ಇಂದಿನ ದಿನಗಳಲ್ಲಿ ಹಳ್ಳಿಯ ಚಿಕ್ಕ ಮಕ್ಕಳಿಗೆ ಸಹ ವಿದ್ಯುತ್ತಿನ ವಿಷಯ ಗೊತ್ತು. ಆದರೆ ಅವರಿಗೆ ಗೊತ್ತಿರುವುದು ತಂತಿಗಳ ಮೂಲಕ ಹರಿಯುವ ಪ್ರವಾಹ ವಿದ್ಯುತ್ ಮಾತ್ರ. ಇದ್ದಲ್ಲೇ ಇರುವ ಸ್ಥಾಯೀ ವಿದ್ಯುತ್ತಿನ ಪರಿಚಯ ಅವರಿಗಿರುವುದಿಲ್ಲ. ಮಕ್ಕಳೇ ಏಕೆ, ಶಾಲೆಗೆ ಹೋಗಿ ವಿಜ್ಞಾನ ಕಲಿಯದೆ ಇರುವವರಲ್ಲಿ ಬಹುಪಾಲು ಜನಕ್ಕೆ ಸ್ಥಾಯೀ ವಿದ್ಯುತ್ತಿನ ಪರಿಚಯವಿರುವುದಿಲ್ಲ. ಏಕೆಂದರೆ, ಅವರ ಅನುಭವಕ್ಕೆ ಪ್ರತಿನಿತ್ಯ ಬರುವುದು ಪ್ರವಾಹ ವಿದ್ಯುತ್ತೇ ವಿನಾ ಸ್ಥಾಯೀ ವಿದ್ಯುತ್ತಲ್ಲ. ತಮ್ಮ ಜೀವಮಾನವನ್ನೆಲ್ಲ ನದಿಗಳಲ್ಲಿಯೇ ಕಳೆಯುವ ಸಿಹಿನೀರಿನ ಮೀನುಗಳಿಗೆ ಹರಿಯವ ನೀರಿನ ಪರಿಚಯ ಮಾತ್ರ ಇರುತ್ತದೆ. ನೀರು ಒಂದೆಡೆ ನಿಂತಿರಬಲ್ಲುದೆಂಬುದು ಅವುಗಳಿಗೆ ಗೊತ್ತಾಗುವ ಬಗೆ ಹೇಗೆ? ವಿದ್ಯುತ್ತಿನ ವಿಷಯದಲ್ಲಿ ನಮ್ಮಲ್ಲಿ ಬಹುಪಾಲು ಜನರ ಸ್ಥಿತಿ ಹೀಗಾಗಿಬಿಟ್ಟಿದೆ. ಆದರೆ ಒಂದು ಕೌತುಕದ ವಿಷಯವೆಂದರೆ ಸ್ಥಾಯೀ ವಿದ್ಯುತ್ತು ಪ್ರಾಚೀನ ಕಾಲದಲ್ಲಿಯೇ ಕೆಲವು ಕುತೂಹಲ ಸ್ವಭಾವದ ವ್ಯಕ್ತಿಗಳಿಗೆ ಗೊತ್ತಿತ್ತು. ಪ್ರವಾಹ ವಿದ್ಯುತ್ತಾದರೋ ಮನುಷ್ಯರಿಗೆ ಪರಿಚಯವಾದದ್ದು ಕೇವಲ ಇನ್ನೂರು ವರ್ಷಗಳ ಕೆಳಗೆ, ಅದೂ ಆಕಸ್ಮಿಕವಾಗಿ.

ಭೂಮಿಯಲ್ಲಿ ಸಿಕ್ಕುವ ಆಂಬರ್ ಎಂಬ ಶಿಲಾರಾಳದ ಒಂದು ತುಂಡನ್ನು ಯಾವುದಾದರೂ ವಸ್ತುವಿನ ಮೇಲೆ ಉಜ್ಜಿದರೆ ಅದಕ್ಕೆ ಒಂದು ವಿಚಿತ್ರ ಗುಣ ಬರುತ್ತದೆ. ತರಗೆಲೆ, ಕಾಗದದ ಚೂರು ಮುಂತಾದ ಹಗುರ ವಸ್ತುಗಳನ್ನು ಅದು ತನ್ನೆಡೆಗೆ ಆಕರ್ಷಿಸತೊಡಗುತ್ತದೆ. ಘರ್ಷಣೆಯ (ಉಜ್ಜುವಿಕೆಯ) ಪರಿಣಾಮವಾಗಿ ಶಿಲಾರಾಳದ ಮೇಲೆ ಸ್ಥಾಯೀ ವಿದ್ಯುತ್ತು ಸಂಗ್ರಹಗೊಳ್ಳುವುದೇ ಅದಕ್ಕೆ ಕಾರಣ. ಈ ವಿದ್ಯಮಾನವನ್ನು ಪ್ರಾಚೀನರು ಗಮನಿಸಿದ್ದರು. ಕ್ರಿಪೂ. ಏಳು – ಆರನೆಯ ಶತಮಾನಗಳಲ್ಲಿ ಜೀವಿಸಿದ್ದ ಗ್ರೀಕ್ ತತ್ವಜ್ಞಾನಿ ಥೇಲೀಸ್‌ಗೆ ಈ ವಿಷಯ ಗೊತ್ತಿತ್ತಂತೆ. ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ ವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ವಿಶೇಷ ಆಸಕ್ತಿ ವಹಿಸತೊಡಗಿದರು. ಆಂಬರ್‌ನಂತೆಯೇ ಕಲ್ಲಿನ ಹರಳು, ಗಾಜಿನ ಕಡ್ಡಿ, ವಿವಿಧ ಬಗೆಯ ಪ್ರಶಸ್ತ ಶಿಲೆಗಳು, ಇವೆಲ್ಲವೂ ಘರ್ಷಣೆಯ ಪರಿಣಾಮವಾಗಿ ವಿದ್ಯುತ್ತನ್ನು ಸಂಗ್ರಹಿಸಬಲ್ಲವು ಎಂಬುದನ್ನು ಬ್ರಿಟಿಷ್ ವಿಜ್ಞಾನಿ ಗಿಲ್ಬರ್ಟ್ ಗಮನಿಸಿದ. ಸ್ಥಾಯೀ ವಿದ್ಯುತ್ತಿನಲ್ಲಿ ಎರಡು ಬಗೆ. ಆಂಬರ್ ಕಡ್ಡಿಯ ಮೇಲೆ ಸಂಗ್ರಹವಾಗುವುದು ಒಂದು ಬಗೆ; ಗಾಜಿನ ಕಡ್ಡಿಯ ಮೇಲೆ ಸಂಗ್ರಹವಾಗುವುದು ಇನ್ನೊಂದು ಬಗೆ. ಎರಡು ಆಂಬರ್ ಕಡ್ಡಿಗಳ ಮೇಲೂ ಒಂದೇ ಬಗೆಯ ವಿದ್ಯುತ್ತಿರುವುದರಿಂದ ಆ ಕಡ್ಡಿಗಳು ಒಂದನ್ನೊಂದು ವಿಕರ್ಷಿಸುತ್ತವೆ, ವಿದ್ಯುದಾವಿಷ್ಟ ಆಂಬರ್ ಕಡ್ಡಿ ವಿದ್ಯುದಾವಿಷ್ಟ ಗಾಜಿನ ಕಡ್ಡಿಯನ್ನು ಆಕರ್ಷಿಸುತ್ತದೆ. ಒಂದನ್ನು ಧನ ವಿದ್ಯುತ್ ಎಂದೂ ಇನ್ನೊಂದನ್ನು ಋಣ ವಿದ್ಯುತ್ ಎಂದೂ ಕರೆಯತೊಡಗಿದರು.

ಒಂದು ಗಂಧಕದ ಗೋಳ ಗಿರ್ರನೆ ತಿರುಗುವಂತೆ ಏರ್ಪಡಿಸಿ, ತಿರುಗುತ್ತಿರುವ ಗೋಳವನ್ನು ಕೈಯಿಂದ ತಾಡಿಸತೊಡಗಿದರೆ ಆ ಗೋಳದ ಮೇಲೆ ವಿದ್ಯುತ್ತು ಗಮನಾರ್ಹ ಪ್ರಮಾಣದಲ್ಲಿ ಸಂಗ್ರಹಗೊಳ್ಳುವುದೆಂದು ಜರ್ಮನ್ ವಿಜ್ಞಾನಿ ಗೇರಿಕ್ ತೋರಿಸಿದ. ಹಾಗೆ ಸಂಗ್ರಹಗೊಳ್ಳುವ ಸ್ಥಾಯೀ ವಿದ್ಯುತ್ತನ್ನು ಶೇಖರಿಸಬಲ್ಲ ಒಂದು ಸಾಧನವನ್ನು ಹಾಲೆಂಡ್‌ನ ಲೈಡನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಿರ್ಮಿಸಿದರು. ಲೋಹದ ತಗಡಿನ ಅಸ್ತರಿ ಇರುವ ಸಿಲಿಂಡರಿನಾಕಾರದ ಗಾಜಿನ ಜಾಡಿಗೆ ಕಾರ್ಕ್ ಬಿರಡೆ ಹಾಕಿ, ಆ ಬಿರಡೆಯಲ್ಲಿ ಒಂದು ರಂಧ್ರಮಾಡಿ ಅದರ ಮೂಲಕ ಲೋಹದ ಕಡ್ಡಿಯನ್ನು ಸಿಕ್ಕಿಸಿಟ್ಟರೆ, ಗಂಧಕದ ಗೋಳದಲ್ಲಿ ಸಂಗ್ರಹಗೊಳ್ಳುವ ಸ್ಥಾಯೀ ವಿದ್ಯುತ್ತನ್ನು ಆ ಸಾಧನಕ್ಕೆ ವರ್ಗಾಯಿಸಬಹುದು. ಹಾಗೆ ಮಾಡಿ ಆ ಸಾಧನದಲ್ಲಿ ಸ್ಥಾಯೀ ವಿದ್ಯುತ್ತನ್ನು ಭಾರೀ ಪ್ರಮಾಣದಲ್ಲಿ ಶೇಖರಿಸಬಹುದು. ಲೈಡನ್ ಜಾಡಿ ಎಂದು ಪ್ರಸಿದ್ದಿ ಪಡೆದ ಆ ಸಾಧನದಲ್ಲಿ ವಿದ್ಯುತ್ತನ್ನು ಶೇಖರಿಸಿಟ್ಟಿರುವಾಗ ಕಾರ್ಕ್ ಬಿರಡೆಯಲ್ಲಿ ಸಿಕ್ಕಿಸಿರುವ ಲೋಹದ ಕಡ್ಡಿಯ ಬಳಿಗೆ ಇನ್ನೊಂದು ಲೋಹದ ವಸ್ತುವನ್ನು ತಂದರೆ ಕಡ್ಡಿಯಿಂದ ಆ ಲೋಹದ ವಸ್ತುವಿಗೆ ವಿದ್ಯುತ್ ಜಿಗಿಯುತ್ತದೆ. ಆಗ ಚಟಪಟ ಶಬ್ದವಾಗುವುದಲ್ಲದೆ ಎರಡರ ನಡುವೆ ಕಿಡಿಗಳು ಹಾರುತ್ತವೆ. ಆ ವಸ್ತುವನ್ನು ಕೈಯಲ್ಲಿ ಹಿಡಿದಿದ್ದರೆ ಆಘಾತವಾಗಿ ಕೈಯ ಸ್ನಾಯುಗಳು ಅದಿರಾಡುತ್ತವೆ. ಮೋಡದಿಂದ ಮೋಡಕ್ಕೆ ಅಥವಾ ಮೋಡದಿಂದ ಭೂಮಿಗೆ ವಿದ್ಯುತ್ತು ಹಾಗೆ ಜಿಗಿಯುವುದರಿಂದಲೇ ಗುಡುಗು ಮಿಂಚು ಉಂಟಾಗುವುದು ಎಂದು ಅಮೆರಿಕನ್ ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ ತೋರಿಸಿದ.

ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಯೂರೋಪಿನಲ್ಲಿ ಎಲ್ಲೆಲ್ಲಿಯೂ ಸ್ಥಾಯೀ ವಿದ್ಯುತ್ತಿನ ಬಗ್ಗೆ ಆಸಕ್ತಿ ಕಾಣಬರುತ್ತಿತ್ತು. ಎಲ್ಲ ಪ್ರಯೋಗ ಶಾಲೆಗಳಲ್ಲಿಯೂ ಲೈಡನ್ ಜಾಡಿಗಳನ್ನಿಟ್ಟುಕೊಂಡು ಅದರೊಂದಿಗೆ ಏನಾದರೂ ಪ್ರಯೋಗಗಳನ್ನು ಮಾಡುತ್ತಿದ್ದರು. ಇಟಲಿ ದೇಶದವನಾದ ಲುಯಿಗಿ ಗ್ಯಾಲ್ವನಿ ವೈದ್ಯಕೀಯ ಡಿಗ್ರಿ ಪಡೆದುಕೊಂಡು ಬೊಲೋನ ವಿಶ್ವವಿದ್ಯಾನಿಲಯದಲ್ಲಿ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದನಾದರೂ ತನ್ನ ಅಂಗರಚನಾಶಾಸ್ತ್ರದ ಪ್ರಯೋಗಶಾಲೆಯಲ್ಲಿಯೂ ಕುತೂಹಲದಿಂದ ಒಂದು ಲೈಡನ್ ಜಾಡಿಯನ್ನಿಟ್ಟುಕೊಂಡು ಅದರೊಂದಿಗೆ ಪ್ರಯೋಗ ನಡೆಸುತ್ತಿದ್ದುದು ಆತನ ಸುದೈವ ಎನ್ನಬೇಕು. ಏಕೆಂದರೆ ಒಂದು ಆಕಸ್ಮಿಕ ಆವಿಷ್ಕಾರ ಅವನ ಬುಟ್ಟಿಗೆ ಬಿದ್ದಿತು. ತನ್ನ ವಿದ್ಯಾರ್ಥಿಗಳಿಗೆ ತೋರಿಸುವುದಕ್ಕಾಗಿ ಆತ ಒಮ್ಮೆ ಒಂದು ಕಪ್ಪೆಯನ್ನು ಕೊಯ್ದು ಅದರ ಅಂಗ ಭಾಗಗಳು ಕಾಣುವಂತೆ ಬಿಡಿಸಿ ಒಂದು ಹಲಗೆಯ ಮೇಲೆ ಬಂಧಿಸಿಟ್ಟಿದ್ದ. ಬಿಡುವಿನ ಸಮಯದಲ್ಲಿ ಪಕ್ಕದಲ್ಲಿಯೇ ಒಂದು ಲೈಡನ್ ಜಾಡಿಯನ್ನಿಟ್ಟುಕೊಂಡು ಒಂದು ಲೋಹದ ಸರಳನ್ನು ಅದರ ಬಳಿಗೆ ತಂದು ವಿದ್ಯುತ್ಕಿಡಿ ಹಾರುವುದನ್ನು ವೀಕ್ಷಿಸುತ್ತಲಿದ್ದ. ಅಕಸ್ಮಾತ್ ಒಂದು ವಿದ್ಯುತ್ಕಿಡಿ ಕೊಯ್ದ ಕಪ್ಪೆಗೆ ತಗಲಿ ಅದರ ಕಾಲುಗಳು ಒದರಾಡಲಾರಂಭಿಸಿದುವು. ವಿದ್ಯುತ್ತಿನ ಪ್ರಭಾವದಿಂದ ಜೀವಂತ ದೇಹದ ಸ್ನಾಯುಗಳು ಅದಿರಾಡುವುದು ಗೊತ್ತಿತ್ತು. ಅಷ್ಟು ಮಾತ್ರವಲ್ಲ, ಸತ್ತ ಪ್ರಾಣಿಯ ಸ್ನಾಯುಗಳು ಅದಿರಾಡುತ್ತವೆ ಎಂದೂ ಗೊತ್ತಾಯಿತು. ವಿದ್ಯುತ್ತನ್ನು ಗುರುತಿಸಲು ಸತ್ತ ಪ್ರಾಣಿಯ ಸ್ನಾಯುಗಳನ್ನು ಉಪಯೋಗಿಸಬಹುದಲ್ಲವೇ ಎಂಬ ಯೋಚನೆ ಆತನ ತಲೆಯಲ್ಲಿ ಸುಳಿಯಿತು.

ಗುಡುಗು ಮಿಂಚುಗಳು ವಿದ್ಯುತ್ಸಂಬಂಧವಾದ ವಿದ್ಯಮಾನಗಳೆಂದು ಬೆಂಜಮಿನ್ ಫ್ರಾಂಕ್ಲಿನ್ ತೋರಿಸಿದ್ದನಷ್ಟೆ. ಕೊಯ್ದ ಕಪ್ಪೆಯ ನೆರವಿನಿಂದ ಅದನ್ನು ಪರೀಕ್ಷಿಸುವ ಯೋಚನೆ ಗ್ಯಾಲ್ವನಿಗೆ ಬಂದಿತು. ಅದಕ್ಕಾಗಿ ಕೊಯ್ದ ಕಪ್ಪೆಯೊಂದನ್ನು ಕಿಟಕಿಯ ಹೊರಗಡೆ ಒಂದು ಹಿತ್ತಾಳೆ ಕೊಕ್ಕೆಗೆ ನೇತುಹಾಕಿ ಬಿಟ್ಟಿದ್ದ. ಗುಡುಗು ಮಿಂಚು ಬಂದಾಗ ನಿರೀಕ್ಷಿಸಿದಂತೆ ಕಪ್ಪೆಯ ಕಾಲುಗಳು ಒದರಾಡಿದುವು. ಆಶ್ಚರ್ಯದ ಸಂಗತಿ ಎಂದರೆ, ಗುಡುಗು, ಮಿಂಚು ಇಲ್ಲದಾಗಲೂ ಕೆಲವೊಮ್ಮೆ ಅವು ಒದರಾಡುವುದು ಕಂಡು ಬಂದಿತು. ಅದೇಕೆಂದು ಜಾಗರೂಕತೆಯಿಂದ ಪರೀಕ್ಷಿಸಿದಾಗ ನೇತಾಡುತ್ತಿದ್ದ ಕಪ್ಪೆ, ಕಿಟಕಿಯ ಕಬ್ಬಿಣದ ಜಾಲರಿಗೆ ತಾಕಿದಾಗಲೆಲ್ಲ ಕಾಲುಗಳು ಒದರಾಡುತ್ತಿದ್ದುವು. ಅಂದರೆ ಕಪ್ಪೆಯ ಸ್ನಾಯುಗಳಿಗೆ ಎರಡು ಬೇರೆ ಬೇರೆ ಲೋಹಗಳ ಸಂಪರ್ಕ ಉಂಟಾದಾಗಲೆಲ್ಲ ಆ ಸ್ನಾಯುಗಳು ಅದಿರಾಡುತ್ತಿದ್ದುವೆಂಬುದು ಸ್ಪಷ್ಟವಾಯಿತು. ಕಪ್ಪೆಯ ಸ್ನಾಯುಗಳ ಮೂಲಕ ವಿದ್ಯುತ್ತು ಹರಿದುಹೋಗುವುದರ ಪರಿಣಾಮ ಅದು ಎಂಬುದರಲ್ಲಿ ಸಂದೇಹವಿರಲಿಲ್ಲ. ಹರಿಯುವ ವಿದ್ಯುತ್ತು ಪತ್ತೆಯಾದುದು ಹೀಗೆ. ಗುಡುಗು ಮಿಂಚುಗಳೂ ಇಲ್ಲದೆ ಲೈಡನ್ ಜಾಡಿಯೂ ಇಲ್ಲದೆ ಉತ್ಪತ್ತಿಯಾಗಿ ಹರಿಯುವ ಈ ವಿದ್ಯುತ್ತಿನ ಆಕರ ಯಾವುದು ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಾಗಿತ್ತು. ಕಪ್ಪೆಯ ದೇಹವೇ ಅದರ ಆಕರ ಎಂದು ಗ್ಯಾಲ್ವನಿ ಅಭಿಪ್ರಾಯಪಟ್ಟ. ಪ್ರಾಣಿ ವಿದ್ಯುತ್ತು ಎಂದು ಅದನ್ನು ಕರೆದ.

ಆತನ ದೇಶೀಯನಾದ ವೋಲ್ವ ಆಗ ಪಾವಿಯಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಪ್ರಾದ್ಯಾಪಕನಾಗಿದ್ದ. ಆತ ಗ್ಯಾಲ್ವನಿಗಿಂತ ಏಳೆಂಟು ವರ್ಷ ಚಿಕ್ಕವನಾಗಿದ್ದರೂ ಅವರಿಬ್ಬರಿಗೂ ತುಂಬಾ ಸ್ನೇಹವಿತ್ತು. ಗ್ಯಾಲ್ವನಿ ತನ್ನ ಪ್ರಕಟಣೆಗಳನ್ನು ವೋಲ್ವನಿಗೆ ಕಳುಹಿಸಿ ಕೊಡುತ್ತಿದ್ದ. ಜಾಗರೂಕತೆಯಿಂದ ಗ್ಯಾಲ್ವನಿಯ ಸಂಶೋಧನೆಗಳನ್ನೆಲ್ಲ ಪರಿಶೀಲಿಸುತ್ತಿದ್ದ ವೋಲ್ವ ಒಂದು ಯೋಚನೆ ಮಾಡಿದ. ವಿದ್ಯುತ್ಪ್ರವಾಹದ ಆಕರ ನಿಜಕ್ಕೂ ಪ್ರಾಣಿಯ ಅಂಗಾಂಶವೇ ಎಂದು ಪರೀಕ್ಷಿಸಿನೋಡಲು ನಿಶ್ಚಯಿಸಿದ. ಕಪ್ಪೆಯ ಸ್ನಾಯುಗಳನ್ನು ತೆಗೆದುಹಾಕಿ ಅದರ ಸ್ಥಾನದಲ್ಲಿ ಹೆಚ್ಚುಕಡಿಮೆ ಹಾಗೆಯೇ ಇರುವ ಪ್ರಾಣಿಮೂಲದ್ದಲ್ಲದ ವಸ್ತುವನ್ನು ತೆಗೆದುಕೊಂಡ. ಉಪ್ಪು ನೀರಿನಲ್ಲಿ ಅದ್ದಿದ ಕಾಗದದ ತುಂಡನ್ನೋ ಬಟ್ಟೆಯ ತುಂಡನ್ನೋ ತೆಗೆದುಕೊಂಡು ಅದಕ್ಕೆ ಎರಡು ಬೇರೆ ಬೇರೆ ಲೋಹಗಳ ಸಂಪರ್ಕ ಉಂಟಾಗುವಂತೆ ಮಾಡಿದ. ಅದರಿಂದಲೂ ವಿದ್ಯುತ್ ಪ್ರವಾಹ ಹುಟ್ಟುವುದೆಂದು ರುಜುವಾತುಪಡಿಸಿದ. ವಿದ್ಯುತ್ತಿನ ಆಕರ ನಿಜಕ್ಕೂ ಅಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ಎಂದು ತೋರಿಸಿದ. ವಿವಾದಕ್ಕೆಡೆ ಇಲ್ಲದಂತೆ ಅದನ್ನು ದೃಢಪಡಿಸಲು ಒಂದು ಪ್ರಯೋಗವನ್ನು ಯೋಜಿಸಿದ. ನಾಲ್ಕೈದು ಬಟ್ಟಲುಗಳಲ್ಲಿ ಉಪ್ಪಿನ ದ್ರಾವಣವನ್ನು ತೆಗೆದುಕೊಂಡು ಆ ಬಟ್ಟಲುಗಳನ್ನು ಸಾಲಾಗಿ ಇಟ್ಟ. ಒಂದು ತುದಿ ತಾಮ್ರ, ಇನ್ನೊಂದು ತುದಿ ಸತುವು ಇರುವ ಕಮಾನು ಆಕರದ ಲೋಹದ ಪಟ್ಟಿಗಳನ್ನು ತೆಗೆದುಕೊಂಡು ಕಮಾನಿನ ತಾಮ್ರದ ತುದಿ ಎಡಗಡೆ ಬಟ್ಟಲಿನ ದ್ರಾವಣದಲ್ಲಿಯೂ ಸತುವಿನ ತುದಿ ಬಲಗಡೆ ಬಟ್ಟಲಿನ ದ್ರಾವಣದಲ್ಲಿಯೂ ಅದ್ದಿರುವಂತೆ ಆ ಕಮಾನುಗಳನ್ನು ಬಟ್ಟಲುಗಳಲ್ಲಿರಿಸಿ ಪರಸ್ಪರ ಸಂಪರ್ಕ ಕಲ್ಪಿಸಿದ. (ಚಿತ್ರ 6) ಎಡಗಡೆ ಕೊನೆಯ ಬಟ್ಟಲಿನಲ್ಲಿ ಒಂದು ತಾಮ್ರದ ಪಟ್ಟಿಯನ್ನು ಬಲಗಡೆ ಕೊನೆಯ ಬಟ್ಟಲಿನಲ್ಲಿ ಒಂದು ಸತುವಿನ ಪಟ್ಟಿಯನ್ನೂ ಅದ್ದಿ ಅವೆರಡಕ್ಕೂ ತಂತಿಗಳ ನೆರವಿನಿಂದ ಹೊರಗಡೆ ಸಂಪರ್ಕ ಕಲ್ಪಿಸಿದ. ಆ ತಂತಿಯಲ್ಲಿ ಗಮನಾರ್ಹ ಪ್ರಮಾಣದ ವಿದ್ಯುತ್ ಪ್ರವಾಹ ಹರಿದುದನ್ನು ತೋರಿಸಿದ. ಇದರಿಂದ ಗ್ಯಾಲ್ವನಿ ಗುರುತಿಸಿದ ವಿದ್ಯುತ್ತು ಸ್ನಾಯುವಿನಲ್ಲಿರುವ ರಾಸಾಯನಿಕ ಮೂಲದ್ದು, ಪ್ರಾಣಿಮೂಲದ್ದಲ್ಲ ಎಂಬುದು ಖಚಿತವಾಯಿತು.