂ, ಪದಾರ್ಥ ದಹಿಸುವಾಗ ಆ ಸತ್ವ ಹೊರಹೋಗಿ ಆ ಪದಾರ್ಥಕ್ಕೆ ವಿಶಿಷ್ಟವಾದ ಭಸ್ಮ(ಕ್ಯಾಲ್‌ಕ್ಸ್) ಉಳಿಯುವುದೆಂದೂ ಆಗಿನವರು ನಂಬಿದ್ದರು. ಆ ನಂಬಿಕೆಗನುಸಾರವಾಗಿಯೇ ಪ್ರೀಸ್ಟ್ಲಿಯೂ ಯೋಚಿಸಿದ. ಉಷ್ಣತಾಮಾಪಕ ಒಡೆದಾಗ, ಕಾದ ಹಂಚಿನ ಮೇಲೆ ಬಿದ್ದ ಪಾದರಸ ದಹಿಸಿ ಪಾದರಸದ ಭಸ್ಮ(ಮರ್ಕ್ಯುರಿ ಕ್ಯಾಲ್‌ಕ್ಸ್) ಉಳಿದಿತ್ತೆಂದೇ ಅವನು ತಿಳಿದುಕೊಂಡ.

ಯಾವ ಪದಾರ್ಥ ಸಿಕ್ಕರೂ ತನ್ನ ಮಸೂರದ ಸಹಾಯದಿಂದ ಆ ಪದಾರ್ಥವನ್ನು ಅಧಿಕ ಉಷ್ಣತೆಗೆ ಕಾಸುವ ಗೀಳು ಇದ್ದುದರಿಂದ ಪ್ರೀಸ್ಟ್ಲಿ ಆ ಪಾದರಸದ ಭಸ್ಮವನ್ನು ಒಂದು ಪ್ರನಾಳದಲ್ಲಿಟ್ಟು ತನ್ನ ಮಸೂರದ ನೆರವಿನಿಂದ ಕಾಸಿದ. ಒಂದು ಅನಿಲ ಉತ್ಪತ್ತಿಯಾಗಿ ಪ್ರನಾಳದಲ್ಲಿ ಶೇಖರಗೊಂಡಿತು (ಚಿತ್ರ 5). ಆ ಅನಿಲವನ್ನು ಪ್ರೀಸ್ಟ್ಲಿ ವಿವರವಾಗಿ ಪರೀಕ್ಷಿಸಿದ. ಉರಿಯುವ ಪದಾರ್ಥಗಳು ಆ ಅನಿಲದಲ್ಲಿ ಬಿರುಸಿನಿಂದ ಹೆಚ್ಚು ಪ್ರಕಾಶಮಾನವಾಗಿ ಉರಿಯುವುದನ್ನು ವೀಕ್ಷಿಸಿದ. ಆ ಅನಿಲದಲ್ಲಿ ಒಂದು ಇಲಿಯನ್ನು ಬಿಟ್ಟುನೋಡಿದ. ಸಾಮಾನ್ಯ ವಾಯುವಿನಲ್ಲಿ ಇಲಿ ಎಷ್ಟು ಕಾಲ ಜೀವದಿಂದಿರುತ್ತಿತ್ತೋ ಅದರ ಎರಡು ಮೂರರಷ್ಟು ಕಾಲ ಆ ಅನಿಲದಲ್ಲಿ ಜೀವಿಸಬಲ್ಲುದೆಂದು ಕಂಡುಬಂತು. ತಾನೇ ಅನಿಲವನ್ನು ಮೂಸಿದ. ವಾಸನೆಯೇನೂ ಇರಲಿಲ್ಲ. ಆದರೆ ಅದರಲ್ಲಿ ಉಸಿರೆಳೆದುಕೊಂಡಾಗ ಆಹ್ಲಾದಕರವಾಗಿತ್ತು. ಇದನ್ನೆಲ್ಲ ಆತ ವರದಿ ಮಾಡಿದ್ದಾನೆ.

ವಾಸ್ತವವಾಗಿ ಅವನು ತಯಾರಿಸಿದ್ದುದು ಆಕ್ಸಿಜನ್ ಅನಿಲವನ್ನು. ಪಾದರಸವನ್ನು ಅದರ ಕುದಿಬಿಂದುವಿಗಿಂತ (357 ಡಿಗ್ರಿ ಸೆಲ್ಸಿಯಸ್) ಸ್ವಲ್ಪ ಕೆಳಗಿನ ಉಷ್ಣತೆಗೆ ಕಾಸಿದರೆ ಅದು ವಾಯುವಿನಲ್ಲಿರುವ ಆಕ್ಸಿಜನ್ನನ್ನು ಉಪಯೋಗಿಸಿಕೊಂಡು ಪಾದರಸದ ಆಕ್ಸೈಡ್ ಆಗುತ್ತದೆ. ಆ ಕೆಂಪು ಪಾದರಸದ ಭಸ್ಮ ನಿಜಕ್ಕೂ ಪಾದರಸದ ಆಕ್ಸೈಡ್. ಅದನ್ನು ಇನ್ನೂ ಹೆಚ್ಚಿನ ತಾಪಕ್ಕೆ ಕಾಸಿದಾಗ ಆಕ್ಸಿಜನ್ ಬಿಡುಗಡೆಗೊಂಡು ಪಾತ್ರೆಯಲ್ಲಿ ಶೇಖರಗೊಳ್ಳುತ್ತದೆ. ಆವಿ ರೂಪದಲ್ಲಿ ಬಿಡುಗಡೆಗೊಳ್ಳುವ ಪಾದರಸ ಅಷ್ಟು ಅಧಿಕ ಉಷ್ಣತೆಯಲ್ಲಿ ಇಲ್ಲದಿರುವ ಪಾತ್ರೆಗೋಡೆಯ ಮೇಲೆ ಹನಿಗಟ್ಟಿ ಕೆಳಕ್ಕಿಳಿಯುತ್ತದೆ.

ಅನೇಕ ಬಗೆಯಲ್ಲಿ ಬಹುಮುಖ್ಯ ಧಾತು ಎನ್ನಬಹುದಾದ ಆಕ್ಸಿಜನ್ನನ್ನು ಪ್ರೀಸ್ಟ್ಲಿ ಈ ರೀತಿ ಕಂಡುಹಿಡಿದನಾದರೂ ಅದರ ನಿಜಸ್ವರೂಪದ ಅರಿವು ಅವನಿಗಿರಲಿಲ್ಲ. ಆಗ ಪ್ರಚಲಿತವಾಗಿದ್ದ ಫ್ಲಾಜಿಸ್ಟಾನ್ ಸಿದ್ಧಾಂತಕ್ಕನುಸಾರ ವಾಗಿಯೇ ತನ್ನ ಪ್ರಯೋಗ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದ. ಮಸೂರದ ಸಹಾಯದಿಂದ ಪಾದರಸದ ಭಸ್ಮವನ್ನು ಅಧಿಕ ಉಷ್ಣತೆಗೆ ಕಾಸಿದಾಗ ಪುನಃ ಪಾದರಸ ದೊರೆತುದನ್ನು ಕಂಡು, ಅದು ವಾಯುವಿನಿಂದ ಫ್ಲಾಜಿಸ್ಟಾನನ್ನು ಹೀರಿಕೊಂಡಿತು ಎಂದು ಭಾವಿಸಿದ. ಪ್ರನಾಳದೊಳಗಿನ ವಾಯು ಫ್ಲಾಜಿಸ್ಟಾನನ್ನು ಕಳೆದುಕೊಂಡುದರಿಂದ ಫ್ಲಾಜಿಸ್ಟಾನ್ ಹೀರಲು ತವಕಪಡುವುದೆಂದೂ ಆದ್ದರಿಂದ ಉರಿಯುವ ಪದಾರ್ಥಗಳು ಅದರಲ್ಲಿ ಬಿರುಸಿನಿಂದ ಉರಿಯುವುವೆಂದೂ ತರ್ಕಿಸಿದ. ಅವನ ನಿರೀಕ್ಷೆ ಫಲಿಸಿತು. ಹೀಗಾಗಿ ತಾನೊಂದು ಹೊಸ ಧಾತುವನ್ನು ಪತ್ತೆ ಮಾಡಿದ್ದುದು ಅವನಿಗೆ ಗೊತ್ತೇ ಆಗಲಿಲ್ಲ.

ನಿಜಸ್ಥಿತಿಯನ್ನು ಬಯಲು ಮಾಡಿದವನು ಅವನಿಗಿಂತ ಹತ್ತು ವರ್ಷ ಕಿರಿಯನಾಗಿದ್ದ ಫ್ರೆಂಚ್ ವಿಜ್ಞಾನಿ ಲೆವಾಸ್ಯೇ. ಪಾದರಸವನ್ನೇ ಆಗಲಿ, ಬೇರಾವ ಲೋಹವನ್ನೇ ಅಗಲಿ, ಕಾಸಿ, ‘ಭಸ್ಮ’ ತಯಾರಿಸಿದಾಗ ಭಸ್ಮದ ತೂಕ ಲೋಹದ ತೂಕಕ್ಕಿಂತ ಹೆಚ್ಚಾಗಿರುವುದೆಂಬುದನ್ನು ಹಿಂದಿನ ಕೆಲವರು ಗಮನಿಸಿದ್ದರು. ಅದರಿಂದ ಯುಕ್ತ ತೀರ್ಮಾನಕ್ಕೆ ಬರುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಪಾತ್ರೆಯೊಳಗಿರುವ ವಾಯುವಿನಲ್ಲಿ ಆ ರೀತಿ ಲೋಹವನ್ನು ಭಸ್ಮ ಮಾಡಿದಾಗ ವಾಯುವಿನ ಗಾತ್ರ ಕುಗ್ಗುವುದನ್ನು ಲೆವಾಸ್ಯೇ ತೋರಿಸಿದ. ವಾಯುವಿನ ಗಾತ್ರ ಕುಗ್ಗುವುದೇಕೆ? ದಹನ ಕ್ರಿಯೆಯಲ್ಲಿ ವಾಯುವಿನ ಒಂದು ಭಾಗ ಮಾತ್ರ ಪಾಲ್ಗೊಳ್ಳುವುದು. ಅದನ್ನು ಲೋಹ ಹೀರಿಕೊಳ್ಳುವುದರಿಂದಲೇ ಅದರ ತೂಕ ಹೆಚ್ಚಾಗುವುದು ಎಂದು ಸಾಧಿಸಿದ. ಪಾದರಸದ ಭಸ್ಮವನ್ನು ಪುನಃ ಹೆಚ್ಚಿನ ಉಷ್ಣತೆಗೆ ಕಾಸಿದಾಗ ಭಸ್ಮ ಅದನ್ನು ಬಿಟ್ಟುಕೊಟ್ಟು ಹಗುರವಾಗುತ್ತದೆ ಎಂದು ತೋರಿಸಿಕೊಟ್ಟ. ಈ ರೀತಿ ದಹನದಲ್ಲಿ ಪಾಲ್ಗೊಳ್ಳುವ ವಾಯು ಭಾಗವನ್ನು ಗುರುತಿಸಿ ಅದಕ್ಕೆ ಆಕ್ಸಿಜನ್ ಎಂದು ನಾಮಕರಣ ಮಾಡಿದ. ಅದಕ್ಕೆ ಆ ಹೆಸರನ್ನು ಕೊಡಲು ಬೇರೊಂದು ಕಾರಣವಿತ್ತು. ಗಂಧಕ, ರಂಜಕ ಮೊದಲಾದ ಅಲೋಹಗಳೂ ವಾಯುವಿನಲ್ಲಿ ಉರಿದಾಗ ಲೋಹಗಳಂತೆಯೇ ಅದನ್ನು ಹೀರಿಕೊಂಡು ಸಂಯುಕ್ತಗಳನ್ನು ಉತ್ಪತ್ತಿಮಾಡುತ್ತವೆ. ಆ ಸಂಯುಕ್ತಗಳು ನೀರಿನಲ್ಲಿ ಕರಗಿ ಆಮ್ಲಗಳನ್ನು ನೀಡುತ್ತವೆ. ಆದ್ದರಿಂದ ಆ ವಾಯು ಭಾಗವನ್ನು ಆಕ್ಸಿ (ಆಕ್ಸಿ = ಆಮ್ಲ) ಜನ್ (ಜನ್ = ಉತ್ಪಾದಕ) ಎಂದು ಕರೆದ. ಆ ಕಾರಣದಿಂದ ಅದನ್ನು ಕನ್ನಡದಲ್ಲಿ ಆಮ್ಲಜನಕ ಎಂದೂ ಕರೆಯುವುದುಂಟು.