ವಿಜ್ಞಾನದ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಹೆಸರುಗಳಲ್ಲಿ ಮೈಕೇಲ್ ಫ್ಯಾರಡೆಯದೂ ಒಂದು ಎಂಬ ಬಗ್ಗೆ ಸಂದೇಹವೇ ಇಲ್ಲ. ಅಷ್ಟು ದೊಡ್ಡ ವಿಜ್ಞಾನಿ ಎಂದು ಹೆಸರು ಗಳಿಸಿರುವ ಫ್ಯಾರಡೆ, ಶಾಲಾಕಾಲೇಜುಗಳಲ್ಲಿ ಓದಿ ಪದವೀಧರನಾಗಿ ವಿಜ್ಞಾನಿಯಾದವನಲ್ಲ. ಆತ ಒಬ್ಬ ಬಡ ಕಮ್ಮಾರನ ಮಗ. ತಂದೆಗೆ ಹತ್ತು ಜನ ಮಕ್ಕಳು. ಅವರಿಗೆಲ್ಲ ವಿದ್ಯಾಭ್ಯಾಸ ಮಾಡಿಸುವುದು ಆತನಿಗೆ ಸಾಧ್ಯವಿರಲಿಲ್ಲ. ತಕ್ಕ ಮಟ್ಟಿಗೆ ಓದುವುದು ಬರೆಯುವುದು ಕಲಿಯುವ ತನಕ ಮೈಕೇಲ್ ಶಾಲೆಗೆ ಹೋದ. ಅಲ್ಲಿಂದ ಮುಂದೆ ಓದು ಮುಂದುವರಿಸುವುದು ಅವನಿಗೆ ಸಾಧ್ಯವಾಗಲಿಲ್ಲ. ಹದಿಮೂರು ಹದಿನಾಲ್ಕು ವರ್ಷದ ಬಾಲಕನಾಗಿದ್ದಾಗ ಮೈಕೇಲ್‌ನ ತಂದೆ ಅವನನ್ನು ಲಂಡನ್ನಿಗೆ ಕರೆತಂದ. ಅಲ್ಲಿ ಪುಸ್ತಕಗಳಿಗೆ ರಟ್ಟು ಕಟ್ಟುವ ಒಬ್ಬಾತನ ಬಳಿ ಕೆಲಸ ಕಲಿಯಲು ಅವನನ್ನು ಬಿಟ್ಟ. ಅವನ ತಂದೆ ಅವನನ್ನು ಅಕಸ್ಮಾತ್ ಆ ವೃತ್ತಿಗೆ ಹಾಕಿದುದು ಅವನ ಸುದೈವ. ಏಕೆಂದರೆ, ರಟ್ಟು ಕಟ್ಟಲು ಬರುತ್ತಿದ್ದ ಪುಸ್ತಕಗಳನ್ನೇ ಓದಿ ಚುರುಕು ಬುದ್ದಿಯ ಮೈಕೇಲ್ ವಿದ್ಯಾರ್ಜನೆ ಮಾಡತೊಡಗಿದ. ದಯಾಳುವಾಗಿದ್ದ ಯಜಮಾನ ಅದಕ್ಕೆ ಅಡ್ಡಿ ಬರದಿದ್ದುದೂ ಅವನ ಅದೃಷ್ಟವೇ.

ರಟ್ಟು ಕಟ್ಟಲು ಅವನಲ್ಲಿಗೆ ಬರುತ್ತಿದ್ದ ಪುಸ್ತಕಗಳಲ್ಲಿ ವಿಜ್ಞಾನದ ಪುಸ್ತಕಗಳು ಅವನನ್ನು ಬಹುವಾಗಿ ಆಕರ್ಷಿಸಿದುವು; ಅದರಲ್ಲಿಯೂ ರಸಾಯನ ವಿಜ್ಞಾನ ಮತ್ತು ಭೌತವಿಜ್ಞಾನಗಳನ್ನು ಕುರಿತ ಪುಸ್ತಕಗಳು ಅವನಿಗೆ ಬಹು ಪ್ರಿಯವಾಗಿದ್ದುವು. ಅವನ ಅಸಾಮಾನ್ಯ ಬುದ್ದಿಶಕ್ತಿಯನ್ನೂ ವಿಜ್ಞಾನದಲ್ಲಿ ಅವನಿಗಿದ್ದ ಗಾಢ ಆಸಕ್ತಿಯನ್ನೂ ಒಬ್ಬ ಗಿರಾಕಿ ಗುರುತಿಸಿದ. ಉದಾರ ಬುದ್ದಿಯ ಆ ಗಿರಾಕಿ, ರಾಯಲ್ ಇನ್ಸ್‌ಟಿಟ್ಯೂಷನ್‌ನಲ್ಲಿ ನಡೆಯುತ್ತಿದ್ದ ವೈಜ್ಞಾನಿಕ ಉಪನ್ಯಾಸಗಳಿಗೆ ಹೋಗಲು ಮೈಕೇಲ್‌ಗೆ ಟಿಕೆಟ್‌ಗಳನ್ನು ತಂದು ಕೊಟ್ಟು ಉಪಕರಿಸಿದ. ಆಗ ರಾಯಲ್ ಇನ್ಸ್‌ಟಿಟ್ಯೂಷನ್ನಿನ ನಿರ್ದೇಶಕನಾಗಿದ್ದ ಸರ್ ಹಂಫ್ರಿ ಡೇವಿ ಸಂಜೆ ಉಪನ್ಯಾಸಗಳನ್ನು ನೀಡುತ್ತಿದ್ದ. ಫ್ಯಾರಡೇ ತುಂಬ ಆಸಕ್ತಿಯಿಂದ ಉಪನ್ಯಾಸಗಳನ್ನು ಕೇಳಿದ. ಕೊನೆಗೆ ಆ ಉಪನ್ಯಾಸಗಳ ಸಾರಾಂಶವನ್ನು ತನ್ನ ಮುದ್ದಾದ ಕೈಬರಹದಲ್ಲಿ ವಿಶದವಾಗಿ ಬರೆದ. ಹಾಳೆಗಳನ್ನೆಲ್ಲ ಜೋಡಿಸಿ ಅಚ್ಚುಕಟ್ಟಾದ ಚರ್ಮದ ಹೊದಿಕೆ ಹಾಕಿದ. ಆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಡೇವಿಗೆ ಕೊಟ್ಟು, ಆತನ ಬಳಿ ಕೆಲಸ ಮಾಡುವ ತೀವ್ರ ಅಭಿಲಾಷೆ ತನಗಿದ್ದುದನ್ನು ಆತನಿಗೆ ತಿಳಿಸಿದ. ಫ್ಯಾರಡೇ ತೋರಿದ ಶ್ರದ್ದೆ, ಕೆಲಸಗಾರಿಕೆ ಮತ್ತು ಜ್ಞಾನದಾಹವನ್ನು ಡೇವಿ ಮೆಚ್ಚಿಕೊಂಡು, ತನ್ನ ಸಹಾಯಕನಾಗಿ ಅವನನ್ನು ನೇಮಿಸಿಕೊಳ್ಳಲು ಒಪ್ಪಿಗೆ ಕೊಟ್ಟ. ಪ್ರಯೋಗಶಾಲೆಯಲ್ಲಿ ಅವನು ಮುಖ್ಯವಾಗಿ ಮಾಡಬೇಕಾಗಿದ್ದ ಕೆಲಸ– ಪ್ರಯೋಗಗಳಲ್ಲಿ ಉಪಯೋಗಿಸಿದ ಗಾಜಿನ ಪಾತ್ರೆಗಳನ್ನು ತೊಳೆದಿಡುವುದು. ಬಿಡುವಿನ ಸಮಯದಲ್ಲಿ ತನಗಿಷ್ಟ ಬಂದ ಪ್ರಯೋಗಗಳನ್ನು ಮಾಡಲು ಅಲ್ಲಿ ಅವಕಾಶವಿದ್ದುದರಿಂದ ಫ್ಯಾರಡೇ, ಆಗ ತನಗೆ ಸಿಕ್ಕುತ್ತಿದ್ದ ಸಂಬಳಕ್ಕಿಂತ ಕಡಿಮೆ ಸಂಬಳಕ್ಕೇ ಆ ಕೆಲಸವನ್ನು ಒಪ್ಪಿಕೊಂಡು 1813ರಲ್ಲಿ ರಾಯಲ್ ಇನ್ಸ್‌ಟಿಟ್ಯೂಷನ್ ಸೇರಿಕೊಂಡ.

1823ರಲ್ಲಿ ಒಂದು ದಿನ ಬೆಳಿಗ್ಗೆ ಡೇವಿ ಎಂದಿನಂತೆ ಪ್ರಯೋಗ ಶಾಲೆಗೆ ಬಂದ. ಅಲ್ಲಿಯೇ ಮೇಜಿನ ಮೇಲಿದ್ದ ಒಂದು ಗಾಜಿನ ಪಾತ್ರೆಯೊಳಗೆಲ್ಲಾ ದ್ರವ ಹನಿಗಳು ಕುಳಿತಿದ್ದುದು ಅವನ ಗಮನವನ್ನು ಸೆಳೆಯಿತು. ಪಾತ್ರೆಯ ಒಳಭಾಗ ಜಿಡ್ಡಾಗಿರುವುದರಿಂದ ನೀರಿನ ಹನಿಗಳು ಹಾಗೆ ಕುಳಿತಿವೆ ಎಂದುಕೊಂಡ. ಫ್ಯಾರಡೇ ಪಾತ್ರೆಯನ್ನು ಚೊಕ್ಕಟವಾಗಿ ತೊಳೆದಿಲ್ಲವೆಂದು ಕೋಪಗೊಂಡು ಫ್ಯಾರಡೆಯನ್ನು ಕರೆಸಿ ಅವನಿಗೆ ಛೀಮಾರಿ ಹಾಕಿದ. ಖಿನ್ನನಾದ ಫ್ಯಾರಡೇ ಯೋಚಿಸತೊಡಗಿದ. ಹಿಂದಿನ ದಿನ ಸಂಜೆ ಮನೆಗೆ ಹೋಗುವುದಕ್ಕೆ ಮುಂಚೆ ತೊಳೆಯಬೇಕಾಗಿದ್ದ ಎಲ್ಲ ಪಾತ್ರೆಗಳನ್ನೂ ಚೆನ್ನಾಗಿ ತೊಳೆದಿಟ್ಟಿದ್ದುದು ಅವನಿಗೆ ನೆನಪಿತ್ತು. ಹಾಗಾದರೆ ಜಿಡ್ಡಾಗಿರುವ ಆ ಪಾತ್ರೆ ಯಾವುದಿರಬಹುದು ಎಂಬುದು ಗೊತ್ತಾಗಲಿಲ್ಲ. ನೇರವಾಗಿ ಪ್ರಯೋಗಶಾಲೆಗೆ ಹೋಗಿ ನೋಡಿದ. ಹಿಂದಿನ ದಿನ ಕ್ಲೋರೀನ್ ಅನಿಲ ತಯಾರಿಸಲು ಉಪಯೋಗಿಸಿದ್ದ ಪಾತ್ರೆ ಅದು. ಮರುದಿನವೂ ಅದರಲ್ಲಿ ಪುನಃ ಕ್ಲೋರೀನ್ ತಯಾರಿಸಬೇಕಾದುದರಿಂದ ಅದನ್ನು ತೊಳೆಯದೆಯೇ ಇಟ್ಟಿದ್ದ; ದೂಳು ಒಳಗೆ ಬೀಳದಿರಲೆಂದು ಅದಕ್ಕೊಂದು ರಬ್ಬರ್ ಬಿರಡೆ ಹಾಕಿದ್ದ. ಅದು ತೊಳೆಯದೆ ಇಟ್ಟಿದ್ದ ಪಾತ್ರೆಯಾದರೂ ಅದರಲ್ಲಿ ಜಿಡ್ಡಿರಲು ಕಾರಣವಿರಲಿಲ್ಲ. ಏಕೆಂದರೆ, ಕ್ಲೋರೀನ್ ತಯಾರಿಸಲು ಅದನ್ನು ಹಿಂದಿನ ದಿನ ತೆಗೆದುಕೊಂಡಾಗ, ಉಪಯೋಗಿಸುವುದಕ್ಕೆ ಮುಂಚೆ ಅದನ್ನು ಚೆನ್ನಾಗಿ ತೊಳೆದಿದ್ದ. ಆದರೆ, ಒಳಗೆಲ್ಲ ಹನಿಗಳು ಕುಳಿತಿದ್ದ ಆ ಪಾತ್ರೆ ಅಂದು ಅವನ ಕಣ್ಣೆದುರಿಗೇ ಇದ್ದುದರಿಂದ ಅವನು ಏನೂ ಹೇಳುವಂತಿರಲಿಲ್ಲ. ಅದನ್ನು ಪರೀಕ್ಷಿಸುವುದಕ್ಕಾಗಿ ಆ ಪಾತ್ರೆಯನ್ನು ಕೈಗೆತ್ತಿಕೊಂಡು ಅದಕ್ಕೆ ಹಾಕಿದ್ದ ರಬ್ಬರ್ ಬಿರಡೆಯನ್ನು ತೆಗೆದ. ಕ್ಷಣಾರ್ಧದಲ್ಲಿ ಒಳಗಿದ್ದ ಹನಿಗಳೆಲ್ಲ ಮಾಯವಾಗಿ ಹೋದುವು. ಪಾತ್ರೆ ಚೊಕ್ಕಟವಾಯಿತು. ಫ್ಯಾರಡೇಗೆ ದಿಗ್ಭ್ರಮೆಯುಂಟಾಯಿತು.

ಬೇರೆಯವರಾಗಿದ್ದರೆ, ಬಹುಶಃ ಆ ಪಾತ್ರೆಯನ್ನೆತ್ತಿಕೊಂಡು ನೇರವಾಗಿ ಡೇವಿ ಇದ್ದಲ್ಲಿಗೆ ಹೋಗಿ ಅವನಿಗೆ ಆ ಪಾತ್ರೆಯನ್ನು ತೋರಿಸಿ, ನಡೆದುದೆಲ್ಲವನ್ನೂ ಹೇಳಿ ತಾನು ನಿರ್ದೋಷಿ ಎಂದು ಸಾಧಿಸುವುದಕ್ಕೆ ಮೊದಲು ಪ್ರಯತ್ನಿಸುತ್ತಿದ್ದರು. ಫ್ಯಾರಡೇ ವಿಷಯವೇ ಬೇರೆ. ತಾನು ನಿರ್ದೋಷಿ ಎಂದು ಸಾಧಿಸುವುದು ಅವನಿಗೆ ಅಷ್ಟು ಮುಖ್ಯವಾಗಿ ಕಾಣಿಸಲಿಲ್ಲ. ತಾನು ಕಣ್ಣಾರೆ ಕಂಡ ವಿಚಿತ್ರ ವಿದ್ಯಮಾನಕ್ಕೆ ಸಕಾರಣವಾದ ವಿವರಣೆ ಅವನಿಗೆ ಬೇಕಾಗಿತ್ತು. ತಾನು ಚೊಕ್ಕಟಗೊಳಿಸಿದ್ದ ಆ ಪಾತ್ರೆಯೊಳಗೆ ಹನಿಗಳು ರೂಪುಗೊಳ್ಳಲು ಕಾರಣವೇನು? ಆ ಹನಿಗಳು ಯಾತರವು? ರಬ್ಬರ್ ಬಿರಡೆ ತೆಗೆದೊಡನೆಯೇ ಆ ಹನಿಗಳು ಕಣ್ಮರೆಯಾದುದೇಕೆ? ಅವು ಎಲ್ಲಿ ಹೋದುವು? ಏಕೆ ಹೋದುವು? ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಅವನಿಗೆ ಬಹು ಮುಖ್ಯವಾಗಿತ್ತು.

ಆ ಬಗ್ಗೆ ಅವನು ಗಾಢವಾಗಿ ಯೋಚಿಸತೊಡಗಿದ. ಪ್ರಶ್ನೆಗಳಿಗೆ ಉತ್ತರ ನೀಡಲು ನೆರವಾಗುವ ಒಂದು ಸುಳಿವು ಅವನಿಗೆ ಸಿಕ್ಕಿತು. ಹಿಂದಿನ ದಿನ ಕ್ಲೋರೀನ್ ತಯಾರಿಸಲು ಬೆರೆಸಿಟ್ಟಿದ್ದ ರಾಸಾಯನಿಕಗಳ ಮಿಶ್ರಣ ಪಾತ್ರೆಯಲ್ಲಿ ಮುಗಿದುಹೋಗಿರಲಿಲ್ಲ; ತಳದಲ್ಲಿ ಸ್ವಲ್ಪ ಉಳಿದಿತ್ತು. ಅದನ್ನು ಪಾತ್ರೆಯಲ್ಲಿ ಹಾಗೇ ಬಿಟ್ಟು, ಪಾತ್ರೆಗೆ ರಬ್ಬರ್ ಬಿರಡೆ ಹಾಕಿ ಸಂಜೆ ಮನೆಗೆ ಹೋಗಿದ್ದ. ಬಹುಶಃ ರಾತ್ರಿ ರಾಸಾಯನಿಕ ಕ್ರಿಯೆ ಮುಂದುವರಿದು ಪಾತ್ರೆಯಲ್ಲಿ ಕ್ಲೋರೀನ್ ಸಂಗ್ರಹವಾಗಿತ್ತೆಂದು ಕಾಣುತ್ತದೆ. ಕ್ಲೋರೀನ್ ಅನಿಲ ಹೊರಕ್ಕೆ ಹೋಗಲು ಆಸ್ಪದವಿರಲಿಲ್ಲವಾದ್ದರಿಂದ ಪಾತ್ರೆಯಲ್ಲಿ ಅದರ ಒತ್ತಡ ಅಧಿಕಗೊಂಡಿತ್ತು ಎಂದು ಫ್ಯಾರಡೆ ತೀರ್ಮಾನಿಸಿದ. ಪಾತ್ರೆಯೊಳಗಡೆ ಕಾಣಿಸಿಕೊಂಡ ಹನಿಗಳು ದ್ರವ ಕ್ಲೋರೀನ್ ಆಗಿದ್ದಿರಬೇಕೆಂದು ಫ್ಯಾರಡೆ ಊಹಿಸಿದ. ಅನಿಲ ಪದಾರ್ಥವನ್ನು ತಣಿಸಿ ಅದನ್ನು ದ್ರವೀಕರಿಸಬಹುದೆಂಬುದು ಗೊತ್ತಿತ್ತು. ಉಷ್ಣತೆಯನ್ನು ಇಳಿಸದೆಯೇ ಒತ್ತಡವನ್ನು ಹೆಚ್ಚಿಸಿಯೂ ಬಹುಶಃ ಅನಿಲವನ್ನು ದ್ರವೀಕರಿಸಬಹುದು ಎಂದು ಫ್ಯಾರಡೆ ಊಹಿಸಿದ. ಪಾತ್ರೆಗೆ ಹಾಕಿದ್ದ ರಬ್ಬರ್ ಬಿರಡೆಯನ್ನು ತೆಗೆದೊಡನೆ ಒತ್ತಡ ಕಡಿಮೆಯಾದುದರಿಂದ ದ್ರವ ಹನಿಗಳ ರೂಪದಲ್ಲಿದ್ದ ಕ್ಲೋರೀನ್ ಅನಿಲವಾಗಿ ಪಾತ್ರೆಯಿಂದ ಹೊರಕ್ಕೆ ಹೋಗಿರಬೇಕೆಂಬುದು ಫ್ಯಾರಡೆಯ ತರ್ಕ. ಬಿರಡೆ ತೆಗೆದಾಗ ಕ್ಲೋರೀನ್ ವಾಸನೆ ಮೂಗಿಗೆ ಬಡಿದುದು ಅವನ ನೆನಪಿಗೆ ಬಂದಿತು. ಆದ್ದರಿಂದ ತನ್ನ ಊಹೆ ಸರಿ ಎಂದು ಫ್ಯಾರಡೆ ತೀರ್ಮಾನಿಸಿದ.

ತನ್ನ ತೀರ್ಮಾನ ಸರಿಯೇ ಎಂದು ಪುನಃ ಪರೀಕ್ಷಿಸಲು ಫ್ಯಾರಡೆ ತಕ್ಕ ಪ್ರಯೋಗಗಳನ್ನು ಮಾಡಿ ನೋಡಿದ. ಅಧಿಕ ಒತ್ತಡದ ನೆರವಿನಿಂದ ಕ್ಲೋರೀನನ್ನು ದ್ರವೀಕರಿಸಬಹುದೆಂಬುದು ಸಿದ್ಧವಾಯಿತು. ಅನಂತರ ಇತರ ಅನಿಲಗಳನ್ನು ಅದೇ ರೀತಿ ಕೇವಲ ಒತ್ತಡದ ನೆರವಿನಿಂದ ದ್ರವೀಕರಿಸಲು ಪ್ರಯತ್ನಿಸಿದ. ಕಾರ್ಬನ್ ಡೈಆಕ್ಸೈಡ್, ಹೈಡ್ರೊಜನ್ ಸಲೆೇಡ್, ಸಲೇರ್ ಡೈ ಆಕ್ಸೈಡ್, ಅಮೋನಿಯ ಮುಂತಾದ ಹಲವಾರು ಅನಿಲಗಳನ್ನು ಯಶಸ್ವಿಯಾಗಿ ದ್ರವೀಕರಿಸಿದ.

ಆಗ ವಿಜ್ಞಾನಿಗಳಿಗೆ ಪರಿಚಯವಿದ್ದ ಅನಿಲಗಳಲ್ಲಿ ನಾಲ್ಕಾರು ವಿನಾ ಉಳಿದೆಲ್ಲ ಅನಿಲಗಳನ್ನೂ ಮುಂದಿನ ಎರಡು ದಶಕಗಳಲ್ಲಿ ದ್ರವೀಕರಿಸಲಾಯಿತು. ಆಕ್ಸಿಜನ್, ನೈಟ್ರೊಜನ್, ಹೈಡ್ರೊಜನ್, ಹೀಲಿಯಮ್ ಅನಿಲಗಳನ್ನು ಶಾಶ್ವತ ಅನಿಲಗಳೆಂದು ಕರೆಯತೊಡಗಿದರು. ಅವುಗಳನ್ನು ದ್ರವೀಕರಿಸುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆ ಬಲವಾಗತೊಡಗಿತು.

1845ರಲ್ಲಿ ಆಂಡ್ರ್ಯೂಸ್ ಎಂಬ ಐರಿಷ್ ವಿಜ್ಞಾನಿ ಕಾರ್ಬನ್ ಡೈ ಆಕ್ಸೈಡನ್ನು ದ್ರವೀಕರಿಸಲು ಯಾವ ಯಾವ ಉಷ್ಣತೆಯಲ್ಲಿ ಎಷ್ಟೆಷ್ಟು ಒತ್ತಡ ಬೇಕಾಗುವುದೆಂದು ತಿಳಿಯಲು ಪ್ರಯೋಗಗಳನ್ನು ಕೈಗೊಂಡ. ಆತನ ಪ್ರಯೋಗಗಳಿಂದ ಒಂದು ಸ್ವಾರಸ್ಯಕರ ವಿಷಯ ಹೊರಬಿತ್ತು. ಕಾರ್ಬನ್ ಡೈ ಆಕ್ಸೈಡ್ ಅನಿಲದ ಉಷ್ಣತೆ 31 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಿದ್ದರೆ ಎಷ್ಟು ಒತ್ತಡ ಪ್ರಯೋಗಿಸಿದರೂ ಅದು ದ್ರವವಾಗುವುದಿಲ್ಲ ಎಂದು ಗೊತ್ತಾಯಿತು. ಅಂದರೆ, ಆ ಉಷ್ಣತೆಯ ಮೇಲ್ಗಡೆ ಕಾರ್ಬನ್ ಡೈ ಆಕ್ಸೈಡು ಸಹ ಶಾಶ್ವತ ಅನಿಲದಂತೆ ವರ್ತಿಸುತ್ತದೆ ಎಂದು ಆತ ಕಂಡುಕೊಂಡ.

ಈ ವಿಷಯ ಪತ್ತೆಯಾದ ಕೂಡಲೇ ಸಹಜವಾಗಿ ಒಂದು ಯೋಚನೆ ಬಂದಿತು. ಬಹುಶಃ ಪ್ರತಿಯೊಂದು ಅನಿಲಕ್ಕೂ ವಿಶಿಷ್ಟವಾದ ಅಂಥ ಒಂದು ಉಷ್ಣತೆ ಇರಬಹುದು; ಆಕ್ಸಿಜನ್, ನೈಟ್ರೊಜನ್ ಮುಂತಾದವುಗಳಿಗೆ ಆ ಉಷ್ಣತೆ ತುಂಬ ಕೆಳಗಡೆ ಇರುವುದರಿಂದ ಸಾಮಾನ್ಯ ಪರಿಸ್ಥಿತಿಗಳಲ್ಲಿ ಅವು ಶಾಶ್ವತ ಅನಿಲಗಳಾಗಿ ನಮಗೆ ತೋರಬಹುದು ಎಂಬ ಊಹೆಗೆ ಅವಕಾಶವಾಯಿತು. ಮುಂದೆ ನಡೆದ ಸಂಶೋಧನೆಗಳ ಫಲವಾಗಿ ಆ ಊಹೆ ಸರಿ ಎಂದು ಕಂಡು ಬಂದಿತು.

ಆ ವಿಶಿಷ್ಟ ಉಷ್ಣತೆಯನ್ನು ಕ್ರಾಂತಿ ಉಷ್ಣತೆ ಎಂದು ಕರೆಯುತ್ತಾರೆ. ಕ್ಲೋರೀನ್‌ನ ಕ್ರಾಂತಿ ಉಷ್ಣತೆ 144 ಡಿಗ್ರಿ ಸೆಲ್ಸಿಯಸ್. ಹೈಡ್ರೊಜನ್ ಸಲೆೇಡ್‌ದು 101 ಡಿಗ್ರಿ ಸೆಲ್ಸಿಯಸ್. ಪ್ರಯೋಗ ಶಾಲೆಯ ಉಷ್ಣತೆ ಅವುಗಳಿಗಿಂತ ಸಾಕಷ್ಟು ಕೆಳಗಡೆ ಇರುವುದರಿಂದ ಕೇವಲ ಒತ್ತಡ ಉಪಯೋಗಿಸಿ ಅವುಗಳನ್ನು ದ್ರವೀಕರಿಸುವುದು ಸಾಧ್ಯವಾಯಿತು. ಆಕ್ಸಿಜನ್ ಮತ್ತು ನೈಟ್ರೊಜನ್‌ಗಳ ಕ್ರಾಂತಿ ಉಷ್ಣತೆಗಳು ಕ್ರಮವಾಗಿ –119 ಮತ್ತು –147 ಡಿಗ್ರಿ ಸೆಲ್ಸಿಯಸ್. ಆದುದರಿಂದ ಆ ಅನಿಲಗಳ ಉಷ್ಣತೆಯನ್ನು ಮೊದಲು –120 ಮತ್ತು –150ಕ್ಕೆ ಇಳಿಸಿ ಅನಂತರ ಒತ್ತಡ ಹಾಕಿದರೆ ಅವೂ ದ್ರವೀಕರಿಸುತ್ತವೆ. ಹೈಡ್ರೊಜನ್ ಮತ್ತು ಹೀಲಿಯಮ್‌ಗಳ ಕ್ರಾಂತಿ ಉಷ್ಣತೆಗಳು ಕ್ರಮವಾಗಿ –250 ಮತ್ತು –268 ಡಿಗ್ರಿ ಸೆಲ್ಸಿಯಸ್. ಆದ್ದರಿಂದ ಆ ಅನಿಲಗಳ ಉಷ್ಣತೆಯನ್ನು ಅಷ್ಟು ಕೆಳಕ್ಕಿಳಿಸಿ ಅನಂತರ ಒತ್ತಡ ಪ್ರಯೋಗಿಸಬೇಕಾಗುವುದು. ಇದನ್ನೆಲ್ಲ ಈಗ ಸಾಧಿಸಿಯಾಗಿದೆ. ಈ ಎಲ್ಲ ಮಹಾಸಾಧನೆಗಳಿಗೂ ನಾಂದಿಯಾದುದು ಯಾವುದು? ಕ್ಲೋರೀನ್ ತಯಾರಿಸುವ ರಾಸಾಯನಿಕ ಮಿಶ್ರಣ ಸ್ವಲ್ಪ ಉಳಿದಿದ್ದ ಪಾತ್ರೆಗೆ ಫ್ಯಾರಡೇ ರಬ್ಬರ್ ಬಿರಡೆ ಹಾಕಿಟ್ಟು ಮನೆಗೆ ಹೋದ ಆಕಸ್ಮಿಕ ಘಟನೆ.